ಅಯ್ವರರ್ದಣ್ಣಾ ಮೆಲುವುದ್ನು ಭೀಮಯ್ಯ
ಆಗೊಂದು ಮಾತಾ ನುಡೀದಾನೆ
ಚೆಕಿಂತು ಬಿಡುವರೋ ಗುಂಚೆಂತು ಬಿಡುವರೋ
ಎಲ್ಲನೂ ನಾನೂ ಸೆಲಮೆಂದೆ | ಅಣ್ಣಾ ಕೇಳೋ

ಅಳ್ಳೀಕಣ್ಣಿಗೂ ನೆರಿಯಾಲಿಲ್ಲ
ಅಟ್ಟಂಬಾ ಮಾತಾ ಕೇಳಾರೆ ದರುಮರು
ತಮ್ಮಾ ಸಾದೇವ್ನಾ ದೆನಿದೂರೇ

ತಮ್ಮಾ ಸಾದೇವ್ನಾ ದೆನಿದೂರ್ವದನ್ನು ಸಾದೇವಾ
ಓಯ್ಗುಂಡೇ ಒಡನೇ ಬರುವಾನೇ
ಓಯ್ಗುಂಡೇ ಒಡ್ನೆ ಬಂದೀ ಏನಂಬಾನೇ
ಏನು ಕಾರಣಲೆ ಕರದೀಯೋ

ಕರದಂ ಕಾರ್ಯಾವಿಲ್ಲ ಕಿರಿದುಂಬೆಸರ ಸಯ್ಯೆ
ಅಲದಾಮರನಾ ಸಿಗದತ್ತೋ | ಸಾದೇವಾ

ಸುತ್ತನ ತೋಟವಾ ಮೆಲಕೇ ನೋಡೋ
ಅಟ್ಟಂಬಾ ಮಾತಾ ಕೇಳಾನೇ ಸಾದೇವಾ
ಆಲದಾಮರನಾ ನೆಗದತ್ತೇ | ಸಾದೇವಾ
ಸುತ್ತನ ತೋಟವಾ ಮೆಲಕೇ ಸಾದೇವಾ

ಆತೋಟ ಅದುಅಲ್ಲ ಈತೋಟ ಇದುವಲ್ಲ
ಇದು ಈಗ ಗುರ್ರಾಯ್ನಾ ಎಳದೋಟಾ | ದಲ್ಲಿನ್ನು
ಚೂಜಿದಾರ್ನಂತಾ ಹೊಗೆಯದ್ದೇ | ಅಂಬುದ್ನು
ಆಲದಾಮರನಾ ಇಳೀದಾನೆ | ಸಾದೇವಾ
ತಮ್ಮಣ್ಣ ನೋಡನೋಗೆ ನಿಲೋವಾನೇ

“ಎಲ್ಲವರು ತಿಂಬರೋ ಕೆನೂಳಿ ಕೆಸಹುಳಿಯ
ನಾವ್‌ಹೋಪು ನಮ್ಮಾ ರಮನೆಗೆ | ಅಂದ್ ದರುಮರು
ಸೆಣ್ಣಾ ಕಯ್ದೆಂಚೀ ಬಿಡಸಾರೆ | ದರುಮರು
ಬಾಯ್ತುಂಬ ಬೆಳಿಎಲಿಯಾ ಮೆಲೋವಾರೇ | ”
ಎಲಿಯನೇ ತಂಬುಳವಾ ಉಗದಾರೆ

ಸೆಣ್ಣ ಗಂಬಳಿಯಾ ಕೂಡೋಗೆದ್ದೇ | ದರುಮರು
ಸೆಣ್ಣ ಗಂಬುಳಿಯಾ ಹೊಗಲೀಗೆ | ಹಾಯೀ ಕಂಡೇ
ತಮ್ಮಂಬು ಬಿಲ್ಲೆಲ್ಲಾ ತಡದಾರೆ ದರುಮರು
ರಾಜಂಗ್ಳ ಮೆಟ್ಟಾ ಇಳದಾರೆ | ದರುಮರು

ರಾಜೋಬೀದಿಗಾಗೇ ನೆಡೆದಾರೆ | ಅವರ್ನಾಲ್ವರು
ಗುರ್ರಾಯ್ನರಮನೆಗೇ ನೆಡದಾರ

ಗುರ್ರಾಯ್ನರಮನಗೇ ನಡೆವದ್ನು ಗುರ್ರಾಯಾ
ತಡದಾನೇ ಚಂಬಲಗೇ ಉದಕಾವೇ
ಗುರ್ರಾಯ್ ಕೊಟ್ಟುದಕಾ ತಟ್ಟಾನೆ ತಡ್ದಾನೆ

ಕಾಲೋ ಸಿರಿಮೊಕವಾ ತೊಳದಾರೆ | ಅವರ್ ನಾಲ್ವರು
ಮಾಳೂಗಿ ಒಳಗೆ ನೆಡದಾರೆ | ಬೋನ್ಪತೀ
ಹಸವೀಗ್ ಹಾಲ್ಗಂಜೀ ಬಡಸಾಳೆ.

ಹಸವೀಗ್‌ಹಾಲ್ಗಂಜೀ ಬಡಸ್ವದ್ನು ದರುಮರು
ಉಂಡೆದ್ದರೊಂದು ಗಳಗ್ಯಲ್ಲೆ
ಉಂಡಾರೂಟವಾ ತೋಳ್ದಾರೆಂಜಲಮಾಕೆವಾ
ತೂಗು ಮಂಚದಲೇ ಕುಳೋವಾರೇ

ತೂಗುಮಂಚದಲೇ ಕುಳುವುದ್ನು ರೂಪತಿ
ಆಲ್ದ ಕಟ್ಟೀಕೆಳಗೆ ಇಳದಾಳೆ | ರೂಪತಿ

ಹಾರ್ವರ – ಕೇರಿಗಾಗೇ ನೆಡದಾಳೇ
ಹಾರ್ವರ ಕೇರಿಗಾಗೇ ನೆಡ್ವದ್ರು ಹಾರವ
ರೂಪತೀ ಕಂಡೇ ಮರೂಳಾಗೇ | ಹಾರ
ಹಣವಳದೇ ಹೊಳಿಗೇ ಹೊಯೀದಾನೇ

“ಉಟ್ದ್ ಕುಳ್ಳು ಚಂಪೆ ಕಟ್ಟಿದ್ದು ಸೂಡುಮಂಡೆ
ಮನಸೀರಂಬುದನು ಅರಿಯೇನೋ | ಹಾರುವ
ಹಣವಳದೇ ಹೊಳಿಗೇ ಹೊಯೀಕಂಡ್ಯೋ | ಅಂದೇಳೇ
ಕುಂಬಾರ ಕೇರಿಗಾಗೆ ನೆಡದಾಳೆ

ಕುಂಬಾರಾ ಕೇರಿಗಾಗೇ ನೆಡ್ವದ್ನು ಕುಂಬಾರಾ
ಮಗುವಂದೇ ಮಣಿಯಾ ನೆಗದಾನೇ | ಕುಂಬಾರಾ
ಹೋಳ್‌ಮಣಿಯಾಗ್ ಕಯ್ಯಾ ಹರ್ದಿ ಕಂಡಾ

“ಉಟ್ದ್ ಕುಳ್ಳು ಚಂಪೆ ಕಟ್ದಾ ಸೂಡುಮಂಡೆ
ಮನಸೀರಂಬುದನ್ನೂ ಅರೀಯೇನೋ | ಕುಂಬಾರಾ
ಮಗು ಅಂದೇ ಮಣಿಯಾ ನೆಗದೀಯಾ | ಅಂದೇಳೇ
ಜೊನಗ್ನಾ ಕೇರಿಗಾಗೇ ನೆಡದಾಳೇ

ಜೊನಗ್ನಾ ಕೇರಿಗಾಗೆ ನೆಡ್ವದ್ನು ಜೊನಿಗ
ಚೂಜಿಯಲ್ ತನಕಯ್ಯಾ ಸುರೋಕಂಡಾ
ಉಟ್ದ್ ಕುಳ್ಳೂಚಂಪೆ, ಕಟ್ಟಿದು ಸೂಡುಮಂಡೆ
ಮನಸೀರಂಬುದನು ಅರಿಯೇನೋ | ಜೊನಿಗ
ಚೂಜಿಯಲ್ ನಿನ್‌ಕಯ್ಯಾ ಸುರೋಕಂಡ್ಯೋ | ಅಂದೇಳೇ
ಸೆಟ್ಯೋರ್ ಕೇರಿಗಾಗೇ ನೆಡದಾಳೆ

ಸೆಟ್ಟೀಯೋರ್ ಕೇರಿಗಾಗೇ ನೆಡ್ವದ್ನು ಸೆಟ್ಟಿಯೋರು
ಅಕ್ಕೀಅಳ್ದೆ ಹೊಳಿಗೇ ಹೊಯೀದಾರೇ
ಉಟ್ದ್ ಕುಳ್ಳು ಚಂಪೆ ಕಟ್ದ್ ಸೂಡು ಮಂಡೆ
ಅಕ್ಕೀ ಅಳ್ದೆ ಹೊಳಿಗೇ ಹೊಯೀಕಂಡ್ಯೋ | ಅಂದೇಳೇ,
ಗುರ್ರಾಯ್ನರಮನೆಗೇ ನೆಡೆದಾಳೇ | ರೂಪತೀ

ಹೋಗೀ ಬಾಗಲ್ಲೇ ನಿಲೋವಾಳೇ
ಹೋಗೀ ಬಾಗಲ್ಲೇ ನಿಲ್ವದ್ನು ಬೋನ್ಪತಿ
ತಡದಳೆ ಚಂಬಲಗೆ ಉದಕವೆ

ಬೋನ್ಪತಿ ಕೊಟ್ಟುದಕಾ ತಟ್ಟಾನೆ ತಡದಾಳೆ
ಕಾಲೋ ಸಿರಿಮೊಕವಾ ತೊಳದಾಳೆ | ರೂಪತಿ
ಮಾಳುಗೀ ಒಳಗೆ ನೆಡೆದಾಳೆ

ಮಾಳೂಗೀ ಒಳಗೆ ನೆಡ್ವದ್ನು ಬೋನ್ಪತೀ
ಹಸವೀಗ್ ಹಾಲ್ಗಂಜೀ ಬಡಸಾಳೆ
ಹಸವೀಗ್ ಹಾಲ್ಗಂಜೀ ಬಡಸ್ವದ್ನು ರೂಪತಿ
ಉಂಡೆದ್ದಳೊಂದು ಗಳಗ್ಯಲ್ಲೇ

ಉಂಡಾಳೂಟವಾ ತೊಳ್ದೆಳೆಂಜಲಮೊಕವಾ
ತೂಗುಮಂಚದಲೆ ಕುಳೋವಾಳೇ
ತೂಗುಮಂಚದಲೆ ಕುಳುವದ್ನು ಭೀಮನು
ಆಲ್ದ್ ಕಟ್ಟ ಕೆಳಗೆ ಇಳದಾನೆ | ಬೀಮಯ್ಗೆ

ಕಡ್ಳೀ ತನವಾರಾ ಎದೋರಾಗೇ
ಕಡ್ಳೀ ತನ್ವಾರಾ ಎದುರಾಗ್ವಾದ್ನು ಬೀಮಯ್ಯ
ಆಗೊಂದು ಮಾತಾ ನುಡೀದಾನೆ

ಆಗೊಂದು ಮಾತಾ ಏನಂದಿ ನುಡೀದಾನೆ
ತನಗಿಟ್ಟು ಕಡ್ಳೀ ಕೊಡೋಬೇಕು.

“ನಿಂಗೇಕಡ್ಳೆ ಕೊಡುವುದಕ್ಕೆ ಬಡವನ ಬದಕಪ್ಪಾ
ನಿನಗೇನಾ ಕಡ್ಳೀಕೊಡೋಲಾರೆ | ಅಂಬುದ್ನು
ಕಡಲೀ ಮುಟೀ ಸೊಗವೇ ಹೊಗಲೀಗೆ | ಹಾಯಿಕಂಡಿ
ಮುಕ್ಕುತ್ತಾ ಮೂರ್ಹೆಜ್ಜೀ ಗಳೀದಾನೆ | ಬೀಮಗೆ
ಗೋದೀ ತನವರ ಎದರ್ ಬಂದೇ | ನಂದಾನೆ
ತನಗಿಟ್ಟೋ ಗೋದೀ ಕೊಡೊಬೇಕೇ

“ನಿನಗಿಟ್ ಗೋದಿ ಕೊಡುಕೆ ಬಡವನೆ ಬದ್ಕಪ್ಪ
ನಿನಗೆ ನಾ ಗೋದಿ ಕೊಡ್ಲಾರೆ | ಅಂಬುದ್ನು
ಗೋದೀ ಮುಟ್ಟಿ ತೆಗದೇ ಹೋಗಲೀಗೆ | ಗ್ | ಹಾಯಿಕಂಡೇ

ಮುಕ್ಕತ್ ಮೂರ್ಹೆಜ್ಜಿ ಗಳೀದಾನೇ | ಬೀಮಯ್ಯಾ
ಬಡಬಟ್ನ ಅರಮನಗೇ ನೆಡದಾನೆ | ಬೀಮಯ್ಯಾ
ಹೋಗೀ ಬಾಗಲ್ಲೇ ನಿಲೋವಾನೇ | ಬೀಮಯ್ಯಾ
ಬಡಬಟ್ಟಾಂನಂದೇ ಕರದಾನೇ.

ಇಂದೂ ಕರದಮಲ್ಲ ಬಂದಾನೇ ಬಡಬಟ್ಟಾ
ನಿಂದಾನೇ ಬೀಮಯ್ನಾ ಒಡನಲ್ಲೇ ಬಡಬಟ್ಟಾ
ಏನು ಕಾರಣಲೆ ಕರದೀಯೋ
ಕರದಂ ಕಾರ್ಯವಿಲ್ಲ ಕಿರಿದುಂಬೆಸರ ಸಯ್ಯೋ
ತನಗೇಳ್ ಮೂಡಕ್ಕಿ ಕೊಡಬೇಕೋ

ನಿನ್ಗೇಳ್ ಮೂಡಕ್ಕಿ ಕೊಡವಕ್ಕೆ ಬಡವನ ಬದುಕಪ್ಪ
ನಿನಗೇಳೂ ಮೂಡಕ್ಕಿ ಕೊಡಲಾರೆ | ಅಂಬುದನ್ನು
ಬಡಬಟ್ನ ಸೊಗದೆ ಹೆರಗ್ಹಣದೇ | ಬೀಮಯ್ಯ
ಮಾಳೂಗೀ ಒಳಗೇ ನೆಡದಾನೆ | ಬೀಮಯ್ಯ

ಮೂರ್ ಗುಡಕಲ್ಲಾ ಒಲಿಹೂಡೇ | ಬೀಮಯ್ಯ
ಹಿರಿಯಾ ಕೊಪ್ಪರಗೀ ಎಸರಿತ್ತೇ | ಬೀಮಯ್ಯ
ಜೋಡಲ ಕೊಡಪನವಾ ತಡೆದಾನೆ | ಬೀಮಯ್ಯ
ಮೂಡನಗ್ಗೆರಿಗೇ ನಡೆದಾನೆ | ಬೀಮಯ್ಯ

ಕೊಡಪನದಲ್ ನೀರಾ ಮೊಗತಂದೇ | ಬೀಮಯ್ಯ
ಮಾಳೂಗೀ ಒಳಗೇ ನೆಡದಾನೇ | ಬೀಮಯ್ಯ
ಏಳೋ ಮುಡಕ್ಕೀ ಸೊರಗ್ಹೊಯ್ದೆ | ಬೀಮಯ್ಯ
ಅತ್ತೀಯೂ ಮರನಾ ಕಡೀದಾನೇ | ಬೀಮಯ್ಯ

ಕಿಚ್ಚೀಗೇ ಅದರಾ ಉರೀಸಾನೇ | ಬೀಮಯ್ಯ
ಅತ್ತೀಯಾ ಸವ್ದೀ ಕತ್ತದೆ ಇರ್ಬೆಡಾ |
ಕತ್ತೀ ಮತ್ತೊಮ್ಮೆ ಮಯ್ಬೆಡಾ
ಕತ್ತೀ ಮತ್ತೊಮ್ಮೆ ಮಯ್ತಂದ್ದುಂಟಾದಾರೆ
ಗಕ್ಕನೇ ತೊಳವೆ ತಳನಲ್ಲೇ

ಹಳ್ಳಗನಕ್ಕೀ ಬೇಯದೆ ಇರ್ಬೇಡಾ
ಬೆಂದೀ ಮತ್ತೊಮ್ಮೆ ಕರಗ್‌ಬೆಡಾ
ಬೆಂದೀ ಮತ್ತೊಮ್ಮೆ ಕರಗ್‌ದ್ದುಂಟಾದಾರೆ
ಗಕ್ಕನೇ ತೊಳವೆ ತೆಳನಲ್ಲೇ | ಅಂದೇಳೇ

ಮಾಳಗ್ಗಿಂದೆರಗೇ ಬರೋವಾನೆ | ಬೀಮಯ್ಯ
ರಾಜಂಗ್ಳ ಮೆಟ್ಟಾ ಇಳದಾನೆ | ಬೀಮಯ್ಯ
ಗಾಣಗನರಮನಗೇ ನೆಡದಾನೆ | ಬೀಮಯ್ಯ
ಹೋಗಿ ಬಾಗಲ್ಲೇ ನಿಲೋವಾನೇ | ಬೀಮಯ್ಯ

ಗಾಣಗನೇ ಅಂದೇ ಕರೋವಾನೇ
ಗಾಣಗನೇ ಅಂದೇ ಕರ್ವದ್ನು ಕಾಣೀಗಾ
ಓಯ್ಗೊಂಡೇ ಒಡನೇ ಬರೋವಾನೇ

ಓಯ್ಗೊಂಡೇ ಒಡ್ನೇ ಬಂದೀ ಏನಂಬಾನೇ
ಏನು ಕಾರಣಲೆ ಕರದೀಯೋ

“ಕರ್ದಂ ಕಾರ್ಯ ಕಾರ್ಯವಿಲ್ಲ ಕಿರಿದುಂಬೆಸರಸಯ್ಯೆ
ತನಗೇಳ್ ಗಾಣೆಣ್ಣೀ ಕೊಡಬೇಕೋ | ಗಾಣೀಗಾ
ತನಗೇಳ್ ಗಾಣ್ಹಿಂಡಿ ಕೊಡಬೇಕೋ | ಗಾಣೀಗಾ

ನಮ್ಮ ಅರ್ಮಲ್ಲಿ ಬೂತಗಳು ತೋಲೋ
ಮೀಸಲದ ಹಿಂಡೀ ಕೊಡಲಾರೆ | ಅಂಬುದ್ನು
ಗಾಣಿಗನ ಸೊಣದೇ ಹೆರಗ್ಹಣದೇ | ಭೀಮಯ್ಯಾ
ಮಾಳೂಗೀ ಒಳಗೇ ನೆಡದಾನೇ | ಭೀಮಯ್ಯಾ

ಏಳು ಗಾಣಿಂಡೀ ಮೆಲೋವಾನೇ | ಭೀಮಯ್ಯಾ
ಏಳು ಗಾಣೆಣ್ಣೀ ಕುಡದಾನೇ | ಭೀಮಯ್ಯಾ
ಮಾಳಗ್ಗಿಂದೆರಗೇ ಬರೋವಾನೇ | ಭೀಮಯ್ಯಾ
ರಾಜಂಗಳ ಮೆಟ್ಟಾ ಇಳೀದಾನೇ | ಭೀಮಯ್ಯಾ

ಬಾಳೀಯಾಬನವಾ ಇಳೀದಾನೆ | ಭೀಮಯ್ಯಾ
ಕಿರುಳ ಬಾಳೆಲಿಯಾ ಇಳಿದಾನೆ | ಭೀಮಯ್ಯಾ
ಅಲ್ಲೇ ಹಾದೀಮರಳಾ ಹಿಡದಾನೆ | ಭೀಮಯ್ಯಾ

ಬಡಬಟ್ನರಮನಗೇ ನೆಡದಾನೆ | ಭೀಮಯ್ಯಾ
ಮಾಳೂಗೀ ಒಳಗೆ ನೆಡದಾನೆ

ಹಾದೀಯಾ ಮರಳಾ ತೆಳ್ಳಗ್ ಕೊರ್ಪ್ ಮೆಣಸಿಟ್ಟೇ
ಕಿರಳಾ ಬಾಳೆಲಿಯಾ ತೊಳದ್ಹಾಸೆ | ಭೀಮಯ್ಯಾ
ಏಳ್ಮೂಡಕ್ಕಿ ಅನ್ನಾ ಸೊರಗಾನೆ | ಭೀಮಯ್ಯಾ
ಏಳ್ಮೂಡಕ್ಕಿ ತಳಿಯಾ ಕುಡೀದಾನೇ

ಏಳ್ಮೂಡಕ್ಕೀ ಅನ್ನಾ ಏನು ಮುದ್ದೀಕಟ್ಟೇ
ಏಳುತುತ್ತೀ ನಲ್ಲೇ ಮೆಲೋವಾನೇ | ಭೀಮಯ್ಯಾ
ತೇಗೀತೇ ಹೆರಗೇ ಬರೋವಾನೆ | ಭೀಮಯ್ಯಾ

ರಾಜಂಗ್ಳ ಮೆಟ್ಟಾ ಇಳೀದಾನೇ | ಭೀಮಯ್ಯಾ
ರಾಜೋಬಿದಿಗಾಗೇ ಬರೋವಾನೆ | ಭೀಮಯ್ಯಾ
ಗುರ್ರಾಯರ‍ಮನೆಗೇ ನೆಡದಾನೆ | ಭೀಮಯ್ಯಾ

ಹೋಗಿ ಬಾಗಲ್ಲೇ ನಿಲೋವಾನೇ
ಹೋಗಿ ಬಾಗಲ್ಲೇ ನಿಲುವದ್ನು ಗುರ್ರಾಯ
ತಡದಾನೇ ಚಂಬಗಲೇ ಉದಕವೇ

ಅಣ್ಣಾ ಕೊಟ್ಟುದಕಾ ತಟ್ಟಾನೆ ತಡದಾನೆ
ಕಾಲೂ ಸಿರಿಮೊಕವಾ ತಡದಾನೆ | ಭೀಮಯ್ಯ
ಮಾಳೂಗೀ ಒಳಗೆ ನೆಡದಾನೆ | ಭೀಮಯ್ಯ

ತೂಗುಮಂಚದಲೆ ಕುಳೋತಾನೆ
ತೂಗು ಮಂಚದಲೆ ಕುಳುವದ್ನು ಬೊನ್ಪತಿ |
ಊಟಕ್ ಬಾರಂದೇ ಕರದಾಳೆ

ನೀವೇನಡಬಲ್ಲಿರಿ ಬಾಸುಳ್ಳ ಬದನೀಕಾಯಾ
ನಾನಡಲುಬಲ್ಲೇ ಹಾದೀ ಮರಳೆ |ಳ|ತ್ತೀಗೆ
ತೆಳ್ಳಗೇ ಕೊರದೇ ಮೆಣಸಿಟ್ಟೇ | ಅತ್ತೀಗೆ

ಹುಳ್ಳಗ್ ಮುರ್ ತುತ್ತಾ ಉಂಡ್ಣ ಬಂದೇ |  “
ಇನ್ನೇ ಉಂಬಲಕೆ ಹಸವಿಲ್ಲ | ಅಂಬುದ್ನು ಗುರ್ರಾಯಾ
ಮಾಳೂಗೀ ಒಳಗೆ ನೆಡದಾನೆ

ಆಯುಳ್ಳ ಹಣ್ಣಡಕೆ ಸೋಯಿಸಿದ ಬೆಳಿಎಲೆ
ಹಾಲಿನಲಿ ಬೆಂದಾ ತೆನೆಸುಣ್ಣಾ | ತಡಕಂಟೆ
ಮಾಳಗ್ಗಿಂದೆರಗೇ ಬರೋವಾನೇ | ಗುರ್ರಾಯಾ
ಧರ್ಮರ್ಗೊಂದೀಳ್ಯ ಕೊಡೋವಾನೇ

ಒಂದೆ ತಾಯೀಗೆ ನೀವಯ್ವರು ಮಕ್ಕಳು
ನೀವಯ್ವರೊಂದೀಳ್ಯ ಮೆಲಲಂದೇ | ಗುರ್ರಾಯ
ದರ್ಮರ ಕಯ್ಲೀಳ್ಯಾ ಕೊಡೋವಾನೇ

ದರ್ಮರ ಕಯ್ಲೀಳ್ಯಾ ಕೊಡ್ವದ್ನು ದರುಮರು
ಅಯ್ವರೊಂದೀಳ್ಯ ಮೆಲೋವಾರೆ
ಅಯ್ವರೊಂದೀಳ್ಯ ಮೆಲುವುದ್ನು ಗುರ್ರಾಯಾ
ತಾನೊಂದೀಳ್ಯವಾ ಮೆಲೋವಾನೇ
ಎಲಿಯೊಂದ್ ತಿಂದಾನೆ ರಜವಲ್ಲೆ ಉಗಳಾನೇ
ಆಗೊಂದು ಮಾತಾ ನುಡೀದಾನೆ

ಅಗೊಂದು ಮಾತಾ ಏನಂದಿ ನುಡೀದಾನೆ
ನೀವೆವ ಬದಕೀಗೇ ಇರುತೀರೇ | ಅಂಬುದ್ನುದರ್ಮರು
ತಾದೆವರ ಪೂಜೀಕೇ ಇರತೀನೋ | ಅಂಬುದ್ನು ಸಾದೇವಾ

ನೀಎವಾ ಬದ್ಕೀಗೇ ಇರತೀಯೋ | ಅಂಬುದ್ನು ಸಕಲಯ್ಯ
ಗೋವಾ ಕಾವದಕೆ ಇರತೀನೋ | ಅಂಬುದ್ನು ಸಕಲಯ್ಯ
ನೀಎವ ಬದುಕೀಗೇ ಇರತೀಯೋ | “

ನಾಸೊಪ್ಪಾ ಕೊವ್ವದಕೆ ಇರತೀನೋ |  ಅಂಬುದ್ನು ಸಕಲಯ್ಯ
ನೀಎವಾ ಬದುಕೀಗೇ ಇರತೀಯೋ | “
ನಾಮಕ್ಕಳ ಬರೆಸ್ವದಕ ಇರತೀನೋ | ಅಂಬುದ್ನು ಭೀಮಯ್ಯ

ನೀ ಎವಾ ಬದಕೀಗೇ ಇರತೀಯೋ | “
ತಾ ಅಡಗೀ ಮಾಡ್ವದಕೆ ಇರತೀನೋ

ಒಂದೆಸರಾ ಎತ್ವರು ಒಂದೆಸರಾ ಇಳಗ್ವರು
ಒಂದಗಳಾ ಮಾಡೇ ಬಡಸ್ವರು | ಅಣ್ಣ ಕೇಳೋ

ನಾ ಒಂದೇ ಎಸರಿತ್ತೇ ಬಡಸೀತೆ | ಅಂದೇಳೆ
ಅಡಗೀ ಸಾಲೀಗೇ ನೆಡದಾನೆ | ಭೀಮಯ್ಯ
ರೂಪತಿ ನೀಎವ ಬದಕೀಗೆ ಇರತೀಯೇ? | ಅಂಬುದ್ನು
ತಾಬೊನ್ಪತಿಗೂಂಗಾ ಮುಡಸೀತೇ | ಅಂದೇಳೇ

ಹೂಂಗೀನಾ ಚೊಬ್ಬೀ ತಡದಾಳೆ | ರೂಪತಿ
ಹೂಂಗೀನಕ್ಕಲಗೇ ನೆಡದಾಳೆ | ದರುಮರು
ದೇವರ ಪೂಜೀಕೇ ನೆಡದಾರೆ | ಅರಜಿಣ
ಬರವ ಸಾಲೀಗೇ ನೆಡದಾನೆ | ಸಾದೇವಾ

ಸಪ್ಪಾ ಕೊವ್ವದಕೇ ನೆಡದಾನೆ | ಸಕಲಯ್ಯ
ಗೊವಾಕಾವದಕೆ ನೆಡದಾನೆ | ಅಯ್ವರು
ಅಯ್ದು ಬದ್ಕೀನಲೇ ಇರೋವಾರೇ.

* * *