ನೀ ಏಳೇ ಮಾಳಗಿಯಾ ಒಳಗೀರೆ

ಅತ್ತಗತ್ತಗಂದೇ ಹೆತ್ತತ್ತಗ ದೆನಿಗುಡುವ
ಓಯ್ಗುಣ್ಣ ಬೇಡಾ ಒಳಗಿರು

ಓಯ್ಗುಣ್ಣದಿದ್ದರೆ ಒಳಗಿದ್ದ ಕಾಂಬಾನೆ
ಮೆಟ್ಟ ಮಣಿಮಾಡಾ ಮುರುವಾನೆ | ರೂಪತಿ
ನೀನಿದ್ದ ಒಳಗೇ ಬರೂವಾನೆ | ”
ಮೆದಲಗೀ ತೊಟ್ಟೇ ಎಳಗ್ವಾನೆ | ರೂಪತಿ
ಅಡ್ಡನೇ ಹರಿಯಾ ನೆನಕಣೇ.

ಅಡ್ಡನೇ ಹರಿಯಾನೆನೆವದ್ನು ರೂಪತಿಯ
ಮೆದಲಗೇ ಅಲ್ಲೆ ತಿರುವಕ್ಕೇ

ಮೆದಲಗೇ ಅಲ್ಲೇ ತಿರುವಾದ್ದ ಕಾಂಬಾನೇ
ರಟ್ಟೀಯ ತೊಟ್ಟೇ ಎಳವನೇ | ವದ್ನು | ರೂಪತಿಯ
ರಾಜಂಗ್ಳಲ್ ತಂದೆ ನಿಲಸೂವ

ಅಟ್ಟಂಬಾ ಮಾತಾ ಕೇಳಾಳೆ ರೂಪತಿ
ಬಾಗೀಲಗೀಳಾನೇ ಬೀಗೂದಳೆ | ರೂಪತಿ
ಸಿಂಗರಸೀ ಆನೀ ಬಿಗದಾಳೆ | ”
ಕೋಲಾಮೆನ್ ಕೋಲಾ ಬಿಗೀದಾಳೆ | ”
ತಾ ಏಳ್ ಮಾಳಗೀಯಾ ಒಳಗೋಗೆ

ತಾ ಏಳ್ ಮಾಳಗೀಯಾ ಒಳಗೋಗದ್ ಕಾಂಬಾನೇ
ಕೂತಾ ಮಂಚವ ಜಡದೆದ್ದೇ | ಕರ್ಣನು

ರಾಜಂಗ್ಳ ಮೆಟ್ಟಾ ಇಳದಾನೇ | ”
ರಾಜೋಬಿದಿಗಾಗೇ ನೆಡದಾನೇ | ”

ಗುರ್ರಾಯ್ನರಮನೆಗೇ ಬರೋವಾನೇ
ಮಾಳಗ್ಮೆನಿಂದ ನೋಡಾನೆ ಗುರ್ರಾಯ

ಪಾಂಡವರರಸೀ ಬರಲಿಲ್ಲಾ | ಅಂದೇಳೇ
ಮಾಡ್ಗಿಂದು ಕೆಳಗೆ ಇಳದಾನೆ, | ಗುರ್ರಾಯ

ಬಂದಿ ಬಾಗಲ್ಲೇ ನಿಲೋವಾನೆ | ಕರ್ಣನು
ಹೋಗಿ ರಾಜಂಗ್ಳ ನೆಗದತ್ತೇ | ”
ಮಳೂಗೀ ಒಳಗೆ ನೆಡದಾನೆ | ”
ತೂಗುಮಂಚದಲೆ ಕುಳತಾನೆ.

ತೂಗುಮಂಚದಲೆ ಕುಳುವುದ್ನು ಗುರ್ರಾಯ
ಆಗೊಂದು ಮಾತಾ ನುಡೀದಾನೇ
ಅದು ಏನು ಕರ್ಣನೆ ಹಾಂಗೋಗ್ ಹಿಂಗ್ ಬಂದೆ
ತಂದ್ಯೇನೋ ಪಾಂಡೋರಾ ಅರಸಿಯ
ಮುಂದೋದ್ರ ತಂಗ್ಯಂಬ್ರು ಹಿಂದೋದ್ರ ಮಡದ್ಯಂಬ್ರು
ಬರುವಾದಿಲ್ಲಂತೂ ತನ್ನಾ ಒಡನಲ್ಲಿ

ಬಾವಾಮಯ್ದೀನಿ ಒಂದಾದೀಲೋಗ್ವಂಗೆ
ಕಂಡವ್ರು ತನ್ನಾ ಸತಿಯೆಂಬ್ರು | ಅಂದೇಳಿ
ಬರುವಾದಿಲ್ಲಂತೋ ತನ್ನಾ ಒಡನಲ್ಲಿ | ”
ಹಿಂದಕೆ ತಿರಗೇ ಬರೋತಿದ್ದೆ”

“ರೋಪತಿ ಮಿಯ್ಯಬಣ್ಣ ತುಂಬೀ ಹೂಂಗಿನ ಬಣ್ಣ
ಕಾಣಿಸಲೊಂದು ಕಲೆಯಿಲ್ಲ | ಕರ್ಣನೆ
ಬಾಯಾಮಾತಾಡಿ ತೆಳ್ದ್ ಬಂದ್ಯ” | ಅಂದೇಳೀ

ತಮ್ಮಾ ದುಸುವಯ್ನಾ ದೆನಿದೂರೇ | ರ್ವದ್ನು | ದುಸುವಯ್ಯ
ಓಯ್ಗುಂಡೇ ಒಡನೇ ಬರುವಾನೇ

ಇಂದೂ ಕರದಂವಲ್ಲ ಬಂದಾನೇ ದುಸುವಯ್ಯ
ನಿಂದಾನೆ ಗುರುರಾಯ್ನಾ ಒಡನಲ್ಲಿ ನಿಂದೀಕಂಡೆ
ಏನು ಕಾರಣಲಿ ಕರದೀಯೋ

ಕರದಂ ಕಾರ್ಯವಿಲ್ಲ ಕಿರಿದುಂಬೆಸರಸಯ್ಯೆ
ಪಾಂಡವ್ರ ಸೆರ್ಮಲ್ಲೇ ಇಳ್ಗೇ ಬಾರೋ

ಅಟ್ಟಂಬಾ ಮಾತಾ ಕೇಳಾನೆ ದುಸವಯ್ಯ
ಪಾಂಡೋರಾ ಕರ್ಕಂಡೇ ನೆಡದಾನೆ | ದುಸುವಯ್ಯ
ಕೆಂಡದ ಕೂಟಿಗಾಗೇ ನೆಡದಾನೆ | ದುಸುವಯ್ಯ

ಪಾಂಡೋರಾ ಸೆರಮಲ್ಲೇ ಮಡಗಾನೆ | ದುಸುವಯ್ಯ
ಮೂವದ ಸರತಟ್ಟೇ ಇಳಿದಾನೆ | ದುಸುವಯ್ಯ
ಗುರುರಾಯ್ನ ಒಡನೋಗೇ ನಿಲೋವಾನೆ,

ಗುರ್ರಾಯ್ನಾ ಒಡ್ನೋಗಿ ನಿಲ್ವದ್ನು ಗುರ್ರಾಯ
ಲಾಗೊಂದು ಮಾತಾ ನುಡೀದಾನೆ

ಲಾಗೊಂದಾ ಮಾತಾ ಏನಂದಿ ನುಡದಾನೆ
ಪಾಂಡವರರಸೀ ಕರತಾರೋ | ಅಂಬುದ್ನು ದುಸವಯ್ಯ
ಮುರುದಾಪಿನಲ್ಲೇ ಕೊಣದಾನೇ

“ಹಿತ್ತೀಲ ಕಣಕೇ ಚವ್ತೀಯೆ ನೆಟ್ಟೀದೆ
ನೆಟ್ಟವರಿಗರ್ಧಾ ನೆರಿಗರ್ಧಾ| ಅಣ್ ತಂದಾಮಡದಿ
ಅಣ್ಣಗೆ ಅರ್ಧಾ ತನಗರ್ಧಾ | ” ಅಂದೇಳೇ

ರಾಜಂಗಳ ಮೆಟ್ಟಿ ಇಳೀದಾನೇ | ದುಸುವಯ್ಯ
ರಾಜಬಿದಿಗಾಗೇ ನೆಡದಾನೇ | ದುಸುವಯ್ಯ

ಅತ್ತಗ್ ಅತ್ತಗ್ ಅಂದೇ ದೆನಿದೂರೇ
ಅತ್ತಗತ್ತಗಂದೇ ಹತ್ತತ್ತರ ದೆನಿದೂರೇ

ಒಯ್ಗಣಾ ರೂಪತಿ ಒಳಗಿದ್ದೇ | ದ್ದಾ | ದ್ ಕಾಂಬನೆ
ಮೆಟ್ಟಿ ಮಣಿಮಾಡಾ ಮುರದಾನೆ | ದುಸುವಯ್ಯ
ಅತ್ತೂಗಿದ್ದೊಳಗೇ ನೆಡದಾನೆ | ದುಸುವಯ್ಯ
ಮೆದಲಗೀ ತಟ್ಟೀ ಎಳದಾನೆ

ಮೆದಲಗೀ ತಟ್ಟೀ ಎಳ್ವದ್ನು ರೂಪತಿ
ಅಡ್ಡಾನೆ ಹರಿಯಾ ನೆನದಾಳೆ.

ಆಡ್ಡಾನೇ ಹರಿಯಾ ನೆನವದ್ನು ರೂಪತಿಯಾ
ಮೆದಲಗೇ ಅಲ್ಲೇ ತಿರುವಾಗೇ | ಗ | ದ್ದ ಕಂಬಾನೇ
ರಟ್ಟೀಯ ತಟ್ಟೇ ಎಳದಾನೇ | ದುಸುವಯ್ಯ
ರಾಜಂಬೀದಿಗ್ ತಂದೇ ನಿಲಸಾನೆ

ರಾಜಬೀದಿಗ್ ತಂದೇ ನಿಲಸ್ವದ್ನು ದಾಸುವಯ್ಯ
ಆಗೊಂದು ಮಾತಾ ನುಡೀದಾನೇ

ಬಿಚ್ಚೀದ ಸೀರಿ ಉಟ್ಟೀಕೋ ಅತ್ತೀಗೇ
ದಾರೀಲೋಗ್ವರಿಗೆ ಸಕೋಣಾವೇ
ಬಿಚ್ಚಿದ ಸೀರೆ ಮುಡಿಯಾ ಕಟ್ಟೀಕೊ ಅತ್ತಿಗೆ
ಹಾದೀಲೋಗ್ವರಿಗೆ ಸಕೂಣಾವೇ”

“ಕಳ್ಳ ದುಸುವಯ್ನ ಭೀಮೆದ್ದಿ ಮುರಿಯಾಲೆ
ರಕ್ತದ ಕೋಡಿಯಾಗೇ ಹರಿಯಾಲೇ | ತಾನಿನ್ನು
ಅದ್ದಸ್ ದೇವಂಗಾ ನೆರ್ದುಡುವೆ

ಕಳ್ಳದುಸುವಯ್ನ ಭೀಮೆದ್ದಿ ಮುರಿಯಾಲೆ
ರಕ್ತದ ಕೋಡಿಯಾಗೇ ಹರಿಯಾಲೇ ತಾನಿನ್ನು
ಅದ್ದಸ್ ಸೆರ್ಮುಡಿಯಾ ಸೆಳ್ದೇಕಟ್ಟೇ

ದುಸುವಯ್ಯಾ ಮುಂದಾಗೇ ರೂಪತಿ ಹಿಂದಾಗೇ
ರಾಜಬೀದ್ಯಲ್ಲೆ ನೆಡದಾರೆ | ರೂಪತಿ ದುಸುವಯ್ಯ
‍ಗುರ್ನಾಯ್ನರಮನೆಗೇ ನೆಡದಾನೆ

ಮಾಡ್ನ ಮೆನದ್ದೇ ನೋಡಾನೇ ಗುರ್ರಾಯ
ಪಾಂಡವರರಸೀ ಬರೆತದೆ | ಅಂದೇಳೆ
ಮಾಡ್‌ಗಿಂದೆ ಕೆಳಗೆ ಇಳದಾನೆ | ದುಸ್ವಯ್ಯಾ
ರಾಜಂಗ್ಳ ಮೆಟ್ಟಾ ಇಳದಾನೆ.

ಕಲ್ಲೆಕ್ಸಾನೆ ಮುಳ್ಳೆಲ್ಲ ಕಡಿಸಾನೆ
ಹಾದಿಗ್ ಒಪ್ಪೆಳ್ ತಳೀದಾನೆ | ರೂಪತಿ
ಅಂಚಂಚನ ಮೆನೇ ಬರೋವಾಳೆ |

ಅಂಚಂಚನ ಮೆನೇ ಬರುವುದ್ನು ಗುರ್ರಾಯಾ
ಆಗೊಂದು ಮಾತಾ ನುಡೀದಾನೆ

“ಅವ್ವ ನಿನ್ಮನೆಗೆ ಸೊಸ್ಬಂತೇ ರೂಪತಿ
ಸೊಸ್‌ಗೊಂದ್ ಚಂಬುದಕಾ, ಕೊಡೆಹೋಗೇ
ಅವ್ವ ನಿನ್ಮನೆಗೆ ಸೊಸ್ಬಂತೇ ರೂಪತಿ

ಸೊಸಿಗೊಂದ್ ಹೊನಮಣೆಯಾ ಕೊಡೆಹೋಗೇ
ಅಟ್ಟಂಬಾ ಮಾತಾ ಕೇಳಾಳೆ ಬೊನ್ಪತಿ
ತಡದಳೆ ಚಂಬಗಲೇ ಉದಕವೇ

ಒಂದು ಚಂಬುದಕಾ ಇತ್ತೆಲಿಗ್ ತತ್ತೀಯೇ
ಕೊಟ್ಕೊಳ್ಳೆ ನಿನ್ನಾಮಗದೀರ್ಗೆ | ಅಂದೇಳೇ

ಮಾಳೂಗೀ ಒಳಗೇ ನೆಡದಾಳೇ
ಅಟ್ಟಂಬಾಮಾತಾ ಕೇಳಾಳೆ ಬೋನ್ಪತಿ
ಒಂದು ಹೊನಮಣೆಯಾ ತೆರೋವಾಳೇ

ಒಂದು ಹೊನಮಣೆಯಾ ಇತ್ತೆಲ್ಲಗ್ ತೆತ್ತೀಯೇ
ಕೊಟ್ಕೋಳ್ಳೇ ನಿನ್ನಾಮಗದಿರ್ಗೆ | ಅಂದೇಳೇ
ತಪ್ಪು ತಳಕೋಗೇ ಕುಳತಾಳೇ

ತಪ್ಪು ತಳಕೋಗೆ ಕುಳುವದ್ನು ಗುರ್ರಾಯ
ರೂಪತಿಗೊಂದೀಳ್ಯಾ ಕೊಡೋವಾನೇ

ಗುರ್ರಾಯ್ ಕೊಟ್ಟೀಳ್ಯಾ ಮುಟ್ಟೇಲೇ ಮುರದಿಟ್ಟಾಳೆ
ಕರ್ಣನ ಕಯ್ಯೀಳ್ಯಾ ಮೆಲೂವಾಳೇ |

“ಬೋನ್ಪತೀ ಕೊಡಹೇಳಿ ಬೋನ್ಹಸಿ ನೇಯ್ಸಿದೆ
ನಾನಿದ್ದೀ ಬೊನ್ಹಸಿ ಬಿಡಸೀದೆ. | ರೂಪತಿ
ಒಂದಿರಳೇ ತನ್ನಾ ಒಡನಲ್ಲ”

ಬೋನ್ಪತೀ ಕೋಡ್ಹೇಳೀ ಬೊನ್‌ಹಸಿ ನೇಯ್ಸಿಕೋ
ನೀನಿದ್ದ ಬೋನ್ಹಸಿ ಬಿಡಸೀಕೋ | ನಿನ್ನಾಲೋ
ತಾಯಾ ತಂದೊಡನೆ | ಇರಸೀಕೊ

ಗೊವೀನಾಡ್, ಸುಣ್ಣಾ ಹಾಲ್ಗಿಂದು ಅಮರೀತಾ
ಆಳ್ನ್‌ಕೋಡೇಳಿ ತರಸೀದೆ | ರೂಪತಿ
ಎಯ್ದಿರಳೇ ತನ್ನಾ ಒಡನಲ್ಲಿ

ಗೋವಿನಾಡ್ ಸುಣ್ನಾ ಹಾಲ್ಗಿಂದು ಅಮರೀತಾದಾರೆ
ನಿನ್ನಾಳ್ನ ಕೊಡೇಳಿ ತರಸಿ | ಕೋ | ನಿನ್ನಾಲೋ
ತಂಗೀ ತಂದೊಡನೆ ಇರಸೀಕೊ

ಬೋನ್ಪತೀ ಕೋಡೇಳಿ ಬೋನ ಕೆಸರೆತ್ತಿಸುವೆ
ನಾನಿದ್ದೀ ಈಳ್ಯಾ ಮಡಕೊಡುವೆ | ರೂಪತಿ
ಮೂರಿರುಳೆ ತನ್ನಾ ಒಡನಲ್ಲಿ

ಬೋನ್ಪತೀ ಕೊಡೇಳಿ ಬೊನಕೆಸರೆತ್ತೀಸು
ನೀನಿದ್ದಿ ಈಳ್ಯಾ ಮಡಕೋಡು | ನಿನ್ನಾಲಾ
ಅಕ್ಕನ ತಂದೊಡನೆ ಇರಸೀಕೋ

ಅಡ್ಡ್‌ಅಡ್ದ ಮಾತಿಗೆ ಜಾಣ್ತನ್ಕಿ ಕೊಡ್ತದೆ
ಉರುಬಿಸಲಲ್ಲದ್ರಾ ನಿಲ್ಸೇ ಬಾರೋ
ಹರ್ವ ಹೊಗಿಯಲ್ಲೇ ಉರ್ವಬಿಸ್ಲಲ್ಲೇ

ಒಂದೇಕಾಲಲ್ಲೆ ನಿಲ್ಸಬಾರೋ | ಅಂದೇಳಿ
ತನ್ನ ದುಸುವಯ್ನಾ ದೆನಿದೂರೇ
ತನ್ನಾ ದುಸವಯ್ನಾ ದೆನಿದೂರ್ವರದ್ನು ದುಸುವಯ್ಯಾ

ಓಯ್ಗುಂಡೇ ಒಡನೇ ಬರುವಾನೇ
ಓಯ್ಗುಂಡೇ ಒಡ್ನೇ ಬರ್ವದ್ನು ಗುರ್ರಾಯ
ಲಾಗೊಂದು ಮಾತಾ ನುಡಿದಾನ

ಅಡ್‌ಅಡ್ಡ ಮಾತೀಗೆ ಜಾಣ್ತನ್ಕಿಕೊಡ್ತದೆ
ಉರ್ಬಿಸ್ಲಲದ್ರ ನಿಲ್ಸಬಾರೋ
ಅಟ್ಟಂಬಾ ಮಾತಾ ಕೇಳಾನೆ ದುಸುವಯ್ಯಾ
ಆಗೊಂದು ಮಾತಾ ನುಡೀದಾನೆ

ಹಿತ್ತಲಕಣಕೇ ಚವ್ತೀಯೆ ನೆಟ್ಟೀದೇ
ನೆಟ್ಟರೀಗರ್ಧಾ ನೆರಗರ್ಧಾ ಅಣ್ಣನಮಡ್ದಿ
ಅಣ್ಣಗೆ ಅರ್ಧಾ ತನಗರ್ದಾ ಅಂದೇಳೆ

ರೂಪತೀ ಕರಕಂಡೇ ನೆಡದಾನೆ | ದುಸುವಯ್ಯ
ರಾಜಂಗ್ಳ ಮೆಟ್ಟಾ ಇಳೀದಾನೆ|”
ರಾಜಬೀದಿಗಾಗಿ ನೆಡದಾನೆ |”

ಚಿನ್ದ್‌ಕೊಟೀಗಾಗೇ ನೆಡದಾನೆ | “
ರನ್ನದ ಕೊಟಿಗಾಗೆ ನೆಡದಾನೆ |

ಒಕ್ಕಾಲಲ್ ಅದರಾ ನಿಲಸೇ ಬಂದಾ
ಸುಕ್ರಾದೆವ್ರ ಕೊಡಿಯಾಗೆ ಸೂಲಿದೆವ್ರ ನೆರಳಾಗೆ
ರೂಪತಿಗಲ್ಲಿ ನೆರಳಾಗ್ವದ್ನು ರೂಪತಿ

ಕಯ್ಯಾನೆತ್ತಿದಳೇ ಕರುಣಾವೇ
ಅಯ್ವರ ಮಡ್ದೀ ಕಯ್ಸೆರೆ ಹೋಗ್ವಂಗೆ
ನೀವಯ್ವರು ನೋಡಿ ಅರತ್ಸವಾ| ಅಂದೇಳೇ

ಕಯ್ಯಾನೀಡಿದಳೇ ಕರುಣವೇ | ಅಂಬುದ್ನು ಭೀಮಯ್ಯ
ಮೆಟ್ಟಿ ಮಣಿಮಾಡಾ ಮುರದಾನೇ
ಮೆಟ್ಟೀ ಮಣಿಮಾಡಾ ಮುರವದ್ನು ದರ್ಮರು
ಕೈತಟ್ಟ ಭೀಮನಾ ತಡದಾರೆ
ಸತ್ಯಕುಲದ್ಹೆಣ್ಣು ಸತ್ಯತನದಲ್ಲಿರುಗು
ಮತ್ತೊಂದು ತಾಸೇ ನೋಡಿಕಂಬೋ | ಅಂದೇಳಿ
ಭೀಮಯ್ನ ಕಯ್ತಟ್ಟೇ ನಿಲಸಾರೆ

ಭೀಮಯ್ನ ಕಯ್ತಟ್ಟಿ ನಿಲಸ್ವದ್ನು ಭೀಮಯ್ಯ
ಹಿಂದಕೇ ತಿರಗೇ ಬೋರವಾನೆ.

ತನ್ನದುಸುವಯ್ನಾ ಕರೆದಾನೆ ಗುರ್ರಾಯ
ಆಗೊಂದು ಮಾತಾ ನುಡೀದಾನೆ
ಆಗೊಂದು ಮಾತಾ ಏನಂದಿ ನುಡಿದಾನೆ
ಹೋಗೀ ರೂಪತಿಯಾ ಕರತಾರೋ

ಅಟ್ಟಂಬು ಮಾತಾ ಕೇಳಾನೆ ದುಸುವಯ್ಯಾ
ರಾಜಂಗ್ಳ ಮೆಟ್ಟಾ ಇಳೀದಾನೆ |

ರಾಜಬೀದಿಗಾಗೇ ನೆಡದಾನೆ | ದುಸುವಯ್ಯಾ
ಚಿನ್ನದ ಕೊಟಿಗಾಗೆ ನೆಡದಾನೆ | ದುಸುವಯ್ಯಾ

ರನ್ನದ ಕೊಟಿಗಾಗೇ ನೆಡದಾನೆ | ದುಸುವಯ್ಯಾ
ರೋಪತಿ ಕರ್ಕಂಡೆ ಬರೋವಾನೇ | ದುಸುವಯ್ಯಾ
ಗುರ್ರಾಯ್ನರ ಮನೆಗೆ ನೆಡದಾನೆ

ಗುರ್ರಾಯ್ನರಮನೆಗೆ ಬರ್ವದ್ನು ಗುರ್ರಾಯ
ಮಾಳೂಗೀ ಒಳಗೆ ನೆಡದಾನೆ | ದುಸುವಯ್ಯಾ

ಹೊಸಹಲ್ಗ್ ಹೊಸಪಗ್ಡೀ ತರೋವಾನೋ | ದುಸುವಯ್ಯಾ
ಮಾಳಗ್ಗಿಂದೆರಗೇ ಬರೊವಾನೇ | ದುಸುವಯ್ಯಾ
ಆಟದ ಚಾವಡಗೇ ನೆಡದಾನೆ

ಆಟದ ಚಾವಡಗೇ ನೆಡವದ್ನು ರೂಪತಿ
ಅಟದ ಚಾವಡೆಗೇ ನೆಡದಾಳೆ.

ಆಟದ ಚಾವಡಿಗೇ ನೆಡ್ವುದ್ನು ಗುರ್ರಾಯ
ರೂಪತಿ ಕಯ್ಲ ಹಲಗೀ ಕೊಡೋವಾನೇ
ರೂಪತಿ ಕಯ್ಲ ಹಲಗೀ ಕೊಡ್ವದ್ನು ರೂಪತಿ

ಗುರ್ನಾಯ್ನ ಕಳ್ಳಹಲಗೀ ಕೊಟ್ಟಿ ಹುಡೀಮಾಡೇ
ಕಳ್ಳ ಹಲಗೀ ತಂದೆ ಕಳ್ಳ ಪಗಡಿ ತಂದೆ
ಎಲ್ಲವರ್ನೂ ಗೆದ್ದೆ ಗಳಗ್ಯಲೇ | ಗುರ್ನಾಯ್ನ

ಕಳ್ಳ ಹಲಗೀ ಕೊಟ್ಟೇ ಹೊಡೀಮಾಡೇ | ಪುಡ್ಮಾಡೇ
ಹಾದೀಗೊಪ್ಪಾಗೇ ತಳೀದಾಳೇ.

ಕಳ್ಳಹಲಗೀ ತಂದೆ ಕಳ್ಳಾ ಪಗಡೀ ತಂದೆ
ಎಲ್ಲವರ್ನೂ ಗೆದ್ದೆ ಗಳಗ್ಯಲ್ಲೇ | ಗುರ್ನಾಯ್ನ

ಕಳ್ಳಲಗೀ ಕುಟ್ಟೇ ಪುಡಿಮಾಡೇ | ಹುದ್ಮಾಡೇ ||
ಬೀದಿಗೊಪ್ಪಾಗೇ ತಳದಾಳೇ | ರೂಪತಿ
ತನ್ನಾ ಕರ್ಣನಾ ದೆನಿದೂರೇ

ತನ್ನಾ ಕರ್ಣನಾ ದೆನಿದೂರ್ವದ್ನು ಕರ್ಣನು
ಓಯ್ಗುಂಡೇ ಒಡನೇ ಬರೂವಾನೇ
ಓಯ್ಗಂಡೇ ಬಡ್ನೇ ಬಂದೀ ಏನಂಬಾನೆ
ಏನು ಕಾರಣಲೆ ಕರದೀಯೇ”

ಕಳ್ಳಾ ಹಲಗೀ ತಂದಾ ಕಳ್ಳಾ ಪಗಡೀ ತಂದಾ
ಎಲ್ಲವರ್ನೂ ಗೆದ್ದಾ ಗಳಗ್ಯಲ್ಲೇ | ಗುರ್ರಾಯ್ನಾ
ಕಳ್ಳಲಗೀ ಕುಟ್ಟೇ ಹುಡಮಾಡೇ | ಪುಡಮಾಡೇ
ಹಾದಿ ಗೊಪ್ಪಾಗೇ ತಳದೀದೆ | ಅಣ್ಣನಕಯ್ಲೆ
ಹೊಸಹಲಗ್ ಹೊಸ್ಪಗಡೀ ಕೊಡೋಬೇಕೆ |

ಯಾರೀಗೀ ಆಟಾ ಗೆಲುವಕ್ಕು ಅಂದೇಳಿ
ಹೋಗ್ಬನ್ನಿ ಅಣ್ಣನ ಅರಮನೆಗೇ

ಅಟ್ಟಂಬಾ ಮಾತಾ ಕೆಳಾನೆ ಕರ್ಣನು
ರಾಜಂಗ್ಳ ಮೆಟ್ಟಾ ಇಳಿದಾನೆ | ಕರ್ಣನು
ರಾಜೋ ಬೀದಿಗಾಗೇ ನೆಡದಾನೆ | ಕರ್ಣನು
ನಾರ್ಣದೆವ್ನರ ಮನಗೇ ನೆಡದಾನೆ | ಕರ್ಣನು

ಹೋಗೀ ಬಾಗಲ್ಲೇ ನಿಲೋವಾನೆ | ಕರ್ಣನು
ಹೋಗಿ ರಾಜಂಗ್ಳ ನೆಗೆದತ್ತೆ | ಕರ್ಣನು
ಮಾಳೂಗೀ ಒಳಗೆ ನೆಡದಾನೆ | ಕರ್ಣನು

ತೂಗೂಮಂಚಲ್ಲೆ ಕುಳತಾನೆ.
ತೂಗುಮಂಚಲ್ಲೆ ಕುಳುವುದ್ನು ನಾರ್ಣದೇವಾ
ವಾಲಗ್ಗುಂಡಾನೆ ಹಸೆಯಲ್ಲಿ | ನಾರ್ಣದೆವ
ಆಗೊಂದಾ ಮಾತಾ ನುಡೀದಾನೆ

“ಯಾವಾಗೂ ಗುರ್ರಾಯ್ನಾ ಸಂಬ್ಳಕಿದ್ ಕರ್ಣನೆ
ಏನ್ ಬಂದ್ಯೋ ತನ್ನಾ ಅರಮನೆಗೆ

ಕಳ್ಳಹಲಗೀ ತಂದಾ ಕಳ್ಳಾಪಗಡೀ ತಂದಾ
ಎಲ್ಲವರ್ನೂ ಗೆದ್ದಾಗಳಗ್ಯಲ್ಲೇ | ಗುರ್ನಾಯಾ

ಕಳ್ಳಲಗೀ ಕುಟ್ಟೇ ಪುಡಿಮಾಡೇ | ಹೊಡಿಮಾಡೇ
ಹಾದಿ ಗೊಪ್ಪಾಗೇ ತಳದೀದೆ | ಅಣ್ಣನಕಯ್ಲೆ
ಹೊಸಹಲ್ಗಿ ಹೊಸ ಪಗಡೀ ಕೊಡಬೇಕೆ – |

ಯಾರೀಗೀ ಆಟಾ ಗೆಲುವಕ್ಕು | ಅಂದೇಳಿ
ಹೋಗ್ಬನ್ನಿ ಅಣ್ಣನ ಅರಮನೆಗೇ | ಅಂದೇಳಿ
ನಿನ್‌ತಂಗಿ ತನ್ನಾ ಕಳಗದೆ

ಅಟ್ಟಂಬಾ ಮಾತಾ ಕೇಳಾನೆ ನಾರ್ಣದೆವ
ಮಾಳೂಗಿ ಒಳಗೆ ನಡೆದಾನ | ನಾರ್ಣದೆವ
ಹೊಸ ಹಲ್ಗ ಹೊಸ್‌ ಪಗ್ಡೀ ತರೋವಾನೇ | ನಾರ್ಣದೆವ
ಕರ್ಣನ ಕಯ್ಲದ್ರಾ ಕೊಡೊವಾನೇ

ಕಂಚಗಾರ್ನ ಮನೆಯ ಕಂಚೀನ ಕರಡಗಿ
ಎಯ್ಡೊರ್ದಾ ಮುಚ್ಚಳವಾ ತೆಗೆದೋದಿ | ದ್ ಆಡುವಂಗೆ
ತಂಗಾಳಿ ಸುಳಗಾಳಿ ಸುಳ್ದೇ ಬೀಸೇ
ತಂಗಾಳಿ ಸುಳಿಗಾಳಿ ಸುಳ್ದ್‌ ಬೀಸುವಂಗೆ

ತಂಗೀ ಮೆಲದಗೀ ಮರಚೀಗೋ |
ಎದಿಯ ಸೆಯಾಕೆಂಡೇ ಬದಿಯಾ ಬಾಮಾ ಕಂಡೇ
ಗುರ್ರಾಯಾಟಾವಾ ಮರೆವನೋ

ಗುರ್ರಾಯಾಟಾವಾ ಮರೆವದ್ನು ಕರ್ಣದೇವಾ
ನಮತಂಗೀಗಾಟಾ ಗೆಲವಕ್ಕೋ | ಅಂದೇಳೇ
ಹರಸೀದ ಪಗಡಿ ಕೊಡುವಾನೋ

ಹರಸೀದ ಪಗಡಿ ಕೊಡುವುದ್ನು ಕರ್ಣನು
ಹೊತ್ತಾನೆ ಹೊನ್ನ ಮುಡಿಯು ಮನೆ | ಕರ್ಣನು
ಗುರ್ರಾಯ್ನಮನೆಗೇ ಬರೂವಾನೇ | ಕರ್ಣನು
ಬಂದೀ ರಾಜಂಗ್ಳ ನೆಗದತ್ತೇ | ಕರ್ಣನು
ಮಾಳೂಗಿ ಒಳಗೇ ನಡೆದಾನೆ | ಕರ್ಣನು

ರೂಪತಿ ಕಯ್ಲ್ ಹಲಗೀ ಕೊಡೂವಾನೇ
ಆರುಗೆರಿಯಾಬರದೇ ಹನ್ನೆಯ್ಡ ತೆರಿಯಾಕಟ್ಟೇ
ಗುರುರಾಯಾಟಾಕೆ ಕುಳತಾನೆ.

ಒಂದಾಟಾ ಆಡೇ ದರಮರ ಗೆದ್ದಾಳೇ
ದರುಮರಿಗೆ ತಡದಾ ಕೊಡಕಂಚೋ | ಸಯ್ವಾಗೇ
ರೂಪತೇ ಗೆದ್ದಾಳೆ ಗಳಗ್ಯಲ್ಲೆ