ಶ್ರೀಮದ್ವಿಷ್ಣು ಭಾಗವತದಲ್ಲಿ ಹೀಗೊಂದು ಶ್ಲೋಕವಿದೆ :

ದ್ರವಿಡೇ ಭಕ್ತಿರುತ್ಪನ್ನಾ
ವೃದ್ಧಿಂ ಕರ್ನಾಟಕೇ ಗತಾ

ಭಕ್ತಿ ಪಂಥವು ಮೊದಲು ಹುಟ್ಟಿದ್ದು ದ್ರಾವಿಡದೇಶದಲ್ಲಿ ಅಂದರೆ ತಮಿಳುನಾಡಿನಲ್ಲಿ. ಆನಂತರ ಅದು ಅಭಿವೃದ್ಧಿಯನ್ನು ಪಡೆದದ್ದು ಕರ್ನಾಟಕದಲ್ಲಿ ಎಂದು ಭಾಗವತ ಪುರಾಣ ಹೇಳುತ್ತದೆ. ಇಲ್ಲಿ ಭಕ್ತಿ ಪಂಥವೆಂದರೆ ನಾವು ಈಗ ಪ್ರಸ್ತಾಪಿಸುತ್ತಿರುವ ದಾಸಪಂಥವಲ್ಲ. ದಾಸಪಂಥವು ಮೊದಲು ಕರ್ನಾಟಕದಲ್ಲಿ ಹುಟ್ಟಿ ಆನಂತರ ತಮಿಳುನಾಡಿಗೆ ಬಂದದ್ದು. ಪುರಂದರದಾಸರ ಕೀರ್ತನೆಗಳ ಕಾಲ ಮೊದಲು. ತ್ಯಾಗರಾಜರ ಕಾಲ ಆನಂತರ. ಇವೆಲ್ಲ ಈಗಿನ ವಿಚಾರಗಳು. ಭಾಗವತದ ರಚನೆ ಇದಕ್ಕಿಂತೆಲ್ಲ ಎಷ್ಟೋ ಕಾಲ ಹಿಂದಿನದು.

ದ್ರಾವಿಡ ಶಬ್ದದಿಂದ ತಮಿಳು ಎಂಬ ಪದ ಹುಟ್ಟಿದೆ. ದ್ರಾವಿಡ>ದ್ರಮಿಳ>ತಮಿಳು ದಕ್ಷಿಣ ಭಾರತವನ್ನು ದ್ರಾವಿಡದೇಶ ಎನ್ನಬಹುದು. ಇಲ್ಲಿ ಪಂಚ ದ್ರಾವಿಡಭಾಷೆ ಬಳಕೆಯಲ್ಲಿದೆ. ಈ ಪಂಚದ್ರಾವಿಡಭಾಷೆಗಳಿಗೂ ಮೂಲ ದ್ರಾವಿಡ ಭಾಷೆ (ತಮಿಳ) ಯೇ ಆಗಿದೆ.

ಅಮರಸಿಂಹವಿರಚಿತವಾದ ಅಮರಕೋಶದಲ್ಲಿ ದ್ರಾವಿಡ ಎಂಬ ಪದವೂ ಇಲ್ಲ. ಅದರ ಅರ್ಥವು ಇಲ್ಲ. ಆದರೆ ‘ದ್ರಾವಿಡಕ’ ಎಂಬ ಪದವಿದೆ. ಇದು ಒಂದು ಸಸ್ಯದ ಹೆಸರು. ಕಚ್ಚೂರಗಡ್ಡೆಗೆ ಸಂಸ್ಕೃತದಲ್ಲಿ ದ್ರಾವಿಡಕ ಎಂಬ ಹೆಸರಿದೆ.

ಯಾರು ಆರ್ಯರುಯಾರು ದ್ರಾವಿಡರು?

ದ್ರಾವಿಡರು ಮೊದಲು ಬಂದವ್ರು. ಆರ್ಯರು ಆನಂತರ ಬಂದವರು. ಅಮರಕೋಶಕಾರನು ‘ಆರ್ಯ’ ಎಂಬ ಪದವನ್ನು ಬಳಸಿದ್ದಾನೆ. ಆರ್ಯಾವರ್ತ ಎಂಬ ಪದವನ್ನು ಬಳಸಿದ್ದಾನೆ. “ಆರ್ಯಾವರ್ತ” ಎಂಬುದು ಒಂದು ಸ್ಥಳದ ಹೆಸರು. ಆರ್ಯಾವರ್ತವು ಎಲ್ಲಿದೆ ಎಂದರೆ ಹಿಮಾಲಯ ಮತ್ತು ವಿಂಧ್ಯಪರ್ವತಗಳ ಮಧ್ಯದಲ್ಲಿದೆಯಂತೆ.

ಆರ್ಯಾವರ್ತಃ ಪುಣ್ಯಭೂಮಿಃ
ಮಧ್ಯಂ ವಿಂಧ್ಯಹಿಮಾಗಯೋಃ

ಸಂಸ್ಕೃತ ನಾಟಕಗಳಲ್ಲಿ ಹೆಂಡತಿ ಗಂಡನನ್ನು ‘ಆರ್ಯಪುತ್ರ’ ಎಂದು ಗಂಡ ಹೆಂಡತಿಯನ್ನು ‘ಆರ್ಯೆ’ ಎಂದು ಸಂಬೋಧಿಸುವ ಪದ್ಧತಿಯಿದೆ. ಕನ್ನಡದಲ್ಲಿ ಸಂಭೋಧನೆಯ ಸಂದರ್ಭದಲ್ಲಿ ‘ಅಯ್ಯಾ’ ಎಂಬ ಪದವನ್ನು ಬಳಸುತ್ತಾರೆ. (ಉದಾ ಅಯ್ಯಾ ರಾಜನೆ, ಅಯ್ಯಾ ಸೇವಕನೆ ಇತ್ಯಾದಿ) ಕೇರಳ ತಮಿಳುನಾಡುಗಳಲ್ಲಿ ಕೆಲವು ಹೋಟೆಲುಗಳಿಗೆ ‘ಆರ್ಯಭವನ’ ಎಂಬ ಹೆಸರನ್ನಿಡಲಾಗಿದೆ.

ತುಳುನಾಡಿನಲ್ಲಿ ತುಳು ಬ್ರಾಹ್ಮಣರನ್ನು ಕೆಲವು ಸಮುದಾಯದವರು ಈಗಲೂ ‘ಅಯ್ಯ’ ಎಂದು ಸಂಬೋದಿಸುವ ಪದ್ಧತಿ ಇದೆ. ನೇಲ್ಯಯ್ಯೆ, ಎಲ್ಯಯ್ಯೆ, ಇತ್ಯಾದಿ ಪ್ರಯೋಗಗಳೂ ಇವೆ. ಆಂದ್ರದಲ್ಲಿ ‘ಅಯ್ಯಂಗಾರ್’ ಪದ ರೂಢಿಯಲ್ಲಿರುವಂತೆ ತಮಿಳುನಾಡಿನಲ್ಲಿ ‘ಅಯ್ಯರ್’ ಎಂಬ ಪದ ರೂಢಿಯಲ್ಲಿದೆ. ಅಯ್ಯಂಗಾರ್ ಮತ್ತು ಅಯ್ಯರ್ ಪದವು ಬ್ರಾಹ್ಮಣವರ್ಗದವರಿಗೆ ಸಂಬಂಧಿಸಿದ ಪದವಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿರುವ ‘ಬಾಕುಡ’ ಸಮಾಜದವರು, ತಮ್ಮ ಜಾತಿಯ ಬಗ್ಗೆ ಹೇಳುವಾಗ ‘ಎಂಕ್ಲುದಿರಡೇರ್’ (ನಾವು ದ್ರಾವಿಡರು) ಎಂದು ಅಭಿಮಾನದಿಂದ ಹೇಳಿಕೊಳ್ಳುವ ಪದ್ಧತಿ ಈಗಲೂ ರೂಢಿಯಲ್ಲಿದೆ.