ಆ ಕಥಾಪ್ರಪಂಚಮೆಂತೆನೆ,

ಭೂಭುವನವಿನುತಮಿಂದ್ರ ಪು
ರಾಭಂ ಮಾಣಿಮಾಟಕೂಟಕಾನಕ ಭವನ-
ವ್ಯಾಭಾಸಿತ ರತ್ನಚಯಂ
ಶೋಭಾವತಿಯೆಂಬ ಪುರವರಂ ರಂಜಿಸುಗುಂ                            ೨೪೭

ಅನಿಲಾಂದೋಳಿತಚಿತ್ರಕೇತುನಿವಹ ವ್ಯಾಭಾಸಿತೋದಗ್ರದೇ
ವನಿವಾಸಾಳಿಯಿನುದ್ಘ ಶಾಳಿವನದಿಂ ಸರ‍್ವರ್ತುಕೊದ್ಯಾನನಂ
ದನದಿಂ ಸೌಂದರ ಸೌಂದರೀನಿವಹದಿಂದಂಭೋಜಷಂಡಂಗಳಿಂ
ತನಗನ್ವರ್ಥಮೆನಿಪ್ಪುದಾ ಪುರವರಂ ಶೋಭಾವತೀನಾಮದಿಂ   ೨೪೮

ಅಂತಪ್ಪ ಪುರದೊಳ್ ನಿರಂತರಂ ವೇದಾಧ್ಯಯನ ತತ್ಪರನುಮಜಸ್ರ ಸ್ರುಕ್ ಸಂದರ್ಭ ಪವಿತ್ರ ಸಂವಾಹನಪವಿತ್ರಿತಪಾಣಿಪಲ್ಲವನುಂ ಪುರೋಡಾಶಭೋಜನಪವಿತ್ರೀಕೃತಗಾತ್ರನುಂ ಯಜನಾದಿಷಟ್ಕರ್ಮ ನಿರತನುಂ ಆಹಿತಾಗ್ನಿಯುಮಪ್ಪ ದೇವಶರ್ಮನೆಂಬ ಪಾರ್ವನಿರ್ಪಂ. ಆತನ ಸತಿ ಪರಮಪತಿವ್ರತಾಗುಣ ವಿಶುದ್ಧಚಿತ್ತೆ ಯಜ್ಞದತ್ತೆಯೆಂಬಳ್. ಆಕೆಗೆ ಋತುಕಾಲಪ್ರಾಪ್ತಿಯಿಂ ಗರ್ಭಮಾಗೆ ಕೆಲವು ದಿವಸದಿಂ,

ಬಿಸರುಹನೇತ್ರೆಯೊಳ್ನಡು ಪೊದೞ್ದುದು  ದಾಂಗುಡಿಯಿಟ್ಟು ಬಾಸೆ ನೀ
ಳ್ದೆಸೆದುದು ಪಿಂಗಿ ಪೋದುದು ವಳಿತ್ರಿತಯಂ ಕುಚಚೂಚುಕಂಗಳೊಳ್
ಪಸರಿಸಿ ಕರ್ಪ್ಪು ಪರ್ಬಿದುದು ಮಂದರಯಾನಮೊಡರ್ಚಿತಾನನಂ
ಮಿಸುಗೆ ಬೆಳರ್ತು ಪೂರ್ಣ ಶಶಿಕಾಂತಿಯನಾಂತುದು ಗರ್ಭದೇೞ್ಗೆಯೊಳ್  ೨೪೯

ಅಂತು ತೋಱ*ದ ಗರ್ಭಚಿಹ್ನಮಂ ಕಂಡು ದೇವಶರ್ಮಂ ನಿಗಂಡ ನಿರ್ಧನನಂತೆ ರಾಗಿಸಿ ನಿಜಸತಿಯಪ್ಪಂತರ್ವತ್ನಿಯಂ ಕರೆದಿಂತೆಂದಂ : ಎಮಗೆ ಮನೋರಥಸಿದ್ಧಿಯಾಗಲ್ ಬಗೆದಪ್ಪುದುದೇಕೆಂದೊಡೆ ನಿನ್ನ ಗರ್ಭದೊಳ್ ಗಂಡುಗೂಸು ಪುಟ್ಟಿದಪುದು ; ನಾವಾ ಸುತಂಗೆ ಜಾತಕರ್ಮ ನಾಮಕರಣಾನ್ನಪ್ರಾಶನ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಬೞ*ಕ್ಕ ವೇದಶಾಸ್ತ್ರ ಕಾವ್ಯನಾಟಕಪುರಾಣಂಗಳನೋದಿಸುವಮೆಂದೊಡಾ ಮಹಾಸತಿ ನಿಜಪತಿಯಂ ಮಾರ್ಕೊಂಡಿಂತೆಂದಳ್:

ಶ್ಲೋ|| ಆಯುರ್ಜ್ಞಾನೇ ವಯೋಜ್ಞಾನೇ ಗರ್ಭಿಣೀ ಗರ್ಭಸಂಭವೇ
ಮುನಯೋಪಿ ವಿಮುಹ್ಯಂತಿ ಕಿಂ ಪುನರ್ಮಾಂಸ ಚಕ್ಷುಷಃ ||೧೩೧||

ಟೀ|| ಆಯುಷ್ಯಮನಱ*ವಲ್ಲಿ ವಯಸ್ಸನಱ*ವಲ್ಲಿ ಗರ್ಭಿಣಿಯರ ಗರ್ಭದ ನೆಲೆಯಲ್ಲಿ ಋಷಿಯರುಂ ನಿಶ್ಚೈಸಲಱ*ಯರು; ಮತ್ತಿನ ಜಡರುಗಳೆಂತುಂ ತಪ್ಪರೆನಲಾಗದು.

ಅದೆಂತೆಂದೊಡೆ

ಶ್ಲೋ|| ಅನಾಗತವತೀಂ ಚಿಂತಾಂ ಯೋ ನರಃ ಕರ್ತುಮಿಚ್ಛತಿ
ಸತತಂ ಪಾಂಡುರಂಗಸ್ಯಾತ್ ನಾಗಶರ್ಮ ಪಿತಾ ಯಥಾ  ||೧೩೨||

ಟೀ|| ಆವನಾನೊರ್ವ ಮನುಷ್ಯನು ಮುಂದೆ ಬಹಂಥದನು ಚಿಂತಿಸಿ ಮಾಡಲು ದ್ಯೋಗಿಸಿಹನು, ಅವನನುದಿನವು ಪಾಂಡುರಾಂಗನಹನು ; ಅದು ಎಹಗೆಂದೊಡೆ ನಾಗಶರ್ಮನ ತಂದೆಯಹಗೆ ಎಂದಿಂತನಾಗತಮಂ ಚಿಂತಿಸುವುದು ಲೋಕಾಪಹಾಸ್ಯಕ್ಕೆಡೆಯಪ್ಪುದದೆಂತನೆ :

ಶ್ಲೋ|| ಅನಾಗತಾರ್ಥಮುತ್ಪ್ರೇಕ್ಷ  ಯಸ್ಯಾರಂಭೋ ವಿಜೃಂಭತೆ
ಲೋಕೇ ಹಾಸ್ಯಮವಾಪ್ನೋತಿ ಸೋಮಶರ್ಮಪಿತಾ  ||೧೩೩||

ಟೀ|| ಮುಂದಹಂತಹ ಕಾರ‍್ಯವನಪೇಕ್ಷಿಸಿ ಆವನಾನೊರ್ವನಾರಂಭವು ಹೆಚ್ಚುತಿರ್ದಹುದು; ಅದು ಲೋಕದಲ್ಲಿ ಹಾಸ್ಯಕ್ಕೊಳಗಹುದು. ಅದೆಂತೆಂದೊಡೆ ಸೋಮಶರ್ಮನ ತಂದೆಯಂತೆ, ಆ ಪಾರ್ವನದೆಂತೆನೆ ಪಾರ್ವಿತಿ ಪೇೞ್ಗು:

೨೪೭; ಪ್ರಪಂಚಸಿದ್ಧವೂ ಅಮರಾವತಿಯಂತೆ ಸೊಗಯಿಸುವುದೂ ರತ್ನ ಚಿನ್ನಗಳಿಂದ ಖಚಿತವಾದ ಭವನಗಳನ್ನು ಹೊಳೆಯುವ ಹಾಗೆ ಮಾಡಿದ ರತ್ನ ರಾಶಿಯಿಂದಲೂ ಶೋಭಾವತಿಯೆಂಬ ಪುರವು ರಂಜಿಸುತ್ತಿತ್ತು. ೨೪೮: ಗಾಳಿಯಿಂದ ಮಿಳಿರುತ್ತಿರುವ ಚಿತ್ರಿತವಾದ ಧ್ವಜ ಸಮೂಹದಿಂದ ಪ್ರಕಾಶಿಸುವ ಉನ್ನತ ದೇವಾಲಯಗಳಿಂದಲೂ ಶ್ರೇಷ್ಟವಾದ ಭತ್ತದ ಗದ್ದೆಗಳಿಂದಲೂ ಎಲ್ಲಾ ಋತುಗಳಲ್ಲೂ ಫಲಪುಷ್ಪಗಳನ್ನು ಬಿಡುವ ಉದ್ಯಾನವನಗಳಿಂದಲೂ ಸುಂದರಸ್ತ್ರೀ ಸಮೂಹದಿಂದಲೂ ಕಮಲಗಳ ಸರೋವರಗಳಿಂದಲೂ ಆ ಪಟ್ಟಣವು ತನಗೆ ಶೋಭಾವತೀಯೆಂಬ ಹೆಸರು ಅನ್ವರ್ಥವಾಗುವಂತೆ ಇತ್ತು. ವ || ಅಂತಹ ಪಟ್ಟಣದಲ್ಲಿ ಯಾವಾಗಲೂ ವೇದಾಧ್ಯಯನ ತತ್ಪರನೂ, ಯಾವಗಾಲೂ ಹೋಮ ಮಾಡುವ ಸೌಟನ್ನು ಧರಿಸುವ ಸಂದರ್ಭದಲ್ಲಿ  ಹಾಕಿಕೊಂಡ ದರ್ಭೆಯ ಪವಿತ್ರದಿಂದ ಪವಿತ್ರಗೊಂಡ ಪಾಣೀ ಪಲ್ಲವನೂ ಪುರೋಡಾಶನೆಂಬ  ಯಾಗಭಕ್ಷ್ಯವನ್ನು  ತಿಂದು ಪವಿತ್ರಗಾತ್ರನಾದವನೂ ಯಜನಾದಿ ಷಟ್ಕರ್ಮಗಳಲ್ಲಿ ತತ್ಪರನೂ  ಆಹಿತಾಗ್ನಿಯೂ ಆದ ದೇವಶರ್ಮನೆಂಬ ಬ್ರಾಹ್ಮಣನು ಇದ್ದನು. ಆತನ ಸತಿಯು ಪರಮಪತಿವ್ರತಾಗುಣದಿಂದ ಶುದ್ಧ ಚಿತ್ತೆಯಾದ ಯಜ್ಞದತ್ತೆಯೆಂಬವಳಾಗಿದ್ದಳು. ಆಕೆಗೆ ಋತುಕಾಲ ಬಂದು ಗರ್ಭವು ಉಂಟಾಗಲು ಕೆಲವು ದಿವಸಗಳಲ್ಲಿ, ೨೪೯:  ಆ ಸುಂದರಿಯ ಸುಂದರವಾದ ನಡು ಕಂಡುಬಂತು. ಹೊಟ್ಟೆಯ ರೋಮರಾಜಿ ಬೆಳೆದು ಶೋಭಿಸಿತು. ಹೊಟ್ಟೆಯ ಮೂರು ಗೆರೆಗಳು ಹಿಂಗಿ ಹೋದವು. ಕುಚಗಳ ತುದಿಗಳಲ್ಲಿನ ಕಪ್ಪು ವಿಸ್ತಾರಿಸಿ  ಅಬ್ಬಿದುದು. ನಿಧಾನವಾದ ನಡೆಯುಂಟುಯಿತು. ಮುಖವು ಶೋಭಿಸುವಂತೆ ಬೆಳ್ಳಗಾಗಿ ಗರ್ಭದ ಬೆಳವಣಿಗೆಯಾಗುತ್ತ ಪೂರ್ಣಚಂದ್ರನ ಶೋಭೆಯನ್ನು ಹೊಂದಿತು.  ವ|| ಹಾಗೆ ತೋರಿದ ಗರ್ಭಚಿಹ್ನೆಯನ್ನು ಕಂಡು ದೇವಶರ್ಮನು ನಿಯನ್ನು ಕಂಡ ನಿರ್ಧನನಂತೆ ಸಂತೋಷಿಸಿ  ತನ್ನ ಸತಿಯನ್ನು ಅಂತರಂಗಕ್ಕೆ ಕರೆದು ಹೀಗೆಂದನು: ನಮ್ಮ ಮನೋರಥ ಸಿದ್ಧಿಯಾಗುವುದೆಂದು ತೋರುವುದು. ನಿನ್ನ ಗರ್ಭದಲ್ಲಿ ಗಂಡು ಕೂಸು ಹುಟ್ಟುವುದು.ಆ ಮಗನಿಗೆ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ, ಉಪನಯನಾದಿ ಕಾರ್ಯಗಳನ್ನು ಮಾಡಿ ಬಳಿಕ ವೇದಶಾಸ್ತ್ರ ಕಾವ್ಯ ನಾಟಕ ಪುರಾಣಗಳನ್ನು ಓದಿಸೋಣ. ಅದಕ್ಕೆ ಆತನ ಮಹಾಸತಿಯು ಪತ್ಯುತ್ತರವಾಗಿ ಹೀಗೆಂದಳು.ಶ್ಲೋ|| ಆಯುಸ್ಸನ್ನೂ ವಯಸ್ಸನ್ನೂ ಗರ್ಭಿಣಿಯರ ಗರ್ಭದ ನೆಲೆಯನ್ನೂ ಋಷಿಗಳು ಕೂಡ ಅರಿಯರು. ಉಳಿದ ಜಡಜನರು ಹೇಗೂ ತಪ್ಪಿಯಾರು. ವ|| ಅದು ಹೇಗೆಂದರೆ,  ಶ್ಲೋ||  ಯಾವ ಒಬ್ಬ ಮನುಷ್ಯನು ಮುಂದೆ ಬರುವಂಥದನ್ನು ಚಿಂತಿಸಿ ಕಾರ‍್ಯೋದ್ಯುಕ್ತನಾಗುವನೋ  ಅವನು  ಯಾವಗಲೂ ನಾಗಶರ್ಮನ ತಂದೆಯ ಹಾಗೆ ಪಾಂಡುರಾಂಗನಾಗುವನು. ಈ ರೀತಿಯಲ್ಲಿ ಅನಾಗತವನ್ನು ಚಿಂತಿಸುವುದು ಲೋಕಾಪಹಾಸ್ಯಕ್ಕೆ ಎಡೆಯಾಗುವುದು. ಶ್ಲೋ|| ಮುಂದಾಗುವಂಥ ಕಾರ‍್ಯವನ್ನು ಅಪೇಕ್ಷಿಸಿ ಯಾವನು ಆರಂಭ ಶೂರರಾಗುತ್ತಾನೋ ಅವನು ಸೋಮಶರ್ಮನ ತಂದೆಯಂತೆ ಲೋಕದಲ್ಲಿ  ಹಾಸ್ಯಕ್ಕೊಳಗಾಗುತ್ತಾನೆ. ಆ ಬ್ರಾಹ್ಮಣನು ಅದೇನೆಂದು ಕೇಳಲು ಅವನ ಹೆಂಡತಿ  ಹೇಳತೊಡಗಿದಳು.