ದ್ರಾವಿಡ ಅಧ್ಯಯನ ಎಂಬುದಾಗಿ ಅಧ್ಯಯನ ಕ್ಷೇತ್ರವೊಂದನ್ನು ಪರಿಕಲ್ಪಿಸುವಾಗ ಅದರ ಬಗೆಗೆ ಈವರೆಗೆ ನಡೆದಿರುವ ಮುಖ್ಯ ವಾಗ್ವಾದಗಳನ್ನು ಗಮನಿಸುವುದು ಅನಿವಾರ್ಯವಾಗುತ್ತದೆ. ಹಾಗದುದರಿಂದ ಪ್ರಸ್ತುತ ಲೇಖನದಲ್ಲಿ ಇಂತಹ ಅಧ್ಯಯನ ಕಕ್ಷೆಯ ಬಗೆಗೆ ತಾತ್ವಿಕವಾದ ಚರ್ಚೆಯೊಂದರ ವಿವರವನ್ನು ಮಂಡಿಸಬೇಕಾಗಿದೆ. ಈ ಚರ್ಚೆಯು ದ್ರಾವಿಡ ಅಧ್ಯಯನದಂತಹ ಅಧ್ಯಯನಗಳ ಮೂಲಪಾಠಗಳನ್ನು (basic concepts) – ಸಂಕಲಿಸುವುದರೊಂದಿಗೆ ಮುಂದಿನ ಚರ್ಚೆಗಳು ನಡೆಯಬೇಕಾದ ಗೊತ್ತು ಗುರಿಗಳನ್ನೂ ನಿರ್ಧರಿಸಬಲ್ಲುದು ಎಂದು ತಿಳಿಯಲಾಗಿದೆ. ಅಂತೆಯೇ ದ್ರಾವಿಡ (Dravidian) ಡೆಕ್ಕನ್ (Deccan) ದಕ್ಷಿಣ ಭಾರತ (South India) ಪರಿಕಲ್ಪನೆಗಳನ್ನು ಕ್ರಮಶಃ ಇಲ್ಲಿ ವಿವರಿಸಲಾಗಿದೆ.

ದ್ರಾವಿಡ (Dravidion) : ಒಂದು ಶತಮಾನಕ್ಕಿಂತಲೂ ಹಳೆಯದಾದ ಈ ಚರ್ಚೆಯಲ್ಲಿ ಭಾಷಾಶಾಸ್ತ್ರ, ಮಾನವಶಾಸ್ತ್ರ, ಮತ್ತು ಸಾಹಿತ್ಯ ಅಧ್ಯಯನಗಳ ನೆಲೆಯಿಂದ ಬೇರೆ ಬೇರೆ ಸಿದ್ಧಾಂತಗಳು ಮಂಡನೆಯಾಗಿವೆಯಾದರೂ ಈವರೆಗೆ ಸರ್ವಸಮ್ಮತವಾದ ನಿರ್ಣಯವೊಂದಕ್ಕೆ ಬರಲಾಗಿಲ್ಲವೆಂಬುದೇ ಗಮನಾರ್ಹವಾದ ಅಂಶವಾಗಿದೆ. ದ್ರಾವಿಡ ಪದದ ಬಗೆಗೆ ಭಾಷಾಶಾಸ್ತ್ರೀಯ ನೆಲೆಯಲ್ಲಿ ಸೇಡಿಯಾಪು ಅವರು ಆ ಬಗೆಗೆ ಶಬ್ದಶಾಸ್ತ್ರೀಯ ನೆಲೆಯಲ್ಲಿ ಒಂದು ತರ್ಕಬದ್ಧವಾದ ನಿರ್ಣಯಕ್ಕೆ ಬಂದಿದ್ದಾರೆ. ಇಂತಹ ಯಾವತ್ತೂ ಚರ್ಚೆಗಳಲ್ಲಿ ಅಂತಿಮ ನಿರ್ಣಯವೆಂಬುದೇ ಒಂದು ಸಮಸ್ಯೆ ಆಗುವುದರಿಂದ ಬಹುಮಟ್ಟಿಗೆ ಒಪ್ಪಿತವಾದ ನೆಲೆಗಟ್ಟೊಂದನ್ನು ತಾತ್ಕಾಲಿಕವೆಂಬಂತೆ ಒಪ್ಪಿಕೊಳ್ಳುವುದೇ ಮುಂದಿನ ಚರ್ಚೆಯ ಆರಂಭಕ್ಕೆ ನಾಂದಿಯಾಗಬಹುದು. ಹಾಗಾದುದರಿಂದ ದ್ರಾವಿಡ ಪರಿಕಲ್ಪನೆಯ ಚರ್ಚೆಯ ಸಾರಾಂಶಗಳನ್ನಷ್ಟೇ ಇಲ್ಲಿ ಮಂಡಿಸಿ ಮುಂದುವರಿಯ ಬಹುದಾಗಿದೆ.

ದ್ರಾವಿಡ ಎಂಬ ಪದವನ್ನು ವ್ಯಾಪಕವಾಗಿ ‘ತಮಿಳ’ ಪದಕ್ಕೆ ಪರ್ಯಾಯವಾಗಿ ಬಳಸಲಾಗಿದೆ. ಹಾಗೆ ಪ್ರಯೋಗಿಸುವಾಗ ಅದರ ಮೂಲ ಮತ್ತು ಅರ್ಥಗಳಿಗೆ ಗಮನ ಕೊಡಲಾಗಿದೆ. ಸಂಸ್ಕೃತ ವಿದ್ವಾಂಸರ ಪ್ರಕಾರ ದ್ರಾವಿಡ ಎಂಬುದು ದಕ್ಷಿಣ ಭಾರತದ ಒಂದು ಭೂಭಾಗವೇ ಆಗಿದೆ. ಅದು ಭಾರತದ ಪೂರ್ವಕರಾವಳಿಯ ತಿರುಪತಿಯಿಂದ ಮೊದಲ್ಗೊಂಡು ಕನ್ಯಾಕುಮಾರಿ ಭೂಶಿರ ಮತ್ತು ಅರವತ್ತು ಕಿ.ಮೀ ವ್ಯಾಪ್ತಿಯ ಒಳನಾಡಿಗೆ ಸೇರಿದ ಭೂಪ್ರದೇಶವಾಗಿದೆ. ಹಾಗೆಯೇ ಕೆಲವೊಮ್ಮೆ ದ್ರಾವಿಡ ಪದವು ಹಗುರವಾಗಿ ಇಡೀ ದಕ್ಷಿಣ ಭಾರತವನ್ನೇ ಒಳಗೊಂಡಂತೆ ಪ್ರಯೋಗವಾಗಿರುವುದೂ ಇದೆ. ಪ್ರೊ.ವಿಲ್ಸನ್ ಮತ್ತು ಸರ್ ಮೋನಿಯಾರ್ ವಿಲಿಯಮ್ಸ್ ಅವರು ‘ ದ್ರಾವಿಡ’ ಪದವು ಮೂರು ಅರ್ಥಗಳಲ್ಲಿ ಪ್ರಯೋಗವಾಗಿರುವುದಾಗಿ ವಿವರಿಸುತ್ತಾರೆ. (೧) ತಮಿಳು ಭಾಷೆ ರೂಢಿಯಲ್ಲಿರುವ ಭೂಪ್ರದೇಶ ಎಂಬ ಅರ್ಥ (೨) ತಮಿಳು ಭಾಷಿಗರು ಎನ್ನುವ ಅರ್ಥ (೩) ಪಂಚ ದ್ರಾವಿಡರು ಎಂದು ಕರೆಯಲಾಗುವ ಬ್ರಾಹ್ಮಣರು ಎನ್ನುವ ಅರ್ಥ. ಮೊದಲನೆಯ ಅರ್ಥದ ಬಗೆಗೆ ಪಾಶ್ಚಾತ್ಯ ಮತ್ತು ಪೌರ್ಯಾತ ವಿದ್ವಾಂಸರಲ್ಲಿ ಬಹುಮಟ್ಟಿಗೆ ಒಮ್ಮತವಿದೆ. (ಆದರೆ, ಸೇಡಿಯಾಪು ಅವರಿಗೆ ಇದರ ಬಗೆಗೆ ಭಿನ್ನಭಿಪ್ರಾಯಗಳಿವೆ). ಆದರೆ ಎರಡನೆಯ ಅಭಿಪ್ರಾಯದ ಬಗೆಗೆ, ಈ ಭೂಭಾಗದಲ್ಲಿ ನೆಲೆಸಿರುವ ಎಲ್ಲ ಜನಗಳಿಗೋ ಅಥವ ಕೇವಲ ನಿರ್ದಿಷ್ಟವಾದ ಸಮುದಾಯಕ್ಕೋ ಎಂಬುದರ ಬಗೆಗೆ ಅನುಮಾನಗಳಿವೆ. (ಏಕೆಂದರೆ ತಮಿಳು ಭಾಷಿಕರಾದ, ಬ್ರಾಹ್ಮಣೇತರರು ತಮ್ಮನ್ನು ತಮಿಳರೆಂದು ಕೆರೆದುಕೊಳ್ಳುವರಾದರೂ ದ್ರಾವಿಡರೆಂದು ಕರೆಯುವುದನ್ನು ಇಷ್ಟಪಡುವುದಿಲ್ಲ.) ಹಾಗೆಯೇ ತಮಿಳು ಬ್ರಾಹ್ಮಣರು ತಮ್ಮನ್ನು ಮಹಾಜನಗಳೆಂದು ಕರೆದುಕೊಳ್ಳುವರಾದರೂ ಭಾರತದ ಇತರ ಬ್ರಾಹ್ಮಣರಿಗೆ ಅವರು ದ್ರಾವಿಡರೆಂದೇ ಪರಿಚಿತರಾಗಿದ್ದಾರೆ. ಬಾಂಬೆ ಪ್ರೆಸಿಡೆನ್ಸಿಯಲ್ಲಿ ನಿವಾಸಿತರಾದ ತಮಿಳು ಬ್ರಾಹ್ಮಣರನ್ನು ದ್ರಾವಿಡರೆಂದು ಹೇಳಲಾಗುತ್ತದೆಯಲ್ಲದೆ ಅವರ ಹೆಸರಿನ ಮುಂದೆ ಅದು ಉಪನಾಮವಾಗಿ ಸೇರ್ಪಡೆಯೂ ಆಗುತ್ತದೆ. ಆದರೆ ತಮಿಳು ಭಾಷಿಗರಾದ ಬ್ರಾಹ್ಮಣೇತರರನ್ನು ಜಾಗೆ ಕರೆಯುವ ಪರಿಪಾಠವಿಲ್ಲ. ಅಂತೆಯೇ ಔತ್ತರೇಯ ತೆಲುಗು ಭಾಷಿಕರು ತಮಿಳು ಬ್ರಾಹ್ಮಣರನ್ನು ‘ದ್ರಾವಿಡಲು’ ಎಂದು ತಮಿಳು ಬ್ರಾಹ್ಮಣೇತರರನ್ನು ಶೂದ್ರಲು ಅಥವಾ ‘ದಕ್ಷಿಣಾದಿ ಶೂದ್ರಲು’ ಎಂದೂ ಕರೆಯಲಾಗುತ್ತದೆ. ಹಾಗೆಯೇ ಸೇಡಿಯಾಪು ವಿವರಿಸುವ ಪಂಚದ್ರಾವಿಡ, ಪಂಚಗೌಡ ಇತ್ಯಾದಿ ವಾಗ್ರೂಢಿಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಭಾರತೀಯ ಸಂಸ್ಕೃತಿ, ಭಾಷೆ, ಧರ್ಮ ಮತ್ತು ಇತಿಹಾಸದ ಮುಖ್ಯ ಪರಿಕಲ್ಪನೆಗಳಿಗೆಲ್ಲ ಇಂದಿನ ಆಧುನಿಕ ಭಾರತೀಯ ಪಂಡಿತರು, ಆಕ್ಷೇಪಿಸುವ ಆದರೂ ಘನವಿದ್ವಾಂಸರೆಂದು ಒಪ್ಪಿಕೊಳ್ಳುವ ಇಬ್ಬರು ಪಾಶ್ಚಾತ್ಯ ಪಂಡಿತರೇ ಈ ಪರಿಕಲ್ಪನೆಯನ್ನು ಅಧ್ಯಯನ ಕ್ಷೇತ್ರದಲ್ಲಿ ಪ್ರಚುರಗೊಳಿಸಿದವರಾಗಿದ್ದಾರೆ. ಮೊದಲನೆಯದಾಗಿ ಸಂಸ್ಕೃತದ ಮಹಾವಿದ್ವಾಂಸನಾದ ಫೆಡ್ರಿಕ್ ಮ್ಯಾಕ್ಸ್‌ಮುಲ್ಲರ್ ಮೊತ್ತ ಮೊದಲ ಬಾರಿಗೆ ಹತ್ತೊಂಬತ್ತನೆಯ ಶತಮಾನದ ದಶಕದಲ್ಲಿ ದ್ರಾವಿಡ ಭಾಷೆಗಳನ್ನು ಪ್ರತ್ಯೇಕ ಭಾಷಾವರ್ಗಕ್ಕೆ ಸೇರಿದ ಭಾಷೆಗಳೆಂದು ವಿಭಾಗಿಸಿದೆ. ಅಲ್ಲಿಂದ ಮುಂದೆ ‘ದ್ರಾವಿಡ’ ಎಂಬುದು ಒಂದು ಭಾಷಿಕ ಪರಿಕಲ್ಪನೆಯಾಗಿ ಭಾರತದಲ್ಲಿ ನಿರ್ದಿಷ್ಟವಾದ ಒಂದು ‘ಭಾಷಾಪರಿವಾರ’ ಎಂಬರ್ಥದಲ್ಲಿ ಪ್ರಚರಣೆಗೊಂಡಿತು ಹಾಗೆಯೇ ೧೮೫೬ ರಲ್ಲಿ ಬಿಷಪ್ ರಾರ್ಬಟ್ ಕಾಲ್ಡ್‌ವೆಲ್ಲನ ಪಂಡಿತ ಕೃತಿಯಾದ ‘A comparativa Grammar of Dravidian Or South Indian family of Languages’ ಎಂಬ ಗ್ರಂಥ ಪ್ರಕಟವಾಯಿತು. ಇದು ದ್ರಾವಿಡ ಭಾಷೆಗಳನ್ನು, ಭಾರತೀಯ ಮತ್ತು ಜಗತ್ತಿನ ಭಾಷಾಪಟದಲ್ಲಿ (language – mape) ಶಾಶ್ವತವಾಗಿ ನೆಲೆಗೊಳಿಸಿತಲ್ಲದೆ. ದ್ರಾವಿಡ ಭಾಷೆಗಳ ಗುಣಲಕ್ಷಣಗಳನ್ನು ವಿವರಿಸಿತು (ನೋಡಿ : S.K. Chatterji, Dravidian.ಪುಟ ೭) ಈ ಅಂಶವನ್ನು ಎರಡು ಕಾರಣಗಳಿಗೆ ಉಲ್ಲೇಖಿಸಲಾಗಿದೆ. ಮೊದಲನೆಯದಾಗಿ ಸೇಡಿಯಾಪು ಅವರು ಹೇಳುವಂತೆ ‘ದ್ರಾವಿಡ’ ಭಾಷೆಗಳನ್ನು ಮೊದಲ ಬಾರಿಗೆ ವಿಭಾಗಿಸಿದವನು ಕಾಲ್ಡ್‌ವೆಲ್ಲ ಅಲ್ಲ, ಮ್ಯಾಕ್ಸ್‌ಮುಲ್ಲರ್ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಎರಡನೆಯದಾಗಿ ಕಾಲ್ಡ್‌ವೆಲ್ ಮಹಾಶಯನು ದ್ರಾವಿಡ ಪರಿಕಲ್ಪನೆಯ ಅಸ್ತಿಭಾರವನ್ನು ಗಟ್ಟಿಗೊಳಿಸಿದವರು ಎಂಬುದಾಗಿ ಒಂದು ಚಿಕ್ಕ ತಿದ್ದುಪಡಿಯೊಂದಿಗೆ ಅವರನ್ನು ಒಪ್ಪಬಹುದು ಎಂದೂ ಇದರಿಂದ ಮನವರಿಕೆಯಾಗುತ್ತದೆ. ಇನ್ನು ನಾವು ದ್ರಾವಿಡರ ಮೂಲದ ಬಗೆಗಿನ ಮುಖ್ಯವಾದ ಸಿದ್ದಾಂತಗಳನ್ನು ಗಮನಿಸಬಹುದಾಗಿದೆ.

ಮೂಲ ಆರ್ಯ ಸಿದ್ಧಾಂತ (The Early Aryan theory) : ಈ ಸಿದ್ಧಾಂತವು ದ್ರಾವಿಡರು ದಕ್ಷಿಣ ಭಾರತದ ಮೂಲನಿವಾಸಿಗಳಲ್ಲವೆಂಬುದಾಗಿ ನಂಬುತ್ತದೆ. ಅಲ್ಲದೆ, ಈ ಸಿದ್ಧಾಂತದ ಪ್ರಕಾರ, ಇವರು ಭಾರತಕ್ಕೆ ಪ್ರಥಮವಾಗಿ ವಲಸೆ ಬಂದ ಆರ್ಯರ ಪೂರ್ವಜರು ಆಗಿರಬಹುದೆಂದು ತರ್ಕಿಸಲಾಗುತ್ತದೆ. ಸಾಮಾನ್ಯವಾಗಿ ಈ ಸಿದ್ಧಾಂತವನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ರಾಬರ್ಟ್ ಕಾಲ್ಡ್‌ವೆಲ್ಲನು ತನ್ನ ಗ್ರಂಥದಲ್ಲಿ ಇಂಡೋಯುರೋಪಿಯನ್ ಭಾಷಾಪರಿವಾರ ಮತ್ತು ತಮಿಳು ಭಾಷೆಗಳ ನಡುವೆ ಕೆಲವೊಂದು ಸಾದೃಶ್ಯತೆಯನ್ನು ಗುರುತಿಸುತ್ತಾನಾದರೂ ಆ ಎರಡು ಭಾಷಾಪರಿವಾರದ ವ್ಯಾಕರಣ ಮತ್ತು ಶಬ್ದಸಂಪತ್ತಿನಲ್ಲಿ ಗಮನಾರ್ಹವಾದ ವ್ಯತ್ಯಾಸವಿರುವುದನ್ನು ಗಮನಿಸುತ್ತಾನೆ. ಅದು ಮಾತ್ರವಲ್ಲದೆ ಪ್ರಾಗೈತಿಹಾಸಿಕವಾದ ಕೆಲವೊಂದು ಸಾಕ್ಷ್ಯಾಧಾರಗಳನ್ನು (ಮುಖ್ಯವಾಗಿ ಭಾರತ ಮತ್ತು ಇಂಗ್ಲೆಂಡಿನಲ್ಲಿ ದೊರೆತ ಬೃಹತ್ ಶಿಲಾಯುಗದ ಗೋರಿಗಳು) ಆರ್ಯರಿಗೆ ಆರೋಪಿಸುತ್ತ ಯುರೋಪಿನ ಮೂಲನಿವಾಸಿಗಳಾದ ಸೆಲ್ಟ್ (calts) ಕುಲಜರಿಗೂ ಇವರಿಗೂ ಸಂಬಂಧ ಕಲ್ಪಿಸುವ ಚರ್ಚೆಯೂ ನಡೆದಿದೆ. ಆದರೆ ಸ್ವತಃ ತಮಿಳರೇ ಆರ್ಯರನ್ನು ಮ್ಲೇಂಛರೆಂದು ಪರಕೀಯರೆಂದೂ ತಿರಸ್ಕರಿಸುತ್ತಾರೆಂದ ಮೇಲೆ ಈ ಸಿದ್ಧಾಂತದ ಬಗೆಗೆ ವಿದ್ವತ್‌ವಲಯದಲ್ಲಿ ಅಂತಹ ಮಾನ್ಯತೆ ಪಡೆಯದಿರುವುದು ಸಹಜವೇ ಆದುದಾಗಿದೆ.

ಲೆಮುರಿಯನ್ ಅಥವ ಸೆಲೆಟರ್ ಸಿದ್ಧಾಂತ (The Lemurian or S.lateris is theory) ಈ ಸಿದ್ಧಾಂತದ ಪ್ರಕಾರ ದ್ರಾವಿಡರ ಮೂಲ ನೆಲೆಯು ಇದೀಗ ಹಿಂದೂ ಮಹಾಸಾಗರದಲ್ಲೆಲ್ಲೋ ಲಿಪ್ತವಾದ ಹಿಮಾಲಯ ಪರ್ವತಗಳು ರೂಪುಗೊಳ್ಳುವ ಮುನ್ನಿನ ಲೆಮುರಿಯ (Lemuria) ಖಂಡವೆಂದು ಭಾವಿಸಲಾಗಿದೆ. ಈ ಭೂಖಂಡವು ಪಶ್ಚಿಮದಲ್ಲಿ ಮಡಗಾಸ್ಕರ್‌ನಿಂದ ಮೊದಲ್ಗೊಂಡು, ಪೂರ್ವಕ್ಕೆ ಮಲಯ್ ಆರ್ಶಿಪಲಗೋವರೆಗೆ (Archipelago) ಅಂದರೆ, ಒಂದು ಕಡೆಯಲ್ಲಿ ದಕ್ಷಿಣ ಭಾರತ ಮತ್ತು ಆಫ್ರಿಕಾ ಹಾಗೂ ಇನ್ನೊಂದು ಕಡೆಯಲ್ಲಿ ಆಸ್ಟೇಲಿಯಾವನ್ನು ಪರಸ್ಪರ ಸೇರಿಸುವ ಭೂಖಂಡವಾಗಿತ್ತು ಎಂದು ನಂಬಲಾಗಿದೆ. ಇದು ಹೌದಾದರೆ ದ್ರಾವಿಡರು ಈ ಭೂಖಂಡವು ಸಮುದ್ರದೊಳಗೆ ಲೀನವಾಗುವ ಮುನ್ನ ದಕ್ಷಿಣದ ಗುಂಟ ಭಾರತಕ್ಕೆ ಪ್ರವೇಶ ಮಾಡಿದ್ದಾರೆ ಎಂದೆನ್ನಬಹುದು ಇದಕ್ಕೆ ಆಧಾರವಾಗಿ ಈ ಕೆಳಗಿನತರ್ಕಗಳನ್ನು ಮಂಡಿಸಲಾಗಿದೆ.

ಕುಲಶಾಸ್ತ್ರ (Ethnology) : ಭಾರತದಲ್ಲಿ ಜಾತಿ ಮತ್ತು ಬುಡಕಟ್ಟುಗಳ ವಿಧಿ ನಿಷೇದಗಳು (to tems) ಹಾಗೆಯೇ ದಕ್ಷಿಣ ಭಾರತದ ಕಲ್ಲನ್ ಜನ ವರ್ಗದ ಸಂಪ್ರದಾಯ ಆಸ್ಟ್ರೇಲಿಯಾದ ಕೆಲವೊಂದು ಬುಡಕಟ್ಟು ಜನಗಳನ್ನು ಹೊರತು ಪಡಿಸಿ ಇನ್ನೆಲ್ಲಿಯೂ ಕಂಡುಬರುವುದಿಲ್ಲ. ಆರ್. ವಾಲ್ಲೇಸ್ (R. Wallace) ಅವರು ಹೇಳುವಂತೆ ಬೊರ್‌ನ್ಯೋ ಪ್ರದೇಶದ ಡ್ಯಾಕ್ ಜನಗಳ ಹಾಗೆ ಮರ ಹತ್ತುವ ಪರಿಪಾಠವೂ ಸಹ ಅನ್ನಾಮಲೆಯ್ ಪರ್ವತ ಪ್ರದೇಶದ ಕದರ್ ಬುಡಕಟ್ಟು ಜನಗಳಿಗೆ ಹೋಲಿಕೆಯಾಗುತ್ತದೆ. ಹಾಗೆಯೇ ನಮ್ಮ ಕದರ್ ಮತ್ತು ಮಲ – ವೇದನ್ ಜನಗಳಲ್ಲಿರುವಂತೆ ಪೂರ್ಣಪ್ರಮಾಣದಲ್ಲಿ ಇಲ್ಲವೇ ಕೆಲವೇ ಮಟ್ಟಿಗೆ ಬಾಚಿ ಹಲ್ಲುಗಳನ್ನು ಕಡಿಯುವುದೂ ಸಹ ಮಲಯ್ ದ್ವೀಪಕಲ್ಪದ ಜಕೂನ್ (Jakuns) ಬುಡಕಟ್ಟುಗಳಲ್ಲಿ ಕಂಡುಬರುತ್ತದೆ.

ಶಬ್ದಶಾಸ್ತ್ರ (Philology) : ಬಿಷಪ್ ಕಾಲ್ಡ್‌ವೆಲ್ ಮತ್ತು ಹರ್ಬಟ್ ರಿಸ್ಲೆ ಅವರು ಗುರುತಿಸುವ ಭಾಷಿಕ ಹೋಲಿಕೆಗಳು ಮುಖ್ಯವಾಗಿ ಮುಂಡಾ ಭಾಷೆಯಲ್ಲಿರುವ ಸಂಖ್ಯಾವಾಚಿಗಳು ಮತ್ತು ಆಸ್ಟೇಲಿಯಾದ ಕೆಲವೊಂದು ಭಾಷೆಗಳ ಸಂಖ್ಯಾವಾಚಿಗಳ ನಡುವೆ ಕಾಣಿಸುವ ಸಾಮ್ಯತೆಗಳನ್ನು ಇಲ್ಲಿ ಪರಿಗಣಿಸಲಾಗಿದೆ. ಆದರೆ, ಮುಂಡಾ ಭಾಷೆಯು ಪ್ರತ್ಯೇಕವಾದ ದ್ರಾವಿಡ ಭಾಷೆಯಾಗಿರುತ್ತಾ ಸಂಖ್ಯಾವಾಚಿಗಳಲ್ಲಿ ಮಾತ್ರವೆ ಕಂಡುಬರುವ ಅಲ್ಪಪ್ರಮಾಣದ ಸಾದೃಶ್ಯತೆಯು ಎಷ್ಟರ ಮಟ್ಟಿಗೆ ನಂಬಲರ್ಹವಾದುದು ಎನ್ನುವ ಬಗೆಗೆ ಭಿನ್ನಾಭಿಪ್ರಾಯಗಳಿವೆ.

ಭೂಗೋಳ ಶಾಸ್ತ್ರ (Geography): ಇದನ್ನು ಪ್ರಾಸಂಗಿಕವಾಗಿ ಈಗಾಗಲೇ ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಾಚೀನ ತಮಿಳ ಸಾಹಿತ್ಯದಲ್ಲಿ “ಭಯಂಕರವಾದ ಸಮುದ್ರವು ಪಹ್ರುಲಿ ನದಿಯನ್ನು ನಂಗಿನೊಣೆಯಿತು. ಅದು ಕುಮಾರಿನ್ ಶಿಖರ ಮತ್ತು ಅದರ ಪರ್ವತಾವಳಿಗಳನ್ನು ಮುಳುಗಿಸಿತು” ಎಂಬ ಉಲ್ಲೇಖವು ಕಂಡುಬರುತ್ತದೆ. ಪ್ರಾಚೀನ ತಮಿಳಿನಲ್ಲಿ ಕನ್ಯಾಕುಮಾರಿ ಭೂಶಿರವನ್ನು ನದಿ, ಪರ್ವತಾವಳಿ ಅಥವಾ ಸಮುದ್ರ ಎಂಬುದಾಗಿ ಕರೆಯಲಾಗಿದೆ. ಹಾಗೆಯೇ ಪ್ರಾಚೀನ ತಮಿಳು ಜಾವ ದ್ವೀಪಕಲ್ಪಗಳು ಅಂದರೆ ಸಾಮನ್ಯಾರ್ಥದಲ್ಲಿ ಪೌರ್ಯಾತ ಆರ್ಶಿಪೆಲೆಗೋ ಪ್ರದೇಶಗಳ ನಿವಾಸಿತರಾಗಿದ್ದ ಆ ಕಾಲದಲ್ಲಿ ಅವರಿಗೆ ಆ ಎಲ್ಲ ಭೂಪ್ರದೇಶವು ಕನ್ಯಾಕುಮಾರಿ ಭೂಶಿರದ ಮುಂದುವರಿದ ಭಾಗವೆಂಬುದರ ಪ್ರಜ್ಞೆಯಿತ್ತು ಎಂಬುದಾಗಿ ಇದರಿಂದ ತಿಳಿದು ಬರುತ್ತದೆ. ಅದರೆ, ಇಲ್ಲಿ ಉಲ್ಲೇಖಿತವಾಗಿರುವ, ಸಮುದ್ರದಾಳದಲ್ಲಿ ಮುಳುಗಿರುವ ಭೂಖಂಡದ ಬಗೆಗೆ ವಿದ್ವಾಂಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಹಂಟರನ ಸಿದ್ಧಾಂತ : ಆರ್ಯೇತರ ಸಿದ್ಧಾಂತವನ್ನು ಪ್ರತಿಪಾದಿಸುವ ಡಬ್ಲ್ಯೂ. ಡಬ್ಲ್ಯೂ. ಹಂಟರ‍್ನ ಪ್ರಕಾರ, ದ್ರಾವಿಡರಲ್ಲಿ ಕೊಲರಿಯನ್ನರು ಮತ್ತು ಮೂಲ ದ್ರಾವಿಡರು ಎಂದು ಎರಡು ಕವಲುಗಳಿವೆ. ಕೊಲರಿಯನ್ನರು ಈಶಾನ್ಯ ಭಾಗದಿಂದ ಭಾರತಕ್ಕೆ ವಲಸೆ ಬಂದವರಾಗಿ ವಿಂದ್ಯಾಪ್ರಸ್ಥ ಭೂಮಿಯ ಉತ್ತರ ಭಾಗದಲ್ಲಿ ನೆಲೆನಿಂತರು. ಹೀಗೆ ನೆಲೆನಿಂತ ದ್ರಾವಿಡರು ಮುಂದೆ ವಿವಿಧ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಲೇ ತಮ್ಮ ತಮ್ಮಲ್ಲಿಯೇ ಒಳಪಂಗಡಗಳಾಗಿ ವಿಭಜನೆ ಗೊಂಡರು. ಅದರಲ್ಲಿ ದ್ರಾವಿಡರ ಮುಖ್ಯ ಪಂಗಡದಿಂದ ಬೇರ್ಪಟ್ಟು ವಾಯುವ್ಯಾಭಿಮುಖವಾಗಿ ಹೊರಟ ಒಂದು ಶಾಖೆಯು ಪಂಜಾಬಿನ ಮೂಲಕ ದಕ್ಷಿಣ ಭಾರತವನ್ನು ಪ್ರವೇಶಿಸಿತು. ಆದರೆ ಈ ಸಿದ್ಧಾಂತವನ್ನು ಸಮರ್ಥಿಸುವುದಕ್ಕೆ ಯಾವುದೇ ರೀತಿಯ ಶಬ್ದಶಾಸ್ತ್ರೀಯ ಸಮರ್ಥನೆಯಾಗಲೀ, ಮನುಕುಲಶಾಸ್ತ್ರೀಯ ಸಮರ್ಥನೆಯಾಗಲೀ ಇಲ್ಲ.

ಮಂಗೋಲಿಯನ್ ಸಿದ್ಧಾಂತ (The Mongolian theory) : ಈ ಸಿದ್ಧಾಂತದ ಪ್ರಕಾರ ಮಧ್ಯ ಏಷ್ಯಾದ ಪ್ರಸ್ಥಭೂಮಿಯಲೆಲ್ಲೋ ಮಂಗೋಲಿಯನ್ನರ ಜತೆ ಜತೆಯಾಗಿಯೇ ವಾಸಿಸುತ್ತಿದ್ದ ದ್ರಾವಿಡರು, ಈಶಾನ್ಯದ ಕಡೆಯಿಂದ ಅಂದರೆ ಟಿಬೆಟ್ ಅಥವಾ ನೇಪಾಳದ ಕಡೆಯಿಂದ ಭಾರತವನ್ನು ಪ್ರವೇಶಿಸಿದರು. ಈ ಸಿದ್ಧಾಂತದ ಪ್ರಕಾರ ದ್ರಾವಿಡರು ಮಂಗೋಲಿಯನ್ ಮೂಲದವರಾಗಿದ್ದಾರೆ.

ಈಗ ವಿವರಿಸಿದ ಸಿದ್ಧಾಂತಗಲಿಗೆಲ್ಲ ಒಂದಲ್ಲೊಂದು ಪ್ರಬಲವಾದ ಆಕ್ಷೇಪವಿರುವುದಾಗಿ ಯಾವ ಸಿದ್ಧಾಂತವೂ ಅಪವಾದ ರಹಿತವಾಗಿಲ್ಲ. ಅಷ್ಟು ಮಾತ್ರವಲ್ಲ ಈ ಸಿದ್ಧಾಂತಗಳಲ್ಲೆಲ್ಲ ಆಧಾರಗಳಿಗಿಂತ ಊಹೆಯೇ ಅಧಿಕವಾಗಿರುವುದರಿಂದ ಅವುಗಳಿಗೆ ವಿದ್ವತ್ ಮನ್ನಣೆಯೂ ಸಿಕ್ಕಿಲ್ಲ. ಈ ಬಗೆಗಿನ ಚರ್ಚೆಯನ್ನು ಮುಗಿತಾಯಗೊಳಿಸುವುದಕ್ಕೆ ಮುನ್ನ ತತ್ಸಂಬಂಧಿಯಾದ ಇನ್ನೊಂದು ಸಿದ್ಧಾಂತದ ಬಗೆಗೆ ಸಂಕ್ಷಿಪ್ತವಾಗಿ ವಿವರಿಸಬಹುದು ; ಪಶ್ಚಿಮ ಏಷ್ಯಾದ ಕಡೆಯಿಂದ ಸಮುದ್ರ ಮಾರ್ಗವಾಗಿ ಇಲ್ಲವೇ ಭೂಮಾರ್ಗವಾಗಿ ವಲಸೆ ಬಂದ ಅಸಂಖ್ಯಾತ ಜನಸಮುದಾಯ ಪಶ್ಚಿಮ ಘಟ್ಟಗಳ ಮೂಲಕ ದಕ್ಷಿಣ ಭಾರತಕ್ಕೆ ಬಂದುವು. ಈ ಜನ ಸಮುದಾಯಗಳು ಲೆಮುರಿಯನ್ ಬುಡಕಟ್ಟುಗಳೊಂದಿಗೆ ಬೆರೆತು ಹೋದವು. ಆಗ ಇನ್ನೂ ದಕ್ಷಿಣ ಭಾರತಕ್ಕೆ ಆರ್ಯರ ಆಗಮನವಾಗಿರಲಿಲ್ಲ. ಹೀಗೆ ವಲಸೆ ಬಂದ ಜನಸಮುದಾಯಗಳ ಮೂಲ ಆವಾಸ ಸ್ಥಾನವು ಅಸ್ಸಿರಿಯಾ ಅಥವಾ ಏಷ್ಯಾ ಮೈನರ್ ಆದುದಾಗಿ, ಅವರು ಭಾರತಕ್ಕೆ ವಲಸೆ ಬರುವ ಪೂರ್ವದಲ್ಲಿ ಪ್ರಾಚೀನ ಅಕಾಡಿಯನ್ನರು ಮತ್ತು ಇತರ ತುರೇನಿಯ ಜನಾಂಗಗಳ ಒಡನಾಡಿಗಳಾಗಿರುಬೇಕು.

ಈಗಾಗಲೇ ಹೇಳಿರುವಂತೆ ಪ್ರಸ್ತುತ ಲೇಖನದಲ್ಲಿ ದ್ರಾವಿಡರ ಬಗೆಗೆ ಪ್ರತ್ಯೇಕವಾದ ಚರ್ಚೆಯನ್ನು ಬೆಳೆಸುವ ಉದ್ದೇಶವಿಲ್ಲ. ಇಂತಹುದೇ ಇನ್ನೊಂದು ಚರ್ಚೆಯಾದ ‘ಡೆಕ್ಕನ್‌ಗೆ ಸಂಬಂಧಿಸಿದಂತೆ ಮುಂದುವರಿಯಲು ಇದು ಪ್ರವೇಶಿಕೆ ಮಾತ್ರ.

‘ಡೆಕ್ಕನ್’ ಅಥವಾ ‘ದಖ್ಖನ್’ ಎಂಬುದಾಗಿ ಇಂಗ್ಲೀಷ್ ಬರವಣಿಗೆಗಳಲ್ಲಿ ಪ್ರಚಲಿತವಿರುವ ಈ ಪದವು ಸಂಸ್ಕೃತದ ದಕ್ಷಿಣ (ಹಾಗೆಯೇ ಕನ್ನಡದಲ್ಲಿಯೂ ಪ್ರಯೋಗಗೊಳ್ಳುವ) ಪದದ ಅಪಭ್ರಂಶ ರೂಪವೇ ಆಗಿದೆ. ಹೀಗೆ ‘ದಕ್ಷಿಣ’ ವೆಂದು ನಿರ್ದೇಶನಗೊಳ್ಳುವ ಈ ಪದವು ಭಾರತದ ದಕ್ಷಿಣಕ್ಕೆ ಎಂದರೆ ನರ್ಮದೆಯ ದಕ್ಷಿಣಕ್ಕೆ ಇರುವ ಭೂಪ್ರದೇಶವನ್ನು ಒಳಗೊಳ್ಳುತ್ತದೆ.. ಇನ್ನೂ ಖಚಿತವಾಗಿ ಹೇಳುವುದಾದರೆ ವಿಂದ್ಯಾ ಪರ್ವತಾವಳಿಗಳ ದಕ್ಷಿಣದ ಭೂಪ್ರದೇಶವನ್ನು ಒಳಗೊಳ್ಳುವುದಾಗಿ ಅದು ಇಂಗ್ಲಿಷ್‌ನ ‘peninsual’ ಎಂಬುದಕ್ಕೆ ಪರ್ಯಾಯವಾದ ಪದವೆಂದು ವಾಗ್ರೂಢಿಯಾಗಿದೆ. ಆದರೆ ‘ಡೆಕ್ಕನ್’ ಪದವು ಈಗ ಹೇಳಿದಂತೆ ‘ದಕ್ಷಿಣ’ ಪದದಿಂದ ನಿಷ್ಪತ್ತಿಯಾದುದಾಗಿರದೆ ‘ದಂಡಕ’ ಪದದಿಂದ (ರಾಮಾಯಣದಲ್ಲಿ ಉಲ್ಲೇಖಿತವಾದ ದಂಡಕಾರಣ್ಯ) ನಿಷ್ಪತ್ತಿಯಾದುದೆಂದೂ ಹೇಳಲಾಗುತ್ತಿದೆ. ಆದರೆ ಡೆಕ್ಕನ್ ಪದವು ಪ್ರಾಕೃತದ ದಖ್ಖಿನ್, ಆ ಮೂಲಕ ಸಂಸ್ಕೃತದ ‘ದಕ್ಷಿಣ’ ಪದದಿಂದ ಜನ್ಮವಾದ ಪದವೇ ಆಗಿದೆ, ಎಂಬುದರ ಬಗೆಗೆ ವಿದ್ವಾಂಸರಲ್ಲಿ ಒಂದು ಒಮ್ಮತವಿದೆ. ಅಥವ ‘ಡೆಕ್ಕನ್’ ಪದವನ್ನು ‘ದಂಡಕ’ ದಿಂದ ಸಾಧಿಸುವುದಕ್ಕಿಂತಲೂ ‘ದಕ್ಷಿಣ’ ಪದದಿಂದ ಸಾಧಿಸುವುದಕ್ಕೆ ಹೆಚ್ಚಿನ ಆಧಾರಗಳಿವೆ.

ವೈದಿಕ ಗ್ರಂಥಗಳು ಮತ್ತು ಪುರಾಣ ಪರಂಪರೆಯಲ್ಲಿ ದಕ್ಷಿಣ ಅಥವ ಡೆಕ್ಕನ್ : ಪ್ರಾಚೀನ ಸಂಸ್ಕೃತ ಆಕರಗಳಲ್ಲಿ ದಕ್ಷಿಣ (ಡೆಕ್ಕನ್) ಭೂಭಾಗವನ್ನು ವಿಶಾಲಾರ್ಥದಲ್ಲಿ ನಿರ್ವಚಿಸಲಾಗಿದೆ. ‘ಋಗ್ವೇದ’ ದಲ್ಲಿ ‘ದಕ್ಷಿಣಪಥ’ದ ಉಲ್ಲೇಖವಿದೆ. ಋಗ್ವೇದದಲ್ಲಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಬುಡಕಟ್ಟುಗಳ, ನದಿಗಳ ಪರ್ವತಗಳ ಉಲ್ಲೇಖಗಳು ಉಕ್ತವಾಗಿಲ್ಲವಾದುದರಿಂದ, ಗೋದಾವರಿ ಮತ್ತು ಕೃಷ್ಣಾನದಿ ನಡುವಿನ ಭೂಭಾಗವನ್ನು ಸರ್ವ ಸಾಧಾರಣವಾಗಿ ಅಲ್ಲಿ ನಿರ್ದೇಶಿಸಿರುವಂತೆ ಕಂಡುಬರುತ್ತದೆ. ‘ಕಾಠಕ ಸಂಹಿತೆ’ಯಲ್ಲಿ ‘ಕುಂತಿ’ ಜನಗಳ ಬಗೆಗೆ ಉಲ್ಲೇಖವಿದ್ದು ಇವರನ್ನು ಚಂಬಲ್ ಕಣಿವೆಯ ಜನಸಮುದಾಯವೆಂದು ಭಾವಿಸಲಾಗಿದೆ. ಆದರೆ, ಇದಕ್ಕಿಂತ ಮುಂದೆ ದಕ್ಷಿಣಕ್ಕೆ ಹರಡಿರುವ ಭೂಭಾಗದ ಬಗೆಗೆ ಅಲ್ಲಿ ವಿವರಗಳು ಕಂಡುಬರುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ರೇವ ಅಥವ ನರ್ಮದೆಯ ಉಲ್ಲೇಖವಿರುವುದಾಗಿ ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. (ಉದಾ: ‘ರೇವೋತ್ತರಸ್ ಚಕ್ರ ಪಥವ ಸ್ಥಪತಿ’ ಮೊದಲಾದ ಪ್ರಯೋಗಗಳು) ಆದರೆ, ರೇವೋತ್ತರ ಎಂಬಲ್ಲಿ ‘ರೇವದಿಂದ ಉತ್ತರದ ನಿವಾಸಿ’ ಎಂಬರ್ಥ ವಿದೆಯೇ ಎನ್ನುವ ಬಗೆಗೆ ಅನುಮಾನಗಳು ಇವೆ. ‘ಗೋದಾವರಿ, ಕೃಷ್ಣ, ಮೊದಲಾದ ನದಿಗಳು ಅವುಗಳ ಉಪನದಿಗಳ ಬಗೆಗೆ ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖವಿಲ್ಲ.

ಕೌಷೀತಕಿ ಉಪನಿಷತ್ತಿನಲ್ಲಿ ಪ್ರಯೋಗವಾಗಿರುವ ‘ದಕ್ಷಿಣಾಪಥಃ’ ಎಂಬುದು ವಿಂದ್ಯಾವನ್ನು ನಿರ್ದೇಶಿಸುವುದೇ ಹೊರತು ಅದು ಸಹ್ಯಾದ್ರಿ ಅಥವಾ ಮಹೇಂದ್ರ ಪರ್ವತವನ್ನು ನಿರ್ದೇಶಿಸುವುದಲ್ಲ. ಪುರಾಣಗಳಲ್ಲಿ ವಿಂದ್ಯವು ನಿಷಾಧರ ವಾಸಸ್ಥಾನವೆಂಬುದಾಗಿ ಮತ್ತೆ ಮತ್ತೆ ಉಲ್ಲೇಖವಾಗಿದೆ. ಶತಪಥ ಬ್ರಾಹ್ಮಣರಲ್ಲಿ ಇವರನ್ನು ನೈಷಧರೆಂದು ಹೇಳಲಾಗಿದೆ. ಆದರೆ ಈಗಣ ಮಹಾರಾಷ್ಟ್ರ ಅಥವ ಆಂಧ್ರ ಭೂಪ್ರದೇಶದ ಜನಗಳ ಬಗೆಗೆ ಇಲ್ಲಿ ಯಾವುದೇ ಉಲ್ಲೇಖವಿಲ್ಲ. ಆದರೆ ಐತರೇಯ ಬ್ರಾಹ್ಮಣರಲ್ಲಿ ಪ್ರಸ್ತಾಪಿಸಲ್ಪಟ್ಟ ‘ದಕ್ಷಿಣ ದಿಶಾ’ ಎಂಬುದು ಕುರುಪಾಂಚಾಲದಿಂದಲೂ ಆಚೆಗೆ ಅಂದರೆ ಇಂದಿನ ಚಂಬಲ್‌ನಿಂದ ಆಚೆಗೆ ಮುಂದುವರಿದಿತ್ತು. ಮಹಾಭಾರತದಲ್ಲಿ ಇದನ್ನು ಪಾಂಚಾಲಾದ ದಕ್ಷಿಣದ ಮೇರೆ ಎಂದು ಹೇಳಲಾಗಿದೆ. ಪುರಾಣಗಳ ಕಾಲದಲ್ಲಿ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ಕಾಲಕ್ಕೆ ಭೋಜರು ಇದನ್ನಾಳುತ್ತಿದ್ದರು. ಅದರಲ್ಲಿ ಅವರು ವಿದರ್ಭದ ವರ್ದಾ ಮತ್ತು ದಂಡಕಗಳನ್ನಾಳುತ್ತಿದ್ದರು. ಈ ಪ್ರದೇಶಗಳು ಸ್ಪಷ್ಟವಾಗಿಯೇ ಗೋದಾವರಿಯ ನದಿಯ ತೀರದಲ್ಲಿರುವವು. ಬ್ರಾಹ್ಮಣಗಳಲ್ಲಿ ವಿದರ್ಭರಾಜದ ಭೀಮನ ಸ್ಪಷ್ಟ ಉಲ್ಲೇಖವಿರುವುದಾಗಿ, ಮೇಲಿನ ತರ್ಕಕ್ಕೆ ಇದು ಪೂರಕವಾಗುತ್ತದೆ. ಪುರಾಣಗಳ ಕಾಲದಲ್ಲಿ ವಿದರ್ಭದ ರಾಜಧಾನಿಯಾದ ಕೌಂಡಿನ್ಯಪುರದ ಉಲ್ಲೇಖವಿರುವುದಾಗಿ ಬೃಹೃದಾರಣ್ಯಕೋಪನಿಷತ್ತಿನಲ್ಲಿ ಕೆಲವು ಗುರುವರ್ಯರಿಗೂ ಇರುವ ತತ್ಸಂಬಂಧಿಯಾದ ಗೌರವಗಳು ಅದನ್ನೇ ನಿರ್ದೇಶಿಸುವ ಸಾಧ್ಯತೆಯೂ ಇದೆ. ಅದರೆ, ಐತರೇಯ ಬ್ರಾಹ್ಮಣದಲ್ಲಿ ಕಂಡುಬರುವ ನೀಚ್ಯರು ಮತ್ತು ಅತಾಚ್ಯರು ಪರ್ಯಾಯ ದ್ವೀಪದ ಪಶ್ಚಿಮದವರೇ ಎಂಬುದರ ಬಗೆಗೆ ಅನುಮಾನಗಳಿವೆ. ಅಶೋಕನ ಕಾಲದಲ್ಲಿ ಅಂದರೆ ಕಿ.ಪೂ.೩ನೇ ಶತಮಾನದಲ್ಲಿ ಉಲ್ಲೇಖಿಸಲಾಗಿರುವ ನೀಚ್ಯರು ಎಂಬ ಪದವು ಚರ್ಕವರ್ತಿಗಳಿಗೆ ಸಂಬಂಧಿಸಿರುವುದಾಗಿದೆ.

ಇದೀಗ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತವಾಗಿರುವ ದಕ್ಷಿಣದ ಬುಡಕಟ್ಟುಗಳ ಹೆಸರುಗಳೂ ಕುತೂಹಲಕಾರಿಯಾಗಿವೆ. ಐತರೇಯ ಬ್ರಾಹ್ಮಣರಲ್ಲಿ ಉದಾಂತ್ಯರು ಮತ್ತು ದಸ್ಯುಗಳ ಉಲ್ಲೇಖನವಿದೆ. ಇವರು ಆಂದ್ರರು, ಪೌಂಢ್ರರು, ಸವರ, ಪುಲಿಂದ ಮತ್ತು ಮೂತಿಭ ಜನ ವರ್ಗದವರಾಗಿದ್ದರೆ. ಇವರೆಲ್ಲ ಗಂಗೆ, ನರ್ಮದಾ, ಗೋದಾವರಿ ಮತ್ತು ಅದರ ಉಪನದಿಗಳು ಮತ್ತು ಕೃಷ್ಣನದಿಗಳ ಕಣಿವೆಗಳಲ್ಲಿ ವಾಸಿಸುತ್ತಿದ್ದ ಜನರಾಗಿದ್ದಾರೆ. ಆಂಧ್ರರು ಗೋದಾವರಿ ಮತ್ತು ಕೃಷ್ಣಾನದಿಗಳ ಕೆಳದಂಡೆಯ ಕಣಿವೆಯಲ್ಲಿ ವಾಸಿಸುತ್ತಿದ್ದವರು. ಅವರಲ್ಲಿಯೇ ಒಂದು ಗುಂಪಿನ ಜನರು ವಿದರ್ಭದ ಸಮೀಪದಲ್ಲಿಯೇ ವಾಸಿಸುತ್ತಿದ್ದರು. ಪೌಂಢ್ರಕರು ಮೂಲತಃ ಬಂಗಾಳದ ಉತ್ತರ ಬಾಗದಲ್ಲಿ ವಾಸಿಸುವರಾಗಿದ್ದರೂ ವಿದರ್ಭದ ಸಮೀಪವೂ ಅವರ ನೆಲೆಗಳಿರುವುದು ಕಂಡುಬಂದಿದೆ. ಸವರ ಜನಗಳು ಬಹುಶಃ ವಿಂದ್ಯಾ ಮತ್ತು ಶವರಿ (ಗೋದಾವರಿ ನದಿಯ ಉಪನದಿ) ನದಿಗಳ ನಡುವಣದ ನಾಡಿನಲ್ಲಿ ವಾಸಿಸುತ್ತಿರಬೇಕು. ಮೂತಿಭರು ಗಂಗಾನದಿಯ ಮುಖಜ ಭೂಮಿಯಲ್ಲಿರುವ ದ್ವೀಪಗಳಲ್ಲಿ ವಾಸಿಸುತ್ತಿದ್ದರೆಂದು ಸದ್ಯಕ್ಕೆ ತಿಳಿಯಲಾಗಿದೆ. ಪುಲಿಂದರೂ ಕೂಡ ಇದೇ ಭೂಪ್ರದೇಶದವರೆಂದು ಭಾವಿಸಲಾಗಿದೆ.

ಹೀಗೆ, ಪ್ರಾಚೀನ ವೈದಿಕ ಗ್ರಂಥಗಳನ್ನು ಹೊರತುಪಡಿಸಿದ್ದರೆ ಮುಂದಿನ ಕಾಲಘಟ್ಟವು ‘ಸೂತ್ರ’ ಗ್ರಂಥಗಳಿಗೆ ಸಂಬಂಧಿಸಿರುವುದಾಗಿದೆ. ಹಾಗೆಯೇ, ಇದು ಜೈನ ಮತ್ತು ಬೌದ್ಧ ಧರ್ಮಗಳ ಕಾಲವೂ ಹೌದು. ಈ ಕಾಲಘಟ್ಟದಲ್ಲಿ ದಕ್ಷಿಣಾಪಥ ಮತ್ತು ಅದರ ಜನವರ್ಗಗಳ ಬಗೆಗೆ ಹೆಚ್ಚು ಸ್ಪಷ್ಟವಾದ ಮಾಹಿತಿಗಳು ಲಭ್ಯವಾಗುತ್ತವೆ. ಆದರೆ ಇಲ್ಲಿಯೂ ಸಹ ದಕ್ಷಿಣಾಪಥದ ವಿಸ್ತಾರಕ್ಕೆ ಸಂಬಂಧಿಸಿದಂತೆ ಸಂದಿಗ್ಧತೆಯೇ ಕಂಡುಬರುತ್ತದೆ. ‘ಭೌದ್ಧಾಯನ ಧರ್ಮಸೂತ್ರ’, ‘ಸುತ್ತನಿಪಾತ’, ‘ವಿನಯ’ ಮೊದಲಾದ ಗ್ರಂಥಗಳಲ್ಲಿ ದಕ್ಷಿಣಾಪಥದ ಉಲ್ಲೇಖವಿದ್ದು, ಅದು ಗೋದಾವರಿಯ ತೀಪ ಪ್ರದೇಶವೇ ಆಗಿದೆ. ಪಾಣಿನಿಯ ಸೂತ್ರದಲ್ಲಿ ದಕ್ಷಿಣಕ್ಕೆ ಅಥವಾ ದಕ್ಷಿಣಾಪಥಕ್ಕೆ ‘ದಾಕ್ಷಿಣಾತ್ಯ’ ಎಂಬ ಪರ್ಯಾಯ ನಾಮವು ಕಂಡು ಬರುತ್ತದೆ. ಬೌದ್ಧರು ಅಸ್ಸಕ, (ಅಶ್ಮಕ) ಮೂಲಕ ಮತ್ತು ಅಂಧಕರನ್ನು (ಅಥವ ಆಂಧ್ರಾರು) ದಕ್ಷಿಣಾ ಪಥದ ಜನವರ್ಗವೆಂದೇ ಕರೆಯುತ್ತಾರೆ. (ಇವರು ಬ್ರಿಟಿಷ್ ರಾಜ್ಯದಲ್ಲಿ ಹೈದ್ರಾಬಾದ್ ರಾಜ್ಯ ಮತ್ತು ಮದ್ರಾಸ್ ಪ್ರೆಸಿಡೆನ್ಸಿಯ ಕೆಲ ಭೂಭಾಗಗಳಿಗೆ ಸೇರಿದ ಜನಗಳು). ‘ಮಹಾಗೋವಿಂದ’, ‘ಸುತಂತ’, ‘ಉತ್ತರಾಧ್ಯಾಯನ ಸೂತ್ರ’, ಪಾಣಿನಿಯ ‘ಅಷ್ಟಧ್ಯಾಯೀ’ ಮೊದಲಾದ ಕೃತಿಗಳಲ್ಲಿ ಕಳಿಂಗ ರಾಜ್ಯದ ಹೆಸರು ಕಂಡು ಬರುತ್ತದೆ. ಪುರಾಣಗಳ ಕಾಲದಲ್ಲಿ ಅದು ವೈತರಣಿಗುಂಟ ಪಸರಿಸಿದ ನಾಡಾಗಿದ್ದು, ಆಮೇಲೆ ಆಂಧ್ರದವರೆಗೆ ಅದರ ಮೇರೆ ವಿಸ್ತರಿಸಬೇಕು. ದಕ್ಷಿಣಾಪಥದ ವಿಸ್ತೃತವಾದ ಭೂಪ್ರದೇಶದ ಬಗೆಗೆ ಇನ್ನಷ್ಟು ವಿವರಗಳು ಈ ಕಾಲದ ಗ್ರಂಥಗಳಲ್ಲಿ ಕಂಡು ಬರುವುದಿಲ್ಲ. ಆದರೆ ಕಳಿಂಗವನ್ನು ಆವರಿಸಿದ್ದ ಕಳಿಂಗಾರಣ್ಯದ ಬಗೆಗೆ ಈ ಗ್ರಂಥಗಳಲ್ಲಿ ಉಲ್ಲೇಖವಿದೆ. ಗೋದಾವರಿಯಿಂದ ಮುಂದೆ ಇರುವ ಕೃಷ್ಣಾನದಿಯ ತೀರ ಪ್ರದೇಶಗಳು ಮತ್ತು ತಮಿಳುನಾಡು (ದಮಿಳರಟ್ಠ) ಪ್ರದೇಶಗಳ ಉಲ್ಲೇಖವು ಪಾಲಿಗ್ರಂಥಗಳಲ್ಲಿ ಕಂಡುಬರುವುದಿಲ್ಲ, ಬದಲಾಗಿ ಜಾತಕ ಕಥೆಗಳಲ್ಲಿ ಕಂಡು ಬರುತ್ತದೆಯಷ್ಟೇ. ಜೈನಗ್ರಂಥಗಳಾದ ಅಂಗಗಳು – ಅದರಲ್ಲಿಯೂ ಭಗವತಿ – ಉಲ್ಲೇಖಿಸುವ ದಕ್ಷಿಣದ ತುತ್ತತುದಿಯ ಬಗೆಗಿನ ವಿವರಗಳು ಕೂಡ ಇದಕ್ಕಿಂತ ಪ್ರಾಚೀನವಾದುವುಗಳೇನಲ್ಲ.

ಪುರಾಣಗಳು : ರಾಮಾಯಣದ ‘ಕಿಷ್ಕಿಂಧಾಕಾಂಡ’ ದಲ್ಲಿ ದಕ್ಷಿಣ ಭಾರತದ ಪಾಂಡ್ಯರಾಜರ ಬಗೆಗೆ ವಿವರಗಳಿವೆ. ಅಯೋಧ್ಯಾಕಾಂಡದಲ್ಲಿಯೂ ಸಹಿತವಾಗಿ –

ದಿಶಾಮಾಸ್ತಾಯ ಕೈಕೇಯಿ ದಕ್ಷಿಣಮ್ ದಂಡಕಾರಣ್ಯನ್ ಪ್ರತಿ
ವೈಜಯನ್ತಮಿತಿ ಖ್ಯಾತಮ್ ಪುರಮ್ ಯತ್ರ ತಿಮಿಧ್ವಜಃ

ಎಂಬ ಶ್ಲೋಕದಲ್ಲಿರುವಂತೆ, ದಂಡಕಾರಣ್ಯದ ದಕ್ಷಿಣಕ್ಕೆ ವೈಜಯಂತಿಪುರವಿದೆ ಎಂಬ ನಿರ್ದೇಶನವನ್ನು ಗಮನಿಸಬಹುದಾಗಿದೆ. ಇಲ್ಲಿರುವ ವೈಜಯಂತಿ ಪುರವು ಬಹುಮಟ್ಟಿಗೆ ಉತ್ತರ ಕರ್ನಾಟಕದ ವಿಜಯಂತಿ ಅಥವ ಬನವಾಸಿಯೇ ಆಗಿದೆ. ಇದೇ ಕಾವ್ಯದ ಅರಣ್ಯಕಾಂಡದಲ್ಲಿ ಇದಕ್ಕಿಂತ ಭಿನ್ನವಾದ ವಿವರಗಳು ದೊರೆಯುತ್ತವೆ. ಪಂಪಾಸರಸ್ಸು ಅಥವಾ ತುಂಗಭದ್ರಾನದಿಯ ಇಡಿಯ ಭೂಪ್ರದೇಶದಿಂದ ಆರಂಭಿಸಿ, ಮಂದಾಕಿನಿ ಮತ್ತು ಚಿತ್ರಕೂಟಗಳು ಸಹಿತವಾಗಿ ಅದು ರಾಕ್ಷಸರ ನಿವಾಸಸ್ಥಾನವಾಗಿದೆ ಎಂಬ ವಿವರಗಳಿವೆ. ಈ ಭೂಪ್ರದೇಶವನ್ನು ಒಟ್ಟಾಗಿ ದಂಡಕಾರಣ್ಯವೆಂದು ಕರೆಯಲಾಗಿದೆ. ರಾಮಾಯಣದಲ್ಲಿ ಬರುವ ಈ ದಂಡಕಾರಣ್ಯಕ್ಕೆ ಸಂಬಂಧಿಸಿದಂತೆ, ಇತರ ಗ್ರಂಥಗಳಿಂದ (ಕೌಟಿಲ್ಯನ ಅರ್ಥಶಾಸ್ತ್ರ ಮೊದಲಾದ ಗ್ರಂಥಗಳಲ್ಲಿ) ಪೂರ್ವಭಾಗವು ಬಸ್ತಾರಿನ ವರೆಗೆ ಮತ್ತು ಮೇಲ್ಭಾಗವು ಗೋದಾವರಿಯ ಪಶ್ಚಿಮದವರೆಗೆ ಹರಡಿರುವುದಾಗಿ ತಿಳಿದುಬರುತ್ತದೆ. ದಂಡಕಾರಣ್ಯದ ವಿವಿಧ, ಭಾಗಗಳಿಗೆ ಬೇರೆ ಬೇರೆ ಹೆಸರುಗಳಿರುವುದಾಗಿ ರಾಮಾಯಣದಿಂದ ತಿಳಿದು ಬರುತ್ತದೆ. ಉದಾ: ಮಧುಕವನ, ಚಿತ್ರಕೂಟ, ಪಿಪ್ಪಲಾವನ, ಜನಸ್ಥಾನ, ಕ್ರೌಂಚಾರಣ್ಯ, ಮತಂಗವನ ಇವೆಲ್ಲವೂ ದಂಡಕಾರಣ್ಯದ ವ್ಯಾಪ್ತಿಯಲ್ಲೇ ಬರುವ ಅರಣ್ಯಗಳಾಗಿವೆ. ರಾಮಾಯಣ ಮಹಾಕಾವ್ಯದಲ್ಲಿ ದಂಡಕಾರಣ್ಯದಲ್ಲಿರುವ ಅನೇಕ ನದಿ ಪದಗಳ ಉಲ್ಲೇಖವಿರುವುದಾದರೂ ಮುಖ್ಯವಾಗಿ ಮಂದಾಕಿನಿ, ಗೋದಾವರಿ ಮತ್ತು ಪಂಪಾಸರಸ್ಸುಗಳು ವಿಶೇಷವಾಗಿ ವರ್ಣಿತವಾಗಿವೆ. ಇವುಗಳನ್ನು ಬಿಟ್ಟರೆ ಕೃಷ್ಣವೇಣಿ, ಕೃಷ್ಣಾ ಸಹಿತವಾಗಿ ನರ್ಮದಾ, ಕಾವೇರಿ ಮತ್ತು ತಾಮ್ರಪರ್ಣಿ ನದಿಗಳ ಪ್ರಸ್ತಾಪವಿದೆ.

ಮಹಾಭಾರತದಲ್ಲಿ ದಿಗ್ವಿಜಯ, ತೀರ್ಥಯಾತ್ರೆ, ಜಂಬೂಖಂಡ ಮೊದಲಾದ ವಿವರಣೆಗಳಲ್ಲಿ ದಕ್ಷಿಣಾಪಥವನ್ನು ವಿಶೇಷವಾಗಿ ಉಲ್ಲೇಖ ಮಾಡಲಾಗಿದೆ. ಮಹಾಭಾರತದಲ್ಲಿ ವಿಶೇಷವಾಗಿ ಬರುವ ನಳ, ರುಕ್ಮಿಣಿ ಮೊದಲಾದ ರಾಜಕುಮಾರ – ಕುಮಾರಿಯರ ಅಖ್ಯಾಯಿಕೆಗಳು ಈ ಭೂಭಾಗದಲ್ಲಿಯೇ ನಡೆಯುತ್ತವೆ. ವಿದರ್ಭದ ರಾಜಕುಮಾರನಾದ ರುಕ್ಮಿಗೆ ಕುರುಕ್ಷೇತ್ರದಲ್ಲಿ ಯುದ್ಧವನ್ನು ನಿರಾಕರಿಸಲಾಗುತ್ತದೆ. ಆದರೆ, ಆತನ ಜನರು ಕಳಿಂಗ, ಮೇಕಲ, ತ್ರಿಪುರರೇ ಮೊದಲಾದ ದಾಕ್ಷಿಣಾತ್ಯರೊಂದಿಗೆ ಮಹಾಭಾರತದಲ್ಲಿ ವರ್ಣಿತವಾಗಿದ್ದಾರೆ. ಮಹಾಭಾರತದಲ್ಲಿ ಸಭಾಪರ್ವದಲ್ಲಿ ಉಲ್ಲೇಖಿತರಾದ ‘ಅಟವಿಕಾಃ’ ಮತ್ತು ‘ಕಾಂತಾರಕಾಃ’ ದಕ್ಷಿಣಾಪಥದ ಜನವರ್ಗಗಳೆಂದು ನಂಬಲಾಗಿದೆ. ಈ ಕಾವ್ಯದಲ್ಲಿ ಪುರುಷರಾದರು ಮತ್ತು ಕಾಳಾಮುಖರ ಉಲ್ಲೇಖವೂ ಇದ್ದು ಅವರನ್ನು ‘ನರರಾಕ್ಷಸ ಯೋನಯಃ’ ಎಂದರೆ ನರಮಾಂಸ ಭಕ್ಷಕರೆಂದೂ ಹೇಳಲಾಗಿದೆ. ಅದೇ ರೀತಿ ವಂಶಗುಲ್ಮರು ಅಥವ ವಸ್ತು ವಗುಲ್ಮರೆಂಬ ನಾಗರಿಕ ಸಮುದಾಯಗಳ ಬಗೆಗೂ ಹೇಳಲಾಗಿದೆ. ದಕ್ಷಿಣಪಥ ಪೂರ್ವಕರಾವಳಿಯಲ್ಲಿ ಕಳಿಂಗರು ಮತ್ತು ಆಂಧ್ರರು ವಾಸಿಸುತ್ತಿದ್ದರೆಂದು ಇಲ್ಲಿ ಹೇಳಲಾಗಿದೆ. ಪಶ್ಚಿಮ ಕರಾವಳಿಯಲ್ಲಿ ‘ಶೂರ್ಪಾರಕ’ವೆಂಬದು ಪವಿತ್ರ ಕ್ಷೇತ್ರವಾಗಿದೆ. ಅದು ರಾಮ ಪರಶುರಾಮರು ಸಂಪರ್ಕಿಸಿದ ತಾಣವಾಗಿದೆ. ಇದೇ ರೀತಿಯಲ್ಲಿ ಪೂರ್ವ ಕರಾವಳಿಗೆ ಸಮೀಪವಾಗಿರುವ ‘ಮಹೇಂದ್ರಪರ್ವತ’ವೂ ನಮಗೆ ಮುಖ್ಯವಾದುದಗಿ ಅದು ಪರಶುರಾಮ ಋಷಿಯ ಆವಾಸ ಸ್ಥಾನವೇ ಆದುದಾಗಿದೆ. ಮುಂದುವರಿದು ದಕ್ಷಿಣಾಪಥದ ಸಂಜಯಂತಿ, ಕರಹಾಟಕ (ಕರಹಾಡ) ಕೊಲ್ಲಾಗಿರಿ ಮತ್ತು ಬನವಾಸಿಗಳೇ ಮೊದಲಾದ ಒಳನಾಡುಗಳನ್ನು ಸ್ಪಷ್ಟವಾಗಿ ಹೆಸರಿಸಲಾಗಿದೆ. ಅಶ್ಮಕ, ಗೋಪರಾಷ್ಟ್ರ, ಕೊಂಕಣಿ, ಕರ್ನಾಟಕ ಮತ್ತು ಕುಂತಲ (ಒಟ್ಟಾಗಿ ಇಂದಿನ ಕರ್ನಾಟಕ) ಮಹಿಪಕ (ಮೈಸೂರು?) ಮೊದಲಾದ ಪುರಾತನ ರಾಜ್ಯಗಳು ಮಹಾಭಾರತದ ಆದಿಪರ್ವ ಮತ್ತು ಭೀಷ್ಮಪರ್ವಗಳಲ್ಲಿ ಪ್ರಸ್ತಾಪಿಸಲ್ಪಟ್ಟಿವೆ.

ದಕ್ಷಿಣ ದಕ್ಷಿಣಾಪಥಡೆಕ್ಕನ್ : ಸಂಸ್ಕೃತದ ಪ್ರಾಚೀನ ಸಾಹಿತ್ಯ ಆಕರಗಳಲ್ಲಿ (ಅದರಲ್ಲಿಯೂ ಮಹಾಭಾರತದಲ್ಲಿ) ‘ದಕ್ಷಿಣಾಪಥ’ ಅಥವ ‘ದಕ್ಷಿಣ’ ಎಂಬ ಭೂಪ್ರದೇಶದ ಉಲ್ಲೇಖ ವಿಶೇಷವಾಗಿ ಕಂಡುಬರುತ್ತಿದ್ದು, ಅದು ಒಟ್ಟಾಗಿ ಪ್ರಸ್ಥಭೂಮಿಗೆ ಅಂದರೆ ನರ್ಮದೆಯಿಂದ ದಕ್ಷಿಣದ ಭೂಪ್ರದೇಶಕ್ಕೆ ಅನ್ವಯವಾಗುತ್ತದೆ. ಮಾರ್ಕಂಡೇಯ, ವಾಯು ಮತ್ತು ಮತ್ಸ್ಯಪುರಾಣಗಳಲ್ಲಿ ಉಕ್ತವಾದ ದಕ್ಷಿಣಾಪಥವೆಂಬ ಭೂಭಾಗದಲ್ಲಿ ಚೋಳ, ಪಾಂಡ್ಯ ಮತ್ತು ಕೇರಳ ದೇಶಗಳ ಉಲ್ಲೇಖವಿದ್ದು ಅವುಗಳೀಗ ತಂಜಾವೂರು, ಮಧುರೆ ಮತ್ತು ಮಲಬಾರ್‌ಗಳಿಗೆ ಅನ್ವಯವಾಗುತ್ತವೆ. ಹಾಗೆಯೇ ಇದೀಗ ಈ ಪ್ರದೇಶಗಳು ದಕ್ಷಿಣ ಭಾರತದ ದಕ್ಷಿಣದ ಮೂಲೆಯಲ್ಲಿವೆ. ಸಹದೇವನು ದಕ್ಷಿಣಾಪಥದಲ್ಲಿ ದಿಗ್ವಿಜಯವನ್ನು ಕೈಗೊಂಡು ಪಾಂಡ್ಯರನ್ನು ಸೋಲಿಸಿದನೆಂಬುದಾಗಿ ಮಹಾಭಾರತದಲ್ಲಿ ಕಥಯಿದೆ. ಹಾಗೆಯೇ ‘ವಾಯು ಪುರಾಣ’ದಲ್ಲಿ ಗೋದಾವರಿಯೇ ಮೊದಲಾಗಿ ಸಹ್ಯಾದ್ರಿ ಯಿಂದ ಉದ್ಭವಿಸುವ ನದಿಗಳು ದಕ್ಷಿಣಾಪಥಕ್ಕೆ ಸೇರಿದವು ಎಂದು ಹೇಳಲಾಗಿದೆ. ಆದರೆ ನರ್ಮದಾ ಮತ್ತು ತಪತಿಗಳ ಬಗೆಗೆ – ಅವು ದಕ್ಷಿಣಾಪಥದ ನದಿಗಳೆಂಬ ಬಗೆಗೆ ಅಂತಹ ಸ್ಪಷ್ಟೀಕರಣ ಕಂಡುಬರುವುದಿಲ್ಲ. ಹಾಗಾದುದರಿಂದ ಅವುಗಳ ಕಣಿವೆ ಪ್ರದೇಶಗಳನ್ನು ದಕ್ಷಿಣಾಪಥವೆಂದು ಆಗ ಪರಿಗಣಿಸಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಹಾಗಾದುದರಿಂದ ದಕ್ಷಿಣಾಪಥವೆಂಬ ಪ್ರಯೋಗವು ಯಾವಾಗಲೂ ಒಂದೇ ಅರ್ಥದಲ್ಲಿ ಪ್ರಯೋಗವಾಗಿದೆ ಎಂದು ಭಾವಿಸಬೇಕಾಗಿಲ್ಲ. ಈ ಬಗೆಗೆ ಇನ್ನಷ್ಟು ವಿವರಗಳಿಗೆ ಹೋಗಬಹುದು. ಮನುಸ್ಮೃತಿಯಲ್ಲಿ ಹಿಮಾಲಯ ಮತ್ತು ವಿಂಧ್ಯಪರ್ವತಗಳ ನಡುವಿನ ಪವಿತ್ರ ಪ್ರದೇಶವನ್ನು ‘ಆರ್ಯಾವರ್ತ’ ವೆಂದು ಪರಿಗಣಿಸಲಾಗಿದೆ. ಪತಂಜಲಿಯು ಪಾಣಿನಿಯ ವ್ಯಾಕರಣ ಗ್ರಂಥಕ್ಕೆ ಬರೆದ ಮಹಾಭಾಷ್ಯದಲ್ಲಿ ಮೇಲಿನ ಅಭಿಪ್ರಾಯವೇ ಮಾನ್ಯವಾಗಿದೆ. ಈ ಆರ್ಯಾವರ್ತಕ್ಕೆ ಉತ್ತರಾಪಥವೆಂಬ ಇನ್ನೊಂದು ಹೆಸರೂ ಸಂಸ್ಕೃತ ಸಾಹಿತ್ಯದಲ್ಲಿ ಕಂಡುಬರುತ್ತದೆ.

ಹೀಗೆ ಉತ್ತರಾಪಥ ಹಾಗೂ ದಕ್ಷಿಣಾಪಥಗಳೆಂದು ಅಖಂಡ ಭಾರತವನ್ನು ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದಿನಿಂದಲೂ ನಿರ್ದೇಶಿಸುವುದು ಕಂಡುಬರುತ್ತದೆ. ಈಗಾಗಲೇ ಹೇಳಿದಂತೆ ಹಿಮಾಲಯದಿಂದ ಮೊದಲ್ಗೊಂಡು ವಿಂಧ್ಯಪರ್ವತಗಳವರೆಗೆ ಉತ್ತರಾಪಥದ ಮೇರೆಯಾದರೆ, ವಿಂಧ್ಯದ ದಕ್ಷಿಣಕ್ಕಿರುವುದೇ ಈಗ ನಮ್ಮ ಚರ್ಚೆಯ ಪ್ರಧಾನ ವಿಷಯವಾದ ದಕ್ಷಿಣಾಪಥ. ದಕ್ಷಿಣಾಪಥದ ಬಗೆಗೆ ವಿದೇಶಿಯರ ಬರಹಗಳಲ್ಲಿ ಸಿಗುವ ಮೊದಲ ಪ್ರಾಚೀನ ಆಧಾರವು ಅನಾಮಿಕ ಗ್ರೀಕ್ ಪ್ರವಾಸಿಯೊಬ್ಬನ (ಳ?) ‘periplus of the Erythrean Sea’ ಗ್ರಂಥವಾಗಿದ್ದು (ಕ್ರಿ.ಶ. ೧ನೇ ಶತಮಾನ) ಅದರಲ್ಲಿ ‘Dachinabades’ (ದಕ್ಷಿಣಾಪಥ > ದಕ್ಷಿಣಾಪಥ) ಎಂದು ಈ ಭೂಪ್ರದೇಶವನ್ನು ಉಲ್ಲೇಖಿಸಲಾಗಿದೆ. ಆನಂತರ ಬಂದ ಚೀನೀ ಯಾತ್ರಿಕನಾದ ಫಾಹಿಯಾನನು (ಕ್ರಿ.ಶ. ೫ನೇ ಶ.ಮಾ.ದ ಆರಂಭ) ದಕ್ಷಿಣಾ ಪಥವನ್ನು ‘ತ – ದ್ಸಿನ್’ ಎಂದು ಗುರುತಿಸುತ್ತಾನೆ.

ಈಗ ದಕ್ಷಿಣಾಪಥ ಎಂಬ ಭೂಪ್ರದೇಶದ ವ್ಯಾಪ್ತಿಯ ಬಗೆಗೆ ನಾವು ಚರ್ಚಿಸುತ್ತಿದ್ದೆವು. ಆ ಚರ್ಚೆಯಲ್ಲಿ ದಕ್ಷಿಣಾಪಥವೆಂಬ ನಾಮನಿರ್ದೇಶನವು ಕೆಲವೊಮ್ಮೆ ವ್ಯಾಪಕವಾಗಿ ದಕ್ಷಿಣಾಭಾರತಕ್ಕೆ ಮತ್ತೆ ಕೆಲವೊಮ್ಮೆ ಸೀಮಿತವಾದ ಭೂಪ್ರದೇಶಕ್ಕೂ ಅನ್ವಯಿಸುವುದನ್ನು ಗಮನಿಸಲಾಯಿತು. ಆ ಚರ್ಚೆಯನ್ನು ಇನ್ನಷ್ಟು ವಿಸ್ತರಿಸಲು ಈಗ ತೊಡಗಬಹುದು. ಭರತನ ನಾಟ್ಯಶಾಸ್ತ್ರದಲ್ಲಿ ದಕ್ಷಿಣ ಸಮುದ್ರಾಂಕಿತವಾದ ವಿಂದ್ಯಾದ ವರೆಗಿನ ಭೂಪ್ರದೇಶವನ್ನು ದಕ್ಷಿಣ ಅಥವ ಡೆಕ್ಕನ್ ಎಂದು ಕರೆಯಲಾಗಿದೆ. ಪುರಾಣಗಳಲ್ಲಿ ಮತ್ತು ರಾಜಶೇಖರನ ಕಾವ್ಯಮೀಮಾಂಸೆಯೇ ಮೊದಲಾದ ಸಂಸ್ಕೃತ ಗ್ರಂಥಗಳಲ್ಲಿ ಜನಪದಗಳು ಎಂದು ಗುರುತು ಮಾಡುವ ಭೂಪ್ರದೇಶವೇ ದಕ್ಷಿಣಾಪಥ ಅಥವ ಡೆಕ್ಕನ್ ಎಂಬುದಾಗಿದೆ. ಅಲಹಾಬಾದಿನ ಕಂಬ ಶಾಸನದಿಂದ ತಿಳಿದು ಬರುವಂತೆ, ಕ್ರಿ.ಶ.೪ನೇ ಶತಮಾನದಲ್ಲಿ ದಕ್ಷಿಣಾಪಥವು ದಕ್ಷಿಣಕ್ಕೆ ಕಾಂಚಿವರೆಗೆ ಮಾತ್ರವೇ ಹರಡಿಗೊಂಡಿತ್ತು. ಅದರಿಂದ ಮುಂದುವರಿದಿರಲಿಲ್ಲ ಎಂದು ತಿಳಿದು ಬರುತ್ತದೆ. ಈಗಾಗಲೇ ಹೇಳಿರುವ ‘ಪರಿಪ್ಲಸ್’ ಗ್ರಂಥದಲ್ಲಿ ಉಲ್ಲೇಖಿತವಾದ ‘ದಚಿಣ ಬಡೆಸ್‌’ (Dachinabaddes) ಎಂಬುದು ತಮಿಳು ನಾಡನ್ನುಳಿದ ಭೂಪ್ರದೇಶವೇ ಆಗಿದೆ. ‘ಲಲಿತವಿಸ್ತರ’ ವೆಂಬ ಸಂಸ್ಕೃತ ಗ್ರಂಥದಲ್ಲಿ ದಕ್ಷಿಣ ಮತ್ತು ದ್ರಾವಿಡ ದೇಶಗಳನ್ನು ಪ್ರತ್ಯೇಕಿಸಲಾಗಿದೆ. ರಾಮಾಯಣ ಕಾವ್ಯದಲ್ಲಿಯೂ ದ್ರಾವಿಡ ಮತ್ತು ದಕ್ಷಿಣಾಪಥ ಜನಪದಗಳ ನಡುವೆ ವ್ಯತ್ಯಾಸವನ್ನು ಕಲ್ಪಿಸಲಾಗಿದೆ. ಮಹಾಭಾರತದ ಕರ್ಣಪರ್ವದಲ್ಲಿ ದಾಕ್ಷಿಣಾತ್ಯ ಜನಗಳನ್ನು ದ್ರಾವಿಡ, ತುಂಡಿಕ, ನಿಷಧ, ಪುಲಿಂದ, ಕುಂಡಲ, ಮೇಕಲ, ದಶಾರ್ಣ ಮತ್ತು ಕಳಿಂಗರಿಗಿಂತ ಭಿನ್ನರಾದ ಜನಗಳೆಂದು ವಿವರಿಸಲಾಗಿದೆ. ಹಾಗೆಯೇ ಪುರಾಣಗಳಲ್ಲಿ ಈ ಜನಗಳನ್ನೇ ದಕ್ಷಿಣಾಪಥದ ಮೂಲನಿವಾಸಿಗಳೆಂದು ಹೇಳಲಾಗಿದೆ. ಅದೇ ಮಹಾಭಾರತದ ಸಭಾಪರ್ವದಲ್ಲಿ ದಕ್ಷಿಣದ ಕೊಟ್ಟ ಕೊನೆಯಲ್ಲಿರುವ ಪಾಂಡ್ಯ ರಾಜ್ಯವನ್ನು ದಕ್ಷಿಣಾಪಥದಿಂದ ಕೈಬಿಡಲಾಗಿದೆ. ‘Imperial Gazetter of India’ ದಲ್ಲಿ “ಡೆಕ್ಕನ್ ಭೂಪ್ರದೇಶವು ವ್ಯಾಪಕವಾದ ಅರ್ಥದಲ್ಲಿ ವಿಂದ್ಯಾಪರ್ವತಾವಳಿಗಿಂತ ದಕ್ಷಿಣಕ್ಕೆ ಮತ್ತು ಉತ್ತರದಲ್ಲಿ ನರ್ಮದೆಯೇ ಮೇರೆಯಾಗಿ ಇರುವ ಅಖಂಡವಾದ ಪರ್ಯಾಯವಾದ ದ್ವೀಪವನ್ನು ಒಳಗೊಳ್ಳುತ್ತದೆ” ಎಂದು ವ್ಯಾಖ್ಯಾನಿಸಲಾಗಿದೆ. ೧೯೪೫ರಲ್ಲಿ ನಡೆದ ದಖ್ಖನ್ ಇತಿಹಾಸ ಸಮ್ಮೇಳನದಲ್ಲಿ (Decean History Conference) ಅದರ ಮೇರೆಗಳನ್ನು ಹೀಗೆ ವ್ಯಾಖ್ಯಾನಿಸಲಾಗಿದೆ “ದಖ್ಖನ್ ಭೂಪ್ರದೇಶವು ಉತ್ತರದಲ್ಲಿರುವ ತಪತೀ ನದಿಯಿಂದ ಪ್ರಸ್ಥಭೂಮಿಯ ದಕ್ಷಿಣದ ತುದಿಯವರೆಗೆ ಮತ್ತು ಸಮುದ್ರದಿಂದ ಸಮುದ್ರದವರೆಗೆ ಇರುವ ಭೂಪ್ರದೇಶವಾಗಿದೆ”. ಇಲ್ಲಿ ತಪತೀ ನದಿಯು ಉತ್ತರಕ್ಕೆ ಸಾತ್ಪಪುರ ಪರ್ವತಾವಳಿ ಮತ್ತು ನರ್ಮದಾ ನದಿಯವರೆಗೆ ಉತ್ತರದ ಮೇರೆಯಾಗಿದೆ. ಈ ಭೂಭಾಗವನ್ನು ಮಧ್ಯಕಾಲೀನ ಯುಗದಲ್ಲಿ ‘ಖಾನ್ದೇಶ’ ಎಂದು ಕರೆಯಲಾಗಿದ್ದು, ಸತ್ಮಾಲಾ ಪರ್ವತಾವಳಿಯು ಅದರ ದಕ್ಷಿಣದ ಮೇರೆಯಾಗಿತ್ತು. ಜೊವಿಯೋ – ಡುಬೇವಿಲ್ ಅವರು ಡೆಕ್ಕನ್ ಭೂಪ್ರದೇಶವು ಉತ್ತರದಲ್ಲಿ ನರ್ಮದಾ ಮತ್ತು ಮಹಾನದಿಗಳೇ ಮೇರೆಯಾಗಿ, ಪೂರ್ವದಲ್ಲಿ ಬಂಗಾಳಕೊಲ್ಲಿ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ ಆವೃತಗೊಂಡು ದಕ್ಷಿಣದಲ್ಲಿ ನೀಲಗಿರಿ ಪರ್ವತಾವಳಿ ಮತ್ತು ದಕ್ಷಿಣ ಪೆನ್ನಾರ್‌ವರೆಗೆ ಹರಡಿಕೊಂಡಿದೆ ಎಂದು ‘Ancient History of Deccan’ (ಪು೫) ನಲ್ಲಿ ವಿವರಿಸುತ್ತಾರೆ. ಹೀಗೆ ಡೆಕ್ಕನ್ ಭೂಭಾಗವು ಆ ಪ್ರಕಾರವಾಗಿ, ದಕ್ಷಿಣದ ಕರಾವಳಿ ಮತ್ತು ದಖ್ಖನ್ ಪ್ರಸ್ತಭೂಮಿಯ ಮುಖ್ಯ ಭೂಭಾಗಗಳನ್ನು ಒಳಗೊಳ್ಳುತ್ತದೆ. ಈ ದಖ್ಖನ್ ಭೂಪ್ರದೇಶವು ಭೌಗೋಳಿಕವಾಗಿ ಐದು ರೀತಿಯ ವಿಂಗಡಣೆಗೊಳಗಾಗಿದೆ (೧) ಪಶ್ಚಿಮ ಘಟ್ಟ ಪ್ರದೇಶ ಅಥವಾ ಕರಾವಳಿ ಸಹಿತವಾಗಿ ಸಹ್ಯಾದ್ರಿ (೫) ಕರಾವಳಿ ಸಹಿತವಾಗಿ ಪೂರ್ವಘಟ್ಟಗಳು, ಈಶಾನ್ಯ ಮೇರೆಯಾಗಿ ಮಹಾನದಿ ಪರ್ಯಂತ ಡೆಕ್ಕನ್ ಭೂಪ್ರದೇಶವಿರುತ್ತದೆ. ಹೀಗೆ ದಖ್ಖನ್ ಪ್ರಸ್ಥಭೂಮಿಯು ದಕ್ಷಿಣ ಮತ್ತು ನೈರುತ್ಯಕ್ಕೆ ಬಂದಂತೆಲ್ಲ ಕಿರಿದಾಗುತ್ತ ಸಾಗುತ್ತದೆ. ಮಧ್ಯಕಾಲೀನ ಚರಿತ್ರೆಯನ್ನು ಗಮನಿಸಿದಾಗ ಮಲಬಾರ್ ಮತ್ತು ತಮಿಳು ನಾಡುಗಳು ದಕ್ಷಿಣಾಪಥದಲ್ಲಿ, ದಖ್ಖನ್ ಅಥವ ಡೆಕ್ಕನ್ನಿನಲ್ಲಿ ಸೇರ್ಪಡೆಯಾಗುವುದಿಲ್ಲ. ಮಧ್ಯಕಾಲೀಲನ ಚರಿತ್ರೆಯನ್ನು ಗಮನಿಸಿದರೆ ದೇವಗಿರಿ ಅಥವ ವಿಜಯನಗರ ಮೊದಲಾದ ಸಾಮ್ರಾಜ್ಯಗಳು ಕೇಂದ್ರವಾಗಿ ಡೆಕ್ಕನ್ ಭೂಪ್ರದೇಶವು ಆಳ್ವಿಕೆಗೊಳಪಟ್ಟಿರುವುದು ವಿದಿತವಾಗುತ್ತದೆ.

ಈಗಾಗಲೇ ಹೇಳಿದಂತೆ ಮಧ್ಯಕಾಲೀನ ಡೆಕ್ಕನ್ ಅಥವ ದಕ್ಷಿಣ ಅಥವ ದಕ್ಷಿಣಾಪಥವೆಂಬುದರಲ್ಲಿ ಮಲಬಾರ್ ಮತ್ತು ತಮಳುನಾಡುಗಳು ಸೇರ್ಪಡೆಯಾಗುವುದಿಲ್ಲ. (‘The Early History of India’ 1924) ಉಲ್ಲೇಖಿತ ಗ್ರಂಥದಲ್ಲಿ ಸ್ಮಿತ್ ಅವರು “ದಕ್ಷಿಣ ಭಾರತವು ಅದರ ವೈಶಿಷ್ಟ್ಯವೆನಿಸಿದ ಪ್ರಸ್ಥಭೂಮಿಯೊಳಗೊಂಡು, ಕೃಷ್ಣ ಮತ್ತು ತುಂಗಭದ್ರ ನದಿಮುಖ ಭೂಮಿಯಿಂದ ಹೊರತಾದುದಾಗಿರುತ್ತದೆ. ಏಕೆಂದರೆ, ಆ ಭೂಭಾಗದ ಗುಣಲಕ್ಷಣವು ವಿಶಿಷ್ಟವಾದುದಾಗಿ, ಸಾಮಾನ್ಯವಾಗಿ ಭಾರತದ ಇತಿಹಾಸಕ್ಕಿಂತ ಭಿನ್ನವಾದ ಇತಿಹಾಸವನ್ನೊಳಗೊಂಡುದಾಗಿದೆ” ಎಂದೆನ್ನುತ್ತಾರೆ. ಅವರು ಮುಂದುವರಿದು ಹೀಗೆ ಕೃಷ್ಣ ಮತ್ತು ತುಂಗಭದ್ರಾನದಿಗಳ ಮುಖಜ ಭೂಮಿಯ ಈ ಪ್ರದೇಶವನ್ನು ಆಧುನಿಕ ಕಾಲದಲ್ಲಿ ಮದ್ರಾಸ್ ಪ್ರೆನಿಡೆನ್ಸಿ (Madrass Precidency) ಎಂದು ಕರೆಯಬಹುದಾಗಿದ್ದು ಅವುಗಳಲ್ಲಿ ವಿಶಾಖಪಟ್ಟಣಂ ಮತ್ತು ಗಂಜಮ್ ಪ್ರದೇಶಗಳ ಹೊರತಾಗಿ, ಮೈಸೂರು, ಕೊಚ್ಚಿನ್ ಮತ್ತು ತಿರುವಾಂಕೂರ್ ರಾಜ್ಯಗಳನ್ನು ಡೆಕ್ಕನ್ ಭೂಪ್ರದೇಶದಲ್ಲಿ ಸೇರಿಸಬಹುದಾಗಿದೆ ಎಂದು ಹೇಳುತ್ತಾರೆ. ವಾತ್ಸ್ಯಾಯನನ ಕಾಮಸೂತ್ರದಲ್ಲಿ ದಕ್ಷಿಣಾಪಥ ವೆಂಬುದು ನರ್ಮದೆಯ ದಕ್ಷಿಣದ ಭೂಭಾಗವೆಂದು ಹೇಳಲಾಗಿದೆ. ರಾಜಶೇಖರನು ತನ್ನ ಬಾಲರಾಮಯಣದಲ್ಲಿ ರೇವನದಿಯು (ನರ್ಮದೆ) ಆರ್ಯವರ್ತಾ ಮತ್ತು ದಕ್ಷಿಣಾಪಥದ ಮೇರೆಯೆಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಇದೇ ರಾಜಶೇಖರನ ತನ್ನ ‘ಕಾವ್ಯಮೀಮಾಂಸಾ’ ಕೃತಿಯಲ್ಲಿ ದಕ್ಷಿಣಾಪಥವು ನರ್ಮದೆಯಿಂದ ಮಾಹಿಷ್ಮತೀಯ ದಕ್ಷಿಣದ ಭೂಭಾಗವೆಂದು ಹೇಳುತ್ತಾನೆ. ಇವೆಲ್ಲವುಗಳ ಆಧಾರದಿಂದ ವಿಂದ್ಯಾಪರ್ವತಾವಳಿ ಗಳು ಅಥವ ಇನ್ನೂ ಖಚಿತವಾಗಿ ನರ್ಮದೆಯನ್ನು ಡೆಕ್ಕನ್ನಿನ ಉತ್ತರದ ಮೇರೆ ಎಂಬುದಾಗಿ ಪರಿಗಣಿಸುವುದೇ ಸೂಕ್ತವೆನಿಸುತ್ತದೆ. ಆದರೆ, ನರ್ಮದೆಯು ಸಮುದ್ರದಿಂದ ಸಮುದ್ರದವರೆಗೆ ಹರಿಯುವ ನದಿಯಲ್ಲವಾದುದರಿಂದ, ಉತ್ತರದಿಂದ ದಕ್ಷಿಣದವರೆಗೆ ಗಡಿರೇಖೆಯನ್ನು ನಿರ್ಧರಿಸುವುದಾದರೆ, ಮನಿಯರಿ ಮತ್ತು ಮಹಾನದಿಗಳನ್ನು (ಒರಿಸ್ಸಾದ ಕಟಕ್ ಬಳಿಯಲ್ಲಿ ಬಂಗಾಳ ಕೊಲ್ಲಿಯನ್ನು ಸೇರುವ ನದಿಗಳು) ಸೇರಿಸಿಕೊಳ್ಳಬೇಕಾಗುತ್ತದೆ.

ಹೀಗೆ, ದಖ್ಕನ್ನಿನ ವ್ಯಾಖ್ಯಾನದಲ್ಲಿ ಇಂದಿನ ಗುಜರಾತಿನ ದಕ್ಷಿಣದ ಭಾಗ, ಇಡಿಯಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶದ ಉತ್ತರದಲ್ಲಿರುವ ಉತ್ತರದ ಪೆನ್ನಾರ್‌ವರೆಗಿನ ಭೂಪ್ರದೇಶ, ಮಧ್ಯಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳ ಅಂದರೆ ಮಹಾನದಿಯ ದಕ್ಷಿಣದ ಕೆಲಭಾಗಗಳು ಸೇರ್ಪಡೆಯಾಗುತ್ತವೆ.

ಇದು ಡೆಕ್ಕನ್ ಬಗೆಗೆ ವೈದಿಕ ಗ್ರಂಥಗಳು, ಪುರಾಣಗಳು ಇತಿಹಾಸಕಾರರು ಹೇಳುವ ವಿವರಣೆಯಾಗಿದೆ. ಆದರೆ ಯಾವುದೇ ಇತಿಹಾಸಕಾರನಿಗೆ ‘ಡೆಕ್ಕನ್’ ಭೂಪ್ರದೇಶವನ್ನು ನಿಖರವಾಗಿ ಗೆರೆಕೊರೆದು ಚಿತ್ರಿಸುವುದಕ್ಕೆ ಆಗಿಲ್ಲ. ಆಗುವುದೂ ಇಲ್ಲ. ಇದು ಕೇವಲ ದಕ್ಷಿಣ (ಅಥವ ಡೆಕ್ಕನ್) ಭೂಪ್ರದೇಶದ ಕಥೆಯಷ್ಟೇ ಅಲ್ಲ, ಭಾರತದ ಇತರ ಭೌಗೋಳಿಕ ಪ್ರದೇಶಗಳ ಕಥೆಯೂ ಹೌದು. ಹಾಗಾದುದರಿಂದ ‘ಡೆಕ್ಕನ್’ ಪ್ರದೇಶದ ಚಾರಿತ್ರಿಕ ಅಧ್ಯಯನವನ್ನು ಗಮನಿಸುತ್ತಲೇ ಅಂತಹ ಅಧ್ಯಯನದ ಚರಿತ್ರೆಯನ್ನು ಮಂಡಿಸುವುದರಿಂದಲೂ ಚರ್ಚೆಯನ್ನು ನಿಖಿತಗೊಳಿಸುವ ಸಾಧ್ಯತೆಯಿದೆ. ಇನ್ನು ಮುಂದೆ ನಾವು ಆ ಬಗೆಗೆ ಗಮನ ಹರಿಸಬಹುದು.

‘ಡೆಕ್ಕನ್’ ನ ಬಗೆಗೆ ಮೊತ್ತ ಮೊದಲ ಬಾರಿಗೆ ಅಧ್ಯಯನ ನಡೆಸಿದ ಭಾರತೀಯ ಲೇಖಕರೆಂದರೆ ರಾಮಕೃಷ್ಣ ಗೋಪಾಲ ಭಾಂಡಾರಕರ (R.G.ಭಾಂಡಾರ್‌ಕರ್) ಅವರ Early History of Deccan ೧೮೯೨ ರಲ್ಲಿ ಪ್ರಕಟವಾಯಿತು. ಅವರ ಅಧ್ಯಯನವು ಬಹುಮಟ್ಟಿಗೆ ಇಂದಿನ ‘ಮಹಾರಾಷ್ಟ್ರ’ವೆಂದು ಕರೆಯಲಾಗುವ ದಕ್ಷಿಣಾಪಥಕ್ಕೆ (ಡೆಕ್ಕನ್) ಸಂಬಂಧಿಸಿರುವುದಾಗಿದೆ. ಆಗಿನ ಕಾಲಕ್ಕೆ ಲಭ್ಯಮಾಹಿತಿಗಳನ್ನು ಮುಖ್ಯವಾಗಿ ಸಾಹಿತ್ಯ ಆಕರಗಳನ್ನು ಆಧರಿಸಿ ದಕ್ಷಿಣದ ಆರ್ಯಪೂರ್ವದ ಇತಿಹಾಸವನ್ನು ರಚಿಸುವ ಪ್ರಯತ್ನ ಈ ಗ್ರಂಥದಲ್ಲಿದೆ. ಭಂಡಾರಕರ್ ಅವರು ತಮಗೆ ದತ್ತವಾದ ಮಾಹಿತಿಗಳನ್ನಾಧರಿಸಿ ‘ದಸ್ಯು’ ಗಳು ಡೆಕ್ಕನ್ನಿನ ಮೂಲನಿವಾಸಿಗಳೆಂದು ನಿರ್ಣಯಿಸಿದ್ದಾರೆ. ದಸ್ಯುಗಳ ಬಳಿಕ ನಂದರು ಮತ್ತು ಮೌರ್ಯರು ಈ ಭಾಗವನ್ನಾಕ್ರಮಿಸಿಕೊಂಡರು. ನಂದರು ಮತ್ತು ಮೌರ್ಯರು ಆರ್ಯ ರಾಜರುಗಳಾದುದರಿಂದಿ ಅಲ್ಲಿಂದ ಮುಂದೆ ಈ ಭೂಪ್ರದೇಶವು ಆರ್ಯರ ಪ್ರಭಾವಕ್ಕೆ ಒಳಗಾಯಿತು – ಎಂದು ಅವರು ನಿರ್ಣೈಸಿದ್ದಾರೆ. ಆ ಬಳಿಕ ೧೯೨೨ ರಲ್ಲಿ ಪ್ರಕಟವಾದ ಜಿ.ದುಬ್ರೇಲಿ ಅವರ ‘Ancient History of the Deccan’ ಎಂಬುದು ಅಷ್ಟೇ ಮುಖ್ಯವಾದ ಕೃತಿಯಾಗಿದೆ. ಈ ಕೃತಿಯಲ್ಲಿ ಮೇಲೆ ಪ್ರಸ್ತಾಪಿಸಿದ ಭಾಂಡಾರಕರ್ ಅವರ ಪುಸ್ತಕದ ಬಗೆಗೆ ಕೆಲವು ಒಳನೋಟಗಳಿವೆ. ಅಂತಹ ಒಳನೋಟವು ಸಹಿತ ಐತಿಹಾಸಿಕವಾಗಿ ವಾದುದಾಗಿ ಅದರ ಸಾರಾಂಶವನ್ನು ಇಲ್ಲಿ ಅನುವಾದಿಸಲಾಗಿದೆ.

“….ಈ ಪುಸ್ತಕವು ಪ್ರಸಿದ್ಧವಾದುದಾಗಿ ಅದರ ಮೌಲ್ಯವನ್ನು ಎತ್ತಿ ಹೇಳುವ ಅಗತ್ಯ ಇಲ್ಲಿಲ್ಲ. ಆದರೆ, ಇಂದೀಗ ಅದಕ್ಕೆ ಒಂದು ಕೊರತೆ ಇದೆ. ಇದೀಗ ಆ ಗ್ರಂಥವು ಇಪ್ಪತ್ತೈದು ವರ್ಷಗಳಿಗಿಂರತ ಹಳೆಯದಾಗಿದೆಯಲ್ಲದೆ, ಗತವರ್ಷಗಳಲ್ಲಿ ಅನೇಕ ಮಹತ್ತ್ವದ ಶೋಧನೆಗಳಾಗಿವೆ. ಹಾಗೆ ನೋಡಿದರೆ ಈ ಕೃತಿಯು ಪ್ರಾಚೀನ ದಕ್ಷಿಣಾಪಥದ (ಡೆಕ್ಕನ್) ಇತಿಹಾಸವನ್ನು ಒಳಗೊಂಡಿಲ್ಲ. ಏಕೆಂದರೆ ಆಗ ದೊರೆತ್ತಿದ್ದ ಮಾಹಿತಿಗಿಂತ ಇಂದಿನ ಮಾಹಿತಿಯು ವಿಪುಲವಾಗಿದೆ. ಹಾಗೆಯೇ ಆ ಪುಸ್ತಕದಲ್ಲಿ ಗುರುತಿಸಲಾದ ಬಾಂಬೆ ಪ್ರೆಸಿಡೆನ್ಸಿಯಷ್ಟೇ ಡೆಕ್ಕನ್ ಭೂ ಪ್ರದೇಶವಲ್ಲ.

ಹಾಗಾದುದರಿಂದ ಇಂದು ಡೆಕ್ಕನ್ನಿ ಇತಿಹಾಸವೆಂಬುದು ಹೊಸ ಅಧ್ಯಯನವೇ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಕ್ರಿ.ಪೂ. ೨೬೧ ರಿಂದ ಕ್ರಿ.ಶ. ೬೧೦ ರವರೆಗಿನ ಡೆಕ್ಕನ್ನಿನ ಇತಿಹಾಸವೆಂದು ತಿಳಿಯಬಯಸುವ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗುವ ಯಾವ ಗ್ರಂಥಗಳೂ ಈಗ ಇಲ್ಲ. ಈ ಕಾಲಘಟ್ಟದ ಇತಿಹಾಸವು ತುಂಬ ಸಂದಿಗ್ಧವಾದುದಾಗಿದೆ. ಆದರೆ ಈ ಸಂಬಂಧದಲ್ಲಿ ನಮಗೆ ಶಾಸನದ ಕೊರತೆಯೇನಿಲ್ಲ. ಏಕೆಂದರೆ ಕದಂಬ ಸಾಮ್ರಾಜ್ಯಕ್ಕೆ ಸಂಬಂಧಿಸಿರುವಂತೆಯೇ ನಮ್ಮಲ್ಲಿ ಮೂವತ್ತಕ್ಕಿಂತಲೂ ಹೆಚ್ಚು ತಾಮ್ರ ಶಾಸನಗಳಿವೆ. ಹಾಗೆಯೇ ಪಲ್ಲವ ಮತ್ತು ಗಂಗರ ಬಗೆಗೂ ವಿಪುಲ ಮಾಹಿತಿ ನಮ್ಮಲ್ಲಿದೆ. ಹೀಗಿರುವಾಗ ಸಾಮ್ರಾಜ್ಯಗಳು ಕಾಲಾನುಕ್ರಮಣಿಕೆಯು ಇಷ್ಟೊಂದು ಗೊಂದಲಕಾರಿ ಯಾಗಿರುವುದು ಏತಕ್ಕೆ? ಕಾರಣವಿಷ್ಟೇ : ಅವುಗಳೆಲ್ಲವನ್ನು ಒಂದೆಡೆ ಕಲೆಹಾಕುವ ಮೂಲಕವೇ ಅಂತಹ ಒಂದು ಸಾಂಗತ್ಯವನ್ನು ನಾವು ಸಾಧಿಸಬೇಕಾಗಿದೆ. ಹಾಗಾದಾಗ ನಮಗೆ ಕತ್ತಲೆಯಲ್ಲಿ ಬೆಳಕಿಲನ ರೇಖೆ ಕಂಡೀತು. ಆ ಮೂಲಕ ಈವರೆಗೆ ಯಾವುದು ನಮಗಿನ್ನೂ ಸಿಕ್ಕಿಲ್ಲವೋ – ಆ ಪ್ರಾಚೀನ ದಕ್ಕನ್ನಿನ ಇತಿಹಾಸ ದೊರೆಯಬಹುದು. ಅಂತಹ ಅಧ್ಯಯನವು ಮುಖ್ಯವಾದುದು. ಅದು ವಿಸ್ತಾರವಾದ ಭೂಪ್ರದೇಶದ ಒಂಬತ್ತು ಶತಮಾನಗಳು ವೈಭವಯುತ ಇತಿಹಾಸವೇ ಆದುದಾಗಿದೆ…… (ಪು. ೬ – ೭)”

ಹೀಗೆ ಈಕೃತಿಯಲ್ಲಿ ಭಾಂಡಾರಕರ ಅವರ ಕೃತಿಯ ಕೊರತೆಗಳನ್ನು ಗಮನಿಸಲಾಗಿದೆ ಅನ್ನುವುದಕ್ಕಿಂತಲೂ ಆ ಕೃತಿಯ ಅಧ್ಯಯನದ ಮಿತಿಗಳನ್ನು ಮೀರುತ್ತ ಹಿಂದಿನ ಅಧ್ಯಯನವನ್ನು ಸಮಕಾಲೀನಗೊಳಿಸಲಾಗಿದೆ ಎಂದೇ ತಿಳಿಯಬೇಕಾಗಿದೆ. ಪ್ರಸ್ತುತ ಕೃತಿಯಲ್ಲಿ ಡೆಕ್ಕನ್ ಭೂಪ್ರದೇಶವನ್ನು ತುಂಬ ವಿಶಾಲಾರ್ಥದಲ್ಲಿ ಗ್ರಹಿಸಲಾಗಿದೆ. ಅದರೆ ಉತ್ತರದ ಮೇರೆಯಾಗಿ ನರ್ಮದಾ ಮತ್ತು ಮಹಾನದಿಗಳಿದ್ದರೆ, ಪೂರ್ವದಲ್ಲಿ ಬಂಗಾಳಕೊಲ್ಲಿ ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ; ದಕ್ಷಿಣದಲ್ಲಿ ನೀಲಗಿರಿ ಪರ್ವತ ದಕ್ಷಿಣ ಪೆನ್ನಾರ ಇವುಗಳು ಮೇರೆಗಳಾಗಿವೆ. ಈ ಗ್ರಂಥದಲ್ಲಿ ವಿಸ್ತೃತವಾಗಿ ಈ ಪ್ರದೇಶದ ರಾಜಕೀಯ ಚರಿತ್ರೆಯನ್ನು ವಿವರಿಸಲಾಗಿದೆ. ಮುಖ್ಯವಾಗಿ ಈವರೆಗೆ ದೊರೆತ ಪರಾತತ್ವ ಮತ್ತು ಶಾಸನಾಧಾರಿತ ಮಾಹಿತಿಗಳನ್ನು ಇಲ್ಲಿ ವಿಫುಲವಾಗಿ ಬಳಸಿಕೊಳ್ಳಲಾಗಿದೆ.

ಇದಾದ ಮೇಲೆ ೧೯೮೨ ರಲ್ಲಿ ಯಝ್‌ದನಿ (Yazdani) ಅವರ ಸಂಪಾದನೆಯಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟಗೊಂಡ ‘The Early History of the Decean (೧೯೮೨)’ ಗಮನಾರ್ಹ ಕೃತಿಯಾಗಿದೆ. ಈ ಕೃತಿಯಲ್ಲಿ ನಿರ್ದಿಷ್ಟವಾದ ಮತ್ತು ರಾಜಕೀಯವಾದ ವ್ಯಾಖ್ಯಾನವನ್ನು ಅನುಸರಿಸಿರುವುದಾಗಿ, ಮೇಲಿನ ಕೃತಿಗಳಲ್ಲಿ ಈವರೆಗೆ ಸೇರ್ಪಡೆಯಾಗಿರದ ನಿಝಾಮನ ಸಂಸ್ಥಾನದ ಪ್ರದೇಶಗಳನ್ನೂ ಅಧ್ಯಯನ ಮಾಡಲಾಗಿದೆ. ಗ್ರಂಥದ ಪ್ರಸ್ತಾವನೆಯಲ್ಲಿಯೇ ಹೇಳಿರುವಂತೆ ಹೈದ್ರಾಬಾದ್ ರಾಜ್ಯವನ್ನು ಸೇರಿಸಿಕೊಂಡಂತೆ ಒಂದು ವ್ಯವಸ್ಥಿತವಾದ ಡೆಕ್ಕನ್ನಿನ ಇತಿಹಾಸ ರಚನೆಯೇ ಈ ಸಂಪುಟಗಳ ಗುರಿಯಾಗಿದೆ. ಈ ಅಧ್ಯಯನದ ವ್ಯಾಖ್ಯಾನುಸಾರ ವರ್ತಮಾನದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂದ್ರಪ್ರದೇಶಗಳು ಒಳಗೊಳ್ಳುತ್ತವೆ. ಉಳಿದಂತೆ ಬೇರೆಬೇರೆ ಅಧ್ಯಾಯಗಳು ಬೇರೆಬೇರೆ ರಾಜಮನೆತನಗಳು ರಾಜ್ಯಾಡಳಿತದ ಮೇರೆಗಳನ್ನು ಹಾಗೂ ದಕ್ಷಿಣದ ಭೂಪ್ರದೇಶಕ್ಕೆ ಅವುಗಳ ಐತಿಹಾಸಿಕ ಕೊಡುಗೆಗಳನ್ನೂ ಚರ್ಚಿಸುತ್ತವೆ.

ಹಾಗಿದ್ದಾಗಲೂ ಈ ಸಂಪುಟಗಳಲ್ಲಿ ಅವರು ದಕ್ಷಿಣ ಭಾರತವು ದಕ್ಷಿಣ ಪ್ರಸ್ಥಭೂಮಿಯ ಒಂದು ಐತಿಹಾಸಿಕ ಭೂಪ್ರದೇಶವಾಗಿದ್ದು, ಉತ್ತರದಲ್ಲಿ ಸಹ್ಯಾದಿ ಪರ್ವತ ಮತ್ತು ಮಹೇಂದ್ರಗಿರಿಗಳು ಹಾಗೂ ಮಹಾನದಿ ಮತ್ತು ಗೋದಾವರಿನದಿಗಳಿಂದ ಆವೃತ್ತವಾಗಿ, ದಕ್ಷಿಣದಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿ ಪ್ರದೇಶವನ್ನೊಳಗೊಂಡುದಾಗಿ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ ಆರಂಭಿಸಿ ಪೂರ್ವದಲ್ಲಿ ಬಂಗಾಳ ಕೊಲ್ಲಿಯ ವರೆಗೆ ಅದರ ವ್ಯಾಪ್ತಿಯೆಂದು ಪರಿಗಣಿಸಲಾಗಿದೆ. ಆದರು, ಭಾಂಡಾರಕರ್ ಅವರ ಹಾಗೆಯೇ ಈ ಅಧ್ಯಯನದಲ್ಲಿ ಡೆಕ್ಕನ್ ಭೂಪ್ರದೇಶದಲ್ಲಿ ಆರ್ಯರ ಮುಖ್ಯ ನೆಲೆಗಳು ಸ್ಥಾಪನೆಗೊಂಡುದು, ಆ ಕಾರಣದಿಂದಾಗಿಯೇ ಈ ಭೂಪ್ರದೇಶದಲ್ಲಿ ಆರ್ಯಸಂಸ್ಕೃತಿ ಪಸರಿಸಿದುದು, ಮಾತ್ರವಲ್ಲದೆ ಆ ಮೂಲಕ ದಕ್ಷಿಣದ ಸಾಂಸ್ಕೃತಿಕ ಪರಿಸರದಲ್ಲಿ ಆದ ಪಲ್ಲಟಗಳು, ಜತೆಗೆ ಆರ್ಯರ ಭಾಷಿಕ ಪ್ರಭಾವಗಳನ್ನು ಚರ್ಚಿಸಲಾಗಿದೆ. ಬೇರೆ ಬೇರೆ ಭಾಷೆಗಳ ಪ್ರಭಾವ ಎಷ್ಟರಮಟ್ಟಿಗಾಯಿತೆಂಬುದಕ್ಕೆ ಮರಾಠಿಯು ಪಶ್ಚಿಮ ಡೆಕ್ಕನ್ನಿನಲ್ಲಿ ವ್ಯಾಪಕವಾಗಿ ಪಸರಿಸಿದುದನ್ನು ಇಲ್ಲಿ ನಿದರ್ಶನವಾಗಿ ಎತ್ತಿಕೊಳ್ಳಲಾಗಿದೆ. ಆ ಮೇಲೆ ಬಂದ ‘Studies in Historical Geography anb Ethnography of Decan’ (ಸುಮತಿ ಮುಲಯ್, ೧೯೨೯) ಕೃತಿಯಲ್ಲಿ ‘ಡೆಕ್ಕನ್’ ಎಂಬ ಭೂಪ್ರದೇಶಕ್ಕೆ ಸಂಬಂಧಿಸಿದ ವ್ಯಾಖ್ಯೆಯನ್ನು ವಿಶಾಲಾರ್ಥದಲ್ಲಿ ಗ್ರಹಿಸುವ ಪ್ರಯತ್ನವಿರುವುದಾದರೂ, ಅಲ್ಲಿಯೂ ಸೀಮಿತವಾದ ದೃಷ್ಟಿಕೋನವೇ ಪೂರ್ವಗ್ರಹೀತವಾಗಿರುವುದರಿಂದ ‘ಡೆಕ್ಕನ್’ ಎಂಬುದನ್ನು ಇಂದಿನ ಮಹಾರಾಷ್ಟ್ರವೆಂದೇ ಪರಗಣಿಸಬಹುದಾಗಿದೆ.

ಪ್ರೊ. ನೀಲಕಂಠ ಶಾಸ್ತ್ರೀ ಅವರ ‘History of South India (೧೯೮೨) ಎಂಬುದು ಆನಂತರದ ಮುಖ್ಯವಾದ ಕೃತಿಯಾಗಿದೆ. ಶಾಸ್ತ್ರಿಯವರು ಇಡಿಯಾಗಿ ದಕ್ಷಿಣಭಾರತವನ್ನು ಈ ಅಧ್ಯಯನ ಕಕ್ಷೆಯಲ್ಲಿ ಒಳಗೊಳಿಸಿದ್ದಾರೆ. ಆರ್.ಜಿ.ಭಾಂಡಾರಕರ ಅವರ ಬಳಿಕ ಡೆಕ್ಕನ್ನಿನ ವ್ಯಾಪಕವಾದ ಅಧ್ಯಯನ ನಡೆಸಿದ ಇನ್ನೊಂದು ಕೃತಿಯಿದು. ಆದರೆ, ಹಿಂದಿನ ಕೃತಿಗಳ ಹಾಗೆಯೇ ದಕ್ಷಿಣ ಭಾರತದಲ್ಲಿ ಆರ್ಯರ ಪ್ರಭಾವವನ್ನು ಗುರುತಿಸುವ ಸಂಪ್ರದಾಯವನ್ನೇ ಇಲ್ಲಿ ಅನುಸರಿಸಲಾಗಿದೆ. ನೀಲಕಂಠ ಶಾಸ್ತ್ರಿಯವರ ಪ್ರಕಾರ “ದಕ್ಷಿಣವು ಜಗತ್ತಿನಲ್ಲಿಯೇ ಅತ್ಯಂತ ಪ್ರಾಚೀನವಾದ ಜನವಸತಿ ಹೊಂದಿರುವ ಒಂದು ಭೂಭಾಗವಾಗಿದ್ದು, ಅದರ ಪ್ರಾಚೀನ ಪುರಾತತ್ವ ನೆಲೆಗಳು ಮತ್ತು ನೆರೆಯ ರಾಜ್ಯಗಳೊಂದಿಗೆ ಅದರ ಸಂಬಂಧಗಳನ್ನು ಬಹುಮಟ್ಟಿಗೆ ಗುರುತಿಸಬಹುದಾಗಿರುವುದರಿಂದ ಜಗತ್ತಿನ ನಾಗರೀಕತೆಗಳ ಇತಿಹಾಸದಲ್ಲಿ ಅದೊಂದು ಮುಖ್ಯವಾದ ಅಧ್ಯಾಯವೇ ಆದೀತು” (ಪು.೩೦) ಈಗಾಗಲೇ ಹೇಳಿರುವಂತೆ, ಭಾಂಡಾರಕರ್ ಹಾಗೆಯೇ ದಕ್ಷಿಣ ಭಾರತದಲ್ಲಿ ಆರ್ಯರ ನೆಲೆಗಳು, ಸಾಂಸ್ಕೃತಿಕ ಪ್ರಭಾವಗಳನ್ನು ಗುರುತಿಸುವಲ್ಲಿ ಶಾಸ್ತ್ರಿಯವರು ಮುಖ್ಯವಾಗಿ ಸಾಹಿತ್ಯ ಆಕರಗಳನ್ನೇ ಆಧರಿಸುತ್ತಾರೆ. ಈಗಾಗಲೇ ಹೇಳಿರುವಂತೆ ಐತಿಹಾಸಿಕವಾಗಿ ಡೆಕ್ಕನ್, ಅಥವ ದಕ್ಷಿಣ ಭಾರತವೆಂದ ಪರಿಕಲ್ಪನೆಗಳಿಗೆ ಕಾಲಕಾಲಕ್ಕೆ ಬೇರೆ ಬೇರೆ ಅರ್ಥಗಳು ಪ್ರಾಪ್ತವಾಗಿರುವಂತೆ ತತ್ಸಂಬಂಧಿಯಾದ ಅಧ್ಯಯನಗಳಲ್ಲಿಯೂ ಭಿನ್ನಾಭಿಪ್ರಾಯವಿದೆ. ಅಧ್ಯಯನಕ್ಕೆ ಸಂಬಂಧಿಸಿದಂತೆ ಈವರೆಗೆ ಪ್ರಸ್ತಾಪಿಸಿದ ಮುಖ್ಯ ಗ್ರಂಥಗಳಲ್ಲಿ ದಕ್ಷಿಣ ಭಾರತಕ್ಕೆ ಹೆಚ್ಚು ಗಮನ ನೀಡಲಾಗಿದೆಯಲ್ಲದೆ ಡೆಕ್ಕನ್ನನ್ನು ಅದರ ಒಂದು ಅಂಗಭಾಗವೆಂದು ಪರಿಗಣಿಸಲಾಗಿದೆ – ಎಂದೇ ಅಭಿಪ್ರಾಯ ಪಡಲಾಗಿದೆ. ಅಲೋಕ ಪದಶರ ಸೇನ್ ಅವರು ‘Social and Economic History of Early Decean’ ಕೃತಿಯಲ್ಲಿ ಅಂತಹ ಅಧ್ಯಯನಗಳಿಗೆ ಸಂಬಂಧಿಸಿದಂತೆ ಹೀಗೆ ಹೇಳಿದ್ದಾರೆ. : –

“ದಕ್ಷಿಣ ಭಾರತದ ಅಧ್ಯಯನಗಳಲ್ಲಿ ವಿಂದ್ಯಾದ ದಕ್ಷಿಣದ ಭೂಪ್ರದೇಶಗಳ ಇತಿಹಾಸವನ್ನು ದಕ್ಷಿಣ ಭಾರತದ ಹಿನ್ನಲೆಯಲ್ಲಿಯೇ ಗ್ರಹಿಸುವುದರಿಂದ, ಡೆಕ್ಕನ್ನಿನ ಬಗೆಗೆ ಸರಳವಾದ ಗೃಹೀತಗಳನ್ನೇ ಇಟ್ಟುಕೊಳ್ಳಲಾಗಿದೆ. ನಮ್ಮ ಅಭಿಪ್ರಾಯದಂತೆ ದಕ್ಷಿಣ ಭಾರತವೆಂಬುದು ವಿವಿಧ ಉಪಪ್ರಾಂತ್ಯಗಳನ್ನೊಳಗೊಂಡ ಒಂದು ಸಂಕೀರ್ಣವಾದ ಭೌಗೋಳಿಕವಾದ ಅಸ್ಮಿತೆಯಾಗಿದೆ. ಆದರೆ, ಖಂಡಿತವಾಗಿಯೂ ಅದನ್ನು ಒಂದು ಐತಿಹಾಸಿಕ ಅಸ್ಮಿತೆಯೆಂಬಂತೆ ನೋಡಲಾಗುವುದಿಲ್ಲ. ಕಳೆದ ೧೭೫ ವರ್ಷಗಳ ಅವಧಿಯಲ್ಲಿ ಬಂದ ಪ್ರತ್ಯೇಕವಾದ ಅಧ್ಯಯನಗಳನ್ನೇ ದಕ್ಷಿಣ ಭಾರತದ ಅಧ್ಯಯನವೆಂಬಂತೆ ಪರಿಗಣಿಸುವ ಪರಿಕ್ರಮವೊಂದನ್ನು ಸಹಿತ ಈಗಾಗಲೇ ಗಮನಿಸಲಾಗಿದೆ. ಅಂತಹ ವ್ಯಾಖ್ಯಾನಗಳಲ್ಲಿ ಆಕರಗಳಿಗೆ ಸಂಬಂಧಿಸಿದ ದೃಷ್ಟಿಕೋನ ಇಲ್ಲವೇ ಇಡಿಯಾಗಿ ಭೌಗೋಳಿಕ ಪ್ರದೇಶವನ್ನು ಗ್ರಹಿಸುವ ಅಖಂಡ ದೃಷ್ಟಿಕೋನವಾಗಲೀ ಪ್ರಧಾನವಾಗಿರುವುದು ಕಂಡುಬರುತ್ತದೆ. ನಮ್ಮ ಗಮನಕ್ಕೆ ಬಂದಂತೆ ಇಂತಹ ಅಧ್ಯಯನಗಳ ಪ್ರಕ್ರಿಯೆಗನುಸಾರವಾಗಿ ದಕ್ಷಿಣ ಭಾರತದ ಉತ್ತರಭಾಗವಾದ ಡೆಕ್ಕನ್ ಸಾಮಾನ್ಯವಾಗಿ ಅವಜ್ಞೆಗೀಡಾಗುವುದಿದೆ. ಡೆಕ್ಕನ್ ಭೂಪ್ರದೇಶವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವುದಾಗಿ ಕಾಲಕಾಲಕ್ಕೆ ಆಳಿದ ರಾಜ ಮಹಾರಾಜರಿಂದಾಗಿ ಕಾಲಾನುಕಾಲದಲ್ಲಿ ಅಲ್ಲಿ ಪಲ್ಲಟನೆಗಳುಂಟಾಗಿವೆ. (ಪು.೩ – ೪)

ದಕ್ಷಿಣ ಭಾರತ : ಇದೀಗ ನಾವು ಈ ಚರ್ಚೆಯ ಕೊನೆಯ ಭಾಗಕ್ಕೆ ಬಂದಂತಾಗಿದೆ. ದ್ರಾವಿಡ ಮತ್ತು ಡೆಕ್ಕನ್ ವಿಷಯವಾಗಿ ಚರ್ಚಿಸುತ್ತಿದ್ದಾಗ ಪ್ರಾಸಂಗಿಕವಾಗಿ ದಕ್ಷಿಣ ಭಾರತದ ಪ್ರಸ್ತಾಪನೆಯೂ ಆಗಿದೆ. ಅಥವಾ ಅಂತಹ ವಿವರಗಳಲ್ಲಿ ಈಗಾಗಲೇ ದಕ್ಷಿಣ ಭಾರತದ ಬಗೆಗೆ ಆರಂಭಿಕ ಚರ್ಚೆಗಳನ್ನು ಮಾಡಲಾಗಿದೆ. ಈಗ ಆ ವಿಷಯಗಳನ್ನು ಮತ್ತೆ ಪುನರಾವರ್ತಿಸದೆ, ಉಳಿದ ವಿಷಯಗಳ ಬಗೆಗೆ ಗಮನ ಹರಿಸಬಹುದಾಗಿದೆ.

ಈಗಾಗಲೇ ಪ್ರಾಸಂಗಿಕವಾಗಿ ಉಲ್ಲೇಖಿಸಿದಂತೆ ಪುರಾಣಗಳ ಕಾಲದಿಂದಲೂ ಅಖಂಡವಾದ ಭಾರತವನ್ನು ‘ಉತ್ತರಾಪಥ ಮತ್ತು ದಕ್ಷಿಣಾಪಥ’ ಎಂಬ ಎರಡು ಭೌಗೋಳಿಕ ನೆಲೆಗಳಲ್ಲಿ ವಿವರಿಸಲಾಗಿದೆ. ನಾವೀಗ ದಕ್ಷಿಣ ಭಾರತವೆಂದು ನಿರ್ದೇಶಿಸುತ್ತಿರುವ ಭೂಪ್ರದೇಶವೇ ಅಂದಿನ ದಕ್ಷಿಣಾಪಥವಾಗಿತ್ತು. ಅಂದಿನಿಂದ ಇಂದಿನವರೆಗೆ ದಕ್ಷಿಣ ಭಾರತವನ್ನು ಸಂಕೀರ್ಣವಾದ ಭೌಗೋಳಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯವೆಂದೇ ಪರಿಗಣಿಸಲಾಗಿದೆ. ಉತ್ತರಾಪಥವೇ ಆಗಲೀ ದಕ್ಷಿಣಾಪಥವೇ ಆಗಲಿ, ಅಥವಾ ಉತ್ತರ ಭಾರತವೇ ಆಗಲೀ ದಕ್ಷಿಣ ಭಾರತವೇ ಆಗಲೀ, ನಿಖರವಾಗಿ ಅದರದೇ ಆದ ಗುಣಲಕ್ಷಣಗಳನ್ನು ನಿರ್ಧರಿಸುತ್ತ ಆ ಹಿನ್ನಲೆಯಲ್ಲಿ ವ್ಯಾಖ್ಯಾನಿಸುವುದು ಅಷ್ಟೊಂದು ಸುಲಭವಾದ ವಿಷಯವೇನಲ್ಲ. ದಕ್ಷಿಣ ಭಾರತದ ಬಗೆಗೆ ಅಧ್ಯಯನ ಮಾಡಿದ ವಿದ್ವಾಂಸರು ಈ ಸಮಸ್ಯೆಯನ್ನು ಪರಿಗಣಿಸಿದ್ದಾರೆ. ಮುಖ್ಯವಾಗಿ ವಿವಿಧ ಜಾತಿ, ಭಾಷೆ, ಧರ್ಮ ಸಂಸ್ಕೃತಿ ಹಾಗೆಯೇ ಭಿನ್ನಭಿನ್ನ ಭೌಗೋಳಿಕ ವಲಯಗಳನ್ನೊಳಗೊಂಡ ವಿಸ್ತೃತವಾಧ ಭಾರತವನ್ನು ವಿವರಿಸುವುದಕ್ಕೆ ಒಂದು ದೃಷ್ಟಿಕೋನ, ಒಂದು ವ್ಯಾಖ್ಯಾನ ಸಾಕಾಗಲಾರದು ಎಂಬುದರಿಂದಲೇ ‘ದಕ್ಷಿಣ ಭಾರತದ’ ಅಧ್ಯಯನವು ಪ್ರತ್ಯೇಕವಾದ ಒಂದು ಜ್ಞಾನಶಾಖೆಯಾಗಿಯೇ ರೂಪುಗೊಳ್ಳಲು ಕಾರಣವಾಗಿದೆ. ಭಾರತದ ಇತಿಹಾಸ ಅಥವ ಭಾರತದ ಅಧ್ಯಯನವೆಂಬುದು ಉತರ ಭಾರತಕ್ಕಷ್ಟೇ ಸೀಮಿತವಾದ ಕಾಲಘಟ್ಟದಲ್ಲಿ ಹಾಗೂ ದಕ್ಷಿಣ ಭಾರತವು ಅಧ್ಯಯನಕಾರರಿಗೆ ಅಪರಿಚಿವಾದುದಾಗಿತ್ತು. ದಕ್ಷಿಣ ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ ಇದ್ದ ಅಸ್ಪಷ್ಟತೆಗಳೇ ಕಾರಣವಾಗಿದ್ದವು. ದಕ್ಷಿಣ ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ ಕ್ರಿ.ಶ.೬೦೦ ರ ಪೂರ್ವದ ಬಗೆಗೆ ಇದ್ದ ಮಾಹಿತಿಯೇ ಅಸ್ಪಷ್ಟವಾಗಿತ್ತು. ಆದರೆ, ಉತ್ತರ ಭಾರತಕ್ಕೆ ಸಂಬಂಧಿಸಿದಂತೆ ಇದಕ್ಕಿಂತಲೂ ೧೭ನೆಯ ಶತಮಾನಗಳ ಪೂರ್ವದವರೆಗಿನ ಇತಿಹಾಸದ ಸ್ಪಷ್ಟ ಹೆಜ್ಜೆಗುರುತುಗಳು ಅಧ್ಯಯನದ ಕಣ್ಣುಗಳಿಗೆ ಕಾಣುತ್ತಿದ್ದವು. ಇದು ದಕ್ಷಿಣ ಭಾರತದ ಅಧ್ಯಯನಕಾರರಿಗೆ ಗಮನಾರ್ಹ ಸಂಗತಿಯಾದುದಾಗಿ ಅವರು ದಕ್ಷಿಣ ಭಾರತದ ಬಗೆಗೆ ಅಧ್ಯಯನ ಕೈಗೊಳ್ಳುವುದಕ್ಕೆ ಪ್ರೇರಣೆಯಾಯಿತು.

ಹಾಗಾದುದರಿಂದ ದಕ್ಷಿಣ ಭಾರತ ಯಾವುದೇ ರೀತಿಯ ಅಧ್ಯಯನವೆಂದಾಗ ಅದು ಸ್ಥೂಲವಾದ ಅರ್ಥದಲ್ಲಿ ಭಾರತ ಬಗೆಗಿನ ಅಧ್ಯಯನವೇ ಆಗುತ್ತದೆ. ಈಗಾಗಲೇ ಹೇಳಿರುವಂತೆ ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿರುವುದರಲ್ಲಿ ಇತಿಹಾಸಕಾರರಿಗೆ ಮೊದಲ ಮನ್ನಣೆ ಸಲ್ಲುತ್ತದೆ. ದಕ್ಷಿಣ ಭಾರತವು ಮನುಕುಲದ ಪ್ರಾಚೀನ ರಾಜಧಾನಿ, ಎಂಬ ದೃಷ್ಟಿಯೊಂದಿಗೆ ಅದು ಜಗತ್ತಿನ ಇತಿಹಾಸದ ಒಂದು ಅಧ್ಯಾಯವೂ ಆಗುತ್ತದೆ. (ನೋಡಿ ನೀಲಕಂಠ ಶಾಸ್ತ್ರೀ, A History of South India ಪು.೪) ಎಂಬುದು ಪೂರ್ವಸೂರಿಗಲ ಮತವಾಗಿದೆ. ಹಾಗಾದುದುರಿಂದ, ಒಂದರ್ಥದಲ್ಲಿ ದಕ್ಷಿಣ ಭಾರತದ ಅಧ್ಯಯನವು ಉತ್ತರ ಭಾರತದ ಅಧ್ಯಯನಕ್ಕೆ ಪರ್ಯಾಯವಾಗಿಯೂ ಇತಿಹಾಸದ ಬಗೆಗೆ ಪ್ರಜ್ಞಾಪೂರ್ವಕವಾಗಿಯೂ ಮೂಡಿರುವ ಜ್ಞಾನಶಾಖೆಯಾಗಿದೆ.

ದ್ರಾವಿಡ ಮತ್ತು ಡೆಕ್ಕನ್ ಪರಿಕಲ್ಪನೆಗಳ ಅಭಿಪ್ರಾಯ ಭೇದಗಳು ‘ದಕ್ಷಿಣ ಭಾರತ’ ಎಂಬ ಪರಿಕಲ್ಪನೆಯಲ್ಲಿ ಕಂಡುಬರುವುದಿಲ್ಲ. ದಕ್ಷಿಣ ಭಾರತವೆಂಬುದು ಇಡಿಯ ದಕ್ಷಿಣದ ಪ್ರಸ್ಥಭೂಮಿಗೆ ಅನ್ವಯಿಸುವ ಪರಿಭಾಷೆಯಾಗಿ, ಮುಖ್ಯವಾಗಿ ಭೌಗೋಳಿಕ ಪರಿಭಾಷೆಯಾಗಿ ಬಹುಮಟ್ಟಿಗೆ ಒಪ್ಪಿತವಾಗಿದೆ. ಇತಿಹಾಸಿಕವಾಗಿ ಇದನ್ನು ಬೃಹತ್ ದ್ರಾವಿಡದೇಶ ಎಂಬುದಾಗಿ ಕರೆಯಲಾಗಿದೆ. ಪ್ರಾಚೀನ ಉಲ್ಲೇಖಗಳಲ್ಲಿರುವಂತೆಯೇ ಬೃಹತ್ ದ್ರಾವಿಡ ದೇಶದ ಪೂರ್ವದಲ್ಲಿ ಪೂರ್ವಸಮುದ್ರ (ಬಂಗಾಳಕೊಲ್ಲಿ) ಪಶ್ಚಿಮದಲ್ಲಿ ಅಪರ ಸಮುದ್ರ ಅಥವ ರತ್ನಾಕರ (ಅರಬ್ಬೀ ಸಮುದ್ರ) ಹಾಗೂ ದಕ್ಷಿಣದಲ್ಲಿ ಮಧ್ಯೋದಧಿಗಳು ಮೇರೆಯಾಗಿವೆ. ವಿಂದ್ಯಪರ್ವತವು ಐತಿಹಾಸಿಕವಾಗಿ ದಕ್ಷಿಣ ಭಾರತದ ಉತ್ತರಮೇರೆಯಾಗಿತ್ತಲ್ಲದೆ ಬಹುಮಟ್ಟಿಗೆ ಈಗಲೂ ಅದನ್ನು ಹಾಗೆಯೇ ಪರಿಗಣಿಸಲಗುತ್ತದೆ. ಈಗಾಗಲೇ ಹೇಳಿರುವಂತೆ ಉತ್ತರಾಪಥ ಮತ್ತು ದಕ್ಷಿಣಾಪಥವೆಂಬುದಾಗಿ ಪುರಾಣಗಳ ಕಾಲದಲ್ಲಿ ಭಾರತವನ್ನು ವಿಭಜನೆ ಮಾಡಿರುವಂತೆಯೇ ಅಧ್ಯಯನದ ಅನುಕೂಲಕ್ಕಾಗಿಯೂ ‘ಗಂಗಾನಧಿ ಬಯಲು’ ಮತ್ತು ‘ಕೋರಮಂಡಲ ಬಯಲು’ ಎಂಬುದಾಗಿ ವಿಂಗಡಿಸಲಾಗಿದೆ. ಮುಖ್ಯವಾಗಿ ನಾಗರಿಕತೆಯ ದೃಷ್ಟಿಯಿಂದ ಇದನ್ನು ‘ಹಿಂದೂ ಆರ್ಯ ಭಾರತ’ ಮತ್ತು ‘ಹಿಂದೂ ದ್ರಾವಿಡ ಭಾರತ’ ಎಂಬುದಾಗಿ ಪರಿಗಣಿಸಲಾಗುತ್ತದೆ. (ನೋಡಿ Burtain Stain p.32) ಇದಕ್ಕೆ ಕೇವಲ ಭಾರತದ ಭೌಗೋಳಿಕ ಲಕ್ಷಣವಷ್ಟೇ ಕಾರಣವಲ್ಲ. ಬದಲಾಗಿ ದಕ್ಷಿಣದಲ್ಲಿ ಕೃಷ್ಣ ನದಿಯ ಮತ್ತು ಉತ್ತರದಲ್ಲಿ ಕೈಮೂರ್ ಪರ್ವತಾವಳಿಗಳ ನಡುವಣ ಸಂಸ್ಕೃತಿ ಮತ್ತು ರಾಜಕೀಯ ನಡಾವಳಿಗಳು ಕಾರವಣವಾಗಿವೆ.

ಈ ಲೇಖನದಲ್ಲಿ ಆರಂಭದಿಂದಲೂ ದ್ರಾವಿಡ ಅಧ್ಯಯನ ಮತ್ತು ದಕ್ಷಿಣ ಭಾರತದ ಅಧ್ಯಯನದ ನಡುವೆ ಒಂದು ಸಂಬಂಧವನ್ನು ಕಲ್ಪಿಸಲು ಪ್ರಯತ್ನಿಸಲಾಗಿದೆ. ಆದುದರಿಂದ ದ್ರಾವಿಡ – ಡೆಕ್ಕನ್ – ದಕ್ಷಿಣ ಭಾರತ ಎಂಬ ಪರಿಕಲ್ಪನೆಗಳ ವಿವರಿಸುವಾಗ ಎರಡು ಮಾದರಿಗಳನ್ನು ಉದ್ದಕ್ಕೂ ಅನುಸರಿಸಲಾಯಿತು. ಆ ಪರಿಕಲ್ಪನೆಯ ಇತಿಹಾಸ ಹಾಗೂ ಅಂತಹ ಪರಿಕಲ್ಪನೆಯನ್ನು ಪ್ರತಿಪಾದಿಸುವ ಅಧ್ಯಯನದ ಇತಿಹಾಸಗಳೆರಡನ್ನೂ ಜೊತೆಜತೆಯಲ್ಲಿಯೇ ಪರಿಗಣಿಸಲಾಗಿದೆ. ಇಂತಹ ತೌಲನಿಕ ಅಧ್ಯಯನದ ಮಹತ್ತ್ವ ಈಗಾಗಲೇ ಸಹೃದಯರಿಗೆ ಅರಿವಾಗಿರಬಹುದು ಎಂಬುದು ನನ್ನ ಭಾವನೆ. ಇದನ್ನು ಸ್ವಲ್ಪ ಮಟ್ಟಿಗೆ ವಿವರಿಸುವುದಾದರೆ ‘ದ್ರಾವಿಡ’ ಎನ್ನುವ ಪರಿಕಲ್ಪನೆಯ ಬಗೆಗೆ ನಡೆದ ವಾಗ್ವಾದಗಳು ಅದನ್ನು ಡೆಕ್ಕನ್ ಮತ್ತು ದಕ್ಷಿಣ ಭಾರತದವರೆಗಿನ ಚರ್ಚೆಯವರೆಗೆ ಅನ್ವಯಿಸುವುದಕ್ಕೆ ಹೋಗುವುದಿಲ್ಲ. ಅಂದರೆ, ಅಂತಹ ಚರ್ಚೆಗಳು ಪ್ರಾಚೀನ ಬೇರುಗಳನ್ನು ಅರಸುತ್ತ ಹೋಉತ್ತವೆಯೇ ವಿನಾ ವರ್ತಮಾನದ (ದಕ್ಷಿಣ ಭಾರತದ) ಅಗತ್ಯಗಳನ್ನು ಪ್ರತಿಪಾದಿಸುವುದಿಲ್ಲ. ಹಾಗಾದುದರಿಂದ ಈ ಎಲ್ಲ ವಾಗ್ವಾದಗಳಿಗೆ ಒಂದು ತಾತ್ವಿಕ ನೆಲೆಯನ್ನು ನಾವು ಕಲ್ಪಿಸಬೇಕಾಗಿದೆ. ದ್ರಾವಿಡ ಅಧ್ಯಯನವೆಂದಾಗ ಅದಕ್ಕೆ ಸೀಮಿತವಾದ ಅರ್ಥವಲಯವೊಂದು ಆವರಿಸುವ ಅಪಾಯವಿದೆ. ಮೊದಲನೆಯದಾಗಿ ಭಾಷಾಶಾಸ್ತ್ರೀಯ ಮತ್ತು ಆ ಮೂಲಕ ‘ಪಂಚದ್ರಾವಿಡ’ ಭಾಷೆಗಳ ಪ್ರದೇಶವೆಂಬ ಅರ್ಥ. ಆದರೆ ಸಂಸ್ಕೃತಿ ಅಥವ ಅದಕ್ಕಿಂತಲೂ ಮುಖ್ಯವಾಗಿ ಅಧ್ಯಯನದ ನೆಲೆಗಳು ಭಾಷಿಕ, ಭೌಗೋಳಿಕ ನೆಲೆಗಳನ್ನು ದಾಟಲು ಯಾವಾಗಲೂ ಪ್ರಯತ್ನಿಸುತ್ತಿರುತ್ತವೆ. ಆವಾಗ ಸ್ವತಃ ಕಾಲ್ಡ್‌ವೆಲ್ ಮೊದಲಾದವರು ಅನುಸರಿಸುವ ‘ದ್ರಾವಿಡ’ ಅಥವ ‘ದಕ್ಷಿಣ ಭಾರತ’ ಎಂಬ ವಿಶಾಲ ಪರಿಕಲ್ಪನೆಯತ್ತ ಅದನ್ನು ವಿಸ್ತರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಭಾಷೆ, ಗಡಿ ಇತ್ಯಾದಿ ಎಲ್ಲೆಗಳನ್ನು ಆತ್ಯಂತಿಕವೆಂದು ಪರಿಗಣಿಸಬಾರದು. ಅದಕ್ಕಾಗಿಯೇ ದ್ರಾವಿಡ ಪರಿಕಲ್ಪನೆಯನ್ನು ದಕ್ಷಿಣ ಭಾರತದವರೆಗೂ ವಿಸ್ತರಿಸಲಾಯಿತು. ಹಾಗೆ ವಿಸ್ತರಿಸುವುದಕ್ಕೆ ಕಾರಣವೂ ಇದೆ ಎಂಬ ನಿದರ್ಶನವನ್ನೂ ನೀಡಿದುದಾಯಿತು.

ಆದರೆ, ಈ ಅಧ್ಯಯನದ ವ್ಯಾಪ್ತಿಯನ್ನು ಇನ್ನೂ ವಿಶಾಲ ವ್ಯಾಪ್ತಿಯಲ್ಲಿ ಚರ್ಚಿಸುವುದಕ್ಕೆ ಸಾಧ್ಯವಿದೆ. ಹಾಗೆ ನೋಡಿದಾಗ ಇಂದು ಜನಪ್ರಿಯವಾಗುತ್ತಿರುವ ಹೊಸ ಅಧ್ಯಯನ ಕ್ಷೇತ್ರವಾದ ‘ದಕ್ಷಿಣ ಏಷ್ಯಾ ಅಧ್ಯಯನ’ (South Assian Stdies) ಕ್ಷೇತ್ರದಲ್ಲಿ ಭಾರತವೂ ಸೇರಿದಂತೆ ದಕ್ಷಿಣ ಭಾರತದದ ಅಧ್ಯಯನವೂ ಸೇರ್ಪಡೆಯಾಗುತ್ತದೆ. ಇಡಿಯ ದಕ್ಷಿಣ ಏಷ್ಯಾವನ್ನೇ ಭಾಷಿಕ, ಭೌಗೋಳಿಕ ಸಾಂಸ್ಕೃತಿಕ ಘಟಕವಾಗಿ ಇಂತಹ ಅಧ್ಯಯನದಲ್ಲಿ ಪರಿಗಣಿಸಲಾಗುತ್ತದೆ. ದಕ್ಷಿಣ ಭಾರತದಂತಹ ಯಾವತ್ತೂ ಅಧ್ಯಯನಗಳಿಗೆ ಅದು ಸೂಕ್ತವಾದ ‘ಪರಿಪ್ರೇಕ್ಷ್ಯ’ ವಾಗುತ್ತದೆ. ವಿಶ್ವದ ಅನೇಕ ವಿಶ್ವವಿದ್ಯಾಲಯಗಳಲ್ಲಿ ದಕ್ಷಿಣ ಏಷ್ಯಾ ಅಧ್ಯಯನದಡಿಯಲ್ಲೇ ದಕ್ಷಿಣ ಭಾರತದ ಅಧ್ಯಯನವನ್ನೂ ಪರಿಗಣಿಸಲಾಗುತ್ತದೆ. ಅಂತಹ ವಿಶಾಲವಾದ ಅಧ್ಯಯನ ಕ್ಷೇತ್ರಕ್ಕೆ ಪ್ರವೇಶಿಕೆಯೊಂದನ್ನು ರೂಪಿಸುವುದು ಇಲ್ಲಿಯ ಉದ್ಧೇಶವಾಗಿದೆ.

ಪರಾಮರ್ಶನಗ್ರಂಥಗಳು

1. Aiyangar K., Some Contributions of South India to Indian Culture. Cosmo Publications, New Delhi, 1981

2. Aloka Parasher – sen, Social and Economic History of Early Deccan : Some Interpretations. Manohar,1993.

3. Baierlein, The Land of the Tamilians And its Missions. Asian Educational Services, New Delhi, 1955.

4. Bhandarkar .R.G., Early History of the Dekkan. Assian Educational Services, New Delhi, 1985.

5. Burton Stein, Peasant State and Society In Medieval South India. Delhi, Oxford University Press, Oxford. 1994.

6. Chatterji S.K., Dravidian Annamalai University Annamalinagar 1965.

7. Dipakranjan Das, Economic History of the Deccan. Munsharm Manoharlal, Delhi, 1967.

8. Dubreuil G.J. Ancient History of Deccan. Delhi, 1979

9. Gribble. J.D.E, History of the Deccan. Mittal Publications. New Delhi 1990.

10. Jones Kenneth W. Socioreligious Reform movements in British India. Combridge University Press, Cambridge, 1994.

11. Krishnaswami Aiyanar S. South India and Her Muhammadan Invaders. Assian Educational Services, New Delhi, 1991.

12. Nilakanta Sastri, A History of South India, Oxford University Press Oxford, Delhi 1999.

13. Prakash Chander, Encylopaedia of Indian History Ancient, Medieval : A.P.H. Publishing Corporation, New Delhi 1999.

14. Sivaramamurti, Royal Conquests and Cultural Migrations in South India and The Deccan. Indian Museum, Calcutta 1964.

15. Savariroyan.D.Pandit, The Tamilian Antiquary. Asian Educational Services, New Delhi, 1986.

16. Yazdani G. (Ed), The Early History of Deccan, Oxford University Press Oxford, 1960.

17. Wilk Mark, Historical Sketches of the South Indian History. Cosmo Publications, New Delhi, 1980.