ಹದಿಹರೆಯದವರಿಗೆ ತಿಳುವಳಿಕೆ, ವ್ಯವಹಾರ ಜ್ಞಾನ, ಕಾರ‍್ಯಾಕಾರಣಗಳ ಸಂಬಂಧs ಯಾವುದು ಸರಿ, ಯಾವುದು ತಪ್ಪು, ಯಾವುದು ಅನುಕೂಲಕರ, ಯಾವುದು ಅನಾನುಕೂಲ. ಏನು ಮಾಡಬೇಕು, ಮಾಡಬಾರದು, ಗುರಿ ಏನು, ಗುರಿ ಸಾಧನೆಗೆ ಯೋಗ್ಯ ಮಾರ್ಗ ಯಾವುದು ತನ್ನ ಮತ್ತು ಮನೆಯವರ ಹಾಗೂ ಇತರರ ಬಲಾಬಲಗಳೇನು, ವಾಸ್ತವಿಕತೆ ಯಾವುದು, ಅವಾಸ್ತವಿಕತೆ ಯಾವುದು, ಯಾವುದು ಸತ್ಯ ಯಾವುದೂ ಭ್ರಮೆ, ಇಂತಹ ಹಲವು ಹನ್ನೊಂದು ವಿಚಾರಗಳ ಬಗ್ಗೆ ದ್ವಂದ್ವ ಮತ್ತು ಗೊಂದಲ ಇರುತ್ತದೆ. ಬಹುತೇಕ ವಿಷಯಗಳ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ತನ್ನ ಆತ್ಮಸಾಕ್ಷಿ ಹೇಳಿದಂತೆ, ತನ್ನ ವಿಚಾರದಂತೆ ನಡೆಯಬೇಕಾ ಅಥವಾ ಇತರರು ಹೇಳಿದಂತೆ, ಇತರರನ್ನು ಮೆಚ್ಚಿಸಲು ಪ್ರಯತ್ನಿಸಬೇಕಾ, ಗೊತ್ತಾಗದು.

ಮೊದಲನೆಯದಾಗಿ ಹರೆಯದವರಿಗೆ ತಮ್ಮ ತನದ ಬಗ್ಗೆ ಗೊಂದಲ ಇರುತ್ತದೆ ಎನ್ನುತ್ತಾನೆ ಪ್ರಸಿದ್ಧ ಮನೋವಿಜ್ಞಾನಿ ಎರಿಕ್ ಎರಿಕ್ ಸನ್ ಇದನ್ನು ಆತ IDENTITY CONFUSION OR IDENTITY CRISIS  ಎನ್ನುತ್ತಾನೆ. ಮಗು ಬಾಲ್ಯದಲ್ಲಿ ತಾನು ತಂದೆ-ತಾಯಿಯ ಒಂದು ವಿಸ್ತ್ರೃತ ಭಾಗ. ತನಗೆ ಪ್ರತ್ಯೇಕ ಅಸ್ತಿತ್ವ ಇಲ್ಲ. ತಂದೆತಾಯಿ ಹೇಳಿದಂತೆ ಅವರು ಸೂಚಿಸಿದ ದಾರಿಯಲ್ಲಿ ಸಾಗುವುದೇ ತನ್ನ ಕರ್ತವ್ಯ. ತಾನು ಸ್ವತಂತ್ರವಾಗಿ ಏನೂ ಮಾಡಲೂ ಸಾಧ್ಯವಿಲ್ಲ ಎಂದು ಕೊಳ್ಳುತ್ತದೆ. ಅಪ್ಪ, ಅಮ್ಮನ ನೆರಳಾಗಿ ಬದುಕುತ್ತದೆ. ಹರೆಯಕ್ಕೆ ಕಾಲಿಡುತ್ತಿದ್ದಂತೆ, ತನ್ನದು ಪ್ರತ್ಯೇಕ ಅಸ್ತಿತ್ವ. ತಾನು ತಂದೆ ತಾಯಿಯ ನೆರಳಾಗಬೇಕಾಗಿಲ್ಲ. ತನ್ನದೇ ಆದ ನಿರ್ದಿಷ್ಟ ಮತ್ತು ವಿಶಿಷ್ಟ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ಬೆಳೆಸಿಕೊಳ್ಳಬೇಕು. ತಾನು ‘ಯುನಿಕ್ ಆಗಿರಬೇಕು ಎಂದು ಕೊಳ್ಳುತ್ತಾರೆ. ಆದರೆ ಯಾವ ರೀತಿಯಲ್ಲಿ, ವಿಶಿಷ್ಟ, ಯುನಿಕ್ ಎಂಬುದರ ಬಗ್ಗೆ ಅಸ್ಪಷ್ಟತೆ, ಗೊಂದಲ ಅವರನ್ನು ಕಾಡುವುದು ಸಹಜ. ಇದರ ಬಗ್ಗೆ ತಂದೆ-ತಾಯಿಗಳು/ ಶಿಕ್ಷಕರು ಅವರಿಗೆ ಮಾರ್ಗದರ್ಶನ ಮಾಡಬೇಕು.

ಸ್ವಾಯತ್ತತೆಯೋ, ವಿ/ಎಸ್,ಪರಾವಲಂಬನೆಯೋ?

ತಾನು ಸ್ವತಂತ್ರವಾಗಿ, ತನ್ನದೇ ಆದ ನಿರ್ಧಾರಗಳನ್ನು ಕೈಗೊಳ್ಳಬೇಕೇ, ತನ್ನಿಷ್ಟದಂತೆ ನಡೆಯಬಹುದೇ ಅಥವಾ ತಂದೆತಾಯಿ ಮತ್ತು ಇತರರ ಮೇಲೆ ಅವಲಂಬಿತನಾಗಿ ಅವರು ಹೇಳಿದಂತೆ, ಅವರ ಅಣತಿಯಂತೆ ನಡೆಯಬೇಕೇ ಎಂಬ ಗೊಂದಲ ಹರೆಯದವರನ್ನು ಕಾಡುತ್ತದೆ. ತಾವು ದೊಡ್ಡವರಾಗುತ್ತಿದ್ದೇವೆ. ತಮಗೆ ಸಂಪೂರ್ಣ ಸ್ವಾತಂತ್ರ ಬೇಕು. ಹಿರಿಯರು ಯಾವುದೇ ವಿಷಯದಲ್ಲಿ ಮೂಗು ತೂರಿಸಬಾರದು ಎಂಬುದು ಹಲವು ಹರೆಯದವರ ಅಭಿಪ್ರಾಯ. ನಿಮಗೆ ಅನುಭವ ಸಾಲದು ನಿಮಗೆ ವ್ಯವಹಾರ ಜ್ಞಾನ ಸಾಲದು, ಸ್ವತಂತ್ರ ಕೊಟ್ಟರೆ, ಲಗಾಮಿಲ್ಲದ ಕುದುರೆಗಳಾಗುತ್ತೀರಾ, ಆದ್ದರಿಂದ ನಿಮ್ಮ ಒಳ್ಳೆಯದಕ್ಕೇ ನಾವು ಹೇಳಿದಂತೆ ಕೇಳಿ ಎಂದು ದೊಡ್ಡವರು ಹೇಳಿದಾಗ, ಹರೆಯದವರಿಗೆ ದ್ವಂದ್ವ/ ಗೊಂದಲ ಮೂಡುತ್ತದೆ. ಇದನ್ನು ಹರೆಯದವರು ಮತ್ತು ಹಿರಿಯರು ಕುಳಿತು ಚರ್ಚಿಸಿ, ಸ್ಪಷ್ಟತೆಯನ್ನು ಕಾಣಬೇಕು. ಯಾವ ವಿಷಯದಲ್ಲಿ ಎಷ್ಟು ಸ್ವಾತಂತ್ರ್ಯ, ಎಷ್ಟು ಪರಾವಲಂಬನೆಯನ್ನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರಿಬ್ಬರ ನಡುವೆ ಘರ್ಷಣೆ ಅನಿವಾರ್ಯವಾಗುತ್ತದೆ. ಸಂಬಂಧಗಳು ಹಾಳಾಗುತ್ತವೆ.

ಸರಿ ತಪ್ಪು, ನ್ಯಾಯಾನ್ಯಾಯ, ಧರ್ಮಾಧರ್ಮಗಳ ಗೊಂದಲ:

ಅನೇಕ ವಿಷಯಗಳ ಬಗ್ಗೆ ಸರಿತಪ್ಪು, ನ್ಯಾಯಾನ್ಯಾಯಗಳ ಬಗ್ಗೆ ಗೊಂದಲ, ಜಿಜ್ಞಾಸೆ ಇದ್ದೇ ಇರುತ್ತದೆ. ಸತ್ಯವನ್ನು ಹೇಳಿದರೆ ಶಿಕ್ಷೆ, ಅವಮಾನ. ಸುಳ್ಳು ಹೇಳಿ ಬಚಾವಾಗಬಹುದು. ಮಾನ ಉಳಿಯುತ್ತದೆ. ಸತ್ಯಹೇಳಬೇಕೇ, ಸುಳ್ಳು ಹೇಳಬೇಕೇ? ದೊಡ್ಡ-ದೊಡ್ಡ ಮೋಸ, ವಂಚನೆ ಮಾಡಿ ಸಮಾಜದಲ್ಲಿ ಅನೇಕರು ಹಣ/ಅಂತಸ್ತು, ಅಧಿಕಾರ, ಸ್ಥಾನಮಾನಗಳನ್ನು ಪಡೆದಿದ್ದಾರೆ. ನಾನು ಸ್ವಲ್ಪ ವಂಚನೆ/ ಮೋಸ ಮಾಡಿದರೆ ತಪ್ಪೇನು? ಕಾನೂನನ್ನು ಪಾಲಿಸುವುದು, ಕಷ್ಟ ಶ್ರಮದ ಕೆಲಸ. ಕಾನೂನು ಭಂಗ ಮಾಡಿದರೆ, ಸುಖ-ಸಂತೋಷ, ಕಾನೂನು ಭಂಗಮಾಡಬಾರದೇಕೆ? ಇರುವುದನ್ನು ಹಂಚಿ ತಿಂದರೆ, ಒಳ್ಳೆಯವನೆನ್ನುತ್ತಾರೆ. ಆದರೆ ನನ್ನ ಪಾಲಿಗೆ ಬರುವುದೆಷ್ಟು. ಯಾರಿಗೂ ಹೇಳದೇ ಹಂಚದಿದ್ದರೆ ಎಲ್ಲವೂ ನನಗೆ ಸಿಗುತ್ತದೆ. ಹಂಚುವ ಗೋಜೇಕೆ? ಪ್ರಾಮಾಣಿಕತೆಗೆ ಪ್ರಾಶಸ್ತ್ಯವಿಲ್ಲ. ಅಪ್ರಾಮಾಣಿಕತೆಗೆ ತಕ್ಷಣವೇ ಲಾಭ, ಸುಖ. ಪ್ರಾಮಾಣಿಕವಾಗಿರಬೇಕೇ ಅಥವಾ ಅಪ್ರಾಮಾಣಿಕನಾಗಿ ಸುಖ ಪಡಬಾರದೇಕೇ? ಶಿಸ್ತಿನ ಜೀವನ ಚೆನ್ನ ಎನ್ನುತ್ತಾರೆ. ಆದರೆ ಅದೆಷ್ಟು ಕಷ್ಟ. ಸ್ವಲ್ಪ ಹೊತ್ತು ಫ್ರೀಯಾಗಿ ಇದ್ದರೇನಂತೆ, ಹೀಗೆ ಹಲವು ಹನ್ನೊಂದು ವಿಷಯ/ಸನ್ನಿವೇಶಗಳಲ್ಲಿ ನೈತಿಕತೆ ಬಗ್ಗೆ, — ಮಾರ್ಗದ ಬಗ್ಗೆ, ಒಳ್ಳೆಯದಾವುದು ಮತ್ತು ಕೆಟ್ಟದಾವುದು ಎಂಬುದರ ಬಗ್ಗೆ ಗೊಂದಲ, ಜಿಜ್ಞಾಸೆ ಬಂದಾಗ ಹರೆಯದವರು ತಮ್ಮ ತಂದೆ-ತಾಯಿ, ಶಿಕ್ಷಕರೊಂದಿಗೆ ಚರ್ಚಿಸಬೇಕು.

ಉದಾಹರಣೆಗೆ

  • ಸ್ವಾರ್ಥಕ್ಕೆ ಸುಳ್ಳು ಹೇಳಬಾರದು ಆದರೆ ಪರಹಿತಕ್ಕಾಗಿ ಸಮಾಜದ ಹಿತಕ್ಕಾಗಿ ಅಥವಾ ಇನ್ನೊಬ್ಬರಿಗೆ ತೊಂದರೆ/ಹಾನಿಯನ್ನು ತಪ್ಪಿಸಲು ಸುಳ್ಳು ಹೇಳಬಹುದೇ? ಹತ್ತಾರು ಜನರಿಗೆ ಒಳ್ಳೆಯದಾಗುವಂತಿದ್ದರೆ, ಒಬ್ಬರಿಗೆ ಹಾನಿಯಾಗುವಂತಿದ್ದರೆ, ಅದನ್ನು ತಪ್ಪಿಸಲು ಪ್ರಯತ್ನಿಸಬೇಕೇ, ಪ್ರಯತ್ನಿಸಬಾರದೇ.
  • ಸತ್ಯವನ್ನು ಹೇಳಿದರೆ ನೋವು ನಷ್ಟ. ಅವಮಾನ. ಆಗ ಸತ್ಯವನ್ನು ಹೇಳದೇ ಮುಚ್ಚಿಟ್ಟರೆ ತಪ್ಪೇನು?
  • ಇತರರ ಅನುಮತಿ ಇಲ್ಲದೆ, ಅವರ ವಸ್ತುವನ್ನು ತೆಗೆಯಬಾರದು. ಉಪಯೋಗಿಸಬಾರದು, ಸಾರ್ವಜನಿಕ ಉಪಯೋಗಕ್ಕಾಗಿ ಅವರನ್ನು ಕೇಳದೆಯೇ ಅವರ ವಸ್ತುವನ್ನು ಉಪಯೋಗಿಸುವುದು ತಪ್ಪೇ.
  • ಅಪರಾಧ ಮಾಡುವವರನ್ನು ಕಂಡಾಗ, ಪ್ರತಿಭಟಿಸಬೇಕು, ಅಪರಾಧ ಮಾಡದಂತೆ ಅವರನ್ನು ತಡೆಯಬೇಕು. ಆದರೆ ಭಯದಿಂದಲೋ, ಅಸಹಾಯಕತೆಯಿಂದಲೋ ಅದನ್ನು ಮಾಡದಿದ್ದಾಗ, ನಾವು ತಪ್ಪು ಮಾಡಿದಂತೆ ಆಗುತ್ತದೆಯೇ?
  • ತಿಳಿಯದೇ ತಪ್ಪು ಮಾಡುವುದು ತಪ್ಪೇ? ಅಜ್ಞಾನದಿಂದ, ಮೂಢನಂಬಿಕೆಯಿಂದ ಮಾಡಿದ ಕೆಲಸ/ಚಟುವಟಿಕೆ ತಪ್ಪು ನಿರ್ಧಾರ ಎಂದು ಗೊತ್ತದಾಗ ಏನು ಮಾಡಬೇಕು?
  • ಆಕಸ್ಮಿಕವಾಗಿ, ಪರಿಸ್ಥಿತಿಯ ಒತ್ತಡದಿಂದ, ಭಾವೋದ್ವೇಗಗಳಿಂದ ತಪ್ಪು ಮಾಡಿದಾಗ ಏನು ಮಾಡಬೇಕು?
  • ಪಶ್ಚಾತ್ತಾಪದಿಂದ ಮಾಡಿದ ತಪ್ಪಿನ ಜವಾಬ್ದಾರಿಯಿಂದ ಮುಕ್ತರಾಗಲು ಸಾಧ್ಯವೇ? ಇತ್ಯಾದಿ.

ಪಾತ್ರಗಳ ಹಕ್ಕು ಬಾದ್ಯತೆಗಳು, ಪಾತ್ರ ನಿರ್ವಹಣೆ ಬಗ್ಗೆ ಗೊಂದಲ

ಹಿರಿಯಮಗ/ ಮಗಳು, ಕಿರಿಯ ಮಗ/ಮಗಳು, ಸೋದರ, ಸೋದರಿ, ಸ್ನೇಹಿತ/ಬಂದು ಹೀಗೆ ಹರೆಯದ ವ್ಯಕ್ತಿ ವಿವಿಧ ಪಾತ್ರಗಳನ್ನು ಒಟ್ಟಿಗೆ ನಿರ್ವಹಿಸಬೇಕು. ಆಯಾ ಪಾತ್ರಕ್ಕೆ ಉಚಿತವಾದ, ಮರ‍್ಯಾದೆ, ಘನತೆ ತರುವ ರೀತಿಯಲ್ಲಿ ವರ್ತಿಸಬೇಕು. ಉದಾ: ಹಿರಿಯ ಮಗನಾಗಿ, ಹೆಚ್ಚು ಜವಾಬ್ದಾರಿಯನ್ನು ಹೊರಬೇಕು. ಓದನ್ನು ನಿಲ್ಲಿಸಿ, ಸಂಪಾದನೆ ಮಾಡಬೇಕು. ಹಿರಿಯ ಮಗಳಾಗಿ ಸಂಸಾರದ ಹೊರೆಯನ್ನು ಹೊರಬೇಕು. ತ್ಯಾಗ ಮಾಡಬೇಕು. ಹೀಗೆ ಮಾಡಿ, ಸುಮ್ಮನೆ ಸುಖವನ್ನು, ಅನುಕೂಲವನ್ನು ಏಕೆ ಕಳೆದುಕೊಳ್ಳಬೇಕು.

ಯಾವ/ಯಾರ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಗೊಂದಲ

ಅಪ್ಪ, ಅಣ್ಣ ದೊಡ್ಡಪ್ಪ, ಮಾವ, ನನ್ನ ನೆಚ್ಚಿನ ನಟ, ಹೀರೋ, ಕ್ರೀಡಾಪಟು ಅಥವಾ ಸಮಾಜದ ಗಣ್ಯವ್ಯಕ್ತಿ ಯಾರನ್ನು ನಾನು ಅನುಸರಿಸಬೇಕು. ಯಾರ ಗುಣಲಕ್ಷಣಗಳನ್ನು ನಾನು ಅನುಸರಿಸಬೇಕು. ಇದು ಉಡುಗೆ-ತೊಡುಗೆ ವಿಚಾರವಾಗಬಹುದು. ಹಾವಭಾವ, ಮಾತುಗಾರಿಕೆಯಾಗಬಹುದು. ಹವ್ಯಾಸ, ವೃತ್ತಿ, ಸೃಜನಶೀಲ ಚಟುವಟಿಕೆಗಳಾಗಬಹುದು, ಗುರಿ, ಉದ್ದೇಶಗಳಾಗಬಹುದು.

ವಾಸ್ತವವೋ ಕಲ್ಪನೆಯೋ: ವಾಸ್ತವತೆ ಕಷ್ಟಕರವಾಗಿರುತ್ತದೆ. ದಿಕ್ಕು ಕೆಡಿಸುವಂತದ್ದಾಗಿರುತ್ತದೆ. ನಿರಾಶೆಯನ್ನುಂಟುಮಾಡುವಂತದ್ದಾಗಿರುತ್ತದೆ. ಅಸಹಾಯಕತೆಯನ್ನು ಪ್ರೇರಣೆ ಮಾಡುವಂತಿರುತ್ತದೆ. ಆದರೆ ಕಲ್ಪನೆ ಯಾವಾಗಲೂ ರಮ್ಯ, ಆಕರ್ಶಕ, ಕಟು ವಾಸ್ತವದಿಂದ ನಮ್ಮನ್ನು ದೂರ ಕರೆದೊಯ್ಯಬಲ್ಲದು. ನೋವು, ದುಃಖ ನಿರಾಶೆಯನ್ನು ಮರೆಸಬಲ್ಲದು. ಹೀಗಾಗಿ ಅನೇಕ ಹರೆಯದವರು ವಾಸ್ತವ ಜಗತ್ತಿಗಿಂತ, ತಮ್ಮದೇ ಆದ ಕಲ್ಪನಾಲೋಕದಲ್ಲೇ ಇರಲು ಇಷ್ಟಪಡುತ್ತಾರೆ. ಎಷ್ಟು ವಾಸ್ತವ, ಎಷ್ಟು ಕಲ್ಪನೆ ಎಂಬುದರ ಬಗ್ಗೆ ಗೊಂದಲವನ್ನು ಬೆಳೆಸಿಕೊಳ್ಳುತ್ತಾರೆ.

ಆಸೆಗಳು/ನಿರೀಕ್ಷೆಗಳು

ನನ್ನ ಎಲ್ಲ ಸ್ನೇಹಿತೆಯರ ಬಳಿ ‘ಮೊಬೈಲ್ ಇದೆ ನನ್ನಲ್ಲಿ ಇಲ್ಲ, ನನಗೂ ತೆಗೆದುಕೊಳ್ಳಬೇಕೆಂಬ ಆಸೆ. ಆದರೆ ಅಪ್ಪ-ಅಮ್ಮ ಈಗ ಬೇಡ. ಈ ವಯಸ್ಸಿಗೆ ಮೊಬೈಲ್ ಬೇಕಿಲ್ಲ ಎನ್ನುತ್ತಾರೆ. ಹಾಗಾದರೆ ನನ್ನ ಸ್ನೇಹಿತೆಯರ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ತೆಗೆದುಕೊಟ್ಟಿದ್ದಾರಲ್ಲ. ಯಾರು ಸರಿ?

“ನನಗೆ ಫಾಸ್ಟ್ ಬೈಕ್ ಎಂದರೆ ಬಹಳ ಇಷ್ಟ. ರಸ್ತೆಯಲ್ಲಿ ೯೦ ಅಥವಾ ೧೦೦ ಕಿಲೋಮೀಟರ್ ವೇಗದಲ್ಲಿ ಹೋಗುವುದು ಎಂತಹ ರೋಮಾಂಚನ. ಆದರೆ ಆಕ್ಸಿಡೆಂಟ್ ಆದರೆನ್ನುವ ಭಯ ಏನು ಮಾಡಲಿ.

‘ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇರುವುದಿಲ್ಲ, ಅಮ್ಮ ನಾನು

ಹೋದ ಒಂದು ಗಂಟೆಯ ಮೇಲೆ ಬರುತ್ತಾಳೆ. ಅಪ್ಪ ಬರುವುದು ರಾತ್ರಿ ೧೦ ಗಂಟೆಗೆ, ಅಪ್ಪ, ಅಮ್ಮ, ನಾನು ಮತ್ತು ನನ್ನ ತಮ್ಮ ಎಲ್ಲರೂ ಸಮೀಪದ ಪಾರ್ಕ್‌ಗೆ ಹೋಗಿ, ಆಡಬೇಕು ಒಟ್ಟಿಗೆ ಕುಳಿತು ಹರಟೆ ಹೊಡೆಯಬೇಕು ಅಂತ ಆಸೆ ಸರ್. ಈ ಕನಸು ನನಸಾಗಿಲ್ಲ. ಈ ಆಸೆ ತಪ್ಪೇ?

‘ಅಪ್ಪನ ಮುಂದೆ ನನ್ನ ಬೇಡಿಕೆ ಮುಂದಿಟ್ಟಾಗ, ಅಮ್ಮ ಮತ್ತು ತಾತ ನನಗೆ ಸಪೋರ್ಟ್ ಮಾಡುತ್ತಾರೆ. ಟೂರ್‌ಗೆ ಹೋಗಲು ಅನುಮತಿ ಕೊಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ ಸರ್. ಆದರೆ ಅಮ್ಮ, ತಾತ ಬಾಯಿ ಬಿಡಲಿಲ್ಲ. ಅಪ್ಪ ಬೇಡ, ಅಷ್ಟು ದಿನ ಕಳುಹಿಸಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಬಹಳ ಬೇಸರವಾಯಿತು.

‘ಟೀಚರ್ ನನ್ನ ಮೇಲೆ ತಪ್ಪು ಮಾಡಿದ ಸುಳ್ಳು ಆರೋಪ ಹೊರಿಸಿದಾಗ ನನ್ನ ಸ್ನೇಹಿತರು ನನ್ನ ಸಹಾಯಕ್ಕೆ ಬಂದೇ ಬರುತ್ತಾರೆ. ಆ ತಪ್ಪನ್ನು ನಾನು ಮಾಡಿಲ್ಲ ಎಂದು ಹೇಳುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಆದರೆ ಒಬ್ಬನೂ ಬಾಯಿ ಬಿಡಲಿಲ್ಲ. ಶುದ್ಧ ಮೋಸಗಾರರು ಹೇಡಿಗಳು, ಸ್ನೇಹಿತರಿಂದ ಇಷ್ಟನ್ನು ನಿರೀಕ್ಷೆ ಮಾಡಿದ್ದು ತಪ್ಪೇ?

ಹೀಗೆ ಯಾವುದೇ ಗೊಂದಲ, ದ್ವಂದ್ವ ಬಂದಾಗ, ಮನಸ್ಸು ಗಲಿಬಿಲಿಗೊಳ್ಳುತ್ತದೆ. ಹಿಂಸೆ ಪಡುತ್ತದೆ. ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಇದು ತಪ್ಪಬೇಕು. ಗೊಂದಲ ದ್ವಂದ್ವ ಬಂದಾಗ

೧. ಶಾಂತಚಿತ್ತರಾಗಿ ಕುಳಿತು ಯೋಚಿಸಬೇಕು.

೨. ಲಾಭ, ನಷ್ಟ, ಸರಿತಪ್ಪುಗಳು, ಪರಿಣಾಮಗಳು, ಪರಿಹಾರಗಳ ಕುರಿತು ಚಿಂತನೆ ಮಾಡಬೇಕು.

೩. ಅನುಭವಸ್ಥರನ್ನು ಕಂಡು ಚರ್ಚಿಸಬೇಕು.

೪. ಸಂಬಂಧಪಟ್ಟ ಸಾಹಿತ್ಯವನ್ನು ಹುಡುಕಿ ಓದಬೇಕು, ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು, ಸ್ಪಷ್ಟ ಆಲೋಚನೆ, ನಿರ್ಧಾರವನ್ನು ಕೈಗೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಇರಬೇಕು.

೫. ಆಪ್ತರಾಗಿ ಸಲಹೆ ನೀಡುವವರನ್ನು ಕಂಡು ಸಲಹೆ ಪಡೆಯಬೇಕು.