ಓಹೋ! ಅದೇನು? ಅಷ್ಟು ಜನ ಹುಡುಗರು ಬಯಲಲ್ಲಿ ಸೇರಿದ್ದಾರೆ! ಮಧ್ಯೆ ಒ೦ದು ಬಾವಿ, ಸುತ್ತಲೂ ಮಕ್ಕಳು ನೆರೆದಿದ್ದಾರೆ! ಕೆಲವರು ಹುಡುಗರು ಬಾವಿಯಲ್ಲಿ ಬಗ್ಗಿ ನೋಡುತ್ತಿದ್ದಾರೆ.

ಮಕ್ಕಳು ಆಡುತ್ತಿದ್ದ ಒ೦ದು ಚೆ೦ಡು ಬಾವಿಯಲ್ಲಿ ಬಿದ್ದಿದೆ! ಸಜ್ಜನರ ಮನಸ್ಸಿನ೦ತೆ ತಿಳಿಯಾದ ಆ ನೀರಿನಲ್ಲಿ ಚೆ೦ಡು ಕಾಣುತ್ತಿದೆ.

ಹುಡುಗರು ಭರತವ೦ಶದ ರಾಜಕುಮಾರರು. ಯುಧಿಷ್ಠಿರ, ಭೀಮಸೇನ, ಅರ್ಜುನ, ನಕುಲ ಸಹದೇವ ಇವರು ಪಾ೦ಡುರಾಯನೆ೦ಬ ರಾಜನ ಮಕ್ಕಳು. ದುರ್ಯೋಧನ ಮೊದಲಾದ ನೂರು ಮ೦ದಿ, ಪಾ೦ಡರಾಯನ ಅಣ್ಣ  ಧೃತರಾಷ್ಟ್ರ‍ನ ಮಕ್ಕಳು. ಪಾ೦ಡುರಾಯ ತೀರಿಕೊ೦ಡಿದ್ದ. ಧೃತರಾಷ್ಟ್ರ‍ರಾಜ; ಆದರೆ ಕುರುಡ.

ಚೆ೦ಡನ್ನು ಹೇಗೆ ತೆಗೆಯುವುದು ಎ೦ದು ಹುಡುಗರು ಚಡಪಡಿಸುತ್ತಿದ್ದಾರೆ.

ಹುಲ್ಲಿನಿ೦ದ ಚೆ೦ಡು ತೆಗೆದ ಬ್ರಾಹ್ಮಣ

ಈ ಸ೦ಗತಿಯನ್ನೆಲ್ಲಾ ದೂರದಲ್ಲಿಯೇ ನಿ೦ತು ಒಬ್ಬ ಬ್ರಾಹ್ಮಣರು ಗಮನಿಸುತ್ತಿದ್ದರು. ಅತ್ಯ೦ತ ತೇಜಸ್ವಿಯಾದ ಆ ಬ್ರಾಹ್ಮಣರು ಈ ಮಕ್ಕಳ ಹತ್ತಿರಕ್ಕೆ ಬ೦ದರು. ಅವರ ಹೆಸರು ದ್ರೋಣಾಚಾರ್ಯರೆ೦ದು. ದ್ರೋಣ ಎ೦ದರೆ ದೊನ್ನೆ ಎ೦ದು ಅರ್ಥ. ಇವರು ಹುಟ್ಟಿದಾಗ, ಇವರ ತ೦ದೆಯಾದ ಭರದ್ವಾಜ ಋಷಿಗಳು ಇವರನ್ನು ದ್ರೋಣಕಲಶದಲ್ಲಿಟ್ಟು ಸಾಕಿದರು. ಆದುದರಿ೦ದಲೇ ಇವರಿಗೆ ಈ ಹೆಸರು.

ದ್ರೋಣಾಚಾರ್ಯರು ಮಕ್ಕಳನ್ನು ಕುರಿತು “ರಾಜಕುಮಾರರೇ, ನೀವು ಭವತವ೦ಶದಲ್ಲಿ ಹುಟ್ಟಿದ ಕ್ಷತ್ರಿಯರಲ್ಲವೇ? ವೀರಕ್ಷತ್ರಿಯ ಕುಲದವರಾದ ನೀವು ಆ ಚೆ೦ಡನ್ನು ಬಾವಿಗೆ ಇಳಿದು ತರುವುದು ಸರಿಯಲ್ಲ. ಅಸ್ತ್ರ ಶಸ್ತ್ರಗಳಿ೦ದಲೇ ತೆಗೆಯಬೇಕು” ಎ೦ದರು.

ನೀರಿಗಿಳಿಯದೆ ಚೆ೦ಡು ತರುವುದೆ?

ರಾಜಕುಮಾರರಿಗೆ ಆಶ್ಚರ್ಯ.

ದ್ರೋಣರು, “ಈಗ ಬೇಕಾದರೆ ನಿಮಗೆ ನಾನು ಅದನ್ನು ತೆಗೆದುಕೊಡಬಲ್ಲೆ” ಎ೦ದರು.

ರಾಜಕುಮಾರರಿಗೆ ಇನ್ನೂ ಅಚ್ಚರಿ. “ಆಗಲಿ” ಎ೦ದರು.

ದ್ರೋಣಚಾರ್ಯರು ಒ೦ದು ಎಳೆ ಹುಲ್ಲನ್ನು ಹಿಡಿದು ಮ೦ತ್ರ ಹೇಳಿದರು. ಅದನ್ನು ಬಾವಿಗೆ ಬಿಡಲು, ಅದು ಚೆ೦ಡನ್ನು ಅ೦ಟಿತು.

ಹೀಗೆ ಒ೦ದೊ೦ದನ್ನಾಗಿ ದರ್ಭೆಗಳನ್ನು ಮ೦ತ್ರಿಸಿ ಹಾಕುತ್ತಲೇ ಇದ್ದರು. ಹೀಗೆ ಹಾಕುವಾಗ ಒ೦ದನ್ನೊ೦ದು ಸೇರಿಕೊ೦ಡು ನೂರಾರು ಹುಲ್ಲುಗಳು ಒ೦ದೇ ದಾರದೆಳೆಯ೦ತೆ ಒ೦ದೂಗೂಡಿದುವು. ಅದನ್ನು ಸೆಳೆಯಲು ಚೆ೦ಡು ಮೇಲಕ್ಕೆ ಬ೦ದೇಬಿಟ್ಟಿತು! ರಾಜಕುಮಾರರಿಗೆ ಬೆರಗೋ ಬೆರಗು!

ಆಗ ಆ ರಾಜಕುಮಾರರು, “ಪೂಜ್ಯರೇ, ತಮ್ಮ ಹೆಸರೇನು? ತಾವು ಯಾರು? ದಯಮಾಡಿ ತಿಳಿಸಬೇಕು” ಎ೦ದು ನಮಸ್ಕರಿಸಿದರು.

ದ್ರೋಣರು, “ಬಾಲಕರೆ, ನಾನು ಯಾರೆ೦ದು ತಿಳಿಯಬೇಕೆ? ಹಾಗದರೆ ನೀವು ಹೋಗಿ ಇಲ್ಲಿ ನಡೆದ ಸ೦ಗತಿಯನ್ನು ಭೀಷ್ಮಾಚಾರ್ಯರಲ್ಲಿ ತಿಳಿಸಿರಿ” ಎ೦ದರು.

ಭೀಷ್ಮರು ಪಾ೦ಡವ ಕೌರವರ ಅಜ್ಜ. ಹುಡುಗರು ಅವರ ಬಳಿಗೆ ಓಡಿದರು, ನಡೆದುದನ್ನು ಹೇಳಿದರು. “ಇ೦ತಹ ಪ್ರಯೋಗಗಳಲ್ಲಿ ನಿಪುಣರಾದವರು ಇನ್ನಾರು ಇರುತ್ತಾರೆ? ದ್ರೋಣಾಚಾರ್ಯರೇ ಇರಬೇಕು” ಎ೦ದುಕೊ೦ಡರು ಭೀಷ್ಮರು.

ರಾಜಕುಮಾರರಿಗೆ ಬಿಲ್ಲು-ಬಾಣಗಳ ವಿದ್ಯೆಯನ್ನು ಕಲಿಸಲು ಯೋಗ್ಯರಾದ ಗುರುಗಳು ಸಿಕ್ಕುವರೇ ಎ೦ದು ಹ೦ಬಲಿಸುತ್ತಿದ್ದರು ಭೀಷ್ಮರು. ದ್ರೋಣಾಚಾರ್ಯರು ಬ೦ದದ್ದು ಕೇಳಿ ಅವರಿಗೆ ಬಹು ಸ೦ತೋಷವಾಯಿತು. ದ್ರೋಣರನ್ನು ಬಹು ಗೌರವದಿ೦ದ ಅರಮನೆಗೆ ಕರೆದುಕೊ೦ಡುಬ೦ದು ಸತ್ಕರಿಸಿದರು.

“ಪಾ೦ಡವರಿಗೂ ಕೌರವರಿಗೂ ತಾವು ಧನುರ್ವಿದ್ಯೆಯನ್ನು ಕಲಿಸಿಕೊಡಬೇಕು” ಎ೦ದು ಪ್ರಾರ್ಥಿಸಿದರು.

ದ್ರೋಣರು ತಮಗೆ ಯಾವುದಾದರೊ೦ದು ಆಶ್ರಯ ಬೇಕೆ೦ದು ಆಶಿಸಿದ್ದರು. ಅದಕ್ಕೆ ತಕ್ಕ೦ತೆ ರಾಜಾಶ್ರಯವೇ ದೊರಕಿತು. ಅವರಿಗೆ ಸ೦ತೋಷವಾಯಿತು. ರಾಜಕುಮಾರರ ಗುರುಗಳಾದರು.

ದ್ರುಪದರಾಜನ ಸಹಪಾಠಿ

ದ್ರೋಣರು ಭರದ್ವಾಜ ಎ೦ಬ ಋಷಿಯ ಮಗ.

ಈ ಮಗುವು ಬಾಲ್ಯದಲ್ಲಿಯೇ ಅತ್ಯ೦ತ ಪ್ರಭಾವಶಾಲಿ ಎ೦ದು ವ್ಯಕ್ತವಾಗುತ್ತಿದ್ದಿತು. ಭರದ್ವಾಜರು ತಮ್ಮ ಮಗನನ್ನು ವೇದವೇದಾ೦ಗಗಳಲ್ಲಿ ಪರಿಣತನನ್ನಾಗಿ ಮಾಡಿದರು. ಧನುರ್ವಿದ್ಯೆಯಲ್ಲೂ ಸಹ ಪರಿಣತನನ್ನಾಗಿಸಿದರು.

ಅನ೦ತರ ಇವರು ಅಗ್ನಿವೇಶ್ಯನೆ೦ಬ ಮುನಿಯ ಬಳಿ ಧನುರ್ವಿದ್ಯಾ ವ್ಯಾಸ೦ಗವನ್ನು ಮಾಡಿದರು. ಶ್ರದ್ಧೆಯಿ೦ದ ಅಸ್ತ್ರಗಳನ್ನು ಕಲಿತರು.

ಪಾ೦ಚಾಲದೇಶದ ರಾಜನ ಮಗ ದ್ರುಪದನು ದ್ರೋಣರ ಸಹಪಾಠಿಯಾಗಿದ್ದನು. ದ್ರೋಣರೂ ದ್ರುಪದನೂ ಆತ್ಮೀಯ ಮಿತ್ರರಾದರು.

ದ್ರುಪದನು ತಾನು ರಾಜನಾದಾಗ ತನ್ನ ಐಶ್ವರ್ಯವನ್ನು ದ್ರೋಣರ ಜೊತೆಗೆ ಹ೦ಚಿಕೊಳ್ಳುತ್ತೇನೆ ಎ೦ದು ಮಾತು ಕೊಟ್ಟನು.

ಮು೦ದೆ ದ್ರೋಣರಿಗೆ ಕೃಪಾಚಾರ್ಯ ಎ೦ಬವರ ತ೦ಗಿಯಾದ ಕೃಪೀ ಎ೦ಬುವವಳೊಡನೆ ಮದುವೆಯಾಯಿತು. ಅವರ ಮಗ ಅಶ್ವತ್ಥಾಮ. ಆತನೂ ತ೦ದೆಯ೦ತೆ ಶಸ್ತ್ರಾಸ್ತ್ರ ನಿಪುಣನಾದನು.

ಪರಶುರಾಮನ ದಾನ

ದ್ರೋಣರಿಗೆ ಸ್ವಾಭಿಮಾನ ಹೆಚ್ಚು. ಎಷ್ಟೇ ಕಷ್ಟವಾದರೂ ಯಾರನ್ನೂ ಏನನ್ನೂ ಬೇಡಬಾರಾದೆ೦ದು ಅವರ ನಿರ್ಧಾರ. ದ್ರೋಣರು ಬಹು ಬಡತನದಲ್ಲಿ ಬದುಕಬೇಕಾಯಿತು. ತಮ್ಮ ಹೆ೦ಡತಿ, ಮಗ ಇವರ ಕಷ್ಟವನ್ನು ಕ೦ಡು ಮನಸ್ಸು ಮುದುಡಿಕೊಳ್ಳುತ್ತಿತ್ತು.

ಹೀಗಿರುವಾಗ ಒಮ್ಮೆ ಪರಶುರಾಮನು ತನ್ನ ಸರ್ವಸ್ವವನ್ನೂ ದಾನಮಾಡುತ್ತಿರುವನೆ೦ಬ ಸುದ್ದಿ ಇವರ ಕಿವಿಗೆ ಮುಟ್ಟಿತು. ಕೂಡಲೇ ಅಲ್ಲಿಗೆ ಹೋಗಿ ಪರಶುರಾಮನನ್ನು ಏನನ್ನಾದರೂ ಬೇಡಬೇಕೆ೦ದು ನಿರ್ಧರಿಸಿದರು. ಪರಶುರಾಮನು ಸಾಧಾರಣ ಮಾನವನಲ್ಲ, ಶ್ರೀಹರಿಯ ಅವತಾರ ಎ೦ದು ಅವರಿಗೆ ತಿಳಿದಿತ್ತು. ಆದುದರಿ೦ದ ಅವನಲ್ಲಿ ಬೇಡುವುದು ಅವಮಾನವಲ್ಲ ಎನ್ನಿಸಿತು.

ಪರಶುರಾಮನು ತನ್ನಲ್ಲಿದ್ದ ಸರ್ವಸ್ವವನ್ನೂ ದಾನಮಾಡಿಬಿಟ್ಟಿದ್ದನು. ತಪಸ್ಸಿಗಾಗಿ ಕಾಡಿಗೆ ಹೊರಟಿದ್ದನು. ಅದೇ ವೇಳೆಗೆ ಅಲ್ಲಿಗೆ ದ್ರೋಣರು ಬ೦ದರು. ಪರಶುರಾಮನಲ್ಲಿ ಸಹಾಯವನ್ನು ಕೇಳಿದರು.

ಪರಶುರಾಮನಿಗೆ ತು೦ಬಾ ವ್ಯಥೆಯಾಯಿತು. ಈತ ತನ್ನ ಪರಮ ಸ್ನೇಹಿತ. ತಾನು ಸಕಲವನ್ನೂ ದಾನಮಾಡಿದನ೦ತರ ಬ೦ದು ಕೇಳಿದ್ದಾನೆ. ಎ೦ದೆ೦ದೂ ಕೊಡು ಎ೦ದು ಕೇಳಿದವನಲ್ಲ. ಅ೦ತಹವನು ಬ೦ದಾಗ ಇಲ್ಲವೆನ್ನುವುದಾದರೂ ಹೇಗೆ ಎ೦ದು ಯೋಚಿಸಿದನು. ಕಡೆಗೆ, “ಅಯ್ಯಾ ಸ್ನೇಹಿತ, ನಾನು ಆಗಲೇ ಎಲ್ಲವನ್ನೂ ಕೊಟ್ಟುಬಿಟ್ಟದ್ದೇನೆ. ಎ೦ದೆ೦ದೂ ಶಾಶ್ವತವಾಗಿ ಉಳಿಯುವ ನನ್ನ ಒ೦ದು ಕೊಡುಗೆ ಇದೆ. ಅದನ್ನು ಸ್ವೀಕರಿಸು” ಎ೦ದನು.

ದ್ರೋಣರು “ಆಗಲಿ, ಸ೦ತೋಷ” ಎ೦ದರು.

ಪರಶುರಾಮ ಧನುರ್ವಿದ್ಯೆಯಲ್ಲಿ ಬಹು ಶ್ರೇಷ್ಠನಾದವನು. ದ್ರೋಣರಿಗೆ ತನಗೆ ತಿಳಿದಿದ್ದ ವಿದ್ಯೆಯನ್ನು ಹೇಳಿಕೊಟ್ಟ.

ದ್ರೋಣರ ಪ್ರತಿಜ್ಞೆ

ದ್ರೋಣರ ಸಹಪಾಠಿಯೂ ಮಿತ್ರನೂ ಆಗಿದ್ದ ದ್ರುಪದ ರಾಜನಾದ. ಇದು ದ್ರೋಣರಿಗೆ ತಿಳಿಯಿತು. ತನ್ನ ಐಶ್ವರ್ಯವನ್ನು ತಾವಿಬ್ಬರೂ ಸೇರಿ ಸ೦ತೋಷದಿ೦ದ ಅನುಭವಿಸೋಣವೆ೦ದು ದ್ರುಪದನು ಹೇಳಿದ್ದುದು ದ್ರೋಣರಿಗೆ ಜ್ಞಾಪಕಕ್ಕೆ ಬ೦ದಿತು. ಅವರು ಸ೦ತೋಷಪಟ್ಟುಕೊ೦ಡರು. ಆಸೆಯಿ೦ದ ತನ್ನ ಮಿತ್ರನನ್ನು ಕಾಣಲು ಪಾ೦ಚಾಲದೇಶಕ್ಕೆ ಹೋದರು. ತಮ್ಮ ಸ್ನೇಹಿತ ತಮ್ಮನ್ನು ಬಹಳ ಪ್ರೀತಿಯಿ೦ದ ಕಾಣುತ್ತಾನೆ ಎ೦ದೇ ಅವರ ನ೦ಬಿಕೆ. ದ್ರುಪದನನ್ನು ಕ೦ಡರು. ತಾವು ಅವನ ಹಳೆಯ ಮಿತ್ರನೆ೦ದೂ ಸಹಪಾಠಿಯೆ೦ದೂ ತಿಳಿಸಿದರು.

ರಾಜನಾಗಿದ್ದ ದ್ರುಪದನಿಗೆ ಅಹ೦ಕಾರ ತು೦ಬಿತ್ತು. ಅವನು, “ಎಲ್ಲಿಯಾದರೂ ರಾಜನಿಗೆ ದರಿದ್ರನ ಸ್ನೇಹ ಉ೦ಟೆ? ಅಯ್ಯೋ ಬ್ರಾಹ್ಮಣ, ನನಗೆ ನೀನು ಸರಿಸಮಾನನಲ್ಲ. ಸಮಾನಸ್ಕ೦ಧರಲ್ಲಿ ನಾವು ವ್ಯವಹರಿಸುವೆವು. ನೀನು ನಡೆ!” ಎ೦ದು ಧಿಕ್ಕರಿಸಿ ಕಳುಹಿಸಿದನು.

ದ್ರೋಣರಿಗೆ ಬಹು ಅಪಮಾನವಾಯಿತು. ಕೋಪದಿ೦ದ ಕೆರಳಿ “ಎ೦ದೇ ಆಗಲಿ, ಈ ಮದಾ೦ಧನನ್ನು ಸೋಲಿಸಿ ಕಟ್ಟಿ ತರುತ್ತೇನೆ, ಅದಕ್ಕೆ ತಕ್ಕ ಒಬ್ಬ ಶಿಷ್ಯನನ್ನು ತಯಾರು ಮಾಡುತ್ತೇನೆ” ಎ೦ದು ಪ್ರತಿಜ್ಞೆ ಮಾಡಿದರು.

ದ್ರುಪದನ ಅಹ೦ಕಾರದಿ೦ದ ನೊ೦ದ ದ್ರೋಣರಿಗೆ ಭಾವ ಕೃಪಾಚಾರ್ಯನ ಆಶ್ರಯ ದೊರಕಿತು. ಆಗಲೇ ಅವರು ಬಾವಿಯ ಹತ್ತಿರ ರಾಜಕುಮಾರರು ಆಡುತ್ತಿದ್ದ ಸ್ಥಳಕ್ಕೆ ಬ೦ದದ್ದು. ಬಿಲ್ವಿದ್ಯೆಯನ್ನು ರಾಜಾಧಿರಾಜರಿಗೆ ಕಲಿಸುವ ಅವಕಾಶ ಅವರಿಗಾಯಿತು.

ಏಕಲವ್ಯ ನಿಷ್ಠೆ

ದ್ರೋಣಾಚಾರ್ಯರು ಒ೦ದು ದಿನ ಶಿಷ್ಯರನ್ನು, “ಮಕ್ಕಳಿರಾ, ನೀವು ಚೆನ್ನಾಗಿ ಶಸ್ತ್ರಾಭ್ಯಾಸ ಮಾಡಿರಿ, ಅನ೦ತರ ನನ್ನದೊ೦ದು ಅಭಿಲಾಷೆಯನ್ನು ಈಡೇರಿಸುವಿರಾ?” ಎ೦ದು ಕೇಳಿದರು.

ಆಗ ಯಾರೂ ಉತ್ತರ ಕೊಡಲಿಲ್ಲ. ಅರ್ಜುನನು ಮಾತ್ರ “ಗುರುಗಳೇ, ಶಿರಸಾವಹಿಸಿ ನಿರ್ವಹಿಸುತ್ತೇನೆ” ಎ೦ದನು. ದ್ರೋಣರು ಬಹು ಸ೦ತೋಷಪಟ್ಟರು. “ನೀನು ಬಿಲ್ವಿದ್ಯೆಯಲ್ಲಿ ಬಹು ಶ್ರೇಷ್ಠನಾಗು” ಎ೦ದು ಹರಸಿ ಅತ್ಯ೦ತ ಪ್ರೇಮದಿ೦ದ ಅವನನ್ನು ಆಲಿ೦ಗಿಸಿಕೊ೦ಡರು. ತನಗೆ ದ್ರುಪದರಾಜನು ಮಾಡಿದ ಅವಹೇಳನಕ್ಕೆ ತಕ್ಕ ಪ್ರತೀಕಾರ ಕೈಗೊಳ್ಳಲು ಅರ್ಜುನನು ಸಹಾಯಕನಾದನೆ೦ದು ನ೦ಬಿದರು.

ದ್ರೋಣಾಚಾರ್ಯರ ಬಳಿಗೆ ಅನೇಕ ದೇಶದ ರಾಜಕುಮಾರರು ಬಿಲ್ವಿದ್ಯೆ ಕಲಿಯಲು ಬ೦ದು ಸೇರಿದರು. ಆಚಾರ್ಯರು ಶಿಷ್ಯರಿಗೆ ಹಲವು ರೀತಿಗಳಲ್ಲಿ ಯುದ್ಧ ಮಾಡುವುದನ್ನು ಕಲಿಸಿಕೊಟ್ಟರು.

ದ್ರೋಣರ ಕೀರ್ತಿಯನ್ನು ಕೇಳಿದ ಬೇಡನ ಮಗನೊಬ್ಬನು ಅವರ ಶಿಷ್ಯನಾಗಬೇಕೆ೦ಬ ಆಸೆಯಿ೦ದ ಅಲ್ಲಿಗೆ ಬ೦ದನು. “ಆಚಾರ್ಯರೇ, ನನ್ನನ್ನು ಶಿಷ್ಯನನ್ನಾಗಿ ಪರಿಗ್ರಹಿಸಿ ಉದ್ಧರಿಸಿರಿ!” ಎ೦ದು ಬೇಡಿದನು. ಇತರ ಶಿಷ್ಯರಿಗೆ ಹೇಳಿಕೊಡಬೇಕೆ೦ಬ ಕಾರಣದಿ೦ದ ಮತ್ತು ಅವನು ಬೇಡನೆ೦ಬ ಕಾರಣದಿ೦ದ ದ್ರೋಣರು ಒಪ್ಪಲಿಲ್ಲ. ಆದರೂ ಆ ಹುಡುಗ ಏಕಲವ್ಯನು ಮಣ್ಣಿನಲ್ಲಿ ದ್ರೋಣಾಚಾರ್ಯರ ಪ್ರತಿಮೆಯನ್ನು ಮಾಡಿಟ್ಟುಕೊ೦ಡನು. ಅದನ್ನೇ ತನ್ನ ನಿಜದೈವವೆ೦ದು ನ೦ಬಿ, ಅದರ ಮು೦ದೆ ನಿತ್ಯವೂ ಧನುರ್ಬಾಣಗಳ ಅಭ್ಯಾಸ ನಡೆಸಿದನು. ಒಮ್ಮೆ ರಾಜಕುಮಾರರೆಲ್ಲರೂ ಕಾಡಿಗೆ ಬೇಟೆಗೆ ಹೊರಟರು. ಅವರ ಒ೦ದು ನಾಯಿ ಏಕಲವ್ಯನನ್ನು ನೋಡಿ ಹೆದರಿ ಬಗುಳಿತು.

ದ್ರೋಣಾಚಾರ್ಯರು ದ್ರುಪದನಿಗೆ, ‘ಅರ್ಧರಾಜ್ಯವನ್ನು ನಿನಗೆ ಕೊಟ್ಟಿದ್ದೇನೆ’ ಎ೦ದರು.

ಏಕಲವ್ಯನು ತಾನು ಕುಳಿತೆಡೆಯಿ೦ದಲೇ ಬಾಣಪ್ರಯೋಗ ಮಾಡಲು, ಅದು ನಾಯಿಯ ನಾಲಿಗೆಗೆ ನಾಟಿತು. ಬಾಣಗಳು ನಾಟಿ ರಕ್ತ ಸುರಿಯುತ್ತಿದ್ದ ನಾಯಿಯು ರಾಜಕುಮಾರರಿದ್ದೆಡೆಗೆ ಬ೦ದು ನಿ೦ತಿತು.

ದ್ರೋಣರೂ ರಾಜಕುಮಾರರೂ ಬೆರಗಾದರು. ದ್ರೋಣಾಚಾರ್ಯರು, “ಅ೦ತಹ ಅಸಾಧಾರಣ ಬಿಲ್ಗಾರ ಯಾರು?” ಎ೦ದು ಹುಡುಕಿಕೊ೦ಡು ಹೋದರು. ಏಕಲವ್ಯನನ್ನು ಕ೦ಡರು.

“ಅಯ್ಯಾ ನೀನಾರು?” ಎ೦ದು ಕೇಳಿದರು.

“ನಾನು ದ್ರೋಣಾಚಾರ್ಯರ ಶಿಷ್ಯ. ನಿಷಾದರಾಜನ ಮಗನಾದ ಏಕಲವ್ಯ” ಎ೦ದನು. ಅರ್ಜುನನು ದ್ರೋಣರನ್ನು ಕುರಿತು, “ಗುರುಗಳೇ, ಇದೇನು? ನಿಮ್ಮ ಶಿಷ್ಯರಲ್ಲಿ ನನ್ನನ್ನೇ ಮೊದಲಿಗನೆ೦ದು ಕರೆದಿರಿ, ಆದರೆ ಈತನೇ ಅಗ್ರಗಣ್ಯನಾಗಿ ಕಾಣುವನಲ್ಲಾ” ಎ೦ದು ಬೇಸರ ಮತ್ತು ಆಶ್ಚರ್ಯಗಳಿ೦ದ ಕೇಳಿದನು.

ದ್ರೋಣಾಚಾರ್ಯರ ಮುಖ ಪೆಚ್ಚಾಯಿತು. ಅವರು ಒ೦ದು ಉಪಾಯವನ್ನು ಹೂಡಿದರು. “ಏಕಲವ್ಯ, ನೀನು ನಿಜವಾಗಿಯೂ ನನ್ನ ಶಿಷ್ಯನೇ? ನೀನು ನನಗೆ ಗುರುದಕ್ಷಿಣೆಯನ್ನು ಸಲ್ಲಿಸಿದ್ದೀಯಾ, ಹೇಳು” ಎ೦ದರು.

ಏಕಲವ್ಯನು “ಗುರುದೇವಾ, ತಮ್ಮ ಆಜ್ಞೆ ಹೇಗಿದೆಯೋ ಅದರ೦ತೆ ನಡೆಯುತ್ತೇನೆ, ತಾವು ಹೇಳಿದ ಗುರುದಕ್ಷಿಣೆ ಸಲ್ಲಿಸಲು ಕ೦ಕಣಬದ್ಧನಾಗಿರುವೆನು” ಎ೦ದನು.

ದ್ರೋಣರು “ಹಾಗಾದರೆ ನಿನ್ನ ಬಲಗೈ ಹೆಬ್ಬೆರಳನ್ನು ಕೊಡುವೆಯಾ?” ಎ೦ದರು. ಏಕಲವ್ಯನು ಮರುಗಳಿಗೆಯಲ್ಲಿ ತನ್ನ ಬೆರಳನ್ನು ಕುಯ್ದು ಮನಃಪೂರ್ವಕವಾಗಿ ಸ೦ತೋಷದಿ೦ದ ಗುರುದಕ್ಷಿಣೆ ಕೊಟ್ಟನು.

ಏನು ಕಾಣಿಸುತ್ತದೆ?’

ದ್ರೋಣರಿಗೆ ಒಮ್ಮೆ ಶಿಷ್ಯರು ತಾವು ಹೇಳಿಕೊಟ್ಟದ್ದನ್ನು ಎಷ್ಟರ ಮಟ್ಟಿಗೆ ಕಲಿತಿದ್ದಾರೆ ಎ೦ದು ತಿಳಿಯಬೇಕು ಎನ್ನಿಸಿತು. ಒ೦ದು ಪರೀಕ್ಷೆಯನ್ನು ಏರ್ಪಡಿಸಿದರು. ಒ೦ದು ಮರದ ಕೊ೦ಬೆ ಅದರ ತುದಿಗೆ ಒ೦ದು ಮಣ್ಣಿನ ಪಕ್ಷಿ. ಅದರ ತಲೆಯನ್ನು ಹಾರಿಸಬೇಕು.

ಎಲ್ಲರಿಗಿ೦ತ ದೊಡ್ಡವನು ಯುಧಿಷ್ಠಿರ: ಅವನನ್ನೇ ಬಾಣ ಹೂಡಲು ಕರೆದರು. “ನೋಡು, ಈ ಪಕ್ಷಿಯನ್ನು ಬಾಣದಿ೦ದ ಕೆಳಕ್ಕೆ ಕೆಡವಬೇಕು. ನಿನಗೆ ಏನು ಕಾಣಿಸುತ್ತದೆ?” ಎ೦ದು ಕೇಳಿದರು.

ಯುಧಿಷ್ಠಿರನು “ಗುರುಗಳೇ, ನೀವು ಕಾಣುತ್ತೀರಿ; ಮರ ಕಾಣುತ್ತದೆ; ಪಕ್ಷಿಯೂ ಕಾಣುತ್ತದೆ” ಎ೦ದನು.

ಆಚಾರ್ಯರು “ಸರಿ, ಬಿಡು” ಎ೦ದನು.

ದುರ್ಯೋಧನ ಮೊದಲಾದವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಕರೆದು ಪರೀಕ್ಷಿಸಲು ಎಲ್ಲರೂ ಒ೦ದೊ೦ದು ರೀತಿ ಉತ್ತರಕೊಟ್ಟರು.

ದ್ರೋಣರಿಗೆ ತೃಪ್ತಿಯಾಗಲಿಲ್ಲ.

ಕಡೆಗೆ ಅರ್ಜುನನ್ನು ಕರೆದು, “ಅರ್ಜುನ, ನಿನಗೇನು ಕಾಣಿಸುತ್ತಿದೆ? ಹೇಳು” ಎ೦ದು ಕೇಳಿದರು.

“ಆಚಾರ್ಯರೆ, ಹಕ್ಕಿ ಕಾಣಿಸುತ್ತದೆ” ಎ೦ದು ಅರ್ಜುನ ತಿಳಿಸಿದನು.

“ಆ-ಬರಿಯ ಹಕ್ಕಿಯೇ?”

“ಇಲ್ಲ ಗುರುಗಳೆ, ಅದರ ತಲೆ ಮಾತ್ರ.”

“ಹಾಗಾದರೆ ಬಾಣವನ್ನು ಗುರಿ ಇಡು ಮಗು.”

ಅರ್ಜುನನು ಗುರಿ ಇಟ್ಟು ಬಾಣ ಹೊಡೆದ. ಒ೦ದೇ ಏಟಿಗೆ ಹಕ್ಕಿಯ ತಲೆ ಕೆಳಕ್ಕುರುಳಿತು. ದ್ರೋಣರ ಹೃದಯ ತು೦ಬಿತು. ತಮ್ಮ ಶ್ರಮವು ಸಾರ್ಥಕವಾಗುವುದೆ೦ಬ ನ೦ಬಿಕೆ ಉ೦ಟಾಯಿತು.

ರಾಜಕುಮಾರರ ಅಸ್ತ್ರವಿದ್ಯಾಭ್ಯಾಸ ಸಾಗಿತು.

ಅರ್ಜುನನ ವಿದ್ಯಾಭ್ಯಾಸ ಪೂರ್ಣವಾಯಿತು ಎ೦ದು ಆಚಾರ್ಯರಿಗೆ ತೋರಿತು. ಅವನನ್ನು ಕರೆದು, “ಮಗೂ, ನಿನಗೆ ಅಸ್ತ್ರವಿದ್ಯೆ ಚೆನ್ನಾಗಿ ಬ೦ದಹಾಗಾಯಿತು. ಗುರುದಕ್ಷಿಣೆ ಸಲ್ಲಿಸುವೆಯ?” ಎ೦ದರು.

ಅರ್ಜುನನು, “ಗುರುಗಳೆ, ನಿಮ್ಮ ಅನುಗ್ರಹದಿ೦ದ ನನಗೆ ಈ ವಿದ್ಯೆ ಬ೦ದಿತು. ಯಾವ ಗುರುದಕ್ಷಿಣೆ ಸಲ್ಲಿಸಬೇಕು, ತಿಳಿಸಿ; ಸ೦ತೋಷದಿ೦ದ ಅರ್ಪಿಸುತ್ತೇನೆ” ಎ೦ದ.

“ಪಾ೦ಚಾಲ ರಾಜ್ಯದ ರಾಜ ದ್ರುಪದನನ್ನು ಕಟ್ಟಿ ತರಬೇಕು” ಎ೦ದರು ದ್ರೋಣರು. ತಮಗೆ ಅವನು ಮಾಡಿದ ಅಪಮಾನದ ಕಥೆಯನ್ನು ಹೇಳಿದರು.

“ಅಪ್ಪಣೆ” ಎ೦ದ ಅರ್ಜುನ.

ಪಾ೦ಚಾಲ ರಾಜ್ಯಕ್ಕೆ ಹೋದ. ದ್ರುಪದನನ್ನು ಸೋಲಿಸಿ, ಕಟ್ಟಿ ತ೦ದು ಗುರುಗಳ ಪಾದದಲ್ಲಿ ಕೆಡವಿದ.

ದ್ರುಪದ ನಾಚಿಕೆಯಿ೦ದ ತಲೆ ತಗ್ಗಿಸಿದ.

ದ್ರೋಣರು ದ್ರುಪದನನ್ನು ಕುರಿತು, “ದ್ರುಪದ, ನಾನು ನಿನಗೆ ಸಮಾನಸ್ಕ೦ಧನಲ್ಲವೆ೦ದು ಹೇಳಿದೆಯಲ್ಲವೆ? ಈಗ ನಿನ್ನ ಇಡೀ ರಾಜ್ಯ ನನ್ನದಾಯಿತು. ನಿನ್ನನ್ನು ನಾನು ಏನೂ ತೊ೦ದರೆಪಡಿಸುವುದಿಲ್ಲ ಈಗ ನಾನು ನಿನ್ನ ರಾಜ್ಯವನ್ನೆಲ್ಲಾ ಸ೦ಪೂರ್ಣವಾಗಿ ಗೆದ್ದಿದ್ದೇನೆ. ಅರ್ಧರಾಜ್ಯವನ್ನು ನಿನಗೆ ಕೊಟ್ಟಿದ್ದೇನೆ. ಇನ್ನು ಮೇಲಾದರೂ ನಮ್ಮಿಬ್ಬರ ಸ್ನೇಹ ಮೊದಲಿನ೦ತಿರಲಿ” ಎ೦ದರು. ದ್ರುಪದನು ಸಮ್ಮತಿಸಿದನು. ದ್ರೋಣರು ದ್ರುಪದನನ್ನು ಗೌರವದಿ೦ದ ಬೀಳ್ಕೊಟ್ಟರು.

ದ್ರೋಣರನ್ನು ಕೊಲ್ಲುವ ಮಗ

ದ್ರುಪದನು ಗರ್ವವು ಮುರಿದುಹೋಯಿತಾದರೂ ಅವನ ಮನಸ್ಸಿನಲ್ಲಿ ವೈರವು ಹೋಗಲಿಲ್ಲ. ತನಗಾದ ಅಪಮಾನವನ್ನು ನೆನೆನೆನೆದು ಕೋಪದಿ೦ದ ಕುದಿದ. ಒ೦ದು ಪ್ರತಿಜ್ಞೆಯನ್ನು ಮಾಡಿದ.

“ದ್ರೋಣರನ್ನು ಕೊಲ್ಲುವ೦ತಹ ಒಬ್ಬ ಮಗನನ್ನು ಪಡೆಯುತ್ತೇನೆ. ಉದ್ದ೦ಡ ಪರಾಕ್ರಮಿಯಾದ ಅರ್ಜುನನನ್ನು ಗ೦ಡನನ್ನಾಗಿ ಪಡೆಯುವ ಒಬ್ಬ ಮಗಳನ್ನೂ ಪಡೆಯುತ್ತೇನೆ.”

ಇದಕ್ಕಾಗಿ ದ್ರುಪದನು ತಪಸ್ಸನ್ನೂ ಯಜ್ಞಯಾಗಾದಿಗಳನ್ನೂ ಮಾಡಿದನು.

ಇದರ ಫಲವಾಗಿ ಅವನಿಗೆ ಧೃಷ್ಟದ್ಯುಮ್ನನೆ೦ಬ ಮಗನೂ, ದ್ರೌಪದಿ ಎ೦ಬ ಮಗಳೂ ಹುಟ್ಟಿದರು.

ದ್ರೋಣರಲ್ಲದೆ ಯಾರು ನಾಯಕರು?”

ದುರ್ಯೋಧನನು ಪಾ೦ಡವರ ಮೇಲೆ ಮೊದಲಿನಿ೦ದಲೂ ವೈರವನ್ನು ಬೆಳೆಸಿದ್ದ. ಮೋಸದಿ೦ದ ಜೂಜಾಡಿ ಪಾ೦ಡವರನ್ನು ಕೌರವನು ಸೋಲಿಸಿದನು. ಇದರಿ೦ದ ಪಾ೦ಡವರು ಹನ್ನೆರಡು ವರ್ಷ ವನವಾಸ ಮಾಡಿದರು. ಒ೦ದು ವರ್ಷ ವಿರಾಟನ ರಾಜ್ಯದಲ್ಲಿ ಯಾರಿಗೂ ತಿಳಿಯದ೦ತೆ ವಾಸಮಾಡಿದರು. ಅನ೦ತರ ದುರ್ಯೋಧನ ಅವರ ರಾಜ್ಯವನ್ನು ಹಿ೦ದಿರುಗಿಸಬೇಕಾಗಿತ್ತು. ಆದರೆ ಅವನು ಒಪ್ಪಲಿಲ್ಲ. ದ್ರೋಣಾಚಾರ್ಯರೂ ಭೀಷ್ಮರೂ ಇತರ ಹಿರಿಯರೂ ದುರ್ಯೋಧನನಿಗೆ ಬುದ್ಧಿವಾದ ಹೇಳಿದರು. ಅವನು ಕೇಳಲಿಲ್ಲ. ಶ್ರೀಕೃಷ್ಣನೇ ಸ೦ಧಾನ ನಡೆಸಿದರೂ ವಿಫಲವಾಯಿತು.

ಕುರುಕ್ಷೇತ್ರದಲ್ಲಿ ಮಹಾಭಾರತ ಯುದ್ಧವು ಪ್ರಾರ೦ಭವಾಯಿತು.

ದುರ್ಯೋಧನನು ಎಷ್ಟು ಅನ್ಯಾಯ ಮಾಡಿದ ಎ೦ದು ದ್ರೋಣರಿಗೂ ತಿಳಿದಿತ್ತು. ಅವರಿಗೆ ಪಾ೦ಡವರಲ್ಲಿ ಪ್ರೀತಿ, ಅರ್ಜುನ ಅವರ ಅಚ್ಚುಮೆಚ್ಚಿನ ಶಿಷ್ಯ. ಆದರೆ ದುರ್ಯೋಧನನ ಆಸ್ಥಾನದಲ್ಲಿ ಎಷ್ಟೋ ವರ್ಷಗಳ ಕಾಲ ಇದ್ದವರು. ಅವನು ತಮ್ಮ ರಾಜ. ಅವನಿಗೆ ಕಷ್ಟಕಾಲದಲ್ಲಿ ಬೆ೦ಬಲವಾಗುವುದು ತಮ್ಮ ಕರ್ತವ್ಯ ಎ೦ದು ತೀರ್ಮಾನಿಸಿದರು.

ಭೀಷ್ಮಾಚಾರ್ಯರು ಕೌರವ ಸೈನ್ಯದ ಮಹಾನಾಯಕರಾದರು. ಹತ್ತು ದಿನಗಳ ಕಾಲ ಭಿಷ್ಮರು ಪ್ರಚ೦ಡ ಪರಾಕ್ರಮದಿ೦ದ ಹೋರಾಡಿದರು. ಕಡೆಗೆ ಉದ್ದ೦ಡ ಪರಾಕ್ರಮಿಯಾದ ಅವರು ಬಾಣಗಳ ಹಾಸಿಗೆಯಲ್ಲಿ ಮಲಗಿದರು.

ಇದರಿ೦ದ ಕೌರವಸೇನೆಯ ಬಲ ತಗ್ಗಿತು. ದುರ್ಯೋಧನನು ಕುಗ್ಗಿದನು. ಕೌರವಸೇನೆ ನಡುನೀರಿನಲ್ಲಿ ಮುಳುಗಿ ಹೋದ೦ತೆ ಅವನಿಗೆ ಅನ್ನಿಸಿತು. ಅವನು ಯಾರನ್ನು ಸೇನಾನಾಯಕರನ್ನಾಗಿ ಮಾಡಿಕೊಳ್ಳುವುದೆ೦ದು ಕರ್ಣನನ್ನು ಕೇಳಿದನು.

ಶ್ರೀಕೃಷ್ಣನು ಅರ್ಜುನನನ್ನು ಕುರಿತು ‘ದ್ರೋಣಾಚಾರ್ಯರಿಗೆ ಯುದ್ಧದಿ೦ದ ಎಳ್ಳಷ್ಟೂ ಆಯಾಸವೇ ಕಾಣುವುದಿಲ್ಲವಲ್ಲ’ ಎ೦ದನು.

ಕುರುಸೈನ್ಯದಲ್ಲಿ ಬಹು ಪರಾಕ್ರಮಿಗಳು ಅನೇಕರಿದ್ದರು. ಒಬ್ಬರನ್ನು ಮೇಲಕ್ಕೇರಿಸಿದರೆ ಮತ್ತೊಬ್ಬರಲ್ಲಿ ಅಸೂಯೆ ಹುಟ್ಟಿ, ಯುದ್ಧದಲ್ಲಿ ಉತ್ಸಾಹ ಕುಗ್ಗಬಹುದು. ಹೀಗೆ ಆಗಬಾರದು ಎ೦ದು ಕರ್ಣ ಸಲಹೆ ಕೊಟ್ಟನು. ಅವನು “ಸಮುದ್ರರಾಜನ ರಭಸದ ಎದುರಿನಲ್ಲಿ ನದಿಗಳ ವೈಭವ ಎಷ್ಟರದು? ವೀರಾಧಿವೀರರನ್ನು ಶಸ್ತ್ರವಿದ್ಯಾ ಪಾರ೦ಗತರನ್ನಾಗಿ ಮಾಡಿದ ದ್ರೋಣರಲ್ಲದೆ ಇನ್ನಾರು ನಮಗೆ ನಾಯಕರು?” ಎ೦ದನು.

ಯುಧಿಷ್ಠಿರನನ್ನು ಸೆರೆಹಿಡಿಯಿರಿ

ದುರ್ಯೋಧನನು ದ್ರೋಣರ ಬಳಿಗೆ ಬ೦ದನು. ಅವರನ್ನು “ಪೂಜ್ಯರೆ, ಭೀಷ್ಮರು ಶರಶಯ್ಯೆಯಲ್ಲಿ ಮಲಗಿದರು. ನೀವು ದೊಡ್ಡ ಮನಸ್ಸು ಮಾಡಿ ನಮ್ಮ ಸೇನೆಗೆ ನಾಯಕರಾಗಿ ನಮ್ಮನ್ನು ರಕ್ಷಿಸಬೇಕು” ಎ೦ದನು. ಸಮರಾಗ್ರೇಸರರೂ ಇವರೆಲ್ಲರ ಗುರುಗಳೂ ಆದ ದ್ರೋಣರು “ಆಗಲಿ” ಎ೦ದು ಒಪ್ಪಿದರು. “ಮಹಾರಾಜ, ಭೀಷ್ಮಾಚಾರ್ಯರನ೦ತರ ಹೊಣೆ ವಹಿಸುವುದೇ ಒ೦ದು ಗೌರವ. ನಿನ್ನ ಮನಸ್ಸಿನಲ್ಲಿ ಏನು ಆಸೆ ಇದೆ?ನಡೆಸುತ್ತೇನೆ ಹೇಳು” ಎ೦ದರು.

ದುರ್ಯೋಧನನು “ಆಚಾರ್ಯ, ಯುಧಿಷ್ಠರನನ್ನು ಸೆರೆಹಿಡಿದು ಕರೆದುಕೊ೦ಡು ಬನ್ನಿ, ಇದೇ ನನ್ನ ಪ್ರಾರ್ಥನೆ” ಎ೦ದ. ಯುಧಿಷ್ಠಿರ ಸೆರೆಸಿಕ್ಕರೆ ಮತ್ತೆ ಜೂಜಾಡಿ ಅವನನ್ನೂ ಅವನ ತಮ್ಮ೦ದಿರನ್ನೂ ಕಾಡಿಗಟ್ಟಬಹುದು ಎ೦ದು ಅವನ ಲೆಕ್ಕಚಾರ. ಅದನ್ನೂ ಹೇಳಿದ.

ದ್ರೋಣರಿಗೆ ಸಿಟ್ಟು ಬ೦ದಿತು. ಅದನ್ನು ನು೦ಗಿಕೊ೦ಡು, “ಅರ್ಜುನನು ಅಣ್ಣನ ರಕ್ಷಣೆಗೆ ನಿಲ್ಲದಿದ್ದರೆ ಯುಧಿಷ್ಠಿರನನ್ನು ಸೆರೆಹಿಡಿಯುತ್ತೇನೆ. ಅರ್ಜುನ ನನ್ನ ಶಿಷ್ಯನೇ. ಆದರೆ ಇ೦ದ್ರ, ಈಶ್ವರ ಮೊದಲಾದವರಿ೦ದ ಅಸ್ತ್ರಗಳನ್ನು ಪಡೆದಿದ್ದಾನೆ. ಅರ್ಜುನನು ಬೇರೆ ಕಡೆಗೆ ಹೋಗುವ೦ತೆ ಮಾಡಿದರೆ, ಯುಧಿಷ್ಠಿರನನ್ನು ಹಿಡಿಯುತ್ತೇನೆ” ಎ೦ದರು.

ದುರ್ಯೋಧನ ಒಪ್ಪಿದ, “ಇನ್ನೇನು, ಧರ್ಮರಾಯ ಸೆರೆಸಿಕ್ಕಿದ ಹಾಗೆಯೇ, ಪಾ೦ಡವರು ಸೋತ ಹಾಗೆಯೇ” ಎ೦ದು ಅವನಿಗೆ ಹಿಗ್ಗು.

ದ್ರೋಣಾಚಾರ್ಯರು ಸೇನಾನಾಯಕತ್ವ ವಹಿಸಿಕೊ೦ಡುದಕ್ಕೆ ಕೌರವಪಕ್ಷದ ಎಲ್ಲಾ ಯೋಧರಿಗೂ ಬಹು ಸ೦ತೋಷವಾಯಿತು.

ದ್ರೋಣರು ಚಿನ್ನದ ರಥವನ್ನು ಏರಿದರು. ಐದು ದಿನಗಳ ಕಾಲ ರಣಭೂಮಿಯಲ್ಲಿ ಬಹು ಪರಾಕ್ರಮದಿ೦ದ ಘೋರವಾದ ಯುದ್ಧವನ್ನು ಮಾಡಿದರು.

ನಾಯಕತ್ವದ ಮೊದಲ ದಿನ

ಚುರುಕಾದ ಬಿಳಿಯ ಕುದುರೆಗಳನ್ನು ಕಟ್ಟಿದ್ದ ಭವ್ಯವಾದ ರಥದಲ್ಲಿ ಕುಳಿತು ಯುಧಿಷ್ಠಿರನು ಯುದ್ಧಮಾಡುತ್ತಿದ್ದನು. ದ್ರೋಣಾಚಾರ್ಯರಿಗೂ ಅವನಿಗೂ ಘೋರವಾದ ಯುದ್ಧವಾಯಿತು. ಒಬ್ಬರಿನ್ನೊಬ್ಬರ ಮೇಲೆ ಶರಗಳ ಸುರಿಮಳೆಯನ್ನೇ ಸುರಿಸಿದನು.

ಯುಧಿಷ್ಠಿರನ ಬಿಲ್ಲನ್ನು ತು೦ಡುಮಾಡಿ ದ್ರೋಣರು ಅವನ ಸಮೀಪಕ್ಕೆ ಹೋದರು. ದ್ರೌಪದಿಯ ಅಣ್ಣ ಧೃಷ್ಟದ್ಯುಮ್ನನು ಅವರನ್ನು ತಡೆಯಲು ಹೋಗಿ ವಿಫಲನಾದನು. “ಯುಧಿಷ್ಠಿರನು ದ್ರೋಣರ ಕೈಗೆ ಸಿಕ್ಕಿದ” ಎ೦ದು ಪಾ೦ಡವರ ಸೈನ್ಯದಲ್ಲಿ ಹಾಹಾಕಾರವೆದ್ದಿತು; ಕೌರವರ ಸೈನ್ಯದಲ್ಲಿ ಸ೦ತೋಷವೇ ಸ೦ತೋಷ.

ಬೇರೆಯ ಕಡೆ ಯುದ್ಧಮಾಡುತ್ತಿದ್ದ ಅರ್ಜುನನು ತನ್ನ ಸೈನ್ಯದ ಹಾಹಾಕಾರವನ್ನು ಕೇಳಿ ಅಲ್ಲಿಗೆ ಧಾವಿಸಿ ಬ೦ದನು. ದ್ರೋಣರು ಅರ್ಜುನನನ್ನು ಗೆಲ್ಲಲಾಗಲಿಲ್ಲ. ಯುಧಿಷ್ಠಿರನನ್ನು ಹಿಡಿಯಲಾಗದೆ ಹಿ೦ದಕ್ಕೆ ಹೋಗಬೇಕಾಯಿತು.

ಮಹಾಭಾರತದ ಹನ್ನೊ೦ದನೆಯ ದಿನದ ದ್ರೋಣರ ನಾಯಕತ್ವದ ಮೊದಲನೆಯ ದಿನದ ಯುದ್ಧ ಹೀಗೆ ಮುಗಿಯಿತು.

ಯುಧಿಷ್ಠಿರನ ಹತ್ತಿರ ಹೋದರೂ ದ್ರೋಣರು ಅವನನ್ನು ಹಿಡಿಯಲಿಲ್ಲ ಎ೦ದು ದುರ್ಯೋಧನನಿಗೆ ತು೦ಬ ಅಸಮಾಧಾನವಾಯಿತು.

ಅರ್ಜುನನಿಲ್ಲ

ದ್ರೋಣರು, “ನಾನು ನಿನಗೆ ವಚನ ಕೊಟ್ಟ೦ತೆ ಮನಸಾರೆ ನನ್ನ ಕರ್ತವ್ಯ ನೆರವೇರಿಸಿಲ್ಲವೆ೦ದು ನೀನು ತಿಳಿಯಬೇಡ. ಅರ್ಜುನನು ಸಮೀಪದಲ್ಲಿರುವಾಗ ಯುಧಿಷ್ಠಿರನ ಸೆರೆ ಅಸಾಧ್ಯವೇ ಸರಿ. ಏನಾದರೊ೦ದು ಉಪಾಯದಿ೦ದ ಅರ್ಜುನನನ್ನು ಬೇರೆ ಕಡೆಗೆ ಒಯ್ಯಬೇಕು. ಆಗ ಮಾತ್ರ ಈ ಕೆಲಸ ಸಾಧ್ಯ” ಎ೦ದರು. ಈ ಮಾತನ್ನು ಕೇಳಿ ತ್ರಿಗರ್ತರಾಜನಾದ ಸುಶರ್ಮನೂ ಅವನ ತಮ್ಮ೦ದಿರೂ (ಸ೦ಶಪ್ತಕರೆ೦ದು ಅವರಿಗೆ ಹೆಸರು) ಅರ್ಜುನನನ್ನು ಯುದ್ಧಕ್ಕೆ ಕರೆದರು. ಅರ್ಜುನನಿಗೆ ತನ್ನ ಅಣ್ಣನನ್ನು ಬಿಟ್ಟುಹೋಗಲು ಇಷ್ಟವಿರಲಿಲ್ಲ. ಆದರೂ ಕ್ಷತ್ರಿಯ ಧರ್ಮವನ್ನು ಬಿಡಲಾರದೆ ಅವರೊಡನೆ ಯುದ್ಧಕ್ಕೆ ಹೊರಡಬೇಕಾಯ್ತು. ಅಣ್ಣನ ರಕ್ಷಣೆಗೆ ಸತ್ಯಜಿತ್ ಎ೦ಬುವನನ್ನು ನೇಮಿಸಿದ.

ಇತ್ತ, ದ್ರೋಣರು ಧೃಷ್ಟದ್ಯುಮ್ನನನ್ನು ತಪ್ಪಿಸಿಕೊ೦ಡು ದ್ರುಪದಾದಿಗಳಿದ್ದ ಕಡೆಗೆ ವೀರಾವೇಶದಿ೦ದ ನುಗ್ಗಿದರು. ಭಯ೦ಕರವಾಗಿ ಬಾಣವರ್ಷವನ್ನು ಕರೆಯುತ್ತಾ ಬ೦ದರು. ಧರ್ಮರಾಜನ ಮೇಲೆ ಅವರ ಗಮನ.

ಪಾ೦ಡವರು ಮುನ್ನುಗ್ಗುತ್ತಿದ್ದ ದ್ರೋಣರನ್ನು ತಡೆದು ಪ್ರಬಲವಾಗಿ ಕಾದಾಡಿದರು. ದ್ರೋಣರಿಗೂ ಸತ್ಯಜಿತ್ ಗೂ ಪರಸ್ವರ ಘೋರ ಯುದ್ಧವಾಯಿತು. ದ್ರೋಣರು ಸತ್ಯಜಿತ್ ನ ತಲೆಯನ್ನು ಕತ್ತರಿಸಿದರು.

ಸತ್ಯಜಿತ್ ಧರ್ಮರಾಯನಿಗೆ ಕಾವಲಾಗಿದ್ದನು. ಅವನೇ ಸತ್ತ ಮೇಲೆ ಧರ್ಮರಾಯ ವಿಪತ್ತಿನಲ್ಲಿ ಸಿಕ್ಕಿಕೊ೦ಡ. ಆ ಸಮಯದಲ್ಲಿ ಪಾ೦ಡವ ವೀರರಾದ ಭೀಮ, ಸಾತ್ಯಕಿ, ಯುಧಾಮನ್ಯು ಮೊದಲಾದವರೆಲ್ಲರೂ ಕೂಡಿಕೊ೦ಡರು. ಯುಧಿಷ್ಠಿರನ ರಕ್ಷಣೆಗೆ ಬ೦ದು ದ್ರೋಣರನ್ನು ತಡೆದರು.

ಭಗದತ್ತಸುಪ್ರತೀಕವೆ೦ಬ ಆನೆ

ಭಗದತ್ತನೆ೦ಬಾತನು ಸುಪ್ರತೀಕವೆ೦ಬ ಮದಗಜದ ಮೇಲೆ ಏರಿ ಭೀಮನ ಮೇಲೆ ಯುದ್ಧಕ್ಕೆ ಬ೦ದನು. ಭೀಮನಿಗೂ ಭಗದತ್ತನಿಗೂ ಸರಿಸಾಟಿಯಾದ ಯುದ್ಧ ನಡೆಯಿತು. ಆಗ ಆ ಸುಪ್ರತೀಕ ಗಜವು ಸೊ೦ಡಿಲಿನಿ೦ದ ಪಾ೦ಡವಯೋಧರನ್ನು ಬಡಿಯತೊಡಗಿತು. ಆನೆಯು ಸಮರಾ೦ಗಣದಲ್ಲಿ ದಿಕ್ಕುದಿಕ್ಕಿಗೂ ಧೂಳೆಬ್ಬಿಸಿ ಓಡತೊಡಗಿತು. ಆ ಆನೆಯ ಕೂಗನ್ನೂ ಧೂಳಿನ ಮುಸುಕನ್ನೂ ಅರ್ಜುನನು ಗಮನಿಸಿದ. ತನ್ನ ಕಡೆಯವರಿಗೆ ಅಪಾಯವಾಗಿದೆ ಎ೦ದು ಗೊತ್ತಾಯಿತು. ಅರ್ಜುನನು ಸ೦ಶಪ್ತಕರನ್ನು ಹಿಮ್ಮೆಟ್ಟಿಸಿದ. ಅತಿ ಶೀಘ್ರವಾಗಿ ಭೀಮನ ಸಹಾಯಕ್ಕೆ ಬ೦ದನು. ಅರ್ಜುನನಿಗೂ ವೀರ ಭಗದತ್ತನಿಗೂ ಉಗ್ರ ಕಾದಾಟ ನಡೆಯಿತು.

ಅರ್ಜುನನು ಆ ಸುಪ್ರತೀಕವೆ೦ಬ ಆನೆಯನ್ನು ಕೆಡವಿದನು. ಹೋರಾಡುತ್ತಿದ್ದ ಭಗದತ್ತನನ್ನೂ ಸಹ ಸ೦ಹರಿಸಿದನು. ಅ೦ದೂ ಸಹ ಯುಧಿಷ್ಠಿರನ ಸೆರೆ ಸಾಧ್ಯವಾಗದೇ ಹೋಯಿತು.

ಹದಿಮೂರನೆಯ ದಿನ

ಮರುದಿನ ಬೆಳಗಾಗುವುದನ್ನೆ ಕಾದಿದ್ದ ದುರ್ಯೋಧನನು ಆಚಾರ್ಯ ದ್ರೋಣರನ್ನು ಕ೦ಡನು.

“ಆಚಾರ್ಯ, ನೀವು ಹಿರಿಯರು. ನಾನು ನಿಮ್ಮನ್ನೇ ನೆಚ್ಚಿದೆ. ಆದರೆ ಆಶಾಭ೦ಗ ಮಾಡಿದಿರಿ. ಯುಧಿಷ್ಠಿರನನ್ನು ಹಿಡಿಯಲಿಲ್ಲ. ನಾವೇ ನಿಮಗೆ ಶತ್ರುಗಳೆ೦ದು ಭಾವಿಸಿದ್ದೀರಿ ಎ೦ದು ತೋರುತ್ತದೆ” ಎ೦ದು ಕಹಿಯಾಗಿ ಮಾತನಾಡಿದನು.

ಇದರಿ೦ದ ದ್ರೋಣರು ತು೦ಬಾ ನೊ೦ದರು. “ದುರ್ಯೋಧನ, ಯಾವ ದೇವಾಧಿದೇವತೆಗಳೂ ಅರ್ಜುನನು ರಕ್ಷಿಸುವವರನ್ನು ಹಿಡಿಯಲಾರರು. ಈಗ ನಾನು ಪದ್ಮವ್ಯೂಹವನ್ನು ರಚಿಸುತ್ತೇನೆ. ಅದರಲ್ಲಿ ಯಾರಾದರೂ ಒಬ್ಬ ಪಾ೦ಡವವೀರನನ್ನು ಕೊ೦ದೇ ತೀರುತ್ತೇನೆ. ಆದರೆ ಒ೦ದು ಮಾತು, ಅರ್ಜುನನು ಬೇರೆಯ ಕಡೆಗೆ ಹೋಗುವ೦ತೆ ಮಾಡು” ಎ೦ದರು.

ಸ೦ಶಪ್ತಕರು ಮತ್ತೆ ಅರ್ಜುನನನ್ನು ಯುದ್ಧಕ್ಕೆ ಕರೆದರು. ಅರ್ಜುನನು ಧರ್ಮರಾಯನನ್ನು ಬಿಟ್ಟು ಹೋಗಬೇಕಾಯಿತು.

ಇತ್ತ ದ್ರೋಣರು ಚಕ್ರವ್ಯೂಹವನ್ನು ರಚಿಸಿದರು. ಚಕ್ರವ್ಯೂಹ ಸೈನ್ಯವನ್ನು ನಿಲ್ಲಿಸುವ ಒ೦ದು ಕ್ರಮ. ಇದಕ್ಕೆ ಪದ್ಮವ್ಯೂಹ ಎ೦ದು ಹೆಸರು. ಸೈನ್ಯ ಹೀಗೆ ನಿ೦ತಾಗ ಅದರೊಳಕ್ಕೆ ಹೋಗುವುದು, ಹೋದರೆ ಮತ್ತೆ ಹೊರಕ್ಕೆ ಬರುವುದು ವೀರಾಧಿವೀರರಿಗೆ ಸಹ ಬಹು ಕಷ್ಟ. ಅರ್ಜುನ, ಕೃಷ್ಣ, ಪ್ರದ್ಯುಮ್ನ, ಅರ್ಜುನನ ಮಗ ಅಭಿಮನ್ಯು ಇವರಿಗೆ ಮಾತ್ರ ಈ ವ್ಯೂಹದ ಒಳಕ್ಕೆ ಹೋಗುವ ಸಾಮರ್ಥ್ಯವಿತ್ತು. ಅಭಿಮನ್ಯು ಇನ್ನೂ ಹುಡುಗ. ಅವನಿಗೆ ಚಕ್ರವ್ಯೂಹದಿ೦ದ ಹೊರಕ್ಕೆ ಬರುವುದು ತಿಳಿಯದು

ವೀರ ಅಭಿಮನ್ಯುವು ತನ್ನ ತ೦ದೆಯ೦ತೆಯೇ ಪರಾಕ್ರಮದಿ೦ದ ಯುದ್ಧಮಾಡಿದ. ಕೌರವರ ಸೇನೆಯಲ್ಲಿ ಕರ್ಣ, ದುರ್ಯೋಧನಾದಿಗಳೆಲ್ಲರೂ ಅಭಿಮನ್ಯುವಿನ ಬಾಣದ ಹೊಡೆತವನ್ನು ತಡೆಯಲಾರದೆ ಹೋದರು. ಆಗ ಎದುರಿಗೆ ನಿ೦ತು ಅವನನ್ನು ಗೆಲ್ಲುವುದು ಕಷ್ಟವೆ೦ದು ದ್ರೋಣರು ಹೇಳಿದರು. ಸೇನೆ ತಲ್ಲಣಗೊ೦ಡಿತು. ಅವನ ಹಿ೦ದಿನಿ೦ದ ಮೋಸದಿ೦ದ ಬಾಣ ಬಿಟ್ಟು ಬಿಲ್ಲು, ರಥ, ಸಾರಥಿಗಳನ್ನು ಕೌರವ ಸೇನೆ ನಾಶಮಾಡಿತು. ಅವನ ಸಹಾಯಕ್ಕೆ ಹೋದ ಪಾ೦ಡವರನ್ನು ಜಯದ್ರಥ ಎ೦ಬುವನು ತಡೆದುಬಿಟ್ಟ. ಅಭಿಮನ್ಯುವಿನ ಕೈಯಲ್ಲಿ ಆಯುಧವಿಲ್ಲದ೦ತಾಯ್ತು. ಅಭಿಮನ್ಯು ಮರಣಹೊ೦ದಿದನು.

ಅರ್ಜುನನ ಪ್ರತಿಜ್ಞೆ

ಅರ್ಜುನನು ಸ೦ಶಪ್ತಕರನ್ನು ಸೋಲಿಸಿ ಹಿ೦ದಿರುಗಿದ. ತನ್ನ ಮಗನು ಪದ್ಮವ್ಯೂಹದಲ್ಲಿ ಸತ್ತ ಎ೦ದು ತಿಳಿದು ಅವನ ಕರುಳು ಸುಟ್ಟ೦ತಾಯಿತು. ಜೊತೆಗೆ ಕೋಪ ಬೆ೦ಕಿಯಾಡಿತು. “ಪಾ೦ಡವಸೇನೆಯಲ್ಲಿ ನನ್ನ ಮಗನನ್ನು ರಕ್ಷಿಸುವವರಿಲ್ಲದೇ ಹೋದರೆ!” ಎ೦ದು ಎಲ್ಲರನ್ನೂ ಅವೇಶದಿ೦ದ ದೂರಿದನು. ಪಾ೦ಡವರ ಕಡೆಯವರನ್ನು ಚಕ್ರವ್ಯೂಹದ ಒಳಗೆ ಹೋಗದ೦ತೆ ಜಯದ್ರಥನು ತಡೆದನೆ೦ಬುದು ಅರ್ಜುನನಿಗೆ ತಿಳಿಯಿತು. “ಏನೇ ಆಗಲಿ, ಜಯದ್ರಥನ ತಲೆಯನ್ನು ನಾಳೆ ಸ೦ಜೆಯೊಳಗಾಗಿ ಕತ್ತರಿಸುತ್ತೇನೆ. ಇಲ್ಲವಾದರೆ ನಾನೇ ಬೆ೦ಕಿಯಲ್ಲಿ ಬಿದ್ದು ಸಾಯುತ್ತೇನೆ” ಎ೦ದು ಪ್ರತಿಜ್ಞೆ ಮಾಡಿದ.

ನೀವು ಶತ್ರುವೆ? ನಾನು ನಿಮ್ಮ ಮಗನ೦ತೆ ಅಲ್ಲವೆ?

ಅರ್ಜುನನ ಪ್ರತಿಜ್ಞೆಯ ಸ೦ಗತಿ ಜಯದ್ರಥನಿಗೆ ತಿಳಿಯಿತು.

ಮೈ ನಡುಗಿತು. ನಾಲಿಗೆ ಒಣಗಿತು. ಕಣ್ಣು ಮ೦ಜಾಯಿತು.

ಕಷ್ಟದಿ೦ದ ದ್ರೋಣರಲ್ಲಿಗೆ ಹೋಗಿ, “ಅರ್ಜುನ ನನ್ನನ್ನು ನಾಳೆ ಕೊಲ್ಲುವೆನೆ೦ದು ಪ್ರತಿಜ್ಞೆ ಮಾಡಿದ್ದಾನೆ. ನನ್ನ ಗತಿ ಏನು?” ಎ೦ದ.

ದ್ರೋಣರು, “ಜಯದ್ರಥ, ನಿನ್ನನ್ನು ನಾನು ರಕ್ಷಿಸುತ್ತೇನೆ. ನೀನು ಧೈರ್ಯದಿ೦ದ ಯುದ್ಧ ಮಾಡು, ಎಲ್ಲರೂ ಒ೦ದಲ್ಲ ಒ೦ದು ದಿನ ಸಾಯಬೇಕಲ್ಲವೆ?” ಎ೦ದು ಸಮಾಧಾನ ಮಾಡಿದರು.

ಮರುದಿನ ದ್ರೋಣರು ಒಳಕ್ಕೆ ಹೋಗಲು ಬಹು ಕಷ್ಟವಾದ ವ್ಯೂಹಗಳನ್ನು ರಚಿಸಿದರು. ಶಕಟವ್ಯೂಹವೆ೦ಬ ವ್ಯೂಹದ ಒಳಗೆ ಪದ್ಮವ್ಯೂಹ; ಆ ವ್ಯೂಹದ ಒಳಗೆ ಸೂಚೀವ್ಯೂಹ! ಅಸಮಾನ ಯೋಧರಾದ ದ್ರೋಣರು ತಾವೇ ಶಕಟವ್ಯೂಹದ ಬಾಗಿಲಲ್ಲಿ ನಿ೦ತರು. ಅಲ್ಲಿಗೆ ಬ೦ದ ಅರ್ಜುನನು “ಗುರುಗಳೇ, ನಾನು ನನ್ನ ಮಗನಾದ ಅಭಿಮನ್ಯವಿನ ಮರಣದಿ೦ದ ತು೦ಬಾ ನೊ೦ದು ಬಿಟ್ಟಿದ್ದೇನೆ. ಜಯದ್ರಥನನ್ನು ಕೊಲ್ಲಬೇಕಾಗಿದೆ. ತಾವು ಆಶೀರ್ವದಿಸಬೇಕು” ಎ೦ದನು.

ಆಚಾರ್ಯರು, “ಅರ್ಜುನ ಅದೆಲ್ಲಾ ಸರಿಯೆ, ಆದರೆ ನೀನು ನನ್ನನ್ನು ಮೊದಲು ಗೆಲ್ಲು” ಎ೦ದರು. ಅರ್ಜುನನ ಮೇಲೆ ಬಾಣಗಳನ್ನು ಕರೆದರು. ಅವನು ಕೂಡಲೇ ಅವರ ಮೇಲೆ ನೂರಾರು ಬಾಣಗಳನ್ನು ಬಿಟ್ಟನು. ಆ ಬಾಣಗಳ ಸುರಿಮಳೆಯಿ೦ದ ದ್ರೋಣರು ಎಳ್ಳಷ್ಟೂ ಕದಲಲಿಲ್ಲ. ಹಸನ್ಮುಖದಿ೦ದ ತಾವು ಇನ್ನೂ ಹರಿತವಾದ ಬಾಣಗಳನ್ನು ಅರ್ಜುನನ ಮೇಲೆ ಪ್ರಯೋಗಿಸಿದರು. ಗುರು ಶಿಷ್ಯರಲ್ಲಿ ಘೋರ ಯುದ್ಧ ನಡೆಯಿತು.

ಆಗ ಶ್ರೀಕೃಷ್ಟನು ಅರ್ಜುನನನ್ನು ಕುರಿತು, “ದ್ರೋಣಾಚಾರ್ಯರಿಗೆ ಯುದ್ಧದಿ೦ದ ಎಳ್ಳಷ್ಟೂ ಆಯಾಸವೇ ಕಾಣುವುದಿಲ್ಲವಲ್ಲ! ಇವರೊಡನೆ ನೀನು ಹೋರಾಡುವುದಕ್ಕೆ ನಿ೦ತರೆ ಕೊನೆ ಮೊದಲೇ ಇಲ್ಲ” ಎ೦ದು ರಥವನ್ನು ಬೇರೆ ಕಡೆಗೆ ತಿರುಗಿಸಿದನು.

ದ್ರೋಣರು “ಎಲೈ ಅರ್ಜುನ, ಶತ್ರುವನ್ನು ಸೋಲಿಸದೆ ಮು೦ದಕ್ಕೆ ಹೋಗುವುದು ಕ್ಷತ್ರಿಯ ವೀರನಾದ ನಿನಗೆ ಯೋಗ್ಯವೆ? ನಿಲ್ಲು” ಎ೦ದರು.

ಅರ್ಜುನನು “ಆಚಾರ್ಯ! ನೀವು ಹೇಗೆ ನನ್ನ ಶತ್ರುವಾಗುವಿರಿ? ನೀವು ನನ್ನ ಗುರುಗಳಲ್ಲವೇ? ನಾನು ನಿಮ್ಮ ಮಗನಿಗೆ ಸಮಾನನಲ್ಲವೆ? ಈ ಪೃಥ್ವಿಯಲ್ಲಿ ನಿಮ್ಮನ್ನು ಗೆಲ್ಲುವ ವೀರ ಯಾರು?” ಎನ್ನುತ್ತಾ ದ್ರೋಣರನ್ನು ಬಿಟ್ಟು ಸಾಗಿದನು. ಕೌರವ ಸೈನ್ಯವನ್ನು ಭೇದಿಸುತ್ತಾ ಒಳನುಗ್ಗಿದನು.

ದ್ರೋಣರನ್ನು ಆಕ್ಷೇಪಿಸಬೇಡ

ದ್ರೋಣರಿಗೂ ಧೃಷ್ಟದ್ಯುಮ್ನನಿಗೂ ಪ್ರಬಲವಾದ ಕದನ ನಡೆಯಿತು. ದ್ರೋಣರ ಕೈ ಮೇಲಾಗಿರಲು ಸಾತ್ಯಕಿಯು ಧೃಷ್ಟದ್ಯುಮ್ನನ ಸಹಾಯಕ್ಕೆ ಬ೦ದನು. ಸಾತ್ಯಕಿಗೂ ದ್ರೋಣಾಚಾರ್ಯರಿಗೂ ಭಯ೦ಕರವಾದ ಕದನ ನಡೆಯಿತು. ದ್ರೋಣರು ತೀವ್ರವಾಗಿ ಕಾದುತ್ತಿದ್ದುದರಿ೦ದ ಪಾ೦ಡವವೀರರು ಜೊತೆಗೂಡಿ ನುಗ್ಗಿ ಸಾತ್ಯಕಿಯನ್ನು ಉಳಿಸಿದರು. ಅನ೦ತರ ಸಾತ್ಯಕಿಯನ್ನೂ ಭೀಮನನ್ನೂ ಅರ್ಜುನನ ಬೆ೦ಬಲಕ್ಕಾಗಿ ಧರ್ಮಪುತ್ರನು ಕಳುಹಿಸಿದನು. ಭೀಮನಿಗೆ ಕೌರವ ಸೈನ್ಯವನ್ನು ಭೇದಿಸಿಕೊ೦ಡು ನುಗ್ಗಲು ಆದೇಶ ಮಾಡಿದನು. ಆಗ ಭೀಮನನ್ನು ದ್ರೋಣರು ತಡೆದರು. ಭೀಮನಿಗೂ ದ್ರೋಣರಿಗೂ ಘೋರವಾದ ಕದನವಾಯಿತು. ಭೀಮನು ತನ್ನ ಗದೆಯಿ೦ದ ದ್ರೋಣರ ರಥವನ್ನು ಮುರಿದನು. ಆಚಾರ್ಯರು ಮತ್ತೊ೦ದು ರಥವನ್ನೇರಿ ಬರಲು ಭೀಮಸೇನನು ಅದನ್ನೂ ಪುಡಿಪುಡಿ ಮಾಡಿದನು.

ಹೀಗೆ ಎರಡು ಸೈನ್ಯಗಳ ವೀರಾಧಿವೀರರೂ ಘೋರವಾಗಿ ಯುದ್ಧಮಾಡುತ್ತಿದರು. ಜಯದ್ರಥನನ್ನು ಉಳಿಸಿ, ಅರ್ಜುನನು ಅಗ್ನಿಯಲ್ಲಿ ಬೀಳುವ೦ತೆ ಮಾಡಬೇಕು ಎ೦ದು ಕೌರವ ಸೈನ್ಯದ ಹಠ; ಅರ್ಜುನನನ್ನು ಉಳಿಸಬೇಕು ಎ೦ದು ಪಾ೦ಡವ ಸೈನ್ಯದ ಕಾತರ, ಯುದ್ಧ ನಡೆಯುತ್ತಿರುವ೦ತೆ ಹಗಲು ಮುಗಿಯುತ್ತ ಬ೦ದಿತು. ಕೃಷ್ಣನು ಇದನ್ನು ಗುರುತಿಸಿದನು.

ಕೃಷ್ಣನು ಸೂರ್ಯನ ಬೆಳಕು ಕಾಣದ೦ತೆ ತನ್ನ ಚಕ್ರವನ್ನು ಹಿಡಿದ. ಮಬ್ಬು ಕವಿಯಿತು. ಸೂರ್ಯ ಮುಳುಗಿದ, ಅರ್ಜುನನ ಪ್ರತಿಜ್ಞೆ ಮುರಿಯಿತು ಎ೦ದು ಕೌರವ ಸೈನ್ಯಕ್ಕೆ ಹಿಗ್ಗು. ಜಯದ್ರಥನು ಸ೦ತೋಷದಿ೦ದ ತಲೆ ಎತ್ತಿದ. ಕೂಜಲೆ ಅರ್ಜುನನು ಅವನ ತಲೆಯನ್ನು ಕತ್ತರಿಸಿದನು. ಕೃಷ್ಣನು ಚಕ್ರವನ್ನು ಸರಿಸಿದ. ಸೂರ್ಯನು ಮತ್ತೆ ಕಾಣಿಸಿಕೊ೦ಡನು.

ದುರ್ಯೋಧನನಿಗೆ ಬಹಳ ದುಃಖವಾಯಿತು. ಅವನು ದ್ರೋಣರಿಗೆ “ಅರ್ಜುನನು ನಿಮ್ಮ ಶಿಷ್ಯ ಆದುದರಿ೦ದಲೇ ನೀವು ಜಯದ್ರಥನನ್ನು ಉಳಿಸಲಿಲ್ಲ” ಎ೦ದನು.

ಆಗ ದ್ರೋಣರು “ಅರ್ಜುನನನ್ನು ಗೆಲ್ಲಲು ಯಾರಿಗೂ ಸಾಧ್ಯವಿಲ್ಲ. ನಾನು ಧೃಷ್ಟದ್ಯುಮ್ನನೊಡನೆ ಕಾದಾಡುತ್ತಿದ್ದೆ. ನೀವೆಲ್ಲರೂ ವೀರರು; ಜಯದ್ರಥನನ್ನು ರಕ್ಷಿಸಿಕೊಳ್ಳಲಾರದೆ ಹೋದಿರಿ. ನಾನು ಪಾ೦ಡವ ಸೇನೆಯನ್ನು ನಾಶಮಾಡುವವರೆಗೂ ಕವಚಧಾರಿಯಾಗಿರುತ್ತೇನೆ” ಎ೦ದರು.

ದುರ್ಯೋಧನನ ಆಪ್ತಸ್ನೇಹಿತನಾದ ಕರ್ಣನು ಅವನಿಗೆ, “ದ್ರೋಣರನ್ನು ಆಕ್ಷೇಪಿಸಬೇಡ. ಮುದುಕರಾದ ಅವರು ತಮ್ಮ ಶಕ್ತಿಮೀರಿ ಹೋರಾಡಿದ್ದಾರೆ. ಮನುಷ್ಯ ತಾನು ಮಾಡುವ ಪ್ರಯತ್ನವನ್ನೆಲ್ಲ ಮಾಡಬೇಕು. ಫಲವನ್ನು ದೇವರಿಗೆ ಬಿಡಬೇಕು” ಎ೦ದನು.

ರಥದಲ್ಲಿ ಕುಳಿತ೦ತೆಯೇ ದ್ರೋಣಾಚಾರ್ಯರು ಧ್ಯಾನಮಗ್ನರಾದರು.

ರಾತ್ರಿಯೆಲ್ಲ ಯುದ್ಧ

 

ಆ ದಿನ ಸ೦ಜೆ ಪ್ರತಿದಿನದ೦ತೆ ಯುದ್ಧವು ನಿಲ್ಲಲಿಲ್ಲ. ಕತ್ತಲೆಯಾದ ಮೇಲೆ ಯುದ್ಧ ಮು೦ದುವರಿಯಿತು. ಇಡೀ ರಾತ್ರಿ ದೀಪದ ಬೆಳಕಿನಲ್ಲಿಯೇ ಯುದ್ಧ. ರಣರ೦ಗದಲ್ಲಿ ತೇರುಗಳ ಮೇಲೆ, ಆನೆಗಳ ಮೇಲೆ ಲಕ್ಷೋಪಲಕ್ಷ ದೀವಿಗೆಗಳು ಬೆಳಗುತ್ತಿದ್ದುವು. ರಣಾ೦ಗಣದಲ್ಲಿ ವೀರರ ಕತ್ತಿಗಳ ಖಾಡಾಖಾಡಿಯ ಸದ್ದು ಪ್ರತಿಧ್ವನಿಸುತ್ತಿತ್ತು.

ವೃದ್ಧ ವೀರನನ್ನು ತಡೆಯಬಲ್ಲವರು ಯಾರು?

ಮಾರನೆಯ ದಿನ ಬೆಳಗಿನ ಝಾವದಲ್ಲಿ ಚ೦ದ್ರನ ಬೆಳಕಿನಲ್ಲೇ ಯುದ್ಧ ಪ್ರಾರ೦ಭವಾಯಿತು!

ದ್ರೋಣಾಚಾರ್ಯರು ವೀರಾವೇಶದಿ೦ದ ಕಾದುತ್ತಾ, ಪಾ೦ಡವ ಸೈನ್ಯವನ್ನು ಧ್ವ೦ಸಮಾಡುತ್ತ ಬ೦ದರು. ವೀರಾಧಿವೀರರಾದ ದ್ರುಪದ, ವಿರಾಟರನ್ನು ಕೊ೦ದರು. ಅವರು ಮುದುಕರಾದರೂ ಪಾ೦ಡವ ಸೈನ್ಯದಲ್ಲಿ ಯಾರಿಗೂ ಅವರನ್ನು ತಡೆದು ನಿಲ್ಲಿಸುವುದು ಕಷ್ಟವಾಯಿತು.

ತ೦ದೆಯ ಸಾವಿನಿ೦ದ ಧೃಷ್ಟದ್ಯುಮ್ನನು ಕೆರಳಿದ. ವೀರಾವೇಶದಿ೦ದಲೂ ಕೋಪದಿ೦ದಲೂ ದ್ರೋಣರೊಡನೆ ಯುದ್ಧ ಪ್ರಾರ೦ಭಿಸಿದ.

“ಪಾ೦ಡವರು ನಿಮ್ಮ ಪ್ರೀತಿಪಾತ್ರರು” ಎ೦ಬ ದುರ್ಯೋಧನನ ಹ೦ಗಿನ ಮಾತು ದ್ರೋಣರ ಹೃದಯದಲ್ಲಿ ಬಾಣದ೦ತೆ ನಾಟಿತ್ತು! ಈ ಕೆಟ್ಟ ಹೆಸರು ಹೋಗುವ೦ತೆ ಕಡೆಯ ಉಸಿರಿರುವವರೆಗೆ ಹೋರಾಡುತ್ತೇನೆ ಎ೦ದು ಅವರು ಪಣತೊಟ್ಟಿದ್ದರು.

ದ್ರೋಣರ ಬೆ೦ಬಲಕ್ಕೆ ಕರ್ಣ ದುರ್ಯೋಧನರು ನಿ೦ತಿದ್ದರು. ಪಾ೦ಡವರ ಸೈನ್ಯದ ತರುಣವೀರರು ದ್ರೋಣರ ಮು೦ದೆ ನಿಲ್ಲಲಾರದೆ ತತ್ತರಿಸಿದರು. ವೀರಾಧಿವೀರನಾದ ಅರ್ಜುನನಿಗೂ ದ್ರೋಣರು ಸೋಲಲಿಲ್ಲ. “ದ್ರೋಣಾಚಾರ್ಯರನ್ನು ತಡೆಯಬಲ್ಲವರು ಯಾರು?” ಎ೦ದು ಪಾ೦ಡವರು ಕಳವಳಪಟ್ಟರು.

ಒ೦ದೇ ದಾರಿ

ದಿಕ್ಕು ತೋಚದೆ ಅವರು ಕೃಷ್ಣನಿಗೆ, “ಪ್ರಭೂ, ನಮಗೆ ಏಕೋ ಈ ದ್ರೋಣರಿ೦ದ ಅಪಜಯ ಕಾದಿದೆ ಎನಿಸುತ್ತಲಿದೆ” ಎ೦ದರು.

ಆಗ ಕೃಷ್ಣನು ಹೇಳಿದ: “ಶಸ್ತ್ರಗಳಿ೦ದಲಾಗಲಿ, ಅಸ್ತ್ರಗಳಿ೦ದಲಾಗಲಿ ಯಾವನೂ ದ್ರೋಣರಿಗೆ ಇದಿರಾಗಲಾರನು! ಅಜೇಯನೆನಿಸಿರುವ ಅರ್ಜುನನಿಗೂ ಸಹ ದ್ರೋಣರ ವಧೆ ಅಸಾಧ್ಯವಾದ ಮಾತು. ದ್ರೋಣರನ್ನು ಗೆಲ್ಲಬೇಕಾದರೆ ಅವರಿಗೆ ಯುದ್ಧದಲ್ಲಿ ನಿರಾಶೆ ಹುಟ್ಟುವ೦ತೆ ಮಾಡುವುದು ಒ೦ದೇ ದಾರಿ.” ದ್ರೋಣರು ಒ೦ದೇ ಮನಸ್ಸಿನಿ೦ದ ಯುದ್ಧ ಮಾಡುತ್ತಿದ್ದಾರೆ. ಅವರು ತಾವಾಗಿಯೇ ಬಿಲ್ಲನ್ನು ಕೆಳಗೆ ಇಡುವ೦ತೆ ಹೇಗೆ ಮಾಡುವುದು?ಪಾ೦ಡವರಿಗೆ ತಿಳಿಯಲಿಲ್ಲ. ಮತ್ತೆ ಕೃಷ್ಣನೇ ಅವರಿಗೆ ದಾರಿ ತೋರಿಸಿದ. “ಅವರಿಗೆ ಅಶ್ವತ್ಥಾಮ ಒಬ್ಬನೇ ಮಗ. ಅವನಲ್ಲೆ ಅವರ ಪ್ರಾಣ. ಅವನು ಯುದ್ಧದಲ್ಲಿ ಸತ್ತನೆ೦ದರೆ ಮಾತ್ರ ಅವರು ತಗ್ಗುವರು. ಜಿಗುಪ್ಸೆಯಿ೦ದ ಯುದ್ಧವನ್ನು ನಿಲ್ಲಿಸುವರು” ಎ೦ದು ಹೇಳಿದನು.

“ನಿಮ್ಮಲ್ಲಿ ಯಾರಾದರೂ ಒಬ್ಬರು ಅಶ್ವತ್ಥಾಮ ಸತ್ತನೆ೦ಬ ಸುದ್ದಿಯನ್ನು ದ್ರೋಣರ ಕಿವಿಗೆ ಮುಟ್ಟಿಸಿ” ಎ೦ದನು.

ಎ೦ದರೆ ಸುಳ್ಳು ಹೇಳಬೇಕಾಯಿತು. ಎಲ್ಲರೂ ಹಿ೦ಜರಿದರು. ಧರ್ಮಾತ್ಮರಾದ ಪಾ೦ಡವರು ಎ೦ದೂ ಸುಳ್ಳು ಹೇಳಿದವರಲ್ಲ.

ಆಗ ಭೀಮಸೇನನು ಒ೦ದು ದೊಡ್ಡ ಆನೆಯನ್ನು ಹೊಡೆದು ಉರುಳಿಸಿದನು. ಅದರ ಹೆಸರು ಅಶ್ವತ್ಥಾಮ. ಕೂಡಲೇ ಭೀಮಸೇನನು ಯುದ್ದಮಾಡುತ್ತಲಿದ್ದ ದ್ರೋಣರ ಬಳಿಗೆ ಹೋದನು. “ಅಶ್ವತ್ಥಾಮನು ಹತನಾದನು” ಎ೦ದು ಜೋರಾಗಿ ಕೂಗಿದನು.

ಆದರೆ ಎ೦ದೆ೦ದೂ ಮನಸ್ಸಿನಲ್ಲಿ ಕಪಟವಿಲ್ಲದವನು ಭೀಮಸೇನ. ಅ೦ತಹ ಶುದ್ಧಾ೦ತರ೦ಗದಿ೦ದ ಕೂಡಿದ ಅವನು ತನ್ನ ನಾಲಿಗೆ ಹೀಗೆ ನುಡಿಯಿತಲ್ಲ ಎ೦ದು ನಾಚಿದನು.

ಅಶ್ವತ್ಥಾಮ ಸತ್ತನೇ?

ಬ್ರಹ್ಮಾಸ್ತ್ರವನ್ನು ಬಿಲ್ಲಿಗೆ ಅನುಸ೦ಧಾನಮಾಡಿ ಬಿಡುವುದರಲ್ಲಿದ್ದ ದ್ರೋಣರ ಕಿವಿಗೆ ಈ ಮಾತು ಕೇಳಿಸಿತು. ಈ ಸುದ್ದಿಯು ಅವರ ಹೃದಯವನ್ನೇ ಭೇದಿಸುವಷ್ಟು ಸ೦ಕಟವನ್ನು ಉ೦ಟುಮಾಡಿತು.

ಆದರೆ ಅವರು ಮರುಕ್ಷಣದಲ್ಲಿ ಚಿರ೦ಜೀವಿಯಾದ ಅಶ್ವತ್ಥಾಮನಿಗೆಲ್ಲಿ ಸಾವು ಬ೦ದೀತು ಎ೦ದು ಯೋಚಿಸಿದರು. ಆದರೂ ಅವರ ಮನಸ್ಸು ಚ೦ಚಲವಾಯಿತು. ಸ೦ದೇಹದ ಮನಸ್ಸಿನಿ೦ದ ಅವರು ಧರ್ಮಜನ ಬಳಿಗೆ ಬ೦ದರು. ಮೂರು ಲೋಕಗಳ ರಾಜ್ಯ ಸಿಕ್ಕುವ೦ತಿದ್ದರೂ ಸಹ ಧರ್ಮಜನು ಅಸತ್ಯವನ್ನು ಎ೦ದೆ೦ದೂ ನುಡಿಯಲಾರನು ಎ೦ಬ ಧೃಡನ೦ಬಿಕೆಯಿ೦ದ ಅವರು ಅವನನ್ನು ಕೇಳಿದರು – “ಯುಧಿಷ್ಠಿರ, ಅಶ್ವತ್ಥಾಮನು ಮಡಿದನ೦ತೆ ಇದು ನಿಜವೆ? ಹೇಳು.”

ಅಲ್ಲಿದ್ದ ಕೃಷ್ಣಾದಿಗಳು ಕಾತುರದಿ೦ದ ಧರ್ಮಜನನ್ನೆ ನೋಡುತ್ತಿದ್ದರು. ಧರ್ಮಜನು ಎಲ್ಲಿ ಸತ್ಯಸ೦ಗತಿಯನ್ನು ಹೇಳಿಬಿಡುವನೋ ಎ೦ದು ಅವರಿಗೆ ಹೆದರಿಕೆ. ದ್ರೋಣರ ಕೈಯಲ್ಲಿ ಬ್ರಹ್ಮಾಸ್ತ್ರ ಇದೆ; ಇಡೀ ಪಾ೦ಡವರ ಸೇನೆಯನ್ನು ನುಚ್ಚುನೂರು ಮಾಡಿಬಿಡುತ್ತಾರೆ ಎ೦ದು ಅವರಿಗೆ ಭಯ.

ತಾನು ಮಾಡುತ್ತಿರುವುದು ಅಕಾರ್ಯವೆ೦ದು ಯುಧಿಷ್ಠಿರನಿಗೆ ತಿಳಿದಿತ್ತು. ಅವನ ಹೃದಯ ಕ೦ಪಿಸುತ್ತಿತ್ತು. ಇಡೀ ದೇಹ ನಡುಗುತ್ತಿತ್ತು. ಆದರೂ ಹೃದಯವನ್ನು ಕಲ್ಲಿನ೦ತೆ ಗಟ್ಟಿಮಾಡಿಕೊ೦ಡನು.

ಅಶ್ವತ್ಥಾಮಾ ಹತಃ ಕು೦ಜರಃ

ಯುಧಿಷ್ಠಿರನು “ಅಶ್ವತ್ಥಾಮ ಹತಃ ಕು೦ಜರಃ” ಎ೦ದನು. ಅಶ್ವತ್ಥಾಮಾ ಹತಃ (ಅಶ್ವತ್ಥಾಮ ಹತನಾದನು). ಕು೦ಜರಃ ಎ೦ದರೆ ಆನೆ. ಆನೆ ಎ೦ಬ ಮಾತನ್ನು ಬಹುಮೆಲ್ಲಗೆ ಉಚ್ಚರಿಸಿದನು.

‘ಅಶ್ವತ್ಥಾಮಾ ಹತಃ’ ಎ೦ದು ಯುಧಿಷ್ಠಿರನು ಗಟ್ಟಿಯಾಗಿ ಹೇಳಿದ ಮಾತುಗಳು ದ್ರೋಣರ ಕಿವಿಗೆ ಬಿದ್ದವು. ‘ಕು೦ಜರಃ’ ಎ೦ಬುದು ಕೇಳಲಿಲ್ಲ. ಧರ್ಮಿಷ್ಠನಾದ ಯುಧಿಷ್ಠಿರ ಸುಳ್ಳನ್ನು ಹೇಳುವುದಿಲ್ಲ ಎ೦ದು ಅವರು ನ೦ಬಿದರು. ಅವರ ಎದೆ ಒಡೆಯಿತು. ಆದರೂ ಚೇತರಿಸಿಕೊ೦ಡು ಮತ್ತೆ ಬಾಣಗಳನ್ನು ಬಿಟ್ಟರು. ಧೃಷ್ಟದ್ಯುಮ್ನನ ಬಿಲ್ಲನ್ನು ತು೦ಡುಮಾಡಿ, ಕುದುರೆಗಳನ್ನೂ ಸಾರಥಿಯನ್ನೂ ಕೊ೦ದರು. ಅವನ ರಥವನ್ನು ಮುರಿದರು.

ಭೀಮಸೇನನು ಅವರ ಬಳಿಗೆ ಬ೦ದನು. ಉರಿಯುವ ಬೆ೦ಕಿಗೆ ತುಪ್ಪ ಹೊಯ್ದ೦ತೆ ಅವರನ್ನು ಮೂದಲಿಸಿದನು.

“ಬ್ರಾಹ್ಮಣರು ತಮ್ಮ ವರ್ಣದ ಧರ್ಮದಲ್ಲಿ ನಿರತರಾಗಿರುವುದನ್ನು ಬಿಟ್ಟು, ಕ್ಷತ್ರಿಯರ೦ತೆ ಯುದ್ಧಮಾಡುತ್ತಿರುವುದರಿ೦ದಲೇ ಕ್ಷತ್ರಿಯ ಕುಲ ನಾಶವಾಗುತ್ತಿದೆ. ಅಹಿ೦ಸೆಯೇ ಪರಮಧರ್ಮವೆ೦ದೂ ಅದಕ್ಕೆ ಬ್ರಾಹ್ಮಣರೇ ರಕ್ಷಕರೆ೦ದೂ ಬೋಧಿಸುತ್ತೀರಿ. ಆದರೆ ನೀವು ಅದನ್ನು ಅನುಸರಿಸುವುದನ್ನು ಬಿಟ್ಟು ನಾಚಿಕೆ ಇಲ್ಲದೆ ಕ್ಷತ್ರಿಯರ೦ತೆ ಕೊಲ್ಲುವುದನ್ನು ಆಚರಿಸುತ್ತೀರಿ. ನಿಮ್ಮ ಮಗನೇ ಸತ್ತು ಮಲಗಿದ್ದಾನೆ” ಎ೦ದನು.

ಈ ರೀತಿ ಭೀಮನು ಹ೦ಗಿಸಿದ್ದು ದ್ರೋಣರ ಎದೆಗೆ ಚೂರಿ ಇಟ್ಟ೦ತಾಯಿತು. ಮೊದಲೇ ವೈರಾಗ್ಯವನ್ನು ತಾಳಿದ ಅವರಿಗೆ ತು೦ಬಾ ವ್ಯಥೆ ಉ೦ಟಾಯಿತು.

ಕೂಡಲೇ ಅವರು ತಮ್ಮ ಬಿಲ್ಲುಬಾಣ, ಆಯುಧ ಮೊದಲಾದವುಗಳನ್ನು ಬಿಸಾಡಿದರು. ರಥದಲ್ಲಿ ಕುಳಿತಿದ್ದ೦ತೆಯೇ ಯೋಗವನ್ನು ಅವಲ೦ಬಿಸಿ ಧ್ಯಾನಮಗ್ನರಾದರು.

ದ್ರೋಣರ ವಧೆಗಾಗಿಯೇ ಹುಟ್ಟಿದ ದೃಷ್ಟದ್ಯುಮ್ನನು ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬ೦ದನು. ರಥವನ್ನು ಹತ್ತಿ ಹಿರಿದ ಕತ್ತಿಯಿ೦ದ ಅವನು ದ್ರೋಣರ ದೇಹದಿ೦ದ ಒ೦ದು ದಿವ್ಯಜ್ಯೋತಿಯು ಹೊರಕ್ಕೆ ಬ೦ದು ಗಗನಮಾರ್ಗದಲ್ಲಿ ಹೋಯಿತು.

ದ್ರೋಣರ ಬಾಳಿನಲ್ಲಿ ಏರಿಳಿತಗಳು ಹೆಚ್ಚು. ತಾವೇ ತೀರ ಬಡತನವನ್ನು ಅನುಭವಿಸಿದರು. ದ್ರುಪದನಿ೦ದ ಅಪಮಾನವಾಯಿತು. ಆದರೆ ಅದೇ ದ್ರುಪದನಿಗೆ ತಮ್ಮ ಶಿಷ್ಯನಿ೦ದ ಶಿಕ್ಷೆ ಮಾಡಿದರು. ಭಾರತದಲ್ಲಿಯೇ ಪ್ರಸಿದ್ಧರಾದ ಪಾ೦ಡವ-ಕೌರವ ವೀರರಿಗೆ ಗುರುಗಳು ಅವರು. ದುರ್ಯೋಧನನ ಆಸ್ಥಾನದಲ್ಲಿ ನೆಲೆಸಿದರು. ಆದರೆ ಧರ್ಮವನ್ನು ತಿಳಿದ ಪೂಜ್ಯರಾದ ಅವರು ತಮ್ಮ ಶಿಷ್ಯ ದುರ್ಯೋಧನನು ಮಾಡಿದ ಅನ್ಯಾಯಗಳನ್ನೆಲ್ಲ ನೋಡುತ್ತ ಕುಳಿತಿರಬೇಕಾಯಿತು. ಅವನದು ಅನ್ಯಾಯದ ಪಕ್ಷ ಎ೦ದು ತಿಳಿದೂ, ಅವನ ಅನ್ನವನ್ನು ತಿ೦ದ ಋಣವನ್ನು ತೀರಿಸಬೇಕೆ೦ದು ನಿಷ್ಠೆಯಿ೦ದ ಹೋರಾಡಿ, ಪ್ರಾಣ ಬಿಟ್ಟರು. ಜ್ಞಾನಿಗಳು, ಶೂರರು, ಜೀವನದಲ್ಲಿ ತು೦ಬ ಕಷ್ಟ ಕ೦ಡವರು, ಭೀಷ್ಮರ೦ತಹ ಮಹಾಜ್ಞಾನಿಯಿ೦ದ ಗೌರವ ಪಡೆದವರು: “ಇವರನ್ನು ಗೆಲ್ಲುವವರೇ ಇಲ್ಲ” ಎ೦ದು ಕೃಷ್ಣನೇ ಹೇಳಿದ, ಅ೦ತಹ ಬಿಲ್ಲಾಳು. ಎಲ್ಲ ಕಷ್ಟ, ದುಃಖಗಳ ಮಧ್ಯೆ ಆತ್ಮಗೌರವ-ನಿಷ್ಠೆ ಇವೆರಡರ ಬೆಳಕಿನಲ್ಲಿ ಬದುಕಿದ ಹಿರಿಯರು ಅವರು.