ರಾಕ್ಷಸ ಕಂಸನ ಮಥುರೆಯ ಮೇಲೆ
ಘನ ಘೋರಾಂಧತೆ ಕವಿದಿತ್ತು;
ಮಿಂಚಿನ ಸಿಡಿಲಿನ ಮೋಡದ ಲೀಲೆ
ತಿರೆಯ ಮೋರೆಯನು ತಿವಿದಿತ್ತು;
ಕೆರಳಿದ ಕೇಸರಿಯಂದದಿ ಗರ್ಜಿಸಿ
ಗಾಳಿಯು ಭರದಲಿ ಬೀಸಿತ್ತು;
ಮುಗಿಲಿನ ಚಿಪ್ಪೊಡೆದಾಲಿಯ ಕಲ್ಗಳ
ಕವಣೆಯವೋಲ್ ಮಳೆ ಸೂಸಿತ್ತು |…
ರಾಕ್ಷಸ ಕಂಸನ ಮಥುರೆಯ ಮೇಲೆ
ಶತಶತಮಾನಗಳಾಚೆಯ ದೂರದ
ದ್ವಾಪರಯುಗದಲ್ಲಿ |
-‘ಅಗ್ನಿಹಂಸ’ದಿಂದ

ಎಂತಹ ಘೋರ ರಾತ್ರಿ! ಆದರೂ ಅದೆಂತಹ ದಿವ್ಯರಾತ್ರಿ! ಆ ಚಿರಸ್ಮರಣೀಯ ಕಾಳರಾತ್ರಿಯಲ್ಲಿಯೆ ಲೋಕಕ್ಕೊಂದು ಮಹಾಜ್ಯೋತಿ, ಉಜ್‌ಜ್ವಲತಮವಾದ ಪರಂಜ್ಯೋತಿ, ಅವತರಿಸಿದ್ದು. ಆ ರಾತ್ರಿ ಧನ್ಯರಾತ್ರಿ. ಆ ಒಂದು ರಾತ್ರಿಯ ದಿವ್ಯಗರ್ಭದಿಂದ ಉದ್ಭವಿಸಿದ ಬೆಳಕು ನಮ್ಮ ಭೂಮಿಯ ಬಾಳಿನ ಅದೆಷ್ಟು ಹಗಲುಗಳಿಗೆ ಜೀವವೀಯುತ್ತಿದೆ! ಅದು ಲೋಕಕ್ಕೆ ಶ್ರೀಮದ್ ಭಗವದ್‌ಗೀತೆಯನ್ನು ಕೊಟ್ಟವನನ್ನು ಕೊಟ್ಟ ರಾತ್ರಿ! ಪೂರ್ಣಾವತಾರನೆಂದು ಸರ್ವಲೋಕ ಪೂಜ್ಯನಾಗಿರುವ ಶ್ರೀ ಕೃಷ್ಣನನ್ನು ಪಡೆದ ರಾತ್ರಿ! ಮರ್ತ್ಯದ ಪ್ರಜ್ಞೆ ಉನ್ನತತರವಾಗುವಂತೆಯೂ ವಿಸ್ತೃತತರವಾಗುವಂತೆಯೂ ಅದಕ್ಕೆ ದೈವೀಪ್ರಜ್ಞೆಯ ಸಂಸರ್ಗ ಸಂಭವಿಸುವಂತೆ ಮಾಡಿದ ರಾತ್ರಿ, ಈ ಕೃಷ್ಣಜನ್ಮಾಷ್ಟಮಿಯ ರಾತ್ರಿ! ಕ್ಲೇಶ, ಕಷ್ಟ, ಸಂಕಟ, ಕಣ್ಣೀರು, ಚಿತ್ತಕ್ಷೋಭೆ, ಧರ್ಮಗ್ಲಾನಿ-ಇವೆಲ್ಲ ನಮ್ಮ ಹೃದಯದಲ್ಲಿ ಉಲ್ಬಣಿಸಿ, ನಮ್ಮ ಜೀವ ಕಾಳರಾತ್ರಿಯ ಕಗ್ಗತ್ತಲೆಯ ಸೆರೆಯಲ್ಲಿ ಸಿಕ್ಕಿ, ವ್ಯಾಕುಲಪೂರ್ಣವಾಗಿ ಪ್ರಾರ್ಥಿಸಿ ಮೊರೆಯಿಟ್ಟಾಗಲೆ ಅಲ್ಲವೆ, ಇಂದಿಗೂ ಎಂದಿಗೂ, ಆರ್ತ ಹೃದಯದಲ್ಲಿ ಭಗವಂತನ ಅವಿರ್ಭಾವವಾಗುವುದು? ಶ್ರೀ ಕೃಷ್ಣಜನ್ಮಾಷ್ಟಮಿಯಾಗುವುದು?

ಲೋಕಲೋಕಗಳಲ್ಲಿ ಯುಗಯುಗಗಳಲ್ಲಿ ದೇಶದೇಶಗಳಲ್ಲಿ ಜನಾಂಗ ಜನಾಂಗಗಳಲ್ಲಿ ಪ್ರತಿ ಚೇತನ ಚೇತನದಲ್ಲಿ ಪ್ರತಿ ಕ್ಷಣ ಕ್ಷಣದಲ್ಲಿಯೂ ಸಂಭವಿಸುವ ಗ್ಲಾನಿಯ ಮಧ್ಯೆ ಅವಿರ್ಭವಿಸುವ ಭಗವದಾಶಾಕಿರಣವನ್ನೆ ಭಾಗವತದ ಪುರಾಣಕವಿ ಶ್ರೀ ಕೃಷ್ಣ ಜನನ ವೃತ್ತಾಂತದಲ್ಲಿ ಪ್ರತಿಮಾ ವಿಧಾನದಿಂದ ನಿರೂಪಿಸಿದ್ದಾನೆ. ಆ ಮಹಾಪ್ರತಿಮೆಯಿಂದ ಹೊಮ್ಮುವ ದರ್ಶನ ಧ್ವನಿಯ ನಿತ್ಯಸತ್ಯವನ್ನು ನಾವು ವರುಷ ವರುಷವೂ ಈ ಶ್ರೀಕೃಷ್ಣಜನ್ಮಾಷ್ಟಮಿಯ ದಿನದಂದು ಅನುಶೀಲನಮಾಡದಿದ್ದರೆ ನಮ್ಮ ಭಾಗಕ್ಕೆ ಅದು ಸ್ವಾರಸ್ಯವಾದ ಕಟ್ಟುಕತೆ ಮಾತ್ರವಾಗಿ ಉಳಿದೀತು:

ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ!
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ, ಭವವಿದೂರ,
ಮಣ್ತನಕೆ ಮರತನಕೆ ಮಿಗತಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ, ಬಾರ!
ಮೂಡಿ ಬಂದಿಂದೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ!
ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ,
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,
ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ,
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ!*

ಎಂಬ ಜೀವಂತ ಶ್ರದ್ಧೆಯ ಅಭೀಪ್ಸೆ ಪ್ರಾರ್ಥನಾಗೋರೂಪದಿಂದ ಪುರುಷೋತ್ತಮನ ಕ್ಷೀರಸಾನ್ನಿಧ್ಯದತ್ತ ಹೊಲ್ವರಿಯಬೇಕು. ಅದನ್ನೇ ಭಾಗವತದ ಪುರಾಣ ಕವಿ “ಗೌರ್ಭೂತ್ವಾ ಆಶ್ರುಮುಖೀ ಸ್ವಿನ್ನಾ ಕ್ರಂದಂತೀ ಕರುಣಂ ವಭೋಃ| ಉಪಸ್ಥಿತಾಂತಿಕೇ ತಸ್ಮೈ ವ್ಯಸನಂ ಸ್ವಂ ಅವೋಚತ” ಎಂದು ಅಸುರೀಶಕ್ತಿಯ ಪೀಡೆಗೆ ಸಹಿಸದ ಭೂದೇವಿ ಗೋರೂಪಧಾರಣೆ ಮಾಡಿ ವಿಧಾತನೆಡೆಗೆ ತೆರಳಿ ಮೊರೆಯಿಡುವಂತೆ ವರ್ಣಿಸಿದ್ದಾನೆ. ಆ ಮೊರೆಗೇಳಿದ ಜಗನ್ನಾಥನು ವಸುದೇವನ ಮನೆಯಲ್ಲಿ ಹುಟ್ಟಿ ಬರುತ್ತೇನೆಂದು ಆಶ್ವಾಸನೆ ಕೊಡುತ್ತಾನೆ.

ಆ ನಾಂದಿಯ ತರುವಾಯ ನಾಟಕ ಪ್ರಾರಂಭವಾಗುತ್ತದೆ. ಕಂಸ, ವಸುದೇವ ದೇವಕಿ ಮೊದಲಾವರೆಲ್ಲ ನಿಮಿತ್ತ ಮಾತ್ರ ಪಾತ್ರಗಳಾಗುತ್ತಾರೆ. ಹಾಗೆ ಯಾವುದಾದರೂ ಒಂದು ಲೌಕಿಕ ಕಾರಣವನ್ನು ಆಶ್ರಯಿಸಿದಲ್ಲದೆ ಭಗವದ್‌ವಿಭೂತಿ ಅವತರಿಸುವುದಾದರೂ ಎಂತು? ರಾವಣನೊ ಕಂಸನೊ ನೆವವಾಗುತ್ತಾರೆ. ಆದರೆ ನಿಜವಾಗಿಯೂ ರಾವಣ ಕಂಸರನ್ನು ವ್ಯಕ್ತಿಶಃ ಕೊಲ್ಲುವುದಕ್ಕೆ ಮಾತ್ರವಾಗಿಯೆ ಭಗವಂತನು ಅವತರಿಸುತ್ತಾನೆ ಎಂಬುದು ಅಯೋಗಮತಿಗಳಿಗಾಗಿ ಇರುವ ಕವಿಕಲ್ಪನೆಯಷ್ಟೆ. ಭಗವಂತ ಅವತರಿಸದಿದ್ದರೂ ಅವರು ಕಾಲಧರ್ಮದಿಂದಲೆ ಸ್ವಲ್ಪ ತಡವಾಗಿಯಾದರೂ ಸಾಯುತ್ತಿದ್ದರು. ಆದ್ದರಿಂದ ಎಷ್ಟೇ ದುಷ್ಟರಾಗಿದ್ದರೂ ಎಂತಹ ಬೃಹತ್ ಪ್ರಮಾಣದ ಕೇಡಿಗಳಾಗಿದ್ದರೂ ಕೆಲವು ವ್ಯಕ್ತಿಗಳನ್ನು ಕೊಲ್ಲುವುದಕ್ಕಾಗಿಯೆ ದೇವರು ಅವತರಿಸುತ್ತಾನೆ ಎಂಬುದು ಮನುಷ್ಯ-ನ್ಯಾಯಕ್ಕೆ ಸಂಬಂಧಪಟ್ಟ ‘ಅಲ್ಪ’ವಾಗುತ್ತದೆ. ಅದಕ್ಕಿಂತಲೂ ‘ಭೂಮ’ವಾದ ಉದ್ದೇಶವಿರಬೇಕು ಭಗವಂತನಂತಹನ ಅವತಾರಕ್ಕೆ! ದ್ರಷ್ಟಾರರು ಹೇಳುತ್ತಾರೆ: ಸೃಷ್ಟಿಯ ಸಮಷ್ಟಿ ಪ್ರಜ್ಞೆಯ ಸಾಮೂಹಿಕ ವಿಕಾಸಕ್ಕಾಗಿಯೂ ಸರ್ವತೋಮುಖವಾದ ಐತನ್ಯೋನ್ಮೇಷನಕ್ಕಾಗಿಯೂ ನವೋನವ ಋತಶಕ್ತಿ ಪ್ರಕಾಶನಕ್ಕಾಗಿಯೂ ಭತಗವದವತಾರದ ಅವಶ್ಯಕತೆ ಒದಗುತ್ತದೆ ಎಂದು. ಆದರೆ ನೈಜವಾದ ಭಗವದುದ್ದೇಶ ಅಪ್ರಕಟವಾಗಿ ಛದ್ಮವಾಗಿ ಹಿಂದಿದ್ದುಕೊಂಡು ರಾವಣ ಕಂಸಾದಿ ಸಂಹಾರ ಕಾರಣದ ಲೌಕಿಕೋದ್ದೇಶವನ್ನೆ ಮುಂದಕ್ಕಿಟ್ಟು ತನ್ನ ಲೀಲಾ ಪ್ರಯೋಜನವನ್ನು ಸಾಧಿಸುತ್ತದೆ.

ಊರ್ಧ್ವಲೋಕಗಳಲ್ಲಿ ಪ್ರಾರಂಭವಾದ ದೇವವ್ಯೂಹ ಲೋಕಭೂಮಿಕೆಗೆ ಇಳಿದು ಮೊಳೆಯಲು ಮೊದಲಾಗುತ್ತದೆ, ಮಧುರಾಪುರಿಯಲ್ಲಿ. ದೌಷ್ಟ್ಯಪ್ರಮಾಣದಲ್ಲಿ ಇತರ ಅಂತಹ ಮಾನವರಂತೆಯೆ ಇದ್ದಿರಬಹುದಾದ ಕಂಸನ ಕೆಟ್ಟತನವನ್ನು ರಾಕ್ಷಸಪ್ರಮಾಣಕ್ಕೆ ಏರುವಂತೆ ಮಾಡುವ ಕೀಲಣೆ ಜರುಗುತ್ತದೆ; ಅಶರೀರವಾಣಿ! ಮದುಮಗಳಾದ ತಂಗಿ ತನ್ನ ಗಂಡನೊಡನೆ ತೇರೇರಿ ಮೆರವಣಿಗೆ ನಡೆಯುತ್ತಿರಲು ಸಂತೋಷಕ್ಕೂ ಅಕ್ಕರೆಗೂ ಉಕ್ಕಿ ಹಿಗ್ಗಿ ತಾನೆ ಸಾರಥಿಯಾಗಿ ಅಶ್ವವಾಘೆಯನ್ನು ಕೈಲಾಂತು ಸಂಭ್ರಮದಿಂದ ರಥವೆಸಗುತ್ತಿದ್ದ ಕಂಸನ ಕಿವಿಗೆ ವಿಷಹೊಯ್ಯತ್ತದೆ ಆ ಅಶರೀರವಾಣಿ: ‘ಅಸ್ಯಾಸ್ತ್ವಾಮಷ್ಟಮೋ ಗರ್ಭೋ ಹಂತಾ ಯಾಂ ನಯಸೇ ಅಬುಧ!’

ಕಂಸ ನಮ್ಮ ಪುರಾಣಗಳನ್ನು ಓದಿದ್ದವನಾಗಿದ್ದರೆ ಅವನಿಗೆ ಚೆನ್ನಾಗಿ ಗೊತ್ತಾಗುತ್ತಿತ್ತು, ಈ ಅಶರೀರವಾಣಿಗಳಿಗೆ ಕಿವಗೊಡುವುದರಿಂದಲೆ ಕೇಡಿಗೆ ಹಾದಿ ಹಾಕಿದಂತಾಗುತ್ತದೆ ಎಂದು: ಅದು ಸೂಚಿಸುವ ಕೇಡಿನಿಂದ ಪರಿಹಾರ ಪಡೆಯಲು ಮಾಡುವ ಪ್ರಯತ್ನವೆ ತನ್ನನ್ನು ಕೇಡಿಗೆ ತಳ್ಳುವ ಉಪಾಯವಾಗುತ್ತದೆ ಎಂದು ಅಶರೀರವಾಣಿಯ ರೂಪದಲ್ಲಿ ಅಥವಾ ನಾರದನ ರೂಪದಲ್ಲಿ ಬರುವ ಹಿತವೇಷದ ಎಚ್ಚರಿಕೆಗಳೆಲ್ಲ ಅಹಿತ ಪರಿಣಾಮಕ್ಕೆ ನಮ್ಮನ್ನು ತಳ್ಳುವುದಕ್ಕಾಗಿಯೆ ಬರುತ್ತವೆ ಎಂದು! ರಾಹುಕಾಲವನ್ನು ತಿಳಿಸುವ ಪಂಚಾಂಗವೇ ರಾಹು ನಿವಾಸ ಎಂದು! ಆಗ ಅವನು ಆ ಅಶರೀರವಾಣಿಯನ್ನು ಕೇಳಿಯೂ ಕೇಳದವನಂತೆ ಅದನ್ನು ನಿರೀಕ್ಷಿಸಿ, ಆ ಶುಭದ ಮೆರವಣಿಗೆಯ ಮಂಗಳಕ್ಕೆ ಹಾನಿ ತಟ್ಟದಂತೆ ವರ್ತಿಸಿ, ತನ್ನ ಅಶುಭವನ್ನು ಪರಿಹರಿಸಿಕೊಳ್ಳುತ್ತಿದ್ದನೆಂದು ತೋರುತ್ತದೆ. ಆದರೆ ಆ ವಿಚಾರದಲ್ಲಿ ತುಂಬ ಆಸ್ತಿಕನಾಗಿದ್ದ ಅವನು ಶ್ರದ್ಧೆಯಿಂದ ವರ್ತಿಸಿ ತನ್ನಲ್ಲಿ ಅಂತರ್ಗತವಾಗಿದ್ದ ಅಸುರತ್ವ ಸುಪ್ರಕಟವಾಗುವಂತೆ ವರ್ತಿಸುತ್ತಾನೆ.

ತಂಗಿಯ ಎಂಟನೆಯ ಗರ್ಭದಲ್ಲಿ ಹುಟ್ಟುವವನಿಂದ ತನಗೆ ಮರಣ ನಿಜವಾದರೆ ಅವಳನ್ನೆ ಕೊಂದುಬಿಟ್ಟರೆ ಮರಣಕಾರಣದ ಮೂಲವನ್ನೆ ಪರಿಹರಿಸಿದಂತಾಗುವುದಿಲ್ಲವೆ? ಆದರೆ ವಿಧಿ ಅವಿವೇಕದ ಹೃದಯದಲ್ಲಿಯೆ ಅದರ ನಿರ್ಮೂಲನಕ್ಕೆ ಕಾರಣವಾಗುವ ಒಂದು ವಿವೇಕಾಂಶವನ್ನೂ ಇಟ್ಟೆ ಇರುತ್ತದೆ. ಕಂಸನಲ್ಲಿದ್ದ ಆ ಅಂಶದ ಸಹಾಯದಿಂದ ವಸುದೇವ ತನ್ನ ಹೆಂಡತಿಯ ಕೊಲೆಯನ್ನು ತಡೆಯುತ್ತಾನೆ. ‘ನಿನ್ನ ತಂಗಿಯನ್ನೇಕೆ ಕೊಲ್ಲುವೆ? ಆಕೆಗೆ ಹುಟ್ಟುವ ಮಕ್ಕಳೆಲ್ಲವನ್ನೂ ಕೂಡಲೆ ನಿನಗೆ ತಂದೊಪ್ಪಿಸುತ್ತೇನೆ.’

ದೇವಕಿಗೆ ಹುಟ್ಟಿದ ಮೊದಲನೆಯ ಮಗುವನ್ನು ವಸುದೇವನು ತಂದೊಪ್ಪಿಸಿದಾಗ ಕೀರ್ತಿಮಂತ ಎಂಬ ಆ ಕುಮಾರನನ್ನು ಕಂಸ ಕೊಲ್ಲಲಿಲ್ಲ. “ಎಂಟನೆಯ ಗರ್ಭದಿಂದ ನನಗೆ ಮರಣವಾಗುವುದು ಎಂದು ನಿಶ್ಚಯವಾಗಿರುವ ಕಾರಣ ಇವನಿಂದ ನನಗೇನೂ ಭಯವಿಲ್ಲ. ಈ ಬಾಲಕ ಮನೆಗೆ ಹೋಗಲಿ.”ಎಂದನಂತೆ. ಆದರೆ ವಿಧಿಯ ವ್ಯೂಹಕ್ಕೆ ಕಂಸನ ಸೌಜನ್ಯದಿಂದ ಭಂಗವೊದಗುತ್ತಿತ್ತೊ ಏನೊ. ಆದ್ದರಿಂದ ಹಿಂದೆ ಅಶರೀರವಾಣಿಯನ್ನು ಒಡ್ಡಿದ್ದ ಶಕ್ತಿ ಈಗ ನಾರದನನ್ನು ಕಳಿಸುತ್ತದೆ. ಆ ದೇವರ್ಷಿಯ ಮಾತಿಗೆ ಕಿವಿಗೊಟ್ಟು ಭೀತನೂ ದಿಗ್‌ಭ್ರಾಂತನೂ ಆಗಿ ವಸುದೇವ ದೇವಕಿಯರನ್ನು ಸಂಕಲೆಗಳಿಂದ ಬಂಧಿಸಿ ಸೆರೆಮನೆಯಲ್ಲಿಡಿಸುತ್ತಾನೆ ಕಂಸ.

ಅಲ್ಲಿ ಸಂಭವಿಸುತ್ತದೆ ಜಗನ್ನಾಥನ ಪೂರ್ಣಾವತಾರ.

ಆ ಭಯಂಕರ ಸೆರೆಮನೆಯಲ್ಲಿ ನಿತ್ಯವೂ ಜಗದ್ರಕ್ಷಕನಾದ ಭಗವಂತನನ್ನು ನೆನೆಯುತ್ತಾ ಪ್ರಾಥಿಸುತ್ತಾ ವಸುದೇವನು ಅನನ್ಯ ಶರಣನಾಗಿರುತ್ತಿರಲು, ಆರ್ತನ ಆ ಪ್ರಾರ್ಥನಾರೂಪವಾದ ತಪಸ್ಸೇತುವಿನಿಂದಲೇ ಆಕರ್ಷಿತನಾಗಿ ಭಗವಂತನು ತನ್ನ ಪರಿಪೂರ್ಣ ರೂಪದಿಂದ ಭೂಸಂಕಟ ನಿವಾರಣಕ್ಕಾಗಿ ವಸುದೇವನ ಚಿತ್ಕಮಲಕ್ಕೆ ಇಳಿಯುತ್ತಾನೆ. ತರುವಾಯ ವಸುದೇವನ ಮನಸ್ಸಿನಿಂದ ಆ ಅಚ್ಯುತಾಂಶ ದೇವಕೀದೇವಿಯ ಶ್ರೀಮನಸ್ಸನ್ನು ಪ್ರವೇಶಿಸುತ್ತದೆ:

ಭಗವಾನಪಿ ವಿಶ್ವಾತ್ಮಾ ಭಕ್ತಾನಾಮಭಯಂಕರಃ
ಅವಿವೇಶಾಂಶಬಾಗೇನ ಮನ ಅನಕದುಂದುಭೇಃ
ತತೋ ಜಗನ್ಮಂಗಳಮಚ್ಯುತಾಂಶಂ
ಸಮಾಹಿತಂ ಶೂರಸುತೇನ ದೇವೀ
ದಧಾರ ಸರ್ವಾತ್ಮಕಮಾತ್ಮಭೂತಂ
ಕಾಷ್ಠಾ ಯಥಾನಂದಕರಂ ಮನಸ್ತಃ

ಇತ್ತ ಕಂಸನು ತನ್ನನ್ನು ಕೊಲ್ಲುವುದಕ್ಕಾಗಿಯೆ ಹುಟ್ಟಿಲಿರುವ ಮಹಾವಿಷ್ಣುವನ್ನು ವೈರಬುದ್ಧಿಯಿಂದ ಹಗಲಿರುಳೂ ನೆನೆಯುತ್ತಾ ವೈರಭಾವ ಸಾಧಕನಾಗಿರಲು, ಅವನಿಗೆ ಜಗತ್ತೆಲ್ಲ ವಿಷ್ಣುಮಯವಾಗಿ ತೋರತೊಡಗಿತು. ಸಾಧನೆ ಅಷ್ಟು ಮುಂದುವರಿದ ಮೇಲೆ ಸಿದ್ಧಿ ಬಹದೂರವಿರುವುದಿಲ್ಲ.

ಭಗವಂತನ ಅವತರಣ ನಿರೂಪಣೆಯಲ್ಲಿ ಭಾಗವತದ ಕವಿ ಕಾವ್ಯದ ಸೂಚನೆಯ ಅಥವಾ ಧ್ವನಿಯ ಮಾರ್ಗವನ್ನು ಅವಲಂಬಿಸದೆ ಪುರಾಣದ ನೇರವಾದ ಪ್ರಕಟಮಾರ್ಗವನ್ನೆ ಹಿಡಿದಿದ್ದಾನೆ. ಸ್ವಲ್ಪ ಹೆಚ್ಚು ಕಡಿಮೆ ಆ ವಿಚಾರ ಗೊತ್ತಾಗಬೇಕಾಗಿದ್ದ ಮುಖ್ಯರಿಗೆಲ್ಲ ಗೊತ್ತಾಗಿರುತ್ತದೆ. ಬ್ರಹ್ಮರುದ್ರಾದಿ ದೇವತೆಗಳೂ ನಾರದಾದಿಮುನಿಗಳೂ ದೇವಕೀ ಗರ್ಭಸ್ಥನಾದ ಪರಮಾತ್ಮನನ್ನು ದೀರ್ಘವಾಗಿ ತಾತ್ತ್ವಿಕವಾದ ಮಾತುಗಳಿಂದ ನುತಿಸುವುದಿರಲಿ; ವಸುದೇವನು ಕೂಡ ಶಂಖ ಚಕ್ರ ಗದಾಧಾರಿಯಾಗಿ ಶ್ರೀವತ್ಸಲಾಂಛನನಾಗಿ ಕೌಸ್ತುಭರತ್ನಶೋಭಿತನಾಗಿ ದಿವ್ಯ ಪೀತಾಂಬರಾಲಂಕೃತನಾಗಿ ತನ್ನ ನಿಜರೂಪದಿಂದಲೆ ದೇವಕೀದೇವಿಯಲ್ಲಿ ಹುಟ್ಟಿದ ಅದ್ಭುತ ಶಿಶುವನ್ನು ಬೆರಗುಬಡಿದು ನೋಡುತ್ತಾನೆ; ಪ್ರೌಢವಾದ ತತ್ತ್ವ ಪ್ರಬಂಧವೂ ನಾಚಿ ತಲೆ ತಗ್ಗಿಸುವಂತೆ ಸುದೀರ್ಘವಾಗಿ ಸ್ತೋತ್ರಗೈಯುತ್ತಾನೆ.

[1]

ಭಗವಂತು ತನ್ನ ತಾಯಿಯಾದ ದೇವಕಿಯ ಕಣ್ಣಿಗೂ ತಂದೆಗೆ ಕಂಡಂತೆಯೆ ನಿಜರೂಪದಿಂದಲೆ ಕಾಣುತ್ತಾನೆ. ಆಕೆಯೂ ಆತನನ್ನು ಸ್ತುತಿಸಿ ನಿಜರೂಪವನ್ನು ಮರೆಮಾಡಿಕೊಳ್ಳುವಂತೆ ಬೇಡಿಕೊಳ್ಳುತ್ತಾಳೆ. ‘ಎಲ್ಲವನ್ನೂ ಹೊಟ್ಟೆಯಲ್ಲಿಟ್ಟುಕೊಂಡಿರುವ ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿಬಂದೆ ಎಂದರೆ ಲೋಕ ನಂಬುವುದೇ? ಸರ್ವೇಶ್ವರನಾದ ನೀನು ಮಾನುಷಿಯಾದ ನನ್ನ ಜಠರದಲ್ಲಿ ಜನಿಸಿದೆ ಎಂದರೆ ಲೋಕ ನಗುವುದಿಲ್ಲವೇ?[2]

ಆಗ ಭಗವಂತನು ತಾಯಿಗೆ ಧೈರ್ಯ ಹೇಳುತ್ತಾನೆ. ತನ್ನನ್ನು ಗೋಕುಲಕ್ಕೆ ಕರೆದುಕೊಂಡು ಹೋಗುವಂತೆ ತಂದೆಗೆ ಆದೇಶವೀಯುತ್ತಾನೆ. ಇಷ್ಟೆಲ್ಲ ಸ್ಪಷ್ಟವಾಗಿ ನಡೆದ ತರುವಾಯವೆ ಅವನು ‘ಪ್ರಾಕೃತಶಿಶು’ವಾಗಿ ಲೋಕಲೀಲಾ ನಿಯಮಗಳಿಗೆ ಅಧೀನನಾಗುತ್ತಾನೆ.

ಪ್ರಾಕೃತಶಿಶುವಾಗಿಯೆ ಮೊದಲಿನಿಂದಲೂ ತೋರದೆ ನಿಜರೂಪದಿಂದ ತೋರಿದುದಕ್ಕೆ ಕಾರಣವನ್ನು ಹೇಳುತ್ತಾ ಭಗವಂತನು ವಸುದೇವ ದೇವಕಿಯರ ಸ್ವಾಯಂಭುವ ಮನ್ವಂತರದ ಪೂರ್ವಜನ್ಮ ವೃತ್ತಾಂತವನ್ನು ತಿಳಿಸುತ್ತಾನೆ. ಅಂದು ‘ನಿನ್ನಂತಹ ಪುತ್ರನಾಗಬೇಕು’ ಎಂದು ಅವರು ಬೇಡಿದ ವರದಂತೆ ಇಂದು ಅವರಿಗೆ ಮಗನಾಗಿ ಬಂದಿದ್ದಾನೆ. ಅದರ ನೆನಪಿಗಾಗಿಯೆ ತನ್ನ ನೈಜವಾದ ದಿವ್ಯ ರೂಪವನ್ನು ಅವರಿಗೆ ತೋರಿಸಿದ್ದಾನೆ; ಇಲ್ಲವಾದರೆ ಮನುಷ್ಯ ಜನ್ಮದಲ್ಲಿ ಮನುಷ್ಯ ತನುವನ್ನು ಆಶ್ರಯಿಸಿದ ಭಗವಂತನನ್ನು ತಿಳಿಯಲಾಗುವುದೆಂತು?

ಏತದ್ ವಾಂ ದರ್ಶಿತಂ ರೂಪಂ ಪ್ರಾಗ್ ಜನ್ಮ ಸ್ಮರಣಾಯ ಮೇ
ನಾನ್ಯಥಾ ಮದ್ಭವಂ ಜ್ಞಾನಂ ಮರ್ತ್ಯಲಿಂಗೇನ ಜಾಯತೇ

ಭಗವದಾಜ್ಞೆಯಂತೆ ವಸುದೇವನು ದಿವ್ಯಶಿಶುವನ್ನೆತ್ತಿಕೊಂಡು ಹೊರಟನು. ‘ಹೊರಗಡೆ ಕತ್ತಲೆ, ಬಿರುಮಳೆ, ಗಾಳಿ; ಕುಣಿದಳು ಇರುಳಿನ ಕಾಳಿ ಕರಾಳಿ!’ ಆ ಗುಡುಗು, ಮಿಂಚು, ಸಿಡಿಲು, ಮಳೆ, ಗಾಳಿಗಳ ರೌದ್ರರಭಸವೆ ಜನಸಂಚಾರಕ್ಕೆ ಒಂದಿನಿತೂ ಅವಕಾಶವಿಲ್ಲದಂತೆ ಮಾಡಿತ್ತು. ಕಾವಲುಗಾರರು ಮೃತಪ್ರಾಯರೆಂಬಂತೆ ನಿದ್ರಾಮಗ್ನರಾಗಿದ್ದರು. ಕಬ್ಬಿಣದ ಲಾಳವಿಂಡಿಗೆಗಳಿಂದ ಸುಭದ್ರವಾಗಿದ್ದ ಸೆರೆಮನೆಯ ಭೀಮಾಕಾರದ ದ್ವಾರಗಳು ಒಂದಾದ ಮೇಲೊಂದರಂತೆ ತಮಗೆ ತಾವೆ ತೆರೆದುಕೊಂಡುವು. ಆದಿಶೇಷನೆ ತನ್ನ ಸಾವಿರ ಹೆಡೆಯ ಕೊಡೆಬಿಚ್ಚಿ ಊಳಿಗವೆಸಗಿ ಹಿಂಬಾಲಿಸಿದನು.

ಮಘೋನಿ ವರ್ಷತ್ಯಸಕೃದ್ಯಮಾನುಜಾ
ಗಂಭೀರ ತೋಯೌಘ ಜವೋರ್ಮಿ ಫೇನಿಲಾ
ಭಯಾನಕಾವರ್ತಶತಾಕುಲಾ ನದೀ
ಮಾರ್ಗಂ ದದೌ ಸಿಂಧುರಿವ ಶ್ರಿಯಃ ಪತೇಃ

ಎಡೆಬಿಡದೆ ಸುರಿವ ಕಾರ್ಮಳೆಗೆ ತುಂಬಿ, ಉಕ್ಕಿ, ಭೋರ್ಗರೆದು, ನೊರೆಯೆದ್ದು ಸುತ್ತುವ ಸುಳಿಗಳಿಂದ ಭೀಕರವಾಗಿ ಹರಿಯುತ್ತಿದ್ದ ಯಮಾನುಜೆ ಯಮುನೆ, ಹಿಂದೆ ಶ್ರೀರಾಮನಿಗೆ ಹೆಗ್ಗಡಲು ಹಿಂಜರಿದಂತೆ, ಹೆದರಿ ದಾರಿ ಬಿಟ್ಟಳು! ಅಂತೂ ಕಡೆಗೆ ಈ ಶ್ರಾವಣ ಅಷ್ಟಮಿಯ ನಿಶಿಯಲ್ಲಿ ವಸುದೇವ ದೇವಕಿಯರ ಕಂದನು ಗೋಕುಲದಲ್ಲಿ ನಂದ ಯಶೋದೆಯರ ನಂದನನಾಗಿ ಮೆರೆಯತೊಡಗುತ್ತಾನೆ. ಪೃಥ್ವಿಯ ಶ್ರೇಯಸ್ಸಿಗಾಗಿ ಜಗದ್ರಕ್ಷಕನನ್ನೇ ರಕ್ಷಿಸಿದ ಆ ವಸುದೇವನಿಗೆ ನಾವೆಲ್ಲ ಇಂದು ಎಷ್ಟು ಕೃತಜ್ಞರಾದರೂ ಚಿರಂತನ ಋಣಿಗಳಾಗಿಯೆ ಉಳಿಯಬೇಕಾಗುತ್ತದೆ!

ಗೋಕುಲದಿಂದ ಹಿಂತಿರುಗಿದ ವಸುದೇವನು ತಂದ ಯಶೋಧೆಯ ಹೆಣ್ಣು ಮಗುವನ್ನು ದೇವಕಿಯ ಎಂಟನೆಯ ಮಗುವೆಂದೆ ಭ್ರಮಿಸಿ, ಅದನ್ನು ಶಿಲೆಗೆ ಅಪ್ಪಳಿಸಿ ಕೊಲ್ಲುವ ಕಾರ್ಯದಲ್ಲಿ ವಿಫಲನಾದ ಕಂಸನು ಪಶ್ಚಾತ್ತಾಪದಿಂದ ತಂಗಿ ಬಾವಂದಿರ ಕ್ಷಮೆಯನ್ನು ಯಾಚಿಸಿ ‘ದೈವಮಪ್ಯನೃತಂ ವಕ್ತಿ ನ ಮರ್ತ್ಯಾ ಏವಕೇವಲಂ’ ‘ದೈವವೂ ಸುಳ್ಳಾಡುತ್ತದೆ, ಮನುಷ್ಯರು ಮಾತ್ರವೆ ಅಲ್ಲ!’ ಎಂದು ತನ್ನನ್ನು ಮೂದಲಿಸಿದ ದೈವವನ್ನೆ ಮೂದಲಿಸುತ್ತಾನೆ.

ಆದರೆ ದೈವ ಸುಳ್ಳಾಡುವುದಿಲ್ಲ ಎಂಬುದು ಅವನಿಗೆ ಮುಂದೆ ಗೊತ್ತಾಗಿಯೆ ಆಗುತ್ತದೆ!

ಶ್ರೀಕೃಷ್ಣನು ಜನ್ಮವೆತ್ತಿದ ಈ ರಾತ್ರಿ ಸರ್ವಲೋಕ ಪೂಜ್ಯವಾದ ಪವಿತ್ರ ರಾತ್ರಿ. ಆ ಮತ ಈ ಮತ, ಆ ಧರ್ಮ ಈ ಧರ್ಮ, ಆ ದೇಶ ಈ ದೇಶ, ಆ ಜನಾಂಗ ಈ ಜನಾಂಗ ಎನ್ನದೆ ಎಲ್ಲರಿಂದಲೂ ಎಲ್ಲ ಕಾಲಕ್ಕೂ ಗೌರವಕ್ಕೆ ಪಾತ್ರವಾಗಿರುವ ‘ಭಗವದ್ಗೀತೆ’ಗೆ ಅಂಕುರಾರ್ಪಣೆಯಾದ ದಿವ್ಯ ರಾತ್ರಿ. ಏಕೆಂದರೆ ಶ್ರೀಮದ್ ಭಗವದ್ಗೀತೆ ಶ್ರೀಕೃಷ್ಣನ ವಾಕ್‌ಕೃತಿರೂಪದ ಅವತಾರವಾಗಿದ್ದರೆ ಶ್ರೀಕೃಷ್ಣ ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ರೂಪದ ಅವತಾರವಾಗಿದ್ದಾನೆ. ಭಗವದ್ಗೀತೆಯಲ್ಲಿ ಪ್ರಣೀತವಾದ ಪೂರ್ಣದೃಷ್ಟಿಯ ಪೂರ್ಣದರ್ಶನಕ್ಕೆ ತನ್ನ ಸಮಗ್ರ ಜೀವನವನ್ನೇ ನಿದರ್ಶನವನ್ನಾಗಿ ಒಡ್ಡಿದ್ದಾನೆ ಶ್ರೀಕೃಷ್ಣ. ಶ್ರೀಮದ್ ಭಗವದ್ಗೀತೆ ಶ್ರೀಕೃಷ್ಣನ ವಾಙ್ಮಯ ಶರೀರ; ಶ್ರೀಕೃಷ್ಣ ಶ್ರೀಮದ್ ಭಗವದ್ಗೀತೆಯ ಚಿನ್ಮಯ ಕಳೇವರ! ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ-ಈ ತತ್ತ್ವಗಳು ನಮ್ಮ ಲೋಕದ ಭವಿತವ್ಯದ ಬಾಳಿಗೆ ಮಾರ್ಗದರ್ಶಕ ದೀಪಗಳಾಗಬೇಕಾದರೆ ಭಗವದ್ಗೀತೆಯ ವ್ಯೋಮವಿಶಾಲವೃಕ್ಷವನ್ನು ಆಶ್ರಯಿಸಿದಲ್ಲದೆ ಗತ್ಯಂತರವಿಲ್ಲ. ದ್ವಾಪರಯುಗದ ಗರ್ಭದಿಂದ ಹೊಮ್ಮಿ ಕಲಿಯುಗದ ಹೃತ್‌ಕೇಂದ್ರಕ್ಕೆ ಧುಮುಕುತ್ತಿರುವ ಆ ಕ್ಷೀರಜಲಪಾತದ ಪಾಂಚಜನ್ಯಘೋಷ ನಮ್ಮೆಲ್ಲರ ಪ್ರಾಣಗಳಲ್ಲಿ ಪ್ರತಿಸ್ಪಂದಿಸಿ ಅನುರಣಿತವಾಗಲಿ!

ಅನನ್ಯಾಶ್ವಿಂತಯಂತೋ ಮಾಂ ಹೆ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ ||

ಯತ್ಕತೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |
ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ||

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಸಿ ಮೇ ||

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||
ಓಂ ಶಾಂತಿಃ

 

 

 


* ‘ಅಗ್ನಿಹಂಸ’ದಿಂದ

[1]     ತಮದ್ಭುತಂ ಬಾಲಕಮಂಬುಜೇಕ್ಷಣಂ
ಚತುರ್ಭುಜಂ ಶಂಖಗದಾದ್ಯುದಾಯುಧಂ
ಶ್ರೀವತ್ಸಲಕ್ಷ್ಮಂ ಗಳಶೋಭಿ ಕೌಸ್ತುಭಂ
ಪೀತಾಂಬರ ಸಾಂದ್ರಪಯೋದ ಸೌಭಗಂ
ಮಹಾರ್ಹ ವೈಡೂರ್ಯ ಕಿರೀಟ ಕುಂಡಲು
ತ್ವಿಷಾ ಪರಿಷ್ವಕ್ತ ಸಹಸ್ರಕುಂಡಲಂ
ಉದ್ದಾಮ ಕಾಂಚ್ಯಂಗದ ಕಂಕಣಾದಿಭಿ-
ರ್ವಿರೋಚಮಾನಂ ವಸುದೇವ ಐಕ್ಷತ!

[2]     ರೂಪಂ ಚೇದಂ ಪೌರುಷಂ ಧ್ಯಾನದಿಷ್ಣ್ಯಂ
ಮಾ ಪ್ರತ್ಯಕ್ಷಂ ಮಾಂಸದೃಶಾಂ ಕೃಷೀಷ್ಠಾಃ
ಉಪಸಂಹರ ವಿಶ್ವಾತ್ಮನ್ನದೋ ರೂಪಮಲೌಕಿಕಂ
ಶಂಖಚಕ್ರಗದಾಪದ್ಮಶ್ರಿಯಾ ಜುಷ್ಟಂ ಚತುರ್ಭುಜಂ
ವಿಶ್ವಂ ಯದೇತತ್ ಸ್ವತನೌ ನಿಶಾಂತೇ
ಯಥಾವಕಾಶಂ ಪುರುಷಃ ಪರೋ ಭವಾನ್
ಬಿಭರ್ತಿ ಸೋಯಂ ಮಮ ಗರ್ಭಜೋsಭೂದ್
ಅಹೋ ನೃಲೋಕಸ್ಯ ವಿಡಂಬನಂ ಮಹತ್!