ಸೂ. ನಡೆದು ಪರಬಲ ಮಧ್ಯದಲಿ ನೀ
ರ್ಗುಡಿಸಿ ಹರಿಯನು ಸಕಲ ಸುಭಟರ
ಮಡುಹಿ ಫಲುಗುಣ ಗೆಲಿದನಗ್ಗದ ಕೌರವೇಶ್ವರನ

ನರನು ಕಳುಹಿಸಿಕೊಳಲು ಗುರುಮೋ
ಹರವನಪಸವ್ಯದಲಿ ವಂಚಿಸಿ
ಮುರುಹಿದನು ಮುರವೈರಿ ರಥವನು ಮುಂದಣೊಡ್ಡಿಂಗೆ
ಅರರೆ ನರನೋ ನೂಕು ನೂಕರಿ
ಬಿರುದರಾವಡೆ ಪೂತು ಮಝ ಎಂ
ದುರವಣಿಸಿದರು ಮುರಿದು ಮಕರವ್ಯೂಹದತಿರಥರು ೧

ನೂಕಿತರಿಚತುರಂಗಬಲ ನೆಲ
ನೋಕರಿಸಿತೋ ಪ್ರಳಯಜಲಧಿಯ
ನೂಕು ತೆರೆಗಳ ಲಹರಿಯೋ ನಿಲುವಾತನಾರಿದಕೆ
ನಾಕು ಕಡೆಯಲಿ ಕವಿದುದಳವಿಗೆ
ನೂಕುನೂಕಾಯಿತ್ತು ನರನ
ವ್ಯಾಕುಳತೆಯಲಿ ಸವರ ತೊಡಗಿದನಹಿತಬಲ ವನವ ೨

ಕುಸುರಿದರಿದವು ಜೋಡು ವಜ್ರದ
ರಸುಮೆಗಳು ಹಾರಿದವು ರಿಪುಗಳ
ಯೆಸೆವ ಸೀಸಕ ಕವಚವನು ಸೀಳಿದನು ತೋಳಿನಲಿ
ನೊಸಲ ಸೀಸಕ ನುಗ್ಗುನುಸಿ ಬಂ
ಧಿಸಿದ ಸರಪಣಿ ಹಿಳಿದವರಿಬಲ
ದೆಸಕ ನಿಂದುದು ಪಾರ್ಥನೆಚ್ಚನು ವೈರಿಮೋಹರವ ೩

ಕುಳುವೆಳಗು ಕಿಡಿಗೆದರೆ ಹೊಗರಿನ
ಹೊಳಹು ಗಗನವನುಗುಳೆ ಧಾರೆಯ
ಬಲುಗಿಡಿಗಳುರಿ ಮಸಗೆ ತಳಿಹದ ಬಣ್ಣ ಗಜಬಜಿಸೆ
ಹಿಳುಕು ಬೊಬ್ಬಿಡೆ ಹೊದರಡಸಿ ಕಣ
ಗಿಲೆಯ ಕೋಲುಳಿಯಂಬು ಕವಲಂ
ಬಲಗಿನಂಬೀಸಾಡಿದವು ಪರಸೈನ್ಯಸಾಗರವ ೪

ವ್ರಣದ ಬಲುವೊನಲೊಳಗೆ ತಲೆಗಳು
ಕುಣಿದವರ್ಜುನನಂಬಿನುರುಬೆಗೆ
ಹೆಣನ ದಾವಣಿ ಹಾಸಿದವು ಸೂಸಿದವು ದೊಂಡೆಗಳು
ತಣಿದನಂತಕನಟ್ಟೆಗಳ ರಿಂ
ಗಣದ ನಾಟಕದೊಳಗೆ ಸಮರಾಂ
ಗಣದ ರೌರವ ರೌದ್ರವಾಯಿತು ಕಳನ ಚೌಕದಲಿ ೫

ಏರುಗಳು ಬುದುಬುದಿಸಿ ರಕುತವ
ಕಾರಿ ಕಾಳಿಜ ಖಂಡ ನೆಣ ಜಿಗಿ
ದೋರಿ ಬೆಳುನೊರೆ ಮಸಗಿ ನಸುಬಿಸಿರಕುತ ಹೊನಲಿಡಲು
ಕೌರಿಡಲು ಕಡಿದುಡಿದವೆಲು ಮೊಗ
ದೋರುಗಳ ಪೂರಾಯ ಘಾಯದ
ತಾರುಥಟ್ಟಿನ ಹೆಣನ ಮೆದೆ ಹೇರಾಳ ರಂಜಿಸಿತು ೬

ಎಲೆಲೆ ಪ್ರಳಯದ ರುದ್ರನನು ತಲೆ
ಬಳಿಚಿಬಿಟ್ಟನು ದ್ರೋಣನಕಟಾ
ನೆಲನೊಡೆಯನಾಪ್ತಿಗರು ಬಗೆದರು ಸ್ವಾಮಿದ್ರೋಹಿಕೆಯ
ಕೊಲುವವನು ಫಲುಗುಣನೊ ದ್ರೋಣನೊ
ಕೊಲೆಗಡಿಗನೋ ಕೊಂದನೋ ಕುರು
ಕುಲತಿಲಕ ನೆರೆ ಪಾಪಿಯೆಂದರು ನಿಖಿಳ ಪರಿವಾರ ೭

ಈತನರ್ಜುನನಿತ್ತಲಿದೆ ಪುರು
ಹೂತಸುತನ ವರೂಥವಿದೆ ಕಪಿ
ಕೇತನನ ಬೊಬ್ಬಾಟವಿದೆ ಫಲುಗುಣನ ಶರಜಾಲ
ಈತ ಪಾರ್ಥನು ಹೊಕ್ಕನಿತ್ತಲು
ಶ್ವೇತಹಯನಿತ್ತಲು ಧನಂಜಯ
ನೀತನೆನೆ ಫಲುಗುಣನ ಮಯವಾಯ್ತಖಿಳ ತಳತಂತ್ರ ೮

ಇದೆ ಕಿರೀಟಿಯ ಬಿಲ್ಲ ಜೇವಡೆ
ಯದೆ ಸಿತಾಶ್ವನ ಸಿಂಹಗರ್ಜನೆ
ಯಿದೆ ಮುರಾರಿಯ ಮನಕೆ ಮುಂಚುವ ಹಯದ ಖುರನಿನದ
ಅದೆ ವಿಜಯನಸ್ತ್ರೌಘವತ್ತಲು
ಕದನ ಕಾಲಾನಲನ ತೀವ್ರತೆ
ಯದೆಯೆನುತ ಹೆದರೆದೆಯ ಸುಭಟರು ಬಿಸುಟರುತ್ಸಹವ ೯

ಉಡಿದು ಕುಪ್ಪಳಿಸಿದವು ರಥ ಕಡಿ
ವಡೆದುದಗ್ಗದ ಸಾರಥಿಗಳೆಡೆ
ಗೆಡೆದುದತಿರಥ ಸಮರಥಾರ್ಧಮಹಾರಥಾದಿಗಳು
ಹೊಡೆಗೆಡೆದ ದಂತಿಗಳು ರಕ್ತದ
ಕಡಲೊಳೀಸಾಡಿದವು ತೇಜಿಯ
ಕಡಿಕು ಹರಿದವು ಹೊರೆದನಂತಕನುರುಪರಿಗ್ರಹವ ೧೦

ಸರಳು ಸೇನೆಯ ತಾಗಿ ರಿಪುಗಳ
ಕೊರಳ ಕೊಯ್ಯದ ಮುನ್ನವರಿಮೋ
ಹರವ ಹಿಂದಿಕ್ಕುವುದು ರಥವತಿಜವದ ಜೋಕೆಯಲಿ
ಹೊರಳಿದವು ಭಟರಟ್ಟೆ ಶೋಣಿತ
ಶರಧಿ ಮಸಗಿತು ಮಕುಟಬದ್ಧರ
ಹರಣದನಿಲಸಮೂಹ ಬೀಸಿತು ನಭಕೆ ಬಿರುಬಿನಲಿ ೧೧

ಮುರಿವಡೆದು ಚತುರಂಗವರ್ಜುನ
ನುರುಬೆಗಾರದೆ ನಿಲೆ ಶ್ರುತಾಯುಧ
ನಿರಿಯಲುತ್ಸಾಹಿಸಿದನಿದಿರಾದನು ಧನಂಜಯನ
ಮುರಿಯೆಸುತ ಮುಂಕೊಂಡು ಪಾರ್ಥನ
ತರುಬಿದನು ಬಳಿಕೀತನಾತನ
ನೆರೆವಣಿಗೆ ಲೇಸೆನುತ ತುಳುಕಿದನಂಬಿನಂಬುಧಿಯ ೧೨

ನರನ ಬಾಣಾನೀಕವನು ಕ
ತ್ತರಿಸಿದನು ನಿಜಗದೆಯಲಾತನ
ಧುರಚಮತ್ಕಾರವನು ನೋಡುತ ಪಾರ್ಥ ಬೆರಗಾಗೆ
ಕೆರಳಿ ವಾಘೆಯ ಕೊಂಡು ರಥವನು
ಧುರಕೆ ದುವ್ವಾಳಿಸಲು ಮುರಹರ
ನುರವಣೆಗೆ ಕನಲುತ ಶ್ರುತಾಯುಧ ಹೊಯ್ದನಚ್ಯುತನ ೧೩

ವರುಣನಿತ್ತುಪದೇಶ ಬರಿದಿ
ದ್ದರನು ಹೊಯ್ದರೆ ತನ್ನ ಕೊಲುವುದು
ನಿರುತವೆನಲದ ಮರೆದು ಹೊಯ್ದನು ಹರಿಯ ಮಸ್ತಕವ
ಕೆರಳಿ ಗದೆ ಮುರಹರನ ಮುಟ್ಟದೆ
ಮರಳಿ ತನ್ನನೆ ಕೊಂದುದೇನ
ಚ್ಚರಿಯೊ ದೈವದ್ರೋಹಿಗೆತ್ತಣ ಲೇಸುಬಹುದೆಂದ ೧೪

ಆ ಶ್ರುತಾಯುಧ ಮಡಿದನಲ್ಲಿ ಮ
ಹಾಸುರದ ರಣವಾಯ್ತು ಕಾಂಭೋ
ಜೇಶ ಕೈದುಡುಕಿದನು ಕದನವನಿಂದ್ರಸುತನೊಡನೆ
ಸೂಸಿದನು ಸರಳುಗಳನಾತನ
ಸಾಸವನು ಮನ್ನಿಸುತ ಫಲುಗುಣ
ಬೇಸರದೆ ಕೊಂಡಾಡಿ ಕಾದಿದನೊಂದು ನಿಮಿಷದಲಿ ೧೫

ಸರಳು ಸವೆಯಲು ಶಕ್ತಿಯಲಿ ಕಾ
ತರಿಸಿ ಕವಿದಿಡೆ ಶಕ್ತಿಯನು ಕ
ತ್ತರಿಸಿದನು ಕಾಂಭೋಜಭೂಪನ ಮುಕುಟ ಮಸ್ತಕವ
ಕೊರಳ ತೊಲಗಿಸಿ ಮುಂದೆ ನೂಕುವ
ವರಶ್ರುತಾಯುವಿನೊಡನೆ ಘನಸಂ
ಗರಕೆ ತೆಗೆದನು ಕಳುಹಿದನು ಕಾಂಭೋಜನೊಡನವರ ೧೬

ಹರಿಬದಯುತಾಯುವನು ಮಗುಳಿ
ಬ್ಬರು ಸುತರು ನಿಯತಾಯು ಘನಸಂ
ಗರದ ದೀರ್ಘಾಯುವನು ಕಳುಹಿದನಮರಮಂದಿರಕೆ
ಧುರಕೆ ನೂಕಿದವಂಗರಾಜನ
ಕರಿಘಟೆಗಳಂಬಟ್ಟ ಮೊದಲಾ
ದರಿ ಸುಭಟ ಸಂದೋಹ ಮುತ್ತಿತು ಮತ್ತೆ ಫಲುಗುಣನ ೧೭

ಕರಿಘಟೆಯನಂಬಟ್ಟಭೂಪನ
ಶಿರವನೆಚ್ಚನು ಪಾರಸೀಕರ
ತುರಗ ಕವಿಯಲು ಕುಸುರಿದರಿದನು ಕೋಟಿಸಂಖ್ಯೆಗಳ
ಬಿರುದ ಹೊಗಳಿಸಿಕೊಂಡು ದಾತಾ
ರರ ಹಣವ ಸಲೆ ತಿಂದು ಹೆಚ್ಚಿದ
ಹಿರಿಯ ಡೊಳ್ಳಿನ ರಾವುತರ ಕೆಡಹಿದನು ನಿಮಿಷದಲಿ ೧೮

ಇರಿದು ಚಕ್ರವ್ಯೂಹವನು ಕುರಿ
ದರಿಯ ಮಾಡಿ ಕಿರೀಟಿಯದರಿಂ
ಹೊರಗೆ ಹಂಸವ್ಯೂಹದಲಿ ಕೆಣಕಿದನು ಕಾಳೆಗವ
ತುರುಗಿದವು ತೂರಂಬು ತಲೆಗಳ
ತರಿದು ಬಿಸುಟವು ಘಮ್ಮು ಘಲಿಲೆನೆ
ನಿರಿನಿಳಿಲುಗರೆದೊರಲಿದವು ಫಲುಗುಣನ ಶರಜಾಲ ೧೯

ಬಿಲುರವದ ಮೊಳಗಿನಲಿ ಕೃಷ್ಣನ
ಫಲುಗುಣನ ಮೈಕಾಂತಿ ಮೇಘಾ
ವಳಿಗಳಲಿ ಹೊಂಗರಿಯ ಗಾಳಿಯ ಸರಳಸೋನೆಯಲಿ
ನಿಲುವ ಹಂಸವ್ಯೂಹವೆಲ್ಲಿಯ
ದೆಲೆ ಮಹೀಪತಿ ಕೇಳಿ ನಿನ್ನ
ಗ್ಗಳೆಯ ಸುಭಟರ ವಿಧಿಯನೆಂದನು ಸಂಜಯನು ನಗುತ ೨೦

ಅಳಿದುದೈನೂರರಸುಗಳು ಮು
ಮ್ಮುಳಿತವಾಯ್ತೈವತ್ತು ಸಾವಿರ
ಬಲುಗುದುರೆ ನುಗ್ಗಾದುದೊಂಬೈನೂರು ಭದ್ರಗಜ
ಅಳಿದುದಕೆ ಕೊಲೆಕೊತ್ತುವಡೆದ
ಗ್ಗಳ ಪದಾತಿಗೆ ಗಣನೆಯೆಲ್ಲೀ
ಬಲದ ಮೈವಶವವರ ಕೈವಶವೇನು ಹೊಸತೆಂದ ೨೧

ಕೆಡಹಿದನು ವಿಂದಾನುವಿಂದರ
ನಡಗುದರಿಯಾಯ್ತಖಿಳಬಲದು
ಗ್ಗಡದ ವೀರರು ಕಾದಿ ಬಿದ್ದುದು ಕಾಯಮಾರಿಗಳು
ನಡುಹಗಲು ಪರಿಯಂತ ಕಾಳೆಗ
ಬಿಡದೆ ಬಲುಹಾಯ್ತಖಿಳ ವೇಗದ (೨೨
ಕಡುಗುದುರೆ ಬಳಲಿದವು ಬಗೆಯದೆ ಹರಿಯ ಗರ್ಜನೆಯ

ಭಾರಿಸಿತು ಮೈ ಮುಷ್ಟಿಯಲಿ ಲುಳಿ
ಸಾರತರ ಲಂಬಿಸಿತು ತಾಗಿದ
ಕೂರಲಗು ಗರಿದೋರಿದವು ನಿಜ ಹಯದ ಮೈಗಳಲಿ
ಹಾರಿದರ್ಜುನನರಿದನಾ ದೈ
ತ್ಯಾರಿಗೆಂದನು ದೇವ ಬಿನ್ನಹ
ವಾರುವಂಗಳ ವಹಿಲತೆಯ ಚಿತ್ತೈಸಿದಿರೆಯೆಂದ ೨೩

ಕಡಿಯಣವ ಕಾರಿದವು ಕಂದವ
ನಡಿಗಡಿಗೆ ಹಾಯ್ಕಿದವು ಸುತ್ತಿದ
ಕುಡಿನೊರೆಯ ಕಟವಾಯ ಲೋಳೆಯ ನಿಮಿರ್ದಮೈಲುಳಿಯ
ತಡಿನೆನೆದ ಬಲುಬೆಮರ ಘುಡುಘುಡು
ಘುಡಿಪ ನಾಸಾಶ್ವಾಸಲಹರಿಯ
ಕಡುಮನದ ರಥತುರಗ ಮಿಕ್ಕವು ಸರಳಸೂಠಿಯಲಿ ೨೪

ಗಮನ ತಟ್ಟೆಯವಾಯ್ತು ವೇಗ
ಭ್ರಮಣ ಜಡವಾಯ್ತಡಿಗಡಿಗೆ ನಿ
ಗ್ಗಮದೊಳಗೆ ರಥವದ್ದು ದರಿ ಭಾರಣೆಯ ಭರವಸದ
ಸಮತೆ ನಿಂದುದು ಸಾಹಸೀಕರು
ಭ್ರಮಿಸುತಿದೆ ಭಟಜಲಧಿ ತುರಗ
ಶ್ರಮವ ನಾವ್ ಪರಿಹರಿಸಿದಲ್ಲದೆ ಕಾದಲರಿದೆಂದ ೨೫

ಉಂಟು ಹೊಲ್ಲೆಹವಲ್ಲ ರಣದೊಳ
ಗೆಂಟುಮಡಿ ಬಳಲಿದವು ತೇಜಿಗ
ಳೀಂಟುವರೆ ನೀರಿಲ್ಲ ಮುರಿದರೆ ಬೆನ್ನ ಬಿಡರಿವರು
ಗೆಂಟರಲಿ ನಮ್ಮೊಡ್ಡ ಸುತ್ತಲು
ವೆಂಟಣಿಸಿ ರಿಪುಸೇನೆಯಿದೆ ಏ
ನುಂಟು ಮಾಡುವುಪಾಯವೆಂದನು ನಗುತ ಮುರವೈರಿ ೨೬

ದೇವ ಕಾಳೆಗ ಬಲುಹು ಬಿಸಿಲಿನ
ಡಾವರಕೆ ರಥತುರಗವತಿ ನಿ
ರ್ಜೀವಿಯಾದವು ಹರಿಯ ಗಮನದ ಹದನನರಿಯೆನಲು
ಆ ವಿನೋದಿಗಳರಸ ಶರಣರ
ಕಾವ ಭರದಲಿ ದನುಜಕುಲ ವಿ
ದ್ರಾವಣನು ನಸುನಗುತ ಬೋಳೈಸಿದನು ತೇಜಿಗಳ ೨೭

ದೇವ ವಾಘೆಯ ಹಿಡಿ ತುರಂಗಕೆ
ಜೀವನವನೀ ಕಳನೊಳಗೆ ಸಂ
ಭಾವಿಸುವೆ ನೋಡೆನುತ ಧುಮ್ಮಿಕ್ಕಿದನು ಧಾರುಣಿಗೆ
ತೀವಿ ತೆಗೆದನು ವಜ್ರಶರದಲಿ
ಡಾವರಿಸಿದನು ಕಳನೊಳುದಕದ
ಸೈವಳೆಯ ಸೆಲೆಯರಿದು ಚೌಕಕೆ ಸೀಳಿದನು ನೆಲನ ೨೮

ನೋಡಿ ನರನುದ್ದಂಡತನವನು
ತೋಡುತೈದನೆ ತುರಗ ಲೀಲೆಗೆ
ಖೇಡಕುಳಿಯನು ಶೌರ‍್ಯಗರ್ವಿತನೈ ಶಿವಾ ಎನುತ
ಕೂಡೆ ಮಸಗಿತು ರಿಪುಚತುರ್ಬಲ
ಜೋಡು ಮಾಡಿತು ಕಡಹದಮರರು
ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ ೨೯

ಒದರಿ ಮೇಲಿಕ್ಕಿದರು ನಿಸ್ಸಾ
ಳದ ನಿರಂತರ ಸೂಳುವೊಯ್ಲಿನ
ಹೊದರುಗಳ ಹೊಸ ಮಸೆಯಡಾಯ್ದದ ಸಾಲ ಸಂದಣಿಯ
ಸದರವೀ ಹೊತ್ತೆನುತ ಗೆಲವಿನ
ಕುದುಕುಳಿಗಳುರವಣಿಸೆ ಕಾಣುತ
ಗದಗದಿಸಿ ಮುರವೈರಿ ಚಾಚಿದನರ್ಜುನಗೆ ರಥವ ೩೦

ಆಲಿಕಲುಗಳ ಕಡಿವಡುಕ್ಕಿನ
ಚೀಲಣದ ಹಂಗೇಕೆ ನಿಮ್ಮಡಿ
ಮೇಲುನೋಟವ ನೋಡೆ ರಥ ಪರಿಯಂತ ಕಾಳೆಗವೆ
ಹೋಳುಗಳೆವೆನು ಹುಗ್ಗಿಗರನೆನು
ತಾಳೊಳಗೆ ಬೆರಸಿದನು ಬರಿಗಾ
ಲಾಳುತನದಲಿ ಕಾದಿ ಕೊಂದನು ಕೋಟಿ ರಿಪುಭಟರ ೩೧

ವರುಣ ಬಾಣದಲುದಕವನು ತ
ತ್ಸರಸಿಯಲಿ ತುಂಬಿದನು ತಮಗವ
ಸರವಿದೆಂದೌಕುವ ಮಹೀಶರ ಮತ್ತೆ ಬರಿಕೈದು
ಕರಿ ರಥಾಶ್ವ ಪದಾತಿಯನು ಸಂ
ಗರದ ಮಧ್ಯದೊಳೊಬ್ಬನೇ ಸಂ
ಹರಿಸಿದನು ಶತಗುಣವನೊಂದೇ ಲೋಭ ಗೆಲುವಂತೆ ೩೨

ಕೊಳನ ತಡಿಯಲಿ ಹೂಡಿದನು ಶರ
ವಳಯದಲಿ ಚಪ್ಪರವನಾತನ
ಬಲುಹ ಕಂಡಸುರಾರಿ ಮೆಚ್ಚಿದನಡಿಗಡಿಗೆ ಹೊಗಳಿ
ಕಳಚಿ ನೊಗನನು ತೆಗೆದು ಕಬ್ಬಿಯ
ನಿಳುಹಿ ಪಡಿವಾಘೆಗಳ ಸರಿದನು
ಕೊಳಿಸಿ ಪಿಡಿಯಲಿ ಪಾಡಿಗೈದವು ಮರಳಿದೆಡಬಲಕೆ ೩೩

ಮುರುಹಿ ನಿಂದವು ಕೊಡಹಿದವು ಕೇ
ಸರವನಧ್ವಶ್ರಮದ ಢಗೆ ಪರಿ
ಹರಿಸೆ ನೀರೊಳು ಹೊಗಿಸಿದನು ಹರಿ ಹಯಚತುಷ್ಟಯವ
ಸರಸಿಯಲಿ ಮೊಗವಿಟ್ಟು ಮೊಗೆದವು
ವರ ಜಲವನೆರಡಳ್ಳೆ ಹಿಗ್ಗಲು (೩೪
ಮುರುಹಿದವು ಮುಖವನು ಮುರಾಂತಕ ತಡಿಯನಡರಿಸಿದ

ಕರತಳದಿ ಮೈದಡವಿ ಗಾಯದ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ಕರುಣದಲಿ ಚಪ್ಪರಿಸಿದನು ಕಂಧರವ
ಹರುಷ ಮಿಗೆ ಕೊರಳೆತ್ತಿ ನಯನವ
ತಿರುಹಿ ದೇವನ ನೋಡುತಿರ್ದುವು
ತುರಗ ನಾಲ್ಕರ ಪುಣ್ಯ ಸನಕಾದಿಗಳಿಗಿಲ್ಲೆಂದ ೩೫

ಮೊಗಕೆ ಭಾಣವ ಕಟ್ಟಿ ನೆಳಲಲಿ
ಬಿಗಿದು ಫಲುಗುಣ ಸಹಿತ ಕೊಳನನು
ನಗುತ ಹೊಕ್ಕನು ನೋಡುತಿದ್ದುದು ಕೂಡೆ ಕುರುಸೇನೆ
ಬಿಗಿದ ಕತ್ತಲೆ ದೂರದಲಿ ದೀ
ವಿಗೆಯ ಸುತ್ತಲು ಕಟ್ಟಿ ನಿಂದವೊ
ಲಗಣಿತ ಪ್ರತಿಸುಭಟರಿದ್ದುದು ನರನ ಬಳಸಿನಲಿ ೩೬

ಚರಣ ವದನವ ತೊಳೆದು ನಿರ್ಮಳ
ವರಜಲವನೀಂಟಿದರು ನಿರುಪಮ
ಪರಮ ಕರುಣಾರ್ಣವನು ಮೈದುನಸಹಿತ ಸರಸಿಯಲಿ
ಪರಿಹೃತಶ್ರಮನಾಗಿ ಹರುಷೋ
ತ್ಕರುಷದಲಿ ಹರಿ ಕಳೆದುಕೊಂಡನು
ನರಗೆ ಕೊಟ್ಟನು ಹೋಳಿಸಿದ ಕರ್ಪುರದ ವೀಳೆಯವ ೩೭

ರಾಗ ಮಿಗೆ ಬ್ರಹ್ಮಾಂಡಕೋಟಿಯ
ನಾಗುಮಾಡುವನಲಸಿದರೆ ಮುನಿ
ದಾಗ ನುಂಗುವುದೊಂದು ಲೀಲೆ ಮನುಷ್ಯದೇಹದಲಿ
ಲೋಗರೆಂದುದನೈದೆ ಮಾಡುವ
ನಾಗಿ ಜನಿಸಿಹುದೊಂದು ಲೀಲಾ
ಸಾಗರನು ಲಕ್ಷ್ಮೀಪತಿಗೆ ನಮೊ ಎಂದುದಮರಗಣ ೩೮

ಸೆಳೆದು ಪಡಿವಾಘೆಯಲಿ ತುರಗಾ
ವಳಿಯನನುಕೊಳಿಸಿದನು ಹರಿ ಕೈ
ಚಳಕದಲಿ ತುಡುಕಿದನು ಫಲುಗುಣನತುಳ ಗಾಂಡಿವವ
ಉಲಿದುದಾಹವ ಸೇನೆ ರಿಪು ಮಂ
ಡಳಿಕರೋರಣಗೆಡಲು ರಣಮಂ
ಡಲದ ಪದ್ಮವ್ಯೂಹದಲಿ ಕೆಣಕಿದನು ಕಾಳೆಗವ ೩೯

ಇದು ಕೃತಾಂತನ ಸೀಮೆಗಳವ
ಟ್ಟುದು ಸುಯೋಧನನೃಪತಿ ವಿಗತಾ
ಭ್ಯುದಯನಾದನೆನುತ್ತ ಕರ್ಣಾದಿಗಳು ಕಳವಳಿಸೆ
ಹೆದರೆದೆಯ ಹೇರಾಳ ವೀರರ
ಕದನದನುವನು ಕಂಡು ಕಡುಗೋ
ಪದಲಿ ಕೌರವರಾಯ ಸಮರೋದ್ಯೋಗಪರನಾದ ೪೦

ತಳಿತವಮಳಚ್ಛತ್ರ ಚಾಮರ
ವಲುಗಿದವು ನವಹೇಮದಂಡದ
ಹಳವಿಗೆಯ ತುದಿವಲಗೆಯಲಿ ಹಾಯ್ಕಿದರು ಪನ್ನಗನ
ಮೊಳಗಿದವು ನಿಸ್ಸಾಳ ಬಿರುದಾ
ವಳಿಯ ಕಹಳೆಗಳೂದಿದವು ನೆಲ
ಮೊಳಗಿದಂತಿರೆ ಬಿರುದ ಹೊಗಳಿತು ಭಟ್ಟ ಸಂದೋಹ ೪೧

ತಳಿತುದರನೆಲೆ ರಾಯ ಥಟ್ಟಿನ
ಕಳವಳಿಗರುರವಣಿಸಿದರು ಮುರಿ
ದೊಳಸರಿವ ಮನ್ನೆಯರ ಹೊಯ್ದರು ಮುಂದೆ ಕಂಬಿಯಲಿ
ಉಲಿವ ಪಾಠಕರೋದುಗಳ ಕಳ
ಕಳಿಕೆಯಲಿ ನೃಪ ಬಂದು ಗುರುವಿನ
ದಳವ ಹೊಕ್ಕನು ನಮಿಸಿ ಬಿನ್ನಹಮಾಡಿದನು ನಗುತ ೪೨

ನರನ ಬಲುಗೈತನವನೀ ಮೋ
ಹರದ ಹೆಂಗುಸುತನವ ನೀವವ
ಧರಿಸಿದಿರೆ ಜಗಭಂಡರಿವರಿಗೆ ಮತ್ತೆ ಬಿರುದುಗಳೆ
ತುರಗ ನೀರಡಸಿದರೆ ರಣದಲಿ
ಸರಸಿಯನು ತೋಡಿದನು ನಮ್ಮನು
ಸರಕುಮಾಡನು ಕಂಡು ಬಲ್ಲಿರೆ ಮುನ್ನ ನೀವೆಂದ ೪೩

ಅರಸ ಮೃತಸಂಜೀವಿನಿಯ ಬಲು
ಹಿರಲು ಬಹಳವ್ಯಾಧಿ ಮಾಡುವ
ದುರುಳತನ ತಾನೇನು ನರರಿಗೆ ದಿಟ ವಿಚಾರಿಸಲು
ಪರಮಪುರಷೋತ್ತಮ ಮುಕುಂದನ
ಕರುಣಕವಚದ ಬಲದಿನಮರಾ
ಸುರರ ಬಗೆಯನು ಪಾರ್ಥನಿದು ನಮ್ಮಾರ ಹವಣೆಂದ ೪೪

ಹಗೆಯ ಪತಿಕರಿಸುವರೆ ನಾಲಗೆ
ನಿಗುರುವುದು ನೂರು ಮಡಿಯಲಿ ಕಾ
ಳೆಗಕೆ ತನ್ನನು ಬಿಟ್ಟು ನೋಡಿರೆ ನುಡಿದು ಫಲವೇನು
ತೆಗೆಸುವೆನು ಫಲುಗುಣನನೆನೆ ನಸು
ನಗುತ ಗುರು ಕೌರವ ಮಹೀಶನ
ಮೊಗದ ಸುಮ್ಮಾನಕ್ಕೆ ಹರುಷಿತನಾಗುತಿಂತೆಂದ ೪೫

ಆದಡೆಲೆ ಭೂಪಾಲ ನರನೊಳು
ಕಾದಲೀಶಂಗರಿದು ನೀನಿದಿ
ರಾದಡಪಜಯವಾಗದಿದ್ದರೆ ನಮ್ಮ ಪುಣ್ಯವದು
ಕಾದಲಾಪರೆ ಮಗನೆ ಪರರಿಗೆ
ಭೇದಿಸುವರಳವಲ್ಲ ಕವಚವ
ನಾದಿಯದು ಕೊಳ್ಳೆಂದು ಕೊಟ್ಟನು ಗವಸಣಿಗೆದೆಗೆದು ೪೬

ಇದು ಮಹಾದೇವರದು ವೃತ್ರನ
ಕದನದಲಿ ಕೈ ಸಾರ್ದುದೀಶಂ
ಗಿದು ಸುರೇಂದ್ರಂಗಾ ಸುರೇಶ್ವರನಾಂಗಿರಂಗಿತ್ತ
ಇದು ಬೃಹಸ್ಪತಿಗಾಂಗಿರನಿನಾ
ದುದು ಭರದ್ವಾಜಂಗೆ ಬಳಿಕಾ
ದುದು ಭರದ್ವಾಜಾಖ್ಯನಿತ್ತನು ತನಗೆ ಕರುಣದಲಿ ೪೭

ನರ ಸುರಾಸುರರಿದನು ಭೇದಿಸ
ಲರಿದು ಕೈಕೊಳ್ಳೆಂದು ಮಂತ್ರಿಸಿ
ಬರಿಗೆ ಕವಚವ ಕಟ್ಟಿದನು ಕೌರವ ಮಹೀಪತಿಗೆ
ಗುರುವಿನಂಘ್ರಿಯೊಳೆರಗಿ ಮರಳಿದು
ಧುರವ ಹೊಕ್ಕನು ಶಕ್ರತನುಜನ
ಕರೆದು ಮೂದಲಿಸಿದನು ತುಳುಕಿದನಂಬಿನಂಬುಧಿಯ ೪೮

ಎಲವೊ ಕೌರವ ಹಿಂದೆ ವಂಚಿಸಿ
ಕಳವಿನಲಿ ಜೂಜಾಡಿ ರಾಜ್ಯವ
ಗೆಲಿದ ಗರ್ವವನುಗುಳು ಸಮರ ದ್ಯೂತಕೇಳಿಯಲಿ
ಹಲಗೆಯೈ ಕುರುಭೂಮಿ ಕೌರವ
ಕುಲದ ತಲೆ ಸಾರಿಗಳು ಸೆರೆಯಲಿ
ಗೆಲಲು ಬಂದೆನು ಕೊಳ್ಳು ಹಾಸಂಗಿಗಳನೆನುತೆಚ್ಚ ೪೯

ಎಸಲು ಪಾರ್ಥನ ಬಾಣವನು ಖಂ
ಡಿಸಿದನೆಲವೋ ತಮ್ಮ ನಿಮಗಿಂ
ದಸುರರಿಪು ತೆತ್ತಿಗನಲೇ ತುಡುಕಲಿ ಸುದರ್ಶನವ
ನುಸಿಗಳೌಕಿದರಕಟ ದಿಗ್ಗಜ
ಘಸಣಿಗೊಂಬುದೆ ನಿನ್ನ ಬಾಣ
ಪ್ರಸರಕಾನಂಜುವೆನೆ ಫಡ ಹೋಗೆನುತ ತೆಗೆದೆಚ್ಚ ೫೦

ಕಾಲುವೊಳೆಗೇಕವನಿಪತಿ ಹರು
ಗೋಲು ನೀವಿನ್ನರಿಯದಿದ್ದರೆ
ಹೇಳೆವಾತ್ಮಸ್ತುತಿಯ ಮಾಡೆವು ಸಾಕದಂತಿರಲಿ
ಮೇಲುಗವಚವ ನಂಬಿ ನಮ್ಮೊಳು
ಕಾಳೆಗವ ನೀ ಬಯಸಿ ಬಂದೆ ನೃ
ಪಾಲ ಜೋಡಿನ ಬಲದಿ ನಮ್ಮನು ಜಯಸುವೈ ಎಂದ ೫೧

ಆರ ದೀಪನಚೂರ್ಣಬಲದಲಿ
ವೀರರುದ್ರನು ಜಗವ ನುಂಗುವ
ನೋರೆಗೆಡೆಯದಿರಂಬ ಸುರಿ ಸುರಿ ಹೊಳ್ಳುನುಡಿಯೇಕೆ
ಸಾರು ನೀ ಬರಹೇಳು ಕೀಚಕ
ವೈರಿಯನು ಪಡಿಸಣವ ನೋಡಲಿ
ಭೂರಿಬಾಣದ ಸವಿಯನೆಂದನು ಕೌರವರರಾಯ ೫೨

ಗರುಡನಾರೋಗಣೆಯ ಬೋನಕೆ
ಮರಳಿ ಪಡಿಸಣವೇಕೆ ಮಾತಿನ
ಮುರಿವುಗಳು ಗೆಲ್ಲವಲೆ ನೀ ನೆರೆ ನೋಡು ಕೈಗುಣವ
ಅರಸ ನಿನ್ನಯ ಕೊರಳಕಡಿತಕೆ
ಸರಳು ಕುದಿತದಲೆನಗೆ ತನಗೆಂ
ದೊರಲುತಿವೆ ನಿನಗಿಂದಿನಲಿ ಸಾವಿಲ್ಲ ಹೋಗೆಂದ ೫೩

ಎನುತ ಕೂರಂಬಿನಲಿ ದುರ್ಯೋ
ಧನನನೆಚ್ಚನು ವಜ್ರ ಕವಚದ
ಲನಿತು ಶರವಕ್ಕಾಡಿದವು ಸೊಪ್ಪಾದವೇಣುಗಳು
ಅನಲ ಗಿರಿ ವಜ್ರಾಸ್ತ್ರದಲಿ ಫಲು
ಗುಣನು ಬೊಬ್ಬಿರಿದೆಚ್ಚನೆಚ್ಚಂ (೫೪
ಬನಿತು ಮುರಿದವು ಮಸೆಯ ಕಾಣದು ಮೈ ಮಹೀಪತಿಯ

ಹರಿಯನೆಚ್ಚನು ಫಲುಗುಣನ ತನು
ಬಿರಿಯೆ ಬಿಗಿದನು ಶರವನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ವರ ಕಪೀಂದ್ರನ ಘಾಸಿಮಾಡಿದ
ನುರವಣಿಸಿ ಕವಿದೆಸುವ ಭೂಪನ
ಭರದ ಬಲುವೇಗಾಯ್ಲ ತನವನು ಹೊಗಳಿದನು ಪಾರ್ಥ ೫೫

ಕವಚವಿದೆ ಸರ್ವಾಂಗದಲಿ ನೃಪ
ನವಯವಕೆ ಕೇಡಿಲ್ಲ ಕೆಲಬಲ
ದವರು ನೆರೆ ಕೈಮಾಡುತಿದೆ ಕರ್ಣಾದಿನಾಯಕರು
ರವಿಯ ಕೈಗಳನಸ್ತಗಿರಿಯಾ
ನುವವೊಲಿದೆ ಮುನಿದಿವನ ಕೊಂದರೆ
ಪವನಜನ ಕೊಂದವನು ಹದನೇನೆಂದು ಚಿಂತಿಸಿದ ೫೬
ಎನುತ ಮೂರಂಬಿನಲಿ ರಾಯನ
ಧನುವ ಖಂಡಿಸಿ ಮತ್ತೆ ಕೂರಂ
ಬಿನಲಿ ನೃಪನಂಗೈಯನೆಚ್ಚನು ಬಾಣ ಧಟ್ಟುಗಿಯೆ
ಜನಪ ನೊಂದನು ಬಳಿಕ ಕೃತವ
ರ್ಮನು ಕೃಪಾಚಾರಿಯನು ನಿನ್ನಯ
ತನುಜನನು ತೊಲಗಿಸಿದರೈ ಧೃತರಾಷ್ಟ್ರ ಕೇಳೆಂದ ೫೭

ರಾಯ ನೊಂದನು ಹರಿಬಕಿಲ್ಲದ
ನಾಯಕರ ಸುಡು ಹೊಟ್ಟೆ ಹೊರೆಕರ
ವಾಯಕಿವದಿರ ಸಂತವಿಟ್ಟನು ಸ್ವಾಮಿಕಂಟಕರ
ಆಯುಧವ ಹಿಡಿದಕಟ ರಣದಲಿ
ಸಾಯಲಮ್ಮರು ಬಿರುದ ಹೊಗಳುವ
ಬಾಯ ನೋಡೆನುತಿದ್ದುದಾ ದುಶ್ಶಾಸನಾದಿಗಳು ೫೮

ಕದಡಿತೀ ಬಲಜಲಧಿ ಸುಭಟರು
ಹೊದರುಗಟ್ಟಿತು ಹೊಲೆವಡಾಯುಧ
ಹೊದಕೆಗಳ ಸತ್ತಿಗೆಯ ಸೂಸುವ ಚಮರ ಸೀಗುರಿಯ
ತುದಿವೆರಳ ಕಿರುದನಿಯ ಕೆಂಪಿನ
ಕದಡುಗಂಗಳ ಕುಣಿವಮೀಸೆಯ
ಕದನಗಲಿಗಳು ಕವಿದರೀ ಕರ್ಣಾದಿ ನಾಯಕರು ೫೯

ಮುತ್ತಿದರು ಹಿಂದೆಡಬಲನ ಮುಂ
ದೆತ್ತಲೀಕ್ಷಿಸಲತ್ತ ರಾಯನ
ತೆತ್ತಿಗರ ಕೂರಂಬು ಕವಿದವು ನರನ ಹಯರಥವ
ಎತ್ತ ನೋಡುವಡತ್ತ ಬಲದು
ರ್ವೃತ್ತ ಸುಭಟರ ಬಲಶರೌಘದ
ಕತ್ತಲೆಗೆ ಹದನೇನೆನುತ ದೈತ್ಯಾರಿ ಚಿಂತಿಸಿದ ೬೦

ಅರಿಭಟರು ಕಟ್ಟಳವಿಯಲಿ ಮು
ಕ್ಕುರುಕೆ ಮುರರಿಪು ಪಾಂಚಜನ್ಯವ
ನಿರದೆ ಮೊಳಗಿದ ಹನುಮ ಗರ್ಜಿಸಿದನು ಪತಾಕೆಯಲಿ
ಸುರರ ದೈತ್ಯರ ಸಮರಸಿರಿ ವಿ
ಸ್ತರಿಸಿತಿತ್ತಲು ದ್ರೋಣನತ್ತಲು
ತೆರಳಿಚಿದನೈ ಪಾಂಡುಪುತ್ರರ ಸೈನ್ಯಸಾಗರವ ೬೧

ನಕುಲನನು ಮಸೆಗಾಣಿಸಿಯೆ ಸಾ
ತ್ಯಕಿಯ ವಿರಥನ ಮಾಡಿ ಪಾಂಚಾ
ಲಕರನೋಡಿಸಿ ಮತ್ಸ್ಯ ಕೇಕೆಯ ಬಲವ ಬರಿಕೈದು
ಸಕಲ ಸನ್ನಾಹದಲಿ ಚೈದ್ಯ
ಪ್ರಕರವನು ತವೆ ಕೊಂದು ಭೂಪಾ
ಲಕನ ಬೆಂಬತ್ತಿದನು ಭೀಮ ಘಟೋತ್ಕಚರ ಗೆಲಿದ ೬೨

ದಾನವರು ಬಲುಗೈಗಳಪ್ರತಿ
ಮಾನರಹುದಾದಡೆಯು ಸಮರದೊ
ಳಾನಲಸದಳವಸುರರಿಗೆ ಸುರರಿಗೆ ಜಯಾಭ್ಯುದಯ
ಏನ ಹೇಳುವುದಲ್ಲಿ ಸುಭಟ ನಿ
ಧಾನರಿದ್ದುದು ಪಾಂಡವರೊಳವ
ಧಾನಗುಂದನು ರಾಯ ಗದುಗಿನ ವೀರನಾರಯಣ ೬೩