ಕಂ|| ನೆಗೞ್ದ ಕಲಿತನದ ಚಾಗದ
ಬಗೆ ತನ್ನೊಳ್ ನೆಗೞ್ತೆವೆತ್ತು ನೆಗೞರೆ ಸಂದಂ|
ಗಗಣಿತ ಗುಣಂಗೆ ಕರ್ಣಂ
ಗೊಗಸುಗುಮೇ ಕಟ್ಟು ಬೀರವಟ್ಟಮನರಸಾ|| ೪೯

ರಥ ಯಾನಪಾತ್ರದಿಂ ಪರ
ರಥಿನೀ ಜಳನಿಯ ಪಾರಮಂ ಸಲ್ವ ಜಗ|
ತ್ಪ್ರಥಿತ ಭುಜದರ್ಪದಿಂದತಿ
ರಥಮಥನಂ ಕರ್ಣಧಾರನಲ್ಲನೆ ಕರ್ಣಂ|| ೫೦

ವ|| ಎಂದು ನುಡಿದ ಕೃಪನ ಮಾತಂ ನೃಪಂ ಮನದೆಗೊಂಡು ಕರ್ಣನ ಮೊಗಮಂ ನೋಡಿ-

ಚಂ|| ನಡುಗುವುದುಂತೆ ಪಾಂಡವ ಬಲಂ ನಿನಗರ್ಜುನೆಂಬನೆಂದುಮು
ರ್ಕುಡುಗಿ ಸುರುಳ್ವನೀಯೆಡೆಗೆ ಪೇೞ್ ಪೆಱರಾರ್ ದೊರೆ ಮೀರವಟ್ಟಮಂ|
ತಡೆಯದೆ ಕಟ್ಟಿ ವೈರಿಗಳ ಪಟ್ಟನೆ ಪಾಱಸಿ ಕಾವುದೆನ್ನ ಬೆ
ಳ್ಗೊಡೆಯುಮನೆನ್ನ ಪಟ್ಟಮುಮನೆನ್ನುಮನಂಗಮಹೀತಳಾಪಾ|| ೫೧

ವ|| ಎಂಬುದುಮಂಗಾರಾಜಂ ನಿನ್ನಾಳ್ಗಳೊಳಾನಾರ ದೊರೆಯೆನಗೆ ಕಾರುಣ್ಯಂ ಗೆಯ್ವೆಯಾಗಿ ಬೆಸಸಿದ ನಿನ್ನ ದಯೆಗೆಯ್ದು ವೀರವಟ್ಟಮೆಂಬುದೆನಗೆಣ್ಬೆರಲ ಪಟ್ಟಮೆಂಬುದುಂ ಬದ್ದವಣಂ ಬಾಜಿಸಿ ಕರ್ಣನಂ ಕನಕಪೀಠದೊಳ್ ಕುಳ್ಳಿರಿಸಿ-

ಪಾಂಡವರೈವರನ್ನು ಅಯ್ದು ಕುಗ್ರಾಮಗಳಲ್ಲಿ ಬಾಳುವ ಹಾಗೆ ಮಾಡು ಎಂದು ಹೇಳಿದರೂ ಕೊಡದಿರುವುದೇ ಹೇಳುವುದು. ಭೀಷ್ಮ ದ್ರೋಣರನ್ನು ಪ್ರತಿಭಟಿಸಿ ಯುದ್ಧದಲ್ಲಿ ಸಂಹರಿಸಿ ಅವರನ್ನು ಗೆದ್ದ ಪಾಂಡವರಲ್ಲಿ ಯುದ್ಧಕ್ಕೆ ತೊಡಗಿರುವುದೇ ನಿನ್ನ ಪರಾಕ್ರಮವನ್ನು ಹೇಳುತ್ತದೆ. ದುರ್ಯೋಧನ! ಹೇಳುವುದು ಮತ್ತೇನಿದೆ? ವ|| ಆದುದರಿಂದ ಬೇರೆ ಮಂತ್ರಾಲೋಚನೆಗೆ ಅವಕಾಶವೇ ಇಲ್ಲ. ಹಿಂದೆ ಚಕ್ಷುಷ್ಮನೆಂಬ ಮನುವಾದ ಕಾಲದಲ್ಲಿ ಭೂಮಂಡಲವನ್ನು ಒದ್ದೆ ಬಟ್ಟೆಯನ್ನು ಹಿಂಡುವಂತೆ ಅಂಗೈಯಲ್ಲಿ ಸುರುಟಿಕೊಂಡು ಇಪ್ಪತ್ತೊಂದು ಸಲ ಹಿಂಡಿದ ಸಾಹಸವೂ ಇಂದ್ರನಿಗೆ ತನ್ನ ಸಹಜಕವಚವನ್ನು ತಿದಿಯ ಚರ್ಮವನ್ನು ಸುಲಿಯುವ ಹಾಗೆ ಅನಾಯಾಸವಾಗಿ ಸುಲಿದುಕೊಟ್ಟ ತ್ಯಾಗದ ಆಕ್ಯವೂ ದಿಗ್ವಿಜಯವನ್ನು ಮಾಡಿ ಚಿಟಿಕೆ ಹಾಕುವಷ್ಟು ಅಲ್ಪ ಕಾಲದಲ್ಲಿ ಜರಾಸಂಧನನ್ನು ನೆಲಕ್ಕೆ ಅಪ್ಪಳಿಸಿ ಹುಡಿಯಲ್ಲಿ ಹೊರಳಿಸಿ ಮಲ್ಲಯುದ್ಧದಲ್ಲಿ ಹಿಡಿದು ಕಾಲಿನ ಕೆಳಕ್ಕೆ ಅಮುಕಿದ ಭುಜಬಲವನ್ನುಳ್ಳ ಭೀಮನನ್ನು ಗೆದ್ದ ಸಾಹಸವೂ ನಮ್ಮ ಸೈನ್ಯವನ್ನೆಲ್ಲ ತುಳಿದು ಕೊಲ್ಲುತ್ತಿದ್ದ ಘೋಟೋತ್ಕಚನೆಂಬ ಕ್ರೂರರಾಕ್ಷಸನನ್ನು ಕೊಂದ ವೀರ್ಯವೂ ಲೋಕದ ಒಳಗೂ ಹೊರಗೂ ಪ್ರಸಿದ್ಧವಾಗಿವೆ. ೪೯. ‘ಪ್ರಸಿದ್ಧವಾದ ಶೌರ್ಯದ ತ್ಯಾಗದ ರೀತಿಗಳೆರಡೂ ಅವನಲ್ಲಿ ಖ್ಯಾತಿಗೊಂಡಿವೆ. ಅಸಂಖ್ಯಾತಗುಣಗಳಿಂದ ಕೂಡಿದ ಕರ್ಣನಿಗೆ ಇದು ಅತಿಶಯವೇ? ರಾಜನೇ ಅವನಿಗೆ ವೀರಪಟ್ಟವನ್ನು ಕಟ್ಟು. ೫೦. ರಥವೆಂಬ ನಾವೆಯಿಂದ ಶತ್ರುಸೇನಾಸಮುದ್ರದ ಆಚೆಯ ದಡವನ್ನು ತನ್ನ ಭುಜಬಲದಿಂದ ದಾಟಿಸಬಲ್ಲ ಶೂರನಾದ ಕರ್ಣಧಾರನಲ್ಲವೇ ಕರ್ಣ! ವ|| ಎಂದು ಹೇಳಿದ ಕೃಪನ ಮಾತನ್ನು ರಾಜನು ಒಪ್ಪಿ ಕರ್ಣನ ಮುಖವನ್ನು ನೋಡಿ- ೫೧ ‘ಕರ್ಣಾ’! ಪಾಂಡವಸೈನ್ಯವು ಸುಮ್ಮನೆ ನಿನಗೆ ನಡುಗುತ್ತದೆ. ಅರ್ಜುನನೆಂಬುವನು ಯಾವಾಗಲೂ ಉತ್ಸಾಹಶೂನ್ಯನಾಗಿ ಮುದುರಿಕೊಳ್ಳುತ್ತಾನೆ. ಈ ಸ್ಥಾನಕ್ಕೆ ಮತ್ತಾರು ಅರ್ಹರು? ಹೇಳು. ವೀರಪಟ್ಟವನ್ನು ತಡಮಾಡದೆ ಕಟ್ಟಿಕೊಂಡು ವೈರಿಗಳನ್ನು ಪಟ್ಟನೆ ಹಾರಿಹೋಗುವಂತೆ ಮಾಡಿ ನನ್ನ ಶ್ವೇತಚ್ಛತ್ರವನ್ನೂ ನನ್ನ ರಾಜಪಟ್ಟವನ್ನೂ ನನ್ನನೂ ಕಾಪಾಡಬೇಕು.’ ವ|| ಎನ್ನಲು ಕರ್ಣನು ದುರ್ಯೋಧನಾ! ನಿನ್ನ ಸೇವಕರಲ್ಲಿ ನಾನು ಯಾರಿಗೆ ಸಮಾನ? ನೀನು ಕರುಣೆಯಿಂದ ದಯಮಾಡಿ ಆಜ್ಞೆ ಮಾಡಿಕೊಟ್ಟ ಈ ವೀರಪಟ್ಟವೆಂಬುದು ನನ್ನ ಎಂಟುಬೆರಳಿನಗಲವಿರುವ ನನ್ನ ಹಣೆಗೆ ಕಟ್ಟುವ ಪಟ್ಟ ಎಂದನು. ಮಂಗಳವಾದ್ಯವನು

ಕಂ|| ಮೊರೆಯೆ ಪಗಳ್ ಭೋರೆಂದೋರಂತೆ ಮಂಗಳಗೀತಿಗಳ್
ನೆರೆಯೆ ಗಣಿಕಾನೀಕಂ ಬಂದಾಡೆ ಪುಣ್ಯಜಲಂಗಳಿಂ|
ತರಿಸಿ ಮಿಸಿಸುತ್ತಾಗಳ್ ತಾಂ ತನ್ನ ಕೆಯ್ಯೊಳೆ ಕಟ್ಟಿದಂ
ಕುರುಪರಿವೃಢಂ ಕರ್ಣಂಗಾ ವೀರವಟ್ಟದ ಪಟ್ಟಮಂ|| ೫೨

ವ|| ಅಂತು ವೀರವಟ್ಟಮಾ ವೀರನ ನೊಸಲೊಳಸದಳಮೆಸೆದುಪಾಶ್ರಯಂಬಡೆಯೆ ಕಟ್ಟಿ ನಿಜಾಂತಪುರ ಪರಿವಾರಂಬೆರಸು ಸೇಸೆಯಿಕ್ಕಿ ತನ್ನ ತುಡುವ ತುಡಿಗೆಗಳೆಲ್ಲಮಂ ನೆಯೆ ತುಡಿಸಿ ದೇವಸಬಳದ ಪದಿನೆಂಟು ಕೋಟಿ ಪೊನ್ನುಮಂ ತರಿಸಿಕೊಟ್ಟು ಮಣಿಮಯ ಮಂಡನಾಯೋಗದೊಳ್ ನೆಯೆ ಪಣ್ಣಿದ ಮದಾಂಧಸಿಂಧುರಮನೇಱಲ್ ತರಿಸಿಕೊಟ್ಟು ಬೀಡಿಂಗೆ ಪೋಗೆನೆ ಪೋಗೆ ಹಸ್ತಿಯ ಬೆಂಗೆವಂದು ಸುತ್ತಿಱದು ಪಗಲಂ ತಡವಿಕ್ಕಿದಂತೆ ಬೆಳಗುವ ಕೆಯ್ದೀವಿಗೆಗಳ ಬೆಳಗೆ ಬೆಳಗಾಗೆ ತಲೆಯೊಳ್ ನಾಲಗೆಯುಳ್ಳ ಬೂತುಗಳ್ಗೆಲ್ಲ ಮಿಲ್ಲೆನ್ನದೀಯುತ್ತುಂ ನಿಜನಿವಾಸಕ್ಕೆ ವಂದು ನಿತ್ಯದಾನಕ್ಕೆಂದು ನಿಯೋಗಿಗಳ್ ತಂದು ಪುಂಜಿಸಿದ ಪಂಚರತ್ನದ ಪೊನ್ನರಾಶಿಗಳನರ್ಥಿ ಜನಕ್ಕೆ ಗೋಸನೆಯಿಟ್ಟು ಕುಡುವೇೞ್ದು ನಾಯಕರ್ಗೆಲ್ಲಮುಂಡಲುಂ ತುಡಲುಂ ಕೊಟ್ಟು ನೇಸಱ್ ಮೂಡುವಾಗಳ್ ತಮ್ಮ ಪಡೆಯನೀ ಮಾೞ್ಕೆಯೊಳೊಡ್ಡಿಮೆಂದು ಪಡೆವಳರ್ಗೆ ಬೆಸಸಿ ನಿಜವಿಜಯತುರಗರಥಂಗಳನರ್ಚಿಸಿ ಪೊಡೆವಟ್ಟು ದರ್ಭಾಸ್ತರಣ ದೊಳಾಯಿರುಳಂ ಕಳೆದಾಗಳ್-

ಕಂ|| ಉದಯಗಿರಿ ತಟದೊಳುದಯಿಸು
ವದಿತಿಪ್ರಿಯಪುತ್ರನಲ್ಲದಿತ್ತೊರ್ವಂ ಭಾ|
ನು ದಲೊಗೆದನೆನಿಪ ತೇಜದ
ಪೊದೞ್ಕೆಯಿಂ ಜನದ ಮನಮನಲೆದಂ ಕರ್ಣಂ|| ೫೩

ವ|| ಆಗಳಾ ಚತುರ್ವೇದ ಪಾರಗರಪ್ಪ ಧರಾಮರರ್ಗೆ ನಿತ್ಯದಾನಮಂ ಕೊಟ್ಟು ಸಿಡಿಲ ಬಳಗಮನೊಳಕೊಂಡಂತೆ ತೞತೞಸಿ ಪೊಳೆವ ಕೆಯ್ದುಗಳ್ ತೀವಿದ ವಾರುವದ ಬೋರಗುದುರೆಗಳೊಳ್ ಪೂಡಿದ ಪಸುರ್ವೊನ್ನ ರಥಮನೇಱ ಮುನ್ನೊರ್ವನೆ ಶರಶಯನದೊಳಿರ್ದ ಗಾಂಗೇಯನಲ್ಲಿಗೆ ಬಂದು ರಥದಿಂದಮಿೞದು ಮೂಱು ಬಲವಂದು ತದೀಯ ಪಾದಪದ್ಮಂಗಳಂ ತಲೆಯೊಳಿಟ್ಟುಕೊಂಡು-

ಕಂ|| ಆಮ್ಮಾತಱಯದೆ ಮುಳಿದುಂ
ನಿಮ್ಮಡಿಯುಂ ನೋಯೆ ನುಡಿದೆನುಱದೇಳಿಸಲೇ|
ನೆಮ್ಮಳವೆ ಮವುದಾ ಮನ
ದುಮ್ಮಚ್ಚರಮಜ್ಜ ನಿಮ್ಮನೆರೆಯಲೆ ಬಂದೆಂ|| ೫೪

ಬಾಜಿಸಿ ಕರ್ಣನನ್ನು ಚಿನ್ನದ ಪೀಠದಲ್ಲಿ ಕುಳ್ಳಿರಿಸಿ ೫೨. ತಮಟೆಗಳು ಭೋರೆಂದು ಒಂದೇ ಸಮನಾಗಿ ಶಬ್ದಮಾಡುತ್ತಿರಲು ಮಂಗಳಗೀತೆಗಳು ಕೂಡಿರಲು ವೈಶ್ಯೆಯರ ಸಮೂಹವು ಬಂದು ನೃತ್ಯಮಾಡುತ್ತಿರಲು ಕೌರವಶ್ರೇಷ್ಠನಾದ ದುರ್ಯೋಧನನು ಪುಣ್ಯತೀರ್ಥಗಳನ್ನು ತರಿಸಿ ಕರ್ಣನಿಗೆ ಸ್ನಾನಮಾಡಿಸಿ ಆಗ ತಾನೆ ತನ್ನ ಕಯ್ಯಿಂದಲೆ ವೀರಪಟ್ಟವನ್ನು ಹಣೆಗೆ ಕಟ್ಟಿದನು. ವ|| ಹಾಗೆ ಆ ವೀರಪಟ್ಟವು ಆ ವೀರನ ಹಣೆಯಲ್ಲಿ ಅತಿಶಯವಾಗಿ ಪ್ರಕಾಶಿಸಿ ವಿಶೇಷಾಶ್ರಯವನ್ನು ಪಡೆಯುವಂತೆ ಕಟ್ಟಿ ತನ್ನ ಅಂತಪುರ ಪರಿವಾರದೊಡನೆ ಕೂಡಿ ಅಕ್ಷತೆಯಿಂದ ಹರಸಿ ತಾನು ತೊಡುವ ಆಭರಣಗಳನ್ನೆಲ್ಲವನ್ನೂ ಅವನಿಗೆ ತುಂಬ ತೊಡಿಸಿದನು. ದೇವತೆಗಳ ಅಳತೆಯಲ್ಲಿ ಹಿದಿನೆಂಟುಕೋಟಿ ಸುವರ್ಣವನ್ನು ತರಿಸಿಕೊಟ್ಟನು. ರತ್ನಖಚಿತವಾದ ಅಲಂಕಾರಗಳಿಂದ ಪೂರ್ಣವಾಗಿ ಸಿದ್ಧಪಡಿಸಿದ ಮದ್ದಾನೆಯನ್ನು ಏರುವುದಕ್ಕೆ ತರಿಸಿಕೊಟ್ಟು ಬೀಡಿಗೆ ಹೋಗು ಎಂದು ಕಳುಹಿಸಿ ಕೊಟ್ಟನು. ಕರ್ಣನು ಆನೆಯ ಬೆನ್ನಿಗೆ ಸುತ್ತಲೂ ವ್ಯಾಪಿಸಿ ಹಗಲನ್ನು ದೊಡ್ಡದು ಮಾಡಿದ ಹಾಗೆ ಬೆಳಗುತ್ತಿರುವ ಕೈದೀವಟಿಗೆಗಳ ಬೆಳಕೇ ಬೆಳಕಾಗಿರಲು ತಲೆಯಲ್ಲಿ ನಾಲಗೆಯಿರುವ ಎಲ್ಲ ಪ್ರಾಣಿಗಳಿಗೂ ಇಲ್ಲ ಎನ್ನದೆ ದಾನಮಾಡುತ್ತ ತನ್ನ ಮನೆಗೆ ಬಂದನು. ನಿಯೋಗಿಗಳು ತಂದು ರಾಸಿ ಹಾಕಿಸಿದ ಪಂಚರತ್ನದ ಮತ್ತು ಚಿನ್ನದ ರಾಶಿಗಳನ್ನು ಬೇಡುವವರಿಗೆ ಕೂಗಿ ಕರೆದು ದಾನಮಾಡಹೇಳಿ ನಾಯಕರುಗಳಿಗೆಲ್ಲ ಉಡುವುದಕ್ಕೂ ತೊಡುವುದಕ್ಕೂ ಕೊಟ್ಟು ಸೂರ್ಯೋದಯವಾದಾಗ ನಮ್ಮ ಸೈನ್ಯವನ್ನು ಈ ರೀತಿಯಲ್ಲಿ ರಚಿಸಿ ಎಂದು ನಾಯಕರಿಗೆ ಆಜ್ಞೆ ಮಾಡಿ ತನ್ನ ವಿಜಯಶಾಲಿಯಾದ ಕುದುರೆ ಮತ್ತು ತೇರುಗಳನ್ನು ಪೂಜೆ ಮಾಡಿ ನಮಸ್ಕರಿಸಿ ದರ್ಭಾಸನದಲ್ಲಿ ಆ ರಾತ್ರಿಯನ್ನು ಕಳೆದನು. ೫೩. ಉದಯಪರ್ವತದ ದಡದಲ್ಲಿ ಹುಟ್ಟುವ ಅದಿತಿದೇವಿಯ ಪ್ರಿಯಪುತ್ರನಾದವನೇ ಅಲ್ಲದೆ ಈ ಕಡೆ ಬೇರೊಬ್ಬ ಸೂರ್ಯನು ಹುಟ್ಟಿದ್ದಾನಲ್ಲವೇ ಎನ್ನುವಂತಿರುವ ತೇಜಸ್ಸಿನ ವ್ಯಾಪ್ತಿಯಿಂದ ಜನರ ಮನಸ್ಸನ್ನು ಕರ್ಣನು ಆಕರ್ಷಿಸಿದನು. ವ|| ಆಗ ನಾಲ್ಕು ವೇದಗಳಲ್ಲಿ ಪಂಡಿತರಾಗಿರುವ ಬ್ರಾಹ್ಮಣರಿಗೆ ನಿತ್ಯದಾನವನ್ನು ಕೊಟ್ಟು ಸಿಡಿಲರಾಶಿಯನ್ನು ಒಳಗೊಂಡಿರುವ ಹಾಗೆ ಥಳಥಳಸಿ ಹೊಳೆಯುವ ಆಯುಧಗಳು ತುಂಬಿರುವ, ವಿವಿಧಜಾತಿಯ ಕುದುರೆಗಳನ್ನು ಹೂಡಿರುವ ಹಸುರು ಚಿನ್ನದ ರಥವನ್ನು ಏರಿ ಮೊದಲು ಒಬ್ಬನೇ (ಏಕಾಕಿಯಾಗಿ) ಬಾಣದ ಹಾಸಿಗೆಯಲ್ಲಿ ಮಲಗಿದ್ದ ಭೀಷ್ಮನ ಹತ್ತಿರಕ್ಕೆ ಬಂದು ತೇರಿನಿಂದಿಳಿದು ಮೂರುಸಲ ಪ್ರದಕ್ಷಿಣೆ ಮಾಡಿ ಅವನ ಪಾದಕಮಲಗಳನ್ನು ತನ್ನ ತಲೆಯಲ್ಲಿಟ್ಟು ಹೇಳಿದನು.

೫೪. ‘ನಾನು ಮಾತನಾಡುವ ರೀತಿಯನ್ನು ತಿಳಿಯದೆ ಕೋಪಿಸಿಕೊಂಡು ನಿಮ್ಮ ಮನಸ್ಸು ನೋಯುವ ಹಾಗೆ ಮಾತನಾಡಿದೆ.

ಧುರದೊಳ್ || ನಿಮ್ಮಡಿಯುಂ ಗೆಲ
ಲರಿಯವುಮಾಪಾಂಡುಸುತರನೆಮ್ಮಂದಿಗರ|
ಚ್ಚರಿಯಲ್ತೆ ಗೆಲ್ವರೆಂಬುದು
ಹರಿಗನೊಳಿಱದೆಂತುಮೆನ್ನ ಚಲಮನೆ ಮೆವೆಂ|| ೫೫

ವ|| ಎಂಬುದುಂ ಕುರುಪಿತಾಮಹನಹರ್ಪತಿಸುತನನಿಂತೆಂದಂ-

ಅನವದ್ಯಂ|| ನುಡಿವುದಂ ಪತಿಭಕ್ತಿಯ ಪೆಂಪಿಂ ನೀಂ ನುಡಿದೈ ಪೆಱತಂದದಿಂ
ನುಡಿದೆಯಲ್ತೆ ಮದಾಯಮಮೋಘಂ ಸೂೞ್ವಡೆಯಲ್ಕೆನಗಕ್ಕುಮಿ|
ನ್ನೆಡೆಯೊಳೆಂದೆಮದೆಂದುದದೇಂ ತಪ್ಪಾದುದೆ ನಮ್ಮೊವಜರ್ ಜಸಂ
ಬಡೆದ ಭಾರ್ಗವರಪ್ಪುದಱಂದಂ ನಂಟರುಮಂಗಮಹೀಪತೀ|| ೫೬

ವ|| ಅದಲ್ಲದೆಯುಂ ನೀನೆಮಗೆ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದ ಮೊಮ್ಮನೈ

ಉ|| ನಿನ್ನನೆ ನಚ್ಚಿದಂ ಕುರುಮಹೀಪತಿ ನಿನ್ನ ಶರಾವಳಿಗಳ್ಗೆ ಮು
ನ್ನನ್ನಡುಗುತ್ತುಮಿರ್ಪುದರಿಸಾಧನಸಂಪದಮಂತೆ ಶಸ್ತ್ರ ಸಂ|
ಪನ್ನನೆ ಆಗಿ ಶಲ್ಯನನೆ ಸಾರಥಿಯಾಗಿರೆ ಮಾಡಿ ಕಾದು ನೀಂ
ನಿನ್ನಯ ಬಲ್ಲ ಮಾೞ್ಕೆಯೊಳಿದಂ ನುಡಿದೆಂ ನಿನಗಂಗವಲ್ಲಭಾ|| ೫೭

ಕಂ|| ಎನೆ ನೆಗೞ್ದ ಕುಲದ ಚಲದೊ
ಳ್ಪಿನ ಭೂಪನನೆನಗೆ ತೇರನೆಸಗೆಂದೊಡೆ ಸ|
ದ್ವಿನಯಮುಱದುರ್ಕಿ ಕುಲಹೀ
ನನೆಂಬ ಪರಿವಾದಮೀಗಳೆನಗಾಗಿರದೇ|| ೫೮

ಆಯದ ಕಟ್ಟಾಳ್ ನೀಂ ಮೊದ
ಲೀ ಯುಗದೊಳ್ ಪೆಱರುಮೊಳರೆ ಸಾವಕ್ಕೆ ಜಯ|
ಶ್ರೀಯಕ್ಕೆ ಧಾತ್ರನಿಂ ಕ
ಟ್ಟಾಯದ ಬೞಸಂದು ನಿಮ್ಮನಾಂ ಮೆಚ್ಚಿಸುವೆಂ|| ೫೯

ವ|| ಎಂಬುದು ಸಿಂಧುತನೂಜನಂಗಾರಾಜನ ನಯದ ವಿನಯದ ಪಾೞಯ ಪಸುಗೆಯ ನುಡಿಗಳ್ಗೆ ಮನದೇಗೊಂಡೀತಂ ಕುಲಹೀನನಲ್ಲನುಭಯಕುಲ ಶುದ್ಧನಾಗಲೆ ವೇೞ್ಕುಮೆಂದು ನಿಶ್ಚೆ ಸಿ ನೀನೆಮಗಿಂಬು ಕೆಯ್ವೊಡಂ ಸುಯೋಧನನ ರಾಜ್ಯಮನೊಲ್ವೊಡಂ

ಸುಮ್ಮನೆ ನಿಮ್ಮನ್ನು ತಿರಸ್ಕಾರಮಾಡಲು ಸಾಧ್ಯವೇನು? ಅಜ್ಜ, ಮನಸ್ಸಿನ ಆ ಹೆಚ್ಚಾದ ಕೋಪವನ್ನು ಮರೆತುಬಿಡುವುದು. ನಿಮ್ಮನ್ನು ಪ್ರಾರ್ಥಿಸುರುದಕ್ಕಾಗಿಯೇ ಬಂದಿದ್ದೇನೆ’ ೫೫. ಯುದ್ಧದಲ್ಲಿ (ನಿಮ್ಮ ಪಾದಗಳೂ) ನೀವೂ ಗೆಲ್ಲುವುದಕ್ಕೆ ಅಸಾಧ್ಯರಾದ ಆ ಪಾಂಡವರನ್ನು ನಮ್ಮಂತಹವರು ಗೆಲ್ಲುವರೆಂಬುದು ಆಶ್ಚರ್ಯವಲ್ಲವೇ? ಆದರೂ ಅರ್ಜುನನೊಡನೆ ಯುದ್ಧ ಮಾಡಿ ನನ್ನ ಛಲವನ್ನೇ ಪ್ರಕಾಶಪಡಿಸುತ್ತೇನೆ. ವ|| ಎನ್ನಲು ಕುರುಪಿತಾಮಹನಾದ ಭೀಷ್ಮನು ಸೂರ್ಯಪುತ್ರನಾದ ಕರ್ಣನಿಗೆ ಹೀಗೆಂದನು. ೫೬. ಹೇಳುವುದನ್ನು ನೀನು ಸ್ವಾಮಿ ಭಕ್ತಿಯ ಆಕ್ಯದಿಂದ ಹೇಳಿದ್ದೀಯೆ. ಬೇರೆ ರೀತಿಯಿಂದ ನುಡಿಯಲಿಲ್ಲ; ‘ನನ್ನ ಶಕ್ತಿಯು ಬೆಲೆಯಿಲ್ಲದ್ದು, ಸರದಿಯನ್ನು ಪಡೆಯುವುದಕ್ಕೆ ಈ ಸನ್ನಿವೇಶದಲ್ಲಿ ನನಗೂ ಅವಕಾಶವುಂಟು’ ಎಂದು ಹೇಳುವುದು ತಪ್ಪಾದುದೇನು? ನಮ್ಮಿಬ್ಬರ ಉಪಾಧ್ಯಾಯರಾಗಿದ್ದವರು ಯಶಶ್ಶಾಲಿಗಳಾದ ಪರಶುರಾಮರಾದುದರಿಂದ ಕರ್ಣ, ನಾವು ನಂಟರೂ ಆಗಿದ್ದೇವೆ. ವ|| ಅಷ್ಟೇ ಅಲ್ಲದೆ ನೀನು ನಮಗೆ ಕುಂತಿ ಮತ್ತು ಗಾಂಧಾರಿಯರ ಮಕ್ಕಳಾದ ಪಾಂಡವ ಕೌರವರ ಹಾಗೆಯೇ ಮೊಮ್ಮಗನಪ್ಪ. ೫೭. ಕೌರವ ಮಹಾರಾಜನು ನಿನ್ನನ್ನೇ ನಂಬಿದ್ದಾನೆ. ನಿನ್ನ ಈ ಬಾಣಗಳ ಸಮೂಹಕ್ಕೆ ಶತ್ರುಸಾಧನಸಂಪತ್ತೆಲ್ಲ ಮೊದಲೇ ನಡುಗುತ್ತಿದೆ. ಹಾಗೆಯೇ ಆಯುಧಸಂಪತ್ತುಳ್ಳವನಾಗಿ ಶಲ್ಯನನ್ನೇ ಸಾರಥಿಯನ್ನಾಗಿರುವಂತೆ ಮಾಡಿಕೊಂಡು ನಿನಗೆ ತಿಳಿದ ರೀತಿಯಲ್ಲಿ ಯುದ್ಧಮಾಡು ಕರ್ಣ, ಇದು ನನ್ನ ಸೂಚನೆ, ಅಷ್ಟೆ,

೫೮. ಎನ್ನಲು ಒಳ್ಳೆಯ ಕುಲವನ್ನೂ ಚಲವನ್ನೂ ಉಳ್ಳ ರಾಜನಾದ ಶಲ್ಯನನ್ನು ನನಗೆ ಸಾರಥಿಯಾಗಿರುವ ಎಂದು ಹೇಳಿದರೆ ಉಚಿತವಾದ ವಿನಯವನ್ನು ಬಿಟ್ಟು ಗರ್ವಿಸಿ ನುಡಿದ ಹೀನಕುಲದವನೆಂಬ ಅಪವಾದವು ಈಗ ನನಗೆ ತಟ್ಟುವುದಿಲ್ಲವೆ? ೫೯. ಈ ಯುಗದ ಶಕ್ತಿಯತರಾದವರಲ್ಲಿ ನೀವು ಮೊದಲಿಗರು. ಬೇರೆಯವರಿದ್ದಾರೆಯೇ? ಸಾವಾಗಲಿ ಜಯಸಂಪದವಾಗಲಿ ವಿಧಾತ್ರನಿಂದ (ವಿವಶದಿಂದ) ಹೆಚ್ಚಿನ ಶೌರ್ಯದ ದಾರಿಯನ್ನೇ ಹಿಡಿದು ನಿಮ್ಮನ್ನು ಮೆಚ್ಚಿಸುತ್ತೇನೆ. ವ|| ಎನ್ನಲು ಭೀಷ್ಮನು ಕರ್ಣನ ನೀತಿಯಿಂದಲೂ ನಮ್ರತೆಯಿಂದಲೂ

ಶಲ್ಯನನೆ ಸಾರಥಿ ಮಾಡಿ ಕಾದುವುದೆಂದು ಪರಸಿ ಪೋಗೆಂಬುದುಂ ಮಹಾ ಪ್ರಸಾದಮೆಂದು ಪೊಡೆವಟ್ಟು ಸಂಗ್ರಾಮಭೂಮಿಗೆ ವಂದು ಹಸ್ತ್ಯಶ್ವರಥ ಪದಾತಿಬಲಂಗಳನೊಂದುಮಾಡಿ ಮಕರವ್ಯೂಹಮನೊಡ್ಡಿದಂ ಪಾಂಡವ ಪತಾಕಿನಿಯುಮರ್ಧಚಂದ್ರವ್ಯೂಹಮನೊಡ್ಡಿ ನಿಂದುದಿತ್ತ ಪರಸೈನ್ಯಭೈರವಂ ಪುರುಷೋತ್ತಮನನಿಂತೆಂದಂ-

ಮ|| ಸ್ರ|| ಪಿರಿದುಂ ಕಾಯ್ಪಿಂದಮೆನ್ನೊಳ್ ನೆರೆದಿಱಯಲೆ ಪೂಣ್ದತ್ತ ಸಂಸಪ್ತಕರ್ಕಳ್
ಕರೆವರ್ ಮತ್ತಿತ್ತ ಕರ್ಣಂ ಚಲ ಚಲದಿಱಯಲ್ ನಿಂದನೇಗೆಯ್ವುದೆಂದಾಂ|
ನರನಂ ಮುನ್ನಂ ತ್ರಿಗರ್ತಾಪ ಬಲಮನದಂ ನುರ್ಗು ನೀನೆಂದು ತೇರಂ
ಹರಿ ಕೊಂಡತ್ತುಯ್ದನಿತ್ತೊರ್ಮೊದಲುಭಯಬಲಂ ತಾಗಿ ಕಾದಿತ್ತು ಬೇಗಂ|| ೬೦

ವ|| ಅಂತು ಚತುರ್ವಲಂಗಳೊಂದೊಂದಳ್ ಕಾದೆ ನಟ್ಟ ಸರಲ್ವಿಡಿದು ಕರಗದ ಧಾರೆಯಂತೆ ಸುರಿವ ನೆತ್ತರ ಧಾರೆಗಳಂಬಿರಿವಿಡುವಿನಮತ್ತಮಿತ್ತಮುರ್ಚಿವೋಪ ಕಿತ್ತಂಬುಗಳಿಂ ಸುರುಳ್ದುರುಳ್ದ ಧನುರ್ಧರರುಮಂ ಧನುರ್ಧರರೆಚ್ಚ ಶರನಿಕರಂಗಳಿಂ ನೆಯ್ ಪೇಱುವಂತಂಬನೆ ಪೇಱ ಪೆಱಗೆಡೆದ ತುರುಷ್ಕ ತುರಂಗಂಗಳುಮಂ ಕೆದಱ ಬೆದಱ ಬೆಂಕೊಂಡು ತೊತ್ತೞದುೞವ ಮದೇಭಂಗಳುಮಂ ಮದೇಭಂಗಳನಾರ್ದು ಬಿಟ್ಟಿಕ್ಕುವ ನಿಷಾದಿಗಳೞಯೆ ಪೊರಜೆವಿಡಿದು ಕೊರಲ ಬಳಿಗಳೊಳೆ ಕಾಲ್ಗೋದು ಪರಿಯಿಸುವ ರಸತ್ತಾರುಗರುಮಂ ಆ ರಸತ್ತಾರುಗರಿಡುವಿಟ್ಟಿಯ ಪಿಡಿಕುತ್ತಿನ ಕಕ್ಕಡೆಯ ಕೋಳ್ಗೆ ಮರಪಟಲಂ ಪಾಯ್ದು ಕೆಡೆದನಾರೂಢದಿಂ ಪೇಸೇೞೆ ತುೞದು ಕೊಲ್ವ ಕರಿಗಳ ಕರ ವದನ ಗಾತ್ರ ಲಾಂಗೂಲ ಘಾತದಿಂದಮುಡಿದು ಕೆಡೆದ ರಥಂಗಳಂ ರಥಂಗಳಿಟ್ಟೆಡೆಯೊಳ್ ಕಿಂಕೊೞೆಯಾಗಿ ಪೆತ್ತ ಕೆನ್ನೆತ್ತರೊಳ್ ಮೆತ್ತಿ ರೂಪಱಯಲಾಗದಂತಿರ್ದ ವೀರಭಟರಗುರ್ವಂ ಪಡೆಯೆ ಕರ್ಣನನೇಕ ವಿಕರ್ಣಕೋಟಿಗಳಿಂ ಪಾಂಡವ ಬಲಮನಸುಂಗೊಳೆ ಕಾದುವಲ್ಲಿ ಪಾಂಡವ ಬಲದೊಳ್ವೆಸರಱಕೆಯ ನಾಯಕಂ ಕೃತವರ್ಮಂ ಕೌರವಬಲದ ನಾಯಕಂ ಚಿತ್ರಸೇನನನಗುರ್ವಾಗೆ ತಾಗಿ-

ಧರ್ಮದಿಂದಲೂ (ಸಂಪ್ರದಾಯಬದ್ಧವಾದ) ಕೂಡಿದ ವಿವೇಕದ ಮಾತುಗಳಿಗೆ ಮನಸ್ಸಿನಲ್ಲಿ ಸಂತೋಷಸಿ (ಒಪ್ಪಿ) ಇವನು ಹೀನಕುಲದವನಲ್ಲ; (ತಾಯಿ ತಂದೆಗಳ) ಎರಡು ವಂಶಗಳ ಕಡೆಯಿಂದಲೂ ಶುದ್ಧನೇ ಆಗಿರಬೇಕು ಎಂದು ನಿಶ್ಚೆ ಸಿ ನೀನು ನನಗೆ ಹಿತವಾದುದನ್ನು ಮಾಡುವುದಾದರೆ ದುರ್ಯೋಧನನ ರಾಜ್ಯವನ್ನು ಪ್ರೀತಿಸುವುದಾದರೆ ಶಲ್ಯನನ್ನೇ ಸಾರಥಿಯನ್ನಾಗಿ ಮಾಡಿ ಕಾದುವುದು ಎಂದು ಹರಸಿ ಬೀಳ್ಕೊಟ್ಟನು. ಕರ್ಣನು ‘ಇದು ಪರಮಾನುಗ್ರಹ’ ಎಂದು ನಮಸ್ಕಾರ ಮಾಡಿ ಯುದ್ಧರಂಗಕ್ಕೆ ಬಂದು ಆನೆ, ಕುದುರೆ, ತೇರು ಮತ್ತು ಕಾಲಾಳು ಸೈನ್ಯವನ್ನು ಒಟ್ಟಿಗೆ ಸೇರಿಸಿ ಮೊಸಳೆಯ ಆಕಾರದ ಸೇನಾರಚನೆಯನ್ನು ಮಾಡಿ ಚಾಚಿದನು. ಪಾಂಡವಸೈನ್ಯವೂ ಅರ್ಧಚಂದ್ರಾಕಾರದ ರಚನೆಯನ್ನು ರಚಿಸಿ ಚಾಚಿ ನಿಂತಿತು. ಈ ಕಡೆ ಪರಸೈನ್ಯಭೈರವನಾದ ಅರ್ಜುನನು ಪುರುಷೋತ್ತಮನಾದ ಕೃಷ್ಣನನ್ನು ಕುರಿತು ಹೀಗೆಂದನು. ೬೦. ಸಂಸಪ್ತಕರುಗಳು ವಿಶೇಷಕೋಪದಿಂದ ಕೂಡಿ ನನ್ನಲ್ಲಿ ಯುದ್ಧಮಾಡಲು ಪ್ರತಿಜ್ಞೆ ಮಾಡಿ ಆ ಕಡೆಗೆ ಕರೆಯುತ್ತಿದ್ದಾರೆ. ಮತ್ತು ಈ ಕಡೆ ಕರ್ಣನು ವಿಶೇಷಛಲದಿಂದ ಯುದ್ಧಮಾಡಲು ನಿಂತಿದ್ದಾನೆ. ಏನು ಮಾಡುವುದು ಎಂದು ಕೇಳಿದನು. ‘ಮೊದಲು ತ್ರಿಗರ್ತದೇಶದ ರಾಜನ ಸೈನ್ಯವನ್ನು ಪುಡಿಮಾಡು’ ಎಂದು ಹೇಳಿ ತೇರನ್ನು ಕೃಷ್ಣನು ಆ ಕಡೆಗೆ ನಡೆಸಿಕೊಂಡು ಹೋದನು. ಈ ಕಡೆ ತಕ್ಷಣವೇ ಎರಡು ಸೈನ್ಯಗಳೂ ಸಂಘಟ್ಟಿಸಿ ವೇಗವಾಗಿ ಯುದ್ಧಮಾಡಿದವು.ವ|| ಹಾಗೆ ನಾಲ್ಕು ಸೈನ್ಯಗಳೂ ಒಂದರೊಡನೊಂದು ಸೇರಿ ಯುದ್ಧಮಾಡಲು ನಾಟಿದ ಬಾಣವನ್ನೇ ಅನುಸರಿಸಿ ಗಿಂಡಿ (ಕರಗ)ಯಿಂದ ಸುರಿಯುವ ಧಾರೆಯಂತೆ ಸುರಿಯುತ್ತಿರುವ ರಕ್ತಧಾರೆಗಳು ಪ್ರವಾಹವಾಗಿ ಹರಿದುವು. ಆ ಕಡೆ ಈ ಕಡೆ ಭೇದಿಸಿ ಹೋಗುವ ಸಣ್ಣ ಬಾಣಗಳಿಂದ ಸುರುಳಿಗೊಂಡು ಉರುಳಿಬಿದ್ದಿರುವ ಬಿಲ್ಗಾರರಿಂದಲೂ ಬಿಲ್ಗಾರರು ಹೊಡೆದ ಬಾಣಗಳ ಸಮೂಹದಿಂದ ಮುಳ್ಳುಹಂದಿಗಳನ್ನು ಹೇರುವಂತೆ ಬಾಣವನ್ನು ಹೇರಿ ಹಿಂದೆಬಿದ್ದ ತುರುಕದೇಶದ ಕುದುರೆಗಳಿಂದಲೂ ಚೆಲ್ಲಾಪಿಲ್ಲಿಯಾಗಿ ಹೆದರಿ ಹಿಂಬಾಲಿಸಿ ಅಜ್ಜುಗುಜ್ಜಾಗಿ ತುಳಿದು ಹಾಕುವ ಮದ್ದಾನೆಗಳಿಂದಲೂ ಮದ್ದಾನೆಗಳನ್ನು ಕೂಗಿಕೊಂಡು ಛೂಬಿಡುವ ಮಾವಟಿಗರು ನಾಶವಾಗಲು ಹಗ್ಗವನ್ನೇ ಹಿಡಿದುಕೊಂಡು ಕತ್ತಿನ ಪಕ್ಕದಲ್ಲಿಯೇ ತಮ್ಮ ಕಾಲನ್ನು ಪೋಣಿಸಿ ಹರಿಯಿಸುವ ಹೊಸ ಮಾವಟಿಗರಿಂದಲೂ ಆನೆಯ ಮೇಲೆಯೇ ಕುಳಿತು ಯುದ್ಧಮಾಡುವವರಿಂದಲೂ ಆ ಗಜಾರೋಹಕರು ಎಸೆಯುತ್ತಿರುವ ಈಟಿಯ ಹೊಡೆತಕ್ಕೆ ಚಿಮ್ಮಿ ಕೆಳಗೆ ಬಿದ್ದವರನ್ನು ತುಳಿಯುತ್ತಿರುವ ಆನೆಗಳಿಂದಲೂ ಆನೆಗಳ ಸೊಂಡಿಲು, ಮುಖ, ಶರೀರ ಮತ್ತು ಬಾಲಗಳ ಪೆಟ್ಟಿನಿಂದ ಒಡೆದು ಕೆಳಗೆ ಬಿದ್ದ ತೇರುಗಳಿಂದಲೂ ತೇರಿನ ಇಕ್ಕಟ್ಟುಗಳಲ್ಲಿ ಕೆಸರಿನ ಹಳ್ಳವಾಗಿ ಹೆತ್ತು ಹೆಪ್ಪುಗೊಂಡಿರುವ ಕೆಂಪುರಕ್ತದಲ್ಲಿ ಅಂಟಿಕೊಂಡು ಆಕಾರವನ್ನು (ರೂಪನ್ನು) ತಿಳಿಯುವುದಕ್ಕಾಗದಂತೆ ವಿರೂಪವಾಗಿದ್ದರಿಂದಲೂ ಭಯವನ್ನು ಉಂಟುಮಾಡುವಂತೆ ಕರ್ಣನು ಅನೇಕ ಬಾಣಸಮೂಹಗಳಿಂದ ಪಾಂಡವಸೈನ್ಯದೊಡನೆ ಪ್ರಾಣಾಪಹಾರಮಾಡುವ ರೀತಿಯಲ್ಲಿ ಯುದ್ಧಮಾಡುತ್ತಿರಲು ಪಾಂಡವಸೈನ್ಯದ ಪ್ರಖ್ಯಾತನಾದ ಕೃತವರ್ಮನೂ ಕೌರವಬಲ ನಾಯಕನಾದ

ಕಂ|| ಚಿತ್ರ ಪತತ್ರಿಯೊಳೆಱಪ ಪ
ತತ್ರಿಗಳಂ ಕಡಿದು ಚಿತ್ರಸೇನನಾಗಳ್|
ಚಿತ್ರವಧಮಾಗೆ ಕೊಂದೊಡೆ
ಧಾತ್ರಿಗೆ ತಾಂ ಚಿತ್ರಮಾಯ್ತು ಭುಜಬಲಮವನಾ|| ೬೧

ವ|| ಅಂತು ಕೌರವಬಲಪ್ರಧಾನನಾಯಕನಪ್ಪ ಚಿತ್ರಸೇನಂ ಕೃತವರ್ಮನ ಕೆಯ್ಯೊಳತೀತ ನಾದದುರ್ಕೇವೈಸಿ-

ಕಂ|| ಅತಿ ಚಿತ್ರಂ ಚಿತ್ರನವಿ
ಶ್ರುತ ಶೌರ‍್ಯಮಿದೆನಿಸಿ ತಾಪ ಚಿತ್ರನನಂತಾ|
ಪ್ರತಿವಿಂಧ್ಯಂ ವಿಂಧ್ಯಾಚಲ
ಪತಿಯವೊಲವಿಚಳಿತನಾತನಂ ಬಂದಾಂತಂ|| ೬೨

ಆಂತನ ಮೇಗೆ ಶಿತ ಶರ
ಸಂತತಿಯಂ ಸುರಿಯೆ ನೋಡಿ ಶರಪರಿಣತಿಯಂ|
ತಾಂ ತೋರ್ಪನೆನಗೆನುತ್ತಿರ
ದಂತನಿತುಮನೊಡನೆ ಕಡಿದನೆಡೆಯೊಳೆ ಚ್ತಿತ್ರಂ|. ೬೩

ಕಡಿದೊಡೆ ಕಡುಪಿಂದಂ ಕಿಡಿ
ಕಿಡಿಯಾಗಿ ಶಿತಾಸ್ತ್ರನಿಕರಮಂ ಪ್ರತಿವಿಂಧ್ಯಂ|
ಕಡಿದವನ ರಥಮನೊರ್ಮೆಯೆ
ಕಡಿದಂ ತಲೆಯುಮನದೊಂದು ದಾರುಣಶರದಿಂ|| ೬೪

ವ|| ಅಂತು ಚಿತ್ರನಂ ಕೊಂದು ಕುರುಕ್ಷೇತ್ರದೊಳ್ ತನ್ನ ಮಾತೆ ಮಾತಾಗೆ ಕೌರವ ಬಲಮೆಲ್ಲಮಂ ಪ್ರತಿವಿಂಧ್ಯನವಂದ್ಯ ಕೋಪೇದ್ರೇಕದಿಂದಾಸೋಟಿಸಿ ಕೊಲ್ವಾಗಳ್-

ಮ|| ಸ್ರ|| ಕುರುಸೈನ್ಯಾಂಭೋ ತೂಳ್ದೆಯ್ದುಗಿದಪುದಿದನಾರಿಲ್ಲಿ ಕೆಯ್ಕೊಳ್ವರೀ ಸಂ
ಗರದೊಳ್ ನಿಲ್ವನ್ನರಾರೆಂಬೆಡೆಯೊಳಿದಿರೊಳಾನಲ್ತೆ ಬಂದಿರ್ದೆನೆಂದೆ|
ಲ್ಲರುಮಂ ಸಂತೈಸಿ ಕಣ್ಬಿಲ್ ಕ ಪೆ ನೊಸಲೊಳ್ ಚಂಡ ದೋರ್ದಂಡದೊಳ್ ಕಂ
ಧರದೊಳ್ ತನನುತ್ತಮಾಂಗಾಂತರದೊಳೆಸೆಯೆ ನಿಂದಾಂತನಾಚಾರ‍್ಯಪುತ್ರಂ|| ೬೫

ವ|| ಆಗಳ್ ಪ್ರತಿವಿಂಧ್ಯನಂ ವಿಂಧ್ಯಾಚಲಮನ್ನೆಡಗಲಿಸಿದಗಸ್ತ್ಯನಂತೆ ಭೀಮಸೇನಂತಡೆಯದೆಡಗಲಿಸಿ ರುದ್ರಾವತಾರನ ರಥಕ್ಕದಿರಂದೆ ತನ್ನ ರಥಮಂ ಪರಿಯಿಸಿ-

ಚಿತ್ರಸೇನನೂ ಭಯಂಕರವಾದ ರೀತಿಯಲ್ಲಿ ಕಾದಲು ತೊಡಗಿದರು. ೬೧. ವಿವಿಧರೀತಿಯಲ್ಲಿ ಮೇಲೆಬೀಳುವ ಬಾಣಗಳನ್ನು ಅಂತಹ ಬಾಣಗಳಿಂದಲೇ ಕಡಿದು ಚಿತ್ರಸೇನನನ್ನು ವಿಚಿತ್ರವಾದ ರೀತಿಯಲ್ಲಿ ಕೊಲ್ಲಲು ಅವನ ಭುಜಬಲವು ಭೂಮಿಗೇ ವಿಚಿತ್ರವಾಯಿತು. ವ|| ಹಾಗೆ ಕೌರವಸೈನ್ಯದ ಮುಖ್ಯ ಸೇನಾಪತಿಯಾದ ಚಿತ್ರಸೇನನು ಕೃತವರ್ಮನ ಕಯ್ಯಲ್ಲಿ ಸತ್ತುದಕ್ಕೆ ದುಖಪಟ್ಟು ೬೨. ಈ ಹಿಂದೆಂದೂ ಕೇಳದೆಯೇ ಇದ್ದ ಈ ಚಿತ್ರನ ಶೌರ್ಯವು ಬಹಳ ಆಶ್ಚರ್ಯಕರವಾದುದು ಎನ್ನಿಸಿಕೊಂಡು ಮೇಲೆಬೀಳುವ ಚಿತ್ರನನ್ನು ಶ್ರೇಷ್ಠವಾದ ವಿಂಧ್ಯಾಚಲ ಪರ್ವತದಂತೆ ಸ್ಥಿರವಾಗಿರುವ ಪ್ರತಿವಿಂಧ್ಯನು ಬಂದು ಎದುರಿಸಿದನು. ೬೩. ಅವನ ಮೇಲೆ ಹರಿತವಾದ ಬಾಣಗಳ ಸಮೂಹವನ್ನು ಸುರಿಯಲು ನೋಡಿ ತಾನು ತನ್ನ ಬಿಲ್ವಿದ್ಯೆಯ ಪಾಂಡಿತ್ಯವನ್ನು ನನ್ನ ಮೇಲೆ ತೋರಿಸುತ್ತಾನೆಯಲ್ಲವೇ ಎನ್ನುತ್ತ ಸಾವಕಾಶ ಮಾಡದೆ ಆ ಅಷ್ಟನ್ನೂ ತಕ್ಷಣವೇ ಚಿತ್ರನು ಮಧ್ಯದಲ್ಲಿಯೇ ಕಡಿದುಹಾಕಿದನು. ೬೪. ವೇಗದಿಂದ ಕಿಡಿಕಿಡಿಯಾಗಿ ಬರುತ್ತಿರುವ ಹರಿತವಾದ ಬಾಣಗಳ ಸಮೂಹವನ್ನು ಪ್ರತಿವಿಂಧ್ಯನು ಕತ್ತರಿಸಿ ಅವನ ತೇರನ್ನೂ ತಲೆಯನ್ನೂ ಒಂದು ಭಯಂಕರವಾದ ಬಾಣದಿಂದ ಒಂದೇ ಸಲ ಕತ್ತರಿಸಿ ಹಾಕಿದನು. ವ|| ಚಿತ್ರನನ್ನು ಕೊಂದು ಕುರುಕ್ಷೇತ್ರದಲ್ಲಿ ತನ್ನ ಮಾತೇ ಮಾತಾಗಿರಲು ಪ್ರತಿವಿಂಧ್ಯನು ಕೌರವಸೈನ್ಯವನ್ನೆಲ್ಲ ವ್ಯರ್ಥವಾಗದ ಕೋಪೋದ್ರೇಕದಿಂದ ಶಬ್ದಮಾಡಿ (ತೋಳನ್ನು ತಟ್ಟಿ)- ೬೫. ಕೌರವಸೇನಾಸಮುದ್ರವು ನೂಕಲ್ಪಟ್ಟು ವಿಶೇಷವಾಗಿ ಸೆಳೆಯಲ್ಪಡುತ್ತಿದೆ. ಇದನ್ನು ಕಾಯುವವರಾರು, ಯುದ್ಧದಲ್ಲಿ ನಿಲ್ಲುವಂತಹವರು ಯಾರು ಎನ್ನುವ ಸಮಯಕ್ಕೆ ಸರಿಯಾಗಿ ಆಚಾರ್ಯಪುತ್ರನಾದ ಅಶ್ವತ್ಥಾಮನು ಆ ಕಾರ್ಯಕ್ಕೆ ಇದೋ ನಾನು ಬಂದಿದ್ದೇನೆ ಎಂದು ಎಲ್ಲರನ್ನೂ ಸಮಾಧಾನಮಾಡಿ ಬಂದು ಮುಖದಲ್ಲಿ ಕಣ್ಣೂ, ಪ್ರಚಂಡವಾದ ದೋರ್ದಂಡದಲ್ಲಿ ಬಿಲ್ಲೂ, ಕತ್ತಿನಲ್ಲಿ ಕರೆಯೂ (ವಿಷದ ಗುರುತು) ತಲೆಯಲ್ಲಿ ಚಂದ್ರನೂ ಪ್ರಕಾಶಿಸುತ್ತಿರಲು ನಿಂತು ಎದುರಿಸಿದನು. ವ|| ಆಗ ವಿಂಧ್ಯಪರ್ವತವನ್ನು ದಾಟಿದ ಅಗಸ್ತ್ಯಋಷಿಯ ಹಾಗೆ ಭೀಮನು ಸಾವಕಾಶಮಾಡದೆ

ಚಂ|| ನಿನಗುಱದೇನುಮಲ್ಲದೞಗಂಡರಿದಿರ್ಚುಮರಲ್ಲರೆನ್ನನಾಂ
ಪನಿತಳವುಳ್ಳೊಡಿತ್ತ ಮಗುೞೆಂದು ಶರಾವಳಿಯಿಂದೆ ಪೂೞ್ದ್ದೊಡಂ|
ಬಿನ ಸರಿ ಸೋನೆ ತಂದಲಿದು ದಲ್ ಪೊಸತಾಯ್ತೆನೆ ಕಂಡರೆಲ್ಲಮಂ
ಬಿನ ಮೞೆಗಾಲವಾಯ್ತು ಕುರುಭೂಮಿಗೆ ಭೀಮನದೇಂ ಪ್ರತಾಪಿಯೋ|| ೬೬

ಚಂ|| ಗದೆಯೊಳೆ ಜಟ್ಟಿಗಂ ಪವನನಂದನನೆಂಬರ ಮಾತು ಮಾತದ
ಲ್ಲದು ಸುರಸಿಂಧುಪುತ್ರ ಗುರು ಕರ್ಣ ಕೃಪ ಪ್ರಮುಖರ್ಕಳಿಂತು ನೇ|
ರಿದರೆ ಶರಾಸನಾಗಮದೊಳೆಂಬಿನಮಂಬರದೊಳ್ ಸುರರ್ಕಳೇಂ
ಪುದಿದನೊ ಬಾಣಜಾಲದೆ ಗುರುಪ್ರಿಯನಂದನನಂ ಮರುತ್ಸುತಂ|| ೬೭

ವ|| ಆಗಳಶ್ವತ್ಥಾಮಂ ಭೀಮೋದ್ದಾಮ ಶ್ಯಾಮ ಜಳಧರ ವಿಮುಕ್ತ ಶರಾವಳಿಯ ಬಳಸಂ ಕಂಡು ಮುಗುಳ್ನಗೆ ನಕ್ಕುಮೀತನುಮೆಮ್ಮಂ ಬಳಸಿದಪ್ಪನೆಂದು-

ಚಂ|| ಅನಲಶಿಖಾಕಳಾಪವನೆ ಭೋರ್ಗರೆದಾರ್ದುಗುೞ್ವನ್ನಮಪ್ಪಗು
ರ್ವಿನ ಶರಸಂಕುಳಂಗಳೊಳೆ ಭೋರ್ಗರೆದಾರ್ದಿಸೆ ಭೀಮನೆಚ್ಚ ನ|
ಚ್ಚಿನ ಘನ ಬಾಣಜಾಳಮದು ಭೋಂಕನೆ ನೋಡುವೊಡಾಳಜಾಳವಾ
ಯ್ತೆನೆ ಕಡಿದೊಟ್ಟಿ ಸುಟ್ಟುವು ಪತತ್ರಿಗಳಂ ಗುರುಪುತ್ರನಂಬುಗಳ್|| ೬೮

ವ|| ಅಂತು ಗುರುನಂದನಂ ಮರುನ್ನಂದನವಿರಚಿತ ನಾಶಾತ ವಿಶಿಖ ಪಂಜರಮನೞದು ಕೞಕುೞಂಮಾಡಿಯುಮನಿತಳ್ ಮಾಣದೆ-

ಕಂ|| ತೇರಂ ಕುದುರೆಯನೆಸಗುವ
ಸಾರಥಿಯ ಪೊಡರ್ಪನಯ್ದು ಬಾಣದೊಳುಪಸಂ|
ಹಾರಿಸಿ ತೞತೞ ತೊಳಗುವ
ನಾರಾಚದಿನೆಚ್ಚನೂಱ ಭೀಮನ ನೊಸಲಂ|| ೬೯

ಮಿಸುಗುವ ನೊಸಲಂ ನಟ್ಟ
ರ್ವಿಸುವಿನೆಗಂ ತೂಗಿ ತೊನೆವ ನಾರಾಚಮದೇ|
ನೆಸೆದುದೊ ತದ್ವದನಾಂಭೋ
ಜ ಸೌರಭಾಕೃಷ್ಟ ಮಧುಪ ಮಾಲಾಕೃತಿಯಿಂ|| ೭೦

ದಾಟಿ (ಅವರಿಬ್ಬರ ಮಧ್ಯೆ ಹಾರಿ ಬಂದು) ಅಶ್ವತ್ಥಾಮನ ತೇರಿಗೆ (ಎದುರಾಗಿ) ಹೆದರದೆ ತನ್ನ ರಥವನ್ನು ಹರಿಯಿಸಿದನು.

೬೬. ಶಕ್ತಿಯಿಲ್ಲದ ಸಾಮಾನ್ಯ ಶಕ್ತಿಹೀನರನ್ನು ನೀನು ಎದುರಿಸಬಲ್ಲೆ. ನನ್ನನ್ನು ಪ್ರತಿಭಟಿಸುವಷ್ಟು ನಿನಗೆ ಸಾಮರ್ಥ್ಯವಿದ್ದರೆ ಈ ಕಡೆ ತಿರುಗು ಎಂದು ಭೀಮನು ಬಾಣಗಳ ಸಮೂಹದಿಂದ ಅವನನ್ನು ಹೂಳಲು ಬಾಣದ ಮಳೆ, ಜಡಿಮಳೆ, ತುಂತುರುಮಳೆಗಳು ಹೊಸತಾಯಿತು ಎಂದು ಕಂಡವರೆಲ್ಲರೂ ಹೇಳುವ ಹಾಗೆ ಕುರುಭೂಮಿಗೆ ಹೊಸ ಮಳೆಗಾಲವನ್ನು ಭೀಮನು ಉಂಟುಮಾಡಿದನು. ಭೀಮನು ಅದೆಂತಹ ಪ್ರತಾಪಶಾಲಿಯೋ ! ೬೭. ಭೀಮನು ಗದಾಪ್ರಯೋಗದಲ್ಲಿ ಮಾತ್ರ ಗಟ್ಟಿಗ ಎನ್ನುವವರ ಮಾತು ಮಾತಲ್ಲ; ಭೀಷ್ಮ, ದ್ರೋಣ, ಕರ್ಣ, ಕೃಪನೇ ಮೊದಲಾದ ಪ್ರಮುಖರು ಹೀಗೆ ಬಿಲ್ವಿದ್ಯೆಯಲ್ಲಿ ಪಂಡಿತರಾಗಿರಲಾರರು ಎಂದು ದೇವತೆಗಳು ಆಕಾಶದಲ್ಲಿ ಹೊಗಳುವ ಹಾಗೆ ಭೀಮನು ಅಶ್ವತ್ಥಾಮನನ್ನು ಬಾಣಗಳ ಸಮೂಹದಿಂದ ಪೂರ್ಣವಾಗಿ ಮುಚ್ಚಿಬಿಟ್ಟನು. ವ|| ಆಗ ಅಶ್ವತ್ಥಾಮನು ಭೀಮನೆಂಬ ವಿಸ್ತಾರವಾದ ನೀಲಮೇಘದಿಂದ ಬಿಡಲ್ಪಟ್ಟ ಬಾಣಸಮೂಹದ ವಿಸ್ತಾರವನ್ನು ಕಂಡು ಹುಸಿನಗೆ ನಕ್ಕು ಇವನೂ ನಮ್ಮನ್ನು ಬಳಸುತ್ತಾನಲ್ಲವೆ ಎಂದು- ೬೮. ಅಗ್ನಿಜ್ವಾಲೆಯ ಸಮೂಹವನ್ನೇ ಭೋರೆಂದು ಶಬ್ದಮಾಡಿ ಉಗುಳುವಂತಹ ಭಯಂಕರವಾದ ಬಾಣಸಮೂಹದಿಂದಲೇ ಆರ್ಭಟಿಸಿ ಶಬ್ದಮಾಡಿ ಅಶ್ವತ್ಥಾಮನನ್ನು ಹೊಡೆದನು. ಅವುಗಳಿಂದ ಭೀಮನು ಹೊಡೆದ (ಸಾರವತ್ತಾದ) ಆ ಬಾಣಸಮೂಹವು ನೋಡುತ್ತಿರುವ ಹಾಗೆಯೇ ನಿಸ್ಸಾರವಾದ ಹಂದರವಾಯ್ತು ಎನ್ನುವ ಹಾಗೆ ಅಶ್ವತ್ಥಾಮನ ಬಾಣಗಳು ಭೀಮನ ಬಾಣಗಳನ್ನು ಕಡಿದು ರಾಶಿ ಮಾಡಿ ಸುಟ್ಟು ಹಾಕಿದವು. ವ|| ಹಾಗೆ ಅಶ್ವತ್ಥಾಮನು ಭೀಮನಿಂದ ರಚಿತವಾದ ಹರಿತವಾದ ಬಾಣಜಾಲವನ್ನು ನಾಶಪಡಿಸಿ ಚದುರಿಸಿ ಅಷ್ಟಕ್ಕೇ ಬಿಡದೆ ೬೯. ಅವನ ತೇರನ್ನೂ ಕುದುರೆಯನ್ನೂ ಅದನ್ನು ನಡೆಸುವ ಸಾರಥಿಯ ಶಕ್ತಿಯನ್ನೂ ಅಯ್ದುಬಾಣಗಳಿಂದ ನಾಶಮಾಡಿ ತಳತಳನೆ ಹೊಳೆಯುವ ಬಾಣದಿಂದ ಭೀಮನ ಮುಖವನ್ನು ನಾಟುವ ಹಾಗೆ ಹೊಡೆದನು. ೭೦. ಹೊಳೆಯುವ ಹಣೆಯಲ್ಲಿ ನಾಟಿಕೊಂಡು ವ್ಯಾಪಿಸುತ್ತ ಆ ಕಡೆಗೂ ಈ ಕಡೆಗೂ ತೂಗಾಡುತ್ತಿರುವ ಆ

ನಡೆ ನಾರಾಚದ ನೋವಿನ
ನಡುಕಂ ಪಿರಿದಾಯ್ತು ಸರ್ಪಯೋನಿಯ ಸೆರೆಯಂ|
ಬಿಡಿಸಿದವೊಲೆಚ್ಚು ಪಾಯ್ದ
ತ್ತೊಡನೊಡನೆ ಕದುಷ್ಣ ಕೃಷ್ಣ ರುರ ಜಲೌಘಂ|| ೭೧

ನಡುಗಲ್ಕೆರ್ದೆ ಬೆಮರಲ್ ತನು
ತೊಡರಲ್ ನಾಲಗೆ ತಗುಳ್ದುದಾ ಮಾರ್ಗಣದಿಂ|
ಗಡ ಮತ್ತುೞದರನೆಂತುಂ
ಮಡಿಪದೆ ಗುರುತನಯನೆಚ್ಚ ಶಿತ ನಾರಾಚಂ|| ೭೨

ವ|| ಅಂತು ಭೀಮಸೇನಂ ನಾರಾಚಘಾತದಿಂ ಪುಣ್ಗೂರ್ತು ಬಸವೞದುಸಿರಲಪ್ಪೊಡ ಮಾಱದೆ ಬಿಲ್ಲ ಕೊಪ್ಪಂ ಪಿಡಿದೆಱಗಿ ಕಿಱದಾನುಂ ಬೇಗಮಿರ್ದು ನೊಸಲೊಳ್ ನಟ್ಟ ನಾರಾಚಮನೆಂತಾನುಂ ಕಿೞ್ತು ತನ್ನಿಂ ತಾನೆ ಚೇತರಿಸಿ ಸಿಂಹನಾದದಿನಾರ್ದು-

ಚಂ|| ಖರಕರಬಿಂಬದಿಂ ಕಿರಣಸಂತತಿಗಳ್ ಪೊಱಪೊಣ್ಮಿದಪ್ಪುವೆಂ
ಬರ ನುಡಿ ಪೋಲ್ವೆವೆತ್ತುದೆನೆ ಬಾಣಯಿಂದಿರದುರ್ಚಿಕೊಂಡು ವಿ|
ಸುರಿತ ಶರಂಗಳೆಂಟನವಳ್ ಪೊಳೆವಯ್ದು ಶರಂಗಳಿಂ ಸುರು
ಳ್ದುರುಳ್ವಿನಮೆಚ್ಚನಾ ದ್ವಿಜನ ಸೂತ ವರೂಥ ತುರಂಗಮಂಗಳಂ|| ೭೩

ಕಂ|| ಪೆಱವುೞದ ಮೂಱು ಮಿಱುಮಿಱು
ಮಿಱುಪ ಶಿತಾಸ್ತ್ರಂಗಳಿಂ ದ್ವಿಜನ್ಮನ ನೊಸಲಂ|
ನೆಱಗೊಳ್ವಿನಮೆಚ್ಚೊಡೆ ಕ
ಣ್ದೆದವೊಲಾಯ್ತದಟುಮಳವುಮಾ ಮಾರುತಿಯಾ|| ೭೪

ವ|| ಆಗಳಶ್ವತ್ಥಾಮಂ ಹೇಮಪುಂಖಾಂಕಿತ ಭೀಮಸಾಯಕನಿರ್ಘಾತದಿಂದೞಯೆ ನೊಂದು ಭೋರೆಂದು ಕವಿವ ಬಿಸುನೆತ್ತರ್ ಕಣ್ಣಂ ಕವಿಯೆ ಸೀಂಟಿಕಳೆದು ನುಡುಕೋಲ್ವರಂ ನಟ್ಟ ಕೂರ್ಗಣೆಗಳಂ ಗಱವೆರಸು ತೊರೆದು ಕಳೆದು-

ಕಂ|| ಅಳವೆನಿತು ಚಾಪವಿದ್ಯಾ
ಬಳಮೆನಿತುಂಟನಿತುಮೆಯ್ದೆವಂದಿಲ್ಲಿ ಪುದುಂ|
ಗೊಳಿಳಿದುದೆನೆ ಕಲ್ಪಾನಲ
ವಿಳಯಾಂತಕರೂಪನಾದನಶ್ವತ್ಥಾಮಂ|| ೭೫