ಬೇಂದ್ರೆ ೧೮೯೬ ಜನವರಿ ೩೧ ರಂದು ಧಾರವಾಡದಲ್ಲಿ ಜನಿಸಿದರು. ಕನ್ನಡದ ಪ್ರಸಿದ್ದಕವಿ. ಹೊಸಗನ್ನಡದ ಭಾವಗೀತದ ಮೂಲ ಪ್ರವರ್ತಕರಲ್ಲೊಬ್ಬರು. ಹಾಗೂ ಅದರ ಪ್ರಮುಖ ಪ್ರತಿನಿದಿಗಳು. ‘ಅಂಬಿಕಾತನಯದತ್ತ, ಎಂಬುದು ಅವರ ಕಾವ್ಯ ನಾಮ. ಬಿ.ಎ ಪದವಿ ಗಳಿಸಿ ಧಾರವಾಡದಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಬಿಸಿದ ಇವರು ಗೆಳೆಯರಗುಂಪು ಎಂಬ ಸಾಹಿತ್ಯ ಸಂಘವನ್ನು ಕಟ್ಟಿ ಕಾವ್ಯವಾಚನ, ಕಾವ್ಯವಿಮರ್ಶೆ, ಇತರ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಜಯಕರ್ನಾಟಕ ಮುಂತಾದ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಅಲ್ಲದೆ ಕೆಲಕಾಲ ಆಮಾಸ ಪತ್ರಿಕೆಯ ಸಂಪಾದನೆಯ ಕಾರ್ಯ ನಿರ್ವಹಿಸಿದರು. ಬೇಂದ್ರೆಯವರ ಸಾಹಿತ್ಯ ಕೃಷಿ ವಿಫುಲವಾದದ್ದು.

ಕವಿತೆ, ನಾಟಕ, ವಿಮರ್ಶೆ, ಸಂಶೋಧನೆ. ಎಲ್ಲದರಲ್ಲಿಯೂ ಬೇಂದ್ರೆಯವರ ಕೈವಾಡ ಇದೆ. ಕಾವ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಕೃಷ್ಣ ಕುಮಾರಿ ಅವರ ಪ್ರಕಟಿತ ಮೊದಲ ಕವನ. ಬೇಂದ್ರೆಯವರ ಪ್ರಥಮ ಕವನಸಂಕಲನ ‘ಗರಿ, ಯಲ್ಲಿ ಭಾವೋತ್ಕಟತೆ, ಛಂದಸ್ಸಿನ ನಿರರ್ಗಳತೆ ಹಾಗೂ ಗೇಯತೆ ಚನ್ನಾಗಿ ಮೂಡಿಬಂದಿದೆ. ಬೇಂದ್ರೆಯವರ ಪ್ರೇಮಗೀತೆಗಳು ಹಾಗೂ ಸಾಮಾಜಿಕ ಗೀತೆಗಳಲ್ಲಿ ವಸ್ತುನಿಷ್ಟತೆ ಹೆಚ್ಚಾಗಿ ಕಂಡುಬರುತ್ತದೆ. ‘ಕುಣಿಯೋಣು ಬಾರಾ, ‘ಮನದನ್ನೆ, ‘ನೀ ಹೀಂಗ ನೋಡಬ್ಯಾಡನನ್ನ, ಈ ಕವನಗಳ ಮೂಲಭಾವ ಕವಿಯದೇ ಆಗಿದ್ದರೂ ಅದು ಸಾಮಾನ್ಯ ಜೀವನದ ಒಂದು ಭಾಗವಾಗಿ ಮಾತ್ರ ಬರುತ್ತದೆ. ‘ಪುಟ್ಟವಿಧವೆ, ಹೆಣದಹಿಂದೆ, ಅನ್ನಾವತಾರ, ಇಂಥ ಕವನಗಳಲ್ಲಿಯ ಹೃದಯ ವೇದಕತೆ ಈ ಆತ್ಮೀಯತೆಯ ಫಲವಾಗಿದೆ. ಗೀತದಲ್ಲಿ ಕವಿಯ ಸುಖ ದುಃಖಗಳು, ದಾಂಪತ್ಯದ ಸರಸ-ವಿರಸಗಳು, ಸಂಸಾರದ ಅನೇಕ ತಾಪತ್ರಯಗಳು ಇವೇ ಕಾವ್ಯದಲ್ಲಿ ವಸ್ತುವಾಗಿವೆ. ‘ಜೋಗಿ, ಕವನದಲ್ಲಿ ಜೀವನದಲ್ಲಿ ಮಾಡುವ ಕಾಳ ರಾತ್ರಿಯ ಅನುಭವ ವರ್ಣಿತವಾಗಿದೆ.

ಬೇಂದ್ರೆಯವರು ಕೆಲವು ಸಾಂಕೇತಿಕ ಅಸಂಗತ ನಾಟಕಗಳನ್ನು ಬರೆದಿದ್ದಾರೆ. ‘ಸಾಯೋ ಆಟ, ‘ದೆವ್ವದ ಮನೆ, ‘ಹೊಸ ಸಂಸಾರ, ಹಾಗೂ ‘ಜಾತ್ರೆ, ‘ನಗೆಯ ಹೊಗೆ, ಹಾಗೂ ‘ಉದ್ದಾರ, ದುರಂತ ನಾಟಕದ ರೂಪಲಕ್ಷಣಗಳನ್ನೆಲ್ಲ ಒಳಗೊಂಡಿದೆ. ನಗೆಯ ಹೊಗೆ ನಾಟಕದಲ್ಲಿ ನಗೆಯಿದ್ದರೂ ಅದು ಕರುಣಕ್ಕಿಂತ ಹೆಚ್ಚು ಕಟುವಾಗಿದೆ. ಈ ನಾಟಕದಲ್ಲಿ ‘ಬಹಿಷ್ಕಾರದ, ದ ದುರಂತ ವೈಯಕ್ತಿಕವಾಗಿದೆ. ಉದ್ದಾರ, ನಾಟಕದಲ್ಲಿ ಸಮಾಜದ ಬೇರೆ ಬೇರೆ ಪಂಗಡಗಳ ನಡುವೆ ನಡೆಯುವ ಹೋರಾಟ ನಾಟಕದ ಕ್ರಿಯೆಗೆ ಹೆಚ್ಚು ಶಕ್ತಿಯನ್ನೊದಗಿಸುವುದನ್ನು ಕಾಣುತ್ತೇವೆ.

ಬೇಂದ್ರೆಯವರ ಲೇಖನ ಶಕ್ತಿ ಕನ್ನಡಕ್ಕೇ ಸೀಮಿತವಾಗಿಲ್ಲ. ಮರಾಠಿಯಲ್ಲೂ ಕೃತಿ ರಚನೆ ಮಾಡಿದ್ದಾರೆ. ೧೯೬೫ ರಲ್ಲಿ ಅವರ ಮರಾಠಿ ಕೃತಿ ‘ಸಂವಾದಕ್ಕೆ, ಕೇಳ್ಕರ್, ಬಹುಮಾನ ದೊರೆತಿದೆ. ಅವರು ಇಂಗ್ಲಿಷಿನಿಂದ ಭಾಷಾಂತರ ಮಾಡಿರುವ ಅರವಿಂದರ ಭಾರತೀಯ ಪುನರ್ಜನ್ಮ, ಹಾಗೂ ರಾನಡೆಯವರ ಉಪನಿಷದ್ರಹಸ್ಯಗಳು, ಅಮೂಲ್ಯ ಗ್ರಂಥಗಳು. ‘ವರಕವಿ, ಎಂಬ ಬಿರುದಿಗೆ ಭಾಜನರಾದ ಬೇಂದ್ರೆಯವರಿಗೆ ಹಲವು ಪ್ರಶಸ್ತಿಗಳು ದೊರೆತಿವೆ. ೧೯೫೯ ರಲ್ಲಿ ಇವರ ಅರುಳು-ಮರುಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದವು. ೧೯೭೩ ರಲ್ಲಿ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯು ಅವರ ನಾಕು ತಂತಿ ಕವನ ಸಂಕಲನಕ್ಕೆ ಲಬ್ಯವಾಗಿದೆ. ೧೯೪೩ ರಲ್ಲಿ ಶಿವಮೊಗ್ಗದಲ್ಲಿ ನಡೆದ ೨೭ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ೧೯೯೫ ಬೇಂದ್ರೆ ಶತಮಾನೋತ್ಸವ ವರ್ಷ ರಾಜ್ಯಾದ್ಯಂತ ಅವರ ಸಾಹಿತ್ಯ ಜೀವನ ಕುರಿತ ಚರ್ಚೆಗಳು ನಡೆದವು.

ರಸವೆ ಜನನ

ವಿರಸ ಮರಣ

ಸಮರಸವೇ ಜೀವನ

ಹೀಗೆ ಕೇವಲ ಆರೇ ಆರು ಶಬ್ದಗಳಲ್ಲಿ ಜೀವನವನ್ನು ಕುರಿತು ಅತ್ಯಂತ ಅರ್ಥಗರ್ಬಿತವಾಗಿ, ಪರಿಣಾಮಕಾರಿಯಾಗಿ, ಹೃದಯಸ್ಪರ್ಶಿಯಾಗಿ ವ್ಯಾಖ್ಯಾನ ಮಾಡಿರುವ ದಾರ್ಶನಿಕ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಒಟ್ಟಿನಲ್ಲಿ ಬೇಂದ್ರೆಯವರ ವ್ಯಕ್ತಿತ್ವ ಮಹತ್ವ ಪೂರ್ಣವಾದುದಾಗಿದೆ.