ಸತ್ಯವನ್ನೂ ಪರಾಕ್ರಮವನ್ನೂ ತಾವು ಪ್ರದರ್ಶಿಸಬಹುದು. ಆದರೆ ಪೂರ್ಣವಾದ ಭುಜಶಕ್ತಿಯನ್ನು ಪಡೆದಿದ್ದೂ ಅದನ್ನು ತಪ್ಪುವುದೆಂದರೇನು? ತನಗೆ ಸಾಧ್ಯವಾದಷ್ಟು ಸತ್ಯಪ್ರತಿಜ್ಞೆಮಾಡಿ, ವಿಶೇಷ ಶೌರ್ಯಶಾಲಿಯಾದವನನ್ನೆ ಗುರಿಯಿಟ್ಟು ಕಾದಿ ಪ್ರಸಿದ್ಧಿಪಡೆದವನೇ ಸತ್ಯ ಮತ್ತು ಪರಾಕ್ರಮದ ಆವಾಸಸ್ಥಾನನಾಗುವನು. ೧೯೮. ಪಾಂಡವರು ನನ್ನನ್ನು ಇನ್ನೂ (ಯಾರೆಂದು) ತಿಳಿಯರು. ನೀವು ತಿಳಿಸಬೇಡಿ ಎಂದು ನಾನು ಕೃಷ್ಣನನ್ನು ಪ್ರಾರ್ಥಿಸಿದ್ದೆ. ಕುಂತಿಯೂ ನನ್ನ ಮಕ್ಕಳಲ್ಲಿ ಕರ್ಣನು ಸತ್ಯವನ್ನು ಸ್ಥಾಪಿಸುವುದಕ್ಕೆ ಪೂರ್ಣವಾಗಿ ಸಮರ್ಥನೆಂದು ಮನಸ್ಸಿನಲ್ಲಿ ನಂಬಿದ್ದಾಳೆ. ಇಂತಹ ವೈಭವವು ನನ್ನಲ್ಲಿ ಎರಕ ಹೊಯ್ದಿರಲು ನನ್ನ ಭಾಷೆಯನ್ನೂ ನಾನು ಅಂಗೀಕರಿಸಿರುವ ನನ್ನ ತೀವ್ರವಾದ ಶೌರ್ಯವನ್ನೂ ರಕ್ಷಿಸುತ್ತೇನೆ. ೧೯೯. ಎಂಬುದಾಗಿಯೇ ಯೋಚಿಸಿ ಬೇರೆ ಯಾವ ರೀತಿಯನ್ನೂ ಯಾವ ರೀತಿಯಲ್ಲಿಯೂ ಯೋಚಿಸದೆ ಶಲ್ಯನಿಗೆ ಹೇಳಿದನು. ‘ಕರ್ಣನು ಮೊದಲು ಪ್ರಯೋಗಿಸಿದ ಬಾಣವನ್ನು ಭಯದಿಂದ ಹಿಂದಕ್ಕೆ ಸೆಳೆದು ಕುಗ್ಗಿಸಿದನು’ ಎಂದು ಮುಂದೆ ಲೋಕವು ನಗುವುದಿಲ್ಲವೇ? ೨೦೦. ಎನ್ನುತ್ತ ಕುಗ್ಗಿಸು, ಕುಗ್ಗಿಸು, ಕುಗ್ಗಿಸು ಎಂದು ಹೊಡೆಯಲು ಬರಸಿಡಿಲೆರಗುವಂತೆ ಎರಗುವ ಬಾಣದ ಬರುವಿಕೆಯನ್ನು ಕಂಡು ಆಗಲೆ ಕೃಷ್ಣನು ಅರ್ಜುನನ ತೇರನ್ನು ಭೂಮಿಯಲ್ಲಿ ಎಂಟುಬೆರಳು ಆಳಕ್ಕೆ ಅಡಗುವ ಹಾಗೆ ಕೌಶಲದಿಂದ ಒತ್ತಿದನು. ೨೦೧. ಒತ್ತಟ್ಟಾಗಿ ಬಾಣವು ಸುಮ್ಮನಿರದೆ ಬರುತ್ತ ಅರ್ಜುನನ ಕಿರೀಟವನ್ನು ಕತ್ತರಿಸಲು ಆಗ ಇಂದ್ರನನ್ನು ಭಯವಾವರಿಸಿತು. ಆ ಸಂಕಟದಲ್ಲಿ ದುಖವು ಈಶ್ವರನನ್ನು ಆವರಿಸಿಕೊಂಡಿತು. ೨೦೨. ಇದರ ರಹಸ್ಯವನ್ನರಿಯದೆ ಕೌರವಸೇನಾಸಮುದ್ರವು ಆರ್ಭಟಮಾಡಿ (ಸಂತೋಷದಿಂದ) ಉತ್ತರೀಯವನ್ನು ಬೀಸಲು ಚಿಮ್ಮಿದ ಕಿರೀಟದ ರತ್ನಗಳ ಹೊಳಪಿನಿಂದ ಎಂಟುದಿಕ್ಕುಗಳಲ್ಲಿಯೂ ಉಲ್ಖಾಪಾತಗಳು ಎದ್ದುವು. ವ|| ಹಾಗೆ ವಿಸ್ತಾರವೂ ರತ್ನಮಯವೂ ಆದ ನೀಲಪರ್ವತದ ಶಿಖರಗಳ ತುದಿಯ ಭಾಗವು ಬಲವಾದ ವಜ್ರಾಯುಧದ ಪೆಟ್ಟಿನಿಂದ ಉರುಳುವ ಹಾಗೆ ರತ್ನಕಿರೀಟವು ಶತ್ರುವಿನ ಹರಿತವಾದ ಬಾಣದಿಂದ ಉರುಳಲು ದುಂಬಿಗಳ ಕಪ್ಪುಬಣ್ಣದಂತೆ ಪ್ರಕಾಶಮಾನವಾಗಿರುವ ಕೂದಲುಗಳು ಕೆದರಿ ಬಂದು ಹೆಗಲಿನ ಹೊರಭಾಗವನ್ನು ಮುಟ್ಟಲು

ಚಂ|| ಪುರಿಗಣೆಯಪ್ಪ ಕಾರಣದಿನಂತದು ತಪ್ಪಿದೆನೆಂದು ನೊಂದು ಪ
ಲ್ಮೊರೆದಹಿ ರೂಪದಿಂ ಮಗುೞ್ದು ಬಂದಿನನಂದನನಲ್ಲಿಗೆನ್ನನಂ|
ತರಿಸದೆ ತೊಟ್ಟು ಬೇಗಮಿಸು ವೈರಿಯನೀಗಳೆ ಕೊಂದಪೆಂ ರಸಾಂ
ಬರ ಧರಣೀವಿಭಾಗದೊಳಗಾವೆಡೆವೊಕ್ಕೊಡಮಂಗನಾಯಕಾ|| ೨೦೩

ವ|| ಎಂಬುದುಂ ನೀನಾರ್ಗೇನೆಂಬೆಯದಾವುದು ಕಾರಣದಿಂದಮೆನ್ನ ದೊಣೆಯಂ ಪೊಕ್ಕಿರ್ದೆಯೆಂದೊಡಾನಶ್ವಸೇನನೆಂಬ ಪನ್ನಗನೆನೆಂದು ತನ್ನ ವೈರ ಕಾರಣನಱಯೆ ಪೇೞ್ದೊ ಡೆದರಹಸಿತವದನಾರವಿಂದನಾಗಿ-

ಕಂ|| ಶರರೂಪದೊಳಿರೆ ನಿನ್ನಂ
ಶರಮೆಂದಾಂ ತೊಟ್ಟೆನಱದು ತುಡುವೆನೆ ನಿನ್ನಂ|
ನೆರದೊಳ್ ಕೊಲ್ವಂತೆನಗೇ
ನರಿಯನೆ ಗಾಂಡೀವಧನ್ವನೆಂಬುದುಮಾಗಳ್|| ೨೦೪

ನೀಂ ನಿನ್ನ ಪಗೆಯನಾರ್ಪೊಡ
ದಂ ನೆಱಪೆನೆ ನೆಗೆದು ಬರ್ಪ ವಿಪಪನ್ನಗನಂ|
ಪನ್ನತನೆಡೆಯೊಳರಿಗಂ
ತನ್ನಯ ಗರುಡಾಸ್ತ್ರದಿಂದೆ ಕುಱದಱದಱದಂ|| ೨೦೫

ವ|| ಆಗಳಂಗರಾಜಂಗೆ ಶಲ್ಯಂ ಕಿನಿಸಿ ಮುಳಿಸಿನೊಳೆ ಕಣ್ಗಾಣದಿಂತಪ್ಪೇಕಗ್ರಾಹಿಗ ಮೊರಂಟಂಗಂ ರಥಮನೆಸಗೆನೆಂದು ವರೂಥದಿಂದಿೞದು ಪೋಗೆ-

ಚಂ|| ಅರಿಗನ ಬಟ್ಟಿನಂಬುಗಳ ಬಲ್ಸರಿ ಸೋಂಕುಗುಮೇೞಮೆನ್ನ ತೋ
ಳ್ನೆರಮೆನಗೆನ್ನ ಬಿಲ್ಲೆ ನೆರಮೆಂದು ವರೂಥತುರಂಗಮಂಗಳಂ||
ತುರಿಪದೆ ತಾನೆ ಚೋದಿಸುತುಮಾರ್ದಿಸುತುಂ ಕಡಿಕೆಯ್ದು ಕಾದೆ ಭೀ
ಕರ ರಥಚಕ್ರಮಂ ಪಿಡಿದು ನುಂಗಿದಳೊರ್ಮೆಯೆ ಧಾತ್ರಿ ಕೋಪದಿಂ|| ೨೦೬

ವ|| ಅಂತು ತನ್ನಂ ಮುನ್ನೆ ಮುಯ್ಯೇೞ್ ಸೂೞ್ವರಮೊಲ್ಲಣಿಗೆಯಂ ಪಿೞವಂತೆ ಪಿಂಡಿ ಪಿೞದ ಪಗೆಗೆ ರಥಚಕ್ರಮಂ ನುಂಗುವುದುಂ ರಥದಿಂದಿೞದು ಗಾಲಿಯನೆತ್ತುವಾಗಳಿವನನೀ ಪದದೊಳ್ ಕಡಿದೊಟ್ಟದಾಗಳ್ ಗೆಲಲಾಯೆಂದು ನುಡಿದ ಮುಕುಂದನ ನುಡಿಗೆ ಕೊಕ್ಕರಿಸಿ ಜಗದೇಕಮಲ್ಲನಿಂತೆಂದಂ-

ಅದನ್ನು ಎರಡು ಭಾಗವಾಗಿ ಗಂಟಿಕ್ಕಿ ಅರ್ಜುನನು ಸಿದ್ಧವಾಗುವಷ್ಟರಲ್ಲಿ ೨೦೩. ದಿವ್ಯಾಸ್ತ್ರವಾದ (ಪುರಿಗಣೆಯಾದ) ಕಾರಣದಿಂದ ಹಾಗೆ ತಪ್ಪುಮಾಡಿದೆನೆಂದು ವ್ಯಥೆಪಟ್ಟು ಹಲ್ಲುಕಡಿದು ಶಬ್ದಮಾಡಿ ಹಾವಿನ ರೂಪದಿಂದ ಪುನ ಕರ್ಣನ ಹತ್ತಿರಕ್ಕೆ ಬಂದು ‘ಕರ್ಣಾ, ನನ್ನನ್ನು ಸಾವಕಾಶಮಾಡದೆ ಬಿಲ್ಲಿನಲ್ಲಿ ತೊಡಿಸಿ ಬೇಗ ಹೂಡು; ಸ್ವರ್ಗಮರ್ತ್ಯಪಾತಾಳವಿಭಾಗದಲ್ಲಿ ಯಾವಸ್ಥಳದಲ್ಲಿ ಪ್ರವೇಶಮಾಡಿದ್ದರೂ ಶತ್ರುವನ್ನು ಈಗಲೇ ಕೊಲ್ಲುತ್ತೇನೆ’ ಎಂದಿತು. ವ|| ‘ನೀನು ಯಾರು? ನಿನ್ನ ಹೆಸರೇನು’ ಯಾವ ಕಾರಣದಿಂದ ನನ್ನ ಬತ್ತಳಿಕೆಯನ್ನು ಪ್ರವೇಶಿಸಿದ್ದೆ’ ಎನ್ನಲು ‘ನಾವು ಅಶ್ವಸೇನನೆಂಬ ಹಾವು’ ಎಂದು ತಿಳಿಸಿ ತನ್ನ ವೈರಕಾರಣವನ್ನು ಸ್ಪಷ್ಟವಾಗಿ ತಿಳಿಸಲು ಮುಗುಳುನಗೆಯಿಂದ ಕೂಡಿದ ಮುಖವುಳ್ಳವನಾಗಿ ೨೦೪. ‘ಬಾಣಾಕಾರದಿಂದಿರಲು ನಿನ್ನನ್ನು ಬಾಣವೆಂದು ಬಿಲ್ಲಿಗೆ ತೊಡಿಸಿದೆ. (ನೀನು ಯಾರೆಂದು) ತಿಳಿದೂ ನಿನ್ನ ಸಹಾಯದಿಂದ ಕೊಲ್ಲುವಷ್ಟು ಅರ್ಜುನನು ನನಗೆ ಅಸಾಧ್ಯನೆ?’ ಎಂದನು- ೨೦೫. ಸರ್ಪವು ‘ಹಾಗಾದರೆ ಶತ್ರುತ್ವವನ್ನು ಸಮರ್ಥನಾದರೆ ನೀನು ಪೂರ್ಣಮಾಡು’ ಎಂದು ಹೇಳಿ ಅರ್ಜುನನ ಕಡೆಗೆ ಹಾರಿ ಬರುತ್ತಿದ್ದ ವಿಷಸರ್ಪವನ್ನೂ ಶೂರನಾದ ಅರಿಗನು ಮಧ್ಯಮಾರ್ಗದಲ್ಲಿಯೇ ಗರುಡಬಾಣದಿಂದ ಕುರಿಯನ್ನು ಕತ್ತರಿಸುವಂತೆ ಕತ್ತರಿಸಿದನು. ವ|| ಆಗ ಕರ್ಣನಿಗೆ ಶಲ್ಯನು ಕೋಪಿಸಿಕೊಂಡು ಕೋಪದಿಂದ ಕಣ್ಗಾಣದೆ, ಇಂತಹ ಹಟಮಾರಿಗೂ ಒರಟನಿಗೂ ನಾನು ತೇರನ್ನು ನಡೆಸುವುದಿಲ್ಲವೆಂದು ತೇರಿನಿಂದ ಇಳಿದು ಹೋದನು. ೨೦೬. ‘ಅರ್ಜುನನ ದುಂಡಾದ ಬಾಣಗಳ ದೊಡ್ಡ ಮಳೆಯು ತಗುಲುತ್ತಿದೆ ಏಳಿ, ನನ್ನ ತೋಳುಗಳು ನನಗೆ ಸಹಾಯ, ನನ್ನ ಬಿಲ್ಲೇ ಸಹಾಯ’ ಎಂದು ರಥದ ಕುದುರೆಗಳನ್ನು ವೇಗವಾಗಿ ತಾನೇ ನಡೆಸುತ್ತ ಆರ್ಭಟಮಾಡಿ ಬಹಳವೇಗದಿಂದ ಯುದ್ಧಮಾಡಲು ಭಯಂಕರವಾದ ತೇರಿನ ಚಕ್ರವನ್ನು ಭೂಮಿಯು ಹಿಡಿದು ಇದಕ್ಕಿದ್ದ ಹಾಗೆ ನುಂಗಿದಳು (ಕರ್ಣನ ತೇರಿನ ಗಾಲಿಗಳು ಇದಕ್ಕಿದ್ದ ಹಾಗೆ ಭೂಮಿಯಲ್ಲಿ ಹೂತುಹೋದುವು) ವ|| ಹಾಗೆ ತನ್ನನ್ನು ಮೊದಲು ಇಪ್ಪತ್ತೊಂದು ಸಲ ಒದ್ದೆಯ ಬಟ್ಟೆಯನ್ನು ಹಿಂಡುವಂತೆ ಹಿಂಡಿದ ದ್ವೇಷಕ್ಕೆ ರಥಚಕ್ರವನ್ನು ಭೂಮಿಯು ನುಂಗಲು ರಥದಿಂದಿಳಿದು ಕರ್ಣನು ಗಾಲಿಯನ್ನು ಎತ್ತುತ್ತಿದ್ದನು. ಇವನನ್ನು ಈ ಸ್ಥಿತಿಯಲ್ಲಿ

ಮ|| ಬಱುವಂ ಸಾರಥಿಯಿಲ್ಲ ಮೆಯ್ಗೆ ಮಯುಂ ತಾನಿಲ್ಲದೆಂತೀಗಳಾ
ನಿಱವೆಂ ನೋಡಿರೆ ಮತ್ತಮೊಂದನಿಸಲುಂ ಕೆಯ್ಯೇೞದೇಕೆಂದುಮಾ|
ನಱಯೆಂ ಕೂರ್ಮೆಯೆ ಮಿಕ್ಕು ಬಂದಪುದಿದರ್ಕೇಗೆಯ್ವೆನೇನೆಂಬೆನಾಂ|
ಮದೆಂ ಮುನ್ನಿನದೊಂದು ವೈರಮನಿದಿಂತೇಕಾರಣಂ ಭೂಧರಾ|| ೨೦೭

ವ|| ಎಂಬುದುಮೆನಿತಱಯದಿರ್ದೊಡಂ ಸೋದರಿಕೆಯೆ ಮಿಕ್ಕು ಬರ್ಕುಮಾಗದೆಯೆಂದು ತನ್ನಂತರ್ಗತದೊಳ್ ಬಗೆದಸುರಾಂತಕನಿಂತೆಂದಂ-

ಚಂ|| ನೆಗೞ್ದಭಿಮನ್ಯುವಂ ಚಲದಿನಂದಿಱದಿಂದು ನಿಜಾಗ್ರಜಾತನಂ
ಸುಗಿವಿನಮೆಚ್ಚು ಬೀರದೊಳೆ ಬೀಗುವ ಸೂತಸುತಂಗೆ ನೀನುಮಾ||
ಜಿಗೆ ಸೆಡೆದಿರ್ದೆಯಪ್ಪೊಡಿರು ಚಕ್ರನಿಘಾತದಿನಿಕ್ಕಿ ಬೀರಮು
ರ್ವಿಗೆ ಪಡಿಚಂದಮಾಗೆ ತಱದೊಟ್ಟಿ ಜಯಾಂಗನೆಗಾಣ್ಮನಾದಪೆಂ|| ೨೦೮

ವ|| ಎಂಬನ್ನೆಗಂ ಧರಾತಳಮಳ ರಥದ ಗಾಲಿಯಂ ಕಿೞ್ತು ಮತ್ತಂ ರಥಮನಪ್ರತಿರಥ ನೇಱ ನಿಟ್ಟಾಲಿಯಾಗೆ ಮುಟ್ಟೆವಂದು ಕಿಡಿಗುಟ್ಟೆ ಮರ್ಮೋದ್ಘಾಟನಂಗೆಯ್ದು ಕಾದುವಾಗಳ್ ಕಪಿಧ್ವಜಂ ವನದಂತಿಯಂತೆ ಧ್ವಾಂಕ್ಷದ್ವಜಮನುಡಿದು ಕೆಡೆವಿನಮೆಚ್ಚಾಗಳ್-

ಕಂ|| ಪೞಯಿಗೆ ಬಿೞ್ದೊಡೆ ಬೀರದ
ಪೞವಿಗೆಯಂ ನಿೞಸಲೆಂದೆ ಹರಿ ವಕ್ಷಮನ
ಲ್ಲೞವೋಗೆಯೆಚ್ಚು ಮುಳಿಸವ
ಗೞಯಿಸುತಿರೆ ನರನ ಬಿಲ್ಲ ಗೊಣೆಯುಮನೆಚ್ಚಂ|| ೨೦೯

ಬೆಳಗುವ ಸೊಡರ್ಗಳ ಬೆಳಗ
ಗ್ಗಳಿಸುವವೋಲ್ ಪೋಪ ಪೊೞ್ತಳ್ ತೇಜಂ ಪ|
ಜ್ಜಳಿಸೆ ತೞತೞಸೆ ತೊಳ ತೊಳ
ತೊಳಗಿದನಸ್ತಮಯ ಸಮಯದೊಳ್ ದಿನಪಸುತಂ|| ೨೧೦

ವ|| ಅಂತು ವಿಕರ್ಣಹತಿಯಿಂದಮಸುರಾಂತಕಂ ಕೞಯೆ ನೊಂದು-

(ಸನ್ನಿವೇಶದಲ್ಲಿ) ಕತ್ತರಿಸಿ ರಾಶಿಮಾಡದಿದ್ದರೆ ಗೆಲ್ಲಲಾರೆ ಎಂದು ಹೇಳಿದ ಕೃಷ್ಣನ ಮಾತಿಗೆ ಅಸಹ್ಯಪಟ್ಟು ಅರ್ಜುನನು ಹೀಗೆ ಹೇಳಿದನು- ೨೦೭. ಬರಿದಾದವನು (ನಿಸ್ಸಹಾಯಕನು), ಸಾರಥಿಯೂ ಇಲ್ಲ; ಶರೀರಕ್ಕೆ ಮರೆಯಾದ ಕವಚವೂ ಇಲ್ಲ; ಅದು ಹೇಗೆ ಈಗ ನಾನು ಹೊಡೆಯಲಿ; ಪುನ ಒಂದು ಬಾಣವನ್ನು ಹೊಡೆಯುವುದಕ್ಕೂ ಕೈಗಳು ಏಳುವುದಿಲ್ಲ. ಏತಕ್ಕೆಂದು ನಾನು ತಿಳಿಯಲಾರೆ; ಪ್ರೀತಿಯೆ ಮೀರಿ ಬರುತ್ತಿದೆ. ಇದಕ್ಕೆ ಏನು ಮಾಡಲಿ, ಏನೆಂದು ಹೇಳಲಿ; ನಾನು ಹಿಂದಿನ ದ್ವೇಷವನ್ನು ಮರೆತೆನು; ಕೃಷ್ಣಾ ಇದಕ್ಕೇನು ಕಾರಣ? ವ|| ಎನ್ನಲು ವಾಸ್ತವಾಂಶವು ತಿಳಿಯದಿದ್ದರೂ ಭ್ರಾತೃಭಾವವೇ ಮೀರಿ ಬರುತ್ತದೆಯಲ್ಲವೇ ಎಂದು ತನ್ನ ಮನಸ್ಸಿನಲ್ಲಿ ತಿಳಿದು ಕೃಷ್ಣನು ಹೀಗೆ ಹೇಳಿದನು- ೨೦೮. ಅಂದು ಪ್ರಸಿದ್ಧನಾದ ಅಭಿಮನ್ನುವನ್ನು ಹಟದಿಂದ ಕತ್ತರಿಸಿ ಇಂದು ನಿಮ್ಮಣ್ಣನಾದ ಧರ್ಮರಾಯನನು  ಹೆದರುವಂತೆ ಹೊಡೆದು ವೀರ್ಯದಿಂದ ಅಹಂಕಾರಪಡುವ ಸೂತನ ಮಗನಿಗೆ ನೀನು ಯುದ್ಧದಲ್ಲಿ ಹೆದರುವುದಾದರೆ ಇರು ನಾನೇ ಚಕ್ರಾಯುಧದ ಪೆಟ್ಟಿನಿಂದ ಹೊಡೆದು ಪರಾಶ್ರಮವು ಲೋಕಕ್ಕೆ ಮಾದರಿಯಾಗುವ ಹಾಗೆ ಕತ್ತರಿಸಿ ರಾಶಿ ಮಾಡಿ ಜಯಲಕ್ಷ್ಮಿಗೆ ಒಡೆಯನಾಗುತ್ತೇನೆ. ವ|| ಎನ್ನುವಷ್ಟರಲ್ಲಿ ಭೂಮಿಯು ನಡುಗುವ ಹಾಗೆ ತೇರಿನ ಚಕ್ರವನ್ನು ಕಿತ್ತು ಪುನ ಪ್ರತಿರಥನಿಲ್ಲದ ಕರ್ಣನು ರಥವನ್ನು ಹತ್ತಿ ದೀರ್ಘದೃಷ್ಟಿಯಿಂದ ಸಮೀಪಕ್ಕೆ ಬಂದು ಕಿಡಿಗಳನ್ನು ಸುರಿಸಿ ಮರ್ಮಭೇದಕವಾದ ಮಾತುಗಳನ್ನಾಡಿ ಯುದ್ಧಮಾಡುವಾಗ ಕಪಿದ್ವಜನಾದ ಅರ್ಜುನನು ಕಾಡಾನೆಯಂತೆ ಕಾಗೆಯ ಬಾವುಟವನ್ನು ಕತ್ತರಿಸಿ ಕೆಡೆಯುವ ಹಾಗೆ ಹೊಡೆದನು. ೨೦೯. ಬಾವುಟವು ಬೀಳಲು ಶೌರ್ಯದ ಧ್ವಜವನ್ನು ನಿಲ್ಲಿಸಬೇಕೆಂದೇ ಕೃಷ್ಣನ ಎದೆಯನ್ನು ಸೀಳಿಹೋಗುವ ಹಾಗೆ ಹೊಡೆದು ಕೋಪವು ಅಕವಾಗುತ್ತಿರಲು ಅರ್ಜುನನ ಬಿಲ್ಲಿನ ಹೆದೆಯನ್ನು ಕತ್ತರಿಸಿದನು.

೨೧೦. ಪ್ರಕಾಶಮಾನವಾದ ದೀಪಗಳ ಕಾಂತಿಯು ಆರಿಹೋಗುವ ಕಾಲದಲ್ಲಿ ಹೆಚ್ಚಾಗಿ ಜ್ವಲಿಸುವ ಹಾಗೆ ಸೂರ್ಯಪುತ್ರನಾದ ಕರ್ಣನು ಮುಳುಗುವ (ಸಾಯುವ) ಕಾಲದಲ್ಲಿ ತೇಜಸ್ಸು ಪ್ರಜ್ವಲಿಸಲು ತಳತಳನೆ ಪ್ರಕಾಶಿಸಿದನು. ವ|| ಹಾಗೆ ಕರ್ಣನ ಹರಿತವಾದ

ಕಂ|| ಕಸೆಯಂ ಬಿಟ್ಟುಱದಭಿಮಂ
ತ್ರಿಸಿ ಚಕ್ರಮನಸುರವೈರಿಯಿಡುವಾಗಳ್ ಬಾ|
ರಿಸಿ ಪೆಱತು ಗೊಣೆಯದಿಂದೇ
ಱಸಿ ಬಿಲ್ಲಂ ತ್ರಿಭುವನಂಗಳಳ್ಳಾಡುವಿನಂ|| ೨೧೧

ವ|| ಮುನ್ನಮುಂದ್ರಕೀಲನಗೇಂದ್ರದೊಳ್ ಪಶುಪತಿಯನಾರಾಸಿ ಪಾಶುಪತಾಸ್ತ್ರಂ ಬಡೆದಂದು ತೆಲ್ಲಟಿಯೆಂದು-

ಚಂ|| ಗಿರಿಜೆಯ ಮೆಚ್ಚಿ ಕೊಟ್ಟ ನಿಶಿತಾಸ್ತ್ರಮನಂಜಲಿಕಾಸ್ತ್ರಮಂ ಭಯಂ
ಕರತರಮಾಗೆ ಕೊಂಡು ವಿಯಿಂಡಭಿಮಂತ್ರಿಸಿ ಪೂಜೆ ಬಿಲ್ಲೊಳು|
ರ್ವರೆ ನಡುಗಿತ್ತಜಾಂಡಮೊಡೆದತ್ತು ನೆಲಂ ಪಿಡುಗಿತ್ತು ಸಪ್ತಸಾ|
ಗರಮುಡುಗಿತ್ತು ಸಾಹಸಮದೇಂ ಪಿರಿದೋ ಕದನತ್ರಿಣೇತ್ರನಾ|| ೨೧೨

ವ|| ಆಗಳಖಿಳಭುವನಭವನಸಂಹಾರಕಮಪ್ಪಂಲಿಕಾಸ್ತ್ರಮನಮೋಘಾಸ್ತ್ರ ಧನಂಜಯನಾ ಕರ್ಣಾಂತಂಬರಂ ತೆಗೆದಾಕರ್ಣಾಂತಂ ಮಾಡಲ್ ಬಗೆದು ಕಂಧರಸಂಯಂ ನಿಟ್ಟಿಸಿ-

ಮ||ಸ್ರ|| ಮುಳಿದೆಚ್ಚಾಗಳ್ ಮಹೋಗ್ರಪ್ರಳಯಶಿಖಿ ಶಿಖಾನೀಕಮಂ ವಿಸುಲಿಂಗಂ
ಗಳುಮಂ ಬೀಱುತ್ತುಮೌರ್ವಜ್ವಳನುರುಚಿಯುಮಂ ತಾನೆ ತೋಱುತ್ತುಮಾಟಂ|
ದಳುರುತ್ತುಂ ಬಂದು ಕೊಂಡಾಗಳೆ ಗಗನತಳಂ ಪಾಯ್ದ ಕೆನ್ನತ್ತರಿಂದು
ಚ್ಚಳಿಸುತ್ತಿರ್ಪನ್ನೆಗಂ ಬಿೞ್ದುದು ಭರದೆ ಸಿಡಿಲ್ದತ್ತ ಕರ್ಣೋತ್ತಮಾಂಗಂ|| ೨೧೩

ವ|| ಅಂತು ತಲೆ ನೆಲೆದೊಳುರುಳ್ದೊಡೆ ಲೋಕಕ್ಕೆಲ್ಲಮಗುಂದಲೆಯಾದ ಬೀರಮೆಸೆಯೆ ಪ್ರಾಣಮೊಡಲಿಂದಂ ತೊಲಗೆಯುಂ ತೊಲಗದ ನನ್ನಿಯನುದಾಹರಿಸುವಂತೆ ಪತ್ತೆಂಟು ಕೋಲ ನೆಚ್ಚಟ್ಟೆಯುಂ ನೆಲದೊಳಾಚಂದ್ರಸ್ಥಾಯಿಯಾಗೆ ಚತುರ್ದಶಭುವನಂಗಳಂ ಪಸರಿಸಿ ನಿಂದೊಡೆಸೆ ದುದಾಹರಣಮೊಳ್ಪಿನುದಾಹರಣಮುಮಾಗೆ ಗುಣಾರ್ಣವನ ಶರಪರಿಣತಿಯಿಂದೆ ಕುಲಶೈಲಂ ಬೀೞ್ವಂತೆ ನೆಲನದಿರೆ ಬಿೞiಗಳ್-

ಕಂ|| ಚಾಗದ ನನ್ನಿಯ ಕಲಿತನ
ದಾಗರಮೆನೆ ನೆಗೞ್ದ ಕರ್ಣನೊಡಲಿಂದೆಂತುಂ|
ಪೋಗಲ್ಕಱಯದೆ ಸಿರಿ ಕರ
ಮಾಗಳ್ ಕರಿಕರ್ಣತಾಳ ಸಂಚಳೆಯಾದಳ್|| ೨೧೪

ಬಾಣದ ಪೆಟ್ಟಿನಿಂದ ಕೃಷ್ಣುನು ಸಾಯುವಷ್ಟು ನೊಂದು ೨೧೧. ಚಾವುಟಿಯನ್ನೆಸೆದು ಚಕ್ರಾಯುಧವನ್ನಭಿಮಂತ್ರಿಸಿ ಕೃಷ್ಣನು ಸಾಯುವಷ್ಟು ನೊಂದು ೨೧೧. ಚಾವುಟಿಯನ್ನೆಸೆದು ಚಕ್ರಾಯುಧವನ್ನಭಿಮಂತ್ರಿಸಿ ಕೃಷ್ಣನು ಎಸೆಯುವಾಗ ಅರ್ಜುನನು ಅದನ್ನು ತಡೆದು ಬೇರೊಂದು ಹೆದೆಯಿಂದ ಬಿಲ್ಲನ್ನು ಕಟ್ಟಿ ಮೂರುಲೋಕಗಳು ನಡುಗುವ ಹಾಗೆ ವ|| ಮೊದಲು ಇಂದ್ರಕೀಲಪರ್ವದಲ್ಲಿ ಈಶ್ವರನನ್ನು ಪೂಜಿಸಿ ಪಾಶುಪತಾಸ್ತ್ರವನ್ನು ಪಡೆದ ದಿನ ಬಳುವಳಿಯೆಂದು ೨೧೨. ಪಾರ್ವತಿಯು ಪ್ರೀತಿಯಿಂದ ಕೊಟ್ಟ ಹರಿತವಾದ ಅಂಜಿಲಿಕಾಸ್ತ್ರವನ್ನು ಭಯವುಂಟಾಗುವ ಹಾಗೆ ಕೈಗೆ ತೆಗೆದುಕೊಂಡು ಶಾಸ್ತ್ರರೀತಿಯಿಂದ ಅಭಿಮಂತ್ರಣ ಮಾಡಿ (ಮಂತ್ರಾ ದೇವತೆಯನ್ನು ಆಹ್ವಾನಿಸಿ) ಬಿಲ್ಲಿನಲ್ಲಿ ಹೂಡಲು ಭೂಮಿಯು ಕಂಪಿಸಿತು. ಬ್ರಹ್ಮಾಂಡವು ಒಡೆಯಿತು, ನೆಲವು ಸಂಕೋಚವಾಯಿತು, ಏಳು ಸಮುದ್ರಗಳು ಬತ್ತಿಹೋದುವು. ಕದನತ್ರಿಣೇತ್ರನಾದ ಅರ್ಜುನನ ಸಾಹಸವು ಅತಿಮಹತ್ತರವಾದುದು. ವ|| ಆಗ ಸಮಸ್ತಲೋಕವೆಂಬ ಮನೆಯನ್ನು ನಾಶಮಾಡುವ ಅಂಜಲಿಕಾಸ್ತ್ರವನ್ನು ಅಮೋಘಾಸ್ತ್ರ ಧನಂಜಯನಾದ ಅರ್ಜುನನು ಕರ್ಣನನ್ನು ಕೊಲ್ಲಲು ಯೋಚಿಸಿ ಕಿವಿಯವರೆಗೂ ಸೆಳೆದು ಕತ್ತಿನ ಸಂದಿಯನ್ನು ನಿರೀಕ್ಷಿಸಿ- ೨೧೩. ಕೋಪದಿಂದ ಹೊಡೆಯಲು ಮಹಾಭಯಂಕರವಾದ ಪ್ರಳಯಕಾಲದ ಅಗ್ನಿಯ ಜ್ವಾಲಾಸಮೂಹವನ್ನೂ ಕಿಡಿಗಳನ್ನೂ ಕೆದರುತ್ತ ಬಡಬಾಗ್ನಿಯು ಕಾಂತಿಯನ್ನು ತಾನೇ ಪ್ರದರ್ಶಿಸುತ್ತ ಮೇಲೆಬಿದ್ದು ಹರಡುತ್ತ ಬಂದು ತಗಲಿದಾಗ ಚಿಮ್ಮಿದ ಕೆಂಪುರಕ್ತವು ಆಕಾಶಪ್ರದೇಶವನ್ನೂ ದಾಟಿ ಮೇಲಕ್ಕೆ ಹಾರುತ್ತಿರಲು ಕರ್ಣನ ತಲೆಯು ರಭಸದಿಂದ ಸಿಡಿದು ಆ ಕಡೆ ಬಿದ್ದಿತು. ವ|| ಹಾಗೆ ತಲೆಯು ಭೂಮಿಯಲ್ಲಿ ಉರುಳಲು ಲೋಕಕ್ಕೆಲ್ಲ ವೀರ್ಯವು ಪ್ರಕಾಶಿಸಲು ಪ್ರಾಣವು ಶರೀರದಿಂದ ಹೋದರೂ ಸತ್ಯವು ಮಾತ್ರ ಹೋಗದಿರುವುದನ್ನು ಉದಾಹರಿಸುವಂತೆ ಅವನ ಕೀರ್ತಿಯು ಹದಿನಾಲ್ಕು ಲೋಕಗಳನ್ನೂ ಆವರಿಸಿ ಚಂದ್ರನಿರುವವರೆಗೂ ನಿಲ್ಲುವಂತೆ ಅವನ ಮುಂಡವು ಹತ್ತೆಂಟು ಬಾಣಗಳನ್ನು ಹೊಡೆದು ದೃಢವಾಗಿ ನಿಂತಿತು. ಪ್ರಕಾಶಮಾನವಾಗಿ ನಿಂತಿತು. ಪ್ರಕಾಶಮಾನವಾದ ಆ ತಲೆಯನ್ನು ಅಪಹರಣಮಾಡಿದುದು ಒಳ್ಳೆಯತನದ ಮಾರ್ಗದರ್ಶನವಾಗಲು ಅರ್ಜುನನ ಬಾಣಕೌಶಲ್ಯದಿಂದ ಮುಂಡವೂ ಕುಲಪರ್ವತವು ಬೀಳುವ ಹಾಗೆಭೂಮಿಯು ಕಂಪಿಸುವ ಹಾಗೆ ಬಿದ್ದಿತು. ೨೧೪. ತ್ಯಾಗ ಸತ್ಯ

ಕುಡುಮಿಂಚಿನ ಸಿಡಿಲುರುಳಿಯೊ
ಳೊಡಂಬಡಂ ಷಡೆಯೆ ಕರ್ಣನೊಡಲಿಂದಾಗಳ್|
ನಡೆ ನೋಡೆ ನೋಡೆ ದಿನಪನೊ
ಳೊಡಗೂಡಿದುದೊಂದು ಮೂರ್ತಿ ತೇಜೋರೂಪಂ|| ೨೧೫

ಪಿಡಿದನೆ ಪುರಿಗಣೆಯನೆರ
ೞ್ನುಡಿದನೆ ಬಳ್ಕಿದನೆ ತಾನೆ ತನ್ನನೆ ಚಲಮಂ|
ಪಿಡಿದೞದನೆಂದು ದೇವರ
ಪಡೆ ಗಡಣದೆ ಪೊಗೞ್ದುದಿನತನೂಜನ ಗಂಡಂ|| ೨೧೬

ಚಂ|| ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನೊಂದೆ ಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇಱು ಕ|
ರ್ಣನ ಕಡು ನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕ
ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ|| ೨೧೭

ವ|| ಅಂತು ರಿಪುಕುರಂಗಕಂಠೀರವನ ಕೆಯ್ಯೊಳ್ ವೈಕರ್ತನಂ ಸಾಯಲೊಡಂ ಮೇಲುದಂ ಬೀಸಿ ಬೊಬ್ಬಿಱದಾರ್ವ ಪಾಂಡವಪತಾಕಿನಿಯೊಳ್-

ಕಂ|| ಬದ್ದವಣದ ಪಗಳ್ ಕಿವಿ
ಸದ್ದಂಗಿಡೆ ಮೊೞಗೆ ದೇವದುಂದುಭಿರವದೊಂ|
ದುದ್ದಾನಿ ನೆಗೞೆ ಮುಗುಳಲ
ರೊದ್ದೆ ಕರಂ ಸಿದ್ಧಮಾದುದಂಬರತಲದೊಳ್ ೨೧೮

ಚಂ|| ಒದವಿದಲಂಪು ಕಣ್ಣೆವೆ ಕರುಳ್ ತನಗೆಂಬುದನುಂಟುಮಾಡೆ ನೋ
ಡಿದುದ ಕಣ್ಗಳೞ್ಕಮೆವಡುತ್ತಿರೆ ಪೋ ಪಸವೋಡಿತೆಂದು ನೀ
ರದಪಥದೊಳ್ ತಗುಳ್ದರಿಗನಂ ಪೊಗೞ್ದಾಡಿದನಂದು ದಂಡಕಾ
ಷ್ಠದ ತುದಿಯೊಳ್ ಪಳಂಚಲೆಯೆ ಕೋವಣವಂ ಗುಡಿಗಟ್ಟಿ ನಾರದಂ|| ೨೧೯

ಪರಾಕ್ರಮಗಳಿಗೆ ಆವಾಸಸ್ಥಾನವೆಂದು ಪ್ರಸಿದ್ಧವಾಗಿದ್ದ ಕರ್ಣನ ಶರೀರದಿಂದ ಹೇಗೂ ಬಿಟ್ಟು ಹೋಗುವುದಕ್ಕೆ ತಿಳಿಯದೆ ಲಕ್ಷ್ಮಿಯು ಆಗ ಆನೆಯ ಚಲಿಸುತ್ತಿರುವ ಕಿವಿಗಳಂತೆ ಚಂಚಲೆಯಾದಳು. ೨೧೫. ಕುಡಿಮಿಂಚಿನಿಂದ ಕೂಡಿದ ಸಿಡಿಲಿನ ಉಂಡೆಯ ತೇಜಸ್ಸಿನ ರೂಪವನ್ನು ಹೋಲುವ ಆಕಾರವೊಂದು ನೋಡುತ್ತಿರುವ ಹಾಗೆಯೇ ಕರ್ಣನ ಶರೀರದಿಂದ (ಹೊರಟು) ಸೂರ್ಯನಲ್ಲಿ ಐಕ್ಯವಾಯಿತು. ೨೧೬. ‘ದಿವ್ಯಾಸ್ತ್ರವನ್ನು ಹಿಡಿದನೆ?’ ಎರಡು ಮಾತನ್ನಾಡಿದನೇ? ಭಯಪಟ್ಟನೆ? ತಾನೆ ತನ್ನ ಹಟವನ್ನು ಬಿಗಿಯಾಗಿ ಹಿಡಿದು ಸತ್ತನು’ ಎಂದು ದೇವತೆಗಳ ಸಮೂಹವು ಕರ್ಣನ ಪೌರಷವನ್ನು ಹೊಗಳಿತು. ೨೧೭. ಅಣ್ಣಾ ಭಾರತದಲ್ಲಿ ಬೇರೆ ಯಾರನ್ನೂ ನೆನೆಯಬೇಡ; ಒಂದೇ ಮನಸ್ಸಿನಿಂದ ನೆನೆಯುವುದಾದರೆ ಕರ್ಣನನ್ನು ಜ್ಞಾಪಿಸಿಕೊಳ್ಳಪ್ಪ; ಕರ್ಣನಿಗೆ ಯಾರು ಸಮಾನ? ಕರ್ಣನ ಪರಾಕ್ರಮ, (ಯುದ್ಧ), ಕರ್ಣನ ವಿಶೇಷವಾದ ಸತ್ಯ, ಕರ್ಣನ ಪೌರುಷ, ಪ್ರಸಿದ್ಧವಾದ ಕರ್ಣನ ತ್ಯಾಗ ಎಂದು ಕರ್ಣನ ಮಾತಿನಿಂದಲೇ ತುಂಬಿ ಭಾರತವು ಕರ್ಣರಸಾಯನವಾಗಿದೆಯಲ್ಲವೇ? ವ|| ಹಾಗೆ ರಿಪುಕುರಂಗಕಂಠೀರವನಾದ ಅರ್ಜುನನ ಕಯ್ಯಲ್ಲಿ ಕರ್ಣನು ಸಾಯಲು ಉತ್ತರೀಯವನ್ನು ಬೀಸಿ (ಸಂತೋಷಸೂಚಕವಾಗಿ) ಆರ್ಭಟಮಾಡಿ ಪಾಂಡವಸೈನ್ಯವು ಜಯಶಬ್ದಮಾಡಿತು. ೨೧೮. ಮಂಗಳವಾದ್ಯಗಳು ಭೋರ್ಗರೆದುವು. ಕಿವಿಕಿವುಡಾಗುವಂತೆ ಜಯಭೇರಿಗಳು ಮೊಳಗಿದುವು. ದೇವದುಂದುಭಿಯೊಡನೆ ಪುಷ್ಪವೃಷ್ಟಿಗೆ ಹೂವಿನ ಮೊಗ್ಗುಗಳು ಸಿದ್ಧವಾದವು. ೨೧೯. ಕರ್ಣಾರ್ಜುನರ ಕಾಳಗವನ್ನು ನೋಡುವುದರಿಂದ ನನಗೆ ಕಣ್ಣೂ ಕರುಳೂ ಇದೆ ಎಂಬ ಭಾವವನ್ನುಂಟುಮಾಡಿ ಬಹಳ ಕಾಲದಿಂದ ನೋಡಬೇಕೆಂದಿದ್ದ ನನ್ನ ಕ್ಷಾಮವೂ ತೊಲಗಿತು, ಕರುಳಿಗೆ ಆನಂದವೂ ಉಂಟಾಯಿತು ಎಂದು ಆಕಾಶದಲ್ಲಿ ಅರ್ಜುನನನ್ನು ಹೊಗಳುತ್ತ ತನ್ನ ದಂಡದಂತಿರುವ ಕೋಲಿನ ತುದಿಗೆ ಕೋಪೀನವನ್ನು ಸೇರಿಸಿಕೊಂಡು ಬಾವುಟದಂತೆ ಅಲುಗಿಸುತ್ತ ನಾರದನು

ವ|| ಆಗಳ್-

ಕಂ|| ಪೞಯಿಗೆಯನುಡುಗಿ ರಥಮಂ
ಪೆೞವನನೆಸಗಲ್ಕೆಮೇೞ್ದು ಸುತಶೋಕದ ಪೊಂ|
ಪುೞಯೊಳ್ ಮೆಯ್ಯಱಯದೆ ನೀ
ರಿೞವಂತೆವೊಲಿೞದನಪರಜಳಗೆ ದಿನಪಂ|| ೨೨೦

ವ|| ಆಗಳ್ ಕರ್ಣನ ಬೞವೞಯನೆ ತನ್ನ ಪೋಪುದನಭಿನಯಿಸುವಂತೆ ಶೋಕೋದ್ರೇಕದೊಳ್ ಮೆಯ್ಯಱಯದೆ ಕನಕರಥದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಮೂರ್ಛೆವೋದ ದುರ್ಯೋಧನನನಶ್ವತ್ಥಾಮ ಕೃಪ ಕೃತವರ್ಮ ಶಕುನಿಯರ್ ನಿಜ ನಿವಾಸಕ್ಕೊಡಗೊಂಡು ಪೋದರಾಗಳ್-

ಚಂ|| ಸುರಿವಜರಪ್ರಸೂನರಜದಿಂ ಕವಿಲಾದ ಶಿರೋರುಹಂ ರಜಂ
ಬೊರೆದಳಿಮಾಲೆ ಮಾಲೆಯನೆ ಪೋಲೆ ಪಯೋಜಜ ಪಾರ್ವತೀಶರೊ|
ಳ್ವರಕೆಯನಾಂತು ಕರ್ಣಹತಿಯೊಳ್ ತನಗೞ್ಕಱನೀಯೆ ಬಂದನಂ
ದರಮನೆಗಚ್ಯುತಂಬೆರಸಳುರ್ಕೆಯಿನಮ್ಯನ ಗಂಧವಾರಣಂ|| ೨೨೧

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ
ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ
ಚತುರ ಕವಿತಾಗುಣಾರ್ಣವ ವಿರಚಿತಮಪ್ಪ
ವಿಕ್ರಮಾರ್ಜುನ ವಿಜಯದೊಳ್

ದ್ವಾದಶಾಶ್ವಾಸಂ

ಕುಣಿದಾಡಿದನು. ವ|| ಆಗ ೨೨೦. ಬಾವುಟವನ್ನು ಇಳಿಸಿ ಹೆಳವನಾದ ಅರುಣನನ್ನು ತೇರನ್ನು ನಡೆಸುವಂತೆ ಹೇಳಿ ಪುತ್ರಶೋಕದ ಆಕ್ಯದಲ್ಲಿ ಸೂರ್ಯನು ಜ್ಞಾನಶೂನ್ಯನಾಗಿ (ಸತ್ತವರಿಗೆ) ಸ್ನಾನಮಾಡುವ ಹಾಗೆ ಪಶ್ಚಿಮಸಮುದ್ರಕ್ಕೆ ಇಳಿದನು. (ಅಸ್ತಮಯವಾದನು) ವ|| ಆಗ ಕರ್ಣನ ದಾರಿಯಲ್ಲಿಯೇ ತಾನೂ ಹೋಗುವುದನ್ನು ಅಭಿನಯಿಸುವಂತೆ ದುಖದ ಆಕ್ಯದಿಂದ ಜ್ಞಾನಶೂನ್ಯನಾಗಿ ಚಿನ್ನದ ತೇರಿನಲ್ಲಿಯೇ ಶರೀರವನ್ನು ಚಾಚಿ ಅಸಾಧಾರಣ ರೀತಿಯಲ್ಲಿ ಮೂರ್ಛೆ ಹೋಗಿದ್ದ ದುರ್ಯೋಧನನನ್ನು ಅಶ್ವತ್ಥಾಮ, ಕೃಪ, ಕೃತವರ್ಮ, ಶಕುನಿಯರು ತಮ್ಮ ವಾಸಸ್ಥಳಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋದರು. ಆಗ ೨೨೧. ದೇವತೆಗಳು ಸುರಿಯುತ್ತಿರುವ ಹೂವುಗಳ ಪರಾಗದಿಂದ ಕಪಿಲಬಣ್ಣವಾದ ಕೂದಲು, ಪರಾಗದಿಂದ ಮುಚ್ಚಲ್ಪಟ್ಟ ದುಂಬಿಗಳ ಸಮೂಹದಿಂದ ಕೂಡಿದ ಹೂವಿನ ಮಾಲೆಯನ್ನೇ ಹೋಲುತ್ತಿರಲು, ಬ್ರಹ್ಮ ಮತ್ತು ರುದ್ರರ ಒಳ್ಳೆಯ ಆಶೀರ್ವಾದವನ್ನು ಪಡೆದು ಕರ್ಣನ ನಾಶವು ತನಗೆ ಆನಂದವನ್ನುಂಟುಮಾಡುತ್ತಿರಲು ಅಮ್ಮನ ಗಂಧವಾರಣನಾದ ಅರ್ಜುನನು ಕೃಷ್ಣನೊಡಗೂಡಿ ಆ ದಿನ ಅತಿಶಯದಿಂದ ಅರಮನೆಗೆ ಬಂದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಹನ್ನೆರಡನೆಯ ಆಶ್ವಾಸ.