ಧರ್ಮವತಿಯೆಂಬ ಪುರದೊಳ್ ನಾಗಶರ್ಮನೆಂಬ ಪಾರ್ವಂ ತನಗೆ ಯಾಚಕವೃತ್ತಿಯೆ ವೃತ್ತಿಯಾಗಿರ್ದು ಪಲವು ದಿವಸಕ್ಕೊಂದು ಕೊಡಂ ತೀವಿದ ಸತ್ತುಗದ ಪುಡಿಯಂ ಪಡೆದು ಆ ಕೊಡನಂ ತನ್ನ ಪಟ್ಟಿರ್ಪೆಡೆಯೊಳ್ ಕಟ್ಟಿ ನೇಲ್ದಿಟ್ಟು ಮಹಳದ ಪಕ್ಷದೊಳೊಂದು ದಿವಸಂ

ಇಂಬಾಗಿರೆ ಮುದದಿಂ ಪಲ
ವುಂ ಬಣ್ಣದ ಭಕ್ಷ ರಾಶಿವೆರಸಾ ಕಂಠೋ
ಷ್ಠಂಬರಮುಂಡೊಯ್ಯನೆ ಪಾ
ರ್ವಂ ಬಂದಾ ಕೊಡನ ಕೆಳಗೆ ಪಟ್ಟಿರ್ದಾಗಳ್ ೨೫೦

ಆ ನಾಗಶರ್ಮಂ ರಾಗಿಸಿ ಮೇಗಂ ನೋಡಿ ತನ್ನೊಡೆಯನ ಬಡಪಾರ್ವಂಗಿತೆಂದಂ: ಧಾನ್ಯಮನರ್ಘಮಾದ ಕಾಲದೊಳೀ ಕೊಡಂ ತೀವಿದ ಸತ್ತುಗದ ಪುಡಿಯಂ ಪತ್ತುಪಣವಿಂಗೆ ಮಾಱ* ಮೂಱುಪತ್ತಾಡಂ ಕೊಳ್ವೆಂ. ಅವು ವರುಷಕ್ಕಿರ್ಮೆ ಮಱ*ಯಂ ಪಡೆವುವು. ಪ್ರಸವಪರಿವರ್ತನದಿಂ ಪಲವಾಡಕ್ಕುಂ. ಆದೊಡವಂ ಕೊಟ್ಟು ಪಯನಾವಂ ಕೊಳ್ವೆಂ. ಅವರ್ಕೆ ಪುಟ್ಟಿದ ಪೋರಿಗಳಂ ತಿರ್ದಿಯಾರಂಬಗೆಯ್ದು ಸಮಸ್ತಧಾನ್ಯಮಂ ಸಂಪೂರ್ಣಮಾಗಿ ಬೆಳೆದು ಆ ಧಾನ್ಯಮಂ ಮಾಱ* ಪೊನ್ನಂ ಪಡೆದು ಈ ಪೊೞಲೊಳ್ ಸುಪ್ರದೇಶಮಪ್ಪ  ಸ್ಥಾನದೊಳ್ ಸುಧಾಧವಳಿತಮಪ್ಪ ಧವಳಾಗಾರಂ ಗೋಷ್ಠಾಗಾರಂ ಮೊದಲಾಗಿ ಪಲವುಂ ಶೋಭಾವಹಂಗಳಪ್ಪ ಗೃಹಂಗಳಂ ಮಾಡಿಸಿ ಧನಕನಕ ಸಮೃದ್ಧಿಯಿಂ ತನಗೆ ವಜ್ರದ ಕುಂಡಲಮಂ ವಜ್ರಧಾರೆಯ ಚೆನ್ನಸರಪಳಿಯುಮಂ ನವಗ್ರಹದ ವಿಚಿತ್ರಕಂಕಣಮುಮಂ ನವರತ್ನದುಂಗುರುಂಗಳುಮಂ ಮಾಡಿಸಿಕೊಂಡು ಪಟ್ಟಾವಳಿಯನ್ನುಟ್ಟು ಕೊಂಡರಸುಮಗನುಂ ಪೋಲ್ತು ಪುರಜನಂಗಳ್ಗೆಲ್ಲಂ ಪಿರಿಯನಾಗಿರ್ಪೆನ್ನಂ ಕಂಡೊರ್ವಂ ಕುಲಮುಂ ಶೀಲಮುಂ ಪೆಂಪುಂ ಬಿಣ್ಪುಂ ಪುಣ್ಯಮುಮುಳ್ಳಾತಂ ತನ್ನ ಮಗಳ್ ಚೆನೆಯಪ್ಪ ಕನ್ನೆಯಂ ಕುಡೆ ಮದುವೆಯಂ ಮಾಡಿಕೊಂಡು ಇಷ್ಟ ವಿಷಯ ಕಾಮಭೋಗಂಗಳನನುಭವಿಸುತಿರ್ಪುದುಂ ಕೆಲದಿವಸಕ್ಕಾಕೆಗೆ ಗರ್ಭಮಾಗೆ ಗರ್ಭಚಿಹ್ನಂಗಳನಾಂ ಕಂಡು ಬಲ್ಲ ಜೋಯಿಸನಂ ಕರೆಯಿಸಿ ಎನ್ನ ಪೆಂಡತಿಯೇನಂ ಪಡೆವಳೆಂದು ಬೆಸಗೊಂಡಂಡೆ ಗಂಡುಗೂಸಂ ಪಡೆವಳೆಂದು ಪೇೞ್ದೊಡೆ ಕೇಳ್ದಾ ಭಟ್ಟಂಗೆ ಮೆಚ್ಚುಗೊಟ್ಟು ಬೞ*ಕ್ಕಾಕೆಯ ಸೀಮಂತಮಂ ಸಂಭ್ರಮದಿಂ ಮಾಡಿ ಶೋಭನಕ್ರಿಯೆಗಳೊಳ್ಳಿತ್ತಾಗೆ ಪುರಜನಂಗಳಂ ಬಂಧುಜನಂಗಳುಮನಾಮಂತ್ರಿಸಿ ತುಪ್ಪದ ತೊಱೆಗಳ್ ಪರಿವನ್ನಂ ಪಿರಿದಪ್ಪ ಭಕ್ಷ್ಯಭೋಜ್ಯಗಳಿಂ ಭೋಜನಂಗಳಂ ಮಾಡಿಸಿ ತದನಂತರಂ ನವಮಾಸಂ ನೆಱೆವುದುಮೆನ್ನ ಪೆಂಡತಿ ಗಂಡುಮಗನಂ ಪೆಱಲೊಡಮಷ್ಟಶೋಭೆಯಂ ಮಾಡಿಸಿ ಮಹಾದಾನಂಗೆಯ್ದಾ  ಶಿಶುವಿಂಗೆ ಜಾತಕಕರ್ಮಮಂ ಸೋಮಶರ್ಮನೆಂಬ ನಾಮಕರಣಮಂ ಅನ್ನಪ್ರಾಶನಮಂ ಕ್ರಮದಿಂ ಮಾಡಿ ಸುಖದಿನಿರ್ಪುದುಮಾ ಬಾಲಕಂ ಬಾಲದುಡಿಗೆಗಳಂ ತೊಟ್ಟು ನಡೆಗಲ್ತೊಂದು ದಿವಸಂ ಗೋವ್ರಜಂಗಳೊಳ್ ಸೋಂಕುವುದನಾಂ ಕಂಡೆಲೆ ತೊತ್ತೇ ಮಗನನೀ ಪೊತ್ತಿನೊಳ್ ಪರಿಯಬಿಟ್ಟೆಯೆಂದು,

ಮುನಿದಿರದೆ ಪರಿದು ಪಿರಿದೊಂ
ದೊನಕೆಯೊಳಾನವಳ ತಲೆಯನೀ ತೆಱದಿಂ ಪೊ
ಯ್ವೆನೆನುತೆತ್ತಿಯಷ್ಟಿಯಂ ಕೊಂ
ಡೆನಸುಂ ಪೊಯ್ದಂ ಕಡಂಗಿ ಸತ್ತದ ಕೊಡನಂ  ೨೫೧

ಅಂತು ಪೊಯ್ಯೆ ಕೊಡನೊಡೆದು ಶ್ವೇತಚೂರ್ಣಮೆಲ್ಲಂ ತನ್ನ ಮೇಲೆ ಬೀೞ್ವುದುಂ; ನಾಗಶರ್ಮಂ ಬೂದಿವೂಸಿದ ತಪೋಧನನಂತೆಯುಂ, ಪುಡಿಯೊಳ್ ಪೊರೞ್ದ ಬೆಳ್ಗತ್ತೆಯಂತೆಯುಂ ಶ್ಲೇಷ್ಮೋತ್ಕಟಮಾದಂತೆಯುಗುೞುತ್ತುಂ, ಅಳಿಗಣ್ಣರಂತೆ ಮಿಳುಮಿಳನೆ ನೋಡುತ್ತುಂ ಮಠದಿಂ ಪೊಱಮಟ್ಟುನಿಂದ ಛಾಂದಸಬ್ರಾಹ್ಮಣಂ ಕಂಡು ಗುಂಡು ನೆರೆದಿದೇನೆಂದು ಬೆಸಗೊಂಡೊಡಾತ ನೊಡನೆಯ ಪಾರ್ವಂ ತತ್ಪ್ರಪಂಚಮೆಲ್ಲಮಂ ಸವಿಸ್ತರಂ ಪೇೞ್ವುದುಂ ಪುರಜನಂಗಳ್ ಕೇಳ್ದು ಕರುಳಂ ಪಿಡಿದು ನಗೆಯೊಳ್ ಪೊರೞ್ದರ್ ಅದಱ*ಂ

ಏಗೆಯ್ದುಂ ಸತ್ಪರುಷರ
ನಾಗತಮುಂ ಗತಮುಮಪ್ಪ ಕಾರ‍್ಯಮನೆಂದುಂ
ರಾಗಿಸಿ ಬಯಸುವುದುಂ ಹೃ
ದ್ರೋಗಂಬಡುವುದುಮಿವೆರಡು ಕಷ್ಟಮನಿಷ್ಟಂ  ೨೫೨

ಎಂದು ಯಜ್ಞದತ್ತೆ ತನ್ನ ಗಂಡನಂ ಬಾರಿಸಿದಳ್, ಅನ್ನೆಗಂ ಪ್ರಸವಸಮಯಮಾಸನ್ನಮಾಗೆ

ಮಲನಿಜಗೋತ್ರಶತಪ
ತ್ರಮಿತ್ರನಂ ಸದ್ಗ್ರಹಂಗಳೆಲ್ಲಂ ವರ್ಗೋ
ತ್ತಮದಿನಿರೆ ಮುದದಿನತ್ಯು
ತ್ತಮದಿನದೊಳ್ ಯಜ್ಞದತ್ತೆ ಸುತನಂ ಪಡೆದಳ್  ೨೫೩

ಅಂತು ಪುತ್ರೋತ್ಪತ್ತಿಯಾಗಲೊಡಮಾ ಶಿಶುವಿಂಗೆ ದೇವಶರ್ಮಂ ಜಾತಕಕರ್ಮವಿಧಾನಮಂ ತೀರ್ಚಿ ಸುಖದಿನಿರ್ದೊಂದು ದಿವಸಂ ಯಜ್ಞದತ್ತೆ ಕೂಸಿಂಗೆ ಪಾಸುವ ಸೀರೆಗಳನೊಗೆಯಲೆಂದು ಪೋಗುತ್ತುಂ ಸುತನಂ ಸುರಕ್ಷಿತನಂಗೆಯ್ಯಿಮೆಂದು ತನ್ನ ಪಾರ್ವಂಗೆ ಪೇೞ್ದು ಪೋದಳ್. ಅನ್ನೆಗಮಾ ಪೊೞಲನಾಳ್ವರಸಂ ದಾನಂಗೊಟ್ಟಪೆನೆಂದು ಬೞ*ಯಟ್ಟಿದೊಡೆ ಭಟ್ಟಂ ಪುತ್ರ ರಕ್ಷಣಾರ್ಥಮಂ ಬಗೆಯದೆ ಅರ್ಥಾರ್ಥಿಯಾಗಿ ಪೋಗಲ್ಬಗದು ತನ್ನ ಮನೆಯೊಳ್ ಮಾರ್ಮನುಷ್ಯರಿಲ್ಲದ ಕಾರಣದಿಂ ತಾಂ ನಡಪಿದೊಂದು ನಕುಲನಂ ತೊಟ್ಟಿಲ ಸಮೀಪದೊಳ್ ನಿಡಿದಪ್ಪ ನೇಣಿಂ ಕಟ್ಟಿ ಪೋದಂ, ಅನ್ನೆಗಮಿತ್ತಂ,

ಸುರಿತವಿಷಾಲವಿಲದುಷ್ಟ್ರಾಂ
ಕುರ ಸಂಕುಳ ಭೀಕರಾನನಂ ಸಾರ್ದತ್ತೊಂ
ದುರಗಂ ಮೆಲ್ಲನೆ ಬಾಲಾ
ಸ್ತರಣಾಂಕಿತಮಂ ಕೃತಾಂತಪಾಶಪ್ರತಿಮಂ  ೨೫೪

ಅಂತು ಸಾರ್ತರ್ಪ ಭುಜಂಗನನಾ ಮುಂಗುರಿ ಕಂಡು ನಿಸರ್ಗವೈರಮಂ ನೆನೆದಿರದೆ ಸರ್ಪನಂ ಶತಖಂಡಂ ಮಾಡಿ ಕೊಂದು ತಿನುತ್ತಿರ್ಪುದುಂ, ಕಿಱ*ದಾನುಂ ಬೇಗಕ್ಕೆ ಪಾರ್ವಂ ಬರ್ಪುದುಂ ತನ್ನ ಸಾಹಸಮಂ ತನ್ನಾಳ್ದಂಗೆ ತೋಱಲೆಂದು ರುರಾರುಣಿತಮಾದ ನಖಮುಖಮಂ ಪಲ್ಗಳೊಳ್ ಪತ್ತಿರ್ಪ ಖಂಡಂಗಳ್ವೆರಸು ಪರಿತಂದು ಕಾಲಮೇಲೆ ಪೊರೞ್ದು ಚಾಟುಕಾರಂಗೆಯ್ವುದುಂ ಪಾರ್ವಂ ಕಂಡೀ ಕಾವಲ್ ಕೂಸಂ ಕೊಂದುದಾಗಲೆವೇೞ್ಕುಮೆಂದು ವಿಚಾರವಿಕಳಂ ನಕುಲನ ಶಿರಮಂ ಬಿರೆಯೆ ಪೊಯ್ದು ಮಾಣದೆ ಪರಿತಂದು ನೋಡಿ ತೊಟ್ಟಿಲೊಳ್  ಸುಖನಿದ್ರಿತನುಮಕ್ಷತ ಶರೀರನುಮಾಗಿರ್ದ ಮಗನುಮನಾ ಕೆಲದೊಳ್ ಶತಖಂಡಮಾಗಿರ್ದ ಪಾವುಮಂ ಕಂಡು ಬೞ*ಕ್ಕೆ ಪಾರ್ವಂ  ಮುಂಗುರಿಯ ಮೇಲೆ ನೀರಂ ತಳಿದು ಬೀಸೆ ನಿರ್ಜೀವಮಾದುದಂ ಕಂಡು ಪಾಪಕರ್ಮಂ ತಾಂ ಕೋಪವಶದಿಂ ಕೂಸಿನಂತೆ ನಡಪಿದೆ ನಕುಲನಂ ಪರೀಕ್ಷಿಸದೆ ಕೊಂದನೆಂದು ಶೋಕಂಗೆಯ್ಯುತ್ತುಮಿರ್ಪಿನಂ ಯಜ್ಞದತ್ತೆ ಬಂದಿದೇನೆಂದು ಬೆಸೆಗೊಳೆ ದೇವಶರ್ಮಂ ತತ್ಪ್ರಪಂಚಮೆಲ್ಲಮಂ ಪೇೞೆ ಕೇಳ್ದಿಂತೆಂದಳ್

ಶ್ಲೋ|| ಕುದೃಷ್ಟಂ ಕುಪರಿಜ್ಞಾತಂ ಕುಶುತಂ ಕುಪರೀಕ್ಷಿತಂ
ತನ್ನರೇಣನ ಕರ‍್ತವ್ಯಂ ಕಿರಾಟೇನ ತು ಯತ್ಕ ತಂ  ||೧೩೪||

ಟೀ|| ಮನುಷ್ಯಂ ಲೇಸಾಗಿ ಕಾಣದುದಂ ಅರಿಯದುದಂ ಪರೀಕ್ಷಿಸದುದಂ ಮಾಡಲಾಗದು. ಅವುದಾನೊಂದನರಿಯದೆ ವ್ಯವಹಾರಿ ಮಾಡಿದ ಹಾಗೆ. ಎಂಬ ಕಥೆಯಂತಾದುದೆನೆ ದೇವಶರ್ವ್ಮದೆಂತೆನೆ ಯಜ್ಞದತ್ತೆ ಪೇಳ್ಗುಂ:

ವ|| ಧರ್ಮವತಿಯೆಂಬ ಪುರದಲ್ಲಿ ನಾಗಶರ್ಮನೆಂಬ ಬ್ರಾಹ್ಮಣನು ತನ್ನ ಯಾಚಕ ವೃತ್ತಿಯಿಂದ ಸಂಪಾದಿಸಿದ ಒಂದು ಕೊಡ ಹುರಿ ಹಿಟ್ಟನ್ನು ತಾನು ಮಲಗುವಲ್ಲೇ ಮೇಲೆ ನೇತಾಡಿಸಿಟ್ಟನು. ಮಹಾಲಯ ಪಕ್ಷದಲ್ಲೊಂದು ದಿನ ೨೫೦; ಕುತ್ತಿಗೆಯವರೆಗೆ ಸಂತೋಷದಿಂದ ಹಲವು ಬಣ್ಣ ಬಣ್ಣ ಭಕ್ಷ್ಯ ರಾಶಿಯನ್ನು ಉಂಡು ಆ ಬ್ರಾಹ್ಮಣನು ಆ ಕೊಡದ ಕೆಳಗೆ ಮಲಗಿದ್ದನು. ಆಗ ಆ ನಾಗಶರ್ಮನು ಸಂತೋಷದಿಂದ ಮೇಲೆ ನೋಡಿ ತನ್ನೊಡನಿದ್ದ ಬಡ ಬ್ರಾಹ್ಮಣನೊಡನೆ ಹೀಗೆಂದನು: ಧಾನ್ಯ ಅನರ್ಘ್ಯವಾದ ಕಾಲದಲ್ಲಿ ಈ ಕೊಡದಲ್ಲಿರುವ ಹುರಿ ಹಿಟ್ಟನ್ನು ಹತ್ತು ಹಣಕ್ಕೆ ಮಾರಿ ಹತ್ತು ಆಡುಗಳನ್ನು ಕೊಂಡುಕೊಳ್ಳುವೆನು.ಅವು ವರ್ಷಕ್ಕೆ ಎರಡು ಬಾರಿ ಮರಿಯಿಡುವುವು. ಪ್ರಸವಪರಿವರ್ತನದಿಂದ ಹಲವು ಆಡುಗಳಾಗುವುವು. ಹಾಗಾದಲ್ಲಿ ಅವನ್ನು ಮಾರಿ ಹಾಲು ಕೊಡುವ ಹಸುವನ್ನು ಕೊಂಡುಕೊಳ್ಳುವೆನು. ಅದಕ್ಕೆ ಹುಟ್ಟಿದ ಹೋರಿಗಳನ್ನು ತಿದ್ದಿ ವ್ಯವಸಾಯ ಮಾಡಿ ಸಮಸ್ತ ಧಾನ್ಯವನ್ನು ಸಂಪೂರ್ಣವಾಗಿ ಬೆಳೆದು  ಆ ಧಾನ್ಯವನ್ನು ಮಾರಿ ಹೊನ್ನನ್ನು ಪಡೆದು ಈ ಪಟ್ಟಣದಲ್ಲಿ ಸುಪ್ರದೇಶವಾದ ಸ್ಥಾನದಲ್ಲಿ ಸುಧಾಧವಳಿತವಾದ ಧವಳಾಗಾರ, ಗೋಷ್ಠಾಗಾರ ಮೊದಲಾದ ಹಲವು ಸುಂದರ ಗೃಹಗಳನ್ನು ಮಾಡುವೆನು. ಧನಕನಕನ ಸಮೃದ್ಧಿಯಿಂದ ತನಗೆ ವಜ್ರದ ಕುಂಡಲವನ್ನೂ ವಜ್ರಧಾರೆಯ  ಸುಂದರ ಸರಪಳಿಯನ್ನೂ ನವಗ್ರಹ ವಿಚಿತ್ರ ಕಂಕಣವನ್ನೂ ನವರತ್ನದ ಉಂಗುರುಗಳನ್ನೂ ಮಾಡಿಸಿಕೊಂಡು  ಪಟ್ಟಾವಳಿಯನ್ನುಟ್ಟುಕೊಂಡು ಅರಸು ಮಗನಂತೆ ಪುರಜನರೆಲೆಲ್ಲಾ ಹಿರಿಯನಾಗಿರುವ ನನನ್ನು ಕಂಡು, ಕುಲ, ಶಿಲ, ಗೌರವ, ಕೀರ್ತಿ, ಪುಣ್ಯಗಳನ್ನುಳ್ಳ ಒಬ್ಬನು ತನ್ನ ಚೆನ್ನೆ ಕನ್ಯೆಯನ್ನು ಕೊಡಲು ಅವಳನ್ನು ಮದುವೆಯಾಗಿ ಇಷ್ಟವಿಷಯ ಕಾಮಭೋಗಗಳನ್ನು ಅನುಭವಿಸುವೆ. ಕೆಲವು ದಿವಸಗಳ ಬಳಿಕ ಆಕೆಗೆ ಗರ್ಭವಾಗುವುದು. ಜೋಯಿಸರನ್ನು ಕರೆದು ನನ್ನ  ಹೆಂಡತಿ ಏನನ್ನು ಹಡೆಯುವಳು ಎಂದು ವಿಚಾರಿಸಲು ಗಂಡುಗೂಸನ್ನು ಹಡೆಯುವಳು ಎಂದು  ಹೇಳುವನು. ಅದಕ್ಕೆ ಅವನಿಗೆ ವಚ್ಚುಗೊಟ್ಟು ಆಕೆಯ ಸೀಮಂತವನ್ನು  ಸಂಭ್ರಮದಿಂದ ಮಾಡಿ ಪುರಜನರನ್ನೂ ಬಂಧುಜನರನ್ನೂ ಆಮಂತ್ರಿಸಿ ತುಪ್ಪದ ತೊರೆಯಲ್ಲಿ ಹರಿಯುವಷ್ಟು ಭಕ್ಷ್ಯಭೋಜ್ಯಗಳಿಂದ ಭೋಜನಗಳನ್ನು ಮಾಡಿಸುವೆನು. ಅನಂತರ ನವಮಾಸ ತುಂಬಿ ನನ್ನ ಹೆಂಡತಿ ಮಗನನ್ನು  ಹಡೆಯಲು ಅಷ್ಟ ಶೋಭೆಯನ್ನು ಮಾಡಿಸಿ ಮಹಾದಾನ ಮಾಡಿ ಆ ಶಿಶುವಿಗೆ ಜಾತಕರ್ಮವನ್ನೂ ಸೋಮಶರ್ಮನೆಂಬ ನಾಮಕರಣವನ್ನೂ  ಅನ್ನಪ್ರಾಶನವನ್ನೂ ಕ್ರಮವಾಗಿ ಮಾಡಿಸಿ ಸುಖದಿಂದಿರುವೆನು. ಆ ಬಾಲಕನೂ ಬಾಲದುಡಿಗೆಗಳನ್ನು ತೊಟ್ಟು ನಡೆಯುವುದನ್ನು  ಕಲಿತು ಒಂದು ದಿವಸ ಧನಗಳ ಹಿಂಡಿಗೆ ಹೋಗಲು ನಾನು ಅದನ್ನು ಕಂಡು, ಎಲೈ ತೊತ್ತೇ! ಮಗನನ್ನು ಈ ಹೊತ್ತಿನಲ್ಲಿ ಹೋಗಲು ಬಿಟ್ಟೆಯೆಕೆ ೨೫೧:  ಎಂದು ಕೋಪದಿಂದ ಒಂದು ದೊಡ್ಡ ಒನಕೆಯಿಂದ ಅವಳ ತಲೆಯನ್ನು ಈ ರೀತಿ ಹೊಡೆಯುವನು ಎಂದು ತನ್ನ ಕೈಯಲ್ಲಿದ್ದ ಯಷ್ಟಿಯನ್ನು ಎತ್ತಿ ಹಿಟ್ಟಿನ ಕೊಡಕ್ಕೆ ಒಡೆದನು. ವ || ಹಾಗೆ ಒಡೆಯಲು ಕೊಡ ಹೊಡೆದು ಶ್ವೇತ ಚೂರ್ಣವೆಲ್ಲವೂ ಅವನ ಮೇಲೆ ಬಿದ್ದಿತು. ನಾಗಶರ್ಮನ ಬೂದಿ ಬಳಿದ ತಪೋದನನಂತೆಯೂ, ಧೂಳಿನಲ್ಲಿ ಒರಳಿದ ದಡ್ಡ ಕತ್ತೆಯಂತೆಯೂ ಶ್ಲೇಷ್ಮಹೆಚ್ಚಿದವನಂತೆ ಉಗುಳುತ್ತಲೂ ಕೆಟ್ಟ ಕಣ್ಣಿನವರಂತೆ ಮಿಳಮಿಳನೆ ನೋಡುತ್ತಲೂ ಮಠದಿಂದ ಹೊರ ಹೊರಟು ನಿಂತು ಛಾಂದಸಬ್ರಾಹ್ಮಣನ್ನು ಕಂಡು ಗುಂಪು ನೆರೆದು ಇದೆನೆಂದು ವಿಚಾರಿಸಲು ಆತನೊಡನಿದ್ದ ಬ್ರಾಹ್ಮಣನು ಆ ವಿಚಾರವನ್ನೆಲ್ಲ ಸವಿಸ್ತಾರವಾಗಿ ಹೇಳಲು ಪುರಜನರು  ಕೇಳಿ ಕರುಳನ್ನು ಹಿಡಿದು ನಗೆಯಲ್ಲಿ   ಹೊರಳಲಾಡಿದರು.  ಅದರಿಂದ ೨೫೨: ಏನಾದರೂ ಸತ್ಪರುಷರು ಭೂತಭವಿಷ್ಯತ್ ಕಾಲದ ಕಾರ‍್ಯಗಳನ್ನು ಎಂದೂ ಬಯಸುವುದೂ ಅದರಿಂದ ಹೃದ್ರೋಗವನ್ನು ಅನುಭವಿಸುವುದೂ ಇವರೆಡೂ ಕಷ್ಟಕರವೂ ಅನಿಷ್ಟಪ್ರದವೂ ಆಗಿವೆ. ವ|| ಹೀಗೆಂದು  ಯಜ್ಞದತ್ತೆಯು ತನ್ನ ಗಂಡನನ್ನು ಎಚ್ಚರಿಸಿದಳು. ಅಷ್ಟರಲ್ಲಿ ಪ್ರಸವ ಸಮಯ ಹತ್ತಿರವಾಗಲೂ ೨೫೩: ಸೂರ‍್ಯನನ್ನು ಸದ್ಗ್ರಹಳೆಲ್ಲಾ ವರ್ಗೋತ್ತಮವಾಗಿ ಬಳಸಿರಲು ಯಜ್ಞದತ್ತೆಯು ಅತ್ಯುತ್ತಮ ದಿನದಲ್ಲಿ ಮಗನನ್ನು ಪಡೆದಳು. ವ|| ಹಾಗೆ ಪುತ್ರೋತ್ಪತ್ತಿಯಾಗಲು ಆ ಶಿಶುವಿಗೆ ದೇವಶರ್ಮನು  ಜಾತಕಕರ್ಮವಿಧಾನವನ್ನೂ ತೀರಿಸಿ ಸುಖದಿಂದ್ದನು. ಒಂದು ದಿನ ಅವಳ ಕೂಸಿಗೆ ಹಾಸುವ ಬಟ್ಟೆಗಳನ್ನು ಒಗೆಯಲೆಂದು ಹೋಗುತ್ತ ಮಗುವನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಎಂದು ಗಂಡನೊಡನೆ ಹೇಳಿ ಹೋದಳು. ಅಷ್ಟರಲ್ಲಿ ಆ ಪಟ್ಟಣವನ್ನು ಆಳುವ ಅರಸನು ದಾನ ಕೊಡುತ್ತೇನೆ ಎಂದು ದೂತರನ್ನು ಅಟ್ಟಲು ಭಟ್ಟನು ಪುತ್ರರಕ್ಷಣೆಯನ್ನು ಬಗೆಯದೆ ಅರ್ಥಾರ್ಥಿಯಾಗಿ ಹೋಗಬಯಸಿ ತನ್ನ ಮನೆಯಲ್ಲಿ ಬೇರೆ ಯಾರೂ ಇಲ್ಲದುದರಿಂದ ತಾನು ಸಾಕಿದ ಮುಂಗುರಿಯೊಂದನ್ನು ತೊಟ್ಟಿಲ ಸಮೀಪದಲ್ಲಿ ಉದ್ದವಾದ ನೇಣಿನಿಂದ ಕಟ್ಟಿ ಹೋದನು. ಇತ್ತ ೨೫೩. ವಿಷದಿಂದ  ತುಂಬಿದ ಹೊಳೆಯುವ ಹಲ್ಲಿಗಳಿಂದ ಭಯಂಕರ ಮುಖದ ಯಮಪಾಶದಂತಿದ್ದ ಒಂದು ಉರಗವು ಮಗುವಿನ ಹಾಸಿಗೆಯ ಬಳಿಗೆ ಮೆಲ್ಲನೆ ಸಮೀಪಿಸಿತು. ೨೫೪. ಹಾಗೆ ಬರುತ್ತಿದ್ದ ಸರ್ಪವನ್ನು ಆ ಮುಂಗುರಿ ಕಂಡು ಸ್ವಾಭಾವಿಕವಾದ ವೈರದಿಂದ ಸರ್ಪವನ್ನು ನುಚ್ಚುನುರಿ ಮಾಡಿ ಕೊಂದು ತಿನ್ನುತ್ತಿರಲು ಸ್ವಲ್ಪ ಹೊತ್ತಿನಲ್ಲಿ ಆ ಬ್ರಾಹ್ಮಣನು ಮನೆಗೆ ಹಿಂದಿರುಗಲು ತನ್ನ ಸಾಹಸವನ್ನು ತನ್ನ ಒಡೆಯನಿಗೆ ತೋರಿಸಲೆಂದು ರಕ್ತ ಬಳಿದ ಉಗುರುಗಳಿಂದಲೂ, ಹಲ್ಲುಗಳಲ್ಲಿ ಅಂಟಿದ ಮಾಂಸಖಂಡಗಳಿಂದಲೂ ಬಂದು ಕಾಲ ಮೇಲೆ ಹೊರಳಾಡಿ ಸಲಿಗೆ ತೋರಿಸಲು ಬ್ರಾಹ್ಮಣನು ಈ ಕಾವುಲು ಕೂಸನ್ನು ಕೊಂದಿರಬೇಕೆಂದು ಅವಿವೇಕಿಯಾಗಿ ಮುಂಗುರಿಯ ಮಂಡೆಯನ್ನು ಬಿರಿಯುವಂತೆ ಹೊಡೆದನು. ತೊಟ್ಟಿಲ ಬಳಿಗೆ ಬಂದು ನೋಡಲು ಸುಖವಾಗಿ ಮಲಗಿ ಸುರಕ್ಷಿತವಾಗಿ ನಿದ್ರಿಸಿದ ಮಗನನ್ನೂ ಅಲ್ಲೆ ಬಳಿಯಲ್ಲಿ ನುಚ್ಚು ನುರಿಯಾಗಿ ಬಿದಿದ್ದ ಹಾವನ್ನೂ ಕಂಡು ಆ ಬ್ರಾಹ್ಮಣನು ಮುಂಗುರಿಯ ಮೇಲೆ ನೀರನ್ನು ತಳಿದು ಬೀಸಲು ನಿರ್ಜೀವವಾಗಿರುವುದನ್ನು ಕಂಡು ಪಾಪಕರ್ಮನಾದ ತಾನು ಕೋಪವಶದಿಂದ ಕೂಸಿನಂತೆ ಸಾಕಿ ಸಲಹಿದ ಮುಂಗುರಿಯನ್ನು ಪರೀಕ್ಷಿಸದೆ ಕೊಂದೆನೆಂದು ಶೋಕಮಾಡುತ್ತಿರಲು ಯಜ್ಞದತ್ತೆ ಬಂದು ಇದೇನೆಂದು ವಿಚಾರಿಸಲು ದೇವಶರ್ಮನು ಆ ವಿಚಾರವನ್ನೆಲ್ಲ ಹೇಳಲು ಕೇಳಿ ಹೀಗೆಂದಳು: ಶ್ಲೋ|| ಮನುಷ್ಯನು ಚೆನ್ನಾಗಿ ಕಾಣದುದನ್ನೂ ತಿಳಿಯದುದನ್ನೂ ಪರೀಕ್ಷಿಸದುದನ್ನೂ ಮಾಡಬಾರದು. ಯಾವುದಾದರೊಂದನ್ನು ಅರಿಯದೆ ಮಾಡಿದ ವ್ಯವಹಾರಿಯ ಹಾಗೆ ಎಂಬ ಕಥೆಯಂತಾಯಿತು ಎನ್ನಲು ದೇವಶರ್ಮನು ಅದೇನೆಂದು ಕೇಳಲು ಯಜ್ಞದತ್ತೆಯು ಹೇಳಿದಳು: