ಬಾಣವು ಭೀಮನ ಮುಖಕಮಲದ ವಾಸನೆಯಿಂದ ಆಕರ್ಷಿತವಾದ ದುಂಬಿಗಳ ಸಮೂಹದ ಆಕಾರದಿಂದ ವಿಶೇಷ ಸುಂದರವಾಗಿದ್ದಿತು. ೭೧. ಬಾಣದ ನೋವಿನ ತುಡಿತವು ಹೆಚ್ಚಾಯಿತು. ವಿಸರ್ಪಿಣಿಯೆಂಬ ರೋಗವುಳ್ಳವನ ರಕ್ತನಾಳವನ್ನು ಕತ್ತರಿಸಿದಂತೆ ಸ್ವಲ್ಪ ಬೆಚ್ಚಗಿರುವ ಕಪ್ಪಾದ ರಕ್ತಸಮೂಹವು ಒಡನೆಯೇ ಸೂಸಿ ಹರಿಯಿತು. ೭೨. ಆ ಬಾಣದಿಂದ (ಭೀಮನ) ಎದೆ ನಡುಗುವುದಕ್ಕೂ ಮೈ ಬೆವರುವುದಕ್ಕೂ ನಾಲಗೆ ತೊಡರುವುದಕ್ಕೂ ಪ್ರಾರಂಭವಾಯಿತು. (ಎಂದ ಮೇಲೆ) ಅಶ್ವತ್ಥಾಮನು ಪ್ರಯೋಗಿಸಿದ ಹರಿತವಾದ ಬಾಣವು ಇನ್ನುಳಿದವರನ್ನು ಕೊಲ್ಲದಿರುತ್ತದೆಯೇ? ವ|| ಭೀಮಸೇನನು ಬಾಣದ ಪೆಟ್ಟಿನಿಂದ ಗಾಯಗೊಂಡು ಶಕ್ತಿಗುಂದಿ ಉಸಿರಾಡುವುದಕ್ಕೂ ಆಗದೆ ಬಿಲ್ಲಿನ ತುದಿಯನ್ನು ಹಿಡಿದು ಊರಿಕೊಂಡು ಸ್ವಲ್ಪ ಕಾಲವಿದ್ದು ಹಣೆಯಲ್ಲಿ ನಾಟಿದ್ದ ಬಾಣವನ್ನು ಹೇಗೋ ಕಿತ್ತು ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು ಸಿಂಹಧ್ವನಿಯಿಂದ ಆರ್ಭಟಿಸಿದನು. ೭೩. ಸೂರ್ಯಬಿಂಬದಿಂದ ಕಿರಣಗಳು ಹೊರಕ್ಕೆ ಹೊರಟು ಬರುತ್ತಿರುವ ಹಾಗೆ ಬತ್ತಳಿಕೆಯಿಂದ ಪ್ರಕಾಶಮಾನವಾದ ಎಂಟುಬಾಣಗಳನ್ನು ಸೆಳೆದುಕೊಂಡು ಅವುಗಳಲ್ಲಿ ಹೊಳೆಯುತ್ತಿರುವ ಅಯ್ದುಬಾಣಗಳಿಂದ ಆ ಬ್ರಾಹ್ಮಣನಾದ ಅಶ್ವತ್ಥಾಮನ ಸಾರಥಿ, ತೇರು ಮತ್ತು ಕುದುರೆಗಳು ಸುರುಳಿಕೊಂಡು ಉರುಳುವ ಹಾಗೆ ಹೊಡೆದನು. ೭೪. ಇನ್ನುಳಿದ ಮೂರು ಮಿರುಮಿರುಗುವ ಹರಿತವಾದ ಬಾಣಗಳಿಂದ ಬ್ರಾಹ್ಮಣನ ಹಣೆಗೆ ಮರ್ಮವನ್ನು ಭೇದಿಸುವಂತೆ ಹೊಡೆಯಲು ಆ ಭೀಮಸೇನನ ಪರಾಕ್ರಮವೂ ಶಕ್ತಿಯೂ ಕಣ್ಣು ಬಿಟ್ಟಂತಾಯಿತು. ವ|| ಆಗ ಅಶ್ವತ್ಥಾಮನು ಚಿನ್ನದ ಗರಿಗಳಿಂದ ಗುರುತುಮಾಡಲ್ಪಟ್ಟ ಹಿಂಭಾಗವನ್ನುಳ್ಳ ಭೀಮನ ಬಾಣಗಳ ಪೆಟ್ಟಿನಿಂದ ಸಾಯುವಷ್ಟು ವ್ಯಥೆಪಟ್ಟು ಭೋರೆಂದು ಸುರಿಯುತ್ತಿರುವ ಬಿಸಿರಕ್ತವು ಕಣ್ಣನ್ನು ಆವರಿಸಲು ಅದನ್ನು (ಬೆರಳಿನಿಂದ) ಸೀಂಟಿ ಕಳೆದು ಬಾಣದ ಮಧ್ಯದವರೆಗೂ ನಾಟಿಕೊಂಡಿದ್ದ ಹರಿತವಾದ ಬಾಣಗಳನ್ನು ಗರಿಗಳೊಡನೆ ಕಿತ್ತು ಬಿಸಾಡಿದನು. ೭೫. ತನ್ನ ಶಕ್ತಿಯೆಷ್ಟಿದೆ, ಬಿಲ್ವಿದ್ಯೆಯ ಬಲವೆಷ್ಟಿದೆ ಅಷ್ಟನ್ನೂ ಇಲ್ಲಿ ಸಂಪೂರ್ಣವಾಗಿ ಹೊಂದಾಣಿಕೆಯಾಗುವ ಹಾಗೆ ಸೇರಿಸಿದೆ

ವ|| ಆಗಳ್ ಸವ್ಯಾಪಸವ್ಯ ಭ್ರಾಂತೋದ್ಭ್ರಾಂತಂಗಳೆಂಬ ರಥಕಲ್ಪ ವಿಶೇಷ ವಿನ್ಯಾಸಂಗಳ ನಱದು ಸಾರಥಿಗಳ್ ಚೋದಿಸುವಾಗಳಿರ್ವರ ರಥಂಗಳುಂ ಸುಟ್ಟುರೆಯೊಳಗಣ ತಱಗೆಲೆಯಂತೆ ತಿಱ್ರನೆ ತಿರಿಯೆ-

ಚಂ|| ಮುಳಿಸಳುರ್ದೆಯ್ದೆ ಕಣ್ಗಳೊಳೆ ಪೀರ್ವವೊಲುಗ್ರಶರಾನಲಾರ್ಚಿಯಿಂ
ದಗುರ್ವವೊಲೆಯ್ದೆ ಚೋದಿಸಿ ವರೂಥಮನಿಂ ಬಿರ್ದುಕಾಡೆಯೆಂದಸುಂ|
ಗೊಳೆ ಮೊನೆಯಂಬುಗಳ್ ತನುವನಳ್ದಳಿವೋಪಿನಮೆಚ್ಚು ನೆತ್ತರು
ಚ್ಚಳಿಸಿ ರಥಂಗಳೊಳ್ ಕೊಳಗೊಳುತ್ತಿರೆ ಕಾದಿದರೊರ್ವರೊರ್ವರೊಳ್|| ೭೬

ವ|| ಅಂತು ಮುಳಿಸಿನ ಮೋಪಿನ ಗಂಡಮಚ್ಚರದ ಮೆಚ್ಚುವಣಿಗೆಯಂಕಕಾಱರೆಕ್ಕತುಳ ಕ್ಕೆಕ್ಕೆಯಿಂ ಸೂೞೇಱೞವಂತೊರ್ವರೊರ್ವರೋಳ್ ಕಾದೆ-

ಉ|| ಸೂತರುರುಳ್ವಿನಂ ರಥ ತುರಂಗಮರಾಜಿ ಸುರುಳ್ವಿನಂ ಚಳ
ತ್ಕೇತುಗಳೆತ್ತಮವ್ವಳಿಸಿ ಬೀೞನಮಳ್ಕು ಕಾದಿ ಬಾಣ ಸಂ|
ಘಾತದ ಕೋಳೊಳುಚ್ಚಳಿಪ ನೆತ್ತರೊಳಿಚ್ಚಿಯೆ ಕೆಟ್ಪೊಡಾತನ
ತ್ತೀತನುಮಿತ್ತ ಜೋಲ್ದ ರಣಮಂ ಪೊಗೞುತ್ತಿರೆ ದೇವಕೋಟಿಗಳ್|| ೭೭

ವ|| ಆಗಳ್ ಧರ್ಮರಾಜನುಮಿತ್ತ ರಾಜರಾಜನುಮೊಂದೊರ್ವರಂ ಕೆಯ್ಕೊಂಡು ತಂತಮ್ಮ ರಥಂಗಳನೇಱಸಿಕೊಂಡುಯ್ದರಿತ್ತ ಕರ್ಣನುಂ ಪಾಂಡವಬಳ ಜಳನಿಯಂ ಬಡಬಾನಳನಳುರ್ವಂತಳುರ್ದು ತನ್ನೊಳ್ ಪೋಗದೆ ಪೆಣೆದ ಪ್ರಭದ್ರಕ ಬಲಮೆಲ್ಲಮಂ ಕೊಂದನನ್ನೆಗಮಿತ್ತ ಭೀಮಾಶ್ವತ್ಥಾಮರಿರ್ವರುಂ ಚೇತರಿಸಿ ಸೂತ ಪತಾಕಾ ತುರಂಗಮೋಪೇತ ರಥಂಗಳನೇಱಕೊಂಡು ಮತ್ತಮೊರ್ವರೊರ್ವರನಱಸುತ್ತುಂ ಸಂಗ್ರಾಮಭೂಮಿಯೊಳಗನೆ ಬರೆ ಜರಾಸಂಧನ ಮಗಂ ಕ್ಷೇಮಧೂರ್ತಿ ತಮ್ಮಯ್ಯನಂ ಕೊಂದ ಪಗೆಯಂ ನೆನೆದು ತನ್ನೇಱದ ಮತ್ತಹಸ್ತಿಯಂ ಭೀಮಸೇನಂಗೆ ತೋಱ ಕೊಟ್ಟಾಗಳ್-

ಕಂ|| ಬಡಿಗೊಂಡು ಮಸಗಿ ಬೈತ್ರಮ
ನೊಡೆವ ಮಹಾ ಮಕರದಂತೆ ಕರಿಘಟೆಗಳನಾ|
ರ್ದುಡಿಯೆ ಬಡಿದಾನೆವೆರಸಾ
ಗಡೆ ಕೊಂದಂ ಕ್ಷೇಮಧೂರ್ತಿಯಂ ಪವನಸುತಂ| ೭೮

ಎನ್ನುವ ಹಾಗೆ ಅಶ್ವತ್ಥಾಮನು ಪ್ರಳಯಾಗ್ನಿಯ ಮತ್ತು ಪ್ರಳಯಕಾಲದ ಯಮನ ರೂಪವುಳ್ಳವನಾದನು. ವ|| ಆಗ ಸವ್ಯ, ಅಪಸವ್ಯ, ಭ್ರಾಂತ ಮ್ತತು ಅದ್ಭ್ರಾಂತಗಳೆಂಬ ರಥವಿದ್ಯೆಯ ನಾನಾರೀತಿಗಳನ್ನು ತಿಳಿದು ಸಾರಥಿಗಳು ನಡೆಸುತ್ತಿರಲು ಇಬ್ಬರ ತೇರುಗಳೂ ಸುಂಟರುಗಾಳಿಯ ಮಧ್ಯದಲ್ಲಿರುವ ತರಗೆಲೆಯ ಹಾಗೆ ತಿರ್ರನೆ ಸುತ್ತುತ್ತಿದ್ದುವು. ೭೬. ಕೋಪವು ಹರಡಿ ಕಣ್ಣುಗಳಿಂದಲೇ ಕುಡಿಯುವ ಹಾಗೆ ಭಯಂಕರವಾದ ಬಾಣಾಗ್ನಿಯ ಜ್ವಾಲೆಯಿಂದ ಸುಡುವ ಹಾಗೆ ರಥವನ್ನು ಹತ್ತಿರಕ್ಕೆ ನಡೆಸಿ ‘ಇನ್ನು ನೀನು ಬದುಕಲಾರೆ’ ಎಂದು ಮೊನಚಾದ ಬಾಣಗಳು ಪ್ರಾಣಾಪಹಾರಮಾಡುವಂತೆ ಶರೀರವನ್ನು ನಾಟಿ ನಾಶವಾಗುತ್ತಿರಲು ಬಾಣ ಪ್ರಯೋಗಮಾಡಿ ರಕ್ತವು ಚಿಮ್ಮಿ ರಥದಲ್ಲಿಯೇ ಕೊಳವಾಗುತ್ತಿರಲು ಒಬ್ಬರೊಡನೊಬ್ಬರು ಕಾದಿದರು. ವ|| ಹಾಗೆ ಕೋಪದ, ಆಸಕ್ತಿಯ, ಪೌರುಷದ, ಮಾತ್ಸರ್ಯದ, ಪರಸ್ಪರ ಮೆಚ್ಚಿಗೆಯುಳ್ಳ ಜಟ್ಟಿಗಳು ಮಲ್ಲಯುದ್ಧಕ್ಕೆ ಅಂಕಕಾರರು ಮೇಲಿಂದ ಮೇಲಕ್ಕೆ ಸರದಿಯ ಪ್ರಕಾರ ಹತ್ತಿ ಇಳಿದು ಯುದ್ಧಮಾಡುವ ಹಾಗೆ ಒಬ್ಬರೊಡನೊಬ್ಬರು ಕಾದಿದರು ೭೭. ಸಾರಥಿಗಳು ಉರುಳಿ ಬೀಳುವ ಹಾಗೆಯೂ ರಥಕುದುರೆಗಳ ಗುಂಪು ಸುರುಳಿಕೊಳ್ಳುವ ಹಾಗೆಯೂ ಚಲಿಸುತ್ತಿರುವ ಧ್ವಜಗಳು ಎಲ್ಲ ಕಡೆಗೂ ಹಾರಿ ಬೀಳುತ್ತಿರುವಂತೆಯೂ ಉಗ್ರವಾಗಿ ಕಾದಿ ಬಾಣಸಮೂಹದ ತಿವಿತದಿಂದ ಚಿಮ್ಮಿದ ರಕ್ತದಲ್ಲಿ ಇಚ್ಛಾಶಕ್ತಿಯೇ ನಷ್ಟವಾಗಲು ಆ ಭೀಮನು ಆ ಕಡೆ, ಈ ಅಶ್ವತ್ಥಾಮನು ಈ ಕಡೆ ಜೋತುಬಿದ್ದ ಯುದ್ಧವನ್ನು ದೇವತೆಗಳ ಸಮೂಹವು ಹೊಗಳುತ್ತಿದ್ದಿತು. ವ|| ಆ ಕಡೆ ಧರ್ಮರಾಜನೂ ಈ ಕಡೆ ಕೌರವನೂ ಒಬ್ಬೊಬ್ಬರನ್ನೂ ಕರೆದುಕೊಂಡು ತಮ್ಮ ರಥವನ್ನು ಹತ್ತಿಸಿಕೊಂಡು ಹೋದರು. ಕರ್ಣನು ಪಾಂಡವಸಮುದ್ರವನ್ನು ಬಡಬಾಗ್ನಿಯು ಸುಡುವಂತೆ ಸುಟ್ಟು ತನ್ನನ್ನು ಬಿಟ್ಟುಹೋಗದೆ ತನ್ನಲ್ಲಿಯೇ ಹೆಣೆದುಕೊಂಡಿದ್ದ ಪ್ರಭದ್ರಕಬಲವೆಲ್ಲವನ್ನೂ ಕೊಂದನು. ಅಷ್ಟರಲ್ಲಿ ಈ ಕಡೆ ಭೀಮಾಶ್ವತ್ಥಾಮರು ಚೇತರಿಸಿ ಸಾರಥಿ ಧ್ವಜ ಮತ್ತು ಕುದುರೆಗಳಿಂದ ಕೂಡಿದ ರಥಗಳನ್ನು ಹತ್ತಿಕೊಂಡು ಪುನ ಒಬ್ಬರು ಮತ್ತೊಬ್ಬರನ್ನು ಹುಡುಕುತ್ತ ಯುದ್ಧಭೂಮಿಯಲ್ಲಿ ಬರುತ್ತಿರಲು ಜರಾಸಂಧನ ಮಗನಾದ ಕ್ಷೇಮಧೂರ್ತಿಯು ತಮ್ಮ ತಂದೆಯನ್ನು ಕೊಂದ ಶತ್ರುತ್ವವನ್ನು ಜ್ಞಾಪಿಸಿಕೊಂಡು ತಾನು ಹತ್ತಿದ್ದ ಮದ್ದಾನೆಯನ್ನು ಭೀಮನ ಕಡೆ ಛೂಬಿಟ್ಟನು. ೭೮. ಪೆಟ್ಟುತಿಂದು ರೇಗಿ ಹಡಗನ್ನು ಮುರಿಯುವ ದೊಡ್ಡ ಮೊಸಳೆಯ ಹಾಗೆ ಭೀಮಸೇನನು ಆನೆಯ ಸಮೂಹವನ್ನು ನಾಶಮಾಡುವಂತೆ ಹೊಡೆದು, ಆರ್ಭಟಮಾಡಿ, ಕ್ಷೇಮಧೂರ್ತಿಯನ್ನು ಆಗಲೇ ಕೊಂದು

ವ|| ಅಂತು ಕ್ಷೇಮಧೂರ್ತಿಯಂ ಕ್ಷೇಮದಿಂ ಕೊಂದನನ್ನೆಗಮತ್ತ ಮರುನ್ನಂದನನ ನಱಸುತ್ತುಂ ಬರ್ಪಶ್ವತ್ಥಾಮನಂ ಪಾಂಡ್ಯನೆಡೆಗೊಂಡು ಬಂದು ಮಾರ್ಕೊಂಡು-

ಕಂ|| ನೀನಲ್ಲದೆನ್ನ ಶರಸಂ
ಧನಮನಾನಲ್ಕೆ ನೆಱಮರಿಲ್ಲೀ ಪಡೆಯೊಳ್|
ನೀನಿಸನಾಂಪುದೆಂಬುದು
ಮಾನಲ್ಲದೆ ನಿನ್ನನಾಂಪ ಗಂಡರುಮೊಳರೇ|| ೭೯

ಎನೆ ಬೆಳ್ಮಸೆಯಂಬಿನ ಸರಿ
ಮೊನೆಯಂಬಿನ ಸೋನೆ ಪಾಯಂಬಿನ ತಂದಲ್|
ಘನಮಾದುದಲ್ಲಿ ಕಿತ್ತಂ
ಬಿನ ಬಡಪಮಿದೆನಿಸಿ ಪಾಂಡ್ಯನಂಬಂ ಕದಂ|| ೮೦

ಕದೊಡವನಿತುಮನಂತಂ
ತುಱದೆಚ್ಚು ಕಡಂಗಿ ತಱದು ಶರವರ್ಷದಿನಂ|
ದಱಯೆ ಕಡಿಕೆಯ್ದು ಬಿಡದೆಡೆ
ಮಱನಂ ಮಾಡಿದುವು ಗುರುತನೂಜನ ಕಣೆಗಳ್|| ೮೧

ಎಡೆವಱದೊಳೆಱಗಿ ಬಱಸಿಡಿ
ಲಿಡುಮುಡುಕನೆ ಪೊಡೆದುದೆನಿಸಿ ಪಾಂಡ್ಯನ ರಥದ|
ಚ್ಚುಡಿದೞ್ಗೆ ತೞ್ಗೆ ಕೊಂಡುವು
ಕಡುಗೂರಿದುವೆನಿಪ ಗುರುತನೂಜನ ಕಣೆಗಳ್|| ೮೨

ವಿರಥಂ ಪಾಂಡ್ಯಂ ಕೋಪ
ಸ್ಪುರಿತಾಧರನುಡಿದು ಕೆಡೆಯೆ ಪೞಯಿಗೆಯುಂ ಬಿ|
ಬ್ಬರ ಬಿರಿಯೆ ಗುರುತನೂಭವ
ನುರಮಂ ಬಿರಿಯೆಚ್ಚು ಬೆಂಗೆವಂದಂ ಗಜದಾ|| ೮೩

ವ|| ಅಂತು ತನ್ನ ನಚ್ಚುವ ಕೆಯ್ದುಗಳನಿತು ಪೊಳೆಯೆ ಮಸೆದೊಟ್ಟಿ ಮತ್ತಹಸ್ತಿಯನಣೆದು ತೋಱಕೊಟ್ಟಾಗಳ್-

ಉ|| ಈ ಮದದಂತಿಯೆೞ್ತರವುಮೀತನ ಶೌರ್ಯಮುಮೀ ಮಹೋಗ್ರ ಸಂ
ಗ್ರಾಮದೊಳೆನ್ನುಮಂ ಚಳಿಯಿಸಲ್ ಬಗೆದಪ್ಪುದು ಪಾಂಡ್ಯನನ್ನನಿ|
ನ್ನೀ ಮಹಿಯೊಳ್ ಪೆಱಂ ಕಲಿಯೆ ನೆಟ್ಟನಿದಿರ್ಚುವ ನಿಚ್ಚಟಿಕ್ಕೆಯೊಳ್
ಭೀಮನುಮಿನ್ನನಲ್ಲನೆನೆ ಪೋಲ್ವೆಗಿವಂಗೆಣೆ ಗಂಡರೆಂಬರಾರ್|| ೮೪

ಹಾಕಿದನು. ವ|| ಅಷ್ಟರಲ್ಲಿ ಆ ಕಡೆ ಭೀಮನನ್ನು ಹುಡುಕುತ್ತ ಬರುತ್ತಿದ್ದ ಅಶ್ವತ್ಥಾಮನನ್ನು ಪಾಂಡ್ಯನು ಮಧ್ಯೆ ಬಂದು ಎದುರಿಸಿ

೭೯. ನನ್ನ ಬಾಣಪ್ರಯೋಗವನ್ನು ಎದುರಿಸುವುದಕ್ಕೆ ನಿನ್ನನ್ನು ಬಿಟ್ಟು ಈ ಸೈನ್ಯದಲ್ಲಿ ಸಮರ್ಥರಾದವರು ಬೇರೆ ಯಾರೂ ಇಲ್ಲ, ನೀನೇ ಒಂದಿಷ್ಟು ತಾಳುವುದು ಎನ್ನಲು ನಾನಲ್ಲದೇ ನಿನ್ನನ್ನು ಪ್ರತಿಭಟಿ ತಕ್ಕ ಶೂರರೂ ಇದ್ದಾರೆಯೇ? ೮೦. ಎನ್ನಲು ಬೆಳ್ಳಗೆ ಮಸೆದಿರುವ ಬಾಣದ ಮಳೆ, ಮೊನಚಾದ ಬಾಣಗಳ ತುಂತುರುಮಳೆ ಇವು ಇತ್ಶಯವಾದವು. ಅಲ್ಲಿಯ ಕಿರಿಯಬಾಣಗಳ ನಿರಂತರವಾದ ಮಳೆ ಇದು ಎನಿಸಿ ಪಾಂಡ್ಯನು ಬಾಣಗಳನ್ನು ಕರೆದನು. ೮೧. ಅವಷ್ಟನ್ನೂ ಹಾಗೆ ಹಾಗೆಯೇ ಉತ್ಸಾಹಗೊಂಡು ಜಾಗ್ರತೆಯಾಗಿ ಕತ್ತರಿಸಿ ಬಾಣದ ಮಳೆಯಿಂದ (ಶರವರ್ಷ) ಸಂಪೂರ್ಣವಾಗಿ ತುಂಡರಿಸಿ, ನಿಲ್ಲದೆ ಅಶ್ವತ್ಥಾಮನ ಬಾಣಗಳು ನಡುವೆ ಬರಗಾಲವನ್ನು ಉಂಟುಮಾಡಿದುವು. ೮೨. ಬರಗಾಲದ ಮಧ್ಯದಲ್ಲಿ ಬರಸಿಡಿಲು ಇಡುಕುಮುಡುಕುಗಳಲ್ಲಿಯೇ ಶಬ್ದಮಾಡಿ ಹೋಯಿತು ಎನ್ನಿಸಿ ಅಶ್ವತ್ಥಾಮನ ಬಹಳ ಹರಿತವಾದ ಬಾಣಗಳು ಪಾಂಡ್ಯನ ರಥದ ಅಚ್ಚುಮುರಿದು ನಾಶವಾಗಿ ಕುಸಿಯುವಂತೆ ಹೊಡೆದುವು.

೮೩. ರಥವಿಲ್ಲದ ಕೋಪದಿಂದ ನಡುಗುತ್ತಿರುವ ತುಟಿಯಳ್ಳ ಪಾಂಡ್ಯನು ಮುರಿದು ಬೀಳಲು ಬಾವುಟವೂ ಪೂರ್ಣವಾಗಿ ಬಿರಿಯಲು (ಪಾಂಡ್ಯನು) ಅಶ್ವತ್ಥಾಮನ ಎದೆಯನ್ನೂ ಬಿರಿದುಹೋಗುವಂತೆ ಹೊಡೆದು ಆನೆಯ ಬೆನ್ನಿಗೆ ಬಂದನು. ವ|| ತಾನು ನಂಬಿದ್ದ ಆಯುಧಗಳೆಲ್ಲ ಹೊಸತಾಗಿ ಮಸೆಯಲ್ಪಟ್ಟು ರಾಶಿಯಾಗಿ ಹೊಳೆಯುತ್ತಿರಲು ಮದ್ದಾನೆಯನ್ನು ಅಂಕುಶದಿಂದ ತಿವಿದು ಪಾಂಡ್ಯನು ಅಶ್ವತ್ಥಾಮನ ಮೇಲೆ ಛೂಬಿಟ್ಟನು. ೮೪. ಈ ಮದ್ದಾನೆಯ ಬರುವಿಕೆಯೂ ಈತನ ಪರಾಕ್ರಮವೂ ಈ ಘೋರಯುದ್ಧದಲ್ಲಿ ನನ್ನನ್ನು ಶಕ್ತಿಹೀನನನ್ನಾಗಿ

ವ|| ಎಂಬಿನ್ನೆಗಂ ಪಾಂಡ್ಯನಶ್ವತ್ಥಾಮನ ರಥಮಂ ಮುಟ್ಟೆವಂದು-

ಕಂ|| ವಿಳಯಾನಳ ವಿಳಸನ ವಿ
ಸುಳಿಂಗ ಸಂಘಾತದಿಂ ತಗುಳ್ದಡರ್ವನಿತೊಂ|
ದಳವಿಯ ತೋಮರದಿಂದಿಡೆ
ಪೊಳೆವಸ್ತ್ರದೆ ಗುರುತನೂಜನೆಡೆಯೊಳೆ ಕಡಿದಂ|| ೮೫

ವ|| ಅಂತದಂ ಕಡಿದು ಕೂರಿದುವುಂ ನೇರಿದುವುದಮಪ್ಪಯ್ದಮೋಘಾಸ್ತ್ರಂಗಳಂ ಬಾಣಯಿಂದುರ್ಚಿಕೊಂಡು ತನ್ನ ಮನದೊಳೆ ಸಮಕಟ್ಟಿಕೊಂಡೆಚ್ಚಾಗಳ್-

ಕಂ|| ಕರಿಕರಮುಂ ಮಾವಂತನ
ಕರಮುಂ ತತ್ಪಾಂಡ್ಯಶಿರಮುಮೊಡನುರುಳೆ ಭಯಂ|
ಕರಮುಮನುರ್ವಿಗಗುರ್ವುಮ
ನೆರಡುಂ ಪಡೆಗಳ್ಗೆ ತೋಱದಂ ಗುರುತನಯಂ|| ೮೬

ವ|| ಅನ್ನೆಗಂ ಸಂಸಪ್ತಕನಿಕಾಯಮನತಿ ನಿಶಿತ ಸಾಯಕನಿಕಾಯದಿಂ ನಿಶ್ಯೇಷಮಾಗೆ ಮಾೞ್ಪ ಸಾಮಂತಚೂಡಾಮಣಿ ಕೌರವಬಲದ ಕಳಕಳಮಂ ಕೇಳ್ದು ಮನಪವನವೇಗದಿಂ ಜವನೆ ಬರ್ಪಂತೆ ಬಂದು ತಾಗಿದಾಗಳಕ್ಷೋಹಿಣೀ ನಾಯಕಂ ದಂಡಧಾರಂ ಗಂಡಗುಣಕ್ಕಾಧಾರಮಾಗಿ ಮದಗಳಿತ ಗಂಡ ಪ್ರಚಂಡ ಮದವೇತಂಡಮನಣೆದು ಬಿಟ್ಟಿಕ್ಕಿದಾಗಳ್-

ಉ|| ಕಾದಲಿದಿರ್ಚಿ ಬಂದ ಪಗೆ ಸಂಪಗೆಯಂತೆ ಶಿಳೀಮುಖಕ್ಕೆ ಗೆಂ
ಟಾದುದಿದೊಂದೆ ಸಿಂಧುರದೊಳಿಂತಿವನೊರ್ವನೆ ತಳ್ತನಾದೊಡೇ|
ನಾದುದೋ ಬಲ್ಲೆನೆಂದು ಮುಳಿದೆಚ್ಚೊಡೆ ಸೌಳನೆ ಸೀಳ್ದು ಪಚ್ಚವೋ
ಲಾದುದು ದಂಡಧಾರ ಗಜಮಾತನೊಡಲ್ವೆರಸಂದು ಪಾರ್ಥನಿಂ|| ೮೭

ವ|| ಅಂತಾತಂ ಕೃತಾಂತನಿವಾಸಮನೆಯ್ದುವುದುಂ-

ಕಂ|| ಇನ್ನಿನಿಸನಿರ್ದೇಡಾಜಿಯೊ
ಳೆನ್ನ ತನೂಜನುಮನೞಪಂ ನರನದನಿ|
ನ್ನಾನ್ನೋಡಲಾನೆಂಬವೊ
ಲನ್ನೆಗಮಸ್ತಾಚಳಸ್ಥನಾದಂ ದಿನಪಂ|| ೮೮

ಮಾಡಲು ಯೋಚನೆ ಮಾಡುತ್ತಿದೆಯಲ್ಲವೇ? ಪಾಂಡ್ಯನಂತಹವನೂ ಈ ಭೂಮಿಯಲ್ಲಿ ಇನ್ನೊಬ್ಬ ಶೂರನಿರುವನೇ? ನೇರವಾಗಿ ವೈರಿಯನ್ನು ಎದುರಿಸುವ ಸ್ಥೆ ರ್ಯದಲ್ಲಿ ಭೀಮನು ಕೂಡ ಇಂತಹ ಶಕ್ತಿಯುಳ್ಳವನಲ್ಲ, ಎನ್ನುವಾಗ ಹೋಲಿಕೆಮಾಡಲು ಇವನಿಗೆ ಸಮಾನರಾದವರು ಯಾರು ಇದ್ದಾರೆ? ವ|| ಎನ್ನುವಷ್ಟರಲ್ಲಿ ಪಾಂಡ್ಯನು ಅಶ್ವತ್ಥಾಮನ ತೇರಿನ ಸಮೀಪಕ್ಕೆ ಬಂದು ೮೫. ಪ್ರಳಯಾಗ್ನಿಯ ಪ್ರಕಾಶಮಾನವಾದ ಕಿಡಿಗಳ ಸಮೂಹದಿಂದ ಹಿಂಬಾಲಿಸಿ ಮೇಲೇರುವಷ್ಟು ಶಕ್ತಿಯುಳ್ಳ ತೋಮರವೆಂಬ ಆಯುಧ (ದೊಡ್ಡಗದೆ) ಹೊಡೆಯಲು ಅಶ್ವತ್ಥಾಮನು ಮಧ್ಯಮಾರ್ಗದಲ್ಲಿಯೇ ಅದನ್ನು ಕತ್ತರಿಸಿದನು. ವ|| ಹಾಗೆ ಅದನ್ನು ಕತ್ತರಿಸಿ ಹರಿತವೂ ಸರಳವೂ ಆದ ಬೆಲೆಯೇ ಇಲ್ಲದ ಅಯ್ದು ಬಾಣಗಳನ್ನು ಬತ್ತಳಿಕೆಯಿಂದ ಸೆಳೆದುಕೊಂಡು ತನ್ನ ಮನಸ್ಸಿನಲ್ಲಿಯೇ ಹೇಗೆ ಪ್ರಯೋಗಮಾಡಬೇಕೆಂದು ಸಿದ್ಧಾಂತಮಾಡಿಕೊಂಡು ಹೊಡೆದನು. ೮೬. ಆನೆಯ ಸೊಂಡಿಲೂ ಮಾವಟಿಗನ ಕೈಯೂ ಆ ಪಾಂಡ್ಯನ ತಲೆಯೂ ಜೊತೆಯಾಗಿಯೇ ಉರುಳಲು ಅಶ್ವತ್ಥಾಮನು ಲೋಕಕ್ಕೆ ಭಯಂಕರತ್ವವನ್ನೂ ಅದ್ಭುತವನ್ನೂ ಜೊತೆಯಲ್ಲಿಯೇ ತೋರಿದನು. ವ|| ಅಷ್ಟರಲ್ಲಿ ಸಂಸಪ್ತಕಸಮೂಹವನ್ನು ಬಹಳ ಹರಿತವಾದ ಬಾಣಗಳ ಸಮೂಹದಿಂದ ಸ್ವಲ್ಪವೂ ಉಳಿಯದ ಹಾಗೆ ಮಾಡುವ ಸಾಮಂತ ಚೂಡಾಮಣಿಯಾದ ಅರ್ಜುನನು, ಕೌರವಸೈನ್ಯದ ಕಳಕಳಶಬ್ದವನ್ನು ಕೇಳಿ ಮನೋವೇಗ ವಾಯುವೇಗದಿಂದ ಯಮನೇ ಬರುವ ಹಾಗೆ ಬಂದು ತಾಗಿದನು. ಅಕ್ಷೋಹಿಣೀಸೈನ್ಯದ ಒಡೆಯನಾದ ದಂಡಧಾರನು ಪೌರುಷಗುಣಕ್ಕೆ ಆಶ್ರಯವಾಗಿ ಮದೋದಕವು ಸುರಿಯುತ್ತಿರುವ ಕಪೋಲವುಳ್ಳ ಮದ್ದಾನೆಯನ್ನು ತಿವಿದು ಛೂಬಿಟ್ಟನು. ೮೭. ಅರ್ಜುನನೊಡನೆ ಕಾದಲು ಎದುರಸಿ ಬಂದ ಶತ್ರುವು ದುಂಬಿಗೆ ಎದುರಾದ ಸಂಪಗೆಯ ಹೂವಿನಂತೆ ದೂರವಾಯಿತು. ಇದೊಂದೇ ಆನೆಯೊಡನೆ ಇವನೊಬ್ಬನೆ ಪ್ರತಿಭಟಿಸಿದರೇನಾಯಿತು. ಇದಕ್ಕೆ ಪರಿಹಾರವನ್ನು ನಾನು ತಿಳಿದಿದ್ದೇನೆ. ಎಂದು ಕೋಪಿಸಿ ಹೊಡೆಯಲು ಅರ್ಜುನನಿಂದ ದಂಡಧಾರನ ಶರೀರದೊಡನೆ ಆ ಆನೆಯು ಸೌಳೆಂದು ಸೀಳಿ ವಿಭಾಗಿಸಿದ ಹಾಗಾಯಿತು. ವ|| ಹಾಗೆ ಅವನು ಯಮನ ಮನೆಯನ್ನು ಸೇರಲಾಗಿ ೮೮. ಇನ್ನು ಸ್ವಲ್ಪ

ವ|| ಅಂತು ಪತಂಗಮಂಡಲಮಪರಗಿರಿತಟಮನೆಯ್ದುವುದುಮೆರಡುಂ ಪಡೆಗಳಪಹಾರ ತೂರ್ಯಂಗಳಂ ಬಾಜಿಸಿ ತಂತಮ್ಮ ಬೀಡುಗಳ್ಗೆ ಪೋದುವಾಗಳ್ ರಾಜರಾಜನಲ್ಲಿಗಂಗರಾಜಂ ಬಂದು ಹಯೋಪಾಯಕುಶಲರಪ್ಪ ಗಾಂಗೇಯರಱಪಿದ ಮಾತನೇಕಾಂತ ದೊಳಱಪುವುದುಂ ತ್ರಿಣೇತ್ರನೊಳ್ ಕಲ್ತಶ್ವಹೃದಯದೊಳಂ ರಥಕಲ್ಪದೊಳಂ ಶಲ್ಯಂ ಮುಂರಾಂತಕಂಗಂ ಪ್ರವೀಣನಪ್ಪುದಱಂದಾತನ ನೆಂತಾನುಮೊಡಂಬಡೆ ನುಡಿದು ನಿನಗೆ ಸಾರಥಿ ಮಾಡುವೆನೆಂದು ದಿನಕರತನೂಜನಂ ಬೀಡಿಂಗೆ ಪೋಗಲ್ವೇೞ್ದು ಪೊನ್ನ ಪಣ್ಣುಗೆಯ ಪಿಡಿಯನೇಱ ದಿನಕರನ ಬೞದಪ್ಪಿದ ಕಿರಣಂಗಳ್ ಕೞ್ತಲೆಯಂ ಕಂಡಳ್ಕಿ ತನ್ನ ಮಯಂ ಪೊಕ್ಕಂತೆ ಕೆಯ್ದೀವಿಗೆಗಳ್ ಬೆಳಗೆ ಕಿಱದಾನುಂ ಮಾನಸರ್ವೆರಸು ರಾಜರಾಜಂ ಮದ್ರರಾಜನ ಮನೆಗೆ ಬರ್ಪುದುಮಾತನತ್ಯಂತ ಸಂಭ್ರಮಾಕ್ರಾಂತಹೃದಯನಾಗಿ ಬೇಗಮಿದಿರೇೞೆ-

ಮಲ್ಲಿಕಾಮಾಲೆ|| ಅಂತೆ ಕುಳ್ಳಿರಿರಪ್ಪೊಡಿಂ ನಿಮಗಾಣೆಯೆಂದಿರವೇೞಳಾ
ಕಾಂತನುಂ ತೊಡೆಸೋಂಕಿ ಕುಳ್ಳಿರೆ ಬಾೞ್ತೆಯುಳ್ಳೊಡೆ ನೀನೆ ಬ
ರ್ಪಂತುಟಾದುದೆ ಪೇೞ ನೀಂ ಬಿೞಯಟ್ಟಲಾಗದೆ ಕೆಮ್ಮನಿ
ನ್ನೆಂತುಮೇಂ ಮನೆವಾೞ್ತೆಯಂ ಬೆಸಸಲ್ಕೆ ಬಂದೆಯಿಳಾಪಾ.. ೮೯

ಕಂ|| ಬೆಸಸೆನೆಯುಂ ನುಡಿಯಲ್ ಶಂ
ಕಿಸಿದಪೆ ನಾನೆಂದೊಡೇಕೆ ಶಂಕಿಸುವೈ ನೀಂ|
ಬೆಸವೇೞೆನೆ ಜಯವಧು ಕೂ
ರ್ತೊಸೆದಿರ್ಕುಂ ಮಾವ ನಿಮ್ಮ ದಯೆಯಿಂದೆಮ್ಮಂ|| ೯೦

ಕಂ|| ಪುಸಿಯೆನೆ ರಥಮಂ ಹರಿ ಚೋ
ದಿಸುವಂತೆವೊಲಿರ್ದದೆಂತು ನರನಂ ಗೆಲಿಪಂ|
ವಿಸಸನದೊಳಂತೆ ನೀಮುಂ
ಪೆಸರಂ ಕರ್ಣಂಗೆ ಮಾಡಿ ಗೆಲ್ಲಂಗೊಳ್ಳಿಂ|| ೯೧

ವ|| ಎಂಬುದುಂ ಮದ್ರರಾಜನುಮ್ಮಚ್ಚರದೊಳುಮ್ಮನೆ ಬೆಮರ್ತು ಕಿನಿಸಿ ಕಿಂಕಿಱವೋಗಿ-

ಚಂ|| ಕಲಿಯನೆ ಪಂದೆ ಮಾೞ್ಪ ಕಡುವಂದೆಯನೊಳ್ಗಲಿ ಮಾೞ್ಪ ತಕ್ಕನಂ
ಪೊಲೆಯನೆ ಮಾೞ್ಪ ಮುಂ ಪೊಲೆಯನಂ ನೆ ತಕ್ಕನೆ ಮಾೞ್ಪ ತಮ್ಮೊಳ|
ಗ್ಗಲಿಸಿ ಪೊದೞ್ದು ಪರ್ವಿದವಿವೇಕತೆಯಿಂ ನೃಪಚಿತ್ತವೃತ್ತಿ ಸಂ
ಚಲಮದಱಂದಮೋಲಗಿಸಿ ಬಾೞ್ವುದೆ ಕಷ್ಟಮಿಳಾನಾಥರಂ|| ೯೨

ಕಾಲವಿದ್ದರೆ ಯುದ್ಧದಲ್ಲಿ ಅರ್ಜುನನು ನನ್ನ ಮಗನಾದ ಕರ್ಣನನ್ನೂ ಸಾಯಿಸುತ್ತಾನೆ. ಇದನ್ನು ನಾನು ನೋಡಲಾರೆ ಎನ್ನುವ ಹಾಗೆ ಅಷ್ಟರಲ್ಲಿ ಸೂರ್ಯನು ಮುಳುಗಿದನು. ವ|| ಯುದ್ಧವನ್ನು ನಿಲ್ಲಿಸಲು ಸೂಚನೆಕೊಡುವ ವಾದ್ಯವನ್ನು ಬಾಜಿಸಲು ಎರಡು ಸೈನ್ಯಗಳೂ ತಮ್ಮ ತಮ್ಮ ಬೀಡುಗಳಿಗೆ ತೆರಳಿದುವು. ಆಗ ದುರ್ಯೋಧನನಲ್ಲಿಗೆ ಕರ್ಣನು ಬಂದು ಅಶ್ವಶಾಸ್ತ್ರವನ್ನು ಚೆನ್ನಾಗಿ ತಿಳಿದ ಭೀಷ್ಮರು ತಿಳಿಸಿದ ಮಾತನ್ನು ರಹಸ್ಯವಾಗಿ ತಿಳಿಸಿದನು. ಮುಕ್ಕಣ್ಣನಾದ ಈಶ್ವರನಲ್ಲಿ ಕಲಿತ ಅಶ್ವಹೃದಯದಲ್ಲಿಯೂ ರಥಕಲ್ಪದಲ್ಲಿಯೂ ಶಲ್ಯನು ಶ್ರೀಕೃಷ್ಣನಿಗಿಂತಲೂ ಹೆಚ್ಚು ತಿಳಿದವನಾದುದರಿಂದ ಅವನನ್ನು ಹೇಗಾದರೂ ಮಾಡಿ ಒಪ್ಪುವ ಹಾಗೆ ಮಾಡಿ ನಿನಗೆ ಸಾರಥಿಯನ್ನಾಗಿ ಮಾಡುತ್ತೇನೆ ಎಂದು ಕರ್ಣನನ್ನು ಬೀಡಿಗೆ ಹೋಗಹೇಳಿದನು. ಚಿನ್ನದಿಂದ ಅಲಂಕಾರಮಾಡಿದ ಹೆಣ್ಣಾನೆಯನ್ನು ಹತ್ತಿಕೊಂಡು ಸೂರ್ಯನ ದಾರಿಯನ್ನು ತಪ್ಪಿದ ಕಿರಣಗಳು ಕತ್ತಲೆಯನ್ನು ಕಂಡು ಹೆದರಿ ತನ್ನ ಆಶ್ರಯವನ್ನು ಪ್ರವೇಶಿಸಿದ ಹಾಗೆ ಕೈದೀವಟಿಗೆಗಳು ಪ್ರಕಾಶಿಸಲು ಕೆಲವೇ ಪರಿಜನರೊಡನೆ ದುರ್ಯೋಧನನು ಮದ್ರರಾಜನಾದ ಶಲ್ಯನ ಮನೆಗೆ ಬಂದನು. ಅವನು ಅತ್ಯಂತ ಸಂಭ್ರಮದಿಂದ ಕೂಡಿದ ಮನಸ್ಸುಳ್ಳವನಾಗಿ ವೇಗದಿಂದ ಇದಿರಾಗಿ ಎದ್ದು ಬಂದನು- ೮೯. ಹಾಗೆಯೇ ಕುಳಿತುಕೊಳ್ಳಿ; ಇರದಿದ್ದರೆ ನಿಮ್ಮ ಮೇಲಾಣೆಯೆಂದು ಕುಳಿತುಕೊಂಡೇ ಇರಬೇಕೆಂದು ಹೇಳಿ ರಾಜನ ತೊಡೆಸೋಂಕಿನಷ್ಟು ಹತ್ತಿರ ಕುಳಿತುಕೊಂಡನು. “ಕಾರ್ಯವಿದ್ದರೆ ನೀನೇ ಬರುವ ಹಾಗಾಯಿತೇ ಹೇಳು, ನೀನು ದೂತರ ಮೂಲಕ ಹೇಳಿ ಕಳುಹಿಸ ಬಾರದಾಗಿತ್ತೇ? ಸುಮ್ಮನೆ ಇನ್ನು ನೀನೇ ಬಂದಮೇಲೆ ಹೇಗೆ? ರಾಜನೇ ಯಾವ ಗೃಹಕೃತ್ಯದ ಮಾತನ್ನು ತಿಳಿಸುವುದಕ್ಕೆ, ಆಜ್ಞೆ ಮಾಡುವುದಕ್ಕೆ ಬಂದಿರುವೆ” ೯೦. ಹೇಳು, ಎಂದರೂ ‘ನುಡಿಯುವುದಕ್ಕೆ ನಾನು ಸಂದೇಹಪಡುತ್ತೇನೆ’ ಎನ್ನಲು ‘ಏಕೆ ಸಂಕಿಸುತ್ತೀಯೆ. ಆಜ್ಞೆ ಮಾಡು’ ಎನ್ನಲು, ‘ಮಾವ, ಜಯಲಕ್ಷ್ಮಿಯ ನಿಮ್ಮದೆಯಯಿಂದ ನಮ್ಮನ್ನು ಪ್ರೀತಿಸಿ ಅನುರಾಗದಿಂದಿರುತ್ತಾಳೆ’ ೯೧. ಕೃಷ್ಣನು ಅರ್ಜುನನ ತೇರನ್ನು ನಡೆಸುವವನಂತೆ ನಟಿಸಿಕೊಂಡಿದ್ದು ಅರ್ಜುನನು ಗೆಲ್ಲುವಂತೆ ಹೇಗೆಮಾಡುವನೋ ಹಾಗೆಯೇ ಯುದ್ಧರಂಗದಲ್ಲಿ ನೀವೂ ಕೂಡ ಕರ್ಣನಿಗೆ ಹೆಸರನ್ನುಂಟುಮಾಡಿ ಗೆಲುವನ್ನು ಸಂಪಾದಿಸಿ ಕೊಡಬೇಕು’ ವ|| ಎನ್ನಲು ಶಲ್ಯನು ಕೋಪದಿಂದ ಬಿಸಿಬಿಸಿಯಾಗಿ ಬೆವರಿ ಕೆರಳಿ ಕಿಡಿ ಕಿಡಿಯಾದನು. ೯೨. ಶೂರನನ್ನು ಹೇಡಿಯಾಗಿ

ಅನುಪಮ ವಿಕ್ರಕ್ರಮಮುದಾರಗುಣಂ ಋತವಾಕ್ಯಮೆಂಬ ಪೆಂ
ಪೆನಲಿವು ಮೂ ನಾಲ್ಕೆ ಗುಣಮತ್ತ ಮದಾನ್ವಿತರಾಜಬೀಜಸಂ|
ಜನಿತಗುಣಂ ಮದಂ ಮದಮನಾಳ್ದವಿವೇಕತೆಯಿಂದಮಲ್ತೆ ತೊ
ೞನ ಮೊಲೆವಾಲನುಂಡ ಗುಣಮಿಂತಿವನಾರ್ ಕಿಡಿಪರ್ ನರೇಂದ್ರರೊಳ್|| ೯೩

ಉ|| ಪಿಂದೆ ಕಡಂಗಿ ತೇರನೆಸಗೆಂಬವನಂಬಿಗನಾಜಿ ರಂಗದೊಳ್
ಮುಂದೆ ಸಮಾನನಾಗಿ ಬೆಸದಿರ್ಪವನುಂ ತುಱುಕಾಱನಾಗೆ ಮ|
ತ್ಸ್ಯಂದನಚೋದನಕ್ರಮಮದುಂ ಪೊಲೆಯಂಗಮರ್ದಿಕುಮಂತುಟಂ
ನೀಂ ದಯೆಗೆಯ್ದು ಪೇೞ್ದೆಯಿದನಾರ್ ಪಡೆವರ್ ಫಣಿರಾಜಕೇತನಾ| ೯೪

ಕಂ|| ಎನಿತೊಲ್ಲದಿರ್ದೊಡಂ ಸ
ಜ್ಜನರುಂ ಪತಿಹಿತರುಮಱಯಮೇೞ್ಕುಂ ನೀನಿ|
ನ್ನೆನಿತಂ ಕೂರದೊಡಂ ನಿ
ನ್ನ ನುಡಿಯನಾನಾಜಿರಂಗದೊಳ್ ಮೀಱುವೆನೇ|| ೯೫

ವ|| ಎಂದು ನೊಂದು ನುಡಿದ ಮದ್ರರಾಜನ ನುಡಿಗೆ ಫಣಿರಾಜಕೇತನನಿಂತೆಂದಂ-

ಕಂ|| ನೀಮೆನಗಿನಿತಂ ಕೆಮ್ಮನೆ
ಮಾಮ ಮನಂ ನೊಂದು ಬೆಸಸಿದಿರ್ ಬಿನ್ನಪಮಂ|
ನೀಮವಧಾರಿಸಿಮೆಂತೆನೆ
ಸಾಮಾನ್ಯದ ಮನುಜನಲ್ಲನಂಗಮಹೀಶಂ|| ೯೬

ಕುಲಹೀನನೆ ಅಪ್ಪೊಡೆ ಕೇ
ವಲಬೋಧಂ ಪರಶುರಾಮನೇನೀಗುಮೆ ನಿ|
ರ್ಮಲಿಕುಲಂಗಲ್ಲದೆ ಪಿಡಿ
ಯಲ್ಲಲ್ಲದಂತಪ್ಪ ದಿವ್ಯಬಾಣಾವಳಿಯಂ|| ೯೭

ಮಣಿಕುಂಡಲಮುಂ ಕವಚಂ
ಮಣಿಯದ ಚಾರಿತ್ರಮುಗ್ರತೇಜಮುಮೀಯೊ|
ಳ್ಗುಣಮುಂ ಕಲಿತನಮುಮವೇಂ
ಪ್ರಣತಾರೀ ಸೂತಸುತನೊಳೊಡವುಟ್ಟುಗುಮೇ ೯೮

ಮಾಡುವ, ಪೂರ್ಣಹೇಡಿಯನ್ನು ಉತ್ತಮಶೂರನನ್ನಾಗಿ ಮಾಡುವ, ಯೋಗ್ಯನನ್ನು ಹೊಲೆಯನನ್ನಾಗಿ ಮಾಡುವ, ಮೊದಲು ಹೊಲೆಯನಾಗಿದ್ದವನನ್ನು ಪೂರ್ಣಯೋಗ್ಯನನ್ನಾಗಿ ಮಾಡುವ, ತಮ್ಮಲ್ಲಿ ಅತ್ಯಕವಾಗಿ ಹಬ್ಬಿರುವ ಅವಿವೇಕತೆಯಿಂದ ರಾಜರ ಮನಸ್ಸಿನ ಸ್ಥಿತಿ ಬಹಳ ಚಂಚಲವಾದುದು. ಆದುದರಿಂದ ರಾಜರನ್ನು ಸೇವೆ ಮಾಡಿ ಬಾಳುವುದೇ ಕಷ್ಟ. ೯೩. ಅಸಮಾನವಾದ ಪರಾಕ್ರಮದ ರೀತಿ, ಔದಾರ್ಯಗುಣ, ನೇರವಾದ ಸತ್ಯವಾಕ್ಕು, ಇವು ಮೂರು ನಾಲ್ಕೇ ಗುಣಗಳು. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ರಾಜವಂಶದಲ್ಲಿ ಹುಟ್ಟಿದ ಗುಣ (ವಂಶಮದ) ಅಹಂಕಾರ, ಅಹಂಕಾರದಿಂದ ಕೂಡಿದ ಅವಿವೇಕತೆ, ಇದರೊಡನೆ ಕೂಡಿದ ದಾದಿಯ ಮೊಲೆಹಾಲನ್ನು ಕುಡಿದ ಗುಣ ಇವುಗಳಲ್ಲವೇ? ೯೪. ಹಿಂದುಗಡೆ ಉತ್ಸಾಹದಿಂದ ಕೂಡಿ ತೇರನ್ನು ನಡೆಸು ಎನ್ನುವವನು ಅಂಬಿಗ, ಯುದ್ಧದಲ್ಲಿ ಮುಂಭಾಗದಲ್ಲಿ ನನಗೆ ಸಮಾನನಾಗಿ (ಸಾರಥಿಯಾಗಿ) ಕೆಲಸದಲ್ಲಿರುವವನು ದನಕಾಯವವನು (ಗೋವಳಿಗ). ರಥವನ್ನು ನಡೆಸುವ ನನ್ನ ರೀತಿಯದು ಹೊಲೆಯನಿಗೆ ಸರಿಯಾದುದಾಗಿ ಒಪ್ಪಿರಲು ಅಷ್ಟನ್ನು ನೀನು ದಯಮಾಡಿ ಹೇಳಿದೆಯಲ್ಲ ದುರ್ಯೋಧನ ಇಂತಹ ಅದೃಷ್ಟವನ್ನು ಯಾರು ತಾನೆ ಪಡೆಯುತ್ತಾರೆ? ೯೫. ಎಷ್ಟು ಮನಸ್ಸಿಗೆ ಒಪ್ಪದಿದ್ದರೂ ಸತ್ಪುರುಷರೂ ಪತಿಗೆ ಹಿತರಾದವರೂ ಒಪ್ಪಬೇಕು ತಾನೇ? ನೀನು ಇನ್ನೆಷ್ಟು ಪ್ರೀತಿಸದಿದ್ದರೂ ನಿನ್ನ ಮಾತನ್ನು ನಾನು ಯುದ್ಧರಂಗದಲ್ಲಿ ಮೀರುತ್ತೇನೆಯೇ? ವ|| ಎಂದು ವ್ಯಥೆಯಿಂದ ಆಡಿದ ಶಲ್ಯನ ಮಾತಿಗೆ ದುರ್ಯೋಧನನು ಹೀಗೆಂದನು. ೯೬. ಮಾವ ನೀವು ನನಗೆ ಇಷ್ಟನ್ನು ಮನಸ್ಸಿನಲ್ಲಿ ವೃಥಾ ವ್ಯಥೆಪಟ್ಟು ಹೇಳಿದಿರಿ, ನನ್ನ ವಿಜ್ಞಾಪನೆಯನ್ನು ನೀವು ಲಾಲಿಸಿ. ಹೇಗೆಂದರೆ ಕರ್ಣನು ಸಾಮಾನ್ಯ ಮನುಷ್ಯನಲ್ಲ. ೯೭. ಕುಲಹೀನನೇ ಆಗಿದ್ದರೆ ಆಧ್ಯಾತ್ಮಜ್ಞಾನಿಯಾದ ಪರಶುರಾಮನು ಪರಿಶುದ್ಧವಾದ ಕುಲದವರಲ್ಲದವರು ಹಿಡಿಯಲಾಗದ ದಿವ್ಯಾಸ್ತ್ರಸಮೂಹವನ್ನು ಅವನಿಗೆ ಕೊಡುತ್ತಿದ್ದನೇ? ೯೮. ವಿಧೇಯರಾದ ಶತ್ರುಗಳನ್ನುಳ್ಳ ಎಲೈ ಶಲ್ಯನೇಮಣಿಕುಂಡಲವೂ ಕವಚವೂ ಬಗ್ಗದ ನಡತೆಯೂ

ಕಲಿತನದ ನೆಗೞ್ದ ಕಸವರ
ಗಲಿತನದ ಪೊದೞ್ದ ಪರಮಕೋಟಿಗೆ ಪೆಱರಾರ್|
ಸಲೆ ಕರ್ಣನಲ್ಲದೆನಿಸುವ
ಕಲಿತನಮಂ ಹರಿಗೆ ಕವಚಮಿತ್ತುದೆ ಪೇೞ್ಗುಂ|| ೯೯

ವ|| ಎಂದು ಕುರುಕುಲಚೂಡಾಮಣಿ ಶಲ್ಯನ ಹೃಚ್ಛಲ್ಯಮೆಲ್ಲಮುಂ ಕೞಲೆ ನುಡಿದೊಡಾತ ನಿಂತೆಂದಂ-

ಚಂ|| ಅಱಯದೆಯುಂ ವಿಚಾರಸದೆಯುಂ ನೃಪ ನೀಂ ನೆಗೞ್ವನ್ನೆಯಲ್ಲೆಯಾ
ನಱವೆನದಂತೆ ಕರ್ಣನೆಣೆಗಂ ತೊಣೆಗಂ ನೃಪರಾರುಮಿಲ್ಲ ಬೆ|
ಳ್ಕು ರಿಪುಸೇನೆ ತೇರನೊಸೆದಾನೆಸಗುತ್ತಿರೆ ಕರ್ಣನಂ ಗೆಲಲ್
ನೆವರೆ ನಾಳೆ ಫಲ್ಗುಣನುಮಚ್ಯುತನುಂ ರಣರಂಗಭೂಮಿಯೊಳ್|| ೧೦೦

ಕಂ|| ಒಂದೆ ಗಡ ಹರಿಯ ಪೇೞೊಂ
ದಂದದೆ ನರನೆಸಗುವಂತೆ ಕರ್ಣನುಮೆನ್ನೆಂ|
ದೊಂದೋಜೆಯೊಳೆಸಗದೊಡಾಂ
ಸ್ಯಂದನದಿಂದಿೞದು ಪೋಪೆನೆಸಗೆಂ ತೇರಂ|| ೧೦೧

ಎಂಬುದುಮಂಗಮಹೀಪತಿ
ಯಂ ಬರಿಸಿ ಮಹಾಜಿಯಲ್ಲಿ ಮಾವಂ ತಾನೇ|
ನೆಂಬನದನಂತೆ ಮೀಱದೊ
ಡಂಬಡು ನೀನೆಂದು ಭೂಭುಜಂ ಪ್ರಾರ್ಥಿಸಿದಂ|| ೧೦೨

ವ|| ಅಂತಿರ್ವರುಮನೊರ್ವರೊರ್ವರೊಳೊಡಂಬಡಿಸಿ ತನ್ನೊಡನೆೞ್ದು ನಿಂದಿರ್ದ ಮದ್ರರಾಜನನಿರಲ್ವೇೞ್ದು ಕರ್ಣನುಂ ತಾನುಂ ನಿಜನಿವಾಸಂಗಳ್ಗೆ ಪೋದರಾಗಳಾ ಪಡೆಮಾತನಜಾತಶತ್ರು ಕೇಳ್ದು ಮುರಾಂತಕಂಗೆ ಬಿೞಯನಟ್ಟಿ ಬರಿಸಿ-

ಚಂ|| ಗೆಲಲರಿದುಂತೆ ಸೂತಸುತನಂ ರಣರಂಗದೊಳೆಂಬುದೊಂದು ಪಂ
ಬಲೆ ಪಿರಿದಂತವಂಗೊಸೆದು ತೇರೆಸಪಂ ಗಡ ನಾಳೆ ಶಲ್ಯನೀ|
ಕಲಹಮಿದೆಂತು ದಲ್ ಬಿದಿರ ಗಂಟುಗಳಂ ಕಳೆವಂತೆ ಮನ್ಮನ
ಸ್ಖಲನೆಯನುಂಟುಮಾಡಿದಪುದಿಲ್ಲಿಗೆ ಕಜ್ಜಮದಾವುದಚ್ಯುತಾ|| ೧೦೩

ಉಗ್ರವಾದ ತೇಜಸ್ಸೂ- ಈ ಒಳ್ಳೆಯ ಗುಣ ಮತ್ತು ತೇಜಸ್ಸು ಇವು ಸೂತಪುತ್ರನಲ್ಲಿ ಜೊತೆಯಾಗಿ ಹುಟ್ಟುತ್ತವೆಯೇ? ೯೯. ಶೌರ್ಯದ ಮತ್ತು ಪ್ರಸಿದ್ಧವಾದ ಔದಾರ್ಯದ ಪರಾಕಾಷ್ಠತೆಗೆ ಸಲ್ಲಲು ಕರ್ಣನಲ್ಲದೆ ಮತ್ತಾರಿದ್ದಾರೆ ಎನ್ನಿಸುವ ಶೌರ್ಯವನ್ನು ಇಂದ್ರನಿಗೆ ಕವಚವನ್ನು ಕೊಟ್ಟಿದ್ದೇ ಹೇಳುತ್ತದೆ. ವ|| ಎಂದು ಕುರುಕುಲಚೂಡಾಮಣಿಯಾದ ದುರ್ಯೋಧನನು ಶಲ್ಯನ ಹೃದಯದ ನೋವೆಲ್ಲವೂ ಸಡಿಲವಾಗುವಂತೆ ಹೇಳಲು ಅವನು ಹೀಗೆಂದನು. ೧೦೦. ರಾಜನೇ ನೀನು ತಿಳಿಯದೆಯೂ ವಿಚಾರಮಾಡದೆಯೂ ಕಾರ್ಯ ಮಾಡುವಂಥವನಲ್ಲ. ಅದನ್ನು ನಾನು ಬಲ್ಲೆ. ಕರ್ಣನಿಗೆ ಸಮಾನರಾದ ರಾಜರಾರೂ ಇಲ್ಲ. ಶತ್ರುಸೈನ್ಯಕ್ಕೆ ಭಯವಾಗುವ ರೀತಿಯಲ್ಲಿ ನಾನು ಪ್ರೀತಿಯಿಂದ (ಮನಪೂರ್ವಕವಾಗಿ) ತೇರನ್ನು ನಡೆಸುತ್ತಿದ್ದರೆ ನಾಳೆ ಕೃಷ್ಣನೂ ಅರ್ಜುನನೂ ಯುದ್ಧಭೂಮಿಯಲ್ಲಿ ಕರ್ಣನನ್ನು ಗೆಲ್ಲಲು ಸಮಥರಾಗುತ್ತಾರೆಯೇ? ೧೦೧. ಆದರೆ ಒಂದು ವಿಷಯ, ಕೃಷ್ಣನು ಹೇಳಿದ ರೀತಿಯಲ್ಲಿ ಅರ್ಜುನನು ಮಾಡುವಂತೆ ಕರ್ಣನೂ ನಾನು ಹೇಳಿದ ಕ್ರಮದಲ್ಲಿ ಮಾಡದೇ ಹೋದರೆ ತೇರನ್ನು ಇಳಿದು ಹೋಗುತ್ತೇನೆ. ತೇರನ್ನು ನಡೆಸುವುದಿಲ್ಲ. ೧೦೨. ಎನ್ನಲು ಕರ್ಣನನ್ನು ಬರಮಾಡಿ ಈ ಮಹಾಯುದ್ಧದಲ್ಲಿ ಮಾವನು ತಾನೇನು ಹೇಳುತ್ತಾನೆಯೋ ನೀನು ಅದನ್ನು ಹಾಗೆಯೇ ಮೀರದೆ ಒಪ್ಪಿಕೊ ಎಂದು ಮಹಾರಾಜನು ಪ್ರಾರ್ಥಿಸಿದನು. ವ|| ಹಾಗೆ ಇಬ್ಬರನ್ನೂ ಒಬ್ಬರನ್ನೊಬ್ಬರು ಒಪ್ಪುದ ಹಾಗೆ ಮಾಡಿ ತನ್ನೊಡನೆ ಎದ್ದು ನಿಂತಿದ್ದ ಶಲ್ಯನನ್ನು ಅಲ್ಲಿಯೇ ಇರಲು ಹೇಳಿ ಕರ್ಣನೂ ತಾನೂ ತಮ್ಮ ಮನೆಗಳಿಗೆ ಹೋದರು. ಈ ಸಮಾಚಾರವನ್ನು ಧರ್ಮರಾಯನು ಕೇಳಿ ಕೃಷ್ಣನಲ್ಲಿಗೆ ದೂತರನ್ನು ಕಳುಹಿಸಿ ಬರಮಾಡಿ ೧೦೩. ಯುದ್ಧರಂಗದಲ್ಲಿ ಕರ್ಣನನ್ನು ಸುಮ್ಮನೆ (ಯಾರ ಸಹಾಯವಿಲ್ಲದೆ ಏಕಾಕಿಯಾಗಿರುವಾಗಲೇ)ಗೆಲ್ಲಲು ಸಾಧ್ಯವಿಲ್ಲವೆಂಬ ಚಿಂತೆಯೇ ಹಿರಿದಾಗಿದೆ. ಅಂತಹ ಅವನಿಗೆ ನಾಳೆ ಪ್ರೀತಿಯಿಂದ ಶಲ್ಯನು ತೇರನ್ನು ನಡೆಸುತ್ತಾನಂತೆ. ಈ ಯುದ್ಧದಲ್ಲಿ ನಾವು ಹೇಗೆ ಗೆಲ್ಲುವುದು? ಬಿದಿರಿನ ಗಿಣ್ಣುಗಳನ್ನು ಒಡೆಯುವಂತೆ ನನ್ನ ಮನಸ್ಥೆ ರ್ಯವನ್ನು

ವ|| ಎಂಬುದುಂ ನೀನೆಂದಂತೆ ರಥಕಲ್ಪಮೆಂಬುದು ಶಲ್ಯಂಗೊಡವುಟ್ಟಿದುದಾದೊಡ ಮವರಿರ್ವರ್ಗಮೊರ್ವರೊರ್ವರೊಳ್ ಮೂಗುದುಱಸಲಾಗದ ಕಡ್ಡಮವರ್ಗೆಂತುಮೊಡಂಬಡಾಗದ ದಲ್ಲದೆಯುಂ-

ಸ್ರ|| ಕರ್ಣಂಗಂಡಲ್ತೆ ಕಲ್ತರ್ ನುಡಿವ ಪಸುಗೆಯಂ ಗಂಡರಾ ಗಂಡವಾತುಂ
ಕರ್ಣಂ ಮುಂ ಪುಟ್ಟೆ ಪುಟ್ಟಿತ್ತಳವಮರ್ದೊಡವುಟ್ಟಿತ್ತು ಪೂಣ್ದೀವ ಚಾಗಂ|
ಕರ್ಣಂಗೊಡ್ಡಿತ್ತು ದಲ್ ಭಾರತಮೆನೆ ಜಗದೊಳ್ ಸಂದನೇಂ ಸಂದೊಡಾಂತಾ
ಕರ್ಣಾಂತಾಕೃಷ್ಟ ಬಾಣಾವಳಿಯೊಳೆ ಹರಿಗಂ ಕರ್ಣನಂ ನಾಳೆ ಕೊಲ್ಗುಂ| ೧೦೪

ಕಂ|| ಎಂಬಿನೆಗಮಾಗಳಾ ವಿಕ
ಚಾಂಬುಜಸೌರಭಮನೊಸೆದು ಸೇವಿಸುವಾ ಪೆ
ಣ್ದುಂಬಿಗಳ ಸರಮನೆತ್ತಿ ತ
ಱುಂಬುತ್ತುಂ ಬಂದುದಾ ಪ್ರಭಾತಸಮೀರಂ|| ೧೦೫

ಸೂತ ನಟ ವಂದಿ ಮಾಗಧ
ವೈತಾಳಿಕ ಕಥಕ ಪುಣ್ಯಪಾಠಕ ವಿಪ್ರೋ|
ದ್ಭೂತರವಮೆಸೆಯೆ ಜಯ ಜಯ
ಗೀತಿಗಳೊರ್ಮೊದಲೆ ತಡೆಯದೆರಡುಂ ಪಡೆಯೊಳ್|| ೧೦೬

ಎರಡುಂಪಕ್ಕಮನೆಱಗಿದ
ಕರಿಗಳ್ ಪಾರ್ದೆಯ್ದೆ ವೇಱ್ದ ಕೊರಲ ಸರಂಬೆ|
ತ್ತಿರೆ ಮುರಿವಿಟ್ಟೀಹೇಷಾ
ಸ್ವರಮಂ ತೋಱದಪುವಲ್ಲಿ ನೃಪ ತುರಗಂಗಳ್|| ೧೦೭

ಇಂದೆನ್ನ ಮಗನನರ್ಜುನ
ನೊಂದುಂ ತಳ್ವಿಲ್ಲದೞವನವನಂ ನೀಂ ಕಾ||
ಯೆಂದು ಸುರಪತಿಯ ಕಾಲ್ವಿಡಿ
ವಂದಮನಿೞಸಿದುವು ಪಸರಿಪಿನಕಿರಣಂಗಳ್|| ೧೦೮

ವ|| ಆಗಳಂಗರಾಜಂ ತನ್ನಂ ಪರಿಚ್ಛೇದಿಸಿ ನೇಸಱ್ ಮೂಡೆಯಾಜ್ಯಾವೇಕ್ಷಣಂಗೆಯ್ದು ಸವತ್ಸ ಸುರಭಿಯನಭಿವಂದಿಸಿ ನಿಜ ರಥ ತುರಗ ದಿವಾಸ್ತ್ರಂಗಳುೞಯೆ ಪಸುರ್ಮಣಿಯನಪ್ಪೊಡ ಮುೞಯದಂತು ಚಾಗಂಗೆಯ್ದು ಚಾಗ ಬೀರದ ಪೞಯಿಗೆಯನೆತ್ತಿಸಿ ಪಂಚರತ್ನ