ದ್ರಾವಿಡ ಜನಾಂಗದ ಜನರು ಆಡುವ ಭಾಷೆಗಳನ್ನು ದ್ರಾವಿಡ ಭಾಷೆಗಳು ಎನ್ನುವರು. ಸುಮಾರು 135 ಕ್ಕೂ ಹೆಚ್ಚು ಭಾಷೆಗಳಿರಬಹುದೆಂದು ಅಂದಾಜಿಸಲಾಗಿರುವ ದ್ರಾವಿಡ ಭಾಷೆಗಳನ್ನು ದಕ್ಷಿಣ ಏಷ್ಯಾದ ಸುಮಾರು 16 ಕೋಟಿಗೂ ಹೆಚ್ಚು ಜನರು ಆಡುತ್ತಿದ್ದಾರೆ.

ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳು ಇಂದು ಬಳಕೆಯಲ್ಲಿರುವ ದ್ರಾವಿಡ ಭಾಷೆಗಳಲ್ಲಿಯೇ ಪ್ರಾಚೀನವಾದವುಗಳು. ಈ ನಾಲ್ಕು ಭಾಷೆಗಳು ಉತ್ತಮ ಸಾಹಿತ್ಯವನ್ನು ಹೊಂದಿದ್ದು ಇವುಗಳನ್ನು ಆಡುವವರ ಸಂಖ್ಯೆಯೂ ಹೆಚ್ಚು. ಇನ್ನಿತರ ಭಾಷೆಗಳು ಕೇವಲ ಆಡುಮಾತಿನ ರೂಪದಲ್ಲಿರುವಂತಹವು. ಪ್ರಾಚೀನತೆಯ ದೃಷ್ಟಿಯಿಂದ ನೋಡಿದಾಗ ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಕ್ರಮವಾದ ಸ್ಥಾನಗಳನ್ನು ಪಡೆಯುತ್ತವೆ. ಇದಕ್ಕೆ ದೊರೆತಿರುವ ಆಧಾರಗಳೇ ಸಾಕ್ಷಿಯಾಗಿವೆ.

ಜಗತ್ತಿನ ಭಾಷೆಗಳನ್ನು ವಾಂಶಿಕವಾಗಿ, ರಚನಾತ್ಮಕವಾಗಿ, ಭೌಗೋಳಿಕ ವಾಗಿ ಮತ್ತು ಜನಾಂಗಿಕವಾಗಿ ವರ್ಗೀಕರಿಸಲಾಗಿದೆ. ಇಂಡೋ – ಯುರೋಪಿ ಯನ್, ಆಸ್ಟ್ರೋ -ಏಷಿಯಾಟಿಕ್, ಸಿನೋ – ಟಿಬೆಟನ್, ಆಫ್ರಿಕನ್, ಅಮೆರಿಕನ್, ದ್ರಾವಿಡ ಮತ್ತು ಫಿನ್ನೋ ಉಗ್ರಿಕ್ ಭಾಷೆಗಳೆಂದು ವರ್ಗೀಕರಿಸ ಲಾಗಿದೆ. ಇವುಗಳಲ್ಲಿ ಇಂಡೋ – ಯುರೋಪಿಯನ್ ಭಾಷಾ ಪರಿವಾರವೇ ದೊಡ್ಡದು.

ಭಾರತದಲ್ಲಿ ಆಡಲಾಗುವ ಭಾಷೆಗಳು ನಾಲ್ಕು ಭಾಷಾ ಪರಿವಾರಕ್ಕೆ ಸೇರಿದವುಗಳಾಗಿವೆ. ಇಂಡೋ – ಆರ್ಯನ್, ದ್ರಾವಿಡ, ಟಿಬೆಟೋ – ಬರ್ಮನ್, ಮತ್ತು ಆಸ್ಟ್ರಿಕ್. ಇಲ್ಲೂ ಸಹಾ ಇಂಡೋ – ಆರ್ಯನ್ ಭಾಷೆಗಳು ಭಾರತದ ಮುಕ್ಕಾಲು ಭಾಗದಲ್ಲಿ ವ್ಯಾಪಿಸಿಕೊಂಡಿರುವುದಷ್ಠೇ ಅಲ್ಲ ಅದನ್ನು ಆಡುವವರ ಸಂಖ್ಯೆಯೂ ಸಹಾ ಹೆಚ್ಚು.ಅನಂತರದಲ್ಲಿ ದ್ರಾವಿಡ ಭಾಷೆಗಳು ಬರುತ್ತವೆ.

ದ್ರಾವಿಡ ಭಾಷೆಗಳು ಸಂಸ್ಕೃತದಿಂದ ಬಂದಿವೆಯೆಂಬ ಭಾವನೆ ಬಹಳ ಕಾಲ ಪ್ರಚಲಿತದಲ್ಲಿತ್ತು. ಇದಕ್ಕೆ ಕಾರಣ, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಂಸ್ಕೃತದ ಬಳಕೆ ಹೆಚ್ಚಾಗಿದ್ದುದೇ ಕಾರಣ. ಆದರೆ, ಅನೇಕ ವಿದ್ವಾಂಸರು ಸಂಶೋಧನೆಯ ಫಲವಾಗಿ ದ್ರಾವಿಡ ಭಾಷೆಗಳು ಸಂಸ್ಕೃತಜನ್ಯವಲ್ಲ ಎಂಬ ಅಂಶ ಪ್ರಕಟಗೊಂಡಿತು.

ಕನ್ನಡವನ್ನು ಕರ್ನಾಟಕದಲ್ಲೂ, ತಮಿಳನ್ನು ತಮಿಳುನಾಡಿನಲ್ಲೂ, ತೆಲುಗನ್ನು ಆಂಧ್ರಪ್ರದೇಶದಲ್ಲೂ ಮತ್ತು ಮಲಯಾಳಂ ಕೇರಳದಲ್ಲಿ ಹೆಚ್ಚು ಜನರು ಆಡುತ್ತಾರೆ. ಅಲ್ಲದೆ ಇವು ಆಯಾ ರಾಜ್ಯದ ಅಧಿಕೃತ ರಾಜ್ಯಭಾಷೆಯೂ ಹೌದು. ಈ ನಾಲ್ಕೂ ಭಾಷೆಗಳು ದಕ್ಷಿಣ ಭಾರತದಲ್ಲಿ ಬಳಕೆಯಲ್ಲಿವೆ. ಈ ಭಾಷೆಗಳನ್ನು ಬಿಟ್ಟರೆ ಇನ್ನುಳಿದ ಭಾಷೆಗಳಿಗೆ ಲಿಪಿ ಸೌಲಭ್ಯವಿಲ್ಲ. ಆಡು ಭಾಷೆಗಳಲ್ಲಿ ಲಿಖಿತ ಸಾಹಿತ್ಯ ದೊರೆಯುವುದಿಲ್ಲವಾದರೂ, ಜನಪದ ಸಾಹಿತ್ಯಕ್ಕೇನೂ ಕೊರತೆಯಿಲ್ಲ.

ದ್ರಾವಿಡ ಭಾಷೆಗಳನ್ನು ವರ್ಗೀಕರಿಸಿಕೊಳ್ಳುವ ಸಲುವಾಗಿ ಅನೇಕ ಪ್ರಯತ್ನಗಳು ನಡೆದಿವೆ. ಕಾಲ್ಡ್‌ವೆಲ್ಲರು ಆಂತರಿಕ ಸಂಬಂಧವನ್ನು ಆಧರಿಸಿ ತಮಿಳು – ಮಲಯಾಳಂ ಭಾಷೆಗಳು ತೀರಾ ಹತ್ತಿರದ ಭಾಷೆಗಳೆರಡೂ ತುಳು ಕನ್ನಡಕ್ಕೆ ಹತ್ತಿರವಾದರೂ ಕೊಡುಗು ಭಾಷೆಗೆ ಇನ್ನೂ ಹತ್ತಿರವೆಂದು ತಿಳಿಸಿದರು.

ಭಾರತೀಯ ಭಾಷೆಗಳ ಸರ್ವೇಕ್ಷಣಾ ಕಾರ್ಯವನ್ನು ಕೈಗೊಂಡ ಜಾರ್ಜ್ ಗ್ರಿಯರ‌್ಸನ್ನರು, ದ್ರಾವಿಡ ಭಾಷೆಗಳ ಆಂತರಿಕ ಸಂಬಂಧವನ್ನು ಆಧರಿಸಿ, ಆಂಧ್ರವರ್ಗ, ದ್ರಾವಿಡವರ್ಗ, ಮಧ್ಯವರ್ತಿವರ್ಗ, ವಾಯುವ್ಯವರ್ಗ, ಅರ್ಧ ದ್ರಾವಿಡ ವರ್ಗ ಎಂದು ವರ್ಗೀಕರಿಸಿದರು. ಆದರೆ ಇಲ್ಲೂ  ಕೂಡಾ ಅನೇಕ ನ್ಯೂನತೆಗಳು ಕಂಡು ಬಂದವು. ಏಕೆಂದರೆ ಭೌಗೋಳಿಕ ಅಂಶಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ರಚನಾತ್ಮಕ ಅಂಶಗಳನ್ನು ಗಮನಿಸದಿರುವುದು ಈ ನ್ಯೂನತೆಗೆ ಕಾರಣ. ದ್ರಾವಿಡ ಭಾಷೆಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ವರ್ಗೀಕರಿಸಲು ಪ್ರಯತ್ನಿಸಿದವರಲ್ಲಿ ಸುನೀತಿಕುಮಾರ ಚಟರ್ಜಿಯವರೂ ಒಬ್ಬರು ಇವರ ಪ್ರಯತ್ನವನ್ನು ಗಮನಿಸಿ ಆಧುನಿಕ ಭಾಷಾ ವಿಜ್ಞಾನಿಗಳು ದ್ರಾವಿಡ ಭಾಷೆಗಳನ್ನು ಅವುಗಳ ಆಂತರಿಕ ಸಂಬಂಧವನ್ನು ಗಮನಿಸಿ ಭೌಗೋಳಿಕ, ವಾಂಶಿಕ ಮತ್ತು ರಚನಾತ್ಮಕವಾಗಿ, ದಕ್ಷಿಣ ದ್ರಾವಿಡ, ಮಧ್ಯ ದ್ರಾವಿಡ, ಉತ್ತರ ದ್ರಾವಿಡ ಭಾಷೆಗಳು ಎಂಬುದಾಗಿ ಮೂರು ವರ್ಗದಲ್ಲಿ ವರ್ಗೀಕರಿಸಿದರು.

ದಕ್ಷಿಣ ದ್ರಾವಿಡ ವರ್ಗದ ಭಾಷೆಗಳು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮುಂತಾದ ಕಡೆಗಳಲ್ಲಿ ಬಳಕೆಯಲ್ಲಿರುವ ಭಾಷೆಗಳು. ಇವುಗಳ ಪರಸ್ಪರ ನಿಕಟ ಸಂಬಂಧವನ್ನು ಹೊಂದಿರುವುದಷ್ಟೇ ಅಲ್ಲದೆ ಸಾಕಷ್ಟು ಸಾಮ್ಯವನ್ನೂ ಹೊಂದಿವೆ. ಮಲಯಾಳಂ, ತಮಿಳು, ಕುರುಂಬ, ತೊದ, ಕೋತ, ಇರುಳ, ತೆಲುಗು, ಕನ್ನಡ, ಕೊಡುಗು, ಬಡಗ, ಹವ್ಯಕ, ಸೋಲಿಗ, ಕೊರಗ, ತುಳು, ಸವಾರ ಮುಂತಾದವು ಮುಖ್ಯವಾಗಿವೆ.

ಮಧ್ಯದ್ರಾವಿಡ ಭಾಷೆಗಳು, ಆಂಧ್ರಪ್ರದೇಶದ ಉತ್ತರಭಾಗ, ಮಹಾರಾಷ್ಟ್ರ, ಆಂದ್ರಪ್ರದೇಶ, ಒರಿಸ್ಸಾ, ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಬಳಕೆಯಲ್ಲಿದೆ.  ಇವುಗಳಲ್ಲಿ ಮುಖ್ಯವಾದವುಗಳೆಂದರೆ, ಕೊಲಾಮಿ, ನಾಯ್ಕಿ, ಪರ್ಜಿ, ಗದಬ, ಗೋಂಡಿ, ಕೊಂಡ, ಪೆಂಗೋ, ಮುಂಡ, ದೋರ್ಲಿ, ಪೊಯ, ಕೊಯ, ಕುವಿ, ಕುಯಿ.

ಉತ್ತರ ದ್ರಾವಿಡ ಭಾಷೆಗಳು, ಅಸ್ಸಾಂ, ನೇಪಾಳ, ಹಿಮಾಚಲ ಪ್ರದೇಶ, ಸಿಕ್ಕಿಂ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳಗಳಲ್ಲಿ ಬಳಕೆಯಲ್ಲಿವೆ. ಇವುಗಳೆಂ ದರೆ, ಮಾಲ್ತೋ, ಕುರುಖ್, ಧಾಂಗರ್, ಬಾಹ್ರೂಇ ಭಾಷೆಗಳು. ಬ್ರಾಹೂಇ  ಭಾರತದ ಹೊರಗಡೆ ಬಳಕೆಯಲ್ಲಿವೆ.

ಈ ರೀತಿ ವರ್ಗೀಕರಿಸಿಕೊಂಡಿದ್ದರೂ ಸಹಾ ಕೆಲವು  ಅಂಶಗಳು ಎಲ್ಲಾ ಭಾಗಗಳಲ್ಲಿಯೂ ಗೋಚರಿಸಬಹುದು. ಉದಾ. ತೆಲುಗು, ಕೆಲವು ಅಂಶಗಳಲ್ಲಿ ದಕ್ಷಿಣ ದ್ರಾವಿಡ ಮತ್ತೆ ಕೆಲವು ಅಂಶಗಳಲ್ಲಿ ಮಧ್ಯದ್ರಾವಿಡ ಭಾಷೆಗಳನ್ನು ಹೋಲುವುದು.

ಭ. ಕೃಷ್ಣಮೂರ್ತಿಯವರು ದ್ರಾವಿಡ ಭಾಷೆಗಳ ಆಂತರಿಕ ಸಂಬಂಧವನ್ನು ಆಧರಿಸಿ ಈ ಕೆಳಕಂಡಂತೆ ವರ್ಗೀಕರಿಸಿದ್ದಾರೆ.

1. ದಕ್ಷಿಣ ದ್ರಾವಿಡ, 2. ಮಧ್ಯ ದ್ರಾವಿಡ, 3. ಉತ್ತರ ದ್ರಾವಿಡ ಭಾಷೆಗಳು ಪ್ರತಿಯೊಂದರಲ್ಲೂ ನಾಲ್ಕು ಉಪವರ್ಗಗಳನ್ನು ಸೂಚಿಸುತ್ತಾರೆ.

ದಕ್ಷಿಣ ದ್ರಾವಿಡ

1. ತಮಿಳು – ಮಲಯಾಳಂ ಭಾಷಾವರ್ಗ (ತಮಿಳು, ಮಲಯಾಳಂ, ಇರುಳ ಇತ್ಯಾದಿ)

2. ಕನ್ನಡ – ಕೊಡಗು ಭಾಷಾವರ್ಗ (ಕನ್ನಡ – ಕೊಡಗು, ಬಡಗ ಇತ್ಯಾದಿ)

3. ತೊದ – ಕೊರಗ ಭಾಷಾವರ್ಗ (ತೊದ, ಕೋತ ಇತ್ಯಾದಿ)

4. ತುಳು – ಕೊರಗ ಭಾಷಾವರ್ಗ (ತುಳು – ಕೊರಗ ಇತ್ಯಾದಿ)

ಇನ್ನೊಂದು ವರ್ಗೀಕರಣದ ಪ್ರಕಾರ 1. ತೆಲಗು – ಸವಾರ ಇತ್ಯಾದಿಗಳನ್ನು  ಒಳಗೊಂಡ ತೆಲುಗು ಭಾಷಾವರ್ಗ 2. ಗೋಂಡಿ, ಕೋಯ, ಕೊಂಡ ಇತ್ಯಾದಿಗಳುಳ್ಳ ಗೋಂಡಿ ಕೊಂಡ ಭಾಷಾವರ್ಗ 3. ಕುಯಿ, ಕುವಿ, ಇಂದ ಸೇರಿದ ಕುಯಿ – ಕುವಿ ಭಾಷಾವರ್ಗ 4. ಪೆಂಗೋ – ಮಂಡ ಇತ್ಯಾದಿಗಳು ಸೇರಿದ ಪೆಂಗೋ ಮುಂಡ ಭಾಷಾವರ್ಗ.

ಮಧ್ಯದ್ರಾವಿಡ ಭಾಷೆಗಳನ್ನು ಮೂರು ಉಪವರ್ಗಗಳನ್ನಾಗಿ ವರ್ಗೀಕರಿಸ ಲಾಗಿದೆ.

1. ಪರ್ಜಿ, ಗದಬ, ಪೋಯ ಸೇರಿದ ಪರ್ಜಿ ಗದಬ ಭಾಷಾವರ್ಗ

2. ನಾಯ್ಕಿ ಇತ್ಯಾದಿಗಳು ಸೇರಿದ ನಾಯ್ಕಿ ಭಾಷಾವರ್ಗ

3. ಕೊಲಾಮಿ ಇತ್ಯಾದಿಗಳ ಕೊಲಾಮಿ ಭಾಷಾವರ್ಗ.

ಉತ್ತರ ದ್ರಾವಿಡ ಭಾಷೆಗಳನ್ನು ಎರಡು ಉಪವರ್ಗಗಳಲ್ಲಿ ಕಾಣಬಹುದು.

1. ಕುರುಖ್ – ಮಾಲ್ತೋ, ಧಾಂಗರ್ ಇತ್ಯಾದಿಗಳು ಸೇರಿದ ಕುರುಖ್ –

2. ಮಾಲ್ತೋ ಭಾಷಾವರ್ಗ

3. ಬ್ರಾಹೂಇ ಇತ್ಯಾದಿಗಳು ಸೇರಿದ ಬ್ರಾಹೂ ಈ ಭಾಷಾವರ್ಗ.

ವಿದ್ವಾಂಸರು ದ್ರಾವಿಡ ಭಾಷೆಗಳ ವರ್ಗೀಕರಣವನ್ನು ಬೇರೆ ಬೇರೆ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರುವರಾದರೂ ಅದರಲ್ಲೇ ಒಮ್ಮತವನ್ನು ಕಾಣಲಾಗಿಲ್ಲ. ಹೀಗಾಗಿ ದ್ರಾವಿಡ ಭಾಷಾ ವರ್ಗೀಕರಣ ಇನ್ನೂ ಅಸಮಪರ್ಕವಾಗಿಯೇ ಇದೆಯೆಂದು ಹೇಳಬಹುದು.