ಇಂದು ಜಗತ್ತಿನಾದ್ಯಂತ ಧರ್ಮದ ಹೆಸರಿನಲ್ಲಿ ಬೆಳೆಯುತ್ತಿರುವ ಉಗ್ರವಾದ, ಕೋಮುವಾದಗಳು ಜೀವಿಗಳನ್ನು ಬೆಸೆಯುವುದರ ಬದಲಿಗೆ ರಕ್ತವನ್ನು ಬಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಧರ್ಮಾಮೃತದಂತಹ ಕೃತಿಯನ್ನು ಕುರಿತು ಚರ್ಚಿಸುವ ಜರೂರು ಇನ್ನೂ ಹೆಚ್ಚಾಗುತ್ತದೆ. ಧರ್ಮವು ಅಮೃತವೂ ಆಗಿ ವಿಷವೂ ಆಗಿ ಬಳಕೆಗೊಳ್ಳುತ್ತಿರುವ ಇಂದಿನ ದಿನಗಳು ಹಿಂದಿನ ದಿನಗಳಿಗಿಂತ ಭಿನ್ನವೇನಲ್ಲ. ಮನುಷ್ಯರು – ಮನುಷ್ಯರನ್ನು ತುಳಿಯುವ ಹೊಸ ಹೊಸ ಮಾರ್ಗಗಳನ್ನು ಯಾವಾಗಲೂ ಹುಡುಕುತ್ತಿರುತ್ತಾರೆ. ಹೇತು ಯಾವ ಕಾಲಕ್ಕೂ ಒಂದೇ ಆಗಿರುತ್ತದೆ. ಯಾವ ಕಾಲಕ್ಕೂ ಸ್ಥಾಪಿತ ಧರ್ಮವೊಂದು ಕೇವಲ ಧರ್ಮವಾಗಿರುವುದಿಲ್ಲ. ಅದು ರಾಜಕೀಯಾರ್ಥಿಕ ಶಕ್ತಿಯಾಗಿ, ಉತ್ಪಾದನಾ ವ್ಯವಸ್ಥೆಯ ಬಾಗವಾಗಿರುತ್ತದೆ. ಅದರಲ್ಲೂ ಧರ್ಮಾಮೃತದಂತಹ ಕೃತಿಯಲ್ಲಿ ಮಹಿಳಾಲೋಕದ ವೈರುಧ್ಯಗಳನ್ನು ಅವಲೋಕಿಸುವಾಗ ಧರ್ಮದ ಜೊತೆಯಲ್ಲಿ ವ್ಯವಸ್ಥೆಯ ಎಲ್ಲ ಅಂಗಗಳು ಮಹಿಳೆಯ ಬದುಕನ್ನು ಇಷ್ಟಿಷ್ಟೇ ಕಬಳಿಸಿದ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬೇಕಾ ಗುತ್ತದೆ. ಅದರ ನಡುವೆಯೂ ಅವಳು ಕಟ್ಟಿಕೊಂಡ ಬದುಕಿನ ವಿಲಕ್ಷಣಾ ಅನನ್ಯತೆಗಳು, ಬೇರು ಬಿಡುವ ವಿಶಿಷ್ಟ ಛಲ, ಅನ್ವೇಷಿಸಿದ ದಾರಿ ಇತ್ಯಾದಿಗಳನ್ನು ಅನುಲಕ್ಷಿಸಿ ಮಹಿಳಾ ಲೋಕಕ್ಕೆ ಅದರ ಮುಖಾಂತರ ಮನುಷ್ಯಲೋಕಕ್ಕೆ ಧರ್ಮಾಮೃತವು ಹೇಳುವ ಪಿಸುಮಾತು ಗಳನ್ನು ಕೇಳಿಸಿಕೊಳ್ಳುವ ಮನಸ್ಸು ಮಾಡಬೇಕಾಗಿದೆ. ಏಕೆಂದರೆ ಪಿಸುಮಾತುಗಳು ಬಹಳ ದೂರ ಕೇಳಿಸುತ್ತವೆ.

ಒಂದು ಕೃತಿಯಲ್ಲಿ ವೈರುಧ್ಯಗಳು ಏಕೆ ಸೃಷ್ಟಿಯಾಗುತ್ತವೆ ಎಂಬ ಪ್ರಶ್ನೆಯು ಆ ಕೃತಿಯ ಅಂತರಾಳವನ್ನು ತಲುಪಲು ಪ್ರೇರೇಪಿಸುತ್ತದೆ. ಆ ಕೃತಿಯನ್ನು ಅರಿಯುವ ವಿಧಾನಗಳು ಸಿದ್ಧಾಂತಗಳ ಆಸರೆಯಿಂದ ಹೊರಟರೆ ಅಲ್ಲಿ ಇರುವ ಇರುವಿಕೆಯು ನಮ್ಮ ಕಣ್ತಪ್ಪಿಸಿ ಕೆಲವು ಸಲ ಕಪ್ಪು ಬಿಳುಪಾದ ಏಕಘನಾಕೃತಿಯ ಸಂಗತಿಗಳನ್ನು, ಚಲನರಹಿತವಾದ ಬದುಕನ್ನು, ಸಂವೇದನಶೀಲವಲ್ಲದ ಪಾತ್ರಗಳನ್ನು ಪರಿಚಯಿಸಬಹುದಾಗಿದೆ. ಕೃತಿಯ ಒಳಗಿನಿಂದಲೇ ಅರಿವನ್ನು ಪಡೆಯುವ ವಿಧಾನಗಳು ಕೃತಿಯನ್ನು ಮೂರ್ತಗೊಳಿಸಿ ಸಿದ್ಧ ತೀರ್ಮಾನಗಳಿಗೆ ತಲುಪುವಂತೆ ಮಾಡುತ್ತವೆ. ಆದುದರಿಂದ ಕೃತಿಯು ಬಿಂಬಿಸುವ ವಸ್ತು ಅದರ ಇಂದಿರುವ ಪ್ರಜ್ಞೆ ಮತ್ತು ಕೃತಿಯನ್ನು ಅರ್ಥೈಸುವ ನಮ್ಮ ಕಾಲದ ಪ್ರಜ್ಞೆ ಹಾಗೂ ಪರಿಕರಗಳ ಒಟ್ಟಾರೆ ಪ್ರಯತ್ನವನ್ನು ಕೃತಿಯ ಉದ್ದೇಶಗಳನ್ನು ಅರ್ಥೈಸಲು ಸಹಾಯವಾಗುತ್ತ ವೆನ್ನಬಹುದು.

ಧರ್ಮಾಮೃತದಂತಹ ಕೃತಿಯಲ್ಲಿ ವೈರುಧ್ಯಗಳನ್ನು ಗುರುತಿಸುವಾಗ ಪರಸ್ಪರ ಪೂರಕವಾದ ವೈರುಧ್ಯಗಳೇ ಕೃತಿಯ ಸಂಕೀರ್ಣತೆಯನ್ನು ಸೃಜನಶೀಲತೆಯನ್ನು ಸಮರ್ಥವಾಗಿ ಗುರುತಿಸಲು ಸಾಧನಗಳಾಗಬಹುದಾಗಿದೆ. ಪರಸ್ಪರ ಸಾಮರಸ್ಯದೊಂದಿಗೆ ಇರುವ ವೈರುಧ್ಯಗಳಿಂದಲೇ ಸೃಷ್ಟಿಯಾದ ಈ ಪ್ರಕೃತಿ, ಅದರ ಉಪಉತ್ಪನ್ನವಾದ ಮನುಷ್ಯರು ಮನುಷ್ಯರಿಂದ ಸಂಯೋಜಿತಗೊಂಡ ಈ ಸಮಾಜಗಳಲ್ಲೂ ಸಹಜವಾಗಿಯೇ ಆ ವೈರುಧ್ಯಗಳು ತುಂಬಿ ರುತ್ತವೆ. ಹೀಗಾಗಿ ವೈರುಧ್ಯಗಳು ಈ ಜಗತ್ತಿನ ಸಹಜ – ಸ್ವಭಾವ ಎಂದು ಪರಿಗಣಿಸಿದಾಗ ಸಾಹಿತ್ಯ ಕೃತಿಯ ವೈರುಧ್ಯಗಳ, ನಮಗೆ ನಿಚ್ಚಳವಾಗಬಹುದು. ಆಯಾ ಮನಸ್ಸುಗಳ ಸಹಜ – ಸ್ವಭಾವವೇ ವೈರುಧ್ಯಗಳು ಎಂಬ ರಹಸ್ಯ ಗೊತ್ತಾಗುವವರೆಗೂ ನಮಗೆ ಪಾತ್ರಗಳ ಅಂತರಂಗ ದೂರವಾಗಿಯೇ ಉಳಿಯುತ್ತದೆ. ಆ ವೈರುಧ್ಯಗಳು ಪರಸ್ಪರ ಪೂರಕವಾಗಿದ್ದಾಗ ಮಾನವೀಯ ವಾಗಿದ್ದಾಗ ಜೀವಪರ ಮತ್ತು ಜನಪರವಾಗಿದ್ದಾಗ ಪಾತ್ರಗಳಿಗೆ ಔನ್ನತ್ಯವೂ ಸನ್ನಿವೇಶಗಳಿಗೆ ಜೀವಂತಿಕೆಯೂ ಆವಾಹನೆಯಾಗುತ್ತದೆ. ಹೀಗಾಗಿ ಒಂದು ಕೃತಿಯ ಒಳಗಡೆ ಇರುವ ಸಂಘರ್ಷಾತ್ಮಕ ವೈರುಧ್ಯಗಳ ನಡುವಿನ ಸಾಮರಸ್ಯವು ಆ ಕೃತಿಯು ನಮಗೆ ಕೊಡುವ ಮಹತ್ವದ ಸೂಚನೆಗಳಾಗಿರುತ್ತವೆ.

ಧರ್ಮಾಮೃತದಲ್ಲಿ ಮಹಿಳಾಲೋಕದ ವೈರುಧ್ಯಗಳನ್ನು ಚರ್ಚಿಸುವಾಗ ಕೃತಿ ರಚನೆಯಾದ ಕಾಲದ ಮತ್ತು ಓದುವ ನಮ್ಮ ಕಾಲದ ಅನೇಕ ಸಂಗತಿಗಳು ಪ್ರಜ್ಞಾಪೂರ್ವಕವಾಗಿ ಮತ್ತು ಅಪ್ರಜ್ಞಾಪೂರ್ವಕವಾಗಿ ತಳಕುಹಾಕಿಕೊಂಡಿರುತ್ತವೆ. ಧರ್ಮ, ಧಾರ್ಮಿಕಾಚರಣೆಗಳು, ಕುಟುಂಬ ವ್ಯವಸ್ಥೆ, ಸಂಪತ್ತು, ಅಧಿಕಾರ, ವಿದ್ಯೆ ಮುಂತಾದವುಗಳಲ್ಲಿ ಪುರುಷ ಕೇಂದ್ರಿತ ಚಟುವಟಿಕೆಗಳು ರಾಜಕೀಯಾರ್ಥಿಕವಾಗಿ ಪುರುಷರೇ ಅಂತಿಮ ತೀರ್ಮಾನಕಾರರಾಗಿರುವ ಅಂಶಗಳು, ಉತ್ಪಾದನಾ ವಿಧಾನಗಳ ಮೇಲಿನ ಅಧಿಕಾರ ಮತ್ತು ಅವುಗಳಿಂದುಂಟಾದ ಸಂಬಂಧಗಳ ಮೇಲಿನ ವರ್ಚಸ್ಸು ಇತ್ಯಾದಿ ಘೋಷಿತ ಚೌಕಟ್ಟುಗಳನ್ನು ಹಾಕಿಕೊಂಡೆ ಈ ಕೃತಿಯು ರಚನೆಯಾಗಿದೆ. ಈ ಚೌಕಟ್ಟಿನ ಒಳಗಡೆಯೇ ಇದ್ದು ಕೆಲವೊಮ್ಮೆ ಇವುಗಳನ್ನು ಮೀರುವ ಮತ್ತು ಮುರಿಯುವ ಪಾತ್ರಗಳು ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಅವುಗಳಲ್ಲಿ ಯಾವುದು ಪ್ರಜ್ಞಾಪೂರ್ವಕ ಯಾವುದು ಅಪ್ರಜ್ಞಾಪೂರ್ವಕ ಎಂದು ಗೆರೆ ಕೊರೆಯಲು ಸಾಧ್ಯವಿಲ್ಲ. ನಯಸೇನನು ಈ ಎಲ್ಲ ಚೌಕಟ್ಟುಗಳಲ್ಲಿ ಸಿಲುಕಿಹಾಕಿಕೊಂಡಿರುವ, ಮತ್ತು ಇವೆಲ್ಲವುಗಳ ಚಾಲನಾಶಕ್ತಿಯಾದ ಮಹಿಳೆಯ ಬದುಕನ್ನು, ಅವಳು ಮೇಲಿನೆಲ್ಲ ವಿದ್ಯಮಾನ ಗಳ ಮೂಲಕೇಂದ್ರವಾಗಿದ್ದರೂ ಉಪಭೋಗದ ಸಮಯದಲ್ಲಿ ಅನಿವಾರ್ಯವಾಗಿ ಅಂಚಿಗೆ ಸರಿಯುವ ಅನೇಕ ಸಂಗತಿಗಳನ್ನು ಚಿತ್ರಿಸುತ್ತಾನೆ.

ಧರ್ಮಾಮೃತದ ಮೊದಲ ಆಶ್ವಾಸದಲ್ಲಿಯೇ ಹದಿನಾಲ್ಕು ಜೈನಮಹಾರತ್ನಗಳಲ್ಲಿ ಒಂದೊಂದನ್ನು ಆಚರಿಸಿ ನಿವೃತ್ತಿ ಹೊಂದಿದ ಹದಿನಾಲ್ಕು ಮಹಾಪುರುಷರ ಕತೆಗಳನ್ನು ಹೇಳುತ್ತಿದ್ದೇನೆ ಎಂದು ಸ್ಪಷ್ಟವಾಗಿ ಘೋಷಿಸಿದ್ದಾನೆ. ಓದುಗರನ್ನು ಕೇಳುಗರನ್ನು ತನ್ನ ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಮಹಾಪುರುಷರ ಕತೆಗಳನ್ನು ಹೇಳಹೊರಟ ನಯಸೇನ ತನಗರಿವಿಲ್ಲದೆ ಮಹಿಳಾ ಲೋಕದ ಕತೆಗಳನ್ನು ಹೇಳುತ್ತಾನೆ. ಮದುವೆಯಾಗದೆ ವಿವಾಹ ಸಂಸ್ಥೆಯನ್ನು ಪ್ರತಿಭಟಿಸಿದ ಅನಂತಮತಿ, ಅನಂತಶ್ರೀ ಎನ್ನುವ ಸೂಳೆಯು ತನ್ನ ಗಿಳಿಯನ್ನು ಕೊಂದು ನಂತರ ನಿಜ ತಿಳಿದು ಪಶ್ಚಾತ್ತಾಪ ಪಡುವ ರೀತಿ, ಉಪರಿಚರ ಮಹಾರಾಜನ ರಾಣಿಯರು ಪುರುಷನಾದ ತಮ್ಮ ಗಂಡನಿಗಿಂತ ಮೊದಲು ತಾವೇ ನಿರ್ವಾಣ ಹೊಂದಿದ ಸಂದರ್ಭ, ಮಹಿಳೆಯಾಗಿಯೂ ಅಮೂಢದೃಷ್ಟಿತ್ವವನ್ನು ಪಡೆದ ರೇವತಿ ಮುಂತಾದ ಕಡೆಗಳಲ್ಲಿ ಮಹಾಪುರುಷರ ಕತೆಗಳನ್ನು ಹೇಳುತ್ತಾ ಮಹಾಸ್ತ್ರೀಯರ ಕತೆಗಳನ್ನು ಹೇಳಿದ್ದಾನೆ. ಮೇಲ್ನೋಟಕ್ಕೆ ನಯಸೇನನು ಮಹಾಪುರುಷರ ಕತೆ ಹೇಳಿರುವನೆಂದು ಅನಿಸಿದರೂ ತನ್ನ ‘ಹೇಳಿಕೆ’ಯನ್ನು ತಾನೇ ಮೀರಿ ಮಹಾಸ್ತ್ರೀಯರ ಚಿತ್ರಣವನ್ನು ಬಿಡಿಸಿ ಇದು ಒಂದು ಸೃಜನ ಶೀಲ ಕೃತಿಯು ತನಗರಿವಿಲ್ಲದೇ ಇರವನ್ನು ಅರಿಯುವ ಮತ್ತು ಅಭಿವ್ಯಕ್ತಿಸುವ ಕ್ರಮವಾಗಿ ರುತ್ತದೆ.

ವಿವಾಹ ಸಂಸ್ಥೆಯು ಮಾನವ ಸಮಾಜ ಕಂಡುಕೊಂಡ ಅತ್ಯುತ್ತಮ ಆವಿಷ್ಕಾರಗಳಲ್ಲಿ ಒಂದು. ಅದರ ಎಲ್ಲ ದೌರ್ಬಲ್ಯಗಳ ನಡುವೆಯೂ ಅದಕ್ಕೆ ಪರ್ಯಾಯವಾದ ಇನ್ನೊಂದು ಮಾರ್ಗವು ಮನುಷ್ಯ ಸಮಾಜಕ್ಕೆ ಹೊಳೆಯುತ್ತಿಲ್ಲ! ಖಾಸಗಿ ಆಸ್ತಿಯ ಉಗಮದೊಂದಿಗೆ ತನ್ನ ಅಸ್ತಿತ್ವವನ್ನು ಸ್ಥಾಪಿಸಿರುವ ವಿವಾಹ ವ್ಯವಸ್ಥೆಗೆ ಇಂದು ಖಾಸಗಿ ಆಸ್ತಿಯಿಂದಲೇ ಬಲವಾದ ಏಟುಗಳು ಬೀಳುತ್ತಿವೆ. ಅಲ್ಲಲ್ಲಿ ಗುತ್ತಿಗೆ ಆಧಾರದ ಮದುವೆಗಳು ಜಾರಿಗೆ  ಬರುತ್ತಿರುವ ಇಂದಿನ ಸಂದರ್ಭದಲ್ಲಿ ವಿವಾಹವು ತನ್ನ ಪ್ರಬಲ ಹಿಡಿತವನ್ನು ಅನಿವಾರ್ಯ ವಾಗಿ ಸಡಿಲಿಸುವ ಅವಸ್ಥೆ ಖಾಸಗಿ ಅಸ್ತಿಯಿಂದಲೇ ನಿರ್ಮಾಣಗೊಳ್ಳುತ್ತಿದೆ. ಸಮಾಜವು, ಮಹಿಳೆಯನ್ನು ವಸ್ತುವಾಗಿ ಭಾವಿಸಿರುವ ನಯಸೇನನ ಸಂದರ್ಭದಲ್ಲಂತೂ ವ್ಯವಸ್ಥೆಯ ಜೊತೆ ಅವನೂ ಸೇರಿ ಈ ಚೌಕಟ್ಟು ಸಹಜವೆಂಬಂತೆ ಚಿತ್ರಿಸುತ್ತಾನೆ. ಆದರೆ ಆ ಗೋಡೆಗಳನ್ನು ದಾಟಿ ತನ್ನ ಅಸ್ತಿತ್ವಕ್ಕಾಗಿ ಪರದಾಡುವ ಮಹಿಳೆಯ ಚಿತ್ರಣವನ್ನು ನಯಸೇನನೇ ಕೊಡುತ್ತಾನೆ. ಮೂರನೆಯ ಆಶ್ವಾಸದ ಅನಂತಮತಿ ಕತೆಯು ಬೃಹತ್ಕಥಾಕೊಶ, ಶ್ರೀಚಂದ್ರನ ಕಥಾಕೋಶ ಮತ್ತು ರತ್ನಕರಂಡಕ ಶ್ರಾವಕಾಚಾರ ಟೀಕೆಗಳಲ್ಲಿ ಈ ಕತೆ ಬಂದಿದೆ. ಆದರೆ ನಯಸೇನ ಈ ಕತೆಯನ್ನು ಅನುಸರಿಸುವಾಗ ಅನೇಕ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಾನೆ. ಅನಂಗಮತಿ ಮತ್ತು ಪ್ರಿಯದತ್ತಶೆಟ್ಟಿಯರ ಮಗಳು ಅನಂತಮತಿ. ಅವಳು ಬಾಲ್ಯದಲ್ಲಿ ಮಕ್ಕಳೊಂದಿಗೆ ಮದುವೆಯ ಗೊಂಬೆಯಾಟವನ್ನು ಆಡುತ್ತಿರುತ್ತಾಳೆ. ಬಸದಿಗೆ ಹೋಗುತ್ತಿರುವ ತಂದೆ ಅದನ್ನು ನೋಡಿ ನೀನು ಕದ್ದು ಮದುವೆಯಾಗುವುದೆ ಎಂದು ಮುದ್ದಿಸುತ್ತ ಅವಳನ್ನು ಜೊತೆಗೆ ಕರೆದೊಯ್ಯುತ್ತಾನೆ. ನಗುತ್ತ ಇವಳಿಗೂ ಬ್ರಹ್ಮಚರ್ಯ ವ್ರತವನ್ನು ಕೊಡಿರಿ ಎಂದು ಗುರುಗಳಿಗೆ ಹೇಳುತ್ತಾನೆ. ಈಗಲೇ ಕೊಟ್ಟೆವು ಎಂದ ಗುರುಗಳ ಮಾತನ್ನೇ ನಿಜವೆಂದು ನಂಬಿ ಸ್ವೀಕರಿಸುತ್ತಾಳೆ. ಇವಳ ಸೌಂದರ್ಯಕ್ಕೆ ಸೋತು ವಿದ್ಯಾಧರನೊಬ್ಬನು ಅವಳನ್ನು ಎತ್ತಿಕೊಂಡು ಹೋಗುತ್ತಾನೆ. ಆದರೆ ತನ್ನ ಹೆಂಡತಿಗೆ ಅಂಜಿ ಅವಳನ್ನು ಕಾಡಿನಲ್ಲಿ ತಂದು ಬಿಡುತ್ತಾನೆ. ಆ ಭೀಮವನದಲ್ಲಿ ಅನಂತಮತಿಯ ಸುತ್ತಲೂ ಹುಲಿಜಿಂಕೆ ಮುಂತಾದವುಗಳು ತಮ್ಮ ಜಾತಿವೈರವನ್ನು ಮರೆತು ಆಡುತ್ತಿರುತ್ತವೆ. ಅಲ್ಲಿನ ಬೇಡದೊರೆಯು ಅವಳನ್ನು ಒಲಿಸಿಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡಿ ಸೋತುಹೋಗುತ್ತಾನೆ. ಅನಂತಮತಿ ನಿರಶನ ವ್ರತ ಹಿಡಿಯುತ್ತಾಳೆ. ಇಲ್ಲಿ ಮೂಲದಲ್ಲಿಲ್ಲದ ಮಾರ್ಪಾಟನ್ನು ನಯಸೇನ ತಂದಿದ್ದಾನೆ. ಅದೆಂದರೆ ಅವಳ ಕಷ್ಟವನ್ನು ಕಂಡು ಯಕ್ಷಿಯು ಕಿರಾತನ ವೇಷದಲ್ಲಿ ಬಂದು ಬೇಡದೊರೆಗೆ ಬುದ್ದಿ ಕಲಿಸುವುದು.

ಇವಳ ಗುಣವನ್ನು ನೋಡಿ ವೈಶ್ಯನೊಬ್ಬನು ಮನೆಗೆ ಕರೆದೊಯ್ದು ತಾನು ತಿರುಗಿ ಬರುವವರೆಗೂ ಅವಳನ್ನು ಮಗಳಂತೆ ಕಾಣಬೇಕೆಂದು ತಾಕೀತು ಮಾಡಿ ಹೋಗುತ್ತಾನೆ. ವೈಶ್ಯನ ಹೆಂಡತಿಯು ಅನುಮಾನಪಟ್ಟು ಅವಳನ್ನು ಕುಂಟಣಗಿತ್ತಿಗೆ ಮಾರುತ್ತಾಳೆ. ಇಲ್ಲಿ ಬೇರಾವ ಕೃತಿಯಲ್ಲೂ ಇಲ್ಲದ ವೇಶ್ಯೆಯರ ರೀತಿ ನೀತಿಗಳನ್ನು ಕುಂಟಣಗಿತ್ತಿಯ ಬಾಯಿಂದ ನಯಸೇನ ಹೇಳಿಸುತ್ತಾನೆ. ವೇಶ್ಯೆಯಾಗಲು ಒಪ್ಪದ ಅನಂತಮತಿಯನ್ನು ಅವಳು ಸಿಂಹರಥ ನೆಂಬ ರಾಜನಿಗೆ ಮಾರುತ್ತಾಳೆ. ಅವನು ಬಲಾತ್ಕರಿಸಲು ಪ್ರಯತ್ನಿಸಿ ತನ್ನ ವೈಭವ, ಬೆದರಿಕೆ, ಹೊಡೆತಗಳನ್ನು ತೋರಿಸಿದರೂ ಅನಂತಮತಿ ಮಣಿಯುವುದಿಲ್ಲ. ತಪ್ಪೊಪ್ಪಿಕೊಂಡು; ಅವಳನ್ನು ಪೂಜಿಸಿ ತನ್ನೆಲ್ಲ ಹೊನ್ನನ್ನು ಅರ್ಪಿಸಿದರೂ ಅನಂತಮತಿ ಕಣ್ಣೆತ್ತಿ ನೋಡದೆ ಬಸದಿಗೆ ತೆರಳುತ್ತಾಳೆ. ಅಲ್ಲಿಗೆ ಬಂದ ತಂದೆ – ತಾಯಿಯರು ಅವಳನ್ನು ಗುರುತಿಸಿ ಮದುವೆ ಮಾಡಿಕೋ ಎಂದಾಗ ಖಡಾಖಂಡಿತವಾಗಿ ಮದುವೆಯನ್ನು ನಿರಾಕರಿಸುತ್ತಾಳೆ. ಪ್ರಭಾಚಂದ್ರನ ಕಥಾಕೋಶ ಮತ್ತು ರತ್ನಕರಂಡಕ ಟೀಕೆಗಳಲ್ಲಿ ಮದುವೆಯ ಪ್ರಸ್ತಾಪ ಮೊದಲಿಗೆ ಬಂದರೆ ನಯಸೇನನಲ್ಲಿ ಕೊನೆಗೆ ಬಂದಿದೆ. ಅನಂತಮತಿಯ ಕತೆಯು ಕಾಶ್ಮೀರದ ಲಾಲ್‌ದೇಡಳನ್ನು, ಕಲ್ಯಾಣದ ಅಕ್ಕನನ್ನು ಕಣ್ಣೆದುರು ನಿಲ್ಲಿಸುತ್ತದೆ. ಜೈವಿಕಾವಶ್ಯಕತೆಗಳ ಕಾಟಕ್ಕಿಂತ ಪುರುಷತ್ವದ ಹಿಂಸೆಯೇ ಜಾಸ್ತಿಯಾದುದರಿಂದ ಸಹಜವಾಗಿಯೇ ಮದುವೆಯ ಬಗ್ಗೆ ಜಿಗುಪ್ಸೆ ಬಂದು ಅದನ್ನೇ ನಿರಾಕರಿಸುವ ಸ್ಥಿತಿಯನ್ನು ತಲುಪುತ್ತಾರೆ. ಆ ಪ್ರತಿಭಟನೆಯೇ ಒಂದು ರೀತಿಯಲ್ಲಿ ಅವರಿಗೆ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವ ವಿಧಾನವೂ ಆಗಿರುತ್ತದೆ. ಶೀಲದ ಪರಿಕಲ್ಪನೆಯು ಎಷ್ಟೋ ಹೆಣ್ಣುಗಳ ಭಾವನೆಗಳನ್ನು ಸಮಾಧಿ ಮಾಡಿದರೂ ವಿವಾಹದ ಚೌಕಟ್ಟಿನಲ್ಲಿರುವ ಮಹಿಳೆಗೆ ಅದೊಂದು ಸ್ವಯಂ ರಕ್ಷಣಾ ವಿಧಾನವಾಗಿತ್ತು. ಒಂದು ಸಲ ‘ಶೀಲ’ದ ಪರಿಧಿಯನ್ನು ದಾಟಿದರೂ ಸಾಕು ಈ ಸಮಾಜ ಮತ್ತು ಪುರುಷರ ಹದ್ದಿನ ಕಣ್ಣುಗಳು ಅವಳ ಪಾಡನ್ನು ನಾಯಿಪಾಡನ್ನಾಗಿ ಮಾರ್ಪಡಿಸುತ್ತಿದ್ದಾರೆ. ಬದುಕನ್ನು ಬತ್ತಿ ಹೊಸೆಯುವ ಹೊರಗಿನ ವ್ಯವಸ್ಥೆಗಿಂತ ಶೀಲ ಎಂಬ ಕೋಟೆಯೊಳಗೆ ಅವಿತುಕೊಳ್ಳುವುದು ಹೆಣ್ಣಿಗೆ ಅನಿವಾರ್ಯವಾಗಿತ್ತು. ೪ನೆಯ ಆಶ್ವಾಸದ ಕತೆಯಲ್ಲಿ ಪ್ರಭಾವತಿ ‘ಶೀಲವತಿ’ಯಾಗಿದ್ದಳು ಎಂಬ ಕತೆಯನ್ನು ನಯಸೇನ ಸೇರಿಸಿದ್ದಾನೆ. ಪ್ರಭಾಚಂದ್ರನ ಕಥಾಕೋಶ, ರತ್ನಕರಂಡಕ ಶ್ರಾವಕಾಚಾರ ಟೀಕೆ ಬೃಹತ್ಕಥಾಕೋಶ, ಶ್ರೀಚಂದ್ರನ ಕಥಾಕೋಶ, ಯಶಸ್ತಿಲಕ ಚಂಪೂ ಮುಂತಾದ ಯಾವ ಕೃತಿಗಳಲ್ಲಿಯೂ ‘ಶೀಲವತಿ’ಯ ಕತೆ ಇಲ್ಲ. ಆದರೆ ನಯಸೇನ ಮಾತ್ರ ಪ್ರಭಾವತಿಯ ಪಾತ್ರವನ್ನು ಇನ್ನಷ್ಟು ಉಜ್ವಲಗೊಳಿಸಲು ಈ ಕತೆಯನ್ನು ಸೇರಿಸಿದ್ದಾನೆ. ಪ್ರಭಾವತಿ ಎಂಬ ಮದುವೆಯಾದ ಮಹಿಳೆಯನ್ನು ಒಲಿಸಿಕೊಳ್ಳಲು ಚಂಡಪ್ರದ್ಯೋತನು ಎಷ್ಟೇ ಪ್ರಯತ್ನಪಟ್ಟರೂ ಅವಳು ಒಲಿಯದೆ ಪತಿನಿಷ್ಠೆಯನ್ನು ತೋರುತ್ತಾಳೆ.

೧೩ನೆಯ ಕತೆಯಲ್ಲಿ ಚಂದ್ರಲೇಖೆಯನ್ನು ಮೋಹಿಸಿದ ಸುವೇಗ ಅವಳ ಗಂಡನ ಮೇಲೆ ದಂಡೆತ್ತಿ ಬರುತ್ತಾನೆ. ಪತಿವ್ರತಾಭಂಗಕ್ಕೆ ‘ಹೆದರಿ’ ಚಂದ್ರಲೇಖೆಯು ಸುವೇಗನ ಬಾಣಕ್ಕೇ ಎದುರಾಗಿ ಗಂಡನನ್ನು ತನ್ನ ಹಿಂದಿಕ್ಕಿಕೊಂಡು ನಿಲ್ಲುತ್ತಾಳೆ. ಬಿಟ್ಟ ಬಾಯಾಗಿ ಅವಳ ಸೌಂದರ್ಯವನ್ನು ನೋಡುತ್ತ ನಿಂತ ಸುವೇಗನು ಅವಳ ಗಂಡ ಪ್ರಮಾಥಿಕುಮಾರನ ಬಾಣ ದಿಂದ ಸಾಯುತ್ತಾನೆ. ಮಾಧವಿ ದೇಸಾಯಿಯವರ ‘ಕುಣಿಯೇ ಘುಮಾ’ ಎಂಬ ಮರಾಠಿ ಕೃತಿಯು ಕೂಡ ವಿವಾಹದ ಕೋಟೆಯೊಳಗೆ ಶೀಲದ ಕಾವಲಿನಲ್ಲಿ ತಮಗೆ ತಾವೇ ದಿಗ್ಬಂಧನ ಗಳನ್ನು ಹಾಕಿಕೊಳ್ಳವುದು; ಮಹಿಳೆಯರಿಗೆ ಈ ವ್ಯವಸ್ಥೆಯಲ್ಲಿ ಹೇಗೆ ಅನಿವಾರ್ಯವಾಗಿದೆ ಎಂಬುದನ್ನು ತಿಳಿಸುತ್ತದೆ. ಹೆಂಡತಿ ಗರ್ಭಿಣಿಯಿದ್ದಾಗಲೇ ಗಂಡ ತನ್ನ ವ್ಯಾಪಾರ, ಧರ್ಮ ಪ್ರಚಾರ, ಮದುವೆ ಮುಂತಾದ ಕೆಲಸಗಲ ನೆವದಿಂದ ಅವಳನ್ನು ಬಿಟ್ಟು ಹೋಗುವ ಹಲವು ಪ್ರಸಂಗಗಳನ್ನು ನಯಸೇನ ಚಿತ್ರಿಸುತ್ತಾನೆ. ಹೀಗೆ ಹೊರಗೆ ಹೋಗುವ ಗಂಡಂದಿರ ಒಳರಾಜ ಕಾರಣವೇನು ಎಂಬುದನ್ನು ಸ್ವತಃ ಮುನಿಯಾದರೂ ನಯಸೇನ ಅತ್ಯಂತ ಸೃಜನಶೀಲತೆಯಿಂದ ನಮ್ಮೆದುರಿಗಿಡುತ್ತಾನೆ.

ಲಲಿತಾಂಗನ ಕಥೆಯಲ್ಲಿ ಧನ್ವಂತರಿಯು ಗರ್ಭಿಣಿಯಾದ ತನ್ನ ಹೆಂಡತಿಯನ್ನು ಪರೀಕ್ಷಿಸುವ ಪ್ರಸಂಗವನ್ನು ನಯಸೇನ ಸೇರಿಸಿದ್ದಾನೆ. ಬೃಹತ್ಕಥಾಕೋಶದಲ್ಲಿ ೩ ವ್ರತಗಳಿ ದ್ದರೆ, ಯಶಸ್ತಿಲಕಚಂಪುವಿನಲ್ಲಿ ೪ ವ್ರತಗಳಿವೆ. ನಯಸೇನನು ಆ ನಾಲ್ಕು ವ್ರತಗಳೊಂದಿಗೆ ಧನ್ವಂತರಿಯ ಈ ೫ನೆಯ ವ್ರತವನ್ನು ಸೇರಿಸಿದ್ದಾನೆ. ಹೆಂಡತಿ ಗರ್ಭಿಣಿಯಿದ್ದಾಗ ಕಳ್ಳತನ ಮಾಡಲು ಹೋದ ಧನ್ವಂತರಿಯು ಪೆರರ ಪೆಂಡಿರ್ಗಂ ಅರ್ಥಕ್ಕಂ ಅಳಿಪಿ ಕಾಲಂ ಪೋಪುದೆನಗೆ ಎನ್ನ ಪೆಂಡಿಗನಂ ಅರ್ಥಕ್ಕಂ ಎಳಸುವವರಾರಾನುಮೊಳವೊ? ಮೇಣಿಲ್ಲವೊ? (೨ – ೧೨೩) ಎಂದು ಅನುಮಾನಪಟ್ಟು ಮನೆಗೆ ಬರುತ್ತಾನೆ. ತಾಯಿ ಮತ್ತು ಹೆಂಡತಿ ಇಬ್ಬರೂ ಒಟ್ಟಿಗೆ ಮಲಗಿದುದನ್ನು ನೋಡಿ ಅನುಮಾನ ಪಡುತ್ತಾನೆ. ತಾನು ಮಾತ್ರ ಬೇರೆಯವರ ಹೆಂಡತಿಗೆ ಆಸೆಪಡಬಾರದೆನ್ನುವ ಪುರುಷಮನಸ್ಸನ್ನು ಮೂಲದಲ್ಲಿ ಇಲ್ಲದ ಕತೆಗೆ ಜೋಡಿಸಿ ಚಿತ್ರಿಸುತ್ತಾನೆ.

ಇದೇ ಕತೆಯಲ್ಲಿ ಗೀಜಗನ ಹಕ್ಕಿಗಳ ಸಂಭಾಷಣೆಯೊಂದನ್ನು ಹೆಣೆಯುತ್ತಾನೆ. ಗರ್ಭಿಣಿ ಯಾದ ಹೆಣ್ಣು ಗೀಜಗವನ್ನು ಬಿಟ್ಟು ಗಂಡು ಗೀಜಗ ಗರುಡನ ಮದುವೆಗೆ ಹೋಗುತ್ತೇ ನೆಂದಾಗ, ನಿನ್ನ ಜೊತೆ ನಾನು ಬರುತ್ತೇನೆ ಎನ್ನುತ್ತದೆ ಹೆಣ್ಣು ಗೀಜಗ. ನೀನು ಗರ್ಭಿಣಿಯಾಗಿ ರುವುದರಿಂದ ಬರಬೇಡ ಎಂದು ಗಂಡು ಗೀಜಗ ಹೇಳುತ್ತದೆ. ನನ್ನನ್ನಿಲ್ಲಿ ಬಿಟ್ಟು ನೀನು ಬೇರೆ ಹೆಣ್ಣನ್ನು ಕೂಡಲು ಈ ಉಪಾಯ ಹೂಡಿರುವಿ ಎನ್ನುತ್ತದೆ ಹೆಣ್ಣು ಗೀಜಗ. ಇಲ್ಲ, ಅದಕ್ಕಾಗಿ ಭಾಷೆ ಕೊಡುತ್ತೇನೆಂದು ಗಂಡು ಗೀಜಗ ಹೇಳುತ್ತದೆ. ಮದನತಾಪದಿಂದ ನೀನು ಬೇರೆಯವರನ್ನು ಕೂಡಿದಾಗ ನಿನ್ನ ಭಾಷೆಯನ್ನು (ಸೂರುಳನ್ನು) ತೆಗೆದುಕೊಂಡು ನಾನೇನು ಮಾಡಲಿ ‘ನಿನ್ನ ಸೂರುಳನೊಲ್ಲೆ’ ಅದರಿಂದ ನನಗಾಗಬೇಕಾದುದೇನಿಲ್ಲ ಎನ್ನುತ್ತದೆ ಹೆಣ್ಣು ಗೀಜಗ. ಈ ಎರಡೂ ಸಂದರ್ಭಗಳಲ್ಲಿ ಹೆಂಡತಿ ಗರ್ಭಿಣಿಯಾಗಿದ್ದಾಗ ತನ್ನ ಜೈವಿಕಾವಶ್ಯಕತೆ ಗಳನ್ನು ‘ಹೊರಗೆ’ ಪೂರೈಸಿಕೊಳ್ಳುವ ಅವಕಾಶವನ್ನು ಪುರುಷ ಪಡೆದಿದ್ದಾನೆ. ಬದಲಾವಣೆಯ ತುಡಿತ ಕಟ್ಟಳೆಗಳನ್ನು ಮೀರುವ ವಾಂಛೆ ತನ್ನಂತೆಯೇ ಹೆಣ್ಣಿಗೂ ಸಹಜ ಎಂಬುದನ್ನು ಅವನು ಭಾವಿಸಲೂ ಭಯಪಡುತ್ತಾನೆ. ಈ ಜಗತ್ತಿನ ಎಲ್ಲ ಆನಂದಗಳನ್ನು ತಾನು ಮಾತ್ರ ಪಡೆಯಲು ಯೋಗ್ಯನೆಂಬ ಪುರುಷನ ಪರಿಯನ್ನು ನಯಸೇನ ನಯವಾಗಿಯೇ ಪ್ರಶ್ನಿಸುತ್ತಾನೆ.

ಜೈನಧರ್ಮದ ಪ್ರಚಾರ, ಅನ್ನವ್ರತಗಳ ಆಚರಣೆ ಸಮ್ಯಕ್‌ದರ್ಶನಗಳ ಪ್ರತಿಪಾದನೆಯನ್ನು ಮಾಡುತ್ತೇನೆಂದು ನೇರವಾಗಿಯೇ ನಯಸೇನ ಹೇಳುತ್ತಾನೆ. ಸಾಧ್ಯವಿದ್ದ ಕಡೆಗಳಲ್ಲೆಲ್ಲ ಜೈನಧರ್ಮದ ಮಹಿಮೆಯನ್ನು ನಿಂದಿಸಿದವರು ಅನುಭವಿಸುವ ಕಷ್ಟವನ್ನು ಎಷ್ಟೇ ಉಪಸರ್ಗ ಗಳು ಎದುರಾದರು ಧೃತಿಗೆಡದೆ ವ್ರತನಿಷ್ಠರಾಗುಳಿದವರು ಹೊಂದುವ ಮೋಕ್ಷವನ್ನು ಬಹಳ ನಿಷ್ಠೆಯಿಂದ ಚಿತ್ರಿಸಿದ್ದಾನೆ. ಆದರೂ ಜನಪರವಲ್ಲದ ಧರ್ಮಗಳು ಮುಖವಾಡಗಳನ್ನು ಸೃಷ್ಟಿಸಿಕೊಂಡು ಜನರನ್ನು ಹೇಗೆ ವಂಚಿಸುತ್ತಿರುತ್ತವೆ ಎಂಬುದನ್ನು ತನ್ನ ೫ನೆಯ ಕತೆಯಲ್ಲಿ ಹೇಳುತ್ತಾನೆ. ಅಮೂಢದೃಷ್ಟಿತ್ವ ಎಂಬುದು ಕತೆಯ ಸಮ್ಯಕ್‌ದರ್ಶನಗಳಲ್ಲಿ ಒಂದು. ಮೂಢತೆಯಂ ಬಿಟ್ಟು ಪೆಱರ್ ಮಾಡುವ ಡೊಂಬಿಂಗೆ ಬೇಗಮೆರಗದೆ ಮೂರ್ಖರ್ ಮಾಡುವುದಂ ಲೇಸೆನ್ನದೆ ಕೂಡುವುದಾರಯ್ದ ಮೂಢದೃಷ್ಟಿಯೊಳಱವಂ ಎನ್ನುತ್ತಾನೆ. ಚಂದ್ರಾಭನೆಂಬುವನು ಮುನಿಗುಪ್ತಭಟ್ಟಾರಕರಿಂದ ಸನ್ಯಾಸ ಸ್ವೀಕರಿಸಿ ಮಧುರೆಗೆ ಬರುತ್ತಾನೆ. ಅಲ್ಲಿ ಭವಸೇನನೆಂಬುವವನನ್ನು ಪರೀಕ್ಷಿಸುವಾಗ ಧರ್ಮ ಧರ್ಮವೆಂದು… ಶ್ರಾವಕರು ಕರುಳನ್ನು ಕಟ್ಟಿ ಭೋಗಿಸದೆ ಏಕೆ ವೃಥಾ ಹಾಳಾಗುತ್ತಾರೆ? ತುಪ್ಪ, ಹಾಲು, ಮೊಸರು ಇತ್ಯಾದಿ ಗಳಿಂದ ಜಿನನಿಗೆ ಅಭಿಷೇಕ ಮಾಡುವರಲ್ಲ. ವೀತರಾಗನಾದ ಜೀನೇಶ್ವರನಿಗೆ ಇದರಿಂದಾಗುವ ಫಲವೇನು ಇತ್ಯಾದಿ ಪ್ರಶ್ನೆಗಳನ್ನು ಹಾಕುತ್ತಾನೆ. ಇದೇ ಚಂದ್ರಾಭ ಮುಂದುವರಿದು ರೇವತಿ ದೇವಿಯನ್ನು ಪರೀಕ್ಷಿಸುತ್ತಾನೆ. ತನ್ನ ಗುರುಗಳು ಇವಳಿಗೆ ಆಶೀರ್ವಾದ ಕೊಡುವಷ್ಟರ ಮಟ್ಟಿಗೆ ಅವಳು ದೊಡ್ಡವಳೋ ಎಂಬುದು ಅವನ ಭಾವನೆಯಾಗಿರುತ್ತದೆ. ಅವಳು ಅಮೂಢ ದೃಷ್ಟಿತ್ವದ ಪರೀಕ್ಷೆಗಾಗಿ ಬ್ರಹ್ಮ, ವಿಷ್ಣು, ರುದ್ರರ ವೇಷ ತಾಳಿ ಬರುತ್ತಾನೆ. ಯಶಸ್ತಿಲಕ ಚಂಪುವಿನಲ್ಲಿ ಅವಳು ಆ ದೇವತೆಗಳು ಕೃತಕ ಎಂಬುದನ್ನು ಹೇಳಿ ಅವುಗಳ ದರ್ಶನ ಪಡೆಯಲು ನಿರಾಕರಿಸುತ್ತಾಳೆ. ಆದರೆ ಧರ್ಮಾಮೃತದಲ್ಲಿ ಅವಳ ಗಂಡನೇ ಆ ದೇವರನ್ನು ನೋಡಲು ಒತ್ತಾಯಿಸಿದರೂ ಅವಳು ಹೋಗುವುದಿಲ್ಲ. ಕೊನೆಗೆ ಚಂದ್ರಾಭ ‘ಜಿನ’ನ ವೇಷ ತಾಳಿ ಬರುತ್ತಾನೆ. ಆಗಲೂ ರೇವತಿದೇವಿಯು ತನ್ನ ತರ್ಕಬುದ್ದಿಯಿಂದ ಇವನು ನಿಜವಾದ ಜಿನನಲ್ಲ ವೇಷಧಾರಿ ಎಂದು ದೃಢವಿಶ್ವಾಸ ತಾಳಿ, ಹೋಗಲು ನಿರಾಕರಿಸುತ್ತಾಳೆ. ಎಲ್ಲ ಧರ್ಮಗಳ ಹೆಸರಿನಲ್ಲಿ ಮನುಷ್ಯರನ್ನು ವಂಚಿಸುವ ಕೆಲಸ ನಡೆದೇ ಇದೆ. ಎನ್ನುವುದನ್ನು ಸೂಚ್ಯವಾಗಿ ತಿಳಿಸಲು ಪ್ರಯತ್ನಿಸುತ್ತಿದ್ದಾನೆ. ನಯಸೇನ ಜೈನಧರ್ಮಕ್ಕೇ ಮೀಸಲಾದ ಕೃತಿ ಯೊಂದರಲ್ಲಿ ಜಿನನನ್ನೇ ತಿರಸ್ಕರಿಸಿದ ‘ಮಹಿಳೆ’ಯನ್ನು ಚಿತ್ರಿಸುವುದರ ಹಿಂದಿನ ನಯಸೇನನ ಮಾನವೀಯಪರ ನಿಲುವುಗಳನ್ನು ಇಲ್ಲಿ ಗುರುತಿಸಬಹುದಾಗಿದೆ.

೮ನೆಯ ಕತೆಯಲ್ಲಿ ಯಜ್ಞದತ್ತೆಯೆಂಬ ಬ್ರಾಹ್ಮಣ ಮಹಿಳೆಯು ಗರ್ಭಿಣಿಯಾದಾಗ ಜಿನಮುನಿಯ ಉಪದೇಶವನ್ನು ಕೇಳುವ ಆಸೆಯಾಗುತ್ತದೆ. ಅದನ್ನು ಗಂಡನ ಎದುರಿಗೆ ಹೇಳಲಾಗಿದೆ. ಮಾವಿನ ಹಣ್ಣನ್ನು ತಿನ್ನುವ ಬಯಕೆ ವ್ಯಕ್ತಪಡಿಸುತ್ತಾಳೆ. ಹೆಂಡತಿಗಾಗಿ ಹಣ್ಣುಗಳನ್ನು ಹುಡುಕುತ್ತ ಸೋಮದತ್ತನು ಸುಮತಿ ಭಟ್ಟಾರಕರಲ್ಲಿಗೆ ಬರುತ್ತಾನೆ. ಅವರು ಕುಳಿತ ಗಿಡಕ್ಕೆ ಅಕಾಲದ ಮಾವಿನ ಹಣ್ಣು ಬಿಟ್ಟಿದ್ದವು. ಅವರ ತಪಸ್ಸಿನ ಮಹಿಮೆಯೆ ಅದಕ್ಕೆ ಕಾರಣವೆಂದು ತಿಳಿದು ಅವರಿಂದ ದೀಕ್ಷೆ ಪಡೆದು ಅಲ್ಲೇ ಇರುತ್ತಾನೆ. ಮಗ ಹುಟ್ಟಿದ ನಂತರ ಯಜ್ಞದತ್ತೆ ಮಗುವನ್ನು ಕರೆದುಕೊಂಡು ಸೋಮದತ್ತನಲ್ಲಿಗೆ ಬರುತ್ತಾಳೆ. ಮನೆಗೆ ಬರಲು ಪರಿಪರಿಯಿಂದ ಕೇಳಿಕೊಳ್ಳುತ್ತಾಳೆ. ಎಷ್ಟು ಪ್ರಲಾಪಿಸಿದರೂ ಮನೆಗೆ ಬರಲೊಪ್ಪದ ಗಂಡನೆದುರಿಗೆ ಮಗುವನ್ನು ಬಿಟ್ಟುಹೋಗುತ್ತಾಳೆ. ಗರ್ಭಿಣಿಯಿದ್ದಾಗ ಯಾವ ಧರ್ಮೋಪ ದೇಶವನ್ನು ಬಯಸಿದಳೋ ಗಂಡ ಅದೇ ಧರ್ಮದ ಅನುಯಾಯಿಯಾಗಿ ಕುಟುಂಬವನ್ನು ತನ್ನನ್ನು ತೊರೆದಾಗ ‘ಅದೇತರ’ ಧರ್ಮ ಎಂದು ಪ್ರಶ್ನಿಸುತ್ತಾಳೆ.

ಇಂತಹ ಕಡೆಗಳಲೆಲ್ಲ ಧರ್ಮದ ಪರಿಭಾಷೆಯನ್ನು ಮೀರಿ ಮನುಷ್ಯ ಸಂಬಂಧಗಳೊಂದಿಗೆ ಜೀವಪರ ನಿಲುವುಗಳೊಂದಿಗೆ ನಯಸೇನ ನಿಲ್ಲುತ್ತಾನೆ. ಕೃತಿಯ ಉದ್ದೇಶದಂತೆ ಮತ್ತೆ ಜಿನಧರ್ಮವೇ ಶ್ರೇಷ್ಠವೆಂದು ಪ್ರತಿಪಾದಿಸಿದರೂ, ಮಲೆತ ಧರ್ಮವನ್ನು ತುಂಬ ಕಾಳಜಿ ಯಿಂದಲೇ ವ್ಯಾಖ್ಯಾನಿಸುತ್ತಾನೆ. ಮಹಿಳೆಗೆ ಮತಾಂತರವಿಲ್ಲ ಎಂಬ ಅಂಶವನ್ನು ಹೊರಹಾಕು ತ್ತಾನೆ.

ಧರ್ಮದ ಹೆಸರಿನಲ್ಲಿ ಈ ದೇಹಕ್ಕೆ ಕೊಟ್ಟುಕೊಳ್ಳುವ ಹಿಂಸೆ ಕೂಡ ಪ್ರತಿಭಟನೆಯ ಭಾಗವಾಗಿಯೇ ಇರುತ್ತದೆ. ಅದರಲ್ಲೂ ವ್ಯವಸ್ಥೆಯಿಂದ ಅನೇಕ ಹಿಂಸೆಗಳನ್ನು ಉಂಡ ಮಹಿಳೆಗೆ ಇವೆಲ್ಲ ಪರಿಚಿತವೇ ಆಗಿರುತ್ತವೆ. ಆ ಎಲ್ಲ ದೌರ್ಜನ್ಯಗಳ ವಿರುದ್ಧ ಅವಳ ಎಲ್ಲ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಇರುವ ದಾರಿ ತನ್ನ ದೇಹವೊಂದೇ ಆಗಿರುತ್ತದೆ. ಮನಃಶಾಸ್ತ್ರವು ಇದನ್ನೇ ಸ್ವಹಿಂಸಾ ಮಾದರಿ (Masothestic) ಎಂದು ಕರೆಯುತ್ತದೆ. ಪ್ರಭಾವತಿ, ಅನಂತಮತಿ, ಬುದ್ಧದಾಸಿ, ಮುಂತಾದ ಪಾತ್ರಗಳಲ್ಲಿ ಇದನ್ನು ಕಾಣಬಹುದಾಗಿದೆ. ಇದು ಮಹಿಳೆಯರು ತಮ್ಮ ಅಸ್ತಿತ್ವವನ್ನು ಸ್ಥಾಪಿಸುವ ರೀತಿಯೂ ಆಗಿರುತ್ತದೆ.

ವೇಶ್ಯಾಲೋಕದ ಅನೇಕ ವಿವರಗಳನ್ನು ಋಣಾತ್ಮಕವಾಗಿ ಚಿತ್ರಿಸಿದರೂ ಅವರು ಕೂಡಾ ಮಹಿಳೆಯರು, ಮನುಷ್ಯರು ಎಂಬುದನ್ನು ನಯಸೇನ ಮರೆಯುವುದಿಲ್ಲ. ಮೃಗಸೇನೆ ಎನ್ನುವ ಸೂಳೆ ಧನಕೀರ್ತಿಯ ಪತ್ರದಲ್ಲಿ ವಾಕ್ಯವನ್ನು ಬದಲಾಯಿಸಿ ಅವನನ್ನು ಬದುಕಿಸುತ್ತಾಳೆ. ಅನಂತಶ್ರೀ ಎನ್ನುವ ಸೂಳೆ ತನ್ನ ಜೀವ ಬದುಕಿಸಿದ ಗಿಳಿಯನ್ನು ತಿಳಿಯದೆ ಸಾಯಿಸಿ, ನಂತರ ಪಶ್ಚಾತ್ತಾಪದಿಂದ ಎದೆಯ ಮೇಲಿಟ್ಟುಕೊಂಡು ಅಳುತ್ತಾಳೆ. ಬಾಣಂತಿ ಸ್ತ್ರೀಯರನ್ನು ಕೂಡ ಬೊಜಗರು ಬಿಡುತ್ತಿರಲಿಲ್ಲ ಎಂದು ಅನುತಾಪದಿಂದ ಹೇಳುತ್ತಾನೆ. ಮುದುಕರನ್ನು ಕಂಡು ಒಳಗೋಡುವ ಸೂಳೆಯರ ಹೆಣ್ತನವನ್ನು ಅನುಕಂಪಸಹಿತ ಚಿತ್ರಿಸುತ್ತಾನೆ. ರಾಜರು ತಮ್ಮ ಔತಣಕೂಟಗಳಲ್ಲಿ ಪುರದಲ್ಲಿ ಸೂಳೆಯರನ್ನೆಲ್ಲ ಎಳೆತಂದು ಜಾಗರ ಮಾಡಿಸುತ್ತಿದ್ದರೆಂಬ ಸಂಗತಿಯನ್ನು ಖೇದದಿಂದ ನಿರೂಪಿಸುತ್ತಾನೆ.

ಸೌಂದರ್ಯವೆಂಬುದು ಕಣ್ಣಿನ ತುತ್ತಲ್ಲ ಕಣ್ಣಿಗೂ ಕಣ್ಣಾಗಿ ಒಳಗಿರುವ ಪರಿಯನ್ನು ನಯಸೇನ ಅರಿತಿದ್ದಾನೆ. ಪುಷ್ಪದಾಡನು ತನ್ನ ಹೆಂಡತಿ ಕಪ್ಪಗಿದ್ದರೂ ೧೦ವರ್ಷ ಅವಳನ್ನು ಬಿಟ್ಟಿದ್ದರೂ ಅಪರಿಮಿತವಾಗಿ ಅವಳನ್ನು ಪ್ರೀತಿಸುತ್ತಿದ್ದನು. ಜಿನದೀಕ್ಷೆ ಪಡೆದ ಮೇಲೆಯೂ ಅವಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಗುರುವಿಲ್ಲದಾಗ ಕದ್ದು ಅವಳ ಹತ್ತಿರ ಹೋಗುತ್ತಾನೆ. ಜೀವಿಗಳ ನಡುವಿನ ಬೆಸುಗೆಗೆ ಮನುಷ್ಯ ನಿರ್ಮಿತ ಯಾವ ಬಂಧನಗಳೂ ಅಡ್ಡಿಯಾಗುವುದಿಲ್ಲ ಎಂಬುದನ್ನು ನಯಸೇನ ಹೇಳಲು ಪ್ರಯತ್ನಿಸಿದ್ದಾನೆ.

ಮೋಕ್ಷ, ವೈರಾಗ್ಯ, ಶಿಕ್ಷಣ ಇತ್ಯಾದಿಗಳು ಹೆಣ್ಣಿಗೆ ಇಲ್ಲವೇ ಇಲ್ಲ ಎಂಬ ಕಾಲಘಟ್ಟ ದಲ್ಲಿ, ಕೃಷಿ ಚಟುವಟಿಕೆಗಳಿಂದ ವಾಣಿಜ್ಯ ಚಟುವಟಿಕೆಗಳಿಗೆ ಆದಾಯವು ಬದಲಾಗುತ್ತಿರುವ ಸಂದರ್ಭದಲ್ಲಿ ಮಹಿಳೆಯನ್ನು ಮಾರುವ, ಕೊಳ್ಳುವ ಸಂದರ್ಭಗಳನ್ನು ನಯಸೇನ ಚಿತ್ರಿಸು ತ್ತಾನೆ. ಇವುಗಳ ಜೊತೆಗೆ ವಿಧವೆಯಾದ ನಾರಾಯಣದತ್ತೆ ತರ್ಕ, ಶಾಸ್ತ್ರ, ಪಂಡಿತೆಯೂ ಗುರುವೂ ಆಗಿದ್ದಳೆಂಬುದು ಉಪರಿಚರ ಮಹಾರಾಜನ ರಾಣಿಯರು ಗಂಡನಿಗೆ ಧರ್ಮೋ ಪದೇಶ ಮಾಡಿದುದು, ಗಂಡನು ಮಾತ್ರ ಕಲಿಯಬಲ್ಲ ‘ಪ್ರಜ್ಞಪ್ತಿ’ ಎಂಬ ವಿದ್ಯೆ ಪವನವೇಣಿ ಪಡೆದಿದ್ದು (ಇದಂತೂ ಮೂಲದಲ್ಲಿ ಇಲ್ಲವೇ ಇಲ್ಲ) ಇತ್ಯಾದಿ ಮಹಿಳಾಪರ ನಿಲುವುಗಳನ್ನು ನಯಸೇನ ತಂದಿದ್ದಾನೆ.

ತರುಣಿಯರನ್ನು ಪೆರ್ಬುಲಿಗಳಿಗೂ, ಹರಣಾಕ್ಷಿಯರನ್ನು ಕ್ರೂರ ಸೀರ್ಕರಡಿಗಳಿಗೂ, ಲತಾಲತಿತಗಾತ್ರೆಯರನ್ನು ಮಹೋರಗಗಳಿಗೂ ಹೋಲಿಸಿರುವನು. ಈ ಹೋಲಿಕೆಗಳ ಹಿಂದೆ ಸ್ತ್ರೀವಿರೋಧಿ ನಿಲುವು ಇದೆಯೆನ್ನುವುದಕ್ಕಿಂತಲೂ ಮೃಗೀಯ ಗುಣಗಳು ಯಾವ ಲಿಂಗದ ಸೊತ್ತು ಅಲ್ಲ ಎಂಬ ಸತ್ಯವನ್ನು ಅರಿಯಬೇಕಾಗಿದೆ. ರಾಗದ್ವೇಷಾದಿಭಾವಗಳು ಮಹಿಳೆ ಪುರುಷರಿಬ್ಬರಿಗೂ ಸಮವಾಗಿರುತ್ತವೆ. ವ್ಯಕ್ತಪಡಿಸುವ ವಿಧಾನಗಳಲ್ಲಿ ಮಾತ್ರ ಸಮಾಜೀಕರಣ ದಿಂದ ವ್ಯತ್ಯಾಸವಾಗುತ್ತದೆ.

ಮಹಿಳೆ – ಪುರುಷಗಳೆರೆಡೂ ಭಿನ್ನ ಜೈವಿಕ ಘಟಕಗಳಾದರೂ ಅವೆರಡೂ ಈ ನಿಸರ್ಗದಲ್ಲಿ ವೈರುಧ್ಯಗಳ ರೂಪದಲ್ಲಿ ಸಾಮರಸ್ಯವನ್ನು ತುಂಬಿಕೊಂಡು ಪ್ರಕೃತಿಯನ್ನು ಮುನ್ನಡೆಸುವ ಶಕ್ತಿಗಳು. ಯಾರು ಯಾರಂತೆಯೂ ಆಗಿರುವುದಿಲ್ಲ, ಆಗಬಾರದು. ಅದು ಗಂಡಿಗಾಗಲಿ ಹೆಣ್ಣಿಗಾಗಲಿ ನಿಸರ್ಗವೇ ಕೊಟ್ಟ ವಿಶಿಷ್ಟ ಕೊಡುಗೆಯಾಗಿದೆ. ಆದರೆ ಅದನ್ನೇ ನೆವವಾಗಿಸಿ ಕೊಂಡು ಶ್ರಮವಿಭಜನೆಯ ದಾರಿಯಲ್ಲಿ ಗಂಡು ಹೆಣ್ಣನ್ನು ತನ್ನ ಅಧೀನಳನ್ನಾಗಿಸಿಕೊಳ್ಳುವ ಕ್ರಮವನ್ನು ಶುಲಾಮಿತರ್ ಫೈರಸ್ಟೈನ್ ವಿರೋಧಿಸುತ್ತಾಳೆ.

ಧರ್ಮವನ್ನು ಮುಖ್ಯ ತಳಹದಿಯಾಗಿಟ್ಟುಕೊಂಡ ಕೃತಿಯೊಂದರಲ್ಲಿ ಒಟ್ಟಾರೆ ನಾಲ್ಕೈದು ಧಾರ್ಮಿಕೇತರ ಸಂಗತಿಗಳನ್ನಿಟ್ಟುಕೊಂಡು, ಎಲ್ಲೋ ಒಬ್ಬ ಅನಂತಮತಿ, ಅನಂತಶ್ರೀ, ಪವನವೇಣಿ, ಶೀಲವತಿ ಎಂಬ ಬೆರಳೆಣಿಕೆಯ ಪಾತ್ರಗಳನ್ನು ಚಿತ್ರಿಸಿದಾಕ್ಷಣ ಧರ್ಮ ನಿರಪೇಕ್ಷ ಸಂವಾದ ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ. ಮೇಲ್ನೋಟಕ್ಕೆ ಈ ಅಂಶವು ಕೃತಿಯನ್ನು ಅರಿಯುವ ದಾರಿಗಳನ್ನು ಮುಚ್ಚಿದೆಯೆನಿಸಿದರೂ, ಒಂದು ಸಾಹಿತ್ಯ ಕೃತಿಯ ಓದನ್ನು ಇಡೀ ಸಾಹಿತ್ಯ ಚರಿತ್ರೆಯ ವಿಕಾಸದ (Evolution) ಹಂತವಾಗಿ ಪರಿಗಣಿಸಿದಾಗ ನಮಗೆ ದಕ್ಕುವ ಸಂಗತಿಗಳು ಒಂದಿಷ್ಟು ಜೀವಪರ ಜನಪರ ಕ್ರೀಯಾಶೀಲತೆಯನ್ನು ನಮ್ಮಲ್ಲಿ ಬಡಿದೆಬ್ಬಿ ಸುತ್ತವೆ. ಅರಿವಿನ  ಆಗುವಿಕೆಯು ನಿರಂತರವಾಗಿ ನಡೆದೇ ಇರುವುದರಿಂದ ನಿರ್ದಿಷ್ಟ ಕಾಲಘಟ್ಟ ದಲ್ಲಿ ರಚನೆಯಾದ ಕೃತಿಯೊಂದು ಮಾನವಕುಲವು ಅನ್ವೇಷಿಸುತ್ತಿರುವ ಈ ಸಮಗ್ರತೆಯತ್ತ ಸಾಗುವ ಶಾಶ್ವತ ದಾರಿಯಲ್ಲಿ ಇನ್ನೊಂದು ಮುಂದುವರಿದ ಹೆಜ್ಜೆಯಾಗಿರುತ್ತದೆ.

ವ್ಯವಸ್ಥೆಯ ಎಲ್ಲ ವಲಯಗಳು ಪುರುಷ ಕೇಂದ್ರಿತ ಹಿತಾಸಕ್ತಿಯ ಪರವಾಗಿರುವಾಗ ಎಲ್ಲೋ ಒಂದು ಕಡೆ ಕ್ಷೀಣವಾಗಿ ಕೇಳಿಸುವ ಪಿಸುದನಿ ಕೂಡ ಧೈರ್ಯದ ಸೆಲೆಯಾಗಿ ಬದುಕನ್ನು ಮುನ್ನಡೆಸುವ ಮಾರ್ಗವಾಗಲು ಸಾಧ್ಯವಿದೆ. ಸಾಹಿತ್ಯದ ವ್ಯಾಪ್ತಿ ಉದ್ದೇಶ ರಚನಾಕ್ರಮಗಳು, ರಚಿಸುವವರ ಶಕ್ತಿ, ಕಾಲದ ಮಿತಿ ಈ ಎಲ್ಲ ಪರಿಕರಗಳ ಮಿತಿ ಮತ್ತು ವ್ಯಾಪ್ತಿಯೊಳಗೆ ಒಂದು ಕೃತಿಯು ಮೂರ್ತಗೊಂಡಿರುತ್ತದೆ. ಧರ್ಮಮೃತದ ಓದು ಕೂಡ ಈ ದಿಸೆಯಲ್ಲಿ ಮಾನವೀಯ ಸ್ಪಂದನಗಳನ್ನು ಒದಗಿಸುತ್ತದೆನ್ನಬಹುದು.

ಧರ್ಮ ನಿರಪೇಕ್ಷ ಯುಗದಲ್ಲಿ ಇರುವೆನೆಂದು ಪರಿಭಾವಿಸಿರುವ ಈ ಕಾಲದಲ್ಲಿ ಪ್ರಸ್ತುತ ಕೃತಿಯ ಚರ್ಚೆಯೇ ಅದರ ಜೀವಂತಿಕೆಯ ಕುರುಹಾಗಿಯೂ ನಿಂತಿರುತ್ತದೆ. ಹೀಗಾಗಿ ಧರ್ಮಾಮೃತದಲ್ಲಿ ಮಹಿಳಾ ವೈರುಧ್ಯಗಳು ನಮ್ಮ ವೈರುಧ್ಯಗಳೇ ಆಗಬಹುದಾಗಿದೆ.