ಭಾಷಾವಿಜ್ಞಾನದ ಆದುನಿಕ ಕ್ಷೇತ್ರವು ತನ್ನ ಪ್ರಾರಂಬಿಕ ದೆಸೆಯಿಂದಲೇ ಭಾಷೆಯ ಅಮೂರ್ತ ಸ್ವರೂಪದ ಅವಿಷ್ಕಾರದತ್ತ ಗಮನಹರಿಸಿತ್ತು. ಭಾಷಿಕ ವ್ಯವಸ್ಥೆಯನ್ನು ಭಾಷೆಯೊಂದರ ಎಲ್ಲಾ ಭಾಷಿಕರು ಹಂಚಿಕೊಳ್ಳುತ್ತಾರೆಂಬ ಭಾವನೆಯೇ ಇಲ್ಲಿಯ ಅಮೂರ್ತ ಸ್ವರೂಪದ ಕಲ್ಪನೆಯಾಗಿದೆ. ಶುದ್ಧ ಭಾಷಾವಿಜ್ಞಾನವೆಂಬುದು ನಿರ್ದಿಷ್ಟ ಭಾಷೆಯಲ್ಲಿ ಕಾರ್ಯಪ್ರವೃತ್ತವಾಗಿರುವ ನಿರ್ದಿಷ್ಟ ನಿಯಮಗಳು, ನಿಯಮ ಪಾಲನೆಯನ್ನು ನಿಯಂತ್ರಿಸುವ ಸಾಮಾನ್ಯ ತತ್ವಗಳು, ಮತ್ತು ಇಂತಹ ನಿಯಮಗಳಲ್ಲಾದ ಬದಲಾವಣೆಗಳ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ತಾರ್ಕಿಕ,ಮನಃಶಾಸ್ತ್ರೀಯ, ಹಾಗೂ ಗಣಿತಶಾಸ್ತ್ರೀಯದಂತಹ ಹಲವು ಮಾನವಿಕ ವ್ಯವಹಾರಗಳನ್ನು ಜತೆಗೂಡಿಸಿ ಭಾಷಾಶಾಸ್ತ್ರಜ್ಞರು ಇತ್ತೀಚಿನ ವರ್ಷಗಳಲ್ಲಿ ಒಂದು ಬೌದ್ಧಿಕ ಚಟುವಟಿಕೆಯಾಗಿ ಭಾಷೆಯ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಉಚ್ಚಾರಗಳನ್ನು ಹೊರಡಿಸುವ ಭಾಷಿಕರು ಅಸ್ತಿತ್ವದಲ್ಲಿರುವರೋ ಎಂಬ ವಾಸ್ತವಾಂಶದ ಕಡೆಗೆ ಗಮನಕೊಡದೆ ಭಾಷೆಯ ಅಂತಸ್ಥ ಉಚ್ಚಾರಣೆಗಳನ್ನು ಇವರು ತಮ್ಮ ಅಧ್ಯಯನ ಕ್ಷೇತ್ರವಾಗಿ ಪರಿಗಣಿಸಿದ್ದಾರೆ. ಭಾಷೆಯು ಬಳಕೆಯಾಗುವ ಸಾಮಾಜಿಕ ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳದೆ, ಲಭ್ಯವಿರುವ ಭಾಷೆಯು ಶುದ್ಧವಾಗಿದೆಯೋ? ವ್ಯಾಕರಣ ಬದ್ಧವಾಗಿದೆಯೋ? ಇಲ್ಲವೋ? ಎಂಬಿತ್ಯಾದಿ ಅಂಶಗಳ ಕಡೆಗೆ ಗಮನ ಹರಿಸಿದ ಭಾಷೆಯ ಬಗೆಗಿನ ಗ್ರಹಿಕೆಗಳು ತತ್ಸಂಬಂಧವಾದ ಚರ್ಚೆಗಳು ಪ್ರಾರಂಭವಾದಂದಿನಿಂದಲೇ ನಮ್ಮಲ್ಲಿವೆ. ಭಾವನಾತ್ಮಕ ಇಲ್ಲವೇ ಸಾಮಾಜಿಕ ಅಂಶಗಳಿಂದ ಬಾಧಿತವಾಗದೆ, ಯಾವುದೇ ಉಚ್ಚಾರವನ್ನು ಹೊರಡಿಸಬಲ್ಲ, ವ್ಯಾಖ್ಯಾನಿಸಬಲ್ಲ ಮತ್ತು ಶುದ್ಧತೆಯನ್ನು ನಿರ್ಣಯಿಸಬಲ್ಲ ‘ಆದರ್ಶ ಭಾಷಿಕ ಕೇಳುಗ’ ನೊಬ್ಬನ ಅಸ್ತಿತ್ವವನ್ನು ಭಾಷಾವಿಜ್ಞಾನಿಗಳು ಸೃಷ್ಟಿಸಿಕೊಂಡಂತಿದೆ. ಭಾಷಾವಿಜ್ಞಾನ ಕ್ಷೇತ್ರದ ತೀರಾ ಇತ್ತೀಚಿನ ಅಧ್ಯಯನಗಳು ಕೂಡಾ ಇತರ ಭಾಷಾಶಾಸ್ತ್ರಜ್ಞರು ಈಗಾಗಲೇ ಒದಗಿಸಿಕೊಟ್ಟಿರುವ ಭಾಷಿಕ ಸಾಮಗ್ರಿಗಳನ್ನು ಬಳಸಿಕೊಂಡು, ಸಾಮಾಜಿಕ ಸಂದರ್ಭದ ಅರಿವು ಅನ್ವಯವಿಲ್ಲದೆ ನಡೆಸಿದ ಅಧ್ಯಯನಗಳಾಗಿವೆ. ಸಾಮಾನ್ಯ ಮಾತಿ(ಭಾಷೆ)ನಲ್ಲಿ ಸಂಭವಿಸಬಹುದಾದ ಮಧ್ಯ ಪ್ರವೇಶಿಸುವಿಕೆ, ತಪ್ಪಾಗಿ ಕೇಳಿಸುವಿಕೆ, ತಪ್ಪು ಪ್ರಾರಂಭ ಹಾಗೂ ಇನ್ನಿತರ ಬಾಹ್ಯ ಅಂಶಗಳ ಪ್ರಭಾವ (ಪರಿಣಾಮ) ವನ್ನು ತಗ್ಗಿಸಲು ಈ ಸಾಮಾನ್ಯ ಸಾಮಾಜಿಕ ಸಂದರ್ಭವು ಮಾತಿನ ಸನ್ನಿವೇಶಗಳನ್ನು ಜತೆಗೂಡಿಸಿಕೊಂಡಿರುತ್ತದೆ. ಇಂತಹ ಸೀಮಿತ ಮಾಹಿತಿ ಅಂಕಿ – ಅಂಶಗಳು ನಿರ್ದಿಷ್ಟ ಔಪಚಾರಿಕ ಸ್ವರೂಪಗಳನ್ನು (ಘಟಕಗಳನ್ನು) ಪ್ರತ್ಯೇಕಿಸುವ ನಿಟ್ಟಿನಲ್ಲಿ ಪ್ರಯೋಜನಕಾರಿಯೆನಿಸಿದರೂ ಸಹಜ ಭಾಷೆಯಲ್ಲಿ ವಾಸ್ತವವಾಗಿ ಗಮನಿಸಬಹುದಾದುದಕ್ಕಿಂತಲೂ ಮಿಗಿಲಾದ ಏಕರೂಪತೆಯನ್ನು ಸೃಷ್ಟಿಸಿಕೊಳ್ಳುವತ್ತ ಭಾಷಾಶಾಸ್ತ್ರಜ್ಞನನ್ನು ಕೊಂಡೊಯ್ಯುತ್ತದೆ.

‘ಸಾಮಾಜಿಕ ಭಾಷಾವಿಜ್ಞಾನ’ವೆಂಬ ಪರಿಭಾಷೆಯು ಭಾಷಾ ಪ್ರವೃತ್ತಿ (ನಡವಳಿಕೆಯ) ಅಧ್ಯಯನಕ್ಕೆ ಸಂಬಂಧಿಸಿದ ವಿವಿಧ ಬಗೆಯ ಸಮೀಪನಗಳನ್ನು ಉಲ್ಲೇಖಿಸುತ್ತದೆ. ಇದು ಭಾಷಾವಿಜ್ಞಾನದ ವ್ಯವಹಾರಗಳನ್ನು (ಭಾಷಾವ್ಯವಸ್ಥೆಯ ಗುರುತಿಸುವಿಕೆಯನ್ನು) ಸಮಾಜ ವಿಜ್ಞಾನದ ಇತರ ವ್ಯವಹಾರಗಳ ಜತೆಗೆ ಒಂದುಗೂಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆ. ತೀರಾ ಸೀಮಿತ ಅರ್ಥದಲ್ಲಿ ಹೇಳುವುದಾದರೆ, (ಉದಾಹರಣೆಗೆ ವಿಲಿಯಂ ಲೇಬೋ ಬಳಸಿದ ಹಾಗೆ) ಈ ಪ್ರಬಂಧದ ಮೊದಲಲ್ಲಿ ಹೇಳಿದಂತೆ ಸಾಮಾಜಿಕ ಭಾಷಾ ವಿಜ್ಙಾನವು ಶುದ್ಧ ಭಾಷಾವಿಜ್ಞಾನದ ಗುರಿಗಳನ್ನು ಹಂಚಿಕೊಳ್ಳುವ ಭಾಷಾವಿಜ್ಞಾನದ ಒಂದು ಪ್ರಭೇದವಾಗಿದೆ. ಆದರೆ, ಇದು ಭಾಷಿಕ ವ್ಯವಸ್ಥೆಯ ಸ್ವಭಾವದ ಕುರಿತು ಬೇರೆಯದೇ ಆದ ಗ್ರಹಿಕೆಯನ್ನು ಹೊಂದಿದೆ. ಅದೇ ರೀತಿ ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆಗೆ ಸಂಬಂಧಿಸಿದಂತೆಯೂ ವಿಭಿನ್ನ ವೈಧಾನಿಕತೆಯನ್ನು ಬಳಸುತ್ತದೆ. ಸಾಮಾಜಿಕ ಭಾಷಾಶಾಸ್ತ್ರಜ್ಞರ ಪ್ರಕಾರ ಇಂತಹ ವ್ಯತ್ಯಾಸಗಳು ಭಾಷಾ ಪ್ರವೃತ್ತಿಯ ಆಂತರಿಕ ಅಂಶಗಳೇ ಹೊರತು ಬಾಹ್ಯ ಸಂಗತಿಗಳಲ್ಲ. ಭಾಷಿಕ ವ್ಯವಸ್ಥೆಯ ಒಂದು ಭಾಗವಾಗಿಯೇ ಇವುಗಳನ್ನು ಚರ್ಚಿಸಬೇಕಾಗುತ್ತದೆ. ಉದಾಹರಣೆಗೆ ಉತ್ತರ ತಮಿಳುನಾಡಿನ ಮಾಂಸಾಹಾರಿ ಸಮುದಾಯದ ತಮಿಳನೊಬ್ಬನಲ್ಲಿ ‘ಮಾಂಸ’ಕ್ಕೆ ಸಂವಾದಿಯಾಗಿ ಹಲವು ಪದಗಳಿರುತ್ತವೆ. ಅವನು ತನ್ನದೇ ಸಮುದಾಯದವರೊಂದಿಗೆ ವ್ಯವಹರಿಸುವಾಗ ಸಾಮಾನ್ಯ ಗ್ರಾಮ್ಯ ರೂಪವಾದ ‘ಕರಿ’ ಪದವನ್ನು ಬಳಸುತ್ತಾನೆ. ಬ್ರಾಹ್ಮಣರೊಂದಿಗೋ ಇತರ ಶಾಖಾಹಾರಿ ಸಮುದಾಯದವರೊಂದಿಗೋ ಔಪಚಾರಿಕ ಸಂದರ್ಭದಲ್ಲಿ ವ್ಯವಹರಿಸುವಾಗ ಅವನು ‘ಮಾಮಿಸಮ್’ ಪದವನ್ನು ಉಪಯೋಗಿಸುತ್ತಾನೆ. ಆತ ವಿದ್ಯಾವಂತನಾಗಿದ್ದರೆ ಕೆಲವು ಸಂದರ್ಭಗಳಲ್ಲಿ “ಎರಚ್ಚಿ” (ದಕ್ಷಿಣ ತಮಿಳುನಾಡಿನಲ್ಲಿ ಮಾಂಸಕ್ಕಿರುವ ಸಾಮಾನ್ಯ ಗ್ರಾಮ್ಯರೂಪ) ಅಥವಾ “ಪುಲ್ಲಾಲ್” (ಬರವಣಿಗೆ ಅಥವಾ ಔಪಚಾರಿಕ ತಮಿಳಿಗಷ್ಟೇ ಸೀಮಿತವಾದ ರೂಪ) ಪದಗಳನ್ನು ಬಳಸುತ್ತಾನೆ. ಎ.ಕೆ.ರಾಮಾನುಜನ್ ಅವರು ಹೇಳುವ ಪ್ರಕಾರ “ಇರ್‌ಕ್ಕ್” ಇದೆ) ಮತ್ತು “ಪೋರದ್” (ಅದು ಹೋಗುತ್ತದೆ) ರೂಪಗಳು ವಿದ್ಯಾವಂತ ಅಯ್ಯಂಗಾರ್ ಸಮುದಾಯದವರಿಗೆ ಮಾಮೂಲಿ ಗ್ರಾಮ್ಯ ಪದಗಳಿದ್ದ ಹಾಗೆ ಇದಕ್ಕೆ ತದ್ವಿರುದ್ಧವಾಗಿ ಮುದಲಿಯಾರರು “ಇರ್‌ಕ್ಕ್‌ದ್” ಮತ್‌ಉತ “ಪೋವುದ್‌” ಪದಗಳನ್ನು ಬಳಸುತ್ತಾರೆ. ಆದರೆ, ಇವೆಲ್ಲಾ ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಿಗಷ್ಟೇ ಸೀಮಿತವಾಗಿದೆ. ಔಪಚಾರಿಕ ಮಾತು ಮತ್ತು ಬರವಣಿಗೆಯಲ್ಲಿ ಎಲ್ಲಾ ತಮಿಳರೂ ಪ್ರಮಾಣ ಭಾಷಾರೂಪಗಳಾದ “ಇರುಕ್ಕಿರದ್” ಮತ್ತು “ಫೋಗಿರದ್” ಪದಗಳನ್ನೇ ಬಳಸುತ್ತಾರೆ.

ಸಾಮಾಜಿಕ ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಇತ್ತೀಚಿನ ಸಮೀಪನಗಳು ಚಾಲ್ತಿಗೆ ಬರುವ ಮುನ್ನ ಭಾಷಾಶಾಸ್ತ್ರಜ್ಞರಲ್ಲಿ ಇಂತಹ ವ್ಯತ್ಯಾಸಗಳ ಜತೆ ಎರಡು ವಿಧಾನಗಳಲ್ಲೂ ವ್ಯವಹರಿಸುತ್ತಿದ್ದರು. ಅವುಗಳನ್ನು ಮುಕ್ತ ವ್ಯತ್ಯಾಸ ಎಂದು ಪರಿಗಣಿಸಬಹುದಾಗಿದೆ. ಯಾಕೆಂದರೆ ಅವುಗಳು ನಿರ್ದಿಷ್ಟ ವ್ಯವಸ್ಥೆಗೊಳಪಟ್ಟು ವರ್ಗೀಕರಣಗೊಂಡ ವ್ಯತ್ಯಾಸಗಳಲ್ಲ ; ಭಾಷೆಯ ವ್ಯವಸ್ಥಿತ ರಚನೆಯ ಭಾಗವೂ ಅಲ್ಲ. ಪರ್ಯಾಯವಾಗಿ ಅವುಗಳನ್ನು ಪ್ರತ್ಯೇಕ ವ್ಯವಸ್ಥೆಯಡಿಯಲ್ಲಲಿ ಚರ್ಚಿಸಬೇಕಾದ, ಪ್ರತ್ಯೇಕ ‘ಉಪಭಾಷೆ’ಗಳೆಂದು ಪರಿಗಣಿಸಬಹುದಾಗಿದೆ. ಭಾಷಿಕರು ಧ್ವನಿ, ವ್ಯಾಕರಣ ಮತ್ತು ಶಬ್ದಕೋಶಕ್ಕೆ ಸಂಬಂಧಿಸಿದ ಭಿನ್ನರೂಪಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಸಾಂದರ್ಭಿಕ ಪ್ರಭೇದಗಳಿಗೆ ನಿರೀಕ್ಷಿತವಾಗಿ ಪ್ರತಿಕ್ರಿಯಿಸುತ್ತಾರೆಂಬ ವಾಸ್ತವಾಂಶದ ಜತೆಗೆ ವ್ಯವಹರಿಸಲು ಮೇಲಿನ ಎರಡೂ ವಿಧಾನಗಳು ಸೋತುವೆಂದು ಹೇಳಬೇಕಾಗುತ್ತದೆ. ಹಾಗಾಗಿ ಸಾಮಾಜಿಕ ಭಾಷಾಶಾಸ್ತ್ರಜ್ಞನು ಯಾವ್ಯಾವ ರೂಪಗಳು ಹುಟ್ಟಿಕೊಳ್ಳುತ್ತವೆಂಬುದನ್ನು ವಿವರಿಸುವುದರ ಜತೆಗೆ ಯಾವ್ಯಾವ ವಿಭಿನ್ನ ಸಾಮಾಜಿಕ ಸಂದರ್ಭಗಳು ಅವುಗಳ ಹುಟ್ಟಿಗೆ ಕಾರಣವಾಗುತ್ತವೆಂಬುದನ್ನು ವಿಶ್ಲೇಷಿಸುವುದೂ ತನ್ನ ಕರ್ತವ್ಯವೆಂದು ಭಾವಿಸಿರುತ್ತಾನೆ.

ಸಂಕುಚಿತಾರ್ಥದಲ್ಲಿ ಸಾಮಾಜಿಕ ಭಾಷಾವಿಜ್ಞಾನವನ್ನು ನಿರ್ವಚಿಸುವುದಾದರೆ ಅದು ಭಾಷಾವ್ಯವಸ್ಥೆಯ ಸ್ವರೂಪದಲ್ಲಾಗುವ ಬದಲಾವಣೆಗಳ ಕುರುಹುಗಳ ಕಡೆಗೂ, ಭಾಷಿಕ ವ್ಯತ್ಯಾಸಗಳ ಪ್ರಕ್ರಿಯೆಗಳ ಕಡೆಗೂ ವಿಶೇಷ ಗಮನ ಹರಿಸುತ್ತದೆ. ವಿಶಾಲಾರ್ಥದಲ್ಲಿ ಸಾಮಾಜಿಕ ಭಾಷಾವಿಜ್ಞಾನವನ್ನು ನಿರ್ವಚಿಸುವುದಾದಲ್ಲಿ, ಅದು ಸಾಮಾಜಿಕ ಅಥವಾ ಸಾಂಸ್ಕೃತಿಕ ಭಿತ್ತಿಯೊಳಗಡೆ ನಡೆಸುವ ಭಾಷೆಯ ಕುರಿತ ಅಧ್ಯಯನವಾಗುತ್ತದೆ. ಪ್ರಶ್ನೆಯೊಂದನ್ನು ಕೇಳಿಕೊಳ್ಳುವ ಮೂಲಕ ಈ ವ್ಯಾಪಕಾರ್ಥದ ಅಧ್ಯಯನಕ್ಕೆ ಒಂದು ರೀತಿಯಲ್ಲಿ ಪ್ರವೇಶಿಸಬಹುದೆಂದು ತೋರುತ್ತದೆ. : ಭಾಷಿಕನೊಬ್ಬ ನಿರ್ದಿಷ್ಟ ಭಿನ್ನತೆಗಳನ್ನು ಬಳಸುವ ಸಂದರ್ಭದಲ್ಲಿ ತನ್ನ ಬಗ್ಗೆ ಏನನ್ನು ಹೇಳುತ್ತಾನೆ? (ತನ್ನ ಸಾಮಾಜಿಕ ಗುರುತಿಸುವಿಕೆ ಮತ್ತು ಅಲ್ಲಿರುವ ಇತರರೊಂದಿಗಿನ ತನ್ನ ಸಂಬಂಧದ ಬಗ್ಗೆ) ಈ ಅರ್ಥದಲ್ಲಿ ಸಾಮಾಜಿಕ ಭಾಷಾವಿಜ್ಞಾನವು ಭಾಷೆಯ ಸಮಾಜಶಾಸ್ತ್ರ (ಒಂದು ಜನಸಮುದಾಯದಲ್ಲಿ ಇತರ ಸಾಮಾಜಿಕ ಭಿನ್ನತೆಗಳೊಂದಿಗೆ ನಡೆಸುವ ಭಾಷಾ ಬಳಕೆಯ ಅಧ್ಯಯನಗಳು) ಮತ್ತು ದೆಲ್ ಹಿಮ್ಸ್ ಹೇಳುವಂತೆ ಸಂವಹನದ ಮಾನವಕುಲಶಾಸ್ತ್ರ (ಭಾಷೆಯನ್ನು ಒಂದು ಸಾಂಸ್ಕೃತಿಕ ವ್ಯವಸ್ಥೆಯ ಭಾಗವಾಗಿ ಅಧ್ಯಯನ ನಡೆಸುವುದು) ಹೀಗೆ ಎರಡು ಬಗೆಯ ಅಧ್ಯಯನಗಳನ್ನು ಇದು ಒಳಗೊಂಡಿರುತ್ತದೆ. ಇದರಂತೆ ದಕ್ಷಿಣ ಭಾರತದಲ್ಲಿ ಸಾಮಾಜಿಕ ಭಾಷಾವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂಕುಚಿತ ಹಾಗೂ ವ್ಯಾಪಕ – ಎರಡೂ ಅರ್ಥಗಳಲ್ಲಿ ನಡೆದ ಅಧ್ಯಯನಗಳನ್ನು ಕೆಳಗಿನ ಚರ್ಚೆಯಲ್ಲಿ ಸಮೀಕ್ಷಿಸಲು ಪ್ರಯತ್ನಿಸಲಾಗಿದೆ.

ದಕ್ಷಿಣ ಏಷಿಯಾದ ಭಾಷೆಗಳು ಮತ್ತು ಸಾಮಾಜಿ ಭಾಷಾವಿಜ್ಞಾನ

ದಕ್ಷಿಣ ಏಷಿಯಾವು ಭಾಷಾವ್ಯತ್ಯಾಸಗಲ ಅಧ್ಯಯನಕ್ಕೆ ಸಂಬಂಧಿಸಿದಂಎ ಮಹತ್ವದ ಮಾಹಿತಿಯನ್ನು ಒದಗಿಸಿಕೊಟ್ಟಿದೆ. ಅದೇ ರೀತಿ ಸಾಮಾಜಿಕ ಭಾಷಾವಿಜ್ಞಾನ ಕ್ಷೇತ್ರಕ್ಕೂ ದಕ್ಷಿಣ ಏಷಿಯಾದ ಭಾಷಾ ಅಧ್ಯಯನಗಳಿಂದಲೇ ಪ್ರಾರಂಭಿಕ ಪ್ರೇರಣೆ ದೊರೆಯಿತೆನ್ನಬಹುದು ‘ಲಿಂಗ್ವಿಸ್ಟಿಕ್ ಡೈವರ್ಸಿಟಿ ಇನ್ ಸೌತ್ ಏಷಿಯಾ’ ಎಂಬ ಸಂಪುಟವು ದ್ರಾವಿಡ ಭಾಷೆಗಳಾದ ತಮಿಳು ಮತ್ತು ಕನ್ನಡವೂ ಸೇರಿದಂತೆ ವಿವಿಧ ದಕ್ಷಿಣ ಏಷಿಯಾ ಭಾಷೆಗಳ ಸಮಜೋ ಭಾಷಿಕ ವ್ಯತ್ಯಾಸಗಳಿಗೆ ಸಂಬಂಧಿಸಿದ ಪ್ರಾರಂಭಿಕ ಘಟ್ಟದ ಅಸಂಖ್ಯ ಅಧ್ಯಯನಗಳನ್ನು ಒಳಗೊಂಡಿದೆ. ಆನಂತರದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಗಮನಾರ್ಹ ಕೆಲಸಗಳು ನಡೆದಿದ್ದರೂ ಪ್ರಸ್ತುತ ಸಂಪುಟದ ಪ್ರಬಂಧಗಳು ಮಾತ್ರ ಎಂದೆಂದಿಗೂ ಮೌಲಿಕವಾಗುಳಿಯುತ್ತವೆ. ಭಾಷಾ ಶಾಸ್ತ್ರಜ್ಞರನ್ನೂ, ಇತರರನ್ನೂ, ಉದ್ದೇಶಿಸಿ ಬರೆಯಲಾದ ಸಂಪುಟದ ಪ್ರವೇಶಿಕೆಯು ದಕ್ಷಿಣ ಏಷಿಯಾ ಹಾಗೂ ಸರ್ವತ್ರ ಕಾಣಸಿಗುವ ಭಾಷಿಕ ವ್ಯತ್ಯಾಸಗಳ ಪ್ರಮುಖ ಬಗೆಗಳನ್ನು ಸಮರ್ಥವಾಗಿ ವಿವರಿಸುತ್ತದೆ.

ಇಲ್ಲಿ ಮೂರು ಬಗೆಯ ಪ್ರಮುಖ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಅವುಗಳೆಂದರೆ ಭೌಗೋಳಿಕ, ಸಾಮಾಜಿಕ ಮತ್ತು ಕ್ರಿಯಾತ್ಮಕ (ಅಥವಾ ಶೈಲಿ ಸಂಬಂಧಿ). ಇವುಗಳಲ್ಲಿ ಭೌಗೋಳಿಕ ವ್ಯತ್ಯಾಸವು ತುಂಬಾ ಪ್ರಚುರವಾಗಿದ್ದು, ಪಶ್ಚಿಮದಲ್ಲಿ ಒಂದು ಶತಮಾನಕ್ಕೂ ಮೇಲ್ಪಟ್ಟು ‘ಉಪಭಾಷಾ ಭೋಗೋಳಶಾಸ್ತ್ರ’ ಅಥವಾ ‘ಉಪಭಾಷಾಶಾಸ್ತ್ರ’ ಎಂಬ ಹೆಸರಿನಿಂದ ಪ್ರಚಲಿತವಾಗಿತ್ತು. ಭಾರತದಲ್ಲಿ ಸರ್ ಜಾರ್ಜ್ ಗ್ರಿಯರ್ಸನ್ ಸ್ಮರಣೀಯ ಕೃತಿಯಾದ ‘ಲಿಂಗ್ವಿಸ್ಟಿಕ್ ಸರ್ವೇ ಆರ್ಫ ಇಂಡಿಯಾ’ದ ಮೂಲಕ ಉಪಭಾಷಾ ಅಧ್ಯಯನವು ಪ್ರಾರಂಭವಾಯಿತೆನ್ನಬಹುದು. ಆತನು ಭಾರತದ ಹಲವು ಪ್ರಮುಖ ಭಾಷೆಗಳಲ್ಲಿಯೇ ಉಪಭಾಷೆಗಳ ಮಾದರಿಗಳನ್ನೂ, ವ್ಯಾಕರಣಾತ್ಮಕ ನಕ್ಷೆಗಳನ್ನೂ ನೀಡಿದ್ದಾನೆ. ಆದರೆ ದುರಾದೃಷ್ಟವಶಾತ್ ದ್ರಾವಿಡ ಪ್ರದೇಶದ ಪ್ರಮುಖ ಭಾಗವಾದ ಮದರಾಸು ಸಂಸ್ಥಾನವನ್ನೇ ತನ್ನ ಸರ್ವೇಕ್ಷಣೆಯಿಂದ ಕೈಬಿಟ್ಟಿದ್ದಾನೆ. ಆದರೂ ಗ್ರಿಯರ್ಸನ್ ತಮಿಳು, ಮಲಯಾಳಂ, ಕನ್ನಡ, ತೆಲುಗು, ಕುರುಖ್, ಮಾಲ್ತೊ, ಕುಯೀ, ಬ್ರಾಹುಈ, ಕೊಲಾಮಿ, ಹಾಗೂ ಅರೆದ್ರಾವಿಡ ಭಾಷೆಗಳಾದ ಲಧಾಡಿ ಮತ್ತು ಭರಿಯಾಗಳ ಮಾದರಿಗಳನ್ನು ತನ್ನ ಗ್ರಂಥದಲ್ಲಿ ಒದಗಿಸಿದ್ದಾನೆ. ಗ್ರಂಥದ ಪ್ರಸ್ತಾವನ ಸಂಪುಟ ಮತ್ತು ನಾಲ್ಕನೇ ಸಂಪುಟಗಳು ದ್ರಾವಿಡ ಭಾಷೆಗಳಿಗೆ ಸಂಬಂಧಿಸಿದವುಗಳಾಗಿವೆ.

ಗುಂಪರ್ಜ್ ಮತ್ತು ಫರ್ಗೊಸನ್‌ರು ಹೇಳುವಂತೆ ಗ್ರಿಯರ್ಸನನು ಭಾಷಿಕ ಲಕ್ಷಣಗಳಿಗೆ ಸಂಬಂಧಿಸಿದ ವಿವರವಾದ ಭೂಪಟವನ್ನು ಒದಗಿಸಲು ಪ್ರಯತ್ನಿಸಿಲ್ಲ; ತಾನು ಗಮನಿಸಿದಂತೆ ಪ್ರಮುಖ ಉಪಭಾಷಾ ಪ್ರದೇಶಗಳ ಗಡಿಗಳೇನಿದ್ದುವೆಂಬುದನ್ನು ಮಾತ್ರ ಗುರುತಿಸಿದ್ದಾನೆ. ಅಲ್ಲಿಂದೀಚೆಗೆ ಉಪಭಾಷಾ ಅಧ್ಯಯನಗಳು ಮುಖ್ಯವಾಗಿ ಬೇರೆ ಬೇರೆ ಉಪಭಾಷೆಗಳ ವಿವರಣೆಗಳನ್ನು ನೀಡತೊಡಗಿದುವು. ಹಾಗಿದ್ದೂ ಕೆಳಗೆ ಗಮನಿಸಿದಂತೆ ವಿಶಾಲ ಪ್ರದೇಶಗಳನ್ನು ಸರ್ವೇಕ್ಷಣೆ ಮಾಡುವ ಕೆಲವು ಪ್ರಯತ್ನಗಳೂ ನಡೆದಿವೆ.

‘ಸಾಮಾಜಿಕ ಉಪಭಾಷೆ’ ಎಂಬ ಪರಿಭಾಷೆಯ ಒಂದೇ ಪ್ರದೇಶದಲ್ಲಿ ಇತರ ಪ್ರಭೇದಗಳೊಂದಿಗೆ, ಜತೆಜತೆಯಾಗಿ ಅಸ್ತಿತ್ವದಲ್ಲಿರುವ ಭಾಷಾ ಪ್ರಭೇದಗಳಿಗೆ ಸಂಬಂಧಿಸಿದುದಾಗಿರುತ್ತದೆ. ಆದರೆ, ಸಾಮಾಜಿಕ ಅಂಶಗಳ ಆಧಾರದಿಂದ ಇವು ಪ್ರತ್ಯೇಕಿಸಲ್ಪಡುತ್ತವೆ. ಮೇಲೆ ನೋಡಿದ ಐಯ್ಯಂಗಾರ್ ತಮಿಳಿಗೂ, ಮುದಲಿಯಾರ್ ತಮಿಳಿಗೂ ಇರುವಂತಹುದೇ ವ್ಯತ್ಯಾಸಗಳು ಭಾರತದೆಲ್ಲೆಡೆ ಕಂಡುಬರುತ್ತವೆ. ಇವು “ಜಾತೀಯ ಉಪಭಾಷೆ” ಎಂಬ ಪರಿಭಾಷೆಯ ಹುಟ್ಟಿಗೂ ಕಾರಣವಾದವು. ಜಾತಿಸಂಬಂಧಿ ಭಾಷಾ ವ್ಯತ್ಯಾಸಗಳ ಬಗೆಗೆ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಕೆಲವು ಪುರಾವೆಗಳ ಪ್ರಕಾರ ಈ ಪರಸ್ಪರ ಸಂಬಂಧವು ಭೌಗೋಳಿಕ ಭಿನ್ನತೆಗಳಿಂದ ಸ್ವತಂತ್ರವಾದುದು. ಜಾತಿಯು ಭಾಷಾ ವ್ಯತ್ಯಾಸವನ್ನು ಪ್ರಭಾವಿಸುವ ಏಕೈಕ ಸಾಮಾಜಿಕ ವ್ಯತ್ಯಾಸಕಾರಕವಾಗಿದೆ. ಧರ್ಮ, ಔದ್ಯೋಗಿಕ ಸ್ಥಾನಮಾನ, ವಯಸ್ಸು, ಲಿಂಗ ಹಾಗೂ ವಸತಿ ಸ್ಥಳ (ನಗರ ಪ್ರದೇಶ ಗ್ರಾಮೀಣ ಪ್ರದೇಶ) ಗಳಂತಹ ಇತರ ಅಂಶಗಳೊಂದಿಗೂ ಭಾಷಾ ವ್ಯತ್ಯಾಸಗಳಿಗೆ ಪರಸ್ಪರ ಸಂಬಂಧವಿರುತ್ತದೆ. ಇವುಗಳೊಳಗಿನ ಸಂಬಂಧಗಳ ಕುರಿತು ಇದುವರೆಗೆ ನಮಗೆ ಹೆಚ್ಚೇನೂ ತಿಳಿದಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ಸಮಕಾಲೀನ ಸಂದರ್ಭದಲ್ಲಿ ಜಾತಿ, ಸಾಮಾಜಿಕ ವರ್ಗ, ಶಿಕ್ಷಣ ಮತ್ತು ನಗರೀಕರಣಗಳಂತಹ ಪ್ರಮುಖ ಅಂಶಗಳ ಪರಸ್ಪರ ಸಂಬಂಧಾತ್ಮಕ ಪ್ರಾಮುಖ್ಯತೆಯೇನೆಂಬುದು ನಮಗೆ ತಿಳಿದಿಲ್ಲ.

ಕ್ರಿಯಾತ್ಮಕ ವ್ಯತ್ಯಾಸವು ವಿವಿಧ ಸನ್ನಿವೇಶ ಅಥವಾ ಪಾತ್ರಗಳಿಗೆ ಸಂಬಂಧಿಸಿದಂತೆ ಒಬ್ಬನೇ ವ್ಯಕ್ತಿಯ ಅಥವಾ ಒಂದೇ ಗುಂಪಿನ ಮಾತಿನ ಶೈಲಿಯಲ್ಲಾಗುವ ಬದಲಾವಣೆಗಳನ್ನು ಒಳಗೊಂಡಿರುತ್ತದೆ. ಭೌಗೋಳಿಕ ಮತ್ತು ಸಾಮಾಜಿಕ ಉಪಭಾಷೆಗಳ ಸಂದರ್ಭದಲ್ಲಿ ವ್ಯಕ್ತಿಯೊಬ್ಬನು ಒಂದು ಅಥವಾ ಇನ್ನೊಂದು ಉಪಭಾಷೆಯನ್ನು ಮಾತನಾಡುತ್ತಾನೆಂದು ಸಾಮಾನ್ಯವಾಗಿ ನಿರೀಕ್ಷಿಸಲಾಗುತ್ತದಾದರೂ, ಅದೇ ವ್ಯಕ್ತಿಯ ಭಾಷೆಯಲ್ಲಿ ಕ್ರಿಯಾತ್ಮಕ ವ್ಯತ್ಯಾಸಗಳೂ ಜತೆಯಾಗಿರುತ್ತವೆ. ಇದರಂತೆ ಅಯ್ಯಂಗಾರ್ ತಮಿಳಿನ ‘ಇರಕ್ಕ್’ ಮತ್ತು ಮುದಲಿಯಾರ್ ತಮಿಳಿನ “ಇರಕ್ಕ್‌ದ್” (ಇದೆ) ಎಂಬ ರೂಪಗಳೊಳಗಿನ ವ್ಯತ್ಯಾಸವು ಸಾಮಾಜಿಕವಾದುದಾದರೂ ಈ ಎರಡೂ ಪಂಗಡಗಳಲ್ಲೂ ಔಪಚಾರಿಕ (ಕ್ರಿಯಾತ್ಮಕ) ಭಿನ್ನರೂಪವಾದ “ಇರುಕ್ಕಿರದ್” ಕೂಡಾ ಅಸ್ತಿತ್ವದಲ್ಲಿರುತ್ತದೆ. ಈ ತೆರನಾದ ವ್ಯತ್ಯಾಸವನ್ನು ಉನ್ನತೀಕರಿಸಿದ ವ್ಯತ್ಯಾಸವೆಂದೂ ಕರೆಯಲಾಗುತ್ತದೆ. ಅಂದರೆ ಇಲ್ಲಿ ಭಾಷೆಯೊಂದರ ಕೆಳಸ್ತರದ ಅಥವಾ ಅನೌಪಚಾರಿಕ ಭಿನ್ನರೂಪಕ್ಕಿಂತ ಹೆಚ್ಚು ಮೌಲಿಕವೆನಿಸಿದ ಅಥವಾ ಔಪಚಾರಿಕವೆನಿಸಿದ ಭಿನ್ನರೂಪವು ಮೇಲ್ಗೈ ಸಾಧಿಸಿರುತ್ತದೆ.

ಇಂತಹ ವ್ಯತ್ಯಾಸವು ಎಲ್ಲಾ ಶ್ರೇಣಿಕೃತ ಸಮಾಜಗಳಲ್ಲೂ ಅಸ್ತಿತ್ವದಲ್ಲಿರುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ ಉಚ್ಚಾರಣೆಗೆ ಸಂಬಂಧಿಸಿದಂತೆ ಮೇಲ್‌ಸ್ತರದ ಪ್ರಭೇದವು ಕೆಳಸ್ತರದ ಪ್ರಭೇದಕ್ಕಿಂತ ಹೆಚ್ಚಿನದಾದ ಗಮನವನ್ನು ಅಪೇಕ್ಷಿಸುತ್ತದೆ. ಅದೇ ರೀತಿ ವ್ಯಾಕರಣ ನಿಯಮಗಳಿಗೆ ಸಂಬಂಧಿಸಿದಂತೆಯೂ ಮೇಲ್‌ಸ್ತರದ ಪ್ರಭೇದದಲ್ಲಿ ಹೆಚ್ಚಿನ ಕಟ್ಟುನಿಟ್ಟನ್ನು ಪಾಲಿಸಲಾಗುತ್ತದೆ. ತಮಿಳು ಮತ್ತು ಬೆಂಗಾಲಿ ಭಾಷೆಗಳು ಅವುಗಳಲ್ಲಿನ ತೀವ್ರತರವಾದ ಮೇಲ್‌ಸ್ತರದ ಪ್ರಭೇದಗಳಾಗಿ ಹೆಸರುವಾಸಿಯಾಗಿವೆ. ತಮಿಳಿನಲ್ಲಿ “ಸೆಂದಮಿಳ್” (ಶುದ್ಧ ತಮಿಳು) ಎಂದೂ ಬೆಂಗಾಲಿಯಲ್ಲಿ ಸಧುಭಾಷಾ, ಸಭ್ಯ ಬಾಷಾ ಎಂದೂ ಇವರುಗಳನ್ನು ಕರೆಯಲಾಗುತ್ತದೆ. ಇವುಗಳಿಗೆ ಹೋಲಿಸಿದರೆ ಇತರ ದಕ್ಷಿಣ ಏಷಿಯಾ ಭಾಷೆಗಳಲ್ಲಿ ಇಂತಹ ವ್ಯತ್ಯಾಸಗಳು ಅಷ್ಟೊಂದು ತೀವ್ರತರವಾಗಿ ಇಲ್ಲವಾದರೂ ಬಹುತೇಕ ಯುರೋಪಿಯನ್ ಭಾಷೆಗಳಿಗಿಂತ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಆದರೂ ಆಧುನಿಕ ಗ್ರೀಕ್ ಭಾಷೆಯಲ್ಲಿ ಇಂತಹುದೇ ಸ್ಷಷ್ಟ ವ್ಯತ್ಯಾಸಗಳಿವೆ. ಕ್ರಿಯಾತ್ಮಕ ವ್ಯತ್ಯಾಸವು ಭಾಷೆಯೊಂದರ ಪೂರಕ ಪ್ರಭೇದಗಳನ್ನು ಒಳಗೊಳ್ಳಬಹುದಾಗಿದೆ. ಯಾಕೆಂದರೆ, ತನ್ನೆಲ್ಲಾ ನಿರೀಕ್ಷಿತ ಸಾಮಾಜಿಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬೇಕಾದರೆ ವ್ಯಕ್ತಿಯೊಬ್ಬನಿಗೆ ಒಂದಕ್ಕಿಂತ ಹೆಚ್ಚು ಭಾಷಾ ಪ್ರಭೇದಗಳಲ್ಲಿ ಹಿಡಿತವಿರಬೇಕಾಗುತ್ತದೆ. ಈ ಸಿದ್ಧಾಂತದ ಒಂದು ಅನ್ವಯವನ್ನು ಹೀಗೆ ಹೇಳಬಹುದು: ಇಂತಹ ಭಿನ್ನತೆಗಳ ಲಕ್ಷಣಗಳಿರುವ ಸಮಾಜಗಳಲ್ಲಿ ವ್ಯಕ್ತಿಗಳಿಗೆ ಕೇವಲ ಒಂದೇ ಪ್ರಭೇದದ ಮೇಲಷ್ಟೆ ಹಿಡಿತವಿದ್ದರೆ, ಅವರು ನಿಭಾಯಿಸಬಹುದಾದ ಪಾತ್ರಗಳು ತೀರಾ ಸೀಮಿತವಾಗಿರುತ್ತವೆ.

ಕ್ರಿಯಾತ್ಮಕ ಪ್ರಭೇದಗಳು ತಮಿಳು ಮತ್ತು ಬಾಂಗ್ಲಾ ಭಾಷೆಗಳಲ್ಲಿಯಂತೆ ತೀವ್ರತರವಾಗಿ ಪ್ರತ್ಯೇಕಿಸಲ್ಪಟ್ಟಾಗ, ಅಂತಹ ಸಂದರ್ಭವನ್ನು ‘ದ್ವಿಸ್ತರತೆ’ಯನ್ನೊಳಗೊಂಡ ಸ್ಥಿತಿಯೆಂದು ವಿವರಿಸಲಾಗುತ್ತದೆ. ಈ ಪರಿಭಾಷೆಯು ತಮಿಳು, ಬಾಂಗ್ಲಾ ಮತ್ತು ಆಧುನಿಕ ಗ್ರೀಕ್ ಭಾಷೆಗಳ ಸ್ಥಿತಿಗಳಿಗಷ್ಟೇ ಅನ್ವಯವಾಗುವುದಿಲ್ಲ. ವಿವಿಧ ಭಾಷೆಗಳು ಕ್ರಿಯಾತ್ಮಕವಾಗಿ ಪ್ರತ್ಯೇಕಿಸಲ್ಪಡುವ ಬಹುಭಾಷಾ ಸಮಾಜ ಅಥವಾ ಗುಂಪುಗಳಿಗೂ ಇದು ಅನ್ವಯವಾಗುತ್ತದೆ. ಇದರಂತೆ ಭಾರತದಲ್ಲಿ ಹಲವು ವಲಸೆಗಾರರ ಗುಂಪುಗಳು ದ್ವಿಭಾಷಾ ದ್ವಿಸ್ತರತೆಯನ್ನು ಹೊಂದಿರುತ್ತವೆ. ಉದಾಹರಣೆಗೆ ಕೇರಳದ ಅಯ್ಯರ್ ಸಮುದಾಯದವರು ತಮ್ಮದೇ ಜನರೊಂದಿಗೆ ವ್ಯವಹರಿಸುವಾಗ ತಮಿಳಿನ ಪ್ರಭೇದವೊಂದನ್ನು ಬಳಸಿದರೆ, ಬಾಹ್ಯ ಸಮಾಜದೊಂದಿಗೆ ವ್ಯವಹರಿಸುವಾಗ ಅದೇ ರೀತಿ ತಮ್ಮದೇ ಜನರೊಂದಿಗೆ ಕೆಲವು ನಿರ್ದಿಷ್ಟ ವಿಷಯಗಳನ್ನು ಚರ್ಚಿಸುವಾಗ ಮಲಯಾಳಂ ಭಾಷೆಯನ್ನು ಬಳಸುತ್ತಾರೆ. ಬಹುಪಾಲು ವಿದ್ಯಾವಂತ ಭಾರತೀಯರು ಇಂಗ್ಲಿಷ್ ಮತ್ತು ತಮ್ಮ ಮನೆ ಭಾಷೆಯ ಬಗೆಗೆ ಇಂತಹುದೇ ಧೋರಣೆಯುಳ್ಳವರಾಗಿದ್ದಾರೆ. ದ್ವಿಭಾಷಿಕತೆ ಮತ್ತು ಭಾಷಾ ಸಂಪರ್ಕಕ್ಕೆ ಸಂಬಂಧಿಸಿದ ಅಧ್ಯಯನಗಳು ಸಾಮಾಜಿಕ ಭಾಷಾವಿಜ್ಞಾನದ ಒಂದು ಪ್ರಮುಖ ಭಾಗವಾಗಿದೆ.

ದಕ್ಷಿಣ ಭಾರತದಲ್ಲಿ ಸಮಾಜೋ ಭಾಷಿಕ ಅಧ್ಯಯನಗಳು :

ಕೆಳಗೆ ಟಿಪ್ಪಣಿಸಿರುವಂತೆ ದಕ್ಷಿಣ ಭಾರತವು ದಕ್ಷಿಣ ಏಷಿಯಾದ ಇತರೆಡೆಗಳಲ್ಲಿ ಕಂಡುಬರುವಂಥ ಗುಣಲಕ್ಷಣಗಳನ್ನು ಹೊಂದಿದೆಯಾದರೂ ಭಾಷಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅದರದ್ದೇ ಆದ ಕೆಲವು ವಿಶಿಷ್ಟ ಲಕ್ಷಣಗಳೂ ಈ ಪ್ರದೇಶಕ್ಕಿದೆ. ಕೆಳಗಿನ ವಿಭಾಗಗಳಲ್ಲಿ ದ್ರಾವಿಡ ಭಾಷೆಗಳಿಗೆ ಸಂಬಂಧಿಸಿದಂತೆ ನಡೆದ ಸಮಾಜೋಭಾಷಿಕ ಅಧ್ಯಯನಗಳ ಸಾಧನೆ ಮತ್ತು ಸಾಧ್ಯತೆಗಳ ಕುರಿತು ಚರ್ಚಿಸಲಾಗಿದೆ. ಹಾಗೆಂದು ಇದು ಕಟ್ಟುನಿಟ್ಟಾಗಿ ದ್ರಾವಿಡ ಭಾಷೆಗಳಗಷ್ಟೇ ಸೀಮಿತವಾದ ಚರ್ಚೆಯೆಂದು ಹೇಳಲಾಗದು. ಗುಂಪರ್ಜ್ ಚರ್ಚಿಸಿದ ಮೈಸೂರು (ಕರ್ನಾಟಕ) – ಮಹಾರಾಷ್ಟ್ರ ಗಡಿಪ್ರದೇಶದ ಭಾಷಾಸಂಪರ್ಕಕ್ಕೆ ಸಂಬಂಧಿಸಿದ ವಿವರಗಳೂ, ಪಂಡಿತ್ ಅವರು ಚರ್ಚಿಸಿರುವ ತಮಿಳು ನಾಡಿನ ಸೌರಾಷ್ಟ್ರಿ ಭಾಷಿಕರ ವಿವರಗಳೂ ಸಮಾಜೋ ಭಾಷಿಕ ಅಧ್ಯಯನಕ್ಕೆ ಕುತೂಹಲಕಾರಿ ಮಾಹಿತಿಗಳನ್ನೊದಗಿಸುವುದರಿಂದ ಅವುಗಳ ಕುರಿತೂ ಸಾಂದರ್ಭಿಕವಾಗಿ ಇಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಾದೇಶಿಕ ಉಪಭಾಷೆಗಳ ಅಧ್ಯಯನಗಳು

‘ಇಂಟರ್‌ನ್ಯಾಷನಲ್ ಜರ್ನಲ್ ಆರ್ಫ ಡ್ರವೀಡಿಯನ್ ಲಿಂಗ್ವಿಸ್ಟಿಕ್ಸ್’ಗಾಗಿ ಸಿದ್ಧಪಡಿಸಿದ ದಕ್ಷಿಣ ಭಾರತದ ಉಪಭಾಷಾ ಅಧ್ಯಯನಕ್ಕೆ ಸಂಬಂಧಪಟ್ಟ ಈ ಕೆಳಗಿನ ಟಿಪ್ಪಣಿರೂಪದ ಮಾಹಿತಿಯನ್ನು ನನಗೆ ಒದಗಿಸಿಕೊಟ್ಟವರು ಕೇರಳ ವಿಶ್ವವಿದ್ಯಾಲಯದ ಭಾಷಾವಿಜ್ಞಾನ ವಿಭಾಗದ ಡಾ. ಎನ್.ಶಿವರಾಮ ಮೂರ್ತಿಯವರು.

ಪುಣೆಯ ಡೆಕ್ಕನ್ ಕಾಲೇಜಿನ ಭಾಷಾ ಸರ್ವೇಕ್ಷಣಾ ಯೋಜನೆಯಡಿಯಲ್ಲಿ ಕನ್ನಡ, ತೆಲುಗು ಮತ್ತು ಮರಾಠಿ (ದ್ರಾವಿಡ ಪ್ರದೇಶಗಳಲ್ಲಿ ಮಾತನಾಡುವ ಮರಾಠಿಯ ಉಪಭಾಷೆಯೂ ಸೇರಿದಂತೆ) ಉಪಭಾಷೆಗಳ ಸರ್ವೇಕ್ಷಣೆಯನ್ನು ನಡೆಸಲಾಗಿದೆ. ಡಾ.ಡಿ.ಎನ್. ಶಂಕರಭಟ್ಟರ ಮಾರ್ಗದರ್ಶನದಲ್ಲಿ ಎ.ಎಸ್.ಆಚಾರ್ಯ, ಆರ್.ಮಹಾದೇವನ್ ಮತ್ತು ಯು.ಪಿ.ಉಪಾಧ್ಯಾಯ ಅವರುಗಳು ನಡೆಸಿದ ಸರ್ವೇಕ್ಷಣೆಗಳ ವರದಿಗಳಲ್ಲಿ ಕನ್ನಡದ ಉಪಭಾಷೆಗಳ ವಿವರಣಾತ್ಮಕ ವ್ಯಾಕರಣವನ್ನು ಒದಗಿಸಲಾಗಿದೆ. ಡಾ.ಎ.ಎಂ.ಘಾಟಗೆಯವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾದ ಮರಾಠಿ ಉಪಭಾಷೆಗಳ ಸರ್ವೇಕ್ಷಣೆಯು ದಕ್ಷಿಣ ಕನ್ನಡದಲ್ಲಿ ಪ್ರಚಲಿತವಿರುವ ಕೊಂಕಣಿ ಮತ್ತು ಕಾಸರಗೋಡಿನಲ್ಲಿ ಮಾತನಾಡುವ ಮರಾಠಿ ಉಪಭಾಷೆಗಳ ವಿವರಣೆಗಳನ್ನು ನೀಡುತ್ತದೆ. ಕನ್ನಡ ಮತ್ತು ಮರಾಠಿ ಉಪಭಾಷೆಗಳಿಗೆ ಸಂಬಂಧಿಸಿದ ಇತರ ವಿವರಗಳು ಮುಂದೆ ಕಾಲಕಾಲಕ್ಕೆ ಪುಣೆಯ “ಲಿಂಗ್ವಿಸ್ಟಿಕ್ ಸರ್ವೇ ಬುಲೆಟಿನ್ ಆಫ್ ದ ಡೆಕ್ಕನ್ ಕಾಲೇಜ್” ಸಂಪುಟದಲ್ಲಿ ಪ್ರಕಟವಾಗಿವೆ.

ಅಣ್ಣಾಮಲೈ ವಿಶ್ವವಿದ್ಯಾಲಯದ ಭಾಷಾವಿಜ್ಞಾನ ವಿಭಾಗವು ನಡೆಸಿದ ತಮಿಳು ಉಪಭಾಷಾ ಸರ್ವೇಕ್ಷಣೆಯ ಮೂಲಕ ಅನೇಕ ಯೋಜನಾ ವರದಿಗಳು ಸಿದ್ಧಗೊಂಡಿವೆ. ಇದಲ್ಲದೆ ಕಮಿಲ್ ಜೈಲೆಬಿಲ್ ಅವರೂ ತಮಿಳು ಉಪಭಾಷೆಗಳ ಕುರಿತು ಹಲವು ಅಧ್ಯಯನಗಳನ್ನು ನಡೆಸಿದ್ದಾರೆ.

ಆಂಧ್ರಪ್ರದೇಶ ಸಾಹಿತ್ಯ ಅಕಾಡೆಮಿಯು ವೃತ್ತಿಪದಗಳ ಅಧ್ಯಯನ ಮಾಲಿಕೆಯಡಿಯಲ್ಲಿ ಅನೇಕ ವೃತ್ತಿಪದಕೋಶಗಳನ್ನು ಪ್ರಕಟಿಸಿದೆ. ಭದ್ರಿರಾಜು ಕೃಷ್ಣಮೂರ್ತಿಯವರ ಕೃಷಿಪದಕೋಶ (ಮಾಂಡಲಿಕ ವೃತ್ತಿಪದಕೋಶಂ) ವು ಇವುಗಳಲ್ಲಿ ಮೊದಲನೆಯದು. ಪ್ರಸ್ತುತ ಸಂಪುಟದಲ್ಲಿರುವ ಆಂಗ್ಲಭಾಷಾ ಪ್ರಸ್ತಾವನೆಯು ಯೋಜನೆಯ ವ್ಯಾಪ್ತಿ ಮತ್ತು ವಿಧಾನಗಳನ್ನು ವಿವರಿಸುತ್ತದೆ.

ಡಾ. ವಿ.ಐ. ಸುಬ್ರಹ್ಮಣ್ಯಂ ಅವರ ಮೇಲ್ವಿಚಾರಣೆಯಲ್ಲಿ ಕೇರಳ ವಿಶ್ವವಿದ್ಯಾಲಯದ ಭಾಷಾವಿಜ್ಞಾನ ವಿಭಾಗವು ಕೈಗೊಂಡ ಸಣ್ಣಪ್ರಮಾಣದ ಉಪಭಾಷಾ ಸರ್ವೇಕ್ಷಣಾ ಯೋಜನೆಯು ಮುಖ್ಯವಾಗಿ ಉಪಭಾಷಾ ಭೂಪಟಗಳನ್ನು ಮತ್ತು ಪ್ರತಿಯೊಂದು ಉಪಭಾಷೆಗಳ ವಿವರಣಾತ್ಮಕ ವ್ಯಾಕರಣಗಳನ್ನು ಸಿದ್ಧಪಡಿಸುವತ್ತ ಗಮನ ಹರಿಸಿವೆ. ಭಾರತದಲ್ಲಿ ಇದುವರೆಗೆ ನಡೆದ ಉಪಭಾಷೆ ಸರ್ವೇಕ್ಷಣೆಗಳ ಪೈಕಿ ವೈಧಾನಿಕತೆಯ ದೃಷ್ಟಿಯಿಂದ ಇದು ತುಂಬ ವ್ಯವಸ್ಥಿತವಾಗಿ ನಡೆದ ಸರ್ವೇಕ್ಷಣೆಯೆನ್ನಬಹುದು. ಯೋಜನಾ ವರದಿಯನ್ನು ಸಿದ್ಧಪಡಿಸುವುದಕ್ಕೆ ಮುನ್ನ ಸರ್ವೇಕ್ಷಣಾ ತಂಡವು ೯೫೦ ಸ್ಥಳೀಯಾಡಳಿತ ಘಟಕ (ಪಂಚಾಯತು)ಗಳಿಗೆ ನಾಲ್ಕು ನಾಲ್ಕು ಬಾರಿ ಭೇಟಿ ಕೊಟ್ಟು, ಸಾಮಗ್ರಿಗಳನ್ನು ಸಂಗ್ರಹಿಸಿದೆ. ಸಾಮಗ್ರಿ ಸಂಗ್ರಹ, ವಿಶ್ಲೇಷಣೆ ಮತ್ತು ವರದಿಗಾಗಿ ಸಾಮಗ್ರಿಗಳ ಜೋಡಣೆ ಇತ್ಯಾದಿ ಕಾರ್ಯಗಳನ್ನು ಜಾತಿಯಾಧಾರದಿಂದ ಸಂಘಟಿಸಲಾಗಿತ್ತು. ತಿಲಾಯಾ (ಈ, ವ, ನ) ಮತ್ತು ನಾಯರ್ ಮಲಯಾಳಂಗಳಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದ್ದು ಹರಿಜನರಾಡುವ ಉಪಭಾಷೆಯ ಕುರಿತು ಸಾಮಗ್ರಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ. ತಿಯ್ಯರ್ (ತೀಯಾ) ಮಲಯಾಳಂಗೆ ಸಂಬಂಧಿಸಿದಂತೆ ಸಮಾನ ಶಬ್ದಾರ್ಥಗಳನ್ನು ತೋರಿಸುವ ಸುಮಾರು ಮುನ್ನೂರರಷ್ಟು ಭೂಪಟಗಳನ್ನು ಸಿದ್ಧಪಡಿಸಲಾಗಿದೆ. ಅಂತಿಮವಾಗಿ ಮಲಯಾಳಂ ಉಪಭಾಷೆಗಳಿಗೆ ಸಂಬಂಧಪಟ್ಟ ನಿಘಂಟೊಂದನ್ನು ಸಿದ್ಧಪಡಿಸಲು ವಿಭಾಗವು ಉದ್ದೇಶಿಸಿದೆ.

ಈ ಯೋಜನೆಯ ಸಂಘಟನೆಯು ಜಾತಿ (ಭೇದ) ಪದ್ಧತಿಗೆ ಹೆಚ್ಚಿನ ಪ್ರಾಮುಖ್ಯವನ್ನು ಕೊಡುತ್ತದೆಂದು ಕೆಲವು ವಿದ್ವಾಂಸರು ಟೀಕಿಸಿದ್ದಾರೆ. ರಾಜಕೀಯ ನೆಲೆಯಿಂದ ಈ ಆಕ್ಷೇಪವನ್ನು ಮಾಡಿದ್ದಾದರೆ ಸಮಾಜಶಾಸ್ತ್ರಜ್ಞರು ಆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ. ಯಾಕೆಂದರೆ ರಾಜಕಾರಣಿಗಳು ಬಯಸಿದಷ್ಟು ವೇಗವಾಗಿ ಜಾತಿ ಭೇದಗಳು ಕಡಿಮೆಯಾಗುವುದಿಲ್ಲವೆಂಬುದು ಸ್ಪಷ್ಟವಿದೆ. ವೈಧಾನಿಕತೆಯ ದೃಷ್ಟಿಯಿಂದ ಹೇಳಬಹುದಾದರೆ, ಸರ್ವೇಕ್ಷಣೆಯ ವಿನ್ಯಾಸವು ‘ಜಾತೀಯ ಉಪಬಾಷೆ’ಯ ಅಸ್ತಿತ್ವವನ್ನು ಆರೋಪಿಸಿಕೊಂಡಿದ್ದರೆ ಅದೇ ರೀತಿ ಆಯಾ ಜಾತಿಗಳವರೇ ಸಾಮಗ್ರಿಗಳನ್ನು ಸಂಗ್ರಹಿಸಿದ್ದರೆ ಅದರ ಫಲಿತಾಂಶವು ಭಾಷಾ ವ್ಯತ್ಯಾಸದ ಅಂಶಗಳಾದ ಜಾತಿ ಮತ್ತು ಇತರ ಸಾಮಾಜಿಕ ವ್ಯತ್ಯಾಸಕಾರಕಗಳೊಳಗಿನ ಸಂಬಂಧವನ್ನು ಮಸುಕಾಗಿಸುವ ಸಾಧ್ಯತೆಯಿದೆ.

ಸಾಮಾಜಿಕ ಉಪಭಾಷೆಗಳು

ಗುಂಪರ್ಜನು ನಡೆಸಿದ ಪ್ರಾರಂಭಿಕ ಕಾಲಘಟ್ಟದ ಅಧ್ಯಯನವೊಂದು ಭಾಷಾ ಪ್ರವೃತ್ತಿಯನ್ನು ಪ್ರತ್ಯೇಕಿಕರಿಸುವಲ್ಲಿ ಪ್ರಮುಖ ಪಾತ್ರವಹಿಸುವ ಜಾತಿಭೇದಗಳು, ವಸತಿ ಪರಿಸರ, ಹಾಗೂ ಧಾರ್ಮಿಕ ಸಂಪ್ರದಾಯಗಳ ಮಹತ್ವವನ್ನು ವಿವರಿಸುತ್ತವೆ. ಆತನ ನಿರ್ಣಯದಂತೆ ಅನೌಪಚಾರಿಕ ಸ್ನೇಹ ಸಂಪರ್ಕಗಳ ನಿರ್ಣಯಾತ್ಮಕ ಅಂಶಗಳಾಗುತ್ತವೆ. ಸ್ಪೃಶ್ಯ – ಅಸ್ಪೃಶ್ಯ ರೇಖೆಯುದ್ದಕ್ಕೂ ವಿಸ್ತರಿಸುವುದಿಲ್ಲ ಅಥವಾ ಒಂದು ಸ್ಪೃಶ್ಯ ಗುಂಪಿನಿಂದ ಇನ್ನೊಂದಕ್ಕೂ ವಿಸ್ತರಿಸುವುದಿಲ್ಲ. ಹಾಗಾಗಿ ಅಸ್ಪೃಶ್ಯರ ಭಾಷಾ ಪ್ರತ್ಯೇಕತೆಗೆ ಇದು ಕಾರಣವಾಗುತ್ತದೆ.

ಈ ಫಲಿತದ ಆಧಾರದಿಂದ ಗುಂಪರ್ಜನು, ಬಹುದಿನಗಳಿಂದ ಒಪ್ಪಿಕೊಂಡು ಬಂದಿದ್ದ ಬ್ಲೂಮ್‌ಫೀಲ್ಡನ ‘ಸಂಪರ್ಕ ಸಾಧ್ಯತೆ’ ಸಿದ್ಧಾಂತವನ್ನು ಪರಿಷ್ಕರಿಸಬೇಕಾದ ಅಗತ್ಯವನ್ನು ಮನಗಂಡನು. ಈ ಸಿದ್ಧಾಂತದ ಪ್ರಕಾರ ಸಮಾಜದಲ್ಲಿರುವ ವ್ಯಕ್ತಿ ಭಾಷೆಗಳು ಮತ್ತು ಅವರೊಳಗೆ ನಡೆಯುವ ಸಂವಹನ ಪ್ರಮಾಣವು ಅನುಪಾತದಲ್ಲಿ ಸಮಾನವಾದುದು. ಇಲ್ಲಿ ಭಾಷಾಭೇದಗಳು ಬಹುಪಾಲು ಜಾತಿಗಳನ್ನು ಒಳಗೊಂಡ ಕೆಲಸದ ಗುಂಪುಗಳಿಗೆ ಸಂಬಂಧಿಸಿರದೆ, ಸ್ನೇಹಗುಂಪುಗಳಿಗೆ ಸಂಬಂಧಿಸಿರುತ್ತವೆ. ಸ್ಪಷ್ಟವಾಗಿ ಸಂಪರ್ಕ ವಿಷಯದ ಪ್ರಮಾಣವಷ್ಟೇ ಆಗಿರದೆ ಸಂಪರ್ಕದ ವಿಧಾನಕ್ಕೂ ಸಂಬಂಧಿಸಿರುತ್ತದೆ.

ಗುಂಪರ್ಜನು ತನ್ನ ಅಧ್ಯಯನಕ್ಕೆ ಆರಿಸಿಕೊಂಡ ಗ್ರಾಮವು ಉತ್ತರ ಭಾರತಕ್ಕೆ ಸೇರಿದುದಾದರೂ ಸ್ನೇಹಗುಂಪುಗಳು ಮತ್ತು ಜಾತಿ ಭೇದಗಳು ಭಾಷಾವ್ಯತ್ಯಾಸಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆಂಬ ಆತನ ತೀರ್ಮಾನವು ದಕ್ಷಿಣ ಏಷಿಯ ಹಾಗೂ ಇತರೆಡೆಗಳಿಗೂ ಅನ್ವಯವಾಗುತ್ತದೆ. ಇದುವರೆಗೆ ಲಭಿಸಿದ ಅಂಕಿ ಅಂಶಗಳ ಆಧಾರದಿಂದ ಹೇಳಬಹುದಾದರೆ ದಕ್ಷಿಣ ಭಾರತದಲ್ಲಿ ಉತ್ತರದ ಪ್ರದೇಶಗಳಿಗಿಂತಲೂ ಅಧಿಕ ಸಂಖ್ಯೆಯ ಸಾಮಾಜಿಕ ಉಪಭಾಷೆಗಳಿಗೆ ಸಂಬಂಧಿಸಿದಂತೆ ನಡೆದಿರುವ ಬಹುಪಾಲು ಅಧ್ಯಯನಗಳು ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಭಾಷೆಗಳ ಧ್ವನಿಮಾ, ಆಕೃತಿಮಾ ಮತ್ತು ಶಬ್ದಕೋಶಗಳಲ್ಲಿರುವ ತೀಕ್ಷ್ಣ ವ್ಯತ್ಯಾಸಗಳನ್ನು ತೋರಿಸಿಕೊಟ್ಟಿವೆ.

ತಮಿಳು, ತುಳು, ತೆಲುಗು, ಕನ್ನಡ ಮತ್ತು ಮಲಯಾಳಂ ಗಳಿಗೆ ಸಂಬಂಧಪಟ್ಟಂತೆ ಬ್ರಾಹ್ಮಣ ಭಾಷೆಯಲ್ಲಿ ಧ್ವನಿಮಾತ್ಮಕ ಅಂತರಗಳಿರುವುದನ್ನು ಗುರುತಿಸಲಾಗಿದೆ. ಅಸಂಖ್ಯ ಧ್ವನಿಮಾತ್ಮಕ ವ್ಯತ್ಯಾಸಗಳಲ್ಲಿ ಸ್ವೀಕೃತ ರೂಪಗಳ ಬಳಕೆಯೂ ಸೇರಿದೆ. ಬ್ರಾಹ್ಮಣ ಭಾಷಿಕರು ವಿದೇಶೀ ಧ್ವನಿಶಾಸ್ತ್ರವನ್ನು ಬ್ರಾಹ್ಮಣೇತರರಿಗಿಂತ ವಿಶೇಷ ಶ್ರದ್ಧೆ – ವಿಧೇಯತೆಗಳಿಂದ ಪುನರ್‌ಸೃಷ್ಟಿಸಿ, ಪಾಲಿಸಿಕೊಂಡು ಬರುತ್ತಾರೆ. ಉದಾ. ಬ್ರಾಹ್ಮಣ, ತಮಿಳು ಸ್ವಾಮಿ, ಬ್ರಾಹ್ಮಣೇತರ ತಮಿಳು ಸ್ವಾಮಿ (ಸಂಸ್ಕೃತ:ಸ್ವಾಮಿನ್) ಬ್ರಾಹ್ಮಣ ಕನ್ನಡ ಕಾಫಿ, ಬ್ರಾಹ್ಮಣೇತರ ಕನ್ನಡ ಕಾಪಿ (ಇಂಗ್ಲಿಷ್ Coffee) ಬ್ರಾಹ್ಮಣ ತೆಲುಗು ವ್ಯವಹಾರ, ಬ್ರಾಹ್ಮಣೇತರ ತೆಲುಗು ವ್ಯವರೌ\ಯವ್ವಾರೌ (ಸಂಸ್ಕೃತ : ವ್ಯವಹಾರಂ) ಬ್ರಾಹ್ಮಣ ತುಳು, ಗಂಧ, ಬ್ರಾಹ್ಮಣೇತರ ತುಳು, ಗಂದ (ಸಂಸ್ಕೃತ/ಗಂಧ) ಕೆಲವೆಡೆ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಭಾಷೆಗಳೆರಡೂ ಸರಿಯಾದ ರೂಪಗಳೆಂಬ ಭ್ರಮೆಯಿಂದ ವಿದೇಶೀ ಧ್ವನಿಮಾ ಅಂಶಗಳನ್ನು ತಪ್ಪಾಗಿ ಬಳಸುವುದಿದೆ. ಉದಾ. ಬ್ರಾಹ್ಮಣ ತಮಿಳು:ಕ್ರಾಪು, ಬ್ರಾಹ್ಮಣೇತರ ತಮಿಳು:ಕ್ರಾಪ್ಪು (ಇಂಗ್ಲೀಷ್/ಕ್ರಾಪ್). ಇವಲ್ಲದೆ ಕೆಲವು ದೇಶೀ ಭಾಷಾ ರೂಪಗಳಲ್ಲೂ ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ನಡುವೆ ಧ್ವನಿಮಾತ್ಮಕ ವ್ಯತ್ಯಾಸಗಳಿರುವುದನ್ನು ಕಾಣಬಹುದು. ಇಂಥ ಸಂದರ್ಭಗಳಲ್ಲಿ ಬ್ರಾಹ್ಮಣರ ಉಚ್ಚಾರಣೆಯೇ ಹೆಚ್ಚು ಶುದ್ಧವಾದುದು ಎಂಬ ತಿಳುವಳಿಕೆಯೂ ಇದೆ. ಉದಾ. ಬ್ರಾಹ್ಮಣ ಕನ್ನಡ : ಹಾಕು, ಬ್ರಾಹ್ಮಣೇತರ ತೆಲುಗು:ಎದುರು (ಬಿದಿರು). ಬ್ರಾಹ್ಮಣೇತರ ಕನ್ನಡ, ಆಕು ; ಬ್ರಾಹ್ಮಣ ತೆಲುಗು ವೆದುರು (ಸುಬ್ಬರಾವ್ ಅವರ ಪ್ರಕಾರ ಪದಾದಿ ಯವ್ ಧ್ವನಿಮಾವು ಪ್ರಾಚೀನ ರೂಪವಾಗಿದೆ) ಬ್ರಾಹ್ಮಣ ತಮಿಳು ವಾೞಪ್ಪೞಂ, ಬ್ರಾಹ್ಮಣೇತರ ತಮಿಳು ವಾಝಪ್ಪಳಂ \ ವಾಳಪ್ಪೞಂ \ ವಾಯಪ್ಪಯಂ (ಬಾಳೆಹಣ್ಣು) ಬ್ರಾಹ್ಮಣ ತುಳು ಸಿಕ್ಕ್, ಬ್ರಾಹ್ಮಣೇತರ ತುಳು ತಿಕ್ಕ್ (ಸಿಗು)

ಆಕೃತಿಮಾ (ಶಾಸ್ತ್ರ) ಮತ್ತು ಶಬ್ದಕೋಶಗಳಿಗೆ ಸಂಬಂಧಿಸಿದಂತೆಯೂ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಭಾಷೆಗಳಲ್ಲಿ ವ್ಯತ್ಯಾಸಗಳಾಗುತ್ತವೆ. ರಾಮಾನುಜನ್ ಅವರು ಹೇಳುವಂತೆ, ತಮಿಳಿನ ಕ್ರಿಯಾಂತ್ಯಗಳಲ್ಲಿ ಈ ಆಕೃತಿಮಾ ಭಿನ್ನರೂಪಗಳೆ, ಕಂಡುಬರುತ್ತವೆ. ಕನ್ನಡದ ಕ್ರಿಯಾಂತ್ಯ ಮತ್ತು ನಾಮಪದಾಂತ್ಯಗಳಲ್ಲಿ ಈ ರೀತಿಯ ವ್ಯತ್ಯಾಸಗಳಾಗುತ್ತವೆಂದು ಮೆಕ್‌ಕೊರ್ಮಾಕ್ ಹೇಳುತ್ತಾನೆ. ಬ್ರೈಟ್ ಮತ್ತು ರಾಮಾನುಜನ್ ಅವರು ವಿವರಿಸಿರುವಂತೆ ತುಳುವಿನ ಷಷ್ಠೀ ವಿಭಕ್ತಿ ಪ್ರತ್ಯಯದಲ್ಲಿ ಇಂತಹ ಭಿನ್ನ ಆಕೃತಿಮಾ ರೂಪಗಳಿವೆ. ಸುಬ್ಬರಾವ್ ಅವರ ಪ್ರಕಾರ ತೆಲುಗಿನ ಕ್ರಿಯಾಂತ್ಯಗಳಲ್ಲಿ ಈ ತೆರನಾದ ವ್ಯತ್ಯಾಸಗಳಾಗುತ್ತವೆ. ಅನೇಕ ಸಂದರ್ಭಗಳಲ್ಲಿ ಇಲ್ಲಿ ವಿವರಿಸಿದ ವಿವಿಧ ಪೂರಕಗಳು ಒಂದೇ ಪದಾಂತ್ಯಗಳಲ್ಲಿ ಕಂಡು ಬರುವುದಿದೆ. ಅಂದರೆ ಒಂದೇ ಆಕೃತಿಮಾ ವರ್ಗವು ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಪ್ರಭೇದಗಳಲ್ಲಿ ವಿಭಿನ್ನ ರೂಪಗಳಾಗಿ ಕಾಣಿಸುತ್ತದೆ. ಸಾದೃಶ್ಯಾರ್ಥಗಳೊಂದಿಗೆ ಅನನ್ಯವಾದ ಆಕೃತಿಮಾ ಪರಿಸರದಲ್ಲಿ ಪ್ರತ್ಯಯಗಳ ಧ್ವನಿಮಾ ಸ್ವರೂಪದಲ್ಲಿ ಸಂಭವಿಸುವ ವ್ಯತ್ಯಾಸಗಳೇ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಭಾಷೆಗಳಲ್ಲಿನ ಪ್ರಮುಖ ವ್ಯತ್ಯಾಸಗಳಾಗಿವೆಯೆಂದು ಮೆಕ್ ಕೊಮಾರ್ಕನು ಗುರುತಿಸುತ್ತಾನೆ. ಇದರಂತೆ ಕನ್ನಡದ ಉತ್ತಮ ಪುರುಷ ಏಕವಚನ ಕ್ರಿಯಾಪದವು ಬ್ರಾಹ್ಮಣರಲ್ಲಿ ಎ(e) ಧ್ವನಿಮಾದಿಂದ ಅಂತ್ಯಗೊಂಡರೆ ಬ್ರಾಹ್ಮಣೇತರರಲ್ಲಿ ಆ (ae) ಧ್ವನಿಮಾದಿಂದ ಅಂತ್ಯಗೊಳ್ಳುತ್ತದೆಂದೂ, ಉತ್ತಮ ಪುರುಷ ಬಹುವಚನವು ಬ್ರಾಹ್ಮಣರಲ್ಲಿ ಎ\ವಿ ಧ್ವನಿಮಾಗಳಿಂದ ಅಂತ್ಯಗೊಂಡರೆ ಬ್ರಾಹ್ಮಣೇತರರಲ್ಲಿ ಇ\ವಿ ಧ್ವನಿಮಾಗಳಿಂದ ಅಂತ್ಯಗೊಳ್ಳುತ್ತದೆಂದು ಮೆಕ್ ಕೊರ್ಮಾಕನು ಪಟ್ಟಿ ಮಾಡುತ್ತಾನೆ.

[1]

ಈ ತೆರನಾದ ವ್ಯತ್ಯಾಸಗಳನ್ನು ಇಂದು ಭಾಷಾಶಾಸ್ತ್ರಜ್ಞರು ಮೇಲ್ಮೈರಚನೆಯಲ್ಲಾಗುವ ವ್ಯತ್ಯಾಸಗಳೆಂದು ಕರೆಯುತ್ತಾರೆ. ಇಲ್ಲಿ ಪ್ರಸ್ತಾಪಿತವಾದ ಕೆಲವು ಭಿನ್ನತೆಗಳು ಇನ್ನೊಂದೆಡೆ ಅಲ್ಲಿರುವ ಅರ್ಥವಿಜ್ಞಾನ ರಚನೆಯಲ್ಲಾಗುವ ವ್ಯತ್ಯಾಸಗಳೂ ಆಗಿವೆ. ಉದಾಹರಣೆಗೆ ಸಪ್ತಮೀ ವಿಭಕ್ತಿ ಪ್ರತ್ಯಯಗಳ ಕುರಿತು ಚರ್ಚಿಸುತ್ತಾ ಮೆಕ್ ಕೊರ್ಮಾಕನು ಈ ಕೆಳಗಿನ ಎರಡು ದೃಷ್ಟಾಂತಗಳನ್ನು ಪಟ್ಟಿಮಾಡುತ್ತಾನೆ. (೧) ಬ್ರಾಹ್ಮಣರಲ್ಲಿಯ – ಕ, ಬ್ರಾಹ್ಮಣೇತರರಲ್ಲಿ ಇಗೆ, (೨) ಬ್ರಾಹ್ಮಣರಲ್ಲಿ ಉಕ್ಕ, ಬ್ರಾಹ್ಮಣೇತರರಲ್ಲಿ, ಇ ಗೆ, ಇಲ್ಲಿ ಬ್ರಾಹ್ಮಣ ಕನ್ನಡದಲ್ಲಿ ವ್ಯತ್ಯಾಸವಾಗಿದ್ದರೆ, ಬ್ರಾಹ್ಮಣೇತರ ಕನ್ನಡದಲ್ಲಿ ಆಗಿಲ್ಲವೆಂದು ಮೆಕ್ ಕೊರ್ಮಾಕನು ಸೂಚಿಸುತ್ತಾನೆ. ಬ್ರೈಟ್ ಮತ್ತು ರಾಮಾನುಜನ್ ಅವರು ಬ್ರಾಹ್ಮಣೇತರ ತುಳುವಿನಲ್ಲಿ ‘ದ’ ಎಂಬ ಒಂದೇ ಷಷ್ಠೀ ವಿಭಕ್ತಿ ಪ್ರತ್ಯಯವಿದ್ದರೆ ಬ್ರಾಹ್ಮಣ ತುಳುವಿನಲ್ಲಿ ‘ನೊ’ (ಮಹತ್/ಚೇತನ ನಾಮಪದಗಳೊಂದಿಗೆ) ಮತ್ತು ‘ನ್ತೆ’ (ಅಮಹತ್/ಅಚೇತನ ನಾಮಪದಗಳಿಗೆ) ಎಂಬೆರಡು ವಿಭಿನ್ನ ಪ್ರತ್ಯಯಗಳಿವೆಯೆನ್ನುತ್ತಾರೆ.[2] ರಾಮಾನುಜನ್ ಅವರು ತಮಿಳು ಸರ್ವನಾಮ ವ್ಯವಸ್ಥೆಯಲ್ಲೂ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಭಾಷೆಗಳೊಳಗೆ ಸಾಕಷ್ಟು ಭಿನ್ನತೆಗಳಿವೆಯೆನ್ನುತ್ತಾರೆ. ಇನ್ನೂ ಹತ್ತಿರದ ಸಂಶೋಧನೆಗಳು ನಡೆದಂತೆಲ್ಲಾ ಈ ರೀತಿಯ ಇನ್ನಷ್ಟು ಭಿನ್ನತೆಯ ಅಂಶಗಳು ಬೆಳಕಿಗೆ ಬರಬಹುದು.[3] ಭಾಷಿಕ ವ್ಯತ್ಯಾಸಗಳಿಗೆ ಕಾರಣವಾಗುವ ಅಂಶಗಳ ವಿಭಿನ್ನ ಸಾಮಾಜಿಕ ಕ್ರಿಯೆಗಳನ್ನು ಅಧ್ಯಯನ ಮಾಡುವಲ್ಲಿ ಮೇಲ್ಟೈ ವ್ಯಾಕರಣ ಮತ್ತು ಅರ್ಥರಚನೆಗಳೊಳಗಿನ ವ್ಯತ್ಯಾಸವು ಮುಖ್ಯವಾಗಿರುತ್ತದೆ.

 


[1] ಇವುಗಳಿಗೆ ಉದಾಹರಣೆಗಳನ್ನು ಕೊಡುತ್ತಿದ್ದರೆ ಭಿನ್ನತೆಗಳು ಇನ್ನಷ್ಟು ಸ್ಟಷ್ಟವಾಗುತ್ತಿದ್ದವು.

[2] ಇಲ್ಲಿ locative suffixes (ಸಪ್ತಮೀ ವಿಭಕ್ತಿ ಪ್ರತ್ಯಯ) ಎಂದರೂ ಆತ ಕೊಡುವ ಉದಾಹರಣೆಗಳು ಚತುರ್ಥೀ ವಿಭಕ್ತಿ ಪ್ರತ್ಯಯಗಳಿಗೆ ಸರಿಹೊಂದುತ್ತವೆ. ಹಾಗೂ ಇಲ್ಲಿಯ ಮಾಹಿತಿಯಲ್ಲಿ ಸ್ವಲ್ಪ ಗೊಂದಲವಿದ್ದಂತಿದೆ.

[3] ಆದರೆ ಇಲ್ಲಿ ಹೇಳಿದುದಕ್ಕಿಂತ ತೀರಾ ಭಿನ್ನವಾದ ವ್ಯವಸ್ಥೆಯನ್ನು ನಾವಿಂದು ತುಳು ಭಾಷೆಯಲ್ಲಿ ಕಾಣುತ್ತೇವೆ. ಬ್ರಾಹ್ಮಣೇತರ ತುಳುವಿನ ಷಷ್ಠೀ ವಿಭಕ್ತಿ ಪ್ರತ್ಯಯವು ಅಚೇತನ ವಸ್ತುಗಳ ಸಂದರ್ಭದಲ್ಲಿ ‘ತ’/’ದ’ ಆಗಿದ್ದರೆ ಚೇತನ ವಸ್ತುಗಳ ಸಂದರ್ಭದಲ್ಲಿ ‘ನ’ ಎಂದಾಗಿರುತ್ತದೆ. ಅದೇ ರೀತಿ ಬ್ರಾಹ್ಮಣ ತುಳುವಿನಲ್ಲಿ ಅಚೇತನ ವಸ್ತುಗಳಿಗೆ ‘ನ್ತ’ ಎಂಬ ಪ್ರತ್ಯಯವಿದ್ದರೆ ಚೇತನಾ ವಸ್ತುಗಳಿಗೆ ‘ನೊ’ ಎಂಬ ಪ್ರತ್ಯಯವಿದೆ ಹಾಗಾಗಿ ಪ್ರಸ್ತುತ ಲೇಖನದಲ್ಲಿಯ ಮಾಹಿತಿಗಳಿಗೆ ಸಾಕಷ್ಟು ಮಿತಿಗಳಿವೆ ಎನ್ನಬೇಕಾಗುತ್ತದೆ.