‘ದ್ರಾವಿಡ’ ಎಂಬ ಪದವು ದೇಶವಾಚಕವಾಗಿಯೂ ಜನಾಂಗವಾಚಕವಾಗಿಯೂ ಸಾಮಾನ್ಯವಾಗಿ ಬಳಕೆಯಾಗುವುದಿದೆ. ದ್ರಾವಿಡ ಭಾಷೆ ಎಂದಾಗ ಒಂದು ಭಾಷಾವರ್ಗವನ್ನು ಸೂಚಿಸಿದಂತಾಗುತ್ತದೆ. ಸಾಮಾನ್ಯವಾಗಿ ನಾವು ದಕ್ಷಿಣ ಭಾರತವನ್ನು ದೃಷ್ಟಿಯಲ್ಲಿರಿಸಿಕೊಂಡು ಅದನ್ನು ದ್ರಾವಿಡನಾಡೆಂದು, ಇಲ್ಲಿ ವಾಸಮಾಡುವ ಜನರನ್ನು ದ್ರಾವಿಡರು ಎಂದೂ ಗುರುತಿಸುವುದಿದೆ. ದ್ರಾವಿಡ ಭಾಷೆ ಅಂದರೆ ಮುಖ್ಯವಾಗಿ ತಮಿಳು, ಕನ್ನಡ, ತುಳು, ತೆಲುಗು, ಮಲಯಾಳಂ ಎಂಬಿತ್ಯಾದಿಗಳನ್ನು ಹೆಸರಿಸಲಾಗುತ್ತದೆ. ಉತ್ತರ ಭಾರತದಲ್ಲಿಯೂ ದ್ರಾವಿಡ ಭಾಷೆಗಳು ಬಳಕೆಯಲ್ಲಿವೆ ಎಂಬುದು ವಾಸ್ತವ.

ಆದರೆ, ನಮ್ಮ ಆಭಿಜಾತ ಕಾವ್ಯಕೃತಿಗಳಲ್ಲಿ ಉಲ್ಲೇಖಗೊಂಡ ಮಾತುಗಳನ್ನು ಲಕ್ಷಿಸಿದರೆ ‘ದ್ರಾವಿಡ’ ಎಂಬುದು ‘ತಮಿಳು’ ನಾಡು ಜನಾಂಗ ಹಾಗೂ ಭಾಷೆಗೆ ಸಂಬಂಧಿಸಿದ ಪದವಾಗಿ ಗೋಚರವಾಗುತ್ತದೆ. ಉದಾ.

ಮಗಧ ಸೌರಾಷ್ಟ್ರ ವರಾಟ ಲಾಟ ಕರ್ಣಾಟ ಮಳಯ ಮಾಳವ ನೇಪಾಳ ಕಾಶಿ ಕಾಶ್ಮೀರ ಗೌಡಾಂಧ್ರ ದ್ರವಿಳ
(ಪಂಪ – ವಿಕ್ರಮಾರ್ಜುನವಿಜಯಂ ೯ – ೯೫)

ಕುರುಜಾಂಗಣ ದ್ರವಿಳ ಲಾಳ ಕರ್ನ್ನಾಟ ಗೌಳ
(ಶಿವಕೋಟ್ಯಾಚಾರ್ಯ – ವಡ್ಡಾರಾಧನೆ)

ಕರ್ಣಾಟಾಂಧ್ರ ದ್ರವಿಡ ವರಾಟ
(ನಾಗವರ್ಮ – ಛಂದೋಂಬುಧಿ ೧ – ೪)

ಕರ್ಣಾಟಕ ಮಗಧ ಕಳಿಂಗಾಂಗ ಕಾಶ್ಮೀರ
ಕೇಯೂರಾಂಧ್ರ ಲಾಟ ದ್ರಮಿಳ
(ಕರ್ಣಪಾರ್ಯ – ನೇಮಿನಾಥ ಪುರಾನ – (೧೩ – ೧೦೩)

ಮೇಲ್ಕಂಡ ಈ ಉಲ್ಲೇಖಗಳನ್ನು ಗಮನಿಸಿದರೆ ಇಲ್ಲಿ ದ್ರಾವಿಡ ಎಂದರೆ ತಮಿಳನ್ನು ಕುರಿತಂತೆ ಹೇಳಿದ್ದೆಂಬುದು ಸ್ಪಷ್ಟ.

ದ್ರಾವಿಡ ಎಂಬ ಪದವು ತಮಿಳು ಪದದಿಂದ ನಿಷ್ಪನ್ನವಾಗಿದೆ ಎಂಬ ಅಭಿಪ್ರಾಯವೂ ಇದೆ ಹಾಗೆಯೇ ಮತ್ತೊಂದು ಅಭಿಪ್ರಾಯದ ಪ್ರಕಾರ ತಮಿಳು ಎಂಬ ಪದವೇ ದ್ರಾವಿಡದಿಂದ ನಿಷ್ಪನ್ನವಾಗಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ, ತುಳು ಎಂಬಿತ್ಯಾದಿ ಭಾಷೆಗಳು ಕವಲೊಡೆದು ಪ್ರತ್ಯೇಕವಾಗುವುದಕ್ಕೆ ಮುನ್ನ ಮೂಲದ್ರಾವಿಡ ಎಂಬ ಭಾಷೆಯೊಂದಿತ್ತು. ಕಾಲಕ್ರಮೇಣ ತಮಿಳು ಮೂಲದ್ರಾವಿಡದಿಂದ ಮೊದಲು ಪ್ರತ್ಯೇಕವಾಗಿ ಕಾಲಾನಂತರದಲ್ಲಿ ಉಳಿದ ಭಾಷೆಗಳೂ ಕವಲೊಡೆಯುತ್ತ ಬಂದವು. ಆದರೆ ಇಂದಿಗೂ ತಮಿಳುಭಾಷೆ ಮೂಲ ದ್ರಾವಿಡ ಭಾಷೆಯ ಬಹುತೇಕ ಹೆಚ್ಚಿನ ಲಕ್ಷಣಗಳನ್ನು ಉಳಿಸಿಕೊಂಡು ಬಂದಿದೆ ಎಂದು ಭಾಷಾ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದೂ ಉಂಟು.

ಸಾಮಾನ್ಯವಾಗಿ ಮಲಯಾಳಂ ಸಂದರ್ಭದಲ್ಲಿಯೂ ಇದೇ ಹಿನ್ನಲೆಯಲ್ಲಿ ದ್ರಾವಿಡ ಎಂಬ ಪದವನ್ನು ಅರ್ಥೈಸಲಾಗುತ್ತಿದೆ. ಆದರೆ ದ್ರಾವಿಡರ ಸಂಸ್ಕೃತಿ, ಇತಿಹಾಸಗಳತ್ತ ಗಮನಹರಿಸಿದರೆ ದ್ರಾವಿಡರು ಎಂದರೆ ಯಾರು? ಅವರು ಎಲ್ಲಿಂದ ಬಂದವರು ಇತ್ಯಾದಿ ವಾದ ವಿವಾದಗಳು ಮಲಯಾಳಂನಲ್ಲಿಯೂ ಸಾಕಷ್ಟು ನಡೆದಿದೆ. ಈ ಬಗೆಗೆ ಇತಿಹಾಸತಜ್ಞರಲ್ಲಿಯೇ ಭಿನ್ನಭಿನ್ನ ಅಭಿಪ್ರಾಯಗಳಿವೆ. ದ್ರಾವಿಡರೆಂದರೆ ಮೆಡಿಟರೇನಿಯನ್ ಪ್ರದೇಶದಿಂದ ಬಂದವರು ಎಂದು ಇತ್ತೀಚಿನವರೆಗೂ ನಂಬಲಾಗಿತ್ತು. ಏಷ್ಯಾ ಮೈನರಿನ ಲಿಸಿಯವರ ಲಿಖಿತಗಳಲ್ಲಿ ಉಲ್ಲೇಖವಾದ ‘ತ್ರಿಮ್‌ಲೈ’ ಎಂಬ ಹೆಸರು ದ್ರಮಿಳ (ತಮಿಳ್‌) ಎಂಬುದಕ್ಕೆ ಸಾದೃಶ್ಯವಿದೆ. ಭಾಷೆಗೆ ಸಂಬಂಧಿಸಿದಂತೆ ಹೇಳುವುದಾದರೆ ಸಿಥಿಯೆನ್ ಭಾಷೆಗೂ ದ್ರಾವಿಡ ಭಾಷೆಗಳಿಗೂ ಪರಸ್ಪರ ಸಾದೃಶ್ಯವಿದೆಯೆಂದು ಕಾಲ್ಡ್‌ವೆಲ್ ಸೂಚಿಸಿದ್ದಾನೆ. ಆಫ್‌ಘಾನಿಸ್ತಾನ, ಇರಾನಿನ ಪರ್ವತ ಪ್ರದೇಶಗಳು, ಯುಪ್ರಟೀಸ್ ಟೈಗ್ರಿಸ್ ನದೀ ತೀರಗಳು ಮೊದಲಾದೆಡೆಗಳಲ್ಲಿ ಮುಖ್ಯವಾಗಿ ಮೆಸೊಪೊಟೋಮಿಯಾದ ಅನೇಕ ಪ್ರಾಚೀನ ಸ್ಥಳನಾಮ ಗಳಿಗೆ ದ್ರಾವಿಡ ರೂಪಗಳೊಡನೆ ಸಾದೃಶ್ಯವಿರುವುದನ್ನು ಕಂಡು ಹಿಡಿದಿದ್ದಾರೆ. ಈ ಪ್ರದೇಶಗಳ ಸೆಮಿಟಿಕ್ ವಿಭಾಗದಲ್ಲೂಈ ಆರ್ಯವಿಭಾಗದಲ್ಲೂ ಸೇರದ ಜನರು ದ್ರಾವಿಡ ಭಾಷೆಯನ್ನು ಮಾತನಾಡುತ್ತಿದ್ದರು ಎಂಬುದೂ ಸ್ಪಷ್ಟವಾಗಿದೆ. ಹೇರಿಯನ್ ಭಾಷೆ ಹಾಗೂ ಕಾಸೈಟ್ ಭಾಷೆಗೆ ದ್ರಾವಿಡ ಭಾಷೆಗಳೊಡನೆ ಹತ್ತಿರದ ಸಂಬಂಧ ಗೋಚರಿಸುತ್ತದೆ. ಎಲಾಮೈಟ್ ಭಾಷೆ ಮತ್ತು ಬ್ರಾಹುಇ ಭಾಷೆಗಳೊಡನೆ ಇತಿಹಾಸಕಾರರು ಸಂಬಂಧ ಕಲ್ಪಿಸಿದ್ದಾರೆ. ಎಲಾಮೆಟ್ ಭಾಷೆಯು ಹುಟ್ಟಿದ್ದು ಪಶ್ಚಿಮ ಏಷ್ಯಾದಲ್ಲಿ. ಹಾಗಾಗಿ, ಮೂಲ ದ್ರಾವಿಡ ಭಾಷೆಯೂ ಅದನ್ನು ಮಾತಾಡುವ ಜನರೂ (ದ್ರಾವಿಡರು) ಈ ಪ್ರದೇಶಗಳಿಂದ ಬಂದವರೆಂದು ಊಹಿಸಲಾಗಿದೆ.

ದ್ರಾವಿಡರು ಮೆಡಿಟರೇನಿಯನ್ ವಂಶಜರೆಂಬ ಅಭಿಪ್ರಾಯದಲ್ಲಿ ಆಧುನಿಕ ಮಾನವ ಶಾಸ್ತ್ರಜ್ಞರಲ್ಲಿ ಸಹಮತವಿಲ್ಲ. ಮೆಡಿಟರೇನಿಯನ್ ವಂಶಜರನ್ನು ದಕ್ಷಿಣ ಯುರೋಪ್ರೊಯ್‌ಡ್ ವಂಶಜರು ಎಂದು ಕರೆಯಲಾಗುತ್ತದೆ. ಹೆಚ್ಚು ಕಡಿಮೆ ಬಿಳಿ ಮೈಬಣ್ಣದ ಜನವರ್ಗದವರಿವರು. ದ್ರಾವಿಡರು ಆಕೃತಿಯಲ್ಲಿ ಬಣ್ಣದಲ್ಲಿ ಇವರಿಗಿಂತ ಭಿನ್ನರಾದವರು. ದ್ರಾವಿಡರಲ್ಲಿ ಮಿಶ್ರವಂಶದ ಪ್ರಕೃತಿ ಹಾಗೂ ಬಣ್ಣವನ್ನು ಕಾಣಬಹುದು.

ದ್ರಾವಿಡರು ಸಿಂಧೂನದಿ ತೀರದಿಂದ ಬಂದವರೆಂಬ ಅಭಿಪ್ರಾಯ ಶಕ್ತವಾಗಿದೆ. ಸಿಂಧೂನದಿ ತೀರದ ಜನರು ಒಂದು ಮಿಶ್ರ ವಂಶಜರೆಂಬುದು ಖಚಿತವಾಗಿದೆ. ವಿವಿಧ ವಂಶಗಳಿಗೆ ಸೇರಿದ ಜನವರ್ಗದವರೆಲ್ಲ ಈ ಅತಿ ಪುರಾತನ ಸಾಂಸ್ಕೃತಿಕ ಕೇಂದ್ರದಲ್ಲಿ ಒಂದುಗೂಡಿದ್ದರು. ಹರಪ್ಪಾ, ಮೊಹೆಂಜೋದಾರೊಗಳಲ್ಲಿ ನಡೆಸಿದ ಉತ್ಖನನಗಳಲ್ಲಿ ದೊರೆತ ತಲೆಬುರುಡೆಗಳನ್ನು ಶೋಧಿಸಿದ್ದಾರೆ. ಪ್ರೋಟೋ ಆಸ್ಟ್ರೊಲ್ಯಾಡ್ ವಂಶಜರು, ಮೆಡಿಟರೇನಿಯನ್ ವಂಶಜರು, ಮಂಗೋಲಿಯನ್, ಆಲ್ಪೈನ್ ವಂಶಜರು ಮೊದಲಾದವರೆಲ್ಲ ಅಲ್ಲಿದ್ದರು ಎಂಬುದನ್ನು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಇವುಗಳಲ್ಲಿ ಅತ್ಯಂತ ಹೆಚ್ಚು ದೊರೆತುದು ಪ್ರೋಟೋ ಅಸ್ಟ್ರೋಲ್ಯಾಡ್ ಮತ್ತು ಮೆಡಿಟರೇನಿಯನ್ ವಂಶಜರ ಅವಶೇಷಗಳಾಗಿವೆ.

ಮೆಡಿಟರೇನಿಯನ್ ವಂಶಜರು ಪಶ್ಚಿಮ ಏಷ್ಯಾದಿಂದ ಬಲೂಚಿಸ್ಥಾನ ದಾರಿಯಾಗಿ ಭಾರತವನ್ನು ತಲುಪಿದರು ಎಂದು ಊಹಿಸಲಾಗಿದೆ. ಬಲೂಚಿಸ್ಥಾನದಲ್ಲಿ ಕಾಣುವ ಬ್ರಾಹುಇವರ್ಗದವರು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಯನ್ನು ಮಾತನಾಡುತ್ತಾರೆ. ಸೈಂಧವ ಜನರ ಹಾಗೂ ಮೆಡಿಟರೇನಿಯನ್ ಜನರ ಸಂಬಂಧಗಳನ್ನು ಕುರಿತಂತೆ ಮಾನವಶಾಸ್ತ್ರಜ್ಞರು ವಿಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ದ್ರಾವಿಡ ಜನರ ಪ್ರಮುಖ ವಿಭಾಗವು ಮೆಡಿಟರೇನಿಯನ್ ವಂಶದಲ್ಲಿಯೇ ಅಥವಾ ಅವರೊಡನೆ ಹತ್ತಿರ ಸಂಬಂಧ ಹೊಂದಿದ ಒಂದು ವಂಶಕ್ಕೆ ಸೇರಿದವರೆಂಬುದು ಸ್ಲೇಟರನ ಅಭಿಪ್ರಾಯವಾಗಿದೆ. ತಲೆಬುರುಡೆಯ ಆಕಾರದಲ್ಲಿ ತಲೆಗೂದಲಿನ ಬಣ್ಣದಲ್ಲಿ ಹಾಗೂ ಶರೀರ ಪ್ರಕೃತಿಯಲ್ಲಿ ಇರುವ ಸಾಮ್ಯ ಕುತೂಹಲಕರವಾಗಿದೆ. ಮೆಡಿಟರೇನಿಯನ್ ವಂಶಜರ ಎಂದು ಶಾಖೆ ಮೆಸೊಪೊಟೋಮಿಯಾ ಬಲೂಚಿಸ್ಥಾನ ದಾರಿಯಾಗಿ ಭಾರತಕ್ಕೆ ಬಂದುದಾಗಿ ಸ್ಲೇಟರನು ಅಭಿಪ್ರಾಯಪಟ್ಟಿದ್ದಾನೆ. ಅದು ಸುಮೇರಿಯನ್ ಸಂಸ್ಕೃತಿಯ ಉದಯಕ್ಕೂ ಪೂರ್ವದಲ್ಲಿಯೇ ಆಗಿರಬಹುದು. ಭಾರತದ ಹೊಸ ಪರಿಸರದಲ್ಲಿ ಬಾಹ್ಯವಾದ ಹಲವು ಶಕ್ತಿಗಳೂ ಒಡಗೂಡಿದಾಗ ಅವರು ದ್ರಾವಿಡ ಸಂಸ್ಕೃತಿಯನ್ನು ವಂಶವನ್ನು ಹುಟ್ಟು ಹಾಕಿದರು.

ಮೆಡಿಟರೇನಿಯನ್ ವಂಶಜರು ಹಾಗೂ ಪ್ರೋಟೋ ಆಸ್ಟ್ರೊಲ್ಯೊಡ್ ವಂಶಜರು ಸೇರಿಯೇ ದ್ರಾವಿಡರು ಜನ್ಮ ತಳೆದರು ಎಂಬುದನ್ನು ಆಧುನಿಕ ಮಾನವಶಾಸ್ತ್ರಜ್ಞರು ಬಲವಾಗಿ ಸೈದ್ಧಾಂತೀಕರಿಸುತ್ತಾರೆ. ಮಧ್ಯಶಿಲಾಯುಗದಲ್ಲಿ ವಾಯುವ್ಯದಿಂದ ಬಂದ ಯುರೋಪ್ಯನರು ಅಥವಾ ಯುರೋಪ್ಪೆಯ್‌ಡ್ ಮೇಜರ್ ವಂಶದ ಜನರು ನೀಗ್ರೋ ಆಸ್ಟ್ರೊಲೈಡ್ ವಂಶಜರ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದರು ಎಂಬುದನ್ನು ಪುರಾತತ್ತ್ವ ಸಂಶೋಧಕರು ಸ್ಪಷ್ಟಪಡಿಸಿದ್ದಾರೆ ಎಂದು ಯು. ಎಗುಕೋವ್‌ಸ್ಕಿ ಎಂಬ ಮಾನವ ಶಾಸ್ತ್ರಜ್ಞ ಅಭಿಪ್ರಾಯಪಟ್ಟಿದ್ದಾನೆ. ಈ ಎರಡು ವಂಶಜರ ಮಿಲನದ ಫಲವಾಗಿ ಮಧ್ಯ ಶಿಲಾಯುಗದ ಅಂತ್ಯದ ವೇಳೆಗೆ ಇಂಡೋ ಪಾಕಿಸ್ತಾನದ ಉಪ ಭೂಖಂಡಗಳಲ್ಲಿ ದ್ರಾವಿಡ ವಿಭಾಗಕ್ಕೆ ಸೇರಿದ ಜನರು ಹುಟ್ಟಿಕೊಂಡರು ಎಂದು ಆತ ಸ್ಪಷ್ಟಪಡಿಸಿದ್ದಾನೆ. ಸೈಂಧವ ಲಿಪಿಗಳನ್ನು ಓದಲು ಶ್ರಮಿಸಿದ ಫಿನ್ನಿಷ್ ಪಂಡಿತರ ಅಭಿಪ್ರಾಯದಲ್ಲಿಯೂ ಸೈಂಧವ ಸಂಸ್ಕೃತಿಯನ್ನು ಹುಟ್ಟು ಹಾಕಿದ ದ್ರಾವಿಡ ಜನರು ಹುಟ್ಟಿದುದು ಮೆಡಿಟರೇನಿಯನ್ ಆಸ್ಟೋಲ್ಯಾಡ್ ವಂಶಜರ ಸಮ್ಮಿಲನದಿಂದ ಎಂಬುದೇ ಆಗಿದೆ. ವಿಕಾಸ ಹೊಂದಿದ ಸಂಸ್ಕೃತಿಯೊಂದು ಮೆಡಿಟರೇನಿಯನ್ ತೀರದಿಂದ ಬಂದು ಇಲ್ಲಿಯ ಮಣ್ಣಿನಲ್ಲಿ ಬೇರೂರಿದ ಸಂಸ್ಕೃತಿಯೇ ದ್ರಾವಿಡ ಸಂಸ್ಕೃತಿ ಎಂದು ವಾದಿಸುವವರೂ ಇದ್ದಾರೆ. ಹೊರಗಿನಿಂದ ಬಂದ ಸಂಸ್ಕೃತಿಯೆಂದು ಎಷ್ಟು ಉಜ್ವಲವಾಗಿದ್ದರೂ ಇಲ್ಲಿಯ ಪರಿಸ್ಥಿತಿಗಳು ಅದನ್ನು ಸೇರಿಸಿಕೊಳ್ಳಲು ಹಾಗೂ ಪುಷ್ಟೀಕರಿಸಲು ಸಹಾಯ ಮಾಡದಿದ್ದರೆ ಹೊರಗಿನಿಂದ ಬಂದ ಸಂಸ್ಕೃತಿ ನಾಶವಾಗಿ ಹೋಗಬಹುದು. ಹಾಗೆಯೇ ಅನುಕೂಲಕರವಾದ ಪರಿಸ್ಥಿತಿಯ ಕಾರಣವಾಗಿ ವಿನೂತನ ವಿಕಾಸಗಳ ಪರಿಣಾಮವಾಗಿ ಆಕರ್ಷಕವಾದ ಸಂಸ್ಕೃತಿಯೊಂದು ಅರಳುವುದು ಸಾಧ್ಯವಿದೆ. ಸಿಂಧೂನದೀ ಕಣಿವೆಯಲ್ಲಿಯು ಇದೇ ನಡೆದುದು. ಕ್ರಿ.ಪೂ. ನಾಲ್ಕನೆಯ ಶತಮಾನ ಅಥವಾ ಅದಕ್ಕೂ ಹಿಂದೆ ಇಲ್ಲಿಗೆ ಬಂದು ತಲುಪಿದ ಮೆಡಿಟರೇನಿಯನ್ ವಂಶಜರು ಇಲ್ಲಿಯೇ ಇದ್ದ ಪ್ರೋಟೋ ಅಸ್ಟ್ರಲ್ಯಾಡ್ ವಂಶಜರು ಪರಸ್ಪರ ಸೇರಿ ಸಂಕರ ಸಂಸ್ಕೃತಿಯನ್ನು ಸೃಷ್ಟಿಸಿದರು. ಇದುವೇ ಭಾರತ ಭೂಖಂಡದಲ್ಲಿ ಬೆಳೆದ ಸೈಂದವ ಸಂಸ್ಕೃತಿ ಅಥವಾ ದ್ರಾವಿಡ ಸಂಸ್ಕೃತಿ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯವಾಗಿದೆ.

ಕಡಲದಾರಿಯಲ್ಲಿಯೂ ತೀರದ ದಾರಿಯಲ್ಲಿಯೂ ದ್ರಾವಿಡರು ಕ್ರಿ.ಪೂ.ದಲ್ಲಿಯೇ ದಕ್ಷಿಣ ಭಾರತದ ಪ್ರದೇಶಗಳಿಗೆ ಬಂದು ಸೇರಿದ ಬಗೆಗೆ ಸಂಶೋಧಕರು ಪುರಾವೆಗಳನ್ನೊದಗಿಸುತ್ತಾರೆ. ಅವರು ಬರುವುದಕ್ಕೆ ಪೂರ್ವದಲ್ಲಿ ಇಲ್ಲಿ ನೆಲೆಸಿದ್ದವರು ನಾಗವಂಶಕ್ಕೆ ಸೇರಿದ ಜನವರ್ಗದವರು. ಅವರ ಪ್ರಾಬಲ್ಯವನ್ನು ಕುಗ್ಗಿಸಿ ದ್ರಾವಿಡರು ತಮ್ಮ ಆಧಿಪತ್ಯವನ್ನು ಸ್ಥಾಪಿಸಿದ ಬಗೆಗೂ ವಿದ್ವಾಂಸರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಹೀಗೆ ಬಂದ ದ್ರಾವಿಡರು ತಮ್ಮೊಡನೆ ಭಾಷೆಯನ್ನು ತಂದಿದ್ದರಲ್ಲದೆ ತಮ್ಮ ಸಂಸ್ಕೃತಿಯ ಜೊತೆಗೆ ಸ್ಥಳೀಯವಾದ ಸಂಸ್ಕೃತಿಯ ಮಿಲನದ ಮೂಲಕ ಹೊಸ ಸಂಸ್ಕೃತಿಯ ಹುಟ್ಟಿಗೆ ನಾಂದಿ ಹಾಡಿದರು. ಪರಿಣಾಮವಾಗಿ ದ್ರಾವಿಡ ಸಂಸ್ಕೃತಿ ಎಂಬ ಸಂಸ್ಕೃತಿಯು ತನ್ನ ವಿವಿಧಾಂಗಗಳಲ್ಲಿ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದೆ.

ಗ್ರಂಥಋಣ

೧. ಗೋಪಾಲಕೃಷ್ಣನ್ ಎ.ಕೆ – ಕೇರಳತ್ತಿಂಡೆ ಸಾಂಸ್ಕಾರಿಕ ಚರಿತ್ರಂ, ಕೇರಳ ಭಾಷಾ ಇನ್‌ಸ್ಟಿಟ್ಯೂಟ್, ನಾಲ್ಕನೆಯ ಮುದ್ರಣ – ೧೯೯೧

೨. ಎ. ಶ್ರೀಧರ ಮೇನೋನ್ – ಕೇರಳ ಸಂಸ್ಕಾರಂ, ಪ್ರಿಂಟರ್ಸ್ ಪಬ್ಲಿಷರ್ಸ್, ಪ್ರೈವೇಟ್ ಲಿಮಿಟೆಡ್, ಮದ್ರಾಸು – ೩೧