ಶಬ್ದಕೋಶಕ್ಕೆ ಸಂಬಂಧಿಸಿದ ವ್ಯತ್ಯಾಸಗಳಲ್ಲೂ ಎರಡು ವಿಧಗಳಿವೆ. ಒಂದನೆಯ ಮಾದರಿಯಲ್ಲಿ ಒಂದೇ ವಸ್ತು ವಿಷಯವನ್ನು ಸೂಚಿಸಲು ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ರೂಪಗಳಿರುತ್ತವೆ. ಉದಾಹರಣೆಗೆ ತುಳು ಬ್ರಾಹ್ಮಣರು ಗಂಡನಿಗೆ ‘ಪುರುಷೆ’ (ಸಂಸ್ಕೃತ ಪುರುಷ) ಎಂದರೆ ಬ್ರಾಹ್ಮಣೇತರರು “ಕಂಡನೆ” ಎನ್ನುತ್ತಾರೆ. ಇತರ ಕೆಲವು ಸಂದರ್ಭಗಳಲ್ಲಿ ಮೊದಲ ನೋಟಕ್ಕೆ ಇಂತಹ ಮಾದರಿಗಳು ಕಂಡರೂ ವಾಸ್ತವವಾಗಿ ಅಲ್ಲಿ ಅರ್ಥರಚನೆಗೆ ಸಂಬಂಧಿಸಿದ ವ್ಯತ್ಯಾಸಗಳಿರುತ್ತವೆ. ಉದಾಹರಣೆಗೆ ತಮಿಳು ಕಲಿಯುವ ವಿದೇಶೀಯರಿಗೆ ಕೆಲವೊಮ್ಮೆ ಬ್ರಾಹ್ಮಣೇತರ ಭಾಷಿಕರು ಬ್ರಾಹ್ಮಣ ತಮಿಳಿನಲ್ಲಿ ಅನ್ನಕ್ಕೆ ‘ಸಾದಮ್’ ಎಂದೂ ಬ್ರಾಹ್ಮಣೇತರ ತಮಿಳಿನಲ್ಲಿ “ಚೋರು” ಎಂದೂ ಇರುವುದಾಗಿ ಹೇಳುತ್ತಾರೆ. ರಾಮಾನುಜನ್ ಅವರ ಪ್ರಕಾರ ಬೇರೆಯದೇ ಆದ ಅರ್ಥದಲ್ಲಿ ಬ್ರಾಹ್ಮಣ ಭಾಷಿಕರೂ ‘ಚೋರು’ ಪದವನ್ನು ಬಳಸುತ್ತಾರೆ. (ಉಪಯೋಗಕ್ಕೆ ಬಾರದ ಅನ್ನ, ಬಿಟ್ಟಿಕೂಳು – ಭಿಕ್ಷಾನ್ನ ಎಂಬ ಅರ್ಥದಲ್ಲಿ.) ಇಲ್ಲಿಯ ಎರಡನೆಯ ಮಾದರಿಗೆ ಇತರ ಉದಾಹರಣೆಗಳು ಸಿಗಬಹುದು. ಇಂತಹ ವಿಷಯಗಳ ಕುರಿತು ಶ್ರದ್ಧಾಪೂರ್ಣ ಅಧ್ಯಯನಗಳು ನಡೆದರೆ ಅಂತರ್‌ಗುಂಪು ಸಂಬಂಧಗಳ ಸಾಮಾಜಿಕ ಚಲನಶೀಲತೆಗೆ ಸಂಬಂಧಿಸಿದ ಮಹತ್ವದ ಅಂಶಗಳು ಬೆಳಕಿಗೆ ಬರಬಹುದು.

ಸಾರ್ವಜನಿಕವಾಗಿ ಆಗಾಗ ಚರ್ಚಿತವಾಗುವ ಪದಗಳಿರುವ ಪ್ರದೇಶಗಳಲ್ಲಿನ ವಿವಿಧ ಜಾತಿ ಗುಂಪುಗಳ ಭಾಷೆಗಳಲ್ಲಿ ಶಬ್ದಕೋಶಕ್ಕೆ ಸಂಬಂಧಿಸಿದ ವ್ಯತ್ಯಾಸಗಳಿಗೆ ಅಷ್ಟೊಂದು ಮಹತ್ವವಿರುವುದಿಲ್ಲವೆಂಬುದಾಗಿ ತಮಿಳು ಮತ್ತು ಇತರ ದಕ್ಷಿಣ ಏಷಿಯಾ ಭಾಷೆಗಳ ಅರ್ಥರಚನೆ. ತೌಲನಿಕ ಅಧ್ಯಯನದಿಂದ ವ್ಯಕ್ತವಾಗುತ್ತದೆ ಈ ಅಧ್ಯಯನದ ಪ್ರಕಾರ ಸಾರ್ವಜನಿಕವಾಗಿ ಚರ್ಚಿತವಾಗುವ ಕೃಷಿ ಸಂಬಂಧೀ ಶಬ್ದಕೋಶಗಳಲ್ಲಿ ಅಂತರ್‌ಜಾತೀಯ ವ್ಯತ್ಯಾಸಗಳು ಕಡಿಮೆ ಪ್ರಮಾಣದಲ್ಲಿ ಕಂಡುಬಂದರೆ ಕುಟುಂಬದೊಳಗಡೆ ಅಥವಾ ಜಾತಿ ಗುಂಪುಗಳೊಳಗಡೆಯಷ್ಟೇ ಪ್ರಚಲಿತವಿರುವ ಆಹಾರ, ಊಟ, ಬಂಧುತ್ವ, ಮದುವೆ ಹಾಗೂ ಇತರ ಆಚರಣೆಗಳಿಗೆ ಸಂಬಂಧಿಸಿದ ಪದಗಳಲ್ಲಿ ಇಂತಹ ವ್ಯತ್ಯಾಸಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದರಂತೆ ತಮಿಳಿನ ‘ನೆಲ್ಲ್’ (ಬತ್ತ) ಮತ್ತು ‘ಆರಿಸಿ’ (ಅಕ್ಕಿ) ಬ್ರಾಹ್ಮಣರಲ್ಲೂ, ಬ್ರಾಹ್ಮಣೇತರರಲ್ಲೂ ವ್ಯತ್ಯಾಸವಿಲ್ಲದೆ ಬಳಕೆಯಾದರೆ, ಅನ್ನಕ್ಕಿರುವ ಪದಗಳು ಮೇಲೆ ನೋಡಿದಂತೆ ವ್ಯತ್ಯಸ್ತವಾಗಿವೆ.

ಎಂ.ಎಸ್.ಪಿಳ್ಳೈ ಅವರು ತಮಿಳು ಗ್ರಾಮವೊಂದನ್ನು ಆಯ್ದುಕೊಂಡು ಸಂಬಂಧವಾಚಿಗಳ ವ್ಯತ್ಯಾಸಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಆ ಅಧ್ಯಯನದ ಪ್ರಕಾರ ಬಂಧುವಾಚಿಗಳ ಆಧಾರದಿಂದಲೇ ಜನರನ್ನು ನಾಲ್ಕು ಅಥವಾ ಐದು ಗುಂಪುಗಳಾಗಿ ಪ್ರತ್ಯೇಕಿಸಬಹುದೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಇದರಂತೆ ಮುಸಲ್ಮಾನ, ಬ್ರಾಹ್ಮಣ ಮತ್ತು ಮುದಲಿಯಾರರನ್ನು ಪರಸ್ಪರವಾಗಿಯೂ, ಇತರ ಸಮುದಾಯಗಳಿಂದಲೂ ಪ್ರತ್ಯೇಕಿಸಲು ಸಾಧ್ಯವಾಗುತ್ತದೆ. ಈ ತೆರನಾದ ಅಧ್ಯಯನಗಳಲ್ಲಿ ಮುಸಲ್ಮಾನ ಮತ್ತು ಕ್ರೈಸ್ತ ಸಮುದಾಯಗಳು ಹೆಚ್ಚು ಭೇದವುಳ್ಳ ಜಾತಿಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇಂತಹ ಗುಂಪುಗಳನ್ನು ಸೇರಿಸಿಕೊಳ್ಳುವ ಸಲುವಾಗಿ “ಜಾತಿ” ಪರಿಭಾಷೆಯನ್ನು ವಿಸ್ತರಿಸುವುದರಿಂದ ನಿಜಕ್ಕೂ ಪ್ರಯೋಜನವಾಗುತ್ತದೆ. ಹೀಗೆ ಜಾತಿ, ಗಡಿಗಳು ಇತರ ಸಾಂಸ್ಕೃತಿಕ ಮೇರೆಗಳಂತೆ ಶಬ್ದಕೋಶದ ಸ್ವರೂಪದಲ್ಲಿ ಕಾರ್ಯ ನಿರ್ವಹಿಸುತ್ತವೆ. ಉದಾಹರಣೆಗೆ ಅಕ್ಕಿ ಮತ್ತು ಭತ್ತಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣ ಮತ್ತು ಬ್ರಾಹ್ಮಣೇತರರಲಲಿ ಇರುವ ಶಬ್ದ ವ್ಯತ್ಯಾಸವನ್ನು ಹಿಂದೂ – ಉರ್ದು ಪ್ರದೇಶದ ಅಕ್ಕಿ ಮತ್ತು ಗೋಧಿ ಆಹಾರವಾಗುಳ್ಳ ಪ್ರದೇಶಗಳಲ್ಲಿ “ಭಾತ್” (ಅನ್ನ) ಮತ್ತು “ಚಾವಲ್” (ಅಕ್ಕಿ) ಗಳೊಳಗೆ ವ್ಯತ್ಯಾಸ ಸ್ಪಷ್ಟವಾಗಿದ್ದರೆ, ಪಶ್ಚಿಮದ ಗೋಧಿ ಆಹಾರವಾಗುಳ್ಳ ಪ್ರದೇಶಗಳಲ್ಲಿ ಅಕ್ಕಿ ಮತ್ತು ಅನ್ನ ಎಂಬ ಎರಡು ಅರ್ಥಗಳಲ್ಲೂ “ಚಾವಲ್” ರೂಪ ಒಂದೇ ಬಳಕೆಯಾಗುತ್ತದೆ.

ಎಂ.ಎಲ್. ಅಪ್ಟೆಯವರು ಮುಂಬಯಿ ಮಹಾನಗರದಲ್ಲಿ ವಿವಿಧ ಹಿನ್ನೆಲೆಯುಳ್ಳ ಜನರು ಮಾತನಾಡುವ ವಿಭಿನ್ನ ಮರಾಠಿ ಭಾಷಾರೂಪಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಅವರ ಅಭಿಪ್ರಾಯದಂತೆ ಮರಾಠರು ಮತ್ತು ಇತರ ಮೇಲ್ಜಾತಿಯವರ ಭಾಷೆಯು ವಿಶೇಷವಾಗಿ ಧ್ವನಿಶಾಸ್ತ್ರದ ದೃಷ್ಟಿಯಿಂದ ಬ್ರಾಹ್ಮಣ ಭಾಷೆಗಿಂತ ಭಿನ್ನವಾದ ಲಕ್ಷಣಗಳನ್ನು ತೋರಿಸುತ್ತದೆ. ಸ್ವೀಕೃತ ಪದಗಳಲ್ಲಿನ ವ್ಯತ್ಯಾಸಗಳನ್ನು ಅವರು ಈ ರೀತಿ ಗುರುತಿಸುತ್ತಾರೆ. ಉದಾ: ಬ್ರಾಹ್ಮಣ “ವರ್ಷ” ಬ್ರಾಹ್ಮಣೇತರ – “ವರ್ಷ”. ಸಂಸ್ಕೃತ – “ವರ್ಷ”, ದೇಸೀಯ ಪದಗಳಲ್ಲಿನ ವ್ಯತ್ಯಾಸಗಳಿಗೆ ಈ ಕೆಳಗಿನಂತೆ ಉದಾಹರಣೆಗಳನ್ನು ಕೊಡುತ್ತಾರೆ. ಬ್ರಾಹ್ಮಣ – ‘ಎಕ್’, ಬ್ರಾಹ್ಮಣೇತರ – “ಯೇಕ್” (ಒಂದು) ಅವರು ಬ್ರಾಹ್ಮಣ ಮರಾಠಿ ಮತ್ತು ಬ್ರಾಹ್ಮಣೇತರ ಮರಾಠಿಯ ನಡುವೆ ಇರುವ ಆಕೃತಿ ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ಆದರೆ ಮುಂಬಯಿಯಲ್ಲಿರುವ ಅನೇಕ ಭಾಷಿಕರು ಮಹಾರಾಷ್ಟ್ರದ ಇತರೆಡೆಗಳಿಂದ ಬಂದಿದ್ದರೂ ಪ್ರಾದೇಶಿಕ ಭಿನ್ನತೆಗಳನ್ನು ಗುರುತಿಸಲು ಸಾಕಷ್ಟು ಅಂಕಿ, ಅಂಶಗಳು ಅಲ್ಲಿ ಲಭ್ಯವಾಗುವುದಿಲ್ಲ. ‘ಪ್ರತಿಷ್ಠಿತ ಬ್ರಾಹ್ಮಣ’ ಉಪಭಾಷೆ ಮತ್ತು ಇತರ ಉಪಭಾಷೆಗಳ ನಡುವೆ ಎದ್ದು ಕಾಣುವಷ್ಟು ವ್ಯತ್ಯಾಸಗಳಿದ್ದರೆ, ಇನ್ನಿತರ ಬ್ರಾಹ್ಮಣೇತರ ಜಾತಿಗಳ ಉಪಭಾಷೆಗಳೊಂದಿಗೆ ಅಂತಹ ವ್ಯತ್ಯಾಸಗಳಿಲ್ಲ ಎಂಬ ಸಾಮಾನ್ಯವಾದ ಅಭಿಪ್ರಾಯಕ್ಕೆ ಅವರು ಬರುತ್ತಾರೆ. ಮರಾಠಿ ಮತ್ತು ದ್ರಾವಿಡ ಪ್ರದೇಶದ ಭಾಷಾ ವ್ಯತ್ಯಾಸಗಳ ಮಾದರಿಯಲ್ಲಿರುವ ಸಾಮ್ಯವು ಗಮನಾರ್ಹವಾಗಿದೆ. ಆದುದರಿಂದಲೇ ಸಮಾಜೋ ಭಾಷಿಕ ಅಧ್ಯಯನದ ದೃಷ್ಟಿಯಿಂದ ಮಹಾರಾಷ್ಟ್ರವನ್ನು ದಕ್ಷಿಣ ಭಾರತದೊಂದಿಗೆ ಸೇರಿಸಬಹುದೇನೋ ಎನಿಸುತ್ತದೆ. ಈ ಸೇರ್ಪಡೆಯ ಸಾಧ್ಯತೆಗಿರುವ ಚಾರಿತ್ರಿಕ ಆಧಾರಗಳನ್ನು ಮುಂದೆ ಚರ್ಚಿಸಲಾಗಿದೆ.

ಬ್ರಾಹ್ಮಣೇತರ ಭಾಷಾಪ್ರಭೇದಗಳನ್ನು ಅಧ್ಯಯನ ಮಾಡಿದಾಗ ಕೆಳಜಾತಿಗಳಲ್ಲಿಯ ಭಿನ್ನತೆಗಳು ಇತರ ಬ್ರಾಹ್ಮಣೇತರ ಭಾಷಾ ಪ್ರಭೇದಗಳಿಗಿಂತಲೂ ಪ್ರತ್ಯೇಕವಾಗಿ ಗೋಚರವಾಗುತ್ತವೆ. ಹಾಗೂ ದಕ್ಷಿಣ ಭಾರತದಾದ್ಯಂತ ಭಾಷಾ ಪ್ರಭೇದಗಳಿಗೆ ಸಂಬಂಧಿಸಿದಂತೆ ತ್ರಿವಿಧ ವಿಭಾಗಗಳ ಸಾಮಾನ್ಯ ಚಿತ್ರವೊಂದು ಗೋಚರಿಸುತ್ತದೆ. ಉಣ್ಣಿಯವರು ಮಲಯಾಳಂ ಧ್ವನಿಮಾಗಳಲ್ಲಿ ತ್ರಿಪಥ ವಿಭಾಗಗಳಿರುವುದನ್ನು ಗುರುತಿಸಿದ್ದಾರೆ. ಇಲ್ಲಿ ಮತ್ತೆ ಉಚ್ಚಾರಣೆಯ ದೃಷ್ಟಿಯಿಂದ ಮೂರು ಸ್ಥೂಲ ಪ್ರಭೇದಗಳಿವೆ. ಅವುಗಳೆಂದರೆ: ನಂಬೂದಿರಿಗಳ ಉಚ್ಚಾರಣೆ, ಮೇಲ್ಜಾತಿಯ ಬ್ರಾಹ್ಮಣೇತರರ ಉಚ್ಚಾರಣೆ ಮತ್ತು ಮಧ್ಯಮ ಹಾಗೂ ಕೆಳಜಾತಿಗಳವರ ಉಚ್ಚಾರಣೆ. ಮೆಕ್ ಕೊರ್ಮಾಕನು ಕನ್ನಡದ ಸ್ಥಿತಿಗತಿಗಳ ಬಗ್ಗೆ ಈ ರೀತಿ ಹೇಳಿದ್ದಾನೆ. ಧಾರವಾಡದಲ್ಲಿನ ಹಿಂದುಳಿದ ವರ್ಗಗಳ ಭಾಷಾಶೈಲಿಗೂ ಇತರ ಎರಡು ಸಾಮಾಜಿಕ ಪಂಗಡ (ಸಮುದಾಯ)ಗಳ ಭಾಷಾಶೈಲಿಗೂ ಇರುವ ಪ್ರಮುಖ ವ್ಯತ್ಯಾಸವು ಕ್ರಿಯಾ ಪ್ರತ್ಯಯಗಳ ಧ್ವನಿಮಾ ರೂಪಗಳಿಗೆ ಸಂಬಂಧಿಸಿದುದಾಗಿದೆ. ಸಂಯುಕ್ತ ಕ್ರಿಯಾಮೂಲಗಳ ಬಳಕೆಯಲ್ಲೂ ವ್ಯತ್ಯಾಸಗಳಿವೆ. ಅದೇ ರೀತಿ ಸಂಬೋಧನೆ ವಾಚಿಗಳಲ್ಲೂ ಬಂಧುವಾಚಿಗಳಲ್ಲೂ ಕೆಲವು ಭಿನ್ನರೂಪಗಳಿವೆ. ಆದರೆ ಧಾರವಾಡದ ಹರಿಜನ ಭಾಷಾಪದಗಳು ಇತರ ಬ್ರಾಹ್ಮಣೇತರ ಜಾತಿಗಳ ಭಾಷಾಪದಗಳಿಗಿಂತ ಭಿನ್ನವಾಗಿರುವುದು ಈ ಅಧ್ಯಯನದಿಂದ ಶ್ರುತಪಟ್ಟಿದೆ.

ತೆಲುಗಿನ ಕೆಳಜಾತಿಗಳವರ ಭಾಷೆಯು ಧ್ವನಿಮಾ ಮತ್ತು ಆಕೃತಿಮಾಗಳೆರಡರಲ್ಲೂ ಇತರ ಬ್ರಾಹ್ಮಣೇತರ ಭಾಷೆಗಳಿಗಿಂತ ಅನೇಕ ಸಂದರ್ಭಗಳಲ್ಲಿ ಭಿನ್ನವಾಗಿರುವುದನ್ನು ಸುಬ್ಬರಾವ್ ಅವರು ಗುರುತಿಸುತ್ತಾರೆ. ಮರಾಠಿಗೆ ಸಂಬಂಧಿಸಿದಂತೆ ಅಪ್ಪೆಯವರು ಹೇಳುವ ಪ್ರಕಾರ ಬ್ರಾಹ್ಮಣೇತರ ಭಾಷಿಕರಲ್ಲಿ ಯಾವುದೇ ಜಾತಿಗೂ ನಿರ್ದಿಷ್ಟ ಗುಣಲಕ್ಷಣಗಳನ್ನು ಅನ್ವಯಿಸಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯನ್ನು ವಿಲ್ಲಿಯಂ ಮೆಕ್ ಕೊಮಕನು ತನ್ನ ‘ಸೋಷಿಯಲ್ ಡಯಾಲೆಕ್ಟ್ಸ್ ಇನ್ ಧಾರ್‌ವಾರ್ ಕನ್ನಡ’ ಎಂಬ ಲೇಖನದಲ್ಲಿ ಹೇಳಿರುವ ಅಂಶಗಳೊಂದಿಗೆ ಹೋಲಿಸಿ, ಸಾದೃಶ್ಯ – ವೈದೃಶ್ಯಗಳನ್ನು ಗುರುತಿಸಬಹುದಾಗಿದೆ.” ಮೇಲೆ ವಿವರಿಸಿದಂತೆ ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ಭಾಷಾ ಪರಿಸ್ಥಿತಿಗಳನ್ನು ಗಮನಿಸಿದರೆ ಅವುಗಳೊಳಗಿನ ಗಮನಾರ್ಹವಾದ ವೈದೃಶ್ಯಗಳು ಸ್ಪಷ್ಟವಾಗುತ್ತವೆ. ಅದೇ ರೀತಿ ಉತ್ತರಭಾರತಕ್ಕೆ ಸಂಬಂಧಪಟ್ಟಂತೆ ಗುಂಪರ್ಜ್‌ ಮತ್ತು ಲೆವೀನ್ ನಡೆಸಿದ ಗ್ರಾಮ ಅಧ್ಯಯನಗಳಿಂದಲೂ ಇಂತಹುದೇ ಅಂಶಗಳು ಪ್ರಕಟವಾಗಿವೆ. ಇದು ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳೊಳಗೆ ಮುಖ್ಯವಾಗಿ ಧ್ವನಿಮಾ ವ್ಯತ್ಯಾಸಗಳಿರುವುದನ್ನು ತೋರಿಸಿ ಕೊಡುತ್ತದೆ. ಮಾತ್ರವಲ್ಲ, ಎಲ್ಲಾ ಸ್ಪೃಶ್ಯ ಗುಂಪುಗಳೊಳಗೆ ಹೇಳಿಕೊಳ್ಳುವಂತಹ ಪರಸ್ಪರ ವ್ಯತ್ಯಾಸಗಳಿಲ್ಲವೆಂಬುದನ್ನು ತಿಳಿಸುತ್ತದೆ. (ಆದರೂ ಗುಂಪರ್ಜನ ಅಧ್ಯಯನದಿಂದ ಪ್ರತ್ಯೇಕ ಹಳ್ಳಿಗಳಲ್ಲಿ ವಾಸಿಸುತ್ತಿರುವ ಮೂರು ಅಸ್ಪೃಶ್ಯ ಗುಂಪುಗಳೊಳಗೆ ಪರಸ್ಪರ ಭಾಷಾ ವ್ಯತ್ಯಾಸವಿರುವುದು ವ್ಯಕ್ತವಾಗಿದೆ.)

ಮರಾಠಿಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳ ಅವಶ್ಯಕತೆ ಇದೆಯೆನಿಸುತ್ತದೆ. ಅಪ್ಟೆಯವರ ಅಧ್ಯಯನವು ಮುಖ್ಯವಾಗಿ ನಗರವಾಸಿಗಳನ್ನು ಗಮನದಲ್ಲಿರಿಸಿಕೊಂಡು ನಡೆದಿರುವುದರಿಂದ ಅಸ್ಪೃಶ್ಯರು ಮೂಲತಃ ತಮ್ಮ ಸಾಂಪ್ರದಾಯಿಕ ಭೌತಿಕ ಪ್ರತ್ಯೇಕತೆಯಲ್ಲಿ ಹೇಗೆ ಬದುಕುತ್ತಿದ್ದಾರೆ.? ಹೇಗೆ ಮಾತನಾಡುತ್ತಿದ್ದಾರೆ? ಎಂಬುದರ ಕಡೆಗೆ ಅಷ್ಟಾಗಿ ಗಮನ ಹರಿಸಿದಂತಿಲ್ಲ, ನನ್ನ ಪ್ರಕಾರ ಕಡೇ ಪಕ್ಷ ಅಸ್ಪೃಶ್ಯರು ಭೌತಿಕವಾಗಿ ಪ್ರತ್ಯೇಕವಾಗಿರುವ ಕಡೆಗಳಲ್ಲಾದರೂ “ಕೆಳಸ್ತರದ” ಪ್ರತ್ಯೇಕ ಭಾಷಾ ಪ್ರಭೇದವೊಂದು ಅಸ್ತಿತ್ವದಲ್ಲಿರುವುದು ಅಖಿಲ ಭಾರತ ಲಕ್ಷಣವೆನಿಸುತ್ತದೆ. ಆದರೆ ನಿಖರವಾದ “ಮೇಲ್ವರ್ಗ”ದ ಪ್ರಭೇದವೊಂದಿರುವುದು (ಮುಖ್ಯವಾಗಿ ಬ್ರಾಹ್ಮಣರಲ್ಲಿ, ಕೆಲವೊಮ್ಮೆ ಇತರ ಮೇಲ್ವರ್ಗದವರಲ್ಲೂ) ಮಹಾರಾಷ್ಟ್ರಸೂ ಸೇರಿದಂತೆ ದಕ್ಷಿಣ ಭಾರತದ ಭಾಷಾ ವೈಲಕ್ಷಣ್ಯವಾಗಿದೆ.

ಕೆಳಜಾತಿಯ ಭಾಷಾ ಪ್ರಭೇದಗಳನ್ನುಪಯೋಗಿಸುವ ಗುಂಪುಗಳ ಅನನ್ಯತೆಗೆ ಸಂಬಂಧಿಸಿದಂತೆ ನಮ್ಮ ಬಳಿ ಸಾಕಷ್ಟು ಮಾಹಿತಿಗಳಿಲ್ಲ. ಅಸ್ಪೃಶ್ಯರು ತಮ್ಮ ಭಾಷೆಯಿಂದ ಗುರುತಿಸಲ್ಪಡುತ್ತಾರಂದು ಹೇಳುತ್ತಾ ಬರಲಾಗಿದೆ. ಆದರೆ ಉಡುಗೆ ತೊಡುಗೆ ಅಥವಾ ಜೀವನ ವಿಧಾಗಳಂತಹ ಇತರ ಸಂಗತಿಗಳು ಈ ಅನನ್ಯತೆಯನ್ನು ಗುರುತಿಸುವಲ್ಲಿ ಎಷ್ಟರ ಮಟ್ಟಿಗೆ ಕಾರವಾಗುತ್ತವೆಂಬ ಬಗ್ಗೆ ನಾವು ಹೆಚ್ಚು ತಿಳಿದಿಲ್ಲ. ಮೇಲೆ ನೋಡಿದ ಎಂ.ಎಸ್.ಪಿಳ್ಳೈ ಅವರ ಅಧ್ಯಯನದಲ್ಲಿ ಪ್ರಸ್ತಾವಿಸಲಾದ “ಕೆಳ” ಗುಂಪು ತೀ‌ಕ್ಷ್ಣ ಭಾಷಿಕ ಗಡಿಗಳಿಲ್ಲದ ಕೆಳಜಾತಿಯ ಹರಿಜನ ಮತ್ತು ಮೇಲ್ಜಾತಿಯ ಪಿಳ್ಳೈ ಸೇರಿದಂತೆ ಹತ್ತು ಜಾತಿಗಳನ್ನು ಹೊಂದಿದೆ. ವಿವಿಧ ಗುಂಪುಗಳ ಭೇದದಲ್ಲಿ ಸ್ಪಷ್ಟವಾದ ವ್ಯತ್ಯಾಸಗಳಿವೆ. ಅದೇ ರೀತಿ ಹೆಚ್ಚಿನ ಅಧ್ಯಯನಗಳಿಲ್ಲದೇನೇ ಈ ಕುರಿತು ಕೆಲವು ಸಾಮಾನ್ಯೀಕರಣಗಳನ್ನು ಮಾಡಿಕೊಳ್ಳಲು ಸಾಧ್ಯವಿದೆ..

ಸದ್ಯ ಗಮನಿಸಿದಂತೆ ಮುಸಲ್ಮಾನರದೂ ಭಾಷಾ ಭೇದವುಳ್ಳ ಒಂದು ಗುಂಪೆನಿಸುತ್ತದೆ. ಪಿಳ್ಳೈಯವರ ಅಧ್ಯಯನದ ಪ್ರಕಾರ ಮುಸಲ್ಮಾನರು ಗ್ರಾಮವೊಂದರಲ್ಲಿ ಅತಿಹೆಚ್ಚು ಭಾಷಾ ವಿಶಿಷ್ಟತೆಯಿರುವ ಗುಂಪಾಗಿದ್ದಾರೆ. ಮೇಲೆ ಪ್ರಸ್ತಾಪಿಸಿದ ಇತರ ಅಧ್ಯಯನಗಳು ಮುಸ್ಲಿಮರನ್ನು ಪರಿಗಣಿಸಿಲ್ಲ. ಆದರೆ ಮಾಹಿತಿದಾರರ ವರದಿಯ ಪ್ರಕಾರ ದಕ್ಷಿಣದ ಹಿಂದೂ ಮತ್ತು ಮುಸ್ಲಿಮರೊಳಗೆ ಸಾಕಷ್ಟು ಭಾಷಿಕ ವ್ಯತ್ಯಾಸಗಳಿವೆ. ಉತ್ತರ ಮಲಬಾರಿನ ಪಿ.ವಿ. ಕುಞ್ಞಿಕಣ್ಣನ್ ಎಂಬ ಮಾಹಿತಿದಾರರೊಬ್ಬರು ನೀಡಿದ ಮಾಹಿತಿಯ ಪ್ರಕಾರ ಅವರ ಪ್ರದೇಶದ ಮುಸಲ್ಮಾನರು ತಮ್ಮ ಆಡುನುಡಿಯಲ್ಲಿ ಮಲಯಾಳಂನ “ರ್” ಜಾಗದಲ್ಲಿ “ಲ್” ಧ್ವನಿಮಾವನ್ನು ಬಳಸುತ್ತಾರೆ. ಅದೇ ರೀತಿ ಅವರಲ್ಲಿ ನಿರ್ದಿಷ್ಟವಾದ ಕೆಲವು ಆಕೃತಿಮಾ ಹಾಗೂ ಶಬ್ದಕೋಶೀಯ ವ್ಯತ್ಯಾಸಗಳೂ ಕಾಣಸಿಗುತ್ತವೆ. ಇದಕ್ಕೆ ಉದಾಹರಣೆಯಾಗಿ ಆ ಮಾಹಿತಿದಾರರು ನೀಡಿದ ವಾಕ್ಯದ ಮಾದರಿಯೊಂದು ಹೀಗಿದೆ: (ರಾಘವಾ ! ನೀನೇನು ಮಾಡುತ್ತಿರುವಿ?” ಇದು ನಾಯರ್ ಮಲಯಾಳಂನಲ್ಲಿ “ರಾಗವಾ ಎಂದಾ ಚೆಯ್ಯುನ್ನದ್? ಎಂದಿದ್ದರೆ ಮುಸ್ಲಿಂ ಮಲಯಾಳಂನಲ್ಲಿ “ಲಾಗವ ದೆತ್ತಾ ಕಾಟ್ಟನ್ನು (ದು)?: ಎಂದಿರುತ್ತದೆ. (ಇದು ಪರಿಣತ ಭಾಷಾಶಾಸ್ತ್ರಜ್ಞನೊಬ್ಬನ ಆನುಗಮನವಲ್ಲದಿದ್ದರೂ ಪ್ರಸ್ತುತ ವಕ್ತೃ ಓರ್ವ ಅದ್ಭುತ ಅನುಕರಣ ಕಲಾವಿದ. ಅತನ ಅನುಗಮನವು ತಕ್ಷಣದ ಸಹಜ ಪ್ರತಿಕ್ರಿಯೆಯಾಗಿತ್ತು). ಉತ್ತರ ಭಾರತಕ್ಕೆ ಸಂಬಂಧಪಟ್ಟಂತೆ ಗುಂಪರ್ಜನು ಮುಸ್ಲಿಂ ಭಾಷೆಯ ಧ್ವನಿಮಾ ಲಕ್ಷಣಗಳನ್ನು ವರದಿ ಮಾಡುವುದಿಲ್ಲ. ಬದಲಾಗಿ ಆತನು ಪ್ರಮಾಣ ಭಾಷೆಯನ್ನಾಡುವವರೆಂದು ಪರಿಗಣಿತರಾದ “ಹಿಂದೂ ಮತ್ತು ಸ್ಪೃಶ್ಯ ಮುಸ್ಲಿಂ ಜಾತಿಗಳ” ನಡುವೆ ಕೆಲವು ಶಬ್ದಕೋಶೀಯ ವ್ಯತ್ಯಾಸಗಳಿವೆಯೆಂದೂ, ಅದೇ ರೀತಿ ಎಲ್ಲಾ ಕಡೆಗಳಲ್ಲೂ ಹಿಂದೂ ಮುಸ್ಲಿಮರೊಳಗೆ ಅಧಿಕ ಪ್ರಮಾಣದ ಭಾಷಿಕ ವ್ಯತ್ಯಾಸಗಳಿವೆಯೆಂದೂ ಹೇಳುತ್ತಾನೆ.

ಜಾತಿ ಅಥವಾ ಸಾಮಾಜಿಕ ವರ್ಗಗಳನ್ನಾಧರಿಸಿರುವ ಭಾಷಾವ್ಯತ್ಯಾಸವು ಕೇವಲ ಒಂದು ವಿಧವಷ್ಟೆ. ಇದು ಸಮಜೋಭಾಷಿಕ ವ್ಯತ್ಯಾಸದ ಪ್ರಮುಖ ಪ್ರಭೇಧವೆಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆದರೆ ಇನ್ನೂ ವ್ಯವಸ್ಥಿತವಾದ ಅಧ್ಯಯನಗಳು ನಡೆದು, ಇತರ ಭೇದಕಾರಕಗಳನ್ನು ಕಂಡುಕೊಳ್ಳುವ ತನಕ ಇದೊಂದು ಕಲ್ಪನೆಯಾಗಿಯಷ್ಟೇ ಇರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣವು ಸಹಜವಾಗಿ ಒಂದು ಪ್ರಮುಖ ವ್ಯತ್ಯಾಸಕಾರಕವಾಗಿದೆ. ಸಾಮಾನ್ಯವಾಗಿ ಹೇಳುವುದಾದರೆ ವಿದ್ಯಾವಂತ ವ್ಯಕ್ತಿಯ ಭಾಷೆಯು ಅದೇ ಹಿನ್ನಲೆಯುಳ್ಳ ಅವಿದ್ಯಾವಂತ ವ್ಯಕ್ತಿಯ ಆಡುನುಡಿಗಿಂತ ಸಂಬಂಧಪಟ್ಟ ಭಾಷೆಯ ಪ್ರತಿಷ್ಠಿತ ಪ್ರಭೇದಕ್ಕೆ ಹೆಚ್ಚು ಹತ್ತಿರವಾಗಿರುತ್ತದೆ. ನಗರೀಕರಣವು ಇಂತಹುದೇ ಇನ್ನೊಂದು ಪರಿಣಾಮಕಾರಕವೆನ್ನಬಹುದು. ಇಲ್ಲಿ ಭಾಷಾ ವ್ಯತ್ಯಾಸದ ಮಾರ್ಗವು ಅತಿಪ್ರತಿಷ್ಠಿತ ಪ್ರಭೇದದ ಕಡೆಗೆ ಇಲ್ಲವಾದರೂ ವ್ಯತ್ಯಾಸವು ಸಂಭವಿಸುತ್ತದೆ. ಈ ನಗರೀಕರಣವೆಂಬುದು ನಗರ ಪರಿಸರದಲ್ಲಿರುವ ವಿವಿಧ ರೀತಿಯ ಹಿನ್ನೆಲೆಯ ವ್ಯಕ್ತಿಗಳಿಗೆ ಮುಕ್ತವಾಗಿ ತೆರೆದುಕೊಳ್ಳಲಿರುವ ಒಂದು ಅವಕಾಶವಾಗಿದೆ. ಇಲ್ಲಿ ಅಂತರ್ಜಾತಿ ಸಂಬಂಧಗಳ ಮೇಲಿನ ಹಲವಾರು ನಿರ್ಬಂಧಗಳು ತಮ್ಮ ಸಾಂಪ್ರದಾಯಿಕ ಶಕ್ತಿಗಳನ್ನು ಕಳೆದುಕೊಳ್ಳುತ್ತಿವೆ.

ಮೆಕ್ ಕೊರ್ಮಾಕನು ಕನ್ನಡ ಭಾಷೆಯ ಧ್ವನಿಮುದ್ರಿತ ಮಾದರಿಗಲ ಮೂಲಕ ಜಾತಿಗಳನ್ನು ಕುರಿತಾದ ವಕ್ತೃ ತೀರ್ಪುಗಳನ್ನು ಹೊರಗೆಡಹುತ್ತಾ ಈ ರೀತಿ ಉಲ್ಲೇಖಿಸುತ್ತಾನೆ : “ನಾಲ್ಕು ಹಿಂದುಳಿವ ವರ್ಗಗಳ ಭಾಷಿಕರು ಯಾವತ್ತೂ ಸರಿಯಾಗಿ ಗುರುತಿಸಿಕೊಂಡಿಲ್ಲ. ಯಾಕೆಂದರೆ ಅವರು ಬ್ರಾಹ್ಮಣ, ಲಿಂಗಾಯತ ಮತ್ತು ಗ್ರಂಥಸ್ಥ ರೂಪಗಳು ಮಿಶ್ರಿತವಾದ ಭಾಷೆಯನ್ನಾಡುತ್ತಾರೆ. ಇದು ಅವರ ಸ್ವಂತ ಭಾಷಾ ವೈಶಿಷ್ಟ್ಯವನ್ನು ಮರೆಮಾಚುತ್ತದೆ. ನಗರೀಕರಣಗೊಂಡ ಕೆಲವು ಹಿಂದುಳಿದ ವರ್ಗಗಳ ಭಾಷಿಕರು ಇತರ ಸಾಮಾಜಿಕ ವರ್ಗಗಳ ಸದಸ್ಯರೊಡನೆ ವ್ಯವಹರಿಸುವಾಗ ನಿಯತವಾಗಿ ಇಂತಹ ಮಿಶ್ರಭಾಷೆಯನ್ನಾಡುತ್ತಾರೆ”. ಈ ರೀತಿ ಗ್ರಂಥಸ್ಥ ಶೈಲಿಯ ಭಾಷೆಯನ್ನು ಬಳಸುವುದರಿಂದ ಕೇಳುಗರು ಆ ಭಾಷಿಕರನ್ನು ಬ್ರಾಹ್ಮಣರೆಂದು ಪರಿಗಣಿಸಲು ಪ್ರೇರೇಪಿಸಿದಂತಾಗುತ್ತದೆಂದು ಮೆಕ್ ಕೊರ್ಮಾಕನು ಹೇಳುತ್ತಾನೆ.

ಮುಂಬಯಿಯ ಮರಾಠಿ ಭಾಷಿಕರ ಕುರಿತು ಇದೇ ರೀತಿಯ ಅಧ್ಯಯನವನ್ನು ನಡೆಸಿದ ಅಪ್ಟೆಯವರು ಇಂತಹುದೇ ನಿರ್ಣಯಕ್ಕೆ ಬರುತ್ತಾರೆ. ಅವರು ಹೇಳುವ ಪ್ರಕಾರ “ನಿರ್ದಿಷ್ಟ ಜನಸಮುದಾಯದವರ ಭಾಷೆಗಳ ಧ್ವನಿಸುರುಳಿಯನ್ನು ಕೇಳಿಸಿದಾಗ ಕೆಲವೇ ಮಂದಿ ವಕ್ತೃಗಳು ಮಾತ್ರ ಸಂಬಂಧಪಟ್ಟ ಭಾಷೆಗಳನ್ನಾಡುವವರ ನಿಖರ ಜಾತಿಗಳನ್ನು ಗುರುತಿಸಲು ಶಕ್ತರಾದರು. ಇಲ್ಲಿ ಉತ್ತಮ ಅಥವಾ ಶುದ್ಧ ಭಾಷೆಯು ಸಹಜವಾಗಿಯೇ ಬ್ರಾಹ್ಮಣರು ಅಥವಾ ಮರಾಠರ ಜತೆ (ಹೆಚ್ಚಿನ ಸಂದರ್ಭಗಳಲ್ಲಿ ಬ್ರಾಹ್ಮಣರ ಜತೆ) ಸಂಬಂಧಹೊಂದಿದೆಯೆಂಬುದನ್ನು ಮಾತ್ರ ವಕ್ತೃಗಳು ಅರಿತುಕೊಂಡಿದ್ದಾರೆ”. ಅಪ್ಟೆಯವರ ನಿರ್ಣಯದ ಪ್ರಕಾರ “ಶಿಕ್ಷಣ ಮತ್ತು ನಗರೀಕರಣಗಳು ಆಕೃತಿಮಾ ಮತ್ತು ವಾಕ್ಯರಚನಾ ವ್ಯತ್ಯಾಸಗಳನ್ನು ಕಡಿಮೆಗೊಳಿಸುವ ಗಮನಾರ್ಹ ಅಂಶಗಳು. ಸ್ವಲ್ಪಮಟ್ಟಿಗೆ ಇದು ಧ್ವನಿಶಾಸ್ತ್ರದ ವಿಷಯದಲ್ಲೂ ಸತ್ಯವಾಗುತ್ತದೆ”. ಮ್ಯಾಕ್ಸೈನ್ ಬಾರ್ನ್‌‌ಸ್ಟನ್ ಅವರು ಷಲ್ತಾನ್ ನಗರದಲ್ಲಿ ನಡೆಸಿದ ಸಮಾಜೋಭಾಷಿಕ ವ್ಯತ್ಯಾಸದ ಅಧ್ಯಯನವು ಕೆಲವು ನಿರ್ದಿಷ್ಟ ಭಾಷಾ ವ್ಯತ್ಯಾಸಗಳು ಜಾತಿಗಿಂತಲೂ ಹೆಚ್ಚಾಗಿ ಶಿಕ್ಷಣದೊಂದಿಗೆ ಸಂಬಂಧ ಹೊಂದಿದೆಯೆಂಬುದನ್ನು ತೋರಿಸಿಕೊಟ್ಟಿದೆ.

ಕ್ರಿಯಾತ್ಮಕ ವ್ಯತ್ಯಾಸ :

ಭಾಷಾ ಮಾದರಿಗಳ ರೂಪೀಕರಣದಲ್ಲಿ ಜಾತಿ, ವರ್ಗ, ಮತ್ತು ಶಿಕ್ಷಣಗಳಂತಹ ವಿಷಯಗಳಿಗೆ ಇರುವ ಮಹತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುವಾಗ, ವ್ಯಕ್ತಿಯೊಬ್ಬನ ಭಾಷೆಯ ಸಾಮಾಜಿಕ ಸನ್ನಿವೇಶಕ್ಕೆ ಹೊಂದಿಕೊಂಡು ಬದಲಾಗುತ್ತಾ ಹೋಗುತ್ತದೆಂಬುದನ್ನು ನಾವು ನೆನಪಿನಲ್ಲಿಟ್ಟುಕೊಂಡಿರಬೇಕು. “ಇತರೆ ಸಾಮಾಜಿಕ ವರ್ಗಗಳ ಸದಸ್ಯರೆದುರು ಅವರು ಮಾತನಾಡುವಾಗ” ಎಂಬ ಮೆಕ್ ಕೊರ್ಮಾಕನ ವಾಕ್ಯ ಭಾಗ ಇಲ್ಲಿ ಒಂದು ಪ್ರಮುಖ ಸೂಚನೆಯಾಗಿದೆ. ಯಾಕೆಂದರೆ ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕೆಳಜಾತಿಯ ಜನರು ಮೇಲ್ಜಾತಿಯವರ ಭಾಷಾ ಪ್ರಬೇದವನ್ನು ಬಳಸುವುದರಿಂದ ಕೆಳಜಾತಿಯವರ ಭಾಷೆಯು ಬಳಕೆಯಿಂದ ತಪ್ಪಿಹೋಗುತ್ತದೆಂಬುದರಲ್ಲಿ ಖಾತರಿಯಿಲ್ಲ. ವಿವಿಧ ಭಾಷಾ ಸಮುದಾಯಗಳಲ್ಲಿ ಕಂಡುಬರುವ ಪಲ್ಲಟ (Switching) ಪ್ರಕ್ರಿಯೆಯ ಬಗ್ಗೆ ಹಲವು ಸಂಶೋಧಕರು ದಾಖಲಾತಿ ಮಾಡಿದ್ದಾರೆ. ಇದುವರೆಗಿನ ವರದಿಗಳ ಪ್ರಕಾರ ಇತರ ಯಾವುದೇ ಸಮುದಾಯದಲ್ಲಿರುವಂತೆಯೇ ಭಾರತದಲ್ಲೂ ಈ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಇದು ನಿಮ್ಮನ್ನು ಭಾಷೆಯು ಘಟಿಸುವ (ಆಡಲ್ಪಡುವ) ಪರಿಸ್ಥಿತಿ ಎಂಬ ಭಾಷಾ ವ್ಯತ್ಯಾಸದ ಬಹುಮುಖ್ಯ ಅಂಶದತ್ತ ಕೊಂಡೊಯ್ಯುತ್ತದೆ. ಆದಕಾರಣ ಎದುರಿಗಿರುವ ವ್ಯಕ್ತಿಗಳನ್ನವಲಂಬಿಸಿ ಜನರ ಮಾತಿನ ಶೈಲಿ ಗಣನೀಯವಾಗಿ ಬದಲಾಗುತ್ತಿರುತ್ತದೆಂಬುದನ್ನು ನಾವು ಬಲ್ಲೆವು. ಕೆಳಜಾತಿಯ ಜನರು (ನಿಮ್ನ ಘನತೆಯುಳ್ಳ ಗುಂಪಿನ ಜನರು) ಸಾಮಾನ್ಯವಾಗಿ ಪ್ರತಿಷ್ಠಿತ ಭಾಷಾರೂಪದ ನಿರ್ದೇಶನದಂತೆ (ಮಾದರಿಯಲ್ಲಿ) ತಮ್ಮ ಭಾಷೆಯನ್ನು ಪರಿಷ್ಕರಿಸಿಕೊಳ್ಳುತ್ತಾರೆ. ವ್ಯಕ್ತಿಯೊಬ್ಬನ ಭಾಷೆಯೆ ಎಲ್ಲಾ ಮಟ್ಟಗಳನ್ನೂ ವಿವಿಧ ಸನ್ನಿವೇಶಗಳಲ್ಲಿ ನಿರ್ಧರಿಸುವವರಿಗೆ ಈ ತೆರನಾದ ಪರಿಶೋಧನೆಗಳನ್ನು ಪರಿಪೂರ್ಣವೆಂದು ಪರಿಗಣಿಸಲಾಗದು.

ಸಾಂಪ್ರದಾಯಿಕವಾಗಿ ಅನೇಕ ಕಡೆಗಳಲ್ಲಿ ಕೆಳಜಾತಿಗಳವರು ಮೇಲ್ಜಾತಿಯವರ ಉಡುಗೆ ತೊಡುಗೆ ಹಾಗೂ ಜೀವನ ಕ್ರಮಗಳನ್ನು ಅನುಕರಿಸುವುದಕ್ಕೆ ಪ್ರೋತ್ಸಾಹ ನೀಡಲಾಗುವುದಿಲ್ಲ. ಇದರಿಂದ ವ್ಯಕ್ತವಾಗುವಂತೆ, ವ್ಯಕ್ತಿಯೊಬ್ಬನ ಭಾಷೆ ಆತನು ಸಮಾನ ಸಾಮಾಜಿ ಸ್ತರದವರೊಂದಿಗೆ ಮಾತನಾಡುತ್ತಾನೋ? ಎಂಬುದನ್ನುವಲಂಬಿಸಿ ಗಣನೀಯವಾಗಿ ಬದಲಾಗುತ್ತಿರುತ್ತದೆ. ಕೇರಳದಲ್ಲಿ ತೀರಾ ಇತ್ತೀಚಿನವರೆಗೂ ಇಂತಹ ಪ್ರಕ್ರಿಯೆಯು ಅತಿರೇಕವೆಂಬಂತೆ ಪ್ರಚಲಿತವಿದ್ದುದನ್ನು ಉಣ್ಣಿ ಅವರು ವರದಿ ಮಾಡುತ್ತಾರೆ. ಇದು ಅಲ್ಲಿ “ಆಚಾರಂ ಪಳಯಲ್” ಎಂಬ ಸಂಪ್ರದಾಯವಾಗಿ ರೂಢಿಯಲ್ಲಿದ್ದುದನ್ನು ಅವರು ಗುರುತಿಸುತ್ತಾರೆ. ಇದರ ಪ್ರಕಾರ ಮೇಲ್ಜಾತಿಯವರು ಬಳಸುವ ಕೆಲವು ಪದಗಳನ್ನು ಕೆಳಜಾತಿಗಳವರು ಮಾತನಾಡಬಾರದೆಂದು ಅವರ ಮೇಲೆ ನಿಷೇದ ಹೇರಲಾಗುತ್ತದೆ. ಇದರ ಪರಿಣಾಮವೆಂಬಂತೆ ಭಾಷಾ ಬಳಕೆಯ ಕ್ಷೇತ್ರದಲ್ಲಿ ಮೇಲ್ವರ್ಗದ ಸಾಮಾಜಿಕ ಕಟ್ಟುಪಾಡನ್ನು ಮೀರಿ ಮುಕ್ತ ಸಾಮಾಜಿಕ ನೀತಿಯನ್ನು ಪಾಲಿಸುವುದು ಕಷ್ಟವೆನಿಸುತ್ತದೆ. ಹಾಗೂ ಪ್ರತಿಯೊಂದು ಜಾತಿಗಳವರೂ ಅವರವರ ಕೆಳಮಟ್ಟದ ಬಗ್ಗೆ ಜಾಗೃತರಾಗಿರುತ್ತಾರೆ. ಉಣ್ಣಿಯವರು ಉದಾಹರಿಸುವಂತೆ ಕೆಳಜಾತಿಗಳವರಿಗೆ ನಿಷೇದವಾಗಿರುವ ಪದಗಳಲ್ಲಿ ಮುಖ್ಯವಾಗಿ ವ್ಯಕ್ತಿಯ ವಸತಿ, ಬಂಧುತ್ವ ಮನೆಯ ಕೆಲವು ನಿರ್ದಿಷ್ಟ ದೈನಂದಿನ ಚಟುವಟಿಕೆಗಳಾದ ಊಟ, ಅಡುಗೆ, ಸ್ನಾನ ಇತ್ಯಾದಿಗಳು ಸೇರುತ್ತವೆ. ಕೆಳಜಾತಿಯ ವ್ಯಕ್ತಿಯು ಮೇಲ್ಜಾತಿಯ ವ್ಯಕ್ತಿಯೊಂದಿಗೆ ಮಾತನಾಡುವಾಗ ತನ್ನನ್ನು ತಾನು “ಅಡಿಯನ್” (ಸೇವಕ) ಎಂದು ಕರೆದುಕೊಳ್ಳುತ್ತಾನೆ. ಅದೇ ರಿತಿ ಮೇಲ್ಜಾತಿಯವರನ್ನು “ತಂಬುರಾನ್” (ರಕ್ಷಕ) “ಯಜಮಾನ್” (ಯಜಮಾನ) ಮೊದಲಾದ ನಿಗದಿತ ಪದಗಳಿಂದ ಸಂಬೋಧಿಸುತ್ತಾನೆ. ಕೆಳಜಾತಿಗಳವರ ಮನೆ ಕುಪ್ಪಾಡು (ತಿರಸ್ಕೃತ ಸ್ಥಳ). ಮೇಲ್ಜಾತಿಯವರಲ್ಲಿ ನಂಬೂದಿರಿಗಳ ಮನೆ “ಇಲ್ಲಮ್” ನಂಬೂದಿರಿಪಾಡರದು “ಮನೆ”. ವಲಸೆ ಬಂದ ಬ್ರಾಹ್ಮಣರದು “ಮಡಮ್” ಅದೇ ರೀತಿ ನಾಯರ್ ಮನೆ “ವೀಡ್” ಕೆಳಜಾತಿಗಳ ಜನರಲ್ಲಿ ನಿಷೇದಿತವಾಗಿರುವ ಪರಿಭಾಷೆಗಳು ಇನ್ನು ಹಲವಿವೆ. ಉದಾಹರಣೆಗೆ ಮಜ್ಜಿಗೆಗೆ ಸಾಮಾನ್ಯವಾಗಿ ಮಲಯಾಳಂನಲ್ಲಿ “ಮೊರ್” ಎಂದರೆ ಕೆಳಜಾತಿಗಳವರು ಅದರ ಬದಲಿಗೆ “ವೆಳ್ಳುತ್ತದ್” (ಬೆಳ್ಳಗಿರುವುದು) ಎನ್ನುತ್ತಾರೆ. “ನೆಲ್ಲ್” (ಭತ್ತ) ಬದಲಿಗೆ “ಕರಿಕ್ಕಾದಿ” (ಕರಿ – ಮಸಿಯೊಂದಿಗೆ ಹೋಲಿಕೆ), “ಅರಿ” (ಅಕ್ಕಿ) ಬದಲಿಗೆ “ಕಲ್ಲರಿ” (ಕಲ್ಲಕ್ಕಿ), “ತೇಂಙ” (ತೆಂಗಿನಕಾಯಿ) ಬದಲಿಗೆ ತೆಂಙೆನ್ ಮೇಲ್ಕಾಯ್ (ತೆಂಗಿನ ಮರದ ಕಾಯಿ) – ಇತ್ಯಾದಿ ಬದಲಿರೂಪಗಳನ್ನು ಬಳಸುತ್ತಾರೆ. ಭಾರತದ ಇತರೆಡೆಗಳಲ್ಲೂ ಇಂತಹ ಶ್ರೇಣಿಕೃತ ಪದಕೋಶವಿರುತ್ತದೆ. ಆದರೆ ಅದರ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿಲ್ಲ.

ಭಾಷಾ ಪರಿಸ್ಥಿತಿಯ ಘಟಕಾಂಶಗಳಲ್ಲಿ ಸಾಮಾಜಿಕ ಸಂರಚನೆ ಮಾತ್ರ ಅಡಕವಾಗಿದೆಯೆಂದು ಹೇಳಲಾಗದು. ನಿರ್ದಿಷ್ಟ ಸನ್ನಿವೇಶದ ಅಂತಸ್ತು, ಮತ್ತು ಸಂಭಾಷಣೆಯ ವಸ್ತು ವಿಷಯಗಳೂ ಇಲ್ಲಯ ಘಟಕಾಂಶಗಳಾಗಿರುತ್ತವೆ. ಲ್ಯಾಬೊವ್ ಎಂಬ ಭಾಷಾಶಾಸ್ತ್ರಜ್ಞನು ಶಿಷ್ಟಾಚಾರದ ಅಂತಸ್ತುಗಳಿಗನುಸಾರವಾಗಿ ನಡೆಯುವ ಭಾಷಾ ವ್ಯತ್ಯಾಸಗಳ ಕುರಿತು ವಿಶೇಷವಾಗಿ ಚರ್ಚೆ ನಡೆಸಿದ್ದಾನೆ. ಸಂದರ್ಶನ ಸ್ಥಿತಿಯಲ್ಲಾಗುವ ವಿವಿಧ ಶಿಷ್ಟಾಚಾರ ಮಟ್ಟಗಳ ಭಾಷಾರೂಪಗಳನ್ನು ಹೊರಗಡೆಹುವ ತಂತ್ರ ವೈವಿಧ್ಯಗಳನ್ನು ಅವನು ಪ್ರಸ್ತಾಪಿಸುತ್ತಾನೆ.

ಗುಂಪರ್ಜ್ ಮತ್ತು ನಯೀಮರು ಹಿಂದಿ, ಉರ್ದುಗಳಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಭಾಷಾರೂಪಗಳೊಳಗಿನ ವ್ಯತ್ಯಾಸಗಳ ಕುರಿತು ಚರ್ಚಿಸಿದ್ದಾರೆ. ಸಾಮಾನ್ಯವಾಗಿ ದಕ್ಷಿಣ ಏಷಿಯಾದ ಭಾಷೆಗಳು ಔಪಚಾರಿಕ ಹಾಗೂ ಅನೌಪಚಾರಿಕ ಆಯಾಮಗಳಿಗೆ ಹೊಂದಿಕೊಂಡು ಗಣನೀಯವಾಗಿ ಬದಲಾಗುತ್ತಿರುತ್ತವೆ. ಅನೌಪಚಾರಿಕ ಭಾಷಾ ಪರಿಸ್ಥಿತಿಯು ಅಂತಸ್ತು ಅಥವಾ ಭಾಷಿಕ ಔಚಿತ್ಯದೊಂದಿಗೆ ಕನಿಷ್ಟ ಸಂಬಂಧವನ್ನು ಹೊಂದಿದೆ. ಪರಸ್ಪರ ಸಂಬಂಧಕ್ಕೆ (ಶಾಬ್ದಿಕ ಮತ್ತು ಇತರ) ಅಲ್ಲಿ ಹೆಚ್ಚಿನ ಒತ್ತು ಇರುತ್ತದೆ. ಇನ್ನೊಂದೆಡೆ ಔಪಚಾರಿಕ ಭಾಷಾ ಪರಿಸ್ಥಿತಿಯು ಉಚ್ಚಾರಣೆಯಾಗುವ ಶಬ್ದಗಳ ಔಚಿತ್ಯ – ಶುದ್ಧತೆಗಳತ್ತ ಹೆಚ್ಚಿನ ಒತ್ತು ನೀಡುತ್ತದೆ. ದಕ್ಷಿಣ ಏಷಿಯಾ ಭಾಷೆಗಳ ಉನ್ನತ ಮತ್ತು ನಿಮ್ನ ಪ್ರಭೇದಗಳೊಳಗಿನ (ಭಾಷಾ) ವ್ಯತ್ಯಾಸಗಳಿಗೆ ಸಂಬಂಧಿಸಿದ ವ್ಯಾಕರಣಾತ್ಮಕ ವಿವರಣೆಗಳ ರೂಪದ ಕೆಲವು ಮಾಹಿತಿಗಳು ಇಂಡಿಯನ್ ಲಿಂಗ್ವಿಸ್ಟಿಕ್ಸ್ ಮತ್ತು ಭಾಷಾಶಾಸ್ತ್ರಕ್ಕೆ ಸಂಬಂಧಪಟ್ಟ ಇತರ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ನಿಘಂಟುಶಾಸ್ತ್ರಕ್ಕೆ ಸಂಬಂಧಪಟ್ಟ ಕೆಲಸಗಳು ಹೆಚ್ಚಾಗಿ ಗ್ರಾಂಥಿಕ ಅಥವಾ ಪ್ರಾದೇಶಿಕ ಭಾಷೆಗಳ ಔಪಚಾರಿಕ ಪ್ರಭೇದಗಳನ್ನು ಆಧಾರವಾಗಿರಿಸಿಕೊಂಡು ನಡೆದಿವೆ. ಕ್ರಿಯಾತ್ಮಕ ಪ್ರಭೇದಗಳ ಕುರಿತು ಇಲ್ಲಿ ವಿಶೇಷ ಗಮನ ಹರಿಸಿಲ್ಲ. ಉದಾಹರಣೆಗೆ ಇತ್ತೀಚೆಗೆ ಪ್ರಕಟವಾದ ಹಿಂದಿ ಇಂಗ್ಲೀಷ್ ಶಬ್ದಕೋಶ (ನಿಘಂಟು) ಒಂದರಲ್ಲಿ ಲೇಕಿನ್, ಪರ್, ಮಗರ್, ಕಿಂತು ಮತ್ತು ಪರಂತು ಎಂಬ ಪದಗಳಿವೆ. ಈ ಎಲ್ಲಾ ಪದಗಳು ಆದರೆ ಎಂಬ ಅರ್ಥವನ್ನು ಕೊಡುತ್ತವೆ. ಆದರೆ, ಶಬ್ದಕೋಶದಲ್ಲಿ ಇವುಗಳ ಬಳಕೆಯ ಸಾಂದರ್ಭಿಕತೆಯ ಬಗೆಗೆ ಯಾವೊಂದು ಸೂಚನೆಯನ್ನೂ ಕೊಟ್ಟಿಲ್ಲ. (ಮೊದಲ ಎರಡು ಪದಗಳು ಸಾಮಾನ್ಯವಾಗಿ ಅನೌಪಚಾರಿಕ ಸಂಭಾಷಣೆಗಳಲ್ಲೂ, ಕೊನೆಯವೆರಡು ಮುಖ್ಯವಾಗಿ ಔಪಚಾರಿಕ ಸಂಭಾಷಣೆಗಳಲ್ಲೂ ಬಳಕೆಯಾಗುತ್ತವೆ.) ಇದು ನಿಘಂಟು ರಚನೆಗೆ ಸಂಬಂಧಿಸಿದಂತೆ ಪ್ರಪಂಚೆದ ಬಹುತೇಕ ಭಾಷೆಗಳಲ್ಲಿ ಕಂಡುಬರುವ ಒಂದು ಮಾದರಿಯೆನ್ನಬಹುದು. ಹಾಗಾಗಿ ಮೇಲಿನ ಟೀಕೆಯು (ಹೇಳಿಕೆ) ವಿಶೇಷವಾಗಿ ದಕ್ಷಿಣ ಏಷಿಯಾದ ನಿಘಂಟು ಶಾಸ್ತ್ರಜ್ಞರಿಗಷ್ಟೆ ಅನ್ವಯವಾಗುವ ವಿಮರ್ಶೆಯಲ್ಲ.

ನಾವು ಕ್ರಿಯಾತ್ಮಕ ವ್ಯತ್ಯಾಸಗಳ ಸಮಾಜಶಾಸ್ತ್ರೀಯ ಅಂತರ್ ಸಂಬಂಧಗಳತ್ತ ಬಂದಾಗ ನಮ್ಮ ಅಜ್ಞಾನವು ಇನ್ನಷ್ಟು ಸ್ಪಷ್ಟವಾಗುತ್ತದೆ. ಔಪಚಾರಿಕ ಸಂದರ್ಭಗಳು ಚಾಲನೆಗೊಳಿಸುವ ನಿರ್ದಿಷ್ಟ ಭಾಷಿಕ ಪ್ರತಿಸ್ಪಂದನೆಗಳು ಅನೌಪಚಾರಿಕ ಅಥವಾ ಆಪ್ತ ಸನ್ನಿವೇಶಗಳು ಚಾಲನೆಗೊಳಿಸುವ ಪ್ರತಿಸ್ಪಂದನೆಗಳಿಗಿಂತ ಭಿನ್ನವಾದವುಗಳೆಂಬುದನ್ನು ನಾವು ಸಾಮಾನ್ಯವಾಗಿ ತಿಳಿದವರಿದ್ದೇವೆ. ಆದರೆ ಈ ಪ್ರತಿಸ್ಪಂದನದಲ್ಲಾಗುವ ವ್ಯತ್ಯಾಸವನ್ನು ಅಳೆಯುವ ಅಥವಾ ಈ ಪ್ರಕ್ರಿಯೆಗೆ ಕಾರಣೀಭೂತವಾದ ಸಮಾಜಶಾಸ್ತ್ರೀಯ ಅಂಶಗಳನ್ನು ಗುರುತಿಸುವ ಪ್ರಯತ್ನ ಇದುವರೆಗೆ ನಡೆದಂತಿಲ್ಲ. ಈ ಬಗೆಯ ಅಧ್ಯಯನಗಳಿಗೆ ಅವಶ್ಯವಾದ ವೈಧಾನಿಕತೆಯು ರೂಪುಗೊಳ್ಳಬೇಕಾಗಿದೆ. ಭವಿಷ್ಯದಲ್ಲಿ ದಕ್ಷಿಣ ಏಷಿಯಾದ ಭಾಷೆಗಳಿಗೆ ಸಂಬಂಧಿಸಿದಂತೆ ಮಹತ್ವದ ಅಧ್ಯಯನಗಳು ನಡೆದು, ತತ್ಪರಿಣಾಮವಾಗಿ ವೈಧಾನಿಕತೆಯೊಂದರ ಬೆಳವಣಿಗೆ ಸಂಭವನೀಯವಾಗಬಹುದು. ಇಂತಹ ಅಧ್ಯಯನಗಳ ಪ್ರಯೋಗಾತ್ಮಕ ಮಹತ್ವವನ್ನು ಮುಂದೆ “ಆನ್ವಯಿಕತೆ” ಶೀರ್ಷಿಕೆಯಡಿಯಲ್ಲಿ ಚರ್ಚಿಸಲಾಗಿದೆ.

ಬಹುಭಾಷಿಕತೆ :

ದ್ವಿಭಾಷಿಕತೆಗೆ ಸಂಬಂಧಿಸಿದ ಸಾಮಾಗ್ರಿಗಳನ್ನೊಳಗೊಂಡ ೧೯೬೧ನೆಯ ಜನಗಣತಿಯ ವರದಿಯು ಪ್ರಕಟವಾದ ನಂತರ ಭಾರತದಲ್ಲಿ ಬಹುಭಾಷಿಕತೆಯ ಬಗೆಗೆ ವಿಶೇಷವಾದ ಗಮನ ಹರಿಸಲಾಯಿತು. ಸಂಕುಚಿತವಾದ ಸಮಾಜೋ ಭಾಷಿಕ ದೃಷ್ಟಿಕೋನದಿಂದ ಹೇಳುವುದಾದರೆ ಬಹುಭಾಷಿಕತೆಯನ್ನು ಕುರಿತಾದ ಆಸಕ್ತಿಯು ವಿವಿಧ ಭಾಷಾ ವ್ಯವಸ್ಥೆ ಮತ್ತು ಸಂಸರ್ಗದ ಪರಿಣಾಮವಾಗಿ ಉಂಟಾಗುವ ವ್ಯತ್ಯಾಸಗಳೊಳಗಿನ ಪರಸ್ಪರ ಸಂಬಂಧಗಳತ್ತ ಕೇಂದ್ರಿಕೃತವಾಯಿತು. ಮದುರೈ ಮತ್ತು ಆಸುಪಾಸಿನಲ್ಲಿ ಮಾತನಾಡುವ ಸೌರಾಷ್ಟ್ರಿ (ಗುಜರಾತಿಯ ಒಂದು ಪ್ರಭೇದ) ಭಾಷೆಯ ಕುರಿತು ಪಿ.ಬಿ. ಪಂಡಿತರು ನಡೆಸಿದ ಅಧ್ಯಯನವು ಸೌರಾಷ್ಟ್ರಿ ಬಾಷಿಕರು ತಮಿಳು ವ್ಯಾಕರಣ ಮಾದರಿಗಳನ್ನು ಸ್ವೀಕರಿಸಿರುವುದನ್ನು (ತಮಿಳು ವ್ಯಾಕರಣ ಮಾದರಿಗಳು ಸೌರಾಷ್ಟ್ರಿ ಭಾಷೆಯೊಳಗಡೆ ಅಂತರ್ಗತವಾಗಿರುವುದನ್ನು) ವಿಶದೀಕರಿಸುತ್ತದೆ. ಈ ಸ್ವೀಕರಣದ ಪರಿಣಾಮವಾಗಿ ಸಂಖ್ಯಾವಾಚಿ ವ್ಯವಸ್ಥೆಯಂತಹ ವ್ಯಾಕರಣ ಭಾಗಗಳು ಮೇಲ್ಮೈಯಲ್ಲೇನೂ ವ್ಯತ್ಯಾಸವಾಗದೆ ಇದ್ದ ಹಾಗೆಯೇ ಬಳಕೆಗೊಳ್ಳುವುದನ್ನು ಗುರುತಿಸಬಹುದಾಗಿದೆ. ಮೈಸೂರಿನ (ಕರ್ನಾಟಕದ) ಉತ್ತರ ಭಾಗದ ಕನ್ನಡದ ಮೇಲೆ ಉರ್ದುವಿನ ಪರಿಣಾಮಕಾರಿ ಪ್ರಭಾವವಾಗಿರುವುದನ್ನು ಯು.ಪಿ. ಉಪಾಧ್ಯಾಯ ಅವರ ಬೀದರ ಕನ್ನಡವನ್ನು ಕುರಿತ ಅಧ್ಯಯನವು ಬಿಡಿಬಿಡಿಯಾಗಿದ್ದರೂ ಆಸಕ್ತಿದಾಯಕವಾಗಿ ತೆರೆದಿಡುತ್ತದೆ. ಮೈಸೂರು (ಕರ್ನಾಟಕ) – ಮಹಾರಾಷ್ಟ್ರ ಗಡಿ ಪ್ರದೇಶದ ಕನ್ನಡ ಮತ್ತು ಮರಾಠಿ ಸ್ಥಳೀಯ ಪ್ರಭೇದಗಳಲ್ಲಿನ ಏಕಾಗ್ರಮುಖತೆಯ ಕುರಿತು ಅಧ್ಯಯನ ನಡೆಸಿರುವ ಗುಂಪರ್ಜ್ ಅವರು ಸ್ಥಿರ ದ್ವಿಭಾಷಿಕತೆಯ ವ್ಯಾಕರಣ ಸ್ವರೂಪದಲ್ಲಿನ ಪರಿಣಾಮಸಿದ್ಧವಾದ ಅನನ್ನಯತೆಯತ್ತ ಕೊಂಡೊಯ್ಯುತ್ತದೆಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಏಕಾಗ್ರಮುಖತೆಯ ಸಾಮಾಜಿ ಕ್ರಿಯೆಯ ಬಗೆಗೆ ಗುಂಪರ್ಜ್ “ಇಂತಹ ಸಂಕೇತಗಳು ಸಮಾಜದಲ್ಲಿ ಸಂವಹನಕ್ಕೆ ಆದರ್ಶಪ್ರಾಯವಾಗಿ ಯೋಗ್ಯವೆಂದು ಭಾಸವಾಗುತ್ತದೆ. ಇವು ಸಾಮಾಜಿಕ ಅಂತರದ ಕಡೆಗೆ ಒತ್ತು ಕೊಡುತ್ತವೆ. ಅದೇ ವೇಳೆ ನಿರಂತರವೂ ನಿಯತವೂ ಆದ ಅಂತರ್ ಸಂಬಂಧಗಳನ್ನು ಅಪೇಕ್ಷಿಸುತ್ತವೆ.” ಎಂದಿದ್ದಾರೆ.

ವ್ಯಾಪಕ ಸಮಾಜೋ ಭಾಷಿಕ ಆಸಕ್ತಿಯ ದೃಷ್ಟಿಯಿಂದ ಬಹುಭಾಷಿಕ ಸಮುದಾಯಗಳ ಮೂಲ, ಸ್ಥಿರ ದ್ವಿಭಾಷಿಕತೆಯ ಸಾಮಾಜಿಕ ಪ್ರಕ್ರಿಯೆ, ಹಾಗೂ ಅದನ್ನು ಪ್ರೋತ್ಸಾಹಿಸದಿರುವ ಅಥವಾ ವಿಸ್ಮೃತಿಯಾಗದಂತೆ ನೋಡಿಕೊಳ್ಳುವ ಅಂಶಗಳ ಕುರಿತು ಅಧ್ಯಯನಗಳು ನಡೆಯಬೇಕಾಗಿವೆ. ಇದಕ್ಕೆ ಹಿನ್ನೆಲೆಯೆಂಬಂತೆ ಅಖಿಲ ಭಾರತ ಮಟ್ಟದಲ್ಲಿ ನಡೆದ ಆಸಕ್ತಿದಾಯಕ (ಕುತೂಹಲಕಾರಿ) ಕೆಲಸಗಳಲ್ಲಿ ಬೋಸ್, ಆಪ್ಟೆ ಮತ್ತು ಖುಬ್ ಚಂದಾನಿಯವರ ಅಧ್ಯಯನಗಳು ಒಳಗೊಳ್ಳುತ್ತವೆ. ಬಹು ಭಾಷಿಕ ಗುಂಪುಗಳ ವಿವರವಾದ ಅಧ್ಯಯನವು ಇನ್ನೂ ಶೈಶವಾಸ್ಥೆಯಲ್ಲಿದೆ. ಆದರೂ ಖುಬ್ ಚಂದಾನಿಯವರ ಅಧ್ಯಯನಗಳು ಒಳಗೊಳ್ಳುತ್ತವೆ. ಬಹು ಭಾಷಿಕ ಗುಂಪುಗಳ ವಿವರವಾದ ಅಧ್ಯಯನವು ಇನ್ನೂ ಶೈಶವಾಸ್ಥೆಯಲ್ಲಿದೆ. ಆದರೂ ಖುಬ್ ಚಂದಾನಿಯವರ ಮುಂಚೂಣಿಯ ಅಧ್ಯಯನವು ಮುಂದಿನ ಕೆಲಸಗಳಿಗೆ ಒಂದು ಅಪ್ರತಿಮ ಮಾದರಿಯನ್ನು ಒದಗಿಸಿಕೊಡುತ್ತದೆ. ತಂಜಾವೂರು ಮತ್ತು ತಮಿಳುನಾಡಿನ ಇತರೆಡೆಗಳಲ್ಲಿರುವ ಮರಾಠಿ ಭಾಷಿಕರ ಕುರಿತು ಅಪ್ಟೆಯವರು ಇತ್ತೀಚೆಗೆ ನಡೆಸಿರುವ ಅಧ್ಯಯನದ ಫಲಿತಗಳನ್ನು ನಾವು ಎದುರು ನೋಡಬಹುದಾಗಿದೆ.

ಚಾರಿತ್ರಿಕ ಅಧ್ಯಯನ :

೧೯ನೆಯ ಶತಮಾನದ ಮೊದಲ ಭಾಗದಲ್ಲಿ ಸಂಸ್ಕೃತ ಮತ್ತು ಪ್ರಮುಖ ಯುರೋಪಿಯನ್ ಭಾಷೆಗಳೊಳಗಿನ ಐತಿಹಾಸಿಕ ಸಂಬಂಧದ ಕುರಿತು ಸಂಶೋಧನೆ ಪ್ರಾರಂಭವಾಯಿತು. ಅದರಿಂದ ಪ್ರಚೋದನೆಗೊಂಡು ಭಾಷಾ ವ್ಯವಸ್ಥೆಯಲ್ಲಾಗುವ ಬದಲಾವಣೆಗಳ ಅಧ್ಯಯನ – ಅರ್ಥಾತ್ ಐತಿಹಾಸಿಕ ಭಾಷಾ ವಿಜ್ಞಾನವು ಕವಲೊಡೆಯಿತೆಂದು ಹೇಳಬಹುದಾಗಿದೆ. ಅಲ್ಲಿಂದೀಚೆಗೆ ಸುಮಾರು ಒಂದು ಶತಮಾನದ ಕಾಲ ಸಂಸ್ಕೃತಭಾಷೆಗೆ ಅದರ ಪೂರ್ವಿಕ (ಜನಕ) ಭಾಷೆಗಳೊಂದಿಗೆ ಇದ್ದ ಸಂಬಂಧ, ಸಮಕಾಲೀನ ಸೋದರಿ ಭಾಷೆಗಳೊಂದಿಗೆ ಇರುವ ಸಂಬಂಧ, ಅದೇ ರೀತಿ ಆಧುನಿಕ ಇಂಡೋ ಆರ್ಯನ್ ಪೌತ್ರಿ ಭಾಷೆಗಳೊಂದಿಗಿನ ಸಂಬಂಧ – ಇವುಗಳನ್ನು ಕಂಡುಕೊಳ್ಳುವ ಸಂಸ್ಕೃತ ಭಾಷೆಯ ಚಾರಿತ್ರಿಕ ಅಧ್ಯಯನದತ್ತ ತೀವ್ರ ಗಮನಹರಿಸಲಾಯಿತು. ಸಂಸ್ಕೃತದ ಮೇಲೆ ದ್ರಾವಿಡದ ಪ್ರಭಾವವನ್ನು ಗುರುತಿಸುವ ಟಿ. ಬರ್ರೋ‍ನ ಅಧ್ಯಯನವು ೧೯೪೦ರಷ್ಟು ಹಿಂದೆಯೇ ಬೆಳಕು ಕಾಣತೊಡಗಿದ್ದರೂ ೧೯೫೦ ಮತ್ತು ೧೯೬೦ರ ವೇಳೆಗಷ್ಟೇ ಭಾಷಾಶಾಸ್ತ್ರಜ್ಞರು ಮತ್ತು ಭಾರತಾಧ್ಯಯನಕಾರರು ಇಂತಹ ಕೆಲಸ ಶೂನ್ಯದಲ್ಲಿ (ಕನ್ನೆ ನೆಲದಲ್ಲಿ) ನಡೆಯುತ್ತಿದೆಯೆಂದು ತಿಳಿಯತೊಡಗಿದರು. ಎಂ.ಬಿ. ಎಮಿನೋನ “ಲಿಂಗಿಸ್ಟಿಕ್ ಪ್ರಿ ಹಿಸ್ಟರಿ ಆಫ್ ಇಂಡಿಯಾ” (ಭಾರತದ ಭಾಷಾ ವೈಜ್ಞಾನಿಕ ಪೂರ್ವೇತಿಹಾಸ) ಮತ್ತು “ಇಂಡಿಯಾ ಅಸ್ ಎ ಲಿಂಗಿಸ್ಟಿಕ್ ಏರಿಯಾ” (ಭಾಷಾ ಪ್ರದೇಶವಾಗಿ ಭಾರತ) ಎಂಬ ಕೃತಿಗಳು ದ್ರಾವಿಡ ಮತ್ತು ಇಂಡೋ ಆರ್ಯನ್ ಭಾಷೆಗಳೊಳಗಿನ ಅಂತರ್ ಸಂಬಂಧಗಳ ವ್ಯಾಪಕತೆಯ ಕುರಿತು ಭಾಷಾಶಾಸ್ತ್ರಜ್ಞರಿಗೂ ಇತರರಿಗೂ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಪ್ರಸ್ತುತ ಕೃತಿಗಳು ಈ ಎರಡು ಭಾಷಾಗುಂಪುಗಳು ಪರಸ್ಪರ ಸಂಪರ್ಕಕ್ಕೆ ಬಂದ ಪ್ರಾರಂಭಿಕ ಹಂತದ ಸ್ಥಿತಿ ಗತಿಗಳನ್ನು ವಿವರಿಸುತ್ತವೆ. ಇವು ಮತ್ತು ಇತರ ಕೆಲವು ಅಧ್ಯಯನಗಳು ದಕ್ಷಿಣ ಏಷಿಯಾದ, ಅದರಲ್ಲೂ ವಿಶೇಷವಾಗಿ ದ್ರಾವಿಡ ಮತ್ತು ಇಂಡೋ – ಆರ್ಯನ್ ಭಾಷೆಗಳೊಳಗಿನ ಪರಸ್ಪರ ಸಂಬಂಧಗಳ ಕುರಿತು ಮುಂದೆ ನಡೆದ ಅಸಂಖ್ಯ ಅಧ್ಯಯನಗಳಿಗೆ ಪ್ರೇರಣೆಯನ್ನೊದಗಿಸಿದುವು. ಹಿಂದಿನ ಭಾಗದಲ್ಲಿ ಹೆಸರಿಸಿದ ಅಧ್ಯಯನಗಳಲ್ಲದೆ ಸಂಪರ್ಕ ಮತ್ತು ಏಕಾಗ್ರಮುಖತೆಗೆ ಸಂಬಂಧಿಸಿದ ಪ್ರಬಂಧಗಳ ಎರಡು ಸಂಕಲನಗಳು ಸಿದ್ಧಗೊಳ್ಳುತ್ತಿವೆ. ಹಾಗಾಗಿ ಸಂಸ್ಕೃತ ವಿದ್ಯಾರ್ಥಿಗಳು ಹಲವು ದಶಕಗಳಿಂದ ಮಾಡುತ್ತಾ ಬಂದ ತಪ್ಪುಗಳನ್ನು – ತಮ್ಮ ಭಾಷೆಯನ್ನು ಶೂನ್ಯದಲ್ಲಿ ಕಲ್ಪಿಸಿಕೊಳ್ಳುವ ತಪ್ಪು – ದ್ರಾವಿಡ ಚಿಂತಕರು ದ್ರಾವಿಡಾಧ್ಯಯನಕಾರರು) ಮಾಡಲಾರರೆಂದು ಹೇಳಬಹುದು.

ಐತಿಹಾಸಿಕ ಭಾಷಾವಿಜ್ಞಾನವು ಭಾಷೆಯೊಂದರ ಔಪಚಾರಿಕ ವ್ಯವಸ್ಥೆಯಲ್ಲಾಗುವ ಬದಲಾವಣೆಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಪಾರಂಪರಿಕವಾಗಿ ಅದು ಮುಖ್ಯವಾಗಿ ಕಾಲದ ದೀರ್ಘವ್ಯಾಪ್ತಿಯೊಂದಿಗೆ ಸಂಬಂಧ ಹೊಂದಿದೆ. ಭಾಷಾ ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಂಡರೆ ಸಾಮಾಜಿಕ ಭಾಷಾ ವಿಜ್ಞಾನವು ಭಾಷಾವ್ಯತ್ಯಾಸದೊಂದಿಗೆ ಸಂಬಂಧವಿರುವ ಸಾಮಾಜಿಕ ಅಂಶಗಳ ಸವಿವರ ಅಧ್ಯಯನಕ್ಕೆ ಸಾಧ್ಯವಾಗುವ ಕ್ರಿಯಾತ್ಮಕ ಆಯಾಮವನ್ನು ಸೇರ್ಪಡೆಗೊಳಿಸುತ್ತದೆ. ಫಿಶರ್ ಮತ್ತು ಲೇಬೋರಂಥವರ ಪ್ರಾರಂಭಿಕ ಘಟ್ಟದ ಅಧ್ಯಯನಗಳು ಗುಂಪಿನೊಳಗಿನ ಒಗ್ಗಟ್ಟು, ಗುಂಪುಗಳ ನಡುವಿನ ಉದ್ದೇಗಗಳು ಮತ್ತು ಗುಂಪಿನ ನಿರೀಕ್ಷೆಗಳನ್ನು ಗುರುತಿಸುವ ಸಾಧ್ಯತೆಯು ಧ್ವನಿ ವ್ಯತ್ಯಾಸದಲ್ಲಿ ಪ್ರಮುಖ ಆಂಶಗಳಾಗುತ್ತವೆಂಬುದನ್ನು ತೋರಿಸಿಕೊಟ್ಟಿವೆ. ಇಂತಹ ಅಂಶಗಳು ದಕ್ಷಿಣ ಏಷಿಯಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವುದನ್ನು ಮೇಲೆ ಹೆಸರಿಸಿದ ಅಧ್ಯಯನಗಳಲ್ಲಿ ಹಲವು ದೃಢೀಕರಿಸುತ್ತವೆ. ಗುಂಪರ್ಜ್ ಮತ್ತು ರಾಮಾನುಜನ್ ಅವರುಗಳ ಪ್ರಕಾರ ಜಾತಿ ಮೇರೆಗಳು ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಆಗಬಹುದಾದ ಬದಲಾವಣೆ (ನಾವೀನ್ಯತೆ) ಶಿಥಿಲತೆಗೆ ಅಡ್ಡಿಯಾಗುತ್ತವೆ (ಪ್ರೋತ್ಸಾಹ ಕೊಡುವುದಿಲ್ಲ). ಅದೇ ರೀತಿ ಒಮದು ನಿರ್ದಿಷ್ಟ ಗುಂಪಿನೊಳಗೆ ವಿಶಿಷ್ಟ ರೀತಿಯ ಮಾರ್ಪಾಟುಗಳಾಗುವುದಕ್ಕೆ ಪ್ರಚೋದನೆ ನೀಡುತ್ತವೆ.

ಇಂತಹ ಅಧ್ಯಯನಗಳು ನಾವು ಗಮನಿಸಿದ ಸಾಮಾಜಿಕ ಉಪಭಾಷೆಗಳಲ್ಲಿನ ವ್ಯತ್ಯಾಸಗಳಿಗೆ ಸಾಕಷ್ಟು ಪ್ರೇರಣೆಯನ್ನೊದಗಿಸಿವೆ. ಆದರೆ, ಮತ್ತೆ ಮತ್ತೆ ತೋರಿಸಲಾಗಿರುವ ಅನಿರೀಕ್ಷಿತ ಸಾಮ್ಯತೆಗಳನ್ನು ಅವು ಗಮನಿಸಿದಂತಿಲ್ಲ. ಕನ್ನಡ ಮತ್ತು ಮರಾಠಿಯಂತಹ ಪರಸ್ಪರ ಸಂಬಂಧವಿಲ್ಲದ ಎರಡು ಭಾಷೆಗಳು ಒಂದೇ ತೆರನಾದ ವ್ಯಾಕರಣ ರಚನೆಯನ್ನು ಹೊಂದಿದೆಯೆಂದಾಗ ಅಲ್ಲಿಯ ಸಮಸ್ಯೆಯನ್ನು ಪ್ರಾಚೀನವಾದ (ಶಾಸ್ತ್ರೀಯವಾದ) ಐತಿಹಾಸಿಕ ಸಿದ್ಧಾಂತದಿಂದ ಪರಿಹರಿಸಿಕೊಳ್ಳಲಾಗದ ಸ್ಥಿತಿ ನಮ್ಮದಾಗುತ್ತದೆ. ಭಾಷೆಗಳು ಪದಗಳನ್ನು ಪರಸ್ಪರ ಸ್ವೀಕರಿಸಿದರೂ ವ್ಯಾಕರಣ ಮತ್ತು ಅರ್ಥ ರಚನಾ ವಿಧಾನಗಳಲ್ಲಿ ತಮ್ಮ ಮೂಲಸ್ವರೂಪವನ್ನು ಹಾಗೆಯೇ ಉಳಿಸಿಕೊಳ್ಳುತ್ತವೆ ಎಂಬ ಪಾರಂಪರಿಕ ತಿಳುವಳಿಕೆಯೊಂದಿದೆ. ಆದರೆ, ದಕ್ಷಿಣ ಭಾರತದಲ್ಲಿ ಇದಕ್ಕೆ ವಿರುದ್ಧವಾದ ಪ್ರಕ್ರಿಯೆಯು ಅಧಿಕ ಪ್ರಮಾಣದಲ್ಲಿ ನಡೆದಿರುವುದನ್ನು ನಾವು ಕಾಣುತ್ತೇವೆ. ಇಡಿಯ ಉಪಖಂಡದಲ್ಲಿ ವ್ಯಾಕರಣ, ಧ್ವನಿ ಹಾಗೂ ಅರ್ಥರಚನೆಗೆ ಸಂಬಂಧಪಟ್ಟ ಇಂತಹ ಹಲವು ಲಕ್ಷಣಗಳು ಸರ್ವತ್ರ ವ್ಯಾಪಿಸಿಕೊಂಡಿವೆ. ಇದಕ್ಕೆ ಹೋಲಿಸಿದರೆ ಶಬ್ದಗಳ ಸ್ವೀಕೃತಿಯ ಪ್ರಮಾಣವು (ತಮಿಳನ್ನು ಬಿಟ್ಟು ಎಲ್ಲಾ ಗ್ರಾಂಥಿಕ ಭಾಷೆಗಳೂ ಸಂಸ್ಕೃತದಿಂದ ಹೇರಳವಾಗಿ ಸ್ವೀಕರಿಸಿರುವುದನ್ನು ಹೊರತುಪಡಿಸಿ) ಸಾಕಷ್ಟು ಸೀಮಿತವಾಗಿದೆಯೆನ್ನಬಹುದು.

ಗುಂಪರ್ಜ್ ಹೇಳುವ ಪ್ರಕಾರ ಬಹುಜಾತಿಗಳಿರುವ ಹಳ್ಳಿಗಳಲ್ಲಿ ವಾಸಿಸುವ ಜನರ ಅವಶ್ಯಕತೆಯಿಂದಾಗಿ ಇಂತಹ ಪರಿಸ್ಥಿತಿ ಉದ್ಭವವಾಗುತ್ತದೆ. ಉಡುಗೆ – ತೊಡುಗೆ, ಮತ್ತು ಆಚರಣೆ – ಸಂಪ್ರದಾಯಗಳಲ್ಲಿನ ವ್ಯತ್ಯಾಸಗಳು ವಿವಿಧ ಸಮುದಾಯಗಳ ವಿಶಿಷ್ಟತೆಗೆ ಒತ್ತು ಕೊಡುವಂತೆ, ಪ್ರಜ್ಞಾಪೂರ್ವಕವಾಗಿ ಗಮನಿಸತಕ್ಕ ಭಾಷೆಯ ಲಕ್ಷಣಗಳು ಕೂಡ ಇಂತಹುದೇ ಕ್ರಿಯೆಯನ್ನುಳ್ಳವುಗಳಾಗಿವೆ. ಇನ್ನೊಂದೆಡೆ ಪದಾನುಕ್ರಮ, ಅರ್ಥರಚನಾ ವೈಶಿಷ್ಟ್ಯಗಳಂತಹ ಸುಲಭಗ್ರಾಹ್ಯವಲ್ಲದ ಅಂಶಗಳು ಕೃಷಿ ಕ್ಷೇತ್ರದಲ್ಲಿನ ಆರ್ಥಿಕ ಸಹಕಾರಗಳ ಕಾರಣಕ್ಕಾಗಿ ಸಾಮ್ಯತೆಯತ್ತ ಚಲಿಸುತ್ತಿರುವಂತೆ ಕಾಣಿಸುತ್ತದೆ. ವಿಶೇಷವಾಗಿ ಬತ್ತ ಬೆಳೆಯುವಂತಹ ಭಾರತದ ಕೆಲವು ಪ್ರದೇಶಗಳಲ್ಲಿ ಕೃಷಿಕಾರ್ಯಗಳು ಮೇಲ್ಜಾತೀಯ ಭೂಮಾಲೀಕರು, ಮಧ್ಯಮ ಜಾತಿಗಳ ಗೇಣಿದಾರರು (ಒಕ್ಕಲುಗಳು) ಮತ್ತು ಕೆಳಜಾತಿಯ ಕೃಷಿಕಾರ್ಮಿಕರೊಳಗೆ ಒಂದು ಸಂಕೀರ್ಣ ಮಾದರಿಯ ಸಹಕಾರ ತತ್ವದಿಂದ ನಡೆಯುತ್ತಿರುವುದನ್ನು ಕಾಣಬಹುದಾಗಿದೆ. ಹೀಗೆ ವ್ಯಾಕರಣ ಮತ್ತು ಅರ್ಥರಚನೆಗೆ ಸಂಬಂಧಿಸಿದ ಸಾಮಾನ್ಯ ತಳಹದಿಯು ಬಾಷೆಯ ಸ್ಪಷ್ಟ ರೂಪಗಳಲ್ಲಿನ ಗಣನೀಯ ವ್ಯತ್ಯಾಸಗಳ ಸಲುವಾಗಿ ಸಂವಹನವನ್ನು ಸುಲಭ ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತದೆ.

ದಕ್ಷಿಣ ಏಷಿಯಾದ ಸಾಮಾಜಿಕ ಭಾಷಾವಿಜ್ಞಾನದ ಚರಿತ್ರೆಯನ್ನು ಬರೆಯುವುದೆಂದರೆ, ಉಪಖಂಡದ ವಿವಿಧ ಭಾಗಗಳಲ್ಲಿ, ವಿವಿಧ ರೂಪಗಳಲ್ಲಿ ಉಂಟಾದ ಗಮನಾರ್ಹವಾದ ಭಾಷಿಕ ಒಗ್ಗೂಡುವಿಕೆಯನ್ನು ವಿವರಿಸುವ ಪ್ರಾರಂಭಿಕ ಕಾಲಘಟ್ಟದ ಭಾಷಾ ಸಂವಹನ ಮಾದರಿಗಳನ್ನು ಅಭಿವೃದ್ಧಿಪಡಿಸುವುದೆಂದರ್ಥ. ಇದಕ್ಕಾಗಿ ನಾವು ಲಭ್ಯವಿರುವ ಎಲ್ಲಾ ಬಗೆಯ ಆಧಾರಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಅದು ಸಮಕಾಲೀನ ಸಮಾಜದಲ್ಲಿನ ಸಾಮಾಜಿಕ ಬದಲಾವಣೆಯ ಅಧ್ಯಯನ, ಮೊದಲ ಘಟ್ಟದ ಬರಹಗಾರರು ಇಂತಹ ಬದಲಾವಣೆಗಳ ಬಗೆಗೆ ನೀಡಿದ ವಿವರಣೆ, ಭಾಷಾಶಾಸ್ತ್ರೀಯ ಅಧ್ಯಯನಗಳು ಮತ್ತು ಭಾಷೆಯ ಚರಿತ್ರೆ, ಪುರಾತತ್ವ ಮತ್ತು ಭೌತಿಕ ಮಾನವಶಾಸ್ತ್ರಗಳ ಆಧಾರಗಳು – ಇವೆಲ್ಲವುಗಳನ್ನು ಒಳಗೊಂಡಿರುತ್ತದೆ. ಮರಾಠಿಯ ಸಮಾಜೋ ಭಾಷಿಕ ಹಿನ್ನೆಲೆಯನ್ನು ಪರೀಕ್ಷಿಸಲು ನಡೆಸಿದ ಪ್ರಾಥಮಿಕ ಪ್ರಯತ್ನವೊಂದು ಅದು ಇತರ ಹಲವು ಇಂಡೋ ಆರ್ಯನ್ ಭಾಷೆಗಳಿಗಿಂತ ದ್ರಾವಿಡದ ಜತೆಗೆ ಹೆಚ್ಚಿನ ಸಾಮ್ಯವನ್ನು ಹೊಂದಿದೆಯೆಂಬುದನ್ನು ತೋರಿಸಿಕೊಟ್ಟಿದೆ. ದ್ರಾವಿಡದಲ್ಲಿ ಹುಟ್ಟಿರಬಹುದಾದ ವ್ಯಾಕರಣ ಮತ್ತು ಅರ್ಥರಚನಾ ಮಾದರಿಗಳೊಂದಿಗೆ ಇಂಡೋ – ಆರ್ಯನ್ ಶಬ್ದಸಾಮಗ್ರಿಯು ಬೆಸೆದುಕೊಂಡುದಕ್ಕೆ ಈ ಅಧ್ಯಯನವು ಸವಿವರ ಆಧಾರವನ್ನೊದಗಿಸುತ್ತದೆ. ಈ ಭಾಷಿಕ ಸಂಯೋಗವು ಭಾರತದ ವಿಶಿಷ್ಟ ಬಹುಜಾತಿ ನೆಲೆಗಳನ್ನು ಸೃಷ್ಟಿಸಿದ ಸಾಮಾಜಿಕ ಒಗ್ಗೂಡುವಿಕೆಯ ಪ್ರಕ್ರಿಯೆಯ ಒಂದು ದ್ಯೋತಕವಾಗಿ ಕಂಡುಬರುತ್ತದೆ. ಇದು ಗುಂಪುಗಳು ವಿವಿಧ ಭೌಗೋಲಿಕ ಮತ್ತು ಕುಲಸಂಬಂಧಿ ಹಿನ್ನಲೆಯಿಂದ ಆರ್ಥಿಕವಾಗಿ ಸಬಲವಾದ ಘಟಕಗಳಾಗಿ ಒಂದುಗೂಡುವುದರ ದ್ಯೋತಕವೂ ಹೌದು.