ಇದ್ಯಾವ  ನ್ಯಾಯ?
ಏನನ್ಯಾಯ
ಕೃಷ್ಣನ ಕುಹಕವ ನೋಡಲ್ಲಿ!
ಕುಮಾರವ್ಯಾಸ

ವೈಶಂಪಾಯನ ಸರೋವರ ತೀರಪ್ರದೇಶದಲ್ಲಿ ರಣರೌದ್ರಾವೇಶಿಗಳಾದ  ಭೀಮ ದುರ್ಯೋಧನರ ನಿರ್ಣಾಯಕವಾದ ಕೊಟ್ಟಕೊನೆಯ ಗದಾಯುದ್ಧವನ್ನು ಪುಲಕಿತವಾಗಿ ಕಾಣುತ್ತಿರುವ ಕವಿ, ಶ್ರೀಕೃಷ್ಣನ ಸನ್ನೆಯ ಮೇರೆಗೆ ಭೀಮಸೇನನು ವೈರಿಯ ತೊಡಗೆ ಮೋದಿ ಅವನನ್ನು ಧರೆಗುರುಳಿಸುವ ರುದ್ರಭೀಷಣ ಸನ್ನವೇಶದಲ್ಲಿ, ತಾಳಲಾರದೆ ಕೂಗಿಕೊಳ್ಳುತ್ತಾನೆ: ‘ಇದಾವ ನ್ಯಾಯ? ಏನನ್ಯಾಯ?’ಎಂದು ಮನಸ್ಸು ಮತ್ತೆ ಮತ್ತೆ ಮರುಗುತ್ತದೆ, ಮುನಿದೇಳುತ್ತದೆ. ಪ್ರಶ್ನೆಗೆ ಸಮಾಧಾನಕರವಾದ ಉತ್ತರವನ್ನು ಹುಡುಕಿ ಕಾಣಲಾರದೆ ಬುದ್ಧಿ ತಡವರಿಸುತ್ತದೆ, ಹೃದಯ ತತ್ತರಿಸುತ್ತದೆ. ಅನೇಕ ವೇಳೆ ಸೋತು, ಪ್ರತೀಕಾರ ಕಾಣದ ಧರ್ಮ ಕೋಪಕ್ಕೆಂಬಂತೆ, ತಿರಸ್ಕರಿಸಿಯೂ ಬಿಡುತ್ತದೆ. ಆರನ್ನೊ? ಏನನ್ನೊ? ಏತಕ್ಕೊ?

ಸತ್ಯ ಧರ್ಮ ತ್ಯಾಗ ವೀರ ಇತ್ಯಾದಿ ಮಹಾಗುಣಗಳೆಲ್ಲ ಮೂರ್ತಿಮತ್ತಾಗಿದ್ದ ಶ್ರೀರಾಮಚಂದ್ರನು ಮರದ ಮರೆಹೊಕ್ಕು ಅಡಗಿನಿಂತು ವಾಲಿಯನ್ನು ಸಂಹರಿಸುತ್ತಾನೆ. ನಿರಪರಾಧಿನಿ ಗರ್ಭಿಣಿ ಸಹಧರ್ಮಿಣಿಯನ್ನು ಕಾಡಿಗಟ್ಟುತ್ತಾನೆ. ಶ್ರೀಮದ್‌ಭಗವದ್ಗೀತೆಯಂತಹ ಅಲೋಕಸಾಮಾನ್ಯವಾದ ಪೂರ್ಣಯೋಗಶಾಸ್ತ್ರವನ್ನು ಜಗತ್ತಿಗೆ ಬೋಧಿಸಿದ ಶ್ರೀಕೃಷ್ಣನು, ಅವತಾರ ಪುರಷನೆಂದು ಪೂಜ್ಯನಾದ ಶ್ರೀಕೃಷ್ಣನು, ತನ್ನ ಪಾಂಡವರ ಗೆಲವಿಗಾಗಿ ಕೌರವವೀರರನನ್ನು ಪಡಲ್ವಡಿಸುವ ಲೋಕಸಂಗ್ರಹ ಕಾರ್ಯದಲ್ಲಿ, ಸಾಮಾನ್ಯ ಜೀವದ ಧರ್ಮದೃಷ್ಟಿ ತತ್ತರಿಸುವಂತಹು ಅಕಾರ್ಯವೆಂದು ತೋರುವ, ಎಷ್ಟು ಸಾಹಸವರ್ತನೆಗಳಲ್ಲಿ ಭಾಗಿಯಾಗಿಲ್ಲ? ಮತ್ತೆಷ್ಟನ್ನು ಪ್ರೇರಿಸಿಲ್ಲ” ತಾನು ರಣದಲ್ಲಿ ಕೈದು ವಿಡಿಯುವುದಿಲ್ಲ ಎಂದ, ಪೂಣ್ಪಿದ್ದರೂ ಗಾಂಗೇಯನ ಮೇಲೆ ಚಕ್ರ ಪ್ರಯೋಗ ಮಾಡುತ್ತಾನೆ. ಸಾರಥಿ ತ್ಯಜಿಸಿಹೋದ ಮೇಲೆ ರಕ್ತವಾರಿಯಿಂದ ಕೆಸರೆದ್ದ ನೆಲದಲ್ಲಿ ರಥದ ಗಾಲಿ ಹೂತುಕೊಂಡಿದ್ದಾಗ, ತನಗೆ ಸ್ವಲ್ಪ ಸಮಯ ಬೇಕೆಂದು ಕೇಳಿ ತೇರಿಳಿದು ಅದನ್ನೆತ್ತುವ ಕಾರ್ಯದಲ್ಲಿ ತೊಡಗಿದ್ದ ಕರ್ಣನ ಮೇಲೆ ಅರ್ಜುನನ ಕೈಯಿಂದ ಬಾಣ ಹೊಡೆಸುತ್ತಾನೆ. ಸಂಧಿಕಾರ್ಯಕ್ಕೆ ಹೋಗುವಾಗಲೂ ಯುಧಿಷ್ಠಿರನಿಗೆ ಒಂದು ಮಾತು ಕೊಡುತ್ತಾನೆ; ಅದನ್ನು ಸಂಪೂರ್ಣವಾಗಿ ಮುರಿಯುವ ಮತ್ತೊಂದು ಮಾತಿನ ಅಭಯವನ್ನು ದ್ರೌಪದಿಗೆ ನೀಡುತ್ತಾನೆ. ದ್ರೋಣನನ್ನು ಕೊಲ್ಲಿಸಲು ಶ್ರೀಕೃಷ್ಣನು ಹೂಡಿದ ಉಪಾಯವನ್ನು ಇನ್ನಾರಾದರೂ ಮಾಡಿದ್ದರೆ? ಯಾವ ಹೆಸರಿಗೆ ಪಕ್ಕಾಗುತ್ತಿದ್ದರು?

ಅವತಾರಪುರುಷರು ಎಂದೆನ್ನಿಸಿಕೊಳ್ಳುವವರ ವಿಚಾರ ಹೀಗಾದರೆ ಆದರ್ಶ ವಿಭೂತಿಪುರುಷರು ಎನ್ನಿಸಿಕೊಳ್ಳುವವರೂ ಧರ್ಮ ಪರೀಕ್ಷಣೆಗೆ ಒಳಗಾಗುವಂತಹ ಎಷ್ಟೋ ‘ಅಕಾರ್ಯ’ಗಳನ್ನು ಮಾಡಿರುವುದೂ ಪುರಾಣ ಮಹಾಕಾವ್ಯಗಳಲ್ಲಿ ಕಂಡು ಬರುತ್ತದೆ. ಆಚಾರ್ಯ ಭೀಷ್ಮರು ದುರ್ಯೋಧನ ಪ್ರಪ್ರಥಮ ಮಹಾಸೇನಾನಿಯಾಗಿ ನಿಂತು ಭಾರತ ಯುದ್ಧವನ್ನು ಪ್ರಾರಂಭಿಸಿದರೂ, ದೇವತೆಗಳು ಹೊಗಳುವಂತೆ ಮತ್ತು ಶತ್ರುಪಕ್ಷ ದಿಗಿಲುಗೊಳ್ಳುವಂತೆ  ಕಾಳಗಂಗೊಟ್ಟರೂ, ಕೊನೆಯಲ್ಲಿ ಪಾಂಡವರಿಗೆ ತಮ್ಮ ಸಾವಿನ ಅಥವಾ ಸೋಲಿನ ಗುಟ್ಟನ್ನು ಹೇಳಿಕೊಟ್ಟು ಶರಶಯ್ಯಾಗತರಾದರಷ್ಟೆ! ಈಗಣ ಮಹಾರಾಷ್ಟ್ರಗಳ ಮಹಾ ಸೇನಾನಿಗಳಲ್ಲಿ ಯಾವನಾದರೂ ಹಾಗೆ ಮಾಡಿದರೆ ಅವನನ್ನು ಏನನ್ನುತ್ತೇವೆ? ಅವನಿಗೆ ಏನು ಶಿಕ್ಷೆ ಒದಗುತ್ತದೆ? ಅವನು ‘ಪಂಚಮದಳ ದಳಪತಿ’ಯೆಂದು ಅವಹೇಳಿತನಾಗಿ ಮರಣದಂಡನೆಗೆ ಗುರಿಯಾಗುವುದಿಲ್ಲವೆ? ರಾಜದ್ರೋಹಿ, ಸ್ವಾಮಿದ್ರೋಹಿ ಅಥವಾ ರಾಷ್ಟ್ರದ್ರೋಹಿ ಎಂದು ನಿಂದನೀಯನಾಗುವುದಿಲ್ಲವೆ?

ಅವರನ್ನೆಲ್ಲ ವಿಚಾರಣೆಗಾಗಿ ನ್ಯಾಯಸ್ಥಾನಕ್ಕೆ ಎಳೆಯುವುದೇನೊ ಸುಲಭ. ನ್ಯಾಯಾಧೀಶರ ಮುಂದೆ ವಾದಮಾಡಲು ನ್ಯಾಯವಾದಿಗಳೂ ದೊರೆಯುತ್ತಾರೆ. ಆದರೆ ಸಮಂಜಸವಾದ ಸಾಕ್ಷ್ಯವನ್ನು ಸಂಗ್ರಹಿಸಿ, ಸರಿಯಾದ ಸಾಕ್ಷಿಗಳನ್ನು, ತರಬಿಯತ್ತು ಮಾಡಿಯಾದರೂ ಚಿಂತೆಯಿಲ್ಲ, ಒದಗಿಸದಿದ್ದರೆ ನ್ಯಾಯಾಧೀಶರು ಕೇಸನ್ನೆ ವಜಾಮಾಡಬೇಕಾಗುತ್ತದೆ. ಈ ಕಾವ್ಯಸತ್ತೆಯ ಅಪರಾಧ ಮತ್ತು ಅಪರಾಧಿಗಳ ವಿಚಾರದಲ್ಲಿ ಅಂತಹ ಸಾಕ್ಷ್ಯಸಾಕ್ಷೀ ಸಾಮಂಜಸ್ಯವೆ ದೊಡ್ಡ ಸಮಸ್ಯೆ. ಏಕೆಂದರೆ ಒಬ್ಬೊಬ್ಬ ಕವಿಯೂ ತನ್ನ ಪಾತ್ರಗಳನ್ನೂ ಪಾತ್ರಕ್ರಿಯೆಯನ್ನೂ ತನ್ನ ‘ದರ್ಶನ’ಕ್ಕೆ ಅನುಗುಣವಾಗಿ ಸೃಷ್ಟಿಸುತ್ತಾನೆ. ಆ ರಚನೆ ‘ಅನನ್ಯಪರ-ತಂತ್ರ’

[1]ವಾದದ್ದು. ವ್ಯಾಸನ ದುರ್ಯೋಧನನ ಮೇಲೆ ಅಪರಾಧ ಹೊರಿಸಿ ನಾವು ಒದಗಿಸುವ ಸಾಕ್ಷ್ಯವನ್ನು ಭಾಸನ ದುರ್ಯೋಧನ ಸುಳ್ಳುಸಾಕ್ಷ್ಯವೆಂದು ತಳ್ಳಿಹಾಕಬಹುದು. ಸಂಸ್ಕೃತ ರಾಮಾಯಣದ ಉತ್ತರ ಕಾಂಡದಲ್ಲಿ ಬರುವ ಶಂಭೂಕವಧೆಗಾಗಿ ಅಲ್ಲಿಯ ರಾಮನ ಮೇಲೆ ನಾವು ಹೊರಿಸಬಹುದಾದ ಆರೋಪದ ತೀಕ್ಷ್ಣತೆ ಭವಭೂತಿಯ ಉತ್ತರರಾಮಚರಿತದ ರಾಮನಿಂದ ತನ್ನ ಉಗ್ರತೆಯನ್ನು ಬಹುಪಾಲು ಕಳೆದುಕೊಂಡು ಸೌಮ್ಯವಾಗಿಬಿಡುತ್ತದೆ. ಕನ್ನಡ ನಾಟಕ ‘ಶೂದ್ರ ತಪಸ್ವಿ’ಯಲ್ಲಿಯಾದರೊ ಆ ಸಾಕ್ಷ್ಯದ ಸ್ವರೂಪವೇ ಮಾರ್ಪಾಡಾಗಿ, ಅಪರಾಧಿ ಯಾರು? ಅಪರಾಧವೇನು? ಎಂಬ ಪ್ರಶ್ನೆಯೆದ್ದು, ಕೋರ್ಟಿಗೆ ಕೇಸನ್ನು ಕೊಂಡೊಯ್ದವನೆ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ಪ್ರಮೇಯ ಒದಗಬಹುದು. ಹೀಗೆ ಭಿನ್ನ ಭಿನ್ನ ದೃಷ್ಟಿಯ ಬೇರೆ ಬೇರೆ ಕವಿಕೃತಿಗಳಲ್ಲಿ ಒಂದು ವ್ಯಕ್ತಿಯ ಅಥವಾ ಒಂದು ಘಟನೆಯ ಸಂಬಂಧದಲ್ಲಿ ವಿವಿಧ ಪ್ರಕಾರದ ಸೃಷ್ಟಿಗಳಿರುವುದರಿಂದ ಲೋಕಚರಿತ್ರೆಯಲ್ಲಿ ನಡೆದ ಘಟನೆಯೊಂದರ ನ್ಯಾಯಾನ್ಯಾಯ ಮತ್ತು ಧರ್ಮಾಧರ್ಮಗಳನ್ನು ಪರಿಶೀಲಿಸುವಂತೆ ವ್ಯವಹರಿಸಲು ಸಾಧ್ಯವಾಗುವುದಿಲ್ಲ. ಕಾವ್ಯಸತ್ತೆಯ ಈ ಧರ್ಮ ಪರೀಕ್ಷಣ ಕಾರ್ಯದಲ್ಲಿ ನ್ಯಾಯಸ್ಥಾನ ನ್ಯಾಯಾಧೀಶ ನ್ಯಾಯವಾದಿ ಅಪರಾಧಿ ಸಾಕ್ಷಿ ಎಲ್ಲರೂ ಒಂದು ವಿಲಕ್ಷಣ ಪರಿಸ್ಥಿತಿಯಲ್ಲಿ ಸಿಲುಕಿ, ಬಹುಶಃ ಸಮಯ ಸಂದರ್ಭಕ್ಕೆ ತಕ್ಕಂತೆ ಪರಸ್ಪರ ಸ್ಥಾನಪಲ್ಲಟವಾಗುವ ಪರಿಸ್ಥಿತಿಯೂ ಒದಗಬಹುದೆಂದು ತೋರುತ್ತದೆ. ಏಕೆಂದರೆ ಅಲ್ಲಿಯ‘ಧರ್ಮ ಸೂಕ್ಷ್ಮತೆ’ ಬಹು ಭೂಮಿಕಾ ವ್ಯವಹಾರ್ಯವಾದದ್ದು; ಪೂರ್ಣ ದೃಷ್ಟಿಯೊಂದರಿಂದಲೆ ಸಂಪೂರ್ಣವಾಗಿ ಗ್ರಾಹ್ಯವಾದದ್ದು.[2]

ಆದರೆ ನಮ್ಮ ಅನುಕೂಲದ ಮಟ್ಟಿಗಾಗಿ, ಅಪೂರ್ಣವಾದರೂ ಚಿಂತೆಯಿಲ್ಲವೆಂದು, ಒಂದು ನಿಷ್‌ಕೇವಲವಾದ ವ್ಯಾವಹಾರಿಕ ಮಾರ್ಗದಲ್ಲಿ ಸಾಗಬಹುದು. ಯಾವುದಾದರೂ ಒಂದು ಘಟನೆಯನ್ನು ವ್ಯಷ್ಟಿದೃಷ್ಟಿಯಿಂದ ನೋಡಬಹುದು; ಸಮಷ್ಟಿದೃಷ್ಟಿಯಿಂದ ನೋಡಬಹುದು; ಅತೀತವೂ ಭಗವತ್ ಸಾಧ್ಯವೂ ಆದ ಪೂರ್ಣದೃಷ್ಟಿಯಿಂದ ಸಮೀಕ್ಷಿಸಲು ಪ್ರಯತ್ನಿಸಬಹುದು. ಅಥವಾ ಒಂದು ವ್ಯಕ್ತಿಧರ್ಮದೃಷ್ಟಿಯಿಂದ ನೋಡಬಹುದು; ಒಂದು ಸಮಾಜಧರ್ಮದೃಷ್ಟಿಯಿಂದ ನೋಡಬಹುದು; ಒಂದು ಸಮಗ್ರ ಮಾನವಧರ್ಮ ದೃಷ್ಟಿಯಿಂದ ನೋಡಬಹುದು. ಉದಾಹರಣೆಗಾಗಿ ಕೌರವೇಶ್ವರನ ಊರುಭಂಗ ಸನ್ನಿವೇಶವನ್ನು ತೆಗೆದುಕೊಂಡರೆ, ನಮ್ಮ ದೃಷ್ಟಿ ಹಿಂದೆ ನಡೆದುದನ್ನೂ ಮುಂದೆ ನಡೆಯಬೇಕಾದುದನ್ನೂ ಗಮನಿಸದೆ ತತ್ಕಾಲದ ಘಟನಾಬಿಂದುವಿನಲ್ಲಿಯೆ ಕೇಂದ್ರೀಕೃತವಾಯಿತೆಂದರೆ, ಕೃಷ್ಣನು ಸನ್ನೆಗೆಯ್ದುದೂ ಭೀಮನ ತೊಡೆಗೆ ಹೊಡೆದುದೂ ವೀರೋಚಿತವಲ್ಲದ ಮಹಾ ಅವಮಾನಕರವಾದ ಅನ್ಯಾಯಗಳೆಂದು ತೋರಿ, ಕ್ರೀಡಾರಂಗದಲ್ಲಿ ಫೌಲ್ ನಡೆದಾಗ ರೆಫ್ರಿ ಸಿಳ್ಳಿ ಊದುವಂತೆ, ‘ಇದಾವ ನ್ಯಾಯ? ಏನನ್ಯಾಯ?’ ಎಂದು ಕೂಗಿಕೊಳ್ಳುತ್ತೇವೆ. ರಂಗಕ್ಕೂ ನುಗ್ಗುತ್ತಿದ್ದೆವೊ ಏನೊ, ಸಾಧ್ಯವಾಗಿದ್ದರೆ! ನ್ಯಾಯ ರಕ್ಷಣೆ ಮಾಡಲೋಸುಗ! ಧರ್ಮಪರಿಪಾಲನಾರ್ಥವಾಗಿ!

ಆದರೆ ನಾವೆ ಭೀಮನಾಗಿ ನೋಡತೊಡಗಿದ್ದರೆ ಏನಾಗುತ್ತಿತ್ತು? ‘ನನ್ನ ಮನೆ ಮಾರು ಹಾಳುಮಾಡಿದ್ದಾನೆ; ನನ್ನ ಹೆಂಡತಿಗೆ ಮಾನಭಂಗ ಮಾಡಿದ್ದಾನೆ; ನನ್ನ ಮಕ್ಕಳನ್ನೂ ಬಂಧುಗಳನ್ನೂ ಕೊಂದಿದ್ದಾನೆ; ಕೊಲ್ಲಿಸಿದ್ದಾನೆ; ನನಗೆ ಅವಮಾನದ ಮೇಲೆ ಅವಮಾನ ಮಾಡಿದ್ದಾನೆ. ನನ್ನ ಹೊಟ್ಟೆಗೆ ಕಿಚ್ಚಿಟ್ಟಿದ್ದಾನೆ. ಇವನ ನೆತ್ತರು ಸಪ್ತಸಾಗರಗಳಾಗಿದ್ದರೂ ಕುಡಿದೀಂಟುವ ಅಗಸ್ತ್ಯನಾಗಿ ಬಿಡುತ್ತೇನೆ; ಹೊಡಿಯೋ! ಹೊಡಿಯೋ! ತೊಡೆ ಮುರಿಯಲಿ, ಚೂರಾಗಲಿ, ಹಾಕೋ! ಇನ್ನೂ ಹಾಕೋ ಒದೆಯೋ! ಅವನ ಕಿರೀಟ ಪುಡಿಯಾಗಲಿ!’ ಎಂದು ಗ್ರಾಮ್ಯಸ್ತ್ರೀ ಶಾಪ ಹಾಕುವಂತೆ ಒರಲಿ, ಒಬ್ಬನಲ್ಲ ಸಾಧ್ಯವಾಗಿದ್ದರೆ ನೂರು ಭೀಮರಾಗುತ್ತಿದ್ದೆವಲ್ಲವೆ? ಉದ್ದಕ್ಕೂ ಅನ್ಯಾಯ ಅಧರ್ಮ ಹಿಂಸೆಗಳಲ್ಲಿಯೆ ಬಾಳು ಸಾಗಿಸಿದ ದುಷ್ಟನನ್ನು ಕೊಲ್ಲುವ ಕೊನೆಯ ಮಹೂರ್ತದಲ್ಲಿ ಧರ್ಮವಂತೆ ಅಧರ್ಮವಂತೆ ನ್ಯಾಯವಂತೆ ಅನ್ಯಾಯವಂತೆ!-ಎಂದು ಮೂದಲಿಸುತ್ತಿರಲಿಲ್ಲವೆ? ಮರಣ ದಂಡನೆಗೆ ಗುರಿಯಾಗಿ ಗಲ್ಲಿಗೇರುವವನ ಕುತ್ತಿಗೆಗೆ ನೋವಾಗುತ್ತದೆಂದು ಉರುಳಿಗೆ ಮೆತ್ತೆಹಾಕಬೇಕಂತೆ! ಎಂದು ಪರಿಹಾಸ್ಯ ಮಾಡುತ್ತಿರಲಿಲ್ಲವೆ?

ವ್ಯಕ್ತಿದೃಷ್ಟಿಯಿಂದ ನೋಡದೆ ಸಮಾಜದೃಷ್ಟಿಯಿಂದ ನೋಡತೊಡಗಿದರೆ ನಾವು ತಾತ್ಕಾಲಿಕತೆಯಿಂದ ಪಾರಾಗಿ, ತತ್‌ಕ್ಷಣದ ನಮ್ಮ ಅಹಂಕಾರದ ಭಾವಸ್ಥಿತಿಯ ಆವೇಶಕ್ಕೆ ವಶರಾಗಿ ಕೂಗಿಕೊಳ್ಳುವುದಕ್ಕೆ ಬದಲಾಗಿ, ಭೀಮ ಅಥವಾ ದುರ್ಯೋಧನರ ವ್ಯಕ್ತಿತ್ವಗಳಲ್ಲಿ ವಿಲೀನರಾಗಿ ಅವನ ಅಥವಾ ಇವನ ಪಕ್ಷಪಾತಿಗಳಾಗದೆ, ಯಾವುದು ಹೇಗೆ ನಡೆದರೆ ಸಮಾಜದ ಸಮುದಾಯ ಕ್ಷೇಮ ಸಾಧನೆಯಾಗುತ್ತದೆ ಎಂದು ನಿರ್ಣಯಿಸುತ್ತೇವೆಯೊ ಆ ನಿರ್ಣಯಕ್ಕೆ ತಲೆಬಾಗಬೇಕಾಗುತ್ತದೆ, ನಮ್ಮ ಧರ್ಮಾಧರ್ಮ ಬುದ್ಧಿ. ಅಂತಹ ಪೂರ್ವಾಪರಗ್ರಾಹಿಯಾದ ಬುದ್ಧಿಗೆ ಭೀಮನ ವರ್ತನೆ, ಅದಕ್ಕದೆ ಒಂದು ಅಲ್ಪದೋಷವಾಗಿ ತೋರಿದರೂ, ಅದು ಸಾಧಿಸುವ ಲೋಕಕಲ್ಯಾಣಕಾರಿಯಾಗುವ ಒಂದು ಭೂಮ ಪ್ರಯೋಜನದ ಮುಂದೆ ಸಾಧುಕ್ರಿಯೆಯಾಗಿ ತೋರಿ, ಆ ಭೂಮ ಪ್ರಯೋಜನದ ಒಂದು ಅನಿವಾರ್ಯವಾದ ಅಂಗವೂ ಆಗಿಬಿಡುತ್ತದೆ. ಅಂತಹ ಎತ್ತರಕ್ಕೂ ಬಿತ್ತರಕ್ಕೂ ಏರಿ ಹಬ್ಬುವ ಸಮಷ್ಟಿದೃಷ್ಟಿ ಇನ್ನೊಂದು ಹೆಜ್ಜೆ ಮುನ್ನೆಗೆದರೆ ಪೂರ್ಣದೃಷ್ಟಿಯಾಗುತ್ತದೆ.

ಆ ಪೂರ್ಣದೃಷ್ಟಿಗೆ ಪ್ರತಿಮೆಯಾಗಿ ನಿಲ್ಲುತ್ತದೆ, ಶ್ರೀ ಕೃಷ್ಣನ ಬೃಹನ್ ಮಹಾ ಭಗವತ್ ಪಾತ್ರ. ಆ ಪೂರ್ಣದೃಷ್ಟಿ ಸಾರ್ವಕಾಲಿಕ; ಸಾರ್ವದೇಶಿಕ; ಸರ್ವಾಂತರ್ಯಾಮಿ; ಸರ್ವಾತೀತ. ಅದರ ಇಚ್ಛೆ ಋತಚಿದಿಚ್ಛೆ. “ಈಶ್ವರಃ ಸರ್ವಭೂತಾನಾಂ ಹೃದ್ದೇಶೇಢರ್ಜುನ ತಿಷ್ಠತಿ | ಭ್ರಮಯನ್ ಸರ್ವಭೂತಾನಿ ಯಂತ್ರಾ ರೂಢಾನಿ ಮಾಯಯಾ||” ಆ ನಿತ್ಯಶಕ್ತಿ ತನ್ನ ಲೀಲಾರ್ಥವಾಗಿ, ತನಗೆ ಮಾತ್ರ ಪೂರ್ಣಗೋಚರವಾಗಿರುವ ತನ್ ಅಚಿಂತ್ಯೋದ್ದೇಶಕ್ಕಾಗಿ, ಮನೋಮಯ ಮಾತ್ರ ನಿಷ್ಠವಾಗಿರುವ ಮಾನವ ವಿಚಾರಾವಲೋಕನಕ್ಕೆ ಅಗಮ್ಯವಾಗಿರುವ ಸಚ್ಚಿದಾನಂದ ಪ್ರಯೋಜನಕ್ಕಾಗಿ, ನಮಗೆ ಅರ್ಥವಾಗದ ಅಥವಾ ಅನರ್ಥವಾಗಿ ತೋರುವ ಅನೇಕಾನೇಕ ರೀತಿಗಳಲ್ಲಿ ಪ್ರವರ್ತಿಸುತ್ತದೆ. “ಅಹಂಕಾರ ವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ” ಅದನ್ನರಿಯದೆ ಅಹಂಕಾರಭ್ರಾಂತವಾದ ಮನುಷ್ಯಚೇತನೆ ‘ನಾನೆ ಅದನ್ನೆಲ್ಲ ಮಾಡುತ್ತಿದ್ದೇನೆ’ ಎಂದು ಸಂಸಾರ ಭಾರವನ್ನೆಲ್ಲ ತನಗೆ ತಾನೆ ಆರೋಪಿಸಿಕೊಳ್ಳುತ್ತಾ ತಲೆಯ ಮೇಲೆ ಹಾಕಿಕೊಂಡು ದಿಗ್ಭ್ರಾಂತವಾಗುತ್ತದೆ. ಅಂತಹ ದಿಗ್‌ಭ್ರಾಂತಿ  ಅಹಂದೃಷ್ಟಿಗೆ ಅತ್ಯಂತ ಸತ್ಯವಾದುದಾದರೂ ಪೂರ್ಣದೃಷ್ಟಿಗೆ ಶಶವಿಷಾಣಸದೃಶವಾದ ಒಂದು ಮಿಥ್ಯೆ. ಅಹಂದೃಷ್ಟಿಯ ಮುಂದೆ ಭಯಂಕರವಾಗಿ ನಿಂತು, ಪರಿಹಾರ ನೀಡು ಎಂದು ಉಗ್ರವಾಗಿ ಒರಲುವ ಯಕ್ಷಪ್ರಶ್ನೋಪಮವಾದ ಆ ಸಮಸ್ಯೆಯ ಬೂತು ಪೂರ್ಣದೃಷ್ಟಿಯ ಮುಂದೆ ಸಂಪೂರ್ಣವಾಗಿ ನಿರಸನ ಹೊಂದುತ್ತದೆ.

ಅಂತಹ ಪೂರ್ಣದೃಷ್ಟಿ ಲೋಕದಲ್ಲಿಯೂ ಕಾವ್ಯಲೋಕದಲ್ಲಿಯೂ ಅಜ್ಞಾನವಶವಾದ ಅವಿದ್ಯಾಭೂಮಿಕೆಗಳಿಗೆ ಅನುರೂಪವಾದ ರೂಪರೀತಗಳಲ್ಲಿ ಪ್ರತಿಮವಿಧಾನದಲ್ಲಿ ಪ್ರಕಟವಾಗಲು ಪ್ರಯತ್ನಿಸಿರುವುದನ್ನು ನಾವು ನೋಡುತ್ತೇವೆ. ಬದುಕಿನಲ್ಲಿ ಸದ್ಧರ್ಮಿಗೊ ಸಜ್ಜನಕ್ಕೊ ಕೇಡೊದಗಿದಾಗ, ಆ ಕೇಡಿಗೆ ಈ ಜನ್ಮದ ಅಥವಾ ಈ ಲೋಕದ ಕಾರಣಗಳನ್ನು ಒಡ್ಡಲು ಅಸಮರ್ಥವಾದ ನಮ್ಮ ಬುದ್ಧಿ ಜನ್ಮಾಂತರದ ಕರ್ಮಕಾರಣಗಳನ್ನೊ ಅನ್ಯಲೋಕ ದೇವತಾ ಪ್ರಭಾವಗಳನ್ನೊ ತಂದೊಡ್ಡುತ್ತದೆ.[3] ಜರಾ ಎಂಬ ವ್ಯಾಧನು ಅರಣ್ಯದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದ ಶ್ರೀಕೃಷ್ಣನ ಪಾದವನ್ನೆ ಪಕ್ಷಿ ಎಂಬುದಾಗಿ ಭ್ರಮಿಸಿ, ಬಾಣಪ್ರಯೋಗ ಮಾಡಿ, ಆತನ ದೇಹತ್ಯಾಗಕ್ಕೆ ನಿಮಿತ್ತನಾದ ಸನ್ನಿವೇಶದಲ್ಲಿ, ಶ್ರೀರಾಮನು ವಾಲಿಯನ್ನು ಅಡಗಿನಿಂತು ಹೊಡೆದು ಕೊಂದ ಕರ್ಮಕ್ಕಾಗಿ ಶ್ರೀಕೃಷ್ಣ ಜನ್ಮದಲ್ಲಿ ವ್ಯಾಧಜನ್ಮವೆತ್ತಿ ಜರನಾಗಿ ಬಂದ ವಾಲಿಯ ಬಾಣದಿಂದಲೆ ಸಾಯಬೇಕಾಯಿತು ಎಂಬ ಕರ್ಮ ಸಿದ್ಧಾಮತದ ಅದಮ್ಯತೆಯನ್ನು ಸ್ಥಾಪಿಸಿ ಸಮಾಧಾನ ಪಡೆಯುತ್ತದೆ, ನ್ಯಾಯಪಕ್ಷಪಾತಿಯಾದ ಜನಮೋಧರ್ಮಬುದ್ಧಿ.

ಆಚಾರ್ಯ ಭೀಷ್ಮನಂತಹ ಮಹಾನ್ ದೇವಾಂಶ ವ್ಯಕ್ತಿಯ ವರ್ತನೆಯನ್ನು ಸಮಾಜದ ಸಾಮಾನ್ಯ ವ್ಯಕ್ತಿಯ ಲೌಕಿಕ ಮಾತ್ರವಾದ ವ್ಯವಹಾರವನ್ನು ಎಂತೊ ಅಂತೆ ಪರಿಶೀಲಿಸಿದರೆ ತಪ್ಪಾಗುತ್ತದೆ. ಲೋಕದಲ್ಲಿ ನಮಗೆ ಪೂರ್ಣದೃಷ್ಟಿ ಸಿದ್ಧಿಸುವುದು. ಅತ್ಯಪೂರ್ವವಾದರೂ ಮಹಾಭಾರತದಂತಹ ಮಹಾ ಕಾವ್ಯಲೋಕದಲ್ಲಿ ವ್ಯಾಸಮಹರ್ಷಿಯ ಕೃಪೆಯಿಂದ, ಪ್ರತಿಮಾರೂಪದಿಂದಲಾದರೂ, ಒಂದು ರೀತಿಯ ಪೂರ್ಣದೃಷ್ಟಿ ನಮಗೆ ಸಾಧ್ಯವಾಗುತ್ತದೆ. ಆ ಪೂರ್ಣದೃಷ್ಟಿಗೆ ಭೀಷ್ಮನು ಬರಿಯ ಒಂದು ಲೌಕಿಕ ರಾಜ್ಯದಲ್ಲಿ ಹೆಚ್ಚು ಸಂಬಳ ತೆಗೆದುಕೊಳ್ಳುವ ಒಬ್ಬ ಸೇನಾಪತಿ ಮಾತ್ರನಾಗುವುದಿಲ್ಲ. ಅವನು ಅಷ್ಟವಸುಗಳಲ್ಲಿ ಒಬ್ಬನಾಗುತ್ತಾನೆ. ಅವನ ಜೀವನ ಚರಿತ್ರೆ ನರತ್ವದಿಂದ ಮಾತ್ರವೆ ಮೊದಲಾಗುವುದಿಲ್ಲ. ಅದು ಊರ್ಧ್ವಲೋಕಗಳಲ್ಲಿ ಅವಿರ್ಭವಿಸಿ ಇಲ್ಲಿಗೆ ಅವತರಿಸುತ್ತದೆ. ಇಲ್ಲಿಯ ಅವನ ಅವಸಾನ ಅವನ ಪರ್ಯವಸಾನವಲ್ಲ. ಆ ಜೀವನ ರೇಖೆ ದಿವ್ಯಲೋಕಗಳಲ್ಲಿ, ಅನಂತವಾಗಿ, ದಿವ್ಯತರ ರೀತಿಗಳಿಂದ ಮುಂದುವರಿಯುತ್ತದೆ. ಅದಕ್ಕೆ ಒಂದಲ್ಲ ಅನೇಕ ರೀತಿಯ ಉದ್ದೇಶಗಳಿವೆ; ಅನೇಕ ಪ್ರಕಾರದ ಪ್ರಯೋಜನಗಳಿವೆ. ಅದರ ಒಂದೊಂದೂ ವರ್ತನೆಯ ಹೃದಯದಲ್ಲಿರುವ ಧರ್ಮಸೂಕ್ಷ್ಮತೆ ಅತ್ಯಂತ ಜಟಿಲ ಭೀಷ್ಮನಂತಹನನ್ನು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ, ಒಂದು ಸಾಹಿತ್ಯಗ್ರಂಥದ ಒಂದು ಮನುಷ್ಯಮಾತ್ರವಾದ ‘ಪಾತ್ರ’ ಎಂದು ಪರಿಗಣಿಸಿದರೆ ಸಾಲದು, ಮ್ಯಾಕ್‌ಬೆತ್‌ನ ದುರಂತ ಪಾತ್ರಗಳನ್ನು ಪರಿಶೀಲಿಸುವಂತೆ. ಪಾಶ್ಚಾತ್ಯ ಸಾಹಿತ್ಯವಿಮರ್ಶೆ ಕ್ರಿಸ್ತಮತದ ತತ್ತ್ವಗಳ ಮೇಲೆ ನಿಲ್ಲುತ್ತದೆ. ಆ ತತ್ತ್ವಗಳ ಎಲ್ಲ ಉಪಾಧಿಗಳಿಂದಲೂ ಅದು ಬದ್ಧವಾಗಿ, ಅತ್ಯಂತ ಪರಿಮಿತವೂ ಸಂಕುಚಿತವೂ ಆಂಶಿಕವೂ ಆಗುತ್ತದೆ. ಅದರ ಆ ನ್ಯೂನತೆಯಿಂದ ನಾವು ಪಾರಾಗಿ, ಸರ್ವತೋಮುಖವೂ ಸರ್ವಗ್ರಾಸಿಯೂ ಆಗಿರುವ ನಮ್ಮ ಋಷಿದರ್ಶನದ ಪೂರ್ಣದೃಷ್ಟಿಯ ಮೇಲೆ ನಿಲ್ಲಬೇಕಾಗುತ್ತದೆ. ಜನ್ಮಾಂತರ, ಕರ್ಮ, ದೇವತಾಂಶ, ಅವತಾರ, ವಿಭೂತಿ, ರಹಸ್ಯವಾಗಿರುವ ಅಲೋಕವೆ ಅಥವಾ ಲೋಕಾಂತರಗಳೆ ಪ್ರಕಟವಾಗಿರುವ ಲೋಕದ ವ್ಯಾಪಾರಗಳಿಗೆಲ್ಲ ಮೂಲಶಕ್ತಿ, ಮುಖ ಕಾರಣ ಮತ್ತು ಪ್ರಧಾನಪ್ರಚೋದನೆ-ಇತ್ಯಾದಿ ತತ್ತ್ವಗಳನ್ನೂ ಶ್ರದ್ಧೆಗಳನ್ನೂ ದೃಷ್ಟಿಯಲ್ಲಿಟ್ಟುಕೊಂಡು ಪರಿಶೀಲಿಸಿದರೆ ಭೀಷ್ಮನ ವರ್ತನೆ ಅರ್ಥಪೂರ್ಣವಾಗುತ್ತದೆ, ಮಹೋದ್ದೇಶಪೂರ್ವಕವಾಗುತ್ತದೆ. ಪಾಶ್ಚಾತ್ಯ ಸಾಹಿತ್ಯ ಕೃತಿಗಳಲ್ಲಿ ಎಲ್ಲಿಯೂ ಕಾಣಬರದ ಅದ್ಭುತ ಪಾತ್ರಸೃಷ್ಟಿಯ ಕಲಾವೈಭವವನ್ನು ಸಂದರ್ಶಿಸಿ ರಸಾನಂದ ಪುಲಕಿತರಾಗುತ್ತೇವೆ.

ನಮ್ಮ ಪುರಾಣಕಾವ್ಯಗಳ ವಿರಾಟ್‌ಪಾತ್ರಗಳನ್ನೂ ದಿವ್ಯಚೈತನ್ಯಾವತರಣ ಪ್ರವಾಹಪಾತ್ರಗಳಾಗಿರುವ ಆ ದೇವಪಾತ್ರಗಳ ವರ್ತನೆಗಳನ್ನೂ ಲೋಕಸಾಮಾನ್ಯ ಜೀವನದ ಲೋಕವಾಸ್ತವಿಕ ಮನುಷ್ಯ ಪಾತ್ರಗಳ ವರ್ತನೆಯನ್ನು ಪರಿಶೀಲಿಸುವಂತೆ ಸಮೀಕ್ಷಿಸಿದರೆ ಸಾಹಿತ್ಯ ಮಾತ್ರವಾದ ಆಂಶಿಕ ಪ್ರಯೋಜನವನ್ನು ಪಡೆಯುತ್ತೇವೆಯೆ ಹೊರತು ಅಖಂಡ ಜೀವನದೃಷ್ಟಿಯ ಮಹತ್ತರ ಭವ್ಯವಾದ ಪೂರ್ಣ ಪ್ರಯೋಜನದಿಂದ ವಂಚಿತರಾಗುತ್ತೇವೆ. ಯಾವುದಾದರೂ ಒಂದು ಸಮಾಜಕ್ಕೆ ಅಥವಾ ಒಂದು ಜನಾಂಗಕ್ಕೆ, ಒಂದು ಕಾಲಕ್ಕೆ ಅಥವಾ ಒಂದು ಪ್ರದೇಶಕ್ಕೆ ಅಥವಾ ಒಂದು ಮಾನವ ವರ್ಗಕ್ಕೆ ಸಮ್ಮತವಾದ ನೀತಿ ದೃಷ್ಟಿಯ ಪರಿಪೂರ್ಣತೆಯನ್ನೆ ಅವರಲ್ಲಿ ಕಾಣಬೇಕೆಂದಾಗಲಿ ಅಥವಾ ಅವರು ಅದನ್ನೆ ಆದರ್ಶಿಸಬೇಕೆಂದಾಗಲಿ ಹಟ ಹಿಡಿದು ಹೊರಡುವ ವಿಮರ್ಶೆಗೆ ಆ ದಿವ್ಯಪಾತ್ರಗಳ ಶಕ್ತಿಯೆ ದೌರ್ಬಲ್ಯದಂತೆ ತೋರುತ್ತದೆ’ ಅವರ ಜ್ಞಾನವೆ ಅಜ್ಞಾನದಂತೆ ಭಾಸವಾಗುತ್ತದೆ; ಅವರ ವರ್ತನೆಗಳ ಅಂತಃಸ್ವರೂಪವಾಗಿರುವ ಸ್ವಾತಂತ್ರ‌ಯವೆ ಅವರ ಮನಸ್ಸಿನ ಅನಿಶ್ಚಯತೆಯ, ಚಿತ್ತದ ಚಂಚಲತೆಯ ಅಥವಾ ಹೃದಯದ ಅವಶತೆಯ ಪಾರತಂತ್ರ‍್ಯವೆಂಬಂತೆ ತೋರುತ್ತದೆ; ಅವರ ಪೂರ್ಣ ಪ್ರಜ್ಞಾರೂಢವಾದ ಧರ್ಮಬುದ್ಧಿ ಕೈಕೊಳ್ಳುವ ಕರ್ಮಗಳನ್ನೆ ನಮ್ಮ ಅಪೂರ್ಣ ದೃಷ್ಟಿಯ ಅಲ್ಪಬುದ್ಧಿ ಅಧರ್ಮವರ್ತನೆಗಳೆಂದು ಭ್ರಮಿಸುತ್ತದೆ.

ಆದರೆ ಪ್ರತಿಮಾವಿಧಾನದ ಕಲಾರಹಸ್ಯವನ್ನರಿತ ಪೂರ್ಣದೃಷ್ಟಿಗೆ ಅವರ ವರ್ತನೆಗಳ ಬಹು ಪ್ರಕಾರಾಂತರವಾದ ಜಟಿಲತೆಯ ನಿಜಸ್ವರೂಪ ಗೋಚರವಾಗಿ, ಅವರ ಅಲ್ಪ ‘ಅನ್ಯಾಯ’ದ ಹೃದಯದಲ್ಲಿರುವ ಭೂಮನ್ಯಾಯವನ್ನೂ ಅವರ ಅಲ್ಪ ‘ಅಧರ್ಮ’ದ ಹಿಂದಿರುವ ಮತ್ತು ಮುಂಬರುವ ಭೂಮಧರ್ಮವನ್ನೂ ಗ್ರಹಿಸುವ ಧೀಚೇತನೆ ತೃಪ್ತವಾಗುತ್ತದೆ: ಏಕೆಂದರೆ ಎಲ್ಲಿಯಂತೆ ಇಲ್ಲಿಯೂ

ಯೋ ವೈ ಭೂಮಾ ತತ್ಸುಖಂ ನಾಲ್ಪೇ ಸುಖಮಸ್ತಿ!”
ಅಲ್ಪದೊಳ್ ಸೊಗಮಿಲ್ಲಮಾ ಭೂಮವೊಂದೆಯೆ ಸೊಗಂ!”

* * *


[1]    ಕವಿಕೃತಿಯಲ್ಲಿ ಅನನ್ಯಪರತಂತ್ರತೆ’ ಎಂಬ ಲೇಖನದಲ್ಲಿ ವಿವರಣೆ ದೊರೆಯುತ್ತದೆ.

[2]    Letters of Sri Aurobindo (Second series) Section Fourteen-‘Avatarhood and Evolution’ ಅಲ್ಲಿ ಈ ವಿಚಾರವಾಗಿ ಪತ್ರವ್ಯವಹಾರರೂಪದಲ್ಲಿರುವ ತಲಸ್ಪರ್ಶಿಯಾದ ಜಿಜ್ಞಾಸೆಯನ್ನು ಆಸಕ್ತಿಯಿರುವ ವಾಚಕರು ಓದಬಹುದು.

[3]    ಜೈನಕಾವ್ಯಗಳಲ್ಲಂತೂ ಇದಕ್ಕೆ ಉದಾಹರಣೆಗಳು ಯಥೇಚ್ಛವಾಗಿ ದೊರೆಯುತ್ತವೆ.