ಸೂ. ಅರಿ ಮಹೇಶ ಕುಠಾರ ವೀರನು
ವರ ಕಿರೀಟ ಕುಮಾರ ಧೀರನು
ಸುರರ ನಗರಿಗೆ ನಡೆಯೆ ಹಲುಬಿದನಂದು ಯಮಸೂನು

ತೆಗೆದುದರಿ ಪರಿವಾರ ಕಹಳಾ
ದಿಗಳ ಸನ್ನೆಯಲುಭಯ ಬಲ ಕಾ
ಳೆಗವನುಳಿದುದು ಬಂದು ಹೊಕ್ಕರು ತಮ್ಮ ಪಾಳಯವ
ಮಗನು ರಣದಲಿ ಮಡಿದ ಹದ ಬೀ
ಡುಗಳೊಳಾದುದು ವಾರ್ತೆ ದೂತರು
ದುಗುಡ ಭರದಲಿ ಬಂದು ಹೊಕ್ಕರು ರಾಜಮಂದಿರವ ೧

ಅವನಿಪನ ಖಂಡೆಯವ ನಕುಲನ
ಪವನಸುತನ ಕಠಾರಿಯನು ನೃಪ
ನಿವಹದಾಯುಧ ತತಿಯನೊಯ್ಯನೆ ತೆಗೆದು ಬೈಚಿಟ್ಟು
ಬವರದಲಿ ಸುತನಳಿದನೋ ಕೌ
ರವರ ಕೈವಶವಾದನೋ ಸಂ
ಭವಿಪ ಹದನೇನೆಂಬ ನೃಪತಿಯ ಕಂಡರೈತಂದು ೨

ಅವನಿಪಾಲ ಕುಮಾರ ಕಂಠೀ
ರವನು ರಣದಲಿ ಬೀದಿವರಿದು
ತ್ಸವದಲಹಿತರನಿರಿದು ಕೌರವ ರಾಯ ನಂದನರ
ಜವನ ನಗರಿಗೆ ಕಳುಹಿ ತಾ ವಾ
ಸವನ ಸಿಂಹಾಸನವನಡರುವ
ತವಕದಲಿ ಜಾರಿದನೆನಲು ಶಿವ ಎನುತ ಬಸವಳಿದ ೩

ಕುಲಿಶ ಹತಿಯಲಿ ಕುಲ ಶಿಲೋಚ್ಚಯ
ವಿಳೆಗೆ ಕೆಡೆವಂದದಲಿ ನಿಜಸುತ
ನಳಿದ ವಾರ್ತಾವಚನದುಪಟಳಕವನಿಪಾಲಕನು
ಮಲಗಿದನು ಮೈಮರೆದು ಮಹಿಮಂ
ಡಳಿಕರೊಳು ಗುಜುಗುಜಿನೊಳಿರೆ ಕಳ
ವಳಿಕೆ ಮೊಳೆತುದು ಕಟಕದಲಿ ದುಮ್ಮಾನಮಯವಾಯ್ತು ೪
ಅರಮನೆಯ ಗಜಬಜದ ಹದನರಿ
ದರಸನಪಗತನೆಂದು ಪಾಳಯ
ದಿರುಳು ನಡುಗಿತು ತೊಡಗಿದವು ಕೈಸೂರೆ ಕೆಲಕಡೆಯ
ನೆರವಿ ಮಸಗಿತು ಕೆತ್ತುವಂಗಡಿ
ದುರುಳರಬ್ಬರಿಸಿದರು ಮುಸುಕಿನ
ಸುರಗಿ ಕೆತ್ತವು ಮಂದಿ ದಳವುಳವಾಯ್ತು ನಿಮಿಷದಲಿ ೫

ಹೊಳಲು ತಲೆಕೆಳಕಾಯ್ತು ಹುಯ್ಯಲು
ತಳಿತುದೊಳತೋಟಿಯಲಿ ಕೆತ್ತವು
ನಿಳಯ ನಿಳಯ ಕವಾಟವುದ್ರೇಕಿಗಳ ಮಯವಾಯ್ತು
ಎಲೆಲೆ ಕೆಟ್ಟುದು ಕಟಕವೆಂದು
ಮ್ಮಳಿಸಿದರು ಸಚಿವರು ಮಹೀಪತಿ
ಯಳಿವನರಿಯಲು ನಾಸಿಕದಲಾರೈದರುಸುರುಗಳ ೬

ಉರಿಯ ಚೂಣಿಯಲುಸುರು ಮೂಗಿನ
ಲುರವಣಿಸುತಿದೆ ಧರಣಿಪತಿ ಸು (ಬಣಗುಗಳ
ಸ್ಥಿರನು ಹೊಯ್ ಹೊಯ್ ಹೊಳಲ ಬೆದರಿಸಿ ಸುಲಿವ
ಹರಿಯೆನಲು ಹೊರವಂಟು ಹೊಯ್ದರು
ತುರಗ ಗಜಘಟೆ ಬೀದಿವರಿದವು
ನೆರವಿದೊಳಸಿನ ಮನ್ನೆಯರ ಸೆಣಸಿದರು ಶೂಲದಲಿ ೭

ಹೊಳಲ ಗಜಬಜವಡಗಿತರಮನೆ
ಯೊಳಗೆ ಪಸರಿಸಿತತುಳ ಶೋಕದ
ಜಲಧಿ ಭೂಪಾಲಕನ ಸೈರಣೆಗಾಯ್ತು ಮಹನವಮಿ
ಒಳಗುರಿವ ಹಸಿಮರನ ತುದಿಯಲಿ
ಜಲವೊಗುವವೊಲು ಹೃದಯ ಶಿಖಿಯುರೆ
ತಳಿತು ಲೋಚನವಾರಿ ತುಳುಕಿತು ಪವನಜಾದಿಗಳ ೮

ಮರೆವುತೆಚ್ಚರುತವನಿಪತಿ ಕರೆ
ತರುಣನಾವೆಡೆ ರಾಯಗಜಕೇ
ಸರಿಯದಾವೆಡೆ ಕಂದ ಬಾಯೆನುತಪ್ಪಿದನು ಬಯಲ
ಹೊರಳಿದನು ಹುಡಿಯೊಳಗೆ ಸಲೆ ಕಾ
ತರಿಸಿದನು ಮೋಹಾಂಧಕಾರಕೆ
ಕರಣವನು ಕೈಸೂರೆಗೊಟ್ಟನು ನಿಜದೊಳೆಚ್ಚರದೆ ೯

ಬಂದು ಫಲುಗುಣನೆನ್ನ ಮೋಹದ
ಕಂದನಾವೆಡೆಯೆಂದಡಾನೇ
ನೆಂದು ಮಾರುತ್ತರವ ಕೊಡುವೆನು ವೈರಿನಾಯಕರು
ಕೊಂದರೆಂಬೆನೊ ಮೇಣು ನಾನೇ
ಕೊಂದೆನೆಂಬೆನೊ ಶಿವ ಮಹಾದೇ
ವೆಂದು ಪುತ್ರಸ್ನೇಹಸೌರಂಭದಲಿ ಹಲುಬಿದನು ೧೦

ಅರಮನೆಯ ಗಜಬಜವ ಕೇಳಿದು
ದೊರೆಯೊಳಾವವನಳಿದನಕಟೆಂ
ದರಸಿಯರು ಬೆಸಗೊಳಲು ದ್ರೌಪದಿಗರುಹಿದರು ಹದನ
ಉರಿಯ ಡಾವರವೆಳೆಯ ಬಾಳೆಯ
ಬೆರಸುವಂತಿರೆ ರಾಯ ಕುವರನ
ಮರಣವಾರ್ತೆಯನಾ ಸುಭದ್ರಾ ದೇವಿ ಕೇಳಿದಳು ೧೧

ತೆಳುವಸುರ ಬಿರುವೊಯ್ಲ ಮುರಚಿದ
ಬಳಲ ಮುಡಿಯರಳುಗಳ ಮುತ್ತಿಗೆ
ಯಳಿರವದ ಭಾರಣೆಯ ಹಾಹಾರವದ ಕಾಯದಲಿ
ಲಲನೆ ಬರೆ ಚೆಲುವಾಯ್ತು ಧರ್ಮಜ
ನಳಲು ಮಿಗೆ ಕೊಂಡಿರಲು ನಾಟ್ಯದ
ಕಳನ ಗೆಲದಿರಳೆನಲು ಬಂದಳು ದ್ರೌಪದಾದೇವಿ ೧೨

ಅಳಲ ಶಿಖಿಯಲಿ ಬಾಡಿದಾನನ
ಜಲರುಹದ ಕಡುವೇದನೆಯ ಕಳ
ಕಳದ ಹಾಹಾರವದ ರೌದ್ರೆ ಸುಭದ್ರೆ ನಡೆತಂದು
ನೆಲಕೆ ಧೊಪ್ಪನೆ ಕೆಡೆದು ಸಭೆಯಲಿ
ಹಲುಬಿದಳು ಕೊಳುಗುಳಕೆ ಕಂದನ
ಕಳುಹಿದವರಿಗೆ ಸಂದುದೇ ಪರಿಣಾಮವೆಂದೆನುತ ೧೩

ಕೆಲನ ಮೆಚ್ಚಿಸುವಳಲು ಲೋಚನ
ಜಲವ ತೊಡೆಯೈ ಭೀಮ ಬಲ್ಲೆನು ನಿಮ್ಮ ನೆನಹುಗಳ
ಅಳಲದಿರಿ ಸಹದೇವ ನಕುಳರು
ನಿಲಿಸಿರೈ ನಿಮ್ಮಿಷ್ಟ ಸಿದ್ಧಿಯ
ಬೆಳಸು ಫಲವಾಯ್ತೇಕೆ ನೋವಿನ್ನೆಂದಳಿಂದುಮುಖಿ ೧೪

ಮಗನು ಪಂಚದ್ರೌಪದೇಯರ
ಬಗೆಯನೆನ್ನವನಿರಲು ರಾಜ್ಯವ
ಹೊಗಿಸಲನುವಿಲ್ಲೆಂದು ಕಂದನ ರಣಕೆ ನೂಕಿದಿರಿ
ಬಗೆಯೊಲವು ಫಲವಾಯ್ತಲಾ ಕಾ
ಳೆಗವ ಗೆಲಿದೈವರು ಕುಮಾರರು
ಹೊಗಿಸಿರೈ ಗಜಪುರವನೆಂದು ಸುಭದ್ರೆ ಹಲುಬಿದಳು ೧೫

ಅಕಟ ಮಗನೇ ಬಹಳ ಪಾಪಾ
ತ್ಮಕರ ಬಸುರಲಿ ಬಹುದರಿಂದೀ
ನಕುಳನುದರದಲಾಗಲೀ ಧರ್ಮಜನ ಜಠರದಲಿ
ಸುಕೃತಿ ನೀನುದಯಿಸಲು ಬಹು ಕಂ
ಟಕರು ಬಳಿಕಾರುಂಟು ಕಡು ಪಾ
ತಕಿಯಲಾ ನಿಮ್ಮಯ್ಯನೆಂದಳು ಫಲುಗುಣನ ರಾಣಿ ೧೬

ಧುರವ ಹೊಗತಕ್ಕವನೆ ಚಿಕ್ಕವ
ನಿರಿಯಲಾಪನೆ ಬಹನೆ ಮರಳಿದು
ಧರೆಯ ವೈಭವಕಳುಪಿ ಕಳುಹಿದಿರೆನ್ನ ಕಂದನನು
ವರ ಯುಧಿಷ್ಠಿರ ಜನಪ ಲೋಕದ
ಕರುಣಿಯೆಂಬರು ಕುನ್ನಿಗಳು ಮರೆ
ಗೊರಳುಗೊಯ್ಕನನರಿಯರೆಂದಳು ಫಲುಗುಣನ ರಾಣಿ ೧೭

ಶೋಕವಿಮ್ಮಡಿಸಿತ್ತು ಚಿತ್ತ
ವ್ಯಾಕುಳತೆಯಾ ಸತಿಯ ನುಡಿಗಳ
ನೇಕ ಸಾಣೆಯ ಸರಳು ಮುರಿದವು ನೃಪನ ಹೃದಯದಲಿ
ಆ ಕುಮಾರವಿಯೋಗವಹ್ನಿಗೆ
ಯೀಕೆಯಳಲು ಸಮೀರನಾಯ್ತು ದಿ
ವೌಕಸರ ಸಮ್ಮೇಳವೇ ಪುರುಷಾರ್ಥ ತನಗೆಂದ ೧೮

ಎಲೆ ವೃಕೋದರ ನಕುಳ ಸಾತ್ಯಕಿ
ನಿಲಿಸಿರೈ ತಂಗಿಯನು ತನ್ನಯ
ಕೊಲೆಗೆ ಮಗನಳಿವೊಂದು ಸಾಲದೆ ತನ್ನ ನುಡಿಯೇಕೆ
ನಳಿನನಾಭನ ಕರುಣದೊರತೆಯು
ಕಳಿದರಾರೇಗುವರು ಶಿವ ಶಿವ
ನೆಲನೊಳೆನ್ನವೊಲಾರು ಪಾಪಿಗಳೆಂದು ಬಿಸುಸುಯ್ದ ೧೯

ಧರಣಿಪನ ಶೋಕಾತಿಶಯವನು
ವರ ಸಮಾಧಿಯೊಳರಿದು ಮುನಿಪತಿ
ಕರುಣದಲಿ ಕಡುನೊಂದು ಸಕಲ ಜಗಕ್ಕನುಗ್ರಹವ
ಕರುಣಿಸುವವೊಲು ಕರುಣಿತನವನು
ಮೆರೆಯಲೋಸುಗವಿರದೆ ಗಗನೇ
ಚರದ ಗತಿಯಲಿ ಬಂದನೈ ದ್ವೈಪಾಯನವ್ರತಿಪ ೨೦ \

ಬಂದು ವೇದವ್ಯಾಸ ಮುನಿ ನೃಪ
ಮಂದಿರವ ಹೊಗಲೆದ್ದು ಪದದಲಿ
ಸಂದಣಿಸಿ ಚಾಚಿದನು ಮಕುಟವನವನಿಪಾಲಕನು
ನೊಂದವರು ಸತ್ಸಂಗತಿಯಲಾ
ನಂದವಡೆವುದೆನುತ್ತ ಮುನಿಪತಿ (೨೧
ಕಂದು ಮೋರೆಯ ಮಹಿಪತಿಯ ನೆಗಹಿದನು ಕರುಣದಲಿ ಎಲೆ

ಯುಧಿಷ್ಠಿರ ನೃಪ ಕುಮಾರ
ಪ್ರಳಯದಾಪತ್ತಾಯ್ತೆ ಭೀಮನ
ನಲವಿಗೂಣೆಯವಾಯ್ತೆ ದುಸ್ಥಿತಿಯಾಯ್ತೆ ನಕುಲಂಗೆ
ಬಲು ದುಗುಡ ಸಹದೇವನಲಿ ಸಂ
ಗಳಿಸಿತೇ ದ್ರೌಪದಿ ಸುಭದ್ರಾ
ಲಲನೆಯರಿಗನುಚಿತವು ಘಟಿಸಿತೆ ಎಂದನಾ ಮುನಿಪ ೨೨

ಅಡಸಿದಾಪತ್ತಿನಲಿ ಧೈರ‍್ಯವ
ಹಿಡಿವುದೇ ಸುಪ್ರೌಢಿ ಸಾಕಿ
ನ್ನೊಡಲು ಕರಗಿದೊಡೇಳಲರಿವನೆ ಹಿಂಗಿದಭಿಮನ್ಯು
ಒಡನೆ ಬಂದವು ಬಿಡವು ಭವದಲಿ
ತೊಡಕಿ ಸುಕೃತವು ದುಷ್ಕೃತಂಗಳು
ಕಡೆಗೆ ತಿಳಿವಿನೊಳಲ್ಲದಿಹಪರ ಸೌಖ್ಯವಿಲ್ಲೆಂದ ೨೩

ಎಲ್ಲರೋಪಾದಿಯ ಕುಮಾರಕ
ನಲ್ಲ ಕಾಣಿರೆ ವೀರ ವಿತರಣ
ದಲ್ಲಿ ಛಲದಲಿ ಶೀಲದಲಿ ನಾನಾ ಗುಣಂಗಳಲಿ
ಇಲ್ಲ ಸುಕುಮಾರಂಗೆ ಸರಿ ಮಗ
ನಿಲ್ಲದೇಗುವೆನಕಟ ವಚನದ
ಸೆಲ್ಲಹದಲಿರಿಯದಿರೆನುತ ಹಲುಬಿದನು ಭೂಪಾಲ ೨೪

ಜನನವೇ ಲಯಬೀಜ ಮರಣವೆ
ಜನನ ಬೀಜವು ತೋರಿ ಕೆಡುವೀ
ತನುವಿನಭಿರಂಜನೆಯ ಸೌಖ್ಯಕೆ ಮಾರದಿರು ಮನವ
ಘನ ಪರಂಜ್ಯೋತಿ ಸ್ವರೂಪದ
ನೆನಹ ಮರೆದೀ ಮೋಹಮಯ ಬಂ
ಧನದೊಳಗೆ ಮರುಳಹರೆ ಮಗನೇ ನಿನ್ನನರಿಯೆಂದ ೨೫

ಹರನೊಡನೆ ಹೊಯ್ದಾಡಿದಗ್ಗದ
ನರನು ತಂದೆ ಸಮಸ್ತ ಭುವನೇ
ಶ್ವರನಲಾ ಮುರವೈರಿ ಮಾವನು ನಿನ್ನ ತನಯನಿಗೆ
ಧುರದೊಳೀ ಹದನಾಯ್ತು ಮಿಕ್ಕಿನ
ನೊರಜುಗಳ ಪಾಡೇನು ಕಾಲನು
ಹರಿಹರಬ್ರಹ್ಮಾದಿಗಳ ಕೈಕೊಂಬನಲ್ಲೆಂದ ೨೬

ದೇಹ ತಾನಭಿಮನ್ಯುವೋ ದಿಟ
ದೇಹಿ ತಾನಭಿಮನ್ಯುವೋ ಜಡ
ದೇಹ ತಾನಭಿಮನ್ಯುವಲ್ಲದು ಕೆಟ್ಟರೇನಾಯ್ತು
ದೇಹವೆಂಬುದನಿತ್ಯ ನಿನ್ನವ
ರಾಹವದೊಳಳಿದವರ ಬಿಡು ಸಂ
ದೇಹವನಹಮ್ಮಮತೆಗಳ ಬೀಳ್ಕೊಟ್ಟು ನೋಡೆಂದ ೨೭

ಎನ್ನದಾನೆಂಬೆರಡರಿಂದವೆ
ಬನ್ನಬಡುವನು ಜೀವನಲ್ಲದೆ
ಮುನ್ನವಿನ್ನೆಂದೆಂದಿಗಾತ್ಮಂಗಿಲ್ಲ ಭವಬಂಧ
ನಿನ್ನ ನೀನರಿ ಸಾಕು ಮಾಯೆಯ
ಗನ್ನಗತಕವ ಗೆಲುವೆ ಕನಸಿನ
ಪೊನ್ನ ಕಾಣದೆ ದುಃಖಪಡುವರೆ ಭೂಪ ಕೇಳೆಂದ ೨೮

ಉರಗ ನರ ದಿವಿಜಾದಿಗಳಿಗಿದು
ಪರಿಹರಿಸಲಳವಲ್ಲ ದೈವದ
ಪರುಠವಣೆ ಮುನ್ನಾದಿಯಲಿ ನಿರ್ಮಿಸಿತು ಮೃತ್ಯುವನು
ಅರಸನಾಗಲಿ ಧನಿಕನಾಗಲಿ
ಹಿರಿಯನಾಗಲಿ ಬಡವನಾಗಲಿ
ಮರಣ ಜನಿಸಿದ ಬಳಿಕ ತಪ್ಪದು ಮಗನೆ ಕೇಳೆಂದ ೨೯

ಇರುಳು ಹಗಲಿನ ಬೀಜ ನೆರವಿಯೆ
ಹರೆವುದಕೆ ಮೊದಲುನ್ನತೋನ್ನತ
ಮರುಳೆ ಕೇಡಿನ ಕಾಳಕೂಟವೆ ವೀರನಿರ್ವಹಣ
ಸಿರಿ ದರಿದ್ರತೆಗಡಹು ಜನನವೆ
ಮರಣ ಫಲವಿದನರಿದು ಬುಧರಾ
ಚರಿಸುವುದು ಕೇಳೆಂದು ವೇದವ್ಯಾಸ ಮುನಿ ನುಡಿದ ೩೦

ತಿಳಿದು ಧರ್ಮಜ ಕೇಳು ಕೃತಯುಗ
ದೊಳಗೆ ಕಂಪನನೆಂಬ ಭೂಪನು
ಕುಲತಿಲಕ ಹರಿಯೆಂಬ ಮಗನಾತಂಗೆ ಜನಿಸಿದನು
ಬಳಿಕ ಯೌವನನಾಗಿ ಪರಮಂ
ಡಲಕೆ ನಡೆದನು ವೈರಿ ರಾಯರ
ವಳಿತವನು ತಾನೊತ್ತಿಕೊಂಡನು ರಿಪು ನೃಪರ ಕೆಡಹಿ ೩೧

ಮಗನೆ ಕಂಪನನೆಂಬ ಭೂಪನ
ಮಗನು ಮತ್ತೊಮ್ಮಿನಲಿ ಬಲುಗಾ
ಳೆಗವ ಕಾದಿ ವಿರೋಧಿ ಸೇನೆಯೊಳಾನೆವರಿವರಿದು
ಬಗೆಯೆ ನಿನ್ನಭಿಮನ್ಯುವಿನವೋ
ಲಗಣಿತರನಸಿಯರೆದು ಸುರಪನ
ನಗರಿಗೈದಿದನೆಂದು ಕಂಪನು ಕೇಳಿ ಬಸವಳಿದ ೩೨

ನಿನಗೆ ಬಂದಾಪತ್ತಿನಂತಿರ
ಲನಿತು ಬಂದುದು ಕಂಪನೆಂಬಾ
ತನನು ಸಂತೈಸಲ್ಕೆ ನಾರದನವನಿಗೈತಂದು
ಜನಪತಿಯ ಹಿಡಿದೆತ್ತಿದನು ಕಾ
ಲನನು ಮೀರುವರಾರು ಪೌರಾ
ತನ ಕೃತ ಧ್ರುವಮೃತ್ಯುವನು ಗೆಲುವಾತನಿಲ್ಲೆಂದ ೩೩

ಮೃತ್ಯುವಾರೆಂದವನಿಪತಿ ಮುನಿ
ಪೋತ್ತಮನ ಬೆಸಗೊಳಲು ಬ್ರಹ್ಮನ
ಕಿತ್ತಡದ ಕೋಪದಲಿ ಜನಿಸಿದ ರುದ್ರನಿಂ ಬಳಿಕ
ಮೃತ್ಯುವೆಂದವಳಾದಳಾ ಸತಿ
ಯತ್ತ ಕಂಬನಿ ರುಜೆಗಳಾದವು
ತೆತ್ತಿಗರು ಷಡುವರ್ಗ ಕಾಮ ಕ್ರೋಧ ಮೊದಲಾಗಿ ೩೪

ಜನದ ಕೊಲೆಗೆಲಸದ ನಿರೂಪಕೆ
ಮನವ ತಂದಳು ಮೃತ್ಯು ನಿಜ ಸಾ
ಧನ ಸಹಿತ ಕೈಕೊಂಡ ಕೆಲಸವನಾಗುಮಾಡುವಳು
ಜನಪ ದೃಷ್ಟನ್ನಷ್ಟವೆಂಬುದ
ನನುಕರಿಸಿ ಮೂರ್ತಿ ತ್ರಯಂಗಳ
ತನಗೆ ನೆರೆ ವಶಮಾಡಿಕೊಂಡಿಹಳೆಂದು ಮುನಿ ನುಡಿದ ೩೫

ಆ ಮಹಾ ಮೃತ್ಯುವನು ಹುಟ್ಟಿಸಿ
ದಾ ಮಹಾದೇವಾದಿ ದೇವರು
ಕಾಮಿನಿಯ ಕಳುಹಲ್ಕೆ ಬಾರದೆನುತ್ತ ಬೋಧಿಸಲು
ಭೂಮಿಪತಿ ನಿಜಸುತನ ಮೃತಿಯು
ದ್ದಾಮ ತಾಪವ ಕಳೆಯಬೇಕೆಂ
ದಾ ಮುನೀಶ್ವರ ಸಂತವಿಟ್ಟನು ಕಂಪಭೂಪತಿಯ ೩೬

ಆದರಾ ಮೃತ್ಯುವಿನ ಕೈವಶ
ವಾದವರನೆನಗರುಹಬೇಹುದು
ಮೇದಿನೀಶರೊಳೆಂದು ಬಿನ್ನಹ ಮಾಡಿದನು ನೃಪತಿ
ಆ ದಯಾಳುಗಳರಸನಾ ಶೋ
ಕೋದಧಿಗೆ ವಡಬಾಗ್ನಿ ಸಮನೆನಿ
ಪಾದಿಯಲಿ ಷೋಡಶ ಮಹೀಶರ ಕಥೆಯ ವಿರಚಿಸಿದ ೩೭

ಭರತ ಪೃಥು ಪೌರವ ಭಗೀರಥ
ವರ ಯಯಾತಿ ಮರುತ್ತ ನಹುಷೇ
ಶ್ವರ ಪುರೂರವ ರಂತಿದೇವ ಗಯಾಂಬರೀಷಕರು
ಪರಶುರಾಮ ದಿಲೀಪ ಮಾಂಧಾ
ತರು ಹರಿಶ್ಚಂದ್ರಾದಿ ಪೃಥ್ವೀ
ಶ್ವರರನಂತರು ಮೃತ್ಯುವಶವರ್ತಿಗಳು ಕೇಳೆಂದ ೩೮

ಎಂದು ಷೋಡಶರಾಯರಾ ಕಥೆ
ಯಿಂದ ನೃಪತಿಯ ಸಂತವಿಟ್ಟನು
ಬಂದು ಧರ್ಮಜನೆರಗಿದನು ಮುನಿರಾಯನಂಘ್ರಿಯಲಿ
ಅಂದು ವೇದವ್ಯಾಸ ಪಾಳಯ
ದಿಂದ ಕಳುಹಿಸಿಕೊಂಡನಿತ್ತ ಮು
ಕುಂದನಭಿಮನ್ಯುವಿನ ಮರಣವನರಿದ ಮನದೊಳಗೆ ೩೯