೧೯ನೆಯ ಶತಮಾನದಾದಿಯ ರಮ್ಯ ಚಳುವಳಿಯು ಇತರೆ ಹಲವಾರು ವಿಷಯಗಳ ಜತೆಗೆ, ನಮ್ಮ ಪ್ರಸ್ತುತ (ವರ್ತಮಾನದ) ಸ್ಥಿತಿಗತಿಗಳನ್ನು ಅರಿತುಕೊಳ್ಳುವಲ್ಲಿ ನಮ್ಮ ಗತದ ಬಗೆಗಿನ ತಿಳುವಳಿಕೆ ಎಷ್ಟು ಮಹತ್ವದ್ದು? ಮತ್ತು ಎಷ್ಟು ಮುಖ್ಯವಾದುದೆಂಬುದನ್ನೂ ತೋರಿಸಿಕೊಟ್ಟಿತು. ಇಂದಿನ ಸ್ಥಿತಿ – ಗತಿಗಳ ಮೂಲ ಹಾಗೂ ಅದರ ನಿರ್ಣಾಯಕವಾದ ಸಾಂಸ್ಕೃತಿಕ ಮತ್ತು ಸಮಾಜೋ – ರಾಜಕೀಯ ಶಕ್ತಿಗಳನ್ನೂ ಬೆಳಕಿಗೆ ತಂದಿತು. ಪ್ರಾಚೀನ ಗ್ರೀಕ್, ರೋಮನ್, ಹೀಬ್ರೂ ಮತ್ತು ಜರ್ಮನ್ ಆಕರಗಳಿಂದ ಐರೋಪ್ಯ (ಪಾಶ್ಚಾತ್ಯ) ಸಂಸ್ಕೃತಿಯನ್ನು ಕಂಡುಕೊಳ್ಳುವಲ್ಲಿ ಅನ್ವೇಷಕ ಮನಸ್ಸು ದೂರಪೂರ್ವದ ಅದರಲ್ಲೂ ಪ್ರಬಲವಾಗಿ ಚೈನಾ ಮತ್ತು ಭಾರತದಂತಹ ಪೌರ್ವಾತ್ಯ ಪ್ರಭಾವಗಳ ಜತೆ ಗುರುತಿಸಿಕೊಂಡಿತು. ಹೀಗೆ ಚಾರಿತ್ರಿಕ ಪ್ರಜ್ಞೆಯು ಉದಯವಾದ ಅವಧಿಯಲ್ಲೇ ತೌಲನಿಕ ಭಾಷಾಶಾಸ್ತ್ರ, ಭಾಷಾವಿಜ್ಞಾನ ಮತ್ತು ಭಾರತಾಧ್ಯಯನಗಳಂತಹ ವಿದ್ವತ್ (ಪಂಡಿತ) ಶಿಸ್ತುಗಳೂ ಅಸ್ತಿತ್ವಕ್ಕೆ ಬಂದುವು. ಪ್ರಾರಂಭಿಕ ಹಂತದಲ್ಲಿ ಇವೆಲ್ಲಾ ಹೆಚ್ಚು ಕಡಿಮೆ ಚಾರಿತ್ರಿಕ ಪ್ರಜ್ಞೆಯ (ಅಧ್ಯಯನದ) ಶಾಖೆಗಳಾಗಿಯೇ ನಡೆಯುತ್ತಿದ್ದವು. ವಿಲ್ಹೆಹೆಲ್ಮ್ ವೊನ್ ಹಂಬೋಲ್ಟ್, ಫ್ರೆಡರಿಕ್ ವೂನ್ ಶ್ಲೆಗಲ್ ಹಾಗೂ ೧೮೨೦ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದ ಇಂಡೋಜರ್ಮನಿಕ್ ಸ್ಟಡೀಸ್ ವಿಭಾಗದಲ್ಲಿ ಪ್ರಾಧ್ಯಾಪಕನಾಗಿ ನಿಯುಕ್ತನಾದ ಫ್ರಾನ್ಜ್ – ಬಾಪ್ವ್ ಇವರುಗಳು ತೌಲನಿಕ ಭಾಷಾಶಾಸ್ತ್ರ ಅಥವಾ ಭಾಷಾವಿಜ್ಞಾನ ಕ್ಷೇತ್ರದ ಮಾರ್ಗ ಪ್ರವರ್ತಕರೆನ್ನಬಹುದು. (ಪ್ರಸ್ಸಿಯಾದ ಆಗಿನ ಶಿಕ್ಷಣ ಮಂತ್ರಿಯಾಗಿದ್ದ ವಿಲ್‌ಹೆಲ್ಮ ವೂನ್ ಹಂಬೋಲ್ಟ್‌ನಿಂದ ೧೮೧೦ರಲ್ಲಿ ರಚಿಸಿದ ಹಲವು ಸಂಪುಟಗಳುಳ್ಳ ಕೃತಿಯು ತೌಲನಿಕ ಭಾಷಾಶಾಸ್ತ್ರ/ಭಾಷಾವಿಜ್ಞಾನಗಳ ಹುಟ್ಟನ್ನು ಗುರುತಿಸಿತು. (ಬೊಟ್ಟು ಮಾಡಿತು.) “ಆನ್ ದ ಕಾನ್ಜುಗೇಷನ್ ಸಿಸ್ಟಮ್ ಆರ್ಫ ಸಂಸ್ಕೃತ್ ಇನ್ ಕಂಪೇರಿಸನ್ ವಿದ್ ದಾಟ್ ಆಫ್ ದ ಗ್ರೀಕ್, ಲ್ಯಾಟಿನ್, ಪರ್ಶಿಯನ್ ಆಂಡ್ ಜರ್ಮಾನಿಕ್ ಲಾಂಗ್ಯುವೇಜಸ್, ವಿದ್ ಎಡಿಷನಲ್ ಎಪಿಸೋಡ್ಸ್ ಫ್ರಮ್ ದಿ ಒರಿಜಿನಲ್ ಟೆಕ್ಸ್ಟ್ ಆಂಡ್ ವಿದ್ ಸೆವೆರಲ್ ಪ್ಯಾಸೇಜಸ್ ಫ್ರಮ್ ದಿ ವೇದಾಸ್” (ಗ್ರೀಕ್, ಲ್ಯಾಟಿನ್, ಪರ್ಶಿಯನ್ ಮತ್ತು ಜರ್ಮನ್ ಭಾಷೆಗಳ ತುಲನೆಯಲ್ಲಿ ಸಂಯೋಗ ವ್ಯವಸ್ಥೆಯ ಕುರಿತು ರಾಮಾಯಣ ಮತ್ತು ಮಹಾಭಾರತದ ಹೆಚ್ಚುವರಿ ಭಾಗಗಳ ಮೂಲಪಠ್ಯಗಳ ಯಥಾ ಛಂದಸ್ಸಿನ ಅನುವಾದ ಹಾಗೂ ವೇದಗಳ ಹಲವು ಭಾಗಗಳೊಂದಿಗೆ) ಎಂಬ ಅದರ ಶೀರ್ಷಿಕೆಯೇ ಅತ್ಯಂತ ಗಂಭೀರವಾಗಿದೆ. ಇದರ ಬೆನ್ನಲ್ಲೇ, ಅಂದರೆ ೧೮೨೦ರಲ್ಲಿ “ಅನಾಲಿಟಿಕಲ್ ಕಂಪೇರಿಸನ್ ಆಫ್ ದಿ ಸಂಸ್ಕೃತ್, ಗ್ರೀಕ, ಲ್ಯಾಟೀನ್ ಆಂಡ್ ಟ್ಯೂಟಾನಿಕ್ ಲ್ಯಾಂಗುವೇಜಸ್, ಶೋವಿಂಗ್ ದಿ ಒರಿಜನಲ್ ಐಡೆಂಟಿಟಿ ಆರ್ಫ ದೆಯರ್ ಗ್ರಮಾಟಿಕಲ್ ಸ್ಟ್ರಕ್ಚರ್” (ವ್ಯಾಕರಣ ಸ್ವರೂಪದ ಮೂಲ ಅನನ್ಯತೆಯನ್ನು ತೋರಿಸುವ ಸಂಸ್ಕೃತ, ಗ್ರೀಕ, ಲ್ಯಾಟೀನ್ ಹಾಗೂ ಟ್ಯೂಟಾನಿಕ ಭಾಷೆಗಳ ವಿಶ್ಲೇಷಣಾತ್ಮಕ ತುಲನೆ)

[ಆನ್ನಲ್ಸ್ ಆಫ್ ಓರಿಯೆಂಟಲ್ ಲಿಟರೇಚರ್, ಲಂಡನ್] ಎಂಬ ಕೃತಿಯೂ ಪ್ರಕಟವಾಯಿತು.

ಭಾರತ್ಯಾಧ್ಯಯನದ ಮೊದಲ ಜರ್ಮನ್ ಪೀಠವು ಬಾನ್ನ್ ವಿಶ್ವವಿದ್ಯಾಲಯದಲ್ಲಿ, ೧೮೧೮ರಲ್ಲಿ ಸ್ಥಾಪಿತವಾಯಿತು. ಫ್ರೆಡರಿಕ್ ವೂನ್ ಶ್ಲೇಗಲ್‌ನ ಅಣ್ಣನಾದ ಆಗಸ್ಟ್ ವಿಲ್ಹ್‌ಹೆಲ್ಮ ವೂನ್ ಶ್ಲೇಗಲ್‌ನು ಅದರ ಅಧ್ಯಕ್ಷನಾದನು. ೧೮೦೮ರಲ್ಲಿ ಫ್ರೆಡರಿಕ್ ವೂನ್‌ಶ್ಲೇಗಲ್‌ನು “ಆನ್ ದ ಲಾಂಗುವೇಜ್ ಆಂಡ್ ವಿಸ್ಡಮ್ ಆಫ್ ದ ಇಂಡಿಯನ್ಸ್” (ಭಾರತೀಯರ ಭಾಷೆ ಮತ್ತು ವಿವೇಕದ ಕುರಿತು) ಎಂಬ ಕೃತಿಯನ್ನು ಪ್ರಕಟಿಸಿದನು. ಈ ಕೃತಿಯು ೧೭೯೧ರಲ್ಲಿ ಜಾರ್ಜ್‌ ಫಾಸ್ಟರನು ಪ್ರಕಟಿಸಿದ ಕಾಳಿದಾಸನ ಶಾಕುಂತಲದ ಮೊದಲ ಜರ್ಮನ ಭಾಷೆಗೆ ಭಾಷಾಂತರದ ಜತೆ ಸೇರಿ ಜರ್ಮನ್ ಭಾರತಾಧ್ಯಯನದ ಸ್ಥಾಪನೆಗೆ ಪ್ರೇರಕವಾಯಿತೆನ್ನಬಹುದು.

ಶ್ಲೇಗಲ್ ಸಹೋದರರು ಫ್ರೆಂಚ್ ವಿದ್ವಾಂಸನಾದ ಎ.ಎಲ್.ಡಿ. ಚೆಜಿಯ ಜತೆ ನಿಕಟ ಸಂಪರ್ಕವಿರಿಸಿಕೊಂಡಿದ್ದರು. ಎ.ಎಲ್.ಡಿ. ಚೆಜಿಯು ೧೮೧೮ರಲ್ಲಿ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿತವಾದ ಮೊದಲ ಯುರೋಪಿಯನ್ ಸಂಸ್ಕೃತ ಪೀಠದ ಅಧ್ಯಕ್ಷನಾಗಿದ್ದನು. ಆಗಸ್ಟ್ ವಿಲ್‌ಹೆಲ್ಮ್ ವೊನ್ ಶ್ಲೇಗಲನು ಮೂಲತಃ ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ವಿದ್ವಾಂಸಲ. ಇದಲ್ಲದೆ ಆತ ಶೇಕ್ಸ್‌ಪಿಯರ್ ಕೃತಿಗಳ ಸಮರ್ಥ ಭಾಷಾಂತರಕಾರನೂ ಆಗಿದ್ದನು. ೧೮೨೩ರಲ್ಲಿ ಆತನು ಮೂಲ ಸಂಸ್ಕೃತ ಪಠ್ಯದೊಂದಿಗೆ ಭಗವದ್ಗೀತೆಯ ಲ್ಯಾಟಿನ್ ಭಾಷಾಂತರವೊಂದನ್ನು ಸಂಪಾದಿಸಿದನು. ೧೮೨೯ರಲ್ಲಿ ರಾಮಾಯಣದ ಆಯ್ದ ಭಾಗವನ್ನು ಲ್ಯಾಟಿನ್ ಭಾಷಾಂತರದೊಂದಿಗೆ ಸಂಪಾದಿಸಿದನು. ೧೮೨೩ ಮತ್ತು ೧೮೩೦ರ ನಡುವೆ ಆತ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಜನಜೀವನದ ಅಧ್ಯಯನವನ್ನೊಳಗೊಂಡ “ಇಂಡಿಯನ್ ಲೈಬ್ರೆರಿ” (ಭಾರತೀಯ ಗ್ರಂಥಾಲಯ) ಎಂಬ ಮೂರು ಸಂಪುಟಗಳ ಗ್ರಂಥವನ್ನು ಪ್ರಕಟಿಸಿದನು. ಅದರಲ್ಲಿ “ದ ಪ್ರಸೆಂಟ್ ಸ್ಟೇಟ್ ಆಫ್ ಇಂಡಿಯನ್ ಫಿಲಾಲಜಿ” (ಭಾರತೀಯ ಭಾಷಾಶಾಸ್ತ್ರದ ಇಂದಿನ ಸ್ಥಿತಿಗತಿ) ಎಂಬ ಸ್ವತಃ ಆತನ ಒಂದು ಪ್ರಬಂಧವೂ ಸೇರಿದೆ. ಅಂತಿಮವಾಗಿ ‘ಹಿತೋಪದೇಶ’ದ ವ್ಯಾಖ್ಯಾನ ಸಹಿತವಾದ ಲ್ಯಾಟಿನ್ ಭಾಷಾಂತರಕ್ಕಾಗಿ ನಾವಾತನಿಗೆ ಋಣಿಯಾಗಿರಬೇಕಾಗುತ್ತದೆ. ಈ ಕೆಲಸಗಳು ಯುರೋಪಿನಲ್ಲಿನ ವ್ಯವಸ್ಥಿತವಾದ ಸಂಸ್ಕೃತಾಧ್ಯಯನ ಮತ್ತು ವ್ಯಾಪಕವಾದ ಭಾರತಾಧ್ಯಯನಗಳ ಹುಟ್ಟನ್ನು ಗುರುತಿಸಿತೆಂದು ಹೇಳುವಲ್ಲಿ ಅತಿಶಯೋಕ್ತಿಯೇನು ಇಲ್ಲ. ಆಗಸ್ಟ್ ವಿಲ್‌ಹೆಲ್ಮ್ ವೊನ್ ಶ್ಲೇಗಲನು ಬಾನ್‌ನಲ್ಲಿ ಜರ್ಮನಿಯ ಮೊತ್ತ ಮೊದಲ ದೇವನಾಗರಿ ಮುದ್ರಣಾಲಯವನ್ನು ಸ್ಥಾಪಿಸಿ, ಅದರಲ್ಲಿ ‘ಭಗವದ್ಗೀತೆ’ ಯನ್ನು ದೇವನಾಗರಿ ಲಿಪಿಯಲ್ಲಿ, ಲ್ಯಾಟಿನ್ ಭಾಷಾಂತರದೊಂದಿಗೆ ಮುದ್ರಿಸಿದನೆಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕಾಗುತ್ತದೆ.

ಭಾರತಾಧ್ಯಯನದೊಳಗಡೆ ಬಿಂಬಿತವಾಗಿರುವ ದ್ರಾವಿಡಾಧ್ಯಯನದ ಕುರುಹುಗಳ ಕುರಿತು ಮಾತನಾಡಬೇಕಾದ ಉಪನ್ಯಾಸದಲ್ಲಿ ಯಾಕೆ ನಾನು ಈ (ಮೇಲಿನ) ಅಂಶಗಳನ್ನೆಲ್ಲಾ ಪ್ರಸ್ತಾಪಿಸಿದೆ? ಅದಕ್ಕೆ ಉತ್ತರ ಸರಳವಾಗಿದೆ : ಯಾಕೆಂದರೆ ಪ್ರಾರಂಭಿಕ ಹಂತದಲ್ಲಿ ಭಾರತಾಧ್ಯಯನವೆಂಬುದು ಬಹುಮಟ್ಟಿಗೆ ಸಂಸ್ಕೃತಾಧ್ಯಯನದೊಂದಿಗೆ ಅಭೇದವಾಗಿ ಗುರುತಿಸಿಕೊಂಡಿತ್ತು. (ಸಂಸ್ಕೃತಾಧ್ಯಯನಕ್ಕೆ ಸಂವಾದಿಯಾಗಿತ್ತು.) ಸಂಸ್ಕೃತಾಧ್ಯಯನದ ಈ ಪ್ರಾಬಲ್ಯವನ್ನು ಕ್ರಿ.ಶ.೧೯ನೆಯ ಶತಮಾನದ ಕೊನೆಯ ವೇಳೆಗೆ ಮ್ಯಾಕ್ಸ್ ಮುಲ್ಲರನು ಗುರುತಿಸಿದ್ದಾನೆ. ತನ್ನ ಕೊನೆಯ ಕೃತಿಯಾದ “ದ ಸಿಕ್ಸ್ ಸಿಸ್ಟಮ್ಸ್ ಆಫ್ ಇಂಡಿಯನ್ ಫಿಲಾಸಫಿ” (ಭಾರತೀಯ ತತ್ತ್ವಶಾಸ್ತ್ರದ ಆರು ಪ್ರಸ್ಥಾನಗಳು) ಯಲ್ಲಿ ಆತ ದ್ರಾವಿಡಾಧ್ಯಯನ ಕ್ಷೇತ್ರವನ್ನು ಕಡೆಗಣಿಸಿದ್ದರೂ ವಿಶಾಲವೂ ಪ್ರಶಂಸನೀಯವೂ ಆದ ಸಂಸ್ಕೃತಾಧ್ಯಯನದ ಬಗೆಗೆ ತರುಣ ವಿದ್ವಾಂಸರ ಗಮನವನ್ನು ಸೆಳೆದಿದ್ದಾನೆ :

“ಭಾರತದ ದಕ್ಷಿಣ ಭಾಗದಲ್ಲಿ ತತ್ತ್ವಶಾಸ್ತ್ರೀಯ ಸಾಹಿತ್ಯವೊಂದು ಅಸ್ತಿತ್ವದಲ್ಲಿದೆ. ಅದು ಸಂಸ್ಕೃತ ಪ್ರಭಾವದ ಸ್ಪಷ್ಟ ಸುಳಿವನ್ನು ನೀಡಬಹುದಾದರೂ ಮಹಾನ್ ಸೌಂದರ್ಯದ ಹಾಗೂ ಚಾರಿತ್ರಿಕ ಮಹತ್ವವುಳ್ಳ ಮೂಲ, ಸ್ಥಳೀಯ ಅಂಶಗಳನ್ನೂ ಒಳಗೊಂಡಿದೆ. ದುರದೃಷ್ಟವಶಾತ್ ಇದುವರೆಗೆ ಕೆಲವೇ ಮಂದಿ ವಿದ್ವಾಂಸರು ಮಾತ್ರ ದ್ರಾವಿಡ ಭಾಷೆಗಳ ಮತ್ತು ಸಾಹಿತ್ಯದ ಅಧ್ಯಯನವನ್ನು, ಕೈಗೊಂಡಿದ್ದಾರೆ. ಆದರೆ ಸಂಸ್ಕೃತ ಸಾಹಿತ್ಯದಲ್ಲಿ ಇನ್ನು ಅಧ್ಯಯನ ನಡೆಸುವಂಥಾದ್ದೇನೂ ಉಳಿದಿಲ್ಲ ಎಂದು ದೂರುವ ತರುಣ ವಿದ್ಯಾರ್ಥಿಗಳಿ ಆ (ದ್ರಾವಿಡಾಧ್ಯಯನ) ಕ್ಷೇತ್ರದಲ್ಲಿ ತೃಪ್ತಿಕರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ನಾನು ಭಾವಿಸುತ್ತೇನೆ”.

ಮ್ಯಾಕ್ಸ್‌ಮುಲ್ಲರನು ಸಂಸ್ಕೃತಾಧ್ಯಯನ ಕ್ಷೇತ್ರದಲ್ಲಿ ಗಮನಾರ್ಹ ಸಂಶೋಧನೆ ನಡೆಸಿದವನು ೧೮೪೯ ಮತ್ತು ೧೮೭೪ ರ ನಡುವೆ ಆರು ಸಂಪುಟಗಳಲ್ಲಿ ಆತ ಪ್ರಕಟಿಸಿದ ‘ಋಗ್ವೇದ’ದ ವಿಮರ್ಶಾತ್ಮಕ ಆವೃತ್ತಿಯು ಮೊದಲ ಸಂಪೂರ್ಣ ಆವೃತ್ತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಿದ್ದರೂ ಕೂಡ ೧೮೪೬ರ ತನಕ ಆತ ವಾಸವಾಗಿದ್ದ ಇಂಗ್ಲೆಂಡ್‌ನಲ್ಲಿ ಆತನಿಗೆ ಭಾರತಾಧ್ಯಯನ ಅಥವಾ ಸಂಸ್ಕೃತಾಧ್ಯಯನಕ್ಕೆ ಸಂಬಂಧಿಸಿದ ಯಾವುದೇ ಪೀಠವನ್ನೂ ಕೂಡ ಮಾಡಲಿಲ್ಲ. ಆತ ಜನ್ಮತಃ ಬ್ರೀಟಿಷ್‌ರವನ್ನಲವೆಂಬುದು ಇದಕ್ಕೆ ಒಂದು ಕಾರಣವಾಗಿರಬಹುದು. ಭಾರತೀಯ ರಾಜಕೀಯ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿದ್ದ ಹಠವಾದಿಯೂ, ಪ್ರಾಮಾಣಿಕ (ವಿಶ್ವಾಸ ಪಾತ್ರ)ನೂ ಅದ ವಕೀಲನಾಗಿದ್ದನೆಂಬುದು ಇನ್ನೊಂದು ಕಾರಣವಾಗಿರಬಹುದು. ಆದರೆ ಹೆಚ್ಚು ಕಾಲ ಆತನನ್ನು ಪಕ್ಕಕ್ಕಿಡಲು ಸಾಧ್ಯವಾಗಲಿಲ್ಲ. ಕೊನೆಗೂ ೧೮೬೮ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಆತನಿಗಾಗಿಯೇ ತೌಲನಿಕ ಭಾಷಾಶಾಸ್ತ್ರದ ವಿಶೇಷ ಪೀಠವೊಂದು ಸ್ಥಾಪಿತವಾಯಿತು. ಆತನು ಪ್ರಧಾನ ಸಂಪಾದಕನಾಗಿದ್ದ ಸ್ಮರಣೀಯ ಕೃತಿ ‘ದ ಸೇಕ್ರೆಡ್ ಬುಕ್ಸ್ ಆಫ್ ದ ಈಸ್ಟ್’ (ಪೂರ್ವದ ಪವಿತ್ರ ಗ್ರಂಥಗಳು) ಆತನನ್ನು ತೌಲನಿಕ ಧರ್ಮಶಾಸ್ತ್ರದಲ್ಲಿ ಅಧಿಕೃತನ್ನಾಗಿ ಮಾಡಿತು. ೧೮೬೭ರಲ್ಲಿ ಅದನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪಠ್ಯ ಕ್ರಮದಲ್ಲಿ ಒಂದು ಹೊಸ ಶಿಸ್ತನಾಗಿಯೂ ಪರಿಚಯಿಸಲಾಯಿತು. (ಆಳವಡಿಸಲಾಯಿತು). ಯುರೋಪಿಯನ್ ಭಾರತಾಧ್ಯಯನಕಾರರ ಆದರ್ಶಪ್ರಾಯವಾದ ಈ ಸಾಮೂಹಿಕ ಕೃತಿಯ ಒಟ್ಟು ೫೧ ಸಂಪುಟಗಳಲ್ಲಿ ೩೧ ಸಂಪುಟಗಳು ಭಾರತೀಯ ಪಠ್ಯಗಳಿಗೆ ಮೀಸಲಾಗಿವೆ. ಗ್ರಂಥದ ಪ್ರಸ್ತಾವನೆ (ಮುನ್ನುಡಿ)ಯಲ್ಲಿನ ಕೆಳಗಿನ ಮಾತುಗಳು ಮ್ಯಾಕ್ಸ್ ಮುಲ್ಲರನ ಆಧ್ಯಾತ್ಮಿಕ ಧಾರ್ಮಿಕ ದೃಷ್ಟಿಕೋನವನ್ನು ಬಿಂಬಿಸುತ್ತವೆ. ಜತೆಗೆ ಸಂಪುಟದ ಪ್ರಮುಖ ಉದ್ದೇಶವನ್ನೂ ತೆರೆದಿಡುತ್ತವೆ :

“ಪ್ರಶ್ನೆಯೆಂದರೆ, ಇಲ್ಲಿನ ಪ್ರತಿಯೊಂದು ಪವಿತ್ರ ಗ್ರಂಥದಲ್ಲೂ ಮಾನವ ಹೃದಯವನ್ನು ಮರ್ತ್ಯದಿಂದ ಉನ್ನತ ಲೋಕಕ್ಕೇರಿಸುವಂತಹುದೇನಾದರೂ ಅಡಗಿದೆಯೆ? ಇಲ್ಲವೇ? ಅತೀತ ಶಕ್ತಿಯ ಸರ್ವವ್ಯಾಪಕತೆ ಬಗೆಗೆ ಮಾನವನನ್ನು ಚಿಂತನೆಗೆ ಹಚ್ಚುವಂತಹುದೇನಾದರೂ ಅಡಗಿದೆಯೆ? ಇಲ್ಲವೇ? ಸಂತಸದ ಉಜ್ವಲ ಕ್ಷಣಗಳು ಮತ್ತು ಸಂಕಟದ ಭೀಕರ ಅವಧಿಗಳಿಂದೊಡಗೂಡಿದ ಜೀವನದ ಅಲ್ಪಕಾಲದ ಯಾತ್ರೆಯಲ್ಲಿ ಆಸರೆಯಾಗುವಂತಹುದೇನಾದರೂ ಅಡಗಿದೆಯೆ? ಇಲ್ಲವೇ?”

ಇದರಿಂದ ನಾವು ಅಂತಿಮವಾಗಿ ಆತನ ತೌಲನಿಕ ಅಧ್ಯಯನವು ಆತನೇ ಹೆಸರಿಸುವ ‘ಮಾನವಶಾಸ್ತ್ರೀಯ ಧರ್ಮ’ದಲ್ಲಿ ಪರ್ಯವಸಾನಗೊಳ್ಳುತ್ತದೆಂಬುದನ್ನು ತಿಳಿದುಕೊಳ್ಳಬಹುದು. ೧೮೯೧ರಲ್ಲಿ ಆತ ಗ್ಲಾಸ್ಗೋ ವಿಶ್ವವಿದ್ಯಾಲಯದಲ್ಲಿ ನೀಡಿದ ಗಿಪೋರ್ಡ್ ಉಪನ್ಯಾಸಗಳು ಪ್ರಕಟವಾಗಿದ್ದು, ಅದರ ಮುನ್ನುಡಿಯಲ್ಲಿ ಆತ ಹೇಳುವ ಮಾತುಗಳನ್ನು ಗಮನಿಸಬಹುದು :
“ದೇವರಲ್ಲಿ ನಂಬಿಕೆಯಿರುವುದನ್ನು, ಆತ್ಮದ ಅಮೃತತ್ವದಲ್ಲಿ ನಂಬಿಕೆಯನ್ನು, ಭವಿಷ್ಯದಲ್ಲಿ ಕರ್ಮಫಲ ಪ್ರಾಪ್ತಿಯಾಗಬಹುದೆಂಬುದನ್ನು ಮತ್ತು ಪ್ರಾಪ್ತಿಯಾಗದೆಂಬುದನ್ನು, ಆದರೆ ವಿಶೇಷ ದಿವ್ಯದರ್ಶನ ಸಹಾಯವಿಲ್ಲದೆ ಮನುಷ್ಯ ನಿಮಿತ್ತದ ಸೂಕ್ತ ಪ್ರಯತ್ನ (ಅಭ್ಯಾಸ) ವೊಂದರಿಂದಲೇ ಅದನ್ನು ಪಡೆಯಬಹುದೆಂಬುದನ್ನು ತೋರಿಸಿಕೊಡಬಹುದಾಗಿದೆ. ಚಾರಿತ್ರಿಕ ಅ‌ನ್ವೇಷಣೆಯ ಮೂಲಕ ನಾನಿದನ್ನು ಸಾಧಿಸಿ ತೋರಿಸಲು ಪ್ರಯತ್ನಿಸಿದ್ದೇನೆ. ಸಮೃದ್ಧವಾಗಿರುವ ಫಸಲಿನಿಂದ ಕೆಲವನ್ನು ಆಯ್ದುಕೊಳ್ಳಲು ನಾನು ಪ್ರಯತ್ನಿಸಿದ್ದೇನೆ. ಆದರೆ ಸದ್ಯ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗಿಂತಲೂ ಹೆಚ್ಚಿನ ಕೆಲಸಗಾರರ ಅವಶ್ಯಕತೆಯಿದೆ. ಈ ಕೆಲಸವನ್ನು ಮಾಡುವಲ್ಲಿ ನಾನು ನಮ್ಮ ಕಾಲದ ಮಹಾನ್ ಧರ್ಮಶಾಸ್ತ್ರಜ್ಞರ ಹೆಜ್ಜೆ ಗುರುತುಗಳನ್ನಷ್ಟೆ ಅನುಸರಿಸುತ್ತಿದ್ದೇನೆಂದು ಭಾವಿಸಿದ್ದೆ. ಪೂರ್ವದ ಪವಿತ್ರ ಗ್ರಂಥಗಳಿಂದ ಆಯ್ದ ಸಮೃದ್ಧವಾದ ಚಾರಿತ್ರಿಕ ಸಾಕ್ಷ್ಯಾಧಾರಗಳನ್ನು ನೀಡಿ ನಿಜವಾದ ಧರ್ಮದ ಧ್ಯೇಯವನ್ನು ಉಣಬಡಿಸುತ್ತಿದ್ದೇನೆಂದು ಭಾವಿಸಿದ್ದೆ. ಸಂತ ಪಾವುಲ್, ಚರ್ಚಿನ ಪಾದ್ರಿಗಳು (ಧರ್ಮಗುರುಗಳು), ಮಧ್ಯಕಾಲೀನ ಧರ್ಮಶಾಸ್ತ್ರಜ್ಞರು, ಆಧುನಿಕ ದೈವಿಕಗಳ ಬಗ್ಗೆ ತಜ್ಞರೆನಿಸಿದ ಕೆಲವರು ಇವರೆಲ್ಲಾ ಮತ್ತೆ ಮತ್ತೆ ಇದನ್ನೇ ಪ್ರತಿಪಾದಿಸಿದರು. ಅವರಿಗೆಲ್ಲಾ ಆ ನಿಟ್ಟಿನಲ್ಲಿ ಪರಿಣಾಮಕಾರಿ ಪುರಾವೆಗಳನ್ನೊದಗಿಸಿ ದವುಗಳು ಕ್ರೈಸ್ತೇತರ ಧರ್ಮಗಳ ದಾಖಲೆಗಳು. ಆದರೆ ನಮಗೆ ಅವುಗಳು ತಡವಾಗಿ ಪೌರ್ವಾತ್ಯ ವಿದ್ವಾಂಸರ, ಅದರಲ್ಲೂ ಮುಖ್ಯವಾಗಿ ಭಾರತದ ಪ್ರಾಚೀನ ಸಾಹಿತ್ಯದ ವಿದ್ಯಾರ್ಥಿಗಳ ತಾಳ್ಮೆಯ ಸಂಶೋಧನೆಗಳ ಮೂಲಕ ಸುಲಭ ಗಮ್ಯವಾದುವು”.

ನಾನೀಗಾಗಲೇ ಹೇಳಿದಂತೆ, ಮಹಾನ್ ದ್ರಾವಿಡಾಧ್ಯಯನಕಾರರ ಕುರಿತಾದ ಉಪನ್ಯಾಸದಲ್ಲಿ ಇದನ್ನೆಲ್ಲಾ ಪ್ರಸ್ತಾಪಿಸುತ್ತಿರುವುದು ಅಪ್ರಸ್ತುತವೆಂದು ತೋರಬಹುದು. ಆದರೆ ೧೮ನೆಯ ಶತಮಾನದಾಂತ್ಯದಲ್ಲಿ ಮತ್ತು ೧೯ನೆಯ ಶತಮಾನದಾದಿಯಲ್ಲಿ ಸಂಸ್ಕೃತಾಧ್ಯಯನದೊಂದಿಗೆ ಪ್ರಾರಂಭವಾದ ಭಾರತಶಾಸ್ತ್ರದ ವ್ಯವಸ್ಥಿತವಾದ ಅಧ್ಯಯನವನ್ನು ತೋರಿಸಲು ಈ ವಿವರಗಳು ಅಗತ್ಯವೆಂದು ನಾನು ಭಾವಿಸುತ್ತೇನೆ. ಆದರೆ, ಇಲ್ಲಿ ಮತ್ತೆ ಮತ್ತೆ ಅವಜ್ಞೆಗೊಳಗಾದ ಮತ್ತೊಂದು ಕಾರಣವೂ ಇದೆ. ಸಂಸ್ಕೃತಾಧ್ಯಯನಗಳು ಹೆಚ್ಚು ಕಡಿಮೆ ವಿದ್ವತ್ಕಾರಣಗಳಿಗಾಗಿ ಮಾತ್ರ ನಡೆದರೆ, ದ್ರಾವಿಡ ಭಾಷೆ ಮತ್ತು ಸಾಹಿತ್ಯಗಳ ಅಧ್ಯಯನಗಳು ಅವುಗಳ ಪ್ರಾರಂಭದ ದೆಸೆಯಿಂದಲೇ, ಅಂದರೆ ೧೮ನೇ ಶತಮಾನದಾದಿಯಿಂದಲೇ ಕ್ರೈಸ್ತ, ಧಾರ್ಮಿಕ ಸಂಬಂಧವನ್ನು ಬಲವಾಗಿ ಹೊಂದಿದ್ದುವು. ಅನ್ಯಧರ್ಮೀಯರ ನಡುವೆ ಕ್ರೈಸ್ತ ಸುವಾರ್ತೆಗಳನ್ನು ಪ್ರಚಾರಪಡಿಸಿ, ದೇವರಲ್ಲಿ ಕ್ರೈಸ್ತರಿಗಿರುವ ನಂಬಿಕೆಯೊಂದೇ ಸತ್ಯ ಮತ್ತು ಮುಕ್ತಿಯ ಕಡೆಗಿರುವ ಏಕಮಾತ್ರ ಮಾರ್ಗವೆಂಬುದನ್ನು ಮಾತು ಹಾಗೂ ಕೃತಿಯ ಮೂಲಕ ಅವರಿಗೆ ಮನವರಿಕೆ ಮಾಡಿಕೊಡಲು ದ್ರಾವಿಡ ಭಾಷೆ – ಸಾಹಿತ್ಯವನ್ನು ಬಳಸಿಕೊಳ್ಳಲಾಯಿತು.

ನಾನಿದನ್ನು ಅಪಾರ್ಥ ಮಾಡಿಕೊಳ್ಳುವುದಿಲ್ಲ. ಇಂತಹ ಸಂಬಂಧವು ದ್ರಾವಿಡಾಧ್ಯಯನಕಾರರ ವಿದ್ವತ್ಸಾಧನೆಗಳನ್ನು ಮಸುಕುಗೊಳಿಸಿದುವೆಂದು ನಾನು ಹೇಳಲಾರೆ. ಹಿಂದೂವೇತರರು ಕೈಗೊಂಡ ದ್ರಾವಿಡಾಧ್ಯಯನಗಳಲ್ಲಿ ನೈತಿಕ – ಧಾರ್ಮಿಕ ಪ್ರಾಯೋಗಿಕ ಧ್ಯೇಯವು ಸೈದ್ಧಾಂತಿಕ ಸಂಶೋಧನೆಯಿಂದ ಪ್ರತ್ಯೇಕಿಸಲ್ಪಡಲಿಲ್ಲವೆಂಬುದನ್ನು ನಾನು ಹೇಳಬಯಸುತ್ತೇನೆ. ಈ ಅಂತರ್ ಸಂಬಂಧವು ಆವರದ್ದೇ ಆದ ಇತ್ಯಾತ್ಮಕ ಮತ್ತು ನೇತ್ಯಾತ್ಮಕ ಫಲಶ್ರುತಿಗಳನ್ನು ಹೊಂದಿದೆ. ಮಿಶನರಿ ವಿದ್ವಾಂಸರು ಕೈಗೊಂಡ ಆರ್ದಶ ಪ್ರಾಯವಾದ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳು, ಗ್ರಾಮೋದ್ಧಾರ ಚಟುವಟಿಕೆಗಳು, ಬಾಲ್ಯವಿವಾಹ, ಸತೀಸಹಗಮನಗಳಂತಹ ಅನಿಷ್ಟ ಪದ್ಧತಿಗಳನ್ನು ತೊಲಗಿಸುವಲ್ಲಿ ಅವರು ನಡೆಸಿದ ಸಾರ್ಥಕ ಸಾಧನೆಗಳು – ಇವೆಲ್ಲಾ ಇತ್ಯಾತ್ಮಕ ಫಲಿತಾಂಶಗಳನ್ನು ಪ್ರಕಟಪಡಿಸುತ್ತವೆ. ಪುರಾಣ, ಪವಾಡ ಹಾಗೂ ದೈವಿಕ ವಿಚಾರಗಳಲ್ಲಿ ಕ್ರೈಸ್ತರಿಗಿರುವ ನಂಬಿಕೆಗಳಿಗೂ, ಸ್ಥಳೀಯರಿಗಿದ್ದ ನಂಬಿಕೆಗಳಿಗೂ ನಡುವೆ ನಡೆದ ಸಂಘರ್ಷಗಳೇ ನೇತ್ಯಾತ್ಮಕ ಫಲಶ್ರುತಿಗಳೆನ್ನಬಹುದು. ಆದರೆ, ಒಟ್ಟಾರೆಯಾಗಿ ನಾವೀಗ ಪ್ರಸ್ತಾಪಿಸಲಿರುವ ಜರ್ಮನಿಯ ಮಹಾನ್ ದ್ರಾವಿಡಾಧ್ಯಯನಕಾರರ ಸಂದರ್ಭದಲ್ಲಿ ಇತಾತ್ಮಕ ಅಂಶಗಳೇ ಮೇಲುಗೈ ಪಡೆಯುತ್ತವೆ.

ಜರ್ಮನ್ ದ್ರಾವಿಡಾಧ್ಯಯನದ ಕುರಿತು ಮಾತನಾಡುವಾಗ ಯಾವನೇ ಆದರೂ ಭಾರತಕ್ಕೆ ಬಂದ ಮೊದಲ ಪ್ರೊಟೆಸ್ಟೆಂಟ್ ಮಿಷನರಿಯೂ, ಮೊದಲ ದ್ರಾವಿಡಾಧ್ಯಯನಕಾರನೂ ಆದ ಬಾರ್ತೊಲೋಮಿಯಸ್ ಜೀಗನ್‌ಬಾಲ್ಗ (೧೬೮೨ – ೧೭೧೯)ನನ್ನು ಉಲ್ಲೇಖಿಸದೆ ಮುಂದುವರಿಯುವಂತಿಲ್ಲ. ೧೭೧೯ ರ ಫೆಬ್ರವರಿ ೨ ರಂದು ಆತ ನಿಧನ ಹೊಂದಿದಾಗ ಆತನಿಗಿನ್ನೂ ೩೬ರ ಎಳೆಹರೆಯ. ಕೊನೆಯ ೧೫ ವರ್ಷಗಳ ಕಾಲ ಆತ ಡೆನ್ಮಾರ್ಕ್ ಮತ್ತು ನಾರ್ವೆಯ ರಾಜನ ಸೇವೆಯಲ್ಲಿ ಟ್ರಾಂಕ್ಯುಬಾರಿನಲ್ಲಿ ನೆಲೆಸಿದ್ದ. (ಟ್ರಾಂಕ್ಯುಬಾರ್ ಡ್ಯಾನಿಷ್ ಈಸ್ಟ್ ಇಂಡಿಯಾ ಕಂಪನಿಗೆ ತಂಜಾವೂರಿನ ರಾಜನು ಭೋಗ್ಯಕ್ಕೆ ಕೊಟ್ಟಿದದ ದ್ಯಾನಿಷ್‌ನ ಆಗಿನ ಆರ್ಥಿಕ ಹಾಗೂ ಸೈನಿಕ ನೆಲೆಯಾಗಿತ್ತು).

೧೭೧೬ರಲ್ಲಿ ಈಸ್ಟ್ ಜರ್ಮನಿಯ ಹಾಲ್ಲೆಯಲ್ಲಿ ಪ್ರಕಟವಾದ “ಗ್ರಮುಟಿಕಾ ದಮುಲಿಕಾ” ಕೃತಿಯ ರಚನೆಯು ನಿಜವಾಗಿಯೂ ಟ್ರಾಂಕುಬಾರ್‌ನಲ್ಲಿ ಜೀಗನ್‌ಬಾಲ್ಗನು ಕೈಗೊಂಡ ಮಹತ್ವದ ಕೆಲಸವೆನ್ನಬಹುದು. (ಟ್ರಾಂಕ್ಯುಬಾರ್ ಎಂಬ ಸ್ಥಳನಾಮವು ತಮಿಳಿನ ‘ತರಂಗ ಬಡಿ’ ಎಂಬ ಅರ್ಥವಿದೆ.) ಲ್ಯಾಟಿನ್ ಶೀರ್ಷಿಕೆಯುಳ್ಳ ಈ ಕೃತಿಯು “ಯುರೋಪಿನಲ್ಲಿ ಈಗಲೂ ಅಪರಿಚಿತವಾಗಿರುವ, ಈಸ್ಟ್ ಇಂಡಿಯನ್ನರ ನಡುವೆ ಮಾತನಾಡಲ್ಪಡುವ ತಮಿಳು ಅಥವಾ ಮಲಬಾರಿ ಭಾಷೆಯನ್ನು ಕಲಿಯಲಿರುವ ಸುಲಭ ವಿಧಾನವನ್ನು ವಿವಿಧ ಉದಾಹರಣೆಗಳು, ನಿಯಮಗಳು ಹಾಗೂ ಅವಶ್ಯ ಶಬ್ದಕೋಶದ ಮೂಲಕ ” ಹೇಳುತ್ತದೆ.

ಅಂದಿನ ಕಾಲದಲ್ಲಿ, ಅದೇ ರೀತಿ ಇಪ್ಪತ್ತನೆಯ ಶತಮಾನದ ಮಧ್ಯಬಾಗದ ವರೆಗೂ ‘ಮಲಬಾರ್’ ಎಂಬುದು ಹೆಚ್ಚುಕಡಿಮೆ ಭಾರತದ ದಕ್ಷಿಣಭಾಗದ ಇಡಿಯ ಮದರಾಸು ಪ್ರಾಂತಕ್ಕೆ ಪರ್ಯಾಯ ಹೆಸರಾಗಿತ್ತೆಂಬುದೆನ್ನು ನಾವಿಲ್ಲಿ ಅವಶ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಆದರೆ, ಇಂದು ಕೇರಳ, ಕರಾವಳಿ ಮತ್ತು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕರಾವಳಿ ಪ್ರದೇಶಕ್ಕಷ್ಟೆ ಈ ಹೆಸರು ಸೀಮಿತಗೊಂಡಿದೆ.

‘ನೀದಿ ವುನ್ಪಾ’ (ಅಥವಾ ‘ನೀದಿ ವೆನ್ಬಾ’)ದ ಭಾಷಾಂತರವೂ ದಕ್ಷಿಣ ಭಾರತದ ಹಿಂದೂ ತತ್ತ್ವಶಾಸ್ತ್ರ ಮತ್ತು ನೀತಿಶಾಸ್ತ್ರದ ಕಡೆಗೆ ಜೀಗನ್‌ಬಾಲ್ಗನಿಗಿದ್ದ ನಿಷ್ಪಕ್ಷಪಾತ (ಪೂರ್ವಗ್ರಹ ರಹಿತ) ಸಮೀಪವನ್ನು ತೋರಿಸಿಕೊಡುವ ಇನ್ನೊಂದು ಕೃತಿಯೆನ್ನಬಹುದು. ಇದು ತಮಿಳು ಪಠ್ಯವೊಂದರ ಮೊದಲ ಪದ್ಯ ಮಾಧ್ಯಮದ ಭಾಷಾಂತರವೂ ಹೌದು. ೧೭೦೮ರ ಆಗಸ್ಟ್ ೩೦ ರಂದು ನೈತಿಕತೆಯ ಕುರಿತಾದ ಒಂದು ನೂರು ಸಾಲುಗಳ ಈ ಭಾಷಾಂತರಕ್ಕೆ ಮುನ್ನುಡಿ ಬರೆಯುತ್ತಾ ಜೀಗನ್‌ಬಾಲ್ಗನು ಹೀಗೆ ಹೇಳುತ್ತಾನೆ :

“ಮಲಬಾರಿನ ಮಿಧರ್ಮೀಯರು (ಅನ್ಯ ಧರ್ಮೀಯರು) ಪಾಂಡಿತ್ಯ ಅಥವಾ ನೈತಿಕತೆಯ ಬಗೆಗೆ ಏನೇನೂ ಗೊತ್ತಿಲ್ಲದ ಅನಾಗರೀಕರೆಂದು ಯುರೋಪಿನಲ್ಲಿರುವ ಬಹುಪಾಲು ಕ್ರೈಸ್ತರು ಭಾವಿಸಿದ್ದಾರೆ. ಇದೇನಿದ್ದರೂ ಅವರ ಭಾಷೆಯ ಬಗೆಗೆ ಸರಿಯಾದ ತಿಳುವಳಿಕೆಯಿಲ್ಲದೆ, ಕೇವಲ ಹೊರಮೈ ಲಕ್ಷಣಗಳಾಧಾರದಿಂದ ಕೈಗೊಂಡ ಅವಸರದ ತೀರ್ಮಾನವಾಗಿದೆ. ನಾನು ಮೊದಲ ಬಾರಿಗೆ ಇಲ್ಲಿಯ ಅನ್ಯ ಧರ್ಮೀಯರ ನಡುವೆ ಬಂದಾಗ ಅವರ ಭಾಷೆಯು ನಿರ್ದಿಷ್ಟ ನಿಯಮಗಳುಳ್ಳ ಭಾಷೆ, ಅವರ ಜೀವನವು ಸರಿಯಾದ ಜೀವನ ಎಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಅಷ್ಟರ ಮಟ್ಟಿಗೆ ನಾನು ಅವರಲ್ಲಿ ನಾಗರಿಕರಿಲ್ಲ, ನೈತಿಕ ಕಾನೂನುಗಳಿಲ್ಲ – ಎಂಬುದಾಗಿ ನಂಬಿದ್ದೆ. ಇದನ್ನು ನಾನು ಒಪ್ಪಿಕೊಳ್ಳಲೇಬೇಕು…

…ಆದರೆ ಕೊನೆಗೆ ಅವರ ಗ್ರಂಥಗಳನ್ನೆಲ್ಲಾ ಓದಲು ಸಮರ್ಥನಾದ ಮೇಲೆ ನಾನೀಗ ಸಂಪೂರ್ಣ ಜ್ಞಾನವನ್ನು ಪಡೆದಿದ್ದೇನೆ. ಯುರೋಪಿಲನ ವಿದ್ವಾಂಸರೊಡನೆ ವಿನಿಮಯ ಮಾಡಿಕೊಳ್ಳಲು ಯೋಗ್ಯವಾದ ಮಹತ್ವದ ತತ್ತ್ವಶಾಸ್ತ್ರೀಯ ಶಿಸ್ತುಗಳು ಅವರಲ್ಲಿವೆ. ಎಲ್ಲಾ ಧರ್ಮಶಾಸ್ತ್ರೀಯ ವಿಷಯಗಳ ಹುಟ್ಟಿಗೂ, ಪ್ರತಿಪಾದನೆಗೂ ಮೂಲವಾಗಿರಬಹುದಾದ ಲಿಖಿತ ಕಾನೂನುಗಳು ಅವರಲ್ಲಿವೆ. ಇವೆಲ್ಲಾ ನನ್ನನ್ನು ಬೆರಗುಗೊಳಿಸಿದುವು. ಅವರ ಸ್ವಂತ ಬರೆಹಗಳ ಮೂಲಕವೇ ಅವರ ಧಾರ್ಮಿಕ ನಂಬಿಕೆಗಳ ಬಗೆಗೆ ಸಾಧ್ಯವಾದಷ್ಟು ಕಲಿತುಕೊಳ್ಳಬೇಕೆಂಬ ಹೆಬ್ಬಯಕೆ ನನ್ನಲ್ಲಿ ಮೂಡಿತು. ಅದಾದ ನಂತರ ನಾನು ಒಂದರ ಮೇಲೊಂದರಂತೆ ಪುಸ್ತಕಗಳನ್ನು ಪಡೆದುಕೊಂಡು, ಸಮಯವನ್ನೂ ದುಡ್ಡನ್ನೂ ವ್ಯರ್ಥ ಮಾಡದೆ ನಿರಂತರ ವ್ಯಾಸಂಗಕ್ಕೆ ತೊಡಗಿದೆ. ಈ ಗ್ರಂಥಾಧ್ಯಯನದ ಮೂಲಕವೂ, ಇಲ್ಲಿಯ ಬ್ರಾಹ್ಮಣರು ಅಥವಾ ಪುರೋಹಿತರೊಂದಿಗೆ ನಡೆಸಿದ ಚರ್ಚೆಗಳ ಮೂಲಕವೂ ನಾನೀಗ ಅವರ ಬಗೆಗೆ ಸ್ವಲ್ಪವದರೂ ಖಚಿತವದ ಸಂಗತಿಗಳನ್ನು ತಿಳಿದುಕೊಂಡಿದ್ದೇನೆ. ಅವುಗಳಿಗೆ ಕಾರಣಗಳನ್ನೂ ನೀಡಬಲ್ಲವನಾಗಿದ್ದೇನೆ”.

೧೭೦೮ರಲ್ಲಿ ಜೀಗನ್‌ಬಾಲ್ಗನು ಅನುವಾದಿಸಿದ ‘ಕೊಂಡ್ರೆಯ್ ವೇಂಡನ್’ (ಮಲಬಾರಿ ನೀತಿಗಳು) ಮತ್ತು ‘ಉಲಗ ನೀದಿ'(ಲೋಕನೀತಿ) ಕೃತಿಗಳು ಪ್ರಕಟವಾದವು.

ಚರ್ಚಿನ ಅಧಿಕಾರಿಗಳು ಕ್ರೈಸ್ತ ಮಿಷನರಿಗಳಿಂದ ಸಾಮಾನ್ಯವಾಗಿ ಏನನ್ನು ನಿರೀಕ್ಷಿಸುತ್ತಾರೋ, ಅದಕ್ಕೆ ಪೂರಕವಾಗಿ ಜೀಗನ್‌ಬಾಲ್ಗನೂ ಇಲ್ಲಿನ ಕ್ರೈಸ್ತೇತರರಿಗಾಗಿ ಏಸುವಿನ ಸುವಾರ್ತೆಗಳನ್ನು ಪ್ರಚಾರಪಡಿಸುವ ಕಾರ್ಯವನ್ನು ಕೈಗೊಂಡನು. ಅದಕ್ಕಾಗಿ ಆತನು ಲೂಥರನ ‘ಲಿಟಲ್ ಕ್ಯಾಟೆಚ್‌ಸಮ್’ನ್ನು ತಮಿಳಿಗೆ ಭಾಷಾಂತರಿಸಿದನು. ಬೈಬಲಿನ ಕೆಲಭಾಗಗಳನ್ನೂ, ಅಸಂಖ್ಯ ಕ್ರೈಸ್ತ ಸ್ತೋತ್ರ ಗೀತೆಗಳನ್ನು ಲಿಪೀಕರಿಸಿದನು. ಆದರೆ ಅವುಗಳಿಗಿಂತಲೂ ಹೆಚ್ಚಾಗಿ ಸ್ಥಳೀಯರ ಧಾರ್ಮಿಕ, ನೈತಿಕ ಹಾಗೂ ಸಾಂಸ್ಕೃತಿಕ ತತ್ತ್ವಗಳನ್ನೂ, ಆಚಾರ – ವಿಚಾರಗಳನ್ನೂ ಅರ್ಥ ಮಾಡಿಕೊಳ್ಳುವ ಕಾರ್ಯದಲ್ಲಿ ಆತನು ನಿರತನಾಗಿದ್ದನು. ತನ್ನ ಮೇಲಧಿಕಾರಿಗಳು ಸಂಶಯ ಪಡುವಷ್ಟರಮಟ್ಟಿಗೆ ಆತನು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದನು. ಆತನು ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಪ್ರಚಾರ ಪಡಿಸಲು ಬಂದವನೇ ಹೊರತು, ಪಶ್ಚಿಮದಲ್ಲಿ ಹಿಂದೂ ಧರ್ಮವನ್ನು ಪ್ರಚಾರ ಪಡಿಸಲು ಬಂದವನಲ್ಲವೆಂಬುದು ಅವರ ಅಭಿಪ್ರಾಯವಾಗಿತ್ತು. ಈ ಕಾರಣಕ್ಕಾಗಿಯೇ ಜೀಗನ್‌ಬಾಲ್ಗನ ಹೆಚ್ಚಿನ ಕೃತಿಗಳೂ ಆತನ ಮರಣಾನಂತರ ಪ್ರಕಟವಾದುವು. ಕೆಲವಂತೂ ಆತನ ಅಕಾಲಿಕ ಮರಣದ ೧೫ ವರ್ಷಗಳ ಬಳಿಕ ಬೆಳಕು ಕಂಡುವು. ಉದಾಹರಣೆಗೆ ೧೭೧೩ರಲ್ಲಿ ಪೂರ್ಣಗೊಂಡ ಆತನ “ಜೀನಿಯಾಲಜಿ ಆಫ್ ಮಲಬಾರ್ ಗಾಡ್ಸ್” (ಮಲಬಾರಿನ ದೇವರುಗಳ ವಂಶಾವಳಿ) ಕೃತಿಯು ಮದರಾಸಿನಲ್ಲಿ ೧೮೬೭ರಲ್ಲಿ ಸಂಪಾದಿತವಾಯಿತು.

೧೯ನೆಯ ಶತಮಾನದ ಜರ್ಮನಿಯ ಪ್ರಮುಖ ತಮಿಳು ವಿದ್ವಾಂಸನೆಂದರೆ ಕಾರ್ಲ್‌ (ಫ್ರೆಡರಿಕ್ ಲಿಬರೆಕ್ಟ್) ಗ್ರಾವುಲ್ (೧೮೧೪ – ೬೪) ಎಂದು ನಿಸ್ಸಂದೇಹವಾಗಿ ಹೇಳಬಹುದು. ಸಮುದ್ರದೀಚೆಯಲ್ಲಿ – ಪ್ಯಾಲೆಸ್ತೀನ್, ಈಜಿಪ್ಟ್, ಶ್ರೀಲಂಕಾ ಮತ್ತು ಭಾರತಗಳಲ್ಲಿ ಆತ ಕೇವಲ ನಾಲ್ಕು ವರ್ಷಗಳ ಕಾಲವಷ್ಟೇ ವ್ಯಯಿಸಿದ್ದರೂ ಆತ ಮಾಡಿದ ವ್ಯವಸಾಯ ಮಾತ್ರ ಅಪಾರ. ಗ್ರಾವುಲನ “ಔಟ್‌ಲೈನ್ ಆಫ್ ತಮಿಳ್ ಗ್ರಾಮರ್” (೧೮೫೫) ಕೃತಿಯು ಮುಂದಿನ ಆತನ “ಬೈಬ್ಲಿಯೋಥಿಕಾ ತಮಿಲಿಕಾ ಸೀವ್ ಓಪೆರಾ ಪ್ರಾಸಿಪುವಾ ತಮಿಲೀನ್ಸಿಯಮ್” (ತಮಿಳು ಗ್ರಂಥಭಂಡಾರ ಅಥವಾ ತಮಿಳಿನ ಪ್ರಮುಖ ಸಾಹಿತ್ಯ ಕೃತಿಗಳು) ಗ್ರಂಥಕ್ಕೆ ಪೂರ್ವ ಪೀಠಿಕೆಯಂತಿದೆ. ಆತ ತನ್ನ ೫೦ನೇ ವಯಸ್ಸಿನಲ್ಲೇ ತೀರಿಕೊಂಡುದರಿಂದ ಈ ಗ್ರಂಥದ ಕೇವಲ ನಾಲ್ಕು ಸಂಪುಟಗಳಷ್ಟೇ ಪೂರ್ಣಗೊಳ್ಳಲು ಸಾಧ್ಯವಾಗಿದೆ.

“ತುಮಲಿಕ್ ಸ್ಕ್ರಿರ್ಪ್ಚರ್ ಕಮೆಂಟಿಂಗ್ ಆನ್ ದಿ ವೇದಾಂತ ಆರ್ ದಿ ಅರ್ಥಡಾಕ್ಸ್ ಫಿಲಾಸಪಿ ಆಫ್ ದ ಹಿಂದೂಸ್” ಎಂಬ ಪ್ರಬಂಧವನ್ನೊಳಗೊಂಡ ಮೊದಲ ಸಂಪುಟದಲ್ಲಿ (೧೮೫೪) ದ್ರಾವಿಡದ ಸಾಹಿತ್ಯಿಕ ಮತ್ತು ತತ್ತ್ವಶಾಸ್ತ್ರೀಯ ಆಕರಗಳನ್ನು ಸಾದರಪಡಿಸುವುದರ ಸಾಧ್ಯತಗೆ ಹಾಗೂ ಪ್ರಾಮುಖ್ಯವನ್ನು ಗ್ರಾವುಲನು ಹೀಗೆ ಗುರುತಿಸುತ್ತಾನೆ :

“ತಾತ್ತ್ವಿಕ ನೆಲೆಯಲ್ಲಿ ಸಂಸ್ಕೃತ ಮತ್ತು ತಮಿಳು ಸಾಹಿತ್ಯ ನಿಕಟವಾಗಿಯೂ, ಗಮನಾರ್ಹವಾಗಿಯೂ ಪರಸ್ಪರ ಪೂರಕವಾಗಿರುವುದರಿಂದ ನಾನು ತಮಿಳು ಗ್ರಂಥಭಂಡಾರದ ಈ ಮೊದಲ ಸಂಪುಟವನ್ನು ‘ಸಾಂಪ್ರದಾಯಿಕ ವೇದಾಂತ ಪಂಥ’ವೆಂಬ ಬರವಣಿಗೆಗಳಿಂದ ತುಂಬಲು ಬಯಸಿದ್ದೇನೆ. ಇವುಗಳಲ್ಲಿ ಮೊದಲನೆಯದು ಕೆಲವು ವರ್ಷಗಳ ಹಿಂದೆ ಸ್ಥಳೀಯರಿಂದ ಮದರಾಸಿನಲ್ಲಿ ಮುದ್ರಿತವಾಯಿತು. ಶ್ರೇಷ್ಠ ತಮಿಳು ಪದ್ಯದಲ್ಲಿರುವ ಈ ಪಠ್ಯವು ತಾಂಡವಮೂರ್ತಿ ಸ್ವಾಮಿಗಳಿಂದ ರಚಿತವಾದುದು. ಅದರ ಇತ್ತೀಚಿನ ವ್ಯಾಖ್ಯಾನವು ಪುರೈಜರುವಿನ ಅರುಣಾಚಲ ಸ್ವಾಮಿಗಳದ್ದು.

ಸಾಮಾನ್ಯ ತಮಿಳು ಗದ್ಯದಲ್ಲಿರುವ ಎರಡನೆಯ ಹಸ್ತಪ್ರತಿಯ ಕರ್ತೃ ವಿಟ್ಟಿಜರ ನಿಜಸ್ವಾಮಿಗಳೆಂಬುವರು. ಇದು ಓರ್ವ ವೇದಾಂತಿ ಮತ್ತು ತರ್ಕಶಾಸ್ತ್ರಜ್ಞ (ನೈಯಾಯಿಕ)ರೊಳಗಿನ ಸಂವಾದವನ್ನು ಪರಿಚಯಿಸುತ್ತಿದ್ದು, ವೇದಾಂತಿಗೆ ಅನುಕೂಲಕರವಾಗಿದೆ. ಇದು ಕೂಡ ಕೆಲವು ವರ್ಷಗಳ ಹಿಂದೆ ಡಿಂಡಿಗಲ್ ಮುದ್ರಣಾಲಯದಲ್ಲಿ ಮುದ್ರಿತವಾಗಿ ಸ್ಥಳೀಯರಿಂದಲೇ ಪ್ರಕಾಶಿತವಾಗಿದೆ. ಈ ಪಠ್ಯದ ಅನುವಾದವನ್ನು ಮುಖ್ಯವಾಗಿ ಮೊದಲನೆಯ ಹಸ್ತಪ್ರತಿಗೆ ಇನ್ನಷ್ಟು ಸ್ಪಷ್ಟತೆಯನ್ನು ಕೊಡುವ ದೃಷ್ಟಿಯಿಂದ ಮಾಡಲಾಗಿದೆ. ಹಾಗಿದ್ದರೂ ಅಲ್ಲಲ್ಲಿ ಒಂದೆರಡು ಕಳೆಯುವಿಕೆ, ಸೇರಿಸುವಿಕೆಗಳು ನಡೆದಿರಬಹುದೆಂದು ನಾನು ಬಾವಿಸಿದ್ದೇನೆ.

ಈ ಸಂಪುಟದಲ್ಲಿಯ ಮೂರನೆಯ ಚಿಕ್ಕ ಹಸ್ತಪ್ರತಿಯನ್ನು ಸೇರ್ಪಡೆಗೊಳಿಸುವ ಸಂದರ್ಭದಲ್ಲಿ ವೇದಾಂತ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಸಂಕ್ಷಪ್ತ ಹಿನ್ನೆಲೆಯೊಂದನ್ನು ನೀಡಿ ಮೇಲಿನ ಅಂಶಗಳನ್ನು ಇನ್ನಷ್ಟು ಸ್ಪಷ್ಟಗೊಳಿಸಬೇಕೆಂಬ ಕೆಲವರ ಅಭಿಪ್ರಾಯಗಳನ್ನು ನಾನು ಅಷ್ಟಾಗಿ ಪರಿಗಣಿಸಿಲಿಲ್ಲ. ಯುರೋಪಿನಲ್ಲಿ ಸಂಸ್ಕೃತ ಪಠ್ಯ ದುರ್ಲಭವಾಗಿರುವುದರಿಂದ ನಾನು ನನಗೆ ದೊರೆತ ತೆಲುಗು ಲಿಪಿಯ ಪಠ್ಯವನ್ನು ರೋಮನ್ ಲಿಪಿಗಿಳಿಸಿ, ಹಾಗೆಯೇ ಅದನ್ನು ಮುದ್ರಿಸಿದೆ”.

ಎರಡನೆಯ ಸಂಪುಟವು “ಕೈವಲ್ಯ ನವನೀತ” ದ ತಮಿಳು ಹಾಗೂ ಇಂಗ್ಲಿಷ್ ಅವತರಣಿಕೆಯಾಗಿದೆ. ಜತೆಗೆ ಪದಕೋಶ, ವ್ಯಾಕರಣಾತ್ಮಕ ಟಿಪ್ಪಣಿಗಳು ಹಾಗೂ ನೂರರಷ್ಟು ವಾಕ್ಸರಣಿ ಮತ್ತು ಪರಿಕಲ್ಪನೆಗಳಿಗೆ ವಿವರಣೆ – ವ್ಯಾಖ್ಯಾನಗಳನ್ನೂ ಇಲ್ಲಿ ನೀಡಲಾಗಿದೆ. “ದ ಕುರಲ್ ಆಫ್ ತಿರುವಳ್ಳುವರ್ ಅಂಡ್ ಎ ಸೆಂಟೆನ್ಯಿಯಸ್ ಪಾಯಮ್ ಆನ್ ದಿ ತ್ರೀ ಗೋಲ್ಸ್ ಆಫ್ ಮ್ಯಾನ್” (೧೮೫೬) ಎಂಬ ಶೀರ್ಷಿಕೆಯ ‘ಬೈಬ್ಲಿಯೋಥಿಕಾ ತಮುಲಿಕಾ’ ದ ಮೂರು ಮತ್ತು ನಾಲ್ಕನೆಯ ಸಂಪುಟಗಳು ದ್ರಾವಿಡಾಧ್ಯ ಯನಕಾರನಾಗಿ ಗ್ರಾವುಲನಿಗಿರುವ ಮಹತ್ವವನ್ನು ಪ್ರತಿಬಿಂಬಿಸುತ್ತವೆ. ೩ನೆಯ ಸಂಪುಟದಲ್ಲಿ ಗ್ರಾವುಲನು ನಮಗೆ ‘ಕುರಳ್’ನ ಜರ್ಮನ್ ಭಾಷಾಂತರವನ್ನು ಅದರ ತಮಿಳು ಮೂಲ, ಸಾಮಾನ್ಯ ತಮಿಳು ಆವೃತ್ತಿ, ವ್ಯಾಕರಣಾತ್ಮಕ ಟಿಪ್ಪಣಿ ಹಾಗೂ ಪದಕೋಶಗಳೊಂದಿಗೆ ಒದಗಿಸಿಕೊಡುತ್ತಾನೆ. ಕೊನೆಯ, ನಾಲ್ಕನೆಯ ಸಂಪುಟದಲ್ಲಿ ಅವರ ಲ್ಯಾಟಿನ್ ಭಾಷಾಂತರವನ್ನು ಕೊಡುತ್ತಾನೆ.

ಮಹತ್ವದ ಈ ವಿದ್ವತ್ಕೃತಿಯ ಸಿದ್ಧತೆ ಮತ್ತು ಸಂಪಾದನಾ ಕಾರ್ಯಕ್ಕೆ ಗ್ರಾವುಲನಿಗೆ ೧೨ ವರ್ಷಗಳಿಗೂ ಹೆಚ್ಚಿನ ಕಾಲವಧಿ ತಗುಲಿರಬೇಕು. ಜತೆಗೆ ಈ ಅಧಿಕೃತ ಪಠ್ಯವನ್ನು ಪೂರ್ಣವಾಗಿ ಅನುವಾದಿಸಿದ ಮೊದಲ ಯುರೋಪಿಯನ್ ವಿದ್ವಾಂಸನೆಂಬ ಕೀರ್ತಿಯೂ ಆತನಿಗೆ ಸಲ್ಲುತ್ತದೆ. ಗ್ರಾವುಲನ ಮಾತಲ್ಲೇ ಹೇಳುವುದಾದರೆ ಈ ಕೃತಿಯು “ಅತೀ ಪ್ರಾಚೀನ ಹಾಗೂ ಶ್ರೀಮಂತವಾದ ತಮಿಳು ಸಾಹಿತ್ಯದ ಮುತ್ತು”.

ಇಲ್ಲಿ ‘ಕುರಳ್’ನ್ನು ಉಪನಿಷತ್ತು ಮತ್ತು ಭಗವದ್ಗೀತೆಗಳಂತಹ ಪ್ರಾಚೀನ ಸಾಂಪ್ರದಾಯಿಕ ಹಿಂದೂ ಪಠ್ಯಗಳೊಂದಿಗೆ ಹೋಲಿಸಿ, ಮೌಲ್ಯಮಾಪನ ಮಾಡುತ್ತಾ ವ್ಯಕ್ತಪಡಿಸಿದ ಪ್ರತಿಕ್ರಿಯೆಯೊಂದು ಅತ್ಯಂತ ಕುತೂಹಲಕರವಾಗಿದೆ. ಮಧ್ಯ ಆಫ್ರಿಕಾದ ವೈದ್ಯನೂ, ಪ್ರಸಿದ್ಧ ಧರ್ಮಶಾಸ್ತ್ರಜ್ಞನೂ, ತತ್ತ್ವಶಾಸ್ತ್ರಜ್ಞನೂ, ಮಾನವ ಕುಲೋಪಕಾರಿಯೂ ಆದ ಆಲ್ಬರ್ಟ್ ಶ್ಯೂವಿಟ್ಸ್‌ರ್‌ನು ತನ್ನ ” ಇಂಡಿಯನ್ ಥಾಟ್ ಆಂಡ್ ಇಟ್ಸ್ ಡೆವೆಲಪ್‌ಮೆಂಟ್” (೧೯೩೫) ಎಂಬ ಗ್ರಂಥದಲ್ಲಿ ಜಗತ್ತನ್ನು (ಇಹವನ್ನು) ಸ್ವೀಕರಿಸುವ ಕುರಳಿನ ಕ್ರಮವನ್ನೂ, ಅದನ್ನು ನಿರಾಕರಿಸುವ ಬ್ರಾಹ್ಮಣೀಯ ಹಿಂದೂ ಧರ್ಮದ ಕ್ರಮವನ್ನೂ ತೌಲನಿಕವಾಗಿ ನೋಡುತ್ತಾ, ಕುರಳನ್ನು ಹೀಗೆ ಪ್ರಶಂಸಿಸುತ್ತಾನೆ :

“ಪ್ರಾಚೀನ ಭಾರತದ ಜನಪ್ರಿಯ ನೀತಿಕಾವ್ಯಗಳಲ್ಲೂ ಹಲವು ಕಥೆಗಳಲ್ಲೂ ಕ್ರಿಯಾಶೀಲ ಪ್ರೀತಿಯ ಆಲೋಚನೆಗಳು ಒಡಮೂಡುತ್ತವೆ. ಸುಮಾರು ಕ್ರಿ.ಶ.೨ನೆಯ ಶತಮಾನದ ಕೃತಿಯಾದ ‘ಕುರಳ್’ ನಲ್ಲಿ ಕಂಡುಬರುವ ನೀತಿಸೂತ್ರಗಳಲ್ಲಿ ಈ ಅಂಶಗಳು ವಿಶೇಷವಾಗಿ ಒಡಮೂಡಿವೆ”. ‘ಕುರಳ್’ ನ ಕುರಿತಾದ ಅವರ ಉತ್ಸಾಹ – ಸಂಭ್ರಮಗಳು ಕೆಳಗಿನ ಮಾತುಗಳಲ್ಲಿ ಒಟ್ಟುಗೂಡಿವೆ :

“ಕುರಳ್ ಕಾವ್ಯವು ಖಚಿತ ಪ್ರತಿಪಾದನೆಗಳೊಂದಿಗೆ ಸರಳವಾದ ನೈತಿಕ ಮಾನವತಾವಾದದ ಭಾವೆನಗಳನ್ನು ಚಿತ್ರಿಸುತ್ತದೆ. ಅದು ಮಾನವನ ಸ್ವಂತದ ಪ್ರಪಂಚದೆಡೆಗಿನ ನಡತೆಗೆ ಸಂಬಂಧಿಸಿದ ವೈವಿಧ್ಯಮಯವಾದ ಪ್ರಶ್ನೆಗಳ ಕುರಿತು ಸಂವೇದನಾಶೀಲವಾಗಿಯೂ ಇಂದ್ರಿಯ ಗ್ರಾಹ್ಯವಾಗುವಂತೆಯೂ ಮಾತನಾಡುತ್ತದೆ. ವಿಶ್ವಸಾಹಿತ್ಯದ ಬೇರಾವುದೇ ಸೂಕಿ ಸಂಗ್ರಹಗಳಲ್ಲೂ ಇಂತಹ ಉನ್ನತವಾದ ಜ್ಞಾನವು ದುರ್ಲಭವೆನ್ನಬಹುದು”

ನಾನೀಗ ಹರ್ಮನ್ ಗುಂಡರ್ಟ್‌ನ (೧೮೧೪ – ೯೩) ಕಡೆಗೆ ಮುಂದುವರಿಯುತ್ತೇನೆ ಆತನ ನೂರನೆಯ ಪುಣ್ಯತಿಥಿಯ ಅಂಗವಾಗಿ ಈ ವರ್ಷ (೧೯೯೩) ಮೇ ೧೯ ರಿಂದ ೨೨ರವರೆಗೆ ಪಶ್ಚಿಮ ಜರ್ಮನಿಯ ಸ್ಟುಟ್‌ಗಾರ್ಟ್‌‌ನಲ್ಲಿ ಅಂತಾರಾಷ್ಟ್ರೀಯ ಗುಂಡರ್ಟ್ ಸಮ್ಮೇಳನವೂ ನಡೆಯಿತು. ೨೦ ವರ್ಷಗಳಿಗೂ ಹೆಚ್ಚು ಕಾಲ ಆತ ಬಾಳಿ ಬದುಕಿದ ಭಾರತದ ದಕ್ಷಿಣ ಭಾಗದಲ್ಲಿ ತತ್ಸಂಬಂಧವಾದ ಆಚರಣೆಗಳು ಈಗಲೂ (ಆಗಸ್ಟ್ ೨೧, ೧೯೯೩) ಮುಂದುವರಿದಿವೆ. ಸ್ಟುಟ್ ಗಾರ್ಟ್‌ನಲ್ಲಿ ಗುಂಡರ್ಟ್ ಸಮ್ಮೇಳವನ್ನು ನಡೆಸಲು ಕಾರಣವೇನು? ಮೊದಲ ಸ್ಪಷ್ಟ ಕಾರಣವೆಂದರೆ ಆತ ಅಲ್ಲಿ ಹುಟ್ಟಿದನೆಂಬುದು. ಸಾಮಾನ್ಯವಾಗಿ ತಿಳಿದಿರದ ಇನ್ನೊಂದು ಕಾರಣವೆಂದರೆ, ದಕ್ಷಿಣ – ಪಶ್ಚಿಮ ಜರ್ಮನಿಯ ಈ ನಗರವು ದಶಕಗಳಿಂದಲೂ ‘ವಿದೇಶೀ ಸಂಬಂಧಗಳ ಸಂಸ್ಥೆ’ (ಇನ್‌ಸ್ಟಿಟ್ಯೂಟ್ ಫಾರ್ ಆಸ್‌ಲ್ಯಾಂಡ್ ಬೆಜಹಂಜೆನ್‌)ಗೆ ಆತಿಥ್ಯ ಕಲ್ಪಿಸಿದೆ ಎಂಬುದು. ಹೊರದೇಶಗಳ ಸಂಸ್ಕೃತಿಗಳನ್ನು ಜರ್ಮನಿಯಲ್ಲಿ ಪ್ರಸ್ತುತ ಪಡಿಸುವುದು ಈ ಸಂಸ್ಥೆಯ ಗುರಿಯಾಗಿದೆ. (ಭಾರತದಲ್ಲಿ ತನ್ನ ಶಾಖೆಗಳನ್ನು ಹೊಂದಿರುವ, ಮ್ಯಾಕ್ಸ್ ಮುಲ್ಲರ್ ನಾಮಾಂಕಿತ ಗೋಯೆಥ್ ಸಂಸ್ಥೆಯು ಇದೇ ರೀತಿ ಜರ್ಮನಿಯ ಇತಿಹಾಸ – ಸಂಸ್ಕೃತಿಗಳನ್ನು ಪ್ರತಿನಿಧಿಸುವ ಸಲುವಾಗಿ ಕಾರ್ಯಪ್ರವೃತ್ತವಾಗಿದೆ.) ಪ್ರಸ್ತುತ ಉಪನ್ಯಾಸದ ಮೂಲಕ ನಾನು ಹರ್ಮನ್ ಗುಂಡರ್ಟ್ ಹಾಗೂ ದ್ರಾವಿಡಾಧ್ಯಯನ ಕ್ಷೇತ್ರದ ಆತನ ಕೆಲವು ಸಹೋದ್ಯೋಗಿಗಳ ಸ್ಮರಣಾರ್ಥವಾಗಿ ನನ್ನ ಪಾಲಿನ ಕೊಡುಗೆ ನೀಡುತ್ತಿರುವುದಕ್ಕೆ ನನಗೆ ಬಹಳ ಸಂತೋಷ ವಾಗುತ್ತಿದೆ.

೧೮೩೬ರ ಜುಲಾಯಿ ೮ರಂದು ೨೨ ವರ್ಷ ಪ್ರಾಯದ ಪ್ರೊಟೆಸ್ಟೆಂಟ್ ಮಿಶನರಿಯಾದ ಹರ್ಮನ್ ಗುಂಡರ್ಟ್‌ನು ಮದರಾಸನ್ನು ತಲುಪಿದ. ಪ್ರಾಚೀನ ಗ್ರೀಕ್ ಮತ್ತು ಹೀಬ್ರೂ ಭಾಷೆಗಳಲ್ಲಿ ಪರಿಣಿತನಾಗಿದ್ದ ಆತನನ್ನು ಬ್ರಿಟೀಷ್ ಮಿಶನರಿಯ ಒಡನಾಡಿಯಾಗಿದ್ದ ಆಂಟನ್ ನಾರೀಸ್ ಗ್ರೋವ್ಸ್ ಎಂಬುವನು ತನ್ನ ಮಕ್ಕಳಿಗೆ ಆ ಭಾಷೆಗಳನ್ನು ಕಲಿಸುವ ಸಲುವಾಗಿ ಇಲ್ಲಿಗೆ ಕರೆಯಿಸಿಕೊಂಡನು. ಈ ಆಮಂತ್ರಣವು ಭಾರತದಲ್ಲಿ ಓರ್ವ ಮಿಶನರಿಯಾಗಿ ಕೆಲಸ ಮಾಡಬೇಕೆಂಬ, ೧೮೩೩ರಷ್ಟು ಪೂರ್ವದ ಗುಂಡರ್ಟ್‌ನ ಸ್ವಂತ ಯೋಜನೆಗಳನ್ನು ಪೂರೈಸಿಕೊಳ್ಳಲು ಸಹಕಾರಿಯಾಯಿತು. ಯುರೋಪಿನಲ್ಲಿರುವಾಗಲೇ ಅಲ್ಪಸ್ವಲ್ಪ ಬೆಂಗಾಲಿ ಮತ್ತು ಹಿಂದಿ ಭಾಷೆಗಳನ್ನು ಕಲಿತಿದ್ದ ಗುಂಡರ್ಟ್‌ನು ಭಾರತದ ದಕ್ಷಿಣ ಭಾಗಕ್ಕೆ ಬಂದ ಮೇಲೆ ತೆಲುಗು ಹಾಗೂ ತಮಿಳು ಪಾಠಗಳನ್ನು ಕಲಿಯತೊಡಗಿದ. ಗ್ರೋವ್ಸನ ವಿನಂತಿಯ ಮೇರೆಗೆ ಆಗಸ್ಟ್ ೧೮೩೬ರಲ್ಲಿ ತಿರುನಲ್ವೇಲಿಗೆ ತೆರಳಿದ ಗುಂಡರ್ಟ್‌ನಿಗೆ ಅಲ್ಲಿ ಜರ್ಮನ್ ಮಿಷನ್ನಿನ ಮುಖ್ಯಸ್ಥನಾಗಿದ್ದ ಕಾರ್ಲ್ ರೀನಿಯಸ್‌ನ ನಿರ್ಣಾಯಕ ಪ್ರಭಾವ ಉಂಟಾಯಿತು. ರೀನಿಯಸನು ೧೮೧೪ರಲ್ಲಿ ಭಾರತಕ್ಕೆ ಬಂದಿದ್ದ. ತನ್ನ ಮಿಶನರಿ ಕೆಲಸ ಮತ್ತು ಬೈಬಲಿನ ಭಾಗಶಃ ಅನುವಾದ ಕಾರ್ಯಗಳ ಜತೆಗೆ ರೀನಿಯಸನು ತಮಿಳು – ಇಂಗ್ಲೀಷ್ ನಿಘಂಟು ಹಾಗೂ ಇಂಗ್ಲೀಷಿನಲ್ಲಿ ತಮಿಳು ವ್ಯಾಕರಣ ಗ್ರಂಥಗಳನ್ನು ರಚಿಸಿಯೂ ಹೆಸರು ಮಾಡಿದ್ದ.

೧೮೩೭ರ ಮಾರ್ಚ್ ೩೧ರಂದು ಗುಂಡರ್ಟ್‌ನು ಮದರಾಸಿಗೆ ವಾಪಸಾದ ನಂತರ ಗ್ರೋವ್ಸನಿಂದ ಚಿತ್ತೂರಿನಲ್ಲಿ ನಿಯುಕ್ತನಾದ. ಆತನು ಅದೇ ವರ್ಷದ ಮೇ ೧ರಂದು ಅಲ್ಲಿಗೆ ಹೋದನು. ಒಂದು ವರ್ಷ ಕಾಲ ಅಲ್ಲಿ ಆತನು ಓರ್ವ ಧರ್ಮ ಭೋದಕನಾಗಿಯೂ, ಶಿಕ್ಷಕನಾಗಿಯೂ ಕೆಲಸ ಮಾಡಿದ. ಜತೆಗೆ ತನ್ನ ತಮಿಳು ಅಧ್ಯಯನವನ್ನೂ ಮುಂದುವರಿಸಿದ. ೧೮೩೮ರಲ್ಲಿ ರೀನಿಯಸನು ನಿಧನ ಹೊಂದಿದಾಗ ಗುಂಡರ್ಟ್‌ನು ತಿರುನಲ್ವೇಲಿಯಲ್ಲಿ ಆತನ ಸ್ಥಾನವನ್ನು ಸ್ವೀಕರಿಸಿದ. ಅಲ್ಲಿಯ ಬಹುತೇಕ ಮಿಷನರಿಗಳು ‘ಮಿಶನರಿ ಸೊಸಾಯಿಟಿ ಆಫ್ ಆಂಗ್ಲಿಕನ ಚರ್ಚ್’ನ್ನು ಸೇರಿದರು. ಅದರ ಮೇಲುಸ್ತುವಾರಿಯಲ್ಲಿ ಕೆಲಸ ನಿರ್ವಹಿಸಲು ಗುಂಡರ್ಟ್‌ನಿಗೆ ಅಷ್ಟು ಇಷ್ಟವಿರಲಿಲ್ಲ. ಹಾಗಾಗಿ ೧೮೩೯ರ ಮೇ ೨೯ ರಂದು ಆತ ಮಂಗಳೂರಿನ ಬಾಸೆಲ್ ಮಿಶನರಿ ಸೊಸಾಯಿಟಿಯನ್ನು ಸೇರಿದನು. ಕಲ್ಲಿಕೋಟೆಯ (ಕೋಝಿಕ್ಕೋಡ್) ಕೆಳಭಾಗದ ಈ ಪ್ರದೇಶದಲ್ಲಿ ಗುಂಡರ್ಟ್‌ನು ಪ್ರಸ್ತುತ ಸೊಸಾಯಿಟಿಯನ್ನು ಸ್ಥಾಪಿಸಿ, ಅಭಿವೃದ್ಧಿಪಡಿಸಿದನು. ಮುಖ್ಯವಾಗಿ ಅಂಚನಕ್ಕಂಡಿ, ತಲಚ್ಚೇರಿ, ಚಿರಕ್ಕಲ್ ಮತ್ತು ಕಲ್ಲಿಕೋಟೆ (ಕೋಝಿಕ್ಕೋಡ್)ಗಳಲ್ಲಿ ಈ ಸೊಸಾಯಿಟಿಯಡಿ ಆತ ಕೆಲಸ ನಿರ್ವಹಿಸಿದನು. ಇದೇ ಅವಧಿಯಲ್ಲಿ ಗುಂಡರ್ಟ್‌ನು ಮತ್ತೊಂದು ದ್ರಾವಿಡ ಭಾಷೆಯಾದ ಮಲಯಾಳಂ ಕಡೆಗೆ ಆಸಕ್ತಿವಹಿಸಿದ. ಕೆಲ ಕಾಲದಲ್ಲೇ ಅದು ಆತನ ಅಚ್ಚುಮೆಚ್ಚಿನ ಭಾಷೆಯಾಯಿತು.

೧೮೪೯ರಲ್ಲಿ ತೀವ್ರತರವಾದ ಗಂಟಲು ಸೋಂಕಿನಿಂದಾಗಿ ಕಾಯಿಲೆ ಬಿದ್ದುದರಿಂದ ಕೆಲ ವರ್ಷಗಳ ಕಾಲ ಆತನಿಗೆ ಭೋದನೆ, ಆಧ್ಯಾಪನಗಳು ಸಾಧ್ಯವಾಗಲಿಲ್ಲ. ಹಾಗಾಗಿ ಆತ ಉತ್ಕಟೇಚ್ಛೆಯಿಂದ ಪೂರ್ಣಪ್ರಮಾಣದಲ್ಲಿ ಸ್ವತಃ ಭಾಷಾಶಾಸ್ತ್ರೀಯ ಅನ್ವೇಷಣೆಗಳಲ್ಲಿ ತೊಡಗಿಕೊಂಡ. ಆ ವರ್ಷಗಳಲ್ಲಿ ಗುಂಡರ್ಟ್‌ನು “ಗ್ರಾಮ್ಮರ್ ಆಫ್ ದ ಮಲಯಾಳಂ ಲಾಂಗ್ಯುವೇಜ್” (ಮಲಯಾಳಂ ಭಾಷೆಯ ವ್ಯಾಕರಣ) ಗ್ರಂಥವನ್ನು ರಚಿಸಿದನು. (ಮಂಗಳೂರು, ೧೮೫೧), ‘ಹೊಸ ಒಡಂಬಡಿಕೆ’ ಯನ್ನು ಮಲಯಾಳಂಗೆ ಭಾಷಾಂತರಿಸಿದನು. ಮಲಯಾಳಂ ಪದ್ಯ ಮತ್ತು ಗದ್ಯಗಳನ್ನೊಳಗೊಂಡ ಸಾಹಿತ್ಯ ಸಂಪುಟವೊಂದನ್ನು ಪ್ರಕಟಿಸಿದುದಲ್ಲದೆ, ತನ್ನ ಮಲಯಾಳಂ – ಇಂಗ್ಲಿಷ್ ನಿಘಂಟುವಿನ ಕೆಲಸವನ್ನೂ ಪ್ರಾರಂಭಿಸಿದನು. ಈ ಕೃತಿಯು ಮುಂದೆ ಆತ ಜರ್ಮನಿಗೆ ಹಿಂತಿರುಗಿದ ಮೇಲೆ ಪೂರ್ಣಗೊಂಡು ೧೮೭೨ರಲ್ಲಿ ಪ್ರಕಟವಾಯಿತು. ಮಂಗಳೂರಿನಲ್ಲಿ ಕೆಲಕಾಲವಿದ್ದ ಗುಂಡರ್ಟ್‌ನನ್ನು ೧೮೫೭ರಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತವು ಕೆನರಾ ಮತ್ತು ಮಲಬಾರ್ ಪ್ರಾಂತಗಳ ಶಾಲೆಗಳಿಗೆ ಪರಿವೀಕ್ಷಕನನ್ನಾಗಿ ನೇಮಿಸಿತು. ಎರಡು ವರ್ಷಗಳ ನಂತರ, ಅಂದರೆ ಏಪ್ರಿಲ್, ೧೮೫೯ರಲ್ಲಿ ತನ್ನ ಆರೋಗ್ಯ ತಪ್ಪಿದುದರಿಂದ ಗುಂಡರ್ಟ್‌ನು ಭಾರತವನ್ನು ತೊರೆಯಬೇಕಾಗಿ ಬಂತು. ಮತ್ತೆ ಎಂದಿಗೂ ಆತ ಇಲ್ಲಿಗೆ ವಾಪಸಾಗಲಿಲ್ಲ.

ಜರ್ಮನಿಯಲ್ಲಿ ಕಾಲ್ವರ್ ವರ್ಲಗ್ಸ್ ವರೇನ್ ಎಂಬ ಪ್ರಕಾಶನ ಸಂಸ್ಥೆಯ (ಆಗ ಬೆಳೆಯುತ್ತಿದ್ದ ವಿಚಾರವಾದ ಮತ್ತು ನಾಸ್ತಿಕ ವಾದಗಳಿಗೆ ಪ್ರತಿಯಾಗಿ ಕ್ರೈಸ್ತ ನಂಬಿಕೆಗಳನ್ನು ರಕ್ಷಿಸಲು ಹಾಗೂ ಪ್ರೋತ್ಸಾಹಿಸಲು ಸ್ಥಾಪಿತವಾಗಿದ್ದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ) ಕಾರ್ಯಭಾರ ನಿರ್ವಹಿಸುತ್ತಿದ್ದ ಗುಂಡರ್ಟ್‌ನು ಅಲ್ಲಿಯ ಕೆಲಸ ಕಾರ್ಯಗಳ ಒತ್ತಡದ ನಡುವೆ ತನ್ನ ಮಲಯಾಳಂ ಅಧ್ಯಯನಕ್ಕೆ ಕಾಲಾವಕಾಶ ಸಿಗುತ್ತಿಲ್ಲವೆಂಬುದಾಗಿ ಅನೇಕ ಬಾರಿ ತನ್ನ ಅಸಮಾಧಾನವನ್ನು ತೋಡಿಕೊಂಡಿದ್ದಾನೆ. ೧೮೬೩ರಲ್ಲಿ ಆತ ಹೀಗೆ ಬರೆಯುತ್ತಾನೆ : “ಇಲ್ಲಿ ನನ್ನ ಸ್ಥಾನವನ್ನು ತುಂಬ ಬಲ್ಲವರು ಅನೇಕರಿದ್ದಾರೆ. ಆದರೆ ಮಲಬಾರಿಗಾಗಿ ನಾನು ಕೈಗೆತ್ತಿಕೊಂಡಿರುವ ಇಂತಹ ನಿಘಂಟನ್ನು ಬರೆಯಬಲ್ಲವರು ಯಾರೂ ಇಲ್ಲ”.

ಈ ನಿಘಂಟುವಿನಿಂದಾಗಿ ಓರ್ವ ಭಾರತಾಧ್ಯಯನಕಾರನಾಗಿ ಗುಂಡರ್ಟ್‌ನ ಮಹತ್ವವೇನೆಂಬುದು ನಿಸ್ಸಂದೇಹವಾಗಿಯೂ ಬೆಳಕಿಗೆ ಬಂತು. ಇದು ಈ ಮಾದರಿಯ ಮೊತ್ತಮೊದಲ ನಿಘಂಟೇನಲ್ಲ. ಉದಾಹರಣೆಗೆ ಮಲಯಾಳಂನಲ್ಲಿ ಕವಿತೆಗಳನ್ನು ಬರೆಯುವುದರ ಜತೆಗೆ ಮಲಯಾಳಂ ನಿಘಂಟನ್ನೂ ರಚಿಸಿದ ಕೆಥೋಲಿಕ್ ಮಿಶನರಿಯಾದ ಹ್ಯಾಂಕ್ಸ್ಲಬೆನ್ (೧೬೮೯ – ೧೭೩೨) ನನ್ನು ಕೇರಳಿಯರು ಖಂಡಿತವಾಗಿ ನೆನಪಿಸಿಕೊಳ್ಳುತ್ತಾರೆ. ಆತನನ್ನು ಈಗಲೂ ಕೆಲವರು ಪ್ರೀತಿಯಿಂದ “ಅರ್ನೋಸ್ ಪಾದ್ರಿ” ಎಂದೇ ಕರೆಯುತ್ತಾರೆ. ಆದರೆ ಗುಂಡರ್ಟ್‌ನದು ಅತ್ಯಂತ ವ್ಯವಸ್ಥಿತವಾಗಿ ಸಂಕಲಿಸಿದ, ಶಾಸ್ತ್ರೀಯವಾಗಿ ವಿನ್ಯಾಸಗೊಳಿಸಿ, ಪೂರ್ಣಗೊಳಿಸಿದ ಮೊದಲ ಮಲಯಾಳಂ – ಇಂಗ್ಲಿಷ್ ನಿಘಂಟಾಗಿದೆ. ಇಂದಿಗೂ ಮಲಯಾಳಂನ ಯಾವುದೇ ವಿದ್ಯಾರ್ಥಿಗಾಗಲಿ, ಅಧ್ಯಾಪಕರಿಗಾಗಲಿ ಇದು ಒಂದು ಪ್ರಮಾಣೀಭೂತವಾದ ಕೃತಿಯಾಗಿ ಪರಿಣಮಿಸಿದೆ. (ನಿಮಗೀಗಾಗಲೇ ತಿಳಿಸಿರುವಂತೆ ಇದರ ಪ್ರಕಟಣೆಯ ಶತಾಬ್ದಿಯ ಸಂಕೇತವಾಗಿ ೧೯೭೩ರಲ್ಲಿ ಕೊಟ್ಟಾಯಂನಲ್ಲಿ ಪ್ರಸ್ತುತ ಕೃತಿಯ ಎರಡನೆಯ ಆವೃತ್ತಿಯೂ ಬೆಳೆಕು ಕಂಡಿದೆ.)

ನಿಘಂಟುವಿನ ಪ್ರಸ್ತಾವನೆಯಲ್ಲಿ ಗುಂಡರ್ಟ್‌ನು ತಾನು ಸಾಮಗ್ರಿ ಸಂಗ್ರಹಿಸಿದ ಬಗೆಯನ್ನು ಈ ರೀತಿ ವಿವರಿಸುತ್ತಾನೆ :

“ಇಪ್ಪತ್ತೈದು ವರ್ಷಗಳಿಗೂ ಮೇಲ್ಪಟ್ಟು ನಾನು ಭಾಷಾಧ್ಯಯನದಲ್ಲಿ ನಿರತನಾಗಿದ್ದ ಕಾಲಾವಧಿಯಲ್ಲಿ ಈ ಕೃತಿಗಾಗಿ ಸಾಮಗ್ರಿ ಸಂಗ್ರಹ ಕಾರ್ಯವನ್ನೂ ಮಾಡಿದೆ. ಲಭ್ಯ ಅಕರಗಳಿಂದ, ಎಲ್ಲಾ ಜಾತಿ, ವೃತ್ತಿಗಳ ಜನ ಬಾಯಿಗಳಿಂದ, ವಿವಿಧ ಜಿಲ್ಲೆಗಳಲ್ಲಿಯ ಹಲವು ಪತ್ರ ಹಾಗೂ ದಾಖಲೆಗಳಿಂದ, ಅದೇ ರೀತಿ ಎಲ್ಲಾ ವಯೋಮಾನದ ಗದ್ಯ – ಪದ್ಯ ಬರಹಗಾರರಿಂದ ಪದಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ”.

ಕುತೂಹಲದ ಸಂಗತಿಯೆಂದರೆ, ಗ್ರಿಮ್ ಸಹೋದರರು (ಜೇಕಬ್ ಮತ್ತು ವಿಲ್‌ಹೆಲ್ಮ್) ಕೂಡಾ ರ‍ಮ್ಯ ಚಳುವಳಿಯು ಎಚ್ಚೆತ್ತುಕೊಂಡ ಸಂದರ್ಭದಲ್ಲಿ ತಮ್ಮ “ಡ್ಯೂಶ್ಚೆಸ್ ವಾರ್ಟರ್ ಬುಚ್” (ಜರ್ಮನ್ ನಿಘಂಟು) ಕೃತಿಯ ರಚನೆಗಾಗಿ ಇದೇ ಮಾದರಿಯಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಿರುವುದು. ೧೮೫೪ರಲ್ಲಿ ಪ್ರಕಟವಾದ ಅದರ ಮೊದಲ ಸಂಪುಟಕ್ಕಾಗಿ ಅವರು ಜನಪದ – ಅತಿಮಾನುಷ (ರಮ್ಯ) ಕಥೆಗಳಿಂದ, ಸಾಹಿತ್ಯದಿಂದ, ಉಪಭಾಷೆ – ಗ್ರಾಮ್ಯಭಾಷೆಗಳಿಂದ, ಕಛೇರಿ ದಾಖಲೆಗಳಿಂದ, ದಿನಚರಿ ಇತ್ಯಾದಿಗಳಿಂದ ಸಾಮಗ್ರಿಗಳನ್ನು ಸಂಗ್ರಹಿಸಿದ್ದಾರೆ.

ದ್ರಾವಿಡ ಭಾಷೆಗಳೊಳಗೆ, ಅದರಲ್ಲೂ ಮುಖ್ಯವಾಗಿ ಮಲಯಾಳಂ ಮತ್ತು ತಮಿಳುಗಳೊಳಗೆ ಆತ್ಮೀಯ ಅಂತರ್ಸಂಬಂಧಗಳಿರುವುದನ್ನು ಗುಂಡರ್ಟ್‌ನು ಒತ್ತಿ ಹೇಳುತ್ತಾನೆ. ಅವುಗಳನ್ನು ಗೆರೆ ಕೊರೆದು ಪ್ರತ್ಯೇಕಿಸುವುದೂ ಕಷ್ಟಸಾಧ್ಯವೆನ್ನುತ್ತಾನೆ. ಈ ಬಗ್ಗೆ ಅವನದೇ ಮಾತುಗಳನ್ನು ಗಮನಿಸೋಣ :

“ಆ ಎರಡು ಹಳೆಯ ಭಾಷೆಗಳು ದ್ರಾವಿಡ ಕುಟುಂಬಕ್ಕೆ ಸೇರಿದ ಒಂದೇ ಸದಸ್ಯ ಭಾಷೆಯ ಎರಡು ಉಪಭಾಷೆಗಳೆಂಬ ನೆಲೆಯಲ್ಲಷ್ಟೆ ಅವುಗಳೊಳಗೆ ಭಿನ್ನತೆ ಗೋಚರವಾಗುತ್ತದೆ”.

ಇದೇ ದೃಷ್ಟಿಕೋನವನ್ನು ದ್ರಾವಿಡ ಭಾಷಾತಜ್ಞರಾಗಿದ್ದ ಗ್ರಾವುಲ್ ಮತ್ತು ಇತರರೂ ಹೊಂದಿದ್ದರೆಂಬುದನ್ನು ನಾವು ನೆನಪಿಸಿಕೊಳ್ಳಬಹುದಾಗಿದೆ. ಉದಾಹರಣೆಗೆ ಪ್ರಾಚೀನ ತಮಿಳು ಪಠ್ಯಗಳಲ್ಲೂ, ಶೈವ ಸಿದ್ಧಾಂತದಲ್ಲೂ ಪರಿಣಿತನಾಗಿದ್ದ ಹಿಲ್ಕೋ ಡಬ್ಲ್ಯು ಶ್ಚೋಮರ‍್ಸ (೧೮೭೯ – ೧೯೪೫) ಹೇಳುವ ಮಾತುಗಳನ್ನು ಇಲ್ಲಿ ಗಮನಿಸಬಹುದು :

“ಮಲಯಾಳಂ ಭಾಷೆಯು ಪ್ರಾಯಶಃ ತಮಿಳಿನ ಒಂದು ಉಪಭಾಷಾ ರೂಪವಾಗಿ ಹುಟ್ಟಿಕೊಂಡಿರಬೇಕು. ಹಾಗಿದ್ದರೂ ಕಾಲಕ್ರಮೇಣ ಅದು ಸಂಸ್ಕೃತ ಪದಗಳನ್ನು ವ್ಯಾಪಕ ಪ್ರಮಾಣದಲ್ಲಿ ಸ್ವೀಕರಿಸಿಕೊಂಡು, ಒಂದು ಪ್ರತ್ಯೇಕ (ಸ್ವತಂತ್ರ) ಭಾಷೆಯಾಗಿ ಬೆಳೆದು ನಿಂತಿತು”.

ಈ ನಿಘಂಟನ್ನು ಸಿದ್ಧಪಡಿಸುವಲ್ಲಿ ಗುಂಡರ್ಟ್‌ನು ಪದೋತ್ಪತ್ತಿಶಾಸ್ತ್ರ ವಿಧಾನವನ್ನು ಅನುಸರಿಸಿದ್ದಾನೆ. ಪ್ರತಿಯೊಂದು ಪದದ ಮೂಲವನ್ನು ಹುಡುಕುವಲ್ಲಿ, ಸಂಸ್ಕೃತ ಹಾಗೂ ಇತರ ಭಾಷೆಗಳಿಂದ ಬಂದಿರಬಹುದಾದ ಪದಗಳನ್ನು ಗುರುತಿಸುವಲ್ಲಿ, ಅಂಥ ಪದಗಳು ಕಾಲಕ್ರಮೇಣ ವ್ಯಾವಹಾರಿಕ ಮತ್ತು ಗ್ರಾಮ್ಯ ಮಲಯಾಳಂನ ಭಾಗವಾಗಿ ಪರಿಣಮಿಸಿದುದನ್ನು ಪತ್ತೆ ಹಚ್ಚುವಲ್ಲಿ ಈ ವಿಧಾನವನ್ನು ನಾವು ಗಮನಿಸಬಹುದು. ಪ್ರಾಂತಭೇದ (ಪ್ರಾಂತೀಯತೆ), ಅಸಭ್ಯರೂಪಾಂತರಗಳನ್ನು ಆತ ಉಲ್ಲೇಖಿಸುತ್ತಾನೆ. ಸಾವಿರದ ನೂರಕ್ಕೂ ಹೆಚ್ಚು ಪುಟಗಳುಳ್ಳ ಪ್ರಸ್ತುತ ಕೃತಿಯಲ್ಲಿ ತಮಿಳು, ಕನ್ನಡಗಳಂತಹ ಇತರ ದ್ರಾವಿಡ ಭಾಷೆಗಳೊಂದಿಗೆ ಮಲಯಾಳಂ ಪದಗಳಿಗಿರುವ ಸಂಪರ್ಕ – ಸಂಬಂಧಗಳೂ ಉಲ್ಲೇಖಗೊಂಡಿವೆ.

ಭಾರತ ಹಾಗೂ ಭಾರತೀಯರ ಕುರಿತು ಗುಂಡರ್ಟ್‌ನ ಸಮೀಪನ (ಅಧ್ಯಯನ ವಿಧಾನ)ವು ಹೆಚ್ಚು ಕಡಿಮೆ ಜೀಗನ್‌ಬಾಲ್ಗನದನ್ನೇ ಹೋಲುತ್ತದೆ. ಆತ ಕೂಡಾ ಕ್ರೈಸ್ತೇತರರ ನಡುವೆ ಸುವಾರ್ತೆಯನ್ನು ಪ್ರಚಾರಪಡಿಸುವುದಷ್ಟೇ ತನ್ನ ಕೆಲಸವಲ್ಲವೆಂದು ಭಾವಿಸಿದ್ದನು. ಎರಡು ಭಾಷೆ ಮತ್ತು ಸಾಹಿತ್ಯಗಳನ್ನು ಪರಸ್ಪರ ಯಾವುದೇ ಪೂರ್ವಾಗ್ರಹವಿಲ್ಲದೆ ಅರ್ಥೈಸಿಕೊಳ್ಳಲು, ಪರಸ್ಪರರ ಜೀವನ ದೃಷ್ಟಿ ಹಾಗೂ ಲೋಕದೃಷ್ಟಿಗಳನ್ನು ಅರಿತುಕೊಳ್ಳಲು ಎರಡು ಮಹಾನ್ ಸಂಸ್ಕೃತಿ ಮತ್ತು ಅವುಗಳ ಧರ್ಮಗಳೊಳಗೆ ಪರಸ್ಪರ ಮುಕ್ತ ಮುಖಾಮುಖಿಯಾಗಬೇಕೆಂಬುದು ಆತನ ಉದ್ದೇಶವಾಗಿತ್ತು. ತನ್ನ ನಿಘಂಟುವಿನ ಪ್ರಸ್ತಾವನೆಯನ್ನು ಗುಂಡರ್ಟ್‌ನು ಈ ಕೆಳಗಿನ ಕಳಕಳಿಯ ಮಾತುಗಳೊಂದಿಗೆ ಕೊನೆಗೊಳಿಸುತ್ತಾನೆ :

“ಈ ಮಹತ್ವ ಕೆಲಸವೊಂದನ್ನು ಕೈಗೆತ್ತಿಕೊಂಡ ಮಾತ್ರಕ್ಕೆ ತಾನು ಪರಿಪೂರ್ಣತೆ ಹಾಗೂ ಶುದ್ಧತೆಯ ದೃಷ್ಟಿಯಿಂದ ಸಮಗ್ರತೆಯನ್ನು ಸಾಧಿಸಿದಂತಾಯಿತೆಂದು ಹೇಳಿಕೊಳ್ಳುವಂತಿಲ್ಲ. ಆದರೂ ಇಂತಹ ಒಂದು ಪ್ರಕಟಣೆಯ ಅವಶ್ಯಕತೆ ಮಲಬಾರಿನಲ್ಲಿತ್ತು ; ಅದನ್ನು ಪೂರೈಸಿದುದರಿಂದ ಆ ಪ್ರಾಂತದ ಶಿಕ್ಷಣಕ್ಕೆ ಉಪಯೋಗವಾಯಿತು ಎಂಬ ಗ್ರಹಿಕೆ ಈ ಕೃತಿಕಾರನದು”.

ಶಿಕ್ಷಣ ಸಂಬಂಧಿ ವಿಷಯಗಳನ್ನು ಗುಂಡರ್ಟ್‌ನು ಒಂದು ಪಂಥಾಹ್ವಾನವಾಗಿ ಸ್ವೀಕರಿಸಿದಂತಿದೆ. ಅದಕ್ಕಾಗಿಯೇ ಆತ ಮಲಯಾಳಂ ಗಾದೆಗಳ ಸಂಗ್ರಹವೊಂದನ್ನು ಸಂಕಲಿಸಿದ. ಅದೇ ರೀತಿ ಪ್ರಾಥಮಿಕ ಹಾಗೂ ಪ್ರೌಢ (ಉನ್ನತ) ಶಿಕ್ಷಣಕ್ಕಾಗಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದ.

ಗುಂಡರ್ಟ್‌ನ ಬಹುಪಾಲು ಹಸ್ತಪ್ರತಿಗಳನ್ನು (ಕಾಗದ, ಅದೇ ರೀತಿ ತಾಡವೋಲೆ ಪ್ರತಿಗಳು) ಟ್ಯೂಬಿಂಗನ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿಡಲಾಗಿದೆ. (ಭಾರತಕ್ಕೆ ಬರುವ ಮುನ್ನ ಅತ ದಕ್ಷಿಣ – ಪಶ್ಚಿಮ ಜರ್ಮನಿಯ ಈ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಧರ್ಮಶಾಸ್ತ್ರ ಮತ್ತು ತತ್ತ್ವಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದ.) ಕೆಲವೇ ಕೆಲವು ಹಸ್ತಪ್ರತಿಗಳು ಸ್ವಿಟ್ಸರ್‌ಲೆಂಡಿನ ಬಾಸೆಲ್ ಮಿಶನ್ ಪತ್ರಾಗಾರದಲ್ಲಿವೆ.

೧೮೫೬ರಲ್ಲಿ, ಟ್ಯೂಬಿಂಗನ್‌ನಲ್ಲಿ ಸಂಸ್ಕೃತ ಪೀಠವೊಂದು ಸ್ಥಾಪನೆಯಾದಂದಿನಿಂದ, ವೈದಿಕ ಸಾಹಿತ್ಯಕ್ಕೆ ಸಂಬಂಧಪಟ್ಟ ತನ್ನ ಗ್ರಂಥದ ಮೂಲಕ ಜರ್ಮನಿಯಲ್ಲಿ ವಿಮರ್ಶಾತ್ಮಕ ವೈದಿಕ ಸಾಹಿತ್ಯ ಸಂಶೋಧನೆಗೆ ನಾಂದಿ ಹಾಡಿದ ರುಡೋಲ್ಫ್‌ವೊನ್ ರೊಥ್‌ನು (೧೮೨೨ – ೯೬) ಅದರ ಕಾರ್ಯಭಾರವನ್ನು ವಹಿಸಿಕೊಂಡಂದಿನಿಂದ ಆ ಸ್ಥಳವು (ಟ್ಯೂಬಿಂಗನ್) ಜರ್ಮನ್ ಭಾರತಾಧ್ಯಯನದ ಒಂದು ಪ್ರಮುಖ ಕೇಂದ್ರವಾಯಿತು. ೧೮೯೫ರಲ್ಲಿ ರೋಥನ್ನನ ಉತ್ತರಾಧಿಕಾರಿಯಾಗಿ ಬಂದ ರಿಚಾರ್ಡ್ ವೊನ್ ಗಾರ್ಬೆಯು ತತ್ತ್ವಶಾಸ್ತ್ರದ ಸಾಂಖ್ಯ ಮತ್ತು ಯೋಗಶಾಖೆಗಳಲ್ಲಿ ಪರಿಣತನಾಗಿದ್ದನು. ಜತೆಗೆ ಭಗವದ್ಗೀತೆಯ ಮೂಲ ಪಠ್ಯವನ್ನು ಪುನಾರಚಿಸುವ ಕಾರ್ಯದಲ್ಲೂ ಪ್ರಸಿದ್ಧನಾಗಿದ್ದನು. ಹೆಲ್ಮಥ್ ವೊನ್ ಗ್ಲಾಸೆನಾಪ್‌ನು (೧೮೯೧ – ೧೯೬೩) ಜೈನ, ಬೌದ್ಧ ಧರ್ಮಗಳಲ್ಲಿ ತಜ್ಞನಾಗಿದ್ದುದಲ್ಲದೇ, ದಕ್ಷಿಣದ ಮಹಾನ್ ಸಂಪ್ರದಾಯಗಳಾದ ವೈಷ್ಣವ ಮತ್ತು ಶೈವ ಸಿದ್ಧಾಂತಗಳಲ್ಲೂ ಪಾರಂಗತನಾಗಿದ್ದನು. ನಮ್ಮ ಕಾಲಕ್ಕೆ ಬಂದೆವೆಂದಾದರೆ ಫಾಹುಲ್ ಥೀಮೆಯು (ಜನನ : ೧೯೦೫) ಪಾಣಿನಿಯ ಕುರಿತು ವ್ಯಾಪಕವಾದ ಸಂಶೋಧನೆ ನಡೆಸಿ ಪ್ರಸಿದ್ಧನಾದನು. ಇವರೆಲ್ಲಾ ಈ ಸಣ್ಣ ರಮ್ಯ ಟ್ಯೂಬಿಂಗನ ನಗರದಲ್ಲಿದ್ದ ಭಾರತಶಾಸ್ತ್ರ ಸಂಶೋಧನೆಯ ಮಾದರಿ ಪ್ರತಿನಿಧಿಗಳು.

ಹರ್ಮನ್ ಗುಂಡರ್ಟ್‌ನು ಮಲಯಾಳಂ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಏನು ಕೆಲಸ ಮಾಡಿದನೋ, ಅಂತಹುದೇ ಕೆಲಸವನ್ನು ಆತನ ಸಮಕಾಲೀನನೂ, ಬಾಸೆಲ್ ಮಿಶನ್‌ನಲ್ಲಿ ಆತನ ಸಹೋದ್ಯೋಗಿಯೂ ಆಗಿದ್ದ ಫರ್ಡಿನೆಂಡ್ ಕಿಟ್ಟೆಲನು (೧೮೩೨ – ೧೯೦೩) ಕನ್ನಡದ ವ್ಯವಸ್ಥಿತವಾದ ಅಧ್ಯಯನದ ಮೂಲಕ ಕೈಗೊಂಡನು.

೧೮೫೪ರಲ್ಲಿ ಭಾರತಕ್ಕೆ ಬಂದ ಕಿಟ್ಟೆಲನು ಮುಖ್ಯವಾಗಿ ಧಾರವಾಡ, ಮಂಗಳೂರುಗಳಲ್ಲೂ, ಆನಂತರ ಮಡಿಕೇರಿಯಲ್ಲೂ ಕಾರ್ಯ ನಿರ್ವಹಿಸಿದನು. ಮಂಗಳೂರಿನಲ್ಲಿದ್ದಾಗ ಮಿಶನ್ಸ್ ಪ್ರೌಢಶಾಲೆಯನ್ನು ನಡೆಸುವ ಜವಾಬ್ಧಾರಿ ಆತನದಾಗಿತ್ತು. ಹಾಗಾಗಿ ಹಲವಾರು ಪಠ್ಯಪುಸ್ತಕಗಳನ್ನು ಸಂಪಾದಿಸುವ ಕಾರ್ಯದಲ್ಲಿ ಆತ ವಿಶೇಷ ಆಸಕ್ತಿ ವಹಿಸಿದ್ದನು. ಅವುಗಳಲ್ಲಿ “ದ ಸ್ಕೂಲ್ ಆಫ್ ಪಂಚತಂತ್ರ ಆಂಡ್ ಎ ಕೆನರೀಸ್ ಪೊಯೆಟಿಕಲ್ ಆಂಥೋಲಜಿ” ಎಂಬ ಪುಸ್ತಕವು ಇಂದಿಗೂ ಶಾಲಾ ಪರೀಕ್ಷೆಗಳಿಗೆ ಬಳಕೆಯಾಗುತ್ತದೆ. ೧೮೬೫ರಲ್ಲಿ ಪ್ರಕಟವಾದ ಕಿಟ್ಟೆಲ್‌ನ ‘ವ್ಯಾಕರಣ ಸೂತ್ರಗಳು’ ಎಂಬ ಸಂಕ್ಷಿಪ್ತ ಕನ್ನಡ ವ್ಯಾಕರಣ ಗ್ರಂಥವು ಇಂದಿಗೂ ಜನಪ್ರಿಯವಾಗಿದೆ. ನಾಗವರ್ಮನ ಛಂದೋಂಬುಧಿಯ ಪಠ್ಯಗಳನ್ನು ಅವನು ವಿಸ್ತೃತ ಪ್ರಸ್ತಾವನೆಯೊಂದಿಗೆ ಅತ್ಯಂತ ಶ್ರದ್ಧೆಯಿಂದ ವಿಶ್ವಾಸಾರ್ಹವೆನಿಸುವ ರೀತಿಯಲ್ಲಿ ಸಂಪಾದಿಸಿಕೊಟ್ಟಿದ್ದಾನೆ. ೧೮೭೫ರಲ್ಲಿ ಕನ್ನಡ ಸಾಹಿತ್ಯ ಕುರಿತು ಪ್ರಬಂಧವೊಂದನ್ನು ಬರೆದನು. ಅದೇ ವರ್ಷದಿಂದ ಅವನ ಬಹುಮುಖ್ಯ ಪ್ರಕಟಣೆಯಾದ ‘ಕನ್ನಡ – ಇಂಗ್ಲಿಷ್ ನಿಘಂಟು’ ವಿಗಾಗಿ ಸಾಮಗ್ರಿ ಸಂಗ್ರಹ ಕಾರ್ಯವನ್ನೂ ಆತ ಪ್ರಾರಂಭಿಸಿದನು.

ಗುಂಡರ್ಟ್‌ನಂತೆ ಕಿಟ್ಟೆಲ್ ಕೂಡಾ ಸುಮಾರು ೧೨ ಶತಮಾನಗಳ ಕಾಲಾವಧಿಯ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಕನ್ನಡ (ಸಾಹಿತ್ಯ) ದಿಂದ ಸಾಮಗ್ರಿಗಳನ್ನು ಸಂಗ್ರಹಿಸಿದನು. ಅದರ ಮೊದಲ ಕರಡನ್ನು ಸಿದ್ಧಪಡಿಸುವ ಸಲುವಾಗಿ ಅವನು ೧೮೭೭ರಲ್ಲಿ ಜರ್ಮನಿಗೆ ಹೋದನು. ೧೮೮೩ರಲ್ಲಿ ಭಾರತಕ್ಕೆ ವಾಪಸಾದ ಮೇಲೆ ಹಲವು ಮಂದಿ ಭಾರತೀಯ ಪರಿಣತರನ್ನು ಸಂದರ್ಶಿಸಿ, ಅಗತ್ಯ ಕಂಡಲ್ಲಿ ಅವರ ಸಲಹೆಗಳನ್ನು ಅಳವಡಿಸಿಕೊಂಡು, ತನ್ನ ಕೃತಿಯನ್ನು ಪರಿಷ್ಕರಿಸಿದನು. ಈ ಕಾರ್ಯಕ್ಕೆ ಆತನಿಗೆ ಹೆಚ್ಚುವರಿಯಾಗಿ ಒಂಬತ್ತು ವರ್ಷಗಳು ತಗುಲಿದವು. ೧೮೯೨ರಲ್ಲಿ ಮತ್ತೆ ಜರ್ಮನಿಗೆ ತೆರಳಿದ ಕಿಟ್ಟೆಲನು ಭಾರತಾಧ್ಯಯನದ ಕೇಂದ್ರವಾದ ಟ್ಯೂಬಿಂಗನ್‌ನಲ್ಲಿ ನೆಲಸಿ, ಬಾಸೆಲ್ ಮತ್ತು ಲೇಪ್ಸಿಗ್‌ನಲ್ಲಿ ನಡೆಯುತ್ತಿದ್ದ ನಿಘಂಟುವಿನ ಮುದ್ರಣಕಾರ್ಯದ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ. ಕೊನೆಗೆ ೧೮೯೪ರಲ್ಲಿ ೧೭೫೨ ಪುಟಗಳ ಈ ಮಾದರಿ ಕೃತಿಯು ಮಂಗಳೂರಿನ ಪುಸ್ತಕದಂಗಡಿಗಳಲ್ಲಿ ಲಭಿಸುವಂತಾಯಿತು.

ಸಂಸ್ಕೃತ ಹಾಗೂ ದ್ರಾವಿಡ ಭಾಷಾಬಾಂಧವ್ಯಕ್ಕೆ ಸಂಬಂಧಿಸಿದ ವಿವಾದಾತ್ಮಕ ಪ್ರಶ್ನೆಯ ಕುರಿತು ಕಿಟ್ಟೆಲನು ತನ್ನ ಪ್ರಸ್ತಾವನೆಯಲ್ಲಿ ೫೦ ಪುಟಗಳ ಟಿಪ್ಪಣಿಯನ್ನು ಬರೆಯುತ್ತಾನೆ :

“ಕನ್ನಡವು ಸಂಸ್ಕೃತದಿಂದ ಯಥಾರೂಪದಲ್ಲಿ ಅಥವಾ ತದ್ಭವ ರೂಪದಲ್ಲಿ ಅಸಂಖ್ಯ ಪದಗಳನ್ನು ಸ್ವೀಕರಿಸುವುದು ಜನಜನಿತ ಸತ್ಯ. ಅದೇ ರೀತಿ ಸಂಸ್ಕೃತ ನಿಘಂಟುಗಳೂ ಅಸಂಖ್ಯ ದ್ರಾವಿಡ ಶಬ್ದಗಳನ್ನು ಒಳಗೊಂಡಿವೆಯೆಂಬುದನ್ನು “ದ ಜರ್ನಲ್ ಆಫ್ ದ ಜರ್ಮನ್ ಓರಿಯೆಂಟಲ್ ಸೊಸಾಯಿಟಿ” (ಸಂ.೨೩, ೧೮೬೯)ಯಲ್ಲಿ ಡಾ.ಎಚ್.ಗುಂಡರ್ಟ್ ಅವರು, ‘ಕಂಪೇರೇಟಿವ್ ಗ್ರಾಮರ್ ಆಫ್ ದಿ ದ್ರಾವೀಡಿಯನ್ ಲ್ಯಾಂಗುವೇಜಸ್‌ನಲ್ಲಿ (೨ನೆಯ ಆವೃತ್ತಿ ; ೧೮೭೫) ಡಾ. ಆರ್. ಕಾಲ್ಡ್‌ವೆಲ್ ಅವರು ಮತ್ತು ‘ದ ಬಾಂಬೆ ಇಂಡಿಯನ್ ಆಂಟಿಕ್ಟೆರಿ’ಯಲ್ಲಿ (ಆಗಸ್ಟ್ ೧೮೭೨) ಇದೇ ನಿಘಂಟು ಕರ್ತೃ ಕೆಲಮಟ್ಟಿಗೆ ತೋರಿಸಿಕೊಟ್ಟಿದ್ದಾರೆ.”

ಗುಂಡರ್ಟ್‌ನ ‘ಮಲಯಾಳಂ – ಇಂಗ್ಲಿಷ್ ನಿಘಂಟು’ವಿನಂತೆ ಕಿಟ್ಟೆಲನ ‘ಕನ್ನಡ – ಇಂಗ್ಲಿಷ್ ನಿಘಂಟು’ ಕೂಡ ಇಂದಿಗೂ ಅಪ್ರತಿಮ ಕೃತಿಯಾಗಿ ನೆಲೆನಿಂತಿದೆ.

ಕೊನೆಯದಾಗಿ, ‘ಭಾರತದಲ್ಲಿ ಲಿಂಗಾರಾಧನೆಯ ಮೂಲ’ (ದ ಒರಿಜಿನ್ ಆಫ್ ದ ಲಿಂಗ ಕಲ್ಟ್ ಇನ್ ಇಂಡಿಯಾ) ದ ಕುರಿತು ಕಿಟ್ಟೆಲನು ನಡೆಸಿದ ವಿದ್ವತ್‌ಪೂರ್ಣವಾದ ಅಧ್ಯಯನವನ್ನು ನಾನಿಲ್ಲಿ ಪ್ರಸ್ತಾಪಿಸಬಯಸುತ್ತೇನೆ. ೧೮೭೬ರಲ್ಲಿ ಮಂಗಳೂರಿನ ಬಾಸೆಲ್ ಮಿಶನ್‌ನಿಂದ ಪ್ರಕಟವಾದ ಈ ಅಧ್ಯಯನ ಪ್ರಬಂಧವು ಪ್ರಾಚೀನ ಹಿಂದೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಗತಿಗಳ ಅತ್ಯಮೂಲ್ಯ ಮಾಹಿತಿಗಳನ್ನು ಒಳಗೊಂಡಿದೆ.

ದ್ರಾವಿಡಾಧ್ಯಯನ ಕ್ಷೇತ್ರದಲ್ಲಿನ ಇನ್ನೂ ಹಲವು ಜರ್ಮನ್ ವಿದ್ವಾಂಸರ ಬಗೆಗೆ ಪ್ರಸ್ತಾಪಿಸಬೇಕಷ್ಟೆ. ಅಂಥವರಲ್ಲಿ ಟ್ರಾಂಕ್ಯುಬಾರ್‌ನಲ್ಲಿ ಜೀಗನ್ ಬಾಲ್ಗನ ಉತ್ತರಾಧಿಕಾರಿಗಳಲ್ಲೊಬ್ಬನಾಗಿದ್ದ ಜಾಹೆನ್ನೆಸ್ ಫ್ ಫ್ಯಾಬ್ರಿಸಿಯಸ್‌ನು ಬ್ರೆಯಿಥಾಪ್ಟ್ ಎಂಬವನ ಜತೆ ಸೇರಿ “ಮಲಬಾರ್ ಅಂಡ್ ಇಂಗ್ಲಿಷ್ ಡಿಕ್ಷನರಿ” (೧೭೭೯) ಯನ್ನು ರಚಿಸಿದನು. ಇದೇ ನಿಘಂಟನ್ನಾಧರಿಸಿ ಜೋಹನ್ ಪಿ. ರಾಟ್ಲರನು ‘ತಮಿಳ್ – ಇಂಗ್ಲಿಷ್ ಡಿಕ್ಷನರಿ’ ಯನ್ನು ರಚಿಸಿದನು. (೧೮೩೪) ತೀರಾ ಇತ್ತೀಚೆಗೆ (೧೯೪೩) ಹರ್ಮನ್ ಬೇಯ್‌ಥನ್ ಎಂಬವನು ಆಧುನಿಕ ವ್ಯಾವಹಾರಿಕ ತಮಿಳಿನ ವ್ಯಾಕರಣವನ್ನು ರಚಿಸಿದನು.

೧೮೮೬ರಿಂದ ೧೯೦೩ರವರೆಗೆ ಮದರಾಸು ಸರಕಾರದ ಶಾಸನಶಾಸ್ತ್ರಜ್ಞನಾಗಿದ್ದ, ಅದೇ ರೀತಿ ಮದರಾಸು ವಿಶ್ವವಿದ್ಯಾಲಯದ ಸಂಸ್ಕೃತ ಪರೀಕ್ಷಕ ಮತ್ತು ಫೆಲೋ ಆಗಿದ್ದ ಯೂಜೆನ್ ಹೆಲ್ಷ್ಷ (೧೮೫೭ – ೧೯೨೭) ನ ಹೆಸರನ್ನು ಇಲ್ಲಿ ವಿಸ್ತೃತವಾಗಿ ಉಲ್ಲೇಖಿಸಲೇಬೇಕು. ಮುಖ್ಯವಾಗಿ ಮೂರು ಸಂಪುಟಗಳ ‘ಸೌತ್ ಇಂಡಿಯನ್ ಇನ್‌ಸ್ಕ್ರಿಪ್ಷನ್ಸ್’ (ಮದರಾಸು, ೧೮೯೦ – ೧೯೦೩)ನ ಸಂಪಾದಕನಾಗಿ ಆತನ ಹೆಸರು ಉಲ್ಲೇಖನೀಯ. ಇಲ್ಲಿಯ ಬಹುಪಾಲು ಶಾಸನಗಳನ್ನು ತಂಜಾವೂರು ಮತ್ತು ಉತ್ತರ ಆರ್ಕಾಟ್ ಜಿಲ್ಲೆಗಳ ಮಹಾಬಲಿಪುರಂ, ಕಾಂಚೀಪುರಂ ಪ್ರದೇಶಗಳಿಂದ ಸಂಗ್ರಹಿಸಲಾಗಿದೆ. ಮೂರು ಸಂಪುಟಗಳ “ರಿಪೋರ್ಟ್ಸ್ ಆನ್ ಸಂಸ್ಕೃತ್ ಮ್ಯಾನುಸ್ಕ್ರಿಪ್ಟ್ ಇನ್ ಸೌತ್ ಇಂಡಿಯಾ” (ಮದರಾಸು, ೧೮೯೫ – ೧೯೦೫) ಎಂಬ ಆತನ ಕೃತಿಯೂ ಇಲ್ಲಿ ಉಲ್ಲೇಖನೀಯ.

ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಎಂಬೀ ನಾಲ್ಕು ದ್ರಾವಿಡ ಭಾಷೆಗಳಲ್ಲಿ ಪರಿಣಿತನಾಗಿದ್ದ ಓಟ್ಟೋ ಶ್ರೇಡರ್ (೧೮೭೬ – ೧೯೬೧) ಕೂಡ ಹಲ್ಟ್ಷ್ ನಂತೆ ವಿಶೇಷವಾಗಿ ನಮ್ಮ ಗಮನವನ್ನು ಸೆಳೆಯುತ್ತಾನೆ. ೧೯೦೫ ರಿಂದ ೧೯೧೪ರವರೆಗೆ (ಲೋಕ ಮಹಾಯುದ್ಧ ಪ್ರಾರಂಭವಾದ ಕಾಲಘಟ್ಟ) ಈತನ ನಿರ್ದೇಶಕತ್ವದಲ್ಲಿ ಅಡ್ಯಾರ್‌ನ (ಮದರಾಸು) ಥಿಯೋಸಾಫಿಕಲ್ ಸೊಸಾಯಿಟಿ ಗ್ರಂಥಾಲಯವು ಪ್ರಥಮ ದರ್ಜೆಯ ವಿದ್ವತ್ ಸಂಸ್ಥೆಯೆಂಬ ಮನ್ನಣೆಯನ್ನು ಪಡೆಯಿತು. ಆದರೆ ಹಲ್ಟ್ಷ್ ಮತ್ತು ಶ್ರೇಡರ್‌ರ ಕುರಿತು ವಿವರಿಸಲು ಪ್ರಾಯಶಃ ಪ್ರತ್ಯೇಕ ಉಪನ್ಯಾಸವೊಂದರ ಅವಶ್ಕಯಕತೆ ಇದೆಯೆನ್ನಿಸುತ್ತದೆ. ಮುಂದೆ ಅದು ಸಾಧ್ಯವಾಗಬಹುದೇನೊ!

ಸದ್ಯ (ವರ್ತಮಾನದಲ್ಲಿ) ನಾವು ಈ ಕೆಳಗಿನ ಜರ್ಮನ್ ವಿಶ್ವವಿದ್ಯಾಲಯಗಳಲ್ಲಿ ಭಾರತಾಧ್ಯಯನಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು ಹೊಂದಿದ್ದೇವೆ :

ಪಶ್ಚಿಮ ಜರ್ಮನಿಯ ಬರ್ಲಿನ್ (ಫ್ರೀ ಯುನಿವರ್ಸಿಟಿ), ಬೋಚಮ್, ಬಾನ್ನ್, ಇರ್ಲಾಂಜೆನ್, ಫ್ರಾಂಕ್‌ಫರ್ಟ್, ಫ್ರೇಯ್‌ಬರ್ಗ್, ಜೀಸ್ಸೆನ್, ಗಾಟ್ಟೆಂಜೆನ್, ಹ್ಯಾಂಬರ್ಗ್, ಹೀಡೆಲ್ ಬರ್ಗ್, ಕೀಲ್, ಕಾಲ್ನ್, ಮೆಯಿನ್ಸ್, ಮಾರ್‌ಬರ್ಗ್, ಮುಂಚೆನ್, ಮುನ್‌ಸ್ಟರ್, ರೀಜೆನ್ಸ್‌ಬರ್ಗ್, ಸಾರ‍್ಬ್ರುಕೆನ್, ಟ್ಯುಬಿಂಗನ್ ಮತ್ತು ರ್ವ್ಯೂಸ್ಬಬರ್ಗ್, ಪೂರ್ವ ಜರ್ಮನಿಯ ಬರ್ಲಿನ್ (ಹಂಬೋಲ್ಟ್ ವಿಶ್ವವಿದ್ಯಾಲಯ), ಹಾಲ್ಲೆ, ಜೀನಾ, ಲೇಯ್‌ಪ್ಸಿಂಗ್ ಹಾಗೂ ರಾಸ್ಟೋಕ್ ವಿಶ್ವವಿದ್ಯಾಲಯಗಳಲ್ಲೂ ಇಂತಹ ಕೇಂದ್ರಗಳಿವೆ. ಮೇಲೆ ಹೆಸರಿಸಿದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಒಟ್ಟಾರೆಯಾಗಿ ಸುಮಾರು ೨೫ ರಷ್ಟು ಭಾರತಾಧ್ಯಯನ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಅವುಗಳಲ್ಲಿ ಬರ್ಲಿನ್ (ಫ್ರೀ ಯುನಿವರ್ಸಿಟಿ), ಬಾನ್ನ್, ಹೆಯಿಡೆಲ್ ಬರ್ಗ್, ಮೆಯ್‌ನ್ಸ್ ಮತ್ತು ಮುಂಚೆನ್ ವಿಶ್ವವಿದ್ಯಾಲಯಗಳಲ್ಲಿ ಇಂತಹ ಎರಡು ಅಥವಾ ಮೂರು ವಿಭಾಗಗಳಿವೆ.

೧೯೫೩ – ೫೪ರಲ್ಲಿ ಮದರಾಸು ವಿಶ್ವವಿದ್ಯಾಲಯದ ಪ್ರಸಿದ್ಧ ಸಂಸ್ಕೃತ ತಜ್ಞರಾಗಿದ್ದ ಪ್ರೊ.ವಿ.ರಾಘವನ್ ಅವರು ಅಜ್ಞಾತ ಅಥವಾ ಅವರ್ಗೀಕೃತ ಸಂಸ್ಕೃತ ಪಠ್ಯಗಳನ್ನು ಹುಡುಕುವ ಸಲುವಾಗಿ ಯುರೋಪಿನ ಭಾರತಾಧ್ಯಯ ಕೇಂದ್ರಗಳಿಗೆ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ತಾವು ಕಂಡುಕೊಂಡ ಫಲಿತಗಳನ್ನೂ, ಅನುಭವಗಳನ್ನೂ ಅವರು ತಮ್ಮ “ಸಂಸ್ಕೃತ್ ಆಂಡ್ ಅಲ್ಲೀಡ್ ಇಂಡೋಲಾಜಿಕಲ್ ಸ್ಟಡೀಸ್ ಇನ್ ಯುರೋಪ್” (ಮದ್ರಾಸ್, ೧೯೫೬) ಎಂಬ ವಿಸ್ತೃತ ವರದಿಯಲ್ಲಿ ಬರೆದಿದ್ದಾರೆ. ಅದರಲ್ಲಿ ಜರ್ಮನಿಗೆ ಸಂಬಂಧಪಟ್ಟ ಅಧ್ಯಾಯದ ಪ್ರಾಸ್ತಾವಿಕ ಟಿಪ್ಪಣಿ ಈ ಕೆಳಗಿನಂತಿದೆ :

“ಪಶ್ಚಿಮಕ್ಕಾಗಿ ಸಂಸ್ಕೃತವನ್ನು ಅನ್ವೇಷಿಸಿದ ಕೀರ್ತಿ ಇಂಗ್ಲೆಂಡಿಗೆ ಸಂದರೂ, ಬಾಪ್ಟ್, ಶ್ಲೇಗಲ್‌ರಂತಹ ಆರಂಭಿಕ ಜರ್ಮನ್ ಸಂಸ್ಕೃತ ತಜ್ಞರು ಫ್ರೆಂಚ್ ಆದ್ಯರ ಪದತಲದಲ್ಲಿ ಕುಳಿತಿದ್ದರೂ ಭಾರತದ ಹೊರಗಡೆ ವಿಶೇಷ ಆಸಕ್ತಿ – ಉತ್ಸಾಹಗಳಿಂದಳು, ನಿಸ್ವಾರ್ಥ ಪ್ರೀತಿಯಿಂದಲೂ ಸಂಸ್ಕೃತಾಧ್ಯಯನವನ್ನು ಕೈಗೊಂಡ ದೇಶವೆಂದರೆ ಜರ್ಮನಿಯೊಂದೇ. ಈ ದೇಶವು ಸಂಸ್ಕೃತದ “ಎರಡನೆಯ ಮನೆ” ಯೆಂದು ಯಾರಾದರೂ ಹೇಳಿದರೆ ಅದು ಅತಿಶಯೋಕ್ತಿಯೆನಿಸಲಾರದು. ಸಂಸ್ಕೃತಕ್ಕೆ ಜರ್ಮನಿಯ ಕೊಡುಗೆಯೇನೆಂಬುದನ್ನು ದಾಖಲಿಸಲು ಆಧುನಿಕ ಸಂದರ್ಭದಲ್ಲಿ ನಡೆದ ಸಂಸ್ಕೃತಾಧ್ಯಯನದ ಚರಿತ್ರೆಯನ್ನು ಬರೆಯಬೇಕಾಗುತ್ತದೆ”.

ದ್ರಾವಿಡಾಧ್ಯಯನಕ್ಕೆ ಸಂಬಂಧಿಸಿದಂತೆಯೂ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಅತಿಶಯೋಕ್ತಿಯಾಗಲಾರದೆಂದು ನಾನು ಭಾವಿಸಿದ್ದೇನೆ. ಇದನ್ನು ನನ್ನ ಈ ಉಪನ್ಯಾಸದಲ್ಲಿ ಸಾಧಿಸಿ ತೋರಿಸಲು ಸಾಧ್ಯವಾಗದಿದ್ದರೂ, ಕಡಏ ಪಕ್ಷ ಗುರುತಿಸುವುದಕ್ಕಾದರೂ ಸಾಧ್ಯವಾಗಿದೆಯೆಂದುಕೊಂಡಿದ್ದೇನೆ.*

 

ಇಂಗ್ಲೀಷ್ ಮೂಲ : ಡಾ. ಹರ್ಬರ್ಟ್ಹರ್ರಿಂಗ್
ಕನ್ನಡಕ್ಕೆ : ಡಾ. . ಸುಬ್ಬಣ್ಣ ರೈ

 


* ಮಣಿಪಾಲದ ‘ಇಂಡೋ – ಜರ್ಮನ್ ಸೊಸಾಯಿಟಿ’ ಯ ಆಶ್ರಯದಲ್ಲಿ ೧೯೯೩ರ ಆಗಸ್ಟ್ ೨೧ ರಂದು ಎಚ್. ಗುಂಡರ್ಟ್‌ನ ನೂರನೇ ಪುಣ್ಯತಿಥಿಯ ಸ್ಮರಣಾರ್ಥವಾಗಿ ಡಾ. ಹರ್ಬರ್ಟ್ ರ್ಹರಿಂಗ್ ನೀಡಿದ ‘Great German Dravidologists’ ಎಂಬ ಉಪನ್ಯಾಸದ ಕನ್ನಡಾನುವಾದವಿದು. ಉಪನ್ಯಾಸದ ಶೀರ್ಷಿಕೆಯೇ ಹೇಳುವಂತೆ ಇಲ್ಲಿ ದ್ರಾವಿಡಾಧ್ಯಯನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯಿತ್ತ ಜರ್ಮನ್ ವಿದ್ವಾಂಸರ ಸಾಧನೆಗಳನ್ನು ವಿವರಿಸಲಾಗಿದೆ. ಅದಕ್ಕೆ ಪೂರಕವಾಗಿ ಭಾರತಾಧ್ಯಯನ ಹಾಗೂ ಸಂಸ್ಕೃತಾಧ್ಯಯನ ಕ್ಷೇತ್ರಗಳಿಗೆ ಸಂಬಂಧಿಸಿದಂತೆಯೂ ಪ್ರಾಸಂಗಿಕ ಉಲ್ಲೇಖಗಳಿವೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮುಂತಾದ ದ್ರಾವಿಡ ಭಾಷೆಗಳ ವ್ಯಾಕರಣಾಧ್ಯಯನ, ಸಾಹಿತ್ಯಾಧ್ಯಯನ ಹಾಗೂ ನಿಘಂಟು ರಚನಾಕಾರ್ಯಗಳನ್ನು ‘ದ್ರಾವಿಡಾಧ್ಯಯನ’ ಅಥವಾ ‘ದ್ರಾವಿಡಶಾಸ್ತ್ರ’ (Dravidology) ಎಂಬ ಪರಿಕಲ್ಪನೆ – ಪರಿಭಾಷೆ ಯಿಂದ ಗುರುತಿಸಿ, ಆ ಕಾರ್ಯಗಳಲ್ಲಿ ತೊಡಗಿಕೊಂಡ ವಿದ್ವಾಂಸರನ್ನು ‘ದ್ರಾವಿಡಾಧ್ಯಯನ ಕಾರರು’ ಅಥವಾ ‘ದ್ರಾವಿಡಶಾಸ್ತ್ರಜ್ಞರು’ (Dravidologists) ಎಂದು ಕರೆದಿರುವ ಇಲ್ಲಿನ ಉಪಕ್ರಮವು ಪರಿಕಲ್ಪನಾತ್ಮಕವಾಗಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಮಾಹಿತಿ ದೃಷ್ಟಿಯಿಂದ ನೋಡಿದರೆ, ಈ ಉಪನ್ಯಾಸವು ತನ್ನದೇ ಆದ ಮಿತಿಗಳನ್ನೂ ಹೊಂದಿದೆ. ಉದಾಹರಣೆಗೆ ಕಿಟ್ಟೆಲನ ಕುರಿತು ವಿವರಿಸುವ ಸಂದರ್ಭದಲ್ಲಿ ಆತ ‘ಶಬ್ದಮಣಿ ದರ್ಪಣ’ ವನ್ನು ಸಂಪಾದಿಸಿರುವ ಬಗೆಗಾಗಲಿ, ‘A Grammar of Kannada Language’ ಎಂಬ ಕೃತಿಯನ್ನು ಬರೆದಿರುವ ಬಗೆಗಾಗಲಿ ಇಲ್ಲಿ ಪ್ರಸ್ತಾಪಿಸಿಲ್ಲ. ಇಂತಹ ಕೆಲವು ಮಿತಿ – ಕೊರತೆಗಳ ನಡುವೆಯೂ ಉಪನ್ಯಾಸದ ಪ್ರಸ್ತುತತೆ ಯನ್ನು ನಾವು ಅಲ್ಲಗಳೆಯುವಂತಿಲ್ಲ ಹಾಗಾಗಿಯೇ ಮಾಹಿತಿಪೂರ್ಣವಾದ ಈ ಉಪನ್ಯಾಸವನ್ನು ಇಲ್ಲಿ ಅನುವಾದಿಸಿ ಕೊಡಲಾಗಿದೆ.

– ಅನುವಾದಕ