ಉಷಃಕಾಲ. ಅಮ್ಮ ಆಗಲೇ ಎದ್ದಿರುತ್ತಾಳೆ. ಶ್ಲೋಕಗಳನ್ನು ಹೇಳಿಕೊಳ್ಳುತ್ತ ಮನೆಕೆಲಸ ಮಾಡುವುದು ಅವಳ ಕ್ರಮ.

‘ಓಂ ನೋ ವಾಸುದೇವಾಯ ಹರಯೇ ಪರಮಾತ್ಮನೇ!’

ಅನಂತರ ಅಮ್ಮ ನದಿಗಳ ಹೆಸರುಗಳನ್ನು ಹೇಳುತ್ತಾಳೆ.

‘ಗಂಗಾ ಗೋದಾ ಬ್ರಹ್ಮಪುತ್ರಾ ಗೋಮತೀ ಚ ಸರಸ್ವತೀ!’

ಪ್ರಾರ್ಥನೆ ಮುಂದುವರಿಯುತ್ತದೆ.

‘ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರಿ ತಥಾ!’

ಪುಟ್ಟ ಉಷಾ ಎಚ್ಚರಾಗುತ್ತಾಳೆ. ದಿನವೂ ಕೇಳಿ ಅವಳಿಗೂ ಶ್ಲೋಕಗಳೆಲ್ಲ ಬಾಯಿಪಾಠವಾಗಿವೆ.

ಆದರೆ ಈಗ ಉಷಾ ಅಮ್ಮನೊಟ್ಟಿಗೆ ಸ್ತೋತ್ರ ಹೇಳಿ ಸುಮ್ಮನಾಗುವುದಿಲ್ಲ. ಎಲ್ಲವನ್ನು ತಿಳಿದುಕೊಳ್ಳಬೇಕೆನ್ನುವ ವಯಸ್ಸು ಅವಳದು. ಅವಳು ಅನೇಕ ಪ್ರಶ್ನೆಗಳನ್ನು ಕೇಳುತ್ತಾಳೆ. ಗಂಗೆ ಎಲ್ಲಿ ಹುಟ್ಟುತ್ತಾಳೆ? ಗೋದಾ ಯಾವ ಸಮುದ್ರ ಸೇರುತ್ತಾಳೆ?…. ಇತ್ಯಾದಿ.

ಇಂದು ಉಷಾ ಕೇಳಿದ ಪ್ರಶ್ನೆ:

“ಅಮ್ಮಾ, ದ್ರೌಪದಿ ಯಾರು?”

ಹಗಲು ಹೊತ್ತಿನಲ್ಲಿ ಅಮ್ಮನಿಗೆಲ್ಲಿ ಪುರುಸೊತ್ತು? ರಾಶಿ ಮನೆಗೆಲಸಗಳಿವೆ. ಆದರೂ ಅಮ್ಮ ಮೈದಡವಿ ಹೇಳುತ್ತಾಳೆ:

“ದ್ರೌಪದಿ ಶೂರ ರಾಜಕುಮಾರಿ, ಹಿಡಿದ ಹಟ ಬಿಡದ ಛಲವಾದಿನಿ. ಶ್ರೀಕೃಷ್ಣನ ಪರಮಭಕ್ತಳು.  ಅವಳ ಕಥೆ ವ್ಯಾಸರು ರಚಿಸಿದ ಮಹಾಭಾರತದಲ್ಲಿ ಬರುತ್ತದೆ. ನೀನು ಈಗ ಓದಿಕೊ. ರಾತ್ರಿ ಅವಳ ಕಥೆ ಹೇಳ್ತೀನಿ.”

ರಾತ್ರಿ ಅಮ್ಮನಿಗೆ ಹೇಳುವ ಸಂಭ್ರಮ; ಮಗಳಿಗೆ ಕೇಳುವ ಸಂಭ್ರಮ.

ಬಿಲ್ಗಾರರಿಗೆ ಒಂದು ಸವಾಲು

ಬಹು ಹಿಂದಿನ ಕಾಲ. ಪಾಂಚಾಲವೆಂಬ ರಾಜ್ಯ. ಅದರ ರಾಜ ದ್ರುಪದ. ಬಹಳ ಕಾಲ ರಾಜನಿಗೆ ಮಕ್ಕಳಾಗಲಿಲ್ಲ. ಮಕ್ಕಳನ್ನು ಪಡಯಬೇಕೆಂಬ ಆಸೆಯಿಂದ ರಾಜ ತಪಸ್ಸು ಮಾಡಿದ; ಕಾಕಿಲೀ ಎಂಬ ಯಾಗವನ್ನು ಆಚರಿಸಿದ. ದೇವರು ಮೆಚ್ಚಿದ; ಪ್ರಸನ್ನನಾದ. ಧೃಷ್ಟದ್ಯುಮ್ನ ಎಂಬ ಮಗನನ್ನೂ ದ್ರೌಪದಿ ಎಂಬ ಮಗಳನ್ನೂ ಕರುಣಿಸಿದ. ದ್ರೌಪದಿಗೆ ಇನ್ನೆರಡು ಹೆಸರುಗಳೂ ಇವೆ; ಕೃಷ್ಣೆ ಮತ್ತು ಪಾಂಚಾಲಿ.

ದ್ರೌಪದಿ ಗುಣವಂತಳು; ರೂಪವಂತಳು. ಬೆಳೆದು ದೊಡ್ಡವಳಾದಳು. ತನ್ನ ಮೃದುಭಾಷೆ, ನಯವಾದ ನಡೆಗಳಿಂದ ಎಲ್ಲರ ಮನಸ್ಸನ್ನು ಸೂರೆಗೊಂಡಳು. ಮಗಳನ್ನು ಅತಿ ಶೂರನಾದ ರಾಜನಿಗೆ ಮದುವೆ ಮಾಡಿಕೊಡಬೇಕೆಂದು ತಂದೆಯ ಆಸೆ. ದ್ರುಪದರಾಜ ಸ್ವಯಂವರವನ್ನು ಏರ್ಪಡಿಸಿದ. (ಸ್ವಯಂವರ ಎಂದರೆ ಹುಡುಗಿಯೆ ಗಂಡನನ್ನು ಆರಿಸಿಕೊಳ್ಳುವುದು.) ದೇಶ ವಿದೇಶದ ರಾಜರುಗಳಿಗೆ ಆಮಂತ್ರಣ ಹೋಯಿತು. ಪ್ರಜೆಗಳಿಗೆ ಸಂಭ್ರಮವೋ ಸಂಭ್ರಮ. ರಾಜಧಾನಿಗೆಲ್ಲ ತಳಿರು ತೋರಣಗಳ ಸಿಂಗಾರ. ಸ್ವಯಂವರ ಮಂಟಪಕ್ಕಂತೂ ಮುತ್ತುರತ್ನಗಳನ್ನೇ ಕಟ್ಟಿದರು;  ವಜ್ರ ವೈಡೂರ್ಯಗಳನ್ನೇ ಕೆತ್ತಿದರು.

ಅಸಮಾನ ಸುಂದರಿ ದ್ರೌಪದಿಯ ಸ್ವಯಂವರ ಎಂದ ಮೇಲೆ ಕೇಳಬೇಕೆ! ನೂರಾರು ಸಂಖ್ಯೆಯಲ್ಲಿ ರಾಜರುಗಳು ಬಂದರು.

ಇವರಲ್ಲಿ ಅತಿ ಶೂರನನ್ನು ಗುರುತಿಸುವುದು ಹೇಗೆ? ಅದು ಸಭೆಯಲ್ಲಿಯೇ ಗೊತ್ತಾಗಲಿ ಎಂದು ದ್ರುಪದರಾಜ ಒಂದು ಪಣವನ್ನು ಏರ್ಪಡಿಸಿದನು. ಸಭಾಮಧ್ಯದಲ್ಲಿ ಒಂದು ಮತ್ಸ್ಯಯಂತ್ರ, ಎಂದರೆ ಮೀನಿನ ಆಕಾರದ ಯಂತ್ರ. ಹತ್ತಿರದಲ್ಲಿಯೇ ಅತಿ ಭಾರವಾದ, ಬಗ್ಗಿಸಲು ಬಹು ಕಷ್ಟವಾದ ಬಿಲ್ಲು. ದ್ರೌಪದಿಯನ್ನು ಮದುವೆಯಾಗಲು ಬಯಸುವವನು ಧನ್ನುಸ್ಸನ್ನು ಹೆದೆಯೇರಿಸಬೇಕು, ಪಂಚ ಬಾಣಗಳನ್ನು ಹೂಡಿ ನೀರಿನಲ್ಲಿ ಕಾಣುತ್ತಿರುವ ಪ್ರತಿಬಿಂಬವನ್ನೇ ನೋಡಿ , ಮೇಲೆ ತಿರುಗುತ್ತಿರುವ ಯಂತ್ರ ಮತ್ಸ್ಯವನ್ನು ಹೊಡೆಯಬೇಕು. ಅವನೇ ದ್ರೌಪದಿಗೆ ತಕ್ಕ ವರ. ಪಣವನ್ನು ಕೇಳಿಯೇ ಅನೇಕರು ಹಿಂದೆ ಸರಿದರು. ಒಂದು ಕೈ ನೋಡೋಣ ಎಂದು ಮುಂದೆ ಬಂದ ರಾಜರಲ್ಲಿ ಕೆಲವರಿಗೆ ಧನುಸ್ಸನ್ನು  ಎತ್ತಲೂ ಆಗಲಿಲ್ಲ. ದುರ್ಯೋಧನ ಸೋತ; ಶಿಶುಪಾಲ ಸೋತ; ಶಲ್ಯ ಪರಾಜಿತನಾದ…. ಒಬ್ಬರೇ , ಇಬ್ಬರೇ…. ನೂರಾರು ಸಂಖ್ಯೆಯಲ್ಲಿ ಬಂದವರೆಲ್ಲರೂ ಸೋತರು.

“ವೀರರಾರೂ ಇಲ್ಲವೇ?” ದ್ರುಪದರಾಜ ಕಳಕಳಿಯಿಂದ ಪ್ರಶ್ನಿಸಿದ.

ಅಷ್ಟರಲ್ಲಿ ವ್ಯಕ್ತಿಯೊಬ್ಬ ಎದ್ದುನಿಂತ. ಬ್ರಾಹ್ಮಣರ ಗುಂಪಿನಲ್ಲಿ ಕುಳಿತಿದ್ದವನು ಅವನು. ಸಭೆ ಗೊಳ್ಳೆಂದು ನಕ್ಕಿತು. ರಾಜ ಮಹಾರಾಜರುಗಳನ್ನೇ ಸೋಲಿಸಿ ಸುಣ್ಣವಾಗಿಸಿದ ಬಿಲ್ಲು ಬ್ರಾಹ್ಮಣನಿಗೆ ಬಗ್ಗುವುದೇ? ಅವನು ರಾಜ ಭೋಜನವುಂಡು, ಭೂರಿದಕ್ಷಿಣೆ ಪಡೆದು ತೃಪ್ತನಾಗಬೇಕು. ಈ ಹುಚ್ಚು ಸಾಹಸ ಏಕೆ? ಎಲ್ಲರಿಗೂ ಹಾಸ್ಯ.

ಆದರೆ ಏನಾಶ್ಚರ್ಯ! ಆ ವ್ಯಕ್ತಿ ಬಿಲ್ಲಿನ ಕಡೆಗೆ ನಡೆದ, ಅದಕ್ಕೆ ನಮಸ್ಕರಿಸಿದ. ಹುಲ್ಲು ಕಡ್ಡಿಯೋ ಎನ್ನುವಷ್ಟು ಹಗುರಾಗಿ ಧನುಸ್ಸನ್ನು ಎತ್ತಿಯೇಬಿಟ್ಟ! ಹೆದೆಯೇರಿಸಿದ; ಪಂಚ ಬಾಣಗಳನ್ನು ಹೂಡಿದ. ನೀರೊಳಗೆ ನೋಡಿ ಮತ್ಸಯ ಯಂತ್ರವನ್ನು ಭೇದಿಸಿದ! ಮಂಗಳವಾದ್ಯಗಳು ಮೊಳಗಿದವು. ದ್ರೌಪದಿ ಆ ವೀರನ ಕೊರಳಿಗೆ ಹೂಮಾಲೆ ಹಾಕಿದಳು.

ಬ್ರಾಹ್ಮಣನು ಯಾರು?

ಆಗ ಕುರುವಂಶ ಭಾರತದಲ್ಲಿ ಬಹು ಪ್ರಸಿದ್ಧ. ಕುರುವಂಶದಲ್ಲಿ ಅಣ್ಣತಮ್ಮಂದಿರು ಧೃತರಾಷ್ಟ್ರ ಮತ್ತು ಪಾಂಡು. ಪಾಂಡುವಿಗೆ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹ ದೇವರೆಂಬ ಐದು ಜನ ಮಕ್ಕಳು. ಯುಧೀಷ್ಠಿರ ಧರ್ಮಶೀಲ. ಭೀಮ ಗದಾಯುದ್ಧ ಪ್ರವೀಣ. ಅರ್ಜುನ ಬಿಲ್ಲುವಿದ್ಯೆಯಲ್ಲಿ ವಿಶಾರದ. ಐದು ಜನ ಅಣ್ಣ ತಮ್ಮಂದಿರೂ ಬಹು ವೀರರು. ಇವರು ಪಾಂಡವರೆಂದೇ ಪ್ರಸಿದ್ಧರಾದರು. ಧೃತರಾಷ್ಟ್ರನಿಗೆ ದುರ್ಯೋಧನ, ದುಶ್ಯಾಸನ ಮುಂತಾಗಿ ನೂರು ಜನ ಗಂಡು ಮಕ್ಕಳು, ಇವರನ್ನು ಕೌರವರೆಮದು ಕರೆಯುತ್ತಿದ್ದರು.

ಪಾಂಡುರಾಜ ತೀರಿಕೊಂಡ. ಕೌರವರಲ್ಲಿ ಕೆಟ್ಟ ಹಟ ಬೆಳೆಯಿತು. ಪಾಂಡವರನ್ನು ನಾಶ ಮಾಡಿದರೆ ಇಡೀ ರಾಜ್ಯವನ್ನು ತಾವೇ ಆಳಬಹುದು ಎಂಬ ದುರಾಸೆ ಹುಟ್ಟಿತು. ಮಕ್ಕಳು ಕೆಟ್ಟ ಹಾದಿ ತುಳಿದರೆ ತಂದೆ ಬುದ್ಧಿ ಹೇಳಬೇಕು. ಧೃತರಾಷ್ಟ್ರ ಹಾಗೆ ಮಾಡಲಿಲ್ಲ. ಮಕ್ಕಳ ಅನ್ಯಾಯದಲ್ಲಿ ತಾನೂ ಭಾಗಿಯಾದ. ತಾನೂ ಕೆಟ್ಟ, ಮಕ್ಕಳೂ ಕೆಟ್ಟರು.

ಒಂದು ದಿನ ದೊಡ್ಡಪ್ಪ ಧೃತರಾಷ್ಟ್ರನೇ ಪಾಂಡವರನ್ನು ಕರೆದು ಹೇಳಿದನು: “ವಾರಣಾವತದಲ್ಲಿ ಉಮಾಮಹೇಶ್ವರ ಉತ್ಸವ ಇದೆ, ಹೋಗಿ ಬನ್ನಿ.” ಪಾಂಡವರು ತಾಯಿ ಕುಂತಿಯೊಡನೆ ಸಂತೋಷದಿಂದ ಹೊರಟುಹೋದರು. ಕೌರವರು ಏನು ಮೋಸ ನಡೆಸಿದ್ದರು ಗೊತ್ತೆ? ವಾರಣಾವತದಲ್ಲಿ ಸುಂದರವಾದ ಅರಗಿನ ಅರಮನೆಯನ್ನು ನಿರ್ಮಿಸಿದ್ದರು. ಪಾಂಡವರು ಮಲಗಿಕೊಂಡಿರುವಾಗ ರಾತ್ರಿ ಹೊತ್ತಿನಲ್ಲಿ ಇದಕ್ಕೆ ಬೆಂಕಿ ಹಚ್ಚುವ ವ್ಯವಸ್ಥೆ ಮಾಡಿದ್ದರು! ಹಿರಿಯನಾದ ವಿದುರನಿಗೆ ಈ ಮೋಸ ತಿಳಿಯಿತು. ಅವನು ಗುಟ್ಟಿನಲ್ಲಿ ಈ ಅರಮನೆಗೆ ಒಂದು ಸುರಂಗ ತೋಡಿಸಿದನು. ಪಾಂಡವರಿಗೆ ರಹಸ್ಯವಾಗಿ ಸಮಾಚಾರ ತಿಳಿಸಿದನು. ಒಂದು ರಾತ್ರಿ ಪಾಂಡವರೇ ಮನೆಗೆ ಬೆಂಕಿ ಇಟ್ಟರು. ಅರಗಿನ ಮನೆ ಧಗ ಧಗ ಉರಿಯಿತು, ಸುಟ್ಟು ಭಸ್ಮವಾಯಿತು. ಪಾಂಡವರು ಸುರಂಗಕ್ಕೆ ಇಳಿದರು. ಈ ದಾರಿ ಅವರನ್ನು ಕಾಡಿಗೆ ತಂದು ಬಿಟ್ಟಿತು. ಕಾಡು ದಾಟಿದ ಮೇಲೆ ಊರು ಸಿಕ್ಕಿತು. ಏಕಚಕ್ರ ಪುರ ಎಂಬ ಊರಿನಲ್ಲಿ ಬ್ರಾಹ್ಮಣ ವೇಷದಲ್ಲಿ ಅವರು ಭಿಕ್ಷಾನ್ನ ಮಾಡಿಕೊಂಡು ಇದ್ದರು.

ಏಕಚಕ್ರಪುರದಲ್ಲಿದ್ದಾಗ ಪಾಂಡವರಿಗೆ ದ್ರೌಪದಿಯ ಸ್ವಯಂವರದ ವಾರ್ತೆ ಸಿಕ್ಕಿತು. ಇತರ ಬ್ರಾಹ್ಮಣರೊಟ್ಟಿಗೆ ತಾವೂ ಪಾಂಚಾಲ ದೇಶಕ್ಕೆ ಹೊರಟರು. ರಾಜಸಭೆಗೆ ಬಂದರು. ಬಿಲ್ಲನ್ನು ಮುರಿದ ಬ್ರಾಹ್ಮಣನೇ ಧನುರ್ವಿದ್ಯಾ ವಿಶಾರದ, ಅಪ್ರತಿಮ ಶೂರ ಅರ್ಜುನ.

ಪಾಂಡವರ ರಾಣಿ

ಸ್ವಯಂವರ ಮಂಟಪದಿಂದ ಪಾಂಡವರು ಮನೆಗೆ ಹಿಂದಿರುಗಿದರು. ಸಂತೋಷದಿಂದ ಅಮ್ಮನನ್ನು ಕೂಗಿ ಹೇಳಿದರು. “ಅಮ್ಮಾ, ಇಂದು ಒಂದು ಅಮೂಲ್ಯ ರತ್ನವನ್ನೇ ಪಡೆದಿದ್ದೇವೆ.” ಒಳಗಿನಿಂದ ಕುಂತಿ ಹೇಳಿದಳು: “ಐವರೂ ಸರಿಯಾಗಿ ಪಾಲು ಮಾಡಿಕೊಳ್ಳಿ.”

ತಾಯಿಯ ಮಾತನ್ನು ಮೀರುವಂತಿಲ್ಲ. ದ್ರುಪದನಿಗೆ ಚಿಂತೆಯಾಯಿತು. ಆಗ ವ್ಯಾಸ ಮಹರ್ಷಿಗಳೇ ಹೇಳಿದರು. ದ್ರೌಪದಿಗೆ ಪಂಚಪಾಂಡವರು ಪತ್ನಿಯಾಗುವ ವರ ಇತ್ತು. ಅವಳ ಪುಣ್ಯಬಲದಿಂದಲೇ ಪಾಂಡವರು ಅರಗಿನ ಮನೆಯಿಂದಲೂ ಬದುಕು ಬಂದಿದ್ದರು ಎಂದು. ದ್ರುಪದನಿಗೆ ಸಮಾಧಾನವಾಯಿತು. ಶ್ರೀಕೃಷ್ಣ ಸಮ್ಮುಖದಲ್ಲಿ ವೈಭವದಿಂದ ವಿವಾಹ ನಡೆಯಿತು. ದ್ರೌಪದಿ ಪಾಂಡವರ ಹೆಂಡತಿಯಾದಳು. ಕುರುವಂಶದ ಹಿರಿಯರಾದ ಭೀಷ್ಮ, ಬಿಲ್ಲುವಿದ್ಯೆಯ ಗುರುಗಳಾದ ದ್ರೋಣ ಬಹಳ ಆನಂದಪಟ್ಟರು. ದೇವರ ದಯೆಯಿಂದ ಬದುಕಿ ಉಳಿದ ಪಾಂಡವರಿಗೆ ಅರ್ಧ ರಾಜ್ಯ ಕೊಡಬೇಕೆಂದು ಧೃತರಾಷ್ಟ್ರನಿಗೆ ಬುದ್ಧಿ ಹೇಳಿದರು. ಕೌರವರು ಸಂತೋಷ ನಟಿಸಿದರು.

ಪಾಂಡವರಿಗೆ ರಾಜ್ಯ ಸಿಕ್ಕಿತು. ಅವರು ಇಂದ್ರಪ್ರಸ್ಥ ಎಂಬ ನಗರವನ್ನು ರಾಜಧಾನಿ ಮಾಡಿಕೊಂಡರು. ಸ್ವಲ್ಪ ಕಾಲ ಕಳೆದ ಮೇಲೆ ರಾಜಸೂಯ ಎಂಬ ಯಾಗವನ್ನು ಮಾಡಲು ತೀರ್ಮಾನಿಸಿದರು. ಮಹರ್ಷಿಗಳೂ, ಹಿರಿಯರೂ , ರಾಜಾಧಿರಾಜರೂ, ದೇಶದೇಶಗಳಿಂದ ಯಾಗವನ್ನು ನೋಡಲು ಬಯಸುವವರೂ ಇಂದ್ರಪ್ರಸ್ಥಕ್ಕೆ ಬರುವರೆಂದು ರಾಜಧಾನಿ ಶೃಂಗಾರವಾಯಿತು. ಅದ್ಭುತವಾದ ಸಭಾಮಂದಿರದ ನಿರ್ಮಾಣವಾಯಿತು. ಅದರ ಸೊಗಸು, ವೈಭವ, ಶೃಂಗಾರಗಳನ್ನು ಕಂಡವರೆಲ್ಲ ಆಶ್ಚರ್ಯದಿಂದ ಮೂಕರಾಗುವಂತಿತ್ತು.

ಶ್ರೀಕೃಷ್ಣನೇ ನಿಂತುಈ ಯಾಗವನ್ನು ಮಾಡಿಸಿದನು. ಪಾಂಡವರ ವೈಭವವನ್ನು ನೋಡಲು ಕೌರವರಿಗೆ ಇಷ್ಟವಿಲ್ಲ. ಆದರೂ ಬಂದರು. ದುರದೃಷ್ಟವಶಾತ್‌ ದುರ್ಯೋಧನನಿಗೆ ಅಪಮಾನವೇ ಆಯಿತು. ಸುಂದರ ಸಭಾಭವನದಲ್ಲಿ ಅವನು ನೆಲವೆಂದು ತಿಳಿದು ಕೊಳದಲ್ಲಿ ಬಿದ್ದುಬಿಟ್ಟನು. ದ್ರೌಪದಿ ಕಿಲಕಿಲನೆ ನಕ್ಕಳು. ಕೌರವ ರಾಜನ ಕಣ್ಣುಗಳು ಕೆಂಡದಂತೆ ಕೆಂಪಾದವು. ಮುಂದೆ ಕೊಳವೆಂದು ಭ್ರಮಿಸಿ ದುರ್ಯೋಧನನು ನೆಲದ ಮೇಲೆ ನಡೆಯುತ್ತಿದ್ದಂತೆಯೇ ಪಂಚೆಯನ್ನು ಮೇಲೆತ್ತಿ ಕಟ್ಟಿದನು. ಪುನಃ ತೆರೆತೆರೆಯಾಗಿ ತೇಲಿಬಂತು ನಗು. ದುರ್ಯೋಧನನು ಬೆಂಕಿಯಾದನು. ಸೇಡು ತೀರಿಸುವ ಪಣ ತೊಟ್ಟನು.

ಎಂಥ ಜೂಜು, ಎಂಥ ಪಣ!

ಕೆಲವೇ ದಿನಗಳಲ್ಲಿ ದುರ್ಯೋಧನನಿಂದ ಯುಧಿಷ್ಠಿರನಿಗೆ ಪಗಡೆಯನ್ನು ಆಡಲು ಆಮಂತ್ರಣ ಹೋಯಿತು. ರಾಜರಿಗೆ ಬೇಟೆ ಮತ್ತು ಜೂಜು ಬಹಳ ಕೆಟ್ಟ ಅಭ್ಯಾಸಗಳು. ಯುಧಿಷ್ಠಿರನಿಗೂ ದ್ಯುತದ ಚಟ. ಆದರೆ ಚಾತುರ್ಯ ಸಾಲದು. ಶಕುನಿ ಎಂಬುವನು ಕೌರವರ ಪಕ್ಷದಲ್ಲಿ ಇದ್ದನು. ಅನಂತರ ಕೇಳಬೇಕೆ?

ಯುಧಿಷ್ಠಿರ ಸೋಲುತ್ತಲೇ ಹೋದ. ರಥ, ಕುದುರೆ, ಆನೆಗಳನ್ನು ಪಣವಾಗಿಟ್ಟು ಕಳೆದುಕೊಂಡ; ರಾಜ್ಯ ಬೊಕ್ಕಸ ಕಳೆದು ಕೊಂಡ ದಾಸದಾಸಿಯರನ್ನು ಕಳೆದುಕೊಂಡ; ರಾಜ್ಯ ಹೋಯಿತು ಅವನೂ ಅಲ್ಲದೆ ನಾಲ್ವರೂ ತಮ್ಮಂದಿರೂ ಕೌರವನ ಅಡಿಯಾಳಾದರು! ಶಕುನಿ ಹೇಳಿದ:

“ಕೊನೆಯ ಆಟ. ನೀನು ಗೆದ್ದರೆ ಇದುವರೆಗೆ ಕಳೆದು ಕೊಂಡ ಸರ್ವಸ್ವವನ್ನೂ ಹಿಂದಕ್ಕೆ ಕೊಟ್ಟುಬಿಡುತ್ತೇವೆ. ನೋಡು, ದ್ರೌಪದಿಯನ್ನೇ ಪಣವಾಗಿಡು. ಎಲ್ಲವನ್ನೂ ಗೆದ್ದುಕೊ.”

ಯುಧಿಷ್ಠಿರನಿಗೆ ದ್ಯೂತದ ಅಮಲು. ತಾನು ಮಾಡುತ್ತಿರುವುದು ಎಷ್ಟು ತಪ್ಪು ಎಂದು ಯೋಚಿಸಲಿಲ್ಲ. ಜೂಜು ಕೋರರಂತೆ ‘ಹುಂ’ ಅಂದ. ಕೊನೇ ದಾಳ ಉರುಳಿತು. ಗೆದ್ದವರು ಕೌರವರು.

ದ್ರೌಪದಿಗೆ ದೇವರ ಕೃಪೆಯೇ ರಕ್ಷೆ

ದುರ್ಯೋಧನ ಗಹಗಹಿಸಿ ನಕ್ಕ.

“ಯಾರಲ್ಲಿ? ದ್ರೌಪದಿ ಈಗ ನಮ್ಮ ದಾಸಿ. ಎಳೆದು ತನ್ನಿ ಅವಳನ್ನು ಸಭೆಗೆ’ ಎಂದು ಆಜ್ಞೆ ಕೊಟ್ಟ.

ಪಾಂಡವರ ಎದೆಗೆ ಕತ್ತಿಯಿಂದ ತಿವಿದಂತಾಯಿತು. ನಾಚಿಕೆಯಿಂದ ತಲೆ ತಗ್ಗಿಸಿದರು. ಯುಧಿಷ್ಠಿರನಿಗೆ ತಾನು ಎಂತಹ ಅನ್ಯಾಯ ಮಾಡಿದೆ ಎಂಬ ತಿಳಿವು ಬಂತು. ಆದರೆ ಕಾರ್ಯ ಮಿಂಚಿತ್ತು. ಚಿಂತಿಸಿ ಫಲವಿರಲಿಲ್ಲ.

ದ್ರೌಪದಿ ರಾಣಿವಾಸದಲ್ಲಿದ್ದಳು. ದುರ್ಯೋಧನ ದೂತನು, “ದ್ರೌಪದಿ,. ಯುಧಿಷ್ಠಿರನು ಜೂಜಿನಲ್ಲಿ ನಿನ್ನನ್ನು ಸೋತನು, ದುರ್ಯೋಧನ ಗೆದ್ದಿದ್ದಾನೆ. ಧೃತರಾಷ್ಟ್ರದ ಮನೆಗೆ ಕೆಲಸಕ್ಕೆ ಬಾ” ಎಂದು ಕರೆದನು.

ದ್ರೌಪದಿಗೆ ದಿಕ್ಕು ತೋರದಂತಾಯಿತು. “ಯಾರೇ ಆಗಲಿ ಹೆಂಡತಿಯನ್ನು ಹೀಗೆ ಪಣ ಇಡುತ್ತಾರೆಯೆ? ಅಲ್ಲದೆ, ಯುಧಿಷ್ಠಿರ ಮೊದಲು ತನ್ನನ್ನು ಸೋತಿದ್ದರೆ ನನ್ನನ್ನು ಪಣ ಇಡಲು ಅಧಿಕಾರವಿಲ್ಲ. ಮಹಾರಾಜನು ಮೊದಲು ತನ್ನನ್ನು ಸೋತನೋ, ನನ್ನನ್ನು ಸೋತನೋ ಕೇಳಿಕೊಂಡು ಬಾ” ಎಂದಳು. ದೂತ ಆಸ್ಥಾನಕ್ಕೆ ಹಿಂದಿರುಗಿದ.

ಅವನ ಮಾತನ್ನು ಕೇಳಿ ದುರ್ಯೋಧನ ಕೆಂಡವಾದ.

“ತೊತ್ತಿನ ಹೆಣ್ಣಿಗೆ ಎಷ್ಟುದ್ದ ನಾಲಿಗೆ? ನೀನು ಅವಳ ಮುಂದಲೆಯನ್ನು ಹಿಡಿದು ಎಳೆದು ತಾ” ಎಂದು ದುಶ್ಯಾಸನನ್ನು ಕಳುಹಿಸಿದ.

ದುಶ್ಯಾಸನ ಮೊದಲೇ ದುರುಳ ಶಿಖಾಮಣಿ! ಆಮೇಲೆ ಅಣ್ಣನ ಆಜ್ಞೆ! ಕೇಳಬೇಕೆ ಅವನ ಅಟ್ಟಹಾಸವನ್ನು?

ದ್ರೌಪದಿಯ ಮುಡಿ ಹಿಡಿದು ಸಭೆಗೆ ಎಳೆತಂದ.

“ಯುಧಿಷ್ಠಿರ ಸರ್ವಸ್ವವನ್ನು ಕಳೆದುಕೊಂಡ. ಕೊನೆಗೆ ನಿನ್ನನ್ನು ಅಡವಿಟ್ಟ ನೀನು ನಮ್ಮ ತೊತ್ತು” ಎಂದು ದುರ್ಯೋಧನ ಹಂಗಿಸಿದ.

ತುಂಬಿದ ರಾಜಸಭೆ! ಧೃತರಾಷ್ಟ್ರ, ಭೀಷ್ಮ, ದ್ರೋಣ, ಕೃಪ, ವಿದುರ ಮೊದಲಾದ ಹಿರಿಯರೂ ಕೂಡಿದ ಸಭೆ. ದ್ರೌಪದಿ ಆಸೆ ತುಂಬಿದ ಕಣ್ಣುಗಳಿಂದ ಹಿರಿಯರನ್ನು ನೋಡಿದಳು. ಯಾರೂ ಮಾತನಾಡಲಿಲ್ಲ.

ಹಿರಿಯರು ಮೌನವಾಗಿದ್ದರು! ಪ್ರಜೆಗಳು ದಂಗಾದರು! ಪಾಂಡವರು ತಲೆತಗ್ಗಿಸಿದರು!

“ಎಲ್ಲಿ ಧರ್ಮ, ನ್ಯಾಯ ಇಲ್ಲವೋ ಅದು ಸಭೆಯೇ ಅಲ್ಲ, ಕಳ್ಳರ ಕೂಟ” ಎಂದಳು ದ್ರೌಪದಿ.

ದುಶ್ಯಾಸನ ಹಲ್ಲು ಕಿರಿದು ಕೆಟ್ಟ ಮಾತುಗಳನ್ನಾಡಿದ. ಭೀಮ ಅಗ್ನಿಪರ್ವತದಂತಾದ. ಕೆರಳಿ, “ದುಶ್ಯಾಸನನ ಕೈಗಳನ್ನು ಸುಟ್ಟುಬಿಡುತ್ತೇನ” ಎಂದು ಅಬ್ಬರಿಸಿದ.

ಭೀಷ್ಮರು ದುರ್ಯೋಧನನಿಗೆ ವಿವೇಕ ಹೇಳಿದರು.

“ಕುರುವಂಶಕ್ಕೆ ಮಸಿ ಬಳಿಯಬೇಡ” ಎಂದರು.

ದುರ್ಯೋಧನ ಕ್ರೂರವಾಗಿ ನಕ್ಕ,

“ತೊತ್ತಿಗೇಕೆ ರಾಜವೇಷ? ಆಭರಣಗಳನ್ನು ತೆಗೆದೊಗೆ. ಇವಳ ಸೀರೆ ಸೆಳೆ’ ಎಂದು ದುಶ್ಯಾಸನನಿಗೆ ಆಜ್ಞೆ ಕೊಟ್ಟ.

ಆ ಪಾಪಿಯು ತಾಯಿ ಸಮಾನಳಾದ ಅತ್ತಿಗೆಯ ಸೆರಗು ಹಿಡಿದು ಜಗ್ಗಿದ. ದ್ರೌಪದಿ ಕಲ್ಲು ಕರಗುವಂತೆ ಗೋಳಾಡಿದಳು, ಹಿರಿಯರಿಗೆ ಮೊರೆ ಇಟ್ಟಳು.

“ಮಾನ ಹೋಗುವುದೂ ಪ್ರಾಣ ಹೋಗುವುದೂ ಒಂದೇ. ರಕ್ಷಿಸಿ” ಎಂದು ಕಣ್ಣೀರಿಟ್ಟಳು. ಪಂಚ ಪಾಂಡವರಿಗೆ ಕೇಳಿದಳು:

“ನಿಮ್ಮ ತೋಳ ಬಲವನ್ನು ನಂಬಿ, ನನ್ನನ್ನು ತಂದೆ ನಿಮಗೊಪ್ಪಿಸಿದರು. ತುಂಬಿದ ಸಭೆಯಲ್ಲಿ ಅಪಮಾನವಾಗುತ್ತಿದೆ, ಎಲ್ಲರೂ ಕೈಕಟ್ಟಿ ಕುಳಿತಿರಿ. ನಿಮಗೆ ನಾಚಿಕೆಯಾಗುವುದಿಲ್ಲವೆ?”

ಎಲ್ಲವೂ ವ್ಯರ್ಥ; ಅರಣ್ಯರೋದನವಾಯಿತು. ದ್ರುಪದ ಮಹಾರಾಜನ ಮಗಳು, ರಾಜಾಧಿರಾಜರನ್ನು ಗೆದ್ದು ರಾಜಸೂಯ ಯಾಗ ಮಾಡಿದ ವೀರ ಪಾಂಡವರ ಹೆಂಡತಿ, ಚಕ್ರವರ್ತಿನಿ. ಆದರೆ ತುಂಬಿದ ಸಭೆಯಲ್ಲಿ ಅಪಮಾನವಾದಾಗ ಕಾಪಾಡುವವರಿರಲಿಲ್ಲ. ದ್ರೌಪದಿ ಅಳುತ್ತಳುತ್ತಾ, “ಕೃಷ್ಣಾ, ಭಕ್ತ ವತ್ಸಲಾ, ಯಾರು ಕೈಬಿಟ್ಟರೂ ನೀನು ಕೈಬಿಡಬೇಡ. ಅನಾಥ ರಕ್ಷಕಾ, ನೀನೇ ಗತಿ” ಎಂದು ಧ್ಯಾನದಲ್ಲಿ ಕಣ್ಣು ಮುಚ್ಚಿದಳು.

ಏನಾಶ್ಚರ್ಯ! ದ್ರೌಪದಿಯ ಸೀರೆ ಅಕ್ಷಯವಾಯಿತು.

ದ್ರೌಪದಿಯು ದುರ್ಯೋಧನನಿಗೆ ‘ತೊಡೆ ಮುರಿಸಿಕೊಂಡು ಸಾಯುತ್ತಿ’ ಎಂದು ಶಾಪ ಕೊಟ್ಟಳು.

ದುಶ್ಯಾಸನ ಸೀರೆ ಸೆಳೆಯುತ್ತಲೇ ಹೋದ . ಸೀರೆಗಳ ರಾಶಿ ಬಿತ್ತು. ದುಶ್ಯಾಸನನ ಕೈ ಸೋತಿತು.

ನಿನ್ನ ಪಾಪಕ್ಕೆ ಶಿಕ್ಷೆಯಾದ ಮೇಲೆ….’

ಆದರೂ ದುರ್ಯೋಧನನ ಮದ ಇಳಿಯಲಿಲ್ಲ.

“ಸೀರೆ ಅಕ್ಷಯವಾದರೇನಂತೆ? ನೀನು ನನ್ನ ಅಂತಃಪುರದ ದಾಸಿ” ಎಂದು ತೊಡೆ ತಟ್ಟಿ ತೋರಿಸಿ ಹೀಗಳೆದ.

ಅಪಮಾನದ ಮೇಲೆ ಅಪಮಾನ! ಅವಳಲ್ಲಿ ಛಲ ಬುಸ್ಸೆಂದು ಮೇಲೆದ್ದಿತು. “ತೊಡೆ ಮುರಿಸಿಕೊಂಡು ಸಾಯುತ್ತಿ” ಎಂದು ದುರ್ಯೋಧನನನ್ನು ಶಪಿಸಿದಳು. ದುಶ್ಯಾಸನನ್ನು ನೋಡಿ ಆರ್ಭಟಿಸಿದಳು:

“ನಿನ್ನ ಈ ಪಾಪಕೆಲಸಕ್ಕೆ ಶಿಕ್ಷೆಯಾದ ಮೇಲೆ ನನ್ನ ಕೂದಲನ್ನು ಕಟ್ಟುತ್ತೇನೆ. ಅಷ್ಟರವರೆಗೆ ಮುಡಿಕಟ್ಟಲಾರೆ.”

ದ್ರೌಪದಿಯ ವೀರಪ್ರತಿಜ್ಞೆಯನ್ನು ಕೇಳಿ ಸಭೆ ನಡುಗಿತು. ಹಸ್ತಿನಾವತಿಯ ಭೂಮಿ ಕಂಪಿಸಿತು. ಧೂಮಕೇತುಗಳು ಆಕಾಶ ತುಂಬಿದುವು. ನಾಲ್ಕೂ ಕಡೆಗಳಿಂದಲೂ ಅಪಶಕುನಗಳಾದವು.

ನೂರು ಆನೆಗಳ ಬಲವುಳ್ಳ ಭೀಮ, ಅಣ್ಣನಿಗಾಗಿ ಇದುವರೆಗೆ ಸುಮ್ಮನಿದ್ದ. ಈಗ ಅವನ ಸಿಟ್ಟು ಗಗನ ಮುಟ್ಟಿತು. ಆತ ಗುಡುಗಿದ:

“ಪಾಪಿ ದುರ್ಯೋಧನನ ತೊಡೆಗಳನ್ನು ಕುಟ್ಟಿ ಪುಡಿ ಮಾಡುತ್ತೇನೆ. ದುರುಳ ದುಶ್ಯಾಸನನ ಎದೆ ಸೀಳಿ ರಕ್ತ ಕುಡಿಯುತ್ತೇನೆ. ”

ಭೀಷ್ಮ ದ್ರೋಣರು ಧೃತರಾಷ್ಟ್ರನನ್ನು ಎಚ್ಚರಿಸಿದರು: “ಮಕ್ಕಳ ಭಂಡತನವನ್ನು ಕೇಳಿಯೂ ಸುಮ್ಮನಿರುವೆಯಲ್ಲ? ಮಹಾಸತಿ ದ್ರೌಪದಿಯ ನೊಂದ ಹೃದಯದ ಶಾಪ. ನಿನ್ನ ವಂಶ ನಿರ್ಮೂಲವಾಗುತ್ತದೆ. ಅವಳನ್ನು ಸಮಾಧಾನಗೊಳಿಸು.”

ಧೃತರಾಷ್ಟ್ರನಿಗೂ ಹೆದರಿಕೆಯಾಯಿತು. “ನಿನಗೆ ಇಂತಹ ಅಪಮಾನ ಮಾಡಬಾರದಾಗಿತ್ತು. ನೀನು ಶ್ರೇಷ್ಠಳು, ಧರ್ಮ ಪರಳು. ಬೇಕಾದ ವರವನ್ನು ಕೇಳಿಕೊ” ಎಂದು ದ್ರೌಪದಿಗೆ ಹೇಳಿದನು. ಅವಳು ತನ್ನ ಗಂಡಂದಿರನ್ನು ಬಿಡಿಸಿಕೊಂಡಳು. ಧೃತರಾಷ್ಟ್ರನು ಅವರ ರಾಜ್ಯವನ್ನು ಹಿಂದಿರುಗಿಸಿ ಸಮಾಧಾನ ಹೇಳಿದ.

ಪಾಂಡವರ ವನವಾಸ

ಕೌರವರು ಸಿಟ್ಟುಗೊಂಡರು. ತಾವು ಉಪಾಯದಿಂದ ಗೆದ್ದುಕೊಂಡ ರಾಜ್ಯವನ್ನು ತಂದೆ ಮರಳಿಸಿದರಲ್ಲ? ಪುನಃ ಇದನ್ನು ಕಸಿದುಕೊಳ್ಳುವುದು ಹೇಗೆ? ಜೂಜಾಡುವುದೇ ಇದಕ್ಕಿರುವ ಒಂದೇ ದಾರಿ ಎಂದು ನಿರ್ಧರಿಸಿದರು. ಧರ್ಮ ರಾಜನಿಗೆ ಪುನಃ ದ್ಯೂತಕ್ಕೆ ಆಹ್ವಾನ ಹೋಯಿತು.

‘ಕೃಷ್ಣಾ, ಹದಿಮೂರು ವರ್ಷಗಳಿಂದ ಹೊಟ್ಟೆಯಲ್ಲಿ ಉರಿಯನ್ನು ಇಟ್ಟುಕೊಂಡು ಈ ದಿನ ಬರುವುದನ್ನೇ ಕಾಯುತ್ತಿದ್ದೆ.’

ಈ ಬಾರಿ ಸೋತವರು ಸಕಲ ರಾಜ್ಯವನ್ನು ಬಿಡಬೇಕು, ಹನ್ನೆರಡು ವರ್ಷ ವನವಾಸಕ್ಕೆ ಹೋಗಬೇಕು. ಅನಂತರ ವೇಷ ಮರೆಸಿಕೊಂಡು ಒಂದು ವರ್ಷ ಅಜ್ಞಾತವಾಸವನ್ನು ಮಾಡಬೇಕು. ಅಜ್ಞಾತವಾಸದ ಅವಧಿಯಲ್ಲಿ ಅವರನ್ನು ಯಾರಾದರೂ ಗುರುತು ಹಿಡಿದರೆ ಪುನಃ ಹನ್ನೆರಡು ವರ್ಷ ವನವಾಸ , ಒಂದು ವರ್ಷ ಅಜ್ಞಾತವಾಸ. ಹೀಗೆ ಷರತ್ತು ಹಾಕಿದರು . ಜೂಜಿನಲ್ಲಿ ಧರ್ಮರಾಜನಿಗೇ ಸೋಲಾಯಿತು.

ಪಾಂಡವರು ನಾರುಬಟ್ಟೆಯನ್ನುಟ್ಟು ಕಾಡಿಗೆ ಹೊರಟರು. ದ್ರೌಪದಿ ಧೈರ್ಯಗೆಡಲಿಲ್ಲ. ಗಂಡಂದಿರನ್ನು ಹಿಂಬಾಲಿಸಿದಳು. ಅರಮನೆಯ ಹಂಸತೂಲಿಕಾತಲ್ಪವೆಲ್ಲಿ? ಅರಣ್ಯದ ಕಲ್ಲು ಮುಳ್ಳುಗಳೆಲ್ಲಿ? ಪಾಂಚಾಲಿಯ ಕಾಲು ಸೋಲುತ್ತಿತ್ತು; ಆಯಾಸವಾಗುತ್ತಿತ್ತು. ಅರಮನೆಯಲ್ಲಿ ಅವಳ ಸುತ್ತಲೂ ಸಖಿಯರು ಇರುತ್ತಿದ್ದರು. ಕಷ್ಟವೇ ಗೊತ್ತಿರಲಿಲ್ಲ .  ಈಗ ಹೆಜ್ಜೆ ಹೆಜ್ಜೆಗೆ ಅವಳ ಪಾದಗಳಿಂದ ರಕ್ತ ಚಿಮ್ಮುತ್ತಿತ್ತು.

ಪಾಂಡವರ ವನವಾಸ ಪ್ರಾರಂಭವಾಯಿತು. ದ್ರೌಪದಿಯ ಇಷ್ಟದೇವತೆ ಶ್ರೀಕೃಷ್ಣ. ಕಾಡಿನಲ್ಲಿರುವ ತನ್ನ ಭಕ್ತರನ್ನು ಅವನು ಮರೆಯಲಿಲ್ಲ . ಆಗಾಗ ಬಂದು ಹೋಗುತ್ತಿದ್ದನು. ಕಾಡಿನಲ್ಲಿದ್ದ ಋಷಿಗಳಿಗೆ ಪಾಂಡವರಲ್ಲಿ ವಾತ್ಸಲ್ಯ, ಬಂದು ಸಮಾಧಾನ ಮಾಡುತ್ತಿದ್ದರು, ಉಪದೇಶ ಮಾಡುತ್ತಿದ್ದರು. ಸೂರ್ಯದೇವನು ಧರ್ಮರಾಜನಿಗೆ ಅಕ್ಷಯ ಪಾತ್ರೆಯನ್ನು ದಯಪಾಲಿಸಿದ್ದನು. ಇದು ದ್ರೌಪದಿ ಊಟ ಮಾಡುವವರೆಗೆ ಬರಿದಾಗುತ್ತಲೇ ಇರಲಿಲ್ಲ. ಇದರಿಂದ ಎಲ್ಲರಿಗೂ ಧಾರಾಳವಾಗಿ ಬಡಿಸಬಹುದಾಗಿತ್ತು. ಕೊನೆಗೆ ದ್ರೌಪದಿ ಊಟ ಮಾಡುತ್ತಿದ್ದಳು. ಅನಂತರ ಆ ದಿನ ಅದನ್ನು ಉಪಯೋಗಿಸುವಂತಿರಲಿಲ್ಲ. ಹೀಗೆ ವನವಾಸದ ಕಷ್ಟ ದುಃಖಗಳಲ್ಲಿಯೂ ದ್ರೌಪದಿ ಶಾಂತಿ, ಸಮಾಧಾನಗಳಿಂದ ಇದ್ದಳು.

ಕೃಷ್ಣಾ, ನಾವು ಸಾವಿನ ದವಡೆಯಲ್ಲಿದ್ದೇವೆ

ಪಾಂಡವರ ರಾಜ್ಯವನ್ನೂ ಕಿತ್ತುಕೊಂಡು ದುರ್ಯೋಧನ ಅವರನ್ನು ಕಾಡಿಗಟ್ಟಿದ. ಆದರೂ ಅವನಿಗೆ ಹಗಲು ರಾತ್ರಿ ಒಂದೇ ಚಿಂತೆ-ಪಾಂಡವರಿಗೆ ಇನ್ನೂ ಕಷ್ಟವನ್ನು ಕೊಡುವುದು ಹೇಗೆ ! ಈ ಸಂದರ್ಭದಲ್ಲಿ ದೂರ್ವಾಸ ಋಷಿಗಳು ಬಂದರು. ದುರ್ಯೋಧನ ವಿಶೇಷ ಸತ್ಕಾರ ಮಾಡಿದ . ಋಷಿಗಳಿಗೆ ಸಂತೋಷವಾಯಿತು. ಇದೇ ಅವಕಾಶವನ್ನು ಬಳಸಿಕೊಂಡು ದುರ್ಯೋಧನನು, “ನನ್ನ ಒಂದು ಮಾತನ್ನು ನಡೆಸಿಕೊಡಿ” ಎಂದು ಬೇಡಿದ. ದೂರ್ವಾಸರು ತಮ್ಮ ನೂರಾರು ಶಿಷ್ಯರ ಸಮೇತವಾಗಿ ಕಾಡಿಗೆ ಹೋಗಿ ಪಾಂಡವರ ಆತಿಥ್ಯ ಸ್ವೀಕರಿಸಬೇಕು. ಇದೇ ಆ ಬೇಡಿಕೆ! ‘ಆಗಲಿ’ ಎಂದರು ದೂರ್ವಾಸರು.

‘ಕೃಷ್ಣಾ, ನಾವು ಸಾವಿನ ದವಡೆಯಲ್ಲಿದ್ದೇವೆ.’

ಸರಿ, ದೂರ್ವಾಸರು, ನೂರಾರು ಬ್ರಾಹ್ಮಣರು ಬಂದೇ ಬಿಟ್ಟರು. ಧರ್ಮರಾಜ ಅವರೆಲ್ಲರಿಗೆ ಕೈಮುಗಿದು, “ನನ್ನ  ಆತಿಥ್ಯವನ್ನು ಸ್ವೀಕರಿಸಬೇಕು” ಎಂದು ಬೇಡಿದ. “ಸ್ನಾನ ಸಂಧ್ಯಾವಂದನೆ ಮುಗಿಸಿ ಬನ್ನಿ” ಎಂದು ಪ್ರಾರ್ಥಿಸಿದ. ದ್ರೌಪದಿ ಭಯಗೊಂಡಳು. ತನ್ನ ಊಟವೂ ಮುಗಿದಿದೆ, ಈ ನೂರಾರು ಹಸಿದ ಹೊಟ್ಟೆಗಳನ್ನು ತಣಿಸುವುದು ಹೇಗೆ? ದೂರ್ವಾಸ ಮುನಿಗಳ ಕೋಪ ಪ್ರಳಯ ಭಯಂಕರ, ಅವರು ಸಿಟ್ಟಿನಿಂದ ಕಣ್ಣುಬಿಟ್ಟರೆ ಸುಟ್ಟು ಭಸ್ಮವಾಗುವುದು ಖಂಡಿತ. ದ್ರೌಪದಿ, “ಕೃಷ್ಣಾ, ನೀನಲ್ಲದೆ ನಮ್ಮನ್ನು ರಕ್ಷಿಸುವವರು ಯಾರೂ ಇಲ್ಲ” ಎಂದು ಭಕ್ತಿಯಿಂದ ಧ್ಯಾನಿಸಿದಳು.

ಕೃಷ್ಣನೇ  ಬಂದ! ಎದುರಿಗೇ ನಿಂತ! “ನನಗೆ ಹಸಿವು. ಏನು ಕೊಡುವೆ?” ಎಂದ. ದ್ರೌಪದಿಗೆ ಕೃಷ್ಣ ಬಂದನೆಂದು ಆನಂದ. ಆದರೆ ಅಕ್ಷಯಪಾತ್ರೆ ಬರಿದು, ಕೊಡುವುದೇನು? “ಕೃಷ್ಣಾ, ನಾವು ಸಾವಿನ ದವಡೆಯಲ್ಲಿದ್ದೇವೆ” ಎಂದು ಹೆಳಿ, ದೂರ್ವಾಸರು ಬಂದಿರುವುದನ್ನು ವಿವರಿಸಿದಳು. ಕೃಷ್ಣನು “ಅಕ್ಷಯ ಪಾತ್ರೆ ತಾ” ಎಂದ.

ದ್ರೌಪದಿ ತೊಳದಿಟ್ಟ ಪಾತ್ರೆ ತಂದಳು. ಅದರಲ್ಲಿ ಎಲ್ಲೋ ಒಂದು ಚೂರು ಸೊಪ್ಪು ಉಳಿದುಕೊಂಡಿತ್ತು. ಕೃಷ್ಣ ಅದನ್ನೇ ಬಾಯಿಗೆ ಹಾಕಿಕೊಂಡ. ಹೊಟ್ಟೆ ತುಂಬಿತು ಎಂದು ತೇಗಿದ .

ದೂರ್ವಾಸ ಮುನಿ ಮತ್ತು ಬ್ರಾಹ್ಮಣರು ಯಮುನೆಯಲ್ಲಿ ಮಿಂದು ಮೇಲೆ ಬರುತ್ತಿದ್ದರು. ಅವರಲ್ಲಿ ಒಮ್ಮೇಲೆ ಮೃಷ್ಟಾನ್ನ ಉಂಡ ಸಂತೃಪ್ತಿ ಉಂಟಾಯಿತು. ಅವರೂ ತೇಗಿದರು.

ದೂರ್ವಾಸ ಮುನಿಗಳು ಪಾಂಡವರನ್ನು ಬಾಯ್ತುಂಬ ಹರಸಿದರು. “ನಿಮ್ಮ ಧರ್ಮ ನಿಮ್ಮನ್ನು ಕಾಪಾಡುತ್ತದೆ” ಎಂದು ಧೈರ್ಯ ತುಂಬಿ ಬೀಳ್ಕೊಂಡರು.

ಜಯದ್ರಥನ ದುರುಳತನ

ಕೌರವರ ಆಸ್ಥಾನದಲ್ಲಿ ಪಡಬಾರದ ಅವಮಾನ ಪಟ್ಟು ದ್ರೌಪದಿ ಕಾಡಿಗೆ ಬಂದಳು. ಇಲ್ಲಿಯೂ ಅವಳಿಗೆ ಕಷ್ಟ ತಪ್ಪಲಿಲ್ಲ.

ಧೃತರಾಷ್ಟ್ರನ ಮಗಳ ಹೆಸರು ದುಶ್ಯಲೆ. ಅವಳನ್ನು ಸಿಂಧು ದೇಶದ ರಾಜ ಜಯದ್ರಥ ಎಂಬುವನಿಗೆ ಕೊಟ್ಟು ಮದುವೆ ಮಾಡಿದ್ದರು. ಅವನು ದ್ರೌಪದಿಯ ಸ್ವಯಂವರಕ್ಕೆ ಹೋಗಿ ಸೋತಿದ್ದ. ಅವಳನ್ನು ಪರಾಕ್ರಮದಿಂದ ಗೆಲ್ಲಲಾಗಲಿಲ್ಲ.  ಈಗ ಅವಳು ಬಡತನದಲ್ಲಿದ್ದಾಳೆ, ಹಣದ ಆಸೆ ತೋರಿಸಿದರೆ ತನ್ನೊಡನೆ ಬರುತ್ತಾಳೆ ಎಂದುಕೊಂಡ. ಮೆಲ್ಲನೆ ದ್ರೌಪದಿ ಒಬ್ಬಳೇ ಇರುವ ಹೊತ್ತು ಸಾಧಿಸಿದ. ಹೇರಳ ಆಭರಣಗಳನ್ನು ತಂದು ಮುಂದೆ ಸುರಿದ. ದ್ರೌಪದಿ ಎಲ್ಲವನ್ನೂ ತಿರಸ್ಕರಿಸಿದಳು. ಪಾಂಡವರಿಲ್ಲ ಎಂದು ಜಯದ್ರಥನಿಗೆ ಧೈರ್ಯ. ಬಲಾತ್ಕಾರದಿಂದ ದ್ರೌಪದಿಯನ್ನು ರಥದಲ್ಲಿ ಕೂಡಿಸಿಕೊಂಡು ಓಡಿದ. ಮುನಿಗಳು ಓಡಿಹೋಗಿ ಭೀಮಾರ್ಜುನರಿಗೆ ವಿಷಯ ತಿಳಿಸಿದರು. ಭೀಮಾರ್ಜುನರು ಬೆಂಕಿಬೆಂಕಿಯಾದರು. ಕ್ಷಣಮಾತ್ರದಲ್ಲಿ ರಥವನ್ನು ಬೆನ್ನಟ್ಟಿದರು. ಅರ್ಜುನನ ಬಾಣಗಳಿಂದ ಜಯದ್ರಥನ ಕುದುರೆಗಳು ನೆಲ ಹಿಡಿದುವು. ರಥ ನಿಂತಿತು. ಭೀಮ ಒಂದೇ ಪೆಟ್ಟಿಗೆ ಸೈಂಧವನನ್ನು ಕೆಡವಿದ. ವೈರಿಯನ್ನು ಕೊಲ್ಲುವುದರಲ್ಲಿದ್ದಾಗ ಧರ್ಮರಾಜನು ಭೀಮನನ್ನು ತಡೆದ. ಭೀಮ ಜಯದ್ರಥನನ್ನು ಒದ್ದು ಓಡಿಸಿದ.

ಮತ್ತೆ ವಿಪತ್ತು

ಪಾಂಡವರು ಪಗಡೆಯಲ್ಲಿ ಸೋತಾಗ ಹನ್ನೆರಡು ವರ್ಷ ಕಾಲ ಕಾಡಿನಲ್ಲಿರಬೇಕು, ಒಂದು ವರ್ಷ ಯಾರಿಗೂ ತಿಳಿಯದಂತೆ ಗುಟ್ಟಾಗಿರಬೇಕು,  ಈ ಕಾಲದಲ್ಲಿ ಅವರ ಗುರುತು ಸಿಕ್ಕರೆ ಮತ್ತೆ ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತ ವಾಸ ಎಂದು ತೀರ್ಮಾನವಾಗಿತ್ತಲ್ಲವೆ?

ಹನ್ನೆರಡು ವರ್ಷ ಕಳೆದದ್ದಾಯಿತು. ಒಂದು ವರ್ಷ ಆರು ಜನರು- ಐವರು ಮಹಾ ಪರಾಕ್ರಮಿಗಳು, ಅವರ ಬಹು ಸುಂದರಿ ಹೆಂಡತಿ – ಬಚ್ಚಿಟ್ಟುಕೊಳ್ಳುವುದು ಹೇಗೆ? ಕೌರವರು ಸುಮ್ಮನಿರುತ್ತಾರೆಯೇ? ಅವರನ್ನು ಬೆಳಕಿಗೆ ಎಳೆಯಲು ಪ್ರಯತ್ನಿಸಿಯೇ ಪ್ರಯತ್ನಿಸುತ್ತಾರೆ.

ಅತಿ ಹೆಚ್ಚಿನ ಕಷ್ಟ ಹೆಂಗಸಾದ ದ್ರೌಪದಿಯದೇ.. ಪಾಂಡವರು ಬಹಳ ಯೋಚಿಸಿದರು . ಅನಂತರ ಗುಟ್ಟಿನಲ್ಲಿ ಒಂದು ನಿರ್ಣಯಕ್ಕೆ ಬಂದರು. ಧರ್ಮರಾಯ ಯತಿವೇಷ ಹಾಕಿಕೊಂಡ. ಕಂಕಭಟ್ಟ ಎಂಬ ಹೆಸರಿನಿಂದ ಮತ್ಸ್ಯದೇಶದ ರಾಜ ವಿರಾಟರಾಜನ ಅರಮನೆಯನ್ನು ಸೇರಿದ. ಭೀಮಸೇನ ವಲಲ ಎಂಬ ಹೆಸರಿನ ಅಡುಗೆ ಭಟ್ಟನಾದ. ವಿರಾಟರಾಜನ ಅಡುಗೆ ಮನೆಗೆ ಪ್ರವೇಶ ದೊರಕಿಸಿಕೊಂಡ. ಅರ್ಜುನ ಬೃಹನ್ನಳೆ ಎಂಬ ಹೆಸರಿನ ನಾಟ್ಯಾಚಾರ್ಯನಾಗಿ ವಿರಾಟ ರಾಜನ ನಾಟ್ಯಶಾಲೆಯನ್ನು ಸೇರಿದ, ನಕುಲ ಕುದುರೆಲಾಯದ ಮೇಲ್ವಿಚಾರಕನಾದ, ಸಹದೇವ ಗೋಪಾಲಕನಾದ, ದ್ರೌಪದಿ ರಾಣಿ ಸುದೇಷ್ಣೆಯ ಬಳಿಗೆ ಹೋಗಿ ತನ್ನನ್ನು ದಾಸಿಯಾಗಿ, ಸೈರಂಧ್ರಿಯಾಗಿ ಸೇರಿಸಿಕೊಳ್ಳುವಂತೆ ಬೇಡಿದಳು. ದ್ರೌಪದಿಯ ಕಣ್ಣುಕುಕ್ಕುವ ರೂಪವನ್ನು ನೋಡಿ ಸುದೇಷ್ಣೆಗೆ ಆಶ್ಚರ್ಯ !

“ಯಾರು ನೀನು? ಎಲ್ಲಿಂದ ಬಂದೆ?” ಎಂದು ಪ್ರಶ್ನಿಸಿದಳು.

“ನಾನು ಪಂಚಗಂಧರ್ವರ ಪತ್ನಿ. ಕೇಶಾಲಂಕಾರದಲ್ಲಿ ಪ್ರವೀಣೆ. ಒಂದು ವರ್ಷ ಇದ್ದು ಹೊರಟು ಹೋಗುತ್ತೇನೆ” ಎಂದು ದ್ರೌಪದಿ ನುಡಿದಳು. ಸುದೇಷ್ಣೆ ಅವಳನ್ನು ಸಂತೋಷದಿಂದ ತನ್ನ ಬಳಿ ಇರಿಸಿಕೊಂಡಳು.

ದ್ರೌಪದಿ ಮಹಾಬಲಶಾಲಿ ದ್ರುಪದ ರಾಜನ ಮಗಳು. ಪ್ರಪಂಚವನ್ನೇ ಗೆಲ್ಲಬಲ್ಲ ಪಾಂಡವರ ಹೆಂಡತಿ. ಚಕ್ರವರ್ತಿನಿಯಾಗಿ ಸಿಂಹಾಸನದಲ್ಲಿ ಕುಳಿತವಳು. ಶ್ರೀಕೃಷ್ಣನೇ ಅವಳನ್ನು ತನ್ನ ತಂಗಿ ಎಂದು ಕರೆದ.

ಅವಳೀಗ ರಾಣಿ ಸುದೇಷ್ಣೆಯ ಸೇವಕಿ.

ಇಷ್ಟಾದರೂ ಸಮಾಧಾನ ತಂದುಕೊಂಡು, ಅರಮನೆಯಲ್ಲೇ ಇದ್ದ ಪಾಂಡವರನ್ನು ನೋಡಿಕೊಂಡು ಕಾಲ ಕಳೆಯುತ್ತಿದ್ದಳು.

ಆದರೂ ಕಷ್ಟ ಅವಳ ಹೆಗಲ ಮೇಲೆಯೇ !

ಕೀಚಕ ವಧೆ

ರಾಣಿ ಸುದೇಷ್ಣೆಯ ತಮ್ಮ ಕೀಚಕ. ಭಾರಿ ಬಲಶಾಲಿ. ಆತ ಒಮ್ಮೆ ಅಕ್ಕನ ಅಂತಃಪುರಕ್ಕೆ ಬಂದ. ದಾಸಿ ಸೈರಂಧ್ರಿ ಕಣ್ಣಿಗೆ ಬಿದ್ದಳು. ಅವಳ ಸುಂದರ ರೂಪ ಕಂಡು ಮೋಹಗೊಂಡ.  ಅಕ್ಕನನ್ನು ಕೇಳಿಯೇ ಬಿಟ್ಟ “ಈ ತ್ರಿಲೋಕ ಸುಂದರಿ ಯಾರು ?”

ತಮ್ಮನ ಕೆಟ್ಟ ಮನಸ್ಸು ಅಕ್ಕನಿಗೆ ತಿಳಿಯಿತು . ಅವಳಿಗೆ ಭಯವಾಯಿತು. “ತಮ್ಮಾ, ಈಕೆ ದಾಸಿಯಾದರೂ ಅತ್ಯಂತ ಗುಣಶೀಲೆ. ಐವರು ಗಂಧರ್ವರಿಗೆ ಮಡದಿಯಂತೆ” ಎಂದಳು.

ಅಕ್ಕನ ಕಣ್ಣು ತಪ್ಪಿಸಿ ಕೀಚಕ ಸೈರಂಧ್ರಿಯನ್ನು ಕಾಡಿದ. “ ಈ ದಾಸಿ ವೃತ್ತಿ ಬೇಡ. ನನ್ನ ರಾಣಿಯಾಗು” ಎಂದ.

“ಇಂತಹ ಕೆಟ್ಟ ಯೋಚನೆ ಬಿಡು.  ಕೈಲಾಗದ ಹುಡುಗ ನದಿಯನ್ನು ದಾಟಲು ಹಾರಿದಂತೆ ನಿನ್ನ ಸ್ಥಿತಿಯಾಗುತ್ತದೆ”  ಎಂದು ದ್ರೌಪದಿ ಎಚ್ಚರಿಕೆ ಕೊಟ್ಟಳು. ತಪ್ಪಿಸಿಕೊಂಡು ಓಡಿದಳು. ಆದರೆ ಕೀಚಕ ಬೆನ್ನಿಗೆ ಬಿದ್ದ ಶನಿಯಾದ.

ಒಮ್ಮೆ ಅವಳನ್ನು ಅಟ್ಟಿಸಿಕೊಂಡೇ ಬಂದ . ಭಯದಿಂದ ದ್ರೌಪದಿ ಓಡಿದಳು. ರಾಜನ ಸಭಾಭವನಕ್ಕೇ ಬಂದಳು. ಅಲ್ಲಿ ರಾಜ ವಿರಾಟನಿದ್ದ. ಯತಿ ಕಂಕ ಇದ್ದ. ಅಡುಗೆ ಭಟ್ಟ ವಲಲ ನಿದ್ದ. ಕೀಚಕ ಸಿಟ್ಟಿನಿಂದ ಅವಳನ್ನು ನೂಕಿದ. ಕಣ್ಣಿನಿಂದ ಕಿಡಿ ಕಾರುತ್ತಾ ಹೊರಟು ಹೋದ.

ದ್ರೌಪದಿ ಹೆಡೆಮಟ್ಟಿದ ಸರ್ಪದಂತಾದಳಲು. “ಹೆಂಗಸಿನ ಮೇಲೆ ಕೈ ಮಾಡುತ್ತಿದ್ದರೆ ಸುಮ್ಮನೆ ನೋಡುತ್ತೀರಲ್ಲ ? ಎಲ್ಲಿದೆ ರಾಜಧರ್ಮ?’’ ಎಂದು ಆರ್ಭಟಿಸಿದಳು. ಭೀಮ (ಅಡುಗೆ ಭಟ್ಟ ವಲಲ) ಬುಸುಗುಟ್ಟುತ್ತಿದ್ದ. ಎದುರಿಗಿದ್ದ ಮರವನ್ನು ದಿಟ್ಟಿಸಿದ . ಅದರ ಕೊಂಬೆಯನ್ನೇ ಕಿತ್ತಿದ ಕೀಚಕನನ್ನು ಬಲಿ ಹಾಕಲು. ಧರ್ಮರಾಜ ಉಪಾಯವಾಗಿ ಹೇಳಿದ:

“ಅಡುಗೆ ಭಟ್ಟರೆ, ಆ ವೃಕ್ಷದ ಮೇಲೆ ನಿಮಗೇಕೆ ಕಣ್ಣು? ಅದನ್ನು  ಈಗ ತುಂಡರಿಸುವುದು ಬೇಡ. ಸ್ವಲ್ಪ ಸಮಯ ಹೋಗಲಿ.” ಆನಂತರ ಸೈರಂಧ್ರಿಗೂ ಸಮಾಧಾನ ಹೇಳಿ ಕಳುಹಿಸಿದ.

ದ್ರೌಪದಿಗೆ ಸಂಕಟ ತಡೆಯಲು ಸಾಧ್ಯವೇ ಆಗಲಿಲ್ಲ. ರಾತ್ರಿ ಮಲಗಿ ಅತ್ತಳು. ಅನಂತರ ರಾತ್ರಿಯೇ ಮೆಲ್ಲನೆ ಭೀಮನ ಬಳಿಗೆ ಬಂದಳು. “ಕೀಚಕ ನನ್ನನ್ನು ಸಂಕಟ ಪಡಿಸುತ್ತಾನೆ. ನೀವು ಕಣ್ಮುಚ್ಚಿ ಧ್ಯಾನ ಮಾಡುತ್ತಿದ್ದಿರಾ?” ಎಂದು ರೇಗಿಸಿದಳು.

‘ಅವನನ್ನು ಮುಗಿಸಬೇಕೆಂದೇ ಇದ್ದೆ. ಅಣ್ಣ ಅಡ್ಡಿ ಬಂದ. ಇನ್ನು ಸ್ವಲ್ಪ ದಿವಸಗಳು ಸಹಿಸಿಕೊ.”

ದ್ರೌಪದಿ ಕೆರಳಿದಳು. “ನಿನ್ನನ್ನು ನಂಬಿ ನಿನ್ನ ಬಳಿಗೆ ಬಂದೆ. ವೀರಾಧಿವೀರರು ಐವರು ಪತಿಗಳಿದ್ದೂ ನನ್ನ ಮಾನವನ್ನು ಕಾಪಾಡುವವರಿಲ್ಲವೆ? ಧರ್ಮರಾಜ ನ್ಯಾಯ, ನೀತಿಗಳ ಚೌಕಟ್ಟಿನಲ್ಲಿ ಇದ್ದಾನೆ. ಅರ್ಜುನ ಕುಣಿತ ಹೇಳಿಕೊಡುತ್ತಿದ್ದಾನೆ. ನಕುಲ, ಸಹದೇವರ ಶಕ್ತಿ ಸಾಲದು. ಸೌಟು ಹಿಡಿದ ಮೇಲೆ ನಿನ್ನ ಕೈಗಳ ಶಕ್ತಿಯೂ ಕುಂದಿದೆ. ಪಾಪ, ನೀನು ಏನು ಮಾಡುತ್ತಿ? ನಾನು ಅನುಭವಿಸಿರುವ ಅಪಮಾನಗಳು ಒಂದೇ ಎರಡೇ? ನಾನಿದ್ದರೆ ನಿಮಗೆ ತೊಂದರೆ. ನನಗೆ ಪ್ರಾಣತ್ಯಾಗ ಮಾಡಲು ಅಪ್ಪಣೆಯನ್ನಾದರೂ ಕೊಡು” ಎಂದಳು.

ಅವಳ ಸ್ಥಿತಿಯನ್ನು ಕಂಡು ಭೀಮನಿಗೆ  ‘ಅಯ್ಯೋ’ ಎನ್ನಿಸಿತು. “ನೀನು ಶಾಂತಳಾಗು. ಕೀಚಕನನ್ನು ನಾಟ್ಯ ಶಾಲೆಗೆ ಬರಮಾಡು. ಅವನ ಕತೆಯನ್ನು ಮುಗಿಸುತ್ತೇನೆ” ಎಂದು ಮಾತುಕೊಟ್ಟನು.

ಮರುದಿನ ಕೀಚಕ ಅಂತಃಪುರಕ್ಕೆ ಬಂದ . ಎಂದಿನಂತೆ ಸೈರಂಧ್ರಿಯ ಬೆನ್ನು ಹಿಡಿದ.  ಏನಾಶ್ಚರ್ಯ! ಸೈರಂಧ್ರಿ ಪ್ರಸನ್ನಳಾದಂತೆ ಕಂಡಿತು. “ರಾತ್ರಿ ನಾಟ್ಯಶಾಲೆಗೆ ಬಾ” ಎಂದಳು.

ಕೀಚಕನ ಸಂಭ್ರಮ ಹೇಳತೀರದು. ರಾತ್ರಿ ಸೈರಂಧ್ರಿ ಕಾದಿರುತ್ತಾಳೆ ಎಂದು ನಾಟ್ಯಶಾಲೆಗೆ ಬಂದ.  ಅಲ್ಲಿ ಕಾದಿತ್ತು ಮೃತ್ಯ. ಭೀಮ ಅವನ ಮೇಲೆ ಬಿದ್ದ. ಕೀಚಕನೂ ಸಾಮಾನ್ಯನಲ್ಲ. ವೀರರಲ್ಲ ವೀರ. ಭಯಂಕರವಾಗಿ ಹೋರಾಟವಾಯಿತು. ಭೀಮ ಕೀಚಕನ ಪ್ರಾಣ ಹಿಂಡಿದ.

ಮರುದಿನ ವಿರಾಟನಗರಿಯಲ್ಲಿ ಗುಲ್ಲೋ ಗುಲ್ಲು, ಊರ ತುಂಬ ಸುದ್ಧಿ. ಸೈರಂಧ್ರಿಯನ್ನು ಕೀಚಕ ಕೆಣಕಿದನಂತೆ! ಅವಳ ಗಂಧರ್ವಪತಿಗಳು ಆ ಭಯಂಕರ ಬಲಶಾಲಿಯನ್ನು ಕೊಂದುಬಿಟ್ಟರಂತೆ! ಮೈಮೇಲೆ ಒಂದು ಗಾಯವಿಲ್ಲವಂತೆ! ಸುದೇಷ್ಣೆ ಕಣ್ಣೀರು ಸುರಿಸಿದಳು. ಆದರೆ ಕೀಚಕನ ತಮ್ಮಂದಿರು ಇವಳಿಂದಲೇ ಅಣ್ಣ ಸತ್ತ ಎಂದು ಕೋಪದಿಂದ ಕುದಿದರು. ಅವಳನ್ನೂ ಕೀಚಕನ ಜೊತೆಗೆ ಸುಟ್ಟುಬಿಡುತ್ತೇವೆ ಎಂದು ಹಿಡಿದುಕೊಂಡು ಹೊರಟರು.

ಅಬಲೆ ಸ್ತ್ರೀ. ಈ ಹಲವು ದುಷ್ಟರನ್ನು ಹೇಗೆ ಎದುರಿಸಿಯಾಳು? ಭೀಮ ಸದ್ದಿಲ್ಲದೇ ಸ್ಮಶಾನಕ್ಕೆ ಹೋದ. ಬಲಿಷ್ಠ ಮರಗಳನ್ನು ಕಿತ್ತು ತಂದ.  ಈ ದುರುಳರನ್ನು ಸದೆಬಡಿದ. ಕೇವಲ ಮರಗಳು ಬಡಿಯುತ್ತಿದ್ದುದು ಕಾಣುತ್ತಿತ್ತು. ಅವುಗಳ ಮರೆಯಲ್ಲಿದ್ದ ಭೀಮನು ಕಾಣುತ್ತಿರಲಿಲ್ಲ. ಜನ ಹೆದರಿ ಓಡಿ ಹೋದರು.

ಸುದೇಷ್ಣೆ ದ್ರೌಪದಿಯನ್ನು ಕರೆದಳು. ಕೈಮುಗಿದಳು.

“ಆದ ಅನಾಹುತವೆ ಸಾಕಮ್ಮಾ. ಹೊರಟುಹೋಗು” ಎಂದಳು.

“ಇನ್ನು ಕೆಲವೇ ದಿನಗಳಿವೆ, ಆನಂತರ ಗಂಧರ್ವ ಪತಿಗಳು ನನ್ನನ್ನು ಕರೆದೊಯ್ಯುತ್ತಾರೆ.” ಎಂದು ದ್ರೌಪದಿ ಅನುಮತಿ ಬೇಡಿದಳು.

ಒಂದು ವರ್ಷ ಕಳೆಯಿತು. ಪಾಂಡವರೂ ದ್ರೌಪದಿಯೂ ತಮ್ಮ ಮರೆ ವೇಷವನ್ನು ಕಳಚಿ, ನಿಜವಾದ ರೂಪದಲ್ಲಿ ಕಾಣಿಸಿಕೊಂಡರು.

ವಿರಾಟನ ಸಂತೋಷಕ್ಕೆ ಪಾರವುಂಟೆ? ಅಜುನ ಸುಭದ್ರೆಯರ ಮಗ ಅಭಿಮನ್ಯುವಿಗೆ ತನ್ನ ಮಗಳು ಉತ್ತರೆಯನ್ನು ಕೊಟ್ಟು ಮದುವೆ ಮಾಡಿದ.

ಕೃಷ್ಣ ಯುದ್ಧವನ್ನೆ ನಿಶ್ಚಯಿಸು

ಪಾಂಡವರ ವನವಾಸವೂ ಮುಗಿಯಿತು; ಅಜ್ಞಾತ ವಾಸವೂ ಮುಗಿಯಿತು. ನಿಯಮದ ಪ್ರಕಾರ ಕೌರವರು ರಾಜ್ಯವನ್ನು ಮರಳಿಸಬೇಕಿತ್ತು. ಸಂಧಾನಕ್ಕೆ ಶ್ರೀಕೃಷ್ಣನೇ ಹೊರಟನು. ಧರ್ಮರಾಜನು ಸಾರಿಸಾರಿ ಹೇಳಿದನು: “ಯುದ್ಧವಾಗುವುದನ್ನು ತಪ್ಪಿಸು. ನಮಗೆ ಅರ್ಧ ರಾಜ್ಯ ಸಿಕ್ಕದಿದದರೆ ಚಿಂತೆ ಇಲ್ಲ. ಐದು ಊರುಗಳು ಸಾಕು. ಯುದ್ಧ ಬೇಡ. ಸಾವು ನೋವು, ಅಪಾರ ಹಾನಿ, ಕಷ್ಟಕೋಟಲೆಗಳನ್ನು ತಪ್ಪಿಸು.” ಅಣ್ಣನ ಅಭಿಪ್ರಾಯವೇ ಭೀಮ, ಅರ್ಜುನ ಮತ್ತು ನಕುಲರ ಅಭಿಪ್ರಾಯವಾಗಿತ್ತು. ಸಹದೇವನೊಬ್ಬನೆ ಯುದ್ಧವೇ ಬೇಕು ಎಂದವನು. ತಾನು ಪಾಂಡವರ ಕೈ ಹಿಡಿದಾಗಿನಿಂದ ಪಟ್ಟ ಕಷ್ಟಗಳನ್ನೂ ಅಪಮಾನಗಳನ್ನೂ ನೆನೆಸಿಕೊಂಡು ದ್ರೌಪದಿಗೆ ತಡೆಯಲಾರದ ಸಂಕಟವಾಯಿತು. ಅವಳೆಂದಳು:

“ಕೃಷ್ಣ, ನನ್ನ ಹಾಗೆ ಬೇರೆ ಯಾವ ಹೆಂಗಸು ಸಂಕಟಪಟ್ಟಿದ್ದಾಳೆ? ಪಾಂಡವರ ಮುಂದೆಯೇ ತುಂಬಿದ ರಾಜಸಭೆಯಲ್ಲಿ ದುಶ್ಯಾಸನ ಸೀರೆಯನ್ನು ಎಳೆದನಲ್ಲ! ಆ ಪಾಪಿಗಳು ನನ್ನನ್ನು ದಾಸಿ ಎಂದರಲ್ಲ!  ನನ್ನಲ್ಲಿ ನಿನಗೆ ಪ್ರೀತಿ ಇದ್ದರೆ ಕೌರವರಲ್ಲಿ ಕೋಪವನ್ನೇ ತೋರಿಸು. ದುಶ್ಯಾಸನನು ಎಳೆದ ನನ್ನ ಜಡೆಯನ್ನು ಮರೆಯಬೇಡ. ಪಾಂಡವರು ಕೌರವರು ಯುದ್ಧ ಮಾಡದೇ ಹೋದರೆ, ನನ್ನ ಮುದುಕ ತಂದೆ, ನನ್ನ ಅಣ್ಣ, ನನ್ನ ಮಕ್ಕಳಾದ ಉಪ ಪಾಂಡವರು, ಅಭಿಮನ್ಯು ಇವರೇ ಯುದ್ಧ ಮಾಡುತ್ತಾರೆ. ಹದಿಮೂರು ವರ್ಷಗಳಿಂದ ಹೊಟ್ಟೆಯಲ್ಲಿ ಉರಿಯನ್ನು ಇಟ್ಟುಕೊಂಡು  ಈ ದಿನ ಬರುವುದನ್ನೇ ಕಾಯುತ್ತಿದ್ದೆ. ದುಶ್ಯಾಸನನ ತೋಳು ಕತ್ತರಿಸಿ ಬಿದ್ದು ಧೂಳಿನಲ್ಲಿ ಉರುಳಾಡುವುದನ್ನು ನೋಡದೆ ಹೋದರೆ ನನ್ನ ಹೊಟ್ಟೆ ಶಾಂತವಾಗುವುದು ಹೇಗೆ? ಸಂಧಾನ ಮಾಡಿ ಬರಬೇಡ, ಯುದ್ಧವನ್ನೇ ನಿಶ್ಚಯಿಸು.”

ದ್ರೌಪದಿಯ ಕಣ್ಣುಗಳಿಂದ ಬೆಂಕಿ ಸುರಿಯುತ್ತಿತ್ತು. ಕೃಷ್ಣ ಅವಳಿಗೆ ಸಮಾಧಾನ ಮಾಡಿದ. “ನಿನಗೆ ಅಪಮಾನ ಮಾಡಿದವರ ಹೆಂಡತಿಯರೂ ಬಿಕ್ಕಿ ಬಿಕ್ಕಿ ಅಳುವುದನ್ನು ನೋಡುತ್ತೀಯೆ. ಕೌರವರಿಗೆ ಶಿಕ್ಷೆಯಾಗುವ ಹೊತ್ತೂ ಬಂದಿದೆ” ಎಂದು ಹೇಳಿ ಕೌರವರ ಆಸ್ಥಾನಕ್ಕೆ ಹೊರಟನು. ಆದರೆ ಕೃಷ್ಣನ ರಾಯಭಾರ ವಿಫಲವಾಯಿತು.

ವೀರಪ್ರತಿಜ್ಞೆ ನೆರವೇರಿತು

ಕುರುಕ್ಷೇತ್ರ ಸಮರ ನಡೆಯಿತು. ಯುದ್ಧ ಒಟ್ಟು ಹದಿನೆಂಟು ದಿನಗಳ ಕಾಲ ನಡೆಯಿತು. ಪಿತಾಮಹ ಭೀಷ್ಮ ಶರ ಮಂಚ ಹಿಡಿದನು. ದ್ರೋಣರು ಮಡಿದರು. ಅರ್ಜುನನಿಂದ ಕರ್ಣನು ಕೊಲ್ಲಲ್ಪಟ್ಟನು. ನಕುಲ, ಸಹದೇವರಿಂದ ಶಕುನಿಯೂ, ಅವನ ಮಕ್ಕಳೂ ಹತರಾದರು. ಭೀಮನು ದುಶ್ಯಾಸನನನ್ನು ರಥದಿಂದ ಎಳೆದು, ಗದೆಯಿಂದ ಜಜ್ಜಿ ಅವನ ಎದೆ ಸೀಳಿದನು. ದ್ರೌಪದಿಯ ಅಪಮಾನದ ಸೇಡು ತೀರಿತು. ದುರ್ಯೋಧನನು ಜೀವ ಭಯದಿಂದ ಕೊಳದಲ್ಲಿ ಅಡಗಿ ಕುಳಿತನು. ಭೀಮನು ಅವನನ್ನು ಬಯ್ದು ಹಂಗಿಸಿದನು. ಸಿಟ್ಟಿನಿಂದ ದುರ್ಯೋಧನನು ಹೊರಕ್ಕೆ ಹಾರಿದನು. ಭಯಂಕರವಾದ ಗದಾಯುದ್ಧ ನಡೆಯಿತು. ಭೀಮನ ಗದೆಯಿಂದ ದುರ್ಯೋಧನನ ತೊಡೆ ಮುರಿಯಿತು, ಅವನು ಸತ್ತನು. ಹದಿನೆಂಟು ದಿನ ರಕ್ತದ ಹೊಳೆ ಹರಿಯಿತು.

ಕರುಳಿಗೆ ಬೆಂಕಿ

ದುರ್ಯೋಧನ ತೊಡೆ ಮುರಿದು ಬಿದ್ದಾಗ ಪಾಂಡವರು ಅವನನ್ನು ಬಿಟ್ಟು ತಮ್ಮ ಬಿಡಾರಕ್ಕೆ ಹಿಂತಿರುಗಿದರು. “ಕೌರವರೆಲ್ಲ ಹೋದರು, ತಮಗಿನ್ನು ವಿಜಯ ದೊರೆಯಿತು” ಎಂದು ಭಾವಿಸಿದರು. ಆದರೂ ದ್ರೌಪದಿಯ ದುಃಖ ಪರಂರೆ ಮುಗಿಯಲಿಲ್ಲ.

ದುರ್ಯೋಧನ ಉರುಳಿಬಿದ್ದ ಕಡೆಗೆ ದ್ರೋಣಾಚಾರ್ಯರ ಮಗ ಅಶ್ವತ್ಥಾಮ ಬಂದ. ರಾಜನ ಸ್ಥಿತಿಯನ್ನು ಕಂಡು ಅವನಿಗೆ ದುಃಖ, ಕೋಪ ಉಕ್ಕಿದವು. ಪಾಂಡವರನ್ನು ಕಡಿದುಹಾಕುತ್ತೇನೆ ಎಂದು ರಾತ್ರಿ ಅವರ ಪಾಳೆಯಕ್ಕೆ ಹೋದನು. ಅವನ ಕೈಗೆ ಪಾಂಡವರು ಸಿಕ್ಕಲಿಲ್ಲ. ದ್ರೌಪದಿಯ ಮಕ್ಕಳು ಉಪಪಾಂಡವರು ಸಿಕ್ಕರು. ಅವರ ತಲೆಗಳನ್ನು ಕತ್ತರಿಸಿ ಹಾಕಿದ.

ಬೆಳಗಾದಾಗ ದ್ರೌಪದಿಗೆ ತನ್ನ ಮಕ್ಕಳ ಸ್ಥಿತಿಯನ್ನು ಕಂಡು ಹೃದಯ ಉರಿದುಹೋಯಿತು. ನೆಲದ ಮೇಲೆ ಬಿದ್ದು ಹೊರಳಿ ಅತ್ತಳು. ಭೀಮಾರ್ಜನರು ಅಶ್ವತ್ಥಾಮನನ್ನು ಸೋಲಿಸಿ ಹಿಡಿದುಕೊಂಡು ಬಂದರು. ಅವನಿಗೆ ಶಿಕ್ಷೆ ಮಾಡಿ ಕಳುಹಿಸಿಕೊಟ್ಟರು.

ಅಂತೂ ವರ್ಷಗಟ್ಟಲೆ ಸಂಕಟಪಟ್ಟ ದ್ರೌಪದಿ ಸುಖ ಕಾಣುತ್ತಾಳೆ ಎನ್ನುವ ಹೊತ್ತಿಗೆ ಅವಳ ಮಕ್ಕಳೆಲ್ಲ ಸತ್ತರು.

ಸ್ವರ್ಗಕ್ಕೆ

ಯುದ್ಧ ಮುಗಿಯಿತು. ಯುಧಿಷ್ಠಿರ ರಾಜನಾಗಬೆಕು. ಆದರೆ ಅವನಿಗೆ ವೈರಾಗ್ಯ ಬಂದಿತ್ತು. “ನನ್ನ ನೆಂಟರನ್ನೇ ಕೊಂದು ಪಾಪ ಕಟ್ಟಿಕೊಂಡೆ. ನನಗೆ ರಾಜನಾಗುವ ಇಚ್ಛೆಯೇ ಇಲ್ಲ” ಎಂದನು. ತಮ್ಮಂದಿರೆಲ್ಲ ಸಮಾಧಾನ ಪಡಿಸಿದರೂ ಕೇಳಲಿಲ್ಲ. ಆಗ ಈ ವೀರನಾರಿಯೆ ಪತಿಗೆ ಮಾರ್ಗದರ್ಶನ ಮಾಡಿದಳು:

“ಇದು ಧರ್ಮಯುದ್ಧ. ಕೌರವರು ಅಧರ್ಮದಿಂದ ತಮ್ಮ ನಾಶವನ್ನು ತಾವೇ ತಂದುಕೊಂಡರು. ಈಗ ಅಳಿದುಳಿದ ಪ್ರಜೆಗಳನ್ನು ಯೋಗ್ಯ ರೀತಿಯಲ್ಲಿ ಸಲಹಿ ಸಂರಕ್ಷಿಸುವುದೇ ನಮ್ಮ ಧರ್ಮ.”

ಸತಿಯ ಮಾತನ್ನು ಮನ್ನಿಸಿ ಧರ್ಮರಾಜನು ಸಿಂಹಾಸನವೇರಿದನು. ಧೃತರಾಷ್ಟ್ರ, ಗಾಂಧಾರಿಯರನ್ನು ಪ್ರೀತಿಯಿಂದ ನೋಡಿಕೊಂಡರು. ಪ್ರಜೆಗಳಿಗೆ ಒಳ್ಳೆಯದಾಗಲಿ ಎಂಬುದನ್ನೇ ಮನಸ್ಸಿನಲ್ಲಿಟ್ಟುಕೊಂಡು ರಾಜ್ಯವಾಳಿದರು.

ಕೆಲವು ವರ್ಷಗಳ ನಂತರ ಶ್ರೀಕೃಷ್ಣನೂ ಭೂಮಿಯನ್ನು ಬಿಟ್ಟು ಹೋದನು. ಆಗಲೇ ಧೃತರಾಷ್ಟ್ರ, ಗಾಂಧಾರಿ, ಕುಂತಿಯರು ತೀರಿಕೊಂಡಿದ್ದರು. ತಮ್ಮ ಜೀವವಾಗಿದ್ದ ಶ್ರೀಕೃಷ್ಣನೂ ಹೊರಟುಹೋದದ್ದು ಪಾಂಡವರಿಗೆ ಬಹು ದುಃಖವಾಯಿತು. ತಾವೂ ಮೊಮ್ಮಗನಿಗೆ ಪಟ್ಟಕಟ್ಟಿ ರಾಜಧಾನಿಯನ್ನು ಬಿಟ್ಟು ನಡೆದರು. ಅವರ ಜೊತೆಗೇ ಹೊರಟಳು ದ್ರೌಪದಿ.

ಮೇರುಪರ್ವತದ ಬಳಿಗೆ ಅವರು ಬಂದಾಗ ದ್ರೌಪದಿ ನೆಲದ ಮೇಲೆ ಬಿದ್ದುಬಿಟ್ಟಳು. ದೇಹ ಅಲ್ಲುಳಿಯಿತು, ಚೇತನ ಸ್ವರ್ಗ ಸೇರಿತು. ಕ್ರಮೇಣ ಪಾಂಡವರೂ ಸ್ವರ್ಗವನ್ನು ಸೇರಿದರು.

ಎಂತಹ ಸುಂದರಿ, ಎಂತಹ ಕಷ್ಟ!

ದ್ರೌಪದಿಯೇ ಒಮ್ಮೆ ಕೃಷ್ಣನಿಗೆ ಹೇಳುತ್ತಾಳೆ: “ದ್ರುಪದ ರಾಜನ ಮಗಳಾಗಿ, ಧ್ರೃಷ್ಟದ್ಯುಮ್ನನ ತಂಗಿಯಾಗಿ ನಿನ್ನ ಪ್ರಿಯ ಸಖಿಯಾಗಿ, ಪಾಂಡುರಾಜನ ಸೊಸೆಯಾಗಿ , ಪಂಚ ಪಾಂಡವರ ಪಟ್ಟದ ರಾಣಿಯಾಗಿ, ಮಹಾವೀರರಾದ ಉಪಪಾಂಡವರ ತಾಯಿಯಾಗಿಯೂ ನಾನು ಎಂಥ ಅವಮಾನವನ್ನು ಸಹಿಸಬೇಕಾಯಿತು!” ಅವಳ ಕರುಣ ಕಥೆಯೆ ಈ ವಾಕ್ಯದಲ್ಲಿ ಅಡಕವಾಗಿದೆ. ಸೌಂದರ್ಯದಲ್ಲಿ, ವೈಭವದಲ್ಲಿ ಅವಳಿಗೆ ಸಮನಾದವರೇ ಇಲ್ಲ ಎನ್ನಿಸಿಕೊಂಡವಳು ಕಷ್ಟದ, ಅಪಮಾನದ ದಾರಿಯಲ್ಲೆ ನಡೆಯಬೇಕಾಯಿತು.

ಹೆಣ್ಣು ಅಬಲೆ ಎನ್ನುವುದುಂಟು. ಪಾಂಡವರಿಗೆ ರಾಜ್ಯ ಹೋಗಿದ್ದಾಗ ಧೃತರಾಷ್ಟ್ರನು ವರವನ್ನು ಬೇಡಿಕೊ ಎಂದು ಕೇಳಿದಾಗ ಮತ್ತೆ ಗಂಡಂದಿರಿಗೆ ರಾಜ್ಯ ಕೊಡಿಸಿಕೊಟ್ಟವಳು ದ್ರೌಪದಿ. ಯುಧಿಷ್ಠಿರ ಅವಳನ್ನು ಜೂಜಿನಲ್ಲಿ ಸೋತಾಗ, ‘ಅವನು ತನ್ನನ್ನು ಮೊದಲು ಸೋತನೇ, ಹೆಂಡತಿಯನ್ನು ಸೋತನೇ? ತನ್ನನ್ನು ಸೋತವನಿಗೆ ಹೆಂಡತಿಯನ್ನು ಪಣವಾಗಿಡುವ ಅಧಿಕಾರ ಉಂಟೇ?’ ಎಂದು ಅವಳು ಕೇಳಿದ ಪ್ರಶ್ನೆಗೆ, ರಾಜಸಭೆಯಲ್ಲಿ ಮಹಾ ವಿದ್ವಾಂಸರಿಗೂ ಉತ್ತರ ಕೊಡಲು ಸಾಧ್ಯವಾಗಲಿಲ್ಲ.

ಕೆರಳಿದ ದ್ರೌಪದಿ ಸ್ತ್ರೀ ಶಕ್ತಿಯ ಮೂರ್ತಿಯಾದಳು. ‘ದ್ರೋಣ ಭೀಷ್ಮರೂ ಸಭೆಯಲ್ಲಿರುವ ಇತರರೂ ಹೀಗೆ ಸುಮ್ಮನೆ ಕುಳಿತಿರುವುದನ್ನು ನೋಡಿದರೆ ಯಾರಿಗೂ ಸತ್ವವಿಲ್ಲ ಎಂದು ಕಾಣುತ್ತದೆ’ ಎಂದು ಛೀಮಾರಿ ಹಾಕಿದಳು ಮತ್ತು ಗಾಂಧಾರಿಯ ಮಕ್ಕಳು ಕೌರವರು; ಅವಳ ಸೀರೆಯನ್ನು ಎಳೆದಾಗ ಧೃತರಾಷ್ಟ್ರ-ಗಾಂಧಾರಿಯರು ಏನೂ ಮಾಡಲಿಲ್ಲ. ಆದರೆ ಮಹಾಭಾರತದ ಯುದ್ಧ ಮುಗಿದ ಮೇಲೆ ಗಾಂಧಾರಿಯನ್ನು ಪ್ರೀತಿಯಿಂದ, ಗೌರವದಿಂದ ಕಂಡಳು. ತನ್ನ ಅತ್ತೆ ಕುಂತಿಗೆ ಶುಶ್ರೂಷೆ ಮಾಡಿದಂತೆಯೇ ಗಾಂಧಾರಿಗೂ ಶುಶ್ರೂಷೆ ಮಾಡಿದಳು.

ಮರೆಯಲು ಸಾಧ್ಯವೆ?

ಅಮ್ಮ ದ್ರೌಪದಿಯ ಕಥೆ ಹೇಳಿ ಮುಗಿಸಿದಳು. ಅಮ್ಮ ಹೇಳಿದ ಕಥೆಯನ್ನೇ ನೆನೆಸಿಕೊಳ್ಳುತ್ತಾ ಮಾತಿಲ್ಲದೆ ಕುಳಿತಿದ್ದಳು ಉಷಾ.

ಅಮ್ಮ ಹೇಳಿದಳು: “ನೋಡು ಮಗೂ, ಹಣಕಾಸಿನಿಂದ ಅಥವಾ ಪದವಿಯಿಂದ ಯಾರೂ ದೊಡ್ಡವರಾಗುವುದಿಲ್ಲ. ಕಷ್ಟ ಯಾರನ್ನೂ ಬಿಟ್ಟಿದ್ದಲ್ಲ. ಪಂಚಪಾಂಡವರ ಹೆಂಡತಿ ದ್ರೌಪದಿ, ಕೃಷ್ಣನ ತಂಗಿ – ಅರ್ಜುನನ ಹೆಂಡತಿ ಸುಭದ್ರೆ ಇವರೂ ಎಷ್ಟೆಷ್ಟು ನೊಂದರು! ಬಾಳಿನ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು, ಒಳ್ಳೆಯವರಿಗೆ ಕೆಡಕು ಮಾಡಬಾರದು, ಕೆಟ್ಟವರಿಗೆ ಉನ್ಮತ್ತರಿಗೆ ತಲೆ ಬಾಗಿಸುವುದಿಲ್ಲ ಎಂಬ ಛಲ ಬೇಕು. ದ್ರೌಪದಿ ಹೆಂಗಸೇ; ಆದರೆ ಅವಳ ಛಲ, ಕೃಷ್ಣನಲ್ಲಿ ಅವಳ ಭಕ್ತಿ – ಇವುಗಳಿಂದ ವೀರ ಪಾಂಡವರಷ್ಟೇ ಅವಳೂ ಹೆಸರನ್ನು ಪಡೆದುಕೊಂಡಳು. ಸಿಡಿಲಿನಂತಹ ವ್ಯಕ್ತಿತ್ವ, ಹದಿಮೂರು ವರ್ಷಗಳು ಕಳೆದರೂ ಸ್ವಲ್ಪವೂ ತಣ್ಣಗಾಗದ ಛಲ, ಜೊತೆಗೆ ಎಲ್ಲ ಕಳೆದ ಮೇಲೆ ಗಾಂಧಾರಿಯಲ್ಲಿ ಮರುಕ. ಸತ್ವದಲ್ಲಿ ಅವಳು ಭೀಮಾರ್ಜುನರಿಗೇನೂ ಕಡಿಮೆ ಇಲ್ಲ, ಅಲ್ಲವೆ?”

“ಹೌದಮ್ಮ. ನೀನು ಹೇಳಿದ ಕಥೆ ಕೇಳಿದ ಮೇಲೆ ನನಗೆ ದ್ರೌಪದಿಯ ವಿಷಯದಲ್ಲಿ ಅಯ್ಯೋ ಎನ್ನಿಸುತ್ತದೆ, ಮೆಚ್ಚುಗೆ ಬರುತ್ತದೆ, ಆಶ್ಚರ್ಯವಾಗುತ್ತದೆ. ಎಷ್ಟು ಒಳ್ಳೆಯ ಕಥೆ ಹೇಳಿದೆಯಮ್ಮ! ಹೊತ್ತಾದದ್ದೆ ಗೊತ್ತಾಗಲಿಲ್ಲ. ಕಥೆಯನ್ನು ನಿಧಾನವಾಗಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬೇಕು” ಎನ್ನುತ್ತ ಎದ್ದಳು ಉಷಾ.