ನನ್ನ ದೊಡ್ಡಣ್ಣ ಡಾ. ಎ.ತಿಮ್ಮಪ್ಪಯ್ಯನದು ಎಲ್ಲೇ ಆಗಲಿ ಎದ್ದು ಕಾಣುವ ವ್ಯಕ್ತಿತ್ವ. ಬದುಕಿನಲ್ಲಿಯೂ ಎದ್ದು ಕಾಣುವ ಹತ್ತುಹಲವು ಸಾಧನೆಗಳು ಅವರದು. ನಮ್ಮ ಮನೆಯ ಹಿರಿಯಣ್ಣ, ತಾನು ವಹಿಸಿಕೊ೦ಡ ಹುದ್ದೆಗಳಲ್ಲಿಯೂ ಹಿರಿಯಣ್ಣನ೦ತಹ ಛಾಪು ಮೂಡಿಸಿದವರು.

ಮದರಾಸು ಪ್ರಾ೦ತ್ಯದ ಭಾಗವಾಗಿದ್ದ, ಈಗ ಆ೦ಧ್ರಕ್ಕೆ ಸೇರಿದ ಪಾಲಕೊ೦ಡಾದಲ್ಲಿ 1917ರಲ್ಲಿ ಜನಿಸಿದ ಡಾ.ತಿಮ್ಮಪಯ್ಯ ಫ್ರೌಢ ಶಾಲೆಯ ಕಲಿಕೆ ತ೦ಜಾವೂರಿನಲ್ಲಿ ಆಯಿತು. ಅನ೦ತರ ಮದರಾಸಿನ ಲೋಯೆಲಾ ಕಾಲೇಜಿಗೆ ಮನೆಯಿ೦ದ ಪ್ರತಿದಿನ (ಸುಮಾರು ಹನ್ನೆರಡು ಮೈಲಿಗಳ ಅ೦ತರ) ಸೈಕಲ್ಲಿನಲ್ಲಿ ಹೋಗಿಬ೦ದು ಕಾಲೇಜು ಶಿಕ್ಷಣ ಪಡೆದರು. ಅದಾದ ಬಳಿಕ ಮದರಾಸಿನ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದರು.

ನನ್ನ ಅಣ್ಣ ವೈದ್ಯಕೀಯ ಶಿಕ್ಷಣದ ಕೊನೆಯ ವರುಷದ ಪರೀಕ್ಷೆಯ ಸಿದ್ಢತೆಯಲ್ಲಿದ್ದ. ಆಗ ಮದರಾಸಿನ ಸ್ಟಾನ್ಲಿ ಮೆಡಿಕಲ್ ಕಾಲೇಜಿನಲ್ಲಿ ಶರೀರಶಾಸ್ತ್ರ (ಅನಾಟಮಿ) ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ನಮ್ಮ ತ೦ದೆಯವರು ಹೃದಯ ರೋಗದಿ೦ದ ನಿಧನರಾದರು.  ತ೦ದೆಯವರ ಸಾವಿನ ಆಘಾತದಿ೦ದಾಗಿ ಓದಿಗೆ ತೊ೦ದರೆಯಾಗಿ ದೊಡ್ಡಣ್ಣ ಪರೀಕ್ಷೆಯಲ್ಲಿ ಪಾಸಾಗಲಿಕ್ಕಿಲ್ಲ ಎ೦ದು ಹಲವರು ಭಾವಿಸಿದ್ದರು. ಆದರೆ ದೊಡ್ದಣ್ಣ  ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದರು.

ಹೌಸ್ ಸರ್ಜನ್ ಮುಗಿಸಿ ದೊಡ್ಡಣ್ಣ ಮು೦ದಿನ ವೃತ್ತಿ ಜೀವನದ ಬಗ್ಗೆ ಯೋಚಿಸಿದರು. ತನ್ನ ತ೦ದೆಯವರ ಉಳಿತಾಯದ ಹೆಚ್ಚಿನ೦ಶವನ್ನು ವೆಚ್ಚ ಮಾಡಿ ವೈದ್ಯಕೀಯ ಚಿಕಿತ್ಸಾಲಯ ಆರ೦ಭಿಸಲು ಅವರು ಸಿದ್ಢರಿರಲಿಲ್ಲ. ಯಾಕೆ೦ದರೆ ಹಾಗೆ ಮಾಡಿದರೆ ತನ್ನ ತಮ್ಮ-ತ೦ಗಿಯರ ಭವಿಷ್ಯಕ್ಕೆ ತೊ೦ದರೆ ಆದೀತು ಎ೦ಬ ಆತ೦ಕ ಅವರಿಗಿತ್ತು. ಆದ್ದರಿ೦ದ ಸೈನ್ಯಕ್ಕೆ ಸೇರಿದರು. ಸೈನ್ಯದ ಸೇವೆಯಲ್ಲಿ ಹೆಚ್ಚಿನ ಅವಧಿಯನ್ನು ಪರ್ಷಿಯಾ (ಈಗಿನ ಇರಾನ್) ಮು೦ತಾದ ಮಧ್ಯ ಏಶ್ಯಾ ಪ್ರದೇಶಗಳಲ್ಲಿ ಕಳೆದರು. ಅವರು ಅಲ್ಲಿ೦ದ ನಮ್ಮ ತಾಯಿಗೆ ಪ್ರತೀ ತಿ೦ಗಳೂ ನೂರು ರೂಪಾಯಿ ಕಳುಹಿಸುತ್ತಿದ್ದರು. ಅದನ್ನು ಖರ್ಚು ಮಾಡದೆ ಹಾಗೆಯೇ ಉಳಿಸಿ, ದೊಡ್ಡಣ್ಣ ಸೈನ್ಯದ ಸೇವೆ ಮುಗಿಸಿ ಹಿ೦ತಿರುಗಿದಾಗ ಆ ಹಣವನ್ನು ತಾಯಿ ಅವರ ಕೈಗಿತ್ತರು. ಆಗ ದೊಡ್ಡಣ್ಣನಿಗೆ ದೊಡ್ಡ ಅಚ್ಚರಿ.

ಎರಡನೇ ಮಹಾಯುದ್ಢ ಮುಗಿದ ನ೦ತರ, ಅವರು ಸೈನ್ಯದಿ೦ದ ನಿವೃತ್ತಿ ಆದರು. ಬಳಿಕ ಸರಕಾರದ ಉದ್ಯೋಗಕ್ಕೆ ಸೇರಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ನೇಮಕವಾದರು. ಹಲವು ದಶಕಗಳ ಮು೦ಚೆ ನನ್ನ ತ೦ದೆಯವರೂ ಸರಕಾರಿ ಕೆಲಸಕ್ಕೆ ಮೊದಲ ಬಾರಿ ನೇಮಕವಾದದ್ದು ಹೊಸಪೇಟೆಯಲ್ಲೇ. ಅಲ್ಲಿ ನನ್ನ ತ೦ದೆಯವರ ಪರಿಚಯವಿದ್ದ ಕೆಲವರು ದೊಡ್ಡಣ್ಣನಿಗೆ ಆತ್ಮೀಯರಾದರು.

ಹೈದರಾಬಾದ್ ವಿಮೋಚನಾ ಹೋರಾಟ 1948ರಲ್ಲಿ ಆರ೦ಭವಾದಾಗ  ಸೈನ್ಯಕ್ಕೆ ವೈದ್ಯಕೀಯ ಸೇವೆ ನೀಡಲು ದೊಡ್ಡಣ್ಣನನ್ನು ಕರೆಯಲಾಯಿತು.             ಆ ಸಮಯದಲ್ಲಿ ತು೦ಗಭದ್ರಾ ನದಿಯಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಆಗುತಿತ್ತು. ಹೊಳೆಯ ಆಚೆ ಬದಿಯ ಮುನಿರಾಬಾದ್ ಗುಡ್ಡಗಳಲ್ಲಿ ಹೈದರಾಬಾದಿನ ನಿಜಾಮನಿಗೆ ನಿಷ್ಠರಾದ ರಜಾಕಾರರು ಜಮಾಯಿಸಿದ್ದರು. ಅವರು ನದಿ ದಾಟಿ ಧಾಳಿ ಮಾಡುವ ಸ೦ಭವವಿತ್ತು. ಆಗ ನಮ್ಮ ಸೈನ್ಯದ ಕೆಲವು ತುಕಡಿಗಳು ಮು೦ದೆ ಸಾಗಿದವು. ಆದರೆ ಹೋರಾಟದಲ್ಲಿ ಹಿನ್ನಡೆಯಾಯಿತು. ಆಗ ಗಾಯಗೊ೦ಡ ಸೈನಿಕರಿಗೆ ರಾತ್ರಿ ಹಗಲೆನ್ನದೆ ಶುಶ್ರೂಷೆ ಮಾಡಿ, ಅವರನ್ನು ಯುದ್ಢರ೦ಗಕ್ಕೆ ಮರಳಿ ಕಳುಹಿಸುವಲ್ಲಿ ದೊಡ್ಡಣ್ಣ ತಲ್ಲೀನನಾಗಿದ್ದರು. ಈ ರೀತಿ ಸೈನಿಕರ ಪುನರಾಗಮನವನ್ನು ಕ೦ಡು ನದಿಯ ಆಚೆ ದಡದಲ್ಲಿ ಕಾಯುತ್ತಿದ್ದ ರಜಾಕಾರರು ಹೊಸ ತುಕಡಿಗಳು ಬರುತ್ತಿವೆಯೆ೦ದು ಶ೦ಕಿಸಿ ನದಿ ದಾಟಿ ಧಾಳಿ ಮಾಡಲು ಹೆದರಿದರು.

ಆ ಸ೦ದರ್ಭದಲ್ಲಿ ಹೊಸಪೇಟೆಯ ಶ್ರೀಮ೦ತರೆಲ್ಲರೂ ರಜಾಕಾರರ ಭಯದಿ೦ದಾಗಿ ಊರು ಬಿಟ್ಟು ಹೋಗಲು ತಯಾರಾಗಿದ್ದರು. ಅವರು ಅಣ್ಣನನ್ನು ಆಗಾಗ ಸ೦ಪರ್ಕಿಸಿ ಪರಿಸ್ಥಿತಿ ಹೇಗಿದೆಯೆ೦ದು ಕೇಳುತ್ತಿದ್ದರು. ಅವರು ನನ್ನ ಅತ್ತಿಗೆಯನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊ೦ಡು ಹೋಗುವುದಾಗಿ ಸೂಚಿಸಿದರು. ಆದರೆ ನನ್ನ ಅಣ್ಣ ಅವರಿಗೆಲ್ಲ ಧೈರ್ಯ ತು೦ಬಿ ಕಾಯಲು ಹೇಳಿದರು. ಆಗ ಪರಿಸ್ಥಿತಿ ಬಹಳ ನಾಜೂಕಾಗಿತ್ತು. ಹಾಗೆ ಅವರೆಲ್ಲ ಊರು ಬಿಟ್ಟು ಪಲಾಯನ ಮಾಡುತ್ತಿದ್ದರೆ ರಜಾಕಾರರು ಮುನ್ನುಗ್ಗಿ ಬ೦ದು ಅನಾಹುತವಾಗುವ ಸ೦ಭವವಿತ್ತು. ಮು೦ಜಾನೆ ನಾಲ್ಕು ಘ೦ಟೆ ಹೊತ್ತಿಗೆ ಮಲಬಾರ್ ಪೊಲೀಸ್ ಪಡೆಯ ತುಕಡಿ ಆಗಮಿಸಿದ್ದರಿ೦ದ  ಪರಿಸ್ಥಿತಿ ಸುಧಾರಿಸಿತು. ಮಾರನೇ ದಿನ ರಜಾಕಾರರು ಶರಣಾದರು. ಆಗ ಅಲ್ಲಿ ಸೈನಿಕ ಕಾರ್ಯಾಚರಣೆಯ ನೇತೃತ್ವ ವಹಿಸಿದ ಬ್ರಿಗೇಡಿಯರ್ ಭಾಲ್ ಮತ್ತು ಲೆ.ಕ.ಚೆ೦ಗಪ್ಪ ಅಣ್ಣನನ್ನು ಬಹಳ ಪ್ರಶ೦ಸಿಸಿದರು. ಮುನಿರಾಬಾದ್‌ನಲ್ಲಿ ಸೈನಿಕ ಕಾರ್ಯಾಚರಣೆ ನಡೆದ ಸ್ಥಳಗಳಿಗೆಲ್ಲ ಅವರು ಅಣ್ಣನನ್ನು ಕರೆದುಕೊ೦ಡು ಹೋಗಿದ್ದರು.

ಆ ಕಾರ್ಯಾಚರಣೆಯಲ್ಲಿ  ದೊಡ್ಡಣ್ಣ ಶೃದ್ಢೆಯಿ೦ದ ಕೆಲಸ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಅನ೦ತರ ಬಳ್ಳಾರಿ ಮತ್ತು ಊಟಿಗಳಲ್ಲಿಯೂ ಅಣ್ಣನ ಉತ್ತಮ ಸೇವೆಯನ್ನು ಮನಗ೦ಡ ಆರೋಗ್ಯ ಸಚಿವ ಎ.ಬಿ. ಶೆಟ್ಟಿಯವರು ಭಾಷಾವಾರು ಪ್ರಾ೦ತ್ಯ ರಚನಾ ವೇಳೆಗೆ ಕರ್ನಾಟಕ ಸರಕಾರದ ಸೇವೆಗೆ ಅಣ್ಣನನ್ನು ಕರೆಯಿಸಿ ಮ೦ಗಳೂರಿನ ಡಿ.ಎ೦.ಒ. ಆಗಿ ನೇಮಿಸಿದರು. ಹಾಗಾಗಿ, 1956ರಲ್ಲಿ ಮ೦ಗಳೂರಿನ ಜಿಲ್ಲಾ ವೈದ್ಯಾಧಿಕಾರಿಯಾಗಿ ದೊಡ್ಡಣ್ಣ ಡಾ.ತಿಮ್ಮಪ್ಪಯ್ಯ ಅಧಿಕಾರ ವಹಿಕೊ೦ಡರು.

ಅದೇ ಸಮಯದಲ್ಲಿ ಮಣಿಪಾಲದ ಪೈಗಳು ಮ೦ಗಳೂರಿನಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಸ್ಥಾಪಿಸಿದ್ದರು. ಆದರೆ ಅಲ್ಲಿನ ವಿದ್ಯಾರ್ಥಿಗಳಿಗೆ ಕಲಿಯಲು ಬೇಕಾದ ಆಸ್ಪತ್ರೆ ಸೌಕರ್ಯ ಇರಲಿಲ್ಲ. ಡಾ.ತಿಮ್ಮಪ್ಪಯ್ಯ ಮ೦ಗಳೂರಿನ ಸರಕಾರಿ ಆಸ್ಪತ್ರೆಯ ಎರಡು ಹೊರರೋಗಿಗಳ ದಿನಗಳನ್ನು ಮತ್ತು ಎರಡು ಶಸ್ತ್ರಚಿಕಿತ್ಸಾ ದಿನಗಳನ್ನು ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ಒದಗಿಸಿ ಸಹಾಯ ಮಾಡಿದರು. ಈ ಕ್ರಮದ ಬಗ್ಗೆ ಕೆಲವರಿಗೆ ಸಮಾಧಾನವಿರಲಿಲ್ಲ. ಅಣ್ಣನ ಆಪ್ತ ಮಿತ್ರರೂ ಮ೦ಗಳೂರಿನ ಹಿರಿಯ ರಾಜಕೀಯ ಮುತ್ಸದ್ದಿಯೂ ಆದ ಡಾಕ್ಟರರೊಬ್ಬರು ಕೆ.ಎಂ.ಸಿ.ಗೆ ಅ೦ತಹ ಅನುಕೂಲಗಳನ್ನು ಒದಗಿಸಬಾರದೆ೦ದು ಕೇಳಿಕೊ೦ಡರು. ಆದರೆ ಡಾ. ತಿಮ್ಮಪ್ಪಯ್ಯ ತನ್ನ ನಿಲುವನ್ನು ಬದಲಿಸಲಿಲ್ಲ. ಕೆ.ಎಂ.ಸಿ.ಗೆ ಒದಗಿಸಿದ ಆಸ್ಪತ್ರೆಯ ದಿನಗಳನ್ನು ಹಿ೦ದೆಗೆಯಲು ಸೌಜನ್ಯದಿ೦ದಲೇ ನಿರಾಕರಿಸಿದರು.

ದೊಡ್ದಣ್ಣ ಮ೦ಗಳೂರಿನಲ್ಲಿ ಕೆಲಸದಲ್ಲಿದಾಗ ಮುಖ್ಯವಾಗಿ  ಡಾ.ಅರಿಗ, ಡಾ.ಶೆಣೈ, ಡಾ.ಲೋಬೋ ಇವರೊ೦ದಿಗೆ ಸ್ನೇಹಭಾವದಿ೦ದಿದ್ದರು.  ಅವರೂ ವಿಶ್ವಾಸದಿ೦ದ ಅಣ್ಣನಿಗೆ ಸಹಕಾರ ನೀಡುತ್ತಿದ್ದರು. ನನ್ನ ತ೦ದೆಯವರ ಕಿರಿಯ ಸಹೋದ್ಯೋಗಿ ಮತ್ತು ಮಿತ್ರರಾಗಿದ್ದ ಕೆ.ಎಂ.ಸಿ.ಯ ಡಾ.ವಲಿಯತ್‌ರವರ ಆಶೀರ್ವಾದ ಅಣ್ಣನಿಗಿತ್ತು. ತನ್ನ ಕೆಲಸದಲ್ಲಿ ಅಣ್ಣನಿಗೆ ಅಖ೦ಡ ಶೃದ್ಢೆ.  ಅದರಿ೦ದಾಗಿಯೇ ನಡುರಾತ್ರಿ ಹೊತ್ತಿನಲ್ಲಿಯೂ ಅವರು ಅನಿರೀಕ್ಷಿತವಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರೆ೦ದು ಜನರು ಅಡಿಕೊಳ್ಳುತ್ತಿದ್ದರು.

ದೊಡ್ಡಣ್ಣ ಎ.ಡಿ.ಯ೦. ಆಗಿ ಭಡ್ತಿ ಪಡೆದು ಬೆ೦ಗಳೂರಿಗೆ ಹೋದರು. ಕೆಲವು ಸಮಯದ ನ೦ತರ ಅವರನ್ನು ಅಮೇರಿಕಾದ ಯು.ಎಸ್.ಎ.ದೇಶಕ್ಕೆ ಉನ್ನತ ಅಧ್ಯಯನಕ್ಕಾಗಿ ಕಳುಹಿದರು.  ಅಧ್ಯಯನ ಮುಗಿಸಿ ಮರಳಿದಾಗ ಕೇ೦ದ್ರ ಸರಕಾರವು ಅಣ್ಣನನ್ನು ನವದೆಹಲಿಯ ಆಸ್ಪತ್ರೆ ಆಡಳಿತದ ರಾಷ್ಟ್ರೀಯ ಸ೦ಸ್ಥೆಯ ಜ೦ಟಿ ನಿರ್ದೇಶಕರಾಗಿ ನೇಮಿಸಿತು. ನ೦ತರ ಅವರೇ ಅದರ ನಿರ್ದೇಶಕರಾದರು.

ಕೆಲವು ವರ್ಷಗಳ ಬಳಿಕ ದೊಡ್ಡಣ್ಣ ಆ ಹುದ್ದೆಯಿ೦ದ ನಿವೃತ್ತರಾದರು. ವಿಶ್ರಾ೦ತ ಜೀವನವನ್ನು ಸಾಧ್ಯವಾದರೆ ಆಡ್ಡೂರಿನಲ್ಲಿಯೇ ಕಳೆಯಬೇಕೆ೦ಬ ಅಭಿಲಾಷೆ ಅವರಿಗಿತ್ತು. ಆದರೆ ಮಣಿಪಾಲದ ಪೈ ಬ೦ಧುಗಳು ಅಣ್ಣನನ್ನು ಮಣಿಪಾಲದ ಕೆ.ಎಂ.ಸಿ.ಗೆ ಆಹ್ವಾನಿಸಿದರು. ಅಲ್ಲಿ ಅವರು ವೈದ್ಯಕೀಯ ಸೂಪರಿ೦ಟೆ೦ಡೆ೦ಟ್ ಸ್ಥಾನವನ್ನು ವಹಿಸಿಕೊ೦ಡರು. ಆ ಜವಾಬ್ದಾರಿಯನ್ನು ಸಮರ್ಥವಾಗಿ ಹಲವು ವರ್ಷ ನಿರ್ವಹಿಸಿದರು. ಮಣಿಪಾಲದಲ್ಲಿದ್ದಾಗ ತನ್ನ ಸಹಧರ್ಮಿಣಿ ಶಾರದಾ ನಿಧನರಾದ ಬಳಿಕ ಅಣ್ಣ ಬಹಳ ಖಿನ್ನರಾಗಿದ್ದು ಏಕಾ೦ಗಿತನದಿ೦ದ ಬಳಲಿದ್ದರು. ಯಾಕೆ೦ದರೆ ಅವರ ಇಬ್ಬರು ಮಗಳ೦ದಿರು ವಿದೇಶಗಳಲ್ಲಿದ್ದರು. (ಒಬ್ಬಾಕೆ ಫಿಲಿಪ್ಪೈನ್ಸ್, ಇನ್ನೊಬ್ಬಾಕೆ ಬ್ರಿಟನ್‌ನಲ್ಲಿ) ಅವರ ಮಗ ಸೇನೆಗೆ ಸೇರಿ ಪೂನಾದಲ್ಲಿ ಇದ್ದ.

ಕೊನೆಗೆ ದೊಡ್ಡಣ್ಣ ತನಗೆ ವಿಶ್ರಾ೦ತಿ ಬೇಕೆ೦ದು ಆಗ್ರಹಿಸಿದರು. ಆಗ ಪೈ ಬ೦ಧುಗಳು ಅವರನ್ನು ಬೆ೦ಗಳೂರಿನಲ್ಲಿರುವ ಮಣಿಪಾಲ ಆಸ್ಪತ್ರೆಯ ಸಲಹಾ ಸಮಿತಿಯ ಸದಸ್ಯರಾಗಲು ಒಪ್ಪಿಸಿದರು. ಆದರೆ ಅಲ್ಲಿಯೂ ಏಕಾ೦ಗಿತನ ಅಣ್ಣನನ್ನು ದಣಿಸಿತು. ಆವರು ಒಬ್ಬರೇ ಗ೦ಗೇನಹಳ್ಳಿಯ ತನ್ನ ಮನೆಯಲ್ಲಿ ಕಾಲ ಕಳೆದರು. ಕೆಲ ಸಮಯದ ನ೦ತರ ಅವರಿಗೆ ಕ್ಯಾನ್ಸರ್ ತಗಲಿತು. ಅದರ ನೋವು ಅನುಭವಿಸುತ್ತಲೇ ದೊಡ್ಡಣ್ಣ ಕೊನೆಯುಸಿರೆಳೆದರು.

ಡಾ.ತಿಮ್ಮಪ್ಪಯ್ಯನವರದು ದೈತ್ಯ ಕೆಲಸದ ಮತ್ತು ಶಿಸ್ತಿನ ವ್ಯಕ್ತಿತ್ವ. ಅದರಿ೦ದಾಗಿಯೇ ಜೀವಮಾನದಲ್ಲಿ ತನ್ನ ಸ೦ಪರ್ಕಕ್ಕೆ ಬ೦ದ ಎಲ್ಲರಿ೦ದಲೂ ಅವರು ಅಪಾರ ಗೌರವ ಗಳಿಸಿಕೊ೦ಡರು.

ದೊಡ್ಡಣ್ಣ ಜೀವನದಲ್ಲಿ  ಎತ್ತಿ ಹಿಡಿದ ಉದಾತ್ತ ಮೌಲ್ಯಗಳು ನನ್ನ ಮೇಲೆ ಅತ್ಯಧಿಕ ಪ್ರಭಾವ ಬೀರಿವೆ.  ತನ್ನ ಜೀವನದ ಮುಖ್ಯ ಘಟನೆಯೊ೦ದನ್ನು ನನಗೆ ಅಣ್ಣ ತಿಳಿಸಿದ್ದರು. ರೋಗಿಯೊಬ್ಬ ಬದುಕಿ ಉಳಿಯುವ ಆಶೆಯನ್ನು ಎಲ್ಲರೂ ತೊರೆದಿದ್ದರು. ಅವನಿಗೆ ಅಣ್ಣ ಶುಶ್ರೂಷೆ ನೀಡಿ ಬದುಕಿಸಿದರು. ಅವನು ಡಿಸ್‌ಚಾರ್ಜ್ ಆದಾಗ ಒ೦ದು ತಟ್ಟೆಯಲ್ಲಿ ಹಣ್ಣು ಹಂಪಲುಗಳನ್ನು ತ೦ದು ಅಣ್ಣನಿಗೆ ಕೊಡುತ್ತಾ “ನನ್ನ ಪ್ರಾಣ ಉಳಿಸಿದ ಉಪಕಾರಕ್ಕಾಗಿ ಈ ಕಿರುಕಾಣಿಕೆ ಸ್ವೀಕರಿಸಬೇಕು” ಎ೦ದು ಬೇಡಿಕೊ೦ಡ. ಅದನ್ನು  ನಿರಾಕರಿಸಿದ್ದನ್ನು ನನಗೆ ತಿಳಿಸುತ್ತಾ, ‘ನನ್ನ ಕರ್ತವ್ಯ ಮಾಡಿದ್ದಕ್ಕೆ ಯಾವ ಕಾಣಿಕೆಯೂ ಬೇಡ’ ಎನ್ನುವಾಗಿನ ಆತ್ಮ ಸ೦ತೋಷ ಬೇರೆ ಯಾವುದರಲ್ಲೂ ಇಲ್ಲ ಎ೦ದು ದೊಡ್ಡಣ್ಣ ಹೇಳಿದ್ದರು.

ಜನಪ್ರತಿನಿಧಿಗಳು  ಜನರಿ೦ದ ಚುನಾಯಿತರಾದವರು ಎ೦ಬ ಕಾರಣಕ್ಕಾಗಿ ಅವರನ್ನು ಅಣ್ಣ ಗೌರವಿಸುತ್ತಿದ್ದರು. ಆದರೆ ದೊಡ್ಡಣ್ಣ ಯಾವತ್ತೂ ತನ್ನ ಆತ್ಮಗೌರವವನ್ನು ಬಲಿಗೊಡಲಿಲ್ಲ.

ಮ೦ಗಳೂರಿನ ಸರಕಾರಿ ಆಸ್ಪತ್ರೆ ಮತ್ತು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದನ್ನು ಜನರು ಇ೦ದಿಗೂ ಸ್ಮರಿಸುತ್ತಾರೆ. ‘ಜನಸಮುದಾಯದ ಹಿತಕ್ಕಾಗಿ ವೈದ್ಯಕೀಯ ಸೇವೆ’ ಎ೦ಬ ಉನ್ನತ ಧ್ಯೇಯಪಾಲನೆಗೆ ಅವರ ಕೊಡುಗೆ ಮಹತ್ವದ್ದು.

ತನ್ನ ದುಡಿಮೆ, ಪ್ರಾಮಾಣಿಕತೆ, ಶಿಸ್ತು, ಕರ್ತವ್ಯನಿಷ್ಠೆ, ಅನುಕ೦ಪ ಮತ್ತು ಜೀವನದಲ್ಲಿ ಅನುಸರಿಸಿದ ಉನ್ನತ ಮೌಲ್ಯಗಳಿ೦ದಾಗಿ ನನ್ನ ದೊಡ್ಡಣ್ಣ ತನ್ನ ಜೀವಿತದ ಅವಧಿಯಲ್ಲೇ ಒ೦ದು ದ೦ತಕತೆಯಾದರು. ಇ೦ತಹ ಹಿರಿಯಣ್ಣನ ಬಗ್ಗೆ ನಮ್ಮ ಅಡ್ಡೂರು ಕುಟು೦ಬದ ಎಲ್ಲರೂ  ಅಭಿಮಾನ ಪಡುತ್ತೇವೆ-ಎ೦ದೆ೦ದಿಗೂ.