ದ್ವಾರಕನಾಥ ಕೊಟ್ನೀಸ್‌ ಡಾಕ್ಟರ್ ಕೊಟ್ನೀಸ್ ಎಂದು ಪ್ರಸಿದ್ಧರು. ಇವರು ಹುಟ್ಟಿದ್ದು ಮಹಾರಾಷ್ಟ್ರದಲ್ಲಿರುವ ಷೋಲಾಪುರದಲ್ಲಿ. ಹುಟ್ಟಿದ ದಿನ ೧೯೧೦ರ ಅಕ್ಟೋಬರ್ ೧೦. ಇವರ ತಂದೆ ಶಾಂತರಾಮರಿಗೆ ಸ್ಥಳೀಯ ಗಿರಣಿಯೊಂದರಲ್ಲಿ ಕೆಲಸ. ಅನಂತರ ಜಿ.ಐ.ಪಿ. ರೈಲ್ವೆಯಲ್ಲಿ ಸೇವೆ. ಅಲ್ಲದೆ ಇವರಿಗೆ ಸ್ವಂತ ಸ್ಥಳ ವೆಂಗೂರಲಾ. ಇದು ಗೋವಾದ ಉತ್ತರದಲ್ಲಿದೆ. ಶಿಕ್ಷಣ ರಂಗದಲ್ಲಿ ಮತ್ತು ಸಾರ್ವಜನಿಕ ಸೇವಾಕ್ಷೇತ್ರದಲ್ಲಿ ಇವರು ಮಾಡಿದ ನಿಸ್ವಾರ್ಥ ಸಮಾಜ ಸೇವೆ ಉಳಿದವರಿಗೂ ಆದರ್ಶಪ್ರಾಯವಾಗಿತ್ತು. ಶಾಂತರಾಮರಿಗೆ ಮೂವರು ಗಂಡು ಮಕ್ಕಳು, ಐದು ಜನ ಹೆಣ್ಣು ಮಕ್ಕಳು. ಎರಡನೆಯ ಮಗನೇ ದ್ವಾರಕನಾಥ ಕೊಟ್ನೀಸ್‌.

ತನ್ನ ಮಗನಿಗೆ ವೈದ್ಯಕೀಯ ಓದಿಸಬೇಕೆಂದು ತಂದೆ ಶಾಂತರಾಮರಿಗೆ ಆಸೆ. ಅವರು ಅಂದುಕೊಂಡಂತೆ ಕೊಟ್ನೀಸರು ಡಾಕ್ಟರ್ ಆದರು.

ವೈದ್ಯರಾದರು

ದ್ವಾರಕನಾಥರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಷೋಲಾಪುರದಲ್ಲೇ ಮುಗಿಸಿದರು. ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲೂ ಇವರು ಮುಂದು. ಸ್ಕೌಟ್ ಆಗಿದ್ದರು. ಕ್ರಿಕೆಟ್, ಟೆನಿಸ್ ಆಟಗಳಲ್ಲಿ ವಿಶೇಷ ಆಸಕ್ತಿ ಇವರಿಗೆ. ೧೯೩೭ರಲ್ಲಿ ಎಂ.ಬಿ.ಬಿ.ಎಸ್. ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅನಂತರ ವೈದ್ಯಕೀಯ ಕೆಲಸ ಮಾಡುತ್ತಾ ಸಂಪಾದನೆಯ ನೆರವಿನಿಂದ ಎಮ್‌.ಎಸ್. (ಮಾಸ್ಟರ್ ಆಫ್ ಸರ್ಜರಿ) ಪದವಿ ಪಡೆದರು.

ದ್ವಾರಕನಾಥರಿಗೆ ಆಟಪಾಠಗಳಲ್ಲಿದ್ದಂತೆ ಸಾಹಿತ್ಯದಲ್ಲೂ ಅಪಾರ ಆಸಕ್ತಿ. ನಾನಾ ಬಗೆಯ ಸಾಹಿತ್ಯ ಓದಿಕೊಂಡಿದ್ದರು ಇವರು. ಪಾದರಸದಂಥ ಚುರುಕಿನ ದ್ವಾರಕನಾಥರು ಎಲ್ಲರಿಗೂ ಬೇಕು. ತಾನು ನಷ್ಟಕ್ಕೆ ಗುರಿಯಾದರೂ ಚಿಂತೆಯಿಲ್ಲ. ನ್ಯಾಯ ಉಳಿಸಬೇಕು ಎಂದು ನ್ಯಾಯಕ್ಕಾಗಿ ಹೆಣಗಿದರು. ಆದರೆ ಇವರದ್ದು ಯಾವಾಗಲೂ ಶಾಂತಿ ಮಾರ್ಗ.

ಚೀನಾದ ಕರೆ

ದ್ವಾರಕನಾಥರಿಗೆ ವಯಸ್ಸು ಮೂವತ್ತು ಸಹ ತುಂಬಿರಲಿಲ್ಲ. ೧೯೩೭ರಲ್ಲಿ ಮಂಚೂರಿಯನ್ನು ವಶಪಡಿಸಿಕೊಂಡ ಜಪಾನೀಯರು ಚೀನಾದೇಶದ ಮೇಲೆ ದಾಳಿ ಮಾಡಿದರು.

ಆಗ ಚೀನಾ ಬಗ್ಗೆ ಅನುಕಂಪ ತೋರಿದವರೆಂದರೆ, ತಾವೇ ಗುಲಾಮಗಿರಿಯಲ್ಲಿ ನರಳುತ್ತಿದ್ದ ಭಾರತೀಯರು ಮಾತ್ರ.

ಸಾಮ್ರಾಜ್ಯಷಾಹಿಗಳನ್ನು ಹತ್ತಿಕ್ಕಲು ಒಂದು ಸೇನೆ ಚೀನಾದಲ್ಲಿ ಹುಟ್ಟಿತ್ತು. ಅದರ ಹೆಸರು “ಎಯ್ತ್ ರೂಟ್ ಆರ್ಮಿ” ಎಂದು. ಅದು ತೋರಿದ ದೇಶಭಕ್ತಿ, ಧೈರ್ಯ ಸ್ಥೈರ್ಯದಿಂದಾಗಿ ಭಾರತದಲ್ಲಿ ಬಹಳ ಮೆಚ್ಚುಗೆ ಪಡೆದಿತ್ತು. ಜಪಾನೀಯರ ವಿರುದ್ಧ ವಿಮೋಚನೆಗಾಗಿ ಹೋರಾಡಿದ ಚೀನಾ ಸೈನಿಕರಿಗೆ ಮೈಕೈ ಸೆಟೆಯುವ ಚಳಿಯನ್ನು ತಡೆಯಲು ಬೆಚ್ಚಗೆ ಬಟ್ಟೆ ಏಕೆ, ಅರೆ ಹೊಟ್ಟೆ ಊಟವೂ ಇರಲಿಲ್ಲ. ಕಾಲಿಗೆ ಬೂಟುಗಳಿರಲಿಲ್ಲ. ಸರಿಯಾದ ಯುದ್ಧೋಪಕರಣಗಳು ಇರಲಿಲ್ಲ. ಇಂತಹ ಸಮಯದಲ್ಲಿ ಭಾರತ ಹಣ ಸಂಗ್ರಹಿಸಿ ಅದರ ಅವಶ್ಯಕತೆಯನ್ನು ಪೂರೈಸಿತ್ತು. ಅಲ್ಲದೆ ಯುದ್ಧದಲ್ಲಿ ಗಾಯಾಳುಗಳಿಗೆ ಬೇಕಾದ ಔಷಧ ಸಾಮಗ್ರಿ, ಶಸ್ತ್ರಚಿಕಿತ್ಸೆಗೆ ಸಲಕರಣೆ ಇವನ್ನು ಭಾರತ ಕಳುಹಿಸಿತ್ತು. ವೈದ್ಯರು, ದಾದಿಯರು, ಯುದ್ಧ ತರಬೇತಿ ಪಡೆದ ಸ್ವಯಂಸೇವಕರು ಇವರನ್ನೂ ಆ ಕಷ್ಟದ ಸಮಯದಲ್ಲಿ ಕಳುಹಿಸಿಕೊಟ್ಟಿತ್ತು. ಕಷ್ಟದಲ್ಲಿದ್ದ ಚೀನಾಗೆ ನೆರವಾಗಬೇಕೆಂಬ ಕೂಗು ಭಾರತದಲ್ಲಿ ಆಂದೋಳನದ ರೂಪ ತಾಳಿತು. ರವೀಂದ್ರನಾಥ ಠಾಕೂರರು ಮತ್ತು ಶ್ರೀಮತಿ ಸರೋಜಿನಿ ನಾಯುಡುರವರು ಬಹಿರಂಗ ವೇದಿಕೆಗಳಲ್ಲಿ ನಿಂತು ಚೀನಾದೊಡನೆ ಅನುಕಂಪ ತೋರಲು ಜನತೆಗೆ ಕರೆಯಿತ್ತರು. ಈ ಕರೆಗೆ ಓಗೊಟ್ಟು ಮೊದಲಿಗೆ ಮುಂದೆ ಬಂದದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಆಗಲೆ ಸ್ಪೇನ್‌ನಲ್ಲಿ ನಡೆಯುತ್ತಿದ್ದ ಹೋರಾಟದ ಕಾಲದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಪೇನಿಗೆ ಒಂದು ವೈದ್ಯಕೀಯ ಸಿಬ್ಬಂದಿಯನ್ನು ಕಳಿಸಿಕೊಟ್ಟಿತ್ತು. ಈ ಸಿಬ್ಬಂದಿಯ ಮುಂದಾಳು ಡಾಕ್ಟರ್ ಮದನಲಾಲ್ ಆತುಳ್ ಎಂಬುವರು. ೧೯೩೮ರಲ್ಲಿ ಸ್ಪೇನ್‌ನಿಂದ ಹಿಂತಿರುಗಿದ ಈ ವೈದ್ಯಕೀಯ ಸಿಬ್ಬಂದಿ ವರ್ಗವನ್ನು ನೆಹರೂರವರು ಬಹುವಾಗಿ ಮೆಚ್ಚಿ ಪ್ರಶಂಸಿಸಿದರು. ಅದೇ ವರ್ಷ ಸೆಪ್ಟೆಂಬರ್ ಮೊದಲ ದಿನಾಂಕದಂದು ಈ ಸಿಬ್ಬಂದಿ ವರ್ಗವನ್ನು ಚೀನಾದಲ್ಲಿ ಹೋರಾಡುತ್ತಿದ್ದ ಚೀನಿ ಸೈನಿಕರಿಗೆ ಉಪಚಾರ ಮಾಡಲು ಮತ್ತೆ ನೆಹರೂ ಕೇಳಿಕೊಂಡರು. ಈ ವೈದ್ಯಕೀಯ ಸಿಬ್ಬಂದಿ ವರ್ಗ ಹಡಗೇರಿ ಚೀನಾದೆಡೆ ಪ್ರಯಾಣ ಹೊರಟಿತು.

ಪ್ರಯಾಣ

ವೈದ್ಯಕೀಯ ವೃತ್ತಿ ಒಂದು ಪವಿತ್ರ ಕೆಲಸವೆಂದು ಮೊದಲಿನಿಂದಲೂ ದ್ವಾರಕನಾಥ ಕೊಟ್ನೀಸ್ ಅವರ ಭಾವನೆ. ಪರದೇಶದಲ್ಲಿ ನೊಂದ ಸೈನಿಕರ ಉಪಚಾರ ಮಾಡಲು ಬಹು ಉತ್ಸಾಹ ಇವರಿಗೆ. ಚೀನಾದಲ್ಲಿ ಸೇವೆ ಮಾಡಲು ಉತ್ಸಾಹದಿಂದ ಮುಂದೆ ಬಂದರು. ಇವರ ತಂದೆ ಶಾಂತರಾಮರು ಇದು ಸೇವೆಗೆ ಒಳ್ಳೆಯ ಅವಕಾಶ ಎಂದು ಸಂತೋಷದಿಂದಲೇ ಮಗನನ್ನು ಹೊರಡಲು ಪ್ರೋತ್ಸಾಹಿಸಿದರು. ತಂದೆಯಾಗಲಿ, ಮಗನಾಗಲಿ ತಮ್ಮ ಸಂಸಾರದ ಕಷ್ಟವನ್ನು ಕುರಿತು ಯೋಚಿಸಲಿಲ್ಲ.

ಚೀನಾ ಸೇನೆಗೆ ವೈದ್ಯಕೀಯ ಉಪಚಾರ ಮಾಡಲು ಭಾರತದಿಂದ ಹೊರಟ ಕೊಟ್ನೀಸ್‌ರ ಜೊತೆಗೆ ನಾಲ್ವರು ವೈದ್ಯರೂ ಇದ್ದರು. ಮದನಲಾಲ್ ಆತುಳ್, ಡಾ. ಜೋಲ್ಕರ್, ದೆಬೀನ ಮುಖರ್ಜಿ ಮತ್ತು ಬಿಜಯಬಸು.

ಐವತ್ತಕ್ಕಿಂತ ಹೆಚ್ಚಿನ ಪೆಟ್ಟಿಗೆಗಳಲ್ಲಿ ಔಷಧಿ ಸಾಮಗ್ರಿಗಳನ್ನು ತುಂಬಿಕೊಂಡು ಜೊತೆಗೆ ಎಕ್ಸ್‌ರೇ ಯಂತ್ರದೊಂದಿಗೆ ೧೯೨೮ ಸೆಪ್ಟೆಂಬರ್ ೩೦ ರಂದು ಭಾರತ ಬಿಟ್ಟ ಈ ವೈದ್ಯಕೀಯ ಸಿಬ್ಬಂದಿ ಚೀನ ಮುಟ್ಟುವ ಮೊದಲು ಹಾಂಗ್‌ಕಾಂಗ್‌ಗೆ ಬಂದು ಸೇರಿತು. ಅಲ್ಲಿಂದ ಮುಂದೆ ಹೊರಟ ಇವರು ಕ್ಯಾಂಟನ್‌ಗೆ ಬಂದರು. ಅಲ್ಲಿ ಅವರು ಕಣ್ಣಿಗೆ ಬಿದ್ದ ದೃಶ್ಯ ಹೃದಯ ಹಿಂಡುವಂತಿತ್ತು. ಆಕ್ರಮಣಶಾಲಿ ಜಪಾನಿ ಸೇನೆ ಬಾಂಬ್ ಹಾಕಿ ಆ ಪ್ರದೇಶವನ್ನೇ ಸರ್ವನಾಶ ಮಾಡಿತ್ತು. ಆಕ್ರಮಣಕ್ಕೆ ಸಿಕ್ಕಿ ಘೋರ ಯಾತನೆ ಅನುಭವಿಸುತ್ತಿದ್ದ ಚೀನೀಯರನ್ನು ಕಣ್ಣಾರೆ ಕಂಡ ಭಾರತೀಯ ವೈದ್ಯರಿಗೆ ಎಂತಹ ಕಷ್ಟ ಬಂದರೂ ಸರಿಯೆ, ತಮ್ಮ ಪ್ರಾಣ ಪಣವಿಟ್ಟಾದರೂ ಚೀನಾದ ಸೈನಿಕರಿಗೆ ವೈದ್ಯಕೀಯ ಉಪಚಾರ ಮಾಡಬೇಕೆನ್ನಿಸಿತು.

ತಂದೆಯ ಸಾವು

ಡಾಕ್ಟರ್ ಕೊಟ್ನೀಸ್‌ರವರು ಅನಂತರ ತಮ್ಮ ವೈದ್ಯ ಮಿತ್ರರೊಂದಿಗೆ ದೂರದ ಪ್ರವಾಸ ಮುಂದುವರಿಸಿ ಚುಂಗ್‌ಕಿಂಗ್‌ಗೆ ಬಂದು ತಲುಪಿದರು. ಈ ಚುಂಗ್‌ಕಿಂಗ್‌ಗೆ ಆಗ ಯುದ್ಧಕಾಲದ ರಾಜಧಾನಿ. ಇದರ ಅನಂತರ ಕೊಟ್ನೀಸ್ ಯುದ್ಧಭೂಮಿ ಯೆನ್ನನ್‌ ಗಡಿಗೆ ತೆರಳುವ ಸನ್ನಾಹದಲ್ಲಿದ್ದರು. ಈ ಹೊತ್ತಿಗೆ ಸಿಡಿಲು ಎರಗಿ ಬಂದಂತೆ ತಂದೆಯ ಸಾವಿನ ಸುದ್ದಿ ಇವರನ್ನು ಬಂದು ಮುಟ್ಟಿತು. ತಂದೆಯಲ್ಲಿ ಇವರಿಗೆ ಬಹು ಪ್ರೀತಿ, ಗೌರವ. ತಂದೆಯ ಅಂತ್ಯಕ್ರಿಯೆಗಾಗಿ ಹಿಂತಿರುಗುವುದೇ? ಇಲ್ಲ ದೂರ ದೇಶದಲ್ಲಿ ನೊಂದ ಗಾಯಾಳುಗಳಿಗೆ ಉಪಚಾರ ಮಾಡುವುದೇ? ಇವರ ದಳದ ನಾಯಕ ಡಾಕ್ಟರ್ ಆತುಳರೂ, “ಇಲ್ಲಿಯ ಕೆಲಸ ಹೇಗೋ ನಡೆಯುತ್ತದೆ. ಭಾರತಕ್ಕೆ ಹಿಂದಿರುಗಿ ನಿಮ್ಮ ತಾಯಿಯನ್ನು ನೀವು ಸಮಾಧಾನ ಮಾಡಬೇಕು” ಎಂದರು. ಆದರೆ ಕೊಟ್ನೀಸರು, “ನಾನು ಒಂದು ವರ್ಷ ಚೀನಾದಲ್ಲಿ ಸೇವೆ ಸಲ್ಲಿಸುತ್ತೇನೆ ಎಂದು ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಮಾತು ಕೊಟ್ಟಿದ್ದೇನೆ. ಅದನ್ನು ಮರೆಯಲಾರೆ” ಎಂದರು. ಅಣ್ಣ ಮಂಗೇಶರಿಗೆ ಹೀಗೆ ಬರೆದರು:

"ನಾನು ಕೊಟ್ಟ ಮಾತನ್ನು ಮರೆಯಲಾರೆ".

“ತೀರ್ಥರೂಪರವರು ತೀರಿಕೊಂಡ ವಿಷಯ ಕೇಳಿ ನನಗೆ ತುಂಬಾ ದುಃಖವಾಯಿತು. ನಿನ್ನೆಯಷ್ಟೇ ಈ ನಗರದ ಮೇಲೆ ಬಾಂಬ್ ದಾಳಿ ನಡೆಯಿತು. ಈ ದಾಳಿಯಿಂದ ಐವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸತ್ತಿದ್ದಾರೆ. ಹರಕು-ಮುರುಕು ಮನೆಗಳಲ್ಲಿ ವಾಸಿಸುತ್ತಿದ್ದ ಗಂಡಸರು, ಹೆಂಗಸರು, ಹಾಲುಗೆನ್ನೆಯ ಮಕ್ಕಳು ಎಲ್ಲರೂ ಬೀದಿಪಾಲಾಗಿದ್ದಾರೆ. ಈ ರೀತಿ ಕೆಟ್ಟ ಸಾವಿಗೆ ಗುರಿಯಾದ ಅವರುಗಳು ಮಾಡಿದ ಅಪರಾಧವಾದರೂ ಏನು? ತಂದೆಯವರು ತನಗೆ ಇಲ್ಲದಿದ್ದರೂ ದೀನರಿಗೆ, ಯಾಚಕರಿಗೆ ಮನಸಾರೆ ದಾನ ಮಾಡಿ ಜೀವನದುದ್ದಕ್ಕೂ ತ್ಯಾಗ ಮಾಡಿ ಬಾಳು ಸವೆಸಿದ ಮಹಾನ್ ವ್ಯಕ್ತಿ. ತಮಗೆ ಎಷ್ಟೇ ತೊಂದರೆ ಇದ್ದರೂ ನನ್ನನ್ನು ಒಬ್ಬ ಮನುಷ್ಯನನ್ನಾಗಿ ಮಾಡಿದರು. ಅವರ ಹೆಸರುಳಿಸುವ ಹೊಣೆ ಈಗ ನನ್ನದಾಗಿದೆ. ತಾಯಿಯವರಿಗೆ ತಂದೆಯ ಸಾವಿನಿಂದ ತುಂಬ ದುಃಖವಾಗಿದೆ. ದಯವಿಟ್ಟು ಅವರನ್ನು ಸಮಾಧಾನ ಮಾಡು. ತಂದೆಯ ಆತ್ಮಕ್ಕೆ ಶಾಂತಿ ಸಿಕ್ಕಲಿ.”

ಮನೆಗೆ ಬರೆದ ಈ ಪತ್ರವೇ ಕೊನೆಯ ಪತ್ರ. ಮುಂದೆ ಪತ್ರ ವ್ಯವಹಾರ ಮಾಡಲು ಚೀನಾ ಸರ್ಕಾರ ಇವರಿಗೆ ಅವಕಾಶ ಕೊಡಲಿಲ್ಲ.

ಸೇವೆ ಪ್ರಾರಂಭ

೧೯೩೯ರ ಜನವರಿ ೨೨ರಂದು ಚುಂಗ್‌ಕಿಂಗ್‌ ಬಿಟ್ಟ ವೈದ್ಯಮಿತ್ರರು ಸಾಮಾನು-ಸರಂಜಾಮ ತುಂಬಿದ ಟ್ರಕ್ಕುಗಳಲ್ಲಿ ಉತ್ತರದೆಡೆ ಪ್ರಯಾಣ ಬೆಳೆಸಿ ಯೆನನ್‌ನ ಗಡಿಪ್ರಾಂತಕ್ಕೆ ಬಂದರು.

ಭಾರತದ ವೈದ್ಯರ ತಂಡ ಯೆನನ್‌ಗೆ ಬರುತ್ತಿದ್ದಂತೆ ಸ್ವಲ್ಪವೂ ಮಿಶ್ರಮಿಸದೆ ತುರಾತುರಿಯಲ್ಲಿ ಕಣ್ಣು, ಮೂಗು, ಗಂಟಲು ಚಿಕಿತ್ಸಾಲಯ ವಿಭಾಗದಲ್ಲಿ ಕೆಲಸ ಪ್ರಾರಂಭಿಸಿದರು. ಪ್ರತಿಯೊಂದು ಕೆಲಸಕ್ಕೂ ಮುನ್ನುಗ್ಗುತ್ತಿದ್ದವರೆಂದರೆ ಕೊಟ್ನೀಸ್‌ರವರು. ಹಸಿವು, ನೀರಡಿಕೆ, ಆಯಾಸ ಯಾವುದೂ ಅವರಿಗೆ ಗೊತ್ತಾಗುತ್ತಿರಲಿಲ್ಲ. ಕೇವಲ ಯುದ್ಧದಲ್ಲಿ ಹೋರಾಡಿದ ಗಾಯಾಳುಗಳಿಗೆ ಮೀಸಲಾದ ವೈದ್ಯಕೀಯ ಉಪಚಾರ ಕಾಯಿಲೆ ಬಿದ್ದ ಹಳ್ಳಿ ಜನರಿಗೂ ದೊರೆಯುತ್ತಿತ್ತು. ಚೀನಾದ ಈಗಿನ ಅಧ್ಯಕ್ಷ ಮಾವೋ ತ್ಸೆ ತುಂಗ್‌ ಹೀಗೆ ಬರೆದರು:

“ಭಾರತದ ವೈದ್ಯಕೀಯ ತಂಡ ಈಗಾಗಲೇ ತನ್ನ ಕಾರ್ಯವನ್ನು ಆರಂಭಿಸಿದೆ. ನಮ್ಮ ನಿರೀಕ್ಷೆಗೂ ಮೀರಿ ಅವರು ನಮಗಾಗಿ ದುಡಿಯುತ್ತಿದ್ದಾರೆ. ನಮ್ಮ ಕಷ್ಟ, ಕಾರ್ಪಣ್ಯ, ನೋವು, ಹಿಂಸೆಗಳಲ್ಲಿ ಅವರೂ ಒಂದಾಗಿ ಹೆಗಲಿಗೆ ಹೆಗಲು ಕೊಟ್ಟು ಹೆಣಗುತ್ತಿರುವುದನ್ನು ನೋಡಿ ನಮ್ಮ ಹೃದಯ ತುಂಬಿ ಬರುತ್ತದೆ. ಎಂದೆಂದಿಗೂ ನಾವು ನಿಮಗೆ ಕೃತಜ್ಞರು.”

ಯೆನನ್‌ನಲ್ಲೇ ಕೆಲಸ ಮಾಡಿದ ಈ ವೈದ್ಯ ಮಿತ್ರರಿಗೆ ಒಂದು ಸ್ಥಳದಲ್ಲೇ ಇದ್ದು ಸೇವೆ ಮಾಡುವುದರಲ್ಲಿ ತೃಪ್ತಿಯಾಗಲಿಲ್ಲ. ತಮ್ಮ ಸೇವಾ ಕಾರ್ಯ ಎಲ್ಲೆಡೆಗೂ ಲಭ್ಯವಾಗಬೇಕೆಂದು ಅವರು ಬಯಸಿದರು. ಅವರು ಆರಿಸಿದ್ದು ಮದ್ದುಗುಂಡು, ಬಾಂಬುಗಳು ಸ್ಫೋಟವಾಗುವ ಯುದ್ಧಭೂಮಿಯನ್ನು. ಅದೂ ಸಹ ಶತ್ರುಪಡೆಯ ತೀರಾ ಎದುರಿನಲ್ಲೇ ಎಂದಾಗ ಅವರ ಸಾಹಸ ಮತ್ತು ಗಟ್ಟಿ ಮನಸ್ಸು ಸ್ಪಷ್ಟವಾಗುತ್ತದೆ. ಈ ಸಾಹಸ ಕಾರ್ಯದ ಯೋಜನೆ ಹಾಕಿದವರು ಕೊಟ್ನೀಸ್.

ಕಷ್ಟದ ಪ್ರಯಾಣ

ಒಬ್ಬ ತರುಣ ಜರ್ಮನ್ ಡಾಕ್ಟರ್ ಸಹ ಇವರ ಜೊತೆ ಬಂದು ಸೇರಿದ್ದರು. ಡಾ. ಕೊಟ್ನೀಸ್‌ರವರು ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ಆ ತರುಣ ಜರ್ಮನ್ ಡಾಕ್ಟರನ್ನು ಜೊತೆಗಿರಿಸಿಕೊಂಡು ಷನ್ಸಿ, ಹೊಪೆ, ಹೊನನ್ನ ಮತ್ತು ಷಂತಂಗ್‌ಗಳ ಮುಂದಿನ ಪ್ರಯಾಣಕ್ಕಾಗಿ ಯೋಜನೆ ಹಾಕಿಕೊಂಡರು. ಒಂದು ದಿನ ಬೆಳಗ್ಗೆ ಟ್ರಕ್‌ ಏರಿ ಹೊರಟರು. ಒಂದು ಸೂಟ್‌ಕೇಸು ಮತ್ತು ಒಂದು ಹಾಸಿಗೆ ಇಷ್ಟೇ ಅವರುಗಳ ಬಳಿಯಿದ್ದ ಸಾಮಾನುಗಳು. ಒಟ್ಟು ಇಪ್ಪತ್ತು ಮಂದಿ ಆ ಟ್ರಕ್‌ನಲ್ಲಿ ಇದ್ದವರು. ಅದರಲ್ಲಿ ಸೆರೆ ಹಿಡಿದ ಇಬ್ಬರು ಜಪಾನಿಯರು. ಟ್ರಿಕ್‌ ಒಳಗೆ ವಿಪರೀತ ಸಾಮಗ್ರಿಗಳೂ ಇದ್ದವಾದ್ದರಿಂದ ಸ್ಥಳ ಅಸಾಧ್ಯ ಇಕ್ಕಟ್ಟು. ಹೀಗಾಗಿ ವೈದ್ಯರು ರಕ್ಷಣಾ ದಳ ಕೊಡುವ ಟ್ರಕ್ಕಿನ ಅಂಚಿನಲ್ಲಿ ಕುಳಿತು ಪ್ರಯಾಣ ಮಾಡಬೇಕಾಯಿತು. ಉಬ್ಬುತಗ್ಗು, ಕೊರಕಲು ಸ್ಥಳಗಳಲ್ಲಿ ಟ್ರಕ್ಕು ಓಡುವಾಗ ಅವರ ಕಷ್ಟ ಹೇಳತೀರದು. ಆಗ ಚೀನಾದಲ್ಲಿ ಕಚ್ಚಾ ಪೆಟ್ರೋಲಿಯಂ ಎಣ್ಣೆಯ ತೀವ್ರ ಅಭಾವ. ಈ ಕಾರಣದಿಂದಾಗಿ ಟ್ರಿಕ್ಕಿಗೆ ಪೆಟ್ರೋಲ್ ಇಲ್ಲ. ಇಪ್ಪತ್ತು ಮೈಲಿಗಳವರೆಗೂ ಟ್ರಕ್ಕನ್ನು ಸಿಯಾನ್‌ವರೆಗೂ ದಬ್ಬಿಕೊಂಡು ಹೋದರು. ಅಲ್ಲಿ ಬೇರೆ ಟ್ರಕ್ಕನ್ನು ಪಡೆಯಬೇಕಾಯಿತು. ಸಿಯಾನ್ ಸಹ ಜಪಾನಿಯರ ಬಾಂಬ್ ದಾಳಿಗೆ ತುತ್ತಾಗಿತ್ತು.

ಜರ್ಮನ್‌ ವೈದ್ಯರೂ ಸೇರಿದಂತೆ ಈ ನಾಲ್ವರು ವೈದ್ಯರು ಡಿಸೆಂಬರ್ ತಿಂಗಳ ೧೯ನೇ ದಿನಾಂಕ ಮಧ್ಯರಾತ್ರಿ ಸಿಯಾನ್ ಬಿಟ್ಟರು. ಅವರು ಹಿಡಿದ ರೈಲುಗಾಡಿ ಪ್ರಯಾಣಿಕರಿಂದ ತುಂಬಿ ಬಿರಿಯುತ್ತಿತ್ತು. ಮೈಸೆಟೆಯುವ ಆ ಚಳಿಯಲ್ಲೂ ಪ್ರಯಾಣಿಕರು ರೈಲು ಗಾಡಿಯ ಮೇಲೆಲ್ಲಾ ಹತ್ತಿ ಕುಳಿತರು. ಚಿಕ್ಕಪುಟ್ಟ ಬಾಂಬುಗಳ ಏಟು ಬಿದ್ದ ಬೋಗಿಗಲು ತೂತಾಗಿದ್ದವು. ಮುಂದಿನ ಪ್ರಯಾಣದಲ್ಲಿ ಬಾಂಬ್‌ ದಾಳಿ ವಿಪರೀತವಾದ್ದರಿಂದ ಪ್ರಯಾಣಿಕರೆಲ್ಲಾ ಮಧ್ಯದಲ್ಲೇ ಇಳಿಯಬೇಕಾಯಿತು. ಅನಂತರ ವೈದ್ಯರು ಬೆಟ್ಟ-ಗುಡ್ಡಗಳಲ್ಲಿ ಹೇಸರಗತ್ತೆಗಳ ಮೇಲೆ ಕುಳಿತು ಮುಂದಿನ ದಾರಿಯನ್ನು ಸವೆಸುತ್ತಾ ಟಂಕ್‌ವಾನ್ ಎಂಬ ಸ್ಥಳವನ್ನು ದಾಟಿದರು. ಈ ಸ್ಥಳವೂ ಬಾಂಬ್ ದಾಳಿಯಿಂದ ತತ್ತರಿಸಿತ್ತು. ಸ್ವಲ್ಪ ದೂರದಲ್ಲಿ ಹರಿಯುತ್ತಿದ್ದ ಹಳದಿ ನದಿಯು (ಯಲ್ಲೋ ರಿವರ್) ಇವರ ಕಣ್ಣಿಗೆ ಬಿತ್ತು. ಅದರ ಹತ್ತಿರದಲ್ಲೇ ರಕ್ಷಣಾ ದಳವೂ ಇತ್ತು. ಬೆಟ್ಟ-ಗುಡ್ಡಗಳ ಇಳಿಜಾರುಗಳಲ್ಲಿ ಪ್ರಯಾಣ ಮಾಡಿ ಒಂದು ಚಿಕ್ಕ ರೈಲ್ವೆ ನಿಲ್ದಾಣ ಸೇರಿದರು. ರೈಲುಗಾಡಿಯೊಂದು ಅಲ್ಲಿಗೆ ಬಂದಾಗ ಸೂಜಿ ಊರಲೂ ಸ್ಥಳವಿಲ್ಲದಷ್ಟು ಅದು ಪ್ರಯಾಣಿಕರಿಂದ ತುಂಬಿಹೋಗಿತ್ತು. ಈ ವೈದ್ಯ ಮಿತ್ರರು ಸಾಹಸ ಮಾಡಿ ಅದರಲ್ಲೇ ತೂರಿಕೊಂಡು ಸಾಯಂಕಾಲದ ಹೊತ್ತಿಗೆ ಹೊನಾನ್‌ ಸೇರಿದರು.

ಕಷ್ಟದ ನಂತರ ಕಷ್ಟವೇ

ಹೊನಾನ್‌ನಲ್ಲಿ ವಿಪರೀತ ಹಿಮಪಾತ. ಹಿಮಕರಗಿ ನೀರಾಗಿ ಎಲ್ಲೆಲ್ಲೂ ಮಂದಗತಿಯಲ್ಲಿ ಹರಿಯುತ್ತಿದೆ. ಜೊತೆಗೆ ಧೂಳುಮಯ ನೆಲ ಬೇರೆ. ಅಲ್ಲಿಂದ ಹಳದಿ ನದಿಗೆ ಐವತ್ತು ಮೈಲಿ ದೂರ. ಎತ್ತಿನ ಗಾಡಿಯಲ್ಲಿ ಕುಳಿತು ಪೂರ್ಣ ಮೂರು ದಿನ ಪ್ರಯಾಣ ಮಾಡಿ ಅಲ್ಲಿಗೆ ಇವರು ಸೇರಿದರು. ನದಿಯಲ್ಲಿ ಸೆಳವು. ನೀರು ಕಡಿಮೆ ಇದ್ದ ಕಡೆ ತಂಡದ ಎಲ್ಲರೂ ನದಿಯನ್ನು ದಾಟಿದರು. ಎಲ್ಲಿ ಯಾವ ಕ್ಷಣದಲ್ಲಿ ಬಾಂಬಿನ ಸ್ಫೋಟವಾಗುತ್ತದೋ ಎಂಬ ಶಂಕೆ ಅವರನ್ನು ಸದಾ ಕಾಡುತ್ತಲೇ ಇತ್ತು.

ಬೆಳಗಿನ ಜಾವದ ಮಬ್ಬು ಬೆಳಕಿನಲ್ಲಿ ನದಿ ತೀರದುದ್ದಕ್ಕೂ ಹೆಜ್ಜೆ ಹಾಕುತ್ತ ಇವರು ಷೆನ್ಸಿ ಪ್ರಾಂತ ಸೇರಿದರು. ಅಲ್ಲಿಂದ ಮುಂದಕ್ಕೆ ಅವರ ಪ್ರಯಾಣ ಅತಿ ಪ್ರಯಾಸದ್ದು. ದಿನಕ್ಕೆ ೨೫ ಮೈಲಿಗಳವರೆಗೆ ಕಾಡು-ಮೇಡುಗಳಲ್ಲಿ ಮೂರು ವಾರಗಳವರೆಗೆ ಪ್ರಯಾಸದ ಪ್ರಯಾಣ. ವಿಪರೀತ ಚಳಿ, ನೀರು ಮಂಜುಗಡ್ಡೆಯಾಗುವ ಸೊನ್ನೆ ಡಿಗ್ರಿ ಸೆಂಟಿಗ್ರೇಡಿಗಿಂತ ಹತ್ತು ಡಿಗ್ರಿ ಕಡಿಮೆ ಉಷ್ಣ. ಬೆನ್ನ ಮೇಲೆ ಸಾಮಾನನ್ನು ಹೊತ್ತು ನಡೆಯಬೇಕು. ಅಲ್ಲಲ್ಲಿ ಕುದುರೆ, ಹೇಸರಗತ್ತೆಗಳ ಮೇಲೆ ಪ್ರಯಾಣ. ಹಿಮದ ಹಾಸಿನಲ್ಲಿ ನಡೆದಾಗ ಅವು ಜಾರಿ ಬೀಳುತ್ತಿದ್ದವು. ಇನ್ನು ಪರ್ವತ ಇಳಿಯುವಾಗ ದಾರಿಯುದ್ದಕ್ಕೂ ಚಾಚಿ ಮಲಗಿದ ಹಿಮದ ಮೇಲೆ ಸವಾರಿ ಮಾಡುವುದು ಅತ್ಯಂತ ಅಪಾಯಕಾರಿ. ಕೊಟ್ನೀಸ್‌ರವರ ಸಾಹಸ ಮನೋವೃತ್ತಿ ಉಳಿದವರನ್ನು ಹುರಿದುಂಬಿಸುತ್ತಿತ್ತು. ಬೆಳಗ್ಗೆ ಹತ್ತಾದರೂ ಸೂರ್ಯದರ್ಶನವಿಲ್ಲ. ಸಾಯಂಕಾಲ ನಾಲ್ಕಕ್ಕೆ ಅವನು ಬೆಟ್ಟದಂಚಿನಲ್ಲಿ ಮುಳುಗಿಬಿಡುತ್ತಿದ್ದ.

ಹೀಗೆ ಅವರ ಪ್ರಯಾಣ ಬಹು ಕಷ್ಟದ್ದು. ಯುದ್ಧ-ಬಡತನಗಳಿಂದ ಅಲ್ಲಿಯ ಜನ ಕಂಗೆಟ್ಟಿದ್ದರು. ಕೊಟ್ನೀಸ್‌ರೂ ಅವರ ಜೊತೆಯವರೂ ಸ್ನೇಹದಿಂದ ಜನರೊಡನೆ ಬೆರೆತು ಅವರ ಕಷ್ಟಗಳಲ್ಲಿ ಭಾಗಿಗಳಾದರು.

ಗೆರಿಲ್ಲಾಗಳೊಡನೆ

ಮೂರು ವಾರಗಳ ಆಯಾಸಪೂರ್ಣ ಪ್ರವಾಸದಲ್ಲಿ ಅವರಿಗಷ್ಟು ವಿರಾಮ ಸಿಕ್ಕಿದ್ದು ಕೇವಲ ಎರಡು ದಿನಗಳು. ಅವರು ಜನರಲ್ ಟ್ಯಾಂಗ್ ಎಂಬ ಅಧಿಕಾರಿಯ ಸೈನ್ಯದ ಶಿಬಿರ ಸಮೀಪಿಸಿದಾಗ ಸೈನ್ಯಾಧಿಕಾರಿಗಳು ಇವರನ್ನು ಆದರದಿಂದ ಸ್ವಾಗತಿಸಿದರು. ಅಲ್ಲಿದ್ದವರೆಲ್ಲಾ ಗೆರಿಲ್ಲಾ ಸೈನಿಕರ ತರಬೇತಿ ಪಡೆದವರು. ಜಪಾನಿಯರನ್ನು ಹತ್ತಿಕ್ಕಲು ಜನರಲ್ ಟ್ಯಾಂಗ್ ೨೦,೦೦೦ ಗೆರಿಲ್ಲಾಗಳನ್ನು ತಯಾರು ಮಾಡಿದ್ದರು. ಹಣಕಾಸು ಮತ್ತು ಆಧುನಿಕ ಯುದ್ಧತಂತ್ರ ಉಪಕರಣವಿಲ್ಲದ್ದರಿಂದ ಆ ಗೆರಿಲ್ಲಾಗಳಿಗೆ ಬಲಿಷ್ಠ ಜಪಾನ್ ಸಾಮ್ರಾಜ್ಯದ ವಿರುದ್ಧ ಹೋರಾಡಲು ತರಬೇತಿ ನೀಡಲಾಗಿತ್ತು. ಗೆರಿಲ್ಲಾಗಳ ಯುದ್ಧ ಕ್ರಮ ನೇರ ರೀತಿಯದಲ್ಲ. ವೈರಿ ಪಡೆಯ ಕಣ್ಣಿಗೆ ಬೀಳದೆ ಅವರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿ ಸದೆಬಡಿಯುವುದೇ ಗೆರಿಲ್ಲಾ ಪಡೆಯ ಯುದ್ಧನೀತಿ.

ಷೆನ್ಸಿ ಬಳಿಯಿದ್ದ ಸುತ್ತಮುತ್ತಲಿನ ಪರಿಸರವೆಲ್ಲ ಈಗಾಗಲೇ ಜಪಾನಿನ ಸೇನೆಯಿಂದ ಆಕ್ರಮಣವಾಗಿತ್ತು. ಈ ಸೇನೆಯ ಹತ್ತು ತುಕಡಿಗಳು ಅನೇಕ ಹಳ್ಳಿ ರೈಲುಮಾರ್ಗ  ಮತ್ತು ಬಸ್ಸು ಮಾರ್ಗಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಇಂತಹ ಅಪಾಯದ ಕಡೆಗಳಲ್ಲೆಲ್ಲ ಸುತ್ತುವುದು ಸಾವಿನೊಡನೆ ಆಟವಾಡಿದಂತೆ. ಬಿಸಿರಕ್ತದ ಯುವ ವೈದ್ಯ ಕೊಟ್ನೀಸರು ಉಳಿದವರನ್ನು ಹುರಿದುಂಬಿಸಿ, ಅವರಲ್ಲಿ ಚೇತನ ತುಂಬುತ್ತಾ ಬಂದರು. ಚೀನಾ ಸೈನಿಕರೂ ಇವರಿಂದ ಸ್ಫೋರ್ತಿ ಪಡೆದರು.

ಅಪಾಯದ ದವಡೆಯಲ್ಲಿ

ಸೇನೆಯಲ್ಲಿ ಕೊಟ್ನೀಸ್‌ರವರು ಸಾಮಾನ್ಯ ಸೈನಿಕನಂತೆ ಸಮವಸ್ತ್ರ ತೊಟ್ಟರು. ಜೊತೆಗೆ ಔಷಧ ಸಾಮಗ್ರಿ ತುಂಬಿದ ಪೆಟ್ಟಿಗೆಯನ್ನು ಬೆನ್ನಿಗೇರಿಸಿ ಸೇನೆಯಲ್ಲಿ ತಿರುಗಾಡಿ ಔಷದೋಪಚಾರ ಮಾಡಿದರು. ಯುದ್ಧ ನಡೆದ ಸ್ಥಳದಲ್ಲೆಲ್ಲಾ ಸೈನಿಕರ ಜೊತೆ ಜೊತೆಗೆ ಹೊರಟ ಭಾರತೀಯ ವೈದ್ಯರು ಮತ್ತೆ ಮೂರು ವಾರಗಳವರೆಗೆ ಪ್ರಯಾಣ ಮಾಡಿದರು. ಎಲ್ಲೆಲ್ಲಿ ವಿಧ್ವಂಸಕ ಕಾರ್ಯ ನಡೆದಿತ್ತೋ ಅಲ್ಲೆಲ್ಲ ಇವರು ಸಂಚರಿಸಿ ಗಾಯಗೊಂಡವರಿಗೆ, ಕಾಯಿಲೆಯಾದವರಿಗೆ ಚಿಕಿತ್ಸೆ ಮಾಡಬೇಕಾಗಿತ್ತು.

 

ರಣರಂಗದಲ್ಲಿ ಗುಡಾರದೊಳೆ ಶಸ್ತ್ರಚಿಕಿತ್ಸೆ ಮಾಡುತ್ತಿರುವುದು.

ಷೆನ್ಸಿ ಪ್ರಾಂತದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣ ಮಾಡಬೇಕಾದಾಗಲೆಲ್ಲಾ ಆಗಾಗ್ಗೆ ಜಪಾನಿಯರಿಂದ ಆಕ್ರಮಿತ ಪ್ರದೇಶದ ಮೂಲಕವೇ ಹೋಗಬೇಕಾಗಿತ್ತು. ಬೇರೆ ಮಾರ್ಗವೇ ಇರಲಿಲ್ಲ ಇವರಿಗೆ. ಮೈಯೆಲ್ಲಾ ಕಣ್ಣು ಮಾಡಿಕೊಂಡು ಸರಿ ರಾತ್ರಿಗಳಲ್ಲಿ ಪ್ರಯಾಣ ಮಾಡಬೇಕಿತ್ತು.

ಗೆರಿಲ್ಲಾ ಸೇನೆಯ ಅಧಿಕಾರಿ ಎಲ್ಲರನ್ನು ಕರೆದುಕೊಂಡು ಒಂದು ಬೆಟ್ಟ ಏರಿದಾಗ ದೂರದಲ್ಲಿ ಬಿಡಾರ ಮಾಡಿದ್ದ ಜಪಾನಿ ಸೇನೆ ಕಣ್ಣಿಗೆ ಬಿತ್ತು. ಆದರೂ ಮುಂದೆ ನಡೆದರು. ಅದೊಂದು ಪುಟ್ಟ ನಗರ. ಈ ನಗರವನ್ನು ವೈರಿಗಳು ವಶಪಡಿಸಿಕೊಂಡಿದ್ದರು. ಪಶ್ಚಿಮ ನಿಟ್ಟಿನಲ್ಲಿ ಒಂದು ಮೈಲಿಯುದ್ದಕ್ಕೂ ಚೀನಾ ಸೈನಿಕರಿಗೂ ಜಪಾನೀ ಸೈನಿಕರಿಗೂ ಘೋರ ಯುದ್ಧ ನಡೆದಿತ್ತು. ಜಪಾನಿಯರ ಫಿರಂಗಿಗಳಿಂದ ಸಿಡಿದು ಬರುತ್ತಿದ್ದ ಬೆಂಕಿ ಗುಂಡುಗಳನ್ನು ಚೀನಿಯರ ಲೈಟ್‌ ಮಿಷನ್‌ಗಳು ಎದುರಿಸುತ್ತಿದ್ದವು. ಅತ್ಯಂತ ಭಯಂಕರವಾಗಿ ನಡೆಯುತ್ತಿದ್ದ ಈ ಕಾಳಗ ಬೇಗನೆ ನಿಲ್ಲುವ ಯಾವ ಸೂಚನೆಯೂ ಕಾಣಲಿಲ್ಲ ಇವರಿಗೆ. ಅವರು ಕಾಯುವಂತಿರಲಿಲ್ಲ. ಬಗೆಬಗೆಯ ಉಪಾಯಗಳಿಂದ ಹಳ್ಳಿ, ಊರುಗಳನ್ನೆಲ್ಲಾ ಸುತ್ತಿ ಮುಂದೆ ನಡೆದರು.

ಹೀಗೆಯೇ ಅವರ ಪ್ರಯಾಣದುದ್ದಕ್ಕೂ ಕೈಕಾಲು ಸೆಟೆಯುವ ಚಳಿ, ಕಾಡುಗಳಲ್ಲಿ ಗುಡ್ಡಗಳ ನಡುವೆ ನಡೆಯಬೇಕು. ಮತ್ತೆ ಮತ್ತೆ ಶತ್ರುಗಳ ಕೈಗೆ ಸಿಕ್ಕುವ ಅಪಾಯ ಬಾಯ್ದೆರೆದು ಕುಳಿತಿತ್ತು.

ಹಗಲೆಲ್ಲ ಅವಿತುಕೊಂಡು ಸಾಯಂಕಾಲ ಆರು ಗಂಟೆ ಅನಂತರ ಮತ್ತೆ ಪ್ರಯಾಣ. ಅದು ಹತ್ತಿರದ ಯಾವ ವಸ್ತುವೂ ಕಾಣದಂತಹ ಹಿಮ ಮುಚ್ಚಿದ ದೊಡ್ಡ ಕಣಿವೆ ಮಾರ್ಗಗಳಲ್ಲಿ. ಸ್ವಲ್ಪವೂ ಸಪ್ಪಳವಿಲ್ಲದೆ ತುಟಿ ಪಿಟ್ಟೆನ್ನದೆ ನಡೆದರು. ಇವರ ರಕ್ಷಣೆಗೆ ನುರು ಮಂದಿ ಗೆರಿಲ್ಲಾ ಸೈನಿಕರು ಪದಾತಿ ದಳದ ಇಬ್ಬರು ಸೈನಿಕರೂ ಇದ್ದರು.

ಕೆಲಕಡೆ ಹಸಿರು ನೆಲ, ಹಲವೆಡೆ ಹಿಮತುಂಬಿದ ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯ ಡಾ. ಕೊಟ್ನೀಸ್‌ರ ಮನಸ್ಸನ್ನು ಉಲ್ಲಾಸಗೊಳಿಸಿತ್ತು. ಮುಂದೆ ಗುಡ್ಡ ಒಂದನ್ನು ಏರಿ ಮತ್ತೊಂದೆಡೆ ಇಳಿಯುವಾಗ ಜಪಾನಿ ಸೈನ್ಯದ ತುಕಡಿ ಕಾಣಿಸುತ್ತಲೇ ಅಲ್ಲಿಂದ ನುಣುಚಿಕೊಳ್ಳುವುದು ಒಳ್ಳೆಯದು ಎಂದು ತಿಳಿದ ಸೈನ್ಯಾಧಿಕಾರಿ ಕಣಿವೆ ಉದ್ದಕ್ಕೂ ಓಡಿರೆಂದು ವೈದ್ಯರಿಗೆ ಹೇಳಿದರು. ಮುಂಬಯಿಯ ರಸ್ತೆಗಳಲ್ಲಿ ಓಡಿದಂತೆ ನಾನು ಮಾರ್ಗದಲ್ಲಿ ಎಲ್ಲರಿಗೂ ಮುಂಚೆಯೆ ಓಡಿಬಿಟ್ಟೆ” ಎನ್ನುತ್ತಾರೆ ಕೊಟ್ನೀಸ್‌ರವರು. ಈ ಗೆರಿಲ್ಲಾಗಳಿಗೆ ಜಪಾನಿಯರ ಸಂಪರ್ಕ ಸಾಧನಗಳನ್ನೆಲ್ಲಾ ತುಂಡರಿಸುವುದೇ ಕೆಲಸವಾಗಿತ್ತು. ಶತ್ರುಗಳ ಕಡೆಯಿಂದ ಗುಂಡು ತೂರಿಬರುವುದೂ ಇವರಿಗೆ ಕೇಳಿಸುತ್ತಿತ್ತು. ಮೈ ಸೆಟೆಯುವಂಥ ಚಳಿ, ಆಯಾಸ, ಹಸಿವುಗಳಿಂದ ಅವರೆಲ್ಲಾ ಕಂಗಾಲಾಗಿಬಿಟ್ಟಿದ್ದರು. ಸಾಕಷ್ಟು ನಡೆದು ಕೊನೆಗೊಮ್ಮೆ ಸೈನಿಕ ಕಾರ್ಯಾಲಯಕ್ಕೆ ಹೇಗೋ ಬಂದು ಮುಟ್ಟಿದರು.

ಗಡಿ ಪ್ರದೇಶದಲ್ಲಿ

ಡಾಕ್ಟರ್ ಆತುಳ್ ಮತ್ತು ಡಾಕ್ಟರ್ ಕೊಟ್ನೀಸ್‌ರವರಿಗೆ ಅಹಿಂಸಾ ಧರ್ಮದಲ್ಲಿ ಬಹಳ ನಂಬಿಕೆ. ಯುದ್ಧಭೂಮಿಯನ್ನು ತಮ್ಮ ಸೇವಾರಂಗವನ್ನಾಗಿ ಅವರು ಆರಿಸಿಕೊಂಡರು. ಅಲ್ಲಿಗೆ ಹೋಗಲು ಅವರಿಗೆ ಅನುಮತಿಯೂ ಸಿಕ್ಕಿತು. ವೈದ್ಯಕೀಯ ಉಪಚಾರ ಮಾಡುವುದರೊಂದಿಗೆ ಚೀನಾದ ವಿಮೋಚನೆಗಾಗಿಯೂ ದುಡಿಯಲು ಅವರು ಮನಸ್ಸು ಮಾಡಿದ್ದರು. ಹಾಗೆ ಯುದ್ದರಂಗದಲ್ಲಿ ಸಿಗುವ ಅನುಭವ, ವಿಷಯ ಸಂಗ್ರಹಣೆಗಳ ಬಗ್ಗೆ ಅಧ್ಯಯನಕ್ಕೂ ದಾರಿಯಾಗುತ್ತದೆ ಎಂದು ಅವರು ಭಾವಿಸಿದ್ದರು. ೧೯೩೯ರ ನವೆಂಬರ್ ೪ರಂದು ಯೆನನ್ ಬಿಟ್ಟು ಇವರು ಯುದ್ಧ ನಡೆಯುತ್ತಿದ್ದ ಷೆನ್ಸಿಯ ನೈಋತ್ಯದೆಡೆಗೆ ಬಂದರು. ಅಲ್ಲಿಯ ಗಾಯಾಳುಗಳಿಗೆ ಸೇವೆ ಮಾಡುತ್ತಾ ಗೆರಿಲ್ಲಾ ಯುದ್ಧ ನಿಯಮ, ಸ್ವಭಾವ ಮೊದಲಾದವನ್ನು ಅಧ್ಯಯನ ಮಾಡಿ, ಟಿಪ್ಪಣಿಗಳನ್ನು ಬರೆದುಕೊಂಡರು. ಅಲ್ಲಿ ಇವರಿಗೆ ಸಾಕಷ್ಟು ಅನುಭವ ಆಯಿತು. ಕೈಲಿ ಬಂದೂಕು ಹಿಡಿದು ಯುದ್ಧ ಮಾಡದಿದ್ದರೂ ಯುದ್ದದ ರೀತಿ, ನಿರ್ವಹಣೆಗಳನ್ನೆಲ್ಲ ಅಭ್ಯಾಸ ಮಾಡಿದರು.

ಯೋಜನೆ

ಆತುಳರವರಿಗೆ ೫೦ ವರ್ಷ ವಯಸ್ಸು. ಪೆನ್ಸಿಯ ಯುದ್ಧದ ಅನಂತರ ಭಾರತಕ್ಕೆ ಬಂದುಬಿಟ್ಟರು. ಇವರಿಗಿಂತ ಮುಂಚೆಯೇ ಜೋಲ್ಕರ್ ಮತ್ತು ಮುಖರ್ಜಿ ಇಲ್ಲಿಗೆ ಹಿಂತಿರುಗಿಬಿಟ್ಟಿದ್ದರು. ಈಗ ಚೀನಾದಲ್ಲಿ ಉಳಿದವರೆಂದರೆ ಡಾಕ್ಟರ್ ಕೊಟ್ನೀಸ್‌ ಮತ್ತು ಡಾಕ್ಟರ್ ಬಸು ಮಾತ್ರ. ಇಬ್ಬರಿಗೂ ಕೆಲಸದಲ್ಲಿ ಹುಮ್ಮಸ್ಸು ಬಂದಿತ್ತು. ಮನಸ್ಸಿಗೆ ತೋರಿದಂತೆ ಕೆಲಸ ಮಾಡುವುದಕ್ಕಿಂತ ಅದಕ್ಕೆ ಯೋಜನೆ ಹಾಕಿದರೆ ಒಳಿತು ಎಂದುಕೊಂಡ ಕೊಟ್ನೀಸರು ಈ ಸಲಹೆಯನ್ನು ಬಸು ಅವರ ಮುಂದಿಟ್ಟರು. ಅವರ ಯೋಜನೆ ಇದ್ದುದು ರೋಗಿ ಮತ್ತು ಗಾಯಾಳುಗಳಿಗೆ ಕಾಲಕಾಲಕ್ಕೆ, ಸರಿಯಾದ ವೈದ್ಯಕೀಯ ಚಿಕಿತ್ಸೆ ನಡೆಯಬೇಕು, ಎರಡನೆಯದಾಗಿ ರಣರಂಗದಲ್ಲಿನ ಯಾವ ಗಾಯಾಳುವೂ ಔಷಧವಿಲ್ಲದೆ ಪರಿತಪಿಸಬಾರದು ಮತ್ತು ಮೂರನೆಯದಾಗಿ ಯಾವ ಔಷಧ ಸಾಮಗ್ರಿಯೂ ಹಾಳಾಗದಂತೆ ಬಳಸಬೇಕು. ಅವರು ಈ ಪ್ರಕಾರವೇ ನಡೆದರು.

ಕೊನೆಯ ತೊಟ್ಟು ರಕ್ತ ಇರುವವರೆಗೆ

ಯುದ್ಧ ಹದಿಮುರು ದಿನಗಳವರೆಗೆ ನಡೆದಿತ್ತು. ಆ ಅವಧಿಯಲ್ಲಿ ಡಾ. ಕೊಟ್ನೀಸ್‌ರವರು ೮೦೦ ಸೈನಿಕ ಗಾಯಾಳುಗಳಿಗೆ ಚಿಕಿತ್ಸೆ ಮಾಡಿದ್ದರು. ಯಾವ ಕ್ಷಣದಲ್ಲಾದರೂ ರೋಗಿಗೆ ಉಪಚಾರ ಮಾಡಬೇಕಾಗಿದ್ದ ಇವರು ಆ ೧೩ ದಿನಗಳಲ್ಲಿ ೭೨ ಗಂಟೆಗಳಷ್ಟು ಸಹ ನಿದ್ರೆ ಮಾಡಿರಲಿಲ್ಲ. ಇಷ್ಟಾದರೂ ಅವರ ಉತ್ಸಾಹ, ಶ್ರದ್ಧೆ ಒಂದೇ ರೀತಿಯಲ್ಲಿತ್ತು. “ಯೆನನ್‌ನಲ್ಲಿಯ ಏಯ್ತ್ ರೂಟ್ ಆರ್ಮಿ ಯುದ್ದ ಮುಗಿದಿದೆ. ನೀವುಗಳು ಈ ವೇಳೆಗೆ ಆಯಾಸಗೊಂಡಿರಬಹುದು. ಹಿಂತಿರುಗಿ ಬಂದು ಬಿಡಿ ಎಂದು ಮೇಲಿನವರು ಕೊಟ್ನೀಸ್‌ಗೆ ಪತ್ರ ಬರೆದಾಗ ಅವರು, “ನನ್ನ ಬಗ್ಗೆ ನೀವು ಯೋಚಿಸಬೇಡಿ. ಹಿಡಿದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬರುವಂತಿಲ್ಲ. ಮುಂದಿನ ಕೆಲಸ ತೀರ ಅಗತ್ಯವೆಂದು ನನ್ನ ಭಾವನೆ. ನನ್ನ ಮೈಯಲ್ಲಿ ಕೊನೆಯ ತೊಟ್ಟು ರಕ್ತ ಇರುವವರೆಗೂ ಸೈನಿಕರೊಂದಿಗೆ ಸೈನಿಕನಾಗಿ ಹೋರಾಡುತ್ತೇನೆ” ಎಂದು ಉತ್ತರ ಬರೆದರು. ಹೀಗಾಗಿ ಒಬ್ಬರೇ ಯೆನನ್‌ಗೆ ಹಿಂತಿರುಗಿ ಬಂದುಬಿಟ್ಟರು.

ಯುದ್ಧ ರಂಗದಲ್ಲಿ ಸ್ಥಳದಿಂದ ಸ್ಥಳಕ್ಕೆ ಹೋಗಿ ಬರಲು ಒಂದು ಕುದುರೆಯನ್ನು ಕೊಟ್ನೀಸ್‌ ಅವರಿಗೆ ಕೊಟ್ಟಾಗ ಅದನ್ನು ಅವರು ರೋಗಿಗಳನ್ನುಹೊತ್ತು ತರಲು ಬಳಸಿದರು.

ಅವರ ಸೇವೆಯ ಕೊನೆಯ ದಿನವೇ ಅವರ ಬಾಳಿನ ಕೊನೆಯ ದಿನವೂ ಆಯಿತು.

ಡಾಕ್ಟರ್ ಕೊಟ್ನೀಸರು ೧೮೪೧ರಲ್ಲಿ ಉತ್ತರ ಚೀನಾದ ಇಂಟರ್ ನ್ಯಾಷನಲ್ ಪೀಸ್ ಹಾಸ್ಟಿಟಲ್ ಪ್ರಮುಖಾಧಿಕಾರಿಯಾಗಿ ನೇಮಕವಾಗಿದ್ದರು. ಅಲ್ಲದೆ ಬೆಥುನ್ ಆಸ್ಪತ್ರೆಯ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಬೆಥುನ್ ಅವರು ಕೆನಡಾ ದೇಶದವರು.

ಡಾ. ಕೊಟ್ನೀಸ್‌ರಂತೆ ಚೀನಾ ಸೇನೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ ಅಪಾರ ಜನಪ್ರಿಯತೆ ಗಳಿಸಿ ಆ ದೇಶದಲ್ಲೇ ಪ್ರಾಣಾರ್ಪಣೆ ಮಾಡಿದರು. ಅವರ ನೆನಪಿಗಾಗಿ ದೇಶ ಅವರ ಹೆಸರಿನಲ್ಲಿ ಈ ಆಸ್ಪತ್ರೆಯನ್ನು ಕಟ್ಟಿಸಿತ್ತು.

ಸೇವೆ-ದಕ್ಷತೆ

ಊಟ, ತಿಂಡಿ, ನಿದ್ರೆಗಳನ್ನು ಕಡೆಗಾಣಿಸಿ ಈ ಬೆಥುನ್ ಮೆಡಿಕಲ್ ಆಸ್ಪತ್ರೆಯಲ್ಲಿ ಸತತ ಸೇವೆ ಮಾಡಿದರು ಕೊಟ್ನೀಸ್‌ರವರು. ಎರಡು ಕೈಗಳ ತುಂಬ ಕೆಲಸವಿದ್ದರೂ ಬಿಡುವು ಮಾಡಿಕೊಂಡು ಸರ್ಜಿಕಲ್ ವಾರ್ಡುಗಳಿಗೆ ಭೇಟಿಯಿತ್ತು ರೋಗಿಗಳಿಗೆ ನಡೆಸಬಹುದಾದ ಶಸ್ತ್ರಚಿಕಿತ್ಸೆ ಬಗ್ಗೆ ಉಳಿದ ವೈದ್ಯರಿಗೆ ತಿಳಿವಳಿಕೆ ಕೊಡುತ್ತಿದ್ದರು. ದಿನದ ಯಾವ ಕ್ಷಣವೂ ವ್ಯರ್ಥವಾಗದಿದ್ದಾಗ ಅವರಿಗೆ ತುಂಬಾ ಸಂತೋಷವಾಗುತ್ತಿತ್ತು. ದುಡಿದು ದಣಿದು ತಿಂದರೆ ಮಾತ್ರ ಅವರಿಗೆ ಹೊಟ್ಟೆ ತುಂಬುತ್ತಿತ್ತಂದೆ. ಇದನ್ನು ಅವರೇ ಒಂದು ಕಡೆ ಹೇಳಿದ್ದಾರೆ. ಇಷ್ಟು ಕೆಲಸದೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಸ್ತ್ರ ಚಿಕಿತ್ಸಾ ಪ್ರಯೋಗಾಲಯಲದಲ್ಲಿ ಇವರಿಂದ ತರಬೇತಿ. ಅಲ್ಲಿಂದ ಆಪರೇಷನ್ ಥಿಯೇಟರ‍್ಗೆ ಬಂದು ಗಾಯಾಳು ರೋಗಿಗಳಿಗೆ ಶಸ್ತ್ರಚಿಕಿತ್ಸೆ. ಹೀಗೆ ಕೊಟ್ನೀಸ್‌ರವರ ಸೇವೆ ಸತತವಾಗಿತ್ತು. ರೋಗಿಗಳನ್ನು ಸ್ಥಳದಿಂದ ಸ್ಥಳಕ್ಕೆ ಬದಲಾಯಿಸುವ ಕೆಲಸವೂ ಇವರದ್ದೇ ಆಗಿತ್ತು. ವರ್ಷದಲ್ಲಿ ೪೩೦ ಶಸ್ತ್ರಚಿಕಿತ್ಸೆಗಳನ್ನು ಇವರೊಬ್ಬರೇ ಮಾಡಿದ್ದರು. ಇವುಗಳಲ್ಲಿ ೪೫ ಕೈ ಅಥವಾ ಕಾಲನ್ನು ಕತ್ತರಿಸಿ ತೆಗೆಯುವುದು, ೨೦ ಹರ್ನಿಯಾದ ಶಸ್ತ್ರಚಿಕಿತ್ಸೆ, ಮೂವತ್ತೈದು ಕಷ್ಟವಾದ ಶಸ್ತ್ರಚಿಕಿತ್ಸೆಗಳು, ಸೈನ್ಯದ ಆಸ್ಪತ್ರೆಗಳು, ಶಸ್ತ್ರಚಿಕಿತ್ಸೆಗೆ ತಕ್ಕ ಶಸ್ತ್ರಗಳು, ಇತರ ಉಪಕರಣಗಳು ಇರಲಿಲ್ಲ. ಆದರೂ ಐದು ವರ್ಷಗಳಲ್ಲಿ ಒಂದು ಸಾವಿರ ಶಸ್ತ್ರಚಿಕಿತ್ಸೆಗಳನ್ನು ಮಾಡಿದರು. ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಅಭಾವವಿದ್ದರೂ ಸಮಯಕ್ಕೆ ಹೊಸ ದಾರಿಯನ್ನು ಹುಡುಕಿ ಇವರ ಎಲ್ಲೆಲ್ಲೂ ಗೆಲ್ಲುತ್ತಾ ಬಂದರು. “ನಾನು ಮಾಡಿದ್ದು ಏನೂ ಇಲ್ಲ” ಎಂದು ಅವರು ವಿನಯದಿಂದ ಹೇಳುತ್ತಿದ್ದರು. ಆದರೆ ಕೊಟ್ನೀಸ್‌ರವರು ವೈದ್ಯಕೀಯ ವಿಜ್ಞಾನದಲ್ಲಿ ಮಾಡಿದ ಸಂಶೋಧನೆ ಅದ್ಬುತ. ಅನುಭವದ ಮೇಲಿನ ಸಿದ್ಧಾಂತದ ಪ್ರಭಾವದಿಂದ ವೈಜ್ಞಾನಿಕ ಪ್ರಗತಿಯಾಗುತ್ತದೆಯೆಂದರು ಇವರು.

ಮೊದಲು-ಅನಂತರ

ಇವರು ಕೆಲ ಆಸ್ಪತ್ರೆಗಳನ್ನು ಉತ್ತಮ ರೀತಿಯಲ್ಲಿ ಸುಧಾರಿಸುವ ಮೊದಲು ಅವು ಹೇಗಿದ್ದವು ಎಂಬ ಸಂಗತಿಯನ್ನು ಇಬ್ಬರು ಬ್ರಿಟಿಷ್ ಸಮೀಕ್ಷಕರು ಈ ಕೆಳಗಿನ ಮಾತುಗಳಲ್ಲಿ ಹೇಳಿದ್ದಾರೆ.

“ಡಾ. ಕೊಟ್ನೀಸ್‌ ಇಲ್ಲಿಗೆ ಬರುವುದಕ್ಕೆ ಮುಂಚೆ ಇಲ್ಲಿಯ ಔಷಧ ಸಾಮಗ್ರಿಗಳನ್ನು ಎಲ್ಲಿ ಅಂದರೆ ಅಲ್ಲಿ ಹೊಲಸು, ಧೂಳು ತುಂಬಿದ ಸ್ಥಳದಲ್ಲಿ ಇಡಲಾಗುತಿತ್ತು. ಅದಕ್ಕೆ ಒಂದು ರೀತಿ, ಕ್ರಮ, ಪದ್ಧತಿ ಇರಲಿಲ್ಲ. ಯಾವ ಕಾಯಿಲೆಗೆ ಯಾವ ಔಷಧಿ ಕೊಡಬೇಕೆಂದು ಗುರುತಿಸುವುದೇ ಕಷ್ಟವಾಗಿತ್ತು. ಗಾಯಾಳುಗಳನ್ನು ಮಲಗಿಸಿದ್ದು ಹರಕು ಚಾಪೆಗಳ ಮೇಲೆ. ಆಸ್ಪತ್ರೆಗಳ ಗೋಡೆ, ಬಾಗಿಲು ಬಹಳ ಹಳತಾಗಿದ್ದವು. ಮೂಲೆಮೂಲೆಗಳಲ್ಲಿ ಇಟ್ಟಿಗೆ ರಾಶಿಗಳು. ಗಾಯಕ್ಕೆ ತುಂಬುವ ಔಷಧಪುಡಿ ಮತ್ತು ಮಾತ್ರೆಗಳನ್ನು ಬುಟ್ಟೆಗಳಲ್ಲಿ ತುಂಬಿ ಗೋಡೆಗೆ ತೂಗಿಬಿಟ್ಟಿದ್ದರು. ಔಷಧ ತುಂಬಿದ ಸೀಸೆಗಳನ್ನು ಸಹ ಸರಿಯಾಗಿ ಇಡದೆ ಎಲ್ಲವನ್ನೂ ಸೇರಿಸಿ ಒಂದು ಕಡೆ ಗುಡ್ಡೆ ಹಾಕಿದ್ದರು. ಇವನ್ನೆಲ್ಲಾ ಸುಸಜ್ಜಿತವಾಗಿ ಜೋಡಿಸಿ, ಅವುಗಳ ಮೇಲೆ ಚೀಟಿಗಳನ್ನು ಅಂಟಿಸಿ ಬೇರೆ ಬೇರೆಯಾಗಿ ಕೊಟ್ನೀಸ್‌ರವರು ಬೇರ್ಪಡಿಸಿದರು. ಅನಂತರ ಅವನ್ನು ಚಿಕ್ಕ ಚಿಕ್ಕ ಪೆಟ್ಟಿಗೆಗಳಲ್ಲಿ ಜೋಡಿಸಿ ಹೇಸರುಗತ್ತೆಗಳ ಮೇಲೆ ಬೇಕಾದ ಕಡೆ ತಕ್ಷಣ ಒಯ್ಯುವಂತೆ ಏರ್ಪಾಡು ಮಾಡಿದರು. ಯಾವ ಔಷಧ ಎಲ್ಲಿಗೆ ಎಂದು ತಡಕಾಡುವ ಕಷ್ಟ ಯಾರಿಗೂ ಇರುತ್ತಿರಲಿಲ್ಲ.”

ಶಸ್ತ್ರಚಿಕಿತ್ಸೆ ಬಗ್ಗೆ ಇವರು ಒಂದು ಬೃಹತ್ ಗ್ರಂಥವನ್ನು ಬರೆದರು. ಅದನ್ನು ಚೀನೀಯರ ಭಾಷೆಗೂ ಭಾಷಾಂತರ ಮಾಡುವಂತೆ ಚೀನಾದೇಶದವರು ಅವರನ್ನು ಕೇಳಿದರು. ವರ್ಷವಿಡೀ ಕೆಲಸ ಮಾಡಿ ಕೊಟ್ನೀಸ್ ಅದನ್ನು ಮುಗಿಸಿದರು.

ತಾವು ಎಲ್ಲಿದ್ದರೂ ಆ ಪರಿಸರಕ್ಕೆ ಹೊಂದಿಕೊಳ್ಳುವುದು ಕೊಟ್ನೀಸ್‌ರವರ ಜಾಯಮಾನ. ನಾವು ಎಲ್ಲೇ ಇರಲಿ ಅಲ್ಲಿಯ ಜನ ನಮ್ಮ ಜನರಂತೆ ಎಂದು ಅವರ ಭಾವನೆ. ಅವರ ಭಾಷೆಯಲ್ಲೂ ಪ್ರೇಮ ಇವರಿಗೆ. ಚೀನೀಯರ ಭಾಷೆ ಕಲಿತು ಆ ಭಾಷೆಯಲ್ಲೇ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಹೇಳಿದರು. ಶಸ್ತ್ರಚಿಕಿತ್ಸೆ ಎಂಬ ವಿಷಯದ ಮೇಲೆ ಇಂಗ್ಲಿಷ್ ಮತ್ತು ಚೀನೀ ಎರಡು ಭಾಷೆಗಳಲ್ಲಿಯೂ ಗ್ರಂಥ ರಚಿಸಿದರು.

ವಿವಾಹ

೧೯೪೧ರ ನವೆಂಬರ್ ೨೪ ರಂದು ಕೊಟ್ನೀಸರು ಕ್ಯೂ ಚಿಂಗ್ ಲಾನ್ ಎಂಬ ಚೀನೀ ಹುಡುಗಿಯನ್ನು ಮದುವೆಯಾದರು. ಹುಡುಗಿ ಒಳ್ಳೆಯ ಸಂಸ್ಕೃತಿಯಲ್ಲಿ ಬೆಳೆದವಳು. ಚೆನ್ನಾಗಿ ಓದಿದವಳು. ಕೊಟ್ನೀಸ್‌ರವರು ಪ್ರಿನ್ಸಿಪಾಲರಾಗಿದ್ದ ಮೆಡಿಕಲ್ ಕಾಲೇಜಿನಲ್ಲಿ ಈಕೆ ಒಬ್ಬ ನರ್ಸ್‌ ಶಿಕ್ಷಕಿ. ಜಪಾನಿಯರು ಚೀನದ ವಿರುದ್ಧ ಯುದ್ಧ ಮಾಡಿದಾಗ ಪೀಕಿಂಗ್‌ನ ಶ್ರೀಮಂತ ಕುಟುಂಬಕ್ಕೆ ಸೇರಿದ ಇವಳು ಸಾವಿರಾರು ಜನರಂತೆ ಕಂಗೆಟ್ಟು ಇಲ್ಲಿಗೆ ಬರಬೇಕಾಯಿತು. ಜಪಾನಿಯರ ಹಿಂಸೆಯಿಂದ ತಪ್ಪಿಸಿಕೊಳ್ಳಲು ನೂರಾರು ಮೈಲಿಗಳ ನೆಲ ತುಳಿದು ಯೆನನ್‌ಗೆ ಬಂದು “ಏಯ್ತ್ ರೂಟ್ ಆರ್ಮಿ” ಸೇರಿದಳು.

ಚೀನಿಯರಲ್ಲಿ ಚೀನಿಯರಾಗಿ ಬೆರೆತ ಕೊಟ್ನೀಸ್‌ರವರು ತಮ್ಮ ತಾಯಿನಾಡಿನ ಮೇಲಿನ ಪ್ರೇಮವನ್ನು ಮಾತ್ರ ಮರೆಯಲಿಲ್ಲ. ೧೯೮೨ರಲ್ಲಿ ಭಾರತ ಬ್ರಿಟಿಷರ ದಬ್ಬಾಳಿಕೆಯಿಂದ ತಲ್ಲಣಿಸಿಹೋಗಿತ್ತು. ತಮ್ಮ ಜೀವ ಒತ್ತೆ ಇಟ್ಟು ಚೀನಿಯರಿಗೆ ಸೇವೆ ಮಾಡುತ್ತಾ ಕೊಟ್ನೀಸರು ಭಾರತವನ್ನು ಕುರಿತು ಬಹಳ ಯೋಚಿಸುತ್ತಿದ್ದರು. “ನಾವು ಹೆಚ್ಚಿನ ದಿನವನ್ನು ಚೀನಾದಲ್ಲಿ ಕಳೆಯುವಂತಿಲ್ಲ, ಭಾರತೀಯ ಸೈನ್ಯದ ಗಾಯಾಳುಗಳಿಗೆ ಸೇವೆಮಾಡುವ ಹೊಣೆ ಈಗ ನಮ್ಮದಾಗಿದೆ. ಇದನ್ನು ನೀವು ಒಪ್ಪುವಿರಲ್ಲವೆ?” ಎಂದು ಇವರು ಡಾ. ಬಸುರವರಿಗೆ ಅದೇ ವರ್ಷದ ಜೂನ್‌ ತಿಂಗಳಲ್ಲಿ ಬರೆದರು. ಆದರೆ ಅವರು ತಮ್ಮ ಹೊಣೆಗಾರಿಕೆ ತಪ್ಪಿಸಿ, ನಿಂತ ಕಾಲಲ್ಲೇ ಹೇಗೆ ಹಿಂತಿರುಗಿ ಬಂದಾರು?

ಬೆಳ್ಳಾವೆ ವೆಂಕಟನಾರಣಪ್ಪ

೧೯೪೨ರ ಆಗಸ್ಟ್ ೨೩ರಂದು ಕ್ಯೂ ಚಿಂಗ್ ಲಾನ್ ಗಂಡುಮಗುವನ್ನು ಹಡೆದಳು. ಮಗುವಿಗೆ ಇಂಗ್-ಹ್ವಾ ಎಂದು ಹೀಗೆಂದರೆ “ಭಾರತ-ಚೀನಾ” ಎಂದು.

ಇದು ಇವರ ಬಾಳಿನ ರೀತಿ

ಇತ್ತ ಜಪಾನಿಗೂ ಚಿನಾಕ್ಕೂ ಯುದ್ಧ ನಡೆಯುತ್ತಲೇ ಇತ್ತು. ಜಪಾನಿ ಸೈನ್ಯ ಗಾತ್ರದಲ್ಲಿ ಎಷ್ಟೇ ದೊಡ್ಡದಿದ್ದರೂ ಚೀನೀಯರ ಯುದ್ಧ ಪದ್ದತಿಯಿಂದ ಅದು ನಿತ್ರಾಣವಾಗುತ್ತಿತ್ತು. ಇಲ್ಲದಿದ್ದರೆ ಅದು ಇಡೀ ಉತ್ತರ ಚೀನಾವನ್ನು ಕ್ಷಣಮಾತ್ರದಲ್ಲಿ ನುಂಗಿ ನೀರು ಕುಡಿದುಬಿಡುತ್ತಿತ್ತು. ಕೆಲ ಮುಖ್ಯ ನಗರಗಳು, ರೈಲು ಮಾರ್ಗ ಮತ್ತು ಇತರ ಮಾರ್ಗಗಳಷ್ಟನ್ನೇ ಅದು ಆಕ್ರಮಿಸಿಕೊಂಡಿತ್ತು. ಉಳಿದ ಪ್ರದೇಶವೆಲ್ಲ “ಏಯ್ತ ರೂಟ್ ಆರ್ಮಿ”ಯ ಮುಗಿಮುಷ್ಠಿಯಲ್ಲೇ ಇತ್ತು. ಹೋರಾಟ ಭೀಕರವಾಗಿದ್ದ ಕಾಲದಲ್ಲಿಯೂ ಕೊಟ್ನೀಸ್‌ರವರು ಗಾಯಾಳುಗಳ ಸೇವೆಗೆ ನಿಂತರು. ಐವತ್ತು ಸಾವಿರ ಸೈನಿಕರ ವೈದ್ಯ ಚಿಕಿತ್ಸೆಗೆ ಇದ್ದ ವೈದ್ಯರು ಕೆಲವರೇ. ಕೊಟ್ನೀಸ್‌ರವರ ಮುಂಜಾಗ್ರತೆ ಕ್ರಮಗಳಿಂದ ಸಾವು-ನೋವುಗಳೂ ಕಡಿಮೆಯಾಗುತ್ತಿದ್ದವು.

ಗೆರಿಲ್ಲಾ ಸೇನೆಯೊಂದಿಗೆ ಬೆಟ್ಟ-ಗುಡ್ಡಗಳಲ್ಲಿ ತಿರುಗುವಾಗ ಒಮ್ಮೆ ಬೆಟ್ಟ ಇಳಿಯುವಾಗ ಇಳಿಜಾರಿನಲ್ಲಿ ಕೊಟ್ನೀಸ್‌ರವರು ಬಿದ್ದುಬಿಟ್ಟರು. ತಲೆಯಲ್ಲಿ ಆಳವಾದ ಗಾಯವಾಗಿ ಕೆಲ ದಿನಗಳವರೆಗೆ ಜ್ಞಾನ ತಪ್ಪಿ ಮಲಗಿದರು. ಚೇತರಿಸಿಕೊಳ್ಳುತ್ತಿದ್ದಂತೆ ಕೆಲಸಕ್ಕೆ ಮತ್ತೆ ಹಾಜರಾಗುತ್ತಿದ್ದರು. ಜ್ವರ, ನಡುಕ ಬಂದಾಗಲೆಲ್ಲಾ ಕ್ವಿನೈನ್ ಮಾತ್ರೆ ನುಂಗುತ್ತಿದ್ದರು. ಕಾಯಿಲೆ ಹೆಚ್ಚುತ್ತಲೇ ಇತ್ತು. ಇಷ್ಟು ನಿಶ್ಯಕ್ತರಾಗಿದ್ದರೂ ನಿಂತಲ್ಲಿ ನಿಲ್ಲದೆ, ಕ್ಷಣಕಾಲ ಮಿಶ್ರಮಿಸಲು ಅವಕಾಶವಿಲ್ಲದಂತೆ ಶತ್ರುಸೇನೆಯ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಗಂಟು-ಮೂಟೆಗಳನ್ನು ಬೆನ್ನ ಮೇಲೆ ಹೇರಿಕೊಂಡು ಚೀನಾ ಸೇನೆಯೊಂದಿಗೆ ಓಡಿ ಬೆಟ್ಟ ಗುಡ್ಡಗಳಲ್ಲಿ ಅವಿತುಕೊಳ್ಳಬೇಕಾಗಿತ್ತು ಇವರು. ಸುತ್ತ ಹತ್ತು ಮೈಲಿ ದೂರ ಜಪಾನಿ ಸೈನ್ಯಗಳು. ಹಗಲ್ಲೆಲ್ಲಾ ಹೀಗೆ ಅವಿತುಕೊಂಡು ರಾತ್ರಿ ಹೊತ್ತು ಯುದ್ಧಾಚರಣೆಗೆ ಮೊದಲಿಡುತ್ತಿದ್ದರು. ಹೀಗೆ ಎರಡು ತಿಂಗಳಿಗೂ ಹೆಚ್ಚು ಕಾಲ ವಿರಾಮವಿಲ್ಲದೆ ಹಸಿವು, ನಿದ್ರೆಗಳನ್ನು ಮರೆತು ದುಡಿದರು. ಸಂಗ್ರಹಿಸಿ ಜೊತೆಗೆ ತಂದಿದ್ದ ಔಷಧ ಸಾಮಗ್ರಿಗಳೆಲ್ಲಾ ಮುಗಿಯುತ್ತಾ ಬಂದವು. ಔಷಧವಿಲ್ಲದಿದ್ದರೆ ಇದುವರೆಗೆ ಮಾಡಿದ ತ್ಯಾಗವೆಲ್ಲ ವ್ಯರ್ಥ. ಆಗ ಕೊಟ್ನೀಸ್‌ರವರು ಔಷಧ ಸಾಮಗ್ರಿಗಳೆಲ್ಲಾ ತಡಕಿದಾಗ ಅಲ್ಲಿ ಉಳಿದಿದ್ದುದು ಕೇವಲ ಚೀನಾ ಕ್ವಿನೈನ್ ಮಾತ್ರೆಗಳು. ಸ್ವಲ್ಪಹೊತ್ತು ಯೋಚಿಸಿ, ಒಂದು ಉಪಾಯ ಮಾಡಿದರು. ಅಲ್ಪಸ್ವಲ್ಪ ಉಳಿದ ಇತರ ಔಷಧದೊಂದಿಗೆ ಅವನ್ನು ಮಿಶ್ರಮಾಡಿ ಹೊಸ ಬಗೆಯ ಔಷಧ ತಯಾರಿಸಿದರು. ಕೊನೆಗೂ ಅದು ಕೆಲಸಕ್ಕೆ ಬಂತು. ಇದರಿಂದ ಶೇಕಡ ೬೦ ರಷ್ಟು ಮಲೇರಿಯಾ ರೋಗಿಗಳನ್ನು ಸಾವಿನಿಂದ ಪಾರುಮಾಡಿದರು. ಇದರಿಂದಾಗಿ ಚೀನಿಯರಿಗೆ ಇವರು “ಬ್ಲಾಕ್‌ಮಮ್ಮಾ” (ಅಮ್ಮಾ) ಆದರು.

ತ್ಯಾಗಮೂರ್ತಿ ಇನ್ನಿಲ್ಲ

೧೯೪೨ರ ಡಿಸೆಂಬರ್ ೯ಕ್ಕೆ ಡಾ.ಕೊಟ್ನೀಸ್‌ರವರು ಚೀನಾ ಸೇನೆಯಲ್ಲಿ ಸೇವೆ ಮಾಡುತ್ತಾ ನಾಲ್ಕು ವರ್ಷಗಳಾಗಿದ್ದವು. ಆ ವೇಳೆಗೆ ಇವರ ದೇಹ ನೆಪಕ್ಕೆ ಮಾತ್ರ ಇತ್ತು. ಪೂರ್ಣ ಸೊರಗಿಹೋಗಿದ್ದರು. ಎಂತಹ ಕಷ್ಟ ಕಾರ್ಪಣ್ಯ, ಅನಾರೋಗ್ಯಕ್ಕೂ ಬೆದರದೆ ಸತತ ಸೇವೆ ಸಲ್ಲಿಸಿದ್ದರು. ಕ್ಯುಯನ್ ಎಂಬ ಹಳ್ಳಿಯ ಕತ್ತಲು ತುಂಬಿದ ಗುಡಿಸಲಿನಲ್ಲಿ ಉಳಿದಿದ್ದಾಗ ಮತ್ತೊಮ್ಮೆ ಇವರು ಪ್ರಜ್ಞೆ ತಪ್ಪಿ ಮಲಗಿದರು. ಹಾಗೆ ಮಲಗಿದವರು ಮತ್ತೆ ಏಳಲೇ ಇಲ್ಲ. ಅಂದೇ ಬೆಳಗಿನ ಜಾವ ಐದು ಗಂಟೆಗೆ ಕಣ್ಣು ಮುಚ್ಚಿದರು. ಮಲೇರಿಯಾದಿಂದ ತೀರಿಕೊಂಡಾಗ ಕೊಟ್ನೀಸ್‌ರಿಗೆ ಮೂವತ್ತೆರಡೇ ವರ್ಷ.

ಅಂತರರಾಷ್ಟ್ರೀಯ ಶಾಂತಿ ಆಸ್ಪತ್ರೆಯ ಒಳ ಅಂಗಳದಲ್ಲಿ ಡಾಕ್ಟರ್ ಬೆಥುನ್‌ರವರ ಗೋರಿಯ ಸನಿಹದಲ್ಲೇ ಇವರ ದೇಹವನ್ನು ಮಣ್ಣು ಮಾಡಲಾಯಿತು. ಅನಂತರ ೧೯೪೭ರಲ್ಲಿ ಎರಡು ದೇಹಗಳನ್ನೂ ಸ್ಥಳಾಂತರಿಸಿ ಷಿಚಿಯ ಟ್ವಾಂಗ್‌ನಲ್ಲಿ ತಂದು ಅಲ್ಲಿ ಸಮಾಧಿ ಮಾಡಲಾಯಿತು. ಅದು ರಾಷ್ಟ್ರೀಯ ಹುತಾತ್ಮರನ್ನು ಮಣ್ಣು ಮಾಡುವ ಸ್ಥಳ. ಇಲ್ಲಿಯ ಪ್ರಾಚ್ಯವಸ್ತು ಪ್ರದರ್ಶನಾಲಯದಲ್ಲಿ ಡಾ.ಕೊಟ್ನೀಸ್‌ರ ದಾಖಲಾತಿ ಇದೆ.

ಚೀನಾ-ಭಾರತಗಳೆರಡೂ ಒಬ್ಬ ಮಹಾತ್ಯಾಗಜೀವಿಯ ಸಾವಿಗಾಗಿ ಕಣ್ಣೀರು ಕರೆದವು.

ಕೊಟ್ನೀಸ್‌ರು ತೀರಿಕೊಂಡ ನಂತರ ಅವರ ಹೆಂಡತಿ ಕ್ಯೂಚಿಂಗ್ ಲಾನ್ ಮತ್ತು ಮಗು ಇಂಗ್‌-ಹ್ವಾ ಮಿಲಿಟರಿ ಬಿಡಾರ ಬಿಟ್ಟುಬಿಡಬೇಕಾಯಿತು. ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಹೊರಟ ತಾಯಿ ಬಹಳ ತೊಂದರೆಯನ್ನು ಅನುಭವಿಸಿದಳು. ಈಕೆಯ ಆರೋಗ್ಯವೂ ಸರಿಯಿರಲಿಲ್ಲ. ಮಗುವಿಗೆ ಇತ್ತ ತಾಯಿಯ ಹಾಲೂ ಇಲ್ಲ; ಅತ್ತ ಹಸು, ಮೇಕೆ ಯಾವುದರ ಹಾಲೂ ಸಿಗುವಂತಿರಲಿಲ್ಲ. ಬಳಸು ದಾರಿಯಲ್ಲಿ ನಡೆದು ಕೊನೆಗೆ ಐದು ತಿಂಗಳ ನಂತರ ಯೆನನ್ ಬಂದು ಸೇರಿದಳು. ಈ ಐದು ತಿಂಗಳೂ ಕೂಸು ಆಮಶಂಕೆಯಿಂದ ಪರಿತಪಿಸಿ ಸೊರಗಿ ಹೋಗಿತ್ತು. ಯೆನನ್‌ನಲ್ಲಿ ತಾಯಿ-ಮಗು ಇಬ್ಬರಿಗೂ ಆಶ್ರಯ ಸಿಕ್ಕಿತು. ಇನ್ನೇನು ತಾಯಿ ಮಗುವಿನ ಆಸೆ ಬಿಟ್ಟಂತೆಯೇ ಎಂದು ತಿಳಿದಿದ್ದಳು. ಸಾವಿನ ಅಂಚಿನಲ್ಲಿದ್ದ ಅವರು ಬದುಕಿ ಉಳಿದರು. ೧೯೫೪ರಲ್ಲಿ ತಾಯಿ-ಮಗ ಇಬ್ಬರೂ ಭಾರತಕ್ಕೆ ಬಂದಿದ್ದರು. ಮಗ ಇಂಗ್‌-ಹ್ವಾ ಬೆಳೆದು ವೈದ್ಯ ವಿಜ್ಞಾನ ತರಗತಿ ಸೇರಿದ. ೧೯೬೭ರಲ್ಲಿ ವೈದ್ಯಕೀಯ ಪರೀಕ್ಷೆಗೆ ಓದುತ್ತಿದ್ದಾಗಲೇ ಇಂಗ್‌-ಹ್ವಾ ಅಕಾಲ ಮರಣಕ್ಕೆ ತುತ್ತಾದ. ಡಾ.ಕೊಟ್ನೀಸ್‌ರ ಪತ್ನಿ ಕ್ಯೂ ಚಿಂಗ್ ಲಾನ್ ಈಗ ಚೀನಾದಲ್ಲೇ ಇದ್ದಾರೆ.

ಡಾ.ಕೊಟ್ನೀಸ್‌ರವರು ಹುತಾತ್ಮರಾಗಿ ಇಂದಿಗೆ ಅರವತ್ತು ಮೂರು ವರ್ಷಗಳಾಗಿದ್ದರೂ ಅವರ ಸವಿನೆನಪು ಚೀನಾದಲ್ಲಿ ಅಚ್ಚಳಿಯದೆ ಇಂದಿಗೂ ಹಸಿರಾಗೇ ಇದೆ.

ಉತ್ತರ ಚೀನಾದ ಶಿಹ್ಚಿಯಾಂಚು ವಂಗ್ ನಗರದ ಕೇಂದ್ರ ಭಾಗದಲ್ಲಿ ರಾಷ್ಟ್ರೀಯ ಹುತಾತ್ಮರ ಸಮಾಧಿಗಳಿರುವ ಕಡೆ ಡಾ. ಕೊಟ್ನೀಸ್‌ರ ಸಮಾಧಿಯನ್ನು ಎದ್ದುಕಾಣುವ ಹಾಗೆ ನಿರ್ಮಿಸಲಾಗಿದೆ. ದಿನಂಪ್ರತಿ ನೂರಾರು ಜನರು ಇಲ್ಲಿಗೆ ದರ್ಶನಕ್ಕಾಗಿ ಬರುತ್ತಿರುತ್ತಾರೆ. ಇವರ ಸಮಾಧಿಯ ಎರಡೂ ಕಡೆಗಳಲ್ಲೂ ದೊಡ್ಡ ಷೋ ಕೇಸುಗಳಲ್ಲಿ ಡಾ. ಕೊಟ್ನೀಸ್‌ರ ಚೀನಾದಲ್ಲಿನ ಚಟುವಟಿಕೆಗಳ ಬಗ್ಗೆ ವಿವರ ಇರುವ ಚಿತ್ರಾವಳಿಗಳನ್ನು ಪ್ರದರ್ಶಿಸಲಾಗಿದೆ. ಜೂನಿಯರ್ ಶಾಲೆಯ ಮಕ್ಕಳ ತರಗತಿಗಳಲ್ಲಿ ಡಾಕ್ಟರ್ ದ್ವಾರಕನಾಥ ಕೊಟ್ನೀಸ್ ಮತ್ತು ಡಾಕ್ಟರ್ ನಾರ‍್ಮನ್ ಬೆಥುನ್‌ರವರ ವಿಚಾರದಲ್ಲಿ ಇಂದಿಗೂ ಪಾಠ ಹೇಳಲಾಗುತ್ತಿದೆ.

ಡಾಕ್ಟರ್ ಕೊಟ್ನೀಸ್ ಆದರ್ಶ ವೈದ್ಯರಾಗಿದ್ದರು. ಪ್ರತಿ ರೋಗಿಯನ್ನೂ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ತನಗೆ ಔಷಧ ಸಿಗಲಿಲ್ಲವೆಂದು ಕೊರಗಿದ ರೋಗಿ ಒಬ್ಬನೂ ಇರಲಿಲ್ಲ. ಇವರ ಆತ್ಮೀಯ, ಸಹೃದಯ ಮಾತುಗಳಿಂದಲೇ ರೋಗಿಗಳಿಗೆ ಸಮಾಧಾನ ಸಿಗುತ್ತಿತ್ತು. ಉಳಿದವರಂತೆ ತೀರ ಸಾಧಾರಣ ರೀತಿಯಲ್ಲಿ ಉಂಡುಟ್ಟರು, ಪೌಷ್ಠಿಕ ಆಹಾರ, ಬೆಚ್ಚನೆಯ ಉಣ್ಣೆ ಬಟ್ಟೆಗಳನ್ನು ಸೇನಾಧಿಕಾರಿಗಳು ಬಲವಂತವಾಗಿ ಕೊಟ್ಟರೂ ಇವರ ಒಳ್ಳೆಯ ಮಾತಿನಲ್ಲೇ ಬೇಡವೆನ್ನುತ್ತಿದ್ದರು. ಇವರಿಗಾಗಿ ಬರುತ್ತಿದ್ದ ಹಣ್ಣುಹಂಪಲುಗಳನ್ನು ತಾವೇ ರೋಗಿಗಳಿಗೆ ಹಂಚುತ್ತಿದ್ದರು. ಕೀ ಕುಂಗ್ ಎಂಬ ಹಳ್ಳಿಯ ಆಸ್ಪತ್ರೆಯೊಂದಕ್ಕೆ ಇವರು ಮೇಲಧಿಕಾರಿಯಾಗಿದ್ದಾಗ ಅಲ್ಲಿ ಶತ್ರುಸೇನೆಯ ಕಾಟ ಬಹಳವಾಗಿತ್ತು. ಅಲ್ಲಿಯ ಜನತೆಯೂ ಸಹ ಪಡಿತರ ಸರಿಯಾಗಿ ಸಿಗದೆ ಒಂದು ತರಹದ ಸೊಪ್ಪನ್ನು ತಿಂದು ಕಾಲ ಕಳೆದರು. ಆಗ ಸೇನೆಯ ಮುಖ್ಯಾಧಿಕಾರಿ ಒಂದು ತಟ್ಟೆಯಲ್ಲಿ ಮೊಟ್ಟೆಯಿಟ್ಟು ಅದರ ಮೇಲೆ ಆ ಜನ ತಿನ್ನುತ್ತಿದ್ದ ಸೊಪ್ಪನ್ನು ಮುಚ್ಚಿ ಡಾಕ್ಟರ್ ಕೊಟ್ನೀಸ್‌ಗೆ ಕೊಟ್ಟರು. ಅವರಿಗೆ ಇದರ ಸುಳಿವು ಗೊತ್ತಾದಾಗ ಉಳಿದವರಿಗಿಲ್ಲದ ಇಂತಹ ತಿಂಡಿ ನನಗೂ ಬೇಡ ಎಂದು ಅದನ್ನು ಮುಟ್ಟಲೇ ಇಲ್ಲ. ಸಂಖ್ಯೆಯಲ್ಲೂ ಚಳಿಯಲ್ಲೂ ಕೆಳದರ್ಜೆ ಸೈನಿಕನಂತೆ ತುಂಡನ್ನೇ ಹೊದ್ದು ಮಲಗಿದರು.

ಡಾಕ್ಟರ್ ಕೊಟ್ನೀಸ್ ವಾಸವಿದ್ದ ಮನೆಯ ಮುದುಕಿ ಧಾನ್ಯ ಬೀಸುವಾಗ ಇವರೂ ಆಕೆಗೆ ಸಹಾಯ ಮಾಡುತ್ತಿದ್ದರಂತೆ.

ಆರದಿರುವ ನೆನಪು

ಚೀನಾದ ಅಧ್ಯಕ್ಷ ಮಾವೋತ್ಸೆ ತುಂಗ್‌ರವರು ಕೊಟ್ನೀಸ್‌ರ ಬಗ್ಗೆ,

“ಜಪಾನಿಯರು ಚೀನಾ ದೇಶದ ಮೇಲೆ ಆಕ್ರಮಣ ನಡೆಸಿದ ಸಮಯದಲ್ಲಿ ನಾವು ತುಂಬಾ ಕಷ್ಟದಲ್ಲಿದ್ದೆವು. ಇಂಥ ಕ್ರೂರವಾದ ದಿನಗಳಲ್ಲಿ ನಮಗೆ ವೈದ್ಯಕೀಯ ಉಪಚಾರ ಮಾಡಬಲ್ಲಂತಹ ಸಹಾಯ ಅಗತ್ಯವಿತ್ತು. ನಮ್ಮ ಎಣಿಕೆಗೂ ಮೀರಿ ಆ ಸಹಾಯ ಸೇವೆ ಡಾಕ್ಟರ್ ಕೊಟ್ನೀಸ್‌ರವರಿಂದ ನಮಗಾಗಿದೆ. ಭಾರತದಂತಹ ದೂರದೇಶದಿಂದ ಇಲ್ಲಿಗೆ ಬಂದು ನಮ್ಮ ಕಷ್ಟ-ಕಾರ್ಪಣ್ಯಗಳಲ್ಲಿ ತಾವೂ ಒಂದಾಗಿ ನಮ್ಮ ನಾಡಿಗಾಗಿ ಅಪಾರ ತ್ಯಾಗ ಮಾಡಿದ ಕೊಟ್ನೀಸ್‌ರವರು ಮಹಾ ಮಾನವತಾವಾದಿ. ಅವರ ಕಾರ್ಯಶ್ರದ್ಧೆ, ಅನುಕಂಪ, ತಾತ್ತ್ವಿಕ ಧೈರ್ಯ, ಸ್ಥೈರ್ಯ ಲಕ್ಷಾಂತರ ಚೀನೀ ಸೈನಿಕರ ಜೀವಗಳನ್ನು ಉಳಿಸಿವೆ. ಅಲ್ಲದೆ ಚೀನಾದೇಶ ಅವರಿಂದಾಗಿ ಜಯಗಳಿಸಿದೆ. ಕೊಟ್ನೀಸ್‌ರವರು ಕ್ರಾಂತಿಕಾರಿ. ಚೀನಾದೇಶ ಬದುಕಿರುವವರೆಗೆ ಆ ಪುಣ್ಯಾತ್ಮನ ಸ್ಮರಣೆ ಮಾಡುತ್ತಿರುತ್ತದೆ” ಎಂದು ಬರೆದರು.