ಪೊಣರ್ದೊಡಮನುವರಮಿವನೊಳ್
ತೊಣೆವೆತ್ತಪುದೆನಗೆ ನರನೊಳೆಂದಱಕೆಯ ಕೂ|
ರ್ಗಣೆಗಳೊಳೆ ಪೂೞ್ದು ತನ್ನಳ
ವಣಿಯರಮೆನೆ ನಾಲ್ಕು ಶರದೆ ಪಾರ್ಥನನೆಚ್ಚಂ|| ೧೬೪

ಇಸೆ ಮುತ್ತಿ ಮುಸುಱ ಪರಿ ಬಂ
ಸಿದುವು ನರರಥತುರಂಗಮಂಗಳನಂತಾ|
ರ್ದೆಸಗಲ್ ಪೊಣರಲ್ ಮಿಡುಕಲ್
ಮಿಸುಕಲ್ಕಣಮೀಯದಾದುವವನ ಸರಲ್ಗಳ್|| ೧೬೫

ವ|| ಆಗಳದಂ ಕಂಡು ಪರಸೈನ್ಯಭೈರವಂ ಮುಕುಂದನನಿಂತೆಂದಂ-

ಕಂ|| ಸ್ಯಂದನಬಂಧನಮೆಂಬುದ
ನಿಂದೀ ವೃಷಸೇನನಿಂದಮಱದನಿದಂ ಮು|
ನ್ನೆಂದುಂ ಕಂಡಱಯೆನಿದ
ರ್ಕಾಂ ದಲ್ ಬೆಱಗಾದೆನೆನಗೆ ಬೆಸಸು ಮುಕುಂದಾ|| ೧೬೬

ಎನೆ ಪರಶುರಾಮನಿಂ ಕ
ರ್ಣನೆ ಬಲ್ಲಂ ಚಾಪವಿದ್ಯೆಯಂ ಕರ್ಣನಿನೀ|
ತನೆ ಬಲ್ಲನಿವನ ಸರಲೆನಿ
ತನಿತುಮನೆಡೆವಿಡದೆ ತಱದು ತಲೆಯಂ ತಱಯಾ|| ೧೬೭

ವ|| ಎಂಬುದುವಳವಿಗೞಯೆ ಬಳೆದು ಪುದುಂಗೊಳಿಸಿದ ಬಿದಿರ ಸಿಡುಂಬನೆಡೆಗೊಳೆ ಕಡಿವ ಪೊಡುಂಗಾಱನಂತೆ ಪರಶು ಚಕ್ರಾಸಿಧೇನುಗಳಿಂದಂ ತನ್ನ ತೋಡುಂ ಬೀಡಿಂಗಂ ರಥಮನೆಸಗುವ ಮುಂರಾಂತಕನ ಕೆಯ್ಗಮೆಡೆಮಾಡಿ-

ಚಂ|| ತನಗೆ ವಿನಾಯಕಂ ದಯೆಯಿನಿತ್ತ ಜಯಾಸ್ತ್ರಮನುರ್ಚಿಕೊಂಡು ಭೋಂ
ಕೆನೆ ದೊಣೆಯಿಂದ ಶರಾಸನದೊಳಂತದನಾಗಡೆ ಪೂಡಿ ಧಾತ್ರಿ ತಿ|
ಱ್ರನೆ ತಿರಿವನ್ನೆಗಂ ತೆಗೆದು ಕಂಧರಸಂಯನೆಯ್ದೆ ನೋಡಿ ತೊ
ಟ್ಟನೆ ನರನೆಚ್ಚೊಡುಚ್ಚಳಿಸಿ ಬಿೞ್ದುದು ವೈರಿಶಿರಸ್ಸರೋರುಹಂ|| ೧೬೮

ಇವನ ಪೌರುಷ, ಇವನ ಶಕ್ತಿ ಇವು ನಿನಗಿಂತಲೂ ಹೆಚ್ಚಿನವು. ಇವನನ್ನು ಭೀಮನು ಗೆಲ್ಲಲಾರ. ನೀನು ಇವನಲ್ಲಿ ಯುದ್ಧಮಾಡು ಎನ್ನಲು ಅರಿಗನು ಅವನಲ್ಲಿ ಕಾದಿದನು. ೧೬೪. ವೃಷಸೇನನು ಇವನೊಡನೆ ಕಾದಿದರೆ ನನಗೆ ಯುದ್ಧವು ಅನುರೂಪವಾಗುತ್ತದೆ (ಸರಿಸಮಾನವಾಗುತ್ತದೆ) ಎಂದು ಹೇಳಿ ಪ್ರಸಿದ್ಧವೂ ಹರಿತವೂ ಆದ ಬಾಣಗಳಿಂದಲೇ ಹೂಳಿ ತನ್ನ ಶಕ್ತಿಯು ಅತಿಶಯವಾದುದು ಎನ್ನುವ ಹಾಗೆ ನಾಲ್ಕುಬಾಣಗಳಿಂದ ಅರ್ಜುನನನ್ನು ಹೊಡೆದನು. ೧೬೫. ಆ ಬಾಣಗಳು ಅರ್ಜುನನ ತೇರು ಕುದುರೆಗಳನ್ನು ಮುತ್ತಿ ಆವರಿಸಿಕೊಂಡು ಕಟ್ಟಿ ಹಾಕಿದುವು. ಹಾಗೆಯೇ ಆ ಬಾಣಗಳು ಆರ್ಭಟಿಸಿ ಕಾರ್ಯಮಾಡುವುದಕ್ಕೂ ರಥವನ್ನು ನಡೆಸುವುದಕ್ಕೂ ಜಗಳವಾಡುವುದಕ್ಕೂ ಅಳ್ಳಾಡುವುದಕ್ಕೂ (ಚಲಿಸುವುದಕ್ಕೂ) ಸ್ವಲ್ಪವೂ ಅವಕಾಶ ಕೊಡದಂತಹುವಾದುವು. ವ|| ಅದನ್ನು ನೋಡಿ ಪರಸೈನ್ಯಭೈರವನಾದ ಆರ್ಜುನನು ಕೃಷ್ಣನಿಗೆ ಹೀಗೆ ಹೇಳಿದನು. ೧೬೬. ತೇರನ್ನು ಕಟ್ಟಿಹಾಕುವುದೆಂಬುದನ್ನು ಈ ದಿನ ವೃಷಸೇನನಿಂದ ತಿಳಿದೆನು. ಇದಕ್ಕೆ ಮೊದಲು ಎಂದೂ ತಿಳಿದಿರಲಿಲ್ಲ. ಇದಕ್ಕೆ ನಾನು ಬೆರಗಾಗಿದ್ದೇನೆ. ಮುಂದೇನು ಮಾಡಬೇಕೆಂಬುದನ್ನು ತಿಳಿಸು ಕೃಷ್ಣಾ. ೧೬೭. ಎನ್ನಲು ಬಿಲ್ವಿದ್ಯೆಯಲ್ಲಿ ಕರ್ಣನು ಪರಶುರಾಮನಿಗಿಂತ ಸಮರ್ಥನಾದವನು. ಇವನು ಕರ್ಣನಿಗಿಂತ ಸಮರ್ಥನು. ಇವನ ಬಾಣಗಳಷ್ಟನ್ನೂ ಒಂದೇಸಮನಾಗಿ ಕತ್ತರಿಸಿ ತಲೆಯನ್ನು ಕತ್ತರಿಸಯ್ಯ. ವ|| ಎನ್ನಲು ಅಳತೆಮೀರಿ ಸೊಂಪಾಗಿಯೂ ದಟ್ಟವಾಗಿಯೂ ಬೆಳೆದಿರುವ ಬಿದುರಿನ ಮೆಳೆಯನ್ನು ದಾರಿಮಾಡುವುದಕ್ಕಾಗಿ (ಬಿಡಿಸುವ) ಕತ್ತರಿಸುವ ಕಾಡನ್ನು ತರಿಯುವವನ ಹಾಗೆ ಕೊಡಲಿಕತ್ತಿಗಳಿಂದ ತನ್ನ ಬಾಣಸಂಧಾನ ಮತ್ತು ಮೋಚನಗಳಿಗೆ ಹೊಂದಿಕೊಳ್ಳುವುದಕ್ಕೂ ರಥವನ್ನು ನಡೆಸುವ ಕೃಷ್ಣನ ಕೈಗಳನ್ನಾಡಿಸುವುದಕ್ಕೂ ಅನುಮಾಡಿಕೊಂಡು ೧೬೮. ವಿನಾಯಕನು ತನಗೆ ಕೃಪೆಯಿಂದ ಕೊಟ್ಟ ಜಯಾಸ್ತ್ರವನ್ನು ರಭಸದಿಂದ ಬತ್ತಳಿಕೆಯಿಂದ ಸೆಳೆದುಕೊಂಡು ಅದನ್ನು ಆಗಲೇ ಬಿಲ್ಲಿನಲ್ಲಿ ಹೂಡಿ ಭೂಮಿಯು ತಿರ್ರೆಂದು ತಿರುಗುವ ಹಾಗೆ ಹೆದೆಯನ್ನು ಸೆಳೆದು ಕತ್ತಿನ ಸಂಭಾಗವನ್ನೇ ಚೆನ್ನಾಗಿ

ಕಂ|| ಅಂತತ್ತ ಪರಿದ ತಲೆಯನ
ದಂ ತಂದಟ್ಟೆಯೊಳಮರ್ಚಿ ಸುರ ಗಣಿಕೆಯರ|
ಭ್ರಾಂತರದೊಳೆ ತಮ್ಮ ವಿಮಾ
ನಾಂತರದೊಳಗಿಟ್ಟು ಕರ್ಣತನಯನನುಯ್ದರ್|| ೧೬೯

ವ|| ಅಂತು ನೋಡಿ ನೋಡಿ ತನ್ನ ಪಿರಿಯ ಮಗನಪ್ಪ ವೃಷಸೇನನನಂತಕನಣಲೊಳಡಸಿ ತನ್ನುಮನಣಲೊಳಡಸಲೆಂದಿರ್ದ ವಿಕ್ರಮಾರ್ಜುನನಂ ನೋಡಿ-

ಚಂ|| ಮಗನೞಲೊಂದು ಭೂಪತಿಯ ತಮ್ಮನೊಳಾದೞಲೊಂದು ನೊಂದು ಬಿ
ನ್ನಗೆ ಮೊಗದಿಂದೆ ಕುಂದಿ ಫಣೀಕೇತನನಿರ್ದೞಲೊಂದು ತನ್ನನಾ|
ವಗೆಯುರಿಯೞ್ವವೋಲಳುರೆ ತನ್ನ ನೆಗೞ್ತೆಗೆ ಮುಯ್ವನಾಂತು ಮುಂ
ಪೊಗೞಸಿ ಬೞ್ದುದಂ ನೆನೆದು ಕರ್ಣನಸುಂಗೊಳೆ ಬಂದು ತಾಗಿದಂ|| ೧೭೦

ವ|| ಅಂತು ಬಂದು ತಾಗಿದಾಗಳುಭಯಸೈನ್ಯಸಾಗರಂಗಳೊಳ್-

ಕಂ|| ಬರಿತ ಸಮಸ್ತದಿಕ್ತಟ
ಮಧರಿತ ಸರ್ವೇಭ್ಯಗರ್ವಿತಂ ಕ್ಷುಭಿತಾಂಭೋ|
ನಿ ಸಲಿಲಂ ಪರೆದುದು ಧುರ
ವಿಧಾನ ಪಟು ಪಟಹ ಕಹಳ ಭೇರೀ ರಭಸಂ|| ೧೭೧

ಆದಿತ್ಯನ ಸಾರಥಿ ಬೆಱ
ಗಾದಂ ಮಾತಾಳಿ ಮಾತುಗೆಟ್ಟಂ ಧುರದೊಳ್|
ಚೋದಿಸೆ ಹರಿಯುಂ ಶಲ್ಯನು
ಮಾದರದಿಂ ನರನ ದಿನಪತನಯನ ರಥಮಂ|| ೧೭೨

ವ|| ಅಂತಿರ್ವರುಮೊರ್ವರೊರ್ವರಂ ಮುಟ್ಟೆವಂದಲ್ಲಿ ವಿಕ್ರಾಂತತುಂಗನಂಗಾರಾಜನ ನಿಂತೆಂದಂ-

ಹರಿಣೀಪ್ಲುತಂ|| ಪಿರಿದು ನಿನ್ನಂ ದುರ್ಯೋಧನಂ ನಿನಗೆನ್ನೊಳಂ
ಪಿರಿದು ಕಲುಷಂ ಕರ್ಣಂಗೊಡ್ಡಿತ್ತು ಭಾರತವೇಂ ಬೆಸಂ|
ಪಿರಿದು ನಿನಗಂ ರಾಗಂ ಮಿಕ್ಕಿರ್ದಗುರ್ವಿನ ಸೂನು ನಿ
ರ್ನೆರಮೞಯೆಯುಂ ನೋಡುತ್ತಿಂತಿರ್ದೆಯಿರ್ಪುದು ಪಾೞಯೇ|| ೧೭೩

ನೋಡಿ ಗುರಿಯಿಟ್ಟು ಬೇಗನೆ ಅರ್ಜುನನು ಹೊಡೆಯಲಾಗಿ ವೈರಿಯಾದ ವೃಷಸೇನನ ತಲೆಯೆಂಬ ಕಮಲವು ಮೇಲಕ್ಕೆ ಹಾರಿ ಬಿದ್ದಿತು. ೧೬೯. ಆ ಕಡೆ ಹಾರಿದ ತಲೆಯನ್ನು ತಂದು ಶರೀರದೊಡನೆ ಕೂಡಿಸಿ ಅಪ್ಸರೆಯರು ಮೋಡಗಳ ಮಧ್ಯದಲ್ಲಿ ತಮ್ಮ ವಿಮಾನದೊಳಗಡೆ ಇಟ್ಟು ಕರ್ಣನ ಮಗನನ್ನು ತೆಗೆದುಕೊಂಡು ಹೋದರು. ವ|| ಹಾಗೆ ನೋಡಿ ನೋಡಿ ತನ್ನ ಹಿರಿಯಮಗನಾದ ವೃಷಸೇನನ್ನು ಯಮನ ಗಂಟಲಿನಲ್ಲಿ ತುರುಕಿ ತನ್ನನ್ನು ಗಂಟಲಿನಲ್ಲಿ ತುರುಕಬೇಕೆಂದಿದ್ದ ವಿಕ್ರಮಾರ್ಜುನನ್ನು ನೋಡಿ ೧೭೦. ಮಗನ ದುಖವೊಂದು,ರಾಜನ ತಮ್ಮನಾದ ದುಶ್ಶಾಸನನ ದುಖವೊಂದು, ಚಿಂತಾಸಕ್ತನಾಗಿ ದೀನಮುಖದಿಂದ ಕುಂದಿಹೋಗಿರುವ ದುರ್ಯೋಧನನಿರುವ ಸ್ಥಿತಿಯೊಂದು ಈ ಮೂರೂ ತನ್ನನ್ನು ಕುಂಬಾರರ ಆವಗೆಯ ಬೆಂಕಿಯ ಹಾಗೆ ಸುಡುತ್ತಿರಲು ಪೌರುಷಕ್ಕೆ ಆಶ್ರಯವಿತ್ತು ಮೊದಲು ಹೊಗಳಿಸಿಕೊಂಡು ತಾನು ಬಾಳಿದುದನ್ನು ಜ್ಞಾಪಿಸಿಕೊಂಡ ಕರ್ಣನು ಅರ್ಜುನನ ಪ್ರಾಣವನ್ನು ಸೆಳೆಯುವಂತೆ ಬಂದು ತಾಗಿದನು. ವ|| ಹಾಗೆ ಬಂದುತಾಗಿದಾಗ ಎರಡು ಸೇನಾಸಮುದ್ರದಲ್ಲಿಯೂ ೧೭೧. ಎಲ್ಲ ದಿಕ್ಪ್ರದೇಶಗಳೂ ಕಿವುಡಾಗುವಂತೆ ಆನೆಗಳ ಘ್ರೀಂಕಾರವನ್ನೂ ತಿರಸ್ಕರಿಸುವಂತೆ, ಕಲಕಿದ ಸಮುದ್ರದ ನೀರಿನಂತೆ, ಯುದ್ಧಕಾರ್ಯದಲ್ಲಿ ಸಮರ್ಥವಾದ ತಮಟೆ, ಕೊಂಬು ಮತ್ತು ನಗಾರಿಯ ಶಬ್ದಗಳ ರಭಸವು ಹರಡಿತು. ೧೭೨. ಯುದ್ಧದಲ್ಲಿ ಕೃಷ್ಣನೂ ಶಲ್ಯನೂ ಅರ್ಜುನ ಮತ್ತು ಕರ್ಣನ ತೇರುಗಳನ್ನು ಆದರದಿಂದ ನಡೆಸುತ್ತಿರಲು ಸೂರ್ಯನ ಸಾರಥಿಯಾದ ಅರುಣನು ಆಶ್ಚರ್ಯಚಕಿತನಾದನು. ಇಂದ್ರನ ಸಾರಥಿ ಮಾತಲಿಯೂ ಮೂಕನಾದನು. ವ|| ಹಾಗೆ ಇಬ್ಬರೂ ಒಬ್ಬೊಬ್ಬರನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದಾಗ ವಿಕ್ರಾಂತತುಂಗನಾದ ಅರ್ಜುನನು ಕರ್ಣನಿಗೆ ಹೀಗೆ ಹೇಳಿದನು. ೧೭೩. ನಿನ್ನನ್ನು ದುರ್ಯೋಧನನು ವಿಶೇಷ ಗೌರವದಿಂದ ಸಾಕಿದನು. ನಿನಗೆ ನನ್ನಲ್ಲಿಯೂ ವಿಶೇಷವಾದ ದ್ವೇಷ, ಕರ್ಣನಿಗಾಗಿಯೇ ಭಾರತಯುದ್ಧವು ಪ್ರಾಪ್ತವಾದುದು. ಯುದ್ಧಕಾರ್ಯವು ನಿನಗೇನು ಮಹ್ತತಾದುದು? ನಿನಗೆ

ವಿಶೇಷ ಪ್ರೀತಿಪಾತ್ರನೂ ಪ್ರಚಂಡನೂ ಆದ ಮಗನು ನಿಷ್ಕಾರಣವಾಗಿ ಸತ್ತರೂ ನೋಡುತ್ತ ಹೀಗೆ ಇದ್ದೀಯೇ? ಇರುವುದು ಕ್ರಮವೇ

ಕಂ|| ಎನ್ನ ಪೆಸರ್ಗೇಳ್ದು ಸೈರಿಸ
ದನ್ನಯದಿಂತೀಗಳೆನ್ನ ರೂಪಂ ಕಂಡುಂ|
ನಿನ್ನರಸನಣುಗದಮ್ಮನ
ನಿನ್ನ ತನೂಭವನ ಸಾವುಗಂಡುಂ ಮಾಣ್ಬಾ|| ೧೭೪

ಮ|| ಭಯಮೇಕಕ್ಕುಮದೆಂತುಟಿಂದದಟುಮಂ ಪೆರ್ಮಾತುಮಂ ಭೂತ ಧಾ
ತ್ರಿಯೊಳೋರಂತೆ ನೆಗೞ ಮುನ್ನೆ ಬೞಯಂ ಕಾನೀನ ನೀನೀ ಮಹಾ|
ಜಿಯೊಳಿಂತೇನೆನಗಂಜಿ ಮಾಣ್ದೆ ಪೆಱತೇಂ ಪೋ ಮಾತು ಲೇಸಣ್ಣ ಸೆ
ಟ್ಟಿಯ ಬಳ್ಳಂ ಕಿಱದೆಂಬುದೊಂದು ನುಡಿಯಂ ನೀಂ ನಿಕ್ಕುವಂ ಮಾಡಿದೈ|| ೧೭೫

ಕಂ|| ಪೆಸರೆಸೆಯೆ ಬೀರಮಂ ಪಾ
ಡಿಸಿಯುಂ ಪೊಗೞಸಿಯುಮುರ್ಕಿ ಬಿೞiಹವದೊಳ್|
ಕುಸಿದು ಪೆಱಪಿಂಗಿ ಪೇೞ್ ಮಾ
ನಸರೇನಿನ್ನೂಱು ವರ್ಷಮಂ ಬೞ್ದಪರೇ|| ೧೭೬

ವ|| ಎಂದು ನೃಪ ಪರಮಾತ್ಮನ ಪಾೞಯ ಪಸುಗೆಯ ನುಡಿಗೆ ಪರಮಾರ್ತನಾಗಿ ತನ್ನನುದ್ಘಾಟಿಸಿ ನುಡಿದೊಡುಮ್ಮಚ್ಚದೊಳ್ ಮೆಚ್ಚದೆ ದರಹಸಿತವದನಾರವಿಂದನಾಗಿ ದಶಶತಕರ ತನೂಜನಿಂತೆಂದಂ-

ಕಂ|| ಎಳೆಯಂ ಕೋಳ್ಪಟ್ಟುಂ ಮುಂ
ಬಳೆದೊಟ್ಟುಂ ಮುಟ್ಟುಗೆಟ್ಟುಮಿರ್ದೀಗಳ್ ಬ|
ಳ್ವಳನೆ ನುಡಿದಪುದೆ ನುಡಿವಂ
ತಳವುಂ ಪೆರ್ಮಾತುಮಾಯಮುಂ ನಿನಗಾಯ್ತೇ|| ೧೭೭

ಕಂ|| ಏೞ್ಕಟ್ಟನೆೞೆದು ನಿಮ್ಮಂ
ನಾೞ್ಕಡಿಗಳಿದೊಡೆ ಮದೀಯ ನಾಥಂ ಬೇರಂ|
ಬಿೞ್ಕೆಯನೆ ತಿಂದ ದೆವಸದೊ
ಳೞiಡಿದ ಬೀರಮೀಗಳೇಂ ಪೊಸತಾಯ್ತೇ|| ೧೭೮

ಮತ್ತನಯನರಸನನುಜನ
ಸತ್ತೞಲಂ ನಿನ್ನೊಳಱಸಲೆಂದಿರ್ದೆಂ ಬೆ|
ಳ್ಕುತ್ತಿರ್ದೆನಪ್ಟೊಡೇತೊದ
ಳಿತ್ತಣ ದಿನನಾಥನಿತ್ತ ಮೂಡುಗುಮಲ್ತೇ|| ೧೭೯

೧೭೪. ನನ್ನ ಹೆಸರನ್ನೂ ಕೇಳಿ ಅನ್ಯಾಯವಾಗಿ ಸೈರಿಸದ ನೀನು ಈಗ ನನ್ನ ರೂಪವನ್ನು ಕಂಡೂ ನಿನ್ನ ರಾಜರ ಪ್ರೀತಿಯ ತಮ್ಮನ, ನಿನ್ನ ಮಗನ ಸಾವನ್ನು ನೋಡಿಯೂ ತಡಮಾಡುತ್ತೀಯಾ? ೧೭೫. ಭಯವೇಕಾಗುತ್ತದೆ, ಅದು ಎಂತಹುದು ಎಂದು ಪರಾಕ್ರಮವನ್ನೂ ದೊಡ್ಡ ಮಾತುಗಳನ್ನೂ ಮೊದಲು ಲೋಕದಲ್ಲೆಲ್ಲ ಆಡಿ ಜಂಭ ಕೊಚ್ಚಿದೆ ಕಾನೀನ, ಈಗ ಈ ಮಹದ್ಯುದ್ಧದಲ್ಲಿ ಹೀಗೆ ನನಗೆ ಹೆದರಿ ತಡಮಾಡುತ್ತಿದ್ದೀಯೆ. ಮತ್ತೇನು ಹೋಗಯ್ಯ ಮಾತನಾಡುವುದು ಸುಲಭ! ‘ಸೆಟ್ಟಿಯ ಬಳ್ಳ ಕಿರಿದು’ ಎಂಬ ಗಾದೆಯ ಮಾತನ್ನು ನೀನು ನಿಜವೆನಿಸಿಬಿಟ್ಟೆ. ೧೭೬. ಹೆಸರು ಪ್ರಖ್ಯಾತವಾಗುವಂತೆ ಶೌರ್ಯವನ್ನು ಹಾಡಿಸಿಯೂ ಹೊಗಳಿಸಿಯೂ ಉಬ್ಬಿ ಯುದ್ಧದಲ್ಲಿ ಸೋತು ಕುಸಿದು ಹಿಂಜರಿಯುವುದಕ್ಕೆ ಮನುಷ್ಯರು ಇನ್ನೂರು ವರ್ಷ ಬದುಕುತ್ತಾರೇನು? ವ|| ಎಂಬುದಾಗಿ ಹೇಳಿದ ನೃಪಪರಮಾತ್ಮನಾದ ಅರ್ಜುನನ ಕ್ರಮಬದ್ಧವೂ ವಿವೇಕಯುತವೂ ಆದ ಮಾತಿಗೆ ಬಹಳ ದುಖಪಟ್ಟು ತನ್ನನ್ನು ಮರ್ಮಭೇದಕವಾದ ರೀತಿಯಲ್ಲಿ ಮಾತನಾಡಿಸಿದರೂ ಕೋಪಿಸಿಕೊಳ್ಳದೆ ಮುಗುಳ್ನಗೆಯಿಂದ ಕೂಡಿದ ಮುಖಕಮಲವುಳ್ಳವನಾಗಿ ಕರ್ಣನು ಹೀಗೆಂದನು-

೧೭೭. ರಾಜ್ಯವನ್ನು ಮೊದಲು ಪರಾನಮಾಡಿಯೂ ಬಳೆದೊಟ್ಟೂ ಆಯುಧ ರಹಿತವಾಗಿದ್ದೂ ಈಗ ಬಡಬಡನೆ ಮಾತನಾಡುವುದೇ? ಹಾಗೆ ಮಾತನಾಡುವ ನಿನಗೆ ಶಕ್ತಿಯೂ ಪ್ರೌಢಿಮೆಯೂ ಪರಾಕ್ರಮವೂ ಉಂಟೇ? ೧೭೮. ನನ್ನ ಸ್ವಾಮಿಯಾದ ದುರ್ಯೋಧನನು ವರ್ಷಗಳ ಅವಯ ಕಟ್ಟುಪಾಡಿನಿಂದ ನಿಮ್ಮನ್ನು ನಾಡಗಡಿಯಿಂದ ಹೊರದೂಡಿದಾಗ ಬೇರನ್ನೂ ಬಿಕ್ಕೆಯನ್ನೂ ತಿಂದ ದಿವಸಗಳಲ್ಲಿ ನಾಶವಾದ ಪೌರುಷವು ಈಗ ಹೊಸದಾಯಿತೇನು? ೧೭೯. ನನ್ನ ಮಗನೂ ರಾಜನ ತಮ್ಮನಾದ ದುಶ್ಶಾಸನನೂ ಸತ್ತ ದುಖವನ್ನು ನಿನ್ನಲ್ಲಿ ಹುಡುಕಬೇಕೆಂದಿದ್ದೆ. ಹೆದರಿದ್ದೇನೆ ಎಂದರೆ ಅದೆಂತಹ ಸುಳ್ಳು ಮಾತು! ಆ ಕಡೆಯ ಸೂರ್ಯ ಈ ಕಡೆಯೇ ಹುಟ್ಟುತ್ತಾನಲ್ಲವೇ?

ಕಸವರದ ಸವಿಯುಮಂ ಭಯ
ರಸಕದ ಸವಿಯುಮನೆದೆಂತುಮಾನಱಯದುದಂ|
ವಸುಮತಿಯಱವುದು ನೀಂ ಪುರು
ಡಿಸಿ ನುಡಿದೊಡೆ ನಿನ್ನ ನುಡಿದ ಮಾತೇಱುಗುಮೇ|| ೧೮೦

ಒಡಲುಂ ಪ್ರಾಣಮುಮೆಂಬಿವು
ಕಿಡಲಾದುವು ಜಸಮದೊಂದೆ ಕಿಡದದನಾಂ ಬ|
ಲ್ವಿಡಿವಿಡಿದು ನೆಗೞ್ದೆನುೞದೞ
ವಡೆಮಾತಂ ಮಾಡಿ ನೀನೆ ಕೆಮ್ಮನೆ ನುಡಿವೈ|| ೧೮೧

ಚಂ|| ಬಿದಿ ವಸದಿಂದೆ ಪುಟ್ಟುವುದು ಪುಟ್ಟಿಸುವಂ ಬಿದಿ ಪುಟ್ಟಿದಂದಿವಂ
ಗಿದು ಬಿಯಮೊಳ್ಪಿವಂಗಿದು ವಿನೋದಮಿವಂಗಿದು ಸಾವ ಪಾಂಗಿವಂ|
ಗಿದು ಪಡೆಮಾತಿವಂಗಿದು ಪರಾಕ್ರಮಮೆಂಬುದನೆಲ್ಲ ಮಾೞ್ಕೆಯಿಂ
ಬಿದಿ ಸಮಕಟ್ಟಿ ಕೊಟ್ಟೊಡೆಡೆಯೊಳ್ ಕಿಡಿಸಲ್ ಕುಡಿಸಲ್ ಸಮರ್ಥರಾರ್|| ೧೮೨

ಕಂ|| ಎಂದೀ ಬಾಯ್ವಾತಿನೊಳೇ
ವಂದಪುದಮ್ಮಣ್ಮಿ ಕಾದುಕೊಳ್ಳೆನುತುಂ ಭೋಂ|
ರೆಂದಿಸೆ ಪೊಸ ಮಸೆಯಂಬಿನ
ತಂದಲ ಬೆಳ್ಸರಿಗಳಿರದೆ ಕವಿದುವು ನರನಂ|| ೧೮೩

ದೊಣೆಗಳಿನುರ್ಚುವ ತಿರುವಾ
ಯ್ವೊಣರ್ಚಿ ತೆಗೆನೆವ ಬೇಗಮಂ ಕಾಣದೆ ಕೂ|
ರ್ಗಣೆಗಳ ಪಂದರನೆ ನಭೋಂ
ಗಣದೊಳ್ ಕಂಡುತ್ತು ದೇವಗಣಮಿನಸುತನಾ|| ೧೮೪

ಪಾತಂ ಲಕ್ಷ್ಮಂ ಶೀಘ್ರಂ
ಘಾತಂ ಬಹುವೇಗಮೆಂಬಿವಯ್ದೇಸಿನೊಳಂ|
ತೀತನ ದೊರೆಯಿಲ್ಲೆನಿಸಿದು
ದಾತನ ಬಿಲ್ಬಲ್ಮೆ ಸುರರಿನಂಬರತಲದೊಳ್|| ೧೮೫

ವ|| ಆಗಳ್ ಪರಸೈನ್ಯಬೈರವಂ ಪ್ರಳಯಭೈರವಾಕಾರಮಂ ಕೆಯ್ಕೊಂಡು ಕಾದೆ-

೧೮೦. ಚಿನ್ನದ ರುಚಿಯನ್ನೂ ಭಯರಸದ ರುಚಿಯನ್ನೂ ನಾನು ಎಂದೂ ಅರಿಯದುದನ್ನು ಈ ಭೂಮಂಡಲವೇ ತಿಳಿದಿದೆ. ನೀನು ರ್ಸ್ಪಸಿ ನುಡಿದರೆ ನೀನು ಆಡಿದ ಮಾತು ಪುಷ್ಟಿಯಾಗುತ್ತದೆಯೇ? ೧೮೧. ಶರೀರ ಪ್ರಾಣ ಎಂಬವು ನಾಶವಾಗತಕ್ಕವು. ಯಶಸ್ಸೊಂದೆ ಕೆಡದೆ ಇರತಕ್ಕದ್ದು; ಅದನ್ನು ನಾನು ಬಿಗಿಯಾಗಿ ಆಶ್ರಯಿಸಿ ಪ್ರಸಿದ್ಧನಾಗಿದ್ದೇನೆ. ಉಳಿದ ಹೀನವಾದ ಮಾತನ್ನಾಡಿ ನೀನು ನಿಷ್ಟ್ರಯೋಜಕವಾಗಿ ನುಡಿಯುತ್ತಿದ್ದೀಯೆ. ೧೮೨. (ಮನುಷ್ಯನು) ಹುಟ್ಟುವುದು ವಿಯ ವಶದಿಂದ; ಹುಟ್ಟಿಸುವವನೂ ವಿಯೇ; ಹುಟ್ಟಿದಾಗ ಇವನಿಗಿದು ಸಂಪತ್ತು, ಇವನಿಗೆ ಒಳ್ಳೆಯದಿದು, ಇವನಿಗೆ ಇದು ವಿನೋದ, ಇವನಿಗೆ ಇದು ಸಾಯುವ ರೀತಿ, ಇವನಿಗಿದು ಪ್ರಸಿದ್ಧಿ, ಇವನಿಗಿದು ಪರಾಕ್ರಮ ಎಂಬುದನ್ನು ಎಲ್ಲ ರೀತಿಯಲ್ಲಿಯೂ ವಿ ನಿಷ್ಕರ್ಷಿಸಿಕೊಟ್ಟಿರುವಾಗ ಮಧ್ಯದಲ್ಲಿ ಅದನ್ನು ಕೆಡಿಸುವುದಕ್ಕಾಗಲಿ ಕೊಡಿಸುವುದಕ್ಕಾಗಲಿ ಯಾರು ಸಮರ್ಥರು? ೧೮೩. ಅಪ್ಪಾ ಈ ಬಾಯಿ ಮಾತಿನಲ್ಲಿ ಏನು ಪ್ರಯೋಜನವಾಗುತ್ತದೆ? ಪೌರುಷಪ್ರದರ್ಶನಮಾಡಿ ನಿನ್ನನ್ನು ನೀನು ರಕ್ಷಿಸಿಕೊ ಎನ್ನುತ್ತ ರಭಸದಿಂದ ಹೊಡೆದನು. ಹೊಸದಾಗಿ ಮಸೆದ ಬಾಣಗಳ ತುಂತುರು ಮಳೆಯೂ ಜಡಿಮಳೆಯೂ ಅರ್ಜುನನನ್ನು ಮುಚ್ಚಿದುವು. ೧೮೪. ಬತ್ತಳಿಕೆಯಿಂದ ಬಾಣಗಳನ್ನು ಸೆಳೆದುಕೊಳ್ಳುವ, ಬಿಲ್ಲಿನ ಬಾಯಿಗೆ ಸೇರಿಸಿ ಕಿವಿಯವರೆಗೂ ಸೆಳೆಯುವ ವೇಗವನ್ನು ಕಾಣದೆ ಕರ್ಣನ ಹರಿತವಾದ ಬಾಣಗಳ ಚಪ್ಪರವನ್ನೇ ಆಕಾಶಪ್ರದೇಶದಲ್ಲಿ ದೇವತೆಗಳ ಸಮೂಹವು ನೋಡಿತು. ೧೮೫. ಪಾತ (ಬೀಳಿಸುವುದು) ಲಕ್ಷ್ಯ (ಗುರಿಯಿಡುವುದು) ಶೀಘ್ರ (ವೇಗದಿಂದ ಹೊಡೆಯುವುದು) ಘಾತ (ಘಟ್ಟಿಸುವುದು) ಬಹುವೇಗ (ಅತ್ಯಂತವೇಗ) ಎಂಬ ಈ ಅಯ್ದು ರೀತಿಯ ಬಾಣಪ್ರಯೋಗಗಳಲ್ಲಿಯೂ ಈತನಿಗೆ ಸಮಾನರಿಲ್ಲ ಎನ್ನಿಸಿತು ಆತನ ಬಿಲ್ವಿದ್ಯೆಯ ಶ್ರೇಷ್ಠತೆ, ಆಕಾಶದಲ್ಲಿರುವ ದೇವತೆಗಳಿಂದ. ವ|| ಆಗ ಪರಸೈನ್ಯಭೈರವನಾದ ಅರ್ಜುನನು ಪ್ರಳಯಕಾಲದ

ಕಂ|| ಶರಸಂಧಾನಾಕರ್ಷಣ
ಹರಣಾದಿ ವಿಶೇಷ ವಿವಿಧ ಸಂಕಲ್ಪ ಕಳಾ|
ಪರಿಣತಿಯಂ ಮೆದುದು ತರ
ತರದೊಳೆ ಮುಳಿದರಿಗನಿಸುವ ಶರನಿಕರಂಗಳ್|| ೧೮೬

ಮುನಿದಿಸುವಿನಜನ ಸರಲಂ
ಮೊನೆಯಿಂ ಗಱವರೆಗಮೆಯ್ದೆ ಸೀಳ್ದುವು ಕಣೆಗಳ್|
ಘನ ಪಥಮನಳುರ್ದು ಸುಟ್ಟಪು
ವೆನೆ ನೆಗೆದುವು ಕೋಲ ಹೊಗೆಯುಮಂಬಿನ ಕಿಡಿಯುಂ|| ೧೮೭

ಕೂಡೆ ಕಡಿವಂಬನಂಬೆಡೆ
ಮಾಡದೆ ಬಿಡದೊರಸೆ ಪುಟ್ಟಿದುರಿಗಳಗುರ್ವಂ|
ಮಾಡೆ ಕವಿದಳುರ್ವ ಬೆಂಕೆಯೊ
ಳಾಡಿಸಿದರ್ ಮೊಗಮನಮರಸುಂದರಿಯರ್ಕಳ್|| ೧೮೮

ಮೊಂನೆಯಂಬಿನ ತಂದಲೊಳ
ರ್ಜುನನಂ ಕರ್ಣನುಮನಿನಿಸು ಕಾಣದಣಂ ಮೆ|
ಲ್ಲನೆ ಬಗಿದು ನೋಡಿ ಕುಡುಮಿಂ
ಚಿನಂತೆ ಮೇಗೊಗೆದು ನಾರದಂ ನರ್ತಿಸಿದಂ|| ೧೮೯

ಚಂ|| ಕವಿವ ಶರಾಳಿಯಂ ನಿಜ ಶರಾಳಿಗಳೞ ತೆರಳ್ದಿ ತೂಳ್ದಿ ಮಾ
ರ್ಕವಿದು ಪಳಂಚಿ ಪಾಯ್ದೊರಸೆ ಪುಟ್ಟಿದ ಕಿರ್ಚಳುರ್ದೆೞ್ದಜಾಂಡದಂ|
ತುವರಮಗುರ್ವು ಪರ್ವಿ ಕರಮರ್ವಿಸೆ ದಳ್ಳುರಿ ಪೆರ್ಚಿ ಕಂಡು ಖಾಂ
ಡವವನದಾಹಮಂ ನೆನೆಯಿಸಿತ್ತು ಗುಣಾರ್ಣವನಸ್ತ್ರಕೌಶಲಂ|| ೧೯೦

ವ|| ಆಗಳ್ ಮದ್ರರಾಜನಂಗಾರಾಜನನಿಂತೆಂದನೀಯಂಬುಗಳೊಳೇಂ ತೀರ್ದಪುದು ದಿವ್ಯಾಸ್ತ್ರಂಗಳಿಂದೆಚ್ಚು ಪಗೆಯಂ ಸಾಧ್ಯಂ ಮಾಡೆಂಬುದುಂ ಕೊಂತಿಗೆ ತನ್ನ ನುಡಿದ ನುಡಿವಳಿಯಂ ನೆನೆದು ಪುರಿಗಣೆಯ ದೊಣೆಗೆ ಕೆಯ್ಯಂ ನೀಡದೆ ರೌದ್ರಶರದ ದೊಣೆಗೆ ಕೆಯ್ಯಂ ನೀಡಿದಾಗಳ್-

ಕಂ|| ಮುಳಿಸಂ ನೆಱಪಲ್ಕರ್ಧಾ
ವಳೀಕ ಶರರೂಪದಿಂದಸುಂಗೊಳೆ ದೊಣೆಯಿಂ|
ಪೊಳೆದು ಬರೆ ಕೆಯ್ಗೆ ತಾಂ ವಿ
ಸುಳಿಂಗ ಪಿಂಗಳಿತ ಭುವನ ಭವನಾಭೋಗಂ|| ೧೯೧

ಭೈರವನ ಆಕಾರವನ್ನು ಅಂಗೀಕರಿಸಿ ಕಾದಿದನು. ೧೮೬. ಅರಿಗನು ಕೋಪದಿಂದ ಹೊಡೆಯುವ ಬಾಣಸಮೂಹಗಳು ಶರಸಂಧಾನ (ಬಾಣವನ್ನು ತೊಡುವುದು) ಆಕರ್ಷಣ (ಎಳೆಯುವುದು) ಹರಣ (ಸೆಳೆದುಕೊಳ್ಳುವುದು) ವೇ ಮೊದಲಾದ ನಾನಾ ರೀತಿಯ ಕಲಾಪ್ರೌಢಿಮೆಯನ್ನು ಕ್ರಮಕ್ರಮವಾಗಿ ಮೆರೆದುವು. ೧೮೭. ಕೋಪಿಸಿಕೊಂಡು ಕರ್ಣನು ಪ್ರಯೋಗಿಸುವ ಬಾಣವನ್ನು ಅರ್ಜುನನ ಬಾಣಗಳು ತುದಿಯಿಂದ ಗರಿಯವರೆಗೆ ಸೀಳಿದುವು. ಆಕಾಶಮಾರ್ಗವನ್ನೂ ವ್ಯಾಪಿಸಿ ಸುಡುತ್ತವೆ ಎನ್ನುವ ಹಾಗೆ ಬಾಣಗಳ ಹೊಗೆಯೂ ಕಿಡಿಯೂ ಮೇಲಕ್ಕೆ ನೆಗೆದುವು. ೧೮೮. ಕೂಡಲೆ ಕತ್ತರಿಸುವ ಬಾಣಗಳನ್ನು ಬಾಣಗಳು ಅವಕಾಶಕೊಡದೆ ತಪ್ಪದೆ ಉಜ್ಜಲು ಹುಟ್ಟಿದ ಉರಿಯ ಜ್ವಾಲೆಗಳು ಭಯವನ್ನುಂಟುಮಾಡಲು ಆವರಿಸಿ ಸುಡುವ ಉರಿಯಲ್ಲಿ ದೇವಸುಂದರಿಯರು ತಮ್ಮ ಮುಖವನ್ನು ಅತ್ತ ಇತ್ತ ಅಲುಗಾಡಿಸಿದರು. ೧೮೯. ಮೊನಚಾದ ಬಾಣದ ತುಂತುರುಮಳೆಯಲ್ಲಿ ಅರ್ಜುನನೂ ಕರ್ಣನೂ ಸ್ವಲ್ಪವೂ ಕಾಣದಿರಲು ನಾರದನು ಸ್ವಲ್ಪವೂ ಸದ್ದಿಲ್ಲದೆ (ನಿಧಾನವಾಗಿ) ಭಾಗಮಾಡಿ ನೋಡಿ ಕುಡುಮಿಂಚಿನಂತೆ ಮೇಲಕ್ಕೆ ಹಾರಿ ಕುಣಿದಾಡಿದನು. ೧೯೦. ಕವಿಯುತ್ತಿರುವ ಬಾಣ ಸಮೂಹವನ್ನು ತನ್ನ ಬಾಣಸಮೂಹಗಳು ಆಕ್ರಮಿಸಿ ಓಡಿಸಿ ತಳ್ಳಿ ಪ್ರತಿಯಾಗಿ ಮುಚ್ಚಿ ತಗುಲಿ ನುಗ್ಗಿ ಉಜ್ಜಲು ಅಲ್ಲಿ ಹುಟ್ಟಿದ ಬೆಂಕಿಯು ಎದ್ದು ಮೇಲಕ್ಕೆ ನೆಗೆದು ಬ್ರಹ್ಮಾಂಡದ ಕೊನೆಯವರೆಗೆ ಭಯವು ಹಬ್ಬುವ ಹಾಗೆ ವಿಶೇಷವಾಗಿ ವ್ಯಾಪಿಸಿ ಹೆಚ್ಚಾಗಿ ಸುಡಲು ಆ ದಳ್ಳುರಿಯನ್ನು ನೋಡಿ ಅರ್ಜುನನ ಅಸ್ತ್ರಕೌಶಲವು ಖಾಂಡವವನವನ್ನು ಸುಟ್ಟುದನ್ನು ಜ್ಞಾಪಕಮಾಡಿತು. ವ|| ಆಗ ಶಲ್ಯನು ಕರ್ಣನಿಗೆ ಹೀಗೆಂದನು- ಈ ಬಾಣಗಳಿಂದ ಏನು ತೀರುತ್ತದೆ? ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಹಗೆಯನ್ನು ಅನಮಾಡು ಎನ್ನಲು ಕುಂತೀದೇವಿಗೆ ತಾನು ಕೊಟ್ಟ ವಾಗ್ದಾನವನ್ನು ನೆನೆದು ದಿವ್ಯಾಸ್ತ್ರಗಳ ಬತ್ತಳಿಕೆಗೆ ಕೈಯನ್ನು ಚಾಚದೆ ರೌದ್ರಬಾಣಗಳ ಬತ್ತಳಿಕೆಗೆ ಕೈಯನ್ನು ನೀಡಿದಾಗ ೧೯೧. ಹಿಂದಿನ ಕೋಪವನ್ನು ತೀರಿಸಿಕೊಳ್ಳುವುದಕ್ಕಾಗಿ ಕಿಡಿಗಳಿಂದಲೂ ಹಳದಿ ಕಪ್ಪು ಮತ್ತು ಕೆಂಪು ಮಿಶ್ರವಾದ

ತಿರಿಪಿದೊಡದನೆಳೆ ತಿಱ್ರನೆ
ತಿರಿದುದು ತಿರುವಾಯೊಳಿಡೆ ಸುರರ್ ಮೊಯಿಟ್ಟರ್|
ಭರದೆ ತೆಗೆನೆಯೆ ಮೆಯ್ದೆಗೆ
ದರವಿಂದೋದ್ಭವನಿನೊಗೆದುದಾ ಬ್ರಹ್ಮಾಂಡಂ|| ೧೯೨

ಕಂ|| ತುಡೆ ಕರ್ಣನದಂ ನಡನಡ
ನಡುಗಿ ಸುಯೋಧನನ ಸಕಲ ರಾಜ್ಯಶ್ರೀಯುಂ|
ಸಡಿಲಿಸಿದ ತೋಳನಾಗಳ್
ಸಡಿಲಿಸಲಣ್ಮಳೆ ದಲದಱಗುರ್ವೇಂ ಪಿರಿದೋ|| ೧೯೩

ಆಕರ್ಣಾಂತಂ ತೆಗೆನೆ
ದಾ ಕರ್ಣನಿಸಲ್ಕೆ ಬಗೆದೊಡುಡುಗುಡುಗಿಸಲೀ||
ಭೀಕರ ಬಾಣಮನಾದವಿ
ವೇಕದಿನುರದೆಡೆಗೆ ತುಡದೆ ತಲೆಗೆಯೆ ತುಡುವಾ|| ೧೯೪

ಉರದೆಡೆಗೆ ತುಡೆ ಜಯಶ್ರೀ
ಗಿರಲೆಡೆ ನಿನಗಪ್ಪುದಾ ಸುಯೋಧನನೊಳ್ ಶ್ರೀ
ಗಿರಲೆಡೆಯಪ್ಪುದು ಮೇಣ್ ದಿನ
ಕರಸುತ ತೊದಳುಂಟೆ ಬಗೆಯೆ ಸಂದೆಯಮುಂಟೇ|| ೧೯೫

ವ|| ಎಂಬುದುಂ ಶಲ್ಯನ ನುಡಿದ ನುಡಿಯನವಧಾರಿಸಿ ತನ್ನ ಮನದೊಳೆ ಕರ್ಣನಿಂತೆಂದಂ-

ಮ|| ಎನಿತುಂ ಶಲ್ಯನ ಪೇೞ್ದ ಪಾಂಗೆ ತೊದಳಿಲ್ಲಿಂತಾದೊಡಾ ಶಕ್ರಪು
ತ್ರನನಾಂ ಕೊಂದೊಡೆ ಧರ್ಮಪುತ್ರನೞಗುಂ ತಾಯೆಂದೆ ಮುಂ ಕೊಂತಿ ಬಂ|
ದಿನಿಸಂ ಪ್ರಾರ್ಥಿಸಿ ಪೋದಳೆನ್ನನದನಾಂ ಮಾಣ್ದಿರ್ದೆನಿರ್ದಾಗಳೊ
ಳ್ಪಿನ ಪೆರ್ಮಾತಿನ ನನ್ನಿ ಬನ್ನದೊಳೊಡಂಬಟ್ಟಿರ್ಪುದಂ ಮಾೞ್ಪೆನೇ|| ೧೯೬

ಚಂ|| ತನಗುಱುವಂತುಟಾಗೆ ಕಡು ನನ್ನಿಯ ಪೆಂಪುಮನಾಂತು ಭೂಭುಜರ್
ತನಗಿನಿತೂನಮಾಗೆ ಮೆದಾ ಭುಜವೀರ್ಯಮನಾಂತು ಮಾಣ್ಬುದೇಂ|
ತನಗುಱುವೊಂದು ನನ್ನಿಯನೆ ಪೂಣ್ದು ಕರಂ ಪಿರಿದುಂ ಬಲಸ್ಥನ
ಪ್ಪನನೆ ಕಱುತ್ತು ಕಾದಿ ನೆಗೞiತನೆ ನನ್ನಿಯ ಬೀರದಾಗರಂ|| ೧೯೭

ಕಾಂತಿಯಿಂದಲೂ ಕೂಡಿದ ಪ್ರಪಂಚವೆಂಬ ಮನೆಯಷ್ಟು ವಿಸ್ತಾರವಾದ ಅರ್ಧಾವಲೀಕವೆಂಬ ಅರ್ಧ ಉಳಿದಿದ್ದ ಸರ್ಪವು ಬಾಣದ ಆಕಾರದಲ್ಲಿ ಬತ್ತಳಿಕೆಯಿಂದ ಹೊಳೆಯುತ್ತ ಪ್ರಾಣಾಪಹಾರಮಾಡಲು ಕೈಗೆ ಬಂದಿತು. ೧೯೨. ಅದನ್ನು ತಿರುಗಿಸಲು ಭೂಮಿಯು ತಿರ್ರೆಂದು ತಿರುಗಿತು. ಬಿಲ್ಲಿನ ಹೆದೆಗೇರಿಸಲು ದೇವತೆಗಳು ಗಟ್ಟಿಯಾಗಿ ಕೂಗಿಕೊಂಡರು. ವೇಗದಿಂದ ಹೆದೆಯನ್ನು ಕಿವಿಯವರೆಗೆ ಸೆಳೆಯಲು ಮೈಯಿಳಿದ (ಗರ್ಭಾಸ್ರಾವವಾದ) ಬ್ರಹ್ಮನಿಂದ ಬ್ರಹ್ಮಾಂಡವು ಹುಟ್ಟಿತು. ೧೯೩. ಅದನ್ನು ಕರ್ಣನು ಪ್ರಯೋಗಮಾಡಲು ದುರ್ಯೋಧನನ ಸಮಸ್ತ ರಾಜ್ಯಶ್ರೀಯು ಗಡಗಡನೆ ನಡುಗಿ ಸಡಿಲಿಸಿದ್ದ ತನ್ನ ತೋಳನ್ನು ಸಡಿಲಿಸಲು ಆಗ ಶಕ್ತಳಾಗಲಿಲ್ಲವಲ್ಲವೇ? ಅದರ ಭಯಂಕರತೆ ಅತ್ಯದ್ಭುತವಾಗಿತ್ತು. ೧೯೪. ಕಿವಿಯವರೆಗೂ ಪೂರ್ಣವಾಗಿ ಸೆಳೆದು ಕರ್ಣನು ಹೊಡೆಯಲು ಮನಸ್ಸು ಮಾಡುತ್ತಿದ್ದ ಹಾಗೆಯೇ ಹಿಂದಕ್ಕೆ ತೆಗೆ, ಹಿಂದಕ್ಕೆ ತೆಗೆ; ಹೊಡೆಯಬೇಡ; ಈ ಭಯಂಕರವಾದ ಬಾಣವನ್ನು ವಿವೇಕದಿಂದ ಎದೆಯ ಪ್ರದೇಶಕ್ಕೆ ಗುರಿಯಿಡದೆ ತಲೆಗೆ ಗುರಿಯಿಡುತ್ತೀಯಾ? ೧೯೫. ಎದೆಯ ಪ್ರದೇಶಕ್ಕೆ ಗುರಿಯಿಟ್ಟು ತೊಟ್ಟರೆ ಜಯಲಕ್ಷ್ಮಿಯು ನಿನ್ನಲ್ಲಿರಲು ಅವಕಾಶವಾಗುತ್ತದೆ. ಆ ದುರ್ಯೋಧನನಲ್ಲಿ ಜಯಲಕ್ಷ್ಮಿಯಿರಲೂ ಅವಕಾಶವಾಗುತ್ತದೆ. ಕರ್ಣಾ ಈ ಮಾತು ಸುಳ್ಳಲ್ಲ ಸಂಶಯಪಡಬೇಡ ವ|| ಎನ್ನಲು, ಶಲ್ಯನು ನುಡಿದ ಮಾತನ್ನು ಕೇಳಿ ತನ್ನ ಮನಸ್ಸಿನಲ್ಲಿಯೇ ಕರ್ಣನು ಹೀಗೆಂದುಕೊಂಡನು. ೧೯೬. ಹೇಗೂ ಶಲ್ಯನು ಹೇಳಿದ ಹಾಗೆಯೇ (ಸರಿ) ಸುಳ್ಳಿಲ್ಲ. ಆದರೆ ಆ ಇಂದ್ರಪುತ್ರನಾದ ಅರ್ಜುನನನ್ನು ನಾನು ಕೊಂದರೆ ಧರ್ಮರಾಜನು ಸಾಯುತ್ತಾನೆ. ನನ್ನ ತಾಯಿಯೆಂದೇ ಕುಂತಿ ಬಂದು ನನ್ನಲ್ಲಿ ಇದನ್ನೇ ಬೇಡಿಹೋದಳು. ಅದನ್ನು ನಾನು ತಪ್ಪಿ ನಡೆಯುವುದಾದರೆ ಆ ಒಳ್ಳೆಯ ಸತ್ಯವಾಕ್ಕಿನ ಭಂಗವಾದುದನ್ನು ನಾನು ಮಾಡುವೆನೇ? (ಮಾಡಲೇ) ೧೯೭. ಸಾಮಾನ್ಯರಾಜರಾದವರು ತಮಗೆ ಸಾಧ್ಯವಾದಷ್ಟು

ಮ|| ಅಱಯರ್ ಪಾಂಡವರೆನ್ನನಿನ್ನುಮಱಪಲ್ ನೀಮೆಂದದಂ ಚಕ್ರಿಗಾ
ನಱಪಿರ್ದೆಂ ಪೃಥೆಯುಂ ಮದೀಯ ಸುತರೊಳ್ ವೈಕರ್ತನಂ ನನ್ನಿಯಂ|
ನಿಱಸಲ್ಕಾರ್ಕುಮಮೋಘಮೆಂದು ಮನದೊಳ್ ನಂಬಿರ್ದಳಿನ್ನಿಲ್ಲಿ ಪೆಂ
ಪೆಱಕಂಬೆತ್ತಿರೆ ಕಾವೆನೆನ್ನ ನುಡಿಯಂ ಕೆಯ್ಕೊಂಡ ಕಟ್ಟಾಯಮಂ|| ೧೯೮

ಕಂ|| ಎಂಬುದನೆ ಬಗೆದು ಪೆಱತನ
ಣಂ ಬಗೆಯದೆ ಮದ್ರಪತಿಯನೆಂದಂ ಮುಂ ತೊ|
ಟ್ಟಂಬನದನುಗಿದು ಕುಂದಿಸಿ
ದಂ ಭಯದಿಂ ಕರ್ಣನೆಂದು ಲೋಕಂ ನಗದೇ|| ೧೯೯

ಕಂ|| ಉಡುಗುಡುಗುಡುಗೆಂದಿಸೆ ಬಱ
ಸಿಡಿಲೆಱಪಂತೆಱಪ ಸರಲ ಬರವಂ ಕಂಡಾ|
ಗಡೆ ಚಕ್ರಿ ನೆಲನೊಳೆಣ್ಬೆರ
ಲಡಂಗೆ ನರರಥಮನೊತ್ತಿದಂ ನಿಪುಣತೆಯಿಂ|| ೨೦೦

ಒತ್ತುವುದುಂ ಶರಮಿರದೆ
ಯ್ದುತ್ತೆ ಕಿರೀಟಿಯ ಕಿರೀಟಮಂ ಕೊದೊಡೆ ಪ|
ರ್ವಿತ್ತು ಭಯಮಿಂದ್ರನಂ ಮು
ತ್ತಿತ್ತೞಲೀಶ್ವರನನಾಗಳಾ ಸಂಕಟದೊಳ್|| ೨೦೧

ಒಳಗಱಯದೆ ಕೌರವಬಳ
ಜಳನಿ ಬೊಬ್ಬಿಱದು ಮೇಲುದಂ ಬೀಸಿದೊಡು|
ಚ್ಚಳಿಸಿದ ಮಕುಟದ ಮಣಿಗಳ
ಪೊಳೆಪುಗಳಿಂದಳ್ಕಮೆೞ್ದುವೆಂಟುಂ ದೆಸೆಯೊಳ್|| ೨೦೨

ವ|| ಅಂತು ರುಂದ್ರನೀಳಾದ್ರೀಂದ್ರ ರತ್ನಕೂಟಾಗ್ರಮುದಗ್ರ ವಜ್ರಘಾತದಿಂದುರುಳ್ವಂತೆ ರತ್ನಮಕುಟಮರಾತಿಶಾತಶರದಿನುರುಳ್ವುದು ಮಳಿನೀಳೋಜ್ವಳ ಸಹಸ್ರಕುಂತಳಂಗಳ್ ಪರಕಲಿಸಿ ಬಂದು ಪೊಱಮುಯ್ವನಳ್ಳಿಱಯೆ ಪಚ್ಚುಗಂಟಿಕ್ಕಿ ಗಾಂಡೀವಧನ್ವಂ ಸನ್ನದ್ಧನಾಗಿರ್ಪನ್ನೆಗಂ-