ವಿಮರ್ಶೆಯ ಸೈದ್ಧಾಂತಿಕತೆಯನ್ನು ಮರೆಯದೆ ನಯಸೇನನಂಥ ಕವಿಯನ್ನು ಈಗ ಅರ್ಥಮಾಡಿಕೊಳ್ಳಲಾಗದು. ಈಗ ‘ಧರ್ಮ’, ‘ಪ್ರಭುತ್ವ’ ಮತ್ತು ‘ಜನತೆ’ ವಿಮರ್ಶೆಯ ಮುಖ್ಯ ಪರಿಭಾಷೆಗಳು. ಕಾರ್ಯಕಾರಣದ ವೈಚಾರಿಕತೆ ದೇಸಿ ಚಿಂತನೆಯ ದಾಳಿಯಲ್ಲಿ ದಿಕ್ಕೆಟ್ಟು ಹೋಗಿದೆ. ದೇಶಿ ಚಿಂತನೆ ಮತ್ತು ಮೂಲಭೂತವಾದಗಳೆರಡೂ ಒಂದೇ ಎನ್ನುವಷ್ಟರಮಟ್ಟಿನ ಗೊಂದಲಗಳು ಸೃಷ್ಟಿಯಾಗಿವೆ. ದೇಸಿ ಚಿಂತನೆಯ ‘ಸ್ವ’ ಅತಿಯಾಗಿ ‘ಅನ್ಯ’ವನ್ನು ಪ್ರತಿಶೋಧಾತ್ಮಕವಾಗಿ ನೋಡುವುದು ಸಾಮಾನ್ಯವಾಗಿದೆ. ವೆಸ್ಟ್‌ನಿಂದ ನಾವು ಕಲಿತ ವೈಚಾರಿಕತೆಯೇ ಅಪ್ರಸ್ತುತವೆನಿಸುವ ಸಂದರ್ಭಗಳು ಎದುರಾಗಿವೆ. ಲೋಕಗ್ರಹಿಕೆಗೆ ರ‍್ಯಾಷನಲಿಸಂ ಅಡ್ಡಿಯಾಗಿದೆ ಎಂಬುದು ಮನವರಿಕೆಯಾಗುತ್ತಲೆ ತಿರಸ್ಕಾರದ ಜಾಡಿನಲ್ಲಿ ಬಹುದೂರ ನಡೆದು ಬಂದಿದ್ದೇವೆ. ಸಮಾಜದಲ್ಲಿ ಉಳ್ಳವರು ಇಲ್ಲದವರನ್ನು ತಿರಸ್ಕರಿಸು ತ್ತಾರೆ. ಅಜ್ಞಾನ ಜ್ಞಾನವನ್ನು ತಿರಸ್ಕರಿಸುತ್ತದೆ. ತಿರಸ್ಕಾರಗಳ ಹಿಮಾಲಯವೇ ಆಗಿರುವ ನಮ್ಮ ಬದುಕಿನಲ್ಲಿ ಪ್ರಾಚೀನ ಸಾಹಿತ್ಯ ಕೃತಿಯೊಂದನ್ನು ಜೀವನಪರ, ಜೀವವಿರೋಧ ಎಂದು ತೂಕಮಾಡುವಾಗ ಸ್ವತಃ ವಿಮರ್ಶೆಗೆ ಎದುರಾಗುವ ಸವಾಲೆಂದರೆ, ತಾನೆಷ್ಟು ಹಾಗೆ? ಆ ಬಗೆ? ಎಂಬುದು ಸಾಧ್ಯವಾಗದೆ ಹೋಗುವ ಅಪಾಯಗಳಿವೆ. ಆದ್ದರಿಂದ ಸಮಕಾಲೀನ ವಿಮರ್ಶೆ, ಮುಂಚಲನೆಗಿಂತ ತರಣಿಹುಳುವಿನ ಸ್ಥಿತಿ ಅಧಿಕವಾಗಿದೆ. ಪುನಃ ನಮಗೆ ಅಮೂರ್ತತೆಗಳ ಹೊಸರೂಪಗಳು ಕಾಡುತ್ತಲೇ ಇವೆ. ಗಟ್ಟಿ ಮಾಡಿದ ಮಾತುಗಳಾಚೆಗಿನ ಲೋಕಕ್ಕೆ ಕೈಹಾಕಬೇಕಿರುವ ಅನಿವಾರ್ಯವನ್ನು ದಿಕ್ಕೆಡಿಸಿಕೊಂಡು ಕೂತಿರುವ ಸಂದರ್ಭದಲ್ಲಿ ಧರ್ಮಾಮೃತ ಕೃತಿ ಧರ್ಮಪರವಾದ ಕೃತಿ ಎಂಬುದನ್ನು ಮರೆಯದೆ ಹೊಸದಾರಿಯತ್ತ ಸಾಗಲು ಸಾಧ್ಯವಿಲ್ಲ.

ಕರ್ನಾಟಕದ ಧಾರ್ಮಿಕ ಸಂಘರ್ಷದ ಕಾಲದಲ್ಲಿ ಸೃಷ್ಟಿಯಾದ ಧರ್ಮಾಮೃತ ತಾನು ಹೇಳುವ ಕತೆಗಳಲ್ಲಿ ಅಪಾರವಾದ ಧರ್ಮ ಪ್ರತಿಪಾದನೆಗೆ ತೊಡಗುವ ಕಥಾಗುಚ್ಚ. ಒಂದೊಂದು ಕತೆಯೂ ಜೈನಧರ್ಮದ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುವುದಲ್ಲದೆ ಅದೇ ಕಾಲಕ್ಕೆ ಅನ್ಯಮತಗಳನ್ನು ವಿಡಂಬಿಸುವುದಕ್ಕೆ ತೊಡಗುತ್ತದೆ. ಪ್ರತಿಪಾದನೆಯು ಕೇವಲ ಅಷ್ಟೇ ಆಗಿರಲು ಸಾಧ್ಯವೇ ಇಲ್ಲ. ‘ಪರ’ದ ವಿಡಂಬನೆಯಲ್ಲಿ ‘ಸ್ವ’ದ ಸಾರ್ಥಕತೆಯೂ ಇರುವುದು ಮುಖ್ಯ. ಕ್ಷೀಣ ಕಾಲದ ಧರ್ಮಕ್ಕೆ ಪರವಹಿಸಿ ನಿಲ್ಲುವ ಕವಿಗೆ ಇರುವ ಸಂಕಟ ಇಂಥದ್ದೇ. ಧರ್ಮ ಪ್ರತಿಪಾದನೆಗೊಳ್ಳುವಾಗ ಇರುವ ಸಾಮಾಜಿಕ ಅಪಾಯವೇ ಅಂಥದ್ದು. ಇದು ಸಮಕಾಲೀನ ಭಾರತದ ಸ್ಥಿತಿಯೂ ಹೌದು. ಪ್ರಾಚೀನ ಕವಿಯೊಬ್ಬನ ಬಿಕ್ಕಟ್ಟಿಗೂ ಇಂದಿನ ಕವಿಯ ಬಿಕ್ಕಟ್ಟಿಗೂ ಫರ್ಕೆನೂ ಇಲ್ಲ. ಆದರೆ ಇಂದಿನ ಕವಿ ಜಾತ್ಯತೀತ ನೆಲೆಯಲ್ಲಿ ರುತ್ತಾನೆ. ಅಷ್ಟರ ಮಟ್ಟಿಗೆ ಅವನೂ ಅವನ ಕಾವ್ಯವೂ ಮುಖ್ಯ. ಮತ್ತೆ ಕೆಲವು ಲೇಖಕರು ಅನ್ಯವನ್ನು ಅಪಾಯಕಾರಿ ಎಂದು ಬಿಂಬಿಸುತ್ತಲೇ ತಾವೇ ಎಷ್ಟೊಂದು ಅಪಾಯಕಾರಿ ಗಳೆಂಬುದನ್ನು ಸಾರ್ಥಕಗೊಳಿಸಿದ್ದಾರೆ. ಧರ್ಮಾಮೃತದ ಮೇಲಿನ ಸ್ವರೂಪ ಹೀಗೆ ‘ಪರ’ ವಿಡಂಬನೆ ‘ಸ್ವ’ ಸಮರ್ಥನೆಯಾದರೂ ಅದರ ಉದ್ದೇಶ ಕೇವಲ ಬೇರೆಯವರನ್ನು ತನ್ನತ್ತ ಸೆಳೆಯಲು ಪ್ರಸಂಗಗಳ ನಿರೂಪಿತ ನೀತಿಯಾಗಿ ಒಳಗೊಳ್ಳಬಲ್ಲ ಸಾಮಾನ್ಯ ಜನಜೀವನದಲ್ಲಿ ‘ಧರ್ಮದೂರತ್ವ’ವನ್ನು ಇಂದು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಧರ್ಮದ ಬಗ್ಗೆ ಮಾತಾಡಿಯೂ ಅಂಥ ವಾತಾವರಣ ಸೃಷ್ಟಿಸಿಯೂ ಕೂಡ ಅದಾಗದೆ ಮತ್ತೊಂದೇನೋ ಆಗುವ ವಿಚಿತ್ರವಾದ ಜೀವನ ಚಿತ್ರಣ ಧರ್ಮಾಮೃತ ಕಥೆಯೊಳಗೆ ಹಾಸುಹೊಕ್ಕಾಗಿದೆ. ಜನತೆ ಬದುಕುವ ಬದುಕಿನ ಒಟ್ಟು ವಿನ್ಯಾಸದಲ್ಲಿ ಪ್ರಭುತ್ವ, ಧರ್ಮಗಳ ಅಂಶಗಳನ್ನು ಗುರುತಿಸಿಕೊಳ್ಳಬಹುದು. ಆದರೆ ಮೇಲ್ನೋಟಕ್ಕೆ ‘ಜನತೆ’ ಎಂಬುದೇ ಒಟ್ಟು ಕೃತಿಯಲ್ಲಿ ಕೇವಲ ಸಾಂದರ್ಭಿಕವಾಗಿ ಕಾಣುತ್ತದೆ. ಒಂದೊಂದು ಕತೆಯಲ್ಲೂ ಒಂದೊಂದು ಮುಖ್ಯ ಪ್ರಸಂಗ ನಿರೂಪಿತ ಬದುಕನ್ನು ಕವಿ ಕಟ್ಟಿಕೊಟ್ಟಿರುವುದರಿಂದ ಜೀವನಚೈತನ್ಯತೆಯ ಹಿನ್ನೆಲೆಯಲ್ಲಿ ಧರ್ಮ ಮತ್ತು ಪ್ರಭುತ್ವಕ್ಕಿಂತ ಜನತೆಯ ಕ್ರೀಯಾಶೀಲತೆ ಅಧಿಕವಾಗಿದೆ. ಅದರಲ್ಲೂ ಪ್ರಸಿದ್ಧ ತಸ್ಕರ ಪುರಾಣಗಳ ರಾಶಿಯೇ ಇಲ್ಲಿದೆ. ಲಲಿತಾಂಗ, ಮೃಗವೇಗ, ಸೂರ್ಪ, ಸೋಮದತ್ತರಂಥ ಕಳ್ಳರ ಪ್ರಸಂಗಗಳು ಸಮಾಜದ ಜನತೆಯ ಚೈತನ್ಯತೆಗೆ ದ್ಯೋತಕವೆಂದೇ ಅರ್ಥ. ಕಾರಣ ಕಳ್ಳನಿಗೆ ಉಳಿವು ಇಲ್ಲವೇ ತನ್ನ ಜಾಣ್ಮೆಯ ಅಖಾಡವಾಗಿ ದ್ದಂತೆಯೇ ಪ್ರಭುತ್ವಕ್ಕೆ ವಿರೋಧಿಯಾದ ಕ್ರಿಯೆ ತಸ್ಕರತೆಯಲ್ಲಿರುತ್ತದೆ. ‘ಉಚಲ್ಯಾ’ದಂಥ ಕೃತಿ ಕಟ್ಟಿಕೊಡುವ ಜೀವನವನ್ನು ವ್ಯಾಖ್ಯಾನಿಸುವ ಬಗೆಗಳೆ ಪಲ್ಲಟಗೊಂಡಿರುವ ಇಂಥ ಸಂದರ್ಭದಲ್ಲಿ ಸಾಹಿತ್ಯದ ಆಸ್ವಾದನೆಯ ಪ್ರಶ್ನೆ ಯಾರಿಗೆ? ಯಾಕೆ? ಮುಖ್ಯ ಎಂಬುದನ್ನು ಗಮನಿಸಿದಾಗ, ‘ಒಡವಾಳ’ದ ಕಡಲೇಕಾಯಿ ಕದಿಯುವುದು ನೀತಿ – ಅನೀತಿಯ ಪ್ರಶ್ನೆ ಯಾಗಿಯೇ ಮುಖ್ಯ ಅಥವಾ ಅಮುಖ್ಯವಾಗಿರುವಾಗ ಧರ್ಮಾಮೃತದ ತಸ್ಕರತೆಯ ಜೀವಚೈತನ್ಯ ಅಪರಾಧಿಯೊಬ್ಬನು ಒಳ್ಳೆಯವನಾಗಲು ಧರ್ಮಾನುಸಾರಿಯಾಗಬೇಕಾದ ಅನಿವಾರ್ಯ ಹೇಳುವಲ್ಲಿಯೇ ಹೆಚ್ಚಿನ ಅಪಾಯವಿರುವುದನ್ನು ಮುಖ್ಯವಾಗಿ ಗಮನಿಸಬೇಕಾ ಗುತ್ತದೆ.

ಸಮಕಾಲೀನ ಸಂದರ್ಭದಲ್ಲಿ ಧರ್ಮ, ತಸ್ಕರತೆ, ಅಹಿಂಸೆ ಮೂರೂ ಭಿನ್ನವಾದ ವ್ಯಾಖ್ಯಾನಕ್ಕೆ ಸಾಧ್ಯ. ಧರ್ಮ ಪ್ರೇರಿತವಾದ ಹಿಂಸೆಗೆ ಕೊನೆಯಿಲ್ಲ. ಪಿಕ್‌ಪಾಕೆಟರ್ – ಲಂಚವನ್ನು ಕಾನೂನಿನ ಚೌಕಟ್ಟಿನಲ್ಲಿ ಪಡೆಯುವ ಅಧಿಕಾರಿ – ಕಮಿಷನ್ ರೂಪದಲ್ಲಿ ಪಡೆಯುವ ರಾಜಕಾರಣಿ ಮೂವರಲ್ಲೂ ವ್ಯತ್ಯಾಸವಿದೆ. ತಸ್ಕರತೆ ವೈವಿಧ್ಯಮಯವಾದ ಈ ಕಾಲದಲ್ಲಿ ಮತ್ತು ವ್ಯವಹಾರದ ಲಾಭಾಂಶವನ್ನು ನೈತಿಕವೇ ಎಂದು ಭಾವಿಸಿರುವಲ್ಲಿ ನಡೆಯುವ ದ್ರೋಹ ಲೆಕ್ಕಕ್ಕಿಲ್ಲದವಾಗಿರುವಾಗ ಧರ್ಮಾಮೃತದ ತಸ್ಕರತೆಯನ್ನು ಹೊಸ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ. ತಸ್ಕರತೆಗೆ ಪ್ರಭುತ್ವ ಸದಾ ವಿರೋಧಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಜನತೆಯನ್ನು ತಸ್ಕರತೆಯಿಂದ ರಕ್ಷಿಸಬೇಕಾದ ಜವಾಬ್ದಾರಿ ಪ್ರಭುತ್ವಕ್ಕೇ ಇರುತ್ತದಾದರೂ ಪ್ರಭುತ್ವದ ತಸ್ಕರತೆಯನ್ನು ಪ್ರಶ್ನಿಸುವ ಸ್ಥಿತಿ ಧರ್ಮಾಮೃತದಲ್ಲಿ ಇಲ್ಲದಿರುವುದು ಮುಖ್ಯ. ಅದು ಕೇವಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯವಿರು ವಂಥದ್ದು. ಮತ್ತೊಂದು ಪ್ರಮುಖ ಅಂಶವೆಂದರೆ ಇಲ್ಲಿನ ತಸ್ಕರರೆಲ್ಲಾ ಬಹುತೇಕ ಮಾಯಾವಿ ಗಳು. ಮಾಯಾವಿಗಳನ್ನು ಹಿಡಿಯುವಲ್ಲಿ ಪ್ರಭುತ್ವದ ಸೋಲು ಯಾವಾಗಲೂ ಇರುವಂಥದ್ದೆ. ಈ ನಿಟ್ಟಿನಲ್ಲಿ ಇಡೀ ಕೃತಿಗೆ ಮಾಂತ್ರಿಕವಾಸ್ತವವಾದದ ಸ್ವರೂಪವೂ ಬಂದುಬಿಡುತ್ತದೆ. ಮಾಯಾವಿತನಕ್ಕೆ ಯಾವಾಗಲೂ ವಾಸ್ತವತೆಯನ್ನು ಮರೆಸುವ, ದಿಕ್ಕುತಪ್ಪಿಸುವ ಗುಣವಿರುವು ದರಿಂದ ಇಲ್ಲಿನ ‘ಧರ್ಮ – ಪ್ರಭುತ್ವ – ಜನತೆ’ ಪರಿಕಲ್ಪನೆಗಳು ಕೂಡ ವಿಚಿತ್ರ ರೀತಿಯಲ್ಲಿ ಗೊಂದಲದ ಸೃಷ್ಟಿಗೆ ಕಾರಣವಾಗುತ್ತವೆ. ಅಂದರೆ ಧರ್ಮಾಮೃತವನ್ನು ನಾವು ಇಂದು ಸಮಕಾಲೀನಗೊಳಿಸಿಕೊಳ್ಳುವ ಬಗೆ ಯಾವುದು? ಎಂಬುದು ಮುಖ್ಯ ಅಂಶವಾಗಬೇಕೇ ಹೊರತು ನಮ್ಮ ಸಾಹಿತ್ಯ ಪರಂಪರೆಯ ಮಾಮೂಲಿ ಹಣೆಪಟ್ಟಿಗಳಡಿಯಲ್ಲಿ ನೋಡುವುದನ್ನು ಇನ್ನಾದರೂ ಬಿಡಬೇಕು. ಕಾರಣ ಅಹಿಂಸೆಯ ಪ್ರತಿಪಾದಕರಿಂದಲೇ ಹಿಂಸೆಯ ಪ್ರಚೋದನೆ, ಮತ್ತು ಪ್ರಭುತ್ವವಾಗಿ ನಿಲ್ಲುವ ಸಂದರ್ಭಗಳು ಕೃತಿಯಲ್ಲೂ ಇವೆ. ಸಮಕಾಲೀನ ಭಾರತೀಯ ಜನಜೀವನದಲ್ಲೂ ಇವೆ. ಪ್ರಭುತ್ವವೆಂಬುದೇ ಒಂದು ಹಿಂಸೆ. ಕಾರಣ ಅದು ಶಿಕ್ಷೆಯನ್ನು ಮತ್ತು ಬಲಿಷ್ಠರ ಹಿತವನ್ನು ತನ್ನ ಆದ್ಯ ಕರ್ತವ್ಯವೆಂದು ತಿಳಿಯುತ್ತದೆ. ಆದ್ದರಿಂದ ಪ್ರಭುತ್ವ ತಾನು ನೀಡುತ್ತಿರುವ ನ್ಯಾಯದೊಳಗೇ ಹಿಂಸೆಯ ಸಾಧನ, ಸಾಧ್ಯತೆಗಳಿಗೆ ಅವಕಾಶ ಕಲ್ಪಿಸಿರು ತ್ತದೆ.

ಧರ್ಮಾಮೃತದುದ್ದಕ್ಕೂ ವ್ಯಕ್ತಿನಾಶದ ಪ್ರಬಲಪ್ರಯತ್ನಗಳಿವೆ. ಇದಕ್ಕೆ ಬಳಕೆಯಾಗುವ ಸಾಮಗ್ರಿ ‘ವಿಷ’. ವಿಷವಿಡುವ ಮೂಲಕ ವ್ಯಕ್ತಿನಾಶಗೊಳಿಸುವಿಕೆಯು ಹಿಂಸೆಯ ಮತ್ತೊಂದು ವಿಚಿತ್ರವಾದ ರೂಪ. ಮಾಯಾವಿತನವು ಒಂದು ವಿದ್ಯೆಯಾದಂತೆಯೇ ವಿಷ ತಯಾರಿಕೆ ಮತ್ತು ಅದರ ಪ್ರಯೋಗ ಕೂಡ ಒಂದು ಸುಪ್ರಸಿದ್ಧ ಜ್ಞಾನವೆ. ವ್ಯಕ್ತಿನಾಶ ಅಥವಾ ಜೀವನಾಶದ ಪ್ರಬಲ ಪ್ರತಿಪಾದನೆ ಕೂಡ ಈ ಕೃತಿಯಲ್ಲಿದೆ. ಇಂಥ ವೈಯಕ್ತಿಕ ನಾಶಕ್ಕಿಂತ ಯುದ್ಧ ಸಾಮೂಹಿಕ ನಾಶದ ಸ್ವರೂಪದ್ದು. ‘ಮುನಿಭಕ್ತ ಒದ್ದಾಯನ ಪತಿಭಕ್ತೆ ಪ್ರಭಾವತಿ’ಯರ ಪ್ರಸಂಗದಲ್ಲಿ ಯುದ್ಧ ಸಾಮೂಹಿಕ ನಾಶವನ್ನು ಕಾಣಬಹುದಾಗಿದೆ. ವ್ಯಕ್ತಿಭಕ್ತಿ ಜೈನಧರ್ಮದ ಮುಖ್ಯ ಚಾಲನ ಶಕ್ತಿ. ನಾಸ್ತಿಕತೆಯಿಂದ ಆದ ಪ್ರಯೋಜನವೆಂದರೆ, ವ್ಯಕ್ತಿಯನ್ನೇ ದೈವವನ್ನಾ ಗಿಸಿಕೊಂಡದ್ದು. ಮುನಿಯಾದವನಿಗೆ ಇರುವ ಗೌರವ ಜೈನನಿಗೂ ಸಹ ಇಲ್ಲ. ಜೈನನಾಗದಿರು ವವನು ಮನುಷ್ಯನೇ ಅಲ್ಲ ಅಥವಾ ಎಲ್ಲ ಮನುಷ್ಯನನ್ನೂ ಜೈನೀಕರಣಗೊಳಿಸುವುದೇ ಮುಖ್ಯ ಎಂಬುದನ್ನು ಕೃತಿ ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ ಕೃತಿಯುದ್ಧಕ್ಕೂ ಪ್ರತಿಪಾದಿತವಾಗಿರುವ ‘ಮತಾಂತರ’ ಪ್ರಭುತ್ವ ಮತ್ತು ಧರ್ಮ ಒಪ್ಪಿತವಾದ ಒಂದು ಹಿಂಸೆ. ಬೌದ್ಧರು, ವೈದಿಕರು, ಕಾಳಾಮುಖಿಗಳು ಜೈನಧರ್ಮಕ್ಕೆ ಮತಾಂತರ ಹೊಂದುವ ಪ್ರಸಂಗಗಳನ್ನು ಉದ್ದೇಶಪೂರ್ವಕವಾಗಿ ನಿರೂಪಿಸಲಾಗಿದೆ. ಮುಖ್ಯ ಮನೋಭೂಮಿಕೆ ಇದೇ ಆಗಿದೆ. ಇದರ ಮುಖ್ಯ ಲಕ್ಷಣ ಮೇಲಿನಿಂದ ಕೆಳಮುಖಿ ಚಲನೆಯೇ ಹೊರತು ಮೇಲ್ಮುಖಿ ಚಲನೆಯಲ್ಲ. ಬಹುಶಃ ಇದು ಶರಣರ ಕೆಳಗಿನಿಂದ ಮೇಲ್ಸ್ತರ ಚಲನೆಗೆ ವಿರುದ್ಧವಾದುದಾಗಿದೆ. ಕೃತಿ ಮತಾಂತರವನ್ನು ಕಥೆಯಾಗಿಸುವಲ್ಲಿ ತೋರುವ ಜಾಣ್ಮೆ ನಿರಂತರ ಲಾಭದಾಯಕವಾದುದು. ಸಾಮಾಜಿಕ ಅಸಮಾನತೆ ವಾಸ್ತವವಾಗಿ ಮತಾಂತರಕ್ಕೆ ತಳಹದಿ. ಆದರೆ ಇಲ್ಲಿ ಸಾಮಾಜಿಕ ಸಮಸ್ಯೆಗಿಂತ ಲಾಭದ ನೆಲೆ ಇದೆ. ಮತ್ತು ಉಳಿದ ಧರ್ಮಗಳಿಗಿಂತ ಶ್ರೇಷ್ಠತೆಯ ಪ್ರತಿಪಾದನೆಯೂ ಮುಖ್ಯವಾಗಿದೆ.

ವ್ಯಕ್ತಿನಾಶ ಪ್ರಭುತ್ವದ ಗದ್ದುಗೆಯ ಸಲುವಾಗಿ ಪ್ರಧಾನ ಪಾತ್ರ ವಹಿಸುತ್ತದೆ. ಧನ ಕೀರ್ತಿಯ ಕತೆಯಲ್ಲಿ ‘ಈಡಿಪಸ್’ ‘ಚಂದ್ರಹಾಸ’ ಕಥನಗಳಂತೆಯೇ ಪ್ರಭುತ್ವದ ಬಿಕ್ಕಟ್ಟುಗಳು ಮುಖ್ಯವಾಗುತ್ತವೆ.  ಪ್ರಭುತ್ವವೆಂದರೆ ಅದೊಂದು ಪಿತೂರಿಗಳ  ಸರಮಾಲೆ. ಕುಟಿಲತೆ ರಾಜಕೀಯದ ಒಂದು ಭಾಗವೆಂಬಂತೆ ತನ್ನ ನಾಟಕಗಳಲ್ಲಿ ಸಂಸ ಪ್ರತಿಪಾದಿಸಿದಂತೆಯೇ ಹಲವು ಕತೆಗಳಲ್ಲಿ ಪ್ರಭುತ್ವ ತನ್ನ ಉಳಿವಿಗಾಗಿ ಪ್ರಯತ್ನಿಸುವುದನ್ನೂ ಕಾಣುತ್ತೇವೆ. ಶುಭಕೋರಿಕೆ ಎಂಬುದು ಕೃತಿಯುದ್ಧಕ್ಕೂ ಕಾಣುವ ಮತ್ತೊಂದು ಅಂಶ. ಪ್ರಭುತ್ವದ ಉಳಿವಿಗಾಗಿ ಧರ್ಮ ಮತ್ತು ಜನತೆ ಅಸ್ತಿತ್ವದಲ್ಲಿರುವಂತೆ ಕಾಣುತ್ತದೆ. ಕೆಲವೊಮ್ಮೆ ಧರ್ಮ ಮತ್ತು ಪ್ರಭುತ್ವವೇ ಕೇಂದ್ರಗಳಾಗಿ ಮೆರೆಯುತ್ತವೆ. ವಾಸ್ತವವಾಗಿ ಇವೆರಡೂ ಜಡವಾಗಿವೆ. ಚೈತನ್ಯಶೀಲಗೊಳಿಸಲು ಹೋಗಿ ಸೋಲುವ ಧರ್ಮ ಇಲ್ಲಿದೆ.

ಕವಿ ಜನತೆಯನ್ನು ತಾನು ಹೇಳ ಹೊರಟಿರುವ ಕಥನಗಳ ಅನುಭವದ ಗಣಿಯನ್ನಾಗಿ ಗ್ರಹಿಸಿದ್ದಾನೆ. ಅವನ ಮಾಲೋಪಮೆಗಳೆಲ್ಲವೂ ಜನಸಾಮಾನ್ಯರ ಜೀವನ ವಿವರಗಳಿಂದ ಸಂಗ್ರಹಿಸಿದವಾಗಿವೆ. ಕೃತಿಯಲ್ಲಿ ಜನಸಾಮಾನ್ಯರ ತತ್ವಜ್ಞಾನವೇ ಮುಖ್ಯವಾಗಿದ್ದಕ್ಕೂ ಅಂಥ ಅನುಭವಗಳ ಮೇಲೆ ಧರ್ಮದ ಸವಾರಿಯಂತೂ ನಿರಂತರ ನಡೆದೇ ಇದೆ. ಸಾಮಾನ್ಯ ಬದುಕು ಹೇಗಿತ್ತು. ಎಂಬುದಕ್ಕೆ ಧನಕೀರ್ತಿಯ ಕತೆಯಲ್ಲಿ ಬರುವ ಮೃಗಸೇನನೆಂಬ ಬೆಸ್ತನ ಪ್ರಸಂಗ ತುಂಬಾ ಸ್ವಾರಸ್ಯಕರವಾದುದು. ಸಿಕ್ಕ ಮೀನನ್ನು ಪುನಃ ನೀರಿಗೇ ಬಿಟ್ಟು ಬಂದ ಗಂಡನೊಂದಿಗೆ ಘಂಟೆ ಜಗಳ ತೆಗೆಯುತ್ತಾಳೆ. ಮುನಿಯ ಮಾತು ಕೇಳಿ ಬೇಟೆ ಬಿಟ್ಟುಬಂದದ್ದಕ್ಕೆ ಅವಳಿಗೆ ಎಲ್ಲಿಲ್ಲದ ಕೋಪ. ಅವಳಿಗೆ ಬದುಕು ಮುಖ್ಯ ಧರ್ಮವಲ್ಲ. ಮುನಿಗಳು ದುಡಿಯುವವರಲ್ಲ ಎಂದು ಅವರ ಮೇಲೆ ಅವಳಿಗೆ ಸಿಟ್ಟು. ಅವರ ಮಾತನ್ನು ಗಂಡ ಕೇಳುತ್ತಿದ್ದಾನಲ್ಲ ಎಂದು ಅವನ ಮೇಲೂ ಸಿಟ್ಟು. ಬದುಕಿನಿಂದ ವಿಮುಖನಾಗುತ್ತಿರುವ ಗಂಡನ ಬಗ್ಗೆ ಅವಳಿಗೆ ಸಿಟ್ಟಿದೆ. ಅಲ್ಲದೆ ‘ಧರ್ಮಶ್ರದ್ಧೆಗಿಂತ ಹಣದ ದುರಾಸೆ ಮುಖ್ಯ’ ಎಂದು ಹೇಳುವ ಅಂಜನಾಚೋರನ ಕತೆ, ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ನಾಶಗೊಳಿಸಲಿಕ್ಕೆ ರಚಿತವಾದ ಸೋಮದತ್ತನ ಪ್ರಸಂಗ, ರಾಜರ ಅತಿಯಾದ ವ್ಯಾಮೋಹವನ್ನು ವಾರಿಷೇಣನಲ್ಲಿ ಕಾಣು ತ್ತೇವೆ. ಧರ್ಮ ಮತ್ತು ಬಂಧುತ್ವವನ್ನು ಮುಖಾಮುಖಿ ಮಾಡುವ ‘ಪ್ರಭಾವನಾಂಗಪಟು ವಿಷ್ಣುಕುಮಾರ’ನ ಪ್ರಸಂಗವಾಗಲಿ, ಶ್ರೀಮಂತರ ಐಭೋಗವನ್ನು ಕಂಡು ಹೊಟ್ಟೆ ಉರಿದು ಕೊಳ್ಳುವ ಬಡವರ ಪ್ರಸಂಗವನ್ನು ಹೇಳುವ ‘ಸತ್ಯವ್ರತ ಧನದ ಸಂಘಶ್ರಿ’ ಬೌದ್ಧರು ಜೈನ ರಾಗುವ ಚಿತ್ರಣವಿದೆ. ಅಘೋರರ ಕಟು ವಿಮರ್ಶೆ ಇಲ್ಲಿ ಮುಖ್ಯ.

ಇವೆಲ್ಲವನ್ನೂ ಗಮನಿಸಿದಾಗ ನಯಸೇನ ಕೇವಲ ಧರ್ಮಪ್ರತಿಪಾದನೆಯನ್ನು ಮಾತ್ರ ಹೇಳುತ್ತಿಲ್ಲ. ಅವನ ಮನೋಭಾವ ಜೈನೀಕರಣದ ಪರವಾದರೂ ಅಪಾರ ಸಾಮಾಜಿಕತೆಯನ್ನು ತನ್ನ ಕಾಲದ ಜನಜೀವನ ಅಂತರ್ ಸಂಬಂಧಗಳನ್ನು ವಿಚಿತ್ರ, ವಿಭಿನ್ನವಾಗಿ ನಿರೂಪಿಸಲು ಯತ್ನಿಸುತ್ತಿದ್ದಾನೆ. ಇದೊಂದು ಸಾಮಾಜಿಕ ಅಧ್ಯಯನದ ಕೃತಿ. ಇದರ ಸಾಂಸ್ಕೃತಿಕತೆಯ ಅನಾವರಣವು ಜನತೆಯನ್ನು ಧರ್ಮದತ್ತ ಆಕರ್ಷಿಸುವುದೇ ಆಗಿದೆ. ದೈವಕ್ಕಿಂತ ಧರ್ಮ ದೊಡ್ಡದಾಗಿ ಕೃತಿಗೆ ನವೀನತೆ ಪ್ರಾಪ್ತವಾಗಿದೆ. ಸಾಮಾಜಿಕವಾಗಿ ನಿಷಿದ್ಧಗೊಳ್ಳುವವರೆಲ್ಲ ಧರ್ಮ ಪರಿಧಿಯೊಳಗೆ ಬರುವ ಆಕರ್ಷಣೆ ವಿಶೇಷವಾದುದು. ಸಮಕಾಲೀನ ಸಾಮಾಜಿಕ ಅಸಮಾನತೆಗಳನ್ನು ಜೈನೀಕರಣಗೊಳಿಸಲಿಕ್ಕೆ, ನೈತಿಕತೆಯತ್ತ ಈಗಿರುವ ಜೀವನವನ್ನು ಶುದ್ದಿಗೊಳಿಸುವ ಯತ್ನವೂ ಇಲ್ಲಿ ಮುಖ್ಯ. ಕಳ್ಳ, ಸೂಳೆ, ಶ್ರಮಜೀವಿಗಳನೇಕರು ವ್ರತಾಚಾರಿ ಗಳಾಗಿ ಆಗುವ ಪರಿವರ್ತನೆ ಪ್ರತಿಪಾದನೆಗೆ ಹೆಚ್ಚಿನ ಮಹತ್ವವನ್ನು ಕೃತಿ ನೀಡಿರುವುದರಿಂದ ಧರ್ಮ ಇಲ್ಲಿ ಎಲ್ಲವನ್ನೂ ಸ್ಥಿತ್ಯಂತರಗೊಳಿಸಲಿಕ್ಕಾಗಿಯೇ ಇರುವಂತಿದೆ.

ಜೈನಧರ್ಮದ ಟೈಟಾನಿಕ್ ಮುಳುಗುತ್ತಿರುವಾಗ ಪುನರುತ್ಥಾನಕ್ಕೆ ತೊಡಗಿದ ನಯಸೇನ ನಿಗೆ ಇರುವ ವಿಚಿತ್ರ ಬಿಕ್ಕಟ್ಟು ಇಂದಿಗೂ ಜೀವಂತ. ಹೊಸದೊಂದು ಎಸ್ಟಾಬ್ಲಿಷ್‌ಮೆಂಟನ್ನು ಹೊಸದಾಗಿ ಹುಟ್ಟು ಇಲ್ಲವೇ ಮರುಹುಟ್ಟು ನೀಡುವ ಸಂದಿಗ್ಧಗಳು ತುಂಬಾ ಜೀವವಿರೋಧಿ ನೆಲೆಯವು. ಮೊದಲಿಗೆ ಪ್ರಭುತ್ವವನ್ನು ನಿಷ್ಕ್ರಿಯ ಇಲ್ಲವೆ ಭಯಸ್ಥಗೊಳಿಸುವುದು. ಮಿಗಿಲಾಗಿ ಅದೇ ನಿಂತಿದಲ್ಲಿ ಇಂಥ ಕೆಲಸ ಮಾಡುವಂತೆ ಮಾಡುವುದು. ಜನಜೀವನದಲ್ಲಿ ಅಭಿಪ್ರಾಯ ವೊಂದನ್ನು ಮೂಡಿಸಲು ಯತ್ನಿಸುವ ಬೌದ್ದಿಕ ರಾಜಕಾರಣದ ತಂತ್ರವೂ ಇದಾಗಿರುವುದರಿಂದ ಧರ್ಮ ಮತ್ತು ಪ್ರಭುತ್ವಗಳೆರಡೂ ಜನತೆಯನ್ನು ನಿಶ್ಯಕ್ತರನ್ನಾಗಿಸುವ, ನಿಶ್ಯಸ್ತ್ರರನ್ನಾಗಿಸುವ, ನಿರಾಸ್ತಕರನ್ನಾಗಿಸುವ ಹುನ್ನಾರಗಳು ನಿರಂತರ ನಡೆಯುತ್ತಿರುತ್ತವೆ. ಕಳೆದೆರಡು ದಶಕಗಳಿಂದ ಸಮಕಾಲೀನ ಬದುಕನ್ನು ಛಿದ್ರಗೊಳಿಸಿರುವ ಭಾರತದ ಮೂಲಭೂತವಾದವೂ ಕೂಡ ಅದೇ ತಂತ್ರವನ್ನುಳ್ಳದ್ದು. ಇದು ಕಾಲದ ಪ್ರಶ್ನೆಯಲ್ಲ. ಎಲ್ಲ ಕಾಲಕ್ಕೂ ಧರ್ಮ ಮತ್ತು ಪ್ರಭುತ್ವ ಮೇಲುಗೈ ಸಾಧಿಸಿದಾಗಲೆಲ್ಲ ಆಗುವ ಸಾರ್ವತ್ರಿಕ ಅಪಾಯಗಳಿವು. ಜನತೆ ಎಚ್ಚರ ತಪ್ಪಿದರೆ ಇಲ್ಲವೇ ತಪ್ಪಿಸಲು ನಿರಂತರ ನಡೆಯುವ ಅಪಾಯಗಳಿಂದ ಘಂಟೆಯಂಥ ಹೆಣ್ಣಿಗಿರುವ ಎಚ್ಚರ ಇರಬೇಕಾಗುತ್ತದೆ. ಯಾಕೆಂದರೆ, ಧರ್ಮಕ್ಕಿಂತ ಬದುಕು ಮುಖ್ಯ. ವ್ರತಕ್ಕಿಂತ ತಿನ್ನುವ ಆಹಾರ ಮುಖ್ಯ. ಬದುಕನ್ನು ಶಿಷ್ಟೀಕರಿಸಲು ಹೋಗಿ ಬದುಕಿನಿಂದ ವಿಮುಖಗೊಳ್ಳುವುದನ್ನು ವಿರೋಧಿಸುವ ನೆಲೆ ಇಂದಿಗೂ ಬಹುಮುಖ್ಯ. ಇದೇ ನಮ್ಮ ನಡುವೆ ದಿನೆ ದಿನೆ ಕಡಿಮೆಯಾಗು ತ್ತಿರುವುದು. ಆದ್ದರಿಂದ ಧರ್ಮದ ಮೇಲುಗೈ ಅಧಿಕವಾಗುತ್ತಿದೆ. ಧರ್ಮಾಮೃತದ ಆಂತರ್ಯದಲ್ಲಿ ಇವು ಮೂರು ಮುಖ್ಯ ಪೈಪೋಟಿಯ ಭೂಮಿಕೆಗಳು. ಮೃತಮುನಿಗಳು, ಮರಣದತ್ತ ಚಲಿಸುತ್ತಿರುವ ಧರ್ಮಾಪೇಕ್ಷಿಗಳು, ಬದಕನ್ನು ಅದಮ್ಯವಾಗಿ ಪ್ರೀತಿಸುವ ಸಾಮಾನ್ಯ ಜನ, ಹೇಗಾದರೂ ತಮ್ಮ ಸುಖಕ್ಕೆ ಧಕ್ಕೆ ತಂದುಕೊಳ್ಳದ ರಾಜರು ಮತ್ತು ಶ್ರೀಮಂತರ ವಿಚಿತ್ರವಾದ ಒಕ್ಕೂಟ ಧರ್ಮಾಮೃತ. ಇದೊಂದು ವೈವಿಧ್ಯಮಯವಾದ ಸಾಂಸ್ಕೃತಿಕ ಪಠ್ಯ. ಜನದ ಜೀವಪರ ಆಶಯಗಳೇ ಇಲ್ಲಿ ಮುಖ್ಯವೇ ಹೊರತು ಧರ್ಮ ಪ್ರತಿಪಾದನೆಯಲ್ಲ.