ಹಾಡಿನ ನಿರೂಪಣೆ: ಕುಪ್ಪಿ (ಸುಬ್ಬಿ) ಬೆಳಿಯಾಗೌಡ
ಊರು: ಹಳ್ಳಗೆರೆ
ವಯಸ್ಸು ೬೫

ಸಂಬು ಸಂಕರಗ ಎಂಬತ್ತು ಬಾಗಲದೇ
ತುಂಬೀ ಕೆದಗೀಯ ಅರಗೂವೋ | ನಮಗೋಳ್ಳಾ
ತುಂಬಿದ್ದ ಪದನಾ ಬರೋಬೇಕೆ

ಸಂಬು ಸಂಕರಗೆ ನಾಲ್ವತ್ತು ಬಾಗಲಗೋಗಿ
ಮಲ್ಲಿಗೀ ಅರಳ ಅರಗೂವೊ | ನಮ್ಮಗೋಳ್ಳಾ
ತುಂಬಿದ್ದಾ ಪದನಾ ಬರೋಬೇಕೇ

ಅಂಬರ ಮೆನನಾ ನಿಂಬೀ ಹಣ್ಣೇ ಬಾರೇ
ರಂಬೇರಂಜಿಸುವಾ ಗಿಳಿ ಬಾರೇ | ಸಿಂಗಾರಾದಾ
ಕೊನೆಯೊಡೆದೇ ಬಾರೇ ಕಳಸಕೆ

ಅಂಬರ ಮೆನನಾ ನಿಂಬೀ ಹೆಣ್ಣೇ ಬಾರೇ
ರೆಂಬೇರಾಡಿಸುವಾ ಗಿಳೀ ಬಾರೆ | ಕೆದಗೀಯಾ
ಕೊನೆಯೊಲದೇ ಬಾರೇ ಕಳಸಕೆ

ಕೆಸಕ್ಕಿ ಕೆಂದೊಳಾ  ರಾಸಾಗುಡದಾ ಬೆಲ್ಲಾ
ಉದ್ದಾ ಉಂಡಾಲಿಯೂ ಹುರೋಗಡಲೆ | ಹರವಳ ತುಂಬೇ
ಮತಿಅಕ್ಕನ ಬಳಿಗೆ ಕಳಗೂವೋ
ಮಯಿಅಕ್ಕನ ಬಳಿಗೆ ಏನೇಳಿ ಕಳಗೂವೋ
ನನ್ನಾಡಿಗೆ ಮತಿಯಾ ಕೊಡೋಬೇಕೇ

ಹಾಡಿಗೆ ಮತಿ ಕೊಡುಕೆ ನಾನೊಬ್ಬಳ್ಳಲ್ಲವೇ
ನನ್ನಮ್ಮಾದೇವಿ ಸರಸ್ವತಿ | ಅಲ್ಲೋದರೆ
ನಿನ್ನಾಡಿಗೆ ಮತಿಯ ಕೊಡೋವಾಳೇ

ಎಲ್ಲವರ ಮಾತಿಗೆ ನಿಲ್ಲಳೆ ಸರಸತಿ
ತೆನಿಯಾ ಕದರಂತೆ ಬಳಕೀತೆ | ಬಾಡೀತೇ
ನನ್ನಾಡಿಗೆ ಮತಿಯಾ ಕೊಡೋವಾಳೇ

ಇಂದೀಗೇಳೀದ ಹಾಡು ಎಂದೀಗೆ ತೀರಿಗೇ
ಅಂಗಳ್ಳೇ ಬೂಮೀ ಮಣೆ ಇರಸೆ | ಕರದಾರೇ
ಪಂಚ ಪಾಂಡವ್ರ ಕತೆ ಹಾಡೇ

ಇಂದೀಗೇಳಿದ ಹಾಡು  ಎಂದಿಗೇ ತೀರಿಗೆ
ಆದಗಲೇ ಬೂಮೀ ಮಣೆ ಇರಸೇ | ಕರದಾರೇ
ಪಂಚಾ ಪಾಂಡವ್ರಾ ಕತೆ ಹಾಡೇ

ಸಿಂಗನ ನೆನವನೇ ಸಿರಹರೀ ನೆನವನೇ
ತಿಂಗಳಕೇ ಮೂರೋ ಕದೋರಾಗೇ | ಪಾಂಡೋರಾ
ಸುಂಗಾರದ ಕತಿಯಾ ತೊಡಗೂವೋ

ಅರಸೂ ನೆನೆವನೆ ಅರಸೂತೀ ನೆನವನೆ
ಉರಸೀಗೆ ಏಳೋ ಕದೋರಾಗೇ | ಪಾಂಡೋರಾ
ಅರಸೀಯಾ ಮೊದಲೇ ನೆನವನೇ

ಅರಸೂ ನೆನವನೆ ಅರಸೂತಿ ನೆನವನೇ
ವರಸೀಗೆ ಎಯ್ಡೂ ಕದೋರಾಗೇ | ಪಾಂಡೋರಾ
ಅರಸಿಯೂ ಮೊದಲೇ ನೆನವನೇ

ಕಡದಾ ಕಲ್ಲಾ ಮೆನೇ ಮಡದೀ ಮಂಡಲ ಬರದೆ
ಇಡಲೂಗೀ ನೆರಿಯೂ ಅಸೋರೀಸೇ | ಪಾಂಡೋರಾ
ಅರಸೀಯೂ ಮೊದಲೇ ನೆನವನೇ

ಕಡದಾ ಕಲ್ಲಾ ಮೇನೆ ಮಡೆದೀ ಮಂಡಲ ಬರದೆ
ಸೊಗೀಯು ನೆರಿಯೂ ಅಸೋರೀಸೇ | ಪಾಂಡೋರಾ
ಅರಸೀಯು ಮೊದಲೇ ನೆನವನೇ.

ಧರ್ಮರಾಸಗ್ಗೇ ಅರಗು ಮಲ್ಲಿಗಿ ಹಾಸೇ
ತರದಲ್ ದೀವಗೀಯಾ ಕಸೋದಿಟ್ಟೇ | ದರ್ಮರು
ಹಾಸನ ಮೆನೋಗೇ ಬರೂಗಾರೇ

ಧರ್ಮರಾಸಗ್ಗೇ ತುಂಬೀ ಮಲ್ಲುಗೀ ಹಾಸೇ
ತಾಣಾ ದೀವಗಿಯಾ ಕಸೋದಿಟ್ಟೇ | ಧರ್ಮರು,
ಹಾಸನ ಮೆನೋಗೇ ಬರಗಾರೆ

ಹಾಸನ ಮೆನೋಗೇ ಬರಗ್ವದು ರೋಪತಿ
ತಾನೊಡ ನೋಗೇ ಬರೂಗಾಳೆ | ರೋಪತಿ
ಕಂಡಳೆ ಸಂಗ್ರಮದ ಕನಸನೆ.

ಕನಸಾ ಕಂಡಾಳೆ ಮನಸೀಲಿ ನೆನಸಿಟ್ಟಾಳೆ
ಮೆಯ್ಯಾ ಮುರುದೆದ್ದೇ ಕುಳೋತಾಳೇ | ರೋಪತಿ
ಪನ್ನೀರಾ ಗಿಂಡಿ ಬಲಗಯ್ಲೀ | ತಡಕಂಡೇ
ಮಾಳಗ್ಗಿಂದೆರಗೇ ಬರೋವಾಳೇ | ರೋಪತಿ
ಕಲೋಸಿರಿಮೊಕವಾ ತೋಳದಾಳೆ | ”

ಮೊಳಕಾಲಾ ಮೇನೇಸಿರಿನಿಂದೇ |ದ್| ದಕಂಡಾಳೆ
ಮಾಳೂಗೀ ಒಳಗೆ ನೆಡೆದಾಳೆ | ರೋಪತಿ
ಪನ್ನೀರಾ ಗಿಂಡೀ ಮಡೋಗಾಳೆ |  ”

ಧರ್ಮರ ಸಾಯಕದ ಹರಳಾಮುಟ್ಟೇ |ಟ್ಟೀ|ಳ್ಯವಾ
ಆಯಾ ಕೊಂದೀಳ್ಯಾ ಮೆಲೋವಾಳೇ
ಎಲಿಯೊಂದ್ ತಿಂದಾಳೆ ರಜವಲ್ಲೇ ಉಗಳಾಳೆ

ರಾಜಂಗ್ಳ ಮೆಟ್ಟಾ ಇಳದಾಳೆ | ರೋಪತಿ
ರಾಜಬೀದಿಗಾಗೇ ನಡೆದಾಳೆ |  ”
ಆತ್‌ಕುಂತೀ ಅರ್ಮನೆಗೆ ನೆಡೆದಾಳೆ
ಆತ್‌ಕುಂತೀ ಅರ್ಮನೆಗೆ ನೆಡ್ವದ್ನು ಅತ್ ಕುಂತೀ
ಅರಗೀ ನೋಡಿದಳೆ ಹೆರಗೊಮ್ಮೆ

ಅಳೀಗಾಳಿಲ್ಲಾ ಮುಡಿಗೆ ಸತ್ತೂಗಿಲ್ಲಾ
ರೋಪತ್ ಬರುಬರುವೆ ಹೊಸಪರಿ | ಅಂದೇಳಿ
ಮಾಳೂಗೀ ಒಳಗೆ ನಡೆದಾಳೆ

“ಪಾಂಡೋರ್ ಕೊಪ ಮಿಕ್ಕಿತೊ ಮೀರಿತೊ ಏನೋ
ಏನಾತಪ್ಪಿದಳೊ ನಿಜನಾರಿ | ಅಂದೇಳೇ ಅತ್‌ಕುಂತೀ
ಮಾಳೂಗೀ ಒಳಗೆ ನೆಡೆದಾಳೆ | ಅತ್‌ಕುಂತೀ
ತನ್ನ ಗವ್ವೇರಾ ದೇನಿದೂರೇ

ಇಂದೂ ಕರದಮಲ್ಲಾ ಬಂದಾರೆ ಗವ್ಡೀಯೋರು
ನಿಂದಾರೆ ಅತ್‌ಕುಂತೀ ಒಡನಲ್ಲಿ |ಲ್ಲೇ| ನಿಂದೀಕಂಡೇ
ಏನು ಕಾರಣಲೆ ಕರದೀಯೆ |

ಕರದಂ ಕಾರ್ಯವಿಲ್ಲಾ ಕಿರಿದುಂಬೆಸರ ಸಯ್ಯೆ
ರೋಪತ್ ಬರುಬರವೇ ಹೊಸಪರಿ | ಗವ್ಡೀಯೋರ
ತಡೆಯಿರಿ ಚಂಬಗಲೆ ಉದಕವೆ

ಪಾದಾತೊಳಿಯಿರೆ ಪಾವಡ ದಲ್ಲುದ್ದೀರೆ
ಹೊನ್ನು ಹರಳ್ಹೊಯ್ದೇ ಸರಣನ್ನೀ | ಗವ್ಡೀಯೋರೆ
ತೂಗು ಮಂಚದಲೆ ಕುಳೋವೇಳಿ

ಅಟ್ಟಂಬಾ ಮಾತಾ ಕೇಳಾರೆ ಗವ್ಡೀಯೋರು
ತಡದಾರೆ ಚಂಬಗಲೇ ಉದಕವೇ | ರೋಪತಿ
ಬಂದೀ ಬಾಗಲ್ಲೇ ನಿಲೋವಾಳೇ
ಪಾದಾ ತೊಳ್ದಾರೇ ಪಾವಡದಲ್ಲುದ್ದಾರೆ
ಮುತ್ತು ಹರಳೊಯ್ದೇ ಸರಣೆಂದೆ

ಪಾದಾ ತೊಳ್ದಾರೆ ಪಾವಡದಲ್ಲುದ್ದಾರೆ
ಹೊನ್ನು ಹರಳ್ಹೋಯ್ದೇ ಸರಣಂದೆ | ಗವ್ಡೀಯೋರು
ತೂಗುಮಂಚದಲೆ ಕುಳೋವಳಿ |ಳ್ವ|ದ್ನು| ಒಳಗಿದ್ದ
ಅತಕುಂತೀ ಹೆರಗೇ ಬರೋವಾಳು.

ಆಯೊಳ್ಳ ಹಣ್ಣಡಕೆ ಸೋಯಿಸಿದ ಬೆಳಿ ಎಲೆ
ಹಾಲಿನಲ್ಲಿ ಚಿಂದಾ ತೆನೆಸುಣ್ಣಾ | ತಡಕಂಡಿ
ಮಾಳಗ್ಗಿಂದೆರಗೇ ಬರೋವಾಳು | ಅತಕುಂತೀ
ರೋಪತಿ ಒಡನೋಗಿ ನಿಲೋವಾಳು | ಅತಕುಂತೀ
ರೂಪತಿಗೊಂದೀಳ್ಯಾ ಕೊಡೋವಾಳು

ಅತ್ತೆ ಕೋಟ್ಟೀಳ್ಯ ತಟ್ಟಾನೆ ತಡದಾಳೆ.
ಅತ್ತೀಸಿರಿ ಪಾದಕೆ ಸರಣಂದೇ
ಅತ್ತೀಸಿರಿ ಪದಕೆ ಸರಣಂಬುದ್ನು ಆತ್‌ಕುಂತೀ
ಆಗೊಂದು ಮಾತಾ ನುಡೀದಾಳೆ.

“ಆಯ್ಸವಂತಳಾಗೆ ಅಯಸಬಲಿದವಳಾಗೇ
ನೀನಿಡು ಚಿನ್ನೊಲೆ ತಿರುವಾಲಿ
ಆಯ್ಸವಂತಳಾಗೇ ಅಯಸ ಬಲಿದವಳಾಗೇ
ನೀನಿಡು ಹೊನ್ನೊಲೆ ತಿರುವಾಲಿ”

“ನಾನಿಡು ಹೊನ್ನೊಲಿಗೆ ಎಲ್ಲರು ಹರಸಾರೆ ಅತ್ತೆ
ಅರಸಾಗಳು ಅಯ್ವರುಮ್ಮಗದಿರಗೆ | ಅತ್ತೀಯೋರೆ
ಕಂಡ್‌ಕನ್ಸ ಅತ್ಯೋರ್ಗೆ ಒರಿಯಾಬಂದೆ
ಸತ್ಯಾ ಕುಲದರು ನಮ್ಮ ತತ್ತಗ್ ಬಂದಾಡ್ವಂಗೆ
ಸತ್ಯುಳ್ ಧರ್ಮರಾ ತಲಿಯಾ ಸೋಲೇ|ಲ| ದೇ
ಗುರ್ರಾಯಾ ನೆನಸೇ ಬರದಾನೆ | ಅತ್ತೀಯೋರೆ
ಕಂಡ್‌ ಕನ್ಸ್ ಅತ್ತೀಯೊರಗೆ ಒರಿಯಾಬಂದೆ”

“ಕಂಡಾ ಕನಸೀಗೆ ಮಾಳೂಗೀಗ್‌ ಹೋಗ್‌ಬೆಗೆ
ಹೇಳೂಗೀ ತಂದೇ ಹೆರೂಗಿರಸೇ
ಕಂಡ್ ಕನಸೀಗೆ ಅಟ್ಟಕ್ಕೆ ಹೋಗ್‌ಬೇಗೆ
ಪೆಟ್ಟೂಗೀ ತಂದೇ ಹೆರೂಗಿರಸೇ

ಬಾರ್ಕೂರತ್ತಣ ಬಟ್ಟರ ದರಸೀಕಂಡೇ
ಕಳಸದ ಸತ್ತುಗಿಯಾ ನೆಳಲಾಡೇ| ಮಿಂದೀಕಂಡೇ
ಹಾರೋರ್ಗೆ ದಾನಾ ಕೊಡೆಹೋಗೆ

ಬಟ್ಕಳತ್ತಣ ಬಟ್ಟರ ದರಸೀ ಕಂಡೇ
ಕಳಸದ ಸತ್ತಗಿಯಾ ನೆಳಲಾಡೇ | ಮಿಂದೀಕಂಡೇ
ಬಟ್ಟರಿಗೆ ದಾದಾ ಕೊಡೆ ಹೊಗೆ.

ಎತ್ತಾ ದಾನಮಾಡೇ ತುತ್ತಾ ದಾನಾಮಾಡೇ
ಉಟ್ಟದ್ ದಾನವಾ ಮಿಗಲಾ ಮಾಡೇ
ಅನ್ನಾ ದಾನಾಮಾಡೇ ಸುಣ್ಣಾ ದಾನಾಮಾಡೇ
ಸುವರ್ನನ ದಾನಾ ಮಿಲಾಮಾಡೇ.

ಕೊಟ್ಟೂಗೀ ಒಳಗೀನಾ ಗಟ್ಟು ಮಣಕೆಮ್ಮೀಯಾ
ಬಾಲಕ್ ಸುವರ್ನಾ ಗಳಿಸೀದಾ | ಎಮ್ಮೀಯಾ
ಬಟ್ಟರಿಗೆ ದಾನ ಕೊಡೆಹೋಗೆ.

ಅಟ್‌ತೂಗೆ ಇಟ್ ತೂಗೇ ಮುಟತುಂಬದಮಲ್ಲೂಗೇ
ಹಿಡತುಂಬೀದೆಲಿಯಾ ಅಡಕೀಯಾ| ಯ| ಈಳ್ಯವಾ
ತಂದ್ಹಚ್ಚೇ ಬಂದಾ ಹಲರೀಗೆ

ನೀ ಕಂಡಾ ಕನಸೀಗೆ ನೀನೇ ದಾನಾಮಾಡೇ
ಮತ್‌ತನ್ ಬಾಲರಿಗೆ ಅಳವಿಲ್ಲ | ಅಂಬುದು
ರೂಪತ್ ಸಿಟ್ಟಿನಲ್ಲೆದ್ದೇ ಬರೋವಾಳೇ

ದಿಡದಿಡನಸೀತೆ ನೆಲವಾ ಜಂತರಸೀತೆ
ಇಡಗೀದಾ ಬೆರಳು ಅರೀಯದೆ | ರೂಪತಿ
ರಾಜಂಗ್ಳ ಮೆಟ್ಟಾ ಇಳೀದಾಳೆ | ”

ರಾಜಬೀದಿಗಾಗೇ ಬರೋವಾಳೇ
ರಾಜಬೀದಿಗಾಗೇ ಬರ್ವದ್ನು ಇಲ್ಲಿನ್ನು
ದರ್ಮರ ಸುಮನಿದ್ರಿ ಹುರೀದಾವೇ
ದರ್ಮರ ಸುಮನಿದ್ರ ಹುರ್ವದ್ನು ದರ್ಮರು
ಮಿಯ್ಯಾ ಮುರುದೆದ್ದೇ ಕುಳತಾರೆ

ಬಾಗಲ್ಲಿರ್ತಿತ್ತು ಚಂಬಗಲುದಾಕಾ ಕೊಡ್ತಿತ್ತು
ರೂಪತಿ ಹೊಳಲು ಹೊಳುವಾದಿಲ್ಲ | ಅಂದ್ ದರ್ಮರು
ಅಡಗೀ ಸಾಲೀಗೇ ನಡೆದಾರೆ | ದರ್ಮರು
ಸಂಬರವಲ್ಲೆ  ನಿಲೋವಾರೇ | ದರ್ಮರು
ಲಾಗೊಂದು ಮಾತಾ ನುಡೀದಾರೆ.

ಸಂಬರರವರೆ ಕುಂಬಳ ಕೊರವರೆ
ಒಟ್ಟಾಗೆ ಬೋನಾ ಸಮೆವರೇ | ಸಾಮಾನರುವರೆ
ರೋಪತಿ ಹೋದಾ ತೆರಣೇನೆ
ರೋಪತೀ ಹೋದಾ ತೆರಣೀತನಗೇಳಂದೇ
ಒಂದೊಂದೇ ಕಣ್ಣೋ ಕಡೋಕೆಂಡಾ | ಸೂಸೀತಾ
ನಾರ್ಯೋ ರಂಜಿಸದಾ ಇಮದಿಂದೆ | ದರ್ಮರು
ಸಾಸಮೀ ಅರವಲ್ಲೇ ನಿಲೋವಾಕಿ.

“ಸಾಸಮಿ ಅರವರೆ ಸೂಸೀಕಾ ಕೊರವರೆ
ಒಟ್ಟಾಗೇ ಬೋನ ಸಮೆವರೆ | ನಿಸ್ತ್ರೀಯೋರೆ

ರೋಪತೀ ಹೋದಾ ತೆರಣೇನೆ
ರೋಪತೀ ಹೋದಾ ತೆರಣೇಳಂದೇ
ಎಯ್ಡಯ್ಡು ಕಣ್ಣೋ ಕಡೋಕೆಂಡಾ | ಸೂಸೀತಾ
ನಿಸ್ತ್ರೋರಂಜಿಸದಾ ಇಮದಿಂದೆ,

“ದೇವರೆ ನಿಮ್ಮರಸೀ ಸೋವ್ರ ತಮಗಿಲ್ಲ
ತಾಂವ್ ಕಾಣಾಂಬಾರೆ ಅರಸೀಯಾ

ಅಟ್ಟಂಬಾ ಮಾತಾ ಕೇಳಾರೆ ದರುಮರು
ಹಿತ್ಲಕಣ್ನ ಬಾಗಲ್ಲೇ ನಡೆದಾಕಿ | ದರುಮರು
ತಮ್ಮಾ ಮನಿಕೂಸ್ನಾ ದೆನೀದೂರೆ |ರ್ವ|ದ್ನು ಮನಿಕೂಸಾ

ಓಯ್ಗುಂಡೇ ಹೆರಗೇ ಬರೋವಾನೇ
ಓಯ್ಗುಂಡೇ ಹೆರಗೆ ಬಂದೀ ಏನಂಬಾನೆ
ಏನು ಕಾರಣಲೆ ಕರದೀಯೋ

ಕರದಂಬ್ ಕಾರ್ಯವಿಲ್ಲ ಸಿರದ್ದುಂಬೆಸರ ಸಯ್ಯೆ
ರೋಪತೆಟ್ಟೇರುಳೇ ನೆಡದೀತೋ
ದೇವರ ನಿಮ್ಮರಸೀ ಸೋವು ನಮಗಿಲ್ಲ
ತಾಕಾಂಣಬನೇ ಅರಸೀಯೇ

ಅಟ್ಟಂಬಾ ಮಾತಾ ಕೇಳಾರೆ ದರುಮರು
ಹಿತ್ಲ ಕಣ್ನ ಬಾಗಲ್ಲೆ ಹೆರೋಟಾರೆ | ದರುಮರು
ಕಲ್ಲದಣ್ಪಿದಾಗೇ ನೆಡದಾರೆ |            ”
ಹರುನೀರ್ ತಡಿಯಲ್ಲೇ ನಿಲೋವಾರೆ

ಹರ್‌ನೀರ್ ತಡಿಯೆಡೆ ತಾಂವ್ ನಿಂದಾರೆ ಪಾರ್ವತ್ರರು
ತಾಂವ್ ನಿಂದಾರೆ ನೀರಾ ತಡಿಯಲ್ಲೆ | ರೂಪತಿಯಾ
ಹೊನ್ನಾಲಿ ಕೆಮಿಯೇ ಹೊಳದಾವೇ |   ”
ಚೆನ್ನೊಲಿ ಕೆಮಿಯೇ ಹೊಳದಾವೇ
ಚೆನ್ನೂಲಿ ಕೆಮಿಯೆ ಹೊಳ್ವದ್ನು ದರುಮರು
ಆಗೊಂದು ಮಾತಾ ನುಡೀದಾರೆ

“ನಾರೇನಮ್ಮರಸಿ ಊರೂಪ್ಪಿ ತಿರುಗಿದೆ
(ಹಾ) ಆದಾವೇ ಮುಳ್ಳೋ ತಳನಲ್ಲೇ | ರೋಪತಿ
ನಾನಿನ್ನ ಕಾಣದೆ ಇರೋಲಾರೆ.

“ಮುಳ್ಳ ತೆಗವಕೆ ಇಲ್ಲೆರು ಬಲ್ಲರೆ
ಬಲ್ಲಂತ ರಾಜ್ಯ ಬಟಕಳ | ಹೆಣ್ಣಾಮಕ್ಳು
ಸೆಳ್ಳುಗರಲೆ ಮುಳ್ಳಾ ತೆಗವರೇ”

“ದಾಸನ ನೆಡುನೋಳು ದೇಸೊಪ್ಪಿ ಹೋಗಿದಿಯೇ?
ದಾಸೀಗೂಳಕ್ಕೆ ನಿನಗೀಗೆ ”

“ಒಪ್ಪುಕ್ಕು ದೇವರೆ ಒಲವಕ್ಕು ದೇವರೆ
ಒಪ್ಪಂಗಳಕ್ಕು ನನಗೀಗೆ | ನಿಮ್ಮನಿಯ
ಬಡ್ಸದ್ ಕೂಳುಂಬಾ ಬಡವೋಳು | ದೇವರೆ
ಕಂಡ್‌ಕನ್ಸ ಅತ್ಯೋರ್ಗೆ ಒರಿಯಾಲೊದೆ

ಅಟ್ಟಂಬಾ ಮಾತಾ ಕೇಳಾರೆ ದರುಮರು
ಹರುನೀರ್ ತಡಿಯಲ್ಲೇ ನೀಲೂವಾರು

ಮಿಂದಾರೋಗದಾರೆ ಮಿಂದ್‌ಮಡಿ ಉಟ್ಟಾರೆ
ಮಿಂದೀ ಚಂಡಕೀಯಾ ಕಂಡೋಗಾರೆ | ದರುಮರು
ಚಂದ್ರಾ ಬೊಟ್ಟೊಂದಾ ಇಡೋವಾರು

ಮಿಂದರೊಗದಾರೆ ಮಿಂದ್‌ಮಡಿ ಉಟ್ಟಾರೆ
ಮಿಂದೀ ಚಡಕೀಯಾ ಕುಡಗಾರೆ | ದರುಮರು
ಸೋಲಿ ಬೊಟ್ಟೊಂದಾ ಇಡೋವಾರು | ದರುಮರು
ತಾಂವೊಂದು ಗೂಟೆ ನಿಲೋವಾರು

ತಾವೊಂದು ಗೂಟೆ ನಿಲ್ವದ್ನು ರೂಪತಿ
ಹರುನೀರ್ ತಡಿಯಲ್ಲೇ ನಿಲೋವಾಳು

ಮಿಂದಳೊಗದಾಳೆ ಮಿಂದ್‌ಮಡಿ ಉಟ್ಟಾಳೆ
ಎಣ್ಣೆ ಗೆಂಟೊಂದಾ ಇಡೋವಾಳೆ | ರೋಪತಿ
ನೆಣಿಯಾ ಮಲ್ಲಗೀಯಾ ಮುಡೀದಾಳೆ | ರೋಪತಿ
ಚೋಳ್ಚೀಯಾ ಕದ್ರಾ ಮುಡಿದಾಳೆ | ರೋಪತಿ
ದರುಮಾರೊಡನೋಗೇ ನಿಲೋವಾಳು

ಬಟ್ಕಳತ್ತಣ್ಣ ಬಟ್ಟರ ದರಸೀಕಂಡೇ
ಹೀಲೇ ಸತ್ತಗಿಯೂ ನೆರಳಾಗೇ
ಬಾರ್ಕೂರತ್ತಣ ಹಾರ್ವರ ದರಸೀ ಕಂಡೇ
ಕಳಸದ ಸತ್ತಿಗಿಯಾ ನೆರಳಾಗೇ

ದರುಮರು ಮುಂದಾಗೆ ರೋಪತೀ ಹಿಂದಾಗೇ
ತಮ್ಮಾ ಅರ್ಮನಗೇ ಬರೋವಾರೆ | ದರುಮರು
ಬಂದೀ ರಾಜಂಗ್ಳಾ ನೆಗದತ್ತೇ | ದರುಮರು
ಮಾಳೂಗೀ ಒಳಗೆ ನಡೆದಾರೆ | ದರುಮರು
ತೂಗು ಮಂಚದಲೆ ಕುಳತಾರೆ

ಕಾಲಕ್ಕಡಗಾ ಇಟ್ಟೇ ಕೀಲು ಕೊಂಡಲಮುಡದೇ
ತೂಗುಮಂಚದಲೇ ಕುಳತಾರೆ
ತೂಗು ಮಂಚದಲೆ ಕುಳುವುದ್ನು ರೋಪತಿ
ಮಾಳೂಗೀ ಬಿಳುಗೆ  ನೆಡದಾಳೆ

ಕಂಡಾ ಕನಸೀಗೆ ಮಾಳೂಗಿ ಹೊಕ್ಕಾಳೆ
ಹೇಳೂಗೀ ತಂದೆ ಹೆರೂಗಿಟ್ಟೇ
ಕಂಡಾ ಕನಸೀಗೆ ಮಾಳೂಗಿ ಹೊಕ್ಕಾಳೆ
ಪೆಟ್ಟೂಗೀ ತಂದೇ ಹೆರೂಗಿರುಸೇ

ಬಾರ್ಕೂರತ್ತಣ ಹಾರ್ವರ ರದಸೀಕಂಡೇ
ಹೀಲಿಸತ್ತಗಿಯ ನೆಳಲಾಗೇ | ನಿಂದಿಕಂಡೇ

ಹಾರೋರ್ಗೆ ದಾನಾ ಕೊಡೋವಾಳೆ |
ಬಟ್ಕಳತ್ತಣ್ಣ ಬಟ್ಟರ ದರಸೀಕಂಡೇ
ಕಳಸಾ ಸತ್ತಗೀಯಾ ನೆಳಲಾಗೆ |ನಿಂದಿ| ಕಂಡೇ
ಬಟ್ಟರ್ಗೆ ದಾನಾ ಕೊಡೋವಾಳೇ

ಅನ್ನಾ ದಾನಾಮಾಡೇ ಸುಣ್ಣಾ ದಾನಾಮಾಡೇ
ವಸ್ತ್ರಾ ದಾನವಾ ಮಿಗಲಾ ಮಾಡೇ | ರೋಪತಿ
ಹಾರೋರ್ಗೆ ದಾನಾ ಕೊಡೋವಾಳೇ

ಎತ್ತಾ ದಾನಾಮಾಡೇ ತುತ್ತಾ ದಾನಾಮಾಡೇ
ಮುತ್ತೂ ದಾನಾವಾ ಮಿಗಲಾಮಾಡೇ | ರೋಪತಿ
ಬಟ್ಟರ್ಗೆ ದಾನಾ ಕೊಡೋವಾಳೇ

ಕೊಟ್ಟೂಗೀ ಒಳಗೀನಾ ಗಟ್ಟೂ ಮಣಕೆಮ್ಮೀಯಾ
ಬಾಲಕ್ ಸುವರ್ಣಾ ಗಳೀಸಾಳೆ | ಸೀದಾ | ಎಮ್ಮೀಯಾ
ಹಾರೋರ್ಗೆ ದಾನಾ ಕೊಡೋವಾಳೆ

ಆಟ್‌ತೂಗೆ ಇಟ್‌ತೂಗೇ ಮುಟ್‌ತುಂಬದ ಮಲ್ಲೂಗೇ
ಹಿಡತುಂಬಿದೆಲಿಯಾ ಅಡಕೀಯಾ | ಈಳ್ಯವ
ಹಚ್ಚದಳೇ ಬಂದಾ ಅಲರೀಗೆ

ಅಟ್ಟಂಬಾ ಮಾತಾ ಕೇಳಾರೆ ದರ್ಮರು
ಆಗೊಂದು ಮಾತಾ ನುಡೀದಾರೆ

“ದಾನಾ ದಾನಂಗಳೊಳಗೆ ಎಲ್ಲಾ ದಾನಾವಾದೊ
ಇನ್ನೆವ ದೋಸಾ ನಮಗಿಲ್ಲಾ | ಅಂದ್ ದರ್ಮಾರು
ಚಿನ್ ತೊಂಡಲ ತೂಗೆ ನೆಗಿಯಾಡಿ.

ದಾನಾದಾನಂಗಳೊಳಗೆ ಎಲ್ಲಾ ದಾನಾವಾದೊ
ಇನ್ನೆವ ದೊಸಾ ನಮಗಿಲ್ಲಾ | ಅಂದ್‌ದರ್ಮರು
ಹೂಂವ್ನ ತೊಂಡಲ ತೂಗೆ ನೆಗಿಯಾಡಿ.

ಹೂಂವ್ನ ತೊಂಡಲ ತೂಗೇ ನೆಗಿಯಾಡೇ ನಿಲುವನಕೆ
ಬಂದಾವೇ ಗುರ್ನಾಯ್ನಾ ಬರದೋಲೆ | ಅರ್ದಿಕಾರರು
ಬಂದೀ ಬಾಗಲ್ಲೇ ನಿಲೋವಾಕಿ |    “