ಸಮಾಜ ಶಾಸ್ತ್ರಜ್ಞರ ಪ್ರಕಾರ ಪ್ರಪಂಚದಲ್ಲಿ ಸುಮಾರು ೨೭೬೯ ಭಾಷೆಗಳಿವೆ. ಅವುಗಳಲ್ಲಿ ಕೆಲವು ಭಾಷೆಗಳು ಮಾತ್ರ ಗ್ರಂಥಸ್ಥವಾಗಿದ್ದು ಬಹುಕಾಲದಿಂದ ಬೆಳೆದು ಬಂದಿರುವ ಸಾಹಿತ್ಯವನ್ನೂ ಅವುಗಳ ಲಕ್ಷಣಗಳನ್ನೂ ತಿಳಿಸುವ ವ್ಯಾಕರಣಗಳನ್ನೂ ಪಡದಿವೆ. ಇವುಗಳ ಚರಿತ್ರೆಯನ್ನು ತಿಳಿಸುವುದಕ್ಕೆ ಅವಶ್ಯವಾದ ಸಾಮಗ್ರಿಗಳಿಗೆ ಏನೂ ಕೊರತೆಯಿಲ್ಲ. ಅನೇಕ ಭಾಷೆಗಳು ಇನ್ನೂ ಬಾಯಿ ಮಾತಿನ ಅವಸ್ಥೆಯಲ್ಲೇ ಇವೆ. ಅವಕ್ಕೆ ಲಿಪಿಯಿಲ್ಲ. ಅವು ಗ್ರಂಥಸ್ಥವಾಗಿಲ್ಲ. ಇಂಥ ಭಾಷೆಗಳು ಬೆಳವಣಿಗೆಯನ್ನು ಪಡೆದಿಲ್ಲವೆಂದು ಹೇಳಲಾಗುವುದಿಲ್ಲ. ಆ ಬೆಳವಣಿಗೆಯನ್ನು ತಿಳಿಯಲು ಬೇಕಾದ ಸಾಮಗ್ರಿ ಇಲ್ಲವೆಂದು ಮಾತ್ರ ಹೇಳಬಹುದು.

[1] ಈ ಹಿನ್ನಲೆಯಲ್ಲಿ ವಿಚಾರ ಮಾಡಿದರೆ ಪ್ರತಿಯೊಂದು ಭಾಷೆಗೂ ಒಂದು ಅಸ್ತಿತ್ವವಿದೆ, ಒಂದು ಇತಿಹಾಸವಿದೆ. ಈ ಇತಿಹಾಸವನ್ನು ಅರಿಯಲು ಮಾತ್ರ ಸರಿಯಾದ ಸಾಮಗ್ರಿ ದೊರೆಯುತ್ತಿಲ್ಲ. ಈಗ ಸಿಕ್ಕಿರುವ ಆಧಾರಗಳ ಮೇಲೆಯೇ ವಿವೇಚಿಸಿದರೆ ಕೊರಮರ (ಕುಳವ) ಭಾಷೆಯು ಸ್ವತಂತ್ರ ಭಾಷೆಯಲ್ಲ; ಮತ್ತೊಂದು ಭಾಷೆಯ ಉಪಭಾಷೆ ಎಂಬುದು ತಿಳಿಯುತ್ತದೆ. ಕೊರಮರ ಭಾಷೆಯಲ್ಲಿ ಕಂಡು ಬರುವ ಹೆಚ್ಚಿನ ಶಬ್ದಗಳು, ಅವು ಉಚ್ಚರಿಸಲ್ಪಡುವ ರೀತಿ ಮತ್ತು ಅವುಗಳ ಅರ್ಥವನ್ನು ಗ್ರಹಿಸಿದಾಗ ಇದು ತಮಿಳು ಭಾಷೆಯ ಸಮೀಪಕ್ಕೆ ಹೋಗುತ್ತದೆ. ಆದ್ದರಿಂದ ಇದು ಪೂರ್ವದ್ರಾವಿಡ ಸಂದರ್ಭದಲ್ಲಿಯೇ ಮೂಲನೆಲೆಯಿಂದ ಪ್ರತ್ಯೇಕಗೊಂಡಿರಬೇಕೆಂದು ತೋರುತ್ತದೆ. ಕೊರಮರಲ್ಲಿ ಕೆಲವರು ತಮ್ಮ ಭಾಷೆಯನ್ನು ‘ಕೊಂಗ’ ಭಾಷೆ ಎಂದು ಕರೆಯುತ್ತಾರೆ. ತಮಿಳರನ್ನು ನಮ್ಮಲ್ಲಿ ‘ಕೊಂಗರು’ ಎಂದು ವಾಡಿಕೆಯಲ್ಲಿ ಗುರುತಿಸುವುದನ್ನು ನೋಡಿದರೆ ಈ ಭಾಷೆಯ ಮೂಲ ತಮಿಳುನಾಡಿಗೆ ಸೇರುವುದನ್ನು ಅರಿಯಬಹುದು.

ಕೊರಮರ ಮೂಲನೆಲೆಯಿಂದ ಪ್ರತ್ಯೇಕಗೊಂಡು ಚದುರಿ ಹೋದುದರಿಂದ ಮತ್ತು ಸಂಚಾರಿಗಳಾಗಿ ಉಳಿದು ಹೊಟ್ಟೆ ಹೊರೆದುಕೊಳ್ಳುವುದರಲ್ಲಿಯೇ ಕಾಲ ಕಳೆದುದರಿಂದ ತಮ್ಮ ಭಾಷೆಯನ್ನು ಸಮರ್ಪಕವಾದ ರೀತಿಯಲ್ಲಿ ಬೆಳೆಸಲು ಸಾಧ್ಯವಾಗಲಿಲ್ಲವೆಂದು ತೋರುತ್ತದೆ. ಲಿಪಿಯನ್ನು ಗುರ್ತಿಸಿ ಗ್ರಂಥಸ್ಥ ಸಾಹಿತ್ಯವನ್ನು ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ತಮಿಳು ಲಿಪಿಯ ಶೋಧಕ್ಕಿಂತಲೂ ಮುಂಚೆಯೇ ಈ ಬುಡಕಟ್ಟು ಮೂಲನೆಲೆಯಿಂದ ಚದುರಿದ್ದರಿಂದಲೇ ತಮಿಳು ಲಿಪಿಯನ್ನು ಬಳಸಲು ಇವರಿಗೆ ಸಾಧ್ಯವಾಗಿಲ್ಲ. ಇಲ್ಲದಿದ್ದರೆ, ಒಂದು ಕಾಲದ ತಮಿಳು ಲಿಪಿಯ ಒಂದು ರೂಪವಾದರೂ ಇವರಲ್ಲಿ ಉಳಿಯಬೇಕಾಗಿತ್ತು. ಕೊರಮರ ಭಾಷೆ ಗ್ರಂಥಸ್ವರೂಪವನ್ನು ಪಡೆಯದೇ ಇರುವುದರಿಂದ ತಮಿಳಿನ ಹಾಗೆ ಬೆಳೆಯಲು ಸಾಧ್ಯವಾಗಲಿಲ್ಲ.

ವಿದ್ವಾಂಸರ ಆಭಿಪ್ರಾಯ

ತಮಿಳಿನ ಒಂದು ಸಾವಿರ ವರ್ಷಗಳಷ್ಟು ಹಿಂದಿನ ಚರಿತ್ರೆಯನ್ನು ಅರಿಯಬಹುದಾದರೂ ಕೊರಮ ಭಾಷೆಯು ಕೇವಲ ನೂರು ವರ್ಷಗಳ ಇತಿಹಾಸವನ್ನು ಅರಿಯಲು ಸರಿಯಾದ ಆಧಾರಗಳಿಲ್ಲ. ಇದಕ್ಕೂ ಲಿಪಿಯಿದ್ದು, ಸಾಹಿತ್ಯಿಕ ಕೃತಿಗಳಿದ್ದಿದ್ದರೆ ಆ ಬಗ್ಗೆ ಯೋಚಿಸಬಹುದಾಗಿತ್ತು. ಇಂದು ಕೊರಮರ ಭಾಷೆ ಒಂದು ಲಿಪಿಯಿಲ್ಲದ ಸ್ವತಂತ್ರ ಉಪಭಾಷೆಯಂತೆ ತೋರಿದರೂ ಇದರ ಬೇರು ತಮಿಳಿನಲ್ಲಿಯೇ ಆತುಕೊಂಡಿದೆ. ‘ಒಂದು ಭಾಷೆಯನ್ನಾಡುವ ಎರಡು ಸಮಾಜಗಳು ಒಂದರಿಂದೊಂದು ಎಷ್ಟು ಸಮಯ ಮತ್ತು ಎಷ್ಟು ದೂರ ಬೇರೆಬೇರೆಯಾಗಿರುತ್ತವೆಯೋ ಅಷ್ಟೇ ಅವುಗಳೊಳಗಿನ ಭಾಷಾ ವ್ಯತ್ಯಾಸವು ಹೆಚ್ಚಾಗುತ್ತವೆ.[2] ಆದ್ದರಿಂದ ತಮಿಳು ಮತ್ತು ಕೊರಮರ ಭಾಷೆಗಳನ್ನು ಹೋಲಿಸಿ ನೋಡುವಾಗ ಅವುಗಳ ರೂಪ ವ್ಯತ್ಯಾಸ ಮತ್ತು ಅವು ಒಂದರಿಂದೊಂದು ಪಡೆದ ಭಿನ್ನತೆಯ ಅರಿವಾಗುತ್ತದೆ. ಈ ವ್ಯತ್ಯಾಸಕ್ಕೆ ಅನ್ಯಭಾಷಾ ಸಂಪರ್ಕ, ಭಿನ್ನ ಸಂಸ್ಕೃತಿಗಳ ಪ್ರಭಾವವೂ ಬಹುಮುಖ್ಯ ಕಾರಣಗಳಾಗುತ್ತವೆ ಎಂಬುದನ್ನು ಒಪ್ಪಲೇಬೇಕು. ತಮಿಳಿನಲ್ಲಿ ಕೈಕಾಡೀ (Kaikadi) \ ಕೋರ್ವಿ (Korvi) ಮತ್ತು ಯರುಕುಲ (Yerukala) ಮುಂತಾದ ಉಪಭಾಷೆಗಳಿವೆ.[3] ಇವೆಲ್ಲ ಕೊರಮರ ಜಾತಿಯ ಹಲವು ಹೆಸರುಗಳು. ಭಾಷೆ ಒಂದೇ ಆದರೂ ಜಾತಿಯ ಹಲವು ಹೆಸರುಗಳು ಈ ಭಾಷೆಗೂ ಬಂದಿವೆ. ಕೊರಮರನ್ನು ಬೊಂಬಾಯಿ ಪ್ರಾಂತ್ಯದಲ್ಲಿ ಕೈಕಾಡಿಗಳೆಂದರೆ, ಮದ್ರಾಸ್ ಪ್ರಾಂತ್ಯದಲ್ಲಿ ಕೋರ್ವಿ ಎಂದೂ ತೆಲುಗು ಪ್ರಾಂತ್ಯದಲ್ಲಿ ಯರಕುಲ ಎಂದೂ ಕರೆಯುವ ಬಗೆಗೆ ಉಲ್ಲೇಖಗಳಿವೆ. ಇದರಿಂದ, ಈ ಜನ ಯಾವ ಪ್ರಾಂತ್ಯದಲ್ಲಿದ್ದರೂ ಆಡುವ ಭಾಷೆ ಒಂದೇ ಎಂಬುದು ಅರ್ಥವಾಗುತ್ತದೆ. ಕೊರಮರಾಡುವ ಭಾಷೆಯ ಬಗೆಗೆ ಬೇರೆಬೇರೆ ಪ್ರಾಂತ್ಯದ ವಿದ್ವಾಂಸರು ಉಲ್ಲೇಖಿಸಿರುವ ಶಬ್ದಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಬೇರೆ ಬೇರೆ ಪ್ರಾಂತ್ಯಗಳಲ್ಲಿಯ ಆಯಾ ಪ್ರದೇಶಕ್ಕೆ ಹೊಂದಿಕೊಂಡು ಬದುಕುತ್ತಿರುವ ಈ ಜನ ಆಯಾ ಪ್ರದೇಶದ ಭೌಗೋಳಿಕ ಸನ್ನಿವೇಶ, ಭಾಷಿಕ ಮತ್ತು ಸಂಸ್ಕೃತಿಗನುಗುಣವಾಗಿ ಬದುಕುತ್ತಿದ್ದರೂ ಇವರೆಲ್ಲ ಮೂಲದಲ್ಲಿ ಒಂದೇ ಭಾಷೆಯ ನೆಲೆಯಿಂದ ಹೊರಟವರು. ಅವರಲ್ಲಿ ಕಂಡು ಬರಬಹುದಾದ ಬದಲಾವಣೆ ಕಾಲಾಂತರದಲ್ಲಿ ಉಂಟಾದದ್ದು ಎಂದು ತೋರುತ್ತದೆ.

“These people are the aborgines of hills and vallies of South India. Most of them are new in plains and a few is hillds. Throughout southern states and engaged in various occupations. The kula and kothra are also the same with the people of his community though they differ in their mother tongue”[4] ಎನ್ನುವ ಜ್ಞಾನ ಮಾಣಿಕಮ್ಮಾಳ್ ಇವರು ದಕ್ಷಿಣ ಭಾರತದ ಈ ಜನ ಕುಲ – ಗೋತ್ರಗಳಿಂದ ಒಂದೇ ಆದರೂ ಮಾತೃಭಾಷೆ ಮಾತ್ರ ಬೇರೆಯಾಗಿದೆ ಎನ್ನುವಲ್ಲಿ, ಅದು ಮಾತೃಭಾಷೆಯಲ್ಲ ಅವರ ವ್ಯವಹಾರದ, ತಾವು ಉಳಿದ ಪ್ರದೇಶದ ಭಾಷೆ ಎಂದು ಹೇಳುವುದು ಸೂಕ್ತ. ಇವರೇ ಹೇಳುವ ಹಾಗೆ ಕುಲ – ಗೋತ್ರ, ಜಾತಿಯಿಂದ ಒಂದಾದ ಇವರು ಮಾತೃಭಾಷೆಯಿಂದ ಬೇರೆಯಾಗಲು ಸಾಧ್ಯವಿಲ್ಲ. ಕರ್ನಾಟಕದಲ್ಲಂತೂ ಎಲ್ಲ ಭಾಗಗಳಲ್ಲಿ ವಾಸಿಸುವ ಕೊರಮರಲ್ಲಿ ಉಚ್ಚಾರಣ ವ್ಯತ್ಯಾಸವಿದ್ದರೂ ಒಂದೇ ಭಾಷೆಯನ್ನು ಮಾತನಾಡುತ್ತಾರೆ. ಕೊರಮರ ಭಾಷೆಯು ದ್ರಾವಿಡ ಮೂಲದ್ದಾದ್ದರಿಂದ ಪಂಚ ದ್ರಾವಿಡ ಭಾಷೆಗಳ ಶಬ್ದಗಳು ಇಲ್ಲಿ ಹೇರಳವಾಗಿವೆ. ಎಲ್ಲ ಪ್ರಾಂತ್ಯಗಳಲ್ಲಿ ವಾಸ ಮಾಡುತ್ತಿರುವ ಕೊರಮರ ಭಾಷೆಯ ಮೂಲ ಮನಾಗಳನ್ನು ತೌಲನಿಕವಾಗಿ ಗುರುತಿಸಿದರೆ ಅವರ ಮೂಲದ ಮಾತೃಭಾಷೆಯ ಸ್ವರೂಪವನ್ನು ತಿಳಿಯಲು ಸಾಧ್ಯವಾಗುತ್ತದೆ.

‘ಕೊರಮರು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಕನ್ನಡವನ್ನೋ, ತೆಲುಗನ್ನೋ, ತಮಿಳನ್ನೋ ಬಲ್ಲವರಾಗಿರುತ್ತಾರೆ. ತಮ್ಮ ತಮ್ಮಲ್ಲಿಯೇ ಮಾತನಾಡುವಾಗ ಬೇರೆಬೇರೆ ಭಾಷೆಗಳಿಂದ ಆಯ್ದುಕೊಂಡ ಶಬ್ದಗಳು ಅಪಭ್ರಂಶಗಳಿಂದ ಕೂಡಿದ ಭಾಷೆಯನ್ನು ಬಳಸುತ್ತಾರೆ[5] ಎಂದು ಪ್ರೊ. ಮಲ್ಲಾಪುರ ಅವರು ಗುರುತಿಸಿರುವುದು ಸರಿಯಿದ್ದರೂ ಅವರಾಡುವ ಮೂಲ ಭಾಷೆಯ ಬಗೆಗೆ ಹೆಚ್ಚಿಗೆ ಏನೂ ಹೇಳಿಲ್ಲ. ಮಲ್ಲಾಪುರ ಅವರು ಕೊರವಂಜಿಯ ಬಗ್ಗೆ ಬರೆಯುತ್ತಾ : ‘ಹೇಳುವೆ ಕಣಿ, ಕಣಿ ಕೇಳಿರಮ್ಮ’ ಎಂದು ಸುಶ್ರಾವ್ಯವಾಗಿ ಹಾಡುತ್ತಾ ವೈಯಾರದಿಂದ ಮನೆ ಬಾಗಿಲಿಗೆ ಬರುತ್ತಾರೆ ಕೊರವಂಜಿಗಳು.

ಪಚ್ಚೈಮಲೈ ಪವಳ ಮಲೈ ಎಂಗಳ್ ಮಲೈ ಅಮ್ಮೋ
ಪರಮೇಶನ್ ವಾಳುವುದುಂ ಎಂಗಳ್ ಮಲೈ ಅಮ್ಮೋ
ಕೊಚ್ಚಿಮಲೈ ಕೊಡಗುಮಲೈ ಎಂಗಳ್ ಮಲೈ ಅಮ್ಮೋ
ಕುಮರೇಷನ್ ವಾಳುವುದುಂ ಎಂಗಳ್ ಮಲೈ ಅಮ್ಮೋ

ಎಂದು ಈ ಸಾಲುಗಳನ್ನು ಉದಾಹರಿಸಿದ್ದಾರೆ. ಕನ್ನಡ ನೆಲದ ಕೊರವಂಜಿಯ ಬಾಯಲ್ಲಿ ಬಂದಿರುವ ಈ ಹಾಡು ಶುದ್ಧ ತಮಿಳು ರೂಪದ್ದು, ಕೊರಮರ ಭಾಷೆಗೂ ಇದಕ್ಕೂ ಹೆಚ್ಚು ವ್ಯತ್ಯಾಸ ಕಂಡು ಬರುವುದಿಲ್ಲ. ಒಂದು ಕಾಲಕ್ಕೆ ಈ ಜನರ ಕಾರ್ಯವ್ಯಾಪ್ತಿ ತಮಿಳು ನಾಡಿನಿಂದ ಕೇರಳ ಮತ್ತು ಕರ್ನಾಟಕದ ಕೊಡಗಿನವರೆಗಿತ್ತು ಎಂಬುದು ತೋರುತ್ತದೆ ಯಾದರೂ ಇವರಿಗೆ ಕಾಡೇ ನಾಡಾಗಿತ್ತು ಎಂಬುದು ಇದರಿಂದ ಸುವ್ಯಕ್ತವಾಗುತ್ತದೆ.

ಮೇಲೆ ಹೇಳಿದ ಕೊರವಂಜಿಯ ತಮಿಳು ರೂಪದ ಹಾಡನ್ನು ಕನ್ನಡಕ್ಕೆ ಅನುವಾದಿಸಿದರೆ ‘ಪಚ್ಚೆಯ ಪರ್ವತ ಹವಳದ ಗರಿ ನಮ್ಮ ಬೆಟ್ಟ, ಅಮ್ಮಾ ಕುಮಾರೇಷನ್ ಬದುಕುವುದು ನಮ್ಮ ಬೆಟ್ಟ ಅಮ್ಮಾ’ ಎನ್ನುತ್ತಾ ಕೇರಿಕೇರಿಯಲ್ಲಿ ಕೊರವಂಜಿಯರು ಬರುತ್ತಾರೆ. ಪರಮೇಶ್ವರನ ನಾಡಿನಿಂದ ಬಂದ ವಿಶೇಷ ವೇಷ – ಭೂಷಣಗಳಿಂದ ಅಲಂಕೃತಳಾದ ಕೊರವಂಜಿಯಲ್ಲಿ ಕಣಿ ಕೇಳುವುದೇ ಅಂದಿನ ಜನರಿಗೆ ಸುಯೋಗವಾಗಿತ್ತೇನೋ. ಇದು ಏನೇ ಇದ್ದರೂ ಕೊರಮರು ತಮಿಳು ಮೂಲದವರು, ಕೊರಮರ ಭಾಷೆ ತಮಿಳು ಮೂಲದ್ದು ಎಂಬುದಕ್ಕೆ ಇದರಿಂದ ಪುಷ್ಟಿ ದೊರೆಯುತ್ತದೆ.

E.Thurston ಅವರು “In communication among themselves, the koravas and the yerukalas speak a corrupt polyglot, in which the words derived from several languages beer little resembalance to the original. Their words appear to be taken chiefly from Tamil, Telugu and canarise[6] ಎಂಬ ಅಭಿಪ್ರಾಯವನ್ನು ಕೊಡುತ್ತಾರೆ. ತಮಿಳು, ತೆಲುಗು, ಕನ್ನಡ ಭಾಷೆಗಳು ಒಂದೇ ಮೂಲದಿಂದ ಹೊರಟವಾದ್ದರಿಂದ ತಮಿಳು ಮೂಲದ ಕೊರಮರ ಭಾಷೆಯಲ್ಲಿಯೂ ಈ ಮೂರು ಭಾಷೆಗಳ ಸಂಪರ್ಕ ಬಂದದ್ದರಿಂದ ಇತರೆ ಭಾಷೆಗಳ ಶಬ್ದಗಳು ಕೊರಮರ ಭಾಷೆಯಲ್ಲಿ ಕಂಡುಬರುತ್ತವೆ. ಆದರೆ ಮೂಲ ಸ್ವರೂಪವನ್ನು ಪರಿಶೀಲಿಸಿದರೆ ಮಾತ್ರ ಇದೊಂದು ತಮಿಳಿನ ಉಪಭಾಷೆಯಂತೆ ನಮಗೆ ತೋರುತ್ತದೆ.

Rev. J. Cain ” The yerukalas call the, langauage oodra which seems to stand for agibberish or thieves slang or as they explain, something very hard to understand oriya or oodra is the langauage of the Districts of Gangam and orissa. The word oriya means north and the fact that the yarukalas call their language oodra would seem to confirm their belief that they are a northern Tribe[7] ಎನ್ನುತ್ತಾರೆ. ಆದರೆ ಕರ್ನಾಟಕದ ಕೊರಮರಲ್ಲಂತೂ ಈ ಮೇಲಿನ ಅಂಶಗಳು ಕಂಡುಬರುವುದಿಲ್ಲ. ಅಲ್ಲದೇ ಇವರು ಉತ್ತರದವರು ಎಂಬುದಕ್ಕೆ ಯಾವುದೇ ಆಧಾರಗಳು ದೊರೆಯುವುದಿಲ್ಲ. ಒರಿಸ್ಸಾ ಭಾಗಕ್ಕೆ ಹೋಗಿ ನೆಲೆಸಿರುವ ಕೆಲವು ಕೊರಮರ ಗುಂಪುಗಳನ್ನು ಮಾತ್ರ ಗಮನಿಸಿ ಈ ಅಭಿಪ್ರಾಯಕ್ಕೆ ಬಂದಂತೆ ತೋರುತ್ತದೆ. Mr. Faweett ಅವರು ಕೊರಮ ಭಾಷೆಯ ಕೆಲವು ಶಬ್ದಗಳನ್ನು ಉದಾಹರಿಸಿದ್ದಾರೆ. Constable – Erthalakayadu – red headed man. Head Constable – Kederarilu. The man who rides on an ass. Taking bribe – kali thidrathu – eating Ragi food. Toddy – Ugga perumalu ollathanni – white water or good water. Fouls Rendukal Naidu – The Naidu of two legs. Mussalmans – Arupottavungo Those who have cut (Circumcised)[8] ಈ ಶಬ್ದರೂಪಗಳಲ್ಲಿ ಕೆಲವು ಅರ್ಥ ಕಳೆದುಕೊಳ್ಳದೇ ಮಾರ್ಪಾಟಾಗಿರುವುದು ಗೋಚರಿಸುತ್ತದೆ. ಎರ್ಯ ತಲಕಾಯಡು – ಎರ್ಯತರಕಾಯವು. ಕಳಿತಿನ್ರುತು – ಕಳಿತಿನ್ನು, ಆರ್‌ತೋಟವಂಗೋ – ಆರ್‌ತೋಟವು ಎಂದಾದರೆ ಕೆಡರಾರಿಲು – ಉಗ್ಗುಪೆರಮಾರಲು, ವೊಲಯ್‌ತನ್ನಿ ಮುಂತಾದ ಶಬ್ದಗಳು ಅಷ್ಟಾಗಿ ಈಗ ಬಳಕೆಯಲ್ಲಿ ಇಲ್ಲ. ಇವರು ಹೊಲೆಯನನ್ನು ಪರ್ಯದು, ಮಾದಿಗನನ್ನು, ಪರ್‌ಶಣದು, ತಮಗಿಂತ ಮೇಲು ಜಾತಿಯವರನ್ನೆಲ್ಲ ಒಟ್ಟಾಗಿ ವಳ್ಳಾಗ್ರು ಎನ್ನುತ್ತಾರೆ. ಸಾಮಾಜಿಕ ಒತ್ತಡದಿಂದಾಗಿ ಪ್ರಾದೇಶಿಕ ಭಾಷೆಗೆ ಹೊಂದಿಕೊಳ್ಳುತ್ತಿರುವ ಕೊರಮರಲ್ಲಿ ಮಾತೃಭಾಷೆ ಈಗಾಗಲೇ ಮರೆಯಾಗುತ್ತಿದೆ. ಈ ಜನ ಗುಂಪು ಗುಂಪಾಗಿ ಇರುವ ಕಡೆ ಮಾತ್ರ ತಮ್ಮ ಭಾಷೆಯನ್ನು ಮಾತನಾಡಿಕೊಳ್ಳುವವುದು ಕಂಡುಬರುತ್ತದೆ.

ಪೂಪಾರಾವ್ ನಾಯಡು ಅವರು ಕೊರಮರ ನಾಲ್ಕು ಗೋತ್ರಗಳಾದ Sathepadi, Kavadi, Manapati, Mendragutteಗಳನ್ನು ಗುರುತಿಸಿದ್ದಾರಲ್ಲದೇ They are all Corrupted tamil Words[9] ಎಂದಿದ್ದಾರೆ. ಈ ಮೇಲಿನ ಶಬ್ದಗಳು ತಮಿಳಿನ ಅಶುದ್ಧರೂಪಗಳಂತೆ ತೋರಿದರೂ ಇವು ತಮಿಳಿನ ಮೂಲ ರೂಪವನ್ನೇ ಸಮರ್ಥಿಸುತ್ತವೆ. ದಕ್ಷಿಣ ಕರ್ನಾಟಕದ ಕೊರಮರ ಬಾಯಲ್ಲಿ ‘ಸಾತಪಾಟಿ’ ಸಾತಪಾಡಿಯಾಗಿ, ಮಾನಪಾಟಿ ಮಾನಪಾಡಿಯಾಗಿ ಬದಲಾಗಿವೆ. ಕವಾಡಿ ಮತ್ತು ಮ್ಯಾನ್ರಗುತ್ತಿ ಹಾಗೆಯೇ ಇವೆ. ತಿರುಚನಾಪಳ್ಳಿ ಜಿಲ್ಲೆಯ ಗೆಜೆಟಿಯರ್‌ನಲ್ಲಿ ಬಂದಿರುವ ಕೆಲವು ಶಬ್ದಗಳನ್ನು ಇ. ಥರಸ್‌ಟನ್ ಅವರು ಉದಾಹರಿಸಿದ್ದಾರೆ. ಅವುಗಳಲ್ಲಿ ಕಂಪ (ಸಿಕ್ಕುಸಿಕ್ಕಾಗಿ ಬೆಳೆದ ಪೊದೆ), ಬಂಡಿ (ಗಾಡಿ) ಗಜ್ಜಲ (ಗೆಜ್ಜೆ) ಮುಂತಾದ ಶಬ್ದಗಳು ಕೊರಮರ ಭಾಷೆಯಲ್ಲಿ ಇಂದಿಗೂ ಬಳಕೆಯಲ್ಲಿವೆ.[10] Miche Kennedy ಅವರು ಕೈಕಾಡಿಗಳ ಭಾಷೆಯ ಕೆಲವು ಶಬ್ದಗಳನ್ನು ದಾಖಲಿಸಿದ್ದಾರೆ. ಬೊಂಬಾಯಿ ಪ್ರಾಂತ್ಯದ ಈ ಜನರ ಭಾಷೆಯ ಶಬ್ದಗಳಿಗೂ ಕರ್ನಾಟಕ ಈ ಜನರ ಭಾಷೆಯ ಶಬ್ದಗಳಿಗೂ ಇರುವ ಸಾಮ್ಯತೆ ಕೆಲವು ಶಬ್ದಗಳಲ್ಲಿ ಕಂಡು ಬರುತ್ತದೆ. ಆದರೂ ಕೆಲವು ಶಬ್ದಗಳಲ್ಲಿ ಕಂಡು ಬರುವುದಿಲ್ಲ. ಕೈಕಾಡಿ (ಬೊಂಬಾಯಿ) ಕೊರಮ (ಕರ್ನಾಟಕ) ವಂಚು ಅಂದರೆ ಬಂದ, ಬಂದನು, ಬಂದಿತು. ಕೆಲಮುಲ್‌ಕೆಲ್ಲು, ಹಣ ಅಥವಾ ದುಡ್ಡು. ಯಲ್ಲಿ – ವಳಿ ಬೆಳ್ಳಿ. ತಿಗಡು, ಕಳ್ಳ (ಕದ್ದದ್ದು) ಇವರು ಕೊಟ್ಟಿರುವ ಉಳಿದ ಶಬ್ದಗಳಲ್ಲಿ ಅರ್ಥ ಸರಿಯಾಗಿ ಆಗುವುದಿಲ್ಲ. ಆದರೆ ಕರ್ನಾಟಕದಲ್ಲಿ ಸಿದ್ರಾಮಪ್ಪ ಎನ್ನುವ ಶಬ್ದಕ್ಕೆ ಕೋಲು ಅಥವಾ ದೊಣ್ಣೆ ಎನ್ನುವ ಧ್ವನಿ ಇದೆ. ಕೊಲ್ಲುಲ್ಲೆಪ್ಪ ಎನ್ನುವ ಅಲ್ಲಿಯ ಶಬ್ದಕ್ಕೆ ಕೋಲು ಅಥವಾ ದೊಣ್ಣೆ ಎನ್ನುವ ಧ್ವನಿ ಇದೆ. ಕೊಲ್ಲುಲ್ಲೆಪ್ಪ ಎನ್ನುವ ಅಲ್ಲಿಯ ಶಬ್ದಕ್ಕೆ ಇಲ್ಲಿ ಕಲ್ಲು ಎನ್ನುವ ಅರ್ಥವಿದೆ.[11] ಅವರಾಡುವ ಭಾಷೆಯನ್ನು ಕುರಿತು ಹೇಳುತ್ತಾ “Kaikadis of this Presidency can, as a rule, speak rude marathi ro Kanarese, some times both. In the Deccan and among themselves they speak corrupt Telugu or Arvi, in the Carnatic, corrupt arvi, each with certain pecularities impossible to describe. Converses with one another in corrupt Telugu”[12] ಎನ್ನುತ್ತಾರೆ.

ಅಲೆಮಾರಿತನ ಮತ್ತು ಭಾಷೆ

ಕೊರಮರು (ಕೈಕಾಡಿಗಳು) ಅಲೆಮಾರಿಗಳಾದ್ದರಿಂದ ಇವರು ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದಾರೆ. ಅವು ಅವರ ಮಾತೃಭಾಷೆಗಳಲ್ಲ. ಈ ಮೇಲೆ ಸೂಚಿಸಿದ ಉದಾಹರಿಸಿರುವ ಶಬ್ದಗಳು ತಮಿಳನ್ನು ಹೋಲುವುದರಿಂದ ಕೊರಮರ ಭಾಷೆ ಮತ್ತು ಅವರ ಮೂಲ ತಮಿಳಿನ ನೆಲೆಗೇ ಹೋಗುತ್ತದೆ. ಈ ವಿಷಯದಲ್ಲಿ ಅತಿ ನಿಖರವಾದ ಅಂಶವನ್ನು ಹೀರೇಂದ್ರ ಕೆ. ರಕ್ಷಿತ್ ಅವರು ಗುರುತಿಸಿದ್ದಾರೆ. “Originally they spoke Tamil in all the three states. But for the last several decades they are fast taking to the languages of the respective states”[13] ಎನ್ನುವಲ್ಲಿ ಇವರು ತಮಿಳು ಮೂಲದವರು ಎಂಬುದು ಮೇಲೆಯೇ ತಿಳಿಯುತ್ತದೆ. ಅದರು ಕೊರಮರು ಆಡುವ ಭಾಷೆ ಇತ್ತೀಚಿನ ತಮಿಳಲ್ಲ. ಅದು ಪೂರ್ವ ದ್ರಾವಿಡದ ಯಾವುದೋ ಒಂದು ಕಾಲದ ತಮಿಳು ರೂಪವಿರಬೇಕು ಎಂಬುದು ನಾವು ಭಾಷೆಯನ್ನು ಗಮನಿಸಿದಾಗ ತಿಳಿಯುತ್ತದೆ. ಆನಂತರದಲ್ಲಿ ಆದ ಬದಲಾವಣೆ ಬೇರೆ ಬೇರೆ ಪ್ರದೇಶಗಳಿಗೆ ಹರಡಿದ ಮೇಲೆ ಆಯಾ ಪ್ರದೇಶದ ಭಾಷೆಯ ಪ್ರಭಾವ ಇವರ ಭಾಷೆಯ ಮೇಲೆ ಉಂಟಾಗಿರಬಹುದು. ಇದು ಭಾಷೆಯ ಬೆಳವಣಿಗೆಯ ಹಂತದಲ್ಲಿ ಪರಭಾಷಾ ಶಬ್ದಗಳ ಸ್ವೀಕಾರ ಸಹಜವೇ.

ಯರುಕಲ ಮದುವೆಯ ಸಂಪ್ರದಾಯವನ್ನು ಇ. ಥರ್ಸ್‌ಟನ್[14] ಅವರು ಹೇಳುವ ಸಂದರ್ಭದಲ್ಲಿ ‘ಬೇರುಮನುಸ್’ (Head man) ಬಗ್ಗೆ ಹೇಳಿದ್ದಾರೆ. ಕೊರಮರಲ್ಲಿ ಇಂದಿಗೂ ಈ ಶಬ್ದ ಹಿರಿಯ ಮನುಷ್ಯ ಅಥವಾ ಮುಖಂಡ ಎಂಬ ಅರ್ಥದಲ್ಲಿಯೇ ಬಳಕೆಯಾಗುತ್ತಿದೆ. ಅಂದರೆ, ಆಂಧ್ರದ ಯರುಕಲರಲ್ಲಿಯೂ ಕರ್ನಾಟಕದ ಕೊರಮರಲ್ಲಿಯೂ ಒಂದೇ ಅರ್ಥ ಈ ಶಬ್ದಕ್ಕೆ ಇದೆ (ಪೆರ್‌ಹಿರಿಯ). ಅರ್. ಇ. ಎಂಥೋವನ್ ಅವರೂ ಕೂಡ ಕೊರಮರ ಭಾಷೆಯ ಬಗೆಗೆ “Their home tongue mixture of Telugu, Tamil and Kanarese, indicating the country of their origin” ಎಂದು ಹೇಳುವುದರ ಜೊತೆಗೆ ಅಬೇಡುಬೊಯಿಸ್ ಅವರ ಅಭಿಪ್ರಾಯ “Koravas besides speaking Telugu, Tamil and Kanarese are said also to have a Gipsy Language of theirown”[15] ಎಂಬುದನ್ನು ಕೊಡುತ್ತಾರೆ. ಇಲ್ಲಿಯು ಕೊರವರು, ಕೊರವರು ಸಂಚಾರಿಗಳಾದ್ದರಿಂದ ಮತ್ತು ಆಯಾ ಪ್ರದೇಶದ ಜನರೊಂದಿಗೆ ವ್ಯವಹರಿಸಲು ಆಯಾ ಭಾಷೆಗಳನ್ನು ಅರಿಯುವುದು ಅಗತ್ಯವೇ ಆಗಿತ್ತು. ಆದರೆ ಇವರು ಕೊರಮರ ಭಾಷೆಯ ಮೂಲದ ಬಗೆಗೆ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ. ಅಬೇ ಡುಬೊಯಿಸ್ ಅವರು ಕೂಡ ‘ಜಿಪ್ಸಿ’ ನಮೂನೆಯ ಭಾಷೆಯನ್ನು ಮಾತನಾಡುತ್ತಾರೆ ಎಂದರೂ ಆ ಭಾಷೆಯ ಮೂಲವೇನು ಎಂಬುದನ್ನು ಹೇಳುವುದಿಲ್ಲ. ಆದರೆ, ಕೊರಮರ ಕಣಿ ಹೇಳುತ್ತಿದ್ದುದನ್ನು ಮತ್ತು ಹಚ್ಚೆ ಹಾಕುವಲ್ಲಿಯ ಅವರ ನೈಪುಣ್ಯತೆಯನ್ನು ಗುರುತಿಸಿದ್ದಾರೆ. ಯಾವುದೇ ಪ್ರಾಂತ್ಯದಲ್ಲಿದ್ದರೂ ಕೊರಮರ ವೃತ್ತಿಯಾದ ಕಣಿ ಹೇಳುವುದು, ಹಚ್ಚೆ ಹಾಕುವುದು, ಬುಟ್ಟಿ ಮಾಡುವುದು ಮುಂತಾದ ಉಪವೃತ್ತಿಗಳನ್ನು ಸೂಚಿಸುವ ಪದಗಳು ಕೊರಮರ ಭಾಷೆಯ ಮೂಲ ಪದದ ವಿಕೃತ ರೂಪಗಳಾದಂತೆ ಇವೆ. ಉದಾಹರಣೆಗೆ ಪಚ್ಚಿ ಕುತ್ತುಕ, ಎನ್ನುವ ಶಬ್ದ ಕರ್ನಾಟಕದ ಈ ಜನರಲ್ಲಿ ಪಚ್ಚಿಕುತ್ರದು ಎಂದಾಗುತ್ತದೆ. ಕಳಿತಿಂಡ್ರು – ಕಳಿತಿನ್ನು ಎಂದಾಗುತ್ತದೆ. ಎಚ್.ವಿ.ನಂಜುಂಡಯ್ಯ ಮತ್ತು ಅನಂತಕೃಷ್ಣ ಅಯ್ಯರ್ ಅವರು “The Koravas are a Koramas speak Tamil, Telugu or Kanarese, according to the localities in which the live. But in communication among themeselves the koravas and yerukulas speak a corrupt poluglot, in which the words derived from different languages bear little resumblence. The words appears to belong to the three langauages above mountained”[16] ಎನ್ನುತ್ತಾರೆ. ಇವರು ಗುರುತಿಸಿರುವ ಹಾಗೆ ಕೊರಮರು ತಮಿಳು, ತೆಲುಗು ಮತ್ತು ಕನ್ನಡವನ್ನು ಅವರು ವಾಸಿಸುವ ಪ್ರದೇಶಕ್ಕನುಗುಣವಾಗಿ ಮಾತನಾಡುವುದು ಸಹಜವಾದರೂ ತಮ್ಮತಮ್ಮಲ್ಲಿ ಅಶುದ್ಧ ಭಾಷೆಯೊಂದನ್ನಾಡುತ್ತಾರೆ. ಮತ್ತು ಆಭಾಷೆ ಆ ಮೇಲೆ ಹೇಳಿದ ಭಾಷೆಗಳ ಶಬ್ದಗಳನ್ನೊಳಗೊಂಡಿದೆ ಎಂದು ಹೇಳುವಲ್ಲಿ ಮಾತ್ರ ಆ ಭಾಷೆಯ ಮೂಲವನ್ನು ಸರಿಯಾಗಿ ಆಲೋಚಿಸಿದಂತಿಲ್ಲ. ಇದೇ ಲೇಖಕರು Mr. Faweett ಅವರು ಗುರುತಿಸಿರುವ ಕೆಲವು ಕೊರಮ ಭಾಷೆಯ ಶಬ್ದಗಳನ್ನು ಉದಾಹರಿಸಿದ್ದಾರೆ. ಕಾನ್‌ಸ್ಟೇಬಲ್ – ಎರತಲಕಾಯಡು, ಇದು ಕೊರಮರಲ್ಲಿ ಎರ್‌ತಲಕಾಯವು ಎಂದರೆ ಕೆಂಪು ತಲೆಯವನು, ಪೊಲೀಸ್ ಎಂದಾಗುತ್ತದೆ. Taking bribe – Kalithindrathu ಎಂಬುದನ್ನು ಕಳಿತಿನ್ನು ಅಂದರೆ ಊಟ ಮಾಡು ಎಂದೂ Musulmans Arthupotavange ಎಂಬುದನ್ನು ಆರ್‌ತೋಟವು ಅಂದೆ ಕುಯ್ಯಿದಾಕಿದವನು ಅಥವಾ ಕೊಯ್ಯಿಕೊಂಡವನು, ಮುಸಲ್ಮಾನ್ ಎಂದಾಗುತ್ತದೆ. Rupesskellu ಎಂಬುದು ಹಣ ಅಥವಾ ದುಡ್ಡು ಎಂದಾಗುತ್ತದೆ. ಪಾಲಕ್‌ಕಣ್ಣವು, ಹಾಲ್‌ಗಣ್ಣಿನವ ಎಂದಾಗುತ್ತದೆ. ಉಳಿದ Kederarilu, Uggu perumalu, Olaithanni, Rendukal Naidu Utharalu – Keenjalu ಮುಂತಾದ ಶಬ್ದಗಳು ಈಗ ದಕ್ಷಿಣ ಕರ್ನಾಟಕದ ಕೊರಮರಲ್ಲಿ ಬಳಕೆಯಲ್ಲಿಲ್ಲ.

ಇಷ್ಟೆಲ್ಲ ಇದ್ದರೂ ಕೊರಮರು ತಮ್ಮ ಭಾಷೆಯ ಬಗೆಗೆ ಒಂದು ಕಥೆಯನ್ನು ಹೇಳುತ್ತಾರೆ. ‘ಹಿಂದೆ ಒಂದು ಸಾರಿ ಪರಮೇಶ್ವರನು ಪ್ರಪಂಚದಲ್ಲಿದ್ದ ಎಲ್ಲ ನರಮನುಷ್ಯರಿಗೂ ಮಾತು ಕೊಡ್ತಾ ಇದ್ದ. ಎಲ್ಲರೂ ಬಂದು ಭಾಷೆ ಪಡೆದು ಹೋಗುತ್ತಿದ್ದರು. ಇತ್ತ ಕೊರಮನೊಬ್ಬ ಒಂದು ಮರದ ಕೆಳಗೆ ಬುಟ್ಟಿ ನೇಯುತ್ತಿದ್ದ. ಆ ದಾರಿಯಲ್ಲಿ ಬಂದವನೊಬ್ಬ ಈ ಕೊರಮನನ್ನು ಕುರಿತು ‘ಅಯ್ಯಾ ಶಿವ ಎಲ್ಲರಿಗೂ ಮಾತು ಕೊಡುತ್ತಿದ್ದಾನೆ. ನೀನು ಹೋಗಿ ಮಾತನ್ನು ಪಡೆದುಕೋ’ ಎಂದು ಹೇಳಿದ. ಆಗ ಕೊರಮರವನು ಭಾಷೆ ಕೇಳಲು ಪರಮೇಶ್ವರನ ಹತ್ತಿರಕ್ಕೆ ಹೋದ. ಅಷ್ಟರಲ್ಲಿ ಶಿವ ತನ್ನಲ್ಲಿದ್ದ ಎಲ್ಲಾ ಭಾಷೆಗಳನ್ನು ಹಂಚಿ ಬರಿಗೈಯಲ್ಲಿ ಕೈಲಾಸದತ್ತ ಹೊರಡಲನುವಾಗಿದ್ದ. ಆ ಸಮಯಕ್ಕೆ ಕೊರಮನು ‘ಸ್ವಾಮಿ, ನನಗೂ ಒಂದು ಮಾತು ಕೊಡಿ’ ಎಂದು ಬೇಡಿದ. ಆದರೆ, ಕೊಡಲು ಶಿವನಲ್ಲಿ ಮಾತುಗಳಿರಲಿಲ್ಲ. ಅಲ್ಲದೇ ಆತನನ್ನು ಬರಿಗೈಯಲ್ಲಿ ಕಳಿಸಲು ಮನಸ್ಸಿರಲಿಲ್ಲ. ಆದ್ದರಿಂದ ತಾನೀಗಾಗಲೇ ಮಾತುಗಳನ್ನು ಹಂಚಿದ್ದ ಜನರನ್ನು ಕರೆದು ಆ ಎಲ್ಲಾ ಮಾತುಗಳಿಂದಲೂ ಒಂದೊಂದು ಪದವನ್ನು ತೆಗೆದುಕೊಂಡು ಒಂದು ಭಾಷೆಯನ್ನು ಮಾಡಿಕೊಟ್ಟನಂತೆ. ಅಂದಿನಿಂದ ಈ ಭಾಷೆ ನಮ್ಮ ಜನರಿಗೆ ರೂಢಿಯಾಯಿತು ಎಂದು ಹೇಳುತ್ತಾರೆ.[17] ಈ ಐತಿಹ್ಯದ ಆಶಯವನ್ನು ಗಮನಿಸಿದರೆ ಕೊರಮರಿಗೆ ತಮ್ಮದೇ ಆದ ಸ್ವತಂತ್ರ ಭಾಷೆಯಿಲ್ಲ. ಇತರ ದ್ರಾವಿಡ ಭಾಷೆಗಳ ಸಮ್ಮಿಶ್ರಣವೇ ಈ ಕೊರಮರ ಭಾಷೆಯ ಸತ್ವ ಎಂಬುದು ವೇದ್ಯವಾಗುತ್ತದೆ. ಮತ್ತೆ ಕೆಲವರು ಹೇಳುವ ಹಾಗೆ ನಮ್ಮದು ‘ಕೊಂಗ’ ಭಾಷೆ ಎನ್ನುತ್ತಾರೆ. ತಮಿಳಿನ ನಾಲ್ಕು ಉಪಭಾಷಾ ಕ್ಷೇತ್ರಗಳನ್ನು ಗುರುತಿಸುವಾಗ ಕಂಗ ನಾಡು ಎಂದರೆ ಇಂದಿನ ಕೊಯಂಬತ್ತೂರು, ಪೆರಿಯಾರ್, ಸೇಲಂ, ಧರ್ಮಪುರಿ ಮತ್ತು ನೀಲಗಿರಿ ಜಿಲ್ಲೆಗಳನ್ನೊಳಗೊಂಡ ಭಾಗ ಎಂದು ಗುರುತಿಸಲಾಗುತ್ತದೆ. ಈ ನಾಡಿನ ಗುಡ್ಡಬೆಟ್ಟಗಳಲ್ಲಿ ಬೆಳದು ಬಂದ ಕೊರಮರು ತಮ್ಮ ಭಾಷೆಯನ್ನು ಕೊಂಗ ಭಾಷೆ ಎಂದು ಕರೆದುಕೊಳ್ಳುವುದರಲ್ಲಿ ಅರ್ಥವಿದೆ. ಅದೇನೇ ಇರಲಿ ದ್ರಾವಿಡ ಭಾಷೆಗಳ ಶಬ್ದಗಳು ಕುಳುವ ಅಥವಾ ಕೊರಮ ಭಾಷೆಯಲ್ಲಿ ಕಂಡು ಬರುತ್ತದೆಯಾದರೂ ತಮಿಳಿನ ಶಬ್ದಗಳೇ ಅತೀ ಹೆಚ್ಚೆಂದು ಹೇಳಬಹುದು.

ಕೆಲವು ವೈಶಿಷ್ಟ್ಯಗಳು

ಒಂದು ಬೆಳೆಯುತ್ತಿರುವ ಭಾಷೆ ತನ್ನ ಸಮೀಪದ ಭಾಷೆಗಳ ಜೊತೆಗೆ ಕೊಡುಕೊಳೆ ಮಾಡುವುದಂತೂ ಸಹಜವೇ. ತೀರಾ ಕಡಿಮೆ ಸಂಖ್ಯೆಯ ಜನ ಸಮುದಾಯ ಮಾತನಾಡುವ ಭಾಷೆ ಅಥವಾ ತನ್ನ ಮೂಲಜನ ಸಮೂಹದಿಂದ ದೂರಾದ ಅಲ್ಪಸಂಖ್ಯೆಯ ಜನರಲ್ಲಿಯೇ ಉಳಿದ ಭಾಷೆ ಕಾಲಾಂತರದಲ್ಲಿ ತನ್ನ ಮೂಲ ಭಾಷೆಯೊಂದಿಗೆ ಸೇರಲು ಸಾಧ್ಯವಾಗಲೇ ತನ್ನ ರೂಪವನ್ನು ಮಾರ್ಪಾಡಿಸಿಕೊಂಡಿರುವುದು ಮಾತ್ರ ಗೋಚರಿಸುತ್ತದೆ. ಅಂದಮಾತ್ರಕ್ಕೆ ಅದರ ಮೂಲ ಬದಲಾಗುವುದಿಲ್ಲ. ‘ದ್ರಾವಿಡ ವರ್ಗಕ್ಕೆ ಸೇರಿದ ತೆಲುಗು, ಕನ್ನಡ, ತಮಿಳು ಮಾತನಾಡುತ್ತಿದ್ದ ಜನ ಪ್ರತಿಯೊಂದು ವಿಷಯದಲ್ಲಿಯೂ ವಿಶೇಷವಾಗಿ ಭಾಷೆಯಲ್ಲಿ ಬೇರೆ ಬೇರೆ ರೂಪಗಳನ್ನು ಬೆಳೆಸಿಕೊಳ್ಳುತ್ತಿದ್ದರು[18] ಎನ್ನುವುದನ್ನು ನೋಡಿದಾಗ ದ್ರಾವಿಡ ವರ್ಗದ ತಮಿಳು ಮೂಲಕ್ಕೇ ಸೇರಿದ ಕೊರವ ಭಾಷೆಯೂ ರೂಪಾಂತರ ಹೊಂದಿರುವುದು ಸಮಜವೇ ಆಗಿದೆ.

ಸಮಾಜ ಶಾಸ್ತ್ರಜ್ಞರು ಇಷ್ಟೆಲ್ಲ ಮಾಹಿತಿ ನೀಡಿದ್ದರೂ ತಮಿಳು ಮತ್ತು ಕೊರಮ ಭಾಷೆಯ ಶಬ್ದ ಮತ್ತು ಸಂಖ್ಯಾ ಪದಗಳ ಹೋಲಿಕೆಯಿಂದಲೂ ತಮಿಳಿನ ಒಂದು ರೂಪವೇ ಕೊರಮ ಭಾಷೆ ಎಂಬುದನ್ನು ನಾವು ಅರಿಯಬಹುದಾಗಿದೆ.

ಕನ್ನಡ

ತಮಿಳು

ಕೊರಮ

ಕನ್ನಡ

ತಮಿಳು

ಕೊರಮ

ನೀರು ತಣ್ಣಿ ತನ್ನಿ ಅನ್ನ ಚೋರು ಸೋರು
ಮುದ್ದೆ ಕಳಿ ಕಳಿ ರಾಗಿ ಕೆವರು ಕೋರ್ಗು
ಮದುವೆ ಕಲ್ಯಾಣ ಕಣ್ಯಾಳ ಹಾಲು ಪಾಲು ಪಾಲು
ಬಟ್ಟೆ ತುನಿಯೂ ತುಣಿವಾನು ಮನೆ ವೀಡು ವೂಡು
ಬೆಂಕಿ ನಿರುಪ್ಪು ನೆರ್ಪು ದೀಪ ವಿಳಕ್ಕು ವಳಕು
ಹಾವು ಪಾಂಬು ಪಾಮು ಅಕ್ಕಿ ಅರಸಿ ಎರಸಿ
ಗಿಡ ಶೆಡಿ ಸೆಡಿ ಸಾರು ಕೊಳಂಬು ಕಟ್ಟು

ಹೀಗೆ ಎಷ್ಟು ಬೇಕಾದರೂ ಶಬ್ದಗಳನ್ನು ಉದಾಹರಿಸಬಹುದು. ಇವೆಲ್ಲ ಒಂದೇ ಅರ್ಥ ಕೊಡುವುದಾದರೂ ಉಚ್ಚಾರಣೆಯಲ್ಲಿ ವ್ಯತ್ಯಾಸ ತೋರುತ್ತವೆ. ಇದರಂತೆಯೇ ಕೆಲವು ಪ್ರಾಣಿ, ಪಕ್ಷಿಗಳ ಆಹಾರ ಪದಾರ್ಥಗಳ ಕೆಲವು ವಸ್ತುಗಳ ಹೆಸರನ್ನು ಸೂಚಿಸುವ ಶಬ್ದಗಳನ್ನು ನೋಡಬಹುದು. ಸೋಟಿ – ಮೊರ, ಪಣಿ – ಕುಕ್ಕಿಎ, ಇದಿರು – ಬಿದಿರು, ಎನ್ನುಮ್ಮು – ಎಮ್ಮೆ, ಪೆಯ್‌ತನ್ನಿ – ಸರಾಯಿ, ಕರಗು – ಹಗ್ಗ, ತಿತ್ತಿ – ಚೀಲ, ಪಗಾಲಿ – ಹೊಗೆಸೊಪ್ಪು, ತಳಾಕು – ಎಲೆ, ಪಾಕು – ಅಡಿಕೆ, ಸೆಟ್ಟಿ – ಮಡಿಕೆ, ಅಡುಪು – ಒಲೆ, ಪೆರಗು – ಮೊಸರು, ಲೇಗ್ಲ – ನಡೆಯೋ, ಮಕ್ರದು – ಕೊಡಪಾನ, ಪೋತಿಗ್ರದು – ಹೊದೆಯುವುದು, ಗಾಂಜಾಲು – ಬಳೆ, ಕ್ವಾಕಿ – ಸೀರೆ, ಕಳು – ಗಂಗಳ, ತೀಪಾನ – ಬೆಲ್ಲ, ಪರಕಡ್ಡಿ – ಪೊರಕೆ, ತಲಕಾಯಿಬಟ್ರವು – ಕ್ಷೌರಿಕ, ಸಾಕ್ಲವು – ಆಗಸ, ಕುಂದೇಲಿ – ಮೂಲ, ಕವಾಲು – ನಾಯಿ, ಎನ್ನು – ಬೆನ್ನು, ಮೆಗರು – ಕೂದಲು, ಪಂತೆವೋರ್ಯ – ರಣಹದ್ದು, ಕಾನೋಗೋಯಿ – ಕೊಳವಂಕ, ಸಂಬಾರುಪೊತು – ಸಂಬಾರಕಾಗ, ಏಲಿಗ – ಕಾಗೆಸಿಳ್ಳ, ಸೆರಗ – ಸೆರ್ಲಹಕ್ಕಿ, ಕುರುಬಾಡು – ಕುರಿ, ಕೆರವಾಡು – ಕರಿಮೀನು, ಎಲ್ಲೂರ – ಲಗಡು, ಶಂಬೂರಾ – ಗಿಡಗ, ಒಂಗೊಕ್ಕು – ಬೆಳ್ಳಕ್ಕಿ, ಮಡೆಗುಡ್ಡ – ಕುಲ್ದಗೊಕ್ರ, ನಣುವಯಾ – ಉಣ್ಣಿಗೊರವ, ಪೂಡ್ರಿ – ಪುರ್ಲೆ ಹಕ್ಕಿ, ಪಿಳಲಿ – ಸೋಬಾನದ ಹಕ್ಕಿ, ಪೆನ್ನೂರ – ಕೆಂಗಲ್‌ಬಾದ, ಕೆರವಾದಿ – ಗೌಜಿಗನಹಕ್ಕಿ, ಗೊದ್ದರನಹಕ್ಕಿ – ಅಕ್ಕಿ ಅವರ ಸೊಪ್ಪು, ಗುಯಿಕಾನು, ಪಂಡ್ರಿ – ಹಂದಿ, ಬೆರನಕ್ಕು – ನರಿ, ಗುಂತನಕ್ಕ – ಅಕ್ಕಿನರಿ, ಉಲಗಡ್ಡಿ – ಈರುಳ್ಳಿ, ಒಂಗೆಡ್ಡಿ – ಬೆಳ್ಳುಳ್ಳಿ, ಮಾವು – ಅಸಿಟ್ಟು, ಮಳಕಾಯಿ – ಮೆಣಸು, ಕರೆತೆಲಿಯ – ಕರೆಮೂತಿಹಕ್ಕಿ, ಕಾಡ – ಅಂಗನಕ್ಕಿ, ಸೀಕ್ರೆ ಕುಂಜು – ಬಾವಲಿ, ಮುರುವ – ಮುರಕಾಟಿ, ಇನ್ನು ಸಂಖ್ಯಾಸೂಚಕ ಪದಗಳಲ್ಲಿಯೂ ಇದೇ ರೀತಿ ಹೋಲಿಕೆಗಳನ್ನು ನೋಡಬಹುದು.

ಕನ್ನಡ ತಮಿಳು ಕೊರಮ ಕನ್ನಡ ತಮಿಳು ಕೊರಮ
ಒಂದು ಒಂಡ್ರು ಒಂಡು ಎರಡು ಇರಂಡು ರಂಡು
ಮೂರು ಮೂನ್ರ ಮೂಡು ನಾಲ್ಕು ನಾಂಗು ನಾಲು
ಐದು ಐಂದು ಅಂಜು ಆರು ಆರು ಆರು
ಏಳು ಏಲು ಓಗ್ ಎಂಟು ದಟ್ಟು ಆಟ್ಟು
ಒಂಭತ್ತು ಒಂಬದು ಒಂಬಿದಿ ಹತ್ತು ಪತ್ತು ಪತ್ತು
ಹನ್ನೊಂದು ಪದಿನೊಣ್ಣು ಪನ್ನೊಂಡು ಹನ್ನೆರಡು ಪನಿರೆಂಡು ಪನ್ನೆಂಡು
ಹದಿಮೂರು ಪದಿಮೂನ್ರು ಪದಿಮೂಡು ಹದಿನಾಲ್ಕು ಪದಿನಾಂಗು ಪದಿನಾಲು
ಹದಿನೇಳು ಪದಿನೇಳು ಪದಿನೊಗು ಹದಿನೆಂಟು ಪದಿನೆಟ್ಟು ಪದ್ನಟ್ಟು
ಹತ್ತೊಂಭತ್ತು ಪತ್ತೊಂಬದು ಪತ್ತೊಂಬಿದಿ ಇಪ್ಪತ್ತು ಇರುವದು ಇರ್ದಿ
ಮೂವತ್ತು ಮುಪ್ಪದು ಮುಪ್ಪಿದಿ ನಲವತ್ತು ನಾಪದು ನಾಪದಿ
ಐವತ್ತು ಐಂಬದು ಅಂಜರಕಾಪತ್ತು ಅರವತ್ತು ಅರವದು ಅರ್ರಕಾಪತ್ತು
ಎಪ್ಪತ್ತು ಎಳವದು ಓಗ್ರಕಾಪತ್ತು ಎಂಭತ್ತು ಎಂಬದು ಅಟ್ರಕಾಪತ್ತು
ತೊಂಬತ್ತು ತೊನ್ನೂರು ಒಂಬಿದ್ರಿಕಾಪತ್ತು ನೂರು ನೂರು ನೂರು

ಹೀಗೆ ಎರಡೂ ಭಾಷೆಗಳಲ್ಲಿ ಕಂಡು ಬರುವ ಸಾಮ್ಯವು ಯಾವುದೋ ಕಾಲದ ಒಂದೇ ಮೂಲವನ್ನು ಖಚಿತಪಡಿಸುತ್ತವೆ. ಆದ್ದರಿಂದ ಕೊರಮ ಭಾಷೆಗೆ ತಮಿಳು ಮೂಲವೇ ಹೊರತು ಬೇರೆಯಲ್ಲ ಎಂದು ಹೇಳಲಡ್ಡಿಯಿಲ್ಲ.

ಕೊರಮರು ಯಾವ ರಾಜ್ಯದಲ್ಲಿದ್ದರೂ ಅವರು ಯಾವ ಹೆಸರನ್ನು ಪಡೆದುಕೊಂಡಿದ್ದರೂ, ಯಾವುದೇ ಉದ್ಯೋಗ ಮಾಡುತ್ತಿದ್ದರೂ ಮೊನ್ನೆ ಮೊನ್ನೆಯವರೆಗೆ ತಮ್ಮ ಮಾತೃಭಾಷೆಯನ್ನಾಡುತ್ತಿದ್ದರು. ಇತ್ತೀಚೆಗೆ ಅವರ ಮೇಲಾಗುತ್ತಿರುವ ನಾಗರಿಕತೆಯ ಪ್ರಭಾವ ಮತ್ತು ಸಮಾಜಿಕ ಬದಲಾವಣೆಯಿಂದಾಗಿ ಹಲವು ಜನ ತಮ್ಮ ಭಾಷೆಯನ್ನು ಮಾತನಾಡುತ್ತಿಲ್ಲ. ತಮ್ಮ ಮುಂದಿನ ಜನಾಂಗಕ್ಕೂ ಅದನ್ನು ಕಲಿಸುತ್ತಿಲ್ಲ. ಕರ್ನಾಟಕದಲ್ಲಿ ಈಗ ಮಾತನಾಡುವವರಲ್ಲಿಯೇ ಭಾಷೆ ಒಂದೇ ರೀತಿಯಾಗಿ ವ್ವವಹರಿಸುತ್ತಿಲ್ಲ. ಕನ್ನಡ ಒಂದೇ ಆದರೂ ಧಾರವಾಡ, ಮಂಗಳೂರು, ಮೈಸೂರುಗಳಲ್ಲಿ ಕಂಡುಬರುವ ಕನ್ನಡದ ಹಾಗೆ ಶಿವಮೊಗ್ಗ ಜಿಲ್ಲೆಯ ಕೊರಮರು ತಮ್ಮ ಭಾಷೆಯ ಕೆಲವು ಅಕ್ಷರಗಳನ್ನು ಎರಡು – ಮೂರು ಮಾತ್ರೆಯವರೆಗೂ ಹಿಗ್ಗಿಸಿ ದೀರ್ಘವಾಗಿ ಉಚ್ಚರಿಸುತ್ತಾರೆ. ಉದಾ : “ಎಂದ್ಲಾss ಮಾಮ ಎಪ್ಪೋವಂದಲ್ಲಾ ನಲ್ಲಕಿಗರಂಗ್ಲಾss” (ಏನೋ ಮಾಮ ಯಾವಾಗ ಬಂದೆ ಎಲ್ಲಾ ಚೆನ್ನಾಗಿದ್ದಾರಾ) ಎಂದು ರಾಗ ಎಳೆದರೆ ತುಮಕೂರು ಜಿಲ್ಲೆಯವರು “ಎಂದ್ಲ ಮಾಮ ಎಪ್ಪೋವಂದ್ಲ ಎಲ್ಲ ನಲ್ಲಕಿಗರಂಗಳ್ಳ” ಎಂದು ಚುರುಕಾಗಿ ಮಾತನಾಡುತ್ತಾರೆ. ” ತಮಿಳಿನಲ್ಲಿ ವ್ಯಂಜನಾಂತ ಶಬ್ದಗಳು ಕೊರಮ ಭಾಷೆಯಲ್ಲಿ ತಮಿಳಿನಲ್ಲಿ “ಪುಲ್ಲಿಂಗವಾಚಕ ಶಬ್ದ ‘ಒರುವನ್’ (ಒಬ್ಬ) ಎಂದು ಬಳಕೆಯಾಗುತ್ತಿತ್ತು. ಸ್ತ್ರೀಯರಲ್ಲಿ ‘ಒರುತ್ತಿ’ (ಒಬ್ಬಳು) ಎಂದು ಬಳಕೆಯಲ್ಲಿ ಇತ್ತು. ಪುಲ್ಲಿಂಗವಾಚಕ ಕ್ರಿಯಾಪದಗಳಲ್ಲಿ ನಕಾರ, ಸ್ತ್ರೀಯರಲ್ಲಿ ‘ಒರುತ್ತಿ’ (ಒಬ್ಬಳು) ಎಂದು ಬಳಕೆಯಲ್ಲಿ ಇತ್ತು ಪುಲ್ಲಿಂಗವಾಚಕ ಕ್ರಿಯಾಪದಗಳಲ್ಲಿ ನಕಾರ, ಸ್ತ್ರೀಲಿಂಗ ವಾಚಕ ಕ್ರಿಯಾಪದಗಳಲ್ಲಿ ‘ಳ’ ಕಾರ”[19] ಈ ತಮಿಳಿನ ಓರುವನ್ ಮತ್ತು ಓರುತ್ತಿ ಎಂಬುದು ಕೊರಮರ ಭಾಷೆಯಲ್ಲಿ ಇಂದಿಗೂ ಒರ್ತು – ಒಬ್ಬ, ಒರ್ತಿ – ಒಬ್ಬಳು ಎಂದು ಪ್ರಯೋಗವಾಗುತ್ತಿವೆ. “ತಮಿಳಿನಲ್ಲಿ ನಾಲ್ಕು ಪ್ರದೇಶಿಕವಾದ ಉಪಭಾಷಾ ಕ್ಷೇತ್ರಗಳಿವೆ. ಅವುಗಳು; ೧. ದಕ್ಷಿಣ ಉಪಭಾಷೆ – ಮಧುರೈ, ರಾಮನಾಥಪುರಂ, ತಿರುನಲ್ವೇಲಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಮಾತನಾಡುವಂಥದು. ೨. ಕೇಂದ್ರದ ಉಪಭಾಷೆ ತಂಜಾವೂರು, ತಿರುಚನಾಪಲ್ಲಿ ಮತ್ತು ದಕ್ಷಿಣ ಅರ್ಕಾಟ್‌ನಲ್ಲಿ ಮಾತನಾಡುವಂಥದು ೩. ಉತ್ತರ ಆರ್ಕಾಟು, ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಮಾತನಾಡುವಂಥದು ಮತ್ತು ೪. ಪಶ್ಚಿಮದ ಉಪಭಾಷೆ ಕೊಯಿಂಬತ್ತೂರು, ಪೆರಿಯಾರ್, ಸೇಲಂ, ಧರ್ಮಪುರಿ ಮತ್ತು ನೀಲಗಿರಿ ಜಿಲ್ಲೆ, ಪಾಂಡ್ಯನಾಡು, ಚೋಳನಾಡು ತೊಂಡೈನಾಡು ಮತ್ತು ಕೊಂಗನಾಡು ಎಂದು ಮಾಡಿದ್ದ ವಿಭಾಗಕ್ಕೆ ಸರಿ ಹೊಂದುತ್ತವೆ”[20] ಕೊರಮರು ತಮ್ಮ ಭಾಷೆಯನ್ನು ‘ಕೊಂಗ’ ಭಾಷೆ ಎಂದು ಹೇಳುವುದನ್ನು ನೋಡಿದರೆ ಈ ಮೇಲೆ ಹೇಳಿದ ಕೊಂಗನಾಡಿಗೂ ಈ ಕೊಂಗ ಭಾಷೆಗೂ ಒಂದು ರೀತಿಯ ಸಂಬಂಧವಿರುವಂತೆ ತೋರುತ್ತದೆ. ಕೊರಮ ಭಾಷೆಯ ಪದಸಂಪತ್ತು, ವಾಕ್ಯ ವಿಧಾನ ಮತ್ತು ಪ್ರಯೋಗಗಳನ್ನು ಗುರುತಿಸುವ ದೃಷ್ಟಿಯಿಂದ ಕೊರಮ ಭಾಷೆಯ ಎರಡು ಕಥೆಗಳನ್ನು ಅವರು ಉಚ್ಚರಿಸುವ ರೀತಿಯಲ್ಲಿಯೇ ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.

ಓತಿಕ್ಯಾತನ ಕಥೆ :

ಒಂಡು ಓತಿಕ್ಯಾತು. ಆ ಓತಿಕ್ಯಾತ್ನುಕು ನಾಲೇರ ಪಂಡಮಾರು. ಆ ನಾಲೇರ ಪಂಡ್ಮಾರ್ ಯಾರ್ಯಾರ ಅಂಡಿಕೆ ಇಲಿ, ಒಂಗಕ್ಕು, ನಂಡು, ಪೂನ, ಒಂಡ್ನಾಳ್ ಓತಿಕ್ಯಾತು ಓಹಗೂರ‍್ಗವುದ್ಲೆ ಅಸಗಂಡೋಗಿ ಕಲ್‌ಕಟ್ಟಿಮೇನಿ ವುಕ್ಕಂಡ್ ಪಂಚಾಯ್ತೀ ಸೇಯ್ತಾ ಇಂದು ಪೇಟು ರುಮಾಲು ಸುತ್ಗೆಂಡು. ಅಪ್ಪದು ಇಲಿ ಸಾಸ್ವೆತ್ತಂಡ ಬುಟ್ಟಿ ಸಮುದ್ಗಂಡು, ಜಡಿ ಒಟ್ಗಂಡು, ಸಣ್ಣನಾಮ್ತ ಇಟ್ಗಂಡು ಸಂತ್ಗೋಗ್ರೀಕ್ ವಂದ ಅಂಗ್ಯಾಸಿ. ಅಪ್ಪದು ಓತಿಕಾತು ಅಕ್ಕರ್‌ತ್ಗು ‘ಎಂಕೊಕ್ರ’ ಅಂಡು ಕೋಟು. ಅತ್ಗ ಅವ ‘ನಿಮ್ವ ವಡಮಕ ಸವರುಕ್ಕು’ ಅಂಡ. ಅಪ್ಪದು ಆ ಓತಿಕಾತು ‘ಇಂತ ವಾತ ಅಂಡಳೆ ನನ್ನ ಮರ್ಯಾದೆಲ್ಲ ಓಸೆ’ ಅಂಡು ಅದ್ದಿಂದ್ ಓಯೋಟು ಪೂನಿಟೂಟ್ಗು. ಅಪ್ಪದು ‘ತನ್ನಿ ಕಾಸಂಗೋ, ಅಣ್ಣಿ ಕಾಸಂಗೋ ವಡಮ ಕವ್ವರ್ಕು’ ಅಂಡ ಪೂನಿ. ‘ ನಿಮ್ಮ ಅಣ್ಣಿ ಯಾರಕ್ಬೇಕು, ನಿಮ್ವ ತನ್ನಿ ಯಾರಕ್ಬೇಕು ನಾಕ್ ಮಾಣ’ ಅಂಡು. ‘ಎಂತ್ಗ ಇತ್ನಿ ಬೇಜಾರಾಗಿಗರಯೇ’ ಅಂಡು ಕೋಟ. ‘ನಾನು ಓಗೋರ್ ಗೌದ್ಲ ಉಪ್ಪಚಗಂಡು ಪಂಚಾಯ್ತಿಸೇಯ್ತಾ ಇಂದೆ. ಅವ ಸಂತಿಗೋಗ್ರಕವಂದ ನಮ್ಟ ಮರ್ಯಾದ ಕಳಜ ಇಲಿ’ ಅಂಡು. ಆತ್ಗಪೂನಿ ‘ಅವ ಅಂಗ್ರವಳೆ ಅವ ಕಂಡಗ್ರ ಟೊಟ್ಲೆಲ್ಲದೊಗರ ಅಡುಕ್ರವ ನನ್ ಪಾತು ನಿಮ್ಟ ಕಾಡ್ಗಣಿಕ್ ಬೇಕ ಕಣ್ಕಪ್ಪು’ ಅಂಡ. ಪಂಡಕು ದೂರುಸೊಣ್ಣಿ ಅವು ಇನ್ನೊಂಡ್ ಪಂಡು ನೋಟ್ಗ್ ಓನು, ನಂಡು ಟೂಟ್ಗು.

ನಂಡು ಅಪ್ಪದು ತನ್ನಿಕುಡಂಗೋ ಉಂಗ್ರುಕ್ ‘ ಅಂಡ ನಿಮ್ಟ ತನ್ನಿ ಮಾಣ, ನಿಮ್ಟ್ ಊಟು ಮಾ’ ಅಂಡು ಓತಿಕಾತು. ಆತ್ಗನಂಡು ‘ಯಂತ್ಗ ಇತ್ನಿ ಬೇಜಾರಾಗಿಗರೆಯೇ’ ಅಂಡ. ಇನಿನಗೆ ಇಲಿ ಸುಪ್ಪಾಣಿ ಇಂತಿಂತವಾತ ಅಂಡ. ಅಪ್ಪದು ಓತಿಕಾತು ಇನ್ನೊಂಡ ಪಂಡಟೂಟ್ಗ್‌ವೋನು ಒಂಗಕ್ಕು ಟೂಟ್ಗು. ಅವ ಮಣಿ ಓಡಂಗೋ ಉಕ್ಕಟು’ ಅಂಡ. ಯಂತ್ಗ್ ಇತ್ನಿ ಬೇಜಾರು ಅಂಡು ಕೋಟ. ಅತ್ಗ ಅವ ‘ನ್ನ ನಿಮ್ಟ ಮಾರುದ್ದ ಕುತ್ತಿಗಿಕ್ ಬೇಕ ರಂಡಾಣಿ ಸರಪಣಿ ಅಂಡು ಸೊಣ್ಣ, ಅಪ್ಪದು ಓತಿಕಾತು ಯಾರ್‌ಟೂಡು ಮಾಣ ಅಂಡು ಅವ್ವಿಂಡು ಏರೇ ಒಯೋಟು ಮತ್ತ ಯಾರ್ ಟೂಟ್ಗುವರಲಿಲ್ಲ.[21]

ಅನುವಾದ

ಒಂದು ಓತಿಕ್ಯಾತ. ಆ ಓತಿಕ್ಯಾತನಿಗೆ ನಾಲ್ಕು ಜನ ಹೆಂಡತಿಯರು. ಆ ನಾಲ್ಕು ಜನ ಹೆಂಡತಿಯರು ಯಾರ್ಯಾರು ಅಂದರೆ, ಇಲಿ, ಕೊಕ್ಕರೆ, ಏಡಿ, ಬೆಕ್ಕು. ಒಂದು ದಿನ ಓತಿಕ್ಯಾತ ಏಳೂರ ಗೌಡ್ರ ಕರಕಂಡೋಗಿ ಕಲ್ಲುಕಟ್ಟೆಯ ಮೇಲೆ ಕುತ್ಗಂಡು ಪಂಚಾಯ್ತಿ ಮಾಡ್ತಾ ಇದ್ದ ಪೇಟ, ರುಮಾಲು ಸುತ್ತಿಕೊಂಡು. ಅವಾಗ ಇಲಿ ಸಾಸ್ವೆಯಷ್ಟು ಬುಟ್ಟಿ ಹೊತ್ಗೊಂಡು, ಜಡೆ ಹಾಕ್ಕೊಂಡು, ಸಣ್ಣನಾಮ ಇಟ್ಗಂಡು ಸಂತೋಗೋಗ್ಹೆಕೆ ಬಂದ್ಲು ಅಲ್ಲಾಸಿ. ಆವಾಗ ಓತಿಕ್ಯಾತ ಪ್ರೀತಿಗೆ ‘ಎಲ್ಗೋಗ್ತೀಯಾ’ ಅಂತ ಕೇಳ್ದ. ಅದಕ್ಕೆ ಅವಳು ‘ನಿನ್ನ ಬಿರಕ ಕೆಮೈಗೆ, ನಿನ್ನ ಬೀಟ್ ಮೈಗೆ ಎಸರುಳ್ ಪ್ಯಾಟೇಲಿ ಎಣ್ಣೆತರಕ್ ಹೋಗ್ತೀನಿ. ನಿನ್ನ ಮೈಗೆ ಸವರೋಕೆ” ಅಂದ್ಲು. ಆವಾಗ ಆ ಓತಿಕ್ಯಾತ ‘ಇಂಥ ಮಾತ ಅಂದ್ಲಲ್ಲ’ ನನ್ಮ ಮರ್ಯಾದೆಯಲ್ಲ ಓಯ್ತು ಅಂದ. ಎದ್ದೊಗ್ಬಿಟ್ಟ ಬೆಕ್ಕಿನ ಮನೆಗೆ. ಅವಾಗ ನಿರ ಕಾಯ್ಸಿರಿ, ಎಣ್ನೆ ಕಾಸರಿ ಮೈ ತೊಳೆಯಲು ಅಂದ್ಲು ಬೆಕ್ಕು. ‘ನಿನ್ನ ಎಣ್ನೆಯಾರಿಗೆ ಬೇಕು, ನಿನ್ನ ನೀರು ಯಾರಿಗೆ ಬೇಕು ನನಗೆ ಬೇಡ’ ಅಂದ. ‘ಯಾಕಿಷ್ಟು ಬೇಜಾರಾಗಿ ಇದ್ದೀಯಲ್ಲ’ ಅಂತ ಕೇಳಿದ್ಗು.

‘ನಾನು ಏಳೂರ ಗೌಡ್ರ ಕುಂಡ್ರಿಸಿಕೊಂಡು ಪಂಚಾಯ್ತಿ ಮಾಡ್ತಾ ಇದ್ದೆ. ಅವಳು ಸಂತೆಗೆ ಹೋಗಲು ಬಂದಳೂ. ನನ್ನ ಮರ್ಯಾದೆ ಕಳದ್ಲು ಇಲಿ’ ಎಂದ. ಅದಕ್ಕೆ ಬೆಕ್ಕು ‘ಅವಳು ಅನನೋಳೆ, ಅವು ಕಂಡೋರ ಮನೇಲಿ ಬಿಲ ತೆಗೆಯೋಳು ನನ್ನ ನೋಡಿ ನಿನ್ನ ಕಾಡಿಗೆ ಕಣ್ಣಿಗೆ ಬೇಕ ಕಣ್ಕಪ್ಪ’ ಅಂದ್ಲು. ಹೆಂಡತಿಗೆ ದೂರು ಹೇಳಿ ಅವನು ಇನ್ನೊಬ್ಳು ಹೆಣ್ತಿ ಮನೆಗೆ ಹೋದ, ಏಡಿ ಮನೆಗೆ.

ಏಡಿ ಆಗ ‘ನೀರು ಕೊಡ್ರಿ ಉಣ್ಣಕೆ’ ಅಂದ್ಲು. ‘ ಇಂಗಿಂಗೆ ಇಲ್‌ಇ ಸುಪ್ಪಾಣಿ ಇಂತಿಂತ ಮಾತ ಆಡಿದ್ಲು ನನಗೆ’ ಅಂದ. ಅದಕ್ಕೆ ಏಡಿ ನನಗೆ ‘ನಿನ್ನ ಗಿರ್ಜಿ ಕಾಲಿಗೆ ಬೇಕ ಸುತ್ತು ಮಿಂಚು’ ಅಂತ ಕೇಳಿದ್ಲು, ಅಂದ್ಲು, ಆಗ ಓತಿಕಾತ ಇನ್ನೊಬ್ಳು ಹೆಂಡತಿಯ ಮನೆಗೆ ಹೋದ. ಕೊಕ್ಕರೆ ಮನೆಗೆ, ಅವು ‘ಮಣಿ ಹಾಕ್ರಿ ಕುತಂಗಳಲಿ’ ಅಂದ್ಲು. ಯಾಕಿಷ್ಟು ಬೇಜಾರು ‘ ಅಂತ ಅಂದ್ಲು’ ಅದಕ್ಕೆ ‘ ಇಲಿ ಸುಪ್ಪಾಣಿ ನನಗೆ ಇಂಥಮಾತ ಅಂದ್ಲು. ನನ್ನ ಮರ್ಯಾದೆ ಕಳದ್ಲು ಅಂದ. ಅದಕ್ಕೆ ಅವಳು ನನಗೆ ನಿನ್ನ ಮಾರುದ್ಧ ಕುತ್ತಿಗೆಗೆ ಬೇಕ ಎರಡಾಣಿ ಸರಪಣಿ ಅಂದ್ಲು’ ಅಂತ ಹೇಳಿದ್ಲು. ಆಗ ಓತಿಕಾತ ಯಾರ ಮನೇನು ಬೇಡಾ ಎಂದು ಅಲ್ಲಿಂದ ಬೇರೆ ಹೋಗ್ಬಿಟ್ಟ. ಅದು ಮತ್ತೆ ಯಾರ ಮನೆಗೂ ಬರಲಿಲ್ಲ.

ಭಾಗ್ಯಲಕ್ಷ್ಮಿ ಕಥೆ

ಒಂಡೂರುಳ್ಳಿ ಒರ್ತುಗವುದು ಇಂದು. ಅವನ್ಟೊಡುಳ್ಳಿ ವಿಜಯಲಕ್ಷ್ಮಿ ಇಂದ. ಒಂಡ್ನಾಳು ಅವ ಓಯೋಡರುಕ್ಕು ಪಾತ. ಎಂತ್ಗಂಡಿಕೆ ಈ ಊಟ ಗೋಡು ಗುದ್ದಡಿಕೋಟ್ಗ್ರ ಮಣಿ ಅತ್ಗಂಡೋಗಿ ತಲಿದಸ್ಕಿ ಓಟ್ಗಂಡು ಬೂದ್ಗಂಡು. ಈ ದರಿದ್ರನ್ ಟೂಟುಳ್ಳಿ ನಾನಿಕ್ರದಿಲ್ಲ ನಾನು ಓಯೋಡ್ರೆ ಅನಬರ್ಕು ದರಿದ್ರ ಲಕ್ಷ್ಮಿ ಊಟ್ಗೊರ್ರ‍. ಈ ಬೆರುಗೌಡು ಪಮುಡ್ರ ಗುದ್ದಡಿ ಕೋಟಗ್ರಮಣಿ, ಪಮುಡ್ರು ಮುಟ್ಟಕರಂಗ ಊಸ್ ಉಡರಂಗ ಮಣಿಮೇನಿ ಉಕ್ಕುಗರಂಗ ಅಂತ ಮಣಿ ಒಟ್ಗಂಡು ಅಂಡು ಎಲ್ಲೋಟ. ಈ ಊಟುಳ್ಳಿ ಒರ್ತು ಬಿಡುವು ನಲ್ಲ ಶೆಡುಳ್ಳಿ – ಕಾಡುಳ್ಳಿ ಪೊಂಡು, ಪುಳ್ಳಿಲೆಲ್ಲ ಎಚ್ಗಂಡು ವಾಸ ಸೇಯ್ತಾ ಇಂದು. ಎನಗ ಶೆಯ್ತಾ ಇಂದು ಈಗ ಗೌಡ್ನಟೂಟುಳ್ಳಿ ಎಲ್ಲಾ ತಿಗಡಗಂಡೋಗಿ ಎಚ್ಗಂಡು ಒಂಡ್ ಮಾದ್ದು ಅಗರ ಸಾಮಾನೆಚ್ಗಂಡು, ಜೀವನ ಸೇಯ್ತಾ ಇಂದು ತಿಗುಡ – ಅಮಾನು ಆ ಮಾಟ್ಲವಂದು ತಿಗಡತನ ಸೇಂದ್ಗಂಡು, ಸಾಮಾನು ಆತ್ಗಂಡು ವಾಸಕ್ಲ್ ವಂದು. ಭಾಗ್ಯಲಕ್ಷ್ಮಿ ಎಲರಿಕ ಪಾತ. ತಿಗಡ್ನೂ ಎಲ್ರಕ್ ವಾಸ್ಲಕ್ ವಂದು. ಅಪ್ಪದು ಇವನ ವಡಮ್ಕ ಇವ ತಾಕ್ನ. ಇದೆಂದು ಇನಗ ತಾಕ್ಸ್ ಪಮುಡ್ರ ಮಾಟ್ಲೆ ಅಂಡು ನಿಂಡ್ರುಗಂಡು. ಆ ತಿಗುಡು ಪಾತು ‘ಯಾರಮ್ಮ ನೀನು’ ಅಂಡು ಕೋಟು ‘ನಾನಯ್ಯ ಈ ಊಟು ಭಾಗಲಕ್ಷ್ಮಿ’. ಈ ಊಟ ಸವ್ಕಾರು ಗುದ್ದಡಿಕಿ ವೋಟ್ಗಂಡುಕ್ಕುಗರಂತಾ ಮಣಿ ಅತ್ಗಂಡೋಗಿ ತಲೆದಸ್ಗಿ ಒಟ್ಗಂಡು ಬೂದ್ಗಂಡು, ಈ ಊಟ್ಗು ದರಿದ್ರ ವಂಚು. ನಾನು ಅಕ್ಡಿ ಎಲ್ಲೊಕ್ರೆ ಈ ದರಿದ್ರನ ಟೂಡುಳ್ಳಿ ಇಕ್ರಿದಿಲ್ಲಾ’ ಅಂಡು ಒಗ್ರುಕ್ ಪಾತ. ಆ ಬಡವುನ್‌ಕು ಬಾರಿ ಸಂಕ್ಟೊಂಚು.

ಈ ಊಟುಳ್ಳಿ ಭಾಗ್ಯು ಇಕ್ರಿಗಂಟ್ಲೆ ನಾನು ವಂದೊಂದು ತಿಗಡ್ತನ್ತಸೇಂದ್ಗಂಡು ಅತ್ಗಂಡೋಗಿ ನಂಟ ಪಂಡು ಪುಳ್ಳಿಲ್ ವರ್ಗವರಿತಾ ಇಗ್ರೆ. ಇವ ಎಲ್ಲೋಯಟಿಕೆ ಈ ಊಟ್ಗ ದರಿದ್ರವರದು. ಅನಬರ್ಕು ನನಕು ಬಾರಿ ಕಸ್ಟತ್ತ್ವದರು ಅಂಡು ಅವು ಅಂಗೆ ಉಕ್ಕಂಡು. ನನಕೆಂತಾರ ಸೆಯ್ಯಟು, ಹಿಂಸೆ ಸೆಯ್ಯಾಟು, ಮತಾಟು ನಾನು ಅಕ್ಕಡಿಕಿ ಓಯೋಟಿಕ ಭಾಗ್ಯಲಕ್ಷ್ಮಿ ಆಕ್ಡಿಕೆ ಓಯೋಡರ. ದರಿದ್ರಲಕ್ಷ್ಮಿ ಬೇಲಿ ವಾಸ್ಲಕವಂದು ನಿಂಡ್ರಗಂಡಿರ. ಅಪ್ಪದು ಬಡವು ವಾಸ್ಲುಳ್ಳೆ ವುಕ್ಕಂಡೋಟು ವುಡ್ರಿದಂಕ, ವುಕ್ಕಂಡಿದಪದು ಗೌಡು ಬೇಲಿಕೋಗ್ರಕು ವಂದು. ವಂದವು ‘ಯಾರ್ಲ ನೀನು ಯಂತ್ಗವಂದಿಗ್ರ’ ಅಂಡು ಅವನ್ನ ಕೋಟು. ಆತ್ಗ ಅವು ಇನಿನಿಗ ಪಮುಡ್ರು ಗುದ್ದಡಿ ಕೋಟುಗ್ರಂತ ಮಣಿ ಅತ್ಗಂಡೋಗಿ ತಲಿದಸ್ಕಿ ವೋಟ್ಗಂಡು ಬೂದ್ಗಂಡಿದಯ್ಮಲ್ಲೆ ಆತ್ಗುಭಾಗ್ಯಲಕ್ಷ್ಮಿ ನಿಂಟೂಟ್ಳಿ ಇಂದವ ಓಗ್ತಾ ಇಂದ. ನಿಂಟೂಟುಳ್ಳಿ ನಾನು ಕಾಲಾವದಿ ತಿಗಡ್ತನ ಸೇಂದ್ಗಂಡೋಗಿ ಪಮಡು ಪುಳ್ಳೆಲ ವರಗು ವರಿತಾ ಇಂದೆ. ಇಮಾನು ಒಂದು ತಿಗಡ್ತನ ಸೇಂದ್ಗಡೋಗ್ರಪ್ಪದು ಭಾಗ್ಯಲಕ್ಷ್ಮಿ ಬೇಲ್ಲಿಕೋಗ್ರಕ ವಂದ. ನೀನು ಯಾರಮ್ಮ ಎಂಕೊಕ್ರ ಅಂಡು ಕೋಟಿ ಆತ್ಗವ ಎಲ್ಲಾ ಸೊಣ್ಣಾ. ಆತ್ಗ ನಾನು ಇಂಗೆ ವಾಸ್ಲುಳ್ಳಿ ಭಾಗ್ಯಲಕ್ಷ್ಮಿ ಬೇಲ್ಕಿ ವೋಗುಲ್ಲಾರ ಮಾಟ್ಲಿ ವುಕ್ಕಂಡೋಟಿ. ಭಾಗ್ಯಲಕ್ಷ್ಮಿವುಳ್ಳೆ ಇಗ್ರ. ಇನ್‌ಮೇನಿ ನೀನು ಮಣಿ ತಲ್ದಸ್ಕಿವೋಟ್ಗ ಮಾಣ ಅಂಡು. ಸಾವ್ಕಾರು ಆ ಬಡವನ್ನು ನೀನು ನಾಮಾರ್ಲಿ ಕಾಂಗುಲ್ಲಾರ ಮಾಟ್ಲೆ ತಿಗಡ್ತನತ್ಗ ವರಮಾಣ, ನಿನಕ್ ಎಂದು ಬೇಕೋ ವಂದು ನನ್ನ ಕೋರು, ನೀನು ನಲ್ಲ ಉಪಕಾರ್ತ ಸೇಂದಿರ ಎಲ್ಲಾ ತರ್ಲೇ ಅಂಡು ಆಮಸ್ನು.

ಕನ್ನಡಾನುವಾದ

ಒಂದ್ನೂರಲ್ಲಿ ಒಬ್ಬ ಗೌಡ ಇದ್ದ. ಮನೇಲಿ ಭಾಗ್ಯಲಕ್ಷ್ಮಿ ಇದ್ದಳು. ಒಂದು ದಿನ ಅವಳು ಹೋಗ್ಲಿಕ್ಕೆ ನೋಡಿದ್ಲು. ಯಾಕೆ ಅಂದರೆ ಈ ಮನಗೆ ಗೌಡ ತಿಗದಡಿ ಹಾಕ್ಕೊಳ್ಳೋ ಮಣಿ ತಗಂಡೋಗಿ ಹಾಕ್ಕೊಂಡು ಮಲಗಿದ್ದ. ಈ ದರಿದ್ರದ ಮನೇಲಿ ನಾನಿಕರುವುದಿಲ್ಲ. ನಾನು ಹೋಗಿಬಿಡ್ತೀನಿ. ಆಮೇಲೆ ದರಿದ್ರಲಕ್ಷ್ಮಿ ಮನೆಗೆ ಬರ್ತಾಳೆ. ಈ ದೊಡ್ಡಗೌಡ ಹೆಂಗಸ್ರು ತಿಕದಡಿ ಹಾಕ್ಕೊಳ್ಳೋ ಮಣೆ, ಹೆಂಗಸರು ಮುಟ್ಟಾಗ್ತಾರೆ. ಊಸು ಬಿಡ್ತಾರೆ, ಮಣೆ ಮೇಲೆ ಕುಳಿತುಕೊಳ್ತಾರೆ ಅಂಥ ಮಣೆ ಹಾಕ್ಕೊಂಡ್ನಲ್ಲ’ ಎಂದು ಹೊರಟ್ಳು. ಈ ಮನೇಲಿ ಒಬ್ಬ ಬಡವ ಒಳ್ಳೆ ಗಿಡದಲ್ಲಿ ಕಾಡಲ್ಲಿ ಹೆಂಡ್ತಿಮಕ್ಕಳ್ನೆಲ್ಲ ಇಟ್ಗೊಂಡು ಒಂದು ತಿಂಗಳು ಆಗುವಷ್ಟು ಸಾಮಾನಿಟ್ಗಂಡು ಜೀವನ ಮಾಡ್ತಾ ಇದ್ದ. ಕಳ್ಳ. ಆ ದಿನ ಆ ಮನೆಗೆ ಬಂದು ಕಳ್ತನ ಮಾಡ್ಕೊಂಡು, ಸಾಮಾನು ತಗಂಡು ಹೋಗಕೆ ಬಾಗಿಲಿಗೆ ಬಂದ. ಆಗ ಇವನ ಮೈಗೆ ಇವಳು ತಾಗಿದಳು. ಇದೇನು ಹೀಗೆ ತಾಗಿದಂಗಾಯ್ತಲ್ಲ ಹೆಂಗಸರ ಹಾಗೆ’ ಎಂದು ನಿಂತುಕೊಂಡ. ಆ ಕಳ್ಳ ನೋಡ್ದ. ‘ಯಾರಮ್ಮ ನೀನು’ ಅಂತ ಕೇಳ್ದ. ‘ನಾನಯ್ಯ ಈ ಮನೆ ಭಾಗ್ಯಲಕ್ಷ್ಮಿ’ ಈ ಮನೆ ಸಾವ್ಕಾರ ತಿಗದಡಿಗೆ ಹಾಕ್ಕೊಂಡು ಕುಳಿತುಕೊಳ್ಳುವಂಥಾ ಮಣೆ ತಗಂಡೋಗಿ ತಲೆ ಅಡಿಗೆ ಹಾಕ್ಕೊಂಡ. ಈ ಮನೆಗೆ ದರಿದ್ರ ಬಂತು. ನಾನು ಹೊರಗಡೆಗೆ ಹೋಗ್ಬಿಡ್ತೀನಿ. ಈ ದರಿದ್ರನ ಮನೇಲಿ ಇರೋದಿಲ್ಲ’ ಎಂದು ಹೋಗೋಕ್ ನೋಡಿದ್ಲು. ಆ ಬಡವನಿಗೆ ಭಾರಿ ಸಂಕ್ಟ ಬಂತು.

ಈ ಮನೇಲಿ ಭಾಗ್ಯಲಕ್ಷ್ಮಿ ಇದ್ದುದ್ರಿಂದ ನಾನು ಬಂದ್ಬಂದು ಕಳ್ತನ ಮಾಡ್ಕೊಂಡು ತಗಂಡೋಗಿ ನನ್ನ ಹೆಂಡ್ತಿಮಕ್ಳ ಹೊಟ್ಟೆ ಹೊರಿತಾ ಇದ್ದೀನಿ. ಇವಳು ಹೊರಟು ಹೋಗ್ಬಿಟ್ಟರೆ ಆ ಮನೆಗೆ ದರಿದ್ರ ಬರುತ್ತೆ. ಆಮೇಲೆ ನನಗೆ ಭಾರಿ ಕಷ್ಟಕ್ಕೆ ಬರುತ್ತೆ’ ಎಂದು ಅವನು ಅಲ್ಲಿಯೇ ಕುಳಿತುಕೊಂಡ. ನನಗೇನಾರು ಮಾಡ್ಲಿ ಹಿಂಸೆ ಮಾಡ್ಲಿ, ಹೊಡಿಲಿ, ನಾನು ಹೊರಕ್ಕೆ ಹೋಗ್ಬಿಟ್ಟರೆ ಭಾಗ್ಯಲಕ್ಷ್ಮಿ ಆಚೆಗೆ ಹೋಗ್ಬಿಡ್ತಾಳೆ. ದರಿದ್ರ ಲಕ್ಷ್ಮಿ ಹೊರಗಡೆ ಬಾಗಿಲಿಗೆ ಬಂದು ನಿಂತ್ಕೊಂಡಿದ್ದಾಳೆ. ಆಗ ಬಡವ ಬಾಗಿಲಲ್ಲಿ ಕೂತ್ಕೊಂಡ್ಬಿಟ್ಟ ಬೆಳಗಿನತನಕ. ಕೂತ್ಕೊಂಡಿದ್ದಾಗ ಗೌಡ ಹೊರಕ್ಕೋಗಕೆ ಬಂದ. ಬಂದವನು ‘ಯಾರೋ ನೀನು, ಯಾಕೆ ಕುಂತ್ಗಂಡಿದ್ದೀಯಾ’ ಅಂತ ಅವನ್ನ ಕೇಳ್ದ. ಅದಕ್ಕೆ ಅವನು ಇಂಗಿಂಗೆ ಹೆಂಗಸ್ರು ತಿಗದಡಿಕೆ ಹಾಕ್ಕೊಳ್ವಂತ ಮಣಿ ತಗಂಡೋಗಿ ತಲೆ ಅಡಿಗೆ ಹಾಕ್ಕೊಂಡು ಮಲಕ್ಕೊಂಡಿದ್ದೆಯಂತಲ್ಲ ಅದಕ್ಕೆ ಭಾಗ್ಯಲಕ್ಷ್ಮಿ ನಿನ್ನ ಮನೇಲಿದ್ದೋಳು ಹೋಗ್ತಾ ಇದ್ದಳು. ನಿನ್ನ ಮನೇಲಿ ನಾನು ಕಾಲಾವಧಿ ಕಳ್ತನ ಮಾಡ್ಕೊಂಡು ಹೋಗುವಾಗ ಭಾಗ್ಯಲಕ್ಷ್ಮಿ ಹೊರಗೆ ಹೋಗಲು ಬಂದಳು. ‘ನೀನು ಯಾರಮ್ಮ ಎಲ್ಲಿಗೋಗ್ತಿಯಾ’ ಅಂತ ಕೇಳ್ದೆ. ಅದಕ್ಕೆ ಅವಳು ಎಲ್ಲಾ ಹೇಳಿದ್ಲು. ಅದ್ಕೆ ನಾನು ಇಲ್ಲಿ ಬಾಗ್ಲಲ್ಲಿ ಭಾಗ್ಯಲಕ್ಷ್ಮಿ ಹೊರಕ್ಕೆ ಹೋಗದ ಹಾಗೆ ಕುತ್ಗಂಬಿಟ್ಟೆ, ಭಾಗ್ಯಲಕ್ಷ್ಮಿ ಒಳಗೆ ಇದ್ದಾಳೆ. ಇನ್ ಮೇಲೆ ನೀನು ಮಣಿತಗೊಂಡೋಗಿ ತಲ್ದಸಿಗೆ ಹಾಕೊಳ್ಬೇಡ’ ಅಂದ. ಆಗ ಸವ್ಕಾರ ಬಡವನಿಗೆ ‘ನೀನು ರಾತ್ರೀಲಿ ಕಾಣದ ಹಾಗೆ ಕಳ್ಳತನಕ್ಕೆ ಬರಬೇಡಾ ನಿನಗೆ ಏನೋ ಬೇಕೋ ಬಂದು ನನ್ನ ಕೇಳು. ನೀನು ಒಳ್ಳೆ ಉಪಕಾರ ಮಾಡಿದ್ದೀಯಾ ಎಲ್ಲಾ ಕೊಡ್ತೀನಿ’ ಎಂದು ಹೇಳಿ ಕಳಿಸ್ದ.

ಕುಳವಭಾಷೆ ಅಂದರೆ ಕೊರಮರ ಮೂಲ ಮಾತೃಭಾಷೆಯ ಸ್ವರೂಪ. ಈ ಎರಡು ಕಥೆಗಳ ನಿರೂಪಣೆಯಲ್ಲಿ ಕಂಡುಬರುತ್ತದೆ. ಇಲ್ಲಿನ ಪದಸಂಪತ್ತು ಸಮ್ಮಿಶ್ರ ಸ್ವರೂಪದ್ದು. ಹೆಚ್ಚಿನ ಶಬ್ದಗಳು ಮೂಲ ತಮಿಳಿಗೆ ಸಮೀಪವಾದವು. ಕ್ರಿಯಾಪದ, ವಿಶೇಷಣ, ಸರ್ವನಾಮಗಳು, ದ್ರಾವಿಡ ಭಾಷಾ ಸ್ವರೂಪವನ್ನು ಸೂಚಿಸುತ್ತವೆ. ವಾಕ್ಯ ರಚನೆಗೂ ಈ ಮಾತು ಅನ್ವಯಿಸುತ್ತದೆ. ಕೊರವರ ಈ ಭಾಷೆಯನ್ನು ಆಧುನಿಕ ಭಾಷಾ ಶಾಸ್ತ್ರದನ್ವಯ ವಿಶ್ಲೇಷಿಸಿ ವಿಶೇಷಾಂಶಗಳನ್ನು ಗುರುತಿಸುವುದೇ ಒಂದು ಪ್ರತ್ಯೇಕ ಸಂಶೋಧನೆಯಾಗುತ್ತದೆ. ಉಳಿದ ದ್ರಾವಿಡ ಭಾಷೆಗಳೊಡನೆ ತೌಲನಿಕ ಅಭ್ಯಾಸವು ಒಂದು ಅವಶ್ಯವಾದ ಕೆಲಸ. ಮುಂದಿನ ಸಂಶೋಧಕರು ಈ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು.

ಕೊರಮ ಬುಡಕಟ್ಟಿನ ಸಾಂಸ್ಕೃತಿಕ ಅಧ್ಯಯನದಲ್ಲಿ ಅವರ ಭಾಷಾಸ್ವರೂಪದ ಸ್ಥೂಲ ವಿವೇಚನೆಯನ್ನು ಮಾತ್ರ ಇಲ್ಲಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇದೊಂದು ಪ್ರಯತ್ನ ಮಾತ್ರ. ಇದು ಪ್ರಾಥಮಿಕ ಪ್ರಯತ್ನವೂ ಹೌದು ಎಂಬುದನ್ನು ನಿವೇದಿಸುತ್ತೇನೆ.

 


[1] ಡಿ.ಎಲ್.ನರಸಿಂಹಾಚಾರ್ ‘ಪೀಠಿಕೆಗಳುಲೇಖನಗಳು(ಡಿ.ವಿ.ಕೆ. ಪ್ರಕಾಶನ, ಮೈಸೂರು, ೧೯೭೧) ಪು.೧೦೨೯

[2] ಡಾ.ಡಿ.ಎನ್. ಶಂಕರಭಟ್ಟ ‘ಭಾಷೆಯ ಬಗೆಗೆ ನೀವೇನು ಬಲ್ಲಿರಿ’ (ಭಾಷಾ ಪ್ರಕಾಶನ, ಪುಣೇ – ೧೯೭೦) ಪು. ೧೪

[3] ಡಾ. ಹಂ.ಪ. ನಾಗರಾಜಯ್ಯ ; ದ್ರಾವಿಡ ಭಾಷಾ ವಿಜ್ಞಾನಪು.೧೧೩

[4] Souvenir Akila Karnataka Koramara Sangha, Bangalore ಪು.೧೨

[5] ಜಾನಪದ ಸಾಹಿತ್ಯ ದರ್ಶನ ಭಾಗ – ೬ ಪು. ೨೧೭

[6] Quoted E. Thurston Castes and Tribes in Southern India Vol. – III – K ಪು. ೪೪೬

[7] Quoted E. Thurston Castes and Tribes in Southern India Vol. – III – K ಪು. ೪೪೭

[8] Quoted E. Thurston Castes and Tribes in Southern India Vol. – III – K ಪು.೪೪೭

[9] Quoted E. Thurston Castes and Tribes in Southern India Vol. – III – K ಪು. ೪೫೧

[10] Quoted E. Thurston Castes and Tribes in Southern India Vol. – III – K ಪು. ೪೫೨

[11] Michael Kennedy Criminal Classes in the Bombay Presidency ಪು. ೬೯

[12] Michael Kennedy Criminal Classes in the Bombay Presidency ಪು.೬೯

[13] Hirendra K. Rakshit Language, Culture on race in South India ಪು. ೨೨೩

[14] E. Thruston Castes and Tribes in Southern India ಪು. ೪೭೭

[15] R.E. Turston Vol. – II Castes and Tribes of Bombay ಪು. ೨೬೭

[16] H.Vi. Nanjundaiah and Anantha Krishna Iyer The Mysore Tribes and Castes Vol.III ಪು. ೫೮೪

[17] ದೊಡ್ಡಮನೆ ಹನುಮಯ್ಯ;ಹಿರೇಬಿದರೆ

[18] ಅನು:ಡಾ.ಕೆ.ಜಿ.ಶಾಸ್ತ್ರಿ, ಶ್ರೀ ಎಸ್.ಡಿ.ಪಾಟೀಲ ‘ಕರ್ನಾಟಕ ಸಂಸ್ಕೃತಿ ಪರಂಪರೆ

[19] ಜಿ.ಎಸ್.ಕುಳ್ಳಿ ; ‘ಆಧುನಿಕ ಭಾಷಾ ವಿಜ್ಞಾನಪುಟ.೩೯

[20] ಸಂ.ಪ್ರೊ.ಎಲ್.ಎಸ್. ಶೇಷಗಿರಿರಾವ್ ‘ಭಾರತೀಯ ಸಾಹಿತ್ಯ ಸಮೀಕ್ಷೆ ‘ ಭಾಗ – ೧ ಕರ್ನಾಟಕ ಸಾಹಿತ್ಯ ಅಕಾಡೆಮಿ ಪು. ೨೯

[21] ಹೇಳಿದವರು ಅರೆಕೇನಹಳ್ಳಿ ಪಾಪಯ್ಯನವರ ಪತ್ನಿ ಸಾವಿತ್ರಮ್ಮ ತಿಪಟೂರು ತಾಲ್ಲೂಕು ವರ್ಷ ೭೫