ಮಹೀಶಕ್ರತುವರದೊಳುದ್ದಾಮ ಮುನಿಜನರಚಿತ ಮಂತ್ರ
ಸ್ತೋಮ ಪುಷ್ಕರಪೂತ ಪುಣ್ಯ ಜಲಾಭಿಷೇಚನದ
ಶ್ರೀಮುಡಿಗೆ ಕೈಯಿಕ್ಕಿದನು; ವರಕಾಮಿನೀ ನಿಕುರುಂಬವಕಟಕ
ಟಾ ಮಹಾಸತಿ ಶಿವಶಿವಾಯೆಂದೊದಱೆತಲ್ಲಲ್ಲಿ.
ನಾರಾಣಪ್ಪ

ಇದಱೊಳ್ ಶ್ವೇತಾತಪತ್ರಸ್ಥಗಿತ ದಶದಿಶಾ ಮಂಡಲಂ ರಾಜಚಕ್ರಂ
ಪುದಿದೞ್ಕಾಡಿತ್ತಡಂಗಿತ್ತಿದಱೊಳೆ ಕುರುರಾಜಾನ್ವಯಂ ಮತ್ಪ್ರತಾಪ
ಕ್ಕಿದೞೆಂದಂ ನೋಡಗುರ್ವುರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತು
ಬ್ಜದಳಕ್ಷೀ ಪೇೞ ಸಾಮಾನ್ಯಮೆ ಬಗೆಯೆ ಭವತ್ಕೇಶ ಪಾಶ ಪ್ರಪಂಚಂ
ಪಂಪ

ದ್ರೌಪದಿಯ ತುರುಬಿಗೆ ಆಡಂಬರವೇಕೆ?…. ಕನ್ನಡ ಶಾರದೆಯ
ಮೂರಂಗುಲದ ಮೂಗಿಗೆ ಮೊಳದುದ್ದದ  ಸಂಸ್ಕೃತ ಮೂಗುತಿಯೇಕೆ?”
ಒಂದು ವಿಮರ್ಶೆ

ಕನ್ನಡ ಸಾಹಿತ್ಯರಂಗದಲ್ಲಿ ದ್ರೌಪದಿಯ ಶ್ರೀಮುಡಿಗೆ ಕೈಯಿಟ್ಟ ನಾಲ್ವರು ಸಮರ್ಥರಲ್ಲಿ ಇಬ್ಬರು ಮಹಾಕಲಿಗಳು, ಇನ್ನಿಬ್ಬರು ಮಹಾಕವಿಗಳು: ಭೀಮ ದುಶ್ಯಾಸನ; ಪಂಪ, ನಾರಣಪ್ಪ. ಒಬ್ಬ ಮುಡಿ ಬಿಚ್ಚಿದ ಕಲಿ, ಇನ್ನೊಬ್ಬ ಕಟ್ಟಿದ ಕಲಿ. ದ್ರೌಪದಿಯ ಮುಡಿ ಬಿಚ್ಚಿದ ಸಂದರ್ಭದಲ್ಲಿ ಪಂಪ ತನ್ನ ‘ಹಿತಮಿತ ಮೃದುವಚನ’ತೆ ಅತಿ ಕಾರ್ಪಣ್ಯವಾಗುವಷ್ಟರ ಮಟ್ಟಿಗೆ ಸಂಕ್ಷೇಪವಾಗಿ ವರ್ಣಿಸಿಬಿಟ್ಟು ಮುಂದಿನ ರುದ್ರಭಯಂಕರ ಸನ್ನಿವೇಶಕ್ಕೆ ಧಾವಿಸಿದ್ದಾನೆ. ಅವನ ಪ್ರತಿಭೆಯ ದೃಷ್ಟಿಯಲ್ಲಿ ಆ ಸಂದರ್ಭ ಛಂದಸ್ಸಿನ ಗೌರವಕ್ಕೂ ಪಾತ್ರವಾಗಿಲ್ಲವೆಂಬಂತೆ ತೋರುತ್ತದೆ. ನಾರಣಪ್ಪ ಸುಮಾರು ಐವತ್ತು  ಷಟ್ಪದಿಗಳಲ್ಲಿ ವಿಸ್ತಾರವಾಗಿ ವಿವರವಾಗಿ ಹೇಳುವುದನ್ನೆಲ್ಲ ಪಂಪ ಹತ್ತು ಹನ್ನೆರಡು ಗದ್ಯದ ಮತ್ತು ನಾಲ್ಕೇನಾಲ್ಕು ಪದ್ಯದ ಪಂಕ್ತಿಗಳಲ್ಲಿ ವರ್ಣಿಸಿ ಪೂರೈಸುತ್ತಾನೆ, ನಾರಣಪ್ಪ ಹೇಳಿರುವ ಯಾವುದನ್ನೂ ಬಿಡದೆ.

“ಅಂತು ದುರ್ಯೋಧನನ್ ಅಜಾತಶತ್ರುವಿನ ಸರ್ವಸ್ವಮೆಲ್ಲಮಂ ಗೆಲ್ದು, ‘ಗೆಲ್ದ ಕಸವರಮೆಲ್ಲಂ ಬಂದುದು ಪಾಂಚಾಲ ರಾಜತನೂಜೆಯೊರ್ವಳ್ ಬಂದಿಳಿಲ್ಲ; ಆಕೆಯಂ ತನ್ನಿಂ’ ಎಂದು, ಯುಧಿಷ್ಠಿರಂ ಕೊಟ್ಟ ನನ್ನಿಯ ಬಲದೊಳ್ ತನಗೆ ಲಯಮಿಲ್ಲದುದನ್ ಅಱೆದು, ಮೇಗಿಲ್ಲದ ಗೊಡ್ಡಾಟಮಾಡಲ್ ಬಗೆದು, ಕರ್ಣನ ಲೆಂಕಂ ಪ್ರಾತಿಕಾಮಿಯೆಂಬುಮಂ ತನ್ನ ತಮ್ಮಂ ದುಶ್ಯಾಸನನುಮಂ ಪೇೞ್ದೊಡೆ ಅವಂದಿರಾಗಳೆ ಬೀಡಿಂಗೆವರಿದು, ‘ರಜಸ್ವಲೆಯಾಗಿರ್ದೆಂ ಮುಟ್ಟಲಾಗದು’ ಎನೆಯಂ ಒತ್ತಂಬದಿಂದೊಳಗಂ ಪೊಕ್ಕು, ಪಾಂಚಾಲಿಯಂ ಕಣ್ಗಿಡೆ ಜಡಿದು, ಮುಡಿಯಂ ಪಡಿದು ತನ್ಮಧ್ಯದಿಂ ಸುಯೋಧನನ ಸಭಾಮಧ್ಯಕ್ಕೆ ತಂದು-

ಮನದೊಳ್ ನೊಂದಮರಾಪಗಾಸುತ ಕೃಪ ದ್ರೋಣಾದಿಗಳ್ ಬೇಡವೇ
ಡೆನೆಯುಂ ಮಾಣದೆ ತೊೞ್ತಿ ತೊೞ್ತುವೆಸಕೆಯ್ ಪೋ ಪೋಗು ನೀನೆಂದು
ಯ್ದೆನಿತಾನುಂ ತೆಱದಿಂದಮುಟ್ಟುದುವರಂ ಕೆಯ್ದಂದು ದುಶ್ಯಾಸನಂ
ತನಗಂ ಮೆಲ್ಲಗೆ ಮೃತ್ಯು ಸಾರೆ ತೆಗೆದಂ ಧಮ್ಮಿಲ್ಲಮಂ ಕೃಷ್ಣೆಯಾ

ಪಂಪನಿಗೆ ಕೃಷ್ಣೆಯ ಕೃಷ್ಣಕಬರೀಭಾರ ನಾರಣಪ್ಪನಿಗೆ ತೋರುವಂತೆ ‘ಶ್ರೀಮುಡಿ’ ಆಗಿಲ್ಲ. ಅದಕ್ಕೆ ರಾಜಸೂಯಯಾಗದ ಸಮಯದಲ್ಲಿ ತೀರ್ಥ ಜಲಾಭಿಷೇಕ ಆಗಿಲ್ಲ. ಮುನಿವರ್ಯರ ಮಂತ್ರಘೋಷದಿಂದ ಪವಿತ್ರವೂ ಆಗಿಲ್ಲ. ದುಶ್ಯಾಸನನು ಅದನ್ನು ಹಿಡಿದಾಗ ಅದರಿಂದ ಮುಂದೆ ಒದಗುವ ಕೇಡನ್ನೇನೊ ಸೂಚಿಸುತ್ತಾನೆ. ಆ ಕೇಡು ಲೌಕಿಕ ಅಪರಾಧಕ್ಕೆ ಒದಗುವ ಶಿಕ್ಷೆಯ ರೂಪದ್ದೇ ಹೊರತು ಪಾಪರೂಪದ ಮಹಾಪಾತಕಕ್ಕೆ ಒದಗುವ ಉಗ್ರತಮ ಧರ್ಮದಂಡನೆ ಅಲ್ಲ. “ಕೃಷ್ಣೋರಗನಂ ಪಿಡಿದ ಬೆಳ್ಳಾಳಂತುಮ್ಮನೆ ಬೆಮರುತ್ತುಮಿರ್ದ” ಎಂಬುದು ಅವನ ಆಗಿನ ದುಶ್ಯಾಸನನ ವರ್ಣನೆ.

ಇಲ್ಲಿಯವರೆಗೆ ಒಳ್ಳೆಯಂತಿದ್ದ ಪಂಪನ ಪ್ರತಿಭಾಗ್ನಿ ಮುಂದೆ ತೆಕ್ಕನೆ ಕಾಳಿಂಗನಂತೆ ಹೆಡೆಯೆತ್ತಿ ಭಯಂಕರವಾಗುವುದನ್ನು ಕಾಣುತ್ತೇವೆ: ರಿಪುಗಳಗ್ರಹ ಮಾದ ಭೀಮಸೇನನ ರೌದ್ರಸ್ಥಿತಿ; ಮೇರುವಂ ಪಿಡಿದು ಕೀಳ್ವ ಗಾಂಡೀವಿಯ ಕೋಪಾಗ್ನಿ; ಕಾಲಾಗ್ನಿರೂಪವಾದ ನಕುಲ ಸಹದೇವರ ಭೀಷಣಭ್ರೂಭಂಗ:

ಕೋಪದ ಪೆರ್ಚಿನೊಳ್ ನಡುಗುವೂರುಯುಗಂ ಕಡುಪಿಂದರಲ್ವ ನಾ
ಸಾಪುಟಮೆಕ್ಕೆಯಿಂ ಪೊಡರ್ವ ಪುರ್ವು ಪೊದೞ್ದ ಲಯಾಂತತ್ರಿಶೂ
ಲೋಪಮ ಭೀಷಣಭ್ರಕುಟಿ ಮುನ್ನಮೆ ರೌದ್ರಗದಾಯುಧಂಬರಂ
ಪೋಪ ಭುಜಾರ್ಗಳಂ ರಿಪುಗಳಗ್ರಹಮದುದು ಭೀಮಸೇನನಾ.
ನೆಲನಂ ನುಂಗುವ ಮೇರುವಂ ಪಿಡಿದು ಕೀೞ್ವಾಶಾ ಗಜೇಂದ್ರಂಗಳಂ
ಚಲದಿಂ ಕಟ್ಟುವ ಸಪ್ತ ಸಪ್ತಿಯನಿಳಾ ಭಾಗಕ್ಕೆ ತರ್ಪೊಂದು ತೋ
ಳ್ವಲಮುಂ ಗರ್ವಮುಮುಣ್ಮಿ ಪೋನ್ಮೆ ಮನದೊಳ್ ಕೋಪಾಗ್ನಿ ಕೆಯ್ಗಣ್ಮಿ
ಣ್ಮಲರೊಳ್ ಬಂದಿರೆ ನೋಡಿದಂ ಕಲುಷದಿಂ ಗಾಂಡೀವಿ ಗಾಂಡೀವಮಂ.

ಪ್ರಕುಪಿತ ಮೃಗಪತಿ ಶಿಶು
ನ್ನಿಕಾಶರತಿ ವಿಕಟ ಭೀಷಣ ಭ್ರೂಭಂಗರ
ನಕುಲ ಸಹದೇವರಿರ್ವರು
ಮಕಾಲ ಕಾಲಾಗ್ನಿ ರೂಪಮಂ ಕೆಯ್ಕೊಂಡರ್.

ಸಭೆಯಲ್ಲಿ ಅವಮಾನಿತೆಯಾದ ದ್ರೌಪದಿ “ಮುಡಿಯಂ ಪಿಡಿದೆೞಿದವನಂ ಮಡಿಯಿಸಿ, ಮತ್ತವನ ಕರುಳ ಪಿಣಿಲಿಂದೆನ್ನಂ ಮುಡಿಯಿಸುಗೆ! ಆ ಮುಡಿಯಂದಲ್ ಮುಡಿಯೆಂ ಗಳಮೀಗಳ್ ಅಂತೆ ಎನ್ನಯ ಮುಡಿಯಂ” ಎಂದು ಪೂಣ್ದುದನ್ನು ಆಲಿಸಿ “ಮರುಳ್ಗೆ ಧೂಪಮಂ ತೋರಿದ ಮಾೞ್ಕಿಯಿಂ” ಮರುತ್ಸುತನು ಇಂತು ಪ್ರತಿಜ್ಞಾಬದ್ಧನಾಗಿ ಉತ್ತರ ಕೊಡುತ್ತಾನೆ:

ಮುಳಿಸಿಂದಂ ನುಡಿದೊಂದು ನಿನ್ನ ನುಡಿ ಸಲ್ಗೆ!
ಆರಾಗದೆಂಬರ್
ಮಹಾ ಪ್ರಳಯೋಲ್ಕೋಪಮ ಮದ್ಗದಾಹತಿಯಿನ್ ಅತ್ಯುಗ್ರಾಜಿಯೊಳ್
ಮುನ್ನಂ ಖಳ ದುಶ್ಯಾಸನನಂ ಪೊರಳ್ಚಿ,
ಬಸಿಱಂ ಪೋೞ್ದೆಕ್ಕಿ, ಬಂಬಲ್ಗರುಳಿನ್
ಅನಲ್ತೆ ವಿಳಾಸದಿಂ ಮುಡಿಯಿಪೆಂ, ಪಂದೇಜ ಪತ್ರೇಕ್ಷಣೇ.”

ಪಂಪನ ಸಂಗ್ರಹಶೀಲೆಯಾದ ಸಂಸ್ಕೃತಕಲೆ ಹೀಗೆ ಚಿತ್ರಿಸಿರುವುದನ್ನು ನಿಸರ್ಗ ಸಹಜವಾದ ನಾರಣಪ್ಪನ ಗ್ರಾಮೀಣ ದೈತ್ಯಕಲೆ ಬೇರೊಂದು ಅದ್ಭುತ ರೀತಿಯಲ್ಲಿ ಚಿತ್ರಿಸುತ್ತದೆ. ಗದುಗಿನ ಭಾರತದಲ್ಲಿ ಬರುವ ಸನ್ನಿವೇಶಗಳಲ್ಲಿಯಾಗಲಿ ಪಾತ್ರಗಳಲ್ಲಿಯಾಗಲಿ ವರ್ಣನೆಗಳಲ್ಲಿಯಾಗಲಿ ಪಂಪಭಾರತದ ನವುರು ನಯಗಳನ್ನು ನಾವು ಕಾಣುವುದಿಲ್ಲ. ಅಲ್ಲಿ ಅದಮ್ಯವಾದ ಪ್ರಕೃತಿ ಸಹಜಶಕ್ತಿ ಯಾವ ಕೃತಕತೆಯ ನಾಗರಿಕ ಬಂಧನಗಳಿಗೂ ಅಡಿಯಾಳಾಗದೆ ಸ್ವತಂತ್ರವಾಗಿ ಸ್ವಚ್ಛಂದವಾಗಿ ಸ್ಥೂಲವಾಗಿ ಪ್ರವರ್ತಿಸುವುದನ್ನು ಕಾಣುತ್ತೇವೆ. ಪಂಪನಿಗೆ ಯಾವುದು ಕಲಾ ಮಾತ್ರವಾದ ಲೌಕಿಕಕಾವ್ಯವೊ ಅದು ನಾರಣಪ್ಪನಿಗೆ ಜೀವನೋದ್ದೇಶ ಸರ್ವಸ್ವಕ್ಕೂ ಮಾರ್ಗವಾದ ಪವಿತ್ರಸಾಧನೆ. ಪಂಪನಂತೆ ನಾರಣಪ್ಪ ತನ್ನ ಮಹೋನ್ನತಿಯನ್ನು ಇಬ್ಬಗಿ ಮಾಡಿಕೊಂಡು ಲೌಕಿಕ ಆಗಮಿಕವೆಂದು ಎರಡು ಕಾವ್ಯಗಳಲ್ಲಿ ಅದನ್ನು ಹಂಚಿ, ಪ್ರಕೃತಿಸಹಜವಾದ ಔನ್ನತ್ಯವನ್ನು ಕುಬ್ಜತರವನ್ನಾಗಿ ಮಾಡಿಕೊಂಡಿಲ್ಲ. ನಾರಣಪ್ಪನಿಗೆ ತನ್ನ ಕೃತಿ ಲೌಕಿಕ, ಆಗಮಿಕ, ವ್ಯಾವಹಾರಿಕ, ಪಾರಮಾರ್ಥಿಕ ಎಲ್ಲವನ್ನು ಒಳಕೊಂಡ ಅಖಂಡಕೃತಿ. ಕಾವ್ಯರಸಾಸ್ವಾದನೆ ಮಾತ್ರವಲ್ಲ ದೈವೋಪಾಸನೆಯೂ ಅಲ್ಲಿಯ ಅವಿಭಕ್ತ ಉದ್ದೇಶ. ಅವನು ದ್ರೌಪದಿಯ ಮುಡಿಯನ್ನು ‘ಸಿರಿಮುಡಿ’ಎಂದ ವಿಶೇಷಣದಿಂದ ಕರೆಯುವುದಕ್ಕೆ ಬದಲಾಗಿ ‘ಶ್ರೀಮುಡಿ’ ಎಂಬ ವಿಶೇಷಣವನ್ನೊಡ್ಡಿ ಧ್ವನಿಯಿಂದ ಅದನ್ನು ಪವಿತ್ರತರವನ್ನಾಗಿ ಮಾಡಿದ್ದಾನೆ. ದುಶ್ಯಾಸನನ ಕೃತ್ಯ ಅಪರಾಧ ಮಾತ್ರವಲ್ಲ. ಮಹಾಪಾತಕ ಎಂಬುದನ್ನು ಸೂಚಿಸುತ್ತಾನೆ. ಆ ಮುಡಿ ಬರಿ ಹೆಂಗಸಿನ ಕೂದಲಲ್ಲ.

ವಿದುರನ ಹಿತಬೋಧೆಯನ್ನು ಧಿಕ್ಕರಿಸಿ ದುರ್ಯೋಧನನು “ಇವನವರ ಬಹಿರಂಗಜೀವ ವ್ಯವಹರಣೆಯಾತನು; ವೃಥಾ ನಾನಿವನ ಕೆಣಕಿದೆನ್ ಅಕಟ ಬೋಧಭ್ರಾಂತ ಬಾಹಿರನ. ಇವನಿರಲಿ, ಬಾ. ಪ್ರಾತಿಕಾಮಿಕ, ಯುವತಿಯನು ಕರೆ, ಹೋಗು!” ಎಂದು ಆಜ್ಞಾಪಿಸುತ್ತಾನೆ. ಪ್ರಾತಿಕಾಮಿಕ ದ್ರೌಪದಿಯ ಸತೀಸಭೆಗೆ ಬಂದಾಗ ಅಲ್ಲಿ ಅವನು ರಾಜಸಭೆಯ ಸ್ಥಿತಿಗೆ ಸಂಪೂರ್ಣ ವ್ಯತ್ಯಸ್ತವಾದ ಸುಖದ, ಸೌಂದರ್ಯದ, ರಮಣೀಯತೆಯ, ಸನ್ನಿವೇಶವನ್ನು ಕಾಣುತ್ತಾನೆ. “ಎಳೆನಗೆಯ ಸುಲಿಪಲ್ಲ ಮುಕ್ತಾವಳಿಯ ನಖಕಾಂತಿಗಳ ಬೆಳಗಿ ಬಳಗವೆನೆ ಬಾಲಿಕೆಯರಿರ್ದರು ಸತಿಯ ಬಳಸಿನಲಿ.”

ಗಿಳಿಯ ಮೆಲ್ನುಡಿಗಳ ವಿನೋದದಿ ಕೆಲರು, ವೀಣಾರವದ ರಹಿಯಲಿ
ಕಲರು, ಸರಸ ಸುಸಂಗ ಸಂಗೀತದ ಸಮಾಧಿಯಲಿ
ಕೆಲರು, ಎತ್ತದಲಮಳ ಮುಕ್ತಾವಳಿಯ ಚೆನ್ನೆಯ ಚದುರೆಯರು ಕಂ
ಗೊಳಿಸತಬಲೆಯ ಮಣಿಯ ಮಂಚೆ ಸುತ್ತುವಳಯದಲಿ.”

ನಾರಣಪ್ಪನ ಕಣ್ಣಿಗೆ ಅಥವಾ ಪ್ರಾತಿಕಾಮಿಯ ದೃಷ್ಟಿಗೆ, ‘ಚಕಿತ ಬಾಲ ಮೃಗಾಕ್ಷಿ’ ದ್ರೌಪದಿ ಆ ಯುವತಿಯರ ಮಧ್ಯದಲ್ಲಿ ಹೇಗೆ ಕಾಣುತ್ತಾಳೆ? ಸಕಳ ಶಕ್ತಿಪರೀತ ವಿಮಳಾಂಬಿಕೆಯವೋಲ್! ವರಮಂತ್ರ ದೇವೀಪ್ರಕರ ಮಧ್ಯದಿ ಶೋಭೀಸುವ ಸಾವಿತ್ರಿಯಂದದಲಿ! ಪ್ರಾತಿಕಾಮಿ ಆ ‘ಪತಿವ್ರತೆಯರ ಶಿರೋ ಮಣಿಯ ಹತ್ತಿರೈತರಲಂಜಿದನು. ತನ್ನುತ್ತಮಾಂಗಕ್ಕೆ ಕರಯುಗವ ಚಾಚುತ್ತ’ ಪಾಂಚಾಲನಂದನೆಗೆ ಬಿನ್ನಹ ಮಾಡುತ್ತಾನೆ. ದ್ರೌಪದಿಯ ರಾಜ್ಞೀಭಾವಕ್ಕೆ, ಪವಿತ್ರತೆಗೆ, ಆಕೆಯ ವ್ಯಕ್ತಿತ್ವದ ಶ್ರೀಗೆ ಪ್ರಾತಿಕಾಮಿ ಕೈಮುಗಿದು ಗೌರವ ತೋರುತ್ತಾನೆ:

ತಾಯೆ, ಬಿನ್ನಹ: ಇಂದು ನಿಮ್ಮಯ ರಾಯ ಸೋತನು ಜೂಜಿನಲಿ; ಕುರು
ರಾಯ ಗೆಲಿದನು, ಕೋಶವಂ ಕರಿ ತುರುಗ ರಥಸಹಿತ.”

ಮುಂದೆ ಹೇಳುವುದನ್ನು ಪ್ರಾತಿಕಾಮಿ ಸಂಕಟವುಕ್ಕಿ ಹೇಳುತ್ತಾನೆ. ಬಹುಶಃ ತೊದಲಿ ತೊದಲಿ ತಡೆದು ತಡೆದೂ ಹೇಳುತ್ತಾನೆ:

ನೋಯಲಾಗದು, ಹಲವು ಮಾತೇನ್? ಯುಧಿಷ್ಠರ ನೃಪತಿ ಸೋತನು
ತಾಯೆ ಭೀಮಾರ್ಜುನ ನಕುಲಸಹದೇವ ನೀವ್ಸಹಿತ!”

ಆ ಸತಿಯರ ಸಭೆಯ ಸುಗ್ಗಿಯ ಸಿರಿಗೆ ಮಂಜಿನ ಸರಿ ಬೀಳುತ್ತದೆ. ಮೌನಮಯ ಜಲದ ಮುಸುಗುತ್ತದೆ. ಇದು ಮುಂದಿನ ದ್ರೌಪದಿಯ ಮಾತು:

ದೂತ ಹೇಳಯ್, ತಂದೆ, ಜೂಜನ್ ಅಜಾತರಿಪುವಾಡಿದನೆ?
ಸೋತನೆ?
          ಕೈತವದ ಬಲೆಗಾರರವದಿರು ಶಕುನಿ ಕೌರವರು:
          ದ್ಯೂತದಲಿ ಮುನ್ನೇನನ್ ಒಡ್ಡಿಯೆ ಸೋತನ್ ಎನ್ನನು?
          ಶಿವಶಿವಾ ನಿರ್ಧೂತಕಿಲ್ಬಿಷನ್ ಅರಸನ್!”

ಪ್ರಾತಿಕಾಮಿ ನಡೆದ ಸಂಗತಿಯನ್ನು ವಿವರಿಸುತ್ತಾನೆ: ಯುಧಿಷ್ಠಿರನು ಮೊದಲು ತನ್ನನ್ನು ಸೋತ ಬಳಿಕ ದ್ರೌಪದಿಯನ್ನು ಸೋತನೆಂದು. ಆ ಅವಿವೇಕದ ಆಡಳಿತದಲ್ಲಿ ತರ್ಕ ತನ್ನನ್ನು ರಕ್ಷಿಸುತ್ತದೆಂದು ಭ್ರಮಿಸುತ್ತಾಳೆ ದ್ರೌಪದಿ. ಯುಧಿಷ್ಠಿರನು ಮೊದಲು ತನ್ನನ್ನು ಸೋತು ಆಮೇಲೆ ದ್ರೌಪದಿಯನ್ನು ಸೋತುದರಲ್ಲಿ ದೈವದ ರಕ್ಷಾಹಸ್ತವಿದೆಯೆಂದು ಆಸೆಬುರುಕಿಯಾಗುತ್ತಾಳೆ. “ವಿಹಿತವಿದು ಮಾನುಷವೆ? ದೈವದ ಕುಹಕವೈಸಲೆ, ಮಗೆ! ತಾನೇ ಬಹೆನು. ನೀ ಹೋಗೊಮ್ಮೆ ಹೇಳೀ ಮಾತನಾ ಸಭೆಗೆ.”

ಮುನ್ನ ತನ್ನನು ಸೋತ ಬೞೆಕಿನೊಳೆನ್ನ ಸೋತರೆ ಸಲುವುದೇ ಸಂ
ಪನ್ನ ವಿಮಳಜ್ಞಾನರಱೆದೀ ಪ್ರಶ್ನೆಗುತ್ತರವ
ಎನ್ನ ಮೆಚ್ಚಿಸಿಕೊಡಲಿ. ತಾ ಬಹೆನು.”

ಪ್ರಾತಿಕಾಮಿ ಹಿಂದಿರುಗುತ್ತಾನೆ. ನಡೆದುದನ್ನು ಹೇಳುತ್ತಾನೆ. ಅದಕ್ಕೆ ದುರ್ಯೋಧನನ ಒರಟುನುಡಿ “ವಾಯುಸುತ ಅಂಜಿಸುವನೆಂದ ಈ ನಾಯಿ ಬೆದರಿದನಕಟ!” ಎಂದು ಬಯ್ಯುತ್ತದೆ. ಮತ್ತೆ ತಮ್ಮನಿಗೆ ಆಜ್ಞಾಪಿಸುತ್ತಾನೆ: “ಹಿಡಿದೆೞೆದು ತಾ! ನರಪರೆಮ್ಮ ಕಿಂಕರರ್. ಐವರವವರಿದ್ದೇನ ಮಾಡುವರು? ತಮ್ಮ ಕರ್ಮವಿಪಾಕಗತಿ ತಮತಮ್ಮನೆ ಕಾಡುವುದು ಧರ್ಮದೊಳು, ಎಮ್ಮ ಕಾರಣವಲ್ಲ, ನೀ ಹೋಗು” ಸುಸಂಸ್ಕೃತನೂ ಯೋಗ್ಯನೂ ದಾಕ್ಷಿಣ್ಯಪರನೂ ಆದ ಪ್ರಾತಿಕಾಮಿ ಸಾಧಿಸಲಾರದ್ದನ್ನು ಸಾಧಿಸಿಯೆ ಬಿಡುವ ದೃಢಹಠಗರ್ವದಿಂದ ಜಗದೂಳಿಗದ ದುರುದುಂಬಿ ದುಶ್ಯಾಸನನು ಬಿಡುದಲೆ ವೆರಸಿ ಸತಿಯ ಅರಮನೆಯ ಬಾಗಿಲಿಗೆ ಧಾವಿಸುತ್ತಾನೆ. ಚರರು ತಡೆದರೆ ಮೆಟ್ಟಿದನು; ತಿವಿದನು ಕಠಾರಿಯಲಿ. ಯಾವ ಇಂತಹ ಖೂಳ ವಿಪತ್ತನ್ನೂ ನಿರೀಕ್ಷಿಸದೆ ತಮ್ಮ ಸೊಗಸಿನಲ್ಲಿದ್ದ ಹೆಣ್ಣುಮಕ್ಕಳು ಈ ರಾಹುರೂಪನನ್ನು ಕಂಡು ಚಂದ್ರಮುಖಿ ದ್ರೌಪದಿಯ ಮರೆಹೋಗಲು ಓಡುತ್ತಾರೆ ದುಶ್ಯಾಸನನು  ನೆಟ್ಟಗೆ ದ್ರೌಪದಿಯ ಇದಿರಿಗೆ ಹೋಗಿ ನಿಂದು ಅತ್ಯಂತ ಗ್ರಾಮ್ಯವಾಗಿ ಗಜರುತ್ತಾನೆ: :ಎಲೆಗೆ, ಗರುವತನವಿದು ಹಿಂದೆ ಸಲುವುದು. ಸಲ್ಲದಿದು ಕುರುರಾಜ ಭವನದಲಿ. ಇಂದು ಮೆರೆವರೆ, ನಮ್ಮ ತೊತ್ತಿರ ಮುಂದೆ ಮೆರೆ, ನಡೆ, ಮಂಚದಿಂದಿಳಿ.” ಅದಕ್ಕೆ ಸತಿ ನಣ್ಪಿನಕ್ಕರೆಯಿಂದ “ಜನಪನನುಜನು ನೀನು. ಎನಗೆ ಮೈದಯನಲಾ! ತಪ್ಪೇನು? ಯಮ ನಂದನನು ಸೋಲಲಿ; ತನ್ನ ಪ್ರಶ್ನೆಗೆ ಕೊಡಲಿ ಮರುಮಾತ. ಅನುಜ, ಕೇಳೈ, ಪುಷ್ಪವತಿಯಾ, ಎನಗೆ ರಾಜಸಭಾ ಪ್ರವೇಶನವು ಅನುಚಿತವಲೇ ಹೇಳು?” ಎಂದುದಕ್ಕೆ ಖಳರಾಯ ಖತಿಗೊಂಡು “ಎಲ್ಲಿಯದು ದುಷ್ಪಶ್ನೆ? ಮರುಮಾತೆಲ್ಲಿಯದು? ನೀ ಪುಷ್ಪವತಿಯಾಗು; ಅಲ್ಲಿ ಫಲವತಿಯಾಗು ನಡೆ ಕುರುರಾಜಭವನದಲಿ” ಎಂದು ಕಿರಾತರೂ ನಾಚುವಂತೆ ನುಡಿದು ಭಾರತ ಸಂಗ್ರಾಮವಲ್ಮೀಕ ರೂಪಿಣಿಯಾದ ಕೃಷ್ಣೆಯ ಮುಡಿಯ ಕೃಷ್ಣೋರಗಕ್ಕೆ ಕೈ ತುಡುಕುತ್ತಾನೆ. ಇಲ್ಲಿ ನಾರಣಪ್ಪನ ಭಾಷೆ ಅನಿವಾರ್ಯವಾಗಿ ಸಂಸ್ಕೃತಮಯವಾಗುತ್ತದೆ; ಆ ಸಂದರ್ಭವನ್ನು ಅತ್ಯಂತ ಧ್ವನಿಪೂರ್ಣವನ್ನಾಗಿ ಮಾಡುತ್ತದೆ. ದುಶ್ಯಾಸನನ ಕೃತ್ಯದ ದೌಷ್ಟ್ಯವನ್ನೂ ಅನರ್ಥವನ್ನೂ ಅದರ ಭಯಂಕರ ಪರಿಣಾಮವನ್ನೂ ವಸ್ತುಧ್ವನಿಯನ್ನಾಗಿ ಮಾಡಿ ನಮ್ಮ ರಸಜಿಹ್ವೆಯ ಮೇಲಿಡುತ್ತದೆ. ಇದೇ  ಆ ಮಹಾ ಷಟ್ಪದಿಯ ಝೇಂಕೃತಿ:

ಮಹೀಶಕ್ರತುವರದೊಳುದ್ದಾಮ ಮುನಿಜನರಚಿತ ಮಂತ್ರ
ಸ್ತೋಮ ಪುಷ್ಕರಪೂತ ಪುಣ್ಯ ಜಲಾಭಿಷೇಚನದ
ಶ್ರೀಮುಡಿಗೆ ಕೈಯಿಕ್ಕಿದನು ವರಕಾಮಿನೀ ನಕುರುಂಬವಕಟಕ
ಟಾ ಮಹಾಸತಿ ಶಿವಶಿವಾಯೆಂದೊದಱೆತಲ್ಲಲ್ಲಿ!”

ಆ ಮುಡಿ ಬರಿಯ ಕೂದಲುಂಡೆಯಲ್ಲ. ಆ ಕೂದಲು ಯಃಕಶ್ಚಿತ ಸ್ತ್ರೀಯೊಬ್ಬಳದ್ದಲ್ಲ. ಅದು ಸಿರಿಮುಡಿ ಮಾತ್ರವಲ್ಲ, ಶ್ರೀಮುಡಿಯೂ ಅಹುದು. ಅನೇಕ ರಾಜರು ಸೇರಿದ್ದ ಅತ್ಯಂತ ಶ್ರೇಷ್ಠವಾದ ರಾಜಸೂಯ ಯಾಗದಲ್ಲಿ ಉದ್ದಾಮರಾದ ಋಷಿಮಹರ್ಷಿಗಳು ಮಂತ್ರಘೋಷ ಮಾಡುತ್ತಿರಲು ಅಂಥವರ ಹಸ್ತದಿಂದ ಪವಿತ್ರವಾದ ಪುಣ್ಯೋದಕದಿಂದ ಅಭಿಷೇಚನೆ ಮಾಡಿಸಿಕೊಂಡ ಮೂರ್ಧಕ್ಕೆ ಸೇರಿದ ಗೌರವವಸ್ತು. ಪೂಜಿಸಬೇಕಾದ ಅಂತಹ ವಸ್ತುವಿಗೆ ಧೂರ್ತಬುದ್ಧಿಯಿಂದ ಕೈಯಿಕ್ಕುವುದೆಂದರೆ ಅದರಿಂದೊದಗುವುದು ಸಾಮಾನ್ಯ ಹಾನಿಯಲ್ಲ. ಅದೇನು ಎಂಬುದನ್ನು ಪಂಪನ ಭೀಮನು ಆ ಮುಡಿಯನ್ನು ಕಟ್ಟುವಾಗ ಲೋಕ ಲೋಕಗಳಿಗೆ ರಸರೋಮಾಂಚನವಾಗುವಂತೆ ವರ್ಣಿಸಿ ಘೋಷಿಸಿದ್ದಾನೆ: ಯಾವ ಮುಡಿಯ ಹೆಗ್ಗಡಲಿನಲ್ಲಿ ಶ್ವೇತಾತಪತ್ರಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ ಪುದಿದಳ್ಕಾಡಿತ್ತೊ, ಯಾವುದರಲ್ಲಿ ಕುರು ರಾಜಾನ್ವಯವೆ ಅಡಂಗಿತ್ತೊ, ಯಾವುದು ಮಹಾಭಾರತಕ್ಕಾದಿಯಾಯ್ತೊ ಆ ಕೇಶಪಾಶ, ಬಗೆಯೆ ಪೇಳ, ಸಾಮಾನ್ಯವೆ! ಅದೇನು ಒಂದು ಮುಷ್ಟಿ ಕೂದಲೆ? ಅದು ನಿಜವಾಗಿಯೂ ಶ್ರೀಮುಡಿ! ಈ ಎಲ್ಲ ವಸ್ತು ರಸ ಧ್ವನಿಯನ್ನೂ ಸಹೃದಯನ ಹೃದಯದಲ್ಲಿ ಒಮ್ಮೆಗೆ ಆಸ್ಫೋಟಿಸುವ ಸಲುವಾಗಿಯೆ ಕವಿಪ್ರತಿಭೆ ತನ್ನ ಗೌಡೀರೀತಿಯ ವಿಚಿತ್ರಮಾರ್ಗದ ಈ ಮಹಾ ಶೈಲಿಯನ್ನು ಆಶ್ರಯಿಸಿದೆ. ಅದರ ಆ ವ್ಯಂಗ್ಯಾರ್ಥ, ಆ ಧ್ವನಿ, ನಮಗೆ ತಟಕ್ಕನೆ ಸ್ಫುರಿಸದಿದ್ದರೆ ಈ ಶೈಲಿ ಬರಿಯ ಶಬ್ದಾಡಂಬರವಾಗಿ ತೋರುವುದರಲ್ಲಿ ಸಂದೇಹವಿಲ್ಲ. ಆಗಲೆ ನಮಗನ್ನಿಸುವುದು “ಕನ್ನಡ ಶಾರದೆಯ ಮೂರಂಗುಲದ ಮೂಗಿಗೆ ಮೊಳದುದ್ದದ ಈ ಸಂಸ್ಕೃತ ಮೂಗುತಿಯೇಕೆ?” ಎಂದು. ಪಂಪನ ಭೀಮನನ್ನು ಯಾರಾದರೂ ಪ್ರಶ್ನಿಸಿದ್ದರೆ ‘ದ್ರೌಪದಿಯ ತುರುಬಿಗೆ ಈ ಆಡಂಬರ ಏಕೆ’ ಎಂದು, ಏನುತ್ತರ ಲಭಿಸುತ್ತಿತ್ತು?

ಶ್ರೇಷ್ಠ ವಿಮರ್ಶಕರೊಬ್ಬರು ಅದಕ್ಕೆ ಉತ್ತರ ಕೊಟ್ಟಿದ್ದಾರೆ:

“ನಾರಣಪ್ಪನಲ್ಲಿ ಪದಾಧಿಕ್ಯವನ್ನು ಆರೋಪಿಸುವಾಗ ನಾವು ಎಚ್ಚರದಿಂದಿರಬೇಕು, ಸೂಕ್ಷ್ಮಗ್ರಾಹಿಗಳಾಗಬೇಕು. ತಾರತಮ್ಯವಿಚಕ್ಷಣೆಯನ್ನು ಗಳಿಸಬೇಕು. ವಾಚಾಳಿಯಂತೆ ಕಾಣಿಸಿಕೊಂಡರೂ ವಸ್ತುತಃ ಅವನು ವಾಗ್ಮಿ. ಕವಿತೆಯ ಹೊದಿಕೆ ಹೆಚ್ಚು ಹೆಚ್ಚು ಮಡಿಕೆಗಳನ್ನು ಪ್ರಕಟಿಸಿದರೂ ಕಾವ್ಯ ಪುರುಷನ ಭವ್ಯದೇಹಕ್ಕೆ ಅವೆಲ್ಲವೂ ಹೇಗೋ ಹೊಂದಿಕೊಂಡುಬಿಟ್ಟಿವೆ. ನಾರಣಪ್ಪನ ಭಾಷಾಪದ್ಧತಿ ಬಹು ಸ್ವತಂತ್ರವಾದದ್ದು; ಆದರೆ ಎಲ್ಲಿಯೂ ಅತಂತ್ರವಾಗಿಲ್ಲ ಅದು; ಕುತಂತ್ರವಂತೂ ಅದಕ್ಕೆ ತೀರ ಹೊರಗು. ಸಂಧ್ಯಾಮಯ ಪಶ್ಚಿಮ ದಿಕ್ಕಿನಲ್ಲಿ ಬಣ್ಣಗಳ ಹರವು ವಿಪರೀತ; ಸಾಗರದಲ್ಲಿ ನೀಲ ವರ್ಣದ ನೀರಿನ ರಾಶಿ ವಿಪರೀತ; ವೈಶಾಖದಲ್ಲಿ ಅರಳಿಯ ಮರಕ್ಕೆ ಹಸುರು ಎಲೆಗಳ ಸಮೃದ್ಧಿ ವಿಪರೀತ; ಹಾಗೆ ನಾರಣಪ್ಪನಲ್ಲಿ ವಚನವೈಭವ ವಿಪರೀತ.”

[1]

ಗೌಡೀರೀತಿಯ, ವಿಚಿತ್ರಮಾರ್ಗದ ಈ ದೀರ್ಘಸಂಸ್ಕೃತಪದ ಭೂಯಿಷ್ಠ ಸಮಾಸವನ್ನು ಔಚಿತ್ಯವರಿತೆ ಕವಿ ಪ್ರಯೋಗಿಸಿದ್ದಾನೆ ಎಂಬುದು ಅನತಿದೂರ ಮುಂದುವರಿಯುವುದರಲ್ಲಿಯೆ ಸಹೃದಯನಿಗೆ ಗೋಚರವಾಗುತ್ತದೆ. ದುಶ್ಯಾಸನ ದ್ರೌಪದಿಯ ಮುಡಿವಿಡಿದು ಅವಳನ್ನು ಸಭೆಗೆ ಎಳೆತಂದ ಸಂದರ್ಭದಲ್ಲಿ ಅದನ್ನು ಕಂಡ ಸಭಾಸದರ ಸಂಕಟಪೂರ್ಣ ಕ್ರೋಧ ಈ ರೀತಿ ವ್ಯಕ್ತವಾಗುತ್ತದೆ:

ಅಹಹ ಪಾಂಡವರಾಯ ಪಟ್ಟದ ಮಹಿಳೆಗಿದು ವಿಧಿಯೆ?
ಮಹಾಕ್ರತುವಿಹಿತ ಮಂತ್ರ ಜಲಾಭಿಷಿಕ್ತ ಕಚಾಗ್ರೆಗಿದು ವಿಧಿಯೆ?
ಮಿಹಿರ ಬಿಂಬವ ಕಾಣದಾ ನೃಪಮಹಿಳೆಗಿದು ವಿಧಿಯೇ?
ವಿಧಾತ್ರನ ಕುಹಕವೈಸಲೆ ಶಿವಶಿವಾ ಎಂದರು ಸಭಾಸದರು

ಹಿಂದಣ ಪದ್ಯದಲ್ಲಿ ಕವಿ ಉಪಯೋಗಿಸಿದ ಪದಪ್ರಯೋಗವನ್ನೆ ಸಭಾಸದರೂ ಮತ್ತೆ ಪ್ರಯೋಗಿಸುತ್ತಾರೆ. ದ್ರೌಪದಿಯ ಮುಡಿಯ ಅಸಾಮಾನ್ಯತೆಯನ್ನೂ ಲೋಕೋತ್ತರತೆಯನ್ನೂ ಅತಿಶಯತೆಯನ್ನೂ ಅಭಿವ್ಯಕ್ತಗೊಳಿಸಬೇಕಾದರೆ, ಅದು ಬರಿಯ ಸಾಮಾನ್ಯ ಸ್ತ್ರೀಯ ತುರುಬು ಮಾತ್ರವಲ್ಲ, ಪಾಂಡವರ ಪಟ್ಟದ ಮಹಿಳೆಯ ಶ್ರೀಮುಡಿ ಎಂಬ ಮಹಿಮೆಯನ್ನು ಪ್ರಕಟಿಸಬೇಕಾದರೆ ಇಂತಹ ವಿಶಿಷ್ಟ ಪದ ಸಂಘಟನೆಯಿಂದಲ್ಲದೆ ಅನ್ಯಥಾ ಸಾಧ್ಯವಿಲ್ಲ. ಇಲ್ಲಿ ಕವಿಯ ವಿದಗ್ಧ ಪದ ಸಂಘಟನೆಯಿಂದಲ್ಲದೆ ಅನ್ಯಥಾ ಸಾಧ್ಯವಿಲ್ಲ. ಇಲ್ಲಿ ಕವಿಯ ವಿದಗ್ಧ ಪದ ಮಹಾಶೈಲಿ ಖಡ್ಗಧಾರಾಪಥದಲ್ಲಿ ಸಂಚರಿಸುವ ಸುಭಟರ ಮನೋರಥದಂತೆ ತನ್ನ ಲಕ್ಷ್ಯಕ್ಕೆ ಧಾವಿಸುತ್ತಿರುವುದನ್ನು ನಾವು ಅನುಭವಿಸುತ್ತೇವೆ.[2]

ಹೆಣ್ಣಿನ ಮುಡಿಯ ಮನೋಹರತೆಯ ವರ್ಣನೆಗೆ ಈ ವೀರರಸದ್ಯೋತಕವಾದ ಪದಸಂಘಟನೆ ಅನುಚಿತವೆಂಬುದು ನಿಜವಾಗುತ್ತಿತ್ತು. ಸಂದರ್ಭ ಬೇರೆಯಾಗಿದ್ದರೆ. ಕವಿ ಸ್ವಯಂವರಕ್ಕೆ ಸಿದ್ಧಳಾಗುತ್ತಿರುವ ತರುಣಿ ದ್ರೌಪದಿಯ ಮುಡಿಯನ್ನು ಕುರಿತು ಬಣ್ಣಿಸುತ್ತಿದ್ದರೆ ಅದಕ್ಕೆ ಉಚಿತವಾದ ಶೃಂಗಾರ ರಸದ್ಯೋತಕವಾದ ಸುಕುಮಾರ ಮಾರ್ಗವನ್ನೆ ಪ್ರಯೋಗಿಸಬೇಕಾಗುತ್ತಿತ್ತು. ಆಗ ಪದಪಂಕ್ತಿ ಖಡ್ಗವಿಡಿದ ಸುಭಟರಂತೆ ಧಾವಿಸುವುದಕ್ಕೆ ಬದಲಾಗಿ ಉತ್ಫುಲ್ಲ ಕುಸುಮ ಕಾನನದಲ್ಲಿ ಹಾರಾಡುವ ಅಳಿಗಳಂತೆ ನಲಿದಾಡಬೇಕಾಗುತ್ತಿತ್ತು.[3]

ಹೀಗೆ ಒಂದು ಮಹಾಸಮಾಸದ ಪ್ರಯೋಗದಿಂದ ಅದ್ಭುತವಾದ ಧ್ವನಿಯನ್ನು ಸಹೃದಯ ಹೃದಯದಲ್ಲಿ ಮಿಡಿದು ಕುಮಾರವ್ಯಾಸ ಅದು ಹೇಗೆ ಸಫಲ ಸಾರ್ಥಕವಾಗುತ್ತದೆಯೋ ಅದನ್ನು ಹಾಡಹೊರಡುತ್ತಾನೆ. ಅಂತೂ ದ್ರೌಪದಿಯ ತುರುಬು ಶ್ರೀ ಮುಡಿಯಾಗಿ, ಮಹಾಭಾರತಕ್ಕೆ ಆದಿಯಾಗಿ, ಕೇಶಪಾಶ ಪ್ರಪಂಚವೆ ಆಗುತ್ತದೆ. ಮುಂದೆ ಸಭೆಯಲ್ಲಿ ನಡೆದ ಘಟನಾಪರಂಪರೆಗಳನ್ನು-ದುರ್ಯೋಧನನ ಕ್ರೂರವಚನ, ದ್ರೌಪದಿಯ ಪ್ರಾರ್ಥನೆ, ಭೀಷ್ಮರ ಹಿತಬೋಧೆ, ಭೀಮ ಕೋಪ, ಯುಧಿಷ್ಠಿರನ ಸಮಾಧಾನ, ದ್ರೌಪದಿಯ ವಸ್ತ್ರಾಪಹರಣ, ಆಕೆಯ ಕೃಷ್ಣಭಕ್ತಿ, ಕೃಷ್ಣನ ವರದಿಂದ ಸೀರೆ ಅಕ್ಷಯವಾಗುವುದು ಇತ್ಯಾದಿ-ನಾರಾಣಪ್ಪ ಸ್ವಲ್ಪ ಆಧಿಕ್ಯದೋಷವಿದ್ದರೂ ಅದನ್ನೆಲ್ಲ ಓದುಗರು ಮರೆಯುವಂತೆ ನಿರ್ವಹಿಸಿ ಆ ಪ್ರಸಂಗದ ಕೊನೆಯ ಘಟ್ಟಕ್ಕೆ ಬರುತ್ತಾನೆ.

ಸಹನೆಗೂ ಮಿತಿಯುಂಟು; ವಿಧೇಯತೆಗೂ ಎಲ್ಲೆಯುಂಟು. ಅಣ್ಣನ ಮಾತಿಗೆ ಕಟ್ಟುಬಿದ್ದು ತುಟಿಗಚ್ಚಿ ಕುಳಿತಿದ್ದ ಭೀಮನ ಸೈರಣೆ ಪರ್ವತಶಿಖರದ ಸೈರಣೆ ತನ್ನ ಗರ್ಭಾಗ್ನಿಯ ಉತ್ಕಟಪ್ರಕೋಪಕ್ಕೆ ಸೋತು ಅಗ್ನಿಯನ್ನು ಓಕರಿಸುವಂತಾಯಿತು. ದುರ್ಯೋಧನನು ‘ಎಲೆಗೆ, ನಿನ್ನವರೇನುಮಾಡುವರ್? ಒಲೆಯೊಳಡಗಿದ ಕೆಂಡವಿವರಗ್ಗಳಿಕೆ: ನಂದಿದುದು!’ ಎನ್ನುತ್ತ ಮುಂಜೆರಗೆತ್ತಿ ಮಾನಿನಿಯಾದ ದ್ರೌಪದಿಗೆ ತನ್ನ ತೊಡೆಯನ್ನು ತೋರಿಸುವ ಅಶ್ಲೀಲತೆಗೆ ಮುಂದುವರಿದಾಗ ದ್ರೌಪದಿ ‘ನಿನ್ನಳಿವು ತೊಡೆಯಲಿ ಘಟಿಸಲಿ’ ಎಂದು ಶಪಿಸುತ್ತಾಳೆ. ಆಗ

ಕಡಲ ತೆರೆಗಳ ತರುಬಿ ತುರುಗುವ
ವಡಬನಂತಿರೆ ಸಭೆಯನಡಹಾಯ್ದು
ಕುಡಿ ಕುಠಾರ ರಕುತವನು, ತಡೆಗಡಿ ಸುಯೋಧನನೂರುಗಳನ್
ಇಮ್ಮಡಿಸಿ ಮುನಿಯಲಿ
ಧರ್ಮಸುತನ್ ಎಂದೆದ್ದನಾ ಭೀಮ

ದುಶ್ಯಾಸನನು ಒಡೆಯ ಐತರಲು ಇಕ್ಷುತೋಟದ ಬಡನರಿಗಳು ಓಡುವಂತೆ ದುರ್ಯೋಧನನ ಬಳಿಗೆ ಓಡುತ್ತಾನೆ!

‘ನುಡಿ, ತರುಣಿ, ತನ್ನಾಣೆ! ಭೀತಿಯ ಬಿಸಿಸಿದೆನಲಾ! ರಾಯನಾಜ್ಞೆಯ ತಡಿಕೆವಲೆ ನುಗ್ಗಾಯ್ತು ಹೋಗಿನ್ನು: ಮುಡಿಯ ನೀ ಕಟ್ಟು, ಎಲಗೆ ಸತಿ’ ಎಂದ ತನ್ನ ಕಾಂತನಿಗೆ ಪಾಂಚಾಲಿ ‘ಮುಡಿಯ ಕಟ್ಟುವ ಕಾಲ ಈ ದುಶ್ಯಾಸನ ಶಿರವ ಕೆಡಹಿ, ಶಾಕಿನಿಯರಿಗೆ ರಕುತವ ಕುಡಿಸಿ ತಣಿಯಲು ಕರುಳುದಂಡೆಯ ಮುಡಿವ ವ್ರತ ಎನಗಿಹುದು. ನೀ ಹೇಳಿದಕೆ ನಿರ್ವಾಹ’ ಎಂಬ ತನ್ನ ಹೂಣಿಕೆಯ ನಿಧಿಯನ್ನು ಭೀಮನಿಗೆ ಕೈಯೆಡೆಯಾಗಿ ನೀಡುತ್ತಾಳೆ. ಆಗ ಭೀಮನ ಬಾಯಿಂದ ಮಹಾಭಾರತದ ಭಯಂಕರ ಪ್ರತಿಜ್ಞೆಯೊಂದು ಭುವನಕಂಪನಕಾರಿಯಾಗಿ ಹೊರ ಹೊಮ್ಮುತ್ತದೆ;

ಐಸಲೇ!
ವ್ರತದ ನಿನ್ನಯ ಭಾಷೆ ನಮ್ಮದು. ಸತಿಯೆ;
ದುಶ್ಯಾಸನನ ಹೊಡೆಗಡಿದು ಶಾಕಿನಿಯರಿಗೆ ರಕುತವನು ಸೂಸುತೆರೆವೆನು,ತರುಣಿ;
ಸೊಕ್ಕಿದ ದೂಷಕನ ನೆರೆ ಸೀಳಿ ನಿನ್ನಯ ಕೇಶವನು ಕಟ್ಟಿಸಿಯೆ ಮುಡಿಸುವೆ ಕರುಳ ದಂಡೆಗಳ!”

ಈ ಸಂದರ್ಭದಲ್ಲಿ ಕುಮಾರವ್ಯಾಸ ಜಲಪಾತಘೋಷ ಸದೃಶವಾದ ವಾಣಿ ಪಂಪನ ಪ್ರಳಯತಾಂಡವ ಧೂರ್ಜಟಿಯ ಡಮರುಧ್ವಾನಸದೃಶವಾದ ಘೋಷದ ಮುಂದೆ ಕುನಿದುಬಿಡುತ್ತದೆ:

ಕುಡಿವೆಂ ದುಶ್ಯಾಸನೋರಸ್ಥಳಮನಗಲೆ ಪೋೞ್ದಾರ್ದು ಕೆನ್ನೆತ್ತರಂ ಪೊ
ಕ್ಕುಡಿವೆಂ ಪಿಂಗಾಕ್ಷನೂರು ದ್ವಯಮನುರು ಗದಾಘಾತದಿಂ ನುಚ್ಚುನೂರಾ
ಗೊಡೆವೆಂ ತದ್ರತ್ ರಶ್ಮಿ ಪ್ರಕಟ ಮಕುಟಮಂ ನಂಬು ನಂಬೆನ್ನ ಕಣ್ಣಿಂ
ಕಿಡಿಯುಂ ಕೆಂಡಂಗಳುಂ ಸೂಸಿದಪುವಹಿತರಂ ನೋಡಿ ಪಂಕೇಜವಕ್ತ್ರೇ.

ಸುರಸಿಂಧು ಪ್ರಿಯಪುತ್ರ ಕೇಳ್ ಕಳಶಜಾ ನೀಂ ಕೇರ್ಳ ಕೃಪಾ ಕೇಳ ಮಂ
ದರದಿಂದಂಬುಧಿಯಂ ಕಲಂಕಿದಸುರಪ್ರಧ್ವಂಸಿವೋಲ್ ಬಾಹು ಮಂ
ದರದಿಂ ವೈರಿ ಬಲಾಬ್ದಿ ಘೂರ್ಣಿಸೆ ಬಿಗುರ್ತೀ ಕೌರವರ್ ಕೂಡೆ ನೂ
ರ್ವರುಮಂ ಕೊಲ್ವೆನಿದೆನ್ನ ಪೂಣ್ಕೆ ನುಡಿದೆಂ ನಿಮ್ಮೀ ಸಭಾಮಧ್ಯದೊಳ್

ಮಹಾಭಾರತವನ್ನು ದ್ರೌಪದಿಯ ಮುಡಿಬಿಚ್ಚಿ ಮುಡಿಕಟ್ಟಿದ ಪ್ರಸಂಗದ ಕಥೆ ಎಂದು ವರ್ಣಿಸಿದರೆ ಹೆಚ್ಚೇನೂ ಸತ್ಯದೂರವಾಗಲಾರದು. ಆ ಮುಡಿ ಕಟ್ಟಿದ ಭಯಂಕರ ಸನ್ನಿವೇಶವನ್ನು ನಮ್ಮ ಮಹಾಕವಿಗಳಿಬ್ಬರೂ ಅದ್ಭುತವಾಗಿಯೆ ವರ್ಣಿಸಿದ್ದಾರೆ: ನಾರಾಣಪ್ಪ ಗ್ರಾಮೀಣಸಹಜವಾದ ವಿಸ್ತಾರ ವಿವರರೀತಿಯಲ್ಲಿ; ಪಂಪ ಮಹಾಕವಿ ಕೌಶಲ ಸಹಜವಾದ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ಚತುರ ರೀತಿಯಲ್ಲಿ.

ಭೀಮದುಶ್ಯಾಸನರ ಯುದ್ಧಸನ್ನಿವೇಶ ಕರ್ಣಪರ್ವದೊಂದು ಶಿಖರಘಟ್ಟ. ಬಿಲ್ಲು ಕಣೆ ಕಠಾರಿ ಮೊದಲಾದ ಆಯುಧಗಳ ಯುದ್ಧ ಸ್ವಲ್ಪದೂರ ಮುಂದುವರಿದ ಮೇಲೆ ಆ ಇಬ್ಬರು   ಮಲ್ಲಗಾಳೆಗದ ಕಲಿಗಳೂ ಪರಸ್ಪರಾನುಮತಿಯಿಂದ ದ್ವಂದ್ವಯುದ್ಧವನ್ನು ನಿಶ್ಚಯಿಸುತ್ತಾರೆ. ‘ನೋಡುತಿರಲೀ ಬಲವೆರಡು’ ‘ನಿರಾ ಕುಳದಲೆಚ್ಚಾಡುವೆವು ನಿಲ್’ ಎಂದ ಭೀಮನ ಕರೆಗೆ ದುಶ್ಯಾಸನನು ‘ತೊಲಗಿರೈ ಪರಿವಾರ’ ‘ಬಾಳೆಯ ತಳಿಯ ಮುರಿವ ಅತಿಸಹಸಿ ಗಡ! ಕುಟ್ಮಳಿತ ಕೇತಕಿ ತೀಕ್ಷ್ಣ ಗಡ! ನೀವಳವಿಗೊಡದಿರಿ’ ಎಂದು ತನ್ನ ಸೇನೆಗೆ ಪ್ರೇಕ್ಷಕತ್ವದ ಕಟ್ಟಾಜ್ಞೆಯನ್ನು ನೀಡಿ ಭೀಮನ ಮೇಲ್ವಾಯುತ್ತಾನೆ. ಇಬ್ಬರೂ ಧನುರ್ಯುದ್ಧದಲ್ಲಿ ತೊಡಗಿ ಸ್ವಲ್ಪ ಹೊತ್ತಿನಲ್ಲಿಯೆ ತಮಗೆ ಪ್ರಕೃತಿಸಹಜವಾದ ಮಲ್ಲಯುದ್ಧಕ್ಕೆ ಆಶಿಸುತ್ತಾರೆ. ‘ಸಾಕಿದೇತಕೆ? ಮಲ್ಲಶ್ರಮದಲಿ ನೂಕಿ ನೋಡುವೆವಿನ್ನು, ಕೈದು ಗಳೇಕೆ ದೃಢಮುಷ್ಟಿ ಪ್ರಹಾರ ಸತ್ತ್ವರಿಗೆ? ನಿಯುದ್ಧ ವ್ಯಾಕರಣ ಪಾಂಡಿತ್ಯ ಎಮಗುಂಟು ಎಂದನಾ ಭೀಮ.’ ಅಂತು ಕೊನೆಗೆ ಭೀಮ ದುಶ್ಯಾಸನರ ಯುದ್ಧ  ನಿಯುದ್ಧಕ್ಕೆ[4]ತಿರುಗುತ್ತದೆ.

ಸೂಳವಿಸಿದರು ಭುಶಿಖರನಿಸ್ಸಾಳವನು, ನೆಲ ಕುಣಿಯ, ದಿಕ್ಕಿನ
ಮೂಲೆ ಬಿರಿಯೆ,ಪಯೋಧಿಗಳಲಿ ಪಯೋಧಿ ಪಲ್ಲಟಿಸೆ |

ಘೀಳಿಡಲು ಕಿವಿಗಳಲಿ ಸೇನಾ ಜಾಳವೆರಡರೊಳ್ ಉಭಯದಿಗು ಶುಂ
ಡಾಲ ಕೈಯಿಕ್ಕುವವೊಲಿವರೊತ್ತಿದರು ತೋಳ್ಗಳಲಿ |”

ಕೊನೆಗೆ ‘ಹರಿ ಮದೋತ್ಕಟದಂತಿಯನು ಬಕ್ಕರಿಸಿ ರಾವರಿಸುವೋಲ್, ಆ ನರಹರಿ ಹಿರಣ್ಯಕಶಿಪುವನಂಕದ ಮೇಲೆ ತೆಗೆವಂತೆ…ನಿಯುದ್ಧದಕ್ಕಡನಾದನಾಭೀಮ.’ ಮುಂದೆ ನಡೆದ ರೌದ್ರ ಬೀಭತ್ಸಭಯಾನಕ ರಸಗಳ ರಕ್ತರಣದೌತಣವನ್ನು ಪರಿಭಾವಿಸಿದರೆ ಕುಮಾರವ್ಯಾಸನ ಈ ಸಂದರ್ಭದ ರಾಕ್ಷಸಪ್ರತಿಭೆ ದುಶ್ಯಾಸನನ ರಕ್ತದೋಕುಳಿಯಾಡುವ ಭೀಮನೊಡನೆ ಪ್ರತಿಸ್ಪರ್ಧಿಸುವಂತಿದೆ.[5] ಈ ರಿಂಗಣಗುಣಿದಾಟದಲ್ಲಿ ಪರಿತೋಷಗೊಂಡ ಹಿಡಿಂಬಾಪ್ರಿಯನು ‘ತನ್ನ ಒಲವಿನ ಅಹವವಾದುದು; ಐತಹುದು’ ಎಂದು ದ್ರೌಪದಿಗೆ ಹೇಳಿಕಳುಹಿಸುತ್ತಾನೆ. ಆಕೆ ನಲವೇರಿ ನೇವುರದ ಎಳಮೊಳಗು ಮನಮೋಹಿಸುವಂತೆ ಆ ಎಡೆಗೆ ಬರುತ್ತಾಳೆ. ಆದರೆ ಅಗ್ನಿಪುತ್ರಿ ಕೂಡ ಆಗಿನ ಆ ಭೀಮಸೇನನ ಧುರಪರಾಕ್ರಮವಹ್ನಿ ಭುಗಿಲೆಂದರಿ ಭಯಂಕರ ರೌದ್ರ ರೂಪಿನೊಳಿರಲು ಅವನ ಬಳಿಗೆ ಬರಲು ಅಂಜಿ ಹಿಂದಿರುಗುತ್ತಾಳೆ. ಪವನಸುತನೆ ಆ ಪಂಕರುಹಮುಖಿಯನ್ನು ಬಳಿಗೆ ಕರೆದು ‘ನಿನ್ನ ಬಯಕೆ ಪೂರೈಸಿತೆ ನೋಡು’ ಎಂದು ನುಗ್ಗುನುರಿಯಾಗಿದ್ದ ದುಶ್ಯಾಸನನ ಮಹಾ ಹೆಣವನ್ನು ತೋರಿಸುತ್ತಾನೆ. ಅಜ್ಜಿಗುಜ್ಜಾದ ಆ ಕಳೇಬರವನ್ನು ಗುರುತಿಸಲಾರದೆ ದ್ರೌಪದಿ ಕೇಳುತ್ತಾಳೆ:

‘ಆರಿವನು?’

‘ನೀ ಕೊಟ್ಟ ಭಾಷೆಯ ಕಾರಣಿಕ!’ಭೀಮನ ಉತ್ತರ.

‘ಖಳರೊಳಗಿದಾವನು?’ ದುಶ್ಯಾಸನನೆ ದುರ್ಯೋಧನನೆ ಶಕುನಿಯೆ ಇತರ ದುಷ್ಟರೆ ಎಂಬ ವಿಚಾರದಲ್ಲಿ ಸಂಶಯಗ್ರಸ್ತೆಯಾದ ದ್ರೌಪದಿಯ ಪುನಃ ಪ್ರಶ್ನೆ.

‘ವೀರ ದುಶ್ಯಾಸನ ಕಣಾ’ ಎಂಬುದು ಭೀಮನ ಉತ್ತರ.

‘ಅಂತಾದಡಾಯ್ತು!’ ಎಂದು ಸಂತೃಪ್ತೆಯಾದ ಪಂಚವಲ್ಲಭೆ ಭರ್ತಾರನ ಬಳಿ ಸಾರಿ ನಸುನಗುತ್ತ ತನ್ನ ಚರಣದ ಚಾರುನೇವುರ ಉಲಿಯುವಂತೆ ಖಳನ ಮಸ್ತಕವನ್ನು ಒದೆಯುತ್ತಾಳೆ. ‘ನುಡಿದ ಭಾಷೆಯ ಕಡೆತಕ ಪೂರೈಸಿ ಮಾಡುವ ಕಡುಗಲಿಗಳಾರುಂಟು ಜಗದೊಳು ನಿನ್ನ ಹೋಲುವರು’ ಎಂದು ಗಂಡನನ್ನು ಮೆ‌ಚ್ಚುತ್ತಾಳೆ.

‘ತರುಣಿ, ಕುಳ್ಳಿರು. ಸ್ವಾಮಿ ದ್ರೋಹಿಯ ಕರುಳ ಮುಡಿ, ಬಾ. ನಿನ್ನ ಖಾತಿಯ ಪರಿಹರಿಸುವೆನು. ಖಳನ ರುಧಿರಸ್ನಾನಕೆಳುಸುವರೆ ಕೊಳ್’ ಎಂದು ಖಳದುಶ್ಯಾಸನನ ಉರವನ್ನು ಇಬ್ಬಗಿಮಾಡಿ ಕುಡಿತೆಯಲಿ ಕೆನ್ನೀರನ್ನು ಮೊಗೆದ. ತನ್ನ ಮಾನಿನಿಯ ‘ವೇಣಿಯನು ನಾದಿದನು. ದಂತಶ್ರೇಣಿಯಲಿ ಬಾಚಿದನು, ಬೈತಲೆ ತೆಗೆದು ಚೆಲುವಿನಲಿ.’ ಮುಂದೆ ಭೀಮ ದ್ರೌಪದಿಯರ ಅಮಾನುಷವಾದ ರಕ್ತಶೃಂಗಾರದ ವರ್ಣನೆ ಭಯಂಕರವಾಗಿ ಸಾಗುತ್ತದೆ. ಅಂತೂ ಬಿಚ್ಚಿದ ಮುಡಿ ಕಟ್ಟುತ್ತದೆ. ಅದನ್ನು ಶ್ರೀಮುಡಿ ಎಂದು ಕರೆಯುವುದಕ್ಕೂ ಈಗ ಹೆದರಿಕೆಯಾಗುತ್ತದೆ. ಏಕೆಂದರೆ ಅಂದು ಯಾವ ಮುಡಿ ಕರತುವರದಲ್ಲಿ ಉದ್ದಾಮ ಮುನಿ ಜನರಿಂದ ರಚಿತವಾದ ಮಂತ್ರಪುಷ್ಕಲಗಳಿಂದ ಪೂತವಾದ ಪುಣ್ಯಜಲಾಭಿಷೇಚನದಿಂದ ಶ್ರೀಯುವಾಗಿದ್ದಿತೊ ಅದು ಇಂದು ನೀಚನೊಬ್ಬ ನೆತ್ತರು ನೆಣ ಕರುಳು ಮಾಂಸಾದಿ ಭಯಂಕರ ಅಸಹ್ಯತೆಯಿಂದ ಲಿಪ್ತವಾಗಿ ಅಶ್ರೀಯುತವಾಗಿದೆ ಅಥವಾ ರೌದ್ರಬೀಭತ್ಸ ಭಯಾನಕ ರಸಶ್ರೀಯುತವಾಗಿದೆ.

ಪಂಪಮಹಾಕವಿ ಇದೇ ಭಯಂಕರ ಚಿತ್ರವನ್ನು ಇದಕ್ಕಿಂತಲೂ ಹೆಚ್ಚು ಕಲಾಮಯವಾಗಿ ಕಲಾಭಿರುಚಿಗೆ ಸಮ್ಮತವಾಗುವಂತೆ ಹನ್ನೆರಡನೆಯ ಆಶ್ವಾಸದ ೧೫೦, ೧೫೧ ನೆಯ ಪದ್ಯಗಳಲ್ಲಿ ವರ್ಣಿಸಿರುವುದನ್ನು ನಾವು ಕಾಣುತ್ತೇವೆ. ದ್ರೌಪದಿಯೂ ಅದನ್ನು ಕಂಡಾಗ ಅವಳ ಅರಣ್ಯಾವಾಸದ ಮತ್ತು ಪರಿಭವದ ಕುದಿಹವೆಲ್ಲ ನೀಗಿ ಆಕೆಯ ಹೃದಯ ಸುಖವಾಸಮನೆಯ್ದಿದುದು. ಪಂಪನ ಭೀಮನೂ ಬಿಚ್ಚಿದ ಮುಡಿಯನ್ನು ಶತ್ರುವಿನ ರಕ್ತತೈಲದಿಂದ ನಾದು, ಅವನ ಹಲ್ಲ ಹಣಿಗೆಯಿಂದ ಆ ಕೂದಲನ್ನು ಬಾಚಿ, ಆ ಒಸಗೆಗೆ ‘ಕರುಳ್ಗಳೆ ಪೊಸವಾಸಿಗಮಾಗೆ ಕೃಷ್ಣೆಯಂ ಮುಡಿಯಿಸಿದಂ.’ ಅಲ್ಲದೆ ಆ ಕಟ್ಟಿದ ಶ್ರೀಮುಡಿಗೆ ಚೂಡಾಮಣಿಯಿಡುವಂತೆ, ಅದರ ಅಸಾಮ್ಯತೆ, ಅತಿಶಯತೆ, ಶಕ್ತಿ, ಪವಿತ್ರತೆ ಇವು ಮಿಡಿಯುವಂತೆ. ಮಹಸ್ರಗ್ಧರೆಯ ಮಹರುದ್ರ ವೀಣೆಯ ಭವ್ಯಧ್ವನಿಯೊಂದನ್ನು ಮೀಂಟಿದ್ದಾನೆ:

ಇದಱೊಳ್ ಶ್ವೇತಾತಪತ್ರ ಸ್ಥಗಿತ ದಶದಿಶಾಮಂಡಲಂ ರಾಕಚಕ್ರಂ
ಪುದಿದಱ್ಕಾಡೊತ್ತಡಂಗಿತ್ತಿದಱೊಳೆ ಕುರುರಾಜಾನ್ವಯಂ ಮತ್ಪ್ರತಾಪ
ಕ್ಕಿದಱೆಂದಂ ನೋಡಗುರ್ವುರ್ವಿದುದಿದುವೆ ಮಹಾಭಾತಕ್ಕಾದಿಯಾಯ್ತ
ಬ್ಜದಳಾಕ್ಷೀ ಪೇೞ ಸಾಮಾನ್ಯಮೆ ಬಗೆಯೆ ಭವತ್ಯೇಶ ಪಾಶ ಪ್ರಪಂಚಂ.

ಇದನ್ನು ಆಲಿಸಿದ ಯಾರೆ ಆಗಲಿ ದ್ರೌಪದಿಯ ಶ್ರೀಮುಡಿಯನ್ನು ಬರಿಯ ತುರುಬು ಎಂದು ಹೇಳಲು ಸಾಧ್ಯವೆ? ಅದನ್ನು ಬಣ್ಣಿಸುವ ರೀತಿಯನ್ನು ಕುರಿತು ‘ಮೊಳದುದ್ದದ ಮೂಗುತಿ’ಎಂದು ಕವಿವಾಣಿಯನ್ನು ಮೂದಲಿಸಲು ಸಾಧ್ಯವೆ?

 

 

 


[1] ಶೈಲಿ-ಶ್ರೀ ಎಸ್.ವಿ.ರಂಗಣ್ಣ.

[2] ಸೋsತಿ ದುಸ್ಸಂಚರೋ ಯೇನ ವಿದಗ್ಧ ಕವಯೋ ಗತಾಃ
ಖಡ್ಗಧಾರಾ ಪಥೇನೈವ ಸುಭಟಾನಾಂ ಮನೋರಥಾಃ-ಕುಂತಕ

[3] ಸುಕುಮಾರಾಭಿಧಸ್ಸೋsಯಂ ಯೇನ ಸತ್ಕವಯೋ ಗತಾಃ
ಮಾರ್ಗೇಣೋತ್ಫುಲ್ಲ ಕುಸುಮಕಾನನೇನೈವ ಷಟ್ಪದಾಃ-ಕುಂತಕ

[4] Free style wrestling

[5] ಕರ್ಣಪರ್ವ-ಸಂಧಿ ೧೯ ಪದ್ಯ ೫ ರಿಂದ ೭೩ರ ವರೆಗೆ