ಸ್ವಾನುಭವ, ದೇಶದ ಸಂಸ್ಕೃತಿ, ಪಡೆದ ವಿದ್ಯೆ, ತಾನು ಹುಟ್ಟಿದ ಮತ್ತು ಬೆಳೆದ ಸುತ್ತಣ ಸನ್ನಿವೇಶ, ಮಹಾಪುರುಷ ಸಂಶ್ರಯ ಮೊದಲಾದವುಗಳ ಪ್ರಭಾವದಿಂದ ಮೂಡುವ ಬುದ್ಧಿಸ್ಥಿತಿಯನ್ನು ಜೀವದೃಷ್ಟಿ ಎಂದು ಸಂಕೇತಿಸಬಹುದು. ಅಂತಹ ಜೀವನದೃಷ್ಟಿ ರಸಾನುಭೂತಿಗೇರಿದರೆ ‘ದರ್ಶನ’ವಾಗುತ್ತದೆ.

ಕವಿಯ ದರ್ಶನ ತತ್ತ್ವಶಾಸ್ತ್ರಜ್ಞನ ತರ್ಕಬದ್ಧವಾದ ದರ್ಶನವಲ್ಲ. ಅದು ಋಷಿಯ ಅಪರೋಕ್ಷಾನುಭೂತಿಗೆ ಹೆಚ್ಚು ಸಮೀಪವಾದದ್ದು. ನಿಷ್ಕೃಷ್ಟವಾದ ಕೇಂದ್ರವಾಗಲಿ ಖಚಿತವಾದ ನೇಮಿಯಾಗಲಿ ಅದಕ್ಕಿದೆ ಎಂದು ಹೇಳಲಾಗುವುದಿಲ್ಲ. ಅನುಭವ ಬದಲಾಯಿಸಿದಂತೆ, ಪ್ರಜ್ಞೆ ವಿಕಾಸವಾದಂತೆ ಅದು ಪರಿಣಾಮಗೊಳ್ಳುತ್ತದೆ. ಕೇವಲವಾದ ಭೂಮಾನುಭೂತಿ ಸಿದ್ಧಿಸುವವರೆಗೂ ಅದರ ವೃದ್ಧಿಗಾಗಲಿ ಪರಿವರ್ತನೆಗಾಗಲಿ ಪೂರ್ಣವಿರಾಮ ಲಭಿಸುವುದಿಲ್ಲ. ಅದು ಅನಂತ ಕಾಲವೂ ನಿರಂತರ ವಿಕಾಸಶೀಲವಾದುದು. ಅನಂತದ ಸಿದ್ಧಿಗೆ ಅಂತವೆಲ್ಲಿ? ಆದ್ದರಿಂದಲೆ ರಸಋಷಿ ಹೀಗೆ ಹೇಳುತ್ತಾನೆ:

ಯಾವ ಮತದವನಲ್ಲ,
ಎಲ್ಲ ಮತದವನು;
ಯಾವ ಪಂಥವು ಇಲ್ಲ,
ಬಹು ಪಂಥದವನು.
ಎಲ್ಲ ಬಿಡುವವನಲ್ಲ,
ಎಲ್ಲ ಹಿಡಿದವನಲ್ಲ.
ನಾನು ಉಮ್ಮರನಲ್ಲ,
ಚಾರ್ವಕನೂ ಅಲ್ಲ,
ನೀತಿಜಡನೂ ಅಲ್ಲ,
ನೀತಿಗೇಡಿಯೂ ಅಲ್ಲ.
ಬರಿ ಕನಸಿನವನಲ್ಲ,
ಬರಿ ಕೆಲಸದವನಲ್ಲ.
ಎಲ್ಲ ಬಿಡಲೂ ಬಲ್ಲೆ,
ಎಲ್ಲ ಹಿಡಿಯಲು ಬಲ್ಲೆ.
……………………..
………………………
ಎಲ್ಲ ನಶ್ವರವೆಂದು
ಇರುವುದನುಳಿವುದೇಕೆ?
ಕೆಲಹಣ್ಣು ಕಹಿಯೆಂದು
ಎಲ್ಲ ಹಳಿಯುವುದೇಕೆ?
ಕಹಿಯೆದೆಯೊಳಿಹ ಸಿಹಿಯು
ಸಿಕ್ಕಷ್ಟು ಸಿಗಲಿ|
ದುಃಖದೊಳಗಿಹ ಸಿಹಿಯು
ಸಿಕ್ಕಷ್ಟು ಸಿಗಲಿ |
ದುಃಖದೊಳಗಿಹ ಸುಖವು
ಬಂದಷ್ಟು ಬರಲಿ |
………………….
…………………..
ಗುರುದೇವನನು ಭಜಿಸಿ,
ಬೇಡವಾದುದ ತ್ಯಜಿಸಿ,
ಕೈಗೆ ಬಂದುದ ಭುಜಿಸಿ,
ಬದುಕುವಂ ಬಾ!
ಭಕ್ತಿಯಲಿ, ಶಾಂತಿಯಲಿ,
ಒಂದಿಇತು ಗೊಣಗುಡದೆ,
ನಶ್ವರದ ನಡುವೆಯಿಹ
ಶಾಶ್ವತವ ಸವಿಯುತ್ತ,
ದುಃಖಗಳ ಎದೆಯೊಳಿಹ
ಸುಖಗಳನು ಸುಲಿಯುತ್ತ
ಇಹಪರಗಳೆರಡನೂ
ಪ್ರೇಮದಿಂ ಮುತ್ತುತ್ತ
ನಲಿಯುವಂ ಬಾ!

[1]

ಯಾವ ದೇಶದ ಕವಿಯಾಗಲಿ ತನ್ನ ಜತೆಯ ಪ್ರಾಚೀನ ಸಂಸ್ಕೃತಿಯ ನೆಲದಲ್ಲಿಯೆ ಮೊಳೆತು ಬೇರುಬಿಟ್ಟು ಬೆಳೆಯುತ್ತಾನೆ. ಭಾರತೀಯನಾದ ಕವಿಗೆ ವೇದ, ಉಪನಿಷತ್ತು, ಭಗವದ್ಗೀತೆ, ಷಡ್ದರ್ಶನಗಳು, ರಾಮಾಯಣ ಮಹಾಭಾರತಾದಿ ಮಹಾಕಾವ್ಯಗಳು, ಪುರಾಣಗಳು-ಇತ್ಯಾದಿ ಭಾರತೀಯ ದರ್ಶನ ಸಾಹಿತ್ಯಗಳು ಅವನ ಸಂಸ್ಕಾರಕೋಶವನ್ನು ಸಿದ್ಧಗೊಳಿಸುವ ಭಿತ್ತಿಯಾಗಿ ಪರಿಣಮಿಸುತ್ತವೆ.

ಅಸಂಖ್ಯರೂಪಧಾರಿಯಾದ ಸಚ್ಚಿದಾನಂದದ ಬೇರೆಬೇರೆ ಮುಖಗಳ ಜೀವ, ಜಗತ್ತು ಮತ್ತು ಈಶ್ವರ. ಕವಿದರ್ಶನಕ್ಕೆ ಇವೆಲ್ಲವೂ ಸತ್ಯ; ನಿತ್ಯಸತ್ಯದ ಬೇರೆ ಬೇರೆ ಪ್ರಕಾರಗಳಾದ ಲೀಲಾಸತ್ಯ. ಜಡವು ಜೀವವಾಗಿ, ಜೀವ ಮಾನವನಾಗಿ, ಮಾನವ ದೇವನಾಗುವುದೆ ಸೃಷ್ಟಿಯ ಪರಮಗಂತವ್ಯ. ಈಶ್ವರನು ಸಗುಣನೂ ಹೌದು, ನಿರ್ಗುಣನೂ ಹೌದು. ಈಶ್ವರನ ಸಗುಣವೂ ಕ್ರಿಯಾತ್ಮಕವೂ ಆದ ಶಕ್ತಿಯೆ ಋತಚಿನ್ಮಯೀ ಜಗನ್ಮಾತೆ ಅಥವಾ ಋತಚಿತ್. ವಿಶ್ವದ ಚರಾಚರ ಸೃಷ್ಟಿಯೆಲ್ಲವೂ ಆಕೆಯ ಲೀಲಾವಿಲಾಸ. ಜಗತ್ತೆಲ್ಲವೂ ಜಗನ್ಮಾತೆಯ ರೂಪವಾದರೂ ಪ್ರಕೃತಿಯ ಹೊದಿಕೆಯಲ್ಲಿ ಅಂತರ್ಯಾಮಿಯಾಗಿರುವ ಪರಮಪುರುಷನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದೆ ಜೀವದ ಗುರಿ. ಜೀವಿಜೀವಿಗಳ ಹೃದಯದಲ್ಲಿ ಸ್ಥಿತನಾಗಿರುವ ಆ ಅಂತರತಮನಾದ ಗುರು, ‘ಜುಮಜನುಮ ಶತಕೋಟಿ ಸಂಸ್ಕಾರ ಪರಮ ಚರಮ ಸಂಸ್ಕಾರ!’ ಆತನೆ ಆತ್ಮದ ತಮಸ್ಸನ್ನು ಪರಿಹರಿಸುತ್ತಾನೆ. ಅವನಿಗೆ ಶರಣಾಗಿ ಅವನು ತೋರಿದ ದಾರಿಯಲ್ಲಿ ನಡೆದರೆ ಭಯವಿಲ್ಲ. ಆದ್ದರಿಂದ ಪೂರ್ಣ ಸಮರ್ಪಣೆಯೆ ಶಾಂತಿಯ ದಿವ್ಯಧಾಮ. ಪ್ರಾರ್ಥನೆ, ಧ್ಯಾನ, ಉದ್ಧಾರದ ಆಸಕ್ತಿ-ಇವೆಲ್ಲ ಮಾನವನನ್ನು ಸಾಕ್ಷಾತ್ಕಾರದತ್ತ ಕರೆದೊಯ್ಯುತ್ತವೆ.

ಕವಿ ಸದಾ ತತ್ತ್ವಶಿಖರಗಳಲ್ಲಿ ಮಾತ್ರ ನಿವಾಸಿಯಾಗುತ್ತಾನೆಂದು ತಿಳಿಯಬಾರದು, ಸಂಸಾರದ ಸುಖದುಃಖ ಕಷ್ಟಕಾರ್ಪಣ್ಯಗಳಲ್ಲಿಯೂ ಅವು ಪ್ರವಾಸಿಯೆ. ಆದರೆ ಅವನ ಕಾಣ್ಕೆ ಬೇರೆ. ಅನುದಿನದ ಸಂಸಾರದಲ್ಲಿ, ಹೆಣ್ಣುಗಂಡಿನ ಬಾಳಿನ ಸರಸವಿರಸಗಳಲ್ಲಿ, ಸಾಮಾಜಿಕ ಜೀವನದ ಶೋಕತಾಪಗಳಲ್ಲಿ, ಪ್ರಪಂಚದ ವಿವಿಧ ಪ್ರಕಾರವಾದ ರಾಜಕೀಯ ಘಟನೆಗಳಲ್ಲಿ ಅವನು ಭಗವಂತನ ಲೀಲಾವಿನ್ಯಾಸಗಳನ್ನೆ ಕಾಣುತ್ತಾನೆ.

ಪ್ರಕೃತಿಯಾರಾಧಾನೆಯಲ್ಲಿ ಪರಮನಾರಾಧನೆಯನ್ನು ಕಾಣುವ ಕವಿಗೆ ಪ್ರಕೃತಿ ಪರಮಾತ್ಮನ ರಸಾನಂದದ ಬೃಹತ್ ಪ್ರತಿಮೆಯಾಗುತ್ತದೆ, ಮಹತ್ ಪ್ರತಿಮೆಯಾಗುತ್ತದೆ. ಅಲ್ಲಿ ಸಕಲಾರಾಧನ ಸಾಧನ ಬೋಧನದ ರಸಸಿದ್ಧಿ ಲಭಿಸುತ್ತದೆ.

ಇಂತಹ ದರ್ಶನದಿಂದ ಸಮನ್ವಿತವಾದ ಕವಿಗೆ ಬಂಧನದ ನಾಡಿಯಲ್ಲಿ ಮುಕ್ತಿನದಿ ಹರಿವುದೂ ಋತದ ನಿಮಯದಲ್ಲಿ ಪಾಪಿಗೆ ಉದ್ಧಾರವಿರುವುದೂ ಗೋಚರವಾಗುತ್ತದೆ. ಈ ಜಗತ್ತು ಅತಿಮಾಸನದಲ್ಲಿ ಪ್ರತಿಷ್ಠಿತವಾಗಲು ಕಾಲಬೇಕು. ಈಗ ಆಗಿರುವ ಉದ್ಧಾರಕ್ಕಿಂತ ಸಹಸ್ರಪಾಲು ಆಗುವ ಉದ್ಧಾರವಿದೆ. ಆ ಉದ್ಧಾರದ ಆಸಕ್ತಿ ಚಿರಜಾಗ್ರತವಾಗಬೇಕು. “ಭ್ರಮಾಶೀಲವಾಗಿ ಪರಿಭ್ರಮಿಸುತ್ತಿರುವ ಚಿತ್ತಕ್ಕೆ ಇಂದು ಸ್ಥೈರ್ಯ, ಶಮೆ, ತುಷ್ಟಿ, ಪ್ರಸನ್ನತೆ, ಮತಿಗೌರವ, ವಿಶ್ವಪ್ರೇಮ, ಆತ್ಮಪ್ರತ್ಯಯ-ಇವು ಬೇಕು. ಆತ್ಮಶ್ರೀಗೆ ಮೊದಲನೆಯ ಸ್ಥಾನವೂ, ರಸಪೂರ್ಣವಾದ ಸಂಸ್ಕೃತಿಗೆ ಎರಡನೆಯ ಸ್ಥಾನವೂ, ಅಭ್ಯುದಯಕರವಾದ ಸಾಮಾಜಿಕ ನಾಗರಿಕತೆಗೆ ಮೂರನೆಯ ಸ್ಥಾನವೂ ಇವು ಮೂರಕ್ಕೂ ಆಧಾರವೂ ನಿವಾಸವೂ ಆಗಿ ಅತ್ಯಂತ ಅವಶ್ಯಕವಾದರೂ ಭಿತ್ತಿಸದೃಶ ಮತ್ತು ಸಾಧನರೂಪ ಮಾತ್ರವಾಗಿರುವ ರಾಜಕೀಯಕ್ಕೆ ಕೊನೆಯ ನಾಲ್ಕನೆಯ ಸ್ಥಾನವೂ ದೊರಕುವುದರಲ್ಲಿ ಸಮಷ್ಟಿಯ ಹಿತವಿದೆ.”[2] ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ ಇವುಗಳೆ ಕವಿಯ ದರ್ಶನದ ಮುಖ್ಯ ಮಂತ್ರಗಳಾಗಿವೆ.

ಮೇಲೆ ಹೇಳಿದ ಕೆಲವು ಅಭಿಪ್ರಾಯಗಳಿಗೆ ನಿದರ್ಶನರೂಪವಾಗಿವೆ, ಈಗ ವಾಚನ ಮಾಡುವ ಕವಿತೆಗಳು.

ಕವಿಗೆ ಲೋಕವೆಲ್ಲ ಗುರು. ಲೋಕಗುರುಗಳೆಲ್ಲ ಪೂಜ್ಯರೆ. ಅವ ದರ್ಶನ ಸಿದ್ಧಿಗೆ ಅವರೆಲ್ಲರೂ ದೀಕ್ಷೆ ಕೊಡುತ್ತಾರೆ.

ಮನ್ಮನೋಮಂದಿರಕೆ,
ಲೋಕಗುರುಗಳೆಲ್ಲ ಬನ್ನಿ!,
ಬನ್ನಿ, ಬನ್ನಿ, ಬನ್ನಿ!-

ತುಳಿಯೆ ನಿಮ್ಮ ಪದತಲ
ದಲದಲದಲ ಅರಳ್ಪುದೆನ್ನ
ಶಿರಃಕಮಲ ಕುಟ್ಮಲ!
ತಮೋತಿಮಿರವಳಿಯಲಲ್ಲಿ
ಪರಂಜ್ಯೋತಿ ಬೆಳಗಲಿ;
ಋತದ ಶಿವದ ಆನಂದದ
ಚಿದ್ ವಿಭೂತಿ ತೊಳಗಲಿ.

ಮನ್ಮನೋಮಂದಿರಕೆ,
ಲೋಕಗುರುಗಳೆಲ್ಲ ಬನ್ನಿ!
ಬನ್ನಿ, ಬನ್ನಿ, ಬನ್ನಿ![3]

ಕವಿಯ ಜೀವನವನ್ನು ದೇವನೆಡೆಗೆ ಆಕರ್ಷಿಸುವ ಸಾಧನಗಳಲ್ಲಿ ಮೊದಲನೆಯದೆ ನಿಸರ್ಗಸೌಂದರ್ಯ. ಅದು ಅವನನ್ನು ಪ್ರತಿಪಥದಲ್ಲಿ ಮುಂದೆ ಮುಂದೆ ಕೊಂಡೊಯ್ಯತ್ತದೆ. ‘ತಾವರೆಯ ತೇರು’ ಎಂಬ ಈ ಕವನದಲ್ಲಿ ಅದು ನಿದರ್ಶಿತವಾಗಿದೆ:

ಭಾವನೆಯ ಬಾನಿನಲಿ ಇಂದ್ರಧನುರ್ಯಾನದಲಿ
ನಿನ್ನೊಡನೆ ಕುಳಿತು ನಾ ತೇಲುತಿರುವೆ;
ಮೋಹನದ ಮುಗುಳನಗೆಯನು ಬೀರ, ಸುಂದರಿಯೆ,
ನೀನಗ್ನಿಮೇಘವನೆ ಹೋಲುತಿರುವೆ!
ನಾನೇರಿದೆತ್ತರವ ನೋಡಿ
ಚಿತ್ತ ಹಿಗ್ಗುತಿದೆ;
ಬೀಳುವೆನೊ ಎಂಬಳುಕು ಮೂಡಿ
ಮತ್ತೆ ಕುಗ್ಗುತಿದೆ.
ನಿನ್ನ ಮೊಗದಲಿ ಮಾಸದಿಹ ಮುಗುಳುನಗೆಯೊಂದು
ಸರ್ವದಾ ನವಿಲಂತೆ ನಲಿಯುತಿಹುದು.
ನಿನ್ನ ಮೌನದ ಅರ್ಥವೇನಿಹುದೊ ಅದರಿಯೆ
ನಮ್ಮ ತಾವರೆ ತೇರು ತೇಲುತಿಹುದು!
ನೀನಂದು ಕನಕ ರಥವನು ತಂದು ಬಾ ಎಂದು
ಕರೆದಂದು ನಾನು ದೂಳಾಡುತಿದ್ದೆ.

ಹೊಂಬಿಸಲು ಹೊಮ್ಮಿತ್ತು, ಖಗಗಾನ ಚಿಮ್ಮಿತ್ತು,
ಕಣ್ದೆರೆದುಕೊಂಡಿತ್ತು ಜಗದ ನಿದ್ದೆ!
ತೇರಿನಾ ಬಣ್ಣವು ಕಂಡೆ
ಮೊದಲು ಮರುಳಾದೆ;
ಹುಡುಗಾಟ ಎಂದಂದುಕೊಂಡೆ
ಅದನೇರಿ ಹೋದೆ!
ಎಲ್ಲಿಗೊಯ್ಯುವೆ ಎಂದು ನಾ ಕೇಳಲಿಲ್ಲಂದು,
ಕೇಳಿದರೆ ನೀನು ನುಡಿಯದಿಹೆ ಇಂದು.
ಬರಿದೆ ಬೆರಳೆತ್ತಿ ತೋರುವೆ; ಮುಂದೆ  ನೋಡಿದರೆ
ಹಬ್ಬಿಹುದು ನೀಲಿಮೆಯ ಶೂನ್ಯಸಿಂಧು!

ಶಶಿ ಸೂರ್ಯ ಗ್ರಹ ನಿಚಯ ತಾರಾಖಚಿತ ನಭದಿ
ಹಾರುತಿದೆ ನಮ್ಮೀ ಕಲಾವಿಮಾನ;
ಮುಂದೆನಿತು ದೂರಕೋ? ಎಂದಾವ ತೀರಕೋ?
ತೇಲುತಿಹುದೀ ನಿನ್ನ ಕಮಲಯಾನ!
ಸಂಶಯದಿ ಕಂಪಿಸುವುದೊಮ್ಮೆ
ನನ್ನಾತ್ಮಪಕ್ಷಿ;
ನಿನ್ನಯ ಮುಗುಳ್ನಗೆಯ ನೆಮ್ಮೆ
ನನಗೆ ಗುರುಸಾಕ್ಷಿ!
ಹಗಲಿರುಳು ಬೆಳಗು ಬೈಗುಗಳುರುಳಿ ಸಾಗುತಿವೆ
ಗಗನದಲಿ ರಂಗೆರಚಿ ಬಂದು ನಿಂದು!
ನಿನ್ನ ಸದ್ದಿಲಿ ಸನ್ನೆಯಲಿ ಮುಂದೆ ನೋಡಿದರೆ
ಹಬ್ಬಿಹುದು ನೀಲಿಮೆಯ ಶೂನ್ಯಸಿಂಧು![4]

ದೇವನೆಡೆಗೆ ಸರಿಯುವ ಜೀವದ ಪಯಣ ಎಡರುತೊಡರುಗಳಿಂದ ತುಂಬಿರುತ್ತದೆ. ಆಗ ಕವಿ ಆರ್ತನಾಗಿ ಪ್ರಾರ್ಥಿಸುತ್ತಾನೆ:

ಸೋತು ಬಂದೆನೊ, ಗುರುವೆ, ನಿನ್ನ ಬಳಿಗೆ;
ಸೋತ ಜೀವವನಾತುಕೋ ಒಂದು ಗಳಿಗೆ!

ಅರಿಯ ಹಿರಿಸರಳು ಮರುಮೊನೆಗೊಂಡ ಗಾಯದಲಿ
ಸುರಿಯುತಿದೆ ತೊರೆಯಂತೆ ಬಿಸಿನೆತ್ತರು;
ಗಿರುಗಿರನೆ ಗಾಳಿಯಲಿ ತಿರುಗುತಿಹ ಸರಳಗರಿ
ಕೊರೆಯುತಿಹುದೆದೆಯಲ್ಲಿ ಉರಿಹೊತ್ತಿಸಿ!

ಎತ್ತ ನೋಡಿದರೆನಗೆ ಆಶ್ರಯವೆ ತೋರದಿದೆ;
ಇತ್ತು ಕೃಪೆಯಾಶ್ರಮದಿ ತಾವನೆನಗೆ
ಹೆತ್ತ ಕಂದನ ಬಗೆಯ ಹೊತ್ತ ದುಗುಡವ ಹರಿಸಿ
ಮತ್ತೆ ನನ್ನನು ಕಳುಹೊ ರಣರಂಗಕೆ!

ಗೌರವ ರಣಾಂಗಣದಿನಳುಕಿ ಬಂದವನಲ್ಲ,
ಪೌರುಷ ವಿಹೀನತೆಯ ಪಾಪಿಯಲ್ಲ;
ಘೋರಸಂಗ್ರಾಮದಿಂ ಬಿಡುತೆ ಬೇಡುವನಲ್ಲ,
ವೈರಿಯನು ಗೆಲ್ಲದೈತರುವನಲ್ಲ![5]

ಆರ್ತನ ಪ್ರಾರ್ಥನೆ ‘ನಾವಿಕ’ ಎಂಬ ಕವನದಲ್ಲಿ ಮೈವೆತ್ತಿದೆ.

ಕೈಬಿಟ್ಟರೆ ನೀ ಗತಿಯಾರೈ?
ಕಿರುದೋಣಿಯಿದು ಮುಳುಗದೇನೈ?
ಮೇರೆಯರಿಯದ ಕಡಲಿದು ಗುರುವೆ,
ಭೋರೆಂದಲೆಗಳು ಏಳುತಿವೆ;
ನೊರೆನೊರೆಯಾಗಿಹ ತೆರೆತೆರೆಯಲ್ಲಿ
ಮೃತ್ಯುವು ನೃತ್ಯವ ಮಾಡುತಿದೆ!
ಉತ್ತರಮುಖಿಯು ಪುಡಿಪುಡಿಯಾಗಿದೆ!
ಗಾಳಿಯು!ಮೋಡವು!ಮಿಂಚುತಿದೆ!
ಕತ್ತಲು ಕವಿದಿದೆ, ಚಿತ್ತವದಳುಕಿದೆ,
ಕಾಣದು ಕಣ್ಣಿಗೆ ಧ್ರುವತಾರೆ!

ಹರಿದಿದೆ ಕಟ್ಟು, ಮುರಿದಿದೆ ಹುಟ್ಟು,
ಬಳಲಿಹೆ, ಬೆದರಿಹೆ ಕಂಗೆಟ್ಟು!
ಸೋದರರಿಬರು ಮುಳುಗಿದ ಚಿಹ್ನೆಯ
ಬರಿಯ ದೋಣಿಗಳು ತೋರುತಿವೆ![6]

ಕವಿಯ ಧ್ಯೇಯ ‘ಭಗವತ್ ಸ್ವರೂಪವನ್ನು ಅನುಸಂಧಾನಮಾಡುವುದು.

ನಿನ್ನ ಬಾಂದಳದಂತೆ
ನನ್ನ ಮನವಿರಲಿ;
ನಿನ್ನ ಸಾಗರದಂತೆ
ನನ್ನ ಎದೆಯಿರಲಿ.
ನಿನ್ನ ಸುಗ್ಗಿಯ ತೆರದಿ
ನನ್ನ ಸುಗ್ಗಿಯ ತೆರದಿ
ನನ್ನ ಸೊಬಗಿರಲಿ;
ನಿನ್ನ ಲೀಲೆಯ ತೆರದಿ
ನನ್ನ ಬಾಳಿರಲಿ.

ನಿನ್ನ ಬಲವಿರುವಂತೆ
ನನ್ನ ಬಲವಿರಲಿ;
ನಿನ್ನ ತಿಳಿವಿರುವಂತೆ
ನನ್ನ ತಿಳಿವಿರಲಿ.

ನಿನ್ನೊಲ್ಮೆಯಿಂದದಲಿ
ನನ್ನೊಲ್ಮೆಯಿರಲಿ,
ನೀನೆ ನನಗಿರಲಿ.

ನಿನ್ನಾತ್ಮದಾನಂದ
ನನ್ನದಾಗಿರಲಿ;
ನಿನ್ನೊಳಿರುವಾ ಶಾಂತಿ
ನನ್ನೆದೆಗೆ ಬರಲಿ.[7]

ಜಿಜ್ಞಾಸುವಾಗಿ ಮುಂದಿನ ಜೀವನದ ದಾರಿ ಯಾವುದೆಂದು ಚಿಂತಿಸುವುದು.

ಮೊದಲನರಿಯದಾದಿಯಿಂದ
ಆದಿ ತಿಮಿರದುದರದಿಂದ
ಮೂಡಿ ಬಂದೆನು:

ಯಾರ ಬಯಕೆ ಎಂಬುದರಿಯೆ.
ಏಕೆ ಎಲ್ಲಿಗೆಂಬುದರಿಯೆ.
ಮುಂದೆ ಹರಿಯುವೆ!

ಮಲಗಿ ಕಲ್ಲು ಮಣ್ಣುಗಳಲಿ
ಜಡ ಸುಷುಪ್ತಿಯಲ್ಲಿ ಬಳಲಿ
ಯುಗಗಳಾದುವು!
ಸಸ್ಯಗಳಲಿ ಕನಸ ಕಂಡು
ಹುಟ್ಟು ಬಾಳು ಸಾವನುಂಡು
ಕಲ್ಪ ಹೋದುವು!

ಮರಳಿ ಮೈಯ ತಿಳಿದು ತಿರುಗಿ
ಮಿಗಗಳಂತೆ ಮೂಡಿ ಮರುಗಿ
ಬಹಳ ಬಳಲಿದೆ.
ಇಂದು ಮನುಜ ಜನ್ಮದಲ್ಲಿ
ಬಂದು ಹಾಡುತಿರುವೆನಿಲ್ಲಿ!
ಮುಂದಕೆಲ್ಲಿಗೆ?[8]

ಜ್ಞಾನಪಥದಲ್ಲಿ ಮುಂಬರಿದಾಗ ಪೂರ್ಣಸಮರ್ಪಣೆ.

ನಿನ್ನ ಪದಕಮಲದಲಿ ಮನೆ ಮಾಡಿರುವ ನನಗೆ
ಸ್ಥಾನ ಸ್ಥಾನ ಎಲ್ಲವಾಸ್ಥಾನ!
ಅಲಿಲ್ಲಿ ಎನಲೇನು? ನೀನೆ ಅಡಿಯಿಡುವಲ್ಲಿ
ದಿವ್ಯ ಪದವಿಗಳಲ್ತೆ ಮಾನಾವಮಾನ?

ಬೆಟ್ಟಗಳನೇರುವೆಯೊ? ಕಣಿವೆಗಳನಿಳಿಯುವೆಯೊ?
ಕೆಸರುಸುಬುಬಳೊಳಾಡಿ ವಿಹರಿಪೆಯೊ ನೀನು?
ಇಲ್ಲಿ ಸಂಚರಿಸಲ್ಲಿ ಚರಿಸದಿರೆನಲು ನನಗೆ
ನಿನ್ನ ಲೀಲೆಗೆ ಗೆರೆಯನೆಳೆವ ಹಕ್ಕೇನು?

ಎಲ್ಲಿ ನೀ ಪದವಿಡುವೆ ಅಲ್ಲೆ ಉತ್ತಮ ಪದವಿ;
ನಿನ್ನ ಪದವಲ್ಲದಾ ಪದವಿಯೂ ಹೀನ;
ನಿನ್ನಡಿಯ ಪುಡಿಯ ಬಡತನವೆ ಕಡವರ ಕಣಾ;
ನಿನ್ನಡಿಗೆ ದೂರವಿರೆ ಧನಿಕನೂ ದೀನ![9]

ಜೀವನದ ಪರಮಗುರಿಯನ್ನು ಕುರಿತ ದರ್ಶನಾತ್ಮಕ ವಿವರಣೆ ‘ಹಾರೈಸು’ ಎಂಬ ಕವನದಲ್ಲಿ ಮೂಡಿದೆ.

ಹಾರೈಸು ಹಾರೈಸು, ಜೀವ:
ಹಾರೈಸು ನೀನಾಗುವನ್ನೆಗಂ ದೇವ!

ಹಾರೈಸಿ ಹಾರೈಸಿ ಹಾರೈಸಿ
ಪ್ರಾಣಿಗುದಿಸಿತು ಮನೋಜ್ಞಾನ;
ಹಾರೈಸಿ ಹಾರೈಸಿ ಹಾರೈಸಿ
ಸಿದ್ಧಿಯಾಯ್ತಾತ್ಮ ವಿಜ್ಞಾನ!

ಹಾರೈಸಿ ಹಾರೈಸಿ ಹಾರೈಸಿ
ಹಸುರನುಸುರ್ದುವೊ ಕಲ್ಲುಮಣ್ಣು;

ಹಾರೈಸಿ ಹಾರೈಸಿ ಹಾರೈಸಿ
ಕುರುಡು ಜಡಕುದಿಸಿತಯ್ ಕಣ್ಣು!

ಹಾರೈಸಿ ಹಾರೈಸಿ ಹಾರೈಸಿ
ಚಿತ್ ಉರುಳ್ದುದು ಸುತ್ತಿಸುರಳಿ;
ಹಾರೈಸಿ ಹಾರೈಸಿ ಹಾರೈಸಿ
ಮೃತ್ ಅರಳ್ವುದೊ ಅತ್ತೆ ಮರಳಿ![10]

ಇಂತಹ ಜೀವನದೃಷ್ಟಿಗೆ ಪೂರ್ಣತೆಯಿಂದಲೆ ಪರಮಸುಖವೆಂದು ಗೋಚರಿಸುತ್ತದೆ.

ಬೇಸರದ ಬಂದಿಳಿಕೆ ಮನದ ಮಾವಿನ ಮರಕೆ
ಹಿಡಿದದನು ತಿರುಗಿಸುವ ಮೊದಲೆ ಬೇವಿನತನಕೆ
ನಿನ್ನ ಜೀವವನು ದುಮುಕಿಸು ಜಗದ ಜೀವನಕೆ.
ತೊರೆಯಲ್ಲಿ ತೆರೆಯಾಗಿ ಹರಿಯಲದು ಸಾಗರಕೆ!
ಪಾಲ್ಗೊಂಡು ಬೇರೆ ನಿಲ್ಲುವ ನೀರ್ಗೆ ಪರಮಗತಿ
ಪಾಚಿ; ಹೊಳೆಗಿಳಿಯಲ್ಕೆ ತಾನೆ ಸಂಜೀವಸುಧೆ;
ಕೋಟಿ ವೀಚಿಗಳೊಡನೆ ಕುಣಿಯುವಾನಂದವಿದೆ;
ತನ್ನಲ್ಪ ಗಾನಕ್ಕೆ ಕಲ್ಲೋಲ ಸರ್ವ ರುತಿ
ಶ್ರುತಿಯಾಗುವೊಂದತುಲ ಸಂಘಕೃಪೆ ಜಡತನಂ
ಸ್ವಾರ್ಥದ ತಮೋನಿದ್ರೆ: ತಳ್ಳಿ ತೊರೆದೆದ್ದೇಳು.
ಜೀವೋತ್ಸವದ ತೇರ್ಗೆ ಗಾಲಿಯಾದೊಡೆ ಬಾಳು
ಸಾರ್ಥಕಂ, ಸುಂದರಂ, ಮಧುರ ಚಿರನೂತನಂ
ನೀರಸತೆಗಿಂ ಪಾಪಮಿಲ್ಲ. ರಸಕೆಣೆಯಾಗಿ
ಪುಣ್ಯಮಿಲ್ಗೆನೆಪೂರ್ಣಯೋಗಿಯೆ ಪರಮಭೋಗಿ![11]

ಕವಿಯ ದರ್ಶನ ಸಂಸಾರವನ್ನೂ ಜಗನ್ಮಾತೆಯ ಲೀಲೆಯೆಂದು ಕಾಣುತ್ತದೆ.

ಜಗದೀಶ್ವರನೆ ವಿಶ್ವ ಸಂಸಾರಿಯಾಗಿರಲು
ಸಂಸಾರ ಪಾಶವೆಂದೆನಬೇಡವೈ.
ಹುಟ್ಟು ಹಾಕಲು ನಿನಗೆ ಬಾರದಿರೆ, ಕೂಡದಿರೆ,
ಬರಿದೆ ನೀಂ ದೋಣಿಯನು ಶಪಿಸಬೇಡೈ!

ಮಾಡುವುದನೆಲ್ಲ ತನ್ನಾತ್ಮ ಸಾಧನೆಯೆಂದು
ಕರ್ಮಗೈ; ಅದುವೆ ಪೂಜೆಯ ಮರ್ಮವೈ.
ಶಿವನ ಕಾರ್ಯದೊಳಾವು ಶಿರಬಾಗಿ ನೆರವಾಗೆ
ನಮಗದುವೆ ಪರಮ ಪಾವನ ಧರ್ಮವೈ.

ಹಸುಳೆಯನು ಮೀಯಿಸಲು ಹರನಿಗಭಿಷೇಕವದು;
ಶಿಶುವಿಗೂಡಿಸೆ ಶಿವಗೆ ನೈವೇದ್ಯವೈ!
ಕಂದನಲಿ ಶಿವನ ಕಾಣುವ ಬಂಧನವೆ ಮುಕ್ತಿ;
ತಪಕೊಲ್ಲದುದು ತಾಯ್ತನಕೆ ಸಾಧ್ಯವೈ![12]

ಈ ಪೂರ್ಣದೃಷ್ಟಿಯ ದರ್ಶನ ‘ಋತಚಿನ್ಮಯೀ ಜಗನ್ಮಾತೆಗೆ’ ಎಂಬ ಕವನದಲ್ಲಿ ನಿದರ್ಶಿತವಾಗಿದೆ.

ಓಂ ಸಚ್ಚಿದಾನಂದ ತ್ರಿತ್ವಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ, ಭವದ ಬಿತ್ತಾದೆ, ಋತದ ಚಿತ್ತಾದೆ ನೀ;
ಇಳಿದು ಬಾ ಇಳೆಗೆ, ತುಂಬಿ ತಾ ಬೆಳಗೆ ಜೀವಕೇಂದ್ರದಲ್ಲಿ;
ಮತ್ತೆ ಮುಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥಿವಿಯಲ್ಲಿ.

ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡಸುತಿಹ ಶಕ್ತಿಯೆ,
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ,
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ,
ನಿನ್ನ ಅವತಾರವೆನ್ನ ಉದ್ಧಾರ:ಬಾ, ದಿವ್ಯ ಮುಕ್ತಿಯೆ.

ಅವಿಭಕ್ತವಾಗಿ ಸುವಿಭಕ್ತದಂತೆ ತೋರುತಿರುವ ಮಾಯೆ,
ಪ್ರಕೃತಿ ಪುಷರಿಗೆ ನಿತ್ಯಜನ್ಮವನು ನೀಡುತಿರುವ ತಾಯೆ,
ಕಾಲದೇಶ ಆಕಾಶಕೋಶಗಳನೂದುತಿರುವ ಛಾಯೆ,
ಅನೃತದಲ್ಲಿ ಋತವಾಗಿ ಸಂಭವಿಸು, ಸಾವು ನೋವು ಸಾಯೆ.

ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆಯೆಲ್ಲವಾದೆ.
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ.
ಎನಿತು ಕರೆದರೂ ಓಕೊಳ್ಳದಿರುವ ಅಚಿನ್ನಿದ್ರೆಯಾದೆ:
ಬೆಳಗಿ ನನ್ನಾತ್ಮಕಿಳಿದು ಬಾ, ತಾಯಿ, ನೀನೆ ಬ್ರಹ್ಮಬೋಧೆ.

ಮರೆವು ನೀನೆ ಮೇಣರಿವು ನೀನೆ ಮೇಣ್ ಗುರುವು ನೀನೆ, ದೇವಿ.
ರೋಗಶಕ್ತಿ ನೀನೌಷಧಿಯ ಶಕ್ತಿ; ಕೊಲುವೆ ಕಾವೆಯೋವಿ.
ಮಾವಿನಲ್ಲಿ ಸಿಹಿ, ಬೇವಿನಲ್ಲಿ ಕಹಿ; ನಿನ್ನ ಇಚ್ಛೆಯಂತೆ
ಗಾಳಿ ಸೇರಿ ನೀರಾಗಿ ತೋರಲೀ ಪ್ರಕೃತಿ ನಿಯಮವಂತೆ!

ಹುಲ್ಲು ಬೆಳೆವಲ್ಲಿ, ನೆಲ್ಲು ಮೊಳೆವಲ್ಲಿ, ಕಾಯಿ ಪಣ್ಣುವಲ್ಲಿ,
ಗೂಡುಕಟ್ಟಿ ತಾಯ್ ಮೊಟ್ಟೆಯಿಟ್ಟು ಮರಿಮಾಡಿ ಸಲಹುವಲ್ಲಿ,
ಮಮತೆಯಂತೆ ಮೇಣ್ ಕಾಮದಂತೆ ಮೇಣ್ ಪ್ರೇಮಭಾವದಲ್ಲಿ
ನಿನ್ನ ಚಿಚ್ಛಕ್ತಿ ತನ್ನ ನಿತ್ಯಸದ್ ರಸವ ಸವಿವುದಿಲ್ಲಿ!

ಏಳು ಲೋಕಗಳನಿಳಿದು ದುಮುಕಿ ಜಡವಾಗಿ ಕಡೆಗೆ ನಿಂದೆ;
ಜಡದ ನಡುವೆ ಜೀವವನು ಕಡೆದೆ ಚಿತ್ತಪಶ್ಯಕ್ತಿಯೆಂದೆ;
ಜೀವದಿಂದೆ ಮನಸಾಗುತರಳಿ ಪರಿಣಾಮ ಪಡೆದು ಬಂದೆ;
ಮಾನವ ಮೀರ್ದ ವಿಜ್ಞಾನವನು ತೋರೆ ತೇರನೇರು ಇಂದೆ.

ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮಿ ನೀ ಚತುರ್ಮುಖನ ರಾಣಿ;
ದಿವ್ಯವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ!

ಮೃತ್ಯುರೂಪಿ ನೀನಮೃತರೂಪಿ ನೀನಖಿಲ ಜನ್ಮದಾತೆ;
ಪರಾಪ್ರಕೃತಿ ನೀ ನಿನ್ನ ಮಾಯೆಯಲಿ ಸಕಲ ಜೀವಭೂತೆ.
ನಿನ್ನ ಕೃಪೆಯಿಲ್ಲದಿದ್ದರೆಮಗೆಲ್ಲಿ ಮುಕ್ತಿ, ಜಗನ್ನಾಥೆ?
ನಿನ್ನ ಋತಚಿತ್ತನೆಮಗೆ ಕೃಪೆಯಿತ್ತು ಕಾಯಿ, ದಿವ್ಯಮಾತೆ.

ಹೃದಯಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ!
ಮನೋದ್ವಾರ ತಾ ಬಿರಿಯೆ ಕರೆವೆ, ಜಗದಂಬೆ, ಬಾ ಇಳಿದು ಬಾ!
ಅಗ್ನಿಹಂಸ ಗರಿಗೆದರೆ ಕರೆವೆ, ಬಾ ತಾಯಿ, ಬಾ, ಇಳಿದು ಬಾ!
ಚೈತ್ಯಪುರುಷ ಯಜ್ಞಕ್ಕೆ ನೀನೆ ಅಧ್ವುರ್ಯು ಬಾ, ಇಳಿದು ಬಾ!
ಓಂ ಶಾಂತಿಃ ಶಾಂತಿಃ ಶಾಂತಿಃ[13]

ಇಂತಹ ಪೂರ್ಣದೃಷ್ಟಿಯಿಂದ ದೀಪ್ತವಾದ ಕವಿಚೇತನ ಸರ್ವನಾಶದಲ್ಲಿಯೂ ಆಶಾವಾದಿ. ಅದಕ್ಕೆ ಅಧೈರ್ಯ, ಭಯ, ಹತಾಶೆಎಂಬುದಿಲ್ಲ. ಪಾಂಚಜನ್ಯದಲ್ಲಿರುವ ಮಲ್ಲಗೀತೆ; ಎಂಬ ಕವನ ದೃಷ್ಟಿಯಿಂದ ಪ್ರತಿನಿಧಿಸುತ್ತದೆ.

ಒಳ್ಳಿತಾಗುವುದೆಲ್ಲಬೇವು ತುದಿಯಲಿ ಬೆಲ್ಲ!
ಮುಂದೆ ನಡೆ, ತೀರ್ಥವಿಹುದೆಲ್ಲ ಹಾದಿಗಳು ಕೂಡುವೆಡೆಯಲ್ಲಿ!
ಬೆಳ್ಳಗಿರೆ ಹಾಲಲ್ಲ; ಬಲ್ಲವನೆ ತಾ ಬಲ್ಲ;
ಕೇಳಯ್ಯ ನಾನೊಬ್ಬ ಮಲ್ಲನೀ ಜೀವನದ ಗರಡಿಯಲ್ಲಿ

ಕಾವಿಯೋ ಖಾದಿಯೋ ಅಂತವೋ ಆದಿಯೋ?
ಯಾವುದೋ ಹಾದಿಯೊಂದನು ಹಿಡಿದು ನಡೆಯಲಿದ್ದೆಡೆಯುಎ ಸಿದ್ಧಿ!
ಎಲ್ಲ ನದಿಗಳು ತುದಿಗೆ ಜಾರುವುವು ಜಲನಿಧಿಗೆ
ಎಂಬ ತತ್ತ್ವವ ತಿಳಿದು ಸಮತೆಯಲಿ ಸಾಗುವುದೆ ಯೋಗಬುದ್ಧಿ!

ಸೋದರನೆ ಬಿಸಿಲಿಹುದೆ? ಹಾದಿಯಲಿ ಕೆಸರಿಹುದೆ?
ಹೊರೆ ಭಾರವಾಗಿದೆಯೆ? ನೆರೆಯ ಕರೆದವನ ಕೈಗದನು ನೀಡು.
ನಿದ್ದೆಗಳೆದಾ ವೇಳೆ ಮತ್ತೆ ಬೆನ್ನಿನ ಮೇಲೆ
ಹೊತ್ತು ನಡೆ ಕರ್ತವ್ಯವನು; ಮರಳಿ ಬಳಲಿದರೆ ನಿದ್ದೆಮಾಡು!

ನೆರಮೀವ ಮಿತ್ರನೈ, ಜೊತೆ ದುಡಿವ ಪುತ್ರನೈ,
ಯಜಮಾನನಿಗೆ ನೀನು ಹೊರೆಹೊರುವ ಕತ್ತೆಯೊಲು ದಾಸನಲ್ಲ!
ನಿನ್ನ ಸಾಹಸವೆಲ್ಲ ಅವನದಲ್ಲದೆ ಇಲ್ಲ;
ಗುಡಿಯ ಕಟ್ಟುವರೂ ಕಡೆಗೆ ದೇವರಹರಿದಕೆ ಮೋಸವಿಲ್ಲ!

ನಾಕ ನರಕಗಳೆಲ್ಲ ಪಾಪ ಪುಣ್ಯಗಳೆಲ್ಲ
ನಮ್ಮಾಶೆ ಭಯಗಳಲಿ ನಿಂತಿಹವು ತಮಗಿರದ ಕಾಲನೂರಿ!
ಒಂದು ಕಲ್ಲನು ಕಡೆದೆ; ಏನೊ ತಪ್ಪಿದೆ; ಒಡೆದೆ!
ಬಿಸುಡದನು ಶಿಲ್ಪಿ; ಮತ್ತೊಮ್ಮೆ ಯತ್ಮಗೈಯದುವೆ ದಾರಿ!

ತಪ್ಪಿದರೆ ಏನೊರ್ಮೆ? ಅನುಭವಕೆ ಆದೆ ಪೆರ್ಮೆ
ತಪ್ಪಿದರೆ ತಪ್ಪಿಲ್ಲ; ತಪ್ಪಿನೊಳಳುಕಿ ನಿಲ್ಲಲದುವೆ ಪಾಪ!
ಬೀಳುವುದು ಹರಿವ ಹೊಳೆ; ಅದಕಿಹುದೆ ಕೊಳದ ಕೊಳೆ?
ನೀರುನಿಲ್ಲದೆ ಹರಿಯೆ ನಿರ್ಮಲದ ಗಂಗೆ, ನಿಲೆ ಮಲದ ಕೂಪ?

ಕಡಲ ಕಡೆಯಲು ಬೆದರೆ ನಿನಗೆ ಮರಣವೆ ಮದಿರೆ!
ಕಡಲ ಕಡೆ; ಸುಧೆಯ ಕುಡಿ: ಹರಿಹರರ ಮೀರಿ ಚಿರಜೀವಿಯಾಗು!
ನಂಜುದಿಸಲೇನು ಗತಿ?-” ಅಂಜುವರೆ ಹ್ರಸ್ವಮತಿ?
ಅವನಿರುವುದದೆ ಕೆಲಸಕಾಗಿ; ನಂಜುಂಡನನು ಕರೆದು ಕೂಗು!

ಮುನ್ನೇಕೆ ಬಂದೆಯೋ ಇನ್ನಾವ ಮುಂದೆಯೋ?
ಮೂಲಚೂಲದಲಿ ಕಾಲಹರಣಣವ ಮಾಡಲಿಹುದೆ ಹೊತ್ತು?
ಯಾತ್ರೆಗೈತಂದಿರುವೆ; ಹೊರೆ ಹೊತ್ತು ನೊಂದಿರುವೆ;
ನೋಡಿದರೆ ಹಾದಿಯನು ಗುರಿ ದೂರವೆಂಬುದೂ ನಿನಗೆ ಗೊತ್ತು.

ಇಂತಿರಲು ವಾದದಲಿ, ತಾರ್ಕಿಕರ ಮೋದದಲಿ,
ನನ್ನಿಯನು ಮುಟ್ಟಿನೋಡದೆ ಮಾತಿನೊಳೆ ಕಟ್ಟುವವರ ಕೂಡೆ
ಹೊತ್ತು ಕಳೆಯುವುದೇಕೆ? ಸಾಧಕನೆ, ಬಲು ಜೋಕೆ!
ಮಾಯೆಗಿಮ್ಮಡಿಮಾಯೆ ವಾದವೆಂಬುವ ಮಾಯೆ, ತಿಳಿದುನಮೋಡೆ!

ಬರಿಯ ನಂಬುಗೆ ಬೇಡ ಬರಿಯ ಸಂಶಯ ಬೇಡ,
ಹಿಂದನೂ ತೊರೆಯದೆಯೆ, ಇಂದನೂ ಮರೆಯದೆಯೆ ತೆರಳು ಮುಂದೆ,
ಅವರಿವರ ಮತವಿರಲಿ, ನನ್ನ ಪಥ ನನಗಿರಲಿ
ಎಂದದನು ಕಂಡುಕೊಳ್ವನೆ ಜಾಣನುಳಿದವರು ಕುರಿಯ ಮಂದೆ.

ಕಣ್ ಮುಚ್ಚಿ ನಡೆಯದಿರು, ಹೃದಯವನು ಕಡಿಯದಿರು;
ಕಾಶಿಯಲಿ ನೀನರಿವೆ ಯಾತ್ರೆಯೇ ತೀರ್ಥಕಿಂ ಶ್ರೇಷ್ಠವೆಂದು,
ಯಾತ್ರೆಗಾಗಿಯೆ ಕ್ಷೇತ್ರ; ಇದು ಸತ್ಯತಮ ಸೂತ್ರ,
ಸಾಧಕನಗೆ ತಿಳಿಯುವುದು ತುದಿಯಲ್ಲಿ ಸಾಧನೆಯೆ ಸಿದ್ಧಿಯೆಂದು!

ಅದರಿಂದೆ ದಾರಿಯೆಡೆ ಚಲುವಿರಲು ನೋಡಿ ನಡೆ;
ಗಾನವಿರೆ ಆಲೈಸಯ, ಕಲೆಯಿರಲು ಓಲೈಸಯ ಸಡ್ಡೆಯಿಂದೆ,
ಮೂಡೆ ನೇಸರು ನೋಡು, ನಾಡ ಬಣ್ಣಿಸಿ ಹಾಡು,
ಹಾಡಿ ಮುದವನು ಹೀರಿ, ಜನಕೆ ಹರುಷವ ಬೀರಿ, ತೇಲು ಮುಂದೆ!

ಹಾಡು, ಗೆಳೆಯನೆ, ಹಾಡು! ಹಾಡಿನಿಂದಲೆ ನಾಡು
ಕಣ್ದೆರೆದು ನಿಚ್ಚುದಿಸಿ ಕೆಚ್ಚಿನಿಂ ನಿನ್ನ ಹಿಂಬಾಲಿಪಂತೆ!
ಹಾಡೆ ಬಾಳಿಗೆ ಭಕ್ತಿ, ಹಾಡೆ ಜೀವಕೆ ಶಕ್ತಿ!
ಹಾಡು, ಜನ್ಮದ ಭಾರವಳಿದು ಕರ್ಮದ ಹೊರೆಯು ಕರಗುವಂತೆ!

ದಾರಿಯಲಿ ಕೊಳದ ಬಳಿ ತೆರೆಗಳಲಿ ಮಿಂದು ನಲಿ;
ತಿಳಿನೀರನೀಂಟಿ ತಂಗಾಳಿಯಲಿ ಮೈಯೊಡ್ಡಿ ಕಳೆ ದಣಿವನು.
ಹೊಂದಾವರೆಯ ಕೊಯ್ದು ಚಂದದಿಂದಲಿ ನೆಯ್ದು
ನಿನ್ನೊಲ್ಮೆಗಣ್ಗದನು ಮುಡಿಸಿ ಮುದ್ದಿಸಿ ನಲಿಸಿ ಪಡೆ ತಣಿವನು.

ಹಾದಿಯಲಿ ಹಳ್ಳವಿದೆ, ಮುಳ್ಳಿಡಿದ ಕೊಳ್ಲವಿದೆ,
ಎಂದಳುಕಿ ಹಿಂದೆಗೆಯದಿರು; ಮುಂದೆ ತೋರುವುದು ಹೂದೋಟವು!
ಯಾತ್ರಿಕರು ನಿನ್ನಂತೆಹೋದಹರಿಹರು ಮುಂತೆ;
ಹುಡುಕವರ ಹೆಜ್ಜೆಯನು: ಕಾಣುವುದು ನೆಚ್ಚಿನಾ ಸವಿನೋಟವು!

ಕತ್ತಲೆಯ ಕವಿದು ಬರೆ ಬಿತ್ತರಿಸಿ ಕಣ್ಣು ತೆರೆ;
ರಂಜಿಪುದು ಮುಂದೆ ತೆರಳಿದ ಮಲ್ಲರಾಂತಿರುವ ದಿವ್ಯಜ್ಯೋತಿ!
ಮೇಣವರ ಕೂಗಿ ಕರೆ ಕೇಳಿಸಲು ನಿನ್ನ ಮೊರೆ
ನಿಲ್ಲುವರು; ಹಿಂದಿರುವ ಸೋದರರ ಕರೆದೊಯ್ವುದರ ನೀತಿ!

ನಿಚ್ಚಿರಲಿ! ಕೆಚ್ಚಿರಲಿ! ಮುಂಬರಿವ ಹುಚ್ಚಿರಲಿ!
ಮುಂದುವರಿವುದೆ ಬಾಳು; ಹಿಂದೆ ಸರಿವುದೆ ಸಾವು, ಆತ್ಮಹತ್ಯ!
ಹೋರುವುದೆ ಚೈತ್ಯ! ಸುಮ್ಮನಿರೆ ಜಡಶೂನ್ಯ!
ತುದಿಯ ಗುರಿ ಶಾಂತಿ ಎನೆ ಬರಿನಿದ್ದೆಯಲ್ಲವುದು ಸತ್ಯ ಸತ್ಯ!

ಎದೆಯ ಕೊರೆಯುವ ಕೀಟ ಸಂದೇಹದೊಡನಾಟ;
ಸಕ್ಕರೆಯು ಸಿಹಿಯೋ ಕಹಿಯೋ ತಿಂದು ನೋಡದೆಯೆ ತಿಳಿವುದೆಂತು?
ಹಿರಿಯರುಭವ ಸಿಹಿಯು. ನಿನಗೊಬ್ಬನಿಗೆ ಕಹಿಯು?
ಒಲಿಯದುಳಿವುದಕಿಂತಲೂ ಒಲಿದಳಿವುದೆ ಮೇಲಲ್ತೆ, ಜಂತು?

ಮುಂದೆ ಬರಿ ಸೊನ್ನೆಯಿರೆ?” ಮರುಳೆ, ಹಾಗೆನ್ನುವರೆ?
ಹಿಂದೆ ಬರಿಸೊನ್ನೆ, ಮುಂದೆಯು ಸೊನ್ನೆ, ನೀಂ ಮಾತ್ರ ಸೊನ್ನೆಯಲ್ಲ?
ಹೇಡಿಗಳ ವಾದವಿದು, ಕುಮತಿಗಳ ಬೋಧವಿದು!
ಸೊನ್ನೆಯಿದ್ದರು ಇರಲಿ! ನುಗ್ಗಿ ಮುಂದಕೆ ನೋಡು! ನೀನು ಮಲ್ಲ!

ಮುಂದೆ ತಾನಹೆ ಸೊನ್ನೆಎಂಬನಿಂದೂ ಸೊನ್ನೆ!
ಯಾವ ಸಂಖ್ಯೆಯನೇನು ಸೊನ್ನೆಯಿಂ ಗುಣಿಸಿದರೆ ಲಭ್ಯ ಸೊನ್ನೆ!
ಹಿಂದಿಲ್ಲದಾವಿಂದು? ಇಂದಿಲ್ಲದೇಂ ಮುಂದು?
ಇಂದೆಂಬುದೆಂತಿರುವುದಿಲ್ಲವಾದರೆ ದಿಟದಿ ನಾಳೆ ನಿನ್ನೆ?

ಗುರಿಗೆಂದೆ ಮುಂಗಂಡು ಹುಡುಗನೊದೆದಾ ಚೆಂಡು
ಹರಿದಾಡಲಾಡುಂಬೊಲದೊಳದಕೆ ಗುರಿಯಿಲ್ಲವೆಂಬೆಯೇನು?
ಇರುವಂತೆ ಬಿದಿಯ ಬಗೆ ತಿರುತಿರುಗಿ ತಿರೆಯೊಳಗೆ
ಇಂದೊ ನಾಳೆಯೊ ಎಂದೊ ಒಂದು ದಿನ ಗುರಿಮುಟ್ಟಿ ಗೆಲುವೆ ನೀನು!

ಕರ್ಮ ನಿನ್ನನು ಕಟ್ಟಿ ಕೆಡಹಲದನೇ ಮೆಟ್ಟಿ
ಮುಂದೆ ಮೆಟ್ಟಲನೇರು! ಮರಳಿ ಯತ್ನವ ಮಾಡು, ಸತ್ತು ಹುಟ್ಟಿ!
ಹಚ್ಚು, ಬೆಂಕಿಯ ಹಚ್ಚು! ಸುಡಲೆಲ್ಲವನು ಕಿಚ್ಚು!
ಹುಲ್ಲು ಸುಟ್ಟರೆ ಸುಡಲಿ! ಲೇಸಾಯ್ತು ಟೊಳ್ಳಳಿಯುತುಳಿಯೆ ಗಟ್ಟಿ!

ಬಾಳು ಸಂದೊಡಮೇನು? ಸಾವು ಬಂದೊಡಮೇಉ?
ಸಾವು ಬಾಳಿನ ಕುಂದನೊಂದರಿಯದಿಹ ಶಾಶ್ವತಾತ್ಮ ನೀನು!
ರವಿ ಮುಳುಗಲೇನಂತೆ? ಇರುಳಿಳಿದರೇನಂತೆ?
ಬಂದಿರುಳಿನುದರದಲಿ ಮಲಗಿಹುದು ಮುಂದೆ ಬಹ ಹಗಲು ತಾನು!
ಹಗಲು ಹೊಣೆ ಹತ್ತಿರಕೆ; ಹೊಣೆಯಿರುಳು ಬಿತ್ತರಕೆ;
ಹಗಲೆಮಗೆ ತೋರದಿಹ ಹಿರಿಯ ವಿಶ್ವವನಿರುಳು ತೋರುತಿಹುದು!
ಬಾಳು ಮುಚ್ಚುವ ಮಣ್ಣು; ಸಾವು ಬಿಚ್ಚುವ ಕಣ್ಣು;
ಇಲ್ಲಿ ಕಂಡರಿಯದಿಹ ಮಹಿಮೆಯನು ನಾವಲ್ಲಿ ಕಾಣಲಹುದು!

ಸೂರ್ಯಚಂದ್ರರ ಗತಿಗೆ ಕಣ್ಣಹ ಜಗನ್ಮತಿಗೆ
ನಿನ್ನ ಗತಿ, ನಿನ್ನ ಮತಿ, ನಿನ್ನ ಸಾಹಸಕೆ ಕಣ್ಣಾಗಲರಿದೇ?
ಭಯವ ಬಿಡು; ನಲವಿಂದೆ ಹಾಡುತ್ತ ನಡೆ ಮುಂದೆ,
ಸಂದೆಯದ ಪುಸಿತೊಟ್ಟಿಲನು ಕಟ್ಟಿ ಮಲಗಿ ಜೋಲದಿರು ಬರಿದೆ!

ಬೈಗುಗೆಂಪುರಿಯಲ್ಲಿ ಸುಡಲಿ ಸಂಶಯವಲ್ಲಿ!
ಹುಣ್ಣಿಮೆಯ ರಾತ್ರಿಯಲಿ ಹೊರಗೆ ಬಾ ನೋಡು! ಸಂದೆಯದ ಮಚ್ಚು
ಎಲ್ಲಾದರಿಹುದೇನು? ಎಳ್ಳಾದರಿಹುದೇನು?
ಜಗದ ನಗೆವೊನಲಿನಲಿ ಕೊಚ್ಚಿಹೋಗುವುದು ಸಂದೆಗದ ಹುಚ್ಚು!

ಏಳು, ಮಲ್ಲನೆ, ಏಳು! ಮನವ ಮುದದಲಿ ತೇಲು!
ಕೋಗಿಲೆಗಳುಲಿಯುತಿವೆ ಪಲ್ಲವಿತ ಚೈತ್ರಕಾನನದಿ ಕೇಳು:
ಸಾಹಸವೆ ಸವಿ ಬಾಳು! ಸಂದೆಯವೆ ಕಹಿ ಕೂಳು!
ನಂಬುಗೆಯ ಸುಗ್ಗಿಯನು ನೆಟ್ಟು ಸಂದೆಯದ ಮಾಗಿಯನು ಕೀಳು!

ನೋಡು, ಎಂತಿದೆ ಸುಸಿಲು! ಹಸುರ ಮೇಲೆಳಬಿಸಿಲು
ಮಲಗಿಹುದು ಲೀಲೆಯಲಿ ಮೈಮರೆತ ಮೋಹನದ ಶಿಶುವಿನಂತೆ!
ಅಲ್ಲಿ ಬನಬನದಲ್ಲಿ, ಮಾನವರ ಮನದಲ್ಲಿ
ನೆಚ್ಚುದಿಸಿ ಚಿಮ್ಮುತಿದೆ! ಕರ್ಮಮಯ ಚೇತನಕೆ ಹೊರತು ಚಿಂತೆ!

ನಂಬು ಗುರಿಯಿಹುದೆಂದು! ನಂಬು ಗುರುವಿಹನೆಂದು!
ನಂಬು ದಾರಿಯಲಿ ಕೃಪೆ ಕೈಹಿಡಿದು ಹಿಂದೆ ಪಾಲಿಸುವುದೆಂದು!
ಗುರುಭಕ್ತ ನಾನೆಂದು, ಗುರುಶಕ್ತಿ ನನಗೆಂದು
ನಂಬು! ನಿನ್ನನೆ ನಂಬು! ಮಂತ್ರದೀಕ್ಷಿತಗೆ ಗುರಿತಪ್ಪದೆಂದೂ![14]


[1]     ಷೋಡಶಿಃ ‘ರಸೃಷಿ’ ಪುಟ ೯೫, ೭೮, ೭೯.

[2]     ಶ್ರೀ ರಾಮಾಯಣ ದಿವ್ಯಶಿಲ್ಪಿ ಎಂಬ ಲೇಖನದಿಂದ-ವಿಭೂತಿಪೂಜೆ.

[3]     ಅಗ್ನಿಹಂಸ: ‘ಮನ್ಮನೋಮಂದಿರಕೆ’, ಪುಟ ೧.

[4]    ಕಲಾಸುಂದರಿ:‘ತಾವರೆಯ ತೇರು’, ಪುಟ ೨೭.

[5]    ನವಿಲು: ‘ಆರ್ತವಾಣಿ’, ಪುಟ ೭೭.

[6]    ಕೊಳಲು: ‘ನಾವಿಕ’, ಪುಟ ೧೧೦.

[7]    ಕೊಳಲು: ‘ಪ್ರಾರ್ಥನೆ’, ಪುಟ ೪೬.

[8]    ಕೊಳಲು: ‘ಮುಂದಕಲ್ಲಿಗೆ’, ಪುಟ ೧೨.

[9]    ಅಗ್ನಿಹಂಸ: ‘ನಿನ್ನ ಪದಕಮಲದಲಿ’, ಪುಟ ೮೮.

[10]   ಅಗ್ನಿಹಂಸ: ‘ಹಾರೈಸು’ ಪುಟ ೮೯

[11]   ಕೃತ್ತಿಕೆ: ‘ಪೂರ್ಣಯೋಗಿಯೆ ಪರಮಭೋಗಿ’, ಪುಟ ೪೯.

[12]   ಪ್ರೇಮಕಾಶ್ಮೀರ: ‘ಒಬ್ಬ ತಾಯಿಗೆ’, ಪುಟ ೭.

[13]   ಅಗ್ನಿಹಂಸ:‘ಋತಚಿನ್ಮಯೀ ಜಗನ್ಮಾತೆಗೆ’,ಪುಟ ೯೪.

[14]   ಪಾಂಚಜನ್ಯ: ‘ಮಲ್ಲಗೀತೆ’, ಪುಟ ೪೭.