ಸರ್ವಕಾಲಕ್ಕೂ ಮಾನವ ತನ್ನ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕೆನ್ನುವಲ್ಲಿ ಧರ್ಮಾರ್ಥಕಾಮಮೋಕ್ಷಗಳು ಅವನನ್ನು ಕೈಬೀಸಿ ಕರೆಯುತ್ತಲೇ ಇರುತ್ತವೆ. ಇವುಗಳನ್ನು ಬಿಡಿಬಿಡಿಯಾಗಿ ನೋಡಿದಾಗ ಯುಗಧರ್ಮ, ಮನೋಧರ್ಮಕ್ಕೆ ತಕ್ಕೆಂತೆ ಅವುಗಳ ಸ್ಥಾನ ಸ್ವಲ್ಪ ಹಿಂಚುಮುಂಚಾಗಿರಬಹುದಷ್ಟೇ. ಒಟ್ಟಾರೆಯಾಗಿ ಅವು ಒಂದಕ್ಕೊಂದು ಬೆಸೆದು ಕೊಂಡು ಮಾನವನ ಬದುಕಿಗೆ ಒಂದು ಸಂಚಾಲಕ ಶಕ್ತಿಯಾಗಿರುವುದರಲ್ಲಿ ಎರಡು ಮಾತಿಲ್ಲ. ಈ ಧನವೂ ಧರ್ಮವೂ ಕೈಕೈ ಹಿಡಿದು ಸಾಗುವಂತೆ ತೋರುತ್ತದೆ. ಧರ್ಮವು ಇಹಪರ ಸುಖಸಾಧನವೆಂಬ ನಂಬಿಕೆಯಂತೆ ಧನವೂ ಇಹಪರ ಸುಖಸಾಧನವೆಂಬ ನಂಬಿಕೆಯಿಂದೆ. ಅತ್ಯಂತ ಸುಖಿಯೂ ಭೋಗಿಯೂ ಆಗಬೇಕಾದರೆ ಧರ್ಮ ಮಾರ್ಗ ಒಂದೇ ದಾರಿ ಎಂಬ ಬೋಧನೆಯನ್ನು ಎಲ್ಲ ಮತಧರ್ಮಗಳೂ ಮಾಡುತ್ತಲೇ ಬಂದಿವೆ. ಮಾನವನ ಕಣ್ಣು ಸದಾ ಸುಖಭೋಗದ ಕಡೆಗೆ ಇರುವುದರಿಂದ ಅವನನ್ನು ಧರ್ಮಮುಖಿಯನ್ನಾಗಿಸಲು ಸುಖಭೋಗದ ಆಮಿಷವನ್ನೇ ಮುಂದೊಡ್ಡಬೇಕಾದ ಅವಶ್ಯಕತೆ ಎಲ್ಲ ಧರ್ಮಕ್ಕೂ ಬಂದಿತ್ತು. ಮುಂದಿನ ಜನ್ಮದಲ್ಲಾದರೂ ಸುಖಿಯಾಗುವ ಇವನ ಹಂಬಲದ ಎಳೆಯನ್ನು ಹಿಡಿದು ಉಪಾಯವಾಗಿ ಇವನನ್ನು ಧರ್ಮಮಾರ್ಗಕ್ಕೆಳೆಯಬೇಕಾಗಿತ್ತು. ಆ ಮೂಲಕ ತಾನೂ ಉಳಿಯಬೇಕಾಗಿತ್ತು. ಧರ್ಮಾಮೃತದಂತಹ ಕೃತಿಗಳ ಹುಟ್ಟಿನ ಒತ್ತಡ ಇದು.

ಧರ್ಮಾಮೃತ ರಚನೆಯಾದ ಕಾಲಘಟ್ಟದ ಒತ್ತಡಗಳನ್ನು ಅವನು ಕಟ್ಟಿಕೊಟ್ಟ ಸಮಾಜದ ಮಿಡಿತಗಳನ್ನು ಅರ್ಥ ಮಾಡಿಕೊಳ್ಳಲು ಕೃತಿನಿಷ್ಠವಾಗಿ ಓದುವುದರ ಜೊತೆಗೆ, ಆ ಕಾಲದ ಇತರ ಲಭ್ಯ ಆಕರಗಳ ಸಹಾಯ ಪಡೆಯುವುದೂ ಪೂರಕವಾಗಬಲ್ಲುದು. ಹನ್ನೊಂದನೇ  ಶತಮಾನದ ಕರ್ನಾಟಕದ ಶಾಸನಗಳು ಒಟ್ಟಾರೆಯಾಗಿ, ಮುಳುಗುಂದ ನಾಡಿನ ಶಾಸನಗಳು ಮುಖ್ಯವಾಗಿ ಕಟ್ಟಿಕೊಡುವ ಸಮಾಜ ಹಾಗೂ ಅವನ ಹಿರಿಯ ಕಿರಿಯ ಸಮಕಾಲೀನ ಶಾಸ್ತ್ರಕಾರರೂ ಕವಿಗಳೂ ಕಟ್ಟಿಕೊಡುವ ಚಿತ್ರಣಗಳನ್ನು ಜೊತೆಗಿಟ್ಟುಕೊಂಡು ನೋಡಿದಾಗ ಪ್ರಧಾನವಾಗಿ ಕಾಣುವ ಒಂದು ಅಂಶ ಆಗಿನ ಸಮಾಜ ‘ಅರ್ಥಮುಖಿ’ಯಾಗಿತ್ತು ಎಂಬುದು. ಸಂಪತ್ತಿನ ಒಡೆತನ ಅದರ ಆತ್ಯಂತಿಕ ಗುರಿಯಾಗಿದ್ದಂತೆ ಕಂಡುಬರುತ್ತದೆ. ಹನ್ನೆರಡನೇ ಶತಮಾನದ ಆದಿಭಾಗದಲ್ಲಿ ಮಾಚಿದೇವನೆಂಬ ವಿಪ್ರನ ಮಗ ಮಾರಯ್ಯನು ಬ್ರಾಹ್ಮಣವನ್ನು ತೊರೆದು ವಣಿಕ ಧರ್ಮವನ್ನು ಹಿಡಿದ ಬಗೆಗೆ ಶಾಸನ ಹೀಗೆ ಹೇಳುತ್ತದೆ. “ಅನಿಶಂ ಗೋಮಾರ್ಗ್ಗದಿಂ ಪೊಟ್ಟೆಯನೆ ಪೊರೆದುಕೊಂಡಿರ್ಪ್ಪದೀಗೂಡಮಾನುಷ್ಯನೆ ಹೇಳ್ ಧರ್ಮಾರ್ತ್ಥ ಕಾಮಂಗಳೊಳನುನಯದಿಂ ಪರ್ತ್ತಿಸಲ್ಯರ್ತ್ಥಿಯಿಂದಂ ಧನಮಂ ವಾಣಿಜ್ಜದಿಂದಾ ರ್ಜ್ಜಿಸುತೆ ಸಕಲ ಧರ್ಮಂಗಳೊಳ್‌ಕಾಮದೊಳ್‌ಸಂದುನಿತಾನ್ತಂ ಶೋಭಿಸಿರ್ಪಂ ಸಕಳಗುಣ ಯುತಂ ಮಾರನತ್ಯತ್ತಧೀರಂ”. ಮುಂದೆ ತಂದೆ ಹಿಡಿದ ದಾರಿಯಲ್ಲೇ ನಡೆದ ಅವನ ಮಕ್ಕಳು ಕಮ್ಮಟದ ಚಟ್ಟಿಸೆಟ್ಟಿ ಮತ್ತು ದಾಸಿಸೆಟ್ಟಿಯರು ಹೊಯ್ಸಳನಾಡಿನ ಪ್ರಸಿದ್ಧ ಒಳನಾಡು ಮತ್ತು ಕಡಲಾಚೆಯ ವ್ಯಾಪಾರಿಗಳಾಗಿ ಬೆಳೆದುದಷ್ಟೇ ಅಲ್ಲ ಅವರು ಕೈಗೊಂಡ ಧರ್ಮ ಕಾರ್ಯಗಳಿಂದ, ವಾಣಿಜ್ಯ ಚಟುವಟಿಕೆಯಿಂದ ಬಾಣವರ ಮುಖ್ಯ ವ್ಯಾಪಾರಿ ಕೇಂದ್ರವಾಗಿ ಬೆಳೆಯಲು ಅವಕಾಶವಾಯಿತೆಂಬುದನ್ನು ನಾವು ಗಮನಿಸಬೇಕು. ಅಲ್ಲಿಂದ ಸಾವಿರ ವರ್ಷಗಳ ಈಚೆಗೆ ನಿಂತ ನಮ್ಮ ಗುರಿಯೂ ಭೋಗ ಮತ್ತು ಸಂಪತ್ತೇ ಆಗಿರುವುದರಿಂದ ಆಗ ಕಾಣಿಸಿಕೊಂಡ ವಾಣಿಜ್ಯೀಕರಣ ಈಗ ಮತ್ತೊಮ್ಮೆ ಹೊಸರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ನಯಸೇನ ನಮಗೆ ಪ್ರಸ್ತುತವಾಗುತ್ತಾನೆ. ಪಂಪನಾಗಲಿ, ನಯಸೇನನಾಗಲಿ, ವಚನಕಾರ ಕೀರ್ತನೆಕಾರರಾಗಲೀ ಪ್ರಯತ್ನಿಸಿದ್ದು ಹೀಗೆ ಸಂಪತ್ತಿನ ಹಿಂದೆ ಬಿದ್ದ ಸಮಾಜವನ್ನು ಎಚ್ಚರಿಸುವುದಕ್ಕೆ ಆಗಿತ್ತೆಂದು ನನ್ನ ನಂಬಿಕೆ. ಆದರೆ ಅವು ಪ್ರಕಟವಾದದ್ದು ಮತಧರ್ಮದ ಪರಿವೇಶದಲ್ಲಿ.

ಕ್ರಿ.ಶ. ಏಳು ಎಂಟನೆಯ ಶತಮಾನದಿಂದ ತೀವ್ರಗೊಂಡ ಕೃಷಿ ಚಟುವಟಿಕೆಯು ಕರ್ನಾಟಕದಲ್ಲಿ ಹತ್ತು ಹನ್ನೊಂದನೆಯ ಶತಮಾನದ ಹೊತ್ತಿಗಾಗಲೇ ಪ್ರಮುಖ ಆದಾಯದ ಮೂಲವಾಗಿ ಬೆಳೆದು ಸಂಮೃದ್ದಿಯನ್ನು ತಂದಿತ್ತೆಂಬುದು ಆ ಕಾಲದ ನೂರಾರು ಶಾಸನಗಳಿಂದ ತಿಳಿದುಬರುತ್ತದೆ. ರಾಷ್ಟ್ರಕೂಟರಿಂದ ಪ್ರಾರಂಭವಾದ ಭೂದಾನಗಳು, ಉಂಬಳಿಗಳು

[1] ಮುಂದೆ ಬಂದ ಕಲ್ಯಾಣ ಚಾಲುಕ್ಯರು ಹೊಯ್ಸಳರು ಅನುಸರಿಸಿದ ಆರ್ಥಿಕ, ಧಾರ್ಮಿಕ ನೀತಿಯಿಂದಾಗಿ ವಿಸ್ತರಣೆಗೊಂಡು ದೇವಾಲಯಗಳು, ಅಗ್ರಹಾರಗಳು, ಮಠಮಾನ್ಯಗಳು, ಸಂಘಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಅಪಾರವಾದ ಭೂ ಹಿಡುವಳಿಗಳ ಒಡೆತನ ಪಡೆದದ್ದು ನವ ಶ್ರೀಮಂತ ವರ್ಗ – ಸಂಸ್ಥೆಗಳ ಸೃಷ್ಟಿಗೆ ಕಾರಣವಾಯಿತು. ಉತ್ಪಾದನೆಯ ಹೆಚ್ಚಳಕ್ಕೆ ತಕ್ಕಂತೆ ಬಳಕೆದಾರ ಹೊಸ ಶ್ರೀಮಂತವರ್ಗದಿಂದ ಬೇಡಿಕೆಯೂ ಹೆಚ್ಚಿತು.[2] ಇದರಿಂದ ಆಂತರಿಕ ಮಾರುಕಟ್ಟೆಯ ಬೆಳವಣಿಗೆಗಷ್ಟೇ ಅಲ್ಲದೆ ವಿದೇಶಿ ವ್ಯಾಪಾರಕ್ಕೂ ಹೆಚ್ಚಿನ ಪ್ರೋದೊರೆಯಿತು. ಹೆಚ್ಚಿದ ವಾಣಿಜ್ಯಪ್ರಗತಿ ಎಲ್ಲ ಧರ್ಮದವರನ್ನೂ ಎಲ್ಲ ಕಸುಬಿನವರನ್ನೂ ತನ್ನತ್ತ ಸೆಳೆಯಿತು. ಇದರಿಂದ ಅನೇಕ ಉತ್ಪಾದಕ ಸಂಘಗಳು, ವಿನಿಮಯ ಮಧ್ಯವರ್ತಿ ವ್ಯಾಪಾರಿಗಳು, ನಾನಾಶ್ರೇಣಿಗಳು[3] ಉಭಯ ನಾನಾದೇಸಿ ವರ್ತಕ ಸಂಘಗಳು ಸಂಘಟನೆಗೊಂಡು ವ್ಯವಸ್ಥಿತ ವಾಗಿ ಕಾರ್ಯನಿರ್ವಹಣೆ ಮಾಡಲು ತೊಡಗಿದವು. ಈ ವರ್ತಕ ಸಂಘಗಳು ಅಥವಾ ಶ್ರೇಣಿಗಳು ಜಾತಿಯ ಕಟ್ಟುಪಾಡಿಲ್ಲದೆ ಆಯಾ ವ್ಯಾಪಾರಿವರ್ಗವನ್ನು ಗಮನದಲ್ಲಿಟ್ಟುಕೊಂಡು ಸಹಕಾರಿ ತತ್ವದ ಮೇಲೆ ರೂಪುಗೊಂಡಿದ್ದು ವಾಣಿಜ್ಯೀಕರಣದ ಮುಖ್ಯಲಕ್ಷಣದಲ್ಲೊಂದು. ಇವೆಲ್ಲವೂ ಕೃಷಿಕಸಮಾಜ ಉದ್ಯಮಶೀಲ ಸಮಾಜವಾಗಿ ರೂಪುಗೊಳ್ಳಲು ಕಾರಣವಾಯಿತು. ಸಂತೆ ಗಳನ್ನು ಕೂಡಿಸುವುದು, ಸೆಟ್ಟಿಪಟ್ಟ ಕಟ್ಟುವುದು, ನಗರ, ಪೇಟೆಗಳ ನಿರ್ಮಾಣ ಮಾಡುವುದು ಇತ್ಯಾದಿಗಳಿಗೆ ಪ್ರಭುತ್ವ ಪೂರ್ಣ ಸಹಕಾರ ನೀಡುತ್ತಿದುದರಿಂದ ಪಟ್ಟಣ ಸ್ವಾಮಿಗಳ, ರಾಜ ಶೇಷ್ಠಿಗಳ, ಮಹಾವಡ್ಡವ್ಯವಹಾರಿಗಳ ಚಟುವಟಿಕೆಯಿಂದ ವಾಣಿಜ್ಯಕೇಂದ್ರಗಳಾಗಿ ಪ್ರಮುಖ ಪಟ್ಟಣಗಳು, ರಾಜಧಾನಿಗಳು ರೂಪುಗೊಂಡವು. ನಯಸೇನನಿದ್ದ ಮುಳುಗುಂದ ಅದರ ಸುತ್ತುಮುತ್ತಿನ ಪುಲಿಗೆರೆ, ಡಂಬಳ, ಎಲೆ ಶಿರೂರು, ಹೊಸೂರು, ಹರ್ತಿಕಣವಿ ಗ್ರಾಮಗಳು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿ ಬೆಳೆಯಲು ಅಲ್ಲಿ ಚಟುವಟಿಕೆಯಿಂದಿದ್ದ ಐಯ್ಯಾವಳೆ ಐನೂರ್ವರ ಸಂಘ, ಸಾಲಿಗರ ಸಂಘ, ತೆಲ್ಲಿಗರ ಸಂಘ, ಉಗುರ ಮುನ್ನೂರ್ವರ ಸಂಘ, ಮಾಲೆಕಾರರ ಸಂಘ, ನಕರರ ಸಂಘಗಳು ಕಾರಣವಾಗಿದ್ದುದನ್ನು ಮುಳುಗುಂದ ನಾಡಿನ ಶಾಸನಾಧಾರಗಳಿಂದ ತಿಳಿಯಬಹುದು.[4]

ಉದ್ಯಮಶೀಲ ಸಮಾಜದ ಸಹಜ ಲಕ್ಷಣವಾದ, ಹಣಕಾಸು ವ್ಯವಹಾರದ ಹೆಚ್ಚಳ, ನಾಣ್ಯಗಳ ಮುದ್ರಣ, ಸಾಲ ಬಡ್ಡಿ ವ್ಯವಹಾರ, ಬಂಡವಾಳ ಹೂಡುವಿಕೆ, ಸಂಪತ್ತಿನ ಕ್ರೋಡೀ ಕರಣ ಇವೆಲ್ಲವೂ ಹನ್ನೊಂದನೆ ಶತಮಾನದ ಲಕ್ಷಣಗಳು ಹೆಚ್ಚಿದ ಸಂಪತ್ತು ಸಹಜವಾಗಿ ಸಿರಿವಂತರು ಐಷಾರಾಮದ ಬದುಕಿನ ಕಡೆಗೆ ತಿರುಗುವಂತೆ ಮಾಡಿತು. ನಯಸೇನ ಹೇಳುವಂತೆ ‘ಪರದರಿಗೆ  ಹೆಚ್ಚು ಧನ ಸಂಪಾದಿಸಬೇಕೆಂಬ ಆಸೆ, ಅವರು ಧನದಿಂದಲೇ ಇಹಪರಗಳೆಂದು ತಿಳಿದಿದ್ದರು. ಅದಕ್ಕಾಗಿ ಯಾವಾಗಲೂ ದುಡಿಯುತ್ತಿದ್ದರು’[5] ಧರ್ಮಾಮೃತದಲ್ಲಿ ಬರುವ ಅನೇಕ ವ್ಯಾಪಾರಿಗಳು ರಾಜಶ್ರೇಷ್ಠಿಗಳಾಗಿದ್ದರು. ಸಂಪತ್ತಿನಲ್ಲಿ ಕುಬೇರನನ್ನು ಮೀರಿಸುವರಾಗಿದ್ದರು.[6] ಹಾಗಾಗಿ ಸಿರಿವಂತ ವರ್ತಕರ ಮಕ್ಕಳು, ಅರಸುಮಕ್ಕಳು ಲಂಪಟರಾಗುತ್ತಿದ್ದು ದರಲ್ಲಿ ಆಶ್ಚರ್ಯವಿಲ್ಲ. ದೇವಾದಾಸಿಯರ ವೇಶ್ಯೆಯರ[7] ಸೇವಕ ವರ್ಗದವರ, ಬಳಕೆ, ಭೋಗವಸ್ತುಗಳ ಬೇಡಿಕೆ ಹೆಚ್ಚಾಯಿತು. ಇಂಥ ಸಿರಿವಂತರು ತಮ್ಮ ಚಟುವಟಿಕೆಗೆ ಅಧಿಕಾರಿ ವರ್ಗ, ಅರಸೊತ್ತಿಗೆಯಿಂದ ಪರವಾನಗಿ, ರಕ್ಷಣೆ ಪಡೆಯಲು ಹಾಗೂ ಧಾರ್ಮಿಕ ಪ್ರಮುಖರ ಕೃಪೆಗೆ ಪಾತ್ರರಾಗಲು ಕಾಣಿಕೆ, ದಾನಧರ್ಮ ನೀಡುವುದರ ಮೂಲಕ ಓಲೈಸುವುದು ಹೆಚ್ಚಾಯಿತು. ಇಂಥವರ ಭೋಗ ಜೀವನ ಸಾಮಾನ್ಯನ ಕಣ್ಣುಕುಕ್ಕುವುದರಲ್ಲಿ ಆಶ್ಚರ್ಯ ವಿಲ್ಲ. ಬಡ ಬ್ರಾಹ್ಮಣ, ಕಳ್ಳ, ಮೀನುಗಾರ ಎಲ್ಲರೂ ಸಿರಿವಂತರಾಗಲು ಬಯಸುವುದು ಸಹಜ.[8] ಇಂಥ ವರ್ಗವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರತಿಯೊಂದು ಧರ್ಮವೂ ನಾನಾ ರೀತಿ ಪ್ರಯತ್ನಿಸುವುದು ಅಂದಿನಂತೆ ಇಂದೂ ಇದೆ. ಬಲ್ಲಿದನಾಗುವ ಕನಸು ಎಲ್ಲರಿಗೂ ಸಾಧ್ಯವಿದ್ದರೂ ಅವಕಾಶಗಳು ಸಮನಾಗಿರಲಿಲ್ಲವೆಂಬುದು ಅಷ್ಟೇ ಸತ್ಯ. ಹೀಗಾಗಿ ಕಳ್ಳತನ, ದರೋಡೆ,[9] ಮೋಸ ತಟವಟಗಳು ಹೆಚ್ಚಾದವು. ಸಂಪತ್ತಿನ ರಕ್ಷಣೆಗಾಗಿ ಕಾನೂನು ಕಟ್ಟಳೆ ಗಳನ್ನು ಕುರಿತ ಕೃತಿ ರಚನೆಯಾಯಿತು. ಅಂಗರಕ್ಷಕ ಪಡೆಗಳು ತಳಾರರು ಬಂಟರ[10] ನೇಮಕ ಹೆಚ್ಚಾಯಿತು. ಹಾಗಾಗಿ ನಯಸೇನನ ಕೃತಿಯೊಳಗೆ ಸಿರಿವಂತ ವರ್ತಕರು, ಕಳ್ಳರು, ತಳಾರರು, ವೇಶ್ಯೆಯರು, ದರಿದ್ರರು, ಸೇವಕರು, ಲಂಪಟರು ಮತ್ತೆ ಮತ್ತೆ ಕಂಡು ಬರುತ್ತಾರೆ. ಬಡ ಸ್ತ್ರೀಯರು ಬಂಗಾರವೆಂದೇ ಭಾವಿಸಿ ಹಿತ್ತಾಳೆಯ ಒಡವೆಗಳನ್ನು ಧರಿಸುತ್ತಿದ್ದರು[11] ಬಡವರಿಗೆ ಹಣದ ಆಸೆ ತೋರಿಸಿ ಕೊಲೆ ಸುಲಿಗೆ ಕಳ್ಳತನ ಮಾಡಿಸುವ ಪ್ರವೃತ್ತಿಯೂ ಕಂಡುಬರುತ್ತದೆ. ಶೆಟ್ಟಿಯೊಬ್ಬನನ್ನು ಕೊಂದ ವ್ಯಕ್ತಿಯನ್ನು ಅವನ ಕುಟುಂಬದ ೧೩ ಜನರನ್ನು ಕೊಂದು ಬಂದ ಬಂಟನಿಗೆ ‘ಪಗೆಯ ಬೆಂಕೊಳ್ಪನೆಂಬ’ ಬಿರುದಿತ್ತು ಸನ್ಮಾನಿಸಿದ ವಿಚಾರವನ್ನು ಬೇಡ್ಕಿ ಹಾಳಿನ ತಾಮ್ರ ಶಾಸನ ಹೇಳುತ್ತದೆ.[12]

ಈ ರೀತಿ ಲೌಕಿಕ ಸಾಧನೆ ಸಿದ್ದಿಯಲ್ಲಿ ಮುಳುಗಿದ್ದ ಸಿರಿವಂತ ವರ್ಗವನ್ನು ಪ್ರಭುವರ್ಗ ವನ್ನೂ, ಅತೃಪ್ತಿ, ತಳಮಳಗಳಿಗೆ ಸಿಕ್ಕಿದ್ದ ಬಡ ಸಾಮಾನ್ಯರನ್ನು ನೀತಿ ನಡಾವಳಿಗಳ ಅಂಕುಶ ಹಾಕಿ ಹಿಡಿದಿಡುವ, ಅವರ ಒಲವು ತಮ್ಮತ್ತ ಹರಿಯುವಂತೆ ಮಾಡುವ ಸವಾಲು ಧರ್ಮದ ಮೇಲಿತ್ತು. ಇಂಥ ಸಮಾಜವನ್ನು ಪ್ರಭುತ್ವವು ರಾಜಕೀಯ ಶಕ್ತಿಯನ್ನು ಬಳಸಿ ನಿಯಂತ್ರಿಸುವು ದಾಗದಿದ್ದುದರಿಂದ ಧಾರ್ಮಿಕ ಶಕ್ತಿಯನ್ನು ಬಳಸಿ ನಿಯಂತ್ರಿಸುವುದು ಸಾಧ್ಯವಾಗುತ್ತಿತ್ತು. ಆ ಕಾರಣದಿಂದ ಧರ್ಮ ಮತ್ತು ಪ್ರಭುತ್ವ ಒಂದಕ್ಕೊಂದು ಅನಿವಾರ್ಯ ಅವಲಂಬನೆ ಒಡಂಬಡಿಕೆಯನ್ನು ಮಾಡಿಕೊಳ್ಳಬೇಕಾಗಿತ್ತು.

ರಾಜರು ಸರ್ವಧರ್ಮ ಸಮನ್ವಯದ ನೀತಿಯನ್ನು ಅನುಸರಿಸಿ ಸಾಧ್ಯವಾದಮಟ್ಟಿಗೆ ಧರ್ಮ ಸಂಘರ್ಷಕ್ಕೆ ಅವಕಾಶವಾಗದಂತೆ ನೋಡಿಕೊಳ್ಳುತ್ತಿದ್ದರು. ಅದಕ್ಕಾಗೇ ಶಾಸನಗಳು ಅವರನ್ನು ಚತುಸ್ಸಮಯ ಸಮುದ್ಧರಣರೆಂದು ಕರೆಯುತ್ತವೆ. ಆದರೂ ಕೆಲವು ಅರಸರು ಯಾವುದೋ ಒಂದು ಧರ್ಮಕ್ಕೆ ಹೇರಳವಾಗಿ ದಾನದತ್ತಿ ನೀಡಿರುವುದು ಕಂಡುಬರುತ್ತದೆ. ೧೧೪೩ರ ಶಾಸನವೊಂದು[13] ಸಾಮಂತರಸ ಗೋಯಿದೇವನ ಜೈನಧರ್ಮ ವಿರೋಧವನ್ನು ‘‘ಜೈನಮಾರ್ಗಸ್ಥಗಿತ ಗುಣಕಳಾಳಾಪನುದ್ಯತ್ಪ್ರತಾಪಂ’’ ಎಂದು ಕರೆದಿದೆ. ಆ ಮಾತಿಗೆ ಆ ಗ್ರಾಮದ ಜೈನ ಸ್ಮಾರಕಗಳು ಸಂಪೂರ್ಣ ನಾಶವಾಗಿರುವುದೇ ಸಾಕ್ಷಿ. ಕರ್ನಾಟಕದ ಧಾರ್ಮಿಕ ಇತಿಹಾಸವು ರಾಜಕೀಯ ಇತಿಹಾಸದೊಂದಿಗೆ ಥಳುಕು ಹಾಕಿಕೊಂಡಿರುವುದರಿಂದಲೇ ರಾಜವಂಶಗಳ ಏಳುಬೀಳಿನ ಕಥೆಯೇ ಧರ್ಮದ ಕಥೆಯೂ ಆಗಿದೆ. ಉದ್ದಕ್ಕೂ ಕಾಣಿಸುವ ಮತ ಧರ್ಮದ ಸಂಘರ್ಷವು ರಾಜಕೀಯ ಮತ್ತು ಆರ್ಥಿಕ ಶಕ್ತಿ ಕೇಂದ್ರದ ಚುಕ್ಕಾಣಿ ಹಿಡಿಯುವ ಮೇಲಾಟವಾಗಿದೆ. ‘ಧರ್ಮಸಂಘರ್ಷದ ಬೀಜವಿರುವುದು ಆರ್ಥಿಕ ಕ್ಷೇತ್ರದಲ್ಲಿ’ ಎನ್ನುತ್ತಾರೆ ಆರ್.ಎನ್. ನಂದಿ.

ನಯಸೇನನ ಮುಳುಗುಂದ ಹಾಗೂ ಸುತ್ತಮುತ್ತ ಅನೇಕ ಪ್ರಮುಖ ಪಟ್ಟಣಗಳನ್ನು ಶಾಸನಗಳು ಉಲ್ಲೇಖಿಸುತ್ತವೆ. ಅವು ಪ್ರಮುಖ ಧಾರ್ಮಿಕ ಹಾಗೂ ವಾಣಿಜ್ಯ ಕೇಂದ್ರಗಳಾಗಿ ದ್ದವು. ಡಂಬಳರಲ್ಲಿ ಬೌದ್ಧ ವರ್ತಕರು ಬೌದ್ಧವಿಹಾರವನ್ನು ಮಾಡಿಸಿದುದನ್ನು ಸಂಗವಯ್ಯ ಸೆಟ್ಟಿಯು ಆರ್ಯತಾರಾದೇವಿಯ ವಿಹಾರ ಕಟ್ಟಿಸಿ ದತ್ತಿ ನೀಡಿದ ವಿವರವಿದೆ.[14] ಮುಳುಗುಂದದ ಗಡಿಗ್ರಾಮ ಕೋಳಿವಾಡದಲ್ಲಿಯೂ ಒಂದು ತಾರಾವಿಗ್ರಹ ದೊರತಿದ್ದು, ಆ ಪ್ರದೇಶ ಬೌದ್ಧ ಧರ್ಮೀಯರು ನೆಲೆಸಿದ್ದನ್ನು ಬೌದ್ಧ ವರ್ತಕರಿಂದ ಅನುಯಾಯಿಗಳಿಂದ ಪ್ರೋಪಡೆದುದನ್ನು ಶಾಸನಗಳು ಹೇಳುತ್ತವೆ.[15] ಆದರೆ ಮುಳುಗುಂದದಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಯಾವ ಶಾಸನವೂ ದೊರಕಿಲ್ಲ. ಕ್ರಿ.ಶ. ೧೧೦೪ರ ಮುಳುಗುಂದದ ಶಾಸನ[16]ವೊಂದು ಅಲ್ಲಿನ ವೀರನಾರಾಯಣ ದೇವರ ಸನ್ಯಾಸಿಯೊಬ್ಬನನ್ನು ‘ಬೌದ್ಧಮದೇಭ ಪಂಚಾನನ’ ಎಂದು ಕರೆದಿದೆ. ಧರ್ಮಾಮೃತದ ಕಥೆಗಳಲ್ಲಿ ವೈದಿಕ ಧರ್ಮದ ವಿಡಂಬನೆ ಸೌಮ್ಯವಾಗಿದ್ದು, ಬೌದ್ಧ ಧರ್ಮದ ವಿಡಂಬನೆಯು ತೀಕ್ಷ್ಣವಾಗಿರಲು, ಆ ಎರಡೂ ಧರ್ಮ ಗಳ ವರ್ತಕರಿಗೆ ವಾಣಿಜ್ಯಕ್ಷೇತ್ರದ ಸ್ವಾಮ್ಯಕ್ಕಾಗಿ ನಡೆಯುತ್ತಿದ್ದ ತೀವ್ರ ಪೈಪೋಟಿ ಕಾರಣ. ವಾತ್ಸಲ್ಯ ಕಥೆಯಲ್ಲಿ ಅನಾಥಮಗುವನ್ನು ಸಾಕುವ ಬೌದ್ಧಗುರುವಿನ ತಾರುಣ್ಯ ಮಾನವೀಯತೆಗಳನ್ನು ಹಿಂದೆ ಸರಿಸಿ, ಮುಂದೆ ರಾಣಿಯಾಗುವ ಮಗುವಿನ ಮೂಲಕ ಪ್ರಭುತ್ವದ ಮಾನ್ಯತೆಯನ್ನು ಪ್ರೋತನ್ನ ಧರ್ಮಕ್ಕೆ ಪಡೆದುಕೊಳ್ಳುವುದೇ ಆಗಿತ್ತು ಎಂಬುದನ್ನು ಎತ್ತಿ ಹೇಳಿದೆ. ರಾಜನ ಭಿನ್ನಧರ್ಮದ ಮಡದಿಯರ ಮೇಲಾಟದ ಹಿಂದೆ ಧಾರ್ಮಿಕ ಪ್ರಜ್ಞೆಗಿಂತ ಶಕ್ತಿರಾಜಕಾರಣವೇ ಢಾಳಾಗಿ ಕಾಣುತ್ತದೆ. ಸಾಮಾನ್ಯ ಕುಟುಂಬದಿಂದ ಅರಸು ಮನೆತನಗಳ ವರೆಗೆ ಒಂದೇ ಕುಟುಂಬದಲ್ಲಿ ಭಿನ್ನ ಧರ್ಮಕ್ಕೆ ಸೇರಿದವರು ಇರುತ್ತಿದ್ದುದು ಆ ಕಾಲದಲ್ಲಿ ಸಾಮಾನ್ಯವಾದ ವಿಷಯವಾಗಿತ್ತು. ಇದು ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆಯಾಗು ವಂತೆಯೇ ಸಂಘರ್ಷಕ್ಕೂ ಎಡೆ ಮಾಡಿಕೊಟ್ಟಿರಬಹುದು. ಸತ್ಯವ್ರತದ ಕಥೆಯಲ್ಲೂ ಬೌದ್ಧ – ಜೈನ ಧರ್ಮಗಳ ಮೇಲಾಟ ಮತಾಂತರ ಪ್ರಕ್ರಿಯೆಗಳು ಆ ಕಾಲದಲ್ಲಿ ನಡೆಯುತ್ತಿದ್ದುದರ ಬಗೆಗೆ ಸುಳಿವು ದೊರಕುತ್ತದೆ.

ಭಾರತದ ವಾಣಿಜ್ಯೋದ್ಯಮದಲ್ಲಿ ಮೊದಲಿಗೆ ಬೌದ್ಧರು ಪ್ರಧಾನಸ್ಥಾನ ಪಡೆದಿದ್ದರು. ೮ನೇ ಶತಮಾನದ ನಂತರ ೧೦ನೇ ಶತಮಾನದವರೆಗೆ ಜೈನರು ಸ್ವಾಮ್ಯವನ್ನು ಸ್ಥಾಪಿಸಿ ಕೊಂಡರು. ಕಲ್ಯಾಣ ಚಾಲುಕ್ಯರು ಶೈವಧರ್ಮ ಪಕ್ಷಪಾತಿಗಳಾದ್ದರಿಂದ ೧೦ನೇ ಶತಮಾನದ ನಂತರ ನಿಧಾನವಾಗಿ ಉತ್ತರ ಕರ್ನಾಟಕದ ವಾಣಿಜ್ಯ ಕ್ಷೇತ್ರವು ಶೈವರ ಕೈವಶವಾಯಿತು. ಮುಳುಗುಂದ ನಾಡಿನ ಶಾಸನಗಳೇ ಈ ಮಾತಿಗೆ ಪುಷ್ಟಿ ಕೊಡುತ್ತವೆ. ೧೧ – ೧೨ನೇ ಶತಮಾನದ ಅಲ್ಲಿನ ಶಾಸನಗಳಲ್ಲಿ ಉತ್ಪಾದಕ ಹಾಗೂ ವರ್ತಕ ಶ್ರೇಣಿಗಳಾದ ಅರವತ್ತೊಕ್ಕಲು[17] ಮಾಲೆಕಾರ ಐವತ್ತೆಂಟರ ಸಂಘ[18] ಉಗುರು ಮುನ್ನೂರ್ವರು[19] ತೆಲ್ಲಿಗರಯ್ಯತ್ತೊಕ್ಕಲು, ತೆಲ್ಲಿಗನ್ನೂರಿರ್ಪ್ಪದಿಂಬರ್[20] ನಕರರು ಇತ್ಯಾದಿಗಳು ಶಿವದೇವಾಲಯ, ಮಠಗಳ ನಿರ್ಮಾಣ ನಿರ್ವಹಣೆಗಾಗಿ ಅಪಾರದಾನ ನೀಡಿರುವುದನ್ನು ಕಾಣಬಹುದು. ಒಟ್ಟಿನಲ್ಲಿ ಇಲ್ಲಿನ ವ್ಯೆಶ್ಯರು  ಮಾಹೇಶ್ವರ ಸಮಯ ಸಮುದ್ಧರಣರು ಎನಿಸಿದ್ದರು.[21]

ಅನೇಕ ಪ್ರಮುಖ ಅಧಿಕಾರಿಗಳು ಸಿರಿವಂತರು ಶೈವ ದೇವಾಲಯ ನಿರ್ಮಾಣ ಮಾಡಿ ಅಲ್ಲಿನ ವಿದ್ಯೆ, ಆಹಾರ, ಬೈಷಜ್ಯ ಇತ್ಯಾದಿಗಳಿಗೆ ದಾನ ನೀಡಿದ್ದಾರೆ.[22] ಒಂದನೆ ಜಗದೇಕ ಮಲ್ಲನ ಮಹಾಸಾಮಂತನಾದ ಶೋಭರಸನು ಮುಳುಗುಂದ, ಹರ್ತಿ, ಕಣವಿ, ಮಾಗಡಿ, ಮುಚ್ಚಂಡಿಯಲ್ಲಿ ಅನೇಕ ಶಿವಾಲಯಗಳನ್ನು ಕಟ್ಟಿಸಿ, ದಾನ ನೀಡಿ ಶೈವಧರ್ಮ ಪರ ಕಾಳಜಿ ತೋರಿಸಿದ್ದಾನೆ. ವಿಕ್ರಮಾದಿತ್ಯ ಹೆಮ್ಮಾಡಿರಾಯನ ರಾಜಗುರುವಾಗಿದ್ದ ಶ್ರೀಇಂದ್ರ ಶಿವದೇವಾಚಾರ್ಯರು ಅವರ ಶಿಷ್ಯ ‘ಶಿವಧರ್ಮಾಮ್ಬೋಧಿ ಸಂವರ್ಧನ’ನೆನಿಸಿದ ಸಾಮವೇದಿ ದೇವರು ಅವರ ಶಿಷ್ಯ ಜ್ಞಾನ ಶಕ್ತಿ ದೇವರು ಇವರು ನಯಸೇನನ ಸಮಕಾಲೀನರಾಗಿದ್ದು ಶೈವ ಧರ್ಮದ ಏಳಿಗೆಗೆ ಶ್ರಮಿಸಿದವರು. ಇಲ್ಲಿನ ಶಾಸನಗಳು ಪರಿಚಯಿಸುವ ಅನೇಕ ಕಾಳಾಮುಖಮುನಿಗಳು, ದೇವಾಲಯದ ಸ್ಥಾನಿಕರು ರಾಜಮಾನ್ಯರಾಗಿದ್ದುದಷ್ಟೇ ಅಲ್ಲ ತಮ್ಮ ಜನಪರ ಕಾರ್ಯಗಳಿಂದ, ಪಾಂಡಿತ್ಯದಿಂದ ಸತ್ ಚಾರಿತ್ರ್ಯದಿಂದ ದೀನದಲಿತರ, ಸಾಮಾನ್ಯರ ಅಧಿಕಾರಿಗಳ, ಅರಸರ ಪ್ರೀತಿಗೆ ಪಾತ್ರರಾಗಿದ್ದರು. ಸಮಾಜದ ಎಲ್ಲ ಜಾತಿವರ್ಗದ ವೃತ್ತಿಯ ಜನರು ಶೈವಸ್ಥಾನಗಳಿಗೆ, ಮಠಗಳಿಗೆ ದಾನ ನೀಡಿದ್ದನ್ನು ಶಾಸನಗಳು ಹೇಳುತ್ತವೆ. ಇವುಗಳ ಸಂಖ್ಯೆ ೧೧ನೇ ಶತಮಾನದ ಆರಂಭದಿಂದ ಹೆಚ್ಚುತ್ತಾ ಹೋಗಿ ೧೨ನೇ ಶತಮಾನದ ಹೊತ್ತಿಗೆ ಬಹಳ ವ್ಯಾಪಕವಾಗಿ ಬೆಳೆದುದನ್ನು ಶಾಸನಗಳ ಆಧಾರದಿಂದ ಹೇಳಬಹುದು. ಅದೇ ಮುಳುಗುಂದನಾಡಿನ ಜೈನ ಬಸದಿಗಳು, ಜೈನಮುನಿಗಳು ಅವರ ಪ್ರಭಾವ ಪಾಂಡಿತ್ಯದ ಬಗೆಗೆ ಹೇಳುವ ಶಾಸನಗಳನ್ನು, ಬಸದಿ ನಿರ್ಮಾಣ ನಿರ್ವಹಣೆಗೆ ಬಿಟ್ಟ ದಾನಗಳ ಸಂಖ್ಯೆ ಯನ್ನು ಗಮನಿಸಿದಾಗ, ನೃಪತುಂಗನ ಕಾಲದಲ್ಲಿ ಮುಳುಗುಂದವನ್ನು ಪ್ರವೇಶಿಸಿದ ಈ ಧರ್ಮಕ್ಕೆ ರಾಷ್ಟ್ರಕೂಟರ ಪ್ರೋತ್ಸಾಹ ವಿಶೇಷವಾಗಿದ್ದುದು ಕಂಡುಬರುತ್ತದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕೆಲವೇ ದಾನದ ವಿವರಗಳಿದ್ದು ೧೨ನೇ ಶತಮಾನದಲ್ಲಿ ೨, ಹದಿನೈದನೇ ಶತಮಾನದಲ್ಲಿ ೧, ಹದಿನೇಳನೇ ಶತಮಾನದಲ್ಲಿ ೨ ಶಾಸನಗಳು ದೊರಕುತ್ತವೆ. ಇಲ್ಲಿನ ಕಾಳಾಮುಖಮುನಿಗಳ ವರ್ಣನೆಯಿಂದ ೧೧ನೆಯ ಶತಮಾನಕ್ಕಾಗಲೇ ಬೆಳೆಯುತ್ತಿದ್ದ ಅವರ ಸಾಮಾಜಿಕ ವರ್ಚಸ್ಸು ಹಾಗೂ ಶೈವ ಸ್ಥಾನಗಳ ಸಂಪತ್ತು ಗಮನ ಸೆಳೆಯುತ್ತದೆ. ಸಹಜವಾಗಿ ಇದು ಜೈನ ಮುನಿಗಳನ್ನು, ಅನುಯಾಯಿಗಳನ್ನು ಹೆದರಿಸುತ್ತಿತ್ತು ಮತ್ತು ಅವರ ಕಣ್ಣು ಕೆಂಪಾಗುವಂತೆ ಮಾಡಿತ್ತು. ತಮ್ಮ ಧರ್ಮದ ಉಳಿವಿಗಾಗಿ ಪಂಡಿತರಾದ ಮುನಿಗಳು ಅನ್ಯಧರ್ಮದ ಪಂಡಿತರೊಂದಿಗೆ ವಾಗ್ವಾದದ ಸ್ಫರ್ದೆಗೆ ಇಳಿಯುವಂತೆ ಪ್ರೇರೇಪಿಸಿತ್ತು.[23] ಇಮ್ಮಡಿ ಪ್ರೌಢದೇವರಾಯನ ರಾಜಗುರುವಾಗಿದ್ದ ಹೇಮಸೇನನೆಂಬ ಜೈನ ಮುನಿಯನ್ನು ಮುಳುಗುಂದದ ಶಾಸನವೊಂದು[24] ‘ಮಂಡಲಾಚಾರ್ಯವಾದವಾದೀಶ್ವರ ರಾಯ’, ‘ವಾದಿ ಪಿತಾಮಹ’ ಎಂದು ಕರೆದಿದೆ. ಪಂಡಿತರಾಗಿದ್ದು ಕವಿಹೃದಯ ಉಳ್ಳ ಜೈನ ಮುನಿಗಳು ತಮ್ಮ ಧರ್ಮವನ್ನು ಉಳಿಸಲು ಅದನ್ನು ಜನಸಾಮಾನ್ಯರೆಡೆಗೆ ಕೊಂಡೊಯ್ಯುವ ಹೊಸ ಮಾರ್ಗವನ್ನು ಸಾಹಿತ್ಯ ಸೃಷ್ಟಿಯಲ್ಲಿ ಕಂಡುಕೊಂಡರು. ನಯಸೇನನ ಮೃದು ವಿಡಂಬನೆ, ಬ್ರಹ್ಮಶಿವನ ಕಟು ಟೀಕೆ ಜೈನಧರ್ಮದ ಹತಾಶೆಯನ್ನೇ ಎತ್ತಿ ತೋರುತ್ತದೆ. ಮುನಿಗಳು ಬಸದಿಯ ಸಂಪತ್ತು ಆಸ್ತಿ ಒಡೆತನಗಳ ಕಡೆಗೆ ಕಣ್ಣಿಟ್ಟಿದ್ದುದನ್ನು ‘ಎಮ್ಮರಸಿ’ ಎಮ್ಮಜಿನಗೃಹ, ಎಮ್ಮೊಡವೆಗಳ್, ಎಮ್ಮಗುಡ್ಡರ್, ಎಮ್ಮರ್ಥ ಮತ್ತೆಮ್ಮ ನೆಲನೆಂದು ಮಾಣದೆ ನುಡಿಯುವ ಮುನಿ ಮುನಿಯಲ್ಲಂ[25] ಎಂದು ನಯಸೇನ ನೊಂದು ನುಡಿದಂತೆ ತೋರುತ್ತದೆ. ಮುಳುಗುಂದ ನಾಡಿನಲ್ಲೇ ಸೇನಗಣ, ಯಾಪನೀಯಸಂಘ, ನಂದಿಸಂಘ, ಸಿಂಹಸಂಘಗಳಿಗೆ ಸೇರಿದ ಮುನಿಗಳ ಶಾಸನಗಳು ದೊರಕಿವೆ. ಅವುಗಳ ಒಳಗೇ ಇದ್ದ ತತ್ವಗಳ ಆಚರಣೆಗಳ ವ್ಯತ್ಯಾಸ ಒಡಕುಗಳನ್ನು ನಯಸೇನ ಕಣ್ಣಾರೆ ಕಂಡಿದ್ದ. ಒಟ್ಟಿನಲ್ಲಿ ನಯಸೇನನ ಕಾಲಕ್ಕಾಗಲೇ ಜೈನಧರ್ಮವು ಆಂತರಿಕ ಮತ್ತು ಬಾಹ್ಯ ಕಾರಣಗಳಿಂದ ಶಿಥಿಲವಾಗಿತ್ತೆಂಬುದು ಸ್ಪಷ್ಟ. ಜನಸಾಮಾನ್ಯರು ಅಲೌಕಿಕ ಶಕ್ತಿಗಳಿಂದ ತಮ್ಮತ್ತ ಆಕರ್ಷಿತರಾಗುತ್ತಾರೆಂದು ಭಾವಿಸಿ ಜೈನ ಮುನಿಗಳು ಮಂತ್ರ – ತಂತ್ರ ವಶೀಕರಣ ಇತ್ಯಾದಿ ಗುಪ್ತ ವಿದ್ಯೆಗಳನ್ನು ಕಲಿತರು ಹಾಗೂ ಅಂತಹ ಕೆಲವು ದೈವಗಳ ಸೇರ್ಪಡೆಯನ್ನು ಮಾಡಿ ಕೊಂಡರು.[26] ಯಕ್ಷಿಯ ಆರಾಧನೆ ಮುಂದೆ ತಾಂತ್ರಿಕ ಆರಾಧನೆಯ ಕಡೆಗೆ ಮುಖ ಮಾಡಿತು. ನಯಸೇನನ ಸಮಕಾಲೀನನಾದ ಮುಳುಗುಂದವಾಸಿಯಾದ ಆಚಾರ್ಯ ಮಲ್ಲಿಷೇಣ ಸೂರಿಯು ಸಂಸ್ಕೃತದಲ್ಲಿ ಭೈರವ ಪದ್ಮಾವತೀಕಲ್ಪ, ಸರಸ್ವತಿ ಕಲ್ಪ, ಜ್ವಾಲಿನಿಕಲ್ಪ ಎಂಬ ಮಂತ್ರ ತಂತ್ರಗಳಿಗೆ ಸಂಬಂಧಿಸಿದ ಕೃತಿಗಳನ್ನು ಬರೆದಿದ್ದಾನೆ.[27]

ಹನ್ನೊಂದನೇ ಶತಮಾನದಲ್ಲಿ ಶೀತಲ ಸಮರದಂತೆ ಕಾಣಿಸಿಕೊಳ್ಳುವ ಮತಧರ್ಮಗಳ ಸಂಘರ್ಷ ಉತ್ತರ ಕರ್ನಾಟಕದಲ್ಲಿ ವೀರಶೈವ ಚಳುವಳಿಯ ನಂತರ, ದಕ್ಷಿಣ ಕರ್ನಾಟಕದಲ್ಲಿ ವೈಷ್ಣವ ಧರ್ಮದ ಪ್ರಾಬಲ್ಯದ ನಂತರ ರಕ್ತಪಾತಕ್ಕೂ ಎಡೆಮಾಡಿಕೊಟ್ಟಿತು. ಜೈನಧರ್ಮ ತನ್ನ ಉಳಿವಿಗಾಗಿ ಅನ್ಯ ಧರ್ಮಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕಾಯಿತು. ಹಾಗಾಗಿ ಅನೇಕ ಜಿನಾಲಯಗಳು ‘ಎಕ್ಕೋಟಿಜಿನಾಲಯಗಳಾಗಿ’ ಕಾಳಾಮುಖರ, ‘ಬ್ರಹ್ಮಜಿನಾಲಯಗಳಾಗಿ’ ಬ್ರಾಹ್ಮಣರ ಅಧೀನವಾದವು[28] ಮುಳುಗುಂದನಾಡಿಗೆ ಹೊಸೂರಿನ ಯಾಪನೀಯ ಸಂಘಕ್ಕೆ ಸೇರಿದ್ದ ಜೈನಬಸದಿಯು ಶಿವಾಲಯವಾಗಿ ಪರಿವರ್ತನೆಯಾಗಿದೆ. ಅದರ ಪಕ್ಕದಲ್ಲಿರುವ ಯಾಪನೀಯ ಸಂಘದ ಮಠವು ಸರಸ್ವತಿ ದೇವಾಲಯವೆಂದು ಕರೆಸಿಕೊಳ್ಳುತ್ತಿದೆ[29] ಮುಳುಗುಂದದ ಪಾರ್ಶ್ವನಾಥ ಚೈತ್ಯಾಲಯಕ್ಕೆ ತುರುಕರು ಬೆಂಕಿ ಹಚ್ಚಿದರೆಂದು, ಇದರಿಂದ ಬಸದಿಯ ತೊಲೆ ಕಂಬಗಳು ಸುಟ್ಟು ಗೋಡೆಗಳು ನಾಶವಾದವು. ಈ ಬಸದಿಯಲ್ಲಿ ವಾಸವಾಗಿದ್ದ ದೇಶೀಗಣಾಗ್ರೇಶ್ವರರೂ, ವಜ್ರದಂತಹ ಬಲವಂತರೂ, ಪೊಡವಿಗೆ ಪ್ರಖ್ಯಾತರೂ ಆದ ಸಹಸ್ರ ಕೀರ್ತಿಯತಿಗಳು ಮಡಿದರು ಎಂಬುದನ್ನು ಒಂದು ಶಾಸನ[30] ತಿಳಿಸುತ್ತದೆ. ಈ ಬಸದಿಯನ್ನು ಕುಲಕರ್ಣಿ ನಾಗಭೂಷಣನ ಪತ್ನಿ ಬನದಾಂಬಿಕೆಯು ಜೀರ್ಣೋದ್ಧಾರ ಮಾಡಿಸಿ ಲಕ್ಷದೀಪ ರಥೋತ್ಸವ ನೆರವೇರಿಸಿದ ವಿಚಾರವನ್ನು ೧೬೭೫ ಶಾಸನ[31] ಹೇಳುತ್ತದೆ. ಕರ್ನಾಟಕದಾದ್ಯಂತ ಈ ಸಂಘರ್ಷದಿಂದ ನಿರ್ನಾಮಗೊಂಡಿರುವ, ಪರಿವರ್ತನೆ ಹೊಂದಿರುವ ಜೈನಕೇಂದ್ರಗಳನ್ನು ಗಮನಿಸಿದಾಗ ೧೭ನೆಯ ಶತಮಾನದಲ್ಲೂ ಕಾಯಕಲ್ಪವನ್ನು ಪಡೆದು ಮುಳುಗುಂದನಾಡಿನಲ್ಲಿ ಪಾರ್ಶ್ವನಾಥ ಬಸದಿ, ಚಂದ್ರನಾಥ ಬಸದಿ ಸರಸ್ವತಿ ದೇವಾಲಯವೆಂದು ಕರೆಸಿಕೊಳ್ಳುವ ಯಾಪನೀಯ ಸಂಘದ ಮಠಗಳು ಉಳಿದು ಬಂದಿರುವುದು ಆಶ್ಚರ್ಯವೇ. ನಯಸೇನ ಜಿನ ಕಥೆಯನ್ನು ಕೇಳಿ, ಮುನಿಗಳ ಹಿತೋಪ ದೇಶವನ್ನು ಕೇಳಿ ಧರ್ಮ ಪರಾಯಣರಾದವರ, ವ್ರತ ಹಿಡಿದವರ, ಬ್ರಹ್ಮಚರ್ಯ ಪಾಲಿಸಿ ದವರ ಬಗೆಗೆ ಧರ್ಮಾಮೃತದಲ್ಲಿ ಹೇಳಿದ್ದಾನೆ. ಮುಳುಗುಂದನಾಡಿನ ಶಾಸನಗಳು ಶೈವ ಮುನಿಗಳ ಹಿತೋಪದೇಶದಿಂದ ಶಿವಪರಾಯಣರಾಗಿ ಶಿವಾಲಯಗಳಿಗೆ, ಯೋಗಿಗಳಿಗೆ ಹೇರಳವಾಗಿ ದಾನ ಮಾಡಿ, ಶಿವಕಥೆ ಕೇಳುವಲ್ಲಿ ವಿಶೇಷ ಆಸಕ್ತರಾದ ಶಿವಭಕ್ತ ಆಧಿಕಾರಿ ಗಳಾದ ನಾಕಿಗಾವುಂಡ ಹೊಲ್ಲಗಾವುಂಡರ ಬಗೆಗೆ ಹೇಳುತ್ತವೆ.[32] ಭಾವಶಿವದೇವ ಯತಿಗಳ ಉಪದೇಶದಿಂದ ಪ್ರೇರಿತನಾದ ಶೋಭರಸನೆಂಬ ಅಧಿಕಾರಿಯು ಬ್ರಹ್ಮಚರ್ಯವನ್ನು ಪಾಲಿಸಿ ಅನೇಕ ಶಿವಾಲಯ ನಿರ್ಮಾಣಕ್ಕೆ ನಿರ್ವಹಣೆಗೆ ಪ್ರವೃತ್ತನಾದುದನ್ನು ಒಂದು ಶಾಸನ ಹೇಳುತ್ತದೆ.[33] ನಯಸೇನನಂಥ ಹೃದಯ ಮುನಿಯ ಹಿತೋಪದೇಶದಿಂದ, ಆಕರ್ಷಕ ಕಥೆಗಳಿಂದ ಜನ ಪ್ರೇರಣೆ ಪಡೆದುದರ ಬಗೆಗೆ ಅಲ್ಲಿನ ಶಾಸನಗಳು ಮೌನ ತಳೆದಿವೆ. ಬೆಸ್ತನಿಂದ ಬ್ರಾಹ್ಮಣನವರೆಗೆ, ಕಳ್ಳನಿಂದ ಅರಸನವರೆಗೆ ಎಲ್ಲ ಸ್ತರದವರನ್ನೂ ತೆರೆದ ಬಾಹುಗಳಿಂದ ತನ್ನ ಧರ್ಮಕ್ಕೆ ಆಹ್ವಾನಿಸುವ ಪ್ರಾಮಾಣಿಕ ಪ್ರಯತ್ನವನ್ನಂತೂ ನಯಸೇನ ಮಾಡಿದ್ದಾನೆ. ಆದರೆ ಕಾಲಮಾನದ ಒತ್ತಡದಿಂದ ಅವನ ಉದ್ದೇಶ ಈಡೇರದಿದ್ದರೂ, ಮುಳುಗುಂದದ ಚಂದ್ರಿಕಾವಾಟದ ಜೈನಮುನಿ ಪರಂಪರೆ ಎಂದೇ ಪ್ರಸಿದ್ಧವಾದ ನಯಸೇನನ ಗುರುಶಿಷ್ಯ ಪರಂಪರೆಯು ಕುಮಾರಸೇನ ಮುನಿ ಮೊದಲುಗೊಂಡು ಹೇಮಸೇನ ಮುನಿಯವರೆಗೆ ಕ್ರಿ.ಶ. ೮೫೦ರಿಂದ ೧೪೨೦ರವರೆಗೆ ಅನ್ಯ ಪ್ರಬಲ ಧರ್ಮದೊಡನೆ ಒಡಂಬಡಿಕೆ ಮಾಡಿಕೊಂಡು ಉಳಿದು ಬಂದಿದ್ದೇ ಸಾಹಸವೆನ್ನಬೇಕು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1] ಎಪಿಗ್ರಾಫಿಯಾ ಇಂಡಿಕ ಸಂ. ೧೩ ಮುಳುಗುಂದ, ಪುಟ ೧೯೦, ೧೯೮; ಹಂಪನಾ, ಅರವಂಟಿಕೆ ಸಂ. ೧ ಪುಟ ೪೭, ೭೦

[2] ಆರ್.ಎನ್. ನಂದಿ, ವೀರಶೈವ ಚಳುವಳಿಯ ಹುಟ್ಟು : ಬಸವಣ್ಣನ ವಚನಗಳು, ಸಾಂಸ್ಕೃತಿಕ ಮುಖಾಮುಖಿ, ಪುಟ ೫

[3] ಶ್ರೇಣಿ ಎನ್ನುವುದು ಒಂದೇ ಜಾತಿ ಅಥವಾ ಭಿನ್ನ ಜಾತಿಯ ಒಂದೇ ಉದ್ಯೋಗ ಮಾಡುವ ಕರ್ಮಿಗಳ ಸಹಕಾರ ಸಂಘವೆಂದು ವಿಜ್ಞಾನೇಶ್ವರ ಹೇಳಿದ್ದಾನೆ. ಮಿಥಾಕ್ಷರ ೧೧,೧೨ (ಅನು) ಪು. ೭೪೭; ೧೯೩ (ಅನು) ಪು. ೧೨೨೮.

[4] ಡಾ. ಧನವಂತ ಹಾಜವಗೋಳ, ಮುಳುಗುಂದನಾಡು : ಒಂದು ಅಧ್ಯಯನ, ಪುಟ ೧೯೭.

[5] ಧರ್ಮಾಮೃತ ೧.೯೩

[6] ಅದೇ ೧.೯೦

[7] ಅದೇ ೨ – ೨೫, ೨೭, ೬೯; ೧೨ – ೧೪; ೮ – ೭೭; ೩ – ೩೫

[8] ಧರ್ಮಾಮೃತದ ಕಥೆಗಳು

[9] ಧರ್ಮಾಮೃತ ೧ – ೨೦೭; ವಡ್ಡಾರಾಧನೆ ಪುಟ – ೭೬; ಕ. ಇ. V ೧೧೭೬ ಎ.ಕೆ. VI (ರೈ) ಕಡೂರು ೭೩, ಆರ್. ಶೇಷಶಾಸ್ತ್ರಿ, ಕರ್ನಾಟಕದ ವೀರಗಲ್ಲುಗಳು, ಪುಟ ೧೧೪ – ೧೨೦

[10] ಧರ್ಮಾಮೃತ ೯ – ೧೦೮

[11] ಅದೇ ೧೧ – ೧೫; ೪ – ೩೫.

[12] ಕರ್ನಾಟಕ ಇನ್ಸ್‌ಕ್ರಿಪ್ಷನ್ IV. ೫೫

[13] ಎ.ಕ. ೧೦ (ಹೊ) ೯೫ ಕಣಿಕಟ್ಟಿ

[14] ಎಸ್.ಐ.ಐ. ಸಂ ೧೧ – ೧ ಡಂಬಳ – ೧೪೪, ಪುಟ ೧೭೫ ಕ್ರಿ.ಶ. ೧೯೦೮.

[15] ಕನ್ನಡ ವಿಷಯ ವಿಶ್ವಕೋಶ, ಪು. ೧೦೭೧.

[16] ಎಸ್.ಐ.ಐ. ಸಂ ೧೧ – ೧, ಶಾ.ಸಂಖ್ಯೆ ೧೫೭

[17] ಅದೇ ಸಂ ೧೫ ಹರ್ತಿ ಶಾ.ಸಂಖ್ಯೆ ೧೨೦.

[18] ಅದೇ ಸಂ ೧೧ – ೧, ಮುಳಗುಂದ ಶಾ.ಸಂಖ್ಯೆ ೯೭.

[19] ಅದೇ ಸಂ ೧೫ ಹೊಸೂರು ಶಾ.ಸಂಖ್ಯೆ ೩೯.

[20] ಅದೇ ಸಂ ೧೧ – ೧, ಮುಳುಗುಂದ ಶಾ.ಸಂಖ್ಯೆ ೯೭.

[21] ಅದೇ ಹೊಸೂರು ಶಾ.ಸಂಖ್ಯೆ ೧೫೨; ಎಲೆ ಶಿರೂರು ಶಾ.ಸಂಖ್ಯೆ ೧೬೭.

[22] ಅದೇ ಎಲೆ ಶಿರೂರು, ೧೫೫ ಕ್ರಿ.ಶ. ೧೧೦೯.

[23] ಎ.ಕ II ಶ್ರವಣಬೆಳಗೊಳ ಶಾ.ಸಂಖ್ಯೆ ೭೦ ೭೧,೭೩,೭೭

[24] ಎಸ್.ಐ.ಐ. ಸಂ. ೧೫, ಮುಳುಗುಂದ, ಶಾ.ಸಂಖ್ಯೆ ೬೬೬

[25] ಮುಳುಗುಂದನಾಡಿನ ಹೊಸೂರಿನ ೧೧೦೩ರ ಸಂಖ್ಯೆ ೧೫೨, ಶೈವ ಶಾಸನ, ಸದಾ ಕಾಲವೂ ಮನಸ್ಸನ್ನು ದುರ್ವ್ಯಸನದಲ್ಲಿ ತೊಡಗಿಸಿ ದೇವಾಲಯಕ್ಕೆ ಸೇರಿದ ಆಸ್ತಿಯನ್ನು ತಿಂದು ಹಾಕಿ ದುರ್ಜನರ ಸಹವಾಸ ಮಾಡಿ ಲೋಕಾಪವಾದಕ್ಕೆ ಗುರಿಯಾಗಿ ದುಷ್ಟಮನಸ್ಸಿನಿಂದ ದೇವರನ್ನು ದೂರೀಕರಿಸುವ ಕೀಳಾದ ತಪಸ್ಸನ್ನು ಮಾಡಿದ ಮುನಿಗಳನ್ನು ವಿಡಂಬಿಸುತ್ತದೆ.

[26] ಪಿ.ಬಿ. ದೇಸಾಯಿ, ಜೈನಿಸಂ ಇನ್ ಸೌತ್ ಇಂಡಿಯ ಅಂಡ್ ಸಮ್ ಜೈನ ಎಪಿಗ್ರಾs}, ಪುಟ ೫೧

[27] ಡಾ. ಧನವಂತ ಹಾಜವಗೋಳ, ಪೂರ್ವೋಕ್ತ, ಪುಟ ೧೭೪

[28] ಎ.ಕ. ೭ (ಹೊ) ನಾಗಮಂಗಲ ಶಾ.ಸಂಖ್ಯೆ ೩೭. ಎ.ಕ. ೧೦ ಅರಸೀಕೆರೆ – ೩೧. ಲಕ್ಕುಂಡಿ ಬ್ರಹ್ಮಜಿನಾಲಯ, ಬ್ರಹ್ಮಯಕ್ಷನನ್ನು ಹೊಂದಿರುವ ಶ್ರವಣಬೆಳಗೋಳದ ಸುತ್ತಮುತ್ತಲ ಬಸದಿಗಳು.

[29] ಹಂಪನಾ, ಯಾಪನೀಯ ಸಂಘ, ಪುಟ ೮೦

[30] ಎಸ್.ಐ.ಐ. ಸಂ – ೧೫ ಮುಳುಗುಂದ ೬೯೫

[31] ಅದೇ ೭೧೬

[32] ಅದೇ ಹೊಸೂರು ೫೨

[33] ಅದೇ ಸಂ ೧೧ – ೧, ಮುಳುಗುಂದ ೬೪.