ಮುಂಬರುವ ಸಾಹಿತ್ಯದ ಸ್ವರೂಪವೇನು? ಅದು ಯಾವ ಯಾವ ರೂಪಗಳಿಗೆ ತಿರುಗುತ್ತದೆ? ಯಾವ ಭಾವಗಳು, ಎಂತಹ ಶಕ್ತಿಗಳು ಅದಕ್ಕೆ ಪ್ರೇರಕವಾಗುತ್ತವೆ? ಅದರ ಉದ್ದೇಶಗಳೇನು? ಅದರ ಗುರಿಯೇನು? ಅದು ಅನುಸರಿಸುವ ವಿಧಾನಗಳೇನು? ಈ ಪ್ರಶ್ನೆಗಳಿಗೆ ಕಣಿ ಹೇಳುವಂತೆ ಉತ್ತರ ಹೇಳುವುದು ದುಃಸಾಧ್ಯವಾದರೂ ಇಂದಿನ ಮತ್ತು ಹಿಂದಿನ ಪ್ರಪಂಚದ ಮತ್ತು ಸಾಹಿತ್ಯದ ಪರಿಸ್ಥಿತಿಯನ್ನು ಪರ್ಯಾಲೋಚಿಸಿದಲ್ಲಿ ಮುಂದೆ ಏನಾಗಬಹುದು? ಏನು ಬರಬಹುದು? ಎಂಬ ಕ್ರಾಂತದರ್ಶನ ಸ್ವಲ್ಪಮಟ್ಟಿಗಾದರೂ ಕಲ್ಪನಾಗೋಚರವಾಗಬಹುದೆಂದು ತೋರುತ್ತದೆ.

ಲೋಕದ ಇತರ ಕ್ಷೇತ್ರಗಳಲ್ಲಿರುವಂತೆ ಸಾಹಿತ್ಯದಲ್ಲಿಯೂ ಒಂದು ನಿತ್ಯಾಂಶ, ಒಂದು ಲೀಲಾಂಶ, ಒಂದು ಸ್ಥಾರಾಂಶ, ಒಂದು ಚರಾಂಶ ಇರುತ್ತವೆ. ನಿತ್ಯಾಂಶವೂ ತ್ರಿಕಾಲಾತೀತವಾಗಿರುವುದರಿಂದ ಸಾರ್ವಕಾಲಿಕವೆಂಬಂತೆ ತೋರುತ್ತದೆ; ಲೀಲಾಂಶ ಅಥವಾ ಚರಾಂಶವು ಕಾಲಾಧೀನವಾಗಿರುವುದರಿಂದ ಕಾಲಾತ್ಮಕವಾಗಿ ತಾತ್‌ಕಾಲಿಕವಾಗಿ ಹೊಮ್ಮುತ್ತದೆ. ಈ ಸತ್ಯ ಮಾನವಜೀವನದಲ್ಲಿರುವಂತೆಯೆ ಆ ಜೀವನ ಮತ್ತು ಜೀವನಾನುಭವಗಳನ್ನು ಪ್ರತಿಬಿಂಬಿಸುವ ಮತ್ತು ಪ್ರತಿಮಿಸುವ ಸಾಹಿತ್ಯದಲ್ಲಿಯೂ ಪ್ರಕಟವಾಗುತ್ತದೆ. ಎಲ್ಲಿಯಾದರೂ ನಿತ್ಯವೂ ನೂತನವಾಗಿ ಹೊಮ್ಮುವ ಆ ಚಿರತತ್ತ್ವವು ಚರತತ್ತ್ವವಾಗಿ ಪ್ರಕಟಗೊಳ್ಳದಿದ್ದರೆ ಆ ಜೀವನ ಮುಗಿದು ಮೃತಸ್ಥಿತಿ ಪ್ರಾಪ್ತವಾಯಿತೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಆದ್ದರಿಂದಲೆ ಎಲ್ಲಿ ಸಾಹಿತ್ಯ ಜೀವಂತವಾಗಿರುತ್ತದೆಯೋ ಅಲ್ಲಿ ಬದಲಾವಣೆ ಪರಿವರ್ತನೆ ಅನಿವಾರ್ಯವಾಗಿ ಸಂಭವಿಸುತ್ತದೆ.

ಆದರೆ ಆ ಪರಿವರ್ತನೆ ಯಾವುದರಲ್ಲಿ ಚರಿಸುತ್ತದೆ? ಯಾವ ರೂಪದಲ್ಲಿ ಹೇಗೆ ಪ್ರಕಟವಾಗುತ್ತದೆ? ಭಾವಾಂಶದಲ್ಲಿಯೆ? ಚಿಂತನಾಂಶದಲ್ಲಿಯೆ? ಕಲ್ಪನಾಂಶದಲ್ಲಿಯೆ? ರೂಪಾಂಶದಲ್ಲಿಯೆ? ವಸ್ತುವಿನಲ್ಲಿಯೆ? ರೀತಿ ಅಲಂಕಾರಾದಿಗಳಲ್ಲಿಯೆ? ರಸದಲ್ಲಿಯೆ?

ಪ್ರಾಣದ ತೀವ್ರ ಅಭೀಪ್ಸೆಯಿಂದ ಪ್ರಾಣಿಯ ಅಂಗಾಂಗವಿರಚನೆಯಲ್ಲಿ ಸನ್ನಿವೇಶಾಧೀನವಾಗಿ ಪರಿವರ್ತನೆಗಳಾಗುತ್ತವೆ ಎಂದು ಜೀವವಿಜ್ಞಾನ ಹೇಳುತ್ತದೆ. ಅಂತಹ ಪರಿವರ್ತನೆಗೆ ಕಾರಣ ವಿವಿಧವೂ ವ್ಯತ್ಯಸ್ತವೂ ನೂತನವೂ ಆಗಿರುವ ಅನುಭವಗಳ ಅಪೇಕ್ಷೆಯಿಂದಾಗಿ ಪ್ರಾಣದ ಅಥವಾ ಪ್ರಾಣಿಯ ಹೃದಯದಲ್ಲಿ ಮೂಡುವ ಉತ್ಕಟ ಅಭೀಪ್ಸೆ ಅಥವಾ ಹಾರೈಕೆ. “ಹಾರೈಸಿ ಹಾರೈಸಿ ಹಾರಿದುದೊ ನೀರಧಿಯ ಮೀನ.” ಕಡಲ ಮೀನಿಗೆ ರೆಕ್ಕೆ ಮೂಡಿ ಅದು ಹಕ್ಕಿಯಾದುದಕ್ಕೆ ಕಾರಣವೇನು? ಸೃಷ್ಟಿಯನ್ನು ಹಿಂದಣಿಂದ ಮುನ್ನೂಂಕಿ ಪ್ರೇರಿಸುತ್ತಿರುವ ‘ಸ್ವಧಾ’ ಶಕ್ತಿಯ

[1] ಮತ್ತು ಅದನ್ನು ಮುಂದಣಿಂದ ಸೆಳೆದು ಊರ್ಧ್ವಾಭಿಮುಖವಾಗಿ ಆಕರ್ಷಿಸುತ್ತಿರುವ “ಪ್ರಯತಿ” ಶಕ್ತಿಯ ಪರಿಣಾಮವಾಗಿ ಮೀನಿನ ಹೃದಯದಲ್ಲಿ ಮೂಡಿದ ಬಾನಲೆತದ ಕಡುಹಾರೈಕೆಯಲ್ಲವೆ? ಅಂತಹ ನವಾನುಭವಮೂಲವಾದ ಅಭೀಪ್ಸೆಯೆ ನೈಸರ್ಗಿಕ ಪರವರ್ತನೆಗೆ ಕಾರಣವಾಗುತ್ತದೆ. ಅನುಭವ, ಅಭೀಪ್ಸೆ, ಅದಕ್ಕೆ ಅನುಗುಣವಾಗಿ ಅಕೃತಕವಾಗಿ ನಿಸರ್ಗಸಹಜವಾಗಿ ಸಂಭವಿಸುವ ರೂಪ ವ್ಯತ್ಯಾಸ – ಈ ಮೂರನ್ನು ನಾವು ಲಕ್ಷ್ಯದಲ್ಲಿಡಬೇಕು. ಏಕೆಂದರೆ ಈ ಮೂರರಲ್ಲಿ ಯಾವುದೊಂದು ಊನವಾದರೂ ವಿಕಾರಸೃಷ್ಟಿಯಾಗುತ್ತದೆ. ಅಂತಹ ವಿಕಾರಸೃಷ್ಟಿ ನೂತನವಾಗಿ ತೋರಿದರೂ ಅದಕ್ಕೆ ಬದುಕುವ ಹಕ್ಕೆ ಇರುವುದಿಲ್ಲ. ಒಂದೆರಡು ದಿನಗಳ ಮಟ್ಟಿಗೆ ಜನರ ಕುತೂಹಲವನ್ನು ಕೆಣಕಿ ಸೆಳೆದು ಕೆರಳಿಸಿ ಸತ್ತುಹೋಗುತ್ತದೆ. ಎರಡು ತಲೆಯ ಕೋಳಿಮರಿ ಅಥವಾ ಎಂಟು ಕಾಲಿನ ಕರು ಹುಟ್ಟಿ ಅಳಿಯುವಂತೆ.

ಪ್ರಪಂಚಜೀವನ ಅನೇಕತೆಯಿಂದ ಏಕತೆಗೆ ಚಲಿಸುತ್ತಿದೆ. ಅನೇಕತೆಯನ್ನು ಇಲ್ಲಗೈಯುವ ಏಕತೆಯ ಕಡೆಗಲ್ಲ; ಅನೇಕತೆಯನ್ನು ಸಮನ್ವಯಗೊಳಿಸುವ ಏಕತೆಗೆ. ಅದರ ಪರಿಣಾಮವಾಗಿ ಅಥವಾ ಮತ್ತೊಂದು ಗೂಢತರದೃಷ್ಟಿಯಿಂದ ಅದಕ್ಕೆ ಕಾರಣವಾಗಿ, ಒಂದು ಪೂರ್ಣದೃಷ್ಟಿ ಸಿದ್ಧವಾಗುತ್ತಿದೆ. ಈ ಪೂರ್ಣದೃಷ್ಟಿಯ ಮತ್ತು ಸಮನ್ವಯಬುದ್ಧಿಯ ಪರಿಣಾಮವಾಗಿ ಅಥವಾ ಮತ್ತೊಂದು ಗೂಢತರದೃಷ್ಟಿಯಿಂದ ಅದಕ್ಕೆ ಕಾರಣವಾಗಿ, ಒಂದು ಪೂರ್ಣದೃಷ್ಟಿ ಸಿದ್ಧವಾಗುತ್ತಿದೆ. ಈ ಪೂರ್ಣದೃಷ್ಟಿಯ ಮತ್ತು ಸಮನ್ವಯಬುದ್ಧಿಯ ಪರಿಣಾಮವಾಗಿ ಒಂದು ಸರ್ವ ಸಮಾನತೆಯ ಸಮತಾಭಾವ ತಲೆದೋರಿ ಸುಪ್ರತಿಷ್ಠಾಪಿತವಾಗಲು ಪ್ರಯತ್ನಿಸುತ್ತದೆ. ರಾಜಕೀಯ ಮತ್ತು ಆರ್ಥಿಕರಂಗಗಳಲ್ಲಿ ಅದು ವರ್ಣಪೂರ್ಣವಾಗಿ ಕಲಹಕೌಲುಗಳಿಂದ ರಂಜಿತವಾಗಿ ಸುಪ್ರಕಟವಾಗಿ ಗೋಚರಿಸುತ್ತದೆ. ಆದರೆ ಸಾಮಾಜಿಕ ರಂಗದಲ್ಲಿ, ಧಾರ್ಮಿಕ ರಂಗದಲ್ಲಿ ಮತ್ತು ಸಾಹಿತ್ಯಾದಿ ಕಲಾರಂಗಗಳಲ್ಲಿಯೂ ಅದು ತನ್ನ ನಿಗೂಢ ಕಾರ್ಯದಲ್ಲಿ ತೊಡಗಿರುವುದನ್ನು ಹೊಕ್ಕು ನೋಡಿದರೆ ಕಾಣುತ್ತೇವೆ.

ಮತ ಧರ್ಮ ದೇವರು ಈ ವಿಚಾರಗಳಲ್ಲಿ ಸಂಕುಚಿತಭಾವಗಳು ವಿಶಾಲವಾಗುತ್ತಿವೆ. ಉಗ್ರರಾಷ್ಟ್ರೀಯತೆಯ ಸ್ವಾರ್ಥತೆ ಸ್ವಪ್ರತಿಷ್ಠೆಗಳು ಅಂತರ  ರಾಷ್ಟ್ರೀಯತೆಯ ಕೊಳುಕೊಡೆ ಮೈತ್ರಿಗೆ ಹೆಚ್ಚು ಹೆಚ್ಚು ಶರಣಾದಲ್ಲದೆ ಶಾಂತಿ ಕ್ಷೇಮಗಳು ಯಾವ ಒಂದು ದೇಶಕ್ಕೂ, ಅದು ಎಷ್ಟೇ ದೊಡ್ಡದಾಗಿರಲಿ ಬಲವಾಗಿರಲಿ ಶ್ರೀಮಂತವಾಗಿರಲಿ ಲಭಿಸುವುದಿಲ್ಲ. ದಕ್ಕುವುದಿಲ್ಲ ಎಂಬ ಬುದ್ಧಿ ರಾಜಕಾರಣಿಗಳಲ್ಲಿ ಎಂದಿಗಿಂತಲೂ ಅತಿಶಯವಾಗಿ ಮೂಡುತ್ತಿರುವಂತೆ ತೋರುತ್ತಿದೆ. ಸಂಪತ್ತಿನ ವಿನಿಯೋಗದಲ್ಲಿ ‘ಸರ್ವರಿಗೆ ಸಮಪಾಲು’ ಸರ್ವರಿಗೆ ಸಮಬಾಳು’ಎಂಬ ಮೂಲತತ್ತ್ವದ ಅನುಷ್ಠಾನ ದಿನದಿನಕ್ಕೂ ಹಬ್ಬಿ ದಿಗ್ವಿಜಯ ಸಾಧಿಸುತ್ತಿದೆ; ಸರ್ವೋದಯ ಸಿದ್ಧಾಂತ ಸಂಸ್ಥಾಪಿತವಾಗುತ್ತಿದೆ.

ಇದನ್ನೆಲ್ಲ ಗಮನಿಸಿದರೆ ಸಮನ್ವಯ, ಸರ್ವೋದಯ, ಪೂರ್ಣದೃಷ್ಟಿ ಈ ಮೂರು ಮಹಾತತ್ತ್ವಗಳು ಜಗತ್ತಿನ ಮುಂದಿನ ಬಾಳಿನ ಮೂಲಮಂತ್ರಗಳಾಗುವುದರಲ್ಲಿ ಸಂದೇಹವಿಲ್ಲ. ಆ ಬಾಳನ್ನು ನಿರೂಪಿಸುವುದರಲ್ಲಿಯೂ ರೂಪಿಸುವುದರಲ್ಲಿಯೂ ಸ್ಥಾಪಿಸುವುದರಲ್ಲಿಯೂ ಆಸಕ್ತವಾಗುವ ಮುಂದಿನ ಸಾಹಿತ್ಯಕ್ಕೂ ಆ ಮೂಲ ಮಂತ್ರತ್ರಯಗಳೆ ‘ದರ್ಶನ’ವಾಗಿ ಮಾರ್ಗದರ್ಶಕವಾಗುತ್ತವೆ. ಆ ‘ದರ್ಶನ’ದ ಅಭಿವ್ಯಕ್ತಿಗೆ ಅವಶ್ಯಕವಾಗುವ ‘ನಿದರ್ಶನ’ವನ್ನು ಸಾಹಿತ್ಯ ಹೊಸದಾಗಿ ಹುಟ್ಟಿಸಿಕೊಳ್ಳಲೂಬಹುದು ಅಥವಾ ಹಳೆಯ ಸಾಮಗ್ರಿಯಿಂದಲೆ ಕಟ್ಟಿಕೊಳ್ಳಲೂಬಹುದು. ಅದರ ‘ಪ್ರದರ್ಶನ’ಕ್ಕೆ ಬೇಕಾದ ಕಾವ್ಯಶರೀರವೂ ತನಗೆ ತಾನೆ ಸಿದ್ಧವಾಗುತ್ತದೆ. ಹಳೆಯ ರೂಪಗಳು ಸಾಲದಿದ್ದರೆ ಹೊಸ ರೂಪಗಳನ್ನು ಕಂಡುಕೊಳ್ಳುತ್ತದೆ, ಕಟ್ಟಿಕೊಳ್ಳುತ್ತದೆ. ಆದರೆ ಯಾವ ಶರೀರವಾಗಲಿ ರೂಪವಾಗಲಿ ಅನುಭವ ಅಭೀಪ್ಸೆಗಳ ಒತ್ತಡದಿಂದ ಸಹಜವಾಗಿಯೆ ಮಾಡಬೇಕಾದುದು ಮಾತ್ರ ಅವಶ್ಯಕ. ಏಕೆಂದರೆ ಸಾಹಿತ್ಯ ಶರೀರದಲ್ಲಿ ಎಂದರೆ ಅದರ ರೂಪಾಂಶದಲ್ಲಿ ಏನೇ ಪರವರ್ತನೆಗಳುಂಟಾದರೂ ಅದು ರಸಾಭಿವ್ಯಕ್ತಿಗೆ ಸಾಧನವಾಗದಿದ್ದರೆ ವ್ಯರ್ಥವಾಗುತ್ತದೆ. ಏಕೆಂದರೆ, ರಸವೆ ನಿತ್ಯಾಂಶ; ಉಳಿದುದೆಲ್ಲವೂ ಅದರ ಹೊಮ್ಮಿಕೆಗೆ ಮೀಸಲಾಗಿರುವ ಲೀಲಾಂಶ.


[1]     ಸ್ವಧಾ ಅವಸ್ತಾತ್ ಪ್ರಯತಿಃ ಪರಸ್ತಾತ್-ನಾಸದೀಯ ಸೂಕ್ತ.