ಸಂವಹನದ ಮಾನವ ಕುಲಶಾಸ್ತ್ರ :

ಮೇಲೆ ಪ್ರಸ್ತಾಪಿಸಿದ ಅಧ್ಯಯನಗಳಲ್ಲಿ ಹಲವು ದಕ್ಷಿಣ ಏಷಿಯಾದಲ್ಲಿರುವ ಸಂವಹನ ಪ್ರವೃತ್ತಿಯನ್ನು ಕುರಿತ ಸಾಮಾನ್ಯ ತಿಳುವಳಿಕೆಗೆ ಸಹಕಾರಿಯಾಗುತ್ತದೆ. ಈ ಸಂವಹನ ಪ್ರವೃತ್ತಿಯು ಭಾಷಾ ವ್ಯತ್ಯಾಸದ ಸಾಮಾಜಿಕ ಕ್ರಿಯೆಗಳು, ದ್ವಿಸ್ತರತೆ, ನಗರೀಕರಣ, ಹಾಗೂ ಶಿಕ್ಷಣದ ಪರಿಣಾಮಗಳನ್ನು ಒಳಗೊಂಡಿರುತ್ತದೆ. ಆದರೆ, ಪ್ರಪಂಚದಲ್ಲಿನ ಈ ಭಾಗದ ಜನರು ತಮ್ಮ ಜೀವನಕ್ಕೆ ಅಗತ್ಯವಿರುವ ವೈವಿಧ್ಯಮಯ ಸಂವಹನ ಕಾರ್ಯಗಳನ್ನು ಹೇಗೆ ಈಡೇರಿಸಿಕೊಳ್ಳುತ್ತಿದ್ದಾರೆಂಬ ಬಗ್ಗೆ ನಾವು ಸಾಕಷ್ಟು ತಿಳಿದುಕೊಂಡಿಲ್ಲ. ಮುಂದಿನ ಪ್ರಕರಣಗಳು (ಪ್ಯಾರಾಗಳು) ಈ ನಿಟ್ಟಿನಲ್ಲಿ ಕೆಲಸ ಆಗಬೇಕಾದ ಕೆಲವು ಕ್ಷೇತ್ರಗಳನ್ನು ಸ್ಪರ್ಶಿಸುತ್ತವೆ.

ಸಂವಹನ ಪ್ರವೃತ್ತಿಯ ಮೇಲಿನ ಒತ್ತಡ (ನಿರ್ಬಂಧ)ದ ಬಗ್ಗೆ – ಅಂದೆ, ಯಾರು? ಏನು? ಯಾವಾಗ? ಮತ್ತು ಯಾರಿಗೆ? ಒತ್ತಡ ತರುತ್ತಾರೆ? ಎಂಬ ಬಗ್ಗೆ – ದಕ್ಷಿಣ ಏಷಿಯಾದ ಯಾವುದೇ ಭಾಗದಲ್ಲೂ ವ್ಯವಸ್ಥಿತವಾದ ಅಧ್ಯಯನವು ನಡೆದಂತಿಲ್ಲ. ಹಾಗಾಗಿ ಸದ್ಯದ ಮಟ್ಟಿಗೆ ನಾವೀಗ ಈ ಕುರಿತಾದ ಸಾಮಾನ್ಯ ಅಭಿಪ್ರಾಯಗಳ ಆಧಾರದಿಂದ ಮುಂದುವರಿಯಬೇಕಾಗಿದೆ. ಉದಾಹರಣೆಗೆ, ಕುಟುಂಬದ ಕಿರಿಯ ಸದಸ್ಯರು ತಮಗೆ ಮಾತನಾಡಲು ಸೂಚನೆ ಬಂದ ಹೊರತು ತಮ್ಮ ಹಿರಿಯರೆದುರು ಮೌನವಾಗಿರುವ ಪ್ರವೃತ್ತಿಯುಳ್ಳವರಾಗಿರುತ್ತಾರೆಂದು ಈ ಪ್ರದೇಶಕ್ಕೆ ಬಂದ ಹಲವಾರು ಪ್ರವಾಸಿಗರು ಗುರುತಿಸಿದ್ದಾರೆ. ಈ ಬಗೆಯ ನಿರ್ಬಂಧದ ಒಂದು ವಿಸ್ತರಣೆಯನ್ನು ಕುಟುಂಬದ ಹೊರಗಡೆಯೂ ಗಮನಿಸಲಾಗಿದೆ. ಉದಾಹರಣೆಗೆ ವ್ಯಾಪಾರೀ ಸಂಸ್ಥೆ ಅಥವಾ ಸರಕಾರಿ ಕಛೇರಿಗಳಲ್ಲಿ, ಅದೇ ರೀತಿ ಶೈಕ್ಷಣಿಕ ಸಂದರ್ಭಗಳಲ್ಲಿ ಕಿರಿಯ ಸಹೋದ್ಯೋಗಿಗಳು ತಮ್ಮ ದಿನನಿತ್ಯದ ವ್ಯವಹಾರಗಳನ್ನು ಹೊರತುಪಡಿಸಿ, ಉಳಿದಂತೆ ಸಂವಹನದಲ್ಲಿ ತೊಡಗಿಕೊಳ್ಳಲು ಇಚ್ಛಿಸುವುದಿಲ್ಲ. ಇದೇ ತೆರನಾದ ನಡವಳಿಕೆಯನ್ನು ನಾವು ಪ್ರಾಥಮಿಕ ಹಂತದಿಂದ ಕಾಲೇಜು ವರೆಗಿನ ಶಾಲಾ ತರಗತಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಲು ಸಾಧ್ಯವಾಗುತ್ತದೆ. ಅಲ್ಲಿ ವಿದ್ಯಾರ್ಥಿಯು ವಿರಳವಾಗಿ ಕೇಳುವ ನೇರಪ್ರಶ್ನೆಯನ್ನು ಹೊರತುಪಡಿಸಿದರೆ, ಉಳಿದಂತೆ ಸಂಪೂರ್ಣವಾಗಿ ಶಿಕ್ಷಕನ ಕಡೆಯಿಂದ ವಿದ್ಯಾರ್ಥಿಯ ಕಡೆಗೆ ಸಂವಹನ ಏರ್ಪಡುತ್ತದೆ. ಈ ಪ್ರವೃತ್ತಿಯು ಎಷ್ಟು ಪ್ರಬಲವಾಗಿದೆ? ಇತರ ಯಾವ ಸಾಂಸ್ಕೃತಿಕ ಪರಿಸ್ಥಿತಿಗಳಲ್ಲಿ ಇದು ನಿರ್ಮಾಣವಾಗುತ್ತದೆ? ಅಥವಾ ಯಾವ ಪ್ರಮಾಣದಲ್ಲಿ (ಮತ್ತು ಯಾವ ಸಂದರ್ಭಗಳಲ್ಲಿ) ಈ ಪ್ರವೃತ್ತಿ ಬದಲಾಗಬಹುದು ಎಂಬುದು ನಮಗೆ ತಿಳಿದಿಲ್ಲ. ಇದು ನಿರ್ಬಂಧದ ಕೇವಲ ಒಂದು ಮಾದರಿಯಷ್ಟೆ. ಆಚರಣೆಗಳು, ಅಂತರ್ಜಾತಿ ಕಾರ್ಯಕ್ರಮಗಳು, ಔಪಚಾರಿಕ ಸಭೆಗಳು, ಹಾಗೂ ವೈವಾಹಿಕ ಒಪ್ಪಂದಗಳಂತಹ ಇತರ ಹಲವು ಸಂದರ್ಭಗಳಲ್ಲೂ ಇನ್ನಿತರ ಕಟ್ಟುಪಾಡುಗಳು ನಿಸ್ಸಂದೇಹವಾಗಿ ರೂಢಿಯಲ್ಲಿವೆ.

ದಕ್ಷಿಣ ಏಷಿಯಾ ಸಮಾಜದಲ್ಲಿ ಒಂದಲ್ಲ ಒಂದು ಬಗೆಯ ದ್ವಿಸ್ತರತೆಯು ಕೇವಲ ಅಪವಾದವಾಗಿರದೆ, ರೂಢಿಗತವಾಗಿರುವುದು ಸ್ಪಷ್ಟವಾಗುತ್ತದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಬಹುಭಾಷಿಕ ಜನರು ಮತ್ತು ಗುಂಪುಗಳು ಎಲ್ಲಾಕಡೆ ಸರ್ವೇಸಾಮಾನ್ಯವೆನ್ನಬಹುದು. ಕ್ರಿಯಾತ್ಮಕ ದ್ವಿಸ್ತರತೆಯು ವಿದ್ಯಾವಂತರಿಗೆ ಮಾತ್ರ ವಿಶಿಷ್ಟವಾದ ಜನ್ಮಸಿದ್ಧ ಹಕ್ಕಲ್ಲ. ಹೀಗಿದ್ದೂ ಅನೇಕ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಮನೆ ಮಾತು ಆತನನ್ನು ನಿರ್ದಿಷ್ಟ ಪ್ರಾದೇಶಿಕ ಮತ್ತು ಸಾಮಾಜಿ ಅನನ್ಯತೆಗೆ ಸೀಮಿತಗೊಳಿಸುತ್ತದೆ. ದಕ್ಷಿಣ ಏಷಿಯಾದಲ್ಲಿ ದ್ವಿಸ್ತರತೆಯ ಕಡೆಗಿನ ಒಲವು ಹೆಚ್ಚು ಕಡಿಮೆ ಸಾರ್ವತ್ತಿಕವಾಗಿದೆಯೆಂದು ತಿಳಿಯಲಾಗುತ್ತದೆ. ಹಾಗಿದ್ದರೂ ಈ ಒಲವು ವ್ಯಕ್ತವಾಗುವ ವಿಧಾನವು ತುಂಬಾ ಸಂಕೀರ್ಣವಾಗಿದೆ. ಸದ್ಯದ ಮಟ್ಟಿಗೆ ಈ ಬಗ್ಗೆ ಸಾಕಷ್ಟು ವಿವರಗಳು ನಮಗೆ ಲಭ್ಯವಿಲ್ಲ.

ದಕ್ಷಿಣ ಮಲಬಾರಿನಲ್ಲಿ ಈಗಲೂ ಇರುವ ಸ್ಥಿತಿಗತಿಗಳನ್ನು ಕುರಿತ ಮುಂದಿನ ಸಂಕ್ಷಿಪ್ತ ವಿವರಣೆಯಿಂದ ಇಂತಹ ಸಂಕೀರ್ಣತೆಯ ಕೆಲವು ಪ್ರವೃತ್ತಿಗಳು ವ್ಯಕ್ತವಾಗುತ್ತವೆ. ಆ ಪ್ರದೇಶದ ಸಾಮಾಜಿ ಮಾನವಶಾಸ್ತ್ರಜ್ಞರಾದ ಡಾ.ಕೆ.ರಾಮನ್ ಉಣ್ಣಿ ಅವರು ೧೯೫೦ ಮತ್ತು ೧೯೭೦ ರಲ್ಲಿ ನಡೆಸಿದ ಕ್ಷೇತ್ರಕಾರ್ಯದ ಆಧಾರದಿಂದ ಇತ್ತೀಚೆಗೆ ಈ ಮಾಹಿತಿಯನ್ನೊದಗಿಸಿದ್ದಾರೆ. ಪ್ರಸ್ತುತ ಮಾಹಿತಿಯು ಪರಿಣಾಮಕಾರಿಯಾಗಿದ್ದರೂ ಅಲ್ಲಿಯ ಅಸಂಖ್ಯ ಸಂಗತಿಗಳು ಇನ್ನಷ್ಟು ಸಂಶೋಧನೆಯನ್ನು ಅಪೇಕ್ಷಿಸುತ್ತವೆಂದು ಹೇಳಬಹುದು. ಮಲಯಾಳಂನ ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳು ಮಾತ್ರವಲ್ಲದೆ ಈ ಕೆಳಗಿನ ವಿಶಿಷ್ಟ ಪ್ರಭೇದಗಳನ್ನೂ ನಮಗಲ್ಲಿ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಆಂಗ್ಲೀಕೃತ ಮಲಯಾಳಂ, ಸಂಸ್ಕೃತೀಕೃತ ಮಲಯಾಳಂ, ಮತ್ತು ಇಂಗ್ಲೀಷ್. (ನಾನು

[1] ಸ್ವತಃ ಗಮನಿಸಿದ ಪ್ರಕಾರ ಕೆಲವು ನಿರ್ದಿಷ್ಟ ನಗರ ಸಂದರ್ಭಗಳಲ್ಲಿ ಇಡೀ ವಾಕ್ಯಗಳನ್ನೇ ಏಕಕಾಲಕ್ಕೆ ಇಂಗ್ಲಿಷ್ ಮತ್ತು ಮಲಯಾಳಂಗಳೆರಡರಲ್ಲೂ ಹೇಳುವ ಪ್ರವೃತ್ತಿಯೂ ಕಂಡುಬರುತ್ತದೆ.)

ಆಂಗ್ಲೀಕೃತ ಮಲಯಾಳಂ ನ ಶೈಲಿಯ ಮಟ್ಟದಲ್ಲಿ, ಮೂಲ ಮಲಯಾಳಂ ಚೌಕಟ್ಟಿನೊಳಗಡೆ ಇಂಗ್ಲಿಷ್ ಪದಗಳು ವ್ಯತ್ಯಸ್ತ ಪ್ರಮಾಣಗಳಲ್ಲಿ ಬಳಕೆಯಾಗುತ್ತವೆ. ಸೂಕ್ತ ಸಂವಾದಿ ರೂಪಗಳಿಲ್ಲದ ಕರೆಂಟ್, ಪ್ಯೂಸ್, ವೈರ್, ಟ್ರಾನ್ಸ್‌ಫಾರ್ಮರ್ ನಂತಹ ಇಂಗ್ಲಿಷ್ ಪರಿಭಾಷೆಗಳು ಕೆಲವು ಸಂದರ್ಭಗಳಲ್ಲಿ ಅವಶ್ಯವಿದ್ದರೂ ಈ ಅಂಶಗಳಿಂದಷ್ಟೇ.

ಗ್ರಾಮೀಣ ಪರಿಸರಗಳಲ್ಲಿ ಕೆಲವೇ ಕೆಲವು ಇಂಗ್ಲಿಷ್ ಪದಗಳು ಗೊತ್ತಿದ್ದರೆ ತಾನು ಶೋಕಿ ಮನುಷ್ಯ (ಸಭ್ಯ), ತಿಳುವಳಿಕೆಯುಳ್ಳವ ಎಂಬುದಾಗಿ ತನ್ನ ಪ್ರತಿಷ್ಠೆಯನ್ನು ಸ್ಥಾಪಿಸಲು ಅದು ಸಹಕಾರಿಯಾಗುತ್ತದೆ. ಆದರೆ, ಇದಷ್ಟೇ ಅಲ್ಲದೆ ಆಂಗ್ಲೀಕೃತ ಮಲಯಾಳಂ ಮತ್ತು ಆಂಗ್ಲಭಾಷೆಗಳ ಬಳಕೆಯ ಪ್ರಮುಖ ಕಾರ್ಯವೆಂದರೆ ಸಾಂಪ್ರದಾಯಿಕ ಭಿನ್ನತೆಯನ್ನು ಮರೆಮಾಚುವುದು. ಇದು ಪಾರಂಪರಿಕ ಸ್ವರೂಪದಲ್ಲಿ ಅಸ್ತಿತ್ವದಲ್ಲಿಲ್ಲದ ಹೊಸ ಸಂವಹನ ಸ್ಥಿತಿಯ ಸಂದರ್ಭದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಶಾಲಾ ಶಿಕ್ಷಣದ ಸಾರ್ವತ್ರಿಕತೆಯೇ ಕಾರಣವೆನ್ನಬಹುದು. ಉದಾಹರಣೆಗೆ ಉಣ್ಣಿ ಅವರ ಉಲ್ಲೇಖವನ್ನೇ ಗಮನಿಸಬಹುದು : ೧೯೫೦ರಲ್ಲಿ ಅವರು ದಕ್ಷಿಣ ಮಲಬಾರ್ ಪ್ರದೇಶದಲ್ಲಿ ಕ್ಷೇತ್ರಕಾರ್ಯ ಕೈಗೊಂಡಾಗ ಆಂಗ್ಲೀಕೃತ ಮಲಯಾಳಂ ಮತ್ತು ಆಂಗ್ಲ ಭಾಷೆಗಳನ್ನು ಬಳಸಿದುದರಿಂದಾಗಿ ಅಲ್ಲಿ “ಆಚಾರಂ ಪಟಿಯಲ್” ಸಂಪ್ರದಾಯವನ್ನು ಪಾಲಿಸಬೇಕಾದ ಅವಶ್ಯಕತೆ ಅವರಿಗೆ ಕಂಡುಬರಲಿಲ್ಲ. ಅವರು ವಿದ್ಯಾವಂತರಾಗಿ ಪ್ರತಿಷ್ಠಿತರೆನಿಸಿಕೊಂಡಿದ್ದರಿಂದ ಈ ಸಂಪ್ರದಾಯದ ಸಡಿಲಿಕೆ ಒಪ್ಪಿತವಾಗಿತ್ತು.

ಇನ್ನೊಂದು ಬಗೆಯ ಸನ್ನಿವೇಶದಲ್ಲಿ ನಿರ್ದಿಷ್ಟ ವ್ಯಾಪ್ತಿಯಲ್ಲಿ ಬರುವ ಕೆಲವು ನಿಗದಿತ ಜಾತಿ ಅಥವಾ ಧಾರ್ಮಿಕ ಗುಂಪುಗಳಿಗೆ ಸಂಬಂಧಪಟ್ಟ ಬಂಧುವಾಚಿ, ಆಹಾರವಾಚಿ, ಮತ್ತು ಆರಾಧನಾ ಸಂಬಂಧಿ ಪದಗಳ ಬದಲಿಗೆ ಇಂಗ್ಲಿಷ್ ಪದಗಳನ್ನು ಬಳಸುವುದು ಸರ್ವೇಸಾಮಾನ್ಯವಾಗಿದೆ. ಇದರಂತೆ ವಿಶೇಷವಾಗಿ ಕಾಲೇಜ್ ಹಾಸ್ಟಲ್‌ಗಳಂತಹ ಮಿಶ್ರಗುಂಪುಗಳಿರುವಲ್ಲಿ ಮಲಯಾಳಂ ಭಾಷೆಯ ನಡುವೆ ಫಾದರ್, ಅಂಕಲ್, ಬ್ರದರ್ ಇನ್ ಲಾ, ವೈಫ್ ಮುಂತಾದ ಪದಗಳು ಕೇಳಿಬರುತ್ತವೆ. ವೈದ್ಯಕೀಯ ಸಂದರ್ಭಗಳಲ್ಲಿ, ಕುಟುಂಬ ಯೋಜನೆ ಹಾಗೂ ಅಂತಹುದೇ ಇತರ ವಿಷಯಕವಾದ ಚರ್ಚೆಗಳಲ್ಲಿ ಆಂಗ್ಲ ಪರಿಭಾಷೆಗಳು ಯಥೇಚ್ಛವಾಗಿ ಬಳಕೆಯಾಗುತ್ತವೆ. ಈ ಸಂದರ್ಭಗಳಲ್ಲಿ “ಸೆಕ್ಷುವಲ್ ರಿಲೇಷನ್ಸ್”, “ಪ್ರೈವೇಟ್ ಪಾರ್ಟ್ಸ್” “ಡೆಲಿವರಿ”, “ಬ್ರೆಸ್ಟ್ ಫೀಡಿಂಗ್” ನಂತಹ ಪದಗಳನ್ನು ಬಳಸುವುದರಿಂದ ತತ್ಸಂಬಂಧವಾದ ಮಲಯಾಳಂ ಪರಿಭಾಷೆಗಳನ್ನು ಉಪಯೋಗಿಸಿದಾಗ ಉಂಟಾಗಬಹುದಾದ ಕಿರಿಕಿರಿ (ಮುಜುಗರ)ಯನ್ನು ತಪ್ಪಿಸಬಹುದಾಗಿದೆ: ಅಧಿಕೃತ ಅಂಕಿ ಅಂಶಗಳು ಭಾರತದ ಜನಸಂಖ್ಯೆಯಲ್ಲಿ ಕೇವಲ ಶೇಕಡಾ ಒಂದರಷ್ಟು ಜನ ಮಾತ್ರ ಇಂಗ್ಲಿಷ್ ಬಲ್ಲವರಾಗಿದ್ದಾರೆಂದು ಹೇಳಿದರೂ, ಆಂಗ್ಲೀಕೃತ ಪ್ರಾದೇಶಿಕ ಭಾಷಾರೂಪಗಳನ್ನುಪಯೋಗಿಸುವ ಪ್ರವೃತ್ತಿಯು ನಮ್ಮಲ್ಲಿ ಸರ್ವತ್ರ ವ್ಯಾಪಿಸಿದೆ.

ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಇಂದಿನ ಜನತೆ ಆಂಗ್ಲೀಕೃತ ಮಲಯಾಳಂನ್ನು ಬಳಸುವುದರೆ ಹಿಂದಿನ ತಲೆಮಾರಿನವರು ಸಂಸ್ಕೃತೀಕೃತ ಮಲಯಾಳಂನ್ನು ಬಳಸುತ್ತಿದ್ದರು. ಉದಾಹರಣೆಗೆ ಜ್ಯೋತಿಶ್ಯಾಸ್ತ್ರಜ್ಞರು ಮತ್ತು ಮರಗೆಲಸದ ಶಿಕ್ಷಕರಂತಹ ವಿಶೇಷಜ್ಞರು ಪಾರಂಪರಿಕ ಸಂಸ್ಕೃತ ಪಠ್ಯಗಳ ಆಧಾರದಿಂದ ತಾಂತ್ರಿಕ ತರಬೇತಿಯನ್ನು ಪಡೆಯುತ್ತಿದ್ದರು. ಅಂಥ ಕೆಲವರು ಕೆಳಜಾತಿಯವರಾಗಿದ್ದರೂ ದಿನನಿತ್ಯದ ಸಂಭಾಷಣೆಯಲ್ಲಿ ಸಂಸ್ಕೃತ ಪದಗಳನ್ನು ಬಳಸಬಲ್ಲ ಅವರ ಸಾಮರ್ಥ್ಯದಿಂದಾಗಿ ಅವರಿಗೆ ವಿಶೇಷ ಚಲಾವಣೆ (ಪ್ರಚಾರ) ಸಿಗುತ್ತಿತ್ತು. ಸಬಲರಾಗಿದ್ದ ನಾಯರ್ ಹುಡುಗಿಯರು ರಾಮಾಯಣ, ಮಹಾಭಾರತಗಳಂತಹ ಕೃತಿಗಳನ್ನು ಓದಬಲ್ಲಷ್ಟು ಸಂಸ್ಕೃತ ಶಿಕ್ಷಣವನ್ನು ಪಡೆಯಲು ಬಯಸುತ್ತಿದ್ದರು. ಆಧುನಿಕ ಮಹಿಳೆಯರು ಫ್ಯಾಷನ್, ಡೀಸೆನ್ಸಿ, ಲವ್, ಮ್ಯಾರಿಯೇಜ್‌ಗಳಂತಹ ಇಂಗ್ಲಿಷ್ ಪದಗಳನ್ನು ಬಳಸುವುದರ ಮೂಲಕ ತಮ್ಮ ಸಂಭಾಷಣೆಗೆ ಸಂಬಾರ (ಮಸಾಲೆ) ಬೆರೆಸಿಕೊಳ್ಳವಂತೆ ಆಗಿನ ಕಾಲದ ಮಹಿಳೆಯರು ಮಾತಿನ ಮಧ್ಯೆ ಕೆಲವು ಸಂಸ್ಕೃತ ಪದಗಳನ್ನು ಸೇರಿಸಿಕೊಳ್ಳುವ ಮೂಲಕ ತಮ್ಮ ಸಂಭಾಷಣೆಗೆ ಸಾಂಬಾರು (ಮಸಾಲೆ) ಬೆರೆಸಿಕೊಳ್ಳುತ್ತಿದ್ದರು.

ಗುರುತು ಹಲಗೆ (ನಾಮಫಲಕ) ಗಳಲ್ಲಿ, ಲಗ್ನಪತ್ರಿಕೆಗಳಂತಹ ಔಪಚಾರಿಕ ಸಂವಹನಗಳಲ್ಲಿ (ಕೆಲವೊಮ್ಮೆ ಮಲಯಾಳಂನ ಜತೆಗೆ) ಗ್ರಂಥಸ್ಥ ಇಂಗ್ಲಿಷ್ ಬಳಕೆಯಾಗುತ್ತದೆ. ಅದೇ ರೀತಿ ಖಾಸಗಿ (ವೈಯಕ್ತಿಕ) ಪತ್ರಗಳ ಆರಂಭ ಮತ್ತು ಅಂತ್ಯಗಳನ್ನು ಇಂಗ್ಲಿಷ್ ಪದಗಳ ಮೂಲಕ ಮಾಡುವುದಿದೆ. (ಮಲಯಾಳಂನಲ್ಲಿ ಖಾಸಗಿ ಪತ್ರವನ್ನು “ಡಿಯರ್ ಬ್ರದರ್” ಎಂದು ಪ್ರಾರಂಭಿಸಿ “ಯುವರ್ ಅಫೆಕ್ಷನೇಟ್” ಎಂದು ಮುಕ್ತಾಯಗೊಳಿಸುವುದು ಸರ್ವೇಸಾಮಾನ್ಯವೆನ್ನಬಹುದು.) ಅದೇ ರೀತಿ ದೂರವಾಣಿ ಸಂಭಾಷಣೆಗಳಲ್ಲಿ ವ್ಯವಹಾರ ಮಾಧ್ಯಮವಾಗಿ ಇಂಗ್ಲಿಷ್ ಅಥವಾ ಆಂಗ್ಲೀಕೃತ ಮಲಯಾಳಂ ಬಳಸುವುದು ಒಪ್ಪಿತವಾಗಿದೆ. ಗ್ರಾಮೀಣ ಸಂದರ್ಭದಲ್ಲಿ ಇಂಗ್ಲಿಷ್ ಬಳಸುವುದರಿಂದ ಅಶಿಕ್ಷಿತನಾಗಿದ್ದ ವ್ಯಕ್ತಿ ಇದಕ್ಕಿದ್ದ ಹಾಗೆ ಸುಶಿಕ್ಷಿತನಾದಂತೆ ತನ್ನ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳುತ್ತಾನೆ. ಇದರಂತೆ ಸಬಲನಾದ ವ್ಯಕ್ತಿಯು (ಜಮೀನ್ದಾರ) ಅವಿದ್ಯಾವಂತರಾದ ಒಕ್ಕಲು ಮಕ್ಕಳೊಡನೆ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ತನ್ನ ವಿದ್ಯಾವಂತ ಮಗನನ್ನು ಪ್ರೇರೇಪಿಸುತ್ತಾನೆ. ಮದರಾಸಿನ (ತಮಿಳುನಾಡಿನ) ಗ್ರಾಮವೊಂದರಲ್ಲಿ ನಾನು ಗಮನಿಸಿದಂತೆ, ವಿದ್ಯಾವಂತರಾಗಿದ್ದ ಅಲ್ಲಿಯ ಪಂಚಾಯತ್ ಅಧ್ಯಕ್ಷರೊಬ್ಬರು ಹರಿಜನನಾಗಿದ್ದು, ಸ್ನಾತಕೋತ್ತರ ಪದವೀಧರನಾಗಿದ್ದ. ನನ್ನ[2] ಸಂಶೋಧನ ಸಹಾಯಕನ ಜೊತೆ ಸಂದರ್ಭಗಳಲ್ಲಿ ಇಂಗ್ಲಿಷ್‌ನಲ್ಲೇ ಮಾತನಾಡಿದರು, ಇಂತಹ ಸಂದರ್ಭಗಳಲ್ಲಿ ಇಂಗ್ಲಿಷ್ ಬಳಕೆಯು ವಿವಿಧ ಸಾಮಾಜಿಕ ಹಿನ್ನಲೆಯುಳ್ಳ ವ್ಯಕ್ತಿಗಳ ಸಾಂಪ್ರಾದಾಯಿಕ ಸಂಪರ್ಕ ವಿಧಾನವನ್ನು ನಿವಾರಿಸುವುದು ಮಾತ್ರವಲ್ಲದೆ ಅವರೊಳಗೆ ಸಮಾನ ಸ್ಥಾನಮಾನವನ್ನು ಸಾಂಕೇತಿಸುವಲ್ಲೂ ಇತ್ಯಾತ್ಮಕವಾಗಿ ನೆರವಾಗುತ್ತದೆ.

ದಕ್ಷಿಣ ಏಷಿಯಾದ ಇತರ ಹಲವೆಡೆಗಳಲ್ಲೂ ವಿವರಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ಇಂತಹುದೇ ಚಿತ್ರಗಳು ಕಾಣಸಿಗುತ್ತವೆ. ಈ ವಿಷಯದ ಕುರಿತಾಗಿ ಹೆಚ್ಚಿನ ಅಧ್ಯಯನ ನಡೆಸಿದಂತೆಲ್ಲಾ ಅಂತರ್ ಪ್ರಾದೇಶಿಕ ಭಿನ್ನತೆಗಳ ಅನ್ವೇಷಣೆಯಾಗುವುದರ ಜತೆಗೆ ತತ್ಸಂಬಂಧವಾದ ಅಸಂಖ್ಯ ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ. ಇಂದು ಈ ಮಾದರಿಗಳಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತಿವೆ. ಆಕಾಶವಾಣಿ (ರೇಡಿಯೊ) ಮತ್ತು ಪತ್ರಿಕೆಗಳಲ್ಲಿ ಸಂಸ್ಕೃತೀಕರಣಗೊಂಡ ಮಲಯಾಳಂನ್ನು ಬಳಸುವುದರಿಂದ ಆಂಗ್ಲೀಕೃತ ಮಲಯಾಳಂ ಮತ್ತು ಸಂಸ್ಕೃತಿಕೃತ ಮಲಯಾಳಂ ಗಳೊಳಗಿನ ಸಾಂಬಂಧಿಕ ಸ್ಥಾನಮಾನಗಳ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯೆ? ಮಾರ್ಕ್ಸಿಸ್ಟರು ಆಂಗ್ಲೀಕೃತ ಮಲೆಯಾಳಂನ್ನು ಬಳಸುವುದರ ಮೂಲಕ ಪಡೆಯುವ ಆರೋಪಿತ ಬೆಂಬಲವು ಯಾವುದಾದರೂ ದೃಗ್ಗೋಚರ ಪರಿಣಾಮವನ್ನುಂಟುಮಾಡುತ್ತದೆಯೇ? ಸಾಮಾನ್ಯವಾಗಿ ಯಾವ್ಯಾವ ಸಂದರ್ಭ ಸನ್ನಿವೇಶಗಳಲ್ಲಿ ಯಾವ್ಯಾವ ಬದಲಾವಣೆಗಳಾಗುತ್ತವೆ? ಇವುಗಳೇ ಆ ಪ್ರಶ್ನೆಗಳು. ಸಮಾಜದಲ್ಲಿಯ ವ್ಯಕ್ತಿಯ ನೆಲೆಯಿಂದ ನೋಡುವುದಾದರೆ ಅಲ್ಲಿ ದ್ವಿಸ್ತರತೆಯನ್ನು ಯಾವ ರೀತಿಯಲ್ಲಿ ಪಡೆಯಲಾಗಿದೆ? ಎಂಬ ಬಗ್ಗೆ ನಮ್ಮಲ್ಲಿ ಸಾಕಷ್ಟು ವಿವರಗಳಿಲ್ಲ. ಮನೆ ಮಾತನ್ನು ಬಿಟ್ಟು, ಉಳಿದ ಯಾವುದೇ ಭಾಷಾ ಮಾದ್ಯಮದಲ್ಲಿನ ಮಾತಿನ ಓಘ (ನಿರರ್ಗಳತೆ)ವು ಸಾಮಾನ್ಯವಾಗಿ ಔಪಚಾರಿಕ ಶಿಕ್ಷಣ ಅಥವಾ ಹೆತ್ತವರ ತರಬೇತಿಯಿಂದ ಪ್ರಾಪ್ತವಾದುದಲ್ಲ. ಅದು ಹೆಚ್ಚಾಗಿ ಸಮಾನ ಗುಂಪುಗಳೊಳಗಿನ ಪರಸ್ಪರ ಸಂಪರ್ಕದಿಂದ ಪ್ರಾಪ್ತವಾದುದು. ಬರವಣಿಗೆಯ ಇಂಗ್ಲಿಷಿನ ಮೇಲೆ ಹಿಡಿತ ಸಾಧಿಸಲು ಪ್ರಾಯಶಃ ಔಪಚಾರಿಕ ಶಿಕ್ಷಣ ನಿರ್ಣಾಯಕವೆನಿಸಿದರೂ ವ್ಯಾವಹಾರಿಕ ಇಂಗ್ಲಿಷಿನ ಮೇಲೆ ಹಿಡಿತ ಸಾಧಿಸಲು ಇಂತಹ ಶಿಕ್ಷಣದ ಪ್ರಾಮುಖ್ಯತೆ ಅಷ್ಟಾಗಿ ಇಲ್ಲವೆನ್ನಬಹುದು. ಸಂಗ್ರಹ – ಸಂಪಾದನೆಯ ಪ್ರಶ್ನೆ ಬಂದಾಗ ಅದರ ಜತೆಗೆ ವೈಯಕ್ತಿಕ ಭಾಷಾ ಸಂಗ್ರಹಾಲಯಕ್ಕೆ ಸಂಬಂಧಿಸಿದ ಸಂಕೇತ ನಿರೂಪಣಾ ಶಾಸ್ತ್ರವೊಂದರ ಅವಶ್ಯಕತೆಯಿದೆಯೆಂಬುದೂ ಮನವರಿಕೆಯಾಗುತ್ತದೆ. ಕೆಲವು ವಿದ್ಯಾವಂತ ಅಥವಾ ಅವಿದ್ಯಾವಂತ ವ್ಯಕ್ತಿಗಳು ಮೂರ್ನಾಲ್ಕು ಭಾಷೆಗಳಲ್ಲಿ ಹಿಡಿತ ಸಾಧಿಸಿರುವುದು ಅಸಹಜವೇನಲ್ಲ. ಮುಖ್ಯವಾಗಿ ಔದ್ಯೋಗಿಕ ಅನುಭವ ಅಥವಾ ವಿವಿದೆಡೆಗಳಲ್ಲಿ ವಾಸಮಾಡುವ ಪರಿಣಾಮವಾಗಿ ಬಹುಭಾಷಿಕತೆಯು ನಿರ್ಮಾಣವಾಗುತ್ತದೆಂಬುದನ್ನು ನಾವು ಸಾಮಾನ್ಯವಾಗಿ ಬಲ್ಲೆನಾದರೂ, ಈ ಪ್ರಕ್ರಿಯೆಯೆಯ ವಾಸ್ತವ ಘಟನೆಯ ಬಗ್ಗೆ ನಮ್ಮಲ್ಲಿ ಸಾಕ್ಷಟು ಮಾಹಿತಿಗಳಿಲ್ಲ.

‘ನುಡಿಪಲ್ಲಟ’ ವನ್ನು ಕುರಿತ ಅಧ್ಯಯನಗಳು ಭಾಷಾ ವ್ಯತ್ಯಾಸದ ಅಧ್ಯಯನಕ್ಕೆ ಉಪಯೋಗವಾಗುವ ಮಾಹಿತಿಯನ್ನು ಒದಗಿಸಿಕೊಟ್ಟಿವೆಯಾದರೂ ನಿರ್ದಿಷ್ಟ ಸನ್ನಿವೇಶ ಸಂದರ್ಭಗಳಲ್ಲಿ ಯಾವ್ಯಾವ ಸಂಕೇತಗಳು ಬಳಕೆಯಾಗುತ್ತವೆಂಬುದನ್ನು ನಿಷ್ಕರ್ಷೆ ಮಾಡಲು ಬೇಕಾದ ಅಂಶಗಳತ್ತ ಬೆಳಕು ಚೆಲ್ಲಿಲ್ಲ. ಇಂತಹ ಹಲವು ಅಂಶಗಳನ್ನು ಈಗಾಗಲೇ ಪ್ರಸ್ತಾಪಿಸಲಾಗದೆ. ಉದಾಹರಣೆಗೆ : ಪಾರಂಪರಿಕ ವರ್ಗ, ಜಾತಿಭೇದ ಹಾಗೂ ಸೂಕ್ಷ್ಮ ವಿಷಯಗಳ ನಿವಾರಣೆ, ಸಂಭಾಷಣೆಯ ವಿಷಯಗಳು, ಸ್ಥಾನ ಮಾನ ವ್ಯತ್ಯಾಸದ ಸಾಂಕೇತೀಕರಣ ಮತ್ತು ಕಛೇರಿ, ದೂರವಾಣಿ ಸಂಭಾಷಣೆಗಳಂತಹ ಸನ್ನಿವೇಶಗಳ ಮಾದರಿ. ಇನ್ನಿತರ ಅಂಶಗಳನ್ನು ನಿಸ್ಸಂದೇಹವಾಗಿ ಗುರುತಿಸಬಹುದಾಗಿದೆ. ಬೇರೆ ಬೇರೆ ಹಿನ್ನಲೆಯುಲ್ಳ ಭಾಷಿಕರು ತಮ್ಮ ಮಾಧ್ಯಮ ಭಾಷೆಯನ್ನು ಆಯ್ಕೆಮಾಡಿಕೊಳ್ಳುವಲ್ಲಿ ಪ್ರಭಾವ ಬೀರುವ ಅಂಶಗಳನ್ನು ಅನ್ವೇಷಿಸಲು, ವಿವಿಧ ಸನ್ನಿವೇಶಗಳಲ್ಲಿ ವ್ಯಕ್ತಿಯ ವರ್ತನೆ ಹೇಗಿರುತ್ತದೆಂಬುದರ ಸವಿವರ ಅಧ್ಯಯನ ಅವಶ್ಯವಾಗಿ ನಡೆಯಬೇಕಾಗಿದೆ. ಗುಂಪಿನ ರಚನೆಯಲ್ಲಾಗುವ ಬದಲಾವಣೆ, ಅಥವಾ ಸ್ಥಳೀಯಾಡಳಿತ ಘಟಕಗಳು, ಕಾರ್ಮಿಕ ಸಂಘಟನೆಗಳು, ಕಾಲೇಜಿನ ಸಾಮಾಜಿಕ ಸಂಘಟನೆಗಳ ಸಂದರ್ಭಗಳಲ್ಲಾಗುವ ಹೊಸ ಗುಂಪುಗಳ ಪುನಾರಚನೆ ಹೀಗೆ ವಿವಿಧ ಸಂದರ್ಭದಲ್ಲಾಗುವ ಬದಲಾವಣೆಗಳನ್ನು ಗಮನಿಸುವುದು ಈ ಅಧ್ಯಯನದ ಒಂದು ಪ್ರಮುಖ ಭಾಗವಾಗಿದೆ.

ಸಂವಹನದ ಮಾನವಕುಲ ಶಾಸ್ತ್ರದೊಳಗಡೆಯ ಪ್ರಮುಖ ಅಧ್ಯಯನ ಕ್ಷೇತ್ರವೆಂದರೆ ಮಾನವಕುಲ ಶಾಸ್ತ್ರೀಯ ಅರ್ಥವಿಜ್ಞಾನ. (ಕೆಲವರು ಇದನ್ನು ಪ್ರತ್ಯೇಕ ಕ್ಷೇತ್ರವೆಂದು ಪರಿಗಣಿಸುತ್ತಾರೆ.) ಸಾಮಾನ್ಯವಾಗಿ ಈ ಬಗೆಯ ಅಧ್ಯಯನಗಳು ವೈದ್ಯಕೀಯ ಅಥವಾ ಸಸ್ಯ ಶಾಸ್ತ್ರೀಯ ಪಾರಿಭಾಷಿಕಗಳಂತಹ ನಿರ್ದಿಷ್ಟ ಅರ್ಥವಿಜ್ಞಾನ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುತ್ತವೆ. ಅದೇ ರೀತಿ ಅಲ್ಲಿ ಬಳಕೆಗೊಳ್ಳುವ ಪರಿಭಾಷೆಗಳಲ್ಲಿ ಅಡಕವಾಗಿರುವ ವರ್ಗೀಕರಣ ತತ್ವಗಳನ್ನೂ, ಆ ವರ್ಗೀಕರಣವು ಇತರ ಸಾಂಸ್ಕೃತಿಕ ಪ್ರವೃತ್ತಿಯ ಜತೆ ಹೇಗೆ ಸಂಬಂಧ ಹೊಂದಿರುತ್ತದೆಂಬುದನ್ನೂ ಪರೀಕ್ಷಿಸುತ್ತದೆ. ದಕ್ಷಿಣ ಭಾರತದಲ್ಲಿ ಈ ಮಾದರಿಯ ಕೆಲವು ಅಧ್ಯಯನಗಳು ನಡೆದಿವೆಯಾದರೂ ಅವು ಯಾವುವೂ ಇಂದು ಪ್ರಕಟಗೊಂಡ ರೂಪದಲ್ಲಿ ಲಭಿಸುತ್ತಿಲ್ಲ. ಕನ್ನಡದಲ್ಲಿ ವ್ಯಕ್ತಿ ವಿಷಯಕ ಉಲ್ಲೇಖ ಮತ್ತು ಸಂಭೋದನ ರೂಪಗಳಿಗೆ ಸಂಬಂಧಿಸಿದಂತೆ ಸೂಸಾನ್ ಬೀನ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪಿ.ಎಚ್.ಡಿ. ಮಹಾಪ್ರಬಂಧವು ಪ್ರಸ್ತುತ ಕ್ಷೇತ್ರದಲ್ಲಿ ಪ್ರತ್ಯಕ್ಷ ಕಥನ ಮತ್ತು ಪರೋಕ್ಷ ಕಥನಗಳಿಗಿರುತವ ವ್ಯತ್ಯಾಸಗಳ ಕುರಿತು ಅಮೂಲ್ಯ ಮಾಹಿತಿಯನ್ನೊದಗಿಸುತ್ತದೆ. ಸ್ಟ್ಸಾನ್ಸಿ ರೀಗಲ್ಸನ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಕನ್ನಡದ ಆಹಾರ ಪರಿಭಾಷೆಗಳಿಗೆ ಸಂಬಂಧಿಸಿದ ಮಹಾಪ್ರಬಂಧವು ಆಹಾರ ಸಂಬಂಧೀ ಪದಗಳನ್ನು ಮಾನವ ಕುಲಶಾಸ್ತ್ರದ ಹಿನ್ನೆಲೆಯಲ್ಲಿ ಪರಿಶೀಲಿಸುತ್ತದೆ.

೧೯೭೦ರಲ್ಲಿ ತಮಿಳು, ಮಲಯಾಳಂ, ಮರಾಠಿ, ಹಿಂದಿ – ಉರ್ದು ಮತ್ತು ಭಾರತೀಯ ಇಂಗ್ಲಿಷ್ ಭಾಷೆಗಳ ಅರ್ಥರಚನೆಗೆ ಸಂಬಂಧಿಸಿದ ತೌಲನಿಕ ಅಧ್ಯಯನವು ಪ್ರಾರಂಭವಾಯಿತು. ಸಂಯುಕ್ತ ಸಂಸ್ಥಾನ (ಯು.ಎಸ್.)ದ ನ್ಯಾಷನಲ್ ಸೈನ್ಸ್ ಫೌಂಡೇಶನ್ ಪ್ರಾಯೋಜಿಸಿದ್ದ ಈ ಅಧ್ಯಯನವು ಆಹಾರ, ಕೃಷಿಕಾಮಗಾರಿ, ವ್ಯಕ್ತಿವಿಷಯಕ ಉಲ್ಲೇಖ ಹಾಗೂ ಗೌರವ – ಪ್ರತಿಷ್ಠೆಗಳ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುತ್ತದೆ. ಅಧ್ಯಯನಕ್ಕೊಳಪಡಿಸಿದ ಭಾಷೆಗಳೊಳಗಿನ ಸಾಮ್ಯ ವ್ಯತ್ಯಾಸಗಳನ್ನು ಪರಿಶೀಲಿಸುವುದೇ ಇದರ ಉದ್ದೇಶವಾಗಿತ್ತು. ಈ ಯೋಜನೆಗಾಗಿ ಸಂಗ್ರಹಿಸಿದ ಸಾಮಗ್ರಿಗಳಲ್ಲಿ ಲಿಪೀಕರಿಸಿದ ಸಂಭಾಷಣೆಗಳು ಅಧಿಕ ಪ್ರಮಾಣದಲ್ಲಿವೆ. ಅವು ಆಯ್ಕೆ ಮಾಡಿದ ಅರ್ಥಕ್ಷೇತ್ರದ ಭಾಗವಾಗಿರುವ ಕೆಲಸಗಳು ಮತ್ತು ಭಾಷಾಭಿವ್ಯಕ್ತಿಗಳ ವಿಪುಲ ಉದಾಹರಣೆಗಳನ್ನೂದಗಿಸುತ್ತವೆ. ಮಾತ್ರವಲ್ಲದೆ, ಬದಲಾಗುವ ರಚನೆಯುಳ್ಳ ಸಾಮಾಜಿಕ ಗುಂಪುಗಳಲ್ಲಿನ ಪರಸ್ಪರ ಮಾತಿನ ಸಂಬಂಧದ ಕುರಿತಾಗಿರುವ ಅಪಾರ ಮಾಹಿತಿಗಳನ್ನೂ ಒಳಗೊಂಡಿವೆ. ಈ ಸಂಶೋಧನಾ ಫಲಿತಾಂಶದ ಸಾಮಾನ್ಯ ಅವಲೋಕನವು ಪೂರ್ಣಗೊಂಡಿದೆ.

ಸಾಮಾಜಿಕ ಬದಲಾವಣೆಯ ಅರ್ಥವಿಜ್ಞಾನ ಕ್ಷೇತ್ರವು ಇಂದು ಮಾನವ ಕುಲಶಾಸ್ತ್ರೀಯ ಅರ್ಥವಿಜ್ಞಾನದೊಳಗೆ ತನ್ನ ಪ್ರಾಮುಖ್ಯತೆಯನ್ನು ವರ್ಧಿಸಿಕೊಳ್ಳುತ್ತಿದೆ. ಇದು ಬದಲಾವಣೆಯ ಕುರಿತು ಮಾತನಾಡುವ, ಹೊಸ ಮತ್ತು ಹಳೆಯ ಅವ್ಯಯಗಳೊಳಗಿನ ವ್ಯತ್ಯಾಸಗಳನ್ನು ಸ್ಪಷ್ಟಪಡಿಸುವ, ಅದೇ ರೀತಿ ಬದಲಾವಣೆಯ ಕೊರತೆಯನ್ನು ಮರೆಮಾಚುವಂತೆ ಮಾತನಾಡುವ ವಿಧಾನಗಳನ್ನು ಒಳಗೊಂಡಿರುತ್ತದೆ. ಉದಾಹರಣೆ “ಹರಿಜನ” (ಪರಿಶಿಷ್ಟ ಜಾತಿ) ಎಂಬ ಪರಿಭಾಷೆಯು ಬದಲಾವಣೆಯ ಸಂಕೇತವಾಗಿದೆ. ಆದರೆ ಅಸ್ಪೃಶ್ಯರು ಇನ್ನೂ ಪೂರ್ಣವಾಗಿ ಬದಲಾಗದ ಸ್ಥಿತಿಯಿರುವ ಪ್ರದೇಶಗಳಲ್ಲಿ ಇಂತಹ ಪದಗಳ ಬಳಕೆಯು ಅಹಿತಕರ (ಅಪ್ರಿಯ) ಸತ್ಯವನ್ನು ಮರೆಮಾಚಲು ಸಹಕಾರಿಯಾಗುತ್ತದೆ. ಇಂತಹ ಪರಿಭಾಷೆಗಳನ್ನು ಸಮುಚ್ಚಯಾತ್ಮಕವಾಗಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳ ಜತೆಗೆ ಅಧ್ಯಯನ ನಡೆಸಿದರೆ ಅದರಿಂದ ಬದಲಾವಣೆಯ ಪ್ರಕ್ರಿಯೆ ಮತ್ತು ಪ್ರವೃತ್ತಿಗಳನ್ನು ಕುರಿತ ನಮ್ಮ ತಿಳುವಳಿಕೆಗೆ ಗಮನಾರ್ಹ ಕೊಡುಗೆಯಾಗಬಹುದು.

ಅನ್ವಯಗಳು

ಇಲ್ಲಿ ಚರ್ಚಿಸಿದ ಅನೇಕ ಸಂಗತಿಗಳು ಭಾಷಾಶಿಕ್ಷಣ, ವಯಸ್ಕರ ಸಾಕ್ಷರತಾ ಕಾರ್ಯಕ್ರಮ, ಹಾಗೂ ಸಮೂಹ ಸಂವಹನ ಮಾಧ್ಯಮದ ಆಯ್ಕೆಯಂತಹ ಪ್ರಾಯೋಗಿಕ ವಿಷಯಗಳೊಂದಿಗೆ ವ್ಯವಸ್ಥಿತವಾದ ನೇರ ಸಂಬಂಧವನ್ನು ಹೊಂದಿವೆ. ಭಾಷಾ ಹಿನ್ನೆಲೆಯಲ್ಲಿಯ ವ್ಯತ್ಯಾಸಗಳು ನಿರ್ದಿಷ್ಟವಾಗಿ ಕೆಳಜಾತಿ ಅಥವಾ ಕೆಳವರ್ಗಗಳ ಮಕ್ಕಳಿಗಿರುವ ಶೈಕ್ಷಣಿಕ ತೊಂದರೆಗಳಿಂದಾಗಿ ಉಂಟಾಗುತ್ತವೆಂಬುದನ್ನು ಗಮನಿಸಲಾಗಿದೆ. ಅರ್ಥಪೂರ್ಣ ಪರಿಹಾರಗಳನ್ನು ಸೂಚಿಸುವ ಹಾಗಿದ್ದರೆ ಇಲ್ಲಿ ಹೇಳಲಾದ ಅಂಶಗಳನ್ನು ಮತ್ತು ಅವುಗಳ ಪ್ರಮಾಣಗಳನ್ನು ಗುರುತಿಸುವ ಕಾರ್ಯ ಅಗತ್ಯವೆನಿಸುತ್ತದೆ. ಮನೆಭಾಷೆ (ಮನೆಯ ಉಪಭಾಷೆ) ಯಲ್ಲಿನ ವ್ಯತ್ಯಾಸಗಳು ಇದರ ಒಂದು ಭಾಗವೆಂಬುದು ಶತಸ್ಸಿದ್ಧ. ಭಾಷಾ ಬಳಕೆಯ ಕಡೆಗಿನ – ವಿಶೇಷವಾಗಿ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ “ಸರಿಯಾದ” ಭಾಷೆಯನ್ನು ಬಳಸುವ ಅವಶ್ಯಕತೆಯು ಕಡೆಗಿನ ಪ್ರವೃತ್ತಿಯು ಕೆಲವು ಸಮಸ್ಯೆಗಳನ್ನು ಸೃಷ್ಟಿಸಬಹುದಾದ ಸಾಧ್ಯತೆಯಿದೆ. ಅಷ್ಟು ಮಾತ್ರವಲ್ಲದೆ ಪ್ರವೃತ್ತಿಗಳು ಮತ್ತು ನಿರೀಕ್ಷೆಗಳು ಶಿಕ್ಷಕರ ಭಾಗವಾಗಿ ಪ್ರವೇಶಿಸಬಹುದು.

“ಸೇವಕ ವರ್ಗ”ದ (ಹರಿಜನ) ಮಕ್ಕಳು ಮೊದಲ ಬಾರಿಗೆ ಶಾಲೆಗೆ ಬಂದಾಗ ಅತ್ಯಂತ ಸರಳವಾದ ಕೆಲವು ಶಬ್ದಗಳೂ ಅವರಿಗೆ ಗೊತ್ತಿರಲಿಲ್ಲವೆಂದು ಮದರಾಸು ನಗರದ ಶಾಲಾ ಶಿಕ್ಷಕರು ಹೇಳುತ್ತಿದ್ದರು. ಅಧ್ಯಾಪಕರ ಮಾತಿನಲ್ಲೇ ಹೇಳುವುದಾದರೆ ಅವರಿಗೆ. ‘ಉಕ್ಕಾರ್’ (ಕುಳಿತು ಕೊ) ಎಂಬ ಪದದ ಅರ್ಥವೇ ಗೊತ್ತಿರಲಿಲ್ಲ. ನಾವವರಿಗೆ, ಕುಂಡು” (ಚಕ್ಕಳ ಬಕ್ಕಳ ಕುಳಿತುಕೊ) ಎಂದು ಹೇಳಬೇಕಾಗುತ್ತಿತ್ತು. ದಕ್ಷಿಣ ಏಷಿಯಾದ ಎಲ್ಲೆಡೆ ಇಂತಹ ವ್ಯತ್ಯಾಸಗಳು ಕಂಡುಬರುತ್ತವೆ. ಅಧ್ಯಾಪಕರು ಇಂತಹ ಮಕ್ಕಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ಒಪ್ಪಿಕೊಂಡು, ಅವರ ಬಗ್ಗೆ ವಿಶೇಷ ಗಮನ ಹರಿಸಲು ಸಿದ್ಧರಿದ್ದರೂ ಅಂತಹ ಕೆಲಸಗಳಿಗೆ ಅಗತ್ಯವೆನಿಸುವ ತರಬೇತಿಯನ್ನು ಅವರು ಪಡೆದಿರುತ್ತಿರಲಿಲ್ಲ. ಈ ಮಕ್ಕಳ ಉಪಭಾಷೆ ಮತ್ತು ಶಾಲೆಗಳಲ್ಲಿ ಕಲಿಸಲಾಗುವ ಭಾಷೆಗಳೊಳಗಿನ ವ್ಯತ್ಯಾಸಗಳ ಬಗೆಗೆ ವ್ಯವಸ್ಥಿತವಾದ ಅಧ್ಯಯನಗಳು ನಡೆದಿಲ್ಲ. ಅದೇ ರೀತಿ ಇಂತಹ ವ್ಯತ್ಯಾಸಗಳ ಬಗೆಗೆ ವ್ಯವಹರಿಸಲು ಬೇಕಾದ ತರಬೇತಿಯನ್ನೂ ಶಿಕ್ಷಕರಿಗೆ ನೀಡಲಾಗಿಲ್ಲ. ಈ ವ್ಯತ್ಯಾಸಗಳ ಮೂಲಭೂತ ಅಧ್ಯಯನವು ಪ್ರಾಯೋಗಿಕ ಮಹತ್ವವನ್ನು ಹೊಂದಿದೆ.

ಭಾಷಾ ಸಾಮರ್ಥ್ಯವನ್ನು ಸಂಪಾದಿಸಿಕೊಳ್ಳುವ ಪ್ರಶ್ನೆಗೆ ಸಂಬಂಧಿಸಿದ ಹೆಚ್ಚುವರಿ ಅಂಶವೊಂದನ್ನು ಮೇಲೆ ಪ್ರಸ್ತಾಪಿಸಲಾಗಿದೆ. ಔಪಚಾರಿಕ ತರಬೇತಿ ಮತ್ತು ಇತರ ಪ್ರದರ್ಶನಾವಕಾಶಗಳ ಸಾಂಬಂಧಿಕ ಮಹತ್ವಗಳ ತಿಳುವಳಿಕೆಯು ಪ್ರಾಥಮಿಕ ಭಾಷಾ ಶಿಕ್ಷಣವನ್ನು ಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಬಹುದು. ಕೆಲವು ಸಂಶೋಧಕರು ಗಮನಿಸಿದಂತೆ ಭಾಷಾ ಸಾಮರ್ಥ್ಯವನ್ನು ಸಾಗಿಸುವಲ್ಲಿ ಅನೌಪಚಾರಿಕ ಪ್ರದರ್ಶನಾವಕಾಶಗಳ ಪಾತ್ರವೂ ಮಹತ್ತರವಾದುದು. ಹಾಗಾದಲ್ಲಿ ಶಿಕ್ಷಣ ಪ್ರಕ್ರಿಯೆಯೊಳಗಡೆ ಸಮಾನ ಗುಂಪುಗಳೊಳಗಿನ ಪರಸ್ಪರ ಅನೌಪಚಾರಿಕ ಸಂಬಂಧಗಳನ್ನು ಪರಿಚಯಿಸಲು ಬೇಕಾದ ವಿಧಾನಗಳನ್ನು ಅಧಿಕ ಪ್ರಮಾಣದಲ್ಲಿ ಅಳವಡಿಸಿದರೆ ಅದೊಂದು ಮಾಡಿನೋಡಲೇಬೇಕಾದ (ಮೌಲಿಕ) ಪ್ರಯೋಗವನಿಸಬಹುದು.

ಶಾಲೆಗಳಲ್ಲಿ ಕಲಿಸಲಾಗುವ ಪ್ರಾದೇಶಕಿ ಭಾಷೆಯ ಶಿಷ್ಟ ರೂಪ ಮತ್ತು ದೈನಂದಿನ ವ್ಯಾವಹಾರಿಕ ಪ್ರಭೇದಗಳೊಳಗಿನ ಕಂದಕವೇ ಭಾಷೆಯನ್ನು ಕಲಿಯುವಲ್ಲಿ ವಿದ್ಯಾರ್ಥಿಗಳೆದುರಿಸುವ ಕಷ್ಟ – ಸಮಸ್ಯೆಗಳಿಗೆ ಕಾರಣವೆಂದು ಆಗಾಗ ದೂಷಿಸಲಾಗುತ್ತದೆ. ಈ ಶಿಷ್ಟ ರೂಪಗಳು ಸಾಮಾನ್ಯವಾಗಿ ಹೆಚ್ಚು ಸಂಸ್ಕೃತೀಕರಣಗೊಂಡಿರುತ್ತವೆ. (ಅಥವಾ ತಮಿಳಿನಂತೆ ಅತಿ ಶಾಸ್ತ್ರಬದ್ಧವಾಗಿರುತ್ತವೆ.) ಅವುಗಳು ವಿವಿಧ ಸಾಂಪ್ರದಾಯಿಕ ವಾದಗಳ ಬೆಂಬಲವನ್ನು ಪಡೆದಿರುತ್ತವೆ. ಅದೇ ರೀತಿ ಪ್ರಾದೇಶಿಕ ಮತ್ತು ಸಾಮಾಜಿಕ ವ್ಯತ್ಯಾಸಗಳಿಂದಾಗಿ ಸಾಮಾನ್ಯ ಆಡುಭಾಷೆಗೆ ಹತ್ತಿರವಾಗಿರುವ ಯಾವುದೇ ಭಾಷಾ ಪ್ರಭೇದವೂ ಇಡಿಯ ಭಾಷಾಪ್ರದೇಶದಲ್ಲಿ ಚಲಾವಣೆಯಲ್ಲಿರುವುದಿಲ್ಲ ಎಂಬುದಾಗಿಯೂ ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಮೇಲೆ ಪ್ರಸ್ತಾವಿಸಿದಂತೆ ಆಂಗ್ಲೀಕರಣದಂತಹ ನಗರ ಭಾಷೆಯ ಲಕ್ಷಣಗಳನ್ನು ಅಳವಡಿಸಿಕೊಳ್ಳುವ ಪ್ರವೃತ್ತಿಯ ಕಾರಣದಿಂದಾಗಿ ಈ ಭಾವನೆಯು ವಾಸ್ತವವಾಗಿ ನಿಜವೆನ್ನಲಾಗದು. ಹಾಗಾಗಿ ಒಂದು ಶಿಷ್ಟ ಗ್ರಾಮ್ಯ ರೂಪವು ಹಲವು ಭಾಷಾ ಪ್ರದೇಶಗಳಲ್ಲಿ ಮಧ್ಯಮ ವರ್ಗದ ನಗರವಾಸಿಗಳ ನಡುವೆ ಸ್ವಾಭಾವಿಕವಾಗಿ ವಿಕಸಿಸಬಹುದಾಗಿದೆ. ಇದು ಇಡಿಯ ಪ್ರದೇಶಕ್ಕೆ ಅನ್ವಯವಾಗಿ ಕಾರ್ಯಪ್ರವೃತ್ತವಾಗುತ್ತದೆ. ಈ ರೀತಿಯ ಶಿಷ್ಟ ರೂಪಗಳು ಯಾವ ಪ್ರಮಾಣದಲ್ಲಿ ತಲೆದೋರುತ್ತವೆ? ಮತ್ತು ಅವುಗಳ ಭಾಷಾ ವೈಜ್ಞಾನಿಕ ಲಕ್ಷಣಗಳೇನು? ಎಂಬ ಬಗ್ಗೆ ಮೌಲಿಕ ಅಧ್ಯಯನ ನಡೆಯಬೇಕಾಗಿದೆ.

ಅನುಬಂಧ

ಇಲ್ಲಿ ಕೊಡಲಾದ ಉಲ್ಲೇಖಗಳು ಮೇಲಿನ ನನ್ನ ಪ್ರಬಂಧವನ್ನು ಸಲ್ಲಿಸುವ ಮುನ್ನ ಪರಿಶೀಲಿಸಲಾಗದ ಮಾಹಿತಿಗಳಾಗಿವೆ. ಇವುಗಳನ್ನು ೧೯೭೧ರಲ್ಲಿ ತಿರುವನಂತಪುರದಲ್ಲಿ ನಡೆದ ದ್ರಾವಿಡ ಭಾಷಾ ವಿ‌ಜ್ಞಾನ ಸಮ್ಮೇಳನದ ನಡಾವಳಿಗಳಿಂದ ಮತ್ತು ೧೯೭೨ರ ಜನವರಿಯಲ್ಲಿ ಪ್ರಕಟಣೆಯನ್ನು ಪ್ರಾರಂಭಿಸಿದ “ಇಂಟರ್ ನ್ಯಾಷನಲ್ ಜರ್ನಲ್ ಆಫ್ ಡ್ರವೀಡಿಯನ್ ಲಿಂಗ್ವಿಸ್ಟಿಕ್ಸ್”ನ ಮೊದಲೆರಡು ಸಂಚಿಕೆಗಳಿಂದ ಎತ್ತಿಕೊಳ್ಳಲಾಗಿದೆ.

ಬಿ.ಗೋಪಿನಾಥನ್ ನಾಯರ್ ಅವರು ಕೇರಳದ ಉಪಭಾಷಾ ಸರ್ವೇಕ್ಷಣೆಯ ಕೆಲಸಗಳನ್ನಾಧರಿಸಿ, ಅಲ್ಲಿಯ ಸಾಮಾಜಿಕ ಉಪಭಾಷೆಗಳ ಅಧ್ಯಯನ ನಡೆಸಿದ್ದಾರೆ. ಇದು ಧ್ವನಿಮಾ, ಆಕೃತಿಮಾ ಹಾಗೂ ಶಬ್ದವ್ಯತ್ಯಾಸಗಳಿಗೆ ಸಂಬಂಧಿಸಿದ ಪ್ರಾಥಮಿಕ ಚರ್ಚೆಗಳನ್ನಷ್ಟೆ ಹೊಂದಿದೆಯಾದರೂ ತುಂಬಾ ಪ್ರಯೋಜನಕಾರಿಯಾಗಿದೆ. ಇಲ್ಲಿ ಗ್ರಾಂಥಿಕ (ಉಪ) ಭಾಷೆ, ಬ್ರಾಹ್ಮಣ (ಉಪ) ಭಾಷೆ, ಈಳವ (ಉಪ) ಭಾಷೆ, ಮತ್ತು ಮುಸ್ಲಿಂ (ಉಪ) ಭಾಷೆ ಎಂಬ ಭಾಷಾ ಪ್ರಬೇಧಗಳನ್ನು ತೌಲನಿಕವಾಗಿ ಪರಿಭಾವಿಸಲಾಗಿದೆ. ಕೊನೆಯಲ್ಲಿ ಹೆಸರಿಸಿದ ಉಪಭಾಷೆಯು ” ಹೆಚ್ಚು ದಾರಿ ತಪ್ಪಿಹೋಗಿದೆ” ಎಂಬ ನಿರ್ಣಯ ಪ್ರಸ್ತುತ ಪ್ರಬಂಧದ್ದಾಗಿದೆ. ಇಲ್ಲಿ ನೀಡಲಾದ ಸಾಮಗ್ರಿಗಳು ತುಂಬ ಕುತೂಹಲಕಾರಿ (ಆಸಕ್ತಿದಾಯಕ) ಯಾಗಿದ್ದರೂ ಅಧ್ಯಯನಕ್ಕೆ ಬಳಸಿಕೊಳ್ಳಲಾದ ಸಮೀಪನದ ಬಗ್ಗೆ ಮಾತ್ರ ಅನೇಕ ಆಕ್ಷೇಪಗಳನ್ನು ಎತ್ತಬಹುದಾಗಿದೆ. ಹಾಗಿದ್ದರೂ ಜಾತಿಯ ಜತೆಗೆ ಇತರ ಸಾಮಾಜಿಕ ವ್ಯತ್ಯಾಸಗಳನ್ನು ನಿಯಂತ್ರಿಸುವ ಯಾವುದೇ ಪ್ರಯತ್ನಗಳು ನಡೆದ ಬಗ್ಗೆ ಇಲ್ಲಿ ಸಾಕ್ಷ್ಯಾಧಾರಗಳಿಲ್ಲ. ಜಾತಿ (ಉಪ) ಭಾಷೆಗಳು ಅಸ್ತಿತ್ವದಲ್ಲಿವೆಯೆಂಬ ಗ್ರಹಿಕೆಯಿಂದ ಪ್ರಸ್ತುತ ಅಧ್ಯಯನ ಮೊದಲುಗೊಂಡಿದೆ ಎಂಬ ಸಂದೇಹ ಕೊನೆಗೂ ಇಲ್ಲಿ ಹಾಗೆಯೇ ಉಳಿದುಬಿಡುತ್ತದೆ. ಅದಕ್ಕನುಗುಣವಾಗಿ ಆಯಾ ಜಾತಿಭಾಷೆಗಳನ್ನು ಪ್ರತಿನಿಧಿಗಳೆಂಬಂತೆ ಪ್ರತಿಯೊಂದು ಜಾತಿಗೆ ಸೇರಿದ ವ್ಯಕ್ತಿಗಳ ಭಾಷೆಗಳನ್ನು ಇಲ್ಲಿ ಎತ್ತಿಕೊಳ್ಳಲಾಗಿದೆ. ಒಂದೇ ತೆರನಾದ (ಸಮಾನ) ಗುಂಪುಗಳೆನಿಸಿಕೊಳ್ಳುವುದಕ್ಕೆ ಬಹಳ ದೂರದಲ್ಲಿರುವ ಹರಿಜನರು ಮತ್ತು ಕ್ರೈಸ್ತರ ಸಂದರ್ಭಗಳಲ್ಲಿ ಇಡೀ ಗುಂಪಿಗೆ ಏಕಮಾತ್ರ ಉಪಭಾಷೆಯೆಂಬ ಗ್ರಹಿಕೆಯನ್ನು ಖಂಡಿತವಾಗಿಯೂ ಒಪ್ಪಲಾಗದು. ಇದಲ್ಲದೆ ಇಲ್ಲಿ ನೀಡಲಾದ ಪುರಾವೆಯು ಬ್ರಾಹ್ಮಣ ಮತ್ತು ನಾಯರರಂತಹ ಮೇಲ್ಜಾತಿ ಭಾಷೆಯ ಮಾದರಿಗಳಾಗಿವೆ. ಅವು ಸುಶಿಕ್ಷಿತ ಭಾಷೆಯ ಔಪಚಾರಿಕ ಶೈಲಿಗಷ್ಟೇ ಸೀಮಿತವಾಗಿರುತ್ತವೆ. ಹಾಗಾಗಿ ಈ ಉಪಭಾಷೆಗಳ ಮತ್ತು ಇತರ ರೂಪಗಳೊಳಗಿನ ವ್ಯತ್ಯಾಸಗಳನ್ನು ಉತ್ಪ್ರೇಕ್ಷೆ ಮಾಡಲಾಗಿದೆ.

ಮಲಬಾರಿನಿಂದ ದಕ್ಷಿಣ ಕನ್ನಡಕ್ಕೆ ವಲಸೆ ಬಂದ ಮುಸ್ಲಿಮರ ಬಗ್ಗೆ ಸುಶೀಲಾ ಪಿ. ಉಪಾಧ್ಯಾಯರು ನಡೆಸಿದ ಅಧ್ಯಯನವು ತುಂಬ ಅಗತ್ಯವಾದ ಮಾಹಿತಿಗಳನ್ನೊದಗಿಸುತ್ತದೆ. ಈ ಪ್ರದೇಶದ ಮುಸ್ಲಿಮರ ಭಾಷೆಯ ಮೇಲೆ ತುಳುವಿನ ಪ್ರಭಾವವಾಗಿರುವುದನ್ನು ಅವರು ವಿಶೇಷವಾಗಿ ಗುರುತಿಸುತ್ತಾರೆ. ಎಂ. ಷಣ್ಮುಖಂ ಪಿಳ್ಳೈ ಯವರು ತಮಿಳು ಸಂಬೋಧನಾ ರೂಪಗಳ ಕುರಿತು ಸಿದ್ಧಪಡಿಸಿರುವ ಪ್ರಬಂಧವು ಸಂಬೋಧನಾ ಪದಗಳ ಬಳಕೆ, ಇತರ ವ್ಯಕ್ತಿ ವಿಷಯಕ ಪ್ರವೃತ್ತಿ ರೂಪಗಳೊಂದಿಗೆ ಅವುಗಳ ಸಂಬಂಧ, ಹಾಗೂ ನಿಷಿದ್ಧ ರೂಪ (ಉದಾ: ಮಹಿಳೆಯ ಗಂಡನ ಹೆಸರು)ಗಳ ಬದಲಿಗೆ ಬಳಸುವ ಪರ್ಯಾಯರೂಪಗಳು ಇತ್ಯಾದಿಗಳ ಬಗೆಗೆ ಮೌಲಿಕವೂ, ಕುತೂಹಲಕಾರವೂ ಆದ ಹೊಸ ಮಾಹಿತಿಗಳನ್ನೊದಗಿಸುತ್ತದೆ. ಇಲ್ಲಿ ಪ್ರಸ್ತುತವೆನಿಸಬಹುದಾದ ಇತರ ಕೃತಿಗಳಲ್ಲಿ ತಮಿಳು, ಮಲಯಾಳಂ ದ್ವಿಭಾಷಿಕತೆಯನ್ನು ಕುರಿತ ಆರ್. ಸೊಲಮನ್ ಅವರ ಅಧ್ಯಯನ, ಭಾಷಾ ಸಂಪರ್ಕದ ಬಗೆಗಿನ ಟಿ.ಎಲಿಳರೆಂಕೋವ ಅವರ ಅಧ್ಯಯನ ಹಾಗೂ ದ್ರಾವಿಡದ ಪ್ರಾದೇಶಿಕ ಉಪಭಾಷೆಗಳ ಕುರಿತು ನಡೆದ ಅಸಂಖ್ಯ ಅಧ್ಯಯನಗಳು (ವಿಶೇಷವಾಗಿ ಸಿ. ಇಸಾಕ್ಸ್, ಯು.ಪಿ. ಉಪಾಧ್ಯಾಯ, ಪಿ.ಎಸ್. ನಾಯರ್, ಎಂ.ವಿ. ಶ್ರೀಧರ್, ಎಲ್. ಕೋಶಿ, ಕೆ.ಆರ್. ಸಾವಿತ್ರಿ, ಜೆ. ನೀತಿವನನ್ ಮತ್ತು ಆರ್.ವಿ.ಕೆ. ತಂಬುರಾನ್ ಮೊದಲಾದವರ ಪ್ರಬಂಧಗಳು) ಸೇರುತ್ತವೆ.*

ಇಂಗ್ಲಿಷ್ ಮೂಲ : ಫ್ರಾಂಕ್ಲಿನ್ ಸಿ ಸೌತ್ವರ್ತ್
ಅನುವಾದ : ಡಾ. . ಸುಬ್ಬಣ್ಣ ರೈ[1] ಇಲ್ಲಿ ನಾನು ಎಂದರೆ ಮೂಲ ಲೇಖಕರು.

[2] ಇಲ್ಲಿ ನನ್ನ ಎಂದರೆ ಮೂಲ ಲೇಖಕರ ಎಂದರ್ಥ.

* ಇದು ಬರ್ಟನ್ ಸ್ಟೆಯಿನ್ ಸಂಪಾದಿಸಿರುವ ‘ಎಸ್ಸೇಸ್ ಆನ್ ಸೌತ್ ಇಂಡಿಯಾ’ ಎಂಬ ಸಂಕಲನದಿಂದ ಆಯ್ದ ಲೇಖನವಾಗಿದೆ. ಪ್ರಸ್ತುತ ಕೃತಿಯು ೧೯೭೫ರಲ್ಲಿ ಹವಾಯಿ ವಿಶ್ವವಿದ್ಯಾಲಯ ದಿಂದ ಪ್ರಕಟವಾಯಿತು. ಹಾಗಾಗಿ ಈ ಲೇಖನವು ಸುಮಾರು ೨೫ ವರ್ಷಗಳಷ್ಟು ಹಳೆಯದೆನ್ನಬಹುದು. ಆನಂತರದ ೨೫ ವರ್ಷಗಳ ಅವಧಿಯಲ್ಲಿ ದಕ್ಷಿಣ ಭಾರತಕ್ಕೆ ಸಂಬಂಧಪಟ್ಟಂತೆ ಸಮಾಜೋಭಾಷಿಕ ಅಧ್ಯಯನವು ವಿಪುಲವಾಗಿ ನಡೆದಿದೆಯಾದರೂ, ತತ್ಸಂಬಂಧವಾಗಿ ಕನ್ನಡದಲ್ಲಿ ಬಂದ ಅಧ್ಯಯನ ಕೃತಿಗಳು ಕಡಿಮೆಯೆನ್ನಬಹುದು. ಎಪ್ಪತ್ತರ ದಶಕದಲ್ಲಿ, ಆಗಿನ್ನೂ ಶೈಶವಾವಸ್ಥೆಯಲ್ಲಿದ್ದ ಈ ಭಾಗದ ಸಮಾಜೋಭಾಷಿಕ ಅಧ್ಯಯನದ ಸ್ಥಿತಿಗತಿಯನ್ನರಿಯಲು ಪ್ರಸ್ತುತ ಲೇಖನವು ತುಂಬಾ ಸಹಕಾರಿಯಾಗಿದೆ. ದಕ್ಷಿಣ ಏಷಿಯಾ – ದಕ್ಷಿಣ ಭಾರತ – ದ್ರಾವಿಡ ಎಂಬೀ ಪರಿಭಾಷೆ ಪರಿಕಲ್ಪನೆಗಳ ದೃಷ್ಟಿಯಿಂದಲೂ ಈ ಪ್ರಬಂಧವು ನಮ್ಮ ಗಮನವನ್ನು ಸೆಳೆಯುತ್ತದೆ. ಸಮಾಜೋಭಾಷಿಕ ಅಧ್ಯಯನದ ದೃಷ್ಟಿಯಿಂದ ಮಹಾರಾಷ್ಟ್ರವನ್ನೂ ದಕ್ಷಿಣ ಭಾರತದ ವ್ಯಾಪ್ತಿಯೊಳಗಡೆ ಸೇರಿಸಬಹುದಾದ ಸಾಧ್ಯತೆಯೂ ಇಲ್ಲಿ ಪ್ರಸ್ತಾಪಿತವಾಗಿದೆ.

ಪ್ರಬಂಧದ ಶೀರ್ಷಿಕೆಯೇ ಹೇಳುವಂತೆ ಇದು ದಕ್ಷಿಣ ಭಾರತದಲ್ಲಿ ಆ ಕಾಲಕ್ಕೆ ನಡೆದ ನಡೆಯುತ್ತಿದ್ದ ಸಮಾಜೋಭಾಷಿಕ ಅಧ್ಯಯನಗಳ ಸಮೀಕ್ಷೆ. ಹಾಗೆಂದು ಇದು ಬರಿಯ ಸಮೀಕ್ಷೆ ಮಾತ್ರವಾಗಿರದೆ, ಅಲ್ಲಲ್ಲಿ ಸಮೀಕ್ಷಕರ ವಿಮರ್ಶಾತ್ಮಕ ಟಿಪ್ಪಣಿಗಳನ್ನೂ ಒಳಗೊಂಡಿದೆ. ಪ್ರಾದೇಶಿಕ ಉಪಭಾಷೆಗಳ ಅಧ್ಯಯನ, ಸಾಮಾಜಿಕ ಉಪಭಾಷೆಗಳ ಅಧ್ಯಯನ, ಕ್ರಿಯಾತ್ಮಕ ಭಾಷಾ ವ್ಯತ್ಯಾಸಗಳ ಅಧ್ಯಯನ, ದ್ವಿಸ್ತರತೆ, ದ್ವಿಭಾಷಿಕತೆ, ಬಹುಭಾಷಿಕತೆಗಳ ಅಧ್ಯಯನ, ಭಾಷೆಯ ಚಾರಿತ್ರಿಕ ಅಧ್ಯಯನ, ಸಂವಹಹದ ಮಾನವಕಾಲ ಶಾಸ್ತ್ರೀಯ ಅಧ್ಯಯನ ಇತ್ಯಾದಿ ಅಂಶಗಳನ್ನು ಇಲ್ಲಿ ಸಮಾಜೋಭಾಷಿಕ ಅಧ್ಯಯನದೊಗಳಗಡೆ ಸಮಾವೇಶಗೊಳಿಸಲಾಗಿದೆ. ದ್ರಾವಿಡ ಭಾಷೆಗಳಾದ ತಮಿಳು, ಕನ್ನಡ ಮಲಯಾಳಂ, ತೆಲುಗು, ತುಳುಗಳ ಜತೆಗೆ ದಕ್ಷಿಣ ಭಾರತದ ಭಾಷೆಯಾದ ಮರಾಠಿಯ ಬಗೆಗೆ ನಡೆದ ಅಧ್ಯಯನವನ್ನೂ ಇಲ್ಲಿ ಅವಲೋಕಿಸಲಾಗಿದೆ. ಸಾಂದರ್ಭಿಕವಾಗಿ ಕೊಂಕಣಿ, ಬೆಂಗಾಲಿ, ಸೌರಾಷ್ಟ್ರಿ, ಉರ್ದು, ಹಿಂದಿ ಭಾಷೆಗಳ ಕುರಿತೂ ಪ್ರಸ್ತಾಪಿಸಲಾಗಿದೆ. ದ್ರಾವಿಡ ಭಾಷೆಗಳ ಮೇಲಾದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಪ್ರಭಾವವನ್ನು ಗುರುತಿಸಲಾಗಿದೆ.

ಈ ಎಲ್ಲಾ ಗಮನಾರ್ಹ ಆಂಶಗಳ ನಡುವೆಯೂ ಅದರದ್ದೇ ಆದ ಮಿತಿಗಳೂ ಪ್ರಸ್ತುತ ಪಬಂಧದಲ್ಲಿವೆ. ಅವು ಸಂಬಂಧಪಟ್ಟ ಭಾಷಾಪ್ರಯೋಗ ಉದಾಹರಣೆಗಳ ಕೊರತೆಯಿರಬಹುದು. ಅಥವಾ ಮಾಹಿತಿಗಳಲ್ಲಿನ ದೋಷವಿರುಬಹುದು. ಅಂಥವುಗಳಲ್ಲಿ ಕೆಲವನ್ನು ಅಲ್ಲಲ್ಲಿ ಅಡಿಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ವಿದೇಶೀ ವಿದ್ವಾಂಸರೊಬ್ಬರು ಭಾರತೀಯ ಭಾಷೆ – ಸಂಸ್ಕೃತಿಯನ್ನು ಅಧ್ಯಯನ ನಡೆಸುವ ಸಂದರ್ಭದಲ್ಲಿ ಇಂತಹ ಕೆಲವು ಲೋಪ ದೋಷಗಳು ಕಾಣಿಸಿಕೊಳ್ಳುವುದು ಸಹಜವೆನ್ನಬಹುದು. ಅವೇನೇ ಇದ್ದರೂ ದಕ್ಷಿಣ ಭಾರತದ ಅಧ್ಯಯನಕ್ಕೆ ಸಂಬಂಧಿಸಿದ ಪ್ರಾರಂಭಿಕ ಬರವಣಿಗೆಗಳಲ್ಲೊಂದಾಗಿ ಇದು ಮಹತ್ವವನ್ನು ಪಡೆದುಕೊಳ್ಳುತ್ತದೆ.

– ಅನುವಾದಕ