. ದ್ವಿತೀಯ ಪರಿಚ್ಛೇದಂ

ಶಬ್ದಾಲಂಕಾರವರ್ಣನನಿರ್ಣಯಂ

ಅಲಂಕಾರ *ಲಕ್ಷಣ

ಕಂದ|| ಪರಮಶ್ರೀಕೃತಿವಧುವಾ ಶರೀರಶೋಭಾಕರಂಗಳಪ್ಪ ಗುಣಂಗಳ್ |

ನಿರತಿಶಯಾಲಂಕಾರ-ಪ್ರರೂಪಿತಂಗಳ್ ಪುರಾಣ-ಕವಿ-ವಿದಿತಂಗಳ್ ||೧||

ಶಬ್ದಾಲಂಕಾರ ಮತ್ತು ಅರ್ಥಾಲಂಕಾರ

ಚಾ[1]ರು-ಶ್ರೀ-ನೃಪತುಂಗ-ವಿಚಾರ-ಕ್ರಮ-ಮಾರ್ಗ-ಗಣನೆಯೊಳ್ ಪರಮಾಲಂ- |

ಕಾರ-ವಿಭಾಗಂ-ವಿವಿಧಾಕಾರಂ ಶಬ್ದಾರ್ಥ-ಭೇದದಿಂದೆರಡಕ್ಕುಂ ||೨||

ಎರಡನೆಯ ಪರಿಚ್ಛೇದ

೧. ಪರಮಸುಂದರಿಯಾದ ಕಾವ್ಯರಮಣೀಯ ಶರೀರದ ಚೆಲುವನ್ನುಂಟು ಮಾಡುವ ಧರ್ಮಗಳೇ ಉತ್ತಮವಾದ ‘ಅಲಂಕಾರ ಸ್ವರೂಪ’ಗಳೆಂದು ಪೂರ್ವಸುರಿಗಳು ತಿಳಿದಿರುವರು. * ಈ ಅಲಂಕಾರ ಲಕ್ಷಣವು ದಂಡಿಯ ಮಾತಿನ ಪರಿಷ್ಕಾರದಂತಿದೆ. ಹೋಲಿಸಿ-‘ಕಾವ್ಯಶೋಭಾಕರಾನ್ ಧರ್ಮಾನಲಂಕಾರಾನ್ ಪ್ರಚಕ್ಷತೇ’ II-೧.ಪರಿಚ್ಛೇದದ ಕಡೆಯಲ್ಲಿ ಹೇಗೋ ಪರಿಚ್ಛೇದದ ಆದಿಯಲ್ಲೂ ‘ಪರಮಶ್ರೀ’, ‘ಚಾರುಶ್ರೀ’, ‘ನೃಪತುಂಗ’ ಎಂಬ ಶಬ್ದಗಳು ಮಂಗಳಾರ್ಥವಾಗಿ ಬರುತ್ತಿರುವುದು ಗಮನಾರ್ಹ.*

೨. ನೃಪತುಂಗನ ಚಾರುವಿಚಾರಚರಣಿಯ ಮಾರ್ಗದ ಪ್ರಕಾರ ವಿವಿಧವಾಗಿರುವ ಆ ಶ್ರೇಷ್ಠ ಅಲಂಕಾರ-ವಿಭಾಗಗಳಲ್ಲಿ (ಮೊದಲು) ‘ಶಬ್ದಾಲಂಕಾರ’, ‘ಅರ್ಥಾಲಂಕಾರ’ ಎಂಬ ಇಬ್ಬಗೆಗಳು ಬರುತ್ತವೆ.

ಅನ್ನೆಗಮದಱೊಳಗೆ ಸಮುತ್ಪನ್ನ-ಪ್ರಾಧಾನ್ಯಮನ್ಯಮರ್ಥಾಧಾರಂ |

ಮುನ್ನಂ ಶಬ್ದಾಲಂಕಾರಂ ನಿಶ್ಚಿತಮಕ್ಕೆ ಪೇ[2]ೞ್ವ ಮಾೞ್ಕೆಯೊಳೆನ್ನಾ ||೩||

ಶಬ್ದಸಾರೂಪ್ಯ

ಇಲ್ಲಿಗಿದು ತಕ್ಕುದಿಲ್ಲಿಗೆ ಪೊಲ್ಲದಿದೆಂದಱದು ಸಮಱ ಬಲ್ಲಂತೆಲ್ಲಂ |

ನೆಲ್ಲುಂ ಮೊಸರುಂಗುಡಿದಂತಲ್ಲದೆ ತಲ್ಲಣಿಸದಲಸದಿಡು ಮೃದು-ಪದಮಂ ||೪||

೩. ಈ ಇಬ್ಬಗೆಗಳಲ್ಲಿ ಪ್ರಾಧಾನ್ಯವನ್ನು ಪಡೆದಿರುವುದೂ, ಅರ್ಥಾಲಂಕಾರಕೆ ಆಧಾರಭೂತವಾದುದೂ ಮೊದಲು ಬರುವ ಶಬ್ದಾಲಂಕಾರವೇ ಎಂಬುದು ನನ್ನ ನಿರೂಪಣೆಯ ಕ್ರಮದಂತೆ ನಿಶ್ಚಿತವಾಗಿ ತಿಳಿಯಲಿ ! *ಈ ಇಡಿಯ ಪರಚ್ಛೇದವೇ ಕೇವಲ ಶಬ್ದಾಲಂಕಾರಗಳ ನಿರೂಪಣೆಗೆ ಮೀಸಲು. ಅದರ ಆದಿಯಲ್ಲಿ ಶಬ್ದಾಲಂಕಾರಕ್ಕೆ ಪ್ರಾಶಸ್ತ್ಯವನ್ನು ಹೇಳುವುದೇ ಕ್ರಮಪ್ರಾಪ್ತವಾಗಿದೆ; ಅರ್ಥಾಲಂಕಾರಕ್ಕಿಂತ ಮೊದಲು ಶಬ್ದಾಲಂಕಾರದ ವಿವರಣೆ ಸಕಾರಣವೆನಿಸಬೇಕಾದರೆ ಶಬ್ದಾಲಂಕಾರಕ್ಕೆ ಅರ್ಥಾಲಂಕಾರಕ್ಕಿಂತ ಹೆಚ್ಚಿನ ಪ್ರಾಧಾನ್ಯ ಸ್ವತಸ್ಸಿದ್ಧವೆಂಬ ಕಾರಣವನ್ನು ಹೇಳಿರುವುದು ಸಮುಚಿತವೂ ಆಗಿದೆ. ಇದನ್ನು ಗಮನಿಸಿದೆ ವಿಪರೀತಾರ್ಥ ಕಲ್ಪನೆಮಾಡಿರುವುದು ಅನುಚಿತ; ನೋಡಿ-“ತಾತ್ಪರ‍್ಯ: ‘ಇವುಗಳಲ್ಲಿ ಪ್ರಾಧಾನ್ಯ (ಪ್ರಧಾನ?)ವಾದದ್ದು ಅರ್ಥಾಲಂಕಾರ. ಮೊದಲು ಶಬ್ದಾಲಂಕಾರವನ್ನು ತಿಳಿಸುತ್ತೇನೆ’. ಈ ತಾತ್ಪರ‍್ಯದಲ್ಲಿ ಪೂರ್ವಾಪರ ವಿರೋಧ ಅಪರಿಹಾರ್ಯ. ‘ಅನ್ಯ’ ಎಂದರೆ ‘ಮತ್ತೊಂದು’ ಎಂಬರ್ಥದಂತೆ ಅದಕ್ಕೆ ಪ್ರತಿರೂಪವಾದ ‘ಒಂದು’ ಎಂಬರ್ಥವೂ ಸಂಸ್ಕೃತದಲ್ಲಿ ಪ್ರಸಿದ್ಧ, ‘ಅನ್ಯಃ+ಅಪರಃ’ ಎಂದು ಮುಂತಾದ ಜೋಡಿ ಪ್ರಯೋಗಗಳಲ್ಲಿ ‘ಒಂದು-ಇನ್ನೊಂದು’ ಎಂಬ ವಿವಕ್ಷೆ ಸಾಮಾನ್ಯ.”*

೪.ಇಲ್ಲಿಗೆ ಈ ಪದ ಉಚಿತ, ಇಲ್ಲಿ ಇದು ಅನುಚಿತ, ಎಂದು ತಿಳಿದು ಎಲ್ಲವನ್ನೂ ಅಂದವಾಗಿಸಿ, ಯಥಾಶಕ್ತಿ ಕ್ಲೇಶಪಡದೆ, ಆಲಸ್ಯದೋರದೆ, ‘ಬತ್ತವನ್ನೂ ಮೊಸರನ್ನೂ ಕಲಸಿದ ಹಾಗಿರದಂತಹ ಮೃದು ಪದಗಳನ್ನು ಬಳಸು. *ಸಮಱ = ಅಂದವಾಗಿಸಿ. ಬಲ್ಲಂತೆ=ಯಥಾಶಕ್ತಿ. ಈ ದೃಷ್ಟಾಂತವನ್ನೇ ಪೊನ್ನನೂ ಒಂದು ಪದ್ಯದಲ್ಲಿ ಪ್ರಸ್ತಾಪಿಸಿದ್ದಾನೆ-

ಸಾರತರೋಕ್ತಿಗೆ ನೆಲ್ಲುಂ ಮೋರುಂಗುಡಿದಂತೆ ನೇಱೆತಲ್ತಾರ್ಪರವ- |

ರ್ಕೋರೆ ನಿಬಂಧನೆ ಟೀಕಾಕಾರಂಗಲ್ಲದೆ ಪೆಱಂಗೆ ಕೋೞ್ವೋದಪುದೇ ||

-ಶಾಂತಿ ಪುರಾಣ, X.೧೮೨*

ಅರ್ಥಸಾಪೇಕ್ಷ್ಯ

ಗೞಯಿಸಿದರ್ಥಂ ಸಲೆ ಪಾಂಗೞಯದೆಯುಂ ಶಬ್ದವೊಂದದಿರ್ದೊಡೆ ಮುತ್ತುಂ |

ಮೆೞಸುಂ ಕೋದಂತಿರ್ಕುಂ ಕೞಲ್ಚಿ ಕಳೆಗೊಂದಿ ಮುಂದೆ ಬಾರದ ಪದಮಂ ||೫||

ಲಘ್ವಕ್ಷರದ ಪದಾಂತದ ಪಕ್ಕದಲ್ಲಿ ಸಂಯುಕ್ತಾಕ್ಷರ ಪದಾದಿ

ನಿಲಿಸಿ ಲಘುಪದಮನದನಗ್ಗಲಿಸಿರೆ ಮತ್ತೊತ್ತಿ ಬರ್ಪ ಪದಮಂ ತುದಿಯೊಳ್ |

ನಿಲೆ ಪೇೞ್ದೌಗಳ್ ಕೂ[3]ಸಿನ ತಲೆಯೊಳ್ ಬಿ[4]ಣ್ಪೊರೆಯನಿಟ್ಟವೋಲ್‌ಅಸುಖಕರಂ ||೬||

೫. ಒದಗಿಬಂದ ಅರ್ಥವು ಕ್ರಮ ತಪ್ಪದಿದ್ದರೂ ಕೂಡ, ಅದಕ್ಕೆ ಉಚಿತವಾದ ಶಬ್ದದ ಹೊಂದಿಕೆಯಿಲ್ಲದಿದ್ದರೆ ಮುತ್ತನ್ನೂ ಮೆಣಸಿನ ಕಾಳನ್ನೂ ಕೂಡಿಸಿ ಪೋಣಿಸಿದಂತಾಗುತ್ತದೆ. ಹಾಗೆ ಚೆನ್ನಾಗಿ ಹೊಂದಿಕೆಯಾಗಿ ಮುಂದೆ ಬಾರದಂತಹ ಪದವನ್ನು ಕಿತ್ತು ತೆಗೆಯಬೇಕು. *ಗೞೆಯಿಸಿದ=ಒದಗಿಬಂದ. ಕಳೆಗೊಂದಿ=ಕಳೆಗೆ+ಒಂದಿ (ಪದಚ್ಛೇದ); ಒಂದಿ=ಹೊಂದಿ, ಕಳೆಗೆ-ಕ್ರಿಯಾಪದ. ಈ ದೃಷ್ಟಾಂತವೂ ಕನ್ನಡ ಕವಿಗಳಿಗೆ ಪ್ರಿಯವಾಗಿದ್ದುದನ್ನು ಪೊನ್ನನ ಪ್ರಯೋಗ ಎತ್ತಿ ತೋರಿಸುತ್ತದೆ.

ಹೋಲಿಸಿ-

ಪೞಗಾಂಪರ ನುಡಿ ಮುತ್ತುಂ ಮೆೞಸುಂಗೋದಂದದಕ್ಕೆ ಭಾಷ್ಯಮನೊರ್ವಂ |

ಕೞೆಯೋದಿದಾತನಲ್ಲದೆ ಬೞೆವೞೆಯಂ ಬಂದು ಬರೆಯಲಾಗದಗಣ್ಯಂ

-ಶಾಂತಿಪುರಾಣ, X-೧೮೧

ಇಲ್ಲಿ ಅಕ್ಕಪಕ್ಕದ ಪದ್ಯಗಳಲ್ಲಿರುವ ಈ ದೃಷ್ಟಾಂತಗಳೇ ಅಲ್ಲಿಯೂ ಅಕ್ಕಪಕ್ಕದ ಪದ್ಯಗಳಲ್ಲಿಯೇ ಬಂದಿರುವುದನ್ನು ನೋಡಿದರೆ ಪೊನ್ನನು ಈ ಗ್ರಂಥವನ್ನು ಓದಿದ್ದಿರ ಬಹುದೆಂದು ಭಾವಿಸಲು ಶಕ್ಯವಿದೆ.*

೬. ಲಘ್ವಕ್ಷರಗಳಿರುವ ಪದವನ್ನಿರಿಸಿ, ಅದಕ್ಕೆ ಹತ್ತಿಕೊಂಡಂತೆ ಅದರ ಕಡೆಯ ಅಕ್ಷರದ ಬಳಿಯೇ ಒತ್ತಕ್ಷರದಿಂದ ಮೊದಲಾಗುವ ಪದವನ್ನು ಹೇಳಿದರೆ ಕೂಸಿನ ತಲೆಯ ಮೇಲೆ ದೊಡ್ಡ ಹೊರೆಯನ್ನು ಹೇರಿದಂತೆ ಕ್ಲೇಶಕರವಾಗುವುದು.

ಬರಿಸಿ ಕ್ಷಿತಿಪತಿಯಂ ಸಯ್ತಿರಿಸಿ ಪ್ರಿಯಕುಶಲ-ವಾರ್ತೆಯಂ ಬೆಸಗೊಂಡು |

ಸ್ಥಿರಮಿರ್ದು ಪ್ರಭು ನುಡಿಯೆ ಪ್ರರುಢ-ಮುದನಾದನಾತನೆಂ[5]ಬುದು ದೂಷ್ಯಂ ||೭||

ದೋಷಪರಿಹಾರ

ಕ್ಷಿತಿಪ[6]ತಿಯಂ ಬರಿಸಿ ಜಗನ್ನುತನಂ ಸಂತೈಸಿ ಕುಶಲ-ವಾರ್ತಾಂತರಮಂ |

ಮಿತ-ವಚನಂ ಬೆಸಗೊಂಡತಿ-ವಿತೀರ್ಣ-ಮುದನಾದನಾತನೆಂಬುದು ಮಾರ್ಗಂ ||೮||


[1] ಸಾರ ‘ಕ’.

[2] ಪೇಳ್ವೆ ಮಾಳ್ಕೆ ‘ಅ’.

[3] ಕೂಸಿ ಕತ್ತಲೆಯೊಳ್ ‘ಅ’

[4] ಬಿಣ್ಪೊರೆ ‘ಪಾ’

[5] ನೆಂಬುದಮಾರ್ಗ-ಈಪಾಠಾಂತರ ಕೇಶಿರಾಜನಿಂದ ಉದಾಹೃತವಾದ ಈ ಪದ್ಯದಲ್ಲಿ ಕಾಣಬರುತ್ತದೆ (ಶಬ್ದಮಣಿದರ್ಪಣ, ಸೂ.೫೯ರ ಕೆಳಗೆ)

[6] ದೂತಿಯಂ ಬರಿಸಿ ‘ಅ’