ಭಾಷೆಯ ಧ್ವನಿಗಳ ಚಾಕ್ಷುಶ ರೂಪವೇ ಲಿಪಿ. ಲಿಪಿರೂಪದಲ್ಲಿ ಭಾಷೆಯನ್ನು ಹಿಡಿದಿಡುವ ಕಲೆ ಬಹಳ ಹಿಂದಿನಿಂದಲೂ ಬಂದಿದೆ. ಮೊದಮೊದಲು ಚಿತ್ರಲಿಪಿಯೆಂಬುದು ಬಳಕೆಗೆ ಬಂದು ಆನಂತರ ಹಲವು ರೀತಿಗಳಲ್ಲಿ ಬೆಳೆದು ಬಂತು. ಭಾರತದಲ್ಲಿ ಸಿಂಧೂ, ಬ್ರಾಹ್ಮಿ, ಹಾಗೂ ಖರೋಷ್ಠಿ ಲಿಪಿಗಳು ಕಂಡುಬರುತ್ತವೆ. ದ್ರಾವಿಡ ಭಾಷೆಗಳ ಲಿಪಿಗಳಿಗೆ ಬ್ರಾಹ್ಮಿ ಲಿಪಿಯೇ ಮೂಲವಾಗಿದೆ.

ತಮಿಳು,.ಕನ್ನಡ, ತೆಲುಗು, ಮಲಯಾಳಂ ಹಾಗೂ ತುಳು ಪಂಚದ್ರಾವಿಡ ಭಾಷೆಗಳು. ಇವುಗಳಲ್ಲಿ ತುಳು ಭಾಷೆಗೆ ಲಿಪಿಯಿಲ್ಲ.* ಅದು ಬೇರೆ ಭಾಷೆಯ ಲಿಪಿಯನ್ನು ಆಶ್ರಯಿಸಿದೆ. ತಮಿಳು – ಮಲಯಾಳಂ ಲಿಪಿಗಳಿಗೆ ಸಾಮ್ಯವಿದ್ದರೆ, ಕನ್ನಡ ತೆಲುಗು ಭಾಷೆಗಳ ಲಿಪಿಗಳಿಗೆ ಸಾಮ್ಯವಿದೆ. ಐತಿಹಾಸಿಕವಾಗಿ ಈ ಐದು ಭಾಷೆಗಳಲ್ಲಿ ತಮಿಳು ಹಳೆಯದದರೆ ನಂತರ ಕನ್ನಡ, ತೆಲುಗು ಹಾಗೂ ಮಲಯಾಳಂ ಬರುತ್ತವೆ. ಈ ಎಲ್ಲ ಭಾಷೆಗಳಲ್ಲೂ ಬರವಣಿಗೆ ಎಡದಿಂದ ಬಲಕ್ಕೆ ಸಾಗುತ್ತದೆ. ಈ ದ್ರಾವಿಡ ಭಾಷೆಗಳ ಲಿಪಿಗಳ ಬೆಳವಣಿಗೆಯಲ್ಲಿ ಹಲವಾರು ಮಾರ್ಪಾಟಾಗಿರುವುದು ಕಂಡುಬರುತ್ತದೆ. ಶಾಸನಗಳು ಇದನ್ನು ಸ್ಪಷ್ಟಪಡಿಸುತ್ತವೆ.

ಈ ಭಾಷೆಗಳಲ್ಲಿ ಸ್ವರಗಳು, ವ್ಯಂಜನಗಳೆಂದು, ವ್ಯಂಜನಗಳಲ್ಲಿ ವರ್ಗೀಯ, ಅವರ್ಗೀಯ ವಿಭಾಗಗಳುಂಟು. ಸ್ವರಗಳಲ್ಲಿ ಹ್ರಸ್ವ ಸ್ವರ, ದೀರ್ಘ ಎಂಬ ವಿಭಾಗಗಳುಂಟು. ವ್ಯಂಜನಗಳನ್ನು ವಿವಿಧ ಸ್ವರಗಳೊಂದಿಗೆ ಬರೆಯುವುದಕ್ಕಾಗಿ ಪ್ರತ್ಯೇಕ ಸ್ವರಚಿಹ್ನೆಗಳು ಬಳಕೆಯಲ್ಲಿವೆ. ಸ್ವರಚಿಹ್ನೆಗಳನ್ನು ಸೇರಿಸಿ ಬರೆದ ಅಕ್ಷರಗಳೇ ಗುಣಿತಾಕ್ಷರಗಳಾಗುತ್ತವೆ. ಪ್ರತಿಯೊಂದು ಸ್ವರಕ್ಕೂ ಪ್ರತ್ಯೇಕ ಚಿಹ್ನೆಗಳನ್ನು ಕಾಣಬಹುದು. ಆದರೂ ಎಲ್ಲ ಭಾಷೆಗಳಲ್ಲೂ ಈ ಚಿಹ್ನೆಗಳ ಬಳಕೆ ಒಂದೇ ತೆರನಾಗಿಲ್ಲ. ಕನ್ನಡ, ತೆಲುಗು, ಭಾಷೆಗಳಲ್ಲಿ ಈ ಚಿಹ್ನೆಗಳು ಅಕ್ಷರದ ಮೇಲುಭಾಗ ಹಾಗೂ ಮುಂದೆ ಬಂದರೆ ತಮಿಳಿನಲ್ಲಿ ಅದು ಅಕ್ಷರಕ್ಕೆ ಮೊದಲು ಹಾಗೂ ನಂತರ ಬರುತ್ತದೆ. ಈ ಗುಣಿತ ಚಿಹ್ನೆಗಳಿಗೆ ಪ್ರತಿಯೊಂದಕ್ಕೂ ಒಂದೊಂದು ಹೆಸರುಂಟು. ಕನ್ನಡದಲ್ಲಿ ಇವುಗಳನ್ನು ‘ಕಾಗುಣಿತ’, ‘ಬಳ್ಳಿ’ ಎಂದು ಕರೆಯುತ್ತಾರೆ. ದ್ರಾವಿಡ ಭಾಷೆಗಳಲ್ಲಿ ಬಳಕೆಯಾಗುವ ಗುಣಿತ ಚಿಹ್ನೆಗಳನ್ನು ಪರಿಚಯಿಸುವುದೇ ಈ ಲೇಖನದ ಉದ್ದೇಶ.

ಕನ್ನಡ

ದ್ರಾವಿಡ ಭಾಷಾವರ್ಗದ ಪ್ರಮುಖ ಭಾಷೆಯಾದ ಕನ್ನಡವು ದಕ್ಷಿಣ ದ್ರಾವಿಡ ಭಾಷಾಗುಂಪಿಗೆ ಸೇರುತ್ತದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಭಾಷೆ ಕನ್ನಡ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಈ ಭಾಷೆ ಸಮೃದ್ಧವಾಗಿದೆ. ಇದು ಕರ್ನಾಟಕ ರಾಜ್ಯದ ಅಧಿಕೃತ ಭಾಷೆ. ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ. ೬೫.೬೯ರಷ್ಟು (೧೯೮೧ರ ಜನಗಣತಿ) ಜನರು ಕನ್ನಡವನ್ನು ಮಾತನಾಡುತ್ತಾರೆ. ಕನ್ನಡ ಮಾತನಾಡುವವರು ಕರ್ನಾಟಕದಲ್ಲಷ್ಟೇ ಅಲ್ಲದೆ ಇತರೆ ರಾಜ್ಯಗಳಲ್ಲೂ ಇದ್ದಾರೆ.

ಕನ್ನಡ ಲಿಪಿ ಅಶೋಕನ ಕಾಲದ ದಕ್ಷಿಣ ಬ್ರಾಹ್ಮಿಲಿಪಿಯಿಂದ ಪ್ರಾರಂಭವಾಯಿತೆನ್ನಲಾಗಿದೆ. ಆನಂತರ ಶಾತವಾಹನ, ಗಂಗ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳರ ಕಾಲದಲ್ಲಿ ಅನೇಕ ಬದಲಾವಣೆಗಳನ್ನು ಹೊಂದಿ ಇಂದಿನ ರೂಪ ಪಡೆದಿದೆ.

ಕನ್ನಡದಲ್ಲಿ ೪೩ ಧ್ವನಿಗಳಿದ್ದು ಇವುಗಳನ್ನು ಪ್ರತಿನಿಧಿಸಲು ೫೦ ಲಿಪಿಚಿಹ್ನೆಗಳಿವೆ. ವ್ಯಂಜನಗಳನ್ನು ಸ್ವರದೊಡನೆ ಬರೆಯಲು ಗುಣಿತಾಕ್ಷರ ಚಿಹ್ನೆಗಳಿವೆ. ಇವುಗಳಿಗೆ ‘ಕಾಗುಣಿತ’ ಅಥವಾ ಬಳ್ಳಿ ಎನ್ನುವರು. ಪ್ರತಿಯೊಂದು ಚಿಹ್ನೆಗೂ ಹೆಸರುಂಟು. ಅವು ಈ ರೀತಿ ಇವೆ. (+ ಚಿಹ್ನೆ ವ್ಯಂಜನವನ್ನು ಸೂಚಿಸುತ್ತದೆ.) 

01_16_D-KUH

ಕನ್ನಡದಲ್ಲಿ ಗುಣಿತಾಕ್ಷರ ಚಿಹ್ನೆಗಳು ಅಕ್ಷರಕ್ಕೆ ಸೇರಿಕೊಂಡೇ ಬರುತ್ತವೆ. ಕೆಲವು ಸ್ವರ ಚಿಹ್ನೆಗಳು ಮೇಲುಭಾಗದಲ್ಲೂ (ಅ ಆ, ಇ ಈ, ಎ), ಮತ್ತು ಅಕ್ಷರದ ನಂತರ ಬರುತ್ತವೆ. ಒಂದು ಸ್ವರಕ್ಕೆ ಒಂದಕ್ಕಿಂತ ಹೆಚ್ಚು ಚಿಹ್ನೆಗಳು (ಉದಾ: ಏ ಸ್ವರಕ್ಕೆ ಾ ಹಾಗೂ ೕ ಚಿಹ್ನೆ ಬಂದರೆ ಓ ಸ್ವರಕ್ಕೆ ೋ ಎಂಬ ಮೂರು ಚಿಹ್ನೆಗಳು ಒಂದೇ ಸ್ವರ ಸೂಚನೆಗೆ ಬರುತ್ತದೆ) ಬಂದರೂ ಅವೆಲ್ಲವೂ ಸೇರಿದಾಗ ಮಾತ್ರ ಒಂದು ಸ್ವರ ಸೂಚಿಸಲು ಸಾಧ್ಯ.

ಎಲ್ಲ ವ್ಯಂಜನಗಳ ಜೊತೆಯೂ ಈ ಚಿಹ್ನೆಗಳು ಒಂದೇ ರೀತಿಯಲ್ಲಿ ಬರುವುದಿಲ್ಲ. ಮೂಲ ಅಕ್ಷರವೇ ‘ಅ’ ಸ್ವರದೊಡನೆ ಬರುತ್ತದೆ. ‘ಆ’ ಸ್ವರಸೂಚಿಸುವ ತಲೆಕಟ್ಟು ಇಲ್ಲದ ಅಕ್ಷರಗಳೂ ಇವೆ. ಆ, ಇ. ಈ.ಎ.ಏ ಸ್ವರಚಿಹ್ನೆಗಳನ್ನು ತಲೆಕಟ್ಟನ್ನು ಹೊಂದಿರುವ ಅಕ್ಷರಗಳಿಗೆ ತಲೆಕಟ್ಟಿನ ಜಾಗದಲ್ಲೂ (ಕ, ಕಾ, ಕಿ, ಕೀ, ಕೇ, ಕೇ), ತಲೆಕಟ್ಟು ಇಲ್ಲದ ಅಕ್ಷರಗಳಿಗೆ ಅಕ್ಷರದ ಕೊನೆಗೂ (ಬ ಬಾ ಬಿ ಬೀ ಬೆ ಬೇ) ಸೇರಿಸಲಾಗುವುದು. ‘ಣ’ ಅಕ್ಷರಕ್ಕೆ ಮಾತ್ರ ಆ ಇ ಈ ಎ ಏ ಚಿಹ್ನೆಗಳನ್ನು ಅಕ್ಷರದ ಮೇಲುಭಾಗಕ್ಕೆ (ಣಾ, ಣಿ, ಣೀ, ಣೆ, ಣೇ) ಸೇರಿಸಲಾಗುವುದು. ಮ, ಯ ವ್ಯಂಜನಗಳಿಗೆ ‘ಆ’ ಚಿಹ್ನೆಯನ್ನು ಭಿನ್ನ ರೀತಿಯಲ್ಲಿ (ಮ – ಮಾ, ಯ – ಯಾ) ಸೇರಿಸಲಾಗುವುದು. ಅಲ್ಲದೆ ಈ ಎರಡು ಅಕ್ಷರಗಳ ದೀರ್ಘ ಇಕಾರಕ್ಕೂ ಎರಡು ರೀತಿಯ ಬರಹವಿದೆ (ಮ – ಮೀ ಮೀ ಯ – ಯೀ, ಯೊ). ಉ.ಊ.ಒ ಓ ಚಿಹ್ನೆಗಳನ್ನು ಎಲ್ಲ ಅಕ್ಷರಗಳಿಗೂ ಅಕ್ಷರದ ಪಕ್ಕದಲ್ಲಿ ಸೇರಿಸಿದರೆ (ಕು, ಕೂ, ಕೊ, ಕೋ), ‘ವ’ ಅಕ್ಷರಕ್ಕೆ ಮಾತ್ರ ಭಿನ್ನ ರೀತಿಯಲ್ಲಿ (ವ – ವು, ವೂ, ವೊ, ವೋ) ಸೇರಿಸಲಾಗುವುದು ‘ಹ’ ಅಕ್ಷರಕ್ಕೆ ಅಕ್ಷರದ ಪಕ್ಕ (ಹು, ಹೂ, ಹೊ, ಹೋ) ಹಾಗೂ ಅಕ್ಷರದ ಕೆಳಗೆ (ಹು, ಹೊ, ಹೊ, ಹೋ) ಎರಡೂ ರೀತಿ ಬರೆಯುವ ರೂಢಿಯಿದೆ. ಕೊಂಬುಗಳಿರುವ ಅಕ್ಷರಗಳಾದ ಮ, ಯ ಗಳಿಗೆ ‘ಔ’ ಸ್ವರ ಚಿಹ್ನೆಯನ್ನು ಕೊಂಬಿಗೆ ಸೇರಿಸಲಾಗುವುದು (ಮೌ, ಯೌ ಇತ್ಯಾದಿ)

ಕನ್ನಡದಲ್ಲಿ ಎರಡು ದೀರ್ಘ ಚಿಹ್ನೆಗಳಿವೆ. ಅವುಗಳೆಂದರೆ ಾ (ಇಳಿ) ಮತ್ತು ೕ (ಧೀರ್ಘ) ಇಳಿಯನ್ನು ‘ಆ’ ಸ್ವರ ಸೂಚಿಸಲು ಧೀರ್ಘವನ್ನು ಇನ್ನಿತರ ಸ್ವರಚಿಹ್ನೆಗಳೊಡನೆ ದೀರ್ಘ ಸೂಚಿಸಲು (ಕೀ, ಕೇ, ಕೋ) ಬಳಸಲಾಗುತ್ತದೆ.

ಶುದ್ಧ ವ್ಯಂಜನ ಸೂಚಿಸಲು ್ ಚಿಹ್ನೆ ಬಳಕೆಯಾಗುತ್ತ೫ದೆ. ಇದನ್ನು ವ್ಯಂಜನದ ತಲೆಕಟ್ಟಿನ ಭಾಗಕ್ಕೆ (ಕ್‌) ಅಥವಾ ಅಕ್ಷರದ ಕೊನೆಗೆ (ಬ್, ಮ್) ಸೇರಿಸಲಾಗುವುದು.

ತಮಿಳು

ತಮಿಳು ದ್ರಾವಿಡ ಭಾಷಾವರ್ಗದ ದಕ್ಷಿಣ ದ್ರಾವಿಡ ಭಾಷಾಗುಂಪಿಗೆ ಸೇರಿದ ಭಾಷೆ. ಈ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಇದು ದ್ರಾವಿಡ ಭಾಷೆಗಳಲ್ಲೇ ಪ್ರಾಚೀನ ಭಾಷೆ. ತಮಿಳು, ತಮಿಳುನಾಡು ರಾಜ್ಯದ ಪ್ರಧಾನ ಭಾಷೆ. ಕರ್ನಾಟಕದಲ್ಲೂ ತಮಿಳು ಮಾತನಾಡುವವರನ್ನು ಬೆಂಗಳೂರು, ಮೈಸೂರು, ಕೋಲಾರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾಣಬಹುದು.

ತಮಿಳಿನಲ್ಲಿ ೪೧ ಧ್ವನಿಗಳಿದ್ದು ಇದನ್ನು ಪ್ರತಿನಿಧಿಸಲು ೩೦ ಅಕ್ಷರಗಳಿವೆ. ಏಕೆಂದರೆ ತಮಿಳಿನಲ್ಲಿ ಒಂದೇ ಅಕ್ಷರವನ್ನು ಹಲವು ಧ್ವನಿಗಳನ್ನು ಸೂಚಿಸಲು ಬಳಸಲಾಗುತ್ತಿದೆ. ಈ ಭಾಷೆಯಲ್ಲಿ ಮೂರು ರೀತಿಯ ಲಿಪಿಪ್ರಭೇದಗಳು ಕಂಡುಬರುತ್ತವೆ. ಅವು. ‘ವಟ್ಟೆಳುತ್ತು’ ಎಂಬ ಶಾಸನಗಳನ್ನು ಬರೆಯುವ ಲಿಪಿ, ಸಂಸ್ಕೃತದ ದಾಖಲೆಗಳನ್ನು ಬರೆಯಲು ಬಳಸುವ ‘ಗ್ರಂಥಲಿಪಿ’ ಹಾಗೂ ತಮಿಳಿನಲ್ಲಿ ಕೃತಿರಚನೆಗಾಗಿ ಬಳಸುವ ತಮಿಳು ಲಿಪಿ.

ತಮಿಳಿನ ಅಕ್ಷರಗಳಿಗೂ ಮಲಯಾಳಂ ಅಕ್ಷರಗಳಿಗೂ ಸಾಮ್ಯವಿದೆ. ಗುಣಿತಾಕ್ಷರಗಳಿಗೆ ಪ್ರತ್ಯೇಕವಾದ ಹೆಸರುಗಳು ಇಂದು ಬಳಕೆಯಲ್ಲಿಲ್ಲ. ಕೆಲವು ಮಾತ್ರ ಬಳಕೆಯಲ್ಲಿದೆ. ಪ್ರಮುಖವಾಗಿ ದೀರ್ಘವನ್ನು ಸೂಚಿಸುವ ಕಾಲ (ா) ಮತ್ತು ಒರುಟ್ಟೈ ಕೊಂಬು ெ ಮತ್ತು ಇರುಟ್ಟೈ ಕೊಂಬು ே ಎಂಬುದು ಬಳಕೆಯಲ್ಲಿದೆ. ಮೂಲ ವ್ಯಂಜನ ‘ಅ’ ಸ್ವರದೊಂದಿಗೆ ಇರುತ್ತದೆ. ಆನಂತರದ ಸ್ವರಗಳಿಗೆ ಪ್ರತ್ಯೇಕವಾದ ಚಿಹ್ನೆಗಳನ್ನು ಬಳಸಿ ಗುಣಿತಾಕ್ಷರಗಳನ್ನು ಬರೆಯಲಾಗುವುದು. ಈ ಚಿಹ್ನಗಳು ಅಕ್ಷರದ ಹಿಂದೆ ಮತ್ತು ಮುಂದೆ ಬರುವವು.

02_16_D-KUH

ಎಲ್ಲ ಅಕ್ಷರಗಳಿಗೂ ಗುಣಿತಾಕ್ಷರ ಚಿಹ್ನೆಗಳು ಒಂದೇ ರೀತಿಯಲ್ಲಿ ಬರುತ್ತವೆ. ಕೆಲವು ಚಿಹ್ನೆಗಳು ಅಕ್ಷರದ ಮೇಲೆ (ಇ, ಈ), ಕೆಲವು ಅಕ್ಷರದ ಕೆಳಗೆ (ಉ, ಊ) ಮತ್ತೆ ಕೆಲವು ಅಕ್ಷರದ ಹಿಂದೆ ಮುಂದೆ ಬರುತ್ತವೆ. ಉ, ಊ ಸ್ವರಗಳಿಗೆ ಒಂದಕ್ಕಿಂತ ಹೆಚ್ಚು ಚಿಹ್ನಗಳಿದ್ದು ಅವು ವಿವಿಧ ಅಕ್ಷರಗಳಿಗೆ ವಿವಿಧ ರೀಯಾಗಿ ಬರುತ್ತವೆ. ಕೆಲವು ಸ್ವರಗಳಿಗೆ ಒಂದೇ ಚಿಹ್ನೆಯಿದ್ದರೆ, ಇನ್ನು ಕೆಲವು ಸ್ವರಗಳಿಗೆ ಒಂದಕ್ಕಿಂತ ಹೆಚ್ಚು ಚಿಹ್ನೆಗಳು ಸೇರಿ ಒಂದು ಸ್ವರ ಸೂಚಿಸುತ್ತದೆ.

ತೆಲುಗು

ತೆಲುಗು ಮಧ್ಯ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಭಾಷೆ. ತೆಲುಗು ಆಂದ್ರ ಪ್ರದೇಶದ ಪ್ರಮುಖ ಭಾಷೆ. ಇದನ್ನು ಕರ್ನಾಟಕ – ಆಂದ್ರದ ಗಡಿ ಜಿಲ್ಲೆಗಳಲ್ಲಿ ಹೆಚ್ಚಾಗಿಯೂ ಉಳಿದ ಕಡೆಗಳಲ್ಲಿ ಚದುರಿದಂತೆಯೂ ಮಾತನಾಡುವ ಜನರಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಇತರ ಎಲ್ಲ ಜಿಲ್ಲೆಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿದ್ದಾರೆ.

ಕನ್ನಡದಂತೆಯೇ ತೆಲುಗು ಭಾಷೆಗೂ ಅನೇಕ ಶತಮಾನಗಳ ಇತಿಹಾಸವಿದೆ. ಸಾಹಿತ್ಯಿಕವಾಗಿಯೂ ಸಮೃದ್ಧವಾಗಿದೆ. ಕನ್ನಡದಂತೆಯೇ ತೆಲುಗಿನಲ್ಲೂ ಸಹ ಸ್ವರಗಳು, ವ್ಯಂಜನಗಳು ಇದ್ದು, ಲಿಪಿಯಲ್ಲೂ ಸಾಮ್ಯವಿದೆ. ವ್ಯಂಜನಗಳೊಡನೆ ಸ್ವರಗಳನ್ನು ಸೇರಿಸಿ ಬರೆಯಲು ಗುಣಿತಾಕ್ಷರ ಚಿಹ್ನೆಗಳೂ ಇವೆ. ಪ್ರತಿಯೊಂದನ್ನು ಹೆಸರಿದೆ. ಅವುಗಳನ್ನು ಕೆಳಗೆ ನೀಡಲಾಗಿದೆ.

03_16_D-KUH ಹೀಗೆ ಗುಣಿತ ಚಿಹ್ನೆಗಳನ್ನು ಸೇರಿಸುವಾಗ ಕೆಲವು ಅಕ್ಷರಗಳಿಗೆ ಭಿನ್ನ ರೀತಿಯುಂಟು. ತಲೆಕಟ್ಟು ಎಲ್ಲ ಅಕ್ಷರಗಳೀಗೂ ಒಂದೇ ರೀತಿಯಲ್ಲುಂಟು. ತಲೆಕಟ್ಟು ಇಲ್ಲದ ಅಕ್ಷರಗಳು ಉಂಟು. ‘ಅ’ ಚಿಹ್ನೆಯನ್ನು ತಲೆಕಟ್ಟಿನ ಜಾಗದಲ್ಲಿ (కా గా) ಸೇರಿಸಲಾಗುವುದಾದರೂ ಕೆಲವು ಅಕ್ಷರಗಳಿಗೆ, ಕೊಂಬುಳ್ಳ ಅಕ್ಷರಗಳಿಗೆ (ಘ, ಮ, ಯ) ದೀರ್ಘವನ್ನು ಕೊಂಬಿನ ತುದಿಗೆ ఘా, మా, యా ಸೇರಿಸಲಾಗುವುದು.

‘ಹ’ ಅಕ್ಷರಕ್ಕೆ ಮತ್ತೊಂದು ರೀತಿ హ (ಹ), హా (ಹಾ) ಅಲ್ಲದೆ ಪ, ಫ, ಷ, ಸ ಅಕ್ಷರಗಳಿಗೆ ದೀರ್ಘ ಸೇರಿಸಿದಾಗ ಅಕ್ಷರಗಳನ್ನು ಈ ಮುಂದಿನಂತೆ ಬರೆಯಲಾಗುತ್ತದೆ. పా (ಪಾ), ఫా (ಫಾ), షా (ಷಾ), సా (ಸಾ). ಇದಕ್ಕೆ ಕಾರಣ, ಇದನ್ನು ವ ಮತ್ತು ನ ಅಕ್ಷರಗಳೊಡನೆ ಬೇರೇಯಾಗಿ ತೋರಿಸುವುದು. ಈ ಅಕ್ಷರಗಳಿಗೆ ಒ ಓ ಚಿಹ್ನೆಗಳೂ ಸಹಾ ಹೀಗೆಯೇ ಬರುತ್ತವೆ పొ (ಪೊ) పో (ಪೋ) ಇತ್ಯಾದಿ.

‘ಇ’ ಸ್ವರಚಿಹ್ನೆಯನ್ನು ತಲೆಕಟ್ಟು ಬರುವಲ್ಲಿ (కి గి) ಅಥವಾ ಅಕ್ಷರದ ಕೊನೆಗೆ (ಬಿ, ಲಿ) ಬರೆದರೆ ಈ ಸ್ವರಚಿಹ್ನೆ (కీ, గీ) ಮೇಲಕ್ಕೆ ಹೋಗುತ್ತದೆ. ಮ ಅಕ್ಷರಕ್ಕೆ ಇನ್ನೊಂದು ರೀತಿಯೂ ಉಂಟು. ಉದಾ మ మి మీ. ಯ ಅಕ್ಷರಕ್ಕೆ ‘ಇ’ ಸ್ವರಚಿಹ್ನೆಯಿಲ್ಲದೆ ತಲೆಕಟ್ಟಿಲ್ಲದ ಅಕ್ಷರ ‘ಇ’  ಸೂಚಿಸುತ್ತದೆ. ಉದಾ. ಯ, ಉ, ಊ ಸ್ವರದ ಚಿಹ್ನೆ ಕೊಂಬು ಮತ್ತು ಕೊಂಬುದೀರ್ಘವನ್ನು ಅಕ್ಷರದ ಪಕ್ಕಕ್ಕೆ ಸೇರಿಸದರೆ ಪ, ಫ, ವ ಅಕ್ಷರಗಳಿಗೆ ಕೆಳಕ್ಕೆ ಸೇಸಿಸಲಾಗುವುದು. (పు, ఫు, వు) ಜ ಅಕ್ಷರಕ್ಕೆ ಅಕ್ಷರದ ಒಳಗಿನ ಕೊಂಬಿಗೆ జు ಸೇರಿಸಲಾಗುವುದು. ಎ, ಏ, ಐ, ಒ, ಓ, ಔ ಸ್ವರ ಚಿಹ್ನೆಗಳು ತಲೆಕಟ್ಟು ಇರುವ ಜಾಗದಲ್ಲಿ ಅಥವಾ ಅಕ್ಷರದ ಕೊನೆಗೆ ಬಂದರೆ ‘ಐ’ಗೆ ಅಕ್ಷರದ ಮೇಲೊಂದು ಕೆಲಗೊಂದು ಚಿಹ್ನೆ ಬರುತ್ತದೆ. (కై)

ಕೆಲವು ಅಕ್ಷರಗಳಿಗೆ ಕೆಲವು ಚಿಹ್ನೆಗಳನ್ನು ವಿಭಿನ್ನವಾಗಿ ಸೇರಿಸಲಾಗುವುದು. ಉದಾ ಒ ಓ ಚಿಹ್ನೆಗಳನ್ನು ಮ, ಯ ಅಕ್ಷರಗಳಿಗೆ, మ (ಮ), మొ (ಮೊ), మో (ಮೋ), యొ (ಯೊ), యో (ಯೋ) ಎಂದು ‘ಹ’ ಅಕ್ಷರಕ್ಕೆ హొ (ಹೊ), హో (ಹೋ) ಸ್ವಲ್ಪ ಭಿನ್ನವಾಗಿ ಸೇರಿಸಲಾಗುವುದು. ಔ ಚಿಹ್ನೆಯನ್ನು ಮೇಲೆ (మౌ, యౌ) ಹಾಗೂ ಅಕ್ಷರದ ಕೊನೆಗೆ (కౌ, గౌ) ಸೇರಿಸಲಾಗುವುದು.

ಶುದ್ಧ ವ್ಯಂಜನವನ್ನು ಬರೆಯಲು ಬಳಸುವ ಚಿಹ್ನೆ ్ ಇದನ್ನು ತಲೆಕಟ್ಟಿನ ಜಾಗದಲ್ಲಿ (క్) ಅಕ್ಷರದ ಕೊನೆಗೆ (బ్) ಸೇರಿಸಲಾಗುವುದು.

ಮಲೆಯಾಳಂ

ಮಲೆಯಾಳಂ ಕೇರಳದ ಅಧಿಕೃತ ಭಾಷೆ. ಇದು ಸುಮಾರು ೧೧ನೇ ಶತಮಾನದಲ್ಲಿ ತಮಿಳಿನಿಂದ ಕವಲೊಡೆದು ಸ್ವತಂತ್ರ ಭಾಷೆಯಾಯಿತು ಎಂದು ಹೇಳಲಾಗಿದೆ. ಈ ಭಾಷೆಯ ಲಿಪಿ ಬೆಳವಣಿಗೆಯನ್ನು ಕಂಡಾಗ ಮೂರು ರೀತಿಯ ಲಿಪಿ ಪ್ರಭೇದಗಳನ್ನು ಗುರುತಿಸಲಾಗುತ್ತದೆ. ವಟ್ಟೆಳುತ್ತು, ಕೋಳೆಳುತ್ತು ಮತ್ತು ಮಲೆಯನ್ಮ ಲಿಪಿಗಳ ಮೂಲಕ ಶಾಸನ, ತಾಮ್ರಪಟಗಳು ಹಾಗೂ ತಾಳೇಗರಿಗಳ ಮೇಲೆ ಬರೆಯಲಾಗುತ್ತಿತ್ತು ಎಂದು ಹೇಳಲಾಗಿದೆ.

ಮೂಲ ದ್ರಾವಿಡದ ಅನೇಕ ಲಕ್ಷಣಗಳನ್ನು ಉಳಿಸಿಕೊಂಡು ಬಂದಿರುವ ಮಲಯಾಳಂನಲ್ಲಿ ೩೯ ಧ್ವನಿಗಳಿದ್ದು ಅವುಗಳನ್ನು ಪ್ರತಿನಿಧಿಸಲು ೪೯ ಅಕ್ಷರಗಳಿವೆ. ವ್ಯಾಕರಣ ಹಾಗೂ ಧ್ವನಿರಚನೆಯನ್ನು ಗಮನಿಸಿದರೆ ಮಲಯಾಳಂ ತಮಿಳಿಗೆ ಹತ್ತಿರವಾಗಿದೆಯಾದರೂ ಸಂಸ್ಕೃತದ ಗಾಢವಾದ ಪ್ರಭಾವ ಎದ್ದು ಕಾಣುತ್ತದೆ. ಮಲೆಯಾಳಂನ ಶಬ್ಧಭಂಡಾರವನ್ನು ಗಮನಿಸಿದರೆ ಇದು ತಿಳಿಯುತ್ತದೆ. ಹೀಗೆ ಸಂಸ್ಕೃತದ ಶಬ್ದಗಳನ್ನು ದ್ರಾವಿಡ ವ್ಯಾಕರಣದ ಚೌಕಟ್ಟಿಗೆ ಅಳವಡಿಸಿ ರೂಪಿಸಲಾ”ದ ಶೈಲಿ ‘ಮಣಿಪ್ರವಾಳ’ ಎಂದು ಹೆಸರು ಪಡೆದಿದೆ. ಇಂದಿನ ಮಲಯಾಳಂ ಲಿಪಿ ತಮಿಳಿನ ಗ್ರಂಥಲಿಪಿಯಿಂದಲೇ ವಿಕಾಸಗೊಂಡಿದೆ ಎಂದು ಹೇಳಲಾಗಿದೆ.

ಮಲಯಾಳಂ ಮಾತೃಭಾಷಿಕರು ಕೇರಳದಲ್ಲಿ ಅಧಿಕವಾಗಿದ್ದರೂ, ಕರ್ನಾಟಕದಲ್ಲಿ ಅದನ್ನು ಆಡುವವರ ಸಂಖ್ಯೆ ೫, ೯೦, ೭೦೯ (೧೯೮೧ರ ಜನಗಣತಿ). ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹರಡಿರುವ ಇವರು ಬೆಂಗಳೂರು, ಚಿಕ್ಕಮಂಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ.

ಮಲೆಯಾಳಂ ಭಾಷೆಯಲ್ಲಿ ಗುಣಿತಾಕ್ಷರಗಳನ್ನು ಬರೆಯಲು ಸ್ವರಚಿಹ್ನೆಗಳನ್ನು ಬಳಸಲಾಗುತ್ತದೆ. ಇವುಗಳ ಅಕ್ಷರದ ಹಿಂದೆ ಮತ್ತು ಮುಂದೆ ಬರುತ್ತದೆ. ಹಾಗೂ ಇವುಗಳನ್ನು ಅಕ್ಷರದೊಡನೆ ಸೇರಿಸದೆ ಬಿಡಿಯಾಗಿಯೇ ಬರೆಯಲಾಗುತ್ತದೆ.

ಈ ಗುಣಿತಾಕ್ಷರ ಚಿಹ್ನೆಗಳಿಗೆ ಪ್ರತ್ಯೇಕ ಹೆಸರುಗಳು ಇಂದು ಬಳಕೆಯಲ್ಲಿಲ್ಲ. ಇವುಗಳನ್ನು ‘ವಳ್ಳಿ’ ಎಂದು ಹೇಳಲಾಗುತ್ತದೆ. ಈ ಚಿಹ್ನೆಗಳು ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ ನಡೆಯನ್ನು ಹೊಂದಿವೆ. ಮೂಲಾಕ್ಷರವೇ ‘ಅ’ ಸ್ವರದೊಡನೆ ಇರುತ್ತದೆ. ಈ ಚಿಹ್ನೆಗಳು ಎಲ್ಲ ವ್ಯಂಜನಗಳೊಡನೆಯೂ ಒಂದೇ ರೀತಿಯಾಗಿ ಬಳಕೆಯಾಗುತ್ತವೆ. ಈಗ ಈ ಸ್ವರಚಿಹ್ನೆಗಳನ್ನು ನೋಡೋಣ.

 04_16_D-KUH

ಉ, ಊ ಸ್ವರಗಳನ್ನು ಸೂಚಿಸಲು ಹಿಂದಿನ ಮಲಯಾಳಂ ಲಿಪಿಯಲ್ಲಿ ಐದೈದು ಚಿಹ್ನೆಗಳು ವಿವಿಧ ವ್ಯಂಜನಗಳೊಡನೆ ಬಳಕೆಯಲ್ಲಿದ್ದು ಅದು ಇಂದಿಗೂ ಮುಂದುವರೆದಿದೆ. ಅವುಗಳು

05_16_D-KUH

ಉಪಸಂಹಾರ

ದ್ರಾವಿಡ ಭಾಷೆಗಳ ಅಕ್ಷರ ಹಾಗೂ ಗುಣಿತಾಕ್ಷರ ಚಿಹ್ನೆಗಳಲ್ಲಿ ಮಲಯಾಳಂ ಮತ್ತು ತಮಿಳು ಲಿಪಿಗಳಲ್ಲಿ ಬಹಳಷ್ಟು ಸಾಮ್ಯವಿದೆ. ಇ, ಈ, ಎ, ಏ, ಐ, ಒ, ಓ ಚಿಹ್ನೆಗಳಲ್ಲಿ ಸಾಮ್ಯವಿದ್ದರೆ, ಆ, ಉ, ಊ, ಔ ಚಿಹ್ನೆಗಳಲ್ಲಿ ಸ್ವಲ್ಪ ಭಿನ್ನತೆಯಿದೆ. ಎರಡೂ ಲಿಪಿಗಳಲ್ಲಿ ಚಿಹ್ನೆಗಳು ವ್ಯಂಜನಗಳ ಹಿಂದೆ ಹಾಗೂ ಮುಂದೆ ಬರುತ್ತವೆ. ಉ, ಊ ಸೂಚಿಸಲು ಎರಡೂ ಲಿಪಿಗಳಲ್ಲಿ ಒಂದಕ್ಕಿಂತ ಹೆಚ್ಚು ಚಿಹ್ನೆಗಳಿವೆ ಹಾಗೂ ಇವು ವಿವಿಧ ವ್ಯಂಜನಗಳೊಡನೆ ವಿವಿಧ ರೀತಿಯಲ್ಲಿ ಬಳಕೆಯಾಗಿರುವುದನ್ನು ಕಾಣಬಹುದು. ಈ ರೀತಿಯ ಹಲವು ಚಿಹ್ನೆಗಳು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿಲ್ಲ.

ಕನ್ನಡ ಹಾಗೂ ತೆಲುಗು ಭಾಷೆಗಳ ಲಿಪಿಗಳಲ್ಲಿ ಬಹಳಷ್ಟು ಸಾಮ್ಯವಿದ್ದು ಚಿಹ್ನೆಗಳಲ್ಲೂ ಸಾಮ್ಯವಿದೆ. ಒ ಓ ಚಿಹ್ನೆಗಳಲ್ಲಿ ಮಾತ್ರ ಭಿನ್ನತೆಯಿದೆ. ಚಿಹ್ನೆಗಳ ಹೆಸರುಗಳಲ್ಲೂ ಸಾಮ್ಯವಿದೆ. ದೀರ್ಘ ಸೂಚಿಸಲು ಕನ್ನಡದಲ್ಲಿರುವಂತೆಯೇ ತೆಲುಗಿನಲ್ಲೂ ಎರಡು ಚಿಹ್ನೆಗಳಿವೆ. ಶುದ್ಧವ್ಯಂಜನ ಸೂಚಿಸಲು ತಮಿಳು ಮಲಯಾಳಂಗಳಲ್ಲಿ ವ್ಯಂಜನದ ಮೇಲೆ ಒಂದು ಚುಕ್ಕೆಯಿದ್ದರೆ ಕನ್ನಡ ಹಾಗೂ ತೆಲುಗಿನಲ್ಲಿ ಪ್ರತ್ಯೇಕ ಚಿಹ್ನೆಯಿದೆ.

ದ್ರಾವಿಡ ಭಾಷೆಗಳಲ್ಲಿ ಸದ್ಯ ಬಳಕೆಯಲ್ಲಿರುವ ಗುಣಿತಾಕ್ಷರ ವ್ಯವಸ್ಥೆಯನ್ನು ಪರಿಚಯಿಸುವುದು ಈ ಲೇಖನದ ಉದ್ದೇಶ. ಗುಣಿತಾಕ್ಷರ ಚಿಹ್ನೆಗಳೂ ಕೂಡ ಹಲವಾರು ಬದಲಾವಣೆಗಳಿಗೆ ಒಳಗಾಗಿದೆ. ಕಾಲಕಾಲಕ್ಕೆ ಆದ ಬದಲಾವಣೆಗಳ ಬಗ್ಗೆಯೂ ಚರ್ಚಿಸಲು ಇನ್ನೂ ಅವಕಾಶವಿದೆ.

 


* ಮಲಯಾಳಂ ಲಿಪಿಯನ್ನೇ ಹೋಲುವ ಲಿಪಿಯಲ್ಲಿ ತುಳು ಕಾವ್ಯಗಳು ಲಭ್ಯವಾಗಿದ್ದು, ಆ ಲಿಪಿಯನ್ನೇ ತುಳು ಲಿಪಿ ಎಂದು ಈಗ ಹೇಳಲಾಗುತ್ತಿದೆ.