ಗದ್ಯ || ಮತ್ತಂ ಮಿಥ್ಯಾದೃಷ್ಟಿಯ ಸಿರಿಯನುರಿಯೆಂದು ಬೆಚ್ಚಲುಂ ಕುದೃಷ್ಟಿಯ ರೂಪು ಸಂತಾಪಮೆಂದು ನಡುಗಲುಂ ಸದ್ಧರ್ಮದೂಷಕನ ಮುಖಮಂ ಯಮಗ ಜಾರಿ ಪೊಯ್ದು ಕೊಲ್ಪ ನಖಮೆಂದಂಜಲುಂ ಕುದರ್ಶನ ಪ್ರೀತನ ಭೊಗಮಂ ನಾಗವಿಷಮೆಂದು ತಲ್ಲಣಿಸಲುಂ ಕುಮಾರ್ಗಾನುರಾಗಿಯಪ್ಪರಸನಂ ವಿರಸನೆಂದು ಬಗೆಯಲುಂ, ದರ್ಶನದೂರನ ಶೃಂಗಾರಮಂ ಸಂಹಾರಮೆಂದು ಭಯಂ ಗೊಳಲುಂ, ನಿಶ್ರೇಯಸಶ್ರೀಯನೆಯ್ದುವೆನೆಂಬ ಶ್ರಾವಕಂಗೆ ಬೇೞ್ಪು ದಿನಿತಲ್ಲದೆ ದುರ್ಮೋಹದಿಂ ಮನದೊಳೞ್ಕರ್ತು ಮಿಥ್ಯಾದೃಷ್ಟಿಯಪ್ಪನ ರೂಪುಮಂ ವಿಳಾಸ ಮುವಂ ಪ್ರತಾಪಮುವಂ ಸಂಪತ್ತುಮಂ ಕಂಡು ರಾಗಿಸಿ ಪೊರ್ದಿ ಕೂಸುಗುಡು ವನುಂ ಕೆಳೆಗೊಳ್ವನುಂ ನರಕಕ್ಕೆ ಭಾಜನನಕ್ಕುಮಲ್ಲದೆ ಶ್ರಾವಕನಪ್ಪನೇಗೆಯ್ದುಂ ಸುಗತಿಯ ನೆಯ್ದಲಾಱನೆಂದು ಪರಮಾಗಮಮಂ ಭಾವಿಸಿ ಧನಶ್ರೀಯ ಮನದ ನಿರ್ಮಳಿಕೆಯುಮಂ ಸಮ್ಯಕ್ತ್ವಮುಮನಾರಯ ಲೆಂದು ಗುಣಪಾಲಸೆಟ್ಟಿ ಯಿಂತೆಂದಂ
                                                            (೧೦೫೦)

ಅಹಿಂಸೆಯನ್ನು ಸಾರುವ ಧರ್ಮವೊಂದು ತನ್ನ ಎದುರಾಳಿ ಧರ್ಮವನ್ನು ಎಷ್ಟು ಹಿಂಸಾತ್ಮಕ ವಾಗಿ ವರ್ಣಿಸಿದೆ. ಆರನೆಯ ಕತೆಯಲ್ಲಿ ಈ ಹಿಂಸೆಯ ವರ್ಣನೆ ಮೇರೆ ಮೀರಿದೆ. ಜೈನಧರ್ಮ ವನ್ನು ನಂಬದವರು, ದೂಷಿಸುವವರು ಅನುಭವಿಸಬೇಕಾದ ಸಂಕಟಗಳ ದೊಡ್ಡ ಪಟ್ಟಿ ಇಲ್ಲಿದೆ. ಇಲ್ಲೆಲ್ಲ ಕ್ರೌರ್ಯ ತಣ್ಣಗೆ ತೆರೆದುಕೊಂಡಿದೆ;

ಕಯ್ಯೇೞದೆ ಕಾಲೇೞದೆ
ಮೆಯ್ಯೆಲ್ಲಂ ತೊನ್ನುಗೊಂಡು ದುಃಖಂಬಟ್ಟೋ
ವೊಯ್ಯೊಂದೊಳೞುತ್ತಿರ್ಪರ್
ಚರ್ಯಾದಿ ಜಿನೇಂದ್ರಧರ್ಮಮಂ ಪೞಿದವರ್ಗಳ್
(೬ – ೧೭೭)

ಕಿೞಿಕಿಱಿದಾಗಿರೆ ಕೈರಂ
ತಱಿದದನರಿದರಿದು ಕೊಳ್ಳಿಯಿಂದಂ ಮೊಗಮಂ
ನೆಱಿ ಚುರ್ಚುತ್ತುಂ ಛನ್ನೆಂ
ದಱಗುಱಿಗಳನೆರವನಱದು ಪೋಗದೆ ಪೆಣೆವರ್
(೬ – ೧೯೧)

ಬಡಿಬಡಿ ತಿವಿತಿವಿ ಪೊಡೆಪೊಡೆ
ಕಡಿಕಡಿ ತಱಿತಱಿ ಕಡಂದುಱಂ ಪುಣ್ಣೊಳಗಿಂ
ಬಿಡುಬಿಡು ತಲೆಯಂ ತೂಂತಾ
ಗಡೆಯಡೆ ಕೊಯ್ ಕೊಯ್ ಮುಗುಳ್ಮಗುಳ್ಸೀಳೆರ್ದೆಯಂ
(೬ – ೧೯೨)

ಅರಿಅರಿ ಪೊಯ್ಪೊಯ್ ಸೀಳ್ಸೀಳ್
ಕರಿಘಟೆಯಿಂದಿಕ್ಕಿ ಮೆಟ್ಟಿಸವನೆರ್ದೆಯಂ ಸೀ
ಳ್ದುರಿಯೆಣ್ಣೆಯನೆಱೆಯೆಱೆ ತಲೆ
ಯರಿದೋವೆಂದೊಳಱಿ ಬೀಱೆ ಕಿಡೆನೂಂಕುರಿಯೊಳ್
(೬ – ೧೯೩)

ನರಕದಲ್ಲಿ ಧರ್ಮದ್ವೇಷಿಗಳು ಅನುಭವಿಸುವ ಯಾತನೆಯಿದು. ಬೌದ್ಧಧರ್ಮದವನಾದ ಸಂಘಶ್ರೀ (೧೧ನೆಯ ಕತೆ) ಜಿನಧರ್ಮವನ್ನು ನಂಬದ್ದಕ್ಕೆ ಆತನ ಕಣ್ಣುಗಳು ಕಳೆದುಹೋಗಿವೆ. ಏಳು ತಲೆಮಾರಿನವರೆಗೆ ಅವನ ವಂಶದಲ್ಲಿ ಹುಟ್ಟಿದ ಮಕ್ಕಳು ಕುರುಡರಾಗಿ ಹುಟ್ಟುವರೆಂಬ ಶಾಪವಿದೆ. ಧನದ ಮಹಾರಾಜ ತಾನು ಅಜೈನಳನ್ನು ಕೂಡಿದ್ದಕ್ಕೆ ಪರಿತಪಿಸಿದ್ದಾನೆ (೧೧ನೆಯ ಕತೆ). ಅಹಿಂಸೆ ಸಾರುವ ಕೃತಿಯ ಒಳಗೆ ಮನೆಮಾಡಿರುವ ಹಿಂಸೆಯ ಬೀಜಗಳಿವು. ಅನ್ಯ ಧರ್ಮದ ಕುರಿತಾದ ಈ ಮನೋಧರ್ಮ ಮಧ್ಯಕಾಲೀನ ಸಾಹಿತ್ಯದ ಅನೇಕ ಕೃತಿಗಳಲ್ಲಿ ‘ಅತಿ’ಗೆ ಮುಟ್ಟಿದ್ದಾಗಿ ತೋರುತ್ತದೆ. ಹೇಗಾದರೂ ಮಾಡಿ ಧರ್ಮವನ್ನು ಉಳಿಸಿಕೊಳ್ಳ ಬೇಕೆಂಬ ಧಾವಂತದಲ್ಲಿ ಈ ರೀತಿಯ ಹೇಳಿಕೆಗಳು ಹುಟ್ಟಿಕೊಳ್ಳುತ್ತಿವೆ. ಹಾಗೆ ನೋಡಿದರೆ ಭಯ ಮತ್ತು ವಿಹ್ವಲತೆಯಲ್ಲಿ ಹುಟ್ಟಿದ ಮಾತುಗಳಿವು. ಜೈನಧರ್ಮವು ತೀವ್ರವಾದ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಾಗ ಆಡಿದ ಹತಾಶೆಯ ಮಾತುಗಳೂ ಹೌದು.

‘ಮುನಿತನ’ದ ಪಾವಿತ್ರ್ಯದ ಬಗೆಗೆ ನಯಸೇನ ಕಾಳಿಜಿಯಿಂದ ಹೇಳುತ್ತಿದ್ದಾನೆ. ಧರ್ಮದ ಮುಂಚೂಣಿಯಲ್ಲಿರುವ ಇವರ ನಡವಳಿಕೆ ಇತರರನ್ನು ಬಹುಬೇಗ ಪ್ರಭಾವಿಸುವುದರಿಂದ ಮುನಿಗಳು ತಮ್ಮ ನಡವಳಿಕೆ ಕುರಿತು ವಹಿಸಬೇಕಾದ ಎಚ್ಚರವನ್ನು ಜ್ಞಾಪಿಸಿದ್ದಾನೆ. ಕಾಮದ ನಿಗ್ರಹ ಮುನಿತನದ ಪರಮ ಮೌಲ್ಯವಾಗಿ ಕಂಡಿದ್ದಾನೆ. ಪುಷ್ಪದಾಡ (೭ನೆಯ ಕತೆ) ಮುನಿಯಾದ ಮೇಲೂ ಹೆಂಡತಿಯನ್ನು ಭೇಟಿಯಾಗಲು ಕದ್ದು ಬಂದಿರುವನು. ವಾರಿಷೇಣ ತನ್ನ ಅತ್ಯಂತ ಸುಂದರ ಹೆಂಡತಿಯರನ್ನು ತೋರಿಸಿ ತಾನು ಇಂಥ ರೂಪಸಿಯರನ್ನೆ ಬಿಟ್ಟು ಬಂದಿರುವುದಾಗಿ ಹೇಳಿ ಪುಷ್ಪದಾಡ ತನ್ನ ಕುರೂಪಿ ಹೆಂಡತಿಯನ್ನು ಬಿಟ್ಟು ಬರುವಂತೆ ಹೇಳುತ್ತಾನೆ. ಧರ್ಮದ ವ್ಯಾಮೋಹದಲ್ಲಿ ಇಂಥ ವಿಪರೀತದ ಸನ್ನಿವೇಶಗಳು ಸೃಷ್ಟಿಯಾಗಿವೆ. ಒಮ್ಮೊಮ್ಮೆ ಮುನಿತನದ ಕುರಿತು ಉದಾರ ನಿಲುವು ತಳೆದಿದ್ದಾನೆ; ಬೇರೆಯವರು ಒಳ್ಳೆಯವರಾಗಿದ್ದರೂ ಏತರ ತಪಸ್ವಿಗಳು ಎಂದು, ತನ್ನವರು ದುರ್ಜನರಾಗಿದ್ದರೂ ಅವರನ್ನು ಪ್ರೀತಿಯಿಂದ ಹೊಗಳುವವನು ಮುನಿಯಲ್ಲ (೧೦ – ೯೬) ಅನ್ನಕ್ಕೆ, ಭೋಗಕ್ಕೆ ಆಸೆಪಡುವವರು ಮುನಿತನಕ್ಕೆ ಹೊರಗು ಎಂದು ಹೇಳಿದ್ದಾನೆ. ಸೂಳೆಯ ಹಾಗೆ ಸೌಂದರ್ಯ ಪ್ರದರ್ಶನ ಮಾಡುವ ಮುನಿಗಳನ್ನು ಹೀಗಳೆದಿದ್ದಾನೆ. ಚಂದ್ರನಂತೆ ಶಾಂತರೂಪಿಯಾದವನು, ತಂಗಾಳಿ ಯಂತೆ ಮೆಲ್ಲಗೆ ಸಂಚರಿಸುವವನು, ಶರತ್ಕಾಲದ ಹೊಳೆಯಂತೆ ಪರಿಶುದ್ಧನು, ಮಳೆಯ ಹಾಗೆ ಸಕಲರಿಗೂ ಜೀವಸ್ವರೂಪನಾದವನು ಮಾತ್ರ ಮುನಿ ಎಂದಿದ್ದಾನೆ. ತನ್ನ ಕಾಲದಲ್ಲಿ ಕೆಲಮಟ್ಟಿಗೆ ಅಳ್ಳಕಗೊಳ್ಳುತಿದ್ದ ಮುನಿತನವನ್ನು ಮತ್ತೆ ಸದೃಢಗೊಳಿಸುವ ಬಯಕೆ ಅವನಿಗಿ ದ್ದಂತಿದೆ. ಜೈನಧರ್ಮವು ಕೆಡದಂತೆ ನೋಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನು ನಯಸೇನ ತನ್ನ ಕಾವ್ಯದಲ್ಲಿ ಸತತವಾಗಿ ಎದುರಿಸುತ್ತಿದ್ದಾನೆ.

ಜೈನಧರ್ಮದ ಒಳಗಿನ ಹುಳುಕುಗಳನ್ನು ಆತ ಚರ್ಚಿಸುತ್ತಿರುವುದು ಮೇಲಿನ ಕಾಳಜಿಯಿಂದ. ವಾಸವನೆಂಬ ದೇವನು (೪ನೆಯ ಕತೆ) ವಿಕಾರರೂಪ ಧರಿಸಿ ಋಷಿಯ ವೇಷ ದಲ್ಲಿ ಸಾಗುವಾಗ ಜೈನಧರ್ಮಿಯರು ಅವನನ್ನು ಹತ್ತಿರಕ್ಕೆ ಸೇರಿಸಿಕೊಳ್ಳದೆ, ಗೌರವಿಸದೆ ಅಸಡ್ಡೆ ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ ಧರ್ಮವನ್ನು ಕಾಟಾಚಾರಕ್ಕೆ ಸ್ವೀಕರಿಸಿದವರನ್ನು ನಯಸೇನ ತೆಗಳಿದ್ದಾನೆ. ಧರ್ಮವನ್ನು ಸ್ವೀಕರಿಸಿದ ಮಾತ್ರಕ್ಕೆ ಆತ್ಮವಿಕಾಸವಾಗುತ್ತದೆಂದೇನೂ ಇಲ್ಲ – ಈ ಅಂಶವನ್ನು ಕಥನಕಾರ ನಂಬಿ ನಡೆದಿದ್ದಾನೆ ಎಂಬುದನ್ನು ಮರೆಯುವಂತಿಲ್ಲ.

ಧರ್ಮಾಮೃತದಲ್ಲಿ ಎರಡು ಸಂಗತಿಗಳು ಪ್ರಮುಖವಾಗಿ ಘಟಿಸುತ್ತದೆ. ಒಂದು; ಮತಾಂತರ; ಇನ್ನೊಂದು ಪರಿವರ್ತನೆ. ಮತಾಂತರದ ಹಲವಾರು ಸನ್ನಿವೇಶಗಳನ್ನು ನಯಸೇನ ಉದ್ದೇಶಪೂರ್ವಕವಾಗಿ ಸೃಷ್ಟಿಮಾಡಿದ್ದಾನೆ. ಕ್ಷೀಣಿಸುತ್ತಿರುವ ಜೈನಧರ್ಮದ ಪ್ರಭಾವವನ್ನು ಮತ್ತೆ ಸ್ಥಾಪಿಸುವುದು ಆತನ ಗುರಿ. ಮತಾಂತರಗೊಳ್ಳುತ್ತಿರುವವರಲ್ಲಿ ಬ್ರಾಹ್ಮಣರು ಮತ್ತು ಕ್ಷತ್ರಿಯರು ಪ್ರಮುಖರಾಗಿದ್ದಾರೆ. ಹನ್ನೊಂದನೆಯ ಕತೆಯಲ್ಲಿ ಮಾತ್ರ ಬೌದ್ಧಧರ್ಮಕ್ಕೆ ಸೇರಿದ ಕಮಲಶ್ರೀ ಮತಾಂತರಗೊಂಡಿದ್ದಾಳೆ. ಮತಾಂತರಕ್ಕೆ ಪ್ರತಿಷ್ಠಿತವರ್ಗವನ್ನು ಹೆಚ್ಚಾಗಿ ಒಳಗುಮಾಡಲಾಗಿದೆ. ಬಹುತೇಕ ಕತೆಗಳು ಬ್ರಾಹ್ಮಣನೊಬ್ಬ ಜೈನಧರ್ಮಕ್ಕೆ ಸೇರ್ಪಡೆ ಗೊಳ್ಳುವುದರ ಮುಖಾಂತರ ಕೊನೆಗೊಂಡಿವೆ. ವೈದಿಕ ಧರ್ಮವನ್ನು ಬಲಹೀನಗೊಳಿಸು ವುದಕ್ಕಾಗಿ ಬ್ರಾಹ್ಮಣನ ಮತಾಂತರವನ್ನು ಒಂದು ಸ್ಟ್ರ್ಯಾಟಜಿಯಾಗಿ ಬಳಸುತ್ತಿದ್ದಾನೇನೊ. ಅವನ ಕತೆಗಳಲ್ಲಿ ಕಟು ಟೀಕೆಗೆ ಒಳಗಾದವರು ಕೂಡ ಇವರೆ. ಮತಾಂತರಗೊಳಿಸುವ ಮುನ್ನ ಆತ ನೀಡುತ್ತಿರುವ ಬ್ರಾಹ್ಮಣನ ಚಿತ್ರ ಮೂರ್ಖನೊಬ್ಬನ ಚಿತ್ರಣದಂತಿದೆ. ಇವರೆಲ್ಲ ವ್ಯಕ್ತಿತ್ವಹೀನರಾಗಿ ಕಂಡುಬರುತ್ತಿದ್ದಾರೆ. ತನ್ನ ಬ್ರಾಹ್ಮಣತ್ವದ ಬಗೆಗೆ ಅಭಿಮಾನ ಪಡುವ ವಸುಭೂತಿ (೧ನೆಯ ಕತೆ) ನಂತರ ಜೀನದೀಕ್ಷೆ ಪಡೆದುಕೊಂಡಿದ್ದಾನೆ. ಪುಷ್ಪದಾಡನೆಂಬ ಬ್ರಾಹ್ಮಣ (೭ನೆಯ ಕತೆ) ಜೈನಧರ್ಮಕ್ಕೆ ಸೇರಿದ್ದಾನೆ. ಸೋಮದತ್ತ (೮ನೆಯ ಕತೆ) ಮೊದಲು ಬ್ರಾಹ್ಮಣನಾಗಿದ್ದು ಅನಂತರ ಜಿನದೀಕ್ಷೆ ಪಡೆದು ಮುನಿಯಾದ.

ಇವರೆಲ್ಲ ಜೈನಧರ್ಮಕ್ಕೆ ಮತಾಂತರಗೊಳ್ಳುವಾಗ ಚಿಕ್ಕ ವಾಗ್ವಾದಗಳು ಘಟಿಸುತ್ತವೆ. ಜಿನಧರ್ಮವನ್ನು ಖಂಡಿಸುತಿದ್ದ ಬ್ರಾಹ್ಮಣರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿ ಜಿನವ್ರತಗಳನ್ನು ಕೈಗೊಂಡಿದ್ದಾರೆ. ಬ್ರಾಹ್ಮಣರನ್ನು ಮೊದಲು ಎದುರಾಳಿಗಳಾಗಿ ಚಿತ್ರಿಸುವ ನಯಸೇನ ತರುವಾಯ ಅವರು ಜಿನಧರ್ಮದ ಉಗ್ರ ಸಮರ್ಥಕರನ್ನಾಗಿ ಮಾಡಿದ್ದಾನೆ. ಸೋಮದತ್ತ (೮ನೆಯ ಕತೆ) ಜೈನಧರ್ಮಕ್ಕೆ ಸೇರಿದಾಗ ಇತರ ಬ್ರಾಹ್ಮಣರು ಅವನಿಗೆ ಬುದ್ದಿ ಹೇಳಿ, ಕಾಲಿಗೆ ಬಿದ್ದು ಮತ್ತೆ ಬ್ರಾಹ್ಮಣ ಧರ್ಮಕ್ಕೆ ಸೇರುವಂತೆ ಕೇಳಿಕೊಳ್ಳುತ್ತಿದ್ದಾರೆ. ಅವರ ಬೇಡಿಕೆಯನ್ನು ತಿರಸ್ಕರಿಸಿದ ಸೋಮದತ್ತ ಜಿನಧರ್ಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾನೆ.

ಗದ್ಯ || ತನಗಿಲ್ಲದ ಬಡಸೂಳೆ ಬೊಜಂಗನ ಸಾರೆ ಪೆಂಪಿಂಗಸಗಮಂ ಬಯ್ದ ಳೆಂಬಂತೆ ಜಿನಾಗಮದುಡುಗೆಗೆ ಮೆಯ್ಯೂಱದೆ ಕುಬುದ್ದಿಗಳುಂ ಸೋಂಬರುಂ ಸಪ್ತವ್ಯಸ ನಾಪೇಕ್ಷಿತರುಂ ಪರಸ್ತ್ರೀಯರುಂ ಹಿಂಸಾನಂದರುಂ ದೂರ್ತಾಳಾಪರುಂ ಜಿನಧರ್ಮಂ ಪೊಲ್ಲಮೆಂಬರದು ಪ್ರಮಾಣಮಲ್ಲದು.
(೮ – ೭೫)

ವಸುಭೂತಿ (೧ನೆಯ ಕತೆ) ಕೂಡ ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಮತಾಂತರಗೊಂಡಿದ್ದಾನೆ. ಆದರೆ ವಿಚಿತ್ರವಾದದ್ದು ಪುಷ್ಪದಾಡನ (೭ನೆಯ ಕತೆ) ಮತಾಂತರ. ವಾರಿಷೇಣ ಮುನಿಗೆ ಪುಷ್ಪದಾಡನೆಂಬ ಬ್ರಾಹ್ಮಣ ಸ್ನೇಹಿತನಿದ್ದ. ಆತನ ಸಂಸಾರ ಮೋಹ ಬಿಡಿಸಲು ವಾರಿಷೇಣ ಜಿನದೀಕ್ಷೆ ಕೊಡಿಸುತ್ತಾನೆ. ತನ್ನ ಐನೂರು ಹೆಂಡತಿಯರ ಸೌಂದರ್ಯ ತೋರ್ಪಡಿಸಿ ಪುಷ್ಪದಾಡನ ಹೆಂಡತಿ ಇವರೆದುರು ಎಷ್ಟು ಕನಿಷ್ಟಳೆಂಬುದನ್ನು ವರ್ಣಿಸುತ್ತಾನೆ. ವಾರಿಷೇಣ ನಂಥ ಮುನಿ ಕೂಡ ಬಾಹ್ಯಸೌಂದರ್ಯವನ್ನೆ ನಂಬಿ ಹೆಣ್ಣಿನ ವ್ಯಕ್ತಿತ್ವ ಅಳೆಯುತ್ತಿದ್ದಾನೆ! ಇಷ್ಟಾದರೂ ಹೆಂಡತಿಯ ಮೋಹ ಬಿಡದ ಪುಷ್ಪದಾಡನಿಗೆ ಕೊನೆಯಲ್ಲಿ ಹೆಂಡತಿ ಸುದಂತಿ; ಜಿನೇಶ್ವರ ರೂಪ ಧರಿಸಿ ಪುನಃ ಹೆಂಡತಿಯನ್ನು ಸ್ಮರಿಸುವವನು ನಾಯಿಗಿಂತ ಕಡೆ, ನಾಯಿ ಯಾದರೊ ತಾನು ವಾಂತಿ ಮಾಡಿದ್ದನ್ನು ಮತ್ತೆ ಮುಟ್ಟುವುದಿಲ್ಲ (೭ – ೨೩೨) ಎಂದು ಎಚ್ಚರಿಸ ಬೇಕಾಯಿತು. ಸ್ವತಃ ತನ್ನ ಹೆಂಡತಿಯಿಂದಲೆ ಪುಷ್ಪದಾಡ ತಿರಸ್ಕಾರಕ್ಕೊಳಗಾಗಿದ್ದಾನೆ. ಮುಂದೆ ಪುಷ್ಪದಾಡ ದೃಢವಾಗಿ ಜಿನಾಗಮವನ್ನು ನಂಬಿದ ವಿವರಣೆಯಿದೆ. ಜೀವನದ ಇಕ್ಕಟ್ಟಿನ ಸ್ಥಿತಿಯಲ್ಲಿ ಇನ್ನೊಂದಕ್ಕೆ ವಾಲುತ್ತಿದ್ದಾನೆ. ಧನದ ಮಹಾರಾಜ (೧೧ನೆಯ ಕತೆ) ಬುದ್ಧಪಾಶಕ ನಾದ ಸಂಘಶ್ರೀಯ ಮಗಳು ಕಮಲಶ್ರೀಯನ್ನು ಮದುವೆಯಾಗಿದ್ದಾನೆ. ನಂತರದಲ್ಲಿ ಆಜೈನಳನ್ನು ಕೂಡಿದ್ದಕ್ಕೆ ವಿಷಾದಪಟ್ಟು ಅವಳನ್ನು ಜೈನಧರ್ಮಿಯನ್ನಾಗಿ ಮಾಡಿದ. ಸಂಘಶ್ರೀ ಕೂಡ ಜೈನಧರ್ಮ ಸೇರಿದ. ಆದರೆ ಆತ ತಿರುಗಿ ಬೌದ್ಧಧರ್ಮವನ್ನು ಆಶ್ರಯಿಸಿದ್ದಾನೆ. ಇದಕ್ಕಾಗಿ ಕಾವ್ಯ ಆತನಿಗೆ ಒದಗಿದ ರೌರವ ನರಕವನ್ನು ವರ್ಣಿಸಿದೆ.

ಅನ್ಯಧರ್ಮದವರನ್ನು ಸೆಳೆಯುವ ಭರದಲ್ಲಿ ಕೆಲವು ವಿಚಿತ್ರ ಅಮಿಷಗಳನ್ನು ಒಡ್ಡಲಾಗಿದೆ; ‘ಕಾಮಸುಖವನ್ನು ಪಡೆಯಲೆಂದು ಪ್ರೇಯಸಿಯ ಮೇಲೆ ಮಲಗಿ ಮೆಲ್ಲನೆ ಚಿನ್ನದ ಕೊಡ ಗಳನ್ನು ಹೋಲುವ ಸ್ತನಯುಗಳವನ್ನು ನೋಡುತ್ತ ಅವಳ ಮುಖಕಮಲವನ್ನೂ ಕುರುಳಿನ ಓಳಿಗಳನ್ನೂ ಹೊಳೆಯುವ ಕಣ್ಣುಗಳನ್ನೂ ನೋಡುತ್ತಾ ಮನಸ್ಸಂತೋಷಪಡೆಯುವ ಆಸೆ ಯಿದ್ದರೆ ಜಿನೇಂದ್ರಧರ್ಮವನ್ನು ಸೇರು’ (೬ – ೧೬೧), ಜಿನಭಕ್ತಸೆಟ್ಟಿ ಕಳ್ಳನಾದ ಸೂರ್ಪನಿಗೆ ಹೇಳಿದ ಮಾತಿದು. ‘ಮೈಸೋಕಿ ಆಕರ್ಷಕವಾದ ಕಟಾಕ್ಷ ವೀಕ್ಷಣಗಳನ್ನು ಬೀರಿ ಮನಸ್ಸಿನಲ್ಲಿ ಮೋಹ ಮೇರೆ ಮೀರಲು ಕೈಹಿಡಿದು ಹಣೆಯ ಮೇಲಿಟ್ಟುಕೊಂಡು ನೆಟ್ಟನೆ ಸುರತದಲ್ಲಿ ಸಂತೋಷವನ್ನು ನೀಡುವ ದೇವಾಂಗನೆಯರಿಗೆ, ಅಣ್ಣ! ನೀನು ಆಸೆಪಡುವಿಯಾದರೆ, ಉತ್ಸಾಹಿ ದಿಂದ ಜಿನನನ್ನು ಪೂಜಿಸು’ (೬ – ೧೬೫). ಬಹುಶಃ ಮುನಿಗಳಿಗೆ ಹಾಗೂ ಜಿನಧರ್ಮವನನ್ನಾ ಚರಿಸುವ ಜನಕ್ಕೆ ಲಭ್ಯವಾಗುವ ಫಲಗಳನ್ನು ಕೃತಿ ಬೇರೆಬೇರೆಯಾಗಿ ಹೇಳುತ್ತಿದೆ. ಧರ್ಮಗಳು ತಮ್ಮ ಜನಪ್ರಿಯತೆಗಾಗಿ ಅನುಸರಿಸುವ ದಾರಿಗಳು ಹೀಗೆಯೇ ಇರುತ್ತವೇನೊ. ಜೈನಧರ್ಮವು ತನ್ನ ಉಳಿಕೆಗಾಗಿ ಮಾಡುತ್ತಿರುವ ಹತಾಶೆಯ ಹಲವು ಪ್ರಯತ್ನಗಳನ್ನು ಧರ್ಮಾಮೃತ ತೆರೆದಿಟ್ಟಿದೆ.

ಗಮನಿಸಬೇಕಾದ ಸಂಗತಿಯೇನೆಂದರೆ ಮೋಕ್ಷದ ಕುರಿತು, ವೈರಾಗ್ಯದ ಕುರಿತು ಹೇಳು ವಾಗ ನಯಸೇನ ಬಳಸಿಕೊಳ್ಳುತ್ತಿರುವುದು ಅತ್ಯಂತ ಲೌಕಿಕವಾದ, ಜಾಣನೂ ವ್ಯವಹಾರ ಚತುರನೂ ಬಳಸುವ ಮಾರ್ಗವನ್ನು; ಸ್ಥಿರವಾದ ವಾಸಕ್ಕೆ ಮನೆ ಹೇಗೊ ಹಾಗೆ ಧರ್ಮಕ್ಕೆ ದರ್ಶನ …(೧ – ೭೬).

ಗದ್ಯ || ಅಂತು ಬೆಗಡುಗೊಂಡು ನಿಲಲುಂ ನಿತ್ತರಿಸಲುಮಾಱದೆ ಗಾಳಿಗೊಡ್ಡಿದ ಸೊಡರಂತೆ ನಡುಗಿ, ಸೂಳೆಯ ಕೊರಳಂತೆ ಕರ್ಗಿ, ಪಿಡಿವೆತ್ತಕಳ್ಳನಂತೆ ತಲ್ಲಣಿಸಿ, ಬಡಿವೆತ್ತ ಬಂಡವನಂತೆ ಶಕ್ತಿಗೆಟ್ಟು, ಮಟದಬೆಕ್ಕಿನಂತೊಳಗಣ್ಗೋಡಿಯಾಡಿ, ಪಟದಸೀರೆಯಂತಲ್ಲಾಡಿ, ಒಲ್ಲದಪೆಂಡತಿಯಂತೆಸುಯ್ದು, ಮಲ್ಲರೊಳ್ತೊಡರ್ದ ರಂತೆತಳ್ಗಿ, ಗರ್ಭಿಣಿಯಾದ ರಂಡೆಯಂತೆ ಬಾಯಂಬಿಟ್ಟು ಪರ್ವತವೇಱೆಬಿದ್ದಂತೆ ನಿರ್ಜೀವನಾಗಿ, ಪಗಲಚಂದ್ರನಂತೆ ತೇಜಂಗೆಟ್ಟು, ಜಗಳಗಂಟಿಯಂತೆ ಸಿಡಿಮಿಡಿ ಗೊಂಡು, ಕಿಚ್ಚು ತಗುಳ್ದಮರದಂತೆ ನಯಂಗೆಟ್ಟು, ಹೆಚ್ಚುಗೆಟ್ಟ ಬಡವನಂತೆ ಬೆಂಬಿರ್ದು, ದೆಸೆಗೆಟ್ಟರಂತೆ ಚಿಂತಿಸಿ, ಸಿಸುಗೆಟ್ಟರಂತೆ ಮಱುಗಿ, ಹುಣಿಸೆಯ ಕಾಯಂ ತಿಂದರಂತೆ ಚಳಿತು, ಪಣ್ತ ಕಬ್ಬಿನಂತೆ ನೆಲನಂಪತ್ತಿ, ಸೆಱ ಸಿಕ್ಕಿದನಂ ತುಮ್ಮಳಿಸಿ, ನೆಱವಿಲ್ಲದವ ನಂತೆಕುಂದಿ, ಕೂರ್ಪರನಗಲ್ದರಂತೆ ಬೆದೆಬೆದೆಬೆಂದು, ಸರ್ಪನಂ ಮೆಟ್ಟಿದರಂತೆ ಭಯಗೊಂಡು, ಬಂಧನಕ್ಕೆ ಬಂದಾನೆಯಂತೆ ಜೂಕರಿಸಿ, ಬಡವೊಡಲಂತೆಜೋಲ್ದು, ಏರ್ವಡೆದಪಂದೆಯಂತೆ ತಲ್ಲಣಿಸಿ, ಮಾಱುವಡೆಯದ ಪರದನಂತೆಕಂದಿ, ತಣ್ಪೇರಿದಪಱಯಂತೆ ದನಿಪೊಱುಮಡದೆ ಮಣ್ಪತ್ತಿದ ಮೂಲಿಗನಂತೆ ದೂರಿಸಿ, ಬಯಲೊಳಿಕ್ಹಿದ ಮೀನಂತೆಮಿಡುಕಿ, ತಳಾಱನಂತೆ ನಿದ್ರೆಗೆಟ್ಟು, ಸಮ್ಯಕ್ತ್ವಚೂಡಾಮಣಿಗಿಂತೆಂದಂ           (೧ – ೧೬೮)

ಲೌಕಿಕದ ನಿಸ್ಸಾರತೆಯನ್ನು ಹೇಳಲು ಯತ್ನಿಸುತಿದ್ದರೂ ಲೌಕಿಕದ ಚೈತನ್ಯ ತುಂಬಿ ತುಳುಕುತ್ತಿದೆ ಮತ್ತು ಹೆಚ್ಚು ಜೀವಂತಿಕೆಯಿಂದ ತೆರೆದುಕೊಳ್ಳುತ್ತಿದೆ. ಇದರೆದುರು ಧರ್ಮೋಪದೇಶದ ಸಂದರ್ಭಗಳು ನಿಸ್ಸಾರಗೊಂಡಿವೆ.

ಇನ್ನೊಂದೆಡೆ ವ್ಯಕ್ತಿಯ ಪರಿವರ್ತನೆಯ ಬಿಂದುಗಳನ್ನು ಕೂಡ ಕಾಣಿಸುತ್ತಿದೆ. ಸಜ್ಜನರು ಮತ್ತು ನೀಚರು ಬದುಕಿನ ಒಂದು ಘಟ್ಟದಲ್ಲಿ ಮುನಿಗಳಾಗಿ ಹೊಸರೂಪ ಪಡೆಯುತ್ತಿದ್ದಾರೆ. ಇಂಥ ತಿರುವುಗಳು ಇಲ್ಲಿನ ಎಲ್ಲ ಕತೆಗಳಲ್ಲಿವೆ. ಈ ತಿರುವುಗಳ ಕುರಿತು ಜೈನಧರ್ಮಕ್ಕೆ ವಿಶ್ವಾಸವಿದೆ ಎಂಬುದು ಮಹತ್ವದ ಸಂಗತಿ. ಸಂಪತ್ತಿನ ಮೋಹ, ಅಧಿಕಾರದ ದಾಹ, ಕೊಲೆಯ ಸಹವಾಸವನ್ನು ತೊರೆಯುವ ಸಾಹಸವೆ ಇಲ್ಲಿ ‘ಪರಿವರ್ತನೆ’ ಎನಿಸಿದೆ. ಇಂಥ ಕನಸುಗಳನ್ನು ಧರ್ಮಾಮೃತ ದಟ್ಟವಾಗಿ ಕಂಡಿದೆ. ಪರಿವರ್ತನೆಗೊಳಗಾದವರು  ಹೆಚ್ಚಾಗಿ ಅರಸನ ಮಕ್ಕಳು. ಮತಾಂತರಕ್ಕೆ ಅನ್ಯಧರ್ಮದವರನ್ನು, ಪರಿವರ್ತನೆಗೆ ಜೈನಧರ್ಮದವರನ್ನು ಒಳಗುಮಾಡಲಾಗುತ್ತಿದೆ. ಅರಸರ ವಿಷಯದಲ್ಲಿ ವೈರಾಗ್ಯ ನಿರ್ಧಾರದ ಪೂರ್ವಸೂಚನೆಯನ್ನು ಸಾಂಕೇತಿಕವಾಗಿ ಕೊಡಲಾಗಿದೆ. ಇಂಥಲ್ಲಿ ಅವರಿಗೆ ಹೊಳೆಯುತ್ತಿರುವುದೇನೆಂದರೆ;

ಸಿರಿ ಸುರಚಾಪದಂತೆ ಪೊಸಜವ್ವನಮಿದ್ದಿಲ ಬೂದಿಯಂತೆ ಪೆಂ
ಡಿರ ಸುಖಮುಣ್ಮಿಪೊಣ್ಣುವ ಬಯಲ್ದೊಱೆಯಂತೆ ವಿಭೂತಿ ಮಂಜಿನಂ
ತರಸಿನೊಳಾದ ಪೆಂಪಿನ ಮಹೋನ್ನತಿಗಳ್ ಮಳಲೇರಿಯಂತೆ ಮೆಯ್
ದರಿಯ ಮಹೀಜದಂತೆ ಕಿಡಲಲ್ಲದೆ ತಾಂ ಸ್ಥಿರಮೊಗಲಾರ್ಕುಮೇ

ಎಂಬ ವಿಚಾರಗಳು. ಇಂಥ ಆಲೋಚನೆಗಳನ್ನು ಮೀರಲು ಮುನಿತನ ಅವರಿಗೊಂದು ವರವಾಗಿ ಪರಿಣಮಿಸಿದೆ. ಧರ್ಮಾಮೃತ ಲೌಕಿಕ ಜಂಜಾಟವನ್ನು ಕತೆಗಳಲ್ಲಿ ತರುತಿದ್ದರೂ ಅಂತಿಮವಾಗಿ ಅದು ಒಂದು ಆದರ್ಶವನ್ನಾಗಿ ಕಾಣಿಸುತ್ತಿರುವುದು ಮುನಿತನವನ್ನು.

ಲಲಿತಾಂಗ, ಧನ್ವಂತರಿ, ವಿಶ್ವಾನುಲೋಮರಂಥ ದುಷ್ಟರು (೨ನೆಯ ಕತೆ) ಪರಿವರ್ತನೆ ಹೊಂದಿದರೆಂಬ ಸಂಗತಿ ಕತೆಯಲ್ಲಿದೆ. ಕಳ್ಳ, ವಿಟ, ದುಷ್ಟರಿಗೂ ಇರಬಹುದಾದ ಪರಿವರ್ತನೆಯ ಸಾಧ್ಯತೆಯನ್ನು ಹಲವು ಬಾರಿ ಕಾಣಿಸಲಾಗಿದೆ. ಧರ್ಮಾಮೃತದಲ್ಲಿ ಸಾಮಾನ್ಯ ವಾಗಿ ದುರ್ಬಲ ವ್ಯಕ್ತಿತ್ವದವರು ಆರಂಭಕ್ಕೆ ಕಾಣಿಸಿಕೊಂಡು ಕೊನೆಯಲ್ಲಿ ಇವರೆಲ್ಲ ಹೊಸ ಮನುಷ್ಯರಾಗಿ ರೂಪುಗೊಂಡಿದ್ದಾರೆ. ಬೆಸ್ತ ಮತ್ತು ಆತನ ಹೆಂಡತಿ ಘಂಟೆ ತಮ್ಮ ಸತ್ಕಾರ್ಯ ಗಳಿಂದಾಗಿ ಮುಂದಿನ ಜನ್ಮದಲ್ಲಿ ಧನಕೀರ್ತಿ ಮತ್ತು ಶ್ರೀಮತಿಯಾಗಿ ಹುಟ್ಟಿದ್ದಾರೆ. ಮನುಷ್ಯನ ವಿಕಾಸವನ್ನು ಹೇಳುವಾಗ ಅಪರೂಪಕ್ಕೆಂಬಂತೆ ಕೃತಿ ಜಾತಿ – ಮತವನ್ನು ಮೀರಿದೆ.

ಪರಿವರ್ತನೆಯ ಹೊತ್ತಿನಲ್ಲಿ ದೇಹದಂಡನೆಗೊಳಗಾಗುವ ಚಿತ್ರಣ ಕೆಲವು ಕಡೆಯಿದೆ. ದೇಹದ ಚೈತನ್ಯವನ್ನು ಬೇರೊಂದು ರೀತಿಯಲ್ಲಿ ಗ್ರಹಿಸುವ ಪ್ರಯತ್ನವನ್ನು ಜೈನಕೃತಿಗಳು ಮೊದಲಿನಿಂದಲೂ ಮಾಡಿಕೊಂಡು ಬಂದಿವೆ. ವಾಸನೆಂಬ ದೇವನು (೪ನೆಯ ಕತೆ) ದೇವೇಂದ್ರನ ಮಾತಿಗೆ ಅಚ್ಚರಿಪಟ್ಟು ರಾಣಿಪ್ರಭಾವತಿ ಮತ್ತು ಅರಸ ಒದ್ದಾಯನನನ್ನು ಪರೀಕ್ಷಿಸಲು ವಿಕಾರವಾದ ಋಷಿವೇಷ ಧರಿಸಿ ರೌರವಪುರಕ್ಕೆ ಬಂದಿದ್ದಾನೆ. ಆತನ ಅಸಹ್ಯ ರೂಪವನ್ನು ಕಂಡು ಬೇಸರಿಸದೆ ದೊರೆ ಮತ್ತು ಆತನ ಹೆಂಡತಿ ಋಷಿಯನ್ನು ಗೌರವದಿಂದ ನೋಡಿಕೊಂಡಿದ್ದಾರೆ. ದೇಹದ ವಿಕಾರವನ್ನು ಗುಣಾತ್ಮಕವಾಗಿ ಕಾಣುವ ಮನೋಧರ್ಮ ಕೃತಿಯಲ್ಲಿದೆ. ದೇಹದ ವಿಕಾರ ಸಹ್ಯವೆಂದು ಸಾರುವ ಕತೆಗಳು ಆತ್ಮದ ವಿಕಾರವನ್ನು ಟೀಕಿಸಿವೆ. ಜೊತೆಗೆ, ಮನಸ್ಸಿನ ದೃಢತೆ, ಆತ್ಮಹಿತ, ಚಿತ್ತದ ಉನ್ನತಿ, ಅಂತರಂಗ ಬಹಿರಂಗಗಳಲ್ಲಿರ ಬೇಕಾದ ಸಾಮ್ಯತೆ ಪರಿವರ್ತನೆಯ ಸಂದರ್ಭದಲ್ಲಿ ಚರ್ಚೆಗೊಳಪಟ್ಟಿವೆ.

ಸಂಸಾರ ಮತ್ತು ವೈರಾಗ್ಯ, ಅಧಿಕಾರ ಮತ್ತು ತಪಸ್ಸು ಇವುಗಳ ಮುಖಾಮುಖಿ ಪರಿವರ್ತನೆಯ ಘಟ್ಟದಲ್ಲಿ ತೀವ್ರಗೊಳ್ಳುತ್ತಿದೆ. ಇಂಥದರಲ್ಲಿ ಧರ್ಮದ ಆಶಯಗಳಿಗೆ ಅಂತಿಮವಾಗಿ ಜಯ ದೊರೆತರೂ ಮನಸ್ಸಿನ ಹೊಯ್ದಾಟ ಮಾತ್ರ ಅನುರಣಿಸುತ್ತಲೇ ಇದೆ. ಖೇಚರಾಜ (೫ನೆಯ ಕತೆ) ಸಕಲರಾಜ್ಯ, ವೈಭೋಗವನ್ನು ತೊರೆದು ಪಾಂಡ್ಯದೇಶದ ದಕ್ಷಿಣ ಮಧುರೆಗೆ ಬಂದು ಪಟ್ಟಣದೊಳಗೆ ಪ್ರವೇಶಿಸಿದಾಗ ಕಡುರಮ್ಯವಾದ ನಿರ್ಮಲ ಜಿನಾಲಯಗಳ ಸೊಗಸನ್ನು ಕಾಣುತ್ತಿದ್ದಾನೆ. ಜೊತೆಗೆ ಸುಂದರ ಹೆಂಗಸರು ಜಿನಾಲಯಗಳಿಗೆ ತೆರಳುವುದನ್ನು; ಚಂಚಲವಾದ ವಿಶಾಲನೇತ್ರಗಳ ಬಿಳುಪು, ಕುರುಳುಗಳ ಚೆಲುವು, ಆಭರಣಗಳ ಬೆಡಗು, ತೆಳುಹೊಟ್ಟೆಯ ರೀತಿ, ಮೊಲೆಗಳ ತೋರಿಕೆ ಆಕರ್ಷಕವಾಗಿರಲು ವಿಟರನ್ನು ಸೋಲಿಸಲು ಮನ್ಮಥನು ದಾಳಿ ಬರುವ ಹಾಗೆ ಪರಮಜಿನನ ಮಂದಿರಕ್ಕೆ ಬರುತಿದ್ದ ಸೊಗಸುಗಾತಿಯರನ್ನು ಖೇಚರರಾಜನು ನೋಡಿದನು (೫ – ೪೮). ಎಲ್ಲವನ್ನು ತೊರೆಯುವ ನಿರ್ಧಾರ ಮಾಡಿ ಬಂದ ಮೇಲೂ ವಿಳಾಸಿನಿಯರು ಅವನ ಮನವನ್ನು ಮೀಟುತ್ತಿದ್ದಾರೆ. ರಾಜನು ನೋಡುತ್ತಿರುವುದು ಜಿನಮಂದಿರ, ಆದರೆ ಅವನನ್ನು ಸೆಳೆಯುತ್ತಿರುವುದು ಜಿನಮಂದಿರದಾಚೆಯ ಸೊಬಗು, ಸಂಭ್ರಮ, ವೈಯ್ಯಾರ. ಜಿನಮಂದಿರದ ಮೂಲಕ ಬದುಕಿನ ವೈರಾಗ್ಯ ಹಾಗೂ ಹೊರಗಿನ ವಾತಾವರಣದ ಮೂಲಕ ಬದುಕಿನ ಸಂಭ್ರಮವನ್ನು ಒಟ್ಟೊಟ್ಟಿಗೆ ಇಡಲಾಗಿದೆ. ಹೀಗೆ ಇಡುವುದು ಜೈನಕಾವ್ಯಗಳು ಎಂದಿನಿಂದಲೂ ಅನುಸರಿಸಿಕೊಂಡು ಬಂದ ವಿಧಾನ. ಬದುಕಿನ ಸಂಭ್ರವನ್ನು ಹೇಳುತ್ತಲೇ ಈ ಸಂಭ್ರಮವನ್ನು ನೀರಗುಳ್ಳೆಯಂತೆ ಒಡೆದು ವೈರಾಗ್ಯದತ್ತ ಮುಖಮಾಡಿಸಿವೆ.

ಪುರುಷಪ್ರಧಾನವಾದ ದೃಷ್ಟಿಕೋನ ಇಲ್ಲಿನ ಮಹಿಳೆಯರನ್ನು ಸೃಷ್ಟಿಸಿದೆ. ಇಂಥದ್ದರ ನಡುವೆಯೂ ಮಹಿಳೆಯರ ಪಾತ್ರಗಳು ಬೆಳೆದು ನಿಂತಿರುವುದೊಂದು ವಿಶೇಷ. ಧರ್ಮದ ವೃತ್ತದಲ್ಲಿ ನಡೆಯುವ ಮನುಷ್ಯನ ವಿಕಾಸದ ಸಾಧ್ಯತೆಗಳನ್ನು ಮಹಿಳೆಯರಿಗೂ ತೆರೆದಿಡ ಲಾಗಿದೆ. ಇಲ್ಲಿನ ಹಲವಾರು ಮಹಿಳೆಯರು ತಮ್ಮ ಸನ್ನಡತೆ ಮತ್ತು ಸಜ್ಜನಿಕೆಯಿಂದ ಗಂಡಸ ರಂತೆ ಮಿಗಿಲಾದ ಸ್ಥಾನ ಪಡೆದಿದ್ದಾರೆ. ಅನಂತಮತಿ (೩ನೆಯ ಕತೆ), ಶೀಲವತಿ (೪ನೆಯ ಕತೆ), ರೇವತಿದೇವಿ (೫ನೆಯ ಕತೆ), ಚಂದ್ರಲೇಖೆ (೧೩ನೆಯ ಕತೆ) ತಮ್ಮ ತಪಸ್ಸಾಧನೆಯಿಂದ ಪೂಜ್ಯಸ್ಥಾನ ಪಡೆದಿದ್ದಾರೆ. ಅನಂತಮತಿ ಆಕಸ್ಮಿಕವಾಗಿ ಜಿನದೀಕ್ಷೆ ಪಡೆದವಳು. ನಂತರದಲ್ಲಿ ವಿದ್ಯಾಧರನಿಂದ, ಬೇಡರಸನಿಂದ, ಕುಂಟಿಣಿಯೊಬ್ಬಳಿಂದ ತೊಂದರೆಗೊಳಗಾದರೂ ಜಿನವ್ರತ ಗಳನ್ನು ಬಿಟ್ಟಿಲ್ಲ. ಅವಳ ದೃಢತೆ ಅವಳನ್ನು ಕಾಪಾಡಿದೆ. ಶೀಲವತಿ ಮುನಿಯ ದೇಹದ ರೋಗವನ್ನು ಕಂಡು ಅಸಹ್ಯಪಡದೆ ಸೇವೆ ಮಾಡಿದ್ದಾಳೆ. ರೇವತಿದೇವಿ ಹಲವು ಪರೀಕ್ಷೆಗಳನ್ನು ಗೆದ್ದು ಬಂದಿದ್ದಾಳೆ. ಚಂದ್ರಲೇಖೆ ಅನೇಕ ಅಪಾಯಗಳನ್ನು ದಾಟಿ ಜಿನೇಂದ್ರನಲ್ಲಿ ಮನಸ್ಸು ನೆಟ್ಟಿದ್ದಾಳೆ. ಬ್ರಾಹ್ಮಣಳಾದ ಯಜ್ಞದತ್ತೆ ಗರ್ಭಿಣಿಯಾಗಿದ್ದಾಗ ಜಿನಸೇವೆ ಮಾಡುವ ಬಯಕೆ ವ್ಯಕ್ತಪಡಿಸಿದ್ದಾಳೆ. ಧಾರ್ಮಿಕ ವೃತ್ತದಾಚೆ ಇರುವ ಮಹಿಳೆಯರ ಪಾತ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಹೆಣ್ಣಿನ ವ್ಯಕ್ತಿತ್ವ ಚಿತ್ರಿಸುವಾಗ ಆಕೆಯ ಧಾರ್ಮಿಕ ಪ್ರವೃತ್ತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹೆಣ್ಣಿನ ಬೆಳವಣಿಗೆಯೆಂದರೆ ಅವಳ ಧಾರ್ಮಿಕ ಭಾವನೆಗಳ ಗಟ್ಟಿಗೊಳ್ಳುವಿಕೆ ಎಂಬ ಅರ್ಥ ಮುನ್ನೆಲೆಗೆ ಬಂದಿದೆ;

ದರುಶನಮಿಲ್ಲದ ಪೆಂಡಿರ
ವರಭೋಗಂ ನರಕಗತಿಯ ಪೆರ್ಬಟ್ಟೆ ಮಹಾ
ದುರಿತದ ನೆಲೆ ದುರ್ಗುಣದಾ
ಗರಮದದಿಂದಡಸಿ ಪೊಯ್ಬಪೆರ್ಬುಲಿಯ ನಖಂ
(೧೦ – ೭೧)

ಒದವಿದ ಧರ್ಮಬುದ್ದಿ ತನಗಿಲ್ಲದ ಗಂಡನ ಮಾತನೊಲ್ದು ಕೇ
ಳದ ಜಿನಪಾದಮಂ ನೆನೆದು ಪೂಜಿಸಿ ನೋಡುವ ಚಿತ್ತವೃತ್ತಿಯಿ
ಲ್ಲದ ಮುನಿಗನ್ನಮಂ ಕುಡುವುದಾರತೆಯಿಲ್ಲದ ನಿರ್ಮಳಿಕ್ಕೆಯಿ
ಲ್ಲದ ಮುನಿಭಕ್ತಿಯಿಲ್ಲದ ಕುಲಾಂಗನೆಯೇಂ ಸತಿಯೆಂಬ ಲೆಕ್ಕಮೇ
(೧೦ – ೭೨)

ಇಲ್ಲಿ ದರುಶನವೆಂದರೆ ಜೈನದರುಶನವೆಂದರ್ಥ. ‘ಸತಿ’ಯ ಕುರಿತು ಈ ಧೋರಣೆ ಪುರುಷ ಪ್ರಧಾನ ಮನಸ್ಸಿನದು. ಹೆಣ್ಣಿನ ಪತಿವ್ರತಾ ಭಕ್ತಿ ಮತ್ತು ಜಿನಭಕ್ತಿಯನ್ನು ವೈಭವೀಕರಿಸ ಲಾಗಿದೆ. ಇವೆರಡು ಇಲ್ಲದವಳನ್ನು ಕಟುವಾಗಿ ಟೀಕಿಸುವ ನೂರಾರು ಪದ್ಯಗಳು ಕೃತಿಯೊಳಗೆ ಚೆಲ್ಲಿಕೊಂಡಿವೆ. ನಯಸೇನ ತನ್ನ ಧಾರ್ಮಿಕ ಉದ್ದೇಶಕ್ಕಾಗಿ ಹೆಣ್ಣನ್ನು ಉಪಯೋಗಿಸಿ ಕೊಳ್ಳುತಿದ್ದಾನೆಯೇ ಹೊರತು ಅವಳ ನಿಜವಾದ ವ್ಯಕ್ತಿತ್ವವನ್ನು ಅರಿಯಲು ಯತ್ನಿಸುತ್ತಿಲ್ಲ.

ಇದಕ್ಕಾಗಿ ಹೆಣ್ಣು ಮತ್ತು ಗಂಡನ್ನು ಇದಿರಾಗಿಸುವ ಸನ್ನಿವೇಶಗಳನ್ನು ಗಮನಿಸಬೇಕು. ಮುಖ್ಯವಾಗಿ ಅನಂತಮತಿ ವಿದ್ಯಾಧರ ಅರಸ, ಬೇಡರಸನ ಕಣ್ಣಿಗೆ ಬಿದ್ದಿದ್ದಾಳೆ. ಸುಬಂಧುಶ್ರೀ (೧೦ನೆಯ ಕತೆ) ವಿಶ್ವಂಧರ ಮಹಾರಾಜನ ವಿರಹದ ಯಾತನೆಗೆ ಕಾರಣಗಳಾಗಿದ್ದಾಳೆ. ಇಲ್ಲೆಲ್ಲ ಅಂತಿಮವಾಗಿ ಜಿನಧರ್ಮದ ಆಶಯಗಳಿಗೆ ಜಯ ಲಭಿಸಿದೆ.

ಪುರುಷಪ್ರಧಾನ ದೃಷ್ಟಿಕೋನವೊಂದು ಇಲ್ಲಿ ದಟ್ಟವಾಗಿದೆಯೆಂದು ಈ ಹಿಂದೆ ಹೇಳಿದೆ ನಷ್ಟೆ. ವಾರಿಷೇಣನ (೭ನೆಯ ಕತೆ) ವಿವಿಧ ಹೆಂಡತಿಯರ ವರ್ಣನೆಯಲ್ಲಿ ಇದು ಸ್ಪಷ್ಟವಾಗಿ ಒಡಮೂಡಿದೆ; ತನಗೆ ಲಭಿಸಿದ ಬಿರುದಿನಿಂದ ಇತರ ಶ್ರೇಷ್ಠರಾದ ವೀರರನ್ನು ಬೆಂಡಿನಂತೆ ನಿಸ್ಸಾರರನ್ನಾಗಿ ಮಾಡಿ ವಿಜಯವನ್ನು ಗಳಿಸಿದ ಮನ್ಮಥನ ವಿಜಯಗಜದ ದಂತಗಳನ್ನೇ ಹೋಲುತ್ತಿದ್ದವು – ಒಬ್ಬಾಕೆಯ ಎರಡು ಸ್ತನಗಳು. ಬೇರೆಯವನು ತನ್ನ ಬಿರುದನ್ನು ಅಪಹರಿಸಿದರೆ ಅವನನ್ನು ಕೆಡಿಸುವೆಂಬ ಪ್ರತಿಜ್ಞೆಯಿಂದ ಮನ್ಮಥನು ಹಿಡಿದಿದ್ದ ಗುರಾಣಿ ಯೆಂಬಂತೆ ಒಬ್ಬ ಕಮಲಮುಖಿಯ ಮೊಲೆಗಳು ತೋರುತಿದ್ದವು (೭ – ೧೯೩,೧೯೪). ಯುದ್ಧದ ಸಲಕಣೆಗಳು ಮತ್ತು ಪ್ರಭುತ್ವವನ್ನು ಸೂಚಿಸುವ ಅಂಶಗಳು ಹೆಣ್ಣಿನ ವರ್ಣನೆ ಯಲ್ಲಿ ಬಳಕೆಯಾಗಿವೆ. ಯಾವುದನ್ನು ಅಂತಿಮವಾಗಿ ಬಿಡಲು ಕಾವ್ಯ ಹೇಳುತ್ತಿದೆಯೊ ಅವೇ ಸಂಗತಿಗಳು ಕಾವ್ಯದ ಸಂದರ್ಭಗಳನ್ನು ಕಟ್ಟುತ್ತಿದೆ.

ಜಿನಭಕ್ತಿಯುಳ್ಳ ಮಹಿಳೆಯರು ಒಂದೆಡೆಯಾದರೆ, ವೇಶ್ಯೆಯರು ಇನ್ನೊಂದೆಡೆ ಇದ್ದಾರೆ. ಜಿನವ್ರತಗಳನ್ನು ಜೀವನ್ಮರಣದ ಪ್ರಶ್ನೆಯಾಗಿ ಭಾವಿಸುವವರನ್ನೂ ಹಾಗೂ ಯಾವ ನಿರ್ಬಂಧ ಗಳಿಲ್ಲದ ಸ್ವಚ್ಛಂದ ಬದುಕು ನಡೆಸುವವರನ್ನೂ ಧರ್ಮಾಮೃತ ಒಟ್ಟಿಗೆ ಇಟ್ಟಿದೆ. ಯಾವ ವೇಶ್ಯೆ ಕೂಡ ಜಿನಪದವಿಗೇರುವುದಿಲ್ಲವೆಂಬುದು ಗಮನಿಸಬೇಕಾದ ಸಂಗತಿ. ಇಲ್ಲಿ ಮತ್ತೆ ಪ್ರತಿಷ್ಠಿತವರ್ಗದ ಹೆಂಗಸರು ಹೆಚ್ಚಿನ ಮನ್ನಣೆಗೆ ಒಳಗಾಗುತ್ತಿದ್ದಾರೆ. ಅನಂಗಸೌಂದರಿ (೨ನೆಯ ಕತೆ) ಎಂಬ ಸೂಳೆ ಲಲಿತಾಂಗನನ್ನು ಹಾಸಿಗೆಯ ಮೇಲಿಂದ ಕೆಳಗೆ ಬೀಳುವಂತೆ ಒದ್ದು, ಕೈಕಾಲುಗಳು ಮೂಟ್ಟೆಗಟ್ಟುವಂತೆ ಹೊಡೆದು, ಕೋಪದಿಂದ ದಂತದ ಪಾದುಕೆಯಿಂದ ಬಾರಿಸಿದ್ದಾಳೆ. ಲಲಿತಾಂಗನ ಬದುಕಿನಲ್ಲಿ ಇವಳಿಂದಾಗೆ ಒಂದು ಆಕಸ್ಮಿಕ ತಿರುವು ಬಂದಿದೆ. ಧನಕೀರ್ತಿಯ (೧೦ನೆಯ ಕತೆ) ಪ್ರಾಣ ವೇಶ್ಯೆಯೊಬ್ಬಳಿಂದ ಉಳಿದಿದೆ. ಇವರ ವೃತ್ತಿಧರ್ಮ ಮತ್ತು ದೌರ್ಬಲ್ಯಗಳನ್ನು ಕೃತಿ ಚೈತನ್ಯಪೂರ್ಣವಾಗಿ ಹಿಡಿದಿದೆಯಾದರೂ ಧರ್ಮದ ಕೋಟೆಯೊಳಗೆ ಪ್ರವೇಶವನ್ನು ತಡೆಹಿಡಿದಿದೆ.

ಧರ್ಮಾಮೃತದಲ್ಲಿ ಪ್ರಾಣಿ ಮತ್ತು ಜಗತ್ತಿನ ಅಸಂಖ್ಯಾತ ವಿವರಗಳಿವೆ. ಮನುಷ್ಯ ಜಗತ್ತಿನ ಜೊತೆಗೆ ಇವೆರಡು ಜಗತ್ತನ್ನು ಕಥನಕಾರ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾನೆ. ಅವುಗಳ ರೂಪ ಸ್ವಭಾವವನ್ನು ವ್ಯಕ್ತಿಗಳಿಗೆ ಹೋಲಿಸಿದ್ದಾನೆ. ಕೆಲವೊಮ್ಮೆ ಅಪರೂಪಕ್ಕೆ ಪಾತ್ರಗಳಾಗಿ ಕೂಡ ಬಂದಿದೆ. ಮೀನೊಂದು (೧೦ನೆಯ ಕತೆ) ಮರುಜನ್ಮದಲ್ಲಿ ಸೂಳೆಯಾಗಿ ಹುಟ್ಟಿದೆ. ತನ್ನ ಕೃತ್ಯದಿಂದ ಹೆಬ್ಬಾವಾಗಿ ಹುಟ್ಟಿದ ಉಪರಿಚರ ಮಹಾರಾಜ ನಂತರ ವಿಮಳನೆಂಬ ದೇವನಾಗಿ ಜನ್ಮಪಡೆದಿದ್ದಾನೆ. ಧರ್ಮಾಮೃತ ತಾನು ಬದುಕುತ್ತಿರುವ ಕಾಲದ ಮೂರೂ ಬಿಂದುಗಳನ್ನು ಸಂಧಿಸಿದೆ. ಇದೆಲ್ಲ ದೇಸಿ ಮನಸ್ಸಿನ ಸೃಷ್ಟಿಶೀಲತೆಯ ವಿಧಾನ ಎಂಬುದನ್ನು ಬಿಡಿಸಿಹೇಳಬೇಕಾಗಿಲ್ಲ.

ನಯಸೇನ ಕಾವ್ಯರಚನೆಯಲ್ಲಿ ಮೌಖಿಕ ಪರಂಪರೆಯ ದ್ರವ್ಯಗಳನ್ನು ಅನುಸರಿಸಿದ್ದಾನೆ. ದೀರ್ಘವಾದ ವಿವರಣೆಗಳು, ಸಮುದಾಯದ ನಂಬಿಕೆಗಳು, ಕೃತಿಯಾಚೆ ಉಳಿದ ಪಾಂಡಿತ್ಯ, ಸಹಜ ನಿರೂಪಣೆ, ಧಾರ್ಮಿಕ ಆಶಯಗಳನ್ನು ಮೀರಿ ನಿಂತ ಸಂಗತಿಗಳು, ಗಾದೆ – ನಾಣ್ಣುಡಿಗಳಿ ಗೊದಗಿದ ಗರಿಷ್ಠ ಅವಕಾಶ, ಪ್ರಾಣಿ – ಪಕ್ಷಿ – ಸಸ್ಯವರ್ಗಗಳು ಕತೆಯ ಆವರಣದಲ್ಲಿ ಒದಗಿ ಬಂದದ್ದು – ಇವೆಲ್ಲ ಗಮನಿಸಿದರೆ ನಯಸೇನನ ಮನಸ್ಸು ಯಾವ ನೆಲೆಯಿಂದ ಆಕರ್ಷಿತ ಗೊಂಡಿದೆಯೆಂಬುದು ತಿಳಿಯುತ್ತದೆ. ತಾನು ಬಳಸುವ ಭಾಷೆ ಮತ್ತು ಬದುಕುವ ನೆಲದಲ್ಲಿ ಬೇರುಮಟ್ಟದ ಸಂಬಂಧ ಹೊಂದಿರುವ ಕವಿಗೆ ಇದೆಲ್ಲ ಅನಿವಾರ್ಯವೇನೊ. ನಯಸೇನನ ಕಾವ್ಯಭಾಷೆಯಲ್ಲಿ ರೂಪಕಗಳು ಇಲ್ಲವೆನ್ನುವಷ್ಟರ ಮಟ್ಟಿಗೆ ಕಡಿಮೆ. ಒಂದರ್ಥದಲ್ಲಿ ಪಾತ್ರಗಳೆ ರೂಪಕಗಳು. ಬದುಕಿನ ಮೂಲಭೂತ ಪ್ರವೃತ್ತಿಗಳನ್ನು ಸಾಧ್ಯತೆಗಳನ್ನು ಬಿಂಬಿಸುವ ರೂಪಕಗಳಿವು. ಪಾತ್ರಗಳೇ ರೂಪಕಗಳಾದಾಗ ಕಾವ್ಯಭಾಷೆಯ ಶಕ್ತಿ ಕುಂದುತ್ತದೆ. ಧರ್ಮಾ ಮೃತದ ಭಾಷೆಗೆ ಈ ಅಪಾಯವಿದೆ. ಅದು ಎಷ್ಟೇ ಲೀಲಾಜಾಲವಾಗಿ ಹರಿದರೂ ಮನಸ್ಸಿನಲ್ಲಿ ನಿಲ್ಲದೆ ಓಡುತ್ತಿದೆ.

ಅವನ ಈ ದೇಸಿ ತಿಳಿವಳಿಕೆಯಲ್ಲಿ ಬಿಕ್ಕಟ್ಟುಗಳು ಕೂಡ ಇವೆ. ಅತಿಯಾದ ಧಾರ್ಮಿಕದೃಷ್ಟಿ ಇಲ್ಲಿನ ದೇಸಿಗೆ ಮಿತಿ ಕಲ್ಪಿಸಿದೆ. ಆತನ ದೇಸಿ ತಿಳಿವಳಿಕೆಯೆಲ್ಲ ಧರ್ಮಪ್ರಚಾರದ ಸರಕಾಗು ತ್ತಿದೆಯೆ ಎಂಬ ಅನುಮಾನವೂ ಕೆಲವೊಮ್ಮೆ ಬರುವುದುಂಟು. ಜೈನಧರ್ಮದ ಪ್ರಚಾರಕ್ಕೆ ಹತ್ತು ಹಲವು ದಾರಿಗಳನ್ನು ಹುಡುಕುವ ಆತ ಪ್ರತಿಷ್ಠಿತರನ್ನು ಸೆಳೆಯುವ ತಂತ್ರಗಳನ್ನು ಗಮನಿಸಬೇಕು. ನಯಸೇನ ಹೇಳುತ್ತಿರುವುದು ಪ್ರತಿಷ್ಠಿತರ ಕತೆ. ಆದರೆ ಅಲ್ಲಿ ಸಮೃದ್ಧವಾಗಿ ಕಾಣಿಸಿಕೊಳ್ಳುತ್ತಿರುವ ವಿವರಗಳು ಅಪ್ರತಿಷ್ಠಿತ ವರ್ಗದವು. (ಅನ್ನ ತೃಪ್ತಿಯನ್ನುಂಟುಮಾಡಿದ ಹಾಗೆ ಬಾಡು ಮಾಡುತ್ತದೆಯೆ? ೧೧ – ೧೮೮). ಅವನ ದೇಸಿ ಗ್ರಹಿಕೆಯಲ್ಲಿ ಬಿರುಕು ಮೂಡಿದ್ದು ಬಹುಶಃ ಈ ಇಕ್ಕಟ್ಟಿನಿಂದಲೇ ಇರಬಹುದು. ಅವನ ಗುರಿ ಒಂದೆಡೆಯಾದರೆ ಗುರಿ ಸಾಧನೆಗಾಗಿ ದುಡಿಯುತ್ತಿರುವ ಸಂಗತಿಗಳು ಬೇರೊಂದು ನೆಲೆಯವು. ಗುರು ಮತ್ತು ದಾರಿಯ ನಡುವಿನ ವೈರುಧ್ಯ ದೇಸಿ ಘನತೆಗೆ ಅಡ್ಡಿಯಾಗಿದೆ. ನೋಡಿ, ಇಲ್ಲಿನ ಕೇಂದ್ರಪಾತ್ರಗಳು ದೇವಲೋಕದ ಸುಖವನ್ನು ಸ್ಮರಿಸಿಕೊಂಡು ಭೂಲೋಕದ ಸುಖವನ್ನು ಬಿಟ್ಟುಕೊಟ್ಟಿವೆ. ಈ ಪಲ್ಲಟದಲ್ಲಿ ‘ಸ್ಥಾನ’ದ ಬದಲಾವಣೆ ಇದೆಯೆ ಹೊರತು ‘ಸ್ಥಿತಿ’ಯ ಬದಲಾವಣೆ ಅಲ್ಲ. ದೇವಲೋಕದಲ್ಲಿ ಅವರಿಗೆ ಲಭ್ಯವಾಗುತ್ತಿರುವುದು ಸಾಗರೋಪಮಕಾಲದ ಸುಖ, ಸಂಪತ್ತಿನಿಂದ ಕೂಡಿದ ದೇವಾಂಗನೆಯರೊಂದಿಗಿನ ಬದುಕು. ದಟ್ಟಡವಿಯಲ್ಲಿ ಸುವೇಗನೆಂಬ ಪಾಪಿಷ್ಠನಿದ್ದು ಅವನು ದ್ರೋಣರ ಮೂರ್ತಿಯನ್ನು ಇಟ್ಟುಕೊಂಡು ಅಭ್ಯಾಸಮಾಡಿ ಪರಿಣತ ನಾದ ವಿವರ ಹದಿಮೂರನೆಯ ಕತೆಯಲ್ಲಿದೆ. ಈ ಘಟನೆ ಏಕಲವ್ಯನನ್ನು ನೆನಪಿಗೆ ತರುತ್ತಿದೆ. ಇಲ್ಲಿ ಸುವೇಗ ಹೆಣ್ಣಿನ ಪ್ರೀತಿ – ವ್ಯಾಮೊಹಕ್ಕೆ ಬಲಿಯಾಗಿದ್ದಾನೆ. ಅವನೊಬ್ಬ ದುಷ್ಟನಾಗಿ ಕಂಗೊಳಿಸಿದ್ದಾನೆ. ಸಮುದಾಯದ ಒಂದು ಶ್ರೇಷ್ಠ ರೂಪಕವನ್ನು ಕೃತಿ ಯಾಕಾಗಿ ಒಡೆಯು ತ್ತಿದೆ? ಕಠಿಣ ವ್ರತಗಳನ್ನು, ವ್ಯಕ್ತಿವಿಶಿಷ್ಟತೆಯನ್ನು ಹೇಳುವ ಧರ್ಮಾಮೃತ ಅದೇ ಕಾರ್ಯ ಸುವೇಗನಿಂದ ನಡೆದದ್ದನ್ನು ವಕ್ರಗಣ್ಣಿನಿಂದ ಯಾಕೆ ಕಾಣುತ್ತಿದೆ? ಇಂಥಲ್ಲೆಲ್ಲ ನಯಸೇನನ ದೇಸಿಪ್ರಜ್ಞೆಯನ್ನು ಪ್ರಶ್ನಿಸಬೇಕೆನಿಸುತ್ತದೆ.

ಇಲ್ಲಿಯ ಕತೆಗಳು ವ್ಯಕ್ತಿವಿಶಿಷ್ಟವಾದವುಗಳು. ವ್ಯಕ್ತಿಯ ವೈಯಕ್ತಿಕ ಬೆಳವಣಿಗೆಯಲ್ಲಿ ನಂಬಿಕೆ ತಾಳಿವೆ. ಇಂಥ ಬೆಳವಣಿಗೆ ಲೋಕದೊಂದಿಗಿನ ಸಂಬಂಧ ಕಡಿದುಹೋದಾಗ ಲಭ್ಯವಾಗತ್ತದೆಂಬ ಧೋರಣೆ ಮುನ್ನೆಲೆಗೆ ಬಂದಿದೆ. ಸಂಸಾರ, ಸಮಾಜಗಳೆಲ್ಲ ಬದಿಗೆ ಸರಿಸಲ್ಪಟ್ಟಿವೆ. ದೇವಗತಿ ಪಡೆಯುವುದು ಪರಮಮೌಲ್ಯವಾಗಿ ಕಾಣಿಸಿಕೊಂಡಿದೆ. ವೈರಾಗ್ಯ – ತಪಸ್ಸು – ದೇವಗತಿ ಇಲ್ಲಿನ ಕತೆಗಳಲ್ಲಿ ಸಾಮಾನ್ಯವಾಗಿರುವ ಸಂಗತಿಗಳು. ವಾರಿಷೇಣ ಮತ್ತು ಪುಷ್ಪದಾಡರ ಕತೆ (೭ನೆಯ ಕತೆ) ಇದಕ್ಕೆ ದೊಡ್ಡ ನಿದರ್ಶನ. ಲೌಕಿಕವನ್ನು ಗೆಲ್ಲುವುದೆಂದರೆ ಅದನ್ನು ತೊರೆದು ಹೋಗುವುದೇ ಆಗಿದೆ. ಧಾರ್ಮಿಕ ಆವರಣದಲ್ಲಿ ಬದುಕನ್ನು ಕಾವ್ಯ ಕಂಡರಿಸುತ್ತಿದೆಯೇ ಹೊರತು ಬದುಕಿನ ಆವರಣದಲ್ಲಿ ಧರ್ಮವನ್ನು ಅರಿಯುತ್ತಿಲ್ಲ. ಧರ್ಮದ ಆಗಸದಲ್ಲಿ ಬದುಕು ಒಂದು ಸಣ್ಣ ಚಿಕ್ಕೆಯಾಗಿದೆ. ನಯಸೇನನ ಈ ದೃಷ್ಟಿಕೋನ ಇಲ್ಲಿಯ ಕತೆಗಳು ಸ್ವರೂಪವನ್ನು ನಿರ್ಧರಿಸಿದೆ. ಇದರಿಂದಾಗಿ ಒಂದು ತರಹದ ತೊಳಲಾಟ ದಲ್ಲಿ ಕಥನಕಾರ ಇದ್ದಾನೆ. ತೀರಾ ಕಠಿಣವಾದ ವೈರಾಗ್ಯ, ದೇಹದಂಡನೆ, ಅಹಿಂಸೆ, ತಪಸ್ಸು ಇವುಗಳನ್ನು ಹೇಳಹೊರಟಿದ್ದಾನೆ. ಬಹುಪಾಲು ಜನರೆಲ್ಲ ಇದಕ್ಕೆ ಹೊರತಾಗಿಯೆ ಬದುಕನ್ನು ಕಟ್ಟಿಕೊಳ್ಳುವವರು. ಹಾಗಾದರೆ ಜನರನ್ನು ತಲುಪುವುದು ಹೇಗೆ? ಒಂದು ವೇಳೆ ಇವೆಲ್ಲವು ಗಳನ್ನು ಹೊರತುಪಡಿಸಿದರೆ ಜಿನಧರ್ಮಕ್ಕೆ ಅಸ್ತಿತ್ವವಿಲ್ಲ. ಇವೆಲ್ಲವುಗಳ ನಂತರದ ಸ್ಥಿತಿ ಯೇನು ಎಂದರೆ ದೇವಗತಿ ಪಡೆಯುವುದು ಎಂದು ಮುಗುಮ್ಮಾಗಿ ಹೇಳುತ್ತಿದ್ದಾನೆ. ತನ್ನ ಧರ್ಮಕ್ಕೆ ಲೌಕಿಕದ ಸಾಧ್ಯತೆಗಳನ್ನು ಕಾಣಿಸುವುದು ಕಥನಕಾರನಿಗೆ ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ನಯಸೇನನೊಳಗೆ ಧರ್ಮಪ್ರಚಾರಕನ ಗುಣಗಳು ಅಧಿಕವಾಗಿವೆಯೆ ಹೊರತು ಧರ್ಮಶೋಧಕನ ಗುಣಗಳಲ್ಲ. ಪಂಪನಂಥ ಕವಿ ಧರ್ಮವನ್ನು ತಾನು ಮೀರಬಯಸುವ ಒಂದು ಮಾನದಂಡವಾಗಿ ಬಳಸಿದರೆ, ನಯಸೇನ ಅದನ್ನು ತಾನು ಚಲಿಸುವ ಜಾಗದ ಸುತ್ತ ಒಂದು ವೃತ್ತವಾಗಿ ಎಳೆದುಕೊಂಡಿದ್ದಾನೆ.

ನಯಸೇನನಲ್ಲಿ ಕಾಣಿಸಿಕೊಂಡ ವಿವರಗಳು ಮುಂದೆ ವಚನಗಳಲ್ಲಿ ತಾಳುವ ರೂಪ ಗಮನಿಸಿದರೆ ನಯಸೇನನ ದೇಸಿ ಸಂವೇದನೆ ಎಲ್ಲಿ ಎಡವಿದೆ ಎಂಬುದು ತಿಳಿಯುತ್ತದೆ. ವಚನಕಾರರು ಮುಖ್ಯವಾಗಿ ಸಾಮಾಜಿಕ ಹಾಗೂ ನೈತಿಕ ಹುಡುಕಾಟಕ್ಕೆ ಈ ವಿವರ ಬಳಸಿ ಕೊಂಡರು. ಧಾರ್ಮಿಕವಾದಿ ಉದ್ದೇಶಗಳು ಅವರಿಗೂ ಇದ್ದವು. ಆದರೆ ಅಪ್ರತಿಷ್ಠಿತರ ಕಣ್ಣಿನಿಂದ ಲೋಕವನ್ನು ಗ್ರಹಿಸಿದ್ದು ಅವರ ತಿಳಿವಳಿಕೆಗೆ ಹಲವು ಸಾಧ್ಯತೆಗಳು ದಕ್ಕಲು ಕಾರಣವಾಯಿತು (ಇದಕ್ಕೆ ಕೆಲವೆಡೆ ಅಪವಾದಗಳೂ ಉಂಟು).

ಇಂಥ ಹಲವು ಸಿಕ್ಕುಗಳ ನಡುವೆ ಧರ್ಮಾಮೃತ ನಿಂತಿದೆ. ವ್ಯಕ್ತಿಯ ಮೂಲಭೂತ ಪ್ರವೃತ್ತಿಗಳಾದ ಕಾಮ, ಪ್ರೀತಿ, ಹಾದರ, ಹಿಂಸೆ, ಸನ್ನಡತೆ, ದುಷ್ಟತೆ, ಅಪರಾಧೀ ಪ್ರಜ್ಞೆ, ದೇಹವನ್ನು ಮೀರುವ ಬಯಕೆ, ಮೀರಲಾರದ ತಳಮಳ – ಇವೆಲ್ಲ ಇದಿರುಬದಿರಾಗಿವೆ. ಇವುಗಳಿಗೆ ಪರಿಹಾರ ಜೈನಧರ್ಮದಲ್ಲಿದೆಯೆಂದು ಕೃತಿ ಮೇಲ್ನೋಟಕ್ಕೆ ಹೇಳುತ್ತಿದ್ದರೂ ಇದೆಷ್ಟು ಸಂಕೀರ್ಣವಾದ ಜಗತ್ತು ಎಂಬುದು ಕೂಡ ಕತೆಗಳ ಒಡಲಲ್ಲಿಯೇ ಇದೆ. ಇದೆಲ್ಲವನ್ನು ಕೃತಿ ವಿಶಿಷ್ಟವಾದ ಕಣ್ಣಿನಲ್ಲಿ ಗ್ರಹಿಸುತ್ತಿದೆ. ಇಲ್ಲವಾದರೆ ಲಲಿತಾಂಗನಂಥ ದುಷ್ಟನಿಗೆ ಎಲ್ಲಿಯ ಬಿಡುಗಡೆ ಸಾಧ್ಯವಿತ್ತು? ಅನಂತಮತಿಗೆ ಧರ್ಮದ ಕೋಟೆಯೊಳಗೆ ಎಲ್ಲಿ ಪ್ರವೇಶವಿತ್ತು? ಮೃಗಸೇನನೆಂಬ ಬೆಸ್ತ ಅರಸನಾಗುವ ಕನಸು ಹೇಗೆ ಚಿಗುರೊಡೆ ಯುತ್ತಿತ್ತು? ಕನ್ನಡ ಕಾವ್ಯ ಪರಂಪರೆ ಯಾವತ್ತಿಗೂ ಕಾಪಾಡಿಕೊಂಡು ಬಂದ ಮೂಲ ತಿಳುವಳಿಕೆಯಿದು. ಇಂಥ ತಿಳುವಳಿಕೆಯನ್ನು ಧರ್ಮಾಮೃತ ತನ್ನ ಮಿತಿಯಲ್ಲಿ ಮುಂದು ವರಿಸಿದೆ.

—-
* ಇಲ್ಲಿನ ಎಲ್ಲ ಪದ್ಯ ಹಾಗೂ ಗದ್ಯದ ಉಲ್ಲೇಖವನ್ನು ನಯಸೇನ ವಿರಚಿತ ಧರ್ಮಾಮೃತಂ ಗದ್ಯಾನುವಾದ ಕೆ. ವೆಂಕಟರಾಮಪ್ಪಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ, ಬೆಂಗಳೂರು ೧೯೭೭, ಕೃತಿಯಿಂದ ಬಳಸಿಕೊಳ್ಳಲಾಗಿದೆ.