ವ|| ಅಂತು ದ್ರುಪದನೞವಂ ಕಂಡಾತನ ತಮ್ಮಂದಿರಪ್ಪ ಶತಾನೀಕ ಶತಚಂದ್ರರ್ ಮೊದಲಾಗೆ ಪನ್ನೊರ್ವರುಮಯ್ವರ್ ಕೈಕಯರುಂ ಕುಂತಿಯ ಮಾವನಪ್ಪ ಕುಂತಿಭೋಜನುಂಬೆರಸು ಪದಿನಾಲ್ಸಾಸಿರ ರಥಂಬೆರಸು ಬಂದು ತಾಗಿದೊಡೆ-

ಮ|| ಶಕಟಂಗಳ್ ಪದಿನೆಂಟು ಕೋಟಿವರೆಗಂ ತೀವಿರ್ದನೇಕೋಗ್ರ ಸಾ
ಯಕದಿಂದಂ ಚತುರಂಗ ಸಾಧನದ ಮೆಯ್ಮೆಯ್ಯೊಳ್ ಜಿಗಿಲ್ತಾಂತ ನಾ|
ಯಕರಂ ಸುಂಟಗೆಯಾಱದಂತೆ ರಥದೊಳ್ ಜೋಲ್ವನ್ನೆಗಂ ಕೋದು ಚಾ
ಪ ಕಳಾಕೌಶಳಮಂ ಜಗಕ್ಕೆ ಮೆದಂ ಮೆಯ್ವೆರ್ಚಿ ಕುಂಭೋದ್ಭವಂ|| ೨೪

ವ|| ಅಂತು ದ್ರುಪದ ದ್ರುಪದಾನುಜ ವಿರಾಟ ವಿರಾಟಾನುಜ ಕೈಕಯ ಕುಂತಿ ಭೋಜಾದಿಗಳಪ್ಪ ನಾಯಕರೆಲ್ಲರುಮಂ ಪೇೞೆ ಪೆಸರಿಲ್ಲದಂತೆ ಕೊಂದು ಮುಂದಾಂಪರಾರುಮಿಲ್ಲದಿಕ್ಕಿ ಗೆಲ್ದ ಮಲ್ಲನಿರ್ದಂತಿರ್ದಾಗಳ್-

ಮ|| ಸಕಲಾರಾತಿ ನರೇಂದ್ರಮೌಳಿಗಳುರುಳ್ದಾ ದೀಪ್ತ ರತ್ನಾಂಶು ಮಾ
ಳಿಕೆಯಿಂದಾ ರಣರಂಗಮಂ ಬೆಳಗೆ ಕಾೞರ್ಚೆಂದು ಭೂತಾಂಗನಾ|
ನಿಕರಂ ಶೋಣಿತವಾರಿಯಂ ಕುಡಿದಗುರ್ವಪ್ಪನ್ನೆಗಂ ಸೂಸೆ ನೋ
ಡ ಕವಿಲ್ತಿರ್ದುದು ಕೂಡೆ ಸಂಜೆಗವಿದಂತಾ ದ್ರೋಣನಿಂ ಕೊಳ್ಗುಳಂ|| ೨೫

ವ|| ಆಗಳ್ ಯುಷ್ಠಿರಂ ನಾರಾಯಣಂ ಪೇೞ್ದ ಕಪಟೋಪದೇಶದಿಂ ದ್ರೋಣನಂ ಕೆಯ್ದೆ ಮಾಡಲೆಂದು ಪಾಂಡ್ಯ ಗಜಘಟೆಗಳನಿದಿರೊಳ್ ತಂದೊಡ್ಡಿದಾಗಳ್-

ಕಂ|| ನಿಶಿತ ವಿಶಿಖಂಗಳಿಂದೊಂ
ದಶನಿಯೆ ಗಿರಿಕುಲಮನಳಱುವಂತೆ ಮದೇಭ|
ಪ್ರಸರ ಸಹಸ್ರಂ ಕೆಡೆದುವು
ವಿಸಸನದೊಳ್ ದ್ರೋಣನಿದಿರ್ಗೆ ಮಾರ್ವಲಮೊಳವೇ|| ೨೬

ವ|| ಅಂತು ತನಗೆ ಮಾಱುಂತ ಮದಾಂಧಸಿಂಧುರಂಗಳಂ ಸಿಂಧುರಂಗಳಂ ಸಿಂಧುರಾರಾತಿಯೆ ಕೊಲ್ವಂತೆ ಕೊಲೆ-

ಕಂ|| ಸಾಮಜಮಶ್ವತ್ಥಾಮಂ
ನಾಮದಿ ನೊಂದೞದೊಡಲ್ಲಿ ಕಂಡು ಹತೋಶ್ವ|
ತ್ಥಾಮಾ ಎನೆ ನೃಪನಶ್ವ
ತ್ಥಾಮನೆ ಗೆತ್ತೊಣರ್ದನೊವಜನೊರ್ವೆಸರಿಭಮಂ|| ೨೭

ಯುದ್ಧಮಾಡುವ ಶಕ್ತಿಯುಳ್ಳವನೇನೋ ಹೌದು; ಆದರೇನು? ಇನ್ನಿವನನ್ನು ಕೆಳಗುರುಳಿಸುತ್ತೇನೆಂದು ಸಾವಕಾಶಮಾಡದೆ ಭಾರ್ಗವಾಸ್ತ್ರದಿಂದ ಕೂಡಿಕೊಂಡು ದ್ರುಪದ ರಾಜನ ತಲೆಯೆಂಬ ಕಮಲವನ್ನು ದ್ರೋಣನು ಕತ್ತರಿಸಿದನು. ವ|| ಹಾಗೆ ದ್ರುಪದನ ಸಾವನ್ನು ನೋಡಿದ ಆತನ ತಮ್ಮಂದಿರಾದ ಶತಾನೀಕ ಶತಚಂದ್ರರೇ ಮೊದಲಾದ ಹನ್ನೊಂದು ಜನವೂ ಅಯ್ದು ಮಂದಿ ಕೈಕೆಯರೂ ಕುಂತಿಯ ಮಾವನಾದ ಕುಂತಿಭೋಜನೂ ಕೂಡಿ ಹದಿನಾಲ್ಕು ಸಾವಿರರಥದೊಡನೆ ಬಂದು ತಾಗಿದರು. ೨೪. ಹದಿನೆಂಟು ಕೋಟಿಯವರೆಗೂ ತುಂಬಿದ ಗಾಡಿಗಳ ಅತಿಭಯಂಕರವಾದ ಬಾಣಗಳಿಂದ ಒಂದೊಂದು ಮೈಯ್ಯಲ್ಲಿಯೂ ಅಂಟಿಕೊಂಡು, ಪ್ರತಿಭಟಿಸಿದ ನಾಯಕರ, ಸೇನಾಪತಿಗಳ ಸುಟ್ಟ ಮಾಂಸವನ್ನು ಆರಲಿಟ್ಟಿರುವ ಹಾಗೆ ಜೋತು ಬೀಳುತ್ತಿರುವಂತೆ ರಥದಲ್ಲಿ ಪೋಣಿಸಿ (ನೇತುಹಾಕಿ-ಜೋಲುಬಿಟ್ಟು) ದ್ರೋಣನು ಮಯ್ಯುಬ್ಬಿ ತನ್ನ ವಿದ್ಯಾಕೌಶಲವನ್ನು ಪ್ರದರ್ಶಿಸಿದನು. ವ|| ಹೀಗೆ ದ್ರುಪದ, ದ್ರುಪದನ ತಮ್ಮ, ವಿರಾಟ, ವಿರಾಟನ ತಮ್ಮ ಕೈಕೆಯ, ಕುಂತೀಭೋಜನೇ ಮೊದಲಾದ ನಾಯಕರೆಲ್ಲರನ್ನೂ ಹೇಳುವುದಕ್ಕೂ ಒಂದು ಹೆಸರಿಲ್ಲದಂತೆ ಕೊಂದು ಪ್ರತಿಭಟಿಸುವವರಾರೂ ಇಲ್ಲದಂತೆ ಸಂಹರಿಸಿ ಗೆದ್ದ ಜಟ್ಟಿಯಿದ್ದಂತೆ ಇದ್ದನು. ೨೫. ಸಮಸ್ತ ಶತ್ರುರಾಜರ ಕಿರೀಟಗಳುರುಳಿ ಆ ರತ್ನಕಿರಣಗಳ ಸಮೂಹದಿಂದ ಆ ರಣರಂಗವು ಕೆಂಪಗೆ ಪ್ರಕಾಶಮಾನವಾಯಿತು. ಅದು ಕಾಡ್ಗಿಚ್ಚೆಂದು ಪಿಶಾಚಸ್ತ್ರೀಯರ ಸಮೂಹವು ಬಂದು ರಕ್ತಜಲವನ್ನು ಕುಡಿದು ಭಯಂಕರವಾಗುವ ಹಾಗೆ ಚೆಲ್ಲಾಡಿತು. ಆ ದ್ರೋಣನಿಂದ ಆ ಯುದ್ಧಭೂಮಿಯು ಸಂಜೆಕವಿದಂತೆ ಮಾಸಲು ಕೆಂಪುಬಣ್ಣದಿಂದ ಕೂಡಿದ್ದಿತು. ವ|| ಆಗ ಧರ್ಮರಾಜನು ಕೃಷ್ಣನು ಹೇಳಿದ ಕಪಟೋಪದೇಶದಿಂದ ದ್ರೋಣನನ್ನು ವಶಪಡಿಸಿಕೊಳ್ಳಬೇಕೆಂದು ಪಾಂಡ್ಯರ ಆನೆಗಳ ಸಮೂಹವನ್ನು ಎದುರಾಗಿ ತಂದೊಡ್ಡಿದನು. ೨೬. ಹರಿತವಾದ ಬಾಣಗಳಿಂದ ಒಂದು ವಜ್ರಾಯುಧವೇ ಪರ್ವತಗಳ ಸಮೂಹವನ್ನು ನಾಶಮಾಡುವ ಹಾಗೆ ಸಾವಿರ ಮದ್ದಾನೆಯ ಗುಂಪು ಯುದ್ಧರಂಗದಲ್ಲಿ ಕೆಡೆದುಬಿದ್ದುವು. ದ್ರೋಣನಿಗಿದಿರಾಗುವ ಪ್ರತಿಬಲವುಂಟೇ? ವ|| ಹಾಗೆ ತನಗೆ ಪ್ರತಿಭಟಿಸಿದ ಮದ್ದಾನೆಗಳನ್ನು ಸಿಂಹವು ಕೊಲ್ಲುವ ಹಾಗೆ ಕೊಂದನು. ೨೭. ಅಶ್ವತ್ಥಾಮನೆಂಬ

ಒಗೆದ ಸುತಶೋಕದಿಂದಾ
ವಗೆಯಂತೊಳಗುರಿಯೆ ಭೋಂಕನೆರ್ದೆ ತೆಯಲ್ ಹಾ|
ಮಗನೇ ಎಂದಶ್ರುಜಲಾ
ರ್ದ್ರಗಂಡನಾ ಗಂಡಿನೊಡನೆ ಬಿಸುಟಂ ಬಿಲ್ಲಂ ೨೮

ವ|| ಅಂತು ಬಿಸುಟು ವಿಚ್ಛಿನ್ನ ವೀರರಸನುಮುತ್ಪನ್ನ ಶೋಕರಸನುಮಾಗಿ ನಿಜ ವರೂಥಮಂ ಧರ್ಮಪುತ್ರನ ಸಮೀಪಕ್ಕುಯ್ದು ಮಗನ ಮಾತಂ-

ಚಂ|| ಬೆಸಗೊಳೆ ಕುಂಜರಂ ಮಡಿದುದೆಂದು ಮಹೀಭುಜನುಳ್ಳ ಮಾೞ್ಕೆಯಿಂ
ಪುಸಿಯದೆ ಪೇೞ್ದೊಡಂ ಕಿಱದು ನಂಬದೆಯುಂ ರಣದಲ್ಲಿ ಮುನ್ನೆ ಬಿ|
ಲ್ವಿಸುಟೆನಿದೆಂತು ಪೇೞ್ ಪಿಡಿವೆನಿನ್ನಿದನೆಂದಿರದಾತ್ಮಯೋಗಿ ತ
ನ್ನಸುವನುದಾತ್ತಯೋಗದೊಳೆ ಬಿಲ್ಲೊವಜಂ ಕಳೆದಂ ರಣಾಗ್ರದೊಳ್ ||೨೯

ವ|| ಅಂತು ಭಾವಿತಾತ್ಮನಧ್ಯಾತ್ಮ ವಿಶಾರದನಾಗಿ ಪರಮಾತ್ಮನೊಳ್ ಕೂಡಿದನಾಗಳ್ ಪೆಣನನಿಱದು ಪಗೆಗೊಂಡರೆಂಬ ನಾಣ್ಣುಡಿಯಂ ನನ್ನಿ ಮಾಡಿ ತಮ್ಮಯ್ಯಂ ಸತ್ತ ಮುಳಿಸಿನೊಳ್ ಕಣ್ಗಾಣದೆ ಧೃಷ್ಟದ್ಯುಮ್ನಂ ಧರ್ಮತನೂಜಂ ಬಾರಿಸೆ ವಾರಿಸೆ-

ಕಂ|| ಕರವಾಳಂ ಘರಮಟ್ಟಿಸಿ
ಶಿರೋಜಮಂ ಪಿಡಿದು ತೆಗೆದು ಗುರುವಂ ಪಚ್ಚಂ|
ತಿರೆ ಪಿರಿದು ಪೊಯ್ದನೆಂತ
ಪ್ಪರೊಳಂ ಮುಳಿಸಱವನಾಗಲೇನಿತ್ತಪುದೇ|| ೩೦

ವ|| ಅಂತು ದ್ರೋಣನೆಳೆಗೋಣ ಸಾವಂ ಸಾವುದುಂ ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮನೊಂದು ತಲೆಯಾಗೋಡುವ ಕೌರವಧ್ವಜಿನಿಯುಮಂ ಬೇಂದು ಮೊನೆಯೊಳ್ ಕಾದುತಿರ್ದಶ್ವತ್ಥಾಮಂ ಕಂಡು ಮುಟ್ಟೆವರ್ಪನ್ನೆಗಂ ಶೋಣಾಶ್ವೋಪಲಕ್ಷಿತ ನಿಜಪಿತೃ ಸೂತ ಕೇತನ ಕಥಿತಮಾಗಿರ್ದ ರಥಮನುಪಲಕ್ಷಿಸಿ ನೋಡಿ ತಮ್ಮಯ್ಯನತೀತನಾದುದನಱದು-

ಚಂ|| ಒತುಗುತರ್ಪ ಕಣ್ಬನಿಗಳಂ ಬರಲೀಯದೆ ಕೋಪ ಪಾವಕಂ
ನಿಱಸೆ ಕನಲ್ದು ರೋಷದಿನಪಾಂಡವಮಾಗಿರೆ ಮಾಡದಂದು ಬಿ|
ಲ್ಲೆಯನ ಪುತ್ರನಲ್ಲೆನೆನುತುಂ ಗುರುಪುತ್ರನಿದಿರ್ಚೆ ಭೀತಿಯಿಂ
ಮಱುಗಿ ತೆರಳ್ದು ತೂಳ್ದಿ ಸುೞಗೊಂಡುದು ಪಾಂಡವ ಸೈನ್ಯಸಾಗರಂ|| ೩೧

ಹೆಸರಿನ ಆನೆಯೊಂದು ಯುದ್ಧರಂಗದಲ್ಲಿ ಸಾಯಲು ಧರ್ಮರಾಯನು ನೋಡಿ ‘ಹತೋಶ್ವತ್ಥಾಮ’ (ಅಶ್ವತ್ಥಾಮ ಹತನಾದನು) ಎಂದು ಘೋಷಿಸಿದನು. ಗುರುವಾದ ದ್ರೋಣನು ಒಂದೇ ಹೆಸರಿನ ಆನೆಯನ್ನು (ನಾಮಸಾದೃಶ್ಯದಿಂದ) ಮಗನಾದ ಅಶ್ವತ್ಥಾಮನೆಂದೇ ಭಾವಿಸಿ ದುಖಿಸಿದನು. ೨೮. ಉಂಟಾದ ಪುತ್ರಶೋಕದಿಂದ ಕುಂಬಾರರ ಆವುಗೆಯ ಒಲೆಯಂತೆ ಮನಸ್ಸು ಉರಿಯಲು ಇದ್ದಕ್ಕಿದ್ದ ಹಾಗೆ ಎದೆಯು ಬಿರಿಯಲು ‘ಅಯ್ಯೋ ಮಗನೆ’ ಎಂದು ಕಣ್ಣೀರಿನಿಂದ ತೊಯ್ದ ಕೆನ್ನೆಯುಳ್ಳವನಾಗಿ ತನ್ನ ಪೌರುಷದೊಡನೆ ಬಿಲ್ಲನ್ನೂ ಬಿಸಾಡಿದನು. ವ|| ಕತ್ತಿಯನ್ನೆಸೆದು ವೀರರಸವಿರಹಿತನಾಗಿ ದುಖರಸದಿಂದ ಕೂಡಿ ತನ್ನ ತೇರನ್ನು ಧರ್ಮರಾಯನ ಸಮೀಪಕ್ಕೆ ತೆಗೆದುಕೊಂಡುಹೋಗಿ ಮಗನ ಮಾತನ್ನು ೨೯. (ವಾಸ್ತವಾಂಶವೇನೆಂದು) ಪ್ರಶ್ನೆಮಾಡಲು ಆನೆಯು ಸತ್ತಿತೆಂದು ರಾಜನು (ಸತ್ಯವಾಗಿ) ಇರುವ ರೀತಿಯಲ್ಲಿಯೇ ಹುಸಿಯದೆ ಹೇಳಿದರೂ ಸ್ವಲ್ಪವೂ ನಂಬದೆ “ಯುದ್ಧದಲ್ಲಿ ಈ ಮೊದಲು ಬಿಲ್ಲನ್ನು ಬಿಸಾಡಿದ್ದೇನೆ. ಪುನ ಅದನ್ನು ಹೇಗೆ ಹಿಡಿಯಲಿ ಹೇಳು” ಎಂದು ಆತ್ಮಯೋಗಿಯಾದ ದ್ರೋಣನು ಸಾವಕಾಶಮಾಡದೆ ತನ್ನ ಪ್ರಾಣವನ್ನು ಉದಾತ್ತವಾದ ಯೋಗಮಾರ್ಗದಲ್ಲಿ ಯುದ್ಧಮುಖದಲ್ಲಿ ನೀಗಿದನು. ವ|| ಹಾಗೆ ಆತ್ಮಧ್ಯಾನಪರನಾದ ದ್ರೋಣನು ಆಧ್ಯಾತ್ಮಪರಾಯಣನಾಗಿ ಪರಮಾತ್ಮನಲ್ಲಿ ಕೂಡಿದನು. ಆಗ ‘ಹೆಣವನ್ನು ಕತ್ತರಿಸಿ ಹಗೆಯನ್ನು ತೀರಿಸಿಕೊಂಡರು’ ಎಂಬ ಗಾದೆಯ ಮಾತನ್ನು ಸತ್ಯವನ್ನಾಗಿ ಮಾಡಿ ತಮ್ಮಯ್ಯನಾದ ದ್ರುಪದನು ಸತ್ತ ಕೋಪದಿಂದ ಬುದ್ಧಿಶೂನ್ಯನಾಗಿ ದೃಷ್ಟದ್ಯುಮ್ನನು ಧರ್ಮರಾಜನು ಬೇಡವೆಂದು ತಡೆದರೂ- ೩೦. ಕತ್ತಿಯನ್ನು ಬೀಸಿ ಕದಲನ್ನು ಹಿಡಿದೆಳೆದು ಗುರುವನ್ನು ಎರಡುಭಾಗ ಮಾಡಿದ ಹಾಗೆ ಘಟ್ಟಿಯಾಗಿ ಹೊಡೆದನು. ಕೋಪವು ಎಂತಹವರಲ್ಲಿಯೂ ವಿವೇಕವುಂಟಾಗಲು ಅವಕಾಶ ಕೊಡುತ್ತದೆಯೇ ಏನು? ವ|| ಹಾಗೆ ದ್ರೋಣನು ಎಳೆದು ತಂದು ಕೋಣನ ಸಾವಿನ ಮಾದರಿಯ ಸಾವನ್ನು (ಎಳಗೋಣಸಾವು) ಸಾಯಲಾಗಿ ಶಬ್ದಮಾಡಿ ಆರ್ಭಟ ಮಾಡುವ ಪಾಂಡವಸೈನ್ಯವನ್ನೂ ಒಂದೇದಿಕ್ಕಿಗೆ ತಲೆತಿರುಗಿಸಿಕೊಂಡು ಓಡುವ ಕೌರವ ಸೈನ್ಯವನ್ನೂ ಯುದ್ಧಭೂಮಿಯ ಮತ್ತೊಂದೆಡೆಯಲ್ಲಿ ಕಾದುತ್ತಿದ್ದ ಅಶ್ವತ್ಥಾಮನು ನೋಡಿದನು. ಹತ್ತಿರ ಬರುವಷ್ಟರಲ್ಲಿ ಕೆಂಪುಕುದುರೆಗಳಿಂದ ಗುರುತಿಸಲ್ಪಟ್ಟ ತನ್ನ ತಂದೆ, ಸಾರಥಿ, ಧ್ವಜಗಳಿಂದ ಕೂಡಿದ್ದ ತೇರನ್ನು ದೃಷ್ಟಿಸಿ ನೋಡಿ ತಮ್ಮ ತಂದೆಯು ಸತ್ತು ಹೋಗಿದ್ದುದನ್ನು ತಿಳಿದನು. ೩೧. ಜಿನುಗಿ ಸೋರುತ್ತಿದ್ದ ಕಣ್ಣೀರಿನ ಹನಿಗಳನ್ನು ತಡೆದುಕೊಂಡು ಕೋಪಾಗ್ನಿಯು

ವ|| ಆಗಳುರಿಯುರುಳಿಯಂತಪ್ಪ ತನ್ನ ನೊಸಲ ಕಣ್ಣಂ ತೋಱ ತನ್ನ ಸಾಹಸಮಂ ತೋಱಲೆಂದು ನಾರಾಯಣಾಸ್ತ್ರಮಂ ತೊಟ್ಟೆಚ್ಚಾಗಳ್-

ಚಂ|| ದೆಸೆ ಮಸುಳ್ದತ್ತು ರ್ವಾ ತಳರ್ದತ್ತು ನೆಲಂ ಪಿಡಿಗಿತ್ತು ತೊಟ್ಟನಾ
ಗಸಮೊಡೆದತ್ತಜಾಂಡಮಳಱತ್ತೆನುತಿರ್ದೆಡೆಯಲ್ಲಿ ಲೋಕಮಂ|
ಬಿಸಿಳಗಿಟ್ಟು ಕಾದಳವನಾರಳವೊಡ್ಡಿಸೆ ಕಾದನಾಗಳ
ರ್ವಿಸೆ ತೆಗೆದೆಚ್ಚ ವೈಷ್ಣವಮನೊಡ್ಡಿಸಿ ವೈಷ್ಣವದಿಂ ಮುರಾಂತಂಕಂ|| ೩೨

ವ|| ಅಂತಶ್ವತ್ಥಾಮನೆಚ್ಚ ನಾರಾಯಣಾಸ್ತ್ರಮಂ ನಾರಾಯಣನುಪಾಯದೊಳೆ ಗೆಲ್ದನನ್ನೆಗಂ-

ಚಂ|| ಕವಿದೆರಡುಂ ಪತಾಕಿನಿಗಳಾಗಡುಮೆನ್ನಮೆ ಸಕ್ಕಿ ಮಾಡಿ ಕಾ
ದುವುದಱನಲ್ಲಿ ಸತ್ತರಸುಮಕ್ಕಳ ಪಾಪಮಿದೆಲ್ಲಮೆನ್ನನೆ|
ಯ್ದುವುದುಪವಾಸದಿಂ ಜಪದಿನಾನದನೋಡಿಸಿ ಶುದ್ಧನಪ್ಪೆನೆಂ
ಬವೊಲಪರಾಂಬುರಾಶಿಗಿೞದಂ ನಳಿನೀವರಜೀವಿತೇಶ್ವರಂ|| ೩೩

ವ|| ಅಂತೆರಡುಂ ಪಡೆಗಳೊಂದಿರುಳುಮೆರಡುಂ ಪಗಲುಮೋರಂತೆ ಕಾದಿ ಚಳಿತಪಹಾರ ತೂರ್ಯಂಗಳು ಬಾಜಿಸೆ ತಂತಮ್ಮ ಬೀಡುಗಳ್ಗೆ ಪೋದರಾಗಳ್-

ಚಂ|| ಗುರುವಿನ ಶೋಕದಿಂದೆ ರಥಮಧ್ಯದೊಳೊಯ್ಯನೆ ಜೋಲ್ದು ಬಿೞ್ದನಂ
ಗುರುಸುತನಂ ಕೃಪಂ ಕೃಪೆಯಿನಾತ್ಮವಿಲಾಸದೊಳಾಱಸುತ್ತುಮಂ|
ತಿರೆ ಗುರುಶೋಕಮಗ್ಗಳಿಸೆ ತಾತವಿಯೋಗಮುಮಕ್ಕುಮಾಗಡುಂ
ಗುರುವೆನೆ ಪೇೞಮಾ ಗುರುವಿಯೋಗಭರಂ ಗುರುವಾಗದಿರ್ಕುಮೇ|| ೩೪

ವ|| ಅನ್ನೆಗಂ ಪನ್ನಗಕೇತನಂ ಶೋಕಮನಾಱಸಲೆಂದು ಕರ್ಣ ಶಲ್ಯ ಸೌಬಲ ಸಮೇತಂ ಬಂದಶ್ವತ್ಥಾಮನನಿಂತೆಂದಂ-

ಮ|| ಪುದಿದೌರ್ವಾನಳನಬ್ಧಿಯಂ ಸುಡುವವೋಲ್ ಶಸ್ತ್ರಾಗ್ನಿಯಿಂ ತೀವ್ರ ಕೋ
ಪದಿನುದ್ವೃತ್ತ ಬಳಾಬ್ಧಿಯಂ ಸುಡೆ ಕರಂ ಬೆಂಬಿೞ್ದು ದುರ್ಯುಕ್ತಿಯಿಂ|
ದದಯಂ ಧರ್ಮಜನಿಕ್ಕಿದಂ ಗುರುವನಿನ್ನೀನಾತನಂ ಬೇಗಮಿ
ಕ್ಕದೆ ಕಣ್ಣೀರ್ಗಳನಿಕ್ಕೆ ಚಂದ್ರಧವಳಂ ನಿನ್ನನ್ವಯಂ ಮಾಸದೇ|| ೩೫

ಉಜ್ವಲವಾಗುತ್ತಿರಲು ರೇಗಿ ಕೋಪದಿಂದ ‘ಪ್ರಪಂಚವನ್ನು ಪಾಂಡವರಿಲ್ಲದಂತೆ ಮಾಡದಿರುವಾಗ ನಾನು ಚಾಪಾಚಾರ್ಯನ ಮಗನೇ ಅಲ್ಲ’ ಎನ್ನುತ್ತ ಅಶ್ವತ್ಥಾಮನು ಎದುರಿಸಲು ಪಾಂಡವಸೇನಾಸಮುದ್ರವು ಭಯದಿಂದ ದುಖಪಟ್ಟು ಚಲಿಸಿ ತಳ್ಳಲ್ಪಟ್ಟು ಸುಳಿಸುಳಿಯಾಗಿ ತಿರುಗಿತು. ವ|| ಆಗ ಉರಿಯ ಉಂಡೆಯ ಹಾಗಿದ್ದ ತನ್ನ ಹಣೆಗಣ್ಣನ್ನು ತೋರಿ ತನ್ನ ಸಾಹಸವನ್ನು ಪ್ರದರ್ಶಿಸಬೇಕೆಂದು ನಾರಾಯಾಣಾಸ್ತ್ರವನ್ನು ಪ್ರಯೋಗಿಸಿದನು. ೩೨. ದಿಕ್ಕುಗಳು ಮಾಸಲಾದುವು, ಸಮುದ್ರಗಳು ಚಲಿಸಿದುವು, ಭೂಮಿಯು ಸಿಡಿಯಿತು, ಇದ್ದಕ್ಕಿದ್ದ ಹಾಗೆ ಆಕಾಶವು ಒಡೆದುಹೋಯಿತು ಎನ್ನುತ್ತಿದ್ದ ಸಮಯದಲ್ಲಿ ಇರುವ ಸ್ಥಳದಲ್ಲಿಯೇ ಲೋಕವನ್ನು ತನ್ನ ಹೊಟ್ಟೆಯೊಳಗಿಟ್ಟು ಯಾವ ಶಕ್ತಿಯನ್ನಾದರೂ ಪ್ರತಿಭಟಿಸಿ ರಕ್ಷಿಸುವ ಶಕ್ತಿಯುಳ್ಳ ಶ್ರೀಕೃಷ್ಣನು, ಭಯಂಕರವಾಗಿ ಸೆಳೆದು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು ವೈಷ್ಣವಾಸ್ತ್ರದಿಂದ ಎದುರಿಸಿ ಲೋಕವನ್ನು ರಕ್ಷಿಸಿದನು- ವ|| ಹಾಗೆ ಅಶ್ವತ್ಥಾಮನು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು ನಾರಾಯಣನಾದ ಕೃಷ್ಣನು ಉಪಾಯದಿಂದಲೇ ಗೆದ್ದನು. ಅಷ್ಟರಲ್ಲಿ ೩೩. ಎರಡು ಸೈನ್ಯಗಳೂ ಮೇಲೆಬಿದ್ದು ಯಾವಾಗಲೂ ನನ್ನನ್ನೇ ಸಾಕ್ಷಿಯನ್ನಾಗಿ ಮಾಡಿ ಯುದ್ಧಮಾಡುವುದರಿಂದ ಸತ್ತ ರಾಜಕುಮಾರರ ಈ ಪಾಪವೆಲ್ಲ ನನ್ನನ್ನೇ ಸೇರುವುದು. ಆ ಪಾಪವನ್ನು ಉಪವಾಸದಿಂದಲೂ ಜಪದಿಂದಲೂ ಓಡಿಸಿ ಶುದ್ಧನಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮಸಮುದ್ರಕ್ಕಿಳಿದನು. ವ|| ಒಂದು ರಾತ್ರಿ ಮತ್ತು ಎರಡು ಹಗಲು ಒಂದೇ ಸಮನಾಗಿ ಕಾದಿ ಬಲಗುಂದಿದ್ದ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವ ವಾದ್ಯಗಳನ್ನು ಬಾಜಿಸಲು ತನ್ನ ತಮ್ಮ ನಿವಾಸಗಳಿಗೆ (ಬೀಡುಗಳಿಗೆ) ಹೋದುವು; ಆಗ ೩೪. ತಂದೆಯು ಸತ್ತ ದುಖದಿಂದ ರಥದ ಮಧ್ಯಭಾಗದಲ್ಲಿಯೇ ನಿಧಾನವಾಗಿ ಜೋತು ಬಿದ್ದಿದ್ದ ಅಶ್ವತ್ಥಾಮನನ್ನು ಕೃಪನು ಮೃದುವಾದ ಮಾತುಗಳಿಂದಲೂ; ತನ್ನ ಸಮಾಧಾನೋಕ್ತಿಯಿಂದಲೂ ಬೀಡಿಗೆ ಕರೆದು ತಂದನು. ತಂದೆಯ ಸಾವೇ (ಅಗಲಿಕೆಯೇ) ಹೆಚ್ಚಿನ ದುಖಕ್ಕೆ ಕಾರಣವಾಗಿರುವಾಗ ಆ ತಂದೆಯು ಗುರುವೂ ಆಗಿದ್ದಾಗ ಆ ಗುರುವಿಯೋಗ ದುಖವು ಗುರುತರವಾಗಿರುವುದಿಲ್ಲವೇ? ವ|| ಅಷ್ಟರಲ್ಲಿ ದುರ್ಯೋಧನನು ಅಶ್ವತ್ಥಾಮನ ದುಖವನ್ನು ಆರಿಸಬೇಕೆಂದು ಕರ್ಣ, ಶಲ್ಯ, ಶಕುನಿಯರೊಡನೆ ಬಂದು ಅವನಿಗೆ ಹೀಗೆ ಹೇಳಿದನು. ೩೫. ಆಚಾರ್ಯರು ಆವರಿಸಿಕೊಂಡಿರುವ ಲ

ದ್ರುತವಿಲಂಬಿತಂ|| ಎನಗೆ ಕೂರ್ಪುದನಾ ಘಟಸಂಭವಂ
ನಿನಗೆ ಕೂರನೞಲ್ ನಿನತಲ್ತು ಕೇ||
ಳೆನತುಮಾಱದ ಶೋಕಮನಿರ್ವರುಂ
ಮುನಿವರಂ ತವೆ ಕೊಂದೊಡನೀಗುವಂ|| ೩೬

ವ|| ಎಂಬುದುಮಶ್ವತ್ಥಾಮನಿಂತೆಂದಂ-

ತರಳಂ|| ಗುರು ಮದೀಯ ವಿಮೋಹದಿಂ ಕೃಪೆಯಂ ಜವಂ ಬಿಸುಟಂತೆ ಕೊ
ಕ್ಕರಿಸಿ ಬಿಲ್ವಿಸುಟಿರ್ದೊಡಾ ಪದದೊಳ್ ಗಡಂ ದ್ರುಪದಾತ್ಮಜಂ|
ಗುರುವ ಕೇಶಕಳಾಪಮಂ ತೆಗೆದಂತೆ ಗಂಡನುಮಾದನೀ
ಪರಿಭವಕ್ಕನುರೂಪಮಿಂ ಪೆಱತೊಂದುಮಿಲ್ಲಹಿಕೇತನಾ|| ೩೭

ಶಾ|| ರಾಯೆಂಬೀ ಪೆಸರಿಲ್ಲದಂತು ಮುೞಸಿಂ ಮುಯ್ಯೋೞು ಸೂೞೆಂತು ಕ
ಟ್ಟಾಯಂ ಪೊಂಪುೞವೋಗೆ ತಂದೆಯೞವಿಂಗಾ ಭಾರ್ಗವಂ ಕೊಂದನಂ|
ತೀಯೆಮ್ಮಯ್ಯನಿನಾದುದೊಂದು ಪಗೆಯಿಂ ಸೀಳ್ದುಗ್ರಪಾಂಚಾಳರಾ
ಜಾಯುಪಾರಮನನ್ಯಭೂಪಬಲಮಂ ಪರ್ದಿಂಗೆ ಬಿರ್ದಿಕ್ಕುವೆಂ|| ೩೮

ಕಂ|| ಪಗೆಯಂದಮುಮಾ ರಾಮರ
ಪಗೆಯೊಳ್ ಸಮಮವರ ಪಿಡಿವ ಬಿಲ್ ಬಿಲ್ಲೆಮ್ಮಂ|
ಬುಗಳುಮವರಿತ್ತ ನಲ್ಲಂ
ಬುಗಳೆನೆ ಬೞಗಾಯದಂತು ಚಲಮನೆ ಕಾವೆಂ|| ೩೯

ವ|| ಎಂಬುದುಂ ತನ್ನಳಿಯನ ನುಡಿಗೆ ಶಾರದ್ವತಂ ಸಂತೋಷಂಬಟ್ಟು ಕೌರವೇಶ್ವರನ ನಿಂತೆಂದಂ ನೀನೀತಂಗೆ ವೀರವಟ್ಟಮಂ ಕಟ್ಟಿ ರಿಪುನೃಪಬಲಕ್ಕೆ ತೋಱ ಬಿಡುವುದೆನೆ ಕಳಶಜನಿಂ ಬಿೞಕ್ಕೆ ಕರ್ಣಂಗೆಂದು ನುಡಿದ ಬೀರಮಟ್ಟಮನೆಂತು ಕಟ್ಟುವೆನೆಂದೊಡಶ್ವರತ್ಥಾಮ ನಿಂತೆಂದಂ-

ಬಡಬಾಗ್ನಿಯು ಕಡಲನ್ನು ಸುಡುವಂತೆ ಶಸ್ತ್ರಾಗ್ನಿಯಿಂದಲೂ ತೀಕ್ಷ್ಣವಾದ ಕೋಪಾಗ್ನಿಯಿಂದಲೂ ಕೊಬ್ಬಿದ ಶತ್ರು ಸೈನ್ಯಸಾಗರವನ್ನು ಸುಡುತ್ತಿರಲು ವಿಶೇಷವಾದ ಉಪಸರ್ಪಣೆಯಿಂದಲೂ ಹೀನೋಪಾಯಗಳಿಂದಲೂ ದಯಾಹೀನನಾದ ಧರ್ಮರಾಯನು ಗುರುವನ್ನು ಕೊಂದನು. ಇನ್ನು ನೀನು ಅವನನ್ನು ಬೇಗನೆ ಕೊಲ್ಲದೆ ಕಣ್ಣೀರನ್ನು ಸುರಿಸುತ್ತಿದ್ದರೆ ಚಂದ್ರನಷ್ಟು ಬೆಳ್ಳಗಿರುವ ನಿನ್ನ ವಂಶವು ಮಲಿನವಾಗದೆ ಇರುತ್ತದೆಯೇ? ೩೬. ದ್ರೋಣಾಚಾರ್ಯನು ನನ್ನನ್ನು ಪ್ರೀತಿಸುತ್ತಿದಷ್ಟು ನಿನ್ನನ್ನು ಪ್ರೀತಿಸುತ್ತಿರಲಿಲ್ಲ. ಈ ದುಖವು ನಿನ್ನದು ಮಾತ್ರವಲ್ಲ; ಕೇಳು, ನನ್ನದೂ ಅಹುದು. ಕಡಿಮೆಯಾಗದ ಈ ದುಖವನ್ನು, ನಾವಿಬ್ಬರೂ ನಮಗೆ ಸಮಾನ ಶತ್ರುಗಳಾದ ಪಾಂಡವರನ್ನು ಪೂರ್ಣವಾಗಿ ಕೊಂದು, ಜೊತೆಯಲ್ಲಿಯೇ ಪರಿಹಾರ ಮಾಡಿಕೊಳ್ಳೋಣ. ವ|| ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೩೭. ಆಚಾರ್ಯನಾದ ನನ್ನ ತಂದೆಯು ನನ್ನ ಮೇಲಿನ ಪ್ರೀತಿಯಿಂದ ಯಮನು ಕರುಣವನ್ನು ಬಿಸಾಡುವ ಹಾಗೆ ಅಸಹ್ಯಪಟ್ಟು ಬಿಲ್ಲನ್ನು ಬಿಸುಟಿದ್ದ ಆ ಸಮಯದಲ್ಲಿಯೇ ಅಲ್ಲವೇ ಧೃಷ್ಟದ್ಯುಮ್ನನು ಗುರುವಿನ ಕೂದಲ ಗಂಟನ್ನು ಎಳೆದು ಮಹಾಶೂರನಾದುದು. ದುರ್ಯೋಧನಾ! ಈ ಅವಮಾನಕ್ಕೆ ಸಮಾನವಾದುದು ಬೇರೊಂದಿಲ್ಲ. ೩೮. ಪರಶುರಾಮನು ತಂದೆಯ ಸಾವಿಗಾಗಿ ಕೋಪದಿಂದ ‘ರಾಜ’ ಎಂಬ ಹೆಸರೇ ಇಲ್ಲದಿರುವ ಹಾಗೆ ಇಪ್ಪತ್ತೊಂದು ಸಲ ತನ್ನ ಪೌರುಷವು ಅತ್ಯಂತ ಅಕವಾಗುತ್ತಿರಲು (ರಾಜಕುಲವನ್ನೆ) ಹೇಗೆ ಕೊಂದನೋ ಹಾಗೆಯೇ ಈಗ ನಮ್ಮ ತಂದೆಯ ಕಾರಣದಿಂದಾದ ದ್ವೇಷದಿಂದ ಭಯಂಕರವಾದ ಪಾಂಚಾಲರಾಜರ ಆಯಸ್ಸಿನ ದಡವನ್ನು ಸೀಳಿ ಶತ್ರುರಾಜರ ಸೈನ್ಯವನ್ನು ಹದ್ದುಗಳಿಗೆ ಔತಣಮಾಡಿಸುತ್ತೇನೆ. ೩೯. ‘ನಮ್ಮ ಶತ್ರುತ್ವದ ರೀತಿಯೂ ರಾಮರ ಶತ್ರುತ್ವಕ್ಕೆ ಸಮಾನವಾದುದು. ಅವರು ಹಿಡಿಯುತ್ತಿದ್ದ ಬಿಲ್ಲೇ ನನ್ನ ಬಿಲ್ಲು ನಮ್ಮಬಾಣಗಳೂ ಅವರು ಕೊಟ್ಟ ಒಳ್ಳೆಯ ಬಾಣಗಳೇ ಆಗಿರಲು ವಂಶವನ್ನು (ಕ್ಷತ್ರಿಯ ವಂಶವನ್ನು) ರಕ್ಷಿಸದೆ (ಹಾಗೆಯೇ) ಹಟವನ್ನೇ ಸಾಸುತ್ತೇನೆ’ ವ|| ಎಂದ ತನ್ನಳಿಯನ ಮಾತಿಗೆ ಕೃಪನು ಸಂತೋಷಪಟ್ಟು ದುರ್ಯೋಧನನಿಗೆ ಹೀಗೆ ಹೇಳಿದನು- ‘ನೀನು ಇವನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಸೈನ್ಯದ ಕಡೆಗೆ ತೋರಿಸಿ ಬಿಡತಕ್ಕದ್ದು’ ಎನ್ನುಲು ‘ದ್ರೋಣನ ಬಳಿಕ

ಚಂ|| ನಿಜದೊಳೆ ಭೂಪರೆಂಬರವಿವೇಕಿಗಳಪ್ಪರದಕ್ಕೆ ನೀಂ ಫಣಿ
ಧ್ವಜ ಕಡುಕೆಯ್ದು ಕರ್ಣನನೆ ನಚ್ಚುವೆಯಪ್ಪೊಡೆ ಯುದ್ಧದೊಳ್ ವೃಷ|
ಧ್ವಜನುಮನಿಕ್ಕಿ ಗೆಲ್ದರಿಗನೊಳ್ ತಲೆವಟ್ಟಿದಿರಾಗಿ ನಿಂದು ಸೂ
ತಜನಿಱವಂ ಗಡಂ ಪಗೆಯನೇಂ ಗಳ ಪಟ್ಟಮೆ ಪಾಱ ತಿಂಬದೇ || ೪೦

ವ|| ಎಂಬುದುಮಂಗರಾಜಂ ಗುರುತನೂಜನನಿಂತೆಂದಂ-

ಚಂ|| ಎನಿತಳವುಳ್ಳೊಡಂ ದ್ವಿಜನ ಗಂಡಗುಣಕ್ಕಗಿವನ್ನರಾರೊ ನೆ
ಟ್ಟನೆ ವಿಷಮೊಳ್ಳೆಗುಳ್ಳೊಡಮದೊಳ್ಳೆಯೆ ಕಾಳಿಯ ನಾಗನಾಗದ|
ಣ್ಮಿನ ಪಡೆಮಾತದೊಂದೆ ನೆವಮಾಗಿರೆ ಕೆಯ್ದುವನಿಕ್ಕಿ ಸತ್ತ ಸಾ
ವಿನ ಪಡಿಚಂದಮಾಗಿಯುಮಿದೇಂ ನಿಮಗೞಯೊ ಗಂಡುವಾತುಗಳ್ || ೪೧

ವ|| ಎಂಬುದುಂ ತ್ರೈಲೋಕ್ಯ ಧನುರ್ಧರನಪ್ಪೆಮ್ಯಯ್ಯನ ಗಂಡವಾತನೀ ಮೀಂಗುಗಲಿಗಂ ಮೆಚ್ಚನಿವನಂ ಮುಂ ಕೊಂದು ಬೞಯಂ ಪಾಂಡವರಂ ಕೊಲ್ವೆನೆಂದು ಬಾಳಂ ಕಿೞ್ತು ಕರ್ಣನ ಮೇಲೆವಾಯ್ವುದುಂ ಕೃಪನೆಡೆವೊಕ್ಕಿದಾಗದೆಂದು ಬಾರಿಸಿ-

ಕಂ|| ಅಸದಳಮಾಗಿಯುಮೀ ನ
ಮ್ಮ ಸೈನ್ಯಮಿಂತೊರ್ವರೊರ್ವರೊಳ್ ಸೆಣಸಿ ಖಳ|
ವ್ಯಸನದೊಳೆ ಕೆಟ್ಟುದಲ್ಲದೊ
ಡೆ ಸುಯೋಧನ ನಿನಗೆ ಮಲೆವ ಮಾರ್ವಲಮೊಳವೇ|| ೪೨

ವ|| ಎಂಬುದುಮಶ್ವತ್ಥಾಮಂ ಕರ್ಣನೊಳಾದ ಮುಳಿಸನವಧಾರಿಸಲಾಱದೆ ಸುಯೋಧನನ ನಿಂತೆಂದಂ-

ಖಚರಪ್ಲುತಂ|| ಬೀರವಟ್ಟಮನಾನಿರೆ ನೀನೀ ಸೂತಸುತಂಗೆಡೆಗೊಂಡು ಕೈ
ವಾರದಿಂದೊಸೆದಿತ್ತೊಡಮೇನಾಯ್ತೀ ಖಳನಿಲ್ಲಿ ಧನಂಜಯ|
ಕ್ರೂರಬಾಣಗಣಾವಳಿಯಿಂದೞiಡಿದೊಡಲ್ಲದೆ ವೈರಿ ಸಂ
ಹಾರ ಕಾರಣ ಚಾಪಮನಾನೀ ಸಂಗರದೊಳ್ ಪಿಡಿಯೆಂ ಗಡಾ|| ೪೩

ವ|| ಎಂಬುದುಂ ಮುಳಿಸುವೆರಸಿದ ಮುಗುಳ್ನಗೆಯಿಂ ಕರ್ಣನಿಂತೆಂದಂ-

ಮ|| ಭುವನಂಗಳ್ ಪದಿನಾಲ್ಕುಮಂ ನಡುಗಿಸಲ್ ಸಾಮರ್ಥ್ಯಮುಳ್ಳೆನ್ನ ಕೆ
ಯ್ದುವಿನೊಳ್ ತೀರದುದಾವ ಕೆಯ್ದುವಿನೊಳಂ ತೀರ್ದಪುದೇ ನಿನ್ನ ಕೆ|
ಯ್ದುವನೆಂತುಂ ಬಿಸುಟಿರ್ದ ಲೆಕ್ಕಮೆ ವಲಂ ನಿಷ್ಕಾರಣಂ ಕೆಯ್ದುವಿ
ಕ್ಕುವ ಕಣ್ಣೀರ್ಗಳನಿಕ್ಕುವೀಯೆರಡುಮಂ ನಿಮ್ಮಯ್ಯನೊಳ್ ಕಲ್ತಿರೇ|| ೪೪

ಕರ್ಣನಿಗೆ’ ಎಂದು ಹೇಳಿದ ವೀರಪಟ್ಟವನ್ನು ಈಗ ಇವನಿಗೆ ಹೇಗೆ ಕಟ್ಟಲಿ ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೪೦. ರಾಜರೆನ್ನುವವರು ವಾಸ್ತವವಾಗಿಯೂ ಬುದ್ಧಿಯಿಲ್ಲದವ ರೆಂಬುದು ಸತ್ಯ. ಅದು ಹಾಗಿರಲಿ; ಎಲೈ ದುರ್ಯೋಧನನೇ, ಬಹಳವಾಗಿ ಪ್ರೀತಿಸಿ ಕರ್ಣನನ್ನೇ ನಂಬುವೆಯಾದರೆ ಯುದ್ಧದಲ್ಲಿ ಈಶ್ವರನನ್ನೇ ಇಕ್ಕಿ ಗೆದ್ದ ಅರ್ಜುನನಿಗೆ ಅಭಿಮುಖವಾಗಿ ನಿಂತು ಕರ್ಣನು ಯುದ್ಧಮಾಡುತ್ತಾನಲ್ಲವೇ? ತಟ್ಟುವ ವೀರಪಟ್ಟವೇ ಹಾರಿ ಮೇಲೆ ಬಿದ್ದು ಶತ್ರುವನ್ನು ತಿನ್ನವುದೇ ಏನು? ವ|| ಎನ್ನಲು ಕರ್ಣನು ಅಶ್ವತ್ಥಾಮನನ್ನು ಕುರಿತು ಹೀಗೆಂದನು ೪೧. ‘ಎಷ್ಟು ಶಕ್ತಿಯಿದ್ದರೂ ಬ್ರಾಹ್ಮಣನ ಪೌರುಷಕ್ಕೆ ಹೆದರುವವರಾರಿದ್ದಾರೋ? ಕೇರೆ ಹಾವಿಗೆ ನೇರವಾಗಿ ವಿಷವಿದ್ದರೂ ಅದು ಒಳ್ಳೆಯೇ (ಕೇರೆಯ ಹಾವೇ); ಕೃಷ್ಣಸರ್ಪವಾಗಲಾರದು. ಪೌರುಷದ ಸುದ್ದಿಯೊಂದಿದೆ! ಯಾವುದೋ ಒಂದು ನೆಪದಿಂದ ಆಯುಧವನ್ನು ಬಿಸಾಡಿ ಸತ್ತ ಸಾವಿನ ಪ್ರತಿಬಿಂಬ ಕಣ್ಣಮುಂದಿದ್ದರೂ ನಿಮಗೆ ಪೌರುಷದ ಮಾತುಗಳಲ್ಲಿ ಇನ್ನೂ ಪ್ರೀತಿಯಿದೆಯೇನು?’ (ಎಷ್ಟು ಪ್ರೀತಿಯೋ) ವ|| ಎನ್ನುಲು ‘ಮೂರುಲೋಕಗಳಲ್ಲಿಯೂ ಬಿಲ್ವಿದ್ಯೆಯಲ್ಲಿ ಪ್ರಸಿದ್ಧನಾದ ನನ್ನ ತಂದೆಯನ್ನು ಈ ಬೆಸ್ತರವನು (ಮೀನನ್ನು ಕೊಲ್ಲುವ ಸ್ವಭಾವವುಳ್ಳವನು) ಮೆಚ್ಚುವುದಿಲ್ಲ. ಇವನನ್ನು ಮೊದಲು ಕೊಂದು ಬಳಿಕ ಪಾಂಡವರನ್ನು ಕೊಲ್ಲುತ್ತೇನೆ’ ಎಂದು ಕತ್ತಿಯನ್ನು ಒರೆಯಿಂದ ಹೊರಕ್ಕೆ ಸೆಳೆದು ಕರ್ಣನ ಮೇಲೆ ಹಾಯ್ದನು. ಕೃಪನು ಮಧ್ಯೆ ಪ್ರವೇಶಿಸಿ ಹೀಗೆ ಮಾಡಬಾರದು ಎಂದು ತಡೆದನು- ೪೨. ‘ದುರ್ಯೋಧನಾ, ಈ ನಮ್ಮ ಸೈನ್ಯವು ಅಸದೃಶವಾಗಿದ್ದರೂ ಹೀಗೆ ಒಬ್ಬೊಬ್ಬರಲ್ಲಿಯೂ ಜಗಳವಾಡಿ (ಮತ್ಸರಿಸಿ) ಒಳಜಗಳದಿಂದಲೇ ಕೆಟ್ಟುಹೋಯಿತು. ಹಾಗಲ್ಲದಿದ್ದರೆ ನಿನಗೆ ಪ್ರತಿಭಟಿಸುವ ಪ್ರತಿಸೈನ್ಯವಿರುತ್ತಿದ್ದಿತೆ?’ ವ|| ಎನ್ನಲು ಅಶ್ವತ್ಥಾಮನು ಕರ್ಣನಲ್ಲುಂಟಾದ ಕೋಪವನ್ನು ತಡೆಯಲಾರದೆ ದುರ್ಯೋಧನನಿಗೆ ಹೀಗೆ ಹೇಳಿದನು- ೪೩. ‘ನಾನಿರುವಾಗ ನೀನು ಸ್ನೇಹದಿಂದ ವೀರಪಟ್ಟವನ್ನು ಈ ಸೂತನ ಮಗನಿಗೆ ಮೋಸದಿಂದ ಕೊಟ್ಟರೆ ತಾನೇ ಏನಾಯ್ತು? ಈ ದುಷ್ಟನು ಅರ್ಜುನನ ಕ್ರೂರವಾದ ಬಾಣಗಳ ಸಮೂಹದಿಂದ ನಾಶವಾಗದ ಹೊರತು ನಾನು ಶತ್ರುನಾಶಕ್ಕೆ ಕಾರಣವಾದ ಈ ಬಿಲ್ಲನ್ನು ಯುದ್ಧರಂಗದಲ್ಲಿ ಹಿಡಿಯುವುದೇ ಇಲ್ಲ.’ ವ|| ಎನ್ನಲು ಕರ್ಣನು ಕೋಪಮಿಶ್ರಿತವಾದ ಹುಸಿನಗೆಯಿಂದ ಹೀಗೆ ಹೇಳಿದನು- ೪೪. ‘ಹದಿನಾಲ್ಕು ಲೋಕಗಳನ್ನೂ ನಡುಗಿಸುವ ಲ

ವ|| ಎಂಬುದುಮಶ್ವತ್ಥಾಮಂ ಕರ್ಣನ ನುಡಿಗೆ ಸಿಗ್ಗಾಗಿ-

ಮ|| ಸ್ರ|| ಮುನಿಸಂ ಮುಂದಿಟ್ಟು ಬಿಲ್ಲಂ ಬಿಸುಡದೆ ಬಗೆದೆಂ ಮುನ್ನಮಿನ್ನುರ್ಕ್ಕಿನಿಂ ನಿ
ನ್ನನೆ ಪೀನಂ ನಚ್ಚಿ ನಿನ್ನಾಳ್ದನೆ ನುಡಿಯಿಸೆ ನೀನಾಡಿದೈ ಮಾತನಾಡ|
ಲ್ಕೆನಗೀ ಸೂೞಲ್ತು ಸೇನಾಪ ಪದವಿಯೊಳಿಂ ನೀನೆ ನಿಲ್ ನಾಳೆ ದುರ್ಯೋ
ಧನನಂ ಸಕ್ಕಿಟ್ಟು ಮಾಱiಂತದಟರೊಳಳವಂ ತೋಱುವಂ ನೀನುಮಾನುಂ|| ೪೫

ಕಂ|| ಸಾರಂಗಳ್ ನಿನ್ನ ಶರಾ
ಸಾರಂಗಳಸಾರಮುೞದ ಕೆಯ್ದುಗಳೆಂತುಂ|
ಸಾರಾಸಾರತೆಯಂ ನಾ
ಮಾರಯ್ವಮಿದಿರ್ಚಿದರಿನೃಪಧ್ವಜಿನಿಗಳೊಳ್|| ೪೬

ವ|| ಎಂಬುದುಂ ದುರ್ಯೋಧನ ಕರ್ಣನುಮನಶ್ವತ್ಥಾಮನುಮಂ ನಿಮ್ಮೊಳಗೆ ನೀಂ ಮುಳಿಯಲ್ವೇಡ ನಿಮ್ಮ ಪುರುಷಕಾರಮನೆ ಬಗೆದು ನೆಗೞ್ವುದಾನುಮೆನ್ನೆತ್ತಿ ಕೊಂಡ ಕಜ್ಮಮಂ ನೆಗೞ್ದಲ್ಲದಿರೆನೆಂದಾಯೆಡೆಯಿನೆೞ್ದು ನಾಯಕರಂ ಬೀಡಿಂಗೆ ಪೋಗಲ್ವೇೞ್ದಂಮನೆಯಂ ಪೊಕ್ಕು ಮಜ್ಜನ ಭೋಜನ ತಾಂಬೂಲಾನುಲೇಪನಂಗಳಿಂ ಸಂಗರ ಪರಿಶ್ರಮಮನಾಱಸಿ ಮಂತ್ರಶಾಲೆಗೆವಂದು ಶಲ್ಯ ಶಾರದ್ವತ ಕೃತವರ್ಮ ದುಶ್ಶಾಸನಾದಿಗಳು ಬರಿಸಿ ಯಥೋಚಿತ ಪ್ರತಿಪತ್ತಿಗಳಿಂದಿರಿಸಿ-

ಶಾ|| ಅಂತರ್ಭೇದದೊಳಂತು ಛಿದ್ರಿಸಿದರಾ ಗಾಂಗೇಯರಂ ಕೊಂದರಿಂ
ದಿಂತೀಗಳ್ ಪುಸಿದೀ ಘಟೋದ್ಭವನನಾ ಕೌಂತೇಯರಾಯಕ್ಕೆ ಗೆಂ|
ಟೆಂತೆಂತಕ್ಕುಮದುಂ ಮದುದ್ಯಮಮೆ ಪೇೞ್ಗಾ ವೈರಿಗಳ್ಗೊಲ್ವೆನಾ
ನೆಂತೊಳ್ಪಂ ತಳೆವಂತು ತೇಜಮೆನಗಿನ್ನೆಂತಕ್ಕುಮಿಂ ಪೇೞರೇ|| ೪೭

ವ|| ಎನೆ ಶಾರದ್ವತನಿಂತೆಂದಂ-

ಚಂ|| ಚಲಮನೆ ಪೇೞ್ವೊಡಯ್ವರುಮನಯ್ದೞಯೂರೊಳೆ ಬಾೞಸೆಂದು ಮುಂ
ಬಲಿಬಲಸೂದನಂ ನುಡಿಯೆಯುಂ ಕುಡದಿರ್ದುದೆ ಪೇೞ್ಗುಮೆಯ್ದೆ ಮೆ|
ಯ್ಗಲಿತನಮಂ ಸರಿತ್ಸುತ ಘಟೋದ್ಭವರಂ ಪೊಣರ್ದಿಕ್ಕಿ ಗೆಲ್ದರೊಳ್
ಕಲಹಮೆ ಪೇೞ್ಗುಮಿಂ ಪೆಱತು ಪೇೞ್ವೆಡೆಯಾವುದೊ ಕೌರವೇಶ್ವರಾ|| ೪೮

ಸಾಮರ್ಥ್ಯವುಳ್ಳ ನನ್ನ ಆಯುಧಗಳಿಂದ ಸಾಧ್ಯವಾಗದೇ ಇರುವುದು ಮತ್ತಾವ ಆಯುಧದಿಂದಾಗಲಿ ಸಾಧ್ಯವಾಗುತ್ತದೆಯೇ? ನಿನ್ನ ಆಯುಧಗಳು ಯಾವಾಗಲೂ ಬಿಸಾಡಿರುವ ಲೆಕ್ಕವೇ (ಅಪ್ರಯೋಜಕವೇ). ಕಾರಣವಿಲ್ಲದೇ ಬಿಲ್ಲನ್ನು ಬಿಸಾಡುವ ಮತ್ತು ಕಣ್ಣೀರನ್ನು ಸುರಿಸುವ ಈ ಎರಡನ್ನೂ ನಿಮ್ಮಯ್ಯನಿಂದ ಕಲಿತಿದ್ದೀರಾ?’ ವ|| ಎನ್ನಲು ಅಶ್ವತ್ಥಾಮನು ಕರ್ಣನ ಮಾತಿಗೆ ಲಜ್ಜಿತನಾಗಿ ೪೫. ನಾನು ಮೊದಲು ಕೋಪವನ್ನು ಮುಂದಿಟ್ಟು ಬಿಲ್ಲನ್ನು ಬಿಸುಡಲು ನಿರ್ಧರಿಸಿದೆನು. ಇನ್ನು ನಿನ್ನನ್ನು ನಿನ್ನ ಯಜಮಾನನು ಪೂರ್ಣವಾಗಿ ನಂಬಿ ಮಾತನಾಡಿಸಲು ನೀನು ಗರ್ವದಿಂದ ಮಾತನಾಡಿದೆ. ನಾನು ಮಾತನಾಡುವುದಕ್ಕೆ ಇದು ನನಗೆ ಸಮಯವಲ್ಲ. ಸೇನಾಪತಿಯ ಸ್ಥಾನದಲ್ಲಿ ನೀನೇ ನಿಲ್ಲು; ನಾಳೆ ದುರ್ಯೋಧನನನ್ನೇ ಸಾಕ್ಷಿಯಾಗಿಟ್ಟುಕೊಂಡು ಪ್ರತಿಭಟಿಸಿದ ಶೂರರಲ್ಲಿ ನೀನೂ ನಾನೂ ನಮ್ಮ ಪರಾಕ್ರಮವನ್ನು ತೋರಿಸೋಣ. ೪೬. ನಿನ್ನ ಬಾಣದ ಮಳೆಯು ಶಕ್ತಿಯುಕ್ತವಾದುದು ಉಳಿದ ಆಯುಧಗಳು ಹೇಗೂ ಅಸಾರವಾದುವು. (ಶಕ್ತಿಯಿಲ್ಲದುವು) ಈ ಸಾರಾಸಾರತೆಯನ್ನು ನಮ್ಮನ್ನು ಎದುರಿಸಿದ ಶತ್ರುರಾಜರ ಸೈನ್ಯದಲ್ಲಿ ವಿಚಾರ ಮಾಡೋಣ’. ವ|| ಎನ್ನಲು ದುರ್ಯೋಧನನು ಕರ್ಣನನ್ನೂ ಅಶ್ವತ್ಥಾಮನನ್ನೂ ಕುರಿತು ‘ನೀವು ನಿಮ್ಮನಿಮ್ಮಲ್ಲಿ ಕೋಪಿಸಬೇಡಿ; ನಿಮ್ಮ ಪೌರುಷವನ್ನು ಯೋಚಿಸಿ ಕೆಲಸಮಾಡುವುದು. ನಾನೂ ಅಂಗೀಕಾರಮಾಡಿದ ಕೆಲಸವನ್ನು ಮಾಡದೇ ಇರುವುದಿಲ್ಲ’ ಎಂದು ಆ ಸ್ಥಳದಿಂದೆದ್ದು ನಾಯಕರನ್ನು ಬೀಡಿಗೆ ಹೋಗಲು ಹೇಳಿ ತಾನು ಅರಮನೆಯನ್ನು ಪ್ರವೇಶಿಸಿ ಸಾನ್ನ ಭೋಜನ ತಾಂಬೂಲ ಅನುಲೇಪನಗಳಿಂದ ಯುದ್ಧಾಯಾಸವನ್ನು ಹೋಗಲಾಡಿಸಿಕೊಂಡು ಮಂತ್ರಶಾಲೆಗೆ ಬಂದು ಶಲ್ಯ, ಶಕುನಿ, ಶಾರದ್ವತ, ಕೃತವರ್ಮ, ದುಶ್ಶ್ಶಾಸನನೇ ಮೊದಲಾದವರನ್ನು ಬರಮಾಡಿ ಯೋಗ್ಯವಾದ ಸತ್ಕಾರಗಳಿಂದ ಕುಳ್ಳಿರಿಸಿ ೪೭. ರಹಸ್ಯವಾದ ಭೇದೋಪಾಯದಿಂದ ಹಾಗೆ ಆ ಭೀಷ್ಮರನ್ನು ಒಡೆದು ಹಾಕಿದರು. ಈ ದಿನ ಹೀಗೆ ಸುಳ್ಳು ಹೇಳಿ ದ್ರೋಣಾಚಾರ್ಯರನ್ನು ಕೊಂದರು. ಈಗ ಆ ಪಾಂಡವರಿಗೆ ಜಯವಾಗದಿರುವ ರೀತಿ ಯಾವುದು ಎಂಬುದನ್ನು ತಿಳಿಸಿ. ಆ ಶತ್ರುಗಳಲ್ಲಿ ನನಗೆ ಹೇಗೆ ಸ್ನೇಹವುಂಟಾದೀತು. ಪಾಂಡವರ ವಿಷಯದಲ್ಲಿ ಒಳ್ಳೆಯ ಭಾವವು ಬರುವುದು ಹೇಗೆ ಸಾಧ್ಯ? ನೀವೇ ಹೇಳಿರಿ. ವ|| ಎನ್ನಲು ಕೃಪನು ಹೀಗೆಂದನು- ೪೮. ಬಲವನ್ನು ಹೇಳುವುದಾದರೆ ಮೊದಲು ಕೃಷ್ಣನು ಬಂದು

ವ|| ಅದಱಂದಮಿಂ ಪೆಱತು ಮಂತಣಕ್ಕೆಡೆಯಿಲ್ಲ ಮುನ್ನೆ ಚಕ್ಷುಷ್ಮನೆಂಬ ಮನುವಾದ ಕಾಲದೊಳ್ ಧರಾತಳಮನೋಲ್ಲಣಿಗೆಯಿಂ ಪಿೞವಂತೆ ತಳಮೆಯ್ದೆ ಸುರುಳ್ವಿನಂ ಮುಯ್ಯೇೞ್ ಸೂೞ್ ಪಿೞದ ಸಾಹಸಮುಮನಿಂದ್ರಂಗೆ ತನ್ನ ಸಹಜ ಕವಚಮಂ ತಿದಿಯುಗಿದು ಕೊಟ್ಟ ಚಾಗದ ಪೆಂಪುಮಂ ದಿಗ್ವಿಜಯಂಗೆಯ್ದು ಮಿಡಿದನಿತು ಬೇಗದಿಂ ಜರಾಸಂಧನಂ ನೆಲಕ್ಕಿಕ್ಕಿ ಪುಡಿಯೊಳ್ ಪೊರಳ್ಳಿ ಮಲ್ಲಯುದ್ಧದೊಳ್ ಪಿಡಿದಡಿಗೊತ್ತಿದ ಭುಜಬಲಭೀಮನಂ ಗೆಲ್ದ ಸಹಾಸಮುಮಂ ನಮ್ಮ ಪಡೆಯೆಲ್ಲಮಂ ತೊತ್ತೞದುೞದು ಕೊಲ್ವ ಘಟೋತ್ಕಚನೆಂಬ ರೂಕ್ಷ ರಾಕ್ಷಸನಂ ಕೊಂದ ಬೀರಮುಮನಾಲೋಕಾಂತರಂ ನೆಗೞೆ-