ಹನ್ನೆರಡನೆ ಶತಮಾನದ ಆರಂಭದಲ್ಲಿ ಕೃತಿರಚನೆ ಮಾಡಿದ ನಯಸೇನ ಚಾರಿತ್ರಿಕ ಪಲ್ಲಟದ ಸಂಧಿಕಾಲದಲ್ಲಿ ನಿಂತಿದ್ದಾನೆ. ರಾಜಕೀಯವಾಗಿ ಸಣ್ಣ ಸಣ್ಣ ಅರಸುಮನೆತನಗಳು ಪ್ರಬಲಗೊಳ್ಳುತಿದ್ದ ಕಾಲವದು. ಜೈನಧರ್ಮ ಕ್ರಮೇಣವಾಗಿ ರಾಜಾಶ್ರಯದಿಂದ ವಂಚಿತ ವಾಗುತ್ತಿತ್ತು. ಧರ್ಮದ ಮೇಲಾಟದಲ್ಲಿ ಜೈನ, ಬೌದ್ಧ, ವೈದಿಕ, ಶೈವಗಳ ನಡುವಿನ ತಿಕ್ಕಾಟ ನಡೆದೇ ಇತ್ತು. ಸಾಹಿತ್ಯ ಕೂಡ ಇನ್ನೊಂದು ತಿರುವಿಗೆ ಸಿದ್ಧವಾಗಿತ್ತು. ಇಂಥ ಹೊತ್ತಿನಲ್ಲಿ ಕಾವ್ಯರಚನೆ ಮಾಡಿದ ನಯಸೇನ ತನ್ನ ಧಾರ್ಮಿಕ ಹಂಬಲಗಳಿಗೆ ಬಿಗಿಯಾಗಿ ಅಂಟಿಕೊಂಡಿದ್ದಾನೆ. ಧರ್ಮಾಮೃತ ಧಾರ್ಮಿಕವಾದ ನಂಬಿಕೆಗಳಿಗೆ ತನ್ನನ್ನು ಹೆಚ್ಚಾಗಿ ತೆರೆದುಕೊಂಡಿದೆ. ಕತೆಗಳು ಬೇರೆ ಬೇರೆ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದರೂ ಒಟ್ಟಾರೆ ಆಸಕ್ತಿ ಧರ್ಮದಿಂದ ಪ್ರಭಾವಿತವಾಗಿದೆ. ಇದರ ಜೊತೆಗೆ ಮೊದಲ ಮತ್ತು ಕೊನೆಯ ತುದಿಗಳನ್ನು ಧರ್ಮದ ವಿಚಾರಗಳಿಗೆ ಕಥನಕಾರ ಮಣಿಸಿಕೊಳ್ಳುತಿದ್ದಾನೆ. ಇದರ ಜೊತೆಗೆ ಮನುಷ್ಯನ ಪರಿವರ್ತನೆಯ ಬಗೆಗೂ ನಯಸೇನ ಧ್ಯಾನಿಸಿದ. ದುರ್ಗುಣಗಳನ್ನು ಹೇಳುತ್ತ ಚಿತ್ತದ ಉನ್ನತಿಯ ಕುರಿತು ಆಲೋಚಿಸಿದ. ಮುನಿತನದ ಶ್ರೇಷ್ಠತೆ ತಿಳಿಸುತ್ತ ಅದರೊಳಗೆ ಅಡಗಿರಬಹುದಾದ ದುಷ್ಟತೆ ಬಗೆಗೆ ಎಚ್ಚರಿಸಿದ. ಅರಮನೆಯೊಳಗಿನ ಬೇಸರವನ್ನು ಕಾಣಿಸಿ ಹಲವಾರು ಜಾತಿಮತಗಳ ಚೈತನ್ಯವನ್ನು ಅದರೆಲ್ಲ ದೌರ್ಬಲ್ಯ ಹಾಗೂ ಗುಣಗಳೊಂದಿಗೆ ಪಟ್ಟಿ ಮಾಡಿದ. ಮತಾಂತರ ವೆಂಬ ಮರ್ತ್ಯದ ಕ್ರಿಯೆಗೆ ಮಹತ್ವ ಕೊಟ್ಟೂ ಸ್ವರ್ಗದಲ್ಲಿ ಸಾಗರೋಪಮಕಾಲ ದೇವರಾಗಿ ಬದುಕುವ ಕನಸು ಚಿತ್ರಿಸಿದ. ಘಟನೆಗಳನ್ನು ಜನಪದ ಕತೆಗಳಂತೆ ಮಂಡಿಸುವ ನಯಸೇನ ಕೊನೆಗೆ ಜೈನಧರ್ಮದ ತಾತ್ವಿಕತೆಯೊಂದಕ್ಕೆ ತಂದು ನಿಲ್ಲಿಸುತ್ತಾನೆ. ಇದರಿಂದಾಗಿ ಕೃತಿಯ ವಸ್ತುಗಳು ಜನಪದ ಕತೆ ಮತ್ತು ಧಾರ್ಮಿಕ ಕತೆಗಳ ನಡುವೆ ಒಂದು ತಂತಿ ನಡಿಗೆಯನ್ನು ಮಾಡಿವೆ. ಇದೆಲ್ಲವುಗಳನ್ನು ಕಾಣಿಸುವಾಗ ತನ್ನ ಕಾಲಘಟ್ಟದ ಬದಲಾವಣೆಗಳಿಗೆ ಎದೆಯೊಡ್ಡಿ ಬರೆದನೆಂಬುದು ಗಮನಿಸಬೇಕಾದ ಸಂಗತಿ.

ಹೀಗೆ ಬರೆಯುವಾಗ ನಿಗೂಢವಾದ ಸಾಂಕೇತಿಕ ಮಾರ್ಗವನ್ನು ಆತ ಅವಲಂಬಿಸಲಿಲ್ಲ. ಅಥವಾ ಬೌದ್ದಿಕವಾಗಿ ತಾತ್ವಿಕ ಹೋರಾಟದ ಹಾದಿಯನ್ನೂ ನೆಚ್ಚಿಕೊಳ್ಳಲಿಲ್ಲ. ತಾನು ಬರೆಯುತ್ತಿರುವುದರ ಬಗೆಗೆ ಯಾವುದೇ ಅನುಮಾನಗಳಿಲ್ಲದ ‘ಸ್ಪಷ್ಟತೆ’ಯ ಮಾರ್ಗವನ್ನು ಅನುಸರಿಸಿದ್ದಾನೆ. ಎದುರಾಳಿಗಳನ್ನು ಇಟ್ಟುಕೊಂಡೆ ಕತೆ ಹೇಳಲು ಹೊರಟಿದ್ದಾನೆ. ಈ ಶೈಲಿ ಅನೇಕ ಕಡೆ ಆತನ ಬರವಣಿಗೆಗೆ ಆಕ್ರಮಣಕಾರಿ ಸ್ವಭಾವವನ್ನು ಒದಗಿಸಿದೆ. ಇಂಥ ಸ್ವಭಾವದ ಒಳಗೆ ಒಂದು ತರಹದ ತೊಳಲಾಟ ಕೂಡ ಇದೆ. ತನ್ನ ಧರ್ಮವನ್ನು ಆತ್ಮರತಿಯ ಹಾಗೆ ವ್ಯಾಮೋಹಿಸುವವನ ಸಂಕಟ ಕೂಡ ಇದೆ. ಅನ್ಯಮತಗಳ ಬೆಳವಣಿಗೆಯಿಂದ ಕ್ರುದ್ಧ ನಾದ, ಹತಾಶೆಗೊಂಡ, ಮನಸ್ಸಿನ ಅಭಿವ್ಯಕ್ತಿ ಹೀಗೆ ಚೆಲ್ಲುವರಿದಿದೆ. ಜೊತೆಗೆ, ತನ್ನ ಕಣ್ಣಿಗೆ ಕಾಣುವ ಎಲ್ಲವನ್ನು ನಿದರ್ಶನಕ್ಕೆ ಹೊಂದಿಸುವ ಆತುರತೆ ಮೂಡಿದೆ. ಅವನ ಹದಿನಾಲ್ಕು ಕತೆಗಳಲ್ಲಿ ಬಳಕೆಯಾದ ಮಾಲೋಪಮೆಗಳನ್ನು ಗಮನಿಸಿದರೆ ಈ ಆತುರತೆ ತಿಳಿಯುತ್ತದೆ. ಇಂಥ ಆತುರತೆಯೆ ಧರ್ಮಾಮೃತದಲ್ಲಿ ರೂಪಕವಂಚಿತ ಕಥಾಜಗತ್ತನ್ನು ನಿರ್ಮಿಸಿದೆ.

ಕಾವ್ಯಪರಂಪರೆಯ ಯಾವ್ಯಾವ ಗುಣವಿಶೇಷಗಳು ತಾನು ಬರೆಯುತ್ತಿರುವ ಕಾವ್ಯದಲ್ಲಿ ಬಂದು ನೆಲೆಸಲಿ ಎಂದು ಆತ ಆಶಿಸುವ ಪದ್ಯ ಗಮನಿಸಬೇಕು. ಮೊದಲಿಗೆ ‘ಅಸಗನ ದೇಸಿ’ ಎಂದಿರುವನು. ದೇಸಿ ಎನ್ನುವುದನ್ನು ಶೈಲಿ ಎಂಬ ಅರ್ಥದಲ್ಲಿ ನಯಸೇನ ಭಾವಿಸಿ ದ್ದಾನೆ. ಮುಂದೆ ಗಜಾಂಕುಶನ ‘ಸದರ್ಥದೃಷ್ಟಿ’ಯನ್ನು ಬಯಸಿದ್ದಾನೆ. ಅಂದರೆ ದೃಷ್ಟಿ ಸಂವೇದನೆಯಾಚೆ ಅಭಿವ್ಯಕ್ತಿಯನ್ನು ನಿರೂಪಿಸುವ ಬರವಣಿಗೆಯ ವಿಧಾನವನ್ನು ಆತ ದೇಸಿ ಎಂಬುದಾಗಿ ಭಾವಿಸಿದಂತಿದೆ.

ರಸಭಾವಂ ಗಮಕಂ ಕಾ
ಣಿಸೆ ನಾಣ್ಣುಡಿ ದೇಸಿವೆತ್ತ ಪೊಸನುಡಿ ಮಾರ್ಗಂ
ಕುಸುಱಯ ಬಗೆಯಿಂದಿನತಱೊ
ಳಸೆಯದ ಕೃತಿ ಕೃತಿಯೆ ಬಗೆದು ನೋಡೆ ಜಗದೊಳ್    (೪೦)

ನಯಸೇನ ದೇಸಿಯನ್ನು ಭಾಷಿಕರಚನೆಯ ಒಂದು ಕ್ರಮವಾಗಿ ಸ್ವೀಕರಿಸುತ್ತಿದ್ದಾನೆ. ಕತೆ ಹೇಳಲು ಅದೊಂದು ದಾರಿ. ಕತೆಯ ನಿಲುವುಗಳಿಗೂ ದೇಸಿಗೂ ಸಂಬಂಧ ಉಂಟೆಂದು ಆತ ತಿಳಿಯುತ್ತಿಲ್ಲ. ಕತೆ ಜನರಿಗೆ ತಲುಪಿಸುವ ಸಹಜ ದಾರಿಯಾಗಿದು ಆತನಿಗೆ ಕಂಡಿದೆ, ಕತೆಯ ಸಂವೇದನೆಯ ಭಾಗವಾಗಿ ಅಲ್ಲ. ನಿರೂಪಣೆಯ ಬಾಗವಾಗಿ ಇದನ್ನು ಕಟ್ಟಿಕೊಳ್ಳ ಬೇಕೆಂಬ ಧೋರಣೆ ಕಾವ್ಯದಲ್ಲಿ ಮತ್ತೆ ಮತ್ತೆ ಅನುರಣಿಸಿದೆ. ಕನ್ನಡ ಕಾವ್ಯಗಳಿಗೆ ಇದೇ ದೊಡ್ಡ ನಂಬಿಕೆಯ ಹಾದಿಯಾಗಬೇಕೆಂಬುದು ಆತನ ಹೆಬ್ಬಯಕೆ ಕೂಡ. ಸಂಸ್ಕೃತ ಪದಗಳನ್ನು ಸುದ್ದಗನ್ನಡದಲ್ಲಿ ತಂದಿಕ್ಕುವ ಕ್ರಮವನ್ನು ಆತ ಆಕ್ಷೇಪಿಸುತ್ತಿರುವುದು ಕೂಡ ಆತನ ದೇಸಿ ಪರಿಕಲ್ಪನೆ ಯಾವುದು ಎಂಬುದನ್ನು ಸೂಚಿಸುತ್ತಿದೆ.

ಮೇಲಿನದೆಲ್ಲ ಆತ ಹೇಳಿಕೊಂಡದ್ದರ ವಿವರ. ಆದರೆ ಆತನ ನಂಬಿಕೆಯನ್ನು ಮೀರಿ ದೇಸೀಯತೆ ಕಾವ್ಯದೊಳಗೆ ಪ್ರವೃತ್ತವಾಗಿದೆ. ಆತ ಬದುಕುತ್ತಿರುವ ಕಾಲದ, ಪ್ರದೇಶದ ಸಂಗತಿಗಳನ್ನಿದು ವಿಶಿಷ್ಟವಾಗಿ ಒಳಗೊಳ್ಳುತ್ತಿದೆ. ಹೀಗಾಗಿ ಒಂದು ಸಾಂಸ್ಕೃತಿಕವಾದ ಆವರಣ ವನ್ನು ಪಡೆದುಕೊಂಡಿದೆ. ತನ್ನ ಸುತ್ತಲಿನ ಸಮುದಾಯಗಳ ಬದುಕಿಗೆ ಸಂಬಂಧಿಸಿದ ಸಂಗತಿ ಗಳನ್ನು ಆಯ್ಕೆ ಮಾಡಿಕೊಂಡು ತನ್ನ ನಿಲುವುಗಳನ್ನು ಪ್ರತಿಪಾದಿಸುವ ಗುಣ ದೇಸೀಯತೆಯ ಬಹುದೊಡ್ಡ ಗುಣ. ಇದು ನಯಸೇನನ ಕಾವ್ಯದಲ್ಲಿ ಜೀವಜಲವಾಗಿ ಹರಡಿದೆ. ಆದರೆ ಇದನ್ನು ಕಾವ್ಯ ಯಾಕಾಗಿ ಆಯ್ಕೆ ಮಾಡಿಕೊಂಡಿದೆಯೆಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಇಲ್ಲವಾದರೆ ದೇಸೀಯತೆಯ ಪ್ರಶ್ನೆ ಪೂರ್ಣಗೊಳ್ಳುವುದಿಲ್ಲ. ಪ್ರತಿಷ್ಠಿತ ಧರ್ಮವೊಂದರ ಪೋಷಣೆಗಾಗಿ ಇದೆಲ್ಲ ಬಳಕೆಗೊಳ್ಳುತ್ತಿದೆಯೆ? ಯಾಕೆಂದರೆ ಇಂಥ ಅನುಮಾನಕ್ಕೆ ಕಾರಣವಾಗುವ ಹಲವಾರು ಸಂಗತಿಗಳು ಕಾವ್ಯದೊಳಗೆ ಸ್ಪಷ್ಟವಾಗಿವೆ. ಗಾದೆ ಮತ್ತು ನಾಣ್ಣುಡಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದರ ಮೂಲಕ ಸಾಕಷ್ಟು ಎಚ್ಚರಿಕೆ ಯಿಂದ ತನ್ನ ಉದ್ದೇಶದ ಈಡೇರಿಕೆಗಾಗಿ ಇವುಗಳನ್ನು ಕಥನದೊಳಗೆ ಬಿಟ್ಟುಕೊಳ್ಳಲಾಗಿದೆ. ನಯಸೇನ ದೇಸಿಯನ್ನು ಬರಹದ ಶೈಲಿಯಾಗಿ ಮತ್ತು ಸಂವೇದನೆಯ ಭಾಗವಾಗಿ ಕಟ್ಟಿಕೊಂಡಿ ದ್ದಾನೆಂಬುದು ಮರೆಯುವಂತಿಲ್ಲ. ಮೊದಲನೆಯದು ಕಾವ್ಯದಲ್ಲಿ ಉದ್ದೇಶಪೂರ್ವಕವಾಗಿ ನಡೆಯುತ್ತಿದ್ದರೆ ಇನ್ನೊಂದು ಅನುದ್ದೇಶಪೂರ್ವಕವಾಗಿ ಸಂಭವಿಸುತ್ತಿದೆ. ಇದರ ಆವರಣ ದಲ್ಲಿ ಜನಮತಪರವಾದ ಧೋರಣೆಗಳನ್ನು ಹಾಗೂ ಮನುಷ್ಯನ ವಿಕಾಸದ ಪರಿಕಲ್ಪನೆಯನ್ನು ಒಟ್ಟಿಗೆ ಹಿಡಿಯುತ್ತಿದ್ದಾನೆ.

ಧರ್ಮಾಮೃತದಲ್ಲಿ ಒಂದು ದೊಡ್ಡ ದೇಸಿ ಜಗತ್ತಿದೆ. ಸಾಕಷ್ಟು ಸಂಕೀರ್ಣವಾದ ಮತ್ತು ವೈರುಧ್ಯಗಳಿಂದ ಕೂಡಿದ ಜಗತ್ತಿದು. ಇಂಥ ಅಪಾರವಾದ ದೇಸಿ ಜಗತ್ತು ಅವನ ಸಮಕಾಲೀನ ರಲ್ಲಿ ಇತ್ತೊ ಇಲ್ಲವೊ? ಕೃತಿಯಲ್ಲಿನ ಮಾಲೋಪಮೆಗಳು ಈ ದೇಸಿ ಜಗತ್ತನ್ನು ಅಧಿಕೃತ ವಾಗಿ ಕಾಣಿಸುತ್ತಿವೆ. ಬಹು ಆಯಾಮಗಳುಳ್ಳ ಇದರ ಕೇಂದ್ರದಲ್ಲಿ ರಾಜರು, ವ್ಯಾಪಾರಿಗಳು, ಬ್ರಾಹ್ಮಣರು ಇದ್ದರೂ ಒಟ್ಟು ಕತೆಯ ಆವರಣದಲ್ಲಿ ಹಲವಾರು ಜಾತಿ – ವೃತ್ತಿಗೆ ಸೇರಿದವ ರಿದ್ದಾರೆ; ಮಾದಿಗರು, ಹೊಲೆಯರು, ಬಡಗಿಗಳು, ಕುಂಬಾರರು, ಕಮ್ಮಾರರು, ಅಧಿಕಾರಿಗಳು, ತಳವಾರರು, ಅಕ್ಕಸಾಲಿಗರು, ಮಾಲೆಗಾರರು, ಕಂಚುಗಾರರು, ಕುರುಬರು, ಒಕ್ಕಲಿಗರು, ವೇಶ್ಯೆಯರು ಜೊತೆಗೆ ಕಳ್ಳರು, ಲಂಚಕೋರರು ಇದ್ದಾರೆ. ಇದರಿಂದಾಗಿ ಈ ಎಲ್ಲ ಪಂಗಡಗಳ ವಿವರಗಳು ಕಾವ್ಯದೊಳಗೆ ಬಂದಿವೆ. ಬಹಳ ದೊಡ್ಡ ಪ್ರಮಾಣದಲ್ಲಿ ಅವರ ವೃತ್ತಿ, ನಂಬಿಕೆ, ನಡವಳಿಕೆಗಳು ಕಾವ್ಯದೊಳಗೆ ಪ್ರವೇಶ ಪಡೆದಿವೆ. ಆದರೆ ಈ ವಿವಿಧ ವೃತ್ತಿ ಮತ್ತು ಜಾತಿಗೆ ಸೇರಿದವರಿಗೆ ಕತೆಯಲ್ಲಿ ಅಂಥ ಮಹತ್ವದ ಪಾತ್ರವೇನೂ ಇಲ್ಲ. ಬಹುತೇಕ ಸಲ ಇವರೆಲ್ಲ ನೆಗೆಟಿವ್ ಅರ್ಥದಲ್ಲಿ ಕಾಣಿಸಿಕೊಂಡಿದ್ದಾರೆ:

ಪಿತ್ತಳೆಯ ತೊಡವು ಪೊಲೆಯ
ರ್ಗುತ್ತಮಮೆನಿಸಿರ್ದ ಪೊನ್ನತೊಡವೆನಿಸುವವೋಲ್
ಚಿತ್ತದೊಳುತ್ಸಾಹದಿನ
ತ್ಯುತ್ತಮಮಾಗಿರ್ಕುಮಘಯತರ್ಗಂ ಪಾಪಂ      (೩೫)

….. ಪೊಲೆಯರ ಮನೆಯ ಕೂೞುಂ ಬಾಡುಂ ಬೆಸನಿಯ ನುಡಿಯುಂ ನಡೆಯುಂ
ಪೊಲ್ಲೆಂತಂತೆ ಮಿಥ್ಯಾದೃಷ್ಟಿಯ ನೆಗೞಯುಮೊಂದು ಪೊಲ್ಲೆಂದು ಮುನಿದು
ಬಲಿಯನಿಂತೆಂದಂ                            (೯ – ೧೩೨)

ದೌರ್ಬಲ್ಯಗಳಿಂದಲೇ ಇವರನ್ನು ಗುರುತಿಸುವ ಪ್ರಮಾಣ ಅಧಿಕವಾಗಿದೆ. ಇವರನ್ನು ಸೋಮಾರಿಗಳಾಗಿ, ನಿರ್ಲಜ್ಜರನ್ನಾಗಿ, ಅಸಹಾಯಕರನ್ನಾಗಿ ಕಾಣಿಸುವ ಉತ್ಸಾಹದಲ್ಲಿದ್ದಾನೆ. ಸಮುದಾಯದ ಇಂಥ ಅಸಂಖ್ಯಾತ ವಿವರಗಳ ಮೂಲಕ ಕೃತಿ ಪ್ರತಿಷ್ಠತರ ಕತೆಗಳನ್ನು ಹೇಳಹೊರಟಿದೆ. ಹಾಗೆ ನೋಡಿದರೆ ಕತೆಯಲ್ಲಿರುವ ಹಂಬಲಗಳು ಮನುಷ್ಯನ ಹಂಬಲಗಳೆ ಹೊರತು ಯಾವೊಂದು ವರ್ಗದ ಹಂಬಲಗಳಲ್ಲ ಎಂಬುದು ನಿಜವಾದರೂ ಇಂಥ ಹಂಬಲ ಗಳನ್ನು ಹೇಳುವಾಗ ಕೃತಿ ಪ್ರತಿಷ್ಠಿತರನ್ನು ಮತ್ತು ಅಂಚಿನ ಜನರನ್ನು ಹೇಗೆ ನಿಲ್ಲಿಸಿದೆ ಎಂಬುದನ್ನು ಗಮನಿಸಿದರೆ ಕೃತಿಕಾರನ ನಿಲುವಿನಲ್ಲಿರುವ ಅಸಮಾನತೆ ಎದ್ದು ಕಾಣುತ್ತದೆ.

ಆ ಕಾಲದಲ್ಲಿ ಕೆಳವರ್ಗದ ಕುರಿತು ಮೇಲ್ವರ್ಗದ ದೃಷ್ಟಿಕೋನವೇನಿತ್ತು ಅದು ಕೃತಿಯ ದೃಷ್ಟಿಕೋನವಾಗಿ ಮಾರ್ಪಟ್ಟಿದೆ. ‘ಭೂಪರಂ ಬಿಟ್ಟು ಪೊಲೆಯರಂ ಕೆಳೆಗೊಳ್ವ’ (೧೦ – ೮೩) ಎಂಬ ಮಾತು ಗಮನಿಸಿ. ಅರಸರಿಂದ ಬೇರೆ ಬೇರೆ ವೃತ್ತಿಯ ಜನ ಹೇಗೆ ಪೀಡನೆ ಗೊಳಗಾಗಿದ್ದಾರೆಂಬುದನ್ನು ಎರಡನೆಯ ಕತೆಯಲ್ಲಿ ನೋಡಬಹುದು. ಗಾಣಿಗರು, ಹೂವಾಡಿಗರು, ಕಂಚುಗಾರರು, ಈಡಿಗರು, ಸೀರೆ ವರ್ತಕರು, ಮಣಿಗಾರರು ಲಲಿತಾಂಗನಿಂದ ಶೋಷಣೆಗೆ ಒಳಗಾಗಿದ್ದಾರೆ. ಅವರ ಅಸಹಾಯಕತೆ ಒಡೆದು ಕಾಣುತ್ತಿದೆ. ಆದರೆ ನಯಸೇನ ಇಲ್ಲಿಯೂ ವಿಡಂಬನೆಯನ್ನು ತಂದು ಸಂದರ್ಭದ ವಿಷಾದವನ್ನು ಅಳ್ಳಕಗೊಳಿಸಿದ್ದಾನೆ. ಸನ್ನಿವೇಶಕ್ಕೆ ತಕ್ಕ ಹಾಗೆ ಎಲ್ಲ ಜಾತಿ ವೃತ್ತಿಗೆ ಸೇರಿದವರು ಕೃತಿಯೊಳಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಜಿನಧರ್ಮಕ್ಕೆ ಸೇರಿಸಿಕೊಳ್ಳುವಾಗ ಮಾತ್ರ ರಾಜರು ವ್ಯಾಪಾರಿಗಳು ಹಾಗೂ ಬ್ರಾಹ್ಮಣರನ್ನು ಮಾತ್ರ ಆಯ್ದುಕೊಳ್ಳುತ್ತಿದ್ದಾನೆ.

ಕೃತಿ ಪಾಸಿಟಿವ್ ಅರ್ಥದಲ್ಲಿ ಅಂಚಿನ ಜನರ ವಿವರಗಳನ್ನು ಬಳಸಿದರೆ ಜಿನಮತದ ತತ್ವಗಳಿಗೆ ಕುಂದು ಬರುತಿತ್ತೆ? ಹಾಗೇನೂ ಆಗುತ್ತಿರಲಿಲ್ಲ. ಆದರೆ ಅದರ ದೃಷ್ಟಿ ಮುಖ್ಯವಾಗಿ ವ್ಯಾಪಾರಿಗಳು, ಬ್ರಾಹ್ಮಣರು ಇವರ ಮೇಲೆ ಕೇಂದ್ರಿತವಾಗಿರುವುದರಿಂದ ಉಳಿದ ಸಮುದಾಯವನ್ನದು ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲದೆ, ಅಂಚಿನ ಸಮುದಾಯದಿಂದ ಕೃತಿಕಾರನಿಗೆ ಹೆಚ್ಚಿನ ಅಪೇಕ್ಷೆಗಳಿಲ್ಲ. ಹಾಗೆಂದು ರಾಜರು, ವ್ಯಾಪಾರಿಗಳು, ಬ್ರಾಹ್ಮಣರು ನೆಗೆಟಿವ್ ಅರ್ಥದಲ್ಲಿ ಚಿತ್ರಿತಗೊಂಡಿಲ್ಲವೆಂತಲ್ಲ. ಇವರೆಲ್ಲ ಇನ್ನೂ ಹೆಚ್ಚಾಗಿ ಲೇವಡಿಗೊಳ ಗಾಗಿದ್ದಾರೆ. ಇಂಥ ಯಾವ ಅವಕಾಶಗಳನ್ನೂ ಧರ್ಮಾಮೃತ ಕೊಟ್ಟಿಲ್ಲ. ಯುವರಾಜ ಲಲಿತಾಂಗ ತನ್ನ ದುಷ್ಟತೆಯಿಂದ ಇಡೀ ರಾಜ್ಯಕ್ಕೆ ಕಂಟಕಪ್ರಾಯನಾಗಿದ್ದಾನೆ. ಅವನಿಂದ ತೊಂದರೆಗೊಳಗಾದವರು ಹತ್ತು ಹದಿನೆಂಟು ಜಾತಿವೃತ್ತಿಗೆ ಸೇರಿದವರಿದ್ದಾರೆ. ಆದರೆ ಇವರ‍್ಯಾರನ್ನೂ ಜಿನಪದವಿಗೆ ಸೇರಿಸಿಕೊಳ್ಳುತ್ತಿಲ್ಲ. ತನ್ನೆಲ್ಲ ದುಷ್ಟತೆಯ ನಡುವೆ ಲಲಿತಾಂಗ ಜಿನಪದವಿಗೆ ಒಳಪಟ್ಟಿದ್ದಾನೆ. ಪ್ರತಿಷ್ಠಿತವರ್ಗವನ್ನು ಓಲೈಸುವ ಮತ್ತು ಒಲಿಸಿಕೊಳ್ಳುವ ಉತ್ಸಾಹದಿಂದ ಧರ್ಮಾಮೃತವೂ ಹೊರತಲ್ಲ.

ಇದೆಲ್ಲದರ ನಡುವೆ ಅಪರೂಪಕ್ಕೆಂಬಂತೆ ಈ ವರ್ಗದ ಸಜ್ಜನಿಕೆಯ ಸಣ್ಣ ಎಳೆಯೂ ಕೃತಿ ಕಾಣಿಸಿದೆ. ಶ್ರೀದತ್ತಸೆಟ್ಟಿ (೧೦ನೆಯ ಕತೆ) ತನ್ನ ತಂಗಿಗೆ ಹುಟ್ಟಿದ ಮಗುವನ್ನು ಕೊಲ್ಲು ವಂತೆ ಹೊಲೆಯನೊಬ್ಬನ ಕೈಗೆ ಕೊಟ್ಟಿದ್ದಾನೆ. ಅವನು ಮಗುವನ್ನು ಕೊಲ್ಲಲು ಮನಸ್ಸು ಮಾಡದೆ ನದೀತೀರದಲ್ಲಿಟ್ಟು ಹೊರಟು ಹೋಗುತ್ತಾನೆ. ಆದರೆ ಮಗುವನ್ನು ಕೊಲ್ಲುವ ನಿರ್ಧಾರದಿಂದ ಹಿಂದೆ ಸರಿದರೂ ಅದು ಸಾಯುವ ಬಗ್ಗೆ ಆಸೆ ಇಟ್ಟುಕೊಂಡವನು. ಅದು ತನ್ನಿಂದ ತಾನೆ ಬಿಸಿಲಿಗೆ ಸೀದು ಸಾಯುತ್ತದೆ, ತಾನಾದರೂ ಯಾಕೆ ಪಾಪ ಕಟ್ಟಿಕೊಳ್ಳಬೇಕೆಂದು ತೆರಳಿದ್ದಾನೆ. ಮತ್ತೊಮ್ಮೆ ಶ್ರೀದತ್ತಸೆಟ್ಟಿ ಮಗುವನ್ನು ಕೊಲ್ಲಲು ಮಾದಿಗನೊಬ್ಬನ ಕೈಗೆ ಕೊಡುತ್ತಾನೆ. ಆ ಮಗು ಗೋಪಾಲಕನಿಗೆ ಸಿಕ್ಕಾಗ ಆತ ದೇವರ ವರವೆಂದು ಪ್ರೀತಿಯಿಂದ ಸಲುಹಿದ್ದಾನೆ. ಮನುಷ್ಯರ ಸಜ್ಜನಿಕೆ ಮತ್ತು ದುಷ್ಟತೆ ಗಮನಿಸುವಾಗ ಪ್ರತಿಷ್ಠಿತ ವರ್ಗದ ನಂಬಿಕೆಗಳನ್ನು ನಯಸೇನ ಕೆಲಸಲ ತಲೆಕೆಳಗು ಮಾಡಿದ್ದಾನೆ. ಹೀಗಾಗಿಯೇ ಬೆಸ್ತ ಮತ್ತು ಘಂಟೆಗೆ (೧೦ನೆಯ ಕತೆ) ಒಂದು ವಿಕಾಸವನ್ನು ಕಲ್ಪಿಸಲು ಆತನಿಗೆ ಸಾಧ್ಯ ವಾಯಿತು. ಅಪ್ರತಿಷ್ಠಿತವರ್ಗದ ದೌರ್ಬಲ್ಯಗಳನ್ನು ಹೆಚ್ಚಾಗಿ ಪಟ್ಟಿ ಮಾಡಿದ್ದಾನೆಂದನಿಸಿದರೂ ಕೆಲವೇಳೆ ತನ್ನ ಸೀಮಿತ ಉದ್ದೇಶ ಮೀರಿ ಆಲೋಚಿಸಿದ್ದಾನೆ.

ಕೆಳವರ್ಗದವರನ್ನು ಉಪಮೆಗಳಲ್ಲಿ ನಿರೂಪಿಸುತ್ತಿರುವ ಕ್ರಮ ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಯಷ್ಟೇ ಅಲ್ಲ. ಆ ಕಾಲದ ಪ್ರತಿಷ್ಠಿತರ ಸಾಮಾಜಿಕ ತಿಳಿವಳಿಕೆಯ ಸೂಚನೆಯಾಗಿದೆ. ನಯಸೇನ ಅನೇಕ ಸಲ ಇಂಥ ತಿಳಿವಳಿಕೆಯ ಮುಂದುವರಿಕೆದಾರನಂತೆ ಕಾಣುತ್ತಾನೆ. ಇದನ್ನು ಒಡೆಯಬೇಕೆಂಬ ಮನೋಭಾವವಾಗಲಿ, ಪ್ರಶ್ನಿಸಬೇಕೆಂಬ ಆಸೆ ಯಾಗಲಿ ಆತನಿಗಿಲ್ಲ. ಆದ್ದರಿಂದ ಕೆಳವರ್ಗದ ವಿವರಗಳು ಕಥನದ ಆ ಕ್ಷಣದ ಸಂದರ್ಭವನ್ನು ಸ್ಪಷ್ಟೀಕರಿಸುತ್ತಿವೆಯೆ ಅಥವಾ ಇಲ್ಲವೆ ಎಂಬುದನ್ನು ಮಾತ್ರ ಆತ ಗಮನಿಸುತ್ತಿದ್ದಾನೆ. ಮುಖ್ಯವಾಗಿ ನಯಸೇನನ ದೇಸಿಪ್ರಜ್ಞೆ ಶೋಧಿಸುವ ಮಾರ್ಗದ್ದಲ್ಲ. ಕಥಿಸುವ ಮಾರ್ಗದ್ದು. ವ್ಯಕ್ತಿಗಳನ್ನು ಗಮನಿಸುವಾಗಲು ಅವರ ಅನುಭವಗಳನ್ನು ಶೋಧಿಸುವುದಕ್ಕೆ ಬದಲಾಗಿ ಸ್ವಭಾವವನ್ನು ಪರಿಚಯಿಸಿದ್ದಾನೆ.

ಅನೇಕ ಅರಸರು ಇಲ್ಲಿದ್ದಾರೆ. ಇವರಲ್ಲಿ ಬಹುತೇಕರು ಜಿನಮತಾವಲಂಬಿಗಳು. ಸಂಸಾರದ ಸುಖದಲ್ಲಿ ಮುಳುಗಿದ್ದಾರೆ. ಇಂದ್ರನ ವೈಭವವನ್ನು ಮೀರಿಸುವಂಥ ಸಾಮ್ರಾಜ್ಯ ವನ್ನು ಪಡೆದಿದ್ದಾರೆ. ಹೀಗೆ ವೈಭವದಿಂದ ಬದುಕುತ್ತಿರುವಾಗ ನರೆಗೂದಲು, ಕ್ಷಣದಲ್ಲಿ ಕರಗಿಹೋದ ಮೋಡಗಳು ಇವರನ್ನು ಸಂಸಾರ ಹಾಗೂ ಸಾಮ್ರಾಜ್ಯ ತೊರೆಯುವಂತೆ ಮಾಡಿದೆ. ಕಥನಕಾರ ಅವರ ವೈರಾಗ್ಯಪೂರ್ವದ ಚಿತ್ರಣವನ್ನು ವಿವರವಾಗಿ ಕೊಡುತ್ತಿದ್ದಾನೆ. ಆದರೆ ನಂತರದ ಸ್ಥಿತಿಯನ್ನು ಮುಗುಮ್ಮಾಗಿ ಹೇಳುತ್ತಿದ್ದಾನೆ. ಧರ್ಮಾಮೃತದಲ್ಲಿ ಕತೆಗಳು ಆರಂಭವಾಗುವುದು ಸಂಸಾರದಲ್ಲಿ ತೊಡಗಿರುವ ಅಥವಾ ರಾಜತ್ವದ ಅಧಿಕಾರದಲ್ಲಿ ಸುಖಲೋಲುಪರಾಗಿರುವವರ ಬದುಕಿನ ವಿವರಗಳೊಂದಿಗೆ ಇಲ್ಲಿನ ಸಮೃದ್ದಿಯನ್ನು ಕೊಂಚ ಅತಿಶಯದಿಂದಲೇ ಮಂಡಿಸಲಾಗಿದೆ. ನಂತರ ಜೀವನದ ಕುರಿತು ಏಳುವ ಸಣ್ಣದಾದ ನಿರಾಸೆಯ ಅತೃಪ್ತಿಯ ಎಳೆಗಳು ಬರುಬರುತ್ತ ಗಾಢವಾಗಿ ತೆರೆದುಕೊಂಡಿವೆ.  ಕೊನೆಯಲ್ಲಿ ಸಂಸಾರ ಮತ್ತು ಅಧಿಕಾರ ವಿರಕ್ತರಾಗಿ ವ್ರತಗಳನ್ನಾಚರಿಸಿ ತಪಸ್ಸುಗೈದು ಸಾಗರೋಪಮಕಾಲ ದೇವತೆಗಳಾಗಿ ಹುಟ್ಟುತ್ತಿದ್ದಾರೆ. ಅರಸರ ಇಂಥ ನಡವಳಿಕೆಯಿಂದ ಕೆಲವು ಮುಖ್ಯ ಪರಿಣಾಮಗಳು ಎದ್ದು ಕಾಣುತ್ತಿವೆ; ಐಶ್ವರ್ಯವನ್ನು ನಿಕೃಷ್ಟವಾಗಿ ಕಾಣುವ ಗುಣ, ಕೊಲೆಯ ಸಂಪರ್ಕವಿಲ್ಲದ ಜೀವನಕ್ಕೆ ಮರಳುವುದು, ದೇಹದ ಬಯಕೆಗಳನ್ನು ಮೀರಿ ಆಲೋಚಿಸುವ ಮನೋಭಾವ, ಕಾಲ – ದೇಶಗಳನ್ನು ಮೀರಿದ ವಿಶ್ವಾತ್ಮಕ ಮೌಲ್ಯಗಳೆಡೆಗೆ ಕೃತಿ ಕೈಚಾಚುತ್ತಿದೆ. ತನ್ನ ಮರ್ತ್ಯದ ಆಕಾಂಕ್ಷೆಯನ್ನು (ಮತಾಂತರ) ತಾನೇ ಮೀರಿರುವುದು ಕೃತಿಯ ಅಂತಃಸತ್ವ ಕಾಪಾಡಿದೆ.

ಅರಿಮಥನ ದೊರೆಯ ಪ್ರಜಾವಾತ್ಸಲ್ಯ (೨ನೆಯ ಕತೆ), ಒದ್ದಾಯನನ ಶ್ರದ್ಧೆ (೪ನೆಯ ಕತೆ), ವರುಣ ಮಹಾರಾಜನ ರಾಜ್ಯತ್ಯಾಗ (೫ನೆಯ ಕತೆ), ವೀರಕುಮಾರನ ದುರ್ನಡತೆ (೬ನೆಯ ಕತೆ), ವಾರಿಷೇಣನ ವಿಚಿತ್ರವಾದ ಸಂಸಾರ ವಿರಕ್ತಿ (೭ನೆಯ ಕತೆ), ವಿಶ್ವಂಧರ ಮಹಾರಾಜನ ಮೋಹ (೧೦ನೆಯ ಕತೆ), ಪ್ರಮಥಿಕುಮಾರನ ಯುದ್ಧದ ಹಂಬಲಗಳು (೧೩ನೆಯ ಕತೆ), ಉಪರಿಚರ ದೊರೆ ಧರ್ಮವನ್ನು ಬಿಟ್ಟಿದ್ದಕ್ಕೆ ಅನುಭವಿಸಬೇಕಾದ ದುಸ್ಥಿತಿ (೧೪ನೆಯ ಕತೆ) ಅರಸರ ವ್ಯಕ್ತಿತ್ವವನ್ನು ಚಿತ್ರಿಸುವಾಗ ಕಥನಕಾರ ಸರಳತೆಯ ಹಾದಿ ಹಿಡಿದಿಲ್ಲ. ಅವರ ಬಾಹ್ಯ ಆಳ್ವಿಕೆಗಿಂತ ಅಂತರಂಗದ ಮನೋವ್ಯಾಪಾರಗಳತ್ತ ನೋಟ ಬೀರಿದ್ದಾನೆ. ತಾನು ಬಾಳುತ್ತಿದ್ದ ಕಾಲಘಟ್ಟದಲ್ಲಿ ಯುದ್ಧ ಮತ್ತು ಇತರ ಆಕ್ರಮಣಗಳಿಂದ ಜೈನಧರ್ಮಕ್ಕೆ ಹಿನ್ನಡೆಯಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಆತ ಇದಕ್ಕೆ ಹೇಗೆ ಪ್ರತಿಕ್ರಿಯಿಸ ಬೇಕು ಎಂಬುದರ ಬಗ್ಗೆ ದ್ವಂದ್ವದಲ್ಲಿದ್ದಾನೆ. ಯಾವುದನ್ನು ಆತ ನಿರಾಕರಿಸುತ್ತಿದ್ದಾನೊ (ಯುದ್ಧ, ಹಿಂಸೆ) ಅವೇ ಅವನ ಧರ್ಮವನ್ನು ಹತ್ತಿಕ್ಕುತ್ತಿವೆ. ಜೈನಧರ್ಮದ ಪ್ರಕಾರ ಆತ ಯುದ್ಧವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲವೇನೊ. ವಿಚಿತ್ರವೆಂದರೆ ಮಾನಸಿಕವಾಗಿ ಯುದ್ಧದ ಪರಿಭಾಷೆಯನ್ನು ನಿಯಂತ್ರಸಲು ಆತನಿಗೆ ಸಾಧ್ಯವಾಗುತ್ತಿಲ್ಲವೇನೊ. ನೋಡಿ, ಒದ್ದಾಯನ ಮಹಾರಾಜನ ಅರಮನೆಯಲ್ಲಿನ ಕಾಂತೆಯರ ವರ್ಣನೆಯನ್ನು ಯುದ್ಧದ ಪರಿಭಾಷೆಯಲ್ಲಿ ಮಾಡಿದ್ದಾನೆ;

ಪಡೆವಳನಾಗೆ ಹಾರಮಮರ್ದೊಪ್ಪುವ ಪೆರ್ಮೊಲೆ ತಂತ್ರವಾಗೆ ಪೊಂ
ದೊಡವಿನೊಳಾದ ನಿಸ್ವನಮೆ ದುಂದುಭಿಯಾಗೆ ವಿಳಾಸಲೋಚನಂ
ಕಡುಪಿನ ಬಾಣಮಾಗೆ ಧನುಮಾಗೆ ನೆಗಱ್ತೆಯಪುರ್ವ ಮೇಲುದುಂ
ಗಡ ಗುಡಿಯಾಗೆ ಕಾಂತೆಯರನಂಗನ ಪೆರ್ವಲದಂತಿರೊಪ್ಪಿದರ್
                                                            (೪ – ೧೩೯)

(ಹಾರವೇ ದಳವಾಯಿ, ಒಪ್ಪುವ ಪೆರ್ಮೊಲೆಯೇ ಸೈನ್ಯ, ಹೊನ್ನಿನ ಒಡವೆಗಳ ಶಬ್ದವೇ ದುಂದುಭಿ ಧ್ವನಿ, ಸುಂದರವಾದ ಕಣ್ಣುಗಳೇ ಬಾಣಗಳು, ಹುಬ್ಬು ಶ್ರೇಷ್ಠವಾದ ಬಿಲ್ಲು, ಮೇಲು ವಸ್ತ್ರವೇ ಧ್ವಜ! ಹೀಗೆ ಅರಸನ ಸುತ್ತ ಇದ್ದ ಕಾಂತೆಯರು ಮನ್ಮಥನ ದೊಡ್ಡ ಸೈನ್ಯದಂತೆ ಶೋಭಿಸಿದರು.) ಬಹುಶಃ ಮಧ್ಯಕಾಲೀನ ಚರಿತ್ರೆಯ ಹಿಂಸೆಯ ಜಗತ್ತು ಕೃತಿಯಲ್ಲಿ ಹೀಗೆ ಬಳಸುದಾರಿಯ ಮೂಲಕ ವ್ಯಕ್ತವಾಗುತ್ತಿದೆಯೇನೊ. ವೈಭವದಿಂದ ಬಾಳುತ್ತಿರುವ ಒದ್ದಾಯನ ಮಹಾರಾಜ ದುರ್ನಾತದಿಂದ ತುಂಬಿಹೋಗಿರುವ ಮುನಿಯನ್ನು ಪ್ರೀತಿಯಿಂದ ಬರಮಾಡಿಕೊಂಡು ಕಾಲಿಗೆರಗಿದನು. ತಾನು ಗುಣವೆಂಬ ನಿಕ್ಷೇಪಕ್ಕೆ ಸೋಲುವವನೆಂದು ಹೇಳಿಕೊಳ್ಳುತ್ತಾನೆ. ವೈಭವ – ವೈಭವಹೀನ ಸ್ಥಿತಿಯನ್ನು ಮುಖಾಮುಖಿ ಮಾಡುವುದು ಕೃತಿ ಯಲ್ಲಿ ಪ್ರಧಾನವಾಗಿ ಕಾಣುತ್ತಿದೆ. ಇವುಗಳ ಸಂಘರ್ಷದಲ್ಲಿ ಜಿನಮತದ ತತ್ವಗಳು ಸ್ಫುಟಗೊಳ್ಳುತ್ತಿವೆ.

ಇಲ್ಲಿಯ ಕತೆಗಳ ಬಹುಭಾಗವನ್ನು ವ್ಯಾಪಾರಿವರ್ಗ ಕೂಡ ಆಕ್ರಮಿಸಿಕೊಂಡಿದೆ. ಹಲವಾರು ಕತೆಗಳು ರಾಜರ ಪರಿಚಯದಿಂದ ಆರಂಭಗೊಂಡರೂ ಮುಂದೆ ವ್ಯಾಪಾರಿವರ್ಗ ವನ್ನು ಮುಖ್ಯವಾಗಿಟ್ಟುಕೊಂಡು ಸಾಗಿವೆ;

            ಗದ್ಯ || ಪುರಮನಾಳ್ವಂ ವಿಶ್ವಂಧರ ಮಹಾರಾಜನಾತನ ರಾಜಶ್ರೇಷ್ಠಿ                             ಗುಣಪಾಲನೆಂಬನಾತನ ಭಾರ್ಯೆ ಧನಶ್ರೀಯೆಂಬಳ್
(೧೦ – ೧೦)

ದಯಾಮಿತ್ರಸೆಟ್ಟಿ ಮತ್ತು ವಸುಭೂತಿಯ ಕತೆ, ಅನಂತಮತಿಯ ಕತೆ, ಜಿನಭಕ್ತಸೆಟ್ಟಿಯ ಕತೆ, ಧನಕೀರ್ತಿಯ ಕತೆ, ಜಿನದತ್ತ ಮತ್ತು ಜಿನಪಾಲಿತಮುನಿಯ ಕತೆ ಇವೆಲ್ಲ ವ್ಯಾಪಾರಿ ವರ್ಗದ ಸುತ್ತ ನಡೆಯುವ ಕತೆಗಳು. ನಯಸೇನ ಬದುಕುತ್ತಿದ್ದ ಕಾಲದ ಅರ್ಥವ್ಯವಸ್ಥೆ ಶ್ರೀಮಂತವಾಗಿತ್ತು. ಚಿಕ್ಕಚಿಕ್ಕ ಅರಸುಮನೆತನಗಳು ಶ್ರೀಮಂತವ್ಯಾಪಾರಿಗಳ ಆಶ್ರಯವಿಲ್ಲದೆ ನಡೆಯುವುದು ಕಷ್ಟವಿತ್ತು. ಲೋಕದ ನಡವಳಿಕೆಯನ್ನು ಅರಿತಿದ್ದ ನಯಸೇನ ವ್ಯಾಪಾರಿವರ್ಗ ದವರನ್ನು ತನ್ನ ಕಥನದ ಪ್ರಧಾನಕಕ್ಷೆಗೆ ತಂದ. ರಾಜಾಶ್ರಯದಿಂದ ತಪ್ಪಿಸಿಕೊಳ್ಳುತ್ತಿರುವ ಜೈನಧರ್ಮ ವ್ಯಾಪಾರಿಗಳ ಆಶ್ರಯಕ್ಕೆ ಹಂಬಲಿಸುತ್ತಿರುವುದರ ಸೂಚನೆಯಿದು. ಧನಮೂಲದ ಸಂಸ್ಕೃತಿಯನ್ನು ತನ್ನ ಆತ್ಯಂತಿಕ ಸ್ಥಿತಿಯಲ್ಲಿ ನಿರಾಕರಿಸುತ್ತಿರುವ ಜಿನಧರ್ಮ ವ್ಯಾಪಾರಿಗಳನ್ನು ಆಶ್ರಯಿಸುತ್ತಿರುವುದು ಜಿನಧರ್ಮದ ಇಕ್ಕಟ್ಟಿನ ಸ್ಥಿತಿಯನ್ನು ಸಂಕೇತಿಸುತ್ತಿದೆ. ಆರ್ಥಿಕ ಬೆಂಬಲವನ್ನು ಎಲ್ಲ ಧರ್ಮಗಳು ಪಡೆಯಲೇಬೇಕಾದ ಅನಿವಾರ್ಯತೆಯನ್ನು ಅದರ ವಿರೋಧದ ನಡುವೆಯೂ ಕೃತಿ ಒಪ್ಪಿಕೊಳ್ಳುತ್ತಿದೆಯೆ? ಯಾಕೆಂದರೆ ಅನೇಕ ಕಡೆ ಜಿನಮುನಿ ಗಳಿಗೆ ದಾನ ನೀಡುವ, ಜಿನಮಂದಿರಗಳನ್ನು ಕಟ್ಟಿಸುವ, ಜಿನಪಾರಾಯಣಗಳನ್ನು ಏರ್ಪಡಿಸುವ ಘಟನೆಗಳು ಕೃತಿಯಲ್ಲಿ ಹರಡಿಕೊಂಡಿವೆ. ಇವುಗಳನ್ನು ಎಳೆಎಳೆಯಾಗಿ ನಯಸೇನ ವಿವರಿಸಿ ದ್ದಾನೆ. ಜೈನಧರ್ಮದ ಮನೋವಿಕಾಸದ ಆಶಯಗಳಿಗಿಂತ ಕೆಲವೊಮ್ಮೆ ಇಂಥ ವಿವರಗಳ ಮೇಲೆಯೇ ಒತ್ತು ಅಧಿಕವಾಗಿದೆ. ಧರ್ಮದ ನೆಲೆಗೊಳ್ಳುವಿಕೆಯ ಪ್ರಾಕ್ಟಿಕಲ್ ದಾರಿಗಳನ್ನು ನಯಸೇನ ಬಿಟ್ಟುಕೊಡುವುದಿಲ್ಲ. ರಾಜಾಶ್ರಯದಿಂದ ವಂಚಿತಗೊಳ್ಳುತ್ತಿದ್ದ ಜೈನಧರ್ಮವನ್ನು ವ್ಯಾಪಾರಿಗಳ ಆಶ್ರಯಕ್ಕೆ ಒಗ್ಗಿಸುವ ಆ ಕಾಲದ ಜೈನಧರ್ಮದ ಸ್ಟ್ರ್ಯಾಟಜಿಗಳಲ್ಲಿ ಇದೂ ಒಂದಾಗಿರಬೇಕು. ಎಲ್ಲ ಕಾಲದಲ್ಲೂ ಧರ್ಮಗಳು ತಮ್ಮ ಅಸ್ತಿತ್ವಕ್ಕಾಗಿ ಇಂಥ ಕೆಲವು ತಂತ್ರಗಳಿಗೆ ಮೊರೆಹೋಗುತ್ತವೇನೊ.

ಇಲ್ಲಿರುವ ವ್ಯಾಪಾರಿವರ್ಗ ಸದಾ ತನ್ನನ್ನು ಜಿನಧರ್ಮಪರವಾದ ಆಸಕ್ತಿಗಳಲ್ಲಿ ತೊಡಗಿಸಿಕೊಂಡಿದೆ. ಮೊದಲನೆಯ ಕತೆಯಲ್ಲಿ ಬರುವ ದಯಾಮಿತ್ರಸೆಟ್ಟಿಯ ನಡವಳಿಕೆ ಉಳಿದ ಕತೆಗಳಲ್ಲಿ ಕಾಣುವ ವ್ಯಾಪಾರಿವರ್ಗದವರಲ್ಲೂ ಮುಂದುವರಿದಿದೆ. ಅಂದರೆ ಉಳಿದ ಧರ್ಮದವರನ್ನು ಜಿನಮತಕ್ಕೆ ಸೆಳೆಯುವ ಕ್ರಿಯೆ. ಈ ವ್ಯಾಪಾರಿಗಳು ಜಿನೇಂದ್ರಪೂಜೆ ಮಾಡುವುದಕ್ಕೆ, ಜಿನಾಗಮವನ್ನು ಓದುವುದಕ್ಕೆ, ಜಿನಮುನಿಶ್ರೇಷ್ಠರನ್ನು ವಂದಿಸುವುದಕ್ಕೆ, ಬಸದಿಗೆ ಹೋಗುವುದಕ್ಕೆ, ಜಿನಸ್ತೋತ್ರಗಳನ್ನು ಬಿಡದೆ ಪಠಿಸುವುದಕ್ಕೆ, ತ್ರಿಷಷ್ಠಿ ಶಲಾಕಾ ಪುರುಷರ ಕತೆಗಳನ್ನು ಕೇಳುವುದಕ್ಕೆ ಆಸೆಪಡುವಂಥವರು. ಇವರ ಮುಖ್ಯ ಗುಣವೆಂದರೆ ದಾನಶೀಲ ಪ್ರವೃತ್ತಿ. ಧರ್ಮದ ಕಡುಮೋಹಿಗಳಾದ ಇವರು ಜಿನಧರ್ಮಕ್ಕಾಗಿ ಯಾವ ತೀವ್ರವಾದ ನಿರ್ಧಾರ ತೆಗೆದುಕೊಳ್ಳಲು ಕೂಡ ಹಿಂಜರಿಯುವುದಿಲ್ಲ. ಧರ್ಮದ ಭೌತಿಕ ನೆಲೆಗಳಲ್ಲಿ ನಂಬಿಕೆಯಿಟ್ಟಿರುವುದು ನಯಸೇನನ ಅನಿವಾರ್ಯತೆಯೂ ಹೌದು, ಅಸಹಾಯ ಕತೆಯೂ ಹೌದು.

ವ್ಯಾಪಾರಿಗಳ ಶ್ರೀಮಂತಿಕೆಯನ್ನು ಇನ್ನಿಲ್ಲದಂತೆ ವರ್ಣಿಸುವ ರೀತಿ ಗಮನಿಸಿ;

ಆತನ ಸಿರಿಯ ಪೇಡೆ
ಭೂತದೊಳ್ ರೂಢಿವೆತ್ತ ಧನದಂಗಂ ಪೆ
ರ್ಮಾತಿನ ದೇವೇಂದ್ರಂಗಂ
ಮಾತೇಂ ಬಗೆವಂದು ನಾಲ್ವೆರಲ್ ತಾಂ ಪಿರಿಯಂ (೧೧)

ಸುರರಾಜಂಗಂ ಖಚರೇ
ಶ್ವರಂಗಮಾರಯ್ದು ನೋಡಿಮ್ಮಡಿ ಮಿಗಿಲು
ರ್ವರೆಯೊಳ್ ಜಿನಭಕ್ತಿಯೊಳಂ
ಸಿರಿಯೊಳಮೈಶ್ವರ್ಯದೊದವಿನೊಳಮಾ ಪರದಂ          (೧೦೧೨)

ಅವರ ಶ್ರೀಮಂತಿಕೆಯನ್ನು ನಯಸೇನ ಮೇಲಿಂದಮೇಲೆ ವರ್ಣಿಸುತ್ತಿರುವುದು ಆಕಸ್ಮಿಕವಾಗಿ ಅಲ್ಲ. ಅವರಿಂದ ಆತ ನಿರೀಕ್ಷಿಸುತ್ತಿರುವ ಅಪೇಕ್ಷೆಗಳು ಅಧಿಕವಾಗಿವೆ.

ಹಾಗೆಂದು ವ್ಯಾಪಾರಿಗಳೆಲ್ಲ ಒಳ್ಳೆಯವರೆಂಬ ಸಾರಾಸಗಟಾದ ನಿಲುವನ್ನು ನಯಸೇನ ತಳೆದಿಲ್ಲ. ಅವರಲ್ಲಿರುವ ದುಷ್ಟತನದ ಎಳೆಗಳನ್ನು ಕೂಡ ಚಿತ್ರಿಸಿದ್ದಾನೆ. ಈ ಎಚ್ಚರವೇ ಪಾತ್ರಗಳನ್ನು ಸಂಕೀರ್ಣಗೊಳಿಸಿದೆ. ಶ್ರೀದತ್ತಸೆಟ್ಟಿ (೧೦ನೆಯ ಕತೆ) ಹೊಟ್ಟೆಕಿಚ್ಚಿನವನೂ, ದುಷ್ಟನೂ ಆಗಿದ್ದು ಮಗುವಿನ ಕೊಲೆಗೆ ಸಂಚು ಹೂಡಿದ್ದಾನೆ. ತನ್ನ ಮಗಳು ಶ್ರೀಮತಿ ಮುಂಡೆಯಾದರೂ ಪರವಾಗಿಲ್ಲ ಧನಕೀರ್ತಿಯನ್ನು ಕೊಲ್ಲುವುದಾಗಿ ತೀರ್ಮಾನಿಸಿ ಕೊನೆಗೆ ತಾನೆ ಸಾವಿಗೆ ಒಳಗಾಗಿದ್ದಾನೆ. ಜಿನದತ್ತಸೆಟ್ಟಿ (೧೨ನೆಯ ಕತೆ) ಸಂಶಯದುರಾತ್ಮನಾಗಿದ್ದಾನೆ. ಸಜ್ಜನಿಕೆ ಮತ್ತು ದುಷ್ಟತೆಯನ್ನು ಹೇಳುವಾಗ ನಯಸೇನ ಧರ್ಮದ ಹಂಗು ಮೀರಿದ್ದು ಮಹತ್ವದ ಸಂಗತಿ.

ಕೇವಲ ಪ್ರತಿಷ್ಠಿತ ವರ್ಗವನ್ನು ನಂಬಿಕೊಂಡ ಯಾವ ಧರ್ಮವೂ ಚರಿತ್ರೆಯಲ್ಲಿ ಗೆದ್ದ ಉದಾಹರಣೆಗಳಿಲ್ಲ. ಧರ್ಮವನ್ನು ಕಟ್ಟುವ ಆತನ ಉತ್ಸಾಹಕ್ಕೆ ಇಂಥ ಮಿತಿಗಳನ್ನು ಗಮನಿಸಿ ಮುಂದೆ ವೀರಶೈವ ಧರ್ಮ ಅಪ್ರತಿಷ್ಠಿತವರ್ಗವನ್ನು ತನ್ನ ಮುಖ್ಯ ಶಕ್ತಿಯನ್ನಾಗಿ ಮಾಡಿಕೊಂಡಿ ತೇನೋ. ಇಲ್ಲಿನ ವಿವರಗಳು ದೇಸಿ ಮೂಲದವೆಂದೆನಿಸಿದರೂ ಅವು ಸಂವೇದನೆಯಲ್ಲಿ ಬೇರೆ ಹಾದಿ ಹಿಡಿದಿವೆ. ಈ ವೈರುಧ್ಯ ಕೃತಿಯ ದೇಸಿ ಜಗತ್ತನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಬ್ರಾಹ್ಮಣರು ಧರ್ಮಾಮೃತದಲ್ಲಿ ಹೆಚ್ಚು ಟೀಕೆಗೆ ಈಡಾಗಿದ್ದಾರೆ. ವೈದಿಕಧರ್ಮ ಲೇವಡಿಗೆ ಒಳಗಾಗಿದೆ. ವಸುಭೂತಿ, ಪುಷ್ಟದಾಡರು ಇದಕ್ಕೆ ನಿದರ್ಶನ. ಇವರನ್ನು ಕೃತಿ ವಿಡಂಬನೆಗೊಳಪಡಿಸಿದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸದಾ ಉತ್ಸುಕದಿಂದಿದೆ. ಬ್ರಾಹ್ಮಣರು ಜೈನರಾಗುವಿಕೆಯನ್ನು ಪರೋಕ್ಷವಾಗಿ ಸ್ವಾಗತಿಸಲಾಗಿದೆ ಕೂಡ. ಬ್ರಾಹ್ಮಣರು ಕತೆಯಲ್ಲಿ ಜಿನಧರ್ಮವನ್ನು ಒಪ್ಪಿಕೊಂಡು ಮತಾಂತರ ಹೊಂದಿದ್ದಾರೆ.

ಧರ್ಮಾಮೃತದ ಕಣ್ಣು ಅರಸರ ಮೇಲೆ ಮುಖ್ಯವಾಗಿ ಬಿದ್ದಿದೆ. ಅವರ ವ್ಯಕ್ತಿತ್ವದ ಎಲ್ಲ ಮಗ್ಗುಲುಗಳನ್ನು ಸಂಕೀರ್ಣವಾಗಿ ಗ್ರಹಿಸಲಾಗಿದೆ. ಅವರನ್ನು ಜಿನಮತಕ್ಕೆ ಸೆಳೆದು ಕೊಳ್ಳವ ಮತ್ತು ಜಿನಮತದಲ್ಲಿ ನಂಬಿಕೆಯನ್ನು ದೃಢಗೊಳಿಸುವ ಇರಾದೆ ದಟ್ಟವಾಗಿದೆ. ಧರ್ಮಕ್ಕೆ ಅರಸರ ಆಶ್ರಯವನ್ನು ಕೃತಿಕಾರ ಒಪ್ಪಿಕೊಂಡಿದ್ದಾನೆ. ಈ ಒಪ್ಪಿಕೊಳ್ಳುವಿಕೆಯಲ್ಲಿ ಒಂದು ದೊಡ್ಡ ವ್ಯತ್ಯಾಸವಿದೆ. ಅರಸರನ್ನು ಆಶ್ರಯವನ್ನು ಒಪ್ಪಿಕೊಂಡರೂ ಆತ ಪ್ರಭುತ್ವ ವನ್ನು ಒಪ್ಪಿಕೊಳ್ಳುತ್ತಿಲ್ಲ. ಇಲ್ಲಿ ಜಿನಮತ ಹಾಗೂ ಪ್ರಭುತ್ವವನ್ನು ಒಟ್ಟಿಗೆ ಅನುಭವಿಸು ತ್ತಿರುವ ದೊರೆಗಳು ಕಡಿಮೆ. ಅಂತಿಮವಾಗಿ ಇವರೆಲ್ಲ ಪ್ರಭುತ್ವವನ್ನು ತ್ಯಜಿಸಿ ತಪಸ್ಸಿಗೆ ತೆರಳಿದ್ದಾರೆ; ಕೆಲವರು ನಡುವಯಸ್ಸಿನಲ್ಲಿ ಮತ್ತೆ ಕೆಲವರು ಇಳಿಯಸ್ಸಿನಲ್ಲಿ.

ಮೋಡಗಳ ರಾಶಿ ಕರಗಿಹೋಗುವುದನ್ನು ಕಂಡು ಸಂಸಾರವು ಕೂಡ ಹೀಗೆಯೇ ಕ್ಷಣ ಭಂಗುರವೆಂದರಿತ ಅರಸ ಚಂದ್ರಾಭ (೫ನೆಯ ಕತೆ) ರಾಜ್ಯ ತ್ಯಜಿಸಿದ. ವಜ್ರಕುಮಾರನು (೮ನೆಯ ಕತೆ) ಸಂಸಾರವಿರಾಗಿಯಾಗಿ ತಪಸ್ಸಿಗೆ ತೆರಳಿದ. ವಾರಿಷೇಣ (೭ನೆಯ ಕತೆ) ರಾಜ್ಯಾಂಗನೆಗೆ ಹೇಸಿ ತಪಸ್ಸಿಗೆ ತೆರಳಿದ್ದಾನೆ. ಶಂಭು ಅರಸ (೮ನೆಯ ಕತೆ) ಹಿರಿಯ ಮಗ ಭಾಸ್ಕರದೇವನಿಗೆ ರಾಜ್ಯವನ್ನು ಒಪ್ಪಿಸಿದ ಮೇಲೆ ವೈರಾಗ್ಯ ತಾಳಿ ದಿಗಂಬರ ದೀಕ್ಷೆ ಪಡೆದು ತಪಸ್ಸಿನಲ್ಲಿ ನಿರತನಾದ. ವಿಶ್ವಂಧರ ರಾಜನ ಮಗಳನ್ನು ಮದುವೆ ಮಾಡಿಕೊಂಡು ರಾಜಪದವಿ ಪಡೆದು ದೀರ್ಘಕಾಲ ರಾಜ್ಯವಾಳಿದ ಧನಕೀರ್ತಿ (೧೦ನೆಯ ಕತೆ) ಒಂದು ದಿನ ತನ್ನ ಕೆನ್ನೆಯ ಮೇಲಿನ ನರೆಗೂದಲನು ಗಮನಿಸಿ ರಾಜ್ಯ, ಐಶ್ವರ್ಯ, ಸ್ತ್ರೀಯರ ಸೌಂದರ್ಯವನ್ನು ನಂಬಿ ಕೆಟ್ಟೆನೆಂದು ಇವುಗಳನ್ನೆಲ್ಲ ತ್ಯಜಿಸಿ ಹೊರಟಿದ್ದಾನೆ. ಚಂಪಾಪುರದ ಯಶೋಧರ ಅರಸು (೧೧ನೆಯ ಕತೆ) ಎಲೆಯಿಲ್ಲದ ಬೋಳಾದ ಮಾವಿನ ಟೊಂಗೆಯನ್ನು ಕಂಡು ವೈರಾಗ್ಯ ತಾಳಿದನು. ಪ್ರಮಥಿಕುಮಾರನು (೧೩ನೆಯ ಕತೆ) ಕೆನ್ನೆಯ ಮೇಲಿನ ನರೆಗೂದಲನ್ನು ಕಂಡು ವೈರಾಗ್ಯಭಾವ ತಾಳಿ ಮಗ ವಿಮಲಕೀರ್ತಿಗೆ ಪಟ್ಟಕಟ್ಟಿ ತಪಸ್ಸಿಗೆ ತೆರಳಿದ್ದಾನೆ. ಅನಂತವೀರ್ಯ (೧೪ನೆಯ ಕತೆ) ರಾಜ್ಯತ್ವವನ್ನು ಬಿಟ್ಟು ಸನ್ಯಾಸವ್ರತ ಕೈಗೊಂಡನು. ಶ್ರೀಧರಮುನಿಯ ಕತೆ (೧೧ನೆಯ ಕತೆ) ಕುತೂಹಲಕಾರಿಯಾಗಿದೆ. ಆತ ಈ ಮೊದಲೇ ಸಂಸಾರವನ್ನು ತ್ಯಜಿಸಿ ಹೋದವನು. ಆದರೆ ಸಂತತಿಯ ಮುಂದುವರಿಕೆಗಾಗಿ ಅವನನ್ನು ಪುನಃ ಕರೆತಂದು, ಅವನಿಂದ ಮಗುವಾದ ಮೇಲೆ ಶ್ರೀಧರಮುನಿ ಮತ್ತೆ ತಪಸ್ಸಿಗೆ ತೆರಳಿದ್ದಾನೆ. ಅಧಿಕಾರ ಮತ್ತು ತಪಸ್ಸು ಒಟ್ಟಿಗೆ ಇರಲಾರವೆಂದು ನಯಸೇನ ಭಾವಿಸಿದ್ದಾನೆ. ಹೀಗಾಗಿ ಅಧಿಕಾರದ ನಿರಸನ ಒಂದು ಮೌಲ್ಯದ ತರಹ ಕೃತಿಯಲ್ಲಿ ಪ್ರತಿಪಾದಿತವಾಗಿದೆ. ಅವರು ಬಿಟ್ಟು ಹೋಗುತ್ತಿರುವ ರೀತಿ ಯಲ್ಲಿ ಅಧಿಕಾರದ ಮುಂದುವರಿಕೆ ತಮ್ಮ ವಂಶದಲ್ಲೆ ಇಟ್ಟುಕೊಳ್ಳುವ ಪ್ರಭುತ್ವದ ಸ್ವಭಾವ ದಿಂದ ಪೂರ್ಣವಾಗಿ ಮುಕ್ತರಾಗಲು ಸಾಧ್ಯವಾಗುತ್ತಿಲ್ಲ. ಇದು ಆ ಕಾಲದ ಕಟ್ಟಳೆಯೆಂದು ಭಾವಿಸಿದರೂ ಅಧಿಕಾರ ಮತ್ತು ಅಧಿಕಾರರಹಿತ ಸ್ಥಿತಿಯ ನಡುವೆ ಜೈನಧರ್ಮ ಸಿಲುಕಿ ಕೊಂಡಿದ್ದರ ಸೂಚನೆಯೂ ಆಗಿದೆ. ರಾಜರು ತಪಸ್ಸಿಗೆ ತೆರಳುವಾಗ ಆಕಸ್ಮಿಕ ಘಟನೆಯೊಂದು ಅವರನ್ನು ಪಲ್ಲಟಸುತ್ತಿದೆಯೆಂದು ಈ ಮೇಲೆ ಹೇಳಿದೆನಷ್ಟೆ. ಈ ಪಲ್ಲಟವನ್ನು ಧರ್ಮಾಮೃತ ಶೋಧಿಸುತ್ತಿಲ್ಲ. ಬದಲಾವಣೆಯ ಘಟ್ಟವನ್ನು ಅಮೂರ್ತವಾಗಿ ದಾಖಲಿಸುತ್ತಿದೆ. ಇದು  ಬದಲಾವಣೆಯ ಸ್ಥಿತಿಯಲ್ಲಿನ ಸಂಕೀರ್ಣತೆಯೆಂದು ಭಾವಿಸಿದರೂ ಕೃತಿಕಾರನ ದಾರ್ಶನಿ ಕತೆಯ ಮಿತಿಯೂ ಹೌದು. ಪ್ರಭುತ್ವದ ಬಗ್ಗೆ, ಸಮುದಾಯದ ಬಗ್ಗೆ, ಧರ್ಮದ ವಿಕಾಸದ ಬಗ್ಗೆ ಆತನ ನಿಲುವುಗಳಲ್ಲಿರುವ ಸಡಿಲತೆ ಇದಕ್ಕೆಲ್ಲ ಕಾರಣ. ಅವನಿಂದ ಅನತಿ ದೂರದಲ್ಲಿ ರಚನೆಗೊಂಡ ವಚನಗಳು ಪರಿವರ್ತನೆಯ ಸ್ಥಿತಿಗಳನ್ನು ಎಷ್ಟು ಅಖಂಡವಾದ ರೂಪಕಗಳಲ್ಲಿ ಹಿಡಿದಿಟ್ಟಿವೆ ಎಂಬುದನ್ನು ಗಮನಿಸಿ.

ಅನ್ಯಧರ್ಮಕ್ಕೆ ಸೇರಿದ ದೊರೆಗಳನ್ನು ಜೈನಧರ್ಮದ ಮಡಿಲಿಗೆ ತಂದುಕೊಳ್ಳಲಾಗುತ್ತಿದೆ. ಅನ್ಯಮತಕ್ಕೆ ಸೇರಿದ ವಿಶ್ವಂಧರ ಮಹಾರಾಜ (೧೦ನೆಯ ಕತೆ) ತನ್ನನ್ನು ವಿರೋಧಿಸಿ ಪಟ್ಟಣ ತೊರೆದು ಹೋಗಿದ್ದ ಗುಣಪಾಲಸೆಟ್ಟಿಗೆ ಹೀಗೆ ಹೇಳುತ್ತಿದ್ದಾನೆ; ‘ಇವನು ಜಿನಪಾದ ಭಕ್ತನಲ್ಲ ವೆಂದು ನನ್ನ ವಿಷಯಕ್ಕೆ ಭಯಪಡಬೇಡ. ಮುಂಚೆ ಶ್ರೇಷ್ಠವಾದ ವ್ರತವನ್ನು ಕೊಟ್ಟು ಜಿನಧರ್ಮ ಆ ಮೇಲೆ ಧನಕೀರ್ತಿಗೆ ನನ್ನ ಮಗಳನ್ನು ಪ್ರಾಣವಲ್ಲಭೆಯಾಗಿ ಮಾಡು.’ ತನ್ನ ಅಧಿಕಾರ ಸಂಪತ್ತನ್ನು ನಿರಾಕರಿಸಿ ಹೋದ ಸೆಟ್ಟಿ ಪೂಜ್ಯನೆಂದು ಭಾವಿಸಿ ಅವನ  ಧರ್ಮವೇ ನಿಜವಾದ ಧರ್ಮವೆಂದು ವಿಶ್ವಂಧರ ನಂಬಿದ್ದಾನೆ. ಜಿನದರ್ಮಕ್ಕೆ ಪೋಷಕರಾದ ದೊರೆಗಳನ್ನು ಅತ್ಯುತ್ಸಾಹದಿಂದ ಹೊಗಳುವ ಮತ್ತು ಅನ್ಯಧರ್ಮಕ್ಕೆ ಸೇರಿದ ದೊರೆಗಳನ್ನು ಟೀಕಿಸುವ ಪ್ರವೃತ್ತಿ ಕೃತಿಯಲ್ಲಿದೆ. ಇದರೊಂದಿಗೆ ಧರ್ಮವನ್ನು ಸರಿಯಾಗಿ ಕೈಗೊಳ್ಳದ ಜಿನಧರ್ಮಿ ಗಳನ್ನು ಕೂಡ ನಯಸೇನ ಟೀಕಿಸಿದ್ದಾನೆ. ಅವನ ಸಿಟ್ಟು ಜನಸಾಮಾನ್ಯನೊಬ್ಬನ ಸಿಟ್ಟಿ ನಂತೆಯೇ ಇದೆ;

ಅರಸನಮಗನುರ್ಕಿಂದು
ರ್ವರೆಯುರಿವೊಡಮೂನೆಸೊರ್ಕಿಕೊಲ್ವೊಡೆ ಕಿಚ್ಚ
ಚ್ಚರಿಯಾಗಿ ತಾನೆ ಸುಡುವೊಡೆ
ಕರಮನಡ್ಡೈಸಿ ತಾಗಿ ಮಾರ್ಕೊಳ್ವವರಾರ್        (೬೦)

ಪ್ರಭುಗಳ ಹಿಂಸೆಯನ್ನು ಹೀಗೆ ಆರ್ತವಾಗಿ ಹಲವೆಡೆ ನಯಸೇನ ಕಾಣಿಸಿದ್ದಾನೆ. ಆತ ತನ್ನ ಧಾರ್ಮಿಕತೆಯನ್ನು ಮಿರಿದ್ದು ಅಥವಾ ನಿಜವಾದ ಧಾರ್ಮಿಕ ಕವಿಯಾಗಿ ಕಾಣುವುದು ಇಂಥ ಸಂದರ್ಭಗಳಲ್ಲಿಯೆ.

ಜಿನಧರ್ಮಂ ಪ್ರಾಣಿಗಾರ್ಮಂ ತ್ರಿಭುವನತಿಲಕಂ ಸರ್ವಲೋಕೈಕ ಪೂಜ್ಯಂ
ಮನುಜೇಂದ್ರ ಶ್ರೀವಿಲಾಸಂ ವಿಬುಧಪತಿನುತ ಶ್ರೀವಧೂಕರ್ಣಪೂರಂ
ಘನಮುಕ್ತಿ ಶ್ರಿರಮಾಂಗೀವಿಮಳಮುಖ ಲಸದ್ದರ್ಪಣಂ ಖೇಚರಶ್ರೀ
ವನಿತಾಲಂಕಾರಮಾದ್ಯತ್ಸಕಲ ಸುಖಮುಮಂ ಬೇಗಮೀವಿಂದ್ರಭೂಜಂ (೧೦೮೫)

ಜೈನಧರ್ಮದ ಒಲವು ಕೃತಿಯಲ್ಲಿ ದಟ್ಟವಾಗಿದೆ. ಇದರಷ್ಟು ಶ್ರೇಷ್ಠವಾದ ಇನ್ನೊಂದು ಧರ್ಮವಿಲ್ಲ ಎಂಬುದನ್ನು ಧರ್ಮಾಮೃತ ಕ್ಷಣಕ್ಷಣಕ್ಕೂ ಸಾಧಿಸಲು ಹಾತೊರೆದಿದೆ. ಅನ್ಯ ಧರ್ಮಗಳನ್ನು ‘ಮಿಥ್ಯಾದೃಷ್ಟಿ’ ಎಂತಲೇ ಕರೆದಿದೆ. ಜೈನಧರ್ಮದ ಅನುಸರಣೆಯಿಂದ ಲಭ್ಯ ವಾಗುವ ಫಲ ಹಾಗೂ ಅನುಸರಿಸದೇ ಇರುವುದರಿಂದ ಒದಗುವ ಘೋರ ನರಕವನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಸ್ವಮತದ ವಿಮರ್ಶೆಗೂ ಕೃತಿ ಹಿಂಜರಿಯುವುದಿಲ್ಲ. ಜೈನಧರ್ಮದ ಕುರಿತಾದ ಒಲವು ಮತ್ತು ವಿಮರ್ಶೆ ಒಟ್ಟೊಟ್ಟಿಗೆ ನಡೆದಿದೆ.

‘ಧರ್ಮ’ದ ಕುರಿತು ನಯಸೇನ ತಾಳುತ್ತಿರುವ ನಿಲುವು ಚರ್ಚಾಸ್ಪದವಾದುದು. ತನ್ನೊಳೆ ಪರೀಕ್ಷಿಸಿ ಮಾೞ್ಪುದು ಧರ್ಮಮೆಂಬುದಂ (೭ – ೮೦). ತನ್ನಲ್ಲಿ ಪರೀಕ್ಷಿಸದೆ ಧರ್ಮವನ್ನು ಅನುಸರಿಸಬಾರದು. ಧರ್ಮದ ಕುರಿತು ಆದರ್ಶಪ್ರಾಯವಾದ ಇಂಥ ಅನೇಕ ಸಾಲುಗಳಿಲ್ಲಿವೆ. ಹೀಗೆ ಹೇಳಿದರೂ ಕೃತಿಯಲ್ಲಿನ ವರ್ತನೆ ಮಾತ್ರ ಇದಕ್ಕೆ ವಿರುದ್ಧವಾಗಿದೆ. ಯಾವಾಗಲೂ ಕೃತಿಗಳ ಧಾರ್ಮಿಕ ನಿಲುವನ್ನು ಅವುಗಳ ಹೇಳಿಕೆಗಳಲ್ಲಿ ಅಲ್ಲ, ಒಟ್ಟು ವರ್ತನೆಗಳ ಮುಖಾಂತರ ಅಳೆಯಬೇಕೇನೊ. ಯಾಕೆಂದರೆ ಕೃತಿಕಾರ ಯಾವುದನ್ನು ಚಿತ್ತದ ಉನ್ನತಿ ಎಂದು ಹೇಳುತ್ತಿದ್ದಾನೊ ಅದು ಜೈನಧರ್ಮದ ಪರಿಧಿಯಲ್ಲಿ ಮಾತ್ರ ನಡೆದಿದೆ. ಜೈನಧರ್ಮದ ಆಚೆ ನಡೆಯುತ್ತಿರುವ ಸಂಗತಿಯೆಲ್ಲ ಕೇವಲ ತಿರಸ್ಕಾರಯೋಗ್ಯವಾಗಿದೆ.

ನೋಡಿ, ಬ್ರಾಹ್ಮಣರು, ಬೌದ್ಧರು, ಶೈವರು ಪೂರ್ಣವಾಗಿ ವಿಡಂಬನೆಗೆ ಟೀಕೆಗೆ ಒಳಗಾಗಿ ದ್ದಾರೆ. ವಸುಭೂತಿಯೆಂಬ ಬ್ರಾಹ್ಮಣ (೧ನೆಯ ಕತೆ) ಮೂರ್ಖನಂತೆ ಚಿತ್ರಿತಗೊಂಡಿದ್ದಾನೆ. ಅನ್ಯಧರ್ಮಕ್ಕೆ ಸೇರಿದ ವಿಶ್ವಂಧರ ಮಹಾರಾಜನು (೧೦ನೆಯ ಕತೆ) ಜೈನಧರ್ಮಕ್ಕೆ ಸೇರಿದ ಸುಬಂಧು ಶ್ರೀಯ ಮೋಹಕ್ಕೆ ಮರುಳಾದವನು. ಅವಳ ವಿರಹದಲ್ಲಿ ಬಂದು ಮದುವೆ ಯಾಗಲು ಅಪೇಕ್ಷಿಸಿದ್ದಾನೆ. ಅರಸನನ್ನು ಮದುವೆಯಾಗುವುದೆಂದರೆ ರಕ್ಕಸಿಯನ್ನು ಆಶ್ರಯಿಸಿ ದಂತೆ, ಹೊಲೆಯರ ಗೆಳೆತನ ಮಾಡಿದಂತೆ, ನಾಯಿಯನ್ನು ಹತ್ತಿದಂತೆ, ವಿಷವನ್ನು ಕುಡಿದಂತೆ ಎಂದಿತ್ಯಾದಿಯಾಗಿ ತೆಗಳುತ್ತಿದ್ದಾಳೆ. ದೊರೆಯನ್ನು ಆಕೆ ನಿರಾಕರಿಸಲು ಮುಖ್ಯ ಕಾರಣ ಆತ ಮಿಥ್ಯಾದೃಷ್ಟಿಗೆ ಸೇರಿದನೆಂಬುದು. ಗುಣಪಾಲಸೆಟ್ಟಿಯ ಅಭಿಪ್ರಾಯ ಕೂಡ ಇದೆ ಆಗಿದೆ;