ಸಾಮಾನ್ಯವಾಗಿ ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಸಂಗೀತ, ನೃತ್ಯ, ನಾಟಕ ಎಲ್ಲಕ್ಕೂ ಧರ್ಮವೇ ತಾಯಿ. ಮನುಷ್ಯ ಭಗವಂತನನ್ನು ಒಲಿಸಲು ಇವೆಲ್ಲವನ್ನೂ ಬಳಸು ತ್ತಾನೆ. ಕ್ರಮೇಣ ಇವುಗಳನ್ನು ಇತರ ರೀತಿಗಳಲ್ಲಿಯೂ ಬಳಸುವುದು ಪ್ರಾರಂಭವಾಗುತ್ತದೆ. ಕೆಲವು ದೇಶಗಳಲ್ಲಿ ಧರ್ಮ-ಕಲೆಗಳ ಸಂಬಂಧ ಬಹು ನಿಕಟವಾಗಿ ಉಳಿದು ಕೊಂಡು ಬರುತ್ತದೆ; ಕೆಲವು ದೇಶಗಳಲ್ಲಿ ಕಾಲಕಳೆದಂತೆ ಈ ಸಂಬಂಧ ದುರ್ಬಲವಾಗುತ್ತದೆ. ಭಾರತದಲ್ಲಿ ಈ ಬಾಂಧವ್ಯ ತುಂಬ ನಿಕಟವಾಗಿಯೇ ಉಳಿದಿದೆ. ಸಂಗೀತ ವಂತೂ ಭಕ್ತಿಯ ಮಧುರ ಸ್ವರೂಪವಾಗಿದೆ. ಸಂಗೀತವೇ ಭಗವಂತನ ಆರಾಧನೆಯಾಗಬಹುದು. ಸಂಗೀತದಿಂದ ಭಗವಂತನನ್ನು ಮೆಚ್ಚಿಸಬಹುದು ಮುಕ್ತಿಯನ್ನು ಪಡೆಯ ಬಹುದು ಎಂಬ ನಂಬಿಕೆ ಬೆಳೆದುಬಂದಿದೆ.

ಪುರಂದರದಾಸರು ಕೃಷ್ಣನನ್ನು ವರ್ಣಿಸಿ ರಚಿಸಿದ ಹಾಡುಗಳು, ತಮ್ಮ ಭಕ್ತಿಯನ್ನು ತೋಡಿಕೊಂಡ ಹಾಡುಗಳು, ಕನ್ನಡ ನಾಡಿನಲ್ಲಿ ಮನೆಮನೆಯಲ್ಲಿ ಇಂದು ಕೇಳಿ ಬರುತ್ತವೆ. ಇಂದು ದಕ್ಷಿಣ ಭಾರತದಲ್ಲಿ ಸಂಗೀತ ಕಚೇರಿಗಳಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ಕೇಳುತ್ತೇವೆ. ತ್ಯಾಗರಾಜರೂ ಸಂಗೀತವನ್ನು ಭಗವಂತನ ಪೂಜೆ ಎಂದು ತಮ್ಮ ಭಕ್ತಿಯನ್ನು ತೋಡಿ ಕೊಳ್ಳಲು ಕೀರ್ತನೆಗಳನ್ನು ರಚಿಸಿದರು. ತ್ಯಾಗರಾಜರೊಂದಿಗೆ ಮುತ್ತು ಸ್ವಾಮಿ ದೀಕ್ಷಿತರು, ಶ್ಯಾಮಶಾಸ್ತ್ರಿಗಳು ಸಂಗೀತದ ತ್ರಿಮೂರ್ತಿಗಳು ಎಂದು ಪ್ರಸಿದ್ಧರಾಗಿದ್ದಾರೆ. ಅವರ ರಚನೆಗಳು ಭಗವಂತನಿಗೆ ಸಮರ್ಪಿತವಾಗಿವೆ. ಇವರೆಲ್ಲ ಋಷಿ ಸಮಾನರು. ಸಂಗೀತದಿಂದ ಭಗವಂತನ ದರ್ಶನ ಮಾಡಿದವರು ಎಂದು ಪ್ರಸಿದ್ಧರಾಗಿದ್ದಾರೆ.

ಮಹಾನ್ ವ್ಯಕ್ತಿಗಳ ಮೇಲ್ಪಂಕ್ತಿಯನ್ನೇ ಅನುಸರಿಸಿ ನಾದೋಪಾಸನೆಯಿಂದ ಅನೇಕ ಕಲೋಪಾಸಕರು ತಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಂಡಿರುತ್ತಾರೆ. ಅಲ್ಲದೆ ಕಲಾಭಿ ಮಾನಿಗಳಿಗೂ ಮತ್ತು ರಸಿಕರಿಗೂ ರಸದೌತಣವನ್ನು ಮಾಡಿಸಿರುತ್ತಾರೆ. ಇಂಥ ಕಲೋಪಾಸಕರಲ್ಲಿ ದ್ವಾರಂ ವೆಂಕಟಸ್ವಾಮಿ ನಾಯುಡುರವರು ಒಬ್ಬ ಶ್ರೇಷ್ಠ ಪಿಟೀಲು ವಿದ್ವಾಂಸರು.

ಇವರು ಎಂಬತ್ತಮೂರು ವರ್ಷಗಳ ಹಿಂದೆ ಹುಟ್ಟಿದರು. ಪಾಪ ವೆಂಕಟರಾಮ ಅಯ್ಯರ್, ಕುಂಭ ಕೋಣಂ ರಾಜ ಮಾಣಿಕ್ಯಂ ಪಿಳ್ಳೆ ಮತ್ತು ಮೈಸೂರಿನ ಟಿ. ಚೌಡಯ್ಯ ಮುಂತಾದವರು ದ್ವಾರಂ ಅವರ ಸಮ ಕಾಲೀನರಾಗಿದ್ದ ಇತರ ಸುಪ್ರಸಿದ್ಧ ಪಿಟೀಲು ವಿದ್ವಾಂಸರು.

ಪಿಟೀಲು ನಮಗೆಲ್ಲ ಪರಿಚಿತವಾದ ವಾದ್ಯ. ಇದು ಪಾಶ್ಚಾತ್ಯ ದೇಶದಿಂದ ನಮ್ಮಲ್ಲಿಗೆ ಬಂದ ತಂತೀವಾದ್ಯ. ದ್ವಾರಂ ವೆಂಕಟಸ್ವಾಮಿ ನಾಯುಡು ಅವರು ಇದರ ಮೇಲೆ ಅಸಾಧಾರಣ ಪ್ರಭುತ್ವ ಸಾಧಿಸಿದರು. ಅವರು ಪಿಟೀಲು ನುಡಿಸಿದುದನ್ನು ಕೇಳುವುದೇ ಒಂದು ಭಾಗ್ಯ ಎನ್ನುವಂತೆ ಪ್ರಭುತ್ವ ಪಡೆದರು.

ಸಂಗೀತದ ಮನೆತನ

ವೆಂಕಟಸ್ವಾಮಿ ನಾಯುಡುರವರು ೧೮೯೩ ರ ನವೆಂಬರ್ ಮೂರರಂದು ಬೆಂಗಳೂರಿನಲ್ಲಿ ಜನ್ಮ ತಾಳಿದರು. ದ್ವಾರಂ ಎಂಬುದು ಅವರ ಮನೆತನದ ಹೆಸರು. ಇವರ ತಂದೆ ವೆಂಕಟರಾಯಲು ನಾಯುಡು. ತಾತ ವೆಂಕಟಸ್ವಾಮಿ ನಾಯುಡು. ತಾತನವರ ಹೆಸರನ್ನೇ ಮೊಮ್ಮಗನಿಗೂ ಇಟ್ಟರು. ಇವರ ಮನೆತನ ತುಂಬಾ ಗೌರವವನ್ನು ಪಡೆದಿತ್ತು. ದ್ವಾರಂರವರ ತಂದೆ ಮತ್ತು ತಾತ ಇಬ್ಬರೂ ಸೈನ್ಯದ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಇಬ್ಬರಿಗೂ ಸಂಗೀತ ಎಂದರೆ ಪ್ರಾಣ. ಚೆನ್ನಾಗಿ ಸಂಗೀತ ವನ್ನು ಕಲಿತಿದ್ದರು.

ಪಿಟೀಲು ವಾದನದಲ್ಲಿ ಇಬ್ಬರಿಗೂ ಒಳ್ಳೆಯ ಪರಿಶ್ರಮ. ಪ್ರತಿದಿನವೂ ಸಾಯಂಕಾಲದ ಹೊತ್ತೂ ಮನೆಯಲ್ಲಿ ಭಜನೆಯನ್ನು ತಪ್ಪದೆ ನಡೆಸುತ್ತಿದ್ದರು. ಆಗ ಸುಪ್ರಸಿದ್ಧ ವಾಗ್ಗೇಯ ಕಾರರುಗಳ – ಎಂದರೆ ಹಾಡು ಗಳನ್ನು ರಚಿಸುವ ಸಂಗೀತಗಾರರ ಕೃತಿಗಳನ್ನೇ ಹಾಡುವುದು ಸಂಪ್ರದಾಯವಾಗಿದ್ದಿತು. ಇವೆಲ್ಲವೂ ದ್ವಾರಂರವರ ಮೇಲೆ ಅಗಾಧವಾದ ಒಳ್ಳೆಯ ಪರಿಣಾಮ ವನ್ನು ಉಂಟು ಮಾಡಿದುವು.

ದ್ವಾರಂರವರು ಹುಟ್ಟಿದ ಕೆಲವೇ ದಿನಗಳಲ್ಲಿ ಇವರ ತಂದೆ ಕುಟುಂಬ ಸಮೇತ ವಿಶಾಖಪಟ್ಟಣಕ್ಕೆ ಹೊರಟು ಹೋದರು. ಅಲ್ಲೇ ಖಾಸಿಂ ಕೋಟೆಯಲ್ಲಿ ದ್ವಾರಂರವರ ಬಾಲ್ಯ ವಿದ್ಯಾಭ್ಯಾಸವು ಆರನೆಯ ವರ್ಷದಲ್ಲಿ ಪ್ರಾರಂಭ ವಾಯಿತು.

ಶಾಲೆಯ ವಿದ್ಯಾಭ್ಯಾಸ ಮುಗಿಯಿತು

ದ್ವಾರಂ ಅವರಿಗೆ ಒಂದು ಕಷ್ಟ ಇತ್ತು. ಹುಟ್ಟುವಾಗಲೇ ಕಣ್ಣಿನಲ್ಲಿ ಪೊರೆ ಇದ್ದಿತು. ಆದುದರಿಂದ ವಿದ್ಯಾಭ್ಯಾಸ ವನ್ನು ಪ್ರಾಥಮಿಕ ತರಗತಿಗಳಿಂದ ಮುಂದುವರಿಸಲು ಸಾಧ್ಯವಾಗಲಿಲ್ಲ.

ದ್ವಾರಂ ಅವರಿಗೆ ಕಣ್ಣು ಕಾಣುತ್ತಲೇ ಇರಲಿಲ್ಲ ಎಂದಲ್ಲ. ಸ್ವಲ್ಪ ಶ್ರಮದಿಂದ ಓದಿ ಬರೆದು ಮಾಡುತ್ತಿದ್ದರು. ಆದರೆ ದೃಷ್ಟಿ ಎಲ್ಲರಿಗೆ ಇರುವಂತೆ ಇರಲಿಲ್ಲ. ಮಸುಕು ಮಸುಕಾಗಿ ಕಾಣುತ್ತಿತ್ತು. ಅವರು ಹುಡುಗರಾಗಿದ್ದಾಗ ಒಂದು ಘಟನೆ ನಡೆಯಿತು.

ಆಗ ದ್ವಾರಂ ಶಾಲೆಯ ಪ್ರೈಮರಿ ಏಳನೆಯ ತರಗತಿ ಯಲ್ಲಿ ವಿದ್ಯಾರ್ಥಿಯಾಗಿದ್ದರು. ಒಬ್ಬ ಉಪಾಧ್ಯಾಯರು ಬೋರ್ಡಿನ ಮೇಲೆ ಪಾಠದ ವಿಷಯ ಬರೆದರು. ‘ಓದು’ ಎಂದು ದ್ವಾರಂರವರಿಗೆ ಹೇಳಿದರು.

ಹುಡುಗ ವೆಂಕಟ ಸ್ವಾಮಿ ನಿಂತುಕೊಂಡ. ಕಣ್ಣಿನಲ್ಲಿ ಪೊರೆ. ಉಪಾಧ್ಯಾಯರು ಬರೆದದ್ದು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹುಡುಗ ಬಹು ಕಷ್ಟಪಟ್ಟ, ಸಾಧ್ಯವಾಗಲಿಲ್ಲ.

ಹುಡುಗನ ಕಷ್ಟ ಉಪಾಧ್ಯಾಯರಿಗೆ ತಿಳಿಯದು. ಅವರಿಗೆ ತಾಳ್ಮೆ ತಪ್ಪಿತು. ‘ನೀನು ದಡ್ಡ, ತರಗತಿಯಲ್ಲಿಯೂ ಗಮನ ಕೊಟ್ಟು ಕೇಳುವುದಿಲ್ಲ’ ಎಂದು ಕೋಪದಿಂದ ಮಾತನಾಡಿದರು.

ಮೆದು ಸ್ವಭಾವದ ಹುಡುಗನಿಗೆ ಏನು ಹೇಳುವುದಕ್ಕೂ ತಿಳಿಯಲಿಲ್ಲ. ಪಾಪ, ಅವನಿಗೂ ಸರಿಯಾಗಿ ತಿಳಿಯದು- ಇತರ ಹುಡುಗರಿಗೆ ತನಗಿಂತ ಚೆನ್ನಾಗಿ ಕಾಣುತ್ತದೆ ಎಂದು. ಸಮ್ಮನೆ ತಳೆತಗ್ಗಿಸಿ ನಿಂತ.

ಉಪಾಧ್ಯಾಯರ ಸಿಟ್ಟು ಏರಿತು. ಇನ್ನಷ್ಟು ಬೈದು ಹುಡುಗನಿಗೆ; ‘ನೀನು ತರಗತಿಯಲ್ಲಿರಬೇಡ, ಹೊರಟು ಹೋಗು’ ಎಂದುಬಿಟ್ಟರು.

ಹುಡುಗ ಕಣ್ಣೀರು ಸುರಿಸುತ್ತ ಮನೆಗೆ ಹೋದ.

ಹುಡುಗನಿಂದ ನಡೆದ ಸಂಗತಿಯನ್ನು ಕೇಳಿ ತಂದೆ ತಾಯಿಯರು ಬಹಳ ದುಃಖಪಟ್ಟರು. ಹುಡುಗ, ‘ನಾನು ಮತ್ತೆ ಶಾಲೆಗೆ ಹೋಗುವುದಿಲ್ಲ’ ಎಂದ. ಸೂಕ್ಷ್ಮ ಮೃದು ಸ್ವಭಾವದ ಅವನ ಮನಸ್ಸಿಗೆ ತುಂಬಾ ಪೆಟ್ಟಾಗಿತ್ತು.

ಮುಂದೇನು ಮಾಡುವುದು ? ಹುಡುಗನ ತಂದೆ ತಾಯಿಯರಿಗೆ ಚಂತೆಯಾಯಿತು.

ದ್ವಾರಂ ಅವರ ಅಣ್ಣ ಕೃಷ್ಣಯ್ಯನಾಯಡುರವರು. ಅವರ ಹುಡುಗನನ್ನು ಸಮಾಧಾನ ಮಾಡಿದರು. “ಈ ಹುಡುಗನಿಗೆ ಸಂಗೀತದ ಅಭ್ಯಾಸವೇ ಸರಿ. ಕಣ್ಣಿನ ತೊಂದರೆ ಯಿಂದ ಹೆಚ್ಚು ಕಷ್ಟವಾಗುವುದಿಲ್ಲ” ಎಂದು ತೀರ್ಮಾ ನಿಸಿದರು.

ದ್ವಾರಂ ಅವರಿಗೆ ಹೊರಗಿನ ಕಣ್ಣು ದುರ್ಬಲ ವಾಗಿತ್ತು. ಆದರೆ ಒಳಗಿನ ಕಣ್ಣು ಶಕ್ತವಾಗಿತ್ತು.

ದ್ವಾರಂ ಕಷ್ಟಪಟ್ಟು ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷ್ ಓದು ಬರಹವನ್ನು ಕಲಿತರು.

ಸಂಗೀತದ ಶಿಕ್ಷಣ ಪ್ರಾರಂಭ

ಕೃಷ್ಣಯ್ಯ ನಾಯುಡುರವರು ಸ್ವತಃ ಸಂಗೀತ ಬಲ್ಲವರು. ವೀಣಾಚಾರ್ಯ ಸಂಗಮೇಶ್ವರ ಶಾಸ್ತ್ರಿಗಳ ಪ್ರಮುಖ ಶಿಷ್ಯರಲ್ಲಿ ಒಬ್ಬರಾಗಿದ್ದರು. ಸಹೋದರ ನಾಯುಡುರವರೇ ದ್ವಾರಂರವರಿಗೆ ಪಿಟೀಲಿನ ಪ್ರಥಮ ಗುರು.

ದ್ವಾರಂ ಅವರಿಗೆ ಕಲಿಯುವುದರಲ್ಲಿ ತುಂಬಾ ಉತ್ಸಾಹ. ಕಲಿಯಲು ಕಷ್ಟಪಟ್ಟು ಅಭ್ಯಾಸಮಾಡಲು ಸಿದ್ಧರಾಗಿದ್ದರು. ಅಲ್ಲದೆ ಬಾಲ್ಯದಿಂದಲೂ ಅಣ್ಣನವರ ಜೊತೆಯಲ್ಲೇ ಇದ್ದು ಅಂದಿನ ಸುಪ್ರಸಿದ್ಧ ವಿದ್ವಾಂಸರು ಗಳಾಗಿದ್ದ ಸಂಗಮೇಶ್ವರ ಶಾಸ್ತ್ರಿ, ಅನಂತರಾಮ ಭಾಗವತರ್, ತಿರುಕ್ಕೋಡಿಕಾವಲ್ ಕೃಷ್ಣಯ್ಯರ್ ಮುಂತಾದವರ ಸಂಗೀತವನ್ನು ಕೇಳುವ ಸುಯೋಗವು ಲಭಿಸಿದ್ದಿತು. ಸಂಗೀತ ಜ್ಞಾನ ಮತ್ತು ಸಂಗೀತಕ್ಕೆ ಸಂಬಂಧಿಸಿದ ವಿಚಾರಗಳನ್ನು ಗ್ರಹಿಸಬಲ್ಲ ಸೂಕ್ಷ್ಮವಾದ ಕಿವಿಗಳು ದ್ವಾರಂರವರಿಗೆ ಪರೋಕ್ಷದ ಗುರುಗಳಂತೆ, ಇವುಗಳ ಜೊತೆಗೆ ಕೋನೇರಿ ರಾಜಪುರಂ ವೈದ್ಯನಾಥಯ್ಯರ್ ಮತ್ತು ಫಿಡಲ್ ತಿರುಚ್ಚಿ ಗೋವಿಂದಸ್ವಾಮಿ ಪಿಳ್ಳೆಯವರ ಸಂಗೀತದ ಶೈಲಿಯು ದ್ವಾರಂ ಅವರ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದ್ದಿತು. ದ್ವಾರಂ ಅವರ ಸಂಗೀತ ಶಿಕ್ಷಣ ಚೆನ್ನಾಗಿ ನಡೆಯಿತು. ಬೇಗಬೇಗನೆ ಅವರು ಅಣ್ಣ ಹೇಳಿಕೊಟ್ಟುದನ್ನು ಕಲಿತರು.

ವೀಣೆ ಶೇಷಣ್ಣನವರ ಆಶೀರ್ವಾದ

ಗುರುವಾಗಿದ್ದ ಕೃಷ್ಣಯ್ಯ ನಾಯುಡುರವರು ದ್ವಾರಂ ಅವರ ಪಾಂಡಿತ್ಯವನ್ನು ತಿಳಿದು ಮನಸಾರ ಹಿಗ್ಗಿದರು. ಅಲ್ಲದೆ ಆಗಿನ ಸುಪ್ರಸಿದ್ಧ ವಿದ್ವಾಂಸರುಗಳ ಸಮ್ಮುಖದಲ್ಲಿ ಅವರೊಬ್ಬರೇ ಪಿಟೀಲು ಕಚೇರಿ ಮಾಡಲು ಏರ್ಪಡಿಸಿ ಅವರ ಆಶೀರ್ವಾದವು ಲಭಿಸುವಂತೆ ಮಾಡಿದರು. ವೀಣೆ ಶೇಷಣ್ಣ ಎನ್ನುವರು ಬಹು ದೊಡ್ಡ ಸಂಗೀತ ವಿದ್ವಾಂಸರು. ರಾಜ ಮಹಾರಾಜರುಗಳಿಂದಲೂ ಸಂಗೀತ ವಿದ್ವಾಂಸ ರಿಂದಲೂ ಸಾಮಾನ್ಯ ರಸಿಕರಿಂದಲೂ ಮೆಚ್ಚಿಕೆ ಪಡೆ ದವರು. ಅವರು ವಿಶಾಖಪಟ್ಟಣಕ್ಕೆ ಒಂದು ಸಂಗೀತ ಕಚೇರಿಗಾಗಿ ಬಂದರು. ಕೃಷ್ಣಯ್ಯ ನಾಯುಡು ಅವರು ವೆಂಕಟಸ್ವಾಮಿ ನಾಯುಡು ಶೇಷಣ್ಣನವರ ಮುಂದೆ ಪಿಟೀಲು ನುಡಿಸಲು ಅವಕಾಶ ಮಾಡಿಕೊಟ್ಟರು. ಆಗ ದ್ವಾರಂಗೆ ಇನ್ನೂ ಎಳೆಯ ವಯಸ್ಸು. ಅವರ ಪಿಟೀಲು ವಾದವನ್ನು ಕೇಳಿ ಕಲಾಪ್ರೌಢಿಮೆಯನ್ನು ಶೇಷಣ್ಣ ನವರು ಬಹುವಾಗಿ ಮೆಚ್ಚಿದರು, ಸಭಿಕರ ಮುಂದೆ ಮನಸಾರ ಹೊಗಳಿ ಬಾಲಕನಿಗೆ ಉಜ್ವಲವಾದ ಭವಿಷ್ಯವಿದೆಯೆಂದು ಆಶೀರ್ವದಿಸಿದರು.

ಬಾಲಕ ವೆಂಕಟಸ್ವಾಮಿ ನಾಯುಡು ಅವರನ್ನು ವೀಣೆ ಶೇಷಣ್ಣನವರು ಹರಸಿದರು

೧೯೬೪ ರಲ್ಲಿ ದ್ವಾರಂರವರು ಬೆಂಗಳೂರಿಗೆ ರಾಮೋ ತ್ಸವದ ಕಚೇರಿಗಾಗಿ ಬಂದಿದ್ದಾಗ್ಗೆ ಕೆಲವು ಸಂಗೀತಗಾರರ ಮುಂದೆ ಈ ಸಂದರ್ಭವನ್ನು ಜ್ಞಾಪಿಸಿಕೊಂಡು, “ಪೂಜ್ಯ ಶೇಷಣ್ಣನವರ ಆಶೀರ್ವಾದವೇ ಇಂದು ಈ ದೈವಿಕ ವಿದ್ಯೆಗೆ ನಾನು ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿದ್ದು” ಎಂದು ಹೇಳಿದರು.

ಬೆಳೆದ ಕೀರ್ತಿ

ದ್ವಾರಂರವರಿಗೆ ಹಿಂದುಸ್ತಾನೀ ಮತ್ತು ಪಾಶ್ಚಾತ್ಯ ಸಂಗೀತದಲ್ಲೂ ವಿಶೇಷವಾದ ಅಭಿಮಾನವಿದ್ದಿತು. ಕರ್ನಾಟಕ ಸಂಗೀತದಂತೆಯೇ ಇವುಗಳನ್ನು ಆಳವಾಗಿ ಅಭ್ಯಾಸಮಾಡಿ ಪೂರ್ಣ ಪಾಂಡಿತ್ಯವನ್ನು ಪಡೆದಿದ್ದರು. ಎಲ್ಲಾ ದೇಶಗಳ ಸಂಗೀತದ ಗುರಿಯೂ ಭಗವಂತನ ದರುಶನಕ್ಕಾಗಿಯೇ ಎಂದು ಅವರು ತಿಳಿದಿದ್ದರು. ಆದ್ದರಿಂದ ಅವರಿಗೆ ಸಂಗೀತದಲ್ಲಿ ಪ್ರಾಂತೀಯತೆ ಅಥವಾ ದೇಶೀಯತೆ ಎಂಬ ಬೇಧಭಾವನೆಗಳು ಇರಲಿಲ್ಲ.

೧೯೨೭ ನಂತರ ದ್ವಾರಂ ಕಲಾ ಪ್ರೌಢಿಮೆಯು ಸರ್ವತೋಮುಖವಾಗಿ ಹಬ್ಬಿತು. ಇದರ ಫಲವಾಗಿ ಆಗ್ಗೆ ಅತ್ಯಂತ ಸುಪ್ರಸಿದ್ಧರಾಗಿದ್ದ ಅರಿಯಾಕುಡಿ ರಮಾನುಜ ಅಯ್ಯಂಗಾರ್, ಚಂಬೈ ವೈದ್ಯನಾಥ ಭಾಗವತರ್, ಕೊಳಲಿನ ಪಲ್ಲಡಂ ಸಂಜೀವರಾವ್ ಮುಂತಾದ ವಿದ್ವಾಂಸರುಗಳಿಗೆ ದ್ವಾರಂರವರೇ ಪಕ್ಕವಾದ್ಯವನ್ನು ನುಡಿಸಿ ಅವರುಗಳ ಮೆಚ್ಚುಗೆ ಪಡೆದರು. ತಮ್ಮ ಪ್ರತ್ಯೇಕ ಪಿಟೀಲು ಕಚೇರಿಗಳನ್ನು ಅಮೋಘವಾದ ರೀತಿಯಲ್ಲಿ ಪಿಟೀಲು ನುಡಿಸಿ ಸಭಿಕರ ಗೌರವಕ್ಕೆ ಪಾತ್ರರಾದರು.

ನಾಯುಡುರವರಿಗೆ ಪಿಟೀಲನ್ನು ಪಕ್ಕವಾದ್ಯವಾಗಿ ನುಡಿಸುವುದಕ್ಕಿಂತಲೂ, ತನಿ ಕಚೇರಿಗಳನ್ನು ಮಾಡುವುದ ರಲ್ಲೇ ಹೆಚ್ಚು ಆಸಕ್ತಿ. ಪಕ್ಕವಾದ್ಯವನ್ನು ನುಡಿಸುವಾಗ ಪ್ರಮುಖ ಗಾಯಕನ ಮನೋಧರ್ಮವನ್ನೇ ಅನುಸರಿಸ ಬೇಕಾಗುತ್ತದೆ. ತಮ್ಮ ಕಚೇರಿಯಲ್ಲಿ ತಮ್ಮ ಮನೋಧರ್ಮಕ್ಕೆ ತಕ್ಕಂತೆ, ತಮ್ಮ ವಿಶಿಷ್ಟ ಶೈಲಿಯಲ್ಲಿ ನುಡಿಸಬಹುದು ಎಂದು ಅವರ ಅಭಿಪ್ರಾಯ.

ಆದ್ದರಿಂದ ೧೯೪೪ರ ನಂತರ ದ್ವಾರಂರವರು ತನಿ ಕಚೇರಿಗಳನ್ನು ಮಾತ್ರ ಒಪ್ಪಿ ಕೊಳ್ಳುತ್ತಿದ್ದರು, ಈ ಕಚೇರಿಗಳಲ್ಲಿ ಸಾಮಾನ್ಯವಾಗಿ ಇವರ ಮಗಳು ಮಂಗ ತಾಯಾರ್ ಅಥವಾ ಮಗ ದ್ವಾರಂ ಸತ್ಯನಾರಾಯಣರಾಯರು ಇವರ ಜೊತೆಯಲ್ಲಿ ಪಿಟೀಲನ್ನು ನುಡಿಸುತ್ತಿದ್ದರು.

ದ್ವಾರಂರವರಿಗೆ ತಿರುಚಿ ಗೋವಿಂದಸ್ವಾಮಿ ಪಿಳ್ಳೆ ಯವರ ಪಿಟೀಲು ವಾದನದ ಶೈಲಿಯಲ್ಲಿ ಹೆಚ್ಚಿನ ಮೆಚ್ಚುಗೆ ಇದ್ದಿತು. ಅಂತೆಯೇ ಗೋವಿಂದಸ್ವಾಮಿ ಪಿಳ್ಳೆಯವರು ದ್ವಾರಂರವರ ವಾದನದ ಶೈಲಿಯನ್ನು ಮೆಚ್ಚಿಕೊಂಡಿದ್ದರು.

೧೯೨೯ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯಕ್ಕೆ ಪಿಟೀಲಿನ ಪ್ರಾಧ್ಯಾಪಕರೊಬ್ಬರು ಬೇಕಾಗಿತ್ತು. ಗೋವಿಂದ ಸ್ವಾಮಿ ಪಿಳ್ಳೆ ಯವರು ದ್ವಾರಂರವರೇ ಅತ್ಯಂತ ಸಮರ್ಥ ರೆಂದು ಅವರ ಹೆಸರನ್ನು ಶಿಫಾರಸು ಮಾಡಿದರು.

ಇದರ ಫಲವಾಗಿ ಅಣ್ಣಾಮಲೈ ವಿಶ್ವವಿದ್ಯಾನಿಲಯ ದಿಂದ ದ್ವಾರಂರವರಿಗೆ ಪ್ರಾರ್ಥನಾ ಕರೆ ಬಂದಿತು. ಆದರೆ ಗೃಹಕೃತ್ಯದ ಅನಿವಾರ್ಯದಿಂದಲೂ ಮತ್ತು ವಿಜಯ ನಗರದ ಮಹಾ ರಾಜರಲ್ಲಿ ಅತ್ಯಂತ ನಿಷ್ಠೆ ಇದ್ದುದರಿಂದಲೂ ದ್ವಾರಂರವರು ಅಣ್ಣಾಮಲೈಗೆ ಹೋಗಲು ಒಪ್ಪಲಿಲ್ಲ.

ಸನ್ಮಾನದ ಸುರಿಮಳೆ

ದ್ವಾರಂರವರು ತಮ್ಮ ಹದಿಮೂರನೆಯ ವಯಸ್ಸಿ ನಲ್ಲಿಯೇ ಪ್ರಪ್ರಥಮವಾಗಿ ಸಾರ್ವಜನಿಕರ ಸಮಕ್ಷಮದಲ್ಲಿ ಪಿಟೀಲನ್ನು ಪಕ್ಕವಾದ್ಯವನ್ನಾಗಿ ನುಡಿಸಿದರು. ಸುಪ್ರಸಿದ್ಧ ವಿದ್ವಾಂಸರಾಗಿದ್ದ ವೆಂಕಣ್ಣ ಪಂತುಲು ಎಂಬವರು ಆಗ ಪ್ರಸಿದ್ಧ ಸಂಗೀತಗಾರರು. ಅವರ ಸಂಗೀತಕ್ಕೆ ದ್ವಾರಂ ಪಿಟೀಲು ನುಡಿಸಿದರು. ಪಾಂಡಿತ್ಯ ಅಸಾಧಾರಣವಾದದ್ದು ಎಂಬುದು ಅಂದೇ ಸ್ಪಷ್ಟವಾಯಿತು.

ಈ ಸಂದರ್ಭದಲ್ಲಿ ಅಂದಿನ ಜಯಪುರದ ಮಹಾ ರಾಜರು ದ್ವಾರಂರವರಿಗೆ ಒಂದು ಸುವರ್ಣ ಪದಕವನ್ನು ದಯಪಾಲಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಮುಂದೆ ದ್ವಾರಂರವರು ಪಡೆದ ಪಾರಿತೋಷಕಗಳಿಗೂ ಪ್ರಶಸ್ತಿಗಳಿಗೂ ಮತ್ತು ನಿಧಿಗೂ ಈ ಸುವರ್ಣ ಪದಕವೇ ಅಂಕುರಾರ್ಪಣವಾಯಿತು.

ಅಲ್ಲಿಂದ ಮುಂದೆ ದ್ವಾರಂರವರು ಸುಪ್ರಸಿದ್ಧ ವಿದ್ವಾಂಸರುಗಳಿಗೂ ಪಕ್ಕವಾದ್ಯವನ್ನು ನುಡಿಸಿದರು. ತಾವೇ ಪ್ರತ್ಯೇಕವಾಗಿ ಕಚೇರಿಗಳನ್ನು ಮಾಡಿದರು. ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಅವರ ಪ್ರತಿಭೆಯನ್ನು ಸನ್ಮಾನಿಸಲು ಆಂಧ್ರ ದೇಶದ ಪ್ರಜೆಗಳಲ್ಲೂ, ಜಮೀನುದಾರರುಗಳಲ್ಲೂ ರಾಜ ಮಹಾರಾಜರುಗಳಲ್ಲೂ ಒಂದು ರೀತಿಯ ಪೈಪೋಟಿಯೇ ಪ್ರಾರಂಭವಾಯಿತೆನ್ನಬಹುದು.

೧೯೧೯ರಲ್ಲಿ ಆಗ ತಾನೇ ವಿಜಯನಗರದ ಮಹಾರಾಜರ ಹೆಸರಿನಲ್ಲಿ ಪ್ರಾರಂಭವಾಗಿದ್ದ ಸಂಗೀತ ಕಾಲೇಜಿಗೆ ಮಹಾರಾಜರೆ ದ್ವಾರಂರವರನ್ನು ನೇರವಾಗಿ ಪ್ರೊಫೆಸರ್ ಆಗಿ ನೇಮಿಸಿದರು. ಆಗ ದ್ವಾರಂ ಅವರಿಗೆ ಇಪ್ಪತ್ತಾರು ವರ್ಷ. ೧೯೩೬ರಲ್ಲಿ ಅದೇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಕಲಾಪ್ರಪೂರ್ಣ ನಾರಾಯಣದಾಸರು ನಿವೃತ್ತರಾದಾಗ ದ್ವಾರಂರವರೇ ಪ್ರಿನ್ಸಿಪಾಲರಾದರು.

೧೯೨೪ ರಲ್ಲಿ ವಿಜಯನಗರದ ಮಹಾರಾಜರು ದ್ವಾರಂ ರವರಿಗೆ ‘ಗಾಂಧರ್ವ ವಿದ್ಯಾಭೂಷಣ’ ಎಂಬ ಬಿರುದನ್ನು ಸೂಕ್ತ ಖಿಲ್ಲತ್ತಿನೊಡನೆ ದಯಪಾಲಿಸಿದರು.

೧೯೨೯ ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನವು ಮದ್ರಾಸಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಂಗೀತ ಸಮ್ಮೇಳನ ದಲ್ಲಿ ಭಾಗವಹಿಸಿದ ದ್ವಾರಂರವರಿಗೆ ಸುವರ್ಣ ಪದಕವು ಲಭಿಸಿತು. ೧೯೨೯ರಲ್ಲಿ ಆಂಧ್ರ ಸಂಗೀತ ಪರಿಷತ್ತು ‘ಗಾನಕಲಾ ವಿಶಾರದ’ ಎಂಬ ಪ್ರಶಸ್ತಿಯನ್ನು ನೀಡಿತು. ೧೯೩೧ ರಲ್ಲಿ ವಿಶಾಖಪಟ್ಟಣದ ಸಂಗೀತ ಪ್ರಿಯರು ಎಂಟು ನೂರು ರೂಪಾಯಿಗಳ ಬೆಲೆ ಬಾಳುತ್ತಿದ್ದ ಪಿಟೀಲು ಮತ್ತು ಐದುನೂರು ರೂಪಾಯಿಗಳ ಬೆಲೆಯ ವಜ್ರದುಂಗುರವನ್ನಿತ್ತು ಸನ್ಮಾನಿಸಿದರು. ಆ ಸಮಾರಂಭದ ಅಧ್ಯಕ್ಷಕರು ಆಗ ಆಂಧ್ರ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಡಾಕ್ಟರ್ ಎಸ್. ರಾಧಾಕೃಷ್ಣನ್ ಅವರು.

೧೯೩೩ ರಲ್ಲಿ ಕಾಕಿನಾಡದ ಸರಸ್ವತಿ ಗಾನಸಭೆಯ ಅಧ್ಯಕ್ಷರಿಂದ ಸುವರ್ಣ ಕಂಕಣವೂ ಮತ್ತು ೧೯೩೫ ರಲ್ಲಿ ಜಯಪುರದ ಮಹಾರಾಜರಿಂದ ಮತ್ತೊಂದು ಸುವರ್ಣ ಕಂಕಣವೂ ದ್ವಾರಂರವರಿಗೆ ಲಭಿಸಿದವು.

ದ್ವಾರಂರವರು ತಿರುವಾಂಕೂರಿನಲ್ಲಿ ಅನೇಕ ಕಛೇರಿ ಗಳನ್ನು ಮಾಡಿದರು. ಆ ಸಂದರ್ಭದಲ್ಲೇ ಗ್ರಾಮಫೋನ್ ಕಂಪನಿಯವರು ಇವರ ಪಿಟೀಲು ವಾದನವನ್ನು ರೆಕಾರ್ಡ್ ಮಾಡಿಕೊಂಡರು. ಅದೇ ವರ್ಷದಲ್ಲಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಪ್ರಭುಗಳ ಸಮ್ಮುಖದಲ್ಲಿ ಎರಡು ತನಿ ಕಛೇರಿಗಳನ್ನು ಮಾಡಿದರು. ಮಹಾರಾಜರು ಇವರ ವಾದನವನ್ನು ಬಹುವಾಗಿ ಶ್ಲಾಘಿಸಿ ರಾಜಯೋಗ್ಯವಾದ ಸನ್ಮಾನವನ್ನು ಮಾಡಿದರು.

೧೯೪೧ರ ಜುಲೈ ತಿಂಗಳಿನಲ್ಲಿ ಆಂಧ್ರ ಸಂಗೀತ ಪರಿಷತ್ತಿನ ಅಧ್ಯಕ್ಷರಾಗಿ ಸನ್ಮಾನಿತರಾದರು. ಅದೇ ವರ್ಷದ ಡಿಸೆಂಬರ್‌ನಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯ ಅಧ್ಯಕ್ಷರಾಗಿ ‘ಸಂಗೀತಕಲಾನಿಧಿ’ ಎಂಬ ಪ್ರಶಸ್ತಿಯನ್ನು ಪಡೆದರು. ಆಲ್ ಇಂಡಿಯಾ ರೇಡಿಯೋ ಪ್ರಾರಂಭ ವಾದಾಗಿನಿಂದ ತಮ್ಮ ಜೀವಿತದ ಕಡೆಯವರೆಗೂ ಆಕಾಶವಾಣಿಯ ಮೂಲಕ ನೂರಾರು ಘನವಾದ ಕಛೇರಿಗಳನ್ನು ಮಾಡಿ ಶ್ರೋತೃಗಳಿಗೆ ರಸದೌತಣವನ್ನು ಇತ್ತರು.

೧೯೪೯ರಲ್ಲಿ ಸುಪ್ರಸಿದ್ಧ ವಾಗ್ಗೇಯಕಾರರೂ ಮತ್ತು ಮೈಸೂರು ಮಹಾರಾಜರೂ ಆಗಿದ್ದ ಜಯಚಾಮರಾಜ ಒಡೆಯರ ಆಹ್ವಾನದ ಮೇರೆ ಕೆಲವು ತನಿ ಕಛೇರಿಗಳನ್ನು ಮಾಡಿದರು. ಮಹಾರಾಜರು ಇವರ ಶೈಲಿಯನ್ನು ಬಹುವಾಗಿ ಮೆಚ್ಚಿ ಅವರಿಗೆ ‘ಸಂಗೀತ ರತ್ನಾಕರ’ ಎಂಬ ಪ್ರಶಸ್ತಿಯನ್ನೂ, ಗಂಡಭೇರುಂಡ ಲಾಂಛನದಿಂದ ಕೂಡಿದ ರತ್ನಖಚಿತವಾದ ಕಂಠೀಹಾರ ಮತ್ತು ಖಿಲ್ಲತ್ತನ್ನೂ ದಯಪಾಲಿಸಿದರು.

೧೯೪೯ರಲ್ಲಿ ತಮಿಳುನಾಡಿನ ಎಲ್ಲಾ ವಿದ್ವಾಂಸರು ಗಳು ಮತ್ತು ಕಲಾಭಿಮಾನಿಗಳು ಮದರಾಸಿನಲ್ಲಿ ಒಟ್ಟುಗೂಡಿ ದ್ವಾರಂರವರನ್ನು ಸನ್ಮಾನಿಸಲು ಒಂದು ಸಂಘವನ್ನು ಸ್ಥಾಪಿಸಿದರು. ಭಾವನಗರದ ಮಹಾರಾಜರು ಈ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸನ್ಮಾನ ಸಮಾರಂಭದಲ್ಲಿ ದ್ವಾರಂ ಅವರಿಗೆ ರಜತ ಕರಂಡದಲ್ಲಿ ಸನ್ಮಾತಪತ್ರವನ್ನೂ ಮತ್ತು ಮೂವತ್ತೈದು ಸಾವಿರ ರೂಪಾಯಿಗಳ ನಿಧಿಯನ್ನೂ ತಮಿಳುನಾಡಿನ ಪರವಾಗಿ ಸಮರ್ಪಿಸಲಾಯಿತು.

೧೯೫೦ರಲ್ಲಿ ಆಂಧ್ರ ವಿಶ್ವವಿದ್ಯಾ ನಿಲಯವು ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನಿತ್ತು ಸನ್ಮಾನಿಸಿತು. ದ್ವಾರಂರವರಿಗೆ ದೊರೆತ ಅತ್ಯಂತ ಹಿರಿದಾದ ಗೌರವ ವೆಂದರೆ ಕರ್ನಾಟಕ ವಾದ್ಯ ಸಂಗೀತದ ವಿಭಾಗದ ರಾಷ್ಟ್ರ ಪ್ರಶಸ್ತಿ. ಇದು ೧೯೫೩ರಲ್ಲಿ ದೊರೆಯಿತು. ಅನಂತರ ೧೯೫೯ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯೂ, ೧೯೬೨ರಲ್ಲಿ ತಿರುಪತಿ ವಿಶ್ವವಿದ್ಯಾಲಯದಿಂದ ಗೌರವ ‘ಡಾಕ್ಟರ್ ಆಫ್ ಲಿಟರೇಚರ್’ ಪ್ರಶಸ್ತಿಯೂ ಲಭಿಸಿದುವು.

ಕಡೆಯದಾಗಿ ದ್ವಾರಂ ರವರ ಎಪ್ಪತ್ತನೆಯ ವರ್ಷದ ಹುಟ್ಟಿದ ಹಬ್ಬದ ದಿನ ದೆಹಲಿ ನಗರದ ಪುರವಾಸಿಗಳು ಒಂದು ಸನ್ಮಾನ ಸಮಾರಂಭವನ್ನು ಏರ್ಪಡಿಸಿ ಅವರಿಗೆ ಹತ್ತು ಸಾವಿರ ರೂಪಾಯಿಗಳ ನಿಧಿಯನ್ನು ಸಮರ್ಪಿಸಿ ಗೌರವಿಸಿದರು.

ಈ ರೀತಿಯ ಪ್ರಶಸ್ತಿಗಳ ಮತ್ತು ಬಹುಮಾನಗಳ ಸುರಿಮಳೆಯಾದರೂ ದ್ವಾರಂರವರು ಇವುಗಳಲ್ಲಿ ಯಾವರೀತಿಯ ವ್ಯಾಮೋಹವನ್ನು ಹೊಂದಿದವರಲ್ಲ. ಅವರ ಗುರಿ ಸಂಗೀತದಿಂದ ಭಗವಂತನನ್ನು ಮೆಚ್ಚಿಸುವುದು. ಸಂಗೀತ ಅವರಿಗೆ ತುಂಬಾ ಪವಿತ್ರವಾದ ಕಲೆ- ಅದು ಪರಮಾತ್ಮನ ಆರಾಧನೆ. ಆದುದರಿಂದ ಪ್ರಶಸ್ತಿಗಳೆಲ್ಲವೂ ಅವರ ಮನಸ್ಸಿನ ಮೇಲೆ ಯಾವ ವಿಶೇಷವಾದ ಪರಿಣಾಮವನ್ನೂ ಉಂಟುಮಾಡುತ್ತಿರಲಿಲ್ಲ.

‘ನಾನು ಸಂಗೀತವನ್ನು ಆತ್ಮಾನಂದಕ್ಕಾಗಿ ಅಭ್ಯಾಸ ಮಾಡುತ್ತಲಿದ್ದೇನೆ’

ಪ್ರಯೋಗಗಳಲ್ಲಿ ಆಸಕ್ತಿ

ದ್ವಾರಂರವರ ಕಾಲದಲ್ಲಿ ಕರ್ನಾಟಕ ಸಂಗೀತವು ತೀರ ಸಂಪ್ರದಾಯಬದ್ಧವಾಗಿತ್ತು. ಹಿಂದಿನಿಂದ ಬಂದ ಸಂಪ್ರದಾಯಕ್ಕೆ ಅನುಗುಣವಾಗಿಯೇ ಸಂಗೀತಗಾರರ ಕಚೇರಿಗಳು ನಡೆಯುತ್ತಿದ್ದವು. ಸಂಗೀತದಲ್ಲಿ ಸಂಪ್ರದಾಯ ಬಹು ಮುಖ್ಯ ನಿಜ. ಆದರೆ ಸಂಪ್ರದಾಯಕ್ಕೆ ವಿರುದ್ಧವಲ್ಲದ  ಹೊಸಹೊಸ ಪ್ರಯೋಗಗಳು ಅಗತ್ಯ ಎಂದು ದ್ವಾರಂ ಅವರ ಭಾವನೆ. ಆದರೆ ಇಂತಹ ಪ್ರಯೋಗಗಳಿಗೆ ತಕ್ಕಷ್ಟು ಮನ್ನಣೆ ದೊರೆಯುತ್ತಿರಲಿಲ್ಲ. ಈ ಸ್ಥಿತಿಯನ್ನು ಕಂಡು ದ್ವಾರಂರವರು ಬಹುವಾಗಿ ಮನನೊಂದರು. ಅಲ್ಲದೆ ಧೈರ್ಯಮಾಡಿ ಕರ್ನಾಟಕ ಸಂಗೀತದ ಬಗ್ಗೆ ಶ್ರೋತೃ ಗಳಲ್ಲಿದ್ದ ಅರ್ಥವಿಲ್ಲದ ಅತಿ ಮಡಿವಂತಿಕೆಯ ತಪ್ಪು ಭಾವನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು.

ಹಿಂದೂಸ್ತಾನೀ ಮತ್ತು ಪಾಶ್ಚಾತ್ಯ ಸಂಗೀತದಲ್ಲಿ ತಮಗೆ ಕಂಡು ಬಂದ ಅತ್ಯಂತ ಹಿತಕರವಾದ ಅನೇಕ ಸಂಚಾರಗಳನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿದರು. ಈ ರೀತಿಯ ಸಂಯೋಜನೆಯಿಂದ ಕರ್ನಾಟಕ ಸಂಗೀತದ ಸಂಪ್ರದಾಯಕ್ಕೆ ಯಾವ ರೀತಿಯ ಅಪಚಾರವೂ ಆಗುವು ದಿಲ್ಲವೆಂಬುದನ್ನು ತೋರಿಸಿದರು. ಈ ಹೊಸ ಹೊಸ ಪ್ರಯೋಗಗಳನ್ನು ಅಂದಿನ ಶ್ರೋತೃಗಳು ಮತ್ತು ವಿದ್ವಾಂಸರು ಸ್ವಾಗತಿಸಿದರು.

ದ್ವಾರಂರವರ ವಾದನದ ಶೈಲಿಯಲ್ಲಿ ಕರ್ನಾಟಕ ಮತ್ತು ಹಿಂದೂಸ್ತಾನೀ, ಪಾಶ್ಚಾತ್ಯ ಸಂಗೀತಗಳು ಸಮನ್ವಯ ಭಾವವನ್ನು ಪಡೆದಿದ್ದವು. ಕಾಲಕ್ಕೆ ಅನುಸಾರ ವಾಗಿ ಸಂಗೀತವೂ ಸಹ ತನ್ನ ಗುರಿಯನ್ನು ಕಳೆದುಕೊಳ್ಳದೆ ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯಬೇಕೆಂಬುದೇ ದ್ವಾರಂರವರ ಧ್ಯೇಯವಾಗಿತ್ತು.

ವಿಶಾಲ ಮನೋಭಾವ

ದ್ವಾರಂ ಅವರು ಇತರ ವಿದ್ವಾಂಸರುಗಳ ಸಂಗೀತ ವನ್ನು ಬಹಳ ಆದರದಿಂದ ಕೇಳುತ್ತಿದ್ದರು.

ದ್ವಾರಂ ಅವರದು ಬಹು ವಿಶಾಲವಾದ ಮನಸ್ಸು  ಪಲ್ಲವಿಯನ್ನು ಕೇಳಿ ದ್ವಾರಂ ಅವರು ಮೈಮರೆತರು. ಅನಂತರ ದೊರೆಸ್ವಾಮಿ ಐಯ್ಯಂಗಾರ‍್ಯರಿಗೆ ತಮ್ಮ ಒಳ್ಳೆಯ ದಾದದ್ದು ಯೋಗ್ಯವಾದದ್ದು ಎಲ್ಲಿದ್ದರೂ ಕಂಡು ಮೆಚ್ಚುವ ಮನಸ್ಸು. ಇತರ ಸಂಗೀತಗಾರರ ಸಂಗೀತದ ಸೊಗಸನ್ನು ಮನಸಾರೆ ಮೆಚ್ಚುತ್ತಿದ್ದರು.

ಒಮ್ಮೆ ಸುಪ್ರಸಿದ್ಧ ವೀಣಾ ವಿದ್ವಾಂಸರಾಗಿರುವ ಮೈಸೂರು ವಿ. ದೊರೆಸ್ವಾಮಿ ಐಯ್ಯಂಗಾರ‍್ಯರ ಕಚೇರಿಯು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಸಾರವಾಯಿತು. ಅವರು ನುಡಿಸಿದ ನಾಟಕುರಂಜಿ ರಾಗದ ರಾಗ, ತಾನ ಮತ್ತು ಪಲ್ಲವಿಯನ್ನು ಕೇಳಿ ದ್ವಾರಂ ಅವರು ಮೈಮರೆತರು. ಅನಂತರ ದೊರೆಸ್ವಾಮಿ ಅಯ್ಯಂಗಾರ‍್ಯರಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ನೇರವಾಗಿ ಪತ್ರವನ್ನು ಬರೆದರು. ಅಲ್ಲದೆ ಅದೇ ರಾಗವನ್ನು ಮತ್ತೊಮ್ಮೆ ಕೇಳಬೇಕೆಂದು ತಮಗೆ ತುಂಬಾ ಹಂಬಲವಿದೆ ಎಂದೂ ಆ ಪತ್ರದಲ್ಲಿ ಸೂಚಿಸಿದ್ದರು.

ವಿದ್ವತ್ತು

ದ್ವಾರಂ ಅವರಿಗೆ ಸಂಗೀತ ಶಾಸ್ತ್ರದಲ್ಲೂ ಹೆಚ್ಚಿನ ಪಾಂಡಿತ್ಯವಿದ್ದಿತು. ಸಂಗೀತ ಸಮ್ಮೇಳನಗಳಲ್ಲಿ ಶಾಸ್ತ್ರದ ಬಗ್ಗೆ ನಡೆಯುತ್ತಿದ್ದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೆ ಕಷ್ಟವಾದ ಸಮಸ್ಯೆಗಳ ಪರಿಹಾರದಲ್ಲಿ ನೆರವಾಗು ತ್ತಿದ್ದರು.

ಮದರಾಸು ಸಂಗೀತ ಪರಿಷತ್ತಿನ ವಾರ್ಷಿಕ ಸಂಚಿಕೆಗಳಿಗೆ ಹಲವಾರು ವಿಚಾರ ಪೂರಿತವಾದ ಲೇಖನ ಗಳನ್ನು ಬರೆದಿದ್ದಾರೆ. ಇವುಗಳಲ್ಲಿ ‘ತಂಬೂರಿ ಮತ್ತು ಅದರ ಜೀವಾಳ’ ಮತ್ತು ‘ಕೆಲವು ಹೆಚ್ಚಿನ ಗಮಕಗಳು’ ಎಂಬ ಎರಡು ಪ್ರಬಂಧಗಳು ಅತ್ಯಂತ ಗಮನಾರ್ಹವಾಗಿವೆ.

ದ್ವಾರಂ ಅವರಿಗೆ ಸಂಗೀತದಲ್ಲಿ ಪೂರ್ಣಪಾಂಡಿತ್ಯ ವಿದ್ದುದರ ಜೊತೆಗೆ ಸಾಹಿತ್ಯ ಮತ್ತು ಭಾಷಾ ಜ್ಞಾನವು ಸಂಪೂರ್ಣವಾಗಿ ಇದ್ದಿತು. ಇದನ್ನು ಅವರು ನುಡಿಸಿರುವ ತ್ಯಾಗರಾಜರ “ಶ್ರೀ ಜಾನಕೀರಮಣ” (ಶುದ್ಧ ಸೀಮಂತಿನಿ) ‘ಸ್ವರ ರಾಗ ಸುಧಾರಸ’ (ಶಂಕರಾಭರಣ), ‘ಕ್ಷೀರಸಾಗರ ಶಯನ’ (ದೇವ ಗಾಂಧಾರಿ) ಮುಂತಾದ ಕೃತಿಗಳಲ್ಲಿ ಕಾಣಬಹುದು.

ಅಪರೂಪವಾದ ರಾಗಗಳನ್ನು ಮತ್ತು ಕೃತಿಗಳನ್ನು ತಮ್ಮದೇ ಆದ ಶೈಲಿ ಮತ್ತು ಮನೋಧರ್ಮದಿಂದ ನುಡಿಸುತ್ತಿದ್ದಾಗಲಂತೂ ಆಯಾ ರಾಗಾಭಿಮಾನ ದೇವತೆ ಗಳೇ ಎದುರಿನಲ್ಲಿ ಬಂದು ನಿಂತಂತೆ ಶ್ರೋತೃಗಳಿಗೆ ಭಾಸವಾಗುತ್ತಿದ್ದಿತು. ಈ ಮೇಲಿನ ಅನುಭವವನ್ನು ಈಗಲೂ ಅವರು ನುಡಿಸಿರುವ ‘ಮೋಕ್ಷಮುಗಲದ’ (ಸಾರಮತಿ), ‘ರಾಗಸುಧಾರಸ’ (ಅಂಧೋಳಿಕಂ) ‘ಶ್ರೀರಾಮಪಾದಮಾ’ (ಅಮೃತವಾಹಿನಿ) ‘ಶರಶರಸಮರೈ’ (ಕುಂತಲವರಾಳಿ) ಮುಂತಾದ ಕೃತಿಗಳ ಧ್ವನಿಮುದ್ರಿಕೆಗಳಿಂದ ಪಡೆಯ ಬಹುದು.

ಅವರಿಗೆ ವಾದ್ಯದ ಮೇಲೆ ಇದ್ದ ಹತೋಟಿ ಮತ್ತು ನಾದದ ಮೂಲಕ ನವರಸಗಳನ್ನು ವ್ಯಕ್ತಪಡಿಸುತ್ತಿದ್ದ ಕಲಾ ಪ್ರೌಢಿಮೆಯನ್ನು ಅವರು ನುಡಿಸಿರುವ ಪದ, ಜಾವಳಿ, ಕಾವಡಿಚಂದು, ತೇವಾರ ಮತ್ತು ತಿರಪ್ಪುಗಳಲ್ಲಿ ಕಾಣ ಬಹುದು. ಹಿಂದೂಸ್ತಾನೀ ಸಂಗೀತದ ಶೈಲಿಗಳನ್ನು ಅವರು ನುಡಿಸಿರುವ ತಿಲ್ಲಾನ, ಠಾಮ್ರಿ, ಘಜಲ್ ಮತ್ತು ಠಪ್ಪಾಗಳಲ್ಲೂ ಕಾಣಬಹುದು. ಮೆಂಡಲ್, ಸೋಹನ್ ಬಾಕ್, ರೋಸಿನಿ, ಕ್ರೈಸ್ಲರ್ ಮುಂತಾದ ಪಾಶ್ಚಾತ್ಯ ವಿದ್ವಾಂಸರುಗಳ ರಚನೆಗಳನ್ನು ನುಡಿಸುತ್ತಿದ್ದಾಗ ದ್ವಾರಂರವರಿಗೆ ಪಾಶ್ಚಾತ್ಯ ಸಂಗೀತದಲ್ಲಿದ್ದ ಅಮೋಘವಾದ ಜ್ಞಾನ ಸ್ಪಷ್ಟವಾಗಿತ್ತು.

ಸಂಗೀತದಲ್ಲಿ ವಿಳಂಬ, ಮಧ್ಯ ಮತ್ತು ದುರಿತವೆಂಬ ಮೂರು ರೀತಿಯ ಕಾಲಪ್ರಮಾಣಗಳಿವೆ. ದ್ವಾರಂರವರಿಗೆ  ಈ ಮೂರು ಕಾಲಗಳೂ ಕರಗತವಾಗಿದ್ದವು. ಆದರೆ ಅವರಿಗೆ ವಿಳಂಬ ಗತಿಯಲ್ಲೇ ಹೆಚ್ಚು ಅಭಿಮಾನ. ಸ್ವರಗಳ ಮತ್ತು ತಾಳಗಳ ಕಸರತ್ತಿಗಿಂತಲೂ ರಾಗ, ಭಾವದ ಕಡೆಗೇ ಅವರ ಹೆಚ್ಚಿನ ಒಲವು. ತಾರ ಮತ್ತು ಅತಿತಾರ ಸ್ಥಾಯಿಗಳಲ್ಲಿ ಅವರ ವಾದನದಲ್ಲಿ ಕಂಡು ಬರುತ್ತಿದ್ದ ಸ್ವರ ಶುದ್ಧತೆಯು ಅಸಾಧಾರಣವಾಗಿರುತ್ತಿದ್ದಿತು.

ಆದರ್ಶ ಗುರು

ದ್ವಾರಂರವರು ಆದರ್ಶ ವಿದ್ವಾಂಸರಾಗಿದ್ದಂತೆಯೇ ಆದರ್ಶಗುರುಗಳೂ ಆಗಿದ್ದರು. ಇವರಿಗೆ ಅಸಾಧಾರಣವಾದ ಬೋಧನಾ ಶಕ್ತಿ ಇದ್ದಿತು. ಆದ್ದರಿಂದ ಇವರಿಗೆ ಶಿಷ್ಯ ಸಂಪತ್ತು ಸಮೃದ್ಧಿಯಾಗಿದೆ. ನಿರ್ವಂಚನೆಯಿಂದಲೂ ಅತ್ಯಂತ ಶ್ರದ್ಧೆಯಿಂದಲೂ ಅನೇಕರಿಗೆ ವಿದ್ಯಾದಾನ ಮಾಡಿ ಅವರುಗಳನ್ನು ಉತ್ತಮ ದರ್ಜೆಯ ವಿದ್ವಾಂಸರನ್ನಾಗಿ ಮಾಡಿರುತ್ತಾರೆ.

ಅವರ ಅಣ್ಣನವರ ಮಗ ದಿವಂತ ದ್ವಾರಂ ನರಸಿಂಗರಾಯರು, ತಮ್ಮ ಮಗ ದ್ವಾರಂ ಸತ್ಯನಾರಾಯಣ, ಮಗಳು ದ್ವಾರಂ ಮಂಗತಾಯಾರ್, ಎಂ. ಕೇಶವರಾವ್, ಗಂಗಾ ಬಾಬು ಮತ್ತು ಸೂರ್ಯಪ್ರಭಾ ಮುಂತಾದವರು ದ್ವಾರಂರವರ ಪ್ರಮುಖ ಶಿಷ್ಯವೃಂದಕ್ಕೆ ಸೇರಿದವರು.

ವಿದ್ವತ್ತು ಬೇಕು ಲೋಕಾನುಭವ ಬೇಕು

ದ್ವಾರಂರವರು ಕಾಲೇಜಿನಲ್ಲಿ ಶ್ರದ್ಧೆಯಿಂದ ವಿದ್ಯಾರ್ಥಿ ಗಳಿಗೆ ಪಾಠ ಪ್ರವಚನಗಳನ್ನು ಮಾಡುತ್ತಿದ್ದರು. ಆದರೆ ಅವರಿಗೆ ಗುರುಕುಲದ ರೀತಿಯ ವಿದ್ಯಾಭ್ಯಾಸದಲ್ಲೇ ಹೆಚ್ಚು ನಂಬಿಕೆಯಿತ್ತು. ಸಂಗೀತ ವಿದ್ಯಾಭ್ಯಾಸದ ಬಗ್ಗೆ ಅವರ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳು ಪ್ರತಿಯೊಬ್ಬ ಸಂಗೀತ ವಿದ್ಯಾರ್ಥಿಗೂ ಮಾರ್ಗದರ್ಶಕ ವಾಗಿವೆ. ದೀರ್ಘಕಾಲದ ಅನುಭವ ಪಡೆದಿದ್ದ ದ್ವಾರಂರವರು “ಸಂಗೀತದ ವಿದ್ಯಾರ್ಥಿಗಳು ಸಂಗೀತವನ್ನು ಶಾಲಾ ಕಾಲೇಜುಗಳಲ್ಲಿ ಕಲಿಯುವುದಕ್ಕಿಂತ ಹಿಂದಿನ ಕಾಲದಂತೆ ಗುರುಕುಲಗಳಲ್ಲಿ ಚೆನ್ನಾಗಿ ಕಲಿಯಬಹುದು.

ಐದರಿಂದ ಹನ್ನೆರಡು ವರ್ಷಗಳ ಕಾಲ ಗುರುವಿನಲ್ಲಿ ಕಲಿತು, ಅನಂತರ ಹನ್ನೆರಡು ವರ್ಷಗಳ ಕಾಲ ದೇಶಾಟನೆ ಮಾಡಬೇಕು. ಎಲ್ಲ ವಿದ್ವಾಂಸರುಗಳ ಸಂಗೀತವನ್ನು ಕೇಳಿ ಜ್ಞಾನಾರ್ಜನೆಯನ್ನು ಪಡೆಯಬೇಕು. ಜೊತೆಗೆ ಲೋಕಾನುಭವವನ್ನು ಪಡೆದು ಅನಂತರವೇ ಕಚೇರಿ ಮಾಡಬೇಕು.

ಆದರೆ ಗುರುಕುಲದ ಪದ್ಧತಿ ಇಂದು ಆಗದ ಮಾತು. ಈಗ ಇರುವ ಪದ್ಧತಿಯಿಂದಲೇ ಸಂಗೀತ ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೊರೆಯುವ ವಿದ್ಯೆಯನ್ನು ಆದಷ್ಟು ಶ್ರದ್ಧೆ ಮತ್ತು ಭಕ್ತಿಯಿಂದಲೇ ಅಭ್ಯಾಸಮಾಡಿ ಲಾಭ ಪಡೆಯಬೇಕು’ ಎನ್ನುತ್ತಿದ್ದರು.

ದಿವ್ಯ ಜ್ಯೋತಿ

ಶ್ರೀಮತಿ ಸರೋಜಿನಿ ನಾಯುಡು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಿರಿಯ ಪಾತ್ರ ವಹಿಸಿದವರು. ಒಳ್ಳೆಯ ಕವನಗಳನ್ನು ಬರೆದವರು. ಸ್ವತಂತ್ರ ಭಾರತದಲ್ಲಿ ಗವರ‍್ನರ್ ಸಹ ಆಗಿದ್ದರು. ಅವರಿಗೆ ದ್ವಾರಂ ಪಿಟೀಲು ವಾದವನ್ನು ಅವರ ಮನೆಯಲ್ಲಿಯೇ ಕೇಳಬೇಕೆಂಬ ಆಸೆ ಬಹುವಾಗಿದ್ದಿತು. ಅದಕ್ಕಾಗಿ ಪತ್ರ ಬರೆದು ಒಂದು ದಿನ ವನ್ನು ಗೊತ್ತುಪಡಿಸಿಕೊಂಡರು.

ಅಂದು ದ್ವಾರಂರವರು ಸಂಜೆ ಶ್ರೀಮತಿ ಸರೋಜಿನಿ ಯವರನ್ನು ಅತ್ಯಂತ ಆದರದಿಂದ ಬರಮಾಡಿಕೊಂಡು ಅಮೋಘವಾಗಿ ಮೂರು ಘಂಟೆಗಳ ಕಾಲ ಪಿಟೀಲನ್ನು ನುಡಿಸಿದರು. ಅಂದು ಕಚೇರಿ ಕೇಳಿದವರು ಸರೋಜಿನಿ ದೇವಿಯವರೊಬ್ಬರೆ. ದ್ವಾರಂರವರು ನಾದದಲ್ಲಿ ತಲ್ಲೀನ ರಾಗಿದ್ದರು. ಇದು ಭಗವಂತನಿಗೆ ಸಲ್ಲಿಸುತ್ತಿದ್ದ ಏಕಾಂತಸೇವೆ ಯಂತಿತ್ತು. ಸರೋಜಿನಿದೇವಿಯವರೂ ಸಹ ನಾಯುಡು ರವರ ಸಂಗೀತದಲ್ಲಿ ಮೈಮರೆತಿದ್ದರು.

ಕಚೇರಿಯು ಮುಗಿದರೂ ಸ್ವಲ್ಪ ಹೊತ್ತು ಸರೋಜಿನ ದೇವಿಯವರಿಗೆ ಮಾತನಾಡುವುದೇ ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ, ‘ದ್ವಾರಂರವರೇ ಇಂದು ತಮ್ಮ ಅಸಾಧಾರಣವಾದ ಸಂಗೀತದಿಂದ ನನ್ನ ಜನ್ಮವನ್ನು ಪವಿತ್ರಗೊಳಿಸಿರುತ್ತೀರಿ. ನಾದಸಮುದ್ರದಲ್ಲಿ ಸದಾ ಮುಳುಗಿ ಆತ್ಮಾನಂದವನ್ನು ಅನುಭವಿಸುತ್ತಿರುವ ನೀವೇ ಧನ್ಯರು. ನೀವು ವಾದನ ಮಾಡುತ್ತಿದ್ದಾಗ ಕೆಲವು ಸಂದರ್ಭಗಳಲ್ಲಿ ನಿಮ್ಮ ಜಾಗದಲ್ಲಿ ಒಂದು ದಿವ್ಯವಾದ ಜ್ಯೋತಿ ಮಾತ್ರ ಕಾಣುತ್ತಿತ್ತು. ಅದು ನಿಮ್ಮೊಳಗಿರುವ ಸರಸ್ವತಿಯ ದಿವ್ಯ ತೇಜಸ್ಸಿರಬಹುದೆಂದು ನಾನು ಊಹಿಸಿದೆ. ಅಲ್ಲದೆ ಆ ದಿವ್ಯ ಜ್ಯೋತಿಗೆ ಮನಸಾರ ನಮಿಸಿದೆ. ಇಂತಹ ಅಲೌಕಿಕವಾದ ಆನಂದವನ್ನು ನನಗೆ ದೊರಕಿಸಿದ್ದಕ್ಕಾಗಿ ತಮಗೆ ಅನೇಕ ವಂದನೆಗಳು’ ಎಂದರು.

ದ್ವಾರಂರವರು ಸ್ವಭಾವತಃ ಮಿತಭಾಷಿಗಳು. ಇತರರು ತಮ್ಮನ್ನು ಸ್ತೋತ್ರ ಮಾಡಿದರೆ ಬಹುವಾಗಿ ನಾಚಿಕೆ ಪಟ್ಟುಕೊಳ್ಳುತ್ತಿದ್ದರು. ಸರೋಜಿನಿಯವರು ಆಡಿದ ಒಳ್ಳೆಯ ಮಾತುಗಳಿಗೆ ಅವರನ್ನು ವಂದಿಸುತ್ತಾ ‘ತಾಯೀ, ನೀವು ಹುಟ್ಟಿನಿಂದಲೇ ಕವಿತಾ ಸಂಪತ್ತನ್ನು ಗಳಿಸಿಕೊಂಡಿರುವವರು. ಸದಾ ಭಾವನಾ ಪ್ರಪಂಚದಲ್ಲಿದ್ದು ರಸಾನುಭವ ಮಾಡತಕ್ಕವರು. ಅಲ್ಲದೆ ಶುದ್ಧ ಹೃದಯಿಗಳು ಮತ್ತು ಕಲಾಭಿಮಾನಿಗಳೂ ಆಗಿದ್ದೀರಿ. ಆದ್ದರಿಂದ ನನ್ನ ಅಲ್ಪವಾದ ಸಂಗೀತವೂ ಸಹ ನಿಮಗೆ ಮಹತ್ತರವಾಗಿ ಕಂಡಿರಬಹುದು. ನಾನಾದರೋ ನನ್ನ ಪಿಟೀಲಿನ ಮತ್ತು ಕಮಾನಿನ ಸೇವಕ ನಾಗಿದ್ದೇನೆ. ಕಲಾ ಸರಸ್ವತಿಯ ಸೇವೆಗಾಗಿ ಯಾವಜ್ಜೀವವೂ ಶ್ರಮಿಸಬೇಕೆಂಬ ಹಂಬಲವೇನೋ ಬಹುವಾಗಿದೆ ಅಷ್ಟೇ. ಆಕೆಯ ಕೃಪೆಗೆ ಪಾತ್ರನಾಗಬೇಕಾದರೆ ಇನ್ನೆಷ್ಟು ಜನ್ಮಗಳನ್ನು ಎತ್ತಬೇಕೋ ಕಾಣೆ’ ಎಂದರು.

ಗಿಡದಲ್ಲಿ ಹೂಗಳು ಅರಳಿದಂತೆ

ಸಂಗೀತ ಕಚೇರಿಗಳಲ್ಲಿ ದ್ವಾರಂರವರು ಪಿಟೀಲನ್ನು ನುಡಿಸಲು ವಾದ್ಯವನ್ನು ಕೈಗೆ ತೆಗೆದುಕೊಂಡ ಕೂಡಲೇ ಹೊರ ಪ್ರಪಂಚವನ್ನು ಮರೆಯುತ್ತಿದ್ದರು. ಅಂತರ್ಮುಖಿ ಯಾಗುತ್ತಿದ್ದರು. ಆಗ ಯೋಗಿಯೊಬ್ಬನು ತಪಸ್ಸಿಗೆ ಕುಳಿತಂತೆ ಭಾಸವಾಗುತ್ತಿತ್ತು. ಹೊರ ಕಣ್ಣುಗಳನ್ನು ಮುಚ್ಚಿ ನಾದ ಸಮುದ್ರದಲ್ಲಿ ಮುಳುಗಿ, ಪಿಟೀಲಿನ ಮೇಲೆ ಚಿತ್ರವಿಚಿತ್ರವಾಗಿ ಕಮಾನನ್ನು ಎಳೆಯುತ್ತಿದ್ದರು. ಇಂಥ ಸಂದರ್ಭಗಳಲ್ಲಿ ಶ್ರೋತೃಗಳೂ ಸಹ ಅವರ ಸಂಗೀತದ ಮಾಧುರ್ಯದಲ್ಲಿ ಮೈಮರೆಯುತ್ತಿದ್ದರು.

ದ್ವಾರಂರವರ ಸಂಗೀತವು ಒಮ್ಮೆ ನಮ್ಮ ದೇಶದ ಶ್ರೇಷ್ಠ ಕವಿ ರವೀಂದ್ರನಾಥ ಠಾಕೂರ್‌ರವರ ಎದುರಿಗೆ ನಡೆಯಿತು. ಆಗ ಠಾಕೂರರು ಪಿಟೀಲಿನಿಂದ ಹೊರಡುತ್ತಿದ್ದ ನಾದ ಮಾಧುರ್ಯವನ್ನು ಅನುಭವಿಸಿ ಮೈಮರೆತರು. ಸಂಗೀತ ಮುಗಿದನಂತರ ಅವರು ದ್ವಾರಂ ಅವರಿಗೆ ಹೇಳಿದರಂತೆ, “ಗಿಡಗಳಲ್ಲಿ ಹೂಗಳು ಅರಳುವುದು ಎಷ್ಟು ಸಹಜವೋ, ಸ್ವಾಭಾವಿಕವೋ, ಅಷ್ಟೇ ಸಹಜವಾಗಿ, ಸ್ವಾಭಾವಿಕವಾಗಿ ನಿಮ್ಮ ಪಿಟೀಲಿನಿಂದ ಬಗೆಬಗೆಯ ಸ್ವರಗಳು ಹೊರ ಹೊಮ್ಮುತ್ತವೆ” ಎಂದು.

‘ಅರವತ್ತು ವರ್ಷಗಳ ಅನುಭವದಲ್ಲಿ ಪೀಟೀಲಿನ ಆಳವನ್ನೇ ತಿಳಿಯಲು ಸಾಧ್ಯವಾಗಲಿಲ್ಲ’

ಮೃದುಮಾತು

ಒಮ್ಮೆ ಮದರಾಸಿನಲ್ಲಿ ಪಾಲಘಾಟ್ ರಾಮ ಭಾಗವತರ ಸಂಗೀತ ಕಚೇರಿ ಏರ್ಪಾಡಾಗಿತ್ತು. ನಾಯುಡು ರವರು ಪಿಟೀಲನ್ನು ನುಡಿಸುತ್ತಿದ್ದರು. ಭಾಗವತರು ಹಾಡುವುದನ್ನೂ ನಿಲ್ಲಿಸಿ ತಾಳವಾದ್ಯಗಳಿಗೆ ಅವಕಾಶ ಕೊಟ್ಟು ಪಕ್ಕವಾದ್ಯದವರು ಪರಸ್ಪರ ಸ್ಪರ್ಧೆಯಿಂದ ವಿದ್ವತ್ ಪ್ರದರ್ಶನ ಮಾಡುತ್ತಿದ್ದರು.

ದ್ವಾರಂರವರು ಮಾತ್ರ ತಾಳ ಹಾಕುವುದ ರಲ್ಲಿ ಭಾಗವಹಿಸದೆ ತಮ್ಮ ಪಿಟೀಲನ್ನು ಕೆಳಗಿರಿಸಿ ತಾಂಬೂಲ ಚರ್ವಣಕ್ಕೆ ಪ್ರಾರಂಭಿಸಿದರು. ವೇದಿಕೆಯ ಸಮೀಪದಲ್ಲಿಯೇ ಕುಳಿತ್ತಿದ್ದ ದ್ವಾರಂರವರ ಸ್ನೇಹಿತರೊಬ್ಬರು ಅವರನ್ನು ತಮಗೆ ಆಯಾಸವಾಗಿದೆಯೇ ಸರ್ ?” ಎಂದು ಕೇಳಿದರು. ದ್ವಾರಂರವರು “ನನಗೆ ಆಯಾಸವೇನೂ ಇಲ್ಲ, ಆದರೆ ತಾಳ ವಾದ್ಯದ ಮಹಾವಿದ್ವಾಂಸರುಗಳನ್ನು ನಾನು ಅನು ಸರಿಸಲಾರೆ. ನನಗೆ ಎಟುಕದಷ್ಟು ದೊಡ್ಡ ವಿದ್ವಾಂಸರುಗಳು ಅವರು” ಎಂದರು. ಮನೋಧರ್ಮ ದೃಷ್ಟಿಯಿಂದ ಜೊತೆಗಿದ್ದವರ ತಾಳದಲ್ಲಿ ಪರಸ್ಪರ ಹೊಂದಿಕೆಯಾಗು ತ್ತಿರಲಿಲ್ಲ. ದ್ವಾರಂ ಅವರು ಇದನ್ನು ಮೃದುವಾಗಿ ಸೂಚಿಸಿದರು.

ವಿನಯ

ಮತ್ತೊಂದು ಸಂದರ್ಭದಲ್ಲಿ ಅವರ ಮಿತ್ರರೊಬ್ಬರು ದ್ವಾರಂರವರನ್ನು “ಸ್ವಾಮಿ, ಸುಮಾರು ಅರವತ್ತು ವರ್ಷ ಗಳಿಗೂ ಮೀರಿ ತಾವು ಸತತವಾದ ಸಾಧನೆ ಮಾಡಿದ್ದೀರಿ. ತಮ್ಮ ವಾದ್ಯದಲ್ಲಿ ಸಿದ್ಧಿ ಪಡೆದಿದ್ದೀರಿ ಎಂದು ತಮಗೆ ಎನ್ನಿಸುತ್ತದೆಯೇ ?” ಎಂದು ಕೇಳಿದರು.

ದ್ವಾರಂರವರು “ವಾದ್ಯದಲ್ಲಿ ಸಿದ್ಧಿ ಪಡೆಯುವ ಮಾತು ಹಾಗಿರಲಿ, ಸದ್ಯಕ್ಕೆ ನಾನು ಆ ವಾದ್ಯವನ್ನು ಸರಿಯಾಗಿ ಅರ್ಥಮಾಡಿ ಕೊಂಡಿದ್ದೇನೆಂದೂ ಹೇಳಲಾರೆ. ಆ ವಾದ್ಯದ ಯೋಗ್ಯತೆ ಮತ್ತು ಹಿರಿಮೆಯನ್ನು ಅರ್ಥಮಾಡಿಕೊಂಡು ಅದರಲ್ಲಿ ಸಿದ್ಧಿ ಪಡೆಯಲು ಬಹಳ ಕಾಲ ಬೇಕಾಗುತ್ತದೆ. ನಾನು ಆ ಮಾರ್ಗದಲ್ಲಿ ಕೇವಲ ಕೆಲವೇ ಹೆಜ್ಜೆಗಳನ್ನು ಮಾತ್ರ ಇಟ್ಟಿದ್ದೇನೆ, ಅಷ್ಟೆ” ಎಂದರು.

ಒಂದು ಪ್ರಸಂಗ

ದ್ವಾರಂರವರು ಒಂದು ದೊಡ್ಡ ಸಮಾರಂಭದಲ್ಲಿ ಪಿಟೀಲನ್ನು ನುಡಿಸುತ್ತಿದ್ದರು. ಸಂಗೀತದಲ್ಲಿ ಅಭಿರುಚಿಯೇ ಸುತರಾಂ ಇಲ್ಲದ ದುರಹಂಕಾರಿಯಾದ ಅಧಿಕಾರಿಯೊಬ್ಬನು ಕಚೇರಿಗೆ ಬಂದಿದ್ದನು. ಕಚೇರಿಯ ಮಧ್ಯೆ ಒಂದು ರೀತಿಯ ಕೆಲವು ಲಘು ಗೀತೆಗಳನ್ನು ನುಡಿಸು ವಂತೆ ದ್ವಾರಂರವರನ್ನು ಅಧಿಕಾರವಾಣಿಯಿಂದ ಕೇಳಿದನು.

ನಾಯುಡುರವರು ಬಹಳ ದಾಕ್ಷಿಣ್ಯಪರರು. ಇತರರ ಮನಸ್ಸನ್ನು ಯಾವತ್ತೂ ನೋಯಿಸಿದವರಲ್ಲ. ಗಂಭೀರವಾದ ಸಂಗೀತ ಕಚೇರಿಯಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಕೆಲವು ಲಘು ಗೀತೆಗಳನ್ನು ನುಡಿಸಿ ಅಧಿಕಾರಿಯನ್ನು ಸಂತೋಷ ಪಡಿಸಿದರು.

ಆಮೇಲೆ ದ್ವಾರಂ ಅವರು ಇದಕ್ಕೆ ಇದ್ದಂತೆಯೇ ಕತ್ತೆ ಕಿರುಚಿದಂತೆಯೂ, ನಾಯಿ ಬೊಗಳಿದಂತೆಯೂ ಅನಾಗರಿಕ ಧ್ವನಿಗಳನ್ನು ತಮ್ಮ ಪಿಟೀಲಿನಲ್ಲಿ ಹೊರಡಿಸಿ ದರು. ಈ ನಡವಳಿಕೆ ಸಭಿಕರಿಗೆ ಮೊದಲು ಅರ್ಥವಾಗಲಿಲ್ಲ. ಪಿಟೀಲಿನಲ್ಲಿ ಎಂತಹ ಶಬ್ದಗಳನ್ನಾದರೂ ಹೊರಡಿಸ ಬಹುದು, ಅವರಿಂದ ಒಳ್ಳೆಯ ಸಂಗೀತವನ್ನು ಪಡೆಯು ವುದು ಸಂಗೀತದಲ್ಲಿ ಅಭಿಮಾನವಿರುವವರ ಕರ್ತವ್ಯ ಎಂದು ಸೂಚಿಸಲು ದ್ವಾರಂ ಅವರು ಹಾಗೆ ಮಾಡಿದ್ದರು.

ಸ್ವಲ್ಪ ಹೊತ್ತಿನನಂತರ ಇದು ಸಭಿಕರಿಗೆ ಗೊತ್ತಾಯಿತು. ಆದರೆ ತಾವು ಪಿಟೀಲಿನಿಂದ ಈ ರೀತಿ ಶಬ್ದಗಳನ್ನು ಹೊರಡಿಸಿದ್ದು ಸರಿಯಲ್ಲ ಎಂದು ದ್ವಾರಂ ಅವರಿಗೇ ಎನ್ನಿಸಿತು, ಬೇಸರವಾಯಿತು. ತಮಗೆ ಅತ್ಯಂತ ಪ್ರಿಯ ವಾಗಿದ್ದ ‘ರಾಮಧುನ್’ (ರಘುಪತಿ ರಾಘವ ರಾಜಾರಾಂ) ನುಡಿಸಿದರು.

ಆತ್ಮಾನಂದಕ್ಕಾಗಿ ಸಂಗೀತ

೧೯೩೯ನೇ ಇಸವಿ. ದ್ವಾರಂರವರು ನಾಲ್ವಡಿ ಕೃಷ್ಣರಾಜ ಪ್ರಭುಗಳ ಸನ್ನಿಧಿಯಲ್ಲಿ ಮೈಸೂರು ಅರಮನೆಯಲ್ಲಿ ತನಿ ಕಛೇರಿಯನ್ನು ಮಾಡಿದ ಸಂದರ್ಭ. ಆಗ ಮಹಾರಾಜರ ಆರೋಗ್ಯ ಅಷ್ಟು ಸಮರ್ಪಕವಾಗಿರಲಿಲ್ಲ. ಅರಮನೆಯ ಸಮಸ್ತ ವಿದ್ವಾಂಸರನ್ನೂ ಮತ್ತು ಉನ್ನತ ಅಧಿಕಾರಿಗಳನ್ನೂ ಆಹ್ವಾನಿಸಿ, ಹೊರಗಿನ ಸುಪ್ರಸಿದ್ಧ ವಿದ್ವಾಂಸರುಗಳ ಗಾಯನ ಮತ್ತು ವಾದನ ಕಾರ್ಯಕ್ರಮ ಸಂಜೆ ೯ ರಿಂದ ೭ ಘಂಟೆಯ ವರೆಗೆ ಏರ್ಪಡಿಸುತ್ತಿದ್ದರು.

ಸಂಗೀತವು ಬಹಳ ಹಿತಕರವಾಗಿದ್ದ ಪಕ್ಷದಲ್ಲಿ ಪ್ರಭುಗಳು ಪರಮಾವಧಿ ಒಂದು ಘಂಟೆಕಾಲ ಮಾತ್ರ ಕೇಳುತ್ತಿದ್ದರು. ಇಂಥ ಒಂದು ಸಂದರ್ಭದಲ್ಲೇ ದ್ವಾರಂರವರ ಕಛೇರಿಯು ನಡೆದದ್ದು. ದ್ವಾರಂ ಅವರು ಅಂದಿನ ಕಛೇರಿಯಲ್ಲಿ ಶಂಕರಾಭರಣ, ಕಾನಡ, ಅರಭಿ, ಬೇಹಾಗ್ ಮುಂತಾದ ರಾಗಗಳನ್ನು ತಮ್ಮದೇ ಆದ ಶೈಲಿಯಲ್ಲಿ ನುಡಿಸಿ ಮಹಾಪ್ರಭುಗಳ ಮೆಚ್ಚುಗೆಗೆ ಪಾತ್ರರಾದರು.

ಮಾರನೆಯ ದಿನ ಬೆಳಿಗ್ಗೆ ಖಾಸ್ ಬಂಗಲೆಯಲ್ಲಿ ದ್ವಾರಂರವರಿಗೆ ಪ್ರಭುಗಳ ಭೇಟಿ ಲಭ್ಯವಾಯಿತು. ಪ್ರಭುಗಳು ದ್ವಾರಂ ಅವರನ್ನು ಕುರಿತು “ನಿಮ್ಮ ವಾದನದ ಶೈಲಿ, ರಾಗಗಳ ಹೊಸ ರೀತಿಯ ಕಲ್ಪನೆ ಮತ್ತು ನಾದ ಮಾಧುರ್ಯವು ನಮ್ಮ ಆರೋಗ್ಯದ ಮೇಲೆ ಬಹಳ ಒಳ್ಳೆಯ ಪರಿಣಾಮವನ್ನು ಉಂಟು ಮಾಡಿದೆ. ಈ ವಿಶೇಷ ರೀತಿಯ ಮನೋಧರ್ಮ ನಿಮಗೆ ಹೇಗೆ ಲಭ್ಯವಾಯಿತು ?” ಎಂದು ಹೇಳಿದರು.

ಮಹಾರಾಜರಿಗೆ ಸ್ವತಃ ಕರ್ನಾಟಕ, ಹಿಂದೂಸ್ಥಾನಿ ಮತ್ತು ಪಾಶ್ಚಾತ್ಯ ಸಂಗೀತದಲ್ಲಿ ಅತಿಶಯ ವಾದ ಪಾಂಡಿತ್ಯವಿದ್ದ ವಿಚಾರ ದ್ವಾರಂ ಅವರಿಗೆ ತಿಳಿದಿತ್ತು. ಆದ್ದರಿಂದ ಪ್ರಭುಗಳ ಪ್ರಶ್ನೆಗೆ ಉತ್ತರವನ್ನು ಹೇಳಲು ಸ್ವಲ್ಪ ಯೋಚಿಸಿ ಅತ್ಯಂತ ವಿನಯದಿಂದ “ಪ್ರಭೂ, ನನ್ನ ಮಟ್ಟಿಗೆ ಹೇಳುವುದಾದರೆ ನಾನು ಸಂಗೀತವನ್ನು ಆತ್ಮಾನಂದಕ್ಕಾಗಿ ಅಭ್ಯಾಸ ಮಾಡುತ್ತಲಿದ್ದೇನೆ. ನಾನು ನುಡಿಸುತ್ತಲಿರುವಾಗ ಶ್ರೋತೃಗಳ ಟೀಕೆ ಟಿಪ್ಪಣಿಗಳ ಕಡೆ ನನ್ನ ಗಮನ ಸುತರಾಂ ಇರುವುದಿಲ್ಲ. ಮೊದಲು ಆತ್ಮಾನಂದ. ನನಗೆ ನನ್ನ ಸಂಗೀತದಿಂದ ಆನಂದವಾದರೆ ಅದು ಶ್ರೋತೃಗಳಿಗೂ ಆನಂದವನ್ನು ಉಂಟು ಮಾಡಿಯೇ ಮಾಡುತ್ತದೆ ಎಂಬುದು ನನ್ನ ಖಚಿತವಾದ ಅಭಿಪ್ರಾಯ.

ತ್ಯಾಗರಾಜರು ಖರಹರ ಪ್ರಿಯರಾಗದ ‘ರಾಮಾನೀ ಯೆಡ’ ಎಂಬ ಕೃತಿಯಲ್ಲಿ ‘ತನ ಸೌಖ್ಯಮುತಾನೆರುಗಕೆ ಯೆರುಲಕು ತಗು ಬೋಧನ ಸುಖಮಾ’? (ಸೌಖ್ಯವೆಂದರೆ ಏನೆಂಬುದು ತನಗೇ ಅರಿವಾಗದಿರುವಾಗ ಅವನು ಇತರರಿಗೆ ಹೇಗೆ ತಾನೆ ಸೌಖ್ಯದ ಅರಿವನ್ನು ಮಾಡಿಕೊಡಲು ಸಾಧ್ಯ?) ಎಂದಿದ್ದಾರೆ. ಈ ಅಭಿಪ್ರಾಯವು ನನಗೆ ಅತ್ಯಂತ ಸ್ಫೂರ್ತಿಯನ್ನು ಕೊಟ್ಟಿರುತ್ತದೆ.

ಕಚೇರಿಯ ಪ್ರಾರಂಭದಲ್ಲಿ ಸಾಮಾನ್ಯವಾಗಿ ನನ್ನ ಮನಸ್ಸಿನಲ್ಲಿ ರಾಗಗಳ ಯಾವ ಬಗೆಯ  ಕಲ್ಪನೆಗಳೂ ಇರುವುದಿಲ್ಲ. ಅದೇನೆನ್ನುವಷ್ಟರಲ್ಲಿ ಇದ್ದಕಿದ್ದ ಹಾಗೆಯೇ ಅನೇಕ ರೀತಿಯ ಕಲ್ಪನೆಗಳು ವಾದ್ಯದಲ್ಲಿ ಧ್ವನಿತವಾಗುತ್ತವೆ. ಅಲ್ಲದೆ ಮಹಾಸ್ವಾಮಿಯವರು ಸಂಗೀತದಲ್ಲಿ ಮಹಾ ಪ್ರಾಜ್ಞರು. ಮೇಲಾಗಿ ಅತ್ಯಂತ ಸುಖಿಗಳು, ಘನವಾದ ಸನ್ನಿಧಾನದಲ್ಲಿ ಕಚೇರಿ ಮಾಡುವ ಸದವಕಾಶ ಸಿಕ್ಕಿದುದು ನನ್ನ ಪೂರ್ವಜನ್ಮದ ಪುಣ್ಯ” ಎಂದರು ದ್ವಾರಂರವರು; ಮಹಾರಾಜರು ದ್ವಾರಂರವರ ವಿನಯಪೂರ್ವಕವಾದ ಅಭಿಪ್ರಾಯಗಳಿಗೆ ಬಹಳ ಸಂತೋಷ ಪಟ್ಟು ಅಂದಿನ ಸಾಯಂಕಾಲವೂ ಅವರ ಕಚೇರಿಯನ್ನು ಏರ್ಪಡಿಸಿ ಭವ್ಯವಾದ ಸನ್ಮಾನವನ್ನು ದಯಪಾಲಿಸಿದರು.

ವಿದ್ಯಾರ್ಥಿಗಳ ಪುಸ್ತಕದಿಂದಲೂ

ಬೆಂಗಳೂರಿಗೆ ದ್ವಾರಂರವರು ಕಚೇರಿಗೆ ಬಂದಿದ್ದ ಸಂದರ್ಭದಲ್ಲಿ ಮಿತ್ರರೊಬ್ಬರಿಂದ ಒಂದು ಪುಸ್ತಕವನ್ನು ಓದಲು ತೆಗೆದುಕೊಂಡಿದ್ದರು. ಅದು ಪಿಟೀಲು ವಾದನದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಸೂಚನೆ ನೀಡುವಂತದ್ದಾಗಿತು. ಕೆಲವು ವರ್ಷಗಳ ಅನಂತರ ಆ ಮಿತ್ರರಿಂದ ಪುಸ್ತಕದ ಪ್ರಸ್ತಾಪಬಂತು. ಆಗ ದ್ವಾರಂರವರು ಮಿತ್ರರಿಗೆ “ನಾನು ಆ ಪುಸ್ತಕದಿಂದ ಇನ್ನೂ ಪ್ರಯೋಜನ ಪಡೆಯಬೇಕಾಗಿದೆ. ಜೀವಸಹಿತವಿದ್ದಲ್ಲಿ ಇನ್ನೊಮ್ಮೆ ಬರುವಾಗ ತರುತ್ತೇನೆ. ಇಲ್ಲದಿದ್ದಲ್ಲಿ ಈ ಹುಚ್ಚು ಹಿಡಿದ ಮುದುಕನಿಗೆ ಕೃಷ್ಣಾರ್ಪಣೆ ಮಾಡಿದೆನೆಂದು ಸಮಾಧಾನಪಟ್ಟುಕೊಳ್ಳಿ” ಎಂದರು.

ಸ್ನೇಹಿತರು, “ನಾಯುಡುರವರೇ, ಆ ಪುಸ್ತಕವನ್ನು ಬರೆದಿರುವುದು ಕೇವಲ ವಿದ್ಯಾರ್ಥಿಗಳಿಗೆ ಪ್ರಯೋಜನ ವಾಗಲಿ ಎಂದು. ಪಿಟೀಲು ವಾದನದಲ್ಲಿ ಪರಿಪೂರ್ಣತೆ ಯನ್ನು ಪಡೆದ ತಮಗೆ, ಆ ಪುಸ್ತಕದಿಂದ ಏನು ಪ್ರಯೋಜನವಾದೀತು ?” ಎಂದರು.

ಅದಕ್ಕೆ ಉತ್ತರವಾಗಿ ನಾಯುಡುರವರು, “ಪರಿ ಪೂರ್ಣತೆಯನ್ನು ಯಾರು ಪಡೆಯಲು ಸಾಧ್ಯ ? ಟಿನ್ನ ಸುಮಾರು ಐವತ್ತು – ಅರವತ್ತು ವರ್ಷಗಳ ಅನುಭವದಲ್ಲಿ ನನಗೆ ಆ ವಾದ್ಯದ ಸಾಧ್ಯಸಾಧ್ಯತೆ ಮತ್ತು ಆಳವನ್ನೇ ತಿಳಿಯಲು ಸಾಧ್ಯಾವಾಗಿಲ್ಲ. ಈ ಪುಸ್ತಕದಿಂದ ಆ ಬಗೆಗೆ ಏನು ಸಹಾಯವಾಗ ಬಹುದೋ ಎಂದು ಓದುತ್ತಿದ್ದೇನೆ” ಎಂದರು.

ದ್ವಾರಂ ರವರು ಕಲೆಯ ಹಿರಿಮೆಯ ಬಗ್ಗೆ ಮಾತ ನಾಡುತ್ತ ಹೀಗೆಂದಿದ್ದಾರೆ, “ಒಬ್ಬ ಕಲಾವಿದ ಬಹು ದೊಡ್ಡವನೇ ಆಗಿರಬಹುದು. ಅವನು ಎಷ್ಟೇ ದೊಡ್ಡವ ನಾದರೂ ಅವನ ಕಲೆ ಅವನಿಗಿಂತ ದೊಡ್ಡದು. ನಾವು ನಮ್ಮ ಕಲೆಯಲ್ಲಿ ಪಾರಂಗತರಾಗಿದ್ದೇವೆ ಎಂದು ಭಾವಿಸುವುದು ತಪ್ಪು. ನಮ್ಮ ಜೀವಮಾನದ ಕಡೆಯ ದಿನದವರೆಗೂ ನಾವು ಹೊಸ ಹೊಸ ವಿಷಯಗಳನ್ನು ಕಲಿಯಬೇಕಾದುದು ಇದ್ದೇ ಇರುತ್ತದೆ. ಭಗವಂತನೊಬ್ಬನೇ ಪರಿಪೂರ್ಣ.”

ಕೇಳಬೇಕಾದ ಸಂಗೀತ

ಶಾಸ್ತ್ರೀಯ ಸಂಗೀತದಲ್ಲಿ ಪರಿಣತರಾದ ವಿದ್ವಾಂಸರು ಗಳಿಗೆ ಸಾಮಾನ್ಯವಾಗಿ ಚಲನಚಿತ್ರ ಸಂಗೀತದಲ್ಲಿ ಆಸಕ್ತಿ ಬಹಳ ಕಡಿಮೆಯೆನ್ನಬಹುದು. ಸಿನಿಮಾ ಸಂಗೀತವೆಂದರೆ ಅದು ಒಂದು ಕೀಳು ದರ್ಜೆಗೆ ಸೇರಿದ ಸಂಗೀತ ಎಂದು ಹಲವರು ಸಂಗೀತ ವಿದ್ವಾಂಸರ ಭಾವನೆ. ಅವರು ಅದನ್ನು ಮೆಚ್ಚುವುದಿಲ್ಲ. ಆದರೆ ದ್ವಾರಂರವರು ಶಾಸ್ತ್ರೀಯ ಸಂಗೀತದ ಮೂರ್ತಿ ಸ್ವರೂಪವಾಗಿದ್ದರೂ ಸಹ, ಚಲನಚಿತ್ರದ ಸಂಗೀತ ವನ್ನು ವಿಶೇಷವಾದ ಆಸಕ್ತಿಯಿಂದ ಕೇಳುತ್ತಿದ್ದರು.

ಸ್ನೇಹಿತರೊಬ್ಬರು ಆಶ್ಚರ್ಯದಿಂದ ಅವರನ್ನು “ಶಾಸ್ತ್ರೀಯ ಸಂಗೀತದಲ್ಲಿ ನೀವು ಎಷ್ಟೊಂದು ಪಾರಂಗತರು! ಈ ಸಂಗೀತದಲ್ಲಿ ನಿಮಗೆ ಏಕೆ ಇಷ್ಟು ಶ್ರದ್ಧೆ ?” ಎಂದು ಕೇಳಿದರು.

ದ್ವಾರಂ ಅವರು ಹೀಗೆ ಉತ್ತರ ಕೊಟ್ಟರು “ಅನೇಕ ಚಿತ್ರಗಳಲ್ಲಿನ ಹಿಂಬದಿಯ ಸಂಗೀತವು ನನಗೆ ಬಹಳ ಮೆಚ್ಚಿಕೆಯಾಗಿದೆ. ನನ್ನ ದೃಷ್ಟಿಯಲ್ಲಿ ಯಾವ ಯಾವ ಸಂಗೀತವು ಮನುಷ್ಯನನ್ನು ‘ಆಹಾ’ ಎನ್ನಿಸುತ್ತದೆಯೋ ಅದೆಲ್ಲವೂ  ಕೇಳಬೇಕಾದ ಸಂಗೀತವೇ. ಅನೇಕ ಚಿತ್ರಗಳ ಸಂಗೀತದಿಂದ ನಾನೂ ಮೈ ಮರೆತಿದ್ದೇನೆ. ಸಂಗೀತದ ನಿರ್ದೇಶಕರ ಸ್ಥಾನಮಾನದಲ್ಲಿ ನನಗೆ ವಿಶೇಷವಾದ ಗೌರವವಿದೆ” ಎಂದರು.

ದ್ವಾರಂರವರು ತಮ್ಮ ಶಿಷ್ಯರಲ್ಲಿ ಅನೇಕರನ್ನು ಚಲನಚಿತ್ರದ ಪ್ರಪಂಚದಲ್ಲಿ ಹಿಂಬದಿಯ ಗಾಯಕರಾಗಲು ಪ್ರೋತ್ಸಾಹವಿತ್ತಿರುವುದನ್ನು ಈ ಸಂದರ್ಭ ದಲ್ಲಿ ಸ್ಮರಿಸಬಹುದು.

ಸಂಗೀತವೇ ತಪಸ್ಸು

ದ್ವಾರಂರವರು ಅರವತ್ತು ವರ್ಷಗಳಿಗೂ ಮೀರಿ ಸಂಗೀತ, ‘ಸಂಗೀತ ಸರಸ್ವತಿಯ’ ಸೇವೆಯನ್ನು ಮಾಡಿದರು. ೧೯೬೪ ರ ನವೆಂಬರ್ ೨೦ರಂದು ಹೃದಯಘಾತದಿಂದ ಹೈದರಾಬಾದ್‌ನಲ್ಲಿ ಸ್ವರ್ಗಸ್ಥರಾದರು. ಆಗ ಅವರಿಗೆ ಎಪ್ಪತ್ತೊಂದು ವರ್ಷ ವಯಸ್ಸು. ಅವರು ನಿಧನರಾದ ಹಿಂದಿನ ದಿನವೂ ಕೂಡ ಅಮೋಘವಾಗಿ ಕಚೇರಿಯನ್ನು ಮಾಡಿದ್ದರು.

ಯೆಹೂದಿ ಮನುಹಿನ್ ಎನ್ನುವವರು ಅಮೆರಿಕ ದೇಶದ ಸಂಗೀತಗಾರರು. ಪಿಟೀಲು ವಾದನದಲ್ಲಿ ಇಡೀ ಪ್ರಪಂಚದಲ್ಲಿಯೇ ಕೀರ್ತಿವಂತರಾದವರು. ತಮ್ಮ ಏಳನೆಯ ವಯಸ್ಸಿಗೇ ಕಚೇರಿ ನಡೆಸಿ ವಿದ್ವಾಂಸರಿಂದ ‘ಭೇಷ್ !’ ಎನ್ನಿಸಿಕೊಂಡವರು. ದ್ವಾರಂ ಅವರು ತೀರಿಕೊಂಡ ಸುದ್ದಿ ಕೇಳಿದಾಗ, ಅವರು, “ದ್ವಾರಂರವರು ಸರಿಸಮಾನರಿಲ್ಲದ ಪಿಟೀಲು ವಾದಕರು ಆಗಿದ್ದರು. ಅವರ ಮರಣದಿಂದ ಪಿಟೀಲಿನ ಪ್ರಪಂಚ ಬಡವಾಯಿತು” ಎಂದರು.

ದ್ವಾರಂ ವೆಂಕಟಸ್ವಾಮಿ ನಾಯುಡು ಅವರು ಕರ್ನಾಟಕ ಸಂಗೀತದ ಪರಂಪರೆಯಲ್ಲಿ ದೊಡ್ಡ ಸಂಗೀತ ಗಾರರು. ಹಿಂದಿನಿಂದ ಬಂದ ಸಂಪ್ರದಾಯವನ್ನು ಬಿಡಲಿಲ್ಲ. ಆದರೆ ಸಂಪ್ರದಾಯಕ್ಕೆ ಅಂಟಿಕೊಂಡವರಲ್ಲ. ಉತ್ತರ ಭಾರತದ ಸಂಗೀತ ಪದ್ಧತಿಯನ್ನೂ, ಪಾಶ್ಚಾತ್ಯ ಸಂಗೀತ ಪದ್ಧತಿಯನ್ನೂ ಅಭ್ಯಾಸ ಮಾಡಿದವರು, ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಸಂಪ್ರದಾಯವನ್ನೆ ಹಿಗ್ಗಿಸಿದವರು. ಸಂಗೀತವನ್ನೇ ತಪಸ್ಸನ್ನಾಗಿ ಮಾಡಿಕೊಂಡು ಬಾಳನ್ನು ಬೆಳಗಿಸಿ ಕೊಂಡವರು, ಸಾವಿರಾರು ಮಂದಿಗೆ ಸಂತೋಷವನ್ನು ತಂದುಕೊಟ್ಟವರು.