೧೯೩೨ರಲ್ಲಿ ಜನಿಸಿದ ಶ್ರೀಮತಿ ದ್ವಾರಕಿ ಕೃಷ್ಣಸ್ವಾಮಿ ಮೂಲತಃ ಗಾಯಕಿ. ಚೆನ್ನಮ್ಮ ರಾಜಶ್ರೀ ದಂಪತಿಗಳು ಮತ್ತು ಎಂ.ಎಸ್. ಸೆಲ್ವಪಿಳ್ಳೈ ಅಯ್ಯಂಗಾರ್ ಅವರಲ್ಲಿ ಕರ್ನಾಟಕ ಸಂಗೀತದಲ್ಲಿ ಪ್ರಬುದ್ಧ ಶಿಕ್ಷಣ ಪಡೆದಿದ್ದಾರೆ. ೧೯೭೮ರಲ್ಲಿ ಶಸ್ತ್ರ ಚಿಕಿತ್ಸೆಯೊಂದರಿಂದ ಹಾಡಲು ಸಾಧ್ಯವಾಗದೆ ಹೋದಾಗ ಧೃತಿಗೆಡದೆ ವಿದ್ವಾನ್ ಎಂ.ಎಸ್. ಶ್ರೀನಿವಾಸಮೂರ್ತಿ ಅವರಲ್ಲಿ ಕೊಳಲು ಅಭ್ಯಾಸ ಮಾಡಿ, ಗಾಯನದಲ್ಲಿ ಕಳೆದುಕೊಂಡದ್ದನ್ನು ವಾದನದಲ್ಲಿ ಪಡೆಯಲು ಪ್ರಯತ್ನಿಸಿ ಸಾಫಲ್ಯವನ್ನು ಕಂಡವರು.

ನಾಡಿನ ಹಿರಿಯ ನೃತ್ಯ ಕಲಾವಿದರುಗಳಾದ ವೈಜಯಂತಿ ಮಾಲಾಬಾಲಿ, ವಾಣಿ ಗಣಪತಿ, ಉಷಾ ದಾತಾರ್, ಪ್ರತಿಭಾ ಪ್ರಹ್ಲಾದ್, ಪದ್ಮಿನಿ ರವಿ, ಭಾನುಮತಿ ಮುಂತಾದ ಹಿರಿಯ ಕಲಾವಿದರುಗಳಿಗೆ ಮತ್ತು ರಾಧಾ ಶ್ರೀಧರ್, ನರ್ಮದಾ ಮುಂತಾದ ಗುರುಗಳ ಶಿಷ್ಯರುಗಳಿಗೆ ನಿರಂತರವಾಗಿ ದ್ವಾರಕಿ ಅವರು ತಮ್ಮ ಕೊಳಲು ವಾದನದ ಸಹಕಾರ ನೀಡುತ್ತಾ ಬಂದಿದ್ದಾರೆ.

ಶ್ರೀ ಜಿ.ಪಿ. ರಾಜರತ್ನಂ ಅವರ ಬಳಿ ಸಾಹಿತ್ಯಾಭ್ಯಾಸ ಮಾಡಿರುವ ಶ್ರೀಮತಿ ದ್ವಾರಕಿ ಅದರ ಫಲವಾಗಿ ನೃತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಹಲವು ಕೃತಿಗಳನ್ನೂ ನೀಡಿದ್ದಾರೆ. ಹೆಳವನಕಟ್ಟೆ ಗಿರಿಯಮ್ಮ, ದಾಸವರೇಣ್ಯರು ಕಂಡ ಕೃಷ್ಣ ಶಿವರಾತ್ರಿಯ ಶಿವನ ಪರಿನೋಡಾ, ಕರ್ನಾಟಕದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ಅಚ್ಚಮ್ಮಣ್ಣಿಯವರ ಶೃಂಗೇರಿ ಶಾರದೆ, ನಾದಯೋಗಿ ಮುತ್ತುಸ್ವಾಮಿ ದೀಕ್ಷಿತರು ಇವೆಲ್ಲಾ ಆಕಾಶವಾಣಿಗಾಗಿ ದ್ವಾರಕಿಯವರ ರಚಿಸಿ ಸಂಗೀತ ಸಂಯೋಜಿಸಿರುವ ರೂಪಕಗಳು. ಅಲ್ಲದೆ ಹಲವು ನೃತ್ಯರೂಪಕಗಳು, ಪದವರ್ಣಗಳು, ಕೌತ್ವಂತಗಳು, ಜತಿಸ್ವರಗಳು, ತಿಲ್ಲಾನಗಳು ಇವರ ಲೇಖನಿಯಿಂದ ಮೂಡಿಬಂದು ರಸಿಕರ, ಕಲಾವಿದರ, ವಿರ್ಮಕರ ಮೆಚ್ಚುಗೆ ಪಡೆದಿವೆ.

ಸಂಗೀತ ನೃತ್ಯಕ್ಕೆ ಸಂಬಂಧಪಟ್ಟ ಹಲವು ಧ್ವನಿ ಸುರುಳಿಗಳನ್ನು ಹೊರತಂದಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರ ನೃತ್ಯಕ್ಕೆ ಕನ್ನಡ ಕೃತಿಗಳು ಎಂಬ ಕೃತಿಯನ್ನು ಹೊರತಂದಿದೆ. ೧೯೯೮ರಲ್ಲಿ ಬೆಂಗಳೂರು ಗಾಯನ ಸಮಾಜ ತನ್ನ ಪ್ರತಿಷ್ಠಿತ ಸಂಗೀತ ಸಮ್ಮೇಳನದಲ್ಲಿ ದ್ವಾರಕಿಯವರನ್ನು ವರ್ಷದ ಕಲಾವಿದೆಯೆಂದು ಗುರುತಿಸಿ ಸನ್ಮಾನಿಸಿದೆ. ಜೊತೆಗೆ ಹಲವು ಸಂಘ-ಸಂಸ್ಥೆಗಳಿಂದ ದ್ವಾರಕಿಯವರು ಪುರಸ್ಕೃತರಾಗಿರುವ ಇವರಿಗೆ ೨೦೦೦-೦೧ನೇ ಸಾಲಿನ ರಾಜ್ಯ ಸಂಗೀತ -ನೃತ್ಯ ಅಕಾಡೆಮಿ ಪ್ರಶಸ್ತಿಯೂ ಸಂದಿದೆ.