ಭಾರತೀಯ ಕಾವ್ಯಮೀಮಾಂಸೆಯಲ್ಲಿ ನಾಟ್ಯ ಮತ್ತು ಕಾವ್ಯದ ಪರಮ ಪ್ರಯೋಜನ ‘ರಸ’ ಎಂದು ಸಿದ್ಧಾಂತವಾಗಿದೆ. ಸಾಮಾನ್ಯವಾಗಿ ನಮ್ಮ ಕವಿಗಳೆಲ್ಲರೂ ಗ್ರಂಥದ ಆದಿಯಲ್ಲಿ ತಮ್ಮ ಕಾವ್ಯವನ್ನು ಕುರಿತು ಏನಾದರೂ ನಾಲ್ಕು ಮಾತುಗಳನ್ನು ಹೇಳಿಕೊಂಡಿರುವುದು ಕಾಣಬರುತ್ತದೆ. ಆದರೆ ಯಾರೊಬ್ಬರು ತಮ್ಮ ಕಾವ್ಯದ ಪರಮ ಪ್ರಯೋಜನ ‘ರಸ’ ಎಂದು ಮಾತ್ರ ಒಡೆದು ಹೇಳಿಲ್ಲ. ಅದಕ್ಕೆ ಬದಲಾಗಿ, ತಮ್ಮ ತಮ್ಮ ಆಧ್ಯಾತ್ಮಿಕ ದೃಷ್ಟಿಗಳಿಗನುಸಾರವಾಗಿ, ತಮ್ಮ ತಮ್ಮ ಮತಧರ್ಮಗಳ ದೃಷ್ಟಿಗನುಸಾರವಾಗಿ, ಬದುಕಿನ ಪರಮ ಪ್ರಯೋಜನವಾಗುವುದೋ ಅದನ್ನೇ ಕಾವ್ಯಪ್ರಯೋಜನ ಎಂಬ ಅರ್ಥ ಬರುವಂತೆ ಹೇಳಿದ್ದಾರೆ. ‘ಕಲೆಗಾಗಿ ಕಲೆ’, ‘ರಸಕ್ಕಾಗಿ ರಸ’ ಎನ್ನುವಂತಹ ಮಾತು ಯಾರೊಬ್ಬರಲ್ಲಿಯೂ ಬಂದಿಲ್ಲ.

ಜನ್ನ ಕವಿ ತನ್ನ ‘ಯಶೋಧರ ಚರಿತೆ’ಯ ಆದಿಭಾಗದಲ್ಲಿ ತನ್ನ ಕಾವ್ಯದ ಉದ್ದೇಶವನ್ನು ಕುರಿತು ಹೀಗೆ ಹೇಳಿಕೊಂಡಿದ್ದಾನೆ:

ಶ್ರಾವಕಜನದುಪವಾಸಂ
ಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗ
ಳ್ಗೀ ವಸ್ತುಕಥನದಿಂದು
ದ್ಭಾವಿಸೆ ಕವಿಭಾಳಲೋಚನಂ ವಿರಚಿಸಿದಂ

ಯಾವುದೊ ಒಂದು ಧಾರ್ಮಿಕ ದಿನದಂದು ಕೈಕೊಳ್ಳುವ ವ್ರತದ ಅಂಗವಾಗಿ ನಡೆಸುವ ಪಾರಣೆಯ ವಸ್ತು ಈ ಕಾವ್ಯ; ಇದೊಂದು ಪರಮ ಪುರುಷಾರ್ಥ ಸಾಧನೆಯ ಆಧ್ಯಾತ್ಮಿಕ ಪ್ರಯೋಜನವುಳ್ಳದ್ದು ಎಂಬುದು ಅವನ ಸೂಚನೆ. ಒಟ್ಟಿನಲ್ಲಿ ಇದೇ ಮುಖ್ಯವಾಗಿ ಅವನ ದೃಷ್ಟಿ. ಆದರೆ ಮುಂದೆ, ‘ರಸಾನ್ವಿತಮಾಗಿರೆ ಕಥೆ ಬುಧಸಂತತಿಗಕ್ಷಯ ಸುಖ ಮನೀವುದೊಂದಚ್ಚರಿಯೇ’ ಎನ್ನುವಲ್ಲಿ ಆತ ‘ಕಥೆ ರಸಾನ್ವಿತವಾಗಿರಬೇಕು’ಎಂಬುದನ್ನು ಒಪ್ಪಿಕೊಂಡಿದ್ದರೂ ‘ರಸವೇ ಪರಮ ಪ್ರಯೋಜನ’ ಎಂದು ಮಾತ್ರ ಹೇಳಿಲ್ಲ. ಎಂದರೆ ಈ ದೃಷ್ಟಿಯಲ್ಲಿ, ‘ಕಲೆಯೆಲ್ಲ ಬದುಕಿನ ಒಂದು ಅಂಗ; ಬದುಕು ಕಲೆಗಿಂತ ದೊಡ್ಡದು; ಬದುಕು ಸಾಧಿಸಬೇಕಾದ ಪರಮ ಗುರಿಯೊಂದಿದೆ.’ ಆ ಗುರಿಯನ್ನು ಸಾಧಿಸಲು ಕಲೆ ಒಂದು ಮಾರ್ಗ; ವಿಶಾಲವಾದ ಜನಪ್ರಿಯವಾದ ರಾಜಮಾರ್ಗ. ನಮ್ಮವರು ಸರಸ್ವತಿಯನ್ನು ‘ಮೋಕ್ಷವೇ,’ ‘ಮೋಕ್ಷಮಾರ್ಗೇ’ಎಂಬುದಾಗಿ ಸಂಬೋಧಿಸಿರುವುದನ್ನು ಇಲ್ಲಿ ಗಮನಿಸಬಹುದು. ಜನ್ನನೇ ಹೇಳುವ ‘ಪೊರೆಯೇಱುವುದಮಳದೃಷ್ಟಿಕುವಳಯವನಮಾಚರಿಪ ಜನಕ್ಕೆ…. ಕಥಾಶ್ರವಣಮೆಂಬ ಚಂದ್ರೋದಯದೊಳ್’ ಎಂಬ ಮಾತು ಈ ದೃಷ್ಟಿಯನ್ನು ಸ್ಪಷ್ಟಪಡಿಸುತ್ತದೆ.

ಈ ಯಶೋಧರ ಚರಿತೆಯ‘ಸತ್ಕಥೆ’ಗೆ ಪೀಠಿಕಾಪ್ರಾಯವಾಗಿ ಆರಂಭದಲ್ಲಿ ಒಂದು ಕಥನವೇದಿಕೆ ಸಿದ್ಧವಾಗುತ್ತದೆ. ಈ ಕಥೆಯಲ್ಲಿ ಯಾರು ಪಾತ್ರಧಾರಿಗಳೋ ಅವರಿಂದಲೇ ಕಥೆಯನ್ನು ಹೇಳಿಸುವ ಪ್ರಸಂಗವನ್ನು-ಭವ್ಯ ಪ್ರಸಂಗವನ್ನು-ಕವಿ ಮುಂದೊಡ್ಡಿದ್ದಾನೆ:

ತಾಳುಗೆಯನುರ್ಚಿ ನೆತ್ತಿಯ
ಗಾಳಂ ಗಗದೊಳೆೞಲ್ವ ವಾರಿಯ ಬೀರರ್
ಪಾಳಿಯೊಳೆಸೆದರ್ ಪಾಪದ
ಜೋಳದ ಬೆಳಸಿಂಗೆ ಬೆಚುಗಟ್ಟಿದ ತೆರದಿಂ

ಆಡು ಕುಱೆ ಕೋೞೆ ಕೋಣನ
ಕೂಡಿದ ಪಿಂಡೊಳಱಿ ಪೆಳಱಿ ಮಾರ್ದನಿಯಿಂದಂ
ಕೂಡ ಬನಮೞ್ತುದುರ್ವರೆ
ಬೀಡೆಯಿನೆರ್ದಯೊಡೆದುವಱ ಕೋಟಲೆಗಾಗಳ್

ದೆಸೆದೆಸೆಗೆ ನರಶಿರಂ ತೆ
ತ್ತಿಸೆ ಮೆಱಿದುವು ಮದಿಲೊಳಬ್ಬೆ ಪೇರಡಗಿನ ಪೆ
್ಬೆಸನದೆ ಪೋಱಗಣ ಜೀವ
ಪ್ರಸರಮುಮಂ ಪಲವು ಮುಖದಿನವಳೋಕಿಪವೊಲ್

ಇಂತಹ ಭಯಂಕರ ಸನ್ನಿವೇಶವೊಂದನ್ನು ಸೃಷ್ಟಿಸಿ, ‘ಭೈರವನ ಜವನ ಮಾರಿಯ ಮೂರಿಯವೊಲ್ ನಿಂದ’ ಮಾರಿದತ್ತ ರಾಜ ಚಿತ್ರವನ್ನು ಕೊಟ್ಟು, ಅ ಸನ್ನಿವೇಶದಲ್ಲಿ ಸ್ವಲ್ಪವೂ ವಿಚಲಿತರಾಗದೆ ಸ್ಥೈರ್ಯದಿಂದ ಶಾಂತಿಯನ್ನು ಬೋಧಿಸುವ ಮಕ್ಕಳಿರ್ವರ ಭವ್ಯನೋಟವನ್ನು ಆರಂಭದಲ್ಲಿಯೆ ಕೊಟ್ಟಿದ್ದಾನೆ. ಆಗ ‘ಧನಮಂ ಕಂಡ ದರಿದ್ರನ ಮನದವೊಲೆಱಗಿದುವು ಪರಿಜನಂಗಳ ನೊಸಲ್’, ‘ಭಲರೆ ನೃಪೇಂದ್ರಾ ದಯೆಯೊಳ್ ನೆಲೆಗೊಳಿಸಿದೆ ಮನಮನ್’, ‘ನೀನ್ ಕೇಳ್ದುದು ಸತ್ಫಲಮಾಯ್ತು’ ಎನುವಲ್ಲಿ, ಈ ಕಥನ ‘ಸತ್ಕಥನ’ ಎನುವಲ್ಲಿ ನಿಜವಾದ ಕಾವ್ಯದ ಉದ್ದೇಶ ವ್ಯಕ್ತವಾಗಿದೆ. ಮಾರಿದತ್ತಂ ಕಲಿಯಂ ಮೂದಲಿಸಿದಂತೆ ದೇವನೆ ಆದಂ’ ಎಂದು ಹೇಳುವ ಮಾತಾದರೂ ಮೇಲಿನ ದೃಷ್ಟಿಯನ್ನೆ ಧ್ವನಿಸುತ್ತದೆ.

ಎಲ್ಲರೂ ಕೃತಿ ರಸಾನ್ವಿತವಾಗಿರಬೇಕೆಂಬುದನ್ನು ಒಪ್ಪಿಕೊಂಡು ಕೃತಿಯ ಪರಮ ಪ್ರಯೋಜನ ಧರ್ಮಾರ್ಥಕಾಮಮೋಕ್ಷಗಳಾದ ಪುರುಷಾರ್ಥಗಳು ಮತ್ತು ಪರಮಪುರುಷಾರ್ಥ ಎಂದು ಹೇಳುತ್ತಾರೆ. ಕಾವ್ಯಪ್ರಯೋಜನ ಆಧ್ಯಾತ್ಮಿಕವಾದುದು, ಮೋಕ್ಷದಾಯಕವಾದುದು ಎನ್ನುವ ಉದ್ದೇಶದಲ್ಲಿಯೇ ಅದು ರಸಾತ್ಮಕವಾದುದೆಂಬುದರ ಸೂಚನೆಯೂ ಇದೆ. ಕಾರಣ, ಲೌಕಿಕವಾದ ಭಾವರಸವಾಗಿ ಪರಿವರ್ತಿತವಾಗಲು ನಿಸ್ಸಂಗತೆ ಅಥವಾ ಸಂಗದೂರತ್ವ ಅವಶ್ಯಕ. ಎಲ್ಲ ರಸಾನುಭವದ ಪರ್ಯವಸನ ಶಾಂತದಲ್ಲಿಯೆ. ಇದನ್ನೆ ಜನ್ನನಾದರೂ ಪೀಠಿಕೆಯಲ್ಲಿ ಪ್ರತಿಪಾದಿಸಿರುವುದು.

ಈ ಕಾವ್ಯದ ಸನ್ನಿವೇಶಗಳನ್ನಾಗಲಿ ಅಥವಾ ಪಾತ್ರಗಳನ್ನಾಗಲಿ ಸಮಾಲೋಚಿಸುವಾಗ ನಾವು ಕವಿಯ ದೃಷ್ಟಿಯನ್ನು ಅನುಸರಿಸಿಯೆ ಹೊರಡುವುದು ಅತ್ಯಗತ್ಯ. ಏಕೆಂದರೆ ‘ಅಪಾರೇ ಕಾವ್ಯಸಂಸಾರೇ ಕವರೇವ ಪ್ರಜಾಪತಿಃ’; ಕವಿ ಕಾವ್ಯದ ಬ್ರಹ್ಮ. ಅವನ ಕೃತಿಯಲ್ಲಿ ಅವನ ದರ್ಶನ ಪ್ರತಿಧ್ವನಿತವಾಗಿರುವುದೆ ಇಲ್ಲವೆ ಎಂಬುದನ್ನು ಮಾತ್ರ ನಾವು ಸಮಾಲೋಚಿಸಬಹುದು.

‘ಯಶೋಧರ ಚರಿತೆ’ಯ ಒಂದು ಪ್ರಸಂಗದತ್ತ ವಿಮರ್ಶಕರನೇಕರ ದೃಷ್ಟಿ ಬಿದ್ದಿದೆ. ಯಶೋಧರ ಅಮೃತಮತಿಯರ ದಾಂಪತ್ಯಜೀವನದ ನಡುವೆ ಬಂದ ಒಂದು ಅಪಪ್ರಸಂಗ ಅದು: ಅಮೃತಮತಿ ಕಾಲುಜಾರಿ ಬೀಳುವ ವಿಚಿತ್ರ ಪ್ರಸಂಗ. ಹೀಗೆ ಕಾಲುಜಾರಿ ಬೀಳುವ ಒಂದು ವ್ಯಕ್ತಿಯ ಬಗೆಗೆ ಸಹಾನುಭೂತಿ ತೋರಿಸುವುದು ಮನುಷ್ಯನ ಲಕ್ಷಣ. ಪಾಶ್ಚಾತ್ಯ ವಿಮರ್ಶ ವಿಧಾನವನ್ನು ಅಭ್ಯಾಸಮಾಡಿರುವ ಈಚಿನ ವಿಮರ್ಶಕರಲ್ಲಿ ಓದುಗರಲ್ಲಿ ಪತಿತ ಪಾತ್ರ ವಿಚಾರದಲ್ಲಿ ಸಹಾನುಭೂತಿ ಅನುಕಂಪಗಳನ್ನು ತೋರಿಸುವ ದೃಷ್ಟಿ ಮನೋಭಾವಗಳು ಬೆಳೆದುಬಂದಿವೆ. ವಿಧಿಯ ವಜ್ರನಿಯತಿಯನ್ನು ಕುರಿತು ಭಯಮಿಶ್ರಿತವಾದ ಗೌರವವುಂಟಾಗುವುದೂ ಪತಿತಪಾತ್ರದಲ್ಲಿ ಮರುಕ ಹುಟ್ಟುವುದೂ ಈ ದೃಷ್ಟಿಗೆ ಸಹಜ. ಷೇಕ್ಸ್‌ಪಿಯರ್ ಕವಿಯ ಹ್ಯಾಮ್ಲೆಟ್, ಮ್ಯಾಕ್‌ಬೆತ್‌  ಮೊದಲಾದ ಪಾತ್ರಗಳಲ್ಲಿ ಇಂತಹ ದೃಷ್ಟಿಯಿಂದ ನಾವು ರಸಾನಂದವನ್ನು ಪಡೆಯುತ್ತೇವೆ. ಆದರೆ ಪತಿತ ಪಾತ್ರಗಳಿಗೆಲ್ಲ ಒಂದೇ ಸಮನಾಗಿ ಅನುಕಂಪ ತೋರಿಸುವುದು ಸಾಧ್ಯವೆ, ಯುಕ್ತವೆ ಎಂದು ವಿಚಾರಮಾಡುವುದು ಅಗತ್ಯ. ಕಾಲುಜಾರಿ ಕುಸಿಯುವ ವ್ಯಕ್ತಿ ‘ಮಹಾನುಭಾವ’ ಲಕ್ಷಣಗಳನ್ನು ಹೊಂದಿದವನಾಗಿದ್ದು, ತನ್ನಲ್ಲಿರುವ ಯಾವುದೋ ಒಂದು ಕುಂದಿನಿಂದ ಅಥವಾ ವಿಧಿಯ ವಜ್ರನಿಯತಿಗೆ ಅನಿವಾರ್ಯವಾಗಿ ಅಹುತಿಯಾಗಿ ದುರಂತತೆಯನ್ನು ಪಡೆದರೆ ಆತನಿಗೆ ನಾವು ಅನುಕಂಪ ತೋರಿಸಬಹುದು. ಆದರೆ ತಾನೇ ಇಚ್ಛಿಸಿ ಅಧಃಪತನಕ್ಕೆ ಇಳಿಯುತ್ತಿರುವಾಗ, ತನ್ನ ಅಧಃಪತನವನ್ನು ಅರಿತಿದ್ದೂ ಅದನ್ನು ತಡೆಯಲು ಪ್ರಯತ್ನಿಸದೆ ಅತ್ತಲೇ ರುಚಿವೇಗದಿಂದ ಸಂತೋಷದಿಂದ ಜಾರುತ್ತಿರುವಾಗ ನಾವು ಅನುಕಂಪ ತೋರಿಸಲಾದೀತೆ? ತೋರಿಸುವುದು ಯುಕ್ತವೆ? ಯುದ್ಧರಂಗದಲ್ಲಿ ಭೀಮನ ಗದಾಪ್ರಹಾರಕ್ಕೆ ಗುರಿಯಾಗಿ ಮೂರ್ಛಿತನಾಗಿ ಬಿದ್ದಿರುವ ವೀರನೂ ಶೂರನೂ ಆದ ದುರ್ಯೋಧನನ್ನು ಕಂಡು ನಾವು ಅನುಕಂಪೆ ತೋರಿಸಬಹುದು. ಆದರೆ ಮಹಾಭಾರತದ ಬುಡದಿಂದ ಕೊನೆಯವರೆಗೆ ಬಗೆಬಗೆಯ ಮಜಲುಗಳಲ್ಲಿ ಬರುವ ದುರ್ಯೋಧನನ ಸಮಗ್ರಪಾತ್ರವನ್ನು ಕುರಿತಾಗ ನಾವು ಅನುಕಂಪೆ ತೋರಿಸಿದರೆ ಅದು ಅನುಕಂಪೆಯಲ್ಲ, ಒಂದು ತೆರನಾದ ಹೃದಯದೌರ್ಬಲ್ಯವಾಗುತ್ತದೆ. ಹೀಗೆ ಇಂತಹ ಪಾತ್ರಗಳ ವಿಚಾರದಲ್ಲಿ ಅಪಾತ್ರದಲ್ಲಿ ಆಸ್ಥಾನದಲ್ಲಿ ತೋರಿಸುವ ಅನುಕಂಪ ‘ಬಾಲಿಶಾನುಕಂಪೆ’. ಈ ‘ಬಾಲಿಶಾನುಕಂಪೆ’ ಜೀವನದಲ್ಲೆಂತೋ ಅಂತೆಯೆ ಸಾಹಿತ್ಯದಲ್ಲಿಯಾದರೂ ನಮ್ಮ ಉದ್ಧಾರಮಾರ್ಗಕ್ಕೆ ಒಂದು ಕಂಟಕವಾಗುತ್ತದೆ.

ಈಗ ಅಮೃತಮತಿ ಮತ್ತು ಯಶೋಧರರಿಗೆ ಸಂಬಂಧಿಸಿದ ಕಾಲುಜಾರುವ ಪ್ರಸಂಗವನ್ನು ವಿವೇಚಿಸಬಹುದು. ಇದಕ್ಕೆ ಮೊದಲು ನಾವು ಈ ಪ್ರಸಂಗ ಒಟ್ಟಿನ ಕಥೆಯಲ್ಲಿ ಗೌಣವೂ ಪ್ರಾಸಂಗಿಕವೂ ಆಗಿರುವುದೆಂಬುದನ್ನು ಗಮನಿಸಬೇಕಾದುದು ಅಗತ್ಯ. ಯಶೋಧರ ಮತತು ಅಮೃತಮತಿ-ಈ ಎರಡು ವ್ಯಕ್ತಿಗಳ ಚೇತನಗಳಲ್ಲಿ ಒಂದು ಊರ್ಧ್ವಗಾಮಿ,ಇನ್ನೊಂದು ಅಧೋಗಾಮಿ. ಕವಿಯ ವಿಶೇಷವಾದ ಪ್ರಜ್ಞೆ ಊರ್ಧ್ವಗಾಮಿಯಾದ ಚೇತನದ ಕಡೆಗೆ, ಆ ಚೇತನದ ಪುಷ್ಟಿಗಾಗಿ ಪೋಷಣೆಗಾಗಿ ಮಾತ್ರ ಕವಿ ಮತ್ತೊಂದು ಚೇತನದ ಕಥೆಯನ್ನೂ ಕೊಡುತ್ತಾನೆ. ಇದನ್ನು ಒಂದು ಪ್ರಣಯಕಥೆ ಎಂದು ಕರೆದರೆ ಅದು ಕಾವ್ಯದ ದೃಷ್ಟಿಯಿಂದ ಸತ್ಯವಾಗುವುದಿಲ್ಲ. ಅಮೃತಮತಿ ಕಾಲುಜಾರಿ ಬೀಳುವುದನ್ನು ‘ಹೃದಯ ದೌರ್ಬಲ್ಯ’ವೆಂದು ಹೆಸರಿಸುವುದೂ ತಪ್ಪಾಗುತ್ತದೆ. ಏಕೆಂದರೆ ಅದು ದೌರ್ಬಲ್ಯರೂಪವಲ್ಲ. ರೋಗರೂಪ: ವಿಕಾರರೂಪ.   ‘ದೌರ್ಬಲ್ಯ’ ಎನ್ನುವುದಾದರೆ ‘ಬಲ’ ಎಂಬುದೊಂದಿರಬೇಕಲ್ಲ! ವಾಸ್ತವಜೀವನದಲ್ಲಿ ಇಂತಹದು ಅಸಂಭವನೀಯವಾದ ಅಥವಾ ಅತ್ಯಂತ ಅಪೂರ್ವವಾದ ಪ್ರಸಂಗ ‘ವೈಪರೀತ್ಯ ಮನಶ್ಯಾಸ್ತ್ರ’ದಲ್ಲಿ ಇಂತಹ ಅತಿ ವಿರಳವಾದ ಘಟನೆಗಳನ್ನು ನಾವು ಕಾಣಬಹುದೇನೋ! ಆದರೆ ಅದೊಂದು ಮಾನಸಿಕ ಜಾಟಿಲ್ಯ. ಅಂತಹ ಅತಿವಿರಳ ಅಸಂಭವನೀಯ ಅಪೂರ್ವ ವಿಕಾರವೊಂದನ್ನು ಧರ್ಮವೇದಿಕೆಯ ಮೇಲಕ್ಕೆಳೆದು ತಂದು ಅದರ ಧರ್ಮಾಧರ್ಮಗಳನ್ನು ತೂಗಲೆಳಸುವುದು ತರ್ಕಬಾಹಿರ.

ಯಶೋಧರ ಅಮೃತಮತಿಯನ್ನು

[1] ಮದುವೆಯಾಗುತ್ತಾನೆ. ಆದರೆ ಅದಕ್ಕೆ ಹಿಂದಿನ ಯಾವ ಒಂದು ಘಟಯನ್ನಾದರೂ ಕವಿ ವರ್ಣಿಸಿಲ್ಲ. ಯಶೋಧರನ ರೂಪವೋ:

ನೋಡುವ ಕಣ್ಗಳ ಸಿರಿ, ಮಾ
ತಾಡುವ ಬಾಯ್ಗಳ ರಸಾಯಣಂ, ಸಂತಸದಿಂ
ಕೂಡುವ ತೋಳ್ಗಳ ಪುಣ್ಯಂ
ನಾಡಾಡಿಯೆ ರೂಪು ಕುವರ ವಿದ್ಯಾಧರನಾ?

ಇನ್ನು ಅಮೃತಮತಿಯೋ ‘ಗಡ ಯಶೋಧರನ ಮನಃಪ್ರಿಯೆ’ ಕವಿ ಹೇಳುವ ಈ ಮಾತುಗಳಿಂದಲೇ ನಾವು ಅವರ ದಾಂಪತ್ಯವನ್ನು ಚಿತ್ರಿಸಿಕೊಳ್ಳುವುದಾದರೆ ಅದೊಂದು ಆದರ್ಶ ದಾಂಪತ್ಯ. ಇಬ್ಬರೂ ಸ್ಫುರದ್ರೂಪಿಗಳು. ಅಲ್ಲಿ ಯಾವ ಬಗೆಯ ಊನಕ್ಕೂ ಆದರ್ಶ ದಾಂಪತ್ಯ. ಇಬ್ಬರೂ ಸ್ಫುರದ್ರೂಪಿಗಳು. ಅಲ್ಲಿ ಯಾವ ಬಗೆಯ ಊನಕ್ಕೂ ಎಡೆಯಿಲ್ಲ. ಅವರ ನಡುವೆ ಯಾವ ಬಗೆಯ ವಿರಸವುಂಟಾಗುವುದೂ ದುಸ್ಸಾಧ್ಯವೆಂಬಂತೆ ಚಿತ್ರಿತವಾಗಿದೆ. ಹೀಗಿರುವಾಗ ಅಮೃತಮತಿ ಜಾರಬಹುದಾದ ಸೂಚನೆಯಾದರೂ ಎಲ್ಲಿ? ಆದರೂ ಆಕೆ ಜಾರಿದಳು. ಜಾರಲು ಕಾರಣ, ಆಕೆ ನೆಟ್ಟಿರುಳಿನಲ್ಲಿ ಕೇಳಿದ ನುಣ್ಪನಿಯೆ? ನಿಜವಾಗಿ ಅದು ಕಾರಣವಲ್ಲ; ಅದೊಂದು ನೆವ, ನೆವಮಾತ್ರ. ಸೋಮದೇವ ಸೂರಿಯ ‘ಯಶಸ್ತಿಲಕ ಚಂಪು’ವಿನಲ್ಲಿ ಅಮೃತಮತಿಗೆ ಗಂಡನನ್ನು ಕುರಿತು ಪ್ರೀತಿಯೆ ಇರಲಿಲ್ಲವೆಂಬ ಮಾತಾದರೂ ಬರುತ್ತದೆ. ಆದರೆ ಜನ್ನನ ‘ಯಶೋಧರ ಚರಿತೆ’ಯಲ್ಲಿ ಆ ಬಗೆಯ ಒಂದೂ ಸೂಚನೆ ಕೂಡ ಇಲ್ಲವಾಗಿದೆ, ಘಟನೆ ಸಂಭವಿಸುವ ಮುನ್ನ.

ಅವನಿಪನೊರ್ಮೆ ಸಭಾಮಣಿ
ಭವನದಿನಂಬರತರಂಗಿಣೀ ಪುಳಿನಮನೆ
ಱುವ ಹಂಸನಂತೆ ಶಯ್ಯಾ
ಧವಳ ಪ್ರಾಸಾದತಳಮನೇಱಿದನ್

ಪರಿಮಳದ ತೂಂಬನೆತ್ತಿದ
ನರಲಂಬಂ ಜನಮನೋವನಕ್ಕೆನೆ ಕಾಳಾ
ಗರುಧೂಮಲತಿಕೆ ಜಾಲಾಂ
ದರದಿಂದೊಗೆದುದು ಕಪೋತಪಕ್ಷಚ್ಛುರಿತಂ

ಎಳದುಂಬಿ ಸುಳಿದು ಸುಟ್ಟುರೆ
ಗೊಳಿಸುವ ಕತ್ತುರಿಯ ಕಪ್ಪುರಂಗಳ ರಜಮುಚ್ಚಳಿಸಿದುವು ನೀಲ ಮುತ್ತಿನ
ಬೆಳಗಿನ ಕುಡಿ ರಾಗರಸದಿನಂಕುರಿಸುವವೋಲ್

ಇಂತಹ ಒಂದು ಭೋಗನಿವಾಸದಲ್ಲಿ,

ಸುರಚಾಪಚ್ಛವಿ ಸುತ್ತಿದ
ಶರದಭ್ರದೊಳೆಸೆವ ಖಚರದಂಪತಿಗಳವೋಲ್

ಅವರಿಬ್ಬರು ಎಸೆಯುತ್ತಿದ್ದಾರೆ. ಇರ್ವರೂ ಭೋಗಸಾಮ್ರಾಜ್ಯದ ಚಕ್ರವರ್ತಿ ದಂಪತಿಗಳು; ಮನಃಪ್ರಿಯರು. ಅವರಿಬ್ಬರಲ್ಲಿ ಯಾರೋಬ್ಬರಿಗೂ ಭೋಗಕ್ಕಾಗಲಿ ಸುಖಕ್ಕಾಗಲಿ ಒಲವಿಗಾಗಲಿ ಕೊರತೆಯಿಲ್ಲ. ಮುಂದೆ ನಡೆಯಲಿರುವ ಘಟನೆಗೆ ಪೂರ್ವಭಾವಿಯಾಗಿ ಯಾವ ಸೂಚನೆಯಾಗಲಿ ಕಾರಣವಾಗಲಿ ಇಲ್ಲಿ ಕಾಣಿಸದು. ಆ ಘಟನೆ ನಡೆಯದೆ ಇದ್ದುದಾಗಿದ್ದರೇ ಸಹಜವಾಗಿರುತ್ತಿತ್ತು ಎನ್ನುವಂತಹ ಸನ್ನಿವೇಶ. ಆ ಘಟನೆ ನಡೆದುದು ಒಂದು ವಿಸ್ಮಯ; ಪವಾಡ! ಇಳಿಜಾರಿನಲ್ಲಿ ಜಾರಿದಂತೆ ಕೂಡ ಅಲ್ಲ, ಪ್ರಪಾತಕ್ಕೆ ಕಾಲುತಪ್ಪಿ ಉರುಳಿದಂತೆ!

ಅವರಿಬ್ಬರೂ ಹೀಗೆ ‘ಮನೋಜನಾಡಿಸುವ ಜಂತ್ರ’ದಂತೆ ನೆರೆದಿದ್ದಾರೆ. ದೈಹಿಕವಾಗಿಯೂ ಪ್ರಣಯಸುಖದ ಪರಾಕಾಷ್ಠೆಯನ್ನು ಸವಿದು ತಣಿದು ದಣಿದರೆಂದು ಜನ್ನ ಚಿತ್ರಿಸುತ್ತಾನೆ[2]

ಹೃದಯಪ್ರಿಯರಂತೊಱಗಿದ
ಪದದೊಳ್ ಗರಟಿಗೆಯ ಜವದುಕ್ಕಡದುಲಿ
ೞ್ಗೆದ ಪೊತ್ತು ಸೂೞ್ಗಿ ಕರುಮಾ
ಡದ ಪಕ್ಕದೊಳಿರ್ದ ಪಟ್ಟದಾನೆಯ ಬದಗಂ

ಬಿನದಕೆ ಪಾಡುತ್ತಿರೆ ನು
ಣ್ಪನಿ ನಿದ್ರೆಗೆ ಕತಕಬೀಜಮಾಯ್ತೆನೆ ಮೃಗಲೋ
ಚನೆ ತಿಳಿದಾಲಿಸಿ ಮುಟ್ಟಿದ
ಮನಮಂ ತೊಟ್ಟನೆ ಪಸಾಯದಾನಂಗೊಟ್ಟಳ್

ಇದೇ ವಿಸ್ಮಯ; ಪವಾಡ! ಏಕೆ ‘ತೊಟ್ಟನೆ ಪಸಾಯದಾನಂಗೊಟ್ಟಳ್?’ ಎಂದು ಕೇಳಿದರೆ ಉತ್ತರ ಹೇಳುವಂತಿಲ್ಲ. ಅದಕ್ಕೊಂದು ಕಾರ್ಯಕಾರಣ ಸಂಬಂಧ ಕಾಣಿಸದು. ‘ಮನಮಂ ತೊಟ್ಟನೆ ಪಸಾಯದಾನಂಗೊಟ್ಟಳ್’-ಅಷ್ಟೇ ಅಲ್ಲ.

ಅಂತೆಸೆಯೆ ಪಾಡುತಿರೆ
ದ್ದಂತಿಪನತಿನ್ನೂತ್ನಗೀತ ಪಾತನವಿಕಲ
ಸ್ವಾಂತೆಗೆ ನೋಡುವ ಕೂಡುವ
ಚಿಂತೆ ಕಡಲ್ವರಿದುದಂದು ಬೆಳಗಪ್ಪಿನೆಗಂ

ಕಡಿದಾದ ಜಾಗದಲ್ಲಿ ನಡೆದ ಜಾರಿಕೆಯಲ್ಲ ಇದು. ವಿಷಬಿಂದುವಿನ ಪ್ರವೇಶಕ್ಕೂ  ಎಡೆಯಿಲ್ಲದ ಅಮೃತಸಮಾನವಾದ ದಾಂಪತ್ಯಸುಖದ ನಡುವೆ ಹೇಗೋ ನಡೆಯಿತು ಈ ಪವಾಡ, ಈ ವಿಸ್ಮಯ, ಈ ವಿಧಿವಿಳಸನ! ಅತ್ಯಂತ ದೈಹಿಕ ತೃಷಾರೂಪವಾದ ಕಾಮಾಗ್ನಿಗೂ ಅಸಹಜವಾದ ಪ್ರಸಂಗ ಇದು. ದಾಂಪತ್ಯದಲ್ಲಿ ವಿರಸವೆ? ಇಲ್ಲ. ಒಲಿದ ಜೀವಗಳ ಅನಿವಾರ್ಯ ವಿರಹ ಸನ್ನಿವೇಶವೆ? ಅಲ್ಲ. ಇದು ತಿರ್ಯಕ್ ಸಹಜವಾದುದು ಸಹ ಅಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಇದು ಅತ್ಯಂತ ವಿಪರೀತವಾದ ಒಂದು ಮನೋವಿಕಾರ. ಇಂತಹ ವಿಕಾರಪರವೃತ್ತಿಗಳಲ್ಲಿ ಯಾವುದು ನಡೆದೀತು ಯಾವುದು ನಡೆಯಲಾರದು ಎಂದು ಹೇಳುವುದೇ ಕಷ್ಟ. ಜೈನದರ್ಶನಕ್ಕೆ ಸಹಜವಾದ ಪೂರ್ವಜನ್ಮದ ಕಾರಣವೊಂದನ್ನಾದರೂ ಕವಿ ಇದಕ್ಕೆ ಒದಗಿಸಬಹುದಾಗಿದ್ದಿತು. ಆದರೆ ಅಮೃತಮತಿಯ ಈ ರೂಪವಾದ ಹೃದಯವಿಶ್ಲೇಷಣ ವಿಚಾರದಲ್ಲಿ ಕವಿ ಸ್ವಲ್ಪವೂ ಆಸಕ್ತನಾಗಿಲ್ಲ. ಆ ಪಾತ್ರದ ಬಗೆಗೆ ಕವಿ ಹೇಳುವ ಎರಡು ಮಾತುಗಳಾದರೂ ಯಶೋಧರನ ಪಾತ್ರ ಪರಿಪುಷ್ಟಿಗಾಗಿಯೆ; ಒಂದು ಊರ್ಧ್ವ ಗಮನಶೀಲವಾದ ಚೇತನದ ಉದ್ಧಾರಮಾರ್ಗವನ್ನು ಚಿತ್ರಿಸುವ ಸಂದರ್ಭ ಕಾರಣಕ್ಕಾಗಿಯೆ.

ಈ ಘಟನೆಯ ಅನಂತರ ಮುಂದೆ ನಡೆಯುವ ಒಂದೊಂದು ಘಟನೆಯೂ ಅಸಂಭವನೀಯವಾಗಿದೆ; ವಿಸ್ಮಯಕಾರಕವಾಗಿದೆ. ‘ಪ್ರಣಯನಿರೂಪಣೆ’ಯಂತೂ ಕವಿಯ ಇಚ್ಛೆ ಅಲ್ಲವೇ ಅಲ್ಲ. ‘ಕಾಮವಿಕಾರ ನಿರೂಪಣೆ’ಎಂದರೂ ‘ಕಾಮವಿಕಾರ ನಿರೂಪಣೆಗಾಗಿಯೆ’ ನಿರೂಪಣೆಯಲ್ಲ. ‘ದುರ್ಘಟನೆಗಳಿಂದ ತಪ್ಪಿಸಿಕೊಳ್ಳುವುದು ಮನುಷ್ಯ ಪ್ರಯತ್ನದಿಂದ ಸಾಧ್ಯವಿಲ್ಲ. ವಿಧಿ ಮುನಿದರೆ ಏನೂ ಆಗದು. ಈ ಸಂಸಾರ ನಿಸ್ಸಾರ; ವೈರಾಗ್ಯವೇ ಜೀವನದ ಪರಮ ಮಾರ್ಗ’ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಒತ್ತಿ ಹೇಳುವದೆ ಕವಿಯ ಉದ್ದೇಶ.

‘ಕೂಡುವ ಚಿಂತೆ ಕಡಲ್ವರಿದುದು’, ದಿಟ-ಆದರೆ ಆ ಅಷ್ಟಾವಂಕನಿಗಿಂತ ಹೆಚ್ಚಿನ ಸಹ್ಯವಾದ ವ್ಯಕ್ತಿಯನ್ನಾದರೂ ಕೂಡಬಹುದಿತ್ತಲ್ಲ. ಅವನ ರೂಪೋ, ಅಮೃತಮತಿಯ ದಾಸಿಗೂ ಭಯಂಕರವಾಗಿ ತೋರುತ್ತದೆ.

ಅಮೃತಮತಿಯೆತ್ತ ರೂಪಾ
ಧಮನಷ್ಟಾವಂನೆತ್ತ ಚಿತ್ರಮಪಾತ್ರೇ
ರಮತೇ ನಾರೀ ಎಂಬುದು
ಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ

ಎಂದು ಆಕೆ ಕೂಡ ನೊಂದುಕೊಳ್ಳುತ್ತಾಳೆ.

‘ಚಿತ್ರಂ! ಅಪಾತ್ರೇ ರಮೇ ನಾರೀ!’ – ಕವಿಗೆ ಮುಖ್ಯವಾಗಿ ಇದನ್ನು ಹೇಳಬೇಕಾಗಿದೆ. ಜೀವನದಲ್ಲಿ ಯಾವುದು ಭೋಗದ ತವರೋ, ಯಾವುದನ್ನು ಸುಖವೆಂದೂ ಸ್ವಾರಸ್ಯವೆಂದೂ ನಾವು ಕೊಂಡಾಡುತ್ತೇವೆಯೋ ಅದೇ ಇಷ್ಟು ಅಸಹ್ಯ ಎಂಬುದನ್ನು ತೋರಿಸಿ, ಯಶೋಧರನ ವೈರಾಗ್ಯಕ್ಕೆ ಅಣಿಮಾಡಿ ಕೊಡುವುದು, ಸಹೃದಯಹೃದಯದಲ್ಲಿ ವೈರಾಗ್ಯಭಾವವನ್ನು ಹುಟ್ಟಿಸುವುದು ಕವಿಯ ಏಕಮಾತ್ರ ಆಶಯ.

ಆ ದೂದಿ

ಬಂದು ವಿಷಣ್ಣಾ
ನನೆಯಂ ಮಾರ್ಗಾವಲಗ್ನನೆತ್ರಯನುಚ್ಛ್ವಾ
ನಿತಪ್ರಾಧರರುಚಿಯಂ
ನುಜೇಂದ್ರಾಂಗನೆಯನೆಯ್ದಿ ಕಂಡಿಂತಂದಳ್

ಇಲ್ಲಿ‘ಮನುಜೇಂದ್ರಾಂಗನೆ’ಎಂಬ ಪದಕ್ಕಿರುವ ಧ್ವನಿಶಕ್ತಿಯನ್ನು ಗಮನಿಸಬೇಕು.

ಆ ದೂದಿ ‘ನೀನಂತಪ್ಪ ಕಾಮದೇವಂಗೆಂತಾಯ್ದಱಸಿ ಕೂರ್ತೆ’ ಎಂದು ಅತಿಯಾದ ವ್ಯಂಗ್ಯದಿಂದ ಮೂದಲಿಸಿ ಹೇಳುವಾಗ ಅಮೃತಮತಿ ಆ ವ್ಯಂಗ್ಯದ ಪರಜ್ಞಾನವಿಲ್ಲದೆ ‘ಪೇರ್ ಕಾದಲನಂತಿರೆ ಚೆಲ್ವನೆ; ದೂದವಿ ನೀನೆನ್ನ ಕೊಂದೆ’ ಎನ್ನುತ್ತಾಳೆ. ಆದರೆ ಆಕೆ ತನ್ನ ಜಾರನಲ್ಲಿ ರೂಪನ್ನು ಬಯಸಿದ್ದಳೆಂದಲ್ಲ. ಆಕೆ ರೂಪಿಗಾಗಿ ಒಲಿದವಳಲ್ಲ. ಹಾಗಿದ್ದರೆ ಯಶೋಧರನ ರೂಪೇನು ‘ನಾಡಾಡಿಯೆ?’ ಅವನ ರೂಪಿನ ಮುಂದೆ ಇನ್ನಾವ ರೂಪ ಬೇಕು? ಅಮೃತಮತಿ ರೂಪನ್ನು ಬಯಸಲಿಲ್ಲ. ದೂದಿ ಅವನು ಕಾದೇನಂತಿದ್ದಾನೆ. ಎಂದಾಗ, ‘ಓಹೋ! ಹಾಗೇನು? ಅದು ಇನ್ನೂ ಒಳಿತಾಯಿತು’ ಎನ್ನುವಂತೆ, ‘ರೂಪು ಬೇಕು? ಅಮೃತಮತಿ ರೂಪನ್ನು ಬಯಸಲಿಲ್ಲ. ದೂದಿ ಅವನು ಕಾಮದೇವನಂತಿದ್ದಾನೆ. ಎಂದಾಗ, ‘ಓಹೋ! ಹಾಗೇನು? ಅದು ಇನ್ನೂ ಒಳಿತಾಯಿತು’ಎ‌ನ್ನುವಂತೆ ಮಾತನಾಡುತ್ತಾಳೆ ಆಕೆ ಬಯಸಿದ್ದು ಜಾರುವುದನ್ನು ಮಾತ್ರವಲ್ಲದೆ ಜಾರಲು ಕಾರಣವನ್ನು ಸಹ ಅಲ್ಲ. ಇಂತಹ ಪಾತ್ರವನ್ನು ಕುರಿತು ನಮ್ಮಲ್ಲಿ ಅನುಕಂಪ ಹುಟ್ಟುವುದಿಲ್ಲ; ಅಸಹ್ಯ ಜುಗುಪ್ಸೆಗಳು ಹುಟ್ಟುತ್ತವೆ. ಇಲ್ಲಿ ದುರಂತಪಾತ್ರದ ಹೆಸರನ್ನೆತ್ತುವುದೂ ಅಪರಾಧವಾದೀತು.

ಅಷ್ಟಾವಂಕನ ಅಸಹ್ಯವರ್ಣನೆ ಮಾಡುವ ದೂದಿ ತುಸು ಉತ್ಪ್ರೇಕ್ಷೆ ಮಾಡಿರಬಹುದಾದರೂ ಸಹಜ. ಏಕೆಂದರೆ ಆಕೆ ತನ್ನ ಒಡತಿಯ ವಿಕೃತ ಮನಸ್ಸು ಎಂತಾದರೂ ಬದಲಾಗಲೆಂದು ಯೋಚಿಸರಬಹುದು. ಅದನ್ನು ಕೇಳಿ ಅಮೃತಮತಿ ಹೇಳುವ ಮಾತು:

ಕರಿದಾದೊಡೆ ಕತ್ತುರಿಯಂ
ಮುರಾಡಾದೊಡೆ ಮಲಯಜಂಗಳಮ ಕೊಂಕಿದೊಡೇಂ
ಸ್ಮರಚಾಪಮನಿಳಿಕಯ್ವರೆ
ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್

‘ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್!’ ‘ಒಲವಾದೊಡೆ ರೂಪಿನ ಕೋಟಲೆಯೇವುದೊ!’ ಎಂತಹ ಮುತ್ತಿನಂಥ ಮಾತುಗಳು! ಎಂತಹ ಹಂದಿಯ ಬಾಯಲ್ಲಿ! ಯಾವಳೊ ಒಬ್ಬ ಕನ್ಯೆ ತಾನು ಒಲಿದವನೊಬ್ಬನ ಬಗೆಗೆ ಆ ಮಾತುಗಳನ್ನಾಡಿದರೆ ಅವು ಎಷ್ಟು ರಮಣೀಯೋಜ್ವಲವಾಗುತ್ತಿದ್ದುವು! ಅಮೃತಮತಿ ಇಂತಹ ಮಾತುಗಳನ್ನಾಡಿ ತನ್ನ ಬಗೆಗೆ ನಮಗಿರುವ ಅಸಹ್ಯ ಜುಗುಪ್ಸೆಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾಳೆ. ಅವಳ ಮನಸ್ಸಿನಲ್ಲಿ ಸ್ವಲ್ಪವೂ ಹೋರಾಟವಿಲ್ಲ; ಗೊಂದಲವಿಲ್ಲ. ಆಕೆಯ ದೌರ್ಬಲ್ಯದ ಸೂಚನೆಯೂ ಕಾಣಿಸದು. ನಿಶ್ಚಿಂತವಾಗಿ, ಬೇಕೆಂದೇ, ನೇರವಾಗಿ  ಆಕೆ ಕೂಪಕ್ಕೆ ಇಳಿ ಬೀಳುತ್ತಾಳೆ. ಊರ್ಧ್ವಗಾಮಿ ಮತ್ತು ಅಧೋಗಾಮಿಯಾದ ಎರಡು ಚೇತನಗಳ ನಡುವಿನ ಅಪಾರವೂ ಭಯಂಕರವೂ ಆದ ವೈಪರೀತ್ಯವನ್ನು ಕವಿ ಇಲ್ಲಿ ಕೊಡುತ್ತಿದ್ದಾನೆ, ವೈರಾಗ್ಯದ ಉದ್ದೀಪನೆಗೆ ಅಗ್ನಿ ಪ್ರಚೋದನೆಯಾಗಿ.

ಇಲ್ಲಿಯೆ ಮುಂದೆ, ‘ಮನಸಿಜನ ಮಾಯೆ ವಿಧಿವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ’ ಎಂಬ ಮಾತು ಬರುತ್ತದೆ. ಆದರೆ ಅದು ಸರ್ವಥಾ ಅನುಕಂಪೆಯಲ್ಲ; ಕೇವಲ ಭೂತದಯೆಯ ಪಶ್ಚಾತ್ತಾಪ. ಅಷ್ಟೆ. ಆ ಮಾತನ್ನೂ ಹೇಳುವವನು ಅಭಯರುಚಿ. ಆತ ಯಾವ ಮಟ್ಟವನ್ನು ಏರಿ ನಿಂತಿದ್ದಾನೆ! ಅಂತಹನು ಲೋಕದ ಸಕಲ ಪ್ರಾಣಿಮಾತ್ರಗಳಿಗೂ ಕರುಣೆ ತೋರಿಸುವುದು ಸಹಜ. ಆದರೆ ಸಹೃದಯರಲ್ಲಿ ಇಂತಹ ಪಶ್ಚಾತ್ತಾಪದ ಲೋಕಾಭಿರಾಮದ ಮಾತು ಕೂಡ ಹೊಮ್ಮುವುದು ಕಷ್ಟ.

ಅಮೃತಮತಿ ಜಾರಿದಳು; ಪತಿತೆಯಾದಳು. ಹೋಗಲಿ, ಇಲ್ಲಿಗಾದರೂ ಮುಗಿಯಿತೇನು ಅವಳ ಕಥೆ? ಇಲ್ಲ. ಆಕೆ ಪತಿತೆ ಮಾತ್ರವೇ ಅಲ್ಲ, ನೀಚೆ; ಕುಲಟೆ; ಪಾತಕಿ; ಸರ್ವಪಾಪಗಳ ಘನೀಭೂತಪ್ರತಿಮೆ. ಇಂತಹ ಪಾತ್ರವನ್ನು ಕುರಿತು ಅನುಕಂಪೆ ಹುಟ್ಟುವುದು ಅಸಂಭವ.

ಹೋಗಲಿ, ಅಷ್ಟಾವಂಕನಿಗೆ ರೂಪವಂತೂ ಇ‌ಲ್ಲ; ಆತ ಸಂಸ್ಕೃತನಾದರೂ ಆಗಿದ್ದಾನೆಯೆ? ಅದೂ ಇಲ್ಲ. ಹೀಗೆಯೆ ಸಾಗಿತು ಈ ಪಾಪಕಾರ್ಯ. ಯಶೋದರ ಒಂದು ದಿನ ಆಕೆಯ ನಡತೆಯನ್ನರಿಯಲು ಅವಳನ್ನು ಹಿಂಬಾಲಿಸಿ ಹೋಗುತ್ತಾನೆ, ‘ದೋಷದ ಬೆನ್ನೊಳೆ ಸಂಧಿಸುವ ದಂಡದಂತೆ’. ಅಲ್ಲಿ ಆ ಬದಗ ‘ತೋರ ಮುಡಿವಿಡಿದು ಕುಡಿಯಂ ನಾರಂ ತದೆವಂತೆ ತದೆದು ಬೀಟೆಯ ಕಾಲಿಂಬಾರೇಳೆ’ ಒದೆಯುತ್ತಾನೆ. ಈಕೆ ‘ಕೇರೆ ಪೊರಳ್ವಂತೆ ಕಾಲಮೇಲೆ ಪೊರಳ್ದಳ್’.

ವಿಕಾರತೆ ತಾರತಮ್ಯದಿಂದ ಎಷ್ಟು ಕಡಿದಾದರೆ, ಎಷ್ಟು ಅಸಂಭವನೀಯವಾದರೆ ಅಷ್ಟೂ ಕೃತಾರ್ಥನಾಗುತ್ತಾನೆ ಕವಿ, ತನ್ನ ವೈರಾಗ್ಯಪ್ರಚೋದನಾ ಕಾರ್ಯದಲ್ಲಿ. ಓದುಗರಲ್ಲಿ ಜುಗುಪ್ಸೆ ಹೆಚ್ಚಿದಷ್ಟೂ ಕವಿಯ ಉದ್ದೇಶ ಸಾಧನೆ ಸುಲಭವಾಗುತ್ತದೆ.

ಎಲ್ಲವನ್ನೂ ಕಣ್ಣಾರೆ ಕಂಡ ಯಶೋಧರನ ಮನಃಸ್ಥಿತಿ ಏನಾಗಿರಬೇಕು!

ಆಗಳ್ ಬಾಳ್ ಇಮಿರ್ದುದು ತೋಳ್
ತೂಗಿದುದು ಮನಂ ಕನಲ್ದುದಿರ್ವರುಮನೆರ
ೞ್ಭಾಗಂ ಮಾಡಲ್ ಧೃತಿ ಬಂ
ದಾಗಳ್ ಮಾಣೆಂಬ ತೆಱದೆ ಪೇಸಿದನರಸಂ

ಹಾಗೆ ಹೇಸಿದಾಗಲೇ ಯಶೋಧರನ ಚೇತನದ ಉದ್ಧಾರಕ್ಕೆ ಆರಂಭವಾಯಿತು. ಆ ಕ್ಷಣದಲ್ಲೇ ಅವನ ಊರ್ಧ್ವಾಭಿಮುಖಗಮನ ಅದ್ಭುತವಾಗಿ ಮೊದಲಾಯಿತು. ಕವಿ ಯಶೋಧರನನ್ನು ಎಂತಹ ಕ್ರೋಧಪೂರ್ಣವಾದ ಸನ್ನಿವೇಶದ ನಡುವೆ ನಿಲ್ಲಿಸಿ ಅಲ್ಲಿಯೇ ಅವನ ಉದ್ಧಾರದ ನಾಂದಿಯನ್ನು ಹಾಡಿದ್ದಾನೆ? ಯಾವ ಕ್ಷಣದಲ್ಲಿ ಅಮೃತಮತಿಯ ಅಧೋಗಮನ ಯಶೋಧರನ ಚೇತನಕ್ಕೆ ಅರಿವಾಯಿತೋ ಅದೇ ಕ್ಷಣದಲ್ಲಿಯೆ ಆತನ ಉದ್ಧಾರಕ್ಕೂ ಆರಂಭವಾಯಿತು. ಮುಂದೆ ಬರುವ ಯಶೋಧರನ ಉದ್ಧಾರಮಾರ್ಗ ಇಲ್ಲಿ ನಡೆದ ಉದ್ಧಾರದ ಒಂದು ವಿಕಸನರೂಪವಾದ ಪ್ರತಿಮೆ ಮಾತ್ರ.

ಅೞೆಪುಳ್ಳೊಡೆ ನೋಡಿಱೆದೊಡೆ
ನೞೆವುದೇ ಪೆಣ್ ತಪ್ಪಿನಡೆಯೆ ಚಿಃ ಕಿಸುಗುಳಮೆಂ
ದುೞೆವುದೆ
ಗೆಲ್ಲಂ! ಕೊಂದಾ
ಪುೞು ಪುಟ್ಟುವ ನರಕದೊಳಗೆ ಬೀೞ್ವನೆ ಚದುರಂ ?

ಎಂದು ಹೇಳುವ ಯಶೋಧರನ ಮಾತುಗಳು ಊರ್ಧ್ವಗಮನಕ್ಕಾಗಿ ಕಂಕಣ ಕಟ್ಟಿ ಹೊರಟ ಚೇತನಕ್ಕೆ ಸಹಜ. ಆದರೆ ನಾವೂ ಆ ಮಾತುಗಳನ್ನು ಹೇಳಿಕೊಂಡು ಅಮೃತಮತಿಯ ಬಗೆಗೆ ಅನುಕಂಪೆ ತೋರಿಸುವುದು ತಪ್ಪಾಗುತ್ತದೆ.

ಮುಟ್ಟಿದೊಡೆ ಸುಖದ ಸೋಂಕಂ
ಪುಟ್ಟಿಸುವಾ ವಾಮೆ ವಾಮೆಯಾದೊಡೆ ಮುನ್ನಂ
ಬಟ್ಟಿದುವೆನಿಸುವ ಮೊಲೆ ನಿ
್ವೆಟ್ವಿದುವು ನೃಪಂಗೆ ಬೆನ್ ಸೋಂಕಲೊಡಂ

ಈ ಮಾತನ್ನು ಒತ್ತಿ ಒತ್ತಿ ಹೇಳುವುದೇ ಕವಿಯ ಉದ್ದೇಶ. ಅಮೃತಮತಿ ಈ ಮಾತಿಗೆ ಸಾಕ್ಷಿಯಾಗಿ ನಿಲ್ಲಲು ಒಂದು ಪ್ರತೀಕರೂಪದ ಪಾತ್ರ ಮಾತ್ರ. ಅವಳ ಪಾತ್ರದಲ್ಲಿನ ವೈಪರೀತ್ಯಮನಶ್ಯಾಸ್ತ್ರಘಟನೆಯೂ ಕವಿಗೆ ಆ ದೃಷ್ಟಿಯಿಂದ ಬೇಕಿಲ್ಲ. ಆತನಿಗೆ ಬೇಕಾದುದು ಕೇವಲ ಸಂಸಾರದ ವಿಫಲತೆಯಿಂದ ವೈರಾಗ್ಯ ಪ್ರಚೋದನೆ.

ಈ ಕಥೆಯನ್ನು ಕೇಳಿದ ಮಾರಿದತ್ತ ವಿಧಿಯ ಮೇಲೆ ರೋಷಗೊಂಡು ಹೇಳುತ್ತಾನೆ.

ಗಂಡನನಪ್ಪಿದ ತೋಳ್
ಪೋಗಂಡನನಪ್ಪುವಂತೆ ಮಾಡಿದ ಬಿದಿಯಂ
ಮೂಗಂ ಕೊಯ್ದಿಟ್ಟಿಗೆಯೊಳ್
ಪೋಗೊರಸದೆ ಕಂಡೆನಾದೊಡೇಂ ಬಿಟ್ಟಪೆನೇ!

ಮಾರಿದತ್ತ ಹೇಳುವ ‘ವಿಧಿ’ಯನ್ನಾಗಲಿ, ಅಮೃತಮತಿ ಹೇಳುವ ‘ಮನಸಿಜನ ಮಾಯೆ’ಯನ್ನಾಗಲಿ ನೆವವಾಗಿಸಿಕೊಂಡು ಅಮೃತಮತಿ ಜಾರಿದುದು ವಿಧಿಯಿಂದಾದರೆ ಯಶೋಧರ ಏರಿದುದೂ ವಿಧಿಯಿಂದಲ್ಲವೆ!

ಪದವಿಯ ರೂಪಿನ ಸೊಬಗಿನ
ಮದಮಂ ಮಾಡುವರ ಮೂಗಿನೊಳ್ ಪಾತ್ರಮಾಮನಾ
ಡದ ಮಾಣದನಂಗನ ಕೃತಿ
ಸುದತಿಯರ ವಿಕಾರಮೆಂಬವಿದ್ಯಾಬಲದಿಂ

ಎಂಬಲ್ಲಿ ಕವಿ ನೇರವಾಗಿ ಹೇಳಿದ್ದಾನೆ, ‘ಸುದತಿಯರ ವಿಕಾರಮೆಂಬ ಅವಿದ್ಯಾಬಲ’ಎಂದು.

ರಾಜಕುಮಾರಂ ಬೞೆ
ಕಾ ರೂಪಿನ ಪೆಂಡಿರಿಂತು ಕೞೆಪಾದೊಡೆ ಚಿಃ
ಕೂರಿಸುವ ಕೂರ್ಪ ಮಾತಂ
ಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂದನ್!

ಕವಿ ವೈರಾಗ್ಯದ ತನ್ನ ಗುರಿಯನ್ನು ಸಾಧಿಸಲು ಈ ಕಾವ್ಯಪ್ರತಿಮೆಯಲ್ಲಿ ಒಂದು ಕಥಾಪ್ರತೀಕವನ್ನು ಸೃಷ್ಟಿಸಿಕೊಟ್ಟಿದ್ದಾನೆ.

ಒಲಿಸಿದ ಪೆಣ್ ಪೆಱರೊಳ್ ಸಂ
ಷಲಿಸದೊಡದು ಸುಖಮೆ? ಪರಮಸುಖಸಂಪದಮಂ
ಸಲಿಯಿಸಲೆ ನೆಱೆವ ಮುಕ್ತಿಯ
ನೊಲಿಸುವೆನಿನ್ನೊಲ್ಲೆನುೞಿದ ಪೆಂಡಿರ ನಣ್ಪಂ

ಎಂಬ ಭಾವವನ್ನು ಓದುಗರಲ್ಲಿ ಸ್ಫುರಿಸುವುದೇ ಕವಿಯ ಉದ್ದೇಶ. ಯಶೋಧರನ ಮತ್ತು ಶ್ರಾವಕ ಜನರ ಮನಸ್ಸು ಈ ನಿರ್ಣಯಕ್ಕೆ ಬರುವಂತೆ ಮಾಡಿದಾಗಲೇ ತನ್ನ ಕಾವ್ಯದ ಸಾರ್ಥಕ್ಯ ಎಂಬುದು ಕವಿಯ ಮತ.

‘ಆ ಪಾದರಿ’ ಎಂಬ ಮಾತು ಕಾವ್ಯದಲ್ಲಿ ಸ್ಪಷ್ಟವಾಗಿ ಬಂದಿದೆ. ಆದರೂ ಆಕೆ ಪತಿತಳಾಗಿದ್ದುದು ಮಾತ್ರವಾಗಿದ್ದರೆ ಆಕೆಯ ಬಗೆಗೆ ತುಸು ಸಹಾನುಭೂತಿಯನ್ನು ವ್ಯಕ್ತಪಡಿಸುವುದು ಸಹಜವಾಗಬಹುದಿತ್ತು. ಆದರೆ ಆಕೆ ಪತಿತಳು ಮಾತ್ರವಲ್ಲ; ಘೋರ ಪಾತಕಿ.

ಬಳೆಗೋದುದು ಕೀರ್ತಿ ದಿಶಾ
ಕಳಭಂಗಳ ನಿಗ್ಗವಂಗಳೊಳ್ ರಿಪುಕಾಂತಾ
ವಳೀಯೊಳ್ ಭವತ್ಪ್ರತಾಪಂ
ಬಳೆಗಳೆಯಿಸೆ ತಾನದಕ್ಕೆ ಮಚ್ಚರಿಸುವವೊಲ್

ಎಂಬ ಪದ್ಯದಲ್ಲಿ ‘ರಿಪುಕಾಂತಾವಳಿಯೊಳ್ ಭವತ್ಪ್ರತಾಪಂ ಬಳೆಗಳೆಯಿಸೆ’ ಎಂದು ತಾಯಿ ಹೇಳುವಾಗ ತನ್ನ ಕಾಂತೆಯ ಬಗೆಯನ್ನು ನೆನೆದು ಯಶೋಧರನ ಮನಸ್ಸಿನಲ್ಲಿ ಎಂತಹ ಪರಿಣಾಮವಾಗಿರಬೇಕು!

ಆ ಘೋರ ಪಾತಕಿ, ಅಷ್ಟಾವಂಕನಿಂದ ಬಾರುಕೋಲಿನ ಏಟುತಿಂದು ಸಂತೋಷದಿಂದ ಸಹಿಸಿದವಳು. ಯಶೋಧರ ನೈದಿಲೆಯ ಹೂವಿನಿಂದ ಹೊಡೆದಾಗ ನೊಂದಳು! ಯಶೋಧರ ತಪಸ್ಸಿಗೆ ಹೊರಡುವೆನೆಂದಾಗಲಾದರೂ ಆಕೆ ಅವನನ್ನು ಸುಮ್ಮನೆ ಹೋಗಗೊಡಲಿಲ್ಲ. ‘ಅಮೃತಮತಿಯೆಂಬ ಪಾತಕಿಯ ಮಾಯೆ ಬನಮಾಯ್ತು’ ಆತನಿಗೆ, ‘ದೇವರ ಬೞೆಯೊಳೆ ಬರ್ಪೆಂ ಪೂವಿನ ಸೌರಭದ ಮಾೞ್ಕೆಯಿಂ ಎನ್ನುತ್ತಾಳೆ ಅ ವಂಚಕಿ, ಕುಟಿಲೆ, ಆ ಕುಲಟೆ ಆತನಿಗೆ ನಂಜಿನ ಲಡ್ಡುಗೆಯನ್ನು ಬಡಿಸಿ, ‘ಪಾತಕಿ ಕೊಂದಳ್.’ ಕೊನೆಗೆ ಕೊಲೆಪಾತಕಿಯೂ ಆಗುತ್ತಾಳೆ. ‘ಸ್ತ್ರೀಚರಿತಮದೇಂ!’ ಕವಿಯ ಆ ಉದ್ಗಾರ ಓದುಗರಲ್ಲೂ ಹೊರಡುತ್ತದೆ. ‘ಅವಳಣಕಕ್ಕೆ ಸವಣನುಂ ಸೈರಿಪನೆ?’

ಬೇಕೆಂದೇ ಜಾರಿದ ಹೆಣ್ಣು ಆನಂದದಿಂದಲೇ ಅಷ್ಟಾವಂಕನನ್ನು ಕೂಡಿದ್ದಳು. ಸತ್ತು ನವಿಲಿನ ಜನ್ಮದಲ್ಲಿ ಬಂದ ಯಶೋಧರ ಮತ್ತೆ ಆ ಪಾತಕಿ ಅಷ್ಟಾವಂಕನೊಡನೆ ಕೂಡುವುದನ್ನು ನೋಡುವ ದುರ್ಯೋಗ ಒದಗಿತು. ಅದನ್ನು ಕಂಡು ತಾಳಲಾರದೆ ನವಿಲು ಅಷ್ಟಾವಂಕನ ಕಣ್ಣನ್ನು ಕುಟುಕಿದಾಗ ಆ ‘ಪಾಣ್ಬೆ’, ‘ಅನ್ ಬೆಂದೆನ್’ ಎಂದು ‘ಕನಲ್ದಡಸಿ’ ಅದನ್ನು ಕೊಲ್ಲುತ್ತಾಳೆ. ಮುಂದೆ ಅಷ್ಟಾವಂಕನೊಡನೆ ಆಕೆ ಬಾಳುತ್ತಿರುವ ಸೂಚನೆ ಅಲ್ಲಲ್ಲಿ ಬರುತ್ತದೆ. ಕೊನೆಯಲ್ಲಿ,

ಬಸಿದಪುದು ಮೆಯ್ಯ ಕೀವುಂ
ರಸಿಗೆಯುಮೊಡಲಱೆದುದಾದೊಡಂ ಮಾಣಳೆ ನಾ
ಯ್ಬಸನಿಗತಮಂ, ಮಾಣ್ದೀ
ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ?

ಹೀಗಾಗುತ್ತದೆ ಆ ಪಾತಕಿಯ ಅಂತ್ಯ, ಅವಳನ್ನು ಕಂಡು ಯಮನೂ ಹೇಸುತ್ತಾನೆ. ಅವಳ ಬದುಕಿನ ಘೋರತೆ ಸಾವಿನಲ್ಲಿ ಈ ರೂಪಾಗಿ ಗೋಚರಿಸಿತು:

ಅಮೃತಮತಿ ಅಷ್ಟವಂಕಂ
ಗೆ ಮರುಳ್ಗೊಂಡತ್ತೆ ಗಂಡನಂ ವಿಷದಿಂ ಕೊಂ
ದು ಮುದಿರ್ತು ಕುಷ್ಠಿ ಕೊಳೆ ಪಂ
ಚಮ ನರಕದೊಳೞ್ದಳರಸ ಧೂಮಪ್ರಭೆಯೊಳ್!

ಇದು ಆಕೆಯ ಪಾತ್ರದ ಭರತವಾಕ್ಯ!

ಈ ಪ್ರಸಂಗಕ್ಕೆ ಕಾರ್ಯಕಾರಣ ಸಂಬಂಧವಿಲ್ಲ. ಅರ್ಥಹೀನ ಮತ್ತು ತರ್ಕಹೀನವಾದ ಇಂತಹ ಘಟನೆಗಳನ್ನು ‘ತಿದ್ದುವುದೂ ಸಾಧ್ಯವಿಲ್ಲ. ಅದರಿಂದ ತಪ್ಪಿಸಿಕೊಳ್ಳುವ ವೈರಾಗ್ಯವೊಂದೇ ಇದಕ್ಕೆ ಏಕೈಕಮಾತ್ರವಾದ ಮದ್ದು. ಅದನ್ನು ತಿಳಿಸುವುದೇ ಕವಿಯ ಆಶಯ. ಅಮೃತಮತಿಯ ಮಾನಸಿಕ ಜಾಟಿಲ್ಯವನ್ನಾಗಲಿ, ಆಕೆಯ ಜೀವನದ ಇತರ ಘಟನೆಗಳನ್ನಾಗಲಿ ಚಿತ್ರಿಸಿ ಈ ಒಂದು ಪ್ರಸಂಗ ಸ್ವಲ್ಪವಾದರೂ ಸಂಭವನೀಯವೆನಿಸುವಂತೆ ಕವಿ ಮಾಡಬಹುದಾಗಿತ್ತು. ಅದರೆ ಕವಿಯ ಗಮನ ಆ ಕಡೆಗೆ ಒಂದಿನಿತೂ ಇಲ್ಲ. ಅದು ಅವನ ಉದ್ದೇಶವೂ ಅಲ್ಲ. ಅವನ ಮೂಲೋದ್ದೇಶ ನೆರವೇರಲು ಈ ಮನೋರೋಗವಿಕಾರರೂಪವಾದ ಅಸಹಜತೆಯೆ ಅಗತ್ಯವಾಗಿದೆ. ಅಮೃತಮತಿಯನ್ನು ಕಂಡು ನಾವು ಜುಗುಪ್ಸೆಪಡಬಲ್ಲೆವಲ್ಲದೆ, ಅಸಹ್ಯ ಪಡಬಲ್ಲೆವಲ್ಲದೆ ಅನುಕಂಪೆ ತೋರಿಸಲಾರೆವು. ಆ ಪಾತ್ರದ ಬಗೆಗೆ ನಾವು ಅನುಕಂಪೆ ತೋರಿಸುವಂತಾಗಿದ್ದರೆ ಕವಿಯ ಉದ್ದೇಶ ಇಲ್ಲಿಯಷ್ಟು ಯಶಸ್ವಿಯಾಗಿ ನೆರವೇರುತ್ತಿರಲಿಲ್ಲ.

ಕಾವ್ಯ ರಸಪೂರ್ಣವಾಗಿರಬೇಕೆಂಬ ಮಾತಿಗೆ ಹೊರತುಹೇಳಿದ ಕವಿಗಳೊಬ್ಬರೂ ಇಲ್ಲ. ನಮ್ಮ ಕಾವ್ಯಮೀಮಾಂಸಕರೂ ಕಾವ್ಯದ ಪ್ರಯೋಜನವನ್ನು ‘ಶಿವೇತರಕ್ಷತಿ’ ಎಂದೂ ‘ಸದ್ಯಃಪರ ನಿರ್ವೃತಿ’ ಎಂದೂ ಹೇಳಿದ್ದಾರೆ. ಅದು ರಸಾನುಭವದಿಂದಲೆ ಸಾಧ್ಯವಾಗುವ ಮಾರ್ಗವೆಂದರೆ ಕಾವ್ಯಮಾರ್ಗ. ಕವಿಗಳ ಮುಖ್ಯ ಉದ್ದೇಶವಾದರೂ ಅದೇ. ಜನ್ನನೂ ‘ಈ ಶುಭಕಥನ’, ‘ಸತ್ಕಥನ’ ಎಂಬ ಮಾತುಗಳಲ್ಲಿ ತನ್ನ ಪರಿಭಾಷೆಯಲ್ಲಿ ಅದನ್ನೂ ಸಮರ್ಥಿಸಿದ್ದಾನೆ.

ಕಾವ್ಯದಲ್ಲಾಗಲಿ ಬದುಕಿನಲ್ಲಾಗಲಿ ಪಾಪಸಮರ್ಥನೆ ಕೇಡಿಗೆ ಹೆದ್ದಾರಿ. ಪಾಪಿಯಲ್ಲಿ ಅನುಕಂಪೆ ಪಾಪದಲ್ಲಿ ಮೈತ್ರಿಯಾಗಬಾರದು. ನಮ್ಮ ಪಾಪಿಯ ಅನುಕಂಪೆ ಒಮ್ಮೊಮ್ಮೆ ನಮ್ಮ ಪಾಪರುಚಿಯ ಛದ್ಮರೂಪವಾಗಿರುವುದೂ ಸಾಧ್ಯ. ಶಸ್ತ್ರಚಿಕಿತ್ಸೆಗೆ ಅರ್ಹವಾದ ರೋಗದೊಡನೆ ಅನುಕಂಪೆ ತೋರಿದರೆ ದೇಹನಾಶ ಸ್ವತಃಸಿದ್ಧ. ನರಕಶಿಕ್ಷೆಗೆ ಅರ್ಹವಾದ ಪಾಪದೊಡನೆ ಸಹಾನುಭೂತಿಯ ಸರಸವಾಡಿದರೆ ಆತ್ಮನಾಶ ಸ್ವತಃಸಿದ್ಧ. ನಮ್ಮೆಲ್ಲರ ಚೇತನದಲ್ಲಿರುವ ‘ಅಮೃತಮತಿತ್ವ’ಕ್ಕೆ ನಾವು ನಿಷ್ಠುರರೂ ನಿರ್ದಯರೂ ತೀವ್ರ ಶಸ್ತ್ರಚಿಕಿತ್ಸಾರೂಪರೂ ಆಗದಿದ್ದರೆ ನಮಗೆ ‘ಯಶೋಧರತ್ವ’ ಸಿದ್ಧಿಸುವುದಿಲ್ಲ. ನಮ್ಮ ‘ಅಮೃತಮತಿತ್ವ’ವನ್ನು ಕಠೋರ ಶಿಕ್ಷೆಗೆ, ಕೊನೆಗೆ ಧೂಮಪ್ರಭೆಗಾದರೆ ಧೂಮಪ್ರಭೆಗೆ, ಕತ್ತು ಹಿಡಿದು ತಳ್ಳಿ ಅದರ ಅಧೋಗಾಮಿತ್ವಕ್ಕೆ ಪೂರ್ವವಿರಾಮ ಹಾಕಿ, ಅದು ಊರ್ಧ್ವಾಭಿಮುಖಿಯಾಗಿ, ತನ್ನ ‘ಅಷ್ಟಾವಂಕಮೋಹತ್ವ’ದ ಕಿಲ್ಬಿಷದಿಂದ ಸಂಪೂರ್ಣವಾಗಿ ಪಾರಾಗಿ ಶುಚಿಯಾಗಿ, ನಿಜವಾಗಿಯೂ ‘ಅಮೃತಮತಿ’ ಯಾಗಿ ತನ್ನ ‘ಯಶೋಧರ’ನನ್ನು ಮತ್ತೆ ಕೂಡಿಕೊಳ್ಳುವಂತೆ ಮಾಡಬೇಕು. ಆ ದೃಷ್ಟಿಯಿಂದ ನೋಡಿದರೆ ಕವಿಯ ಕ್ರೌರ್ಯ ಅವನ ಕರುಣಾಹಸ್ತದ ಒಂದು ನಖರೂಪ ಮಾತ್ರವಾಗಿ ತೋರುತ್ತದೆ.

* * *

 

 


[1] ಅಮೃತಮತಿ ಎಂಬ ಹೆಸರಿನಲ್ಲಿಯೆ ಒಂದು ವಿಡಂಬನ, ವಿಪರ್ಯಾಸ ಇರುವಂತೆ ಭಾಸವಾಗುತ್ತದೆ. ಕೊನೆಗೆ ಎಂತಹ ವಿಷಮತಿ ಆಗುತ್ತಾಳೆ ಎಂಬುದನ್ನು ಭಾವಿಸಿದರೆ.

[2] ತನುಸೋಂಕಲಿಂಗನ ಚುಂ
ಬನಮುಂ ಗಳರವದ ಸವಿ ರತಪ್ರೌಢಿಯಿನಾ
ತುವಂ ಮರೆಯಿಸೆಯರೆಯದೆ
ಮನೋಜನಾಡಿಸುವ ಜಂತ್ರದಂತಿರೆ ನೆರೆದರ

ಸುರತಸುಖಪರವಶ್ಯಂ
ತರೆ ನಿದ್ರಾಭರದುನಿರ್ವರುಂ ಶಿಥಿಲತನೂ
ಪರಿರಂಭಣಮುಚ್ಚಳಿಯದೆ
ಪರಿವೇಷ್ಟಿತ ಬಾಹುವಳಯದೊಳ್ ಕಣ್ಗಯ್ದರ್

ಪುರ್ವೆಂಬ ಜವಳಿಗಟ್ಟಿನ
ಕರ್ವಿನ ಬಿಲ್ಲಿಂಗೆ ಬಿಗಿದ ಮಧುಕರಮಾಲಾ
ಮೌರ್ವಿಯೆನೆ ಮುಗಿದ ಕಣ್ಗಳ
ಪರ್ವುಗೆಯೊಳ್ ಮೆಱಿದುದವರ ತಳ್ತೆಮೆದುಱುಗಲ್