ಜಿನಮತದೊಳನಿತು ಸಾರವು
ದನಿತುಂ ಲೇಸಾಗಿ ತೋರ್ಪುದೀಕೃತಿಯೊಳದೆಂ
ತೆನೆ ಕನ್ನಡಿಯೊಳಗೆ ಜಲ
ಕ್ಕನೆ ತೋರ್ಪುವೊಲಿಭದ ರೂಪು ವಿಸ್ತರದಿಂದಂ
(ಸಂ. ಡಾ. ಆರ್. ಶಾಮಶಾಸ್ತ್ರಿ, ೧೯೨೪, ಪದ್ಯ ೫೫)

ಈ ಮೇಲೆ ಉದ್ಧರಿಸಿದ ಪದ್ಯ(ಕಂದ)ದಲ್ಲಿ ಒಟ್ಟಂದದಲ್ಲಿ ಕವಿ ತನ್ನ ಕೃತಿ ಜಿನಧರ್ಮ ಸಾರವನ್ನು ಹೇಗೆ ಸ್ಪಷ್ಟವಾಗಿ ಮತ್ತು ಅಡಕದಲ್ಲಿ ತೋರುವುದು ಎಂದು ಹೇಳಿದ್ದಾನೆ. ಹಾಗಾದರೂ ಇಲ್ಲಿಯ ಉಪಮೆಯಲ್ಲಿ ಉಪಮಾನ, ಉಪಮೇಯವನ್ನು ಬೇರೆ ಬೇರೆಯಾಗಿ ಗ್ರಹಿಸಿದರೆ ವಿಶೇಷ ಅರ್ಥವೂ ಉಂಟು. ಅಂದರೆ ಹೀಗೆ, ಮೊದಲ ಎರಡು ಚರಣದಲ್ಲೇ ‘ಜಿನಮತದೊಳನಿತು ಸಾರವು ದನಿತುಂ ಲೇಸಾಗಿ ತೋರ್ಪುದೀಕೃತಿಯೊಳೆ’ ಎಂಬಲ್ಲಿಗೆ ತನ್ನ ಕೃತಿ ಜಿನಧರ್ಮದ ಸಾರವನ್ನು ಸಾರವತ್ತಾಗಿ ತಿಳಿಸುತ್ತದೆಂದು ನಯಸೇನ ಹೇಳಿಕೊಳ್ಳುತ್ತಾನೆ.  ಇದು ಅವನ ಉದ್ದೇಶವನ್ನು ತೋರಿಸುತ್ತದೆ. ಮುಂದಿನ ಸಾಲುಗಳಲ್ಲಿ ಅದು ‘ಎಂತನೆ ಕನ್ನಡಿಯೊಳಗೆ ಜಲಕ್ಕನೆ ತೋರ್ಪುವೊಲಿಭದ ರೂಪ ವಿಸ್ತರದಿಂ’ ಎಂಬುದು ಮೊದಲ ಉದ್ದೇಶ ಹೇಗೆ ಈಡೇರುತ್ತದೆ ಎಂಬುದನ್ನು ಹೇಳುತ್ತದೆ. ಅದೇ ಹೊತ್ತಿಗೆ ಈ ಸಾಲುಗಳ ಅರ್ಥ ಇದಕ್ಕೂ ಹೊರಗೆ ಚಾಚಿಕೊಳ್ಳುತ್ತದೆ. ಅದರೆ ಈ ಸಾಲುಗಳು ಕೇವಲ ಜಿನಧರ್ಮ ಸಾರವನ್ನು ಮಾತ್ರ ಹೇಳುತ್ತಿಲ್ಲ, ಬದಲಾಗಿ ಅದು ಕಾವ್ಯದ ಭಿತ್ತಿಯಾದ ಬದುಕಿನ ಬಗೆಯನ್ನು ಹೇಳುತ್ತದೆ. ಕನ್ನಡಿಯೊಳಗೆ ಜಲಕ್ಕನೆ ತೋರುವ ಇಭ(ಆನೆ)ದ ರೂಪ ವಿಸ್ತರದಂತೆ. ಇಲ್ಲಿ ಕನ್ನಡಿ ಆನೆಯ ರೂಪವನ್ನು ತೋರುತ್ತದೆಂಬುದರೊಟ್ಟಿಗೆ ಅದರ ಆಕೃತಿಯನ್ನೆಲ್ಲ (ವಿಸ್ತರದಿಂದಂ) ಸರಿಯಾಗೇ  ತೋರುತ್ತದೆ. ಆನೆ ಒಂದು ಭೌತಿಕವಾದ ವಸ್ತು. ಜಿನಮತದ ಶ್ರೇಷ್ಠತೆಯನ್ನು ತನ್ನ ಕಾವ್ಯವೆಂಬ ಕನ್ನಡಿಯಲ್ಲಿ ಸಾರವತ್ತಾಗಿ, ಸಾರಾಂಶವಾಗಿ ಆದರೆ ವಿಸ್ತಾರವಾಗಿ ತೋರುತ್ತೇನೆ ಎನ್ನುವ ಕವಿಯ ಈ ವಿಸ್ತಾರದಲ್ಲೆ ಆನೆ ಮಾತ್ರ ಇರಲು ಸಾಧ್ಯವಿಲ್ಲ. ಅಂದರೆ ಆನೆಯೊಟ್ಟಿಗೆ ಆನೆ ನಿಂತ ನೆಲ, ನೆಲೆ. ಒಟ್ಟಾರೆಯಾಗಿ ಹೇಳುವುದಾದರೆ ಅದು ಆನೆ ಮತ್ತು ಆನೆ ನಿಂತ ಪ್ರಕೃತಿ, ಅಂದರೆ ಜೀವನವನ್ನು ಪ್ರತಿಬಿಂಬಿಸುತ್ತದೆನ್ನಬೇಕಾ ಗುತ್ತದೆ. ಆದ್ದರಿಂದ, ಧರ್ಮಾಮೃತ ಜಿನಧರ್ಮವನ್ನೂ ಮತ್ತು ಆ ಕಾಲದ ಜೀವನಸ್ಥಿತಿ ಮತ್ತು ಬದುಕಿನ ಆಶೆ – ನಿರಾಶೆಗಳನ್ನು ಒಟ್ಟೊಟ್ಟಿಗೆ ಸೆರೆ ಹಿಡಿಯುತ್ತದೆ ಎಂಬುದೂ ಗಮ್ಯ. ಆದ್ದರಿಂದ ಧರ್ಮಾಮೃತ ಜಿನಮತದ ನೀತಿಯನ್ನು ಮಾತ್ರ ಹೇಳದೇ ಆ ಕಾಲದ ಲೋಕಗ್ರಹಿಕೆಯನ್ನು ಹೇಳುತ್ತದೆ ಎಂಬುದು ನನ್ನ ಗ್ರಹಿಕೆ. ಸಾಹಿತ್ಯ ಕೃತಿಯ ಕುರಿತು ಈ ಲೋಕಗ್ರಹಿಕೆಯಾದರೂ ಒಂದು ನಿರ್ದಿಷ್ಟ ಸಾಮಾಜಿಕ ಚೌಕಟ್ಟಿನಲ್ಲೆ ರೂಪುಗೊಳ್ಳುವಂಥದ್ದು ವಿನಾ ಅದೇನೂ ಪರಿಪೂರ್ಣ (Absolute) ಅಲ್ಲ; ಸ್ವಯಂಭೂ ಅಲ್ಲ. ಇದು ಲೆನಿನ್ ಹೇಳುವ, ಮನುಷ್ಯನ ಸಾಮಾಜಿಕ ಕ್ರಿಯಾಶೀಲತೆಯಲ್ಲಿ ನಿರಂತರವಾಗಿ ಮತ್ತೆಮತ್ತೆ ದೃqsಕೃತವಾಗಬೇಕಾದ, ಆತನ ಇರವು (being) ಮತ್ತು ಅರಿವುಗಳ (Consciousness) ಅವಿನಾಸಂಬಂಧದ ಒಂದು ಅಭಿವ್ಯಕ್ತಿ ಸ್ವರೂಪವೇ ಆಗಿದೆ. ವಾಸ್ತವ ಪ್ರಪಂಚದ ಕುರಿತಾದ ವ್ಯಕ್ತಿಯ ಕಲ್ಪನೆಗಳು ಎಷ್ಟರ ಮಟ್ಟಿಗೆ ನೈಜ, ಎಷ್ಟರ ಮಟ್ಟಿಗೆ ಭ್ರಮಾತ್ಮಕವೆಂಬುದನ್ನು ಖಚಿತಪಡಿಸಿಕೊಳ್ಳುವ ಸಾಧನ – ಆತನ ಸಾಮಾಜಿಕ ಕ್ರಿಯೆಗಳು ಪರಿಸರದೊಂದಿಗೆ ಸಂಬಂಧಿತವಾದ, ಕ್ರಿಯೆಗೆ ಸ್ಪೂರ್ತಿನೀಡುವ, ಚಿಂತನೆ ಅಥವಾ ಪ್ರಜ್ಞೆ ಅಷ್ಟರಮಟ್ಟಿಗೆ ವಾಸ್ತವದ ಪ್ರತಿಫಲನವೂ ಆಗಿರುತ್ತದೆ.

(ಉದ್ಧರಣೆ : ಆರ‍್ಕೆ ಮಣಿಪಾಲ, ಲೋಕಗ್ರಹಿಕೆ ಮತ್ತು ಅಭಿವ್ಯಕ್ತಿ ೧೯೯೫, ಪುಟ. ೧೭)

ಇಲ್ಲಿ ಸಂಪತ್ತು ಜೀವನಾವಶ್ಯಕವಾದ ಸಾಧನ ಮಾತ್ರವಾಗಿರದೆ ಜೀವನದ ವಿವಿಧ ಸುಖ ಭೋಗಗಳನ್ನು ಪೂರೈಸಿಕೊಳ್ಳುವ ಸಾಧನವಾಗಿದೆ. ಅಧಿಕಾರವೆಂಬುದು ರಾಜಪ್ರಭುತ್ವದಿಂದ ಸಾಂಸ್ಕೃತಿಕ ಯಜಮಾನಿಕೆಯವರೆಗೂ ವಿಸ್ತರಿಸಿದೆ.

ಒಂಬತ್ತನೆಯದು ಪ್ರಭಾವನೆಯ ಕಥೆ, ಒಂದು ವಿಶಿಷ್ಟವಾದ ಕಥೆ. ಒಂದು ಬಗೆಯಿಂದ ಇದು ಬಲಿವಾಮನರ ಕತೆ. ಬಲಿ ಉಜ್ಜಯನಿ ಜಯವರ್ಮ ಮಹಾರಾಜನ ಮಂತ್ರಿ. ಆತ ಬ್ರಾಹ್ಮಣ. ಅದಕ್ಕಿಂತ ಹೆಚ್ಚಾಗಿ ಆತ ಲೋಕಾಯತ ಪರಿಭಾನುಯಾಯಿ ಅಥವಾ ಚಾರ್ವಾಕ ನಂತೆ ತೋರುತ್ತಾನೆ. ಅಲ್ಲಿಗೆ ಅಕಂಪನಾಚಾರ್ಯ ಎಂಬ ಜೈನ ಮುನೀಶ್ವರರು ಬರುತ್ತಾರೆ. ಅವರನ್ನು ಬಹುಭಕ್ತಿಯಿಂದ ಗೌರವಿಸುವ ರಾಜನಿಗೆ ಬಲಿ ಹೀಗೆ ಹೇಳುತ್ತಾನೆ.

ಅದಱಿಂ ಜೀವಮುಂಟೆಂಬುದಕ್ಕಂ ಶುಭಾಶುಭಕರ್ಮಮೊಳವೆಂಬುದಕ್ಕಂ ತತ್ಪಲಮುಂ
ಟೆಂಬುದಕ್ಕಂ ಮಱಿ ಭವದೊಳ ತಾನೆ ಮಗುಳ್ದುಂಬರೆಂಬುದಕ್ಕಂ
ಸ್ವರ್ಗ ನರಕಂಗಳೊಳವೆಂಬುದಕ್ಕಂ ಸಾಕ್ಷಿಯಾರಿಕಲ್ಲಂ ಗಾಳಿಯಂ ಗಂಟಿಕ್ಕುವಂತೆ
ಮಾಯಾವ್ಯವಹಾರಮಿದನರಸ ನೀಂ ಕೆಮ್ಮನೆ ನಂಬಿ ಮರುಳಾಗಿ ತಪದಿಂದೊಚಲಂ
ನಿಷ್ಕಾರಣಂ ಪರತ್ರಯಂಟೆಂದು ತವಿಸುವ ಕಟ್ಟೆಗ್ಗರಪ್ಪ ರುಷಿಯರ ಮಾತಂ ಕೇಳು
ರಾಜ್ಯಚೊಳಾದ ಉಪಭೋಗಂಗಳಂ ಕೆಡಿಸಿಕೊಳವೇಟೆಂಬುದು ಮರಸನಿಂತೆಂದಂ
(ಪುಟ ೪೨೩ – ೪೨ ಭಾಗ – ೧ – ೧೯೨೪)

ಇದು ಲೋಕಾಯತ ಅಥವಾ ಚಾರ್ವಾಕ ದೃಷ್ಟಿ ಎಂಬುದು ಜನಜನಿತ. ಚಾರ್ವಾಕರು ಆತ್ಮ, ಸ್ವರ್ಗ, ನರಕ, ಪುನರ್ಜನ್ಮವನ್ನು ಒಪ್ಪರು. ‘‘ಈ ವಿಚಾರದಲ್ಲಿ ನಾಲ್ಕು ಮೂಲ ವಸ್ತುಗಳಿಂದ ಮಾತ್ರವೇ ಪ್ರಜ್ಞೆ ಹುಟ್ಟುತ್ತದೆ… ಸ್ವರ್ಗವೆಂಬುದು ಇಲ್ಲ ಮೋಕ್ಷವೆಂಬುದು ಇಲ್ಲ ಆತ್ಮವೆಂಬುದು ಇಲ್ಲ ಪರಲೋಕದಲ್ಲಿ ವರ್ಣಾಶ್ರಮವೆಂಬ ನಾಲ್ಕು ಜಾತಿಗಳು ನಾಲ್ಕು ಶ್ರೇಣಿಗಳ ಕರ್ಮ ನೀಡುವುದಿಲ್ಲ ನಿಜದ ಫಲವ’’ (ಪ್ರಾಚೀನ ಭಾರತದಲ್ಲಿ ಭೌತಿಕವಾದ, ದೇವೀಪ್ರಸಾದ ಚಟ್ಟೋಪಾಧ್ಯಾಯ, ಅನು : ಕಕ್ಕಿಲಾಯ ಬಿ.ವಿ ೧೯೮೯ : ಪು ೭೦) ಈ ವಾದ ವಿಜ್ಞಾನಕ್ಕೆ ಹತ್ತಿರ. ಇದು ಧಾರ್ಮಿಕ ಸಾಂಸ್ಕೃತಿಕ ಯಜಮಾನಿಕೆಯನ್ನು ಒಪ್ಪುವುದಿಲ್ಲ. ಇದನ್ನು ಒಪ್ಪಿಕೊಂಡರೆ ವೈದಿಕ ಧರ್ಮದ ಹಾಗೆ ಜೈನಧರ್ಮಕ್ಕೂ ಬಾಧಕ ಉಂಟು. ಜೈನ ಧರ್ಮ ಸ್ವೀಕರಿಸುವ ಕರ್ಮಸಿದ್ಧಾಂತಕ್ಕೆ ಇದು ವಿರೋಧಿ. ಆದ್ದರಿಂದ ಇಲ್ಲಿ ಬಲಿಯ ಪ್ರಸ್ತಾಪಕ್ಕೆ ಅಕಂಪನಾಚಾರ್ಯರು ದೀರ್ಘವಾದ ಉತ್ತರ ಕೊಡುತ್ತಾರೆ. ಆದರೆ ಅದು ಭಾವನಾವಾದಿ ಅಥವಾ ಆತ್ಮವಾದಿ ದೃಷ್ಟಿಯ ವಿವರವಾಗುತ್ತದೆ.

‘‘ಲೋಕದೊಳಾದ ವಸ್ತುವಿನಿತುಂನಿರ್ಗ್ರಂಥಮಪ್ಪಾ ಜಿನೇಶ್ವರ ಮುದ್ರಾಂಕಿತ
ಮಲ್ಲದುಂಟೆ ಜಗದೊಳ್’’

ಎಂಬುದು ನಿರ್ಣಯವಾಗುತ್ತದೆ. ಮಹಾರಾಜ ಬಲಿಯನ್ನು ರಾಜ್ಯದಿಂದ ಹೊರಹಾಕುತ್ತಾನೆ. ಬಲಿ ಸಿಟ್ಟುಮಾಡಿ ಅಕಂಪನಾಚಾರ್ಯರನ್ನು ಕೊಲ್ಲುವ ಪಂಥ ಮಾಡಿಕೊಳ್ಳುತ್ತಾನೆ.

ಅಂಥ ಒಂದು ಅವಕಾಶ ಬಲಿಗೆ ದೊರಕುತ್ತದೆ. ಅಕಂಪನಾಚಾರ್ಯರು ಚಾತುರ್ಮಾಸ ವ್ರತಕ್ಕಾಗಿ ಬಲಿಯುವಾಸವಾಗಿರುವ ಪದ್ಮರಾಜನ ಪುರಕ್ಕೆ ಬರುತ್ತಾರೆ. ಭೂಮಿ ಶೋಧಕ್ಕಾಗಿ ಅವರು ಗುಹೆ ಹೊಕ್ಕಾಗ ಬಲಿ ಅದರ ಬಾಗಿಲಿನಲ್ಲಿ ಬೆಂಕಿ ಹಾಕಿರುತ್ತಾನೆ. ಇದನ್ನು ಜಿಷ್ಣು ಗಳೆಂಬ ಆಚಾರ್ಯರು ಅಲೋಚನೆಯಿಂದಲೇ ತಿಳಿದು ತಮ್ಮ ಶಿಷ್ಯನಾದ ವಿಷ್ಣುಕುಮಾರನನ್ನು ಕಳಿಸಿಕೊಡುತ್ತಾರೆ. ಇದರಿಂದ ಅಕಂಪನಾಚಾರ್ಯರು ಅಪಾಯದಿಂದ ಪಾರಾಗುತ್ತಾರೆ.

ಬಲಿ ಒಂದು ಯಜ್ಞ ಶುರು ಮಾಡುತ್ತಾನೆ. ಅಲ್ಲಿಗೆ ವಿಷ್ಣುಕುಮಾರ ಹೋಗುತ್ತಾನೆ. ಅವನನ್ನು ಕಂಡು ಆಕರ್ಷಿತನಾದ ಬಲಿ ಆತನನ್ನು ಸತ್ಕರಿಸಿ ಬೇಕಾದದ್ದನ್ನು ಕೇಳಿದಲ್ಲಿ ದಾನ ಕೊಡುವುದಾಗಿ ಹೇಳುತ್ತಾನೆ. ಆತ ಮೂರು ಹೆಜ್ಜೆ ನೆಲ ಕೇಳುತ್ತಾನೆ. ಎರಡು ಹೆಜ್ಜೆ ಅಳೆದು ಮೂರನೆ ಹೆಜ್ಜೆ ಅಳೆದು ಮೂರನೆ ಹೆಜ್ಜೆಗೆ ಸ್ಥಳವಿಲ್ಲದೇ ಆಕಾಶದಲ್ಲಿ ಕಾಲನ್ನು ತಿರುಗಿಸುತ್ತಾನೆ. ಆಗ ದೇವತೆಗಳೆಲ್ಲ ಓಡಿ ಬಂದು ಜಯ ಜಯಕಾರ ಮಾಡುತ್ತಾರೆ. ಬಲಿ ಯನ್ನು ರಾಜ ತನ್ನ ರಾಜ್ಯದಿಂದ ಹೊರಹಾಕುತ್ತಾನೆ. ಪದ್ಮಮಹಾರಾಜನು ಧರ್ಮದಲ್ಲಿ ದೃಢಚಿತ್ತನಾಗುತ್ತಾನೆ.

ಇಲ್ಲಿ ಭೌತ ಮತ್ತು ಆತ್ಮವಾದದ ಮುಖಾಮುಖಿಯಾಗುತ್ತದೆ. ಖರೆ ಎಂದರೆ ಭೌತಿಕವಾದವನ್ನು ಎದುರಿಸಬೇಕಾದುದು ಜೈನಧರ್ಮವಲ್ಲ. ಮುಖ್ಯವಾಗಿ ವೈದಿಕ ಧರ್ಮ ಅಥವಾ ಮತ. ಆದರೆ ಗಾಜಿನ ಮನೆಯಲ್ಲೆ ವಾಸಿಸುವವರು ಯಾರೂ ಗಾಜಿನ ಮನೆಗೆ ಕಲ್ಲು ಒಗೆಯಬಾರದು. ಆ ಕಾರಣದಿಂದ ಭೌತವಾದ ಜೈನಕ್ಕೂ ವೈರಿ. ಆ ದಿಸೆಯಲ್ಲಿ ಅದು ವೈದಿಕ ಮತಕ್ಕೆ ಪೋಷಕವಾಗಿ ನಿಂತುಕೊಳ್ಳುವಂತಾಗುತ್ತದೆ. ಅದರೆ ಒಂದೇ ಹೊತ್ತಿಗೆ ವೈದಿಕ ಧರ್ಮದ ಮೇಲೂ, ಚಾರ್ವಾಕ ಪಂಥದವರ ಮೇಲೂ ಸಾಂಸ್ಕೃತಿಕ ಯಜಮಾನಿಕೆ ಯನ್ನು ಸ್ಥಾಪಿಸುತ್ತದೆ.

ಸಂಪತ್ತು ಮತ್ತು ರಾಜ್ಯಾಧಿಕಾರ

ಧರೆ ಕೊಂಡುಕೊನೆದು ಬಣ್ಣಿಪುದು
ದಂದೆ ಗುಣೋನ್ನುತಿಯನೀ ಮಾಹತ್ಮಂ ಧರೆಗ
ಚ್ಚರಿಯಾಗೆ ಭಕ್ತಿಯಿಂದಂ
ಸುರರಿಂದಂ ಪೂಜಿವೆಡೆದನಿನ್ನಿರುಮೊಳರೇ
ಎಂದೊದ್ದಾಯನ ಮಹಾರಾಜನ್ಮ ರೋಕಮೆಲಂ ಒಂದೆ ಕೊರಳೊಳ್ ಕೊಂಡಾಡೆ
(ಸದ್ಗುಣದೊಳ್ ಕೂಡಿ) ಪಲಕಾಲಂ ರಾಜ್ಯಂಗೆಯ್ದು….
(ಅಧ್ಯಾಯ ೪, ೨೯೫, ೬೬)

ಒದ್ದಾಯನ ರಾಜನ ಮಹಾತ್ಮೆಯನ್ನು ಜನ ಬಣ್ಣಿಸೇ ಬಣ್ಣಿಸುತ್ತಾರೆ. ಅದಕ್ಕೆ ಕಾರಣ ಅವನ ಹೆಂಡತಿಯಾದ ಪ್ರಭಾವತಿಯ ಪಾತಿವ್ರತ್ಯ. ಒಮ್ಮೆ ರಾಜನಿಲ್ಲದ ಸಮಯ ಈಕೆಯ ಗೆಳತಿ ಕ್ಷುಲ್ಲಕ ಕಾರಣಕ್ಕೆ ಸಿಟ್ಟುಮಾಡಿ ಮಾಳವೇಶ್ವರ ದೊರೆಯಾದ ಚಂಡ್ರಪ್ರದ್ಯೋತನನ್ನು ಪ್ರಲೋಭನಗೊಳಿಸಲು ಆತ ಪ್ರಭಾವತಿಯನ್ನು ಪಡೆಯಲು ಯುದ್ಧಕ್ಕೆ ಸನ್ನದ್ಧನಾಗಿ ಬರುತ್ತಾನೆ. ಆದರೆ ಆಕೆ ಒಪ್ಪಲಿಲ್ಲ. ಅದೇ ಹೊತ್ತಿಗೆ ವಾಸವನೆಂಬ ದೇವ ವಿಮಾನದಲ್ಲಿ ಹೋಗುತ್ತಿರುವಾಗ ಈಕೆಯನ್ನು ಪರೀಕ್ಷಿಸಬೇಕೆಂದು ಇಡೀ ಸೈನ್ಯವನ್ನು ಉಜ್ಜಯನಿಗೆ ತೆಗೆದು ಕೊಂಡು ಹೋಗಿಬಿಟ್ಟು, ಅರಮನೆಯ ಜನರಿಗೆಲ್ಲ ನಿದ್ದೆ ತರಿಸಿ ಚಂಡಪ್ರದ್ಯೋತನ ವೇಷಧರಿಸಿ ಹೋಗಿ ಅವಳನ್ನು ಭಯಪಡಿಸುತ್ತಾನಾದರೂ ಆಕೆ ಒಪ್ಪಲಿಲ್ಲ. ಅನಂತರ ತನ್ನ ನಿಜ ರೂಪ ತೋರಿಸಿ, ಶೀಲವತಿಯೆಂಬ ಹೆಸರು ಕೊಟ್ಟು ದೇವಲೋಕಕ್ಕೆ ಹೋಗುತ್ತಾನೆ.

ಇದನ್ನು ಕೇಳಿದ ಪಟ್ಟಣದ ರಾಜರು ಮೇಲಿನಂತೆ – ‘ದೇವತೆಗಳಿಂದ ಪೂಜಿಸಲ್ಪಡುವ ರಾಜರುಂಟೇ? ನಮ್ಮ ಮಹಾರಾಜರ ಸಮಾನರಾರು’ ಮುಂತಾಗಿ ಉದ್ಗರಿಸುತ್ತಾರೆ.

ನಿಜವಾಗಿ ಇಲ್ಲಿ ಪೂಜೆಗೊಳ್ಳುವವಳು ಪ್ರಭಾವತಿಯಾದರೂ ಅಂತಿಮವಾಗಿ ಕೀರ್ತಿ ಬರುವುದು ರಾಜನಿಗೆ. ಯಾಕೆಂದರೆ ಅಂಥ ದೈವಿಕತೆಗೆ ಒಡೆಯ – ಅಧಿಕಾರಿಯಾದವ ಅವಳ ಗಂಡ – ಒದ್ದಾಯನ ಮಹಾರಾಜ ಹೆಂಡತಿ ಗಂಡನ ಆಸ್ತಿ.

ರಾಜವೈಭವ, ರಾಜೈಶ್ವರ್ಯ ಮುಂತಾದ ಮಾತುಗಳು ಜನಮನದಲ್ಲಿ ನೆಲೆಗೊಂಡ ಮಾತುಗಳಾಗಿವೆ. ಅಂದರೆ ರಾಜನಿಗೇ ಸರ್ವಸಂಪತ್ತುವೂ ಸೇರಬೇಕು. ಯಾಕೆಂದರೆ ಆತನಿಗೆ ಸರ್ವಾಧಿಕಾರವಿದೆ.

ಹತ್ತನೆಯ ಅಧ್ಯಾಯ ಅಹಿಂಸೆಯಲ್ಲಿ ವಿಶ್ವಂಧರ ಮಹಾರಾಜನ ಕತೆ ಬರುತ್ತದೆ. ಅದೇ ದೇಶದ ರಾಜಶ್ರೇಷ್ಠಿಯ ಮಗಳು ಸುಬಂಧುಶ್ರೀ ಮೇಲೆ ರಾಜನ ಮನಸ್ಸು ಹೋಗುತ್ತದೆ. ಅವಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಕೇಳುತ್ತಾನೆ. ಆ ಸುದ್ದಿಯನ್ನು ತಂದ ಹೆಗ್ಗಡೆ ಸಂದೇಶವನ್ನು ಹೇಳಿ ‘‘ನೀವು ತಲೆಯೊಡೆಯರ್ಗ ತಲಿಸುತ್ತಂ ಮಾರ್ಕೊಂಡರೆನಿಸಿ ನಗೆಯಂ ಮಾಡಿಕೊಳ್ಳದೆ ಸರ್ವಸ್ವಕ್ಕೊಡೆಯನಪ್ಪ ಕುಲಸ್ವಾಮಿಗೆ ಮಾರ್ಕೊಳದೆ ಕೂಸಂ ಕುಡುವುದೆಂದು’’ ಎಂಬುದನ್ನು ಕೇಳಿ

ಅರಸಂ ಗಡ ಪಿರಿದಪ್ಪಾ
ದರದಿಂಗಡ ಮತ್ತನೂಜೆಯಂ ಬೇಡಿಪುರಂ
ದರವಿಭವನಟ್ಟುವಂ ಗಡ
ನರಸೆನ್ನಿಂ ಬಿಟ್ಟು ಧನ್ಯರಾರುರ್ವರೆಯೊಳ್

ಎನ್ನುತ್ತಾನೆ. ಆದರೆ ಈ ಮಾತು ಅವನ ಹಾರ್ದಿಕ ಅನ್ನಿಸಿಕೆಯಲ್ಲ. ಕರೆಯಲು ಬಂದ ರಾಜದೂತನೊಡನೆ ‘ಪೆಗ್‌ಡೆಗಳಂ ಚಾಟುಕಾರಿಸಲೆಂದು ಕೃತಕ ವಚನಗಳಂ’ ಹೇಳಿದ ಮಾತು ಗಳಾಗಿವೆ. ಆದರೆ ಆ ಮಾತು ರಾಜರ ಅಧಿಕಾರದ ಶ್ರೇಷ್ಠತೆಯನ್ನು ಹೇಳುತ್ತದೆ. ರಾಜ ಜನಧರ್ಮದವನೂ ಅಲ್ಲವಾಗಿ ಮದುವೆಯಾಗಲು ಮಗಳಾಗಲೀ, ಇದಕ್ಕೆ ತಾಯಿಯ ಒಪ್ಪಿಗೆಯೂ ಇಲ್ಲ. ಸ್ವತಃ ತಂದೆ ಗುಣಪಾಲ ಶೇಷ್ಠೆಗೆ ಸಮ್ಮತವಿಲ್ಲದ ಕಾರಣದಿಂದಾಗಿ

ಪಡೆದಿಲ್ಲಿ ನಿಂದೆನಪ್ಪೊಡೆ
ಕುಡವೇೞ್ಕು ಭೂಭುಜಂಗೆ ಮಗವಂ ಕೂಸಂ |
ಕಡುಗೂರ್ತು ಕೊಟ್ಟೆನಪ್ಪೊಡೆ
ಕಿಡುಗುಂ ಮೇಲಪ್ಪ ನಮ್ಮ ಮೋಕ್ಷದ ಸೌಧಂ ||   (೧೦ ಪದ್ಯ ೯೩)

ಎಂದು ಅಂದುಕೊಂಡು ಗರ್ಭಿಣಿಯಾದ ತನ್ನ ಹೆಂಡತಿಯನ್ನೂ ಮಗಳನ್ನೂ ಪ್ರಾಣಸ್ನೇಹಿತ ನಲ್ಲಿ ಬಚ್ಚಿಟ್ಟು ದೇಶಾಂತರ ಹೋಗಿಬಿಡುತ್ತಾನೆ.

ಇಲ್ಲಿಯ ಜನ ನಂಬಿಕೆ ಮತ್ತು ರಾಜ್ಯಾಧಿಕಾರದ ಮಧ್ಯೆಯ ಸಂಘರ್ಷದಲ್ಲಿ ಸಾಂಸ್ಕೃತಿಕ ವಾದ ಗೆಲುವು ಸೆಟ್ಟಿಯದಾದರೂ ಅಧಿಕಾರದ ಗೆಲವು ರಾಜನದಾಗುತ್ತದೆ. ತನ್ನ ಜಿನಮತದ ನಂಬಿಕೆಯ ರಕ್ಷಣೆಗಾಗಿ ಆತ ಸಂಸಾರವನ್ನು ತೊರೆದು ರಾಜ್ಯವನ್ನೇ ಬಿಟ್ಟು ಹೋಗಿಬಿಡುತ್ತಾನೆ. ಅಂತ್ಯದಲ್ಲಿ ಈ ಸೆಟ್ಟಿಯು ರಾಜನಾಗುವುದು ಜಿನಮತ ರಾಜ್ಯಾಧಿಕಾರದ ಶ್ರೇಷ್ಠತೆಯನ್ನು ಒಪ್ಪಿಕೊಂಡುದರ ಕುರುಹಾಗುತ್ತದೆ. ಆದರೆ ಅಧಿಕಾರದ ಕ್ರೌರ್ಯವು ಸೆಟ್ಟಿಯ ಸಂದರ್ಭದಲ್ಲಿ ವ್ಯಕ್ತವಾಗುವುದು ಮತ್ತು ವ್ಯಕ್ತವಾಗುವ ರೀತಿ ರಾಜ್ಯದ ಪರಮಾಧಿಕಾರ, ಆ ಅಧಿಕಾರದಲ್ಲಿ ರುವ ಕ್ರೌರ್ಯ ಇವೆಲ್ಲ ವ್ಯಕ್ತವಾಗುತ್ತದೆ. ಇದಕ್ಕೆ ಆಸ್ತೇಯ ೧೨ನೆಯ ಕತೆಯಲ್ಲಿ ಓರ್ವ ರುಷಿ ತಾನು ಸಾಕಿದ ಆನೆಯನ್ನು ರಾಜ ಕೇಳಿದಾಗ ಅವನಿಗೆ ಕೊಟ್ಟು ಬಿಡುವುದು ಸಾಕ್ಷಿ ಯಾಗಿದೆ.

ರಾಜತ್ವ ಸಂಪತ್ತು ಮತ್ತು ಅಧಿಕಾರದ ಕೇಂದ್ರಸ್ಥಾನವಾಗಿರುವುದನ್ನು ಚರಿತ್ರೆ ಸ್ಪಷ್ಟಪಡಿ ಸುತ್ತದೆ. ಈ ರಾಜ್ಯಕ್ಕೆ ಮೀರಿದ ಅಧಿಕಾರವನ್ನು ಸಂಪತ್ತೇ ಒದಗಿಸುತ್ತದೆ. ಆ ಸಂಪತ್ತಿನ ಮುಖಾಂತರ ಮಾತ್ರವೇ ಸೈನ್ಯವನ್ನು ಸಾಕಲು ಸಾಧ್ಯ. ಅದ್ದರಿಂದ ಅಧಿಕಾರ ಸಹಜವಾಗಿ ಕ್ರೌರ್ಯ – ಹಿಂಸೆಯನ್ನು ಒಳಗೊಂಡಿರುತ್ತದೆ.

ಇದರ ಒಂದು ಎಳೆಯನ್ನು ಮಹಾಭಾರತ ನೀಡುತ್ತದೆ. ಮಹಾಭಾರತದ ಸಭಾಪರ್ವದಲ್ಲಿ ಬರುವ ಈ ಮಾತನ್ನು ಗಮನಿಸಿ.

ನವೈ ರಾಜ್ಯಂ ನರಾಜಾs ಸೀತೆ
ನಚದಂಡೋನ ದಂಡಕ
ಧರ್ಮೇಣೈವ ಪ್ರಜಾ ಸರ್ತಾ
ರಕ್ಷಂತಿ ಸ್ಮ ಪರಸ್ಪರಂ

(ಉದ್ದರಣೆ : ಭಾರತೀಯ ತತ್ವಜ್ಞಾನ ಸಾಮಾಜಿಕ ಸಂಘರ್ಷ : ಎಸ್.ಜಿ. ಸರದೇಸಾಯಿ, ಅನು : ಗೌರೀಶ ಕಾಯ್ಕಿಣಿ: ೧೯೯೪, ಪುಟ ೮೦)

ಹಿಂದೆ ರಾಜ್ಯವಾಗಲಿ ರಾಜನಾಗಲಿ ಇದ್ದಿರಲಿಲ್ಲ. ದಂಡವೂ ದಂಡಕನೂ ಇಟ್ಟಿರಲಿಲ್ಲ. ಪ್ರಜೆಗಳನ್ನು ಧರ್ಮವೇ ಪರಸ್ಪರರನ್ನು ರಕ್ಷಿಸುತ್ತಿತ್ತು ಎಂಬುವ ಸಾರಾಂಶ. ಇಲ್ಲಿ ಧರ್ಮ ಎಂದರೆ ಯಾವುದೇ ಮತಧರ್ಮವಲ್ಲ. ಬದಲಾಗಿ ಹಂಚಿ ತಿನ್ನುವ, ಶೇಖರಣೆಯಿಲ್ಲದ ಕಾಲದ ಸ್ವಭಾವ ಧರ್ಮವಾಗಿದೆ. ಇದು ಪ್ರಾಥಮಿಕ ಸಮಾಜವಾದಿ ಸಮಾಜದ ಅಸ್ತಿತ್ವವನ್ನು ಸಾರುತ್ತದೆಂದು ತೋರುತ್ತದೆ. ಸಮಾಜದಲ್ಲಿಯ ಏರುಪೇರುಗಳನ್ನು, ಗೊಂದಲವನ್ನು ಗ್ರಹಿಸಿ ಪ್ರಜೆಗಳನ್ನು ರಕ್ಷಿಸಲು ರಾಜರು ಹುಟ್ಟಿಕೊಂಡರು ಎಂಬುದು ಮಹಾಭಾರತದ ಅಭಿಪ್ರಾಯ. ಇದನ್ನು ಪುಷ್ಟಿಗೊಳಿಸುವ ಚಿಂತನೆ ಕೂಡ ನಮಗೆ ಆಧುನಿಕ ಕಾಲದಲ್ಲಿ ಸಿಕ್ಕುತ್ತದೆ. ಎಂಗೆಲ್ಸರ ಈ ಮಾತನ್ನು ಗಮನಿಸಿ.

‘‘ವರ್ಗವೈಷಮ್ಯಗಳನ್ನು ಅಂಕೆಯಲ್ಲಿಡುವ ಅಗತ್ಯತೆಯಿಂದ ರಾಜ್ಯ
ಉದ್ಭವಿಸಿದುದರಿಂದಾಗಿ, ಅದೇ ಹೊತ್ತಿನಲ್ಲಿ ಅದು ವರ್ಗಗಳ
ಘರ್ಷಣೆಯ ಮಧ್ಯದಿಂದ ಉದ್ಭವಿಸಿದುದರಿಂದಾಗಿ, ಅದು ಸಾಮಾನ್ಯ
ವಾಗಿ ಅತ್ಯಂತ ಪ್ರಬಲವಾದ ಅಧಿಕವಾಗಿ ಮೇಲುಗೈ ಪಡೆದ ವರ್ಗದ
ರಾಜ್ಯವಾಗುತ್ತದೆಅಲ್ಲದೇ, ಚರಿತ್ರೆಯಲ್ಲಿ ಕಂಡುಬರುವ
ರಾಜ್ಯಗಳಲ್ಲಿ ಬಹುಮಟ್ಟಿನವುಗಳಲ್ಲಿ ಪ್ರಜೆಗಳ ಹಕ್ಕುಗಳನ್ನು
ಅವರ ಸಂಪತ್ತಿಗನುಗುಣವಾಗಿ ಹಂಚಲಾಗಿರುತ್ತದೆ. ಉಳ್ಳವರ ವರ್ಗವು
ಇಲ್ಲದವರ ವರ್ಗದ ವಿರುದ್ಧ ತನ್ನ ರಕ್ಷಣೆಗಾಗಿ ಹೊಂದಿರುವ ಸಾಧನವೇ
ರಾಜ್ಯ ಎಂಬ ವಾಸ್ತವಾಂಶವನ್ನು ಇದು ನೇರವಾಗಿ ವ್ಯಕ್ತಪಡಿಸುತ್ತದೆ’’

(ಕುಟುಂಬ, ಖಾಸಗಿ ಆಸ್ತಿ ಹಾಗೂ ರಾಜ್ಯ ಇವುಗಳ ಉಗಮ, ಅನು : ಕೆ.ಎಲ್ ಗೋಪಾಲಕೃಷ್ಣರಾವ್, ೧೯೮೦, ಪುಟ ೨೪೪ – ೨೪೫)

ರಾಜ ವಿಷ್ಣುವಿನ ಅಂಶ ಎಂಬುದನ್ನು ವೈದಿಕ ಮತ ಪ್ರತಿಷ್ಠಾಪಿಸಿದ್ದನ್ನೇನು ಜಿನಮತ ನಿರಾಕರಿಸುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅದನ್ನು ಅದು ಪ್ರತಿಷ್ಠಾಪಿಸುತ್ತದೆ. ಜಿನಧರ್ಮದ ರಾಜರುಗಳೆಲ್ಲ ರಾಜನಾಗಿ ಹುಟ್ಟುವ ಮೊದಲು ದೇವರಾಗಿ ಹುಟ್ಟುವುದು ಕೂಡ ಇದಕ್ಕೆ ಪೋಷಕವಾಗೇ ಇದೆ. ಇದಕ್ಕೆ ಪಾಪಿಗಳೆಲ್ಲ ಜನ್ಮಾಂತರ ಶ್ರೇಣಿಯ ಮೇಲೇರುತ್ತ ಮೇಲೇರುತ್ತ ಮುಕ್ತಿಗೆ ಯೋಗ್ಯರಾಗುವುದು ಜೈನಧರ್ಮದ ಕರ್ಮಸಿದ್ಧಾಂತದ ಮನಶ್ಶಾಸ್ತ್ರವಾಗಿದೆ. ಈ ಕರ್ಮಸಿದ್ಧಾಂತ ವೈದಿಕದ್ದು ಕೂಡ.

ನಯಸೇನನ ಕಾಲಕ್ಕೆ ಜೈನಧರ್ಮ ಕರ್ನಾಟಕದಲ್ಲಿ ಶಿಥಿಲವಾಗಿತ್ತು. ‘‘ಹನ್ನೊಂದನೇ ಶತಮಾನದ ಮಧ್ಯಭಾಗದಿಂದ ಇಳಿಮುಖವಾದ ಜೈನಧರ್ಮದ ಜಾಗದಲ್ಲಿ ಶೈವಧರ್ಮ ಬೆಳವಣಿಗೆಯನ್ನು ಹೊಂದಿತು (ಹನ್ನೆರಡನೇ ಶತಮಾನದ ಕಾಯಕ ಜೀವಿಗಳ ಚಳವಳಿ – ಸಿ. ವೀರಣ್ಣ, ೧೯೮೬, ಪುಟ. ೧೭). ಸಾಮಾನ್ಯ ಜನತೆಯಲ್ಲಿ ನಿತ್ಯಜೀವನ ನಡೆಸುವುದೇ ಕಷ್ಟಕರ ವಾಗಿ ಬಹುಶಃ ಧರ್ಮ ಕರ್ಮಗಳ ಬಗ್ಗೆ ಕಾಳಜಿ ಕಡಿಮೆಯಾಗಿರಬೇಕು. ಇದಕ್ಕೆ ಜೈನಾನು ಯಾಯಿಗಳೇನೂ ಹೊರತಲ್ಲ. ಇಂಥ ಸಂದರ್ಭದಲ್ಲೆ ಶಿಥಿಲವಾದ ಧರ್ಮದ ಪುನರುಜ್ಜೀ ವನಕ್ಕೆ ನಯಸೇನ ಮನಸ್ಸು ಮಾಡಿರಬೇಕು. ಅಂತೆಯೇ ಮಗಧರಾಜನಾದ ಶ್ರೇಣಿಕ ಮಹಾ ರಾಜನು ಗೌತಮರನ್ನು ಕುರಿತು ದರ್ಶನಮುಂ ನಿಶ್ಯಂಕಾಚ್ಯಷ್ಟಗುಣಂಗುಳುಂ ಪಂಚಾಣಿವ್ರತ ಮುವೆಂಬ ಪದಿನಾಲ್ಕು ಮಹಾರತ್ನಂಗಳೊಳೊಂದೊಂದಱಳ್ ಚರಿಯಿಸಿ ನಿರ್ವೃತಿಯನೆಯ್ದಿದ ಮಹಾಪುರುಷರ ಕಥೆಗಳಂ ಬೆಸಸಲ್ಪೇೞ್ಕು’’ ಎಂದು ಕೇಳಿಕೊಳ್ಳುತ್ತಾನೆ. ಅದೇನಿದ್ದರೂ ಅವೆಲ್ಲ ರಾಜರ ಅಥವಾ ಸಾಮಂತರಾಜರ ಅಥವಾ ರಾಜಶ್ರೇಷ್ಠಿಗಳ ಕಥೆಗಳೇ ಆಗಿವೆ. ಅದಲ್ಲದಿದ್ದರೂ ಮುಕ್ತಿ ಪಡೆಯುವ ಮುನ್ನ ರಾಜರೇ ಆಗುತ್ತಾರೆ. ಆ ಆಕರ್ಷಣೆ ಕಥೆಯಲ್ಲಿ ಇದ್ದೇ ಇದೆ. ‘‘ಕಥೆಗಳ ಮೂಲಕ ಧರ್ಮ ಪ್ರಸಾರ, ಪರಮತ ವಿಡಂಬನೆಯ ಮೂಲಕ ಸ್ವಮತ ಸ್ಥಾಪನೆ – ಇದರ ಪರಂಪರೆಯೊಂದಕ್ಕೆ ನಯಸೇನ ಆದಿಪುರುಷ’’ ಎಂದು ತ.ಸು. ಶಾಮರಾಯ ಹೇಳುತ್ತಾರೆ. (ಕನ್ನಡ ಸಾಹಿತ್ಯ ಚರಿತ್ರೆ ಒಂದು ಸಮಿಕ್ಷೆ ೧೯೮೩: ೭೩ ಕತೆ ಹೇಳುವುದು ಮಾತ್ರವಲ್ಲದೆ ಅದನ್ನು ಜನಭಾಷೆಗೆ ಅನ್ವಯಿಸಿ ತಿಳಿಯಾಗಿ ಹೇಳಬೇಕಾದ ಅವಶ್ಯಕತೆಯೂ ಕಾಲಧರ್ಮವೇ ಆಗಿದೆ.

ಇಲ್ಲಿಯ ರಾಜರುಗಳೆಲ್ಲ ಸನ್ಯಾಸವನ್ನು ಸ್ವೀಕರಿಸುತ್ತಾರಾದರೂ ತಮ್ಮ ರಾಜ್ಯವನ್ನು ತಮ್ಮ ಮಕ್ಕಳಿಗೇ ಕೊಟ್ಟು ಹೋಗುತ್ತಾರೆ. ಇಲ್ಲಿಯ ಯಾವ ಕತೆಯನ್ನು ತೆಗೆದುಕೊಂಡರೂ ಇದಕ್ಕೆ ಸಾಕ್ಷಿ ಸಿಕ್ಕುತ್ತದೆ. ಅದರಲ್ಲಿಯೂ ಅವರೆಲ್ಲ ಗಂಡುಮಕ್ಕಳೇ ಆಗಿರುತ್ತಾರೆ. ಒಂದು ವೇಳೆ ಮಳೆ ಮುಕ್ತಿಗೆ ಅರ್ಹವಾಗಿದ್ದರೂ ಮುಂದಿನ ಜನ್ಮದಲ್ಲಿ ಗಂಡಾಗಿಯೇ ಹುಟ್ಟಬೇಕು. ಉದಾ: ನಾಲ್ಕನೆಯ ಕಥೆಯ ಅಪರಿಗೃಹದಲ್ಲಿ ಶೀಲವತಿ ಮಹಾದೇವಿಯು ಮಹರ್ದಿಕ ದೇವನಾಗಿ ಹುಟ್ಟಿರುತ್ತಾಳೆ.

ಹನ್ನೊಂದನೆಯ ಅಧ್ಯಾಯದ ರಾಜಕುಮಾರ ಸತ್ತು ಹೋದುದರಿಂದ ಸನ್ಯಾಸವನ್ನು ಸ್ವೀಕರಿಸಲಾರದ ರಾಜನ ಪ್ರಲಾಪ ಹೀಗಿದೆ.

ಸಂತತಿಯಿಲ್ಲದ ರಾಜ್ಯಂ
ಪಿಂತಾದುದು ವೈರಿಭೂಭುಜರ್ಗೆಡೆಯಾಯ್ತು |
ನ್ನೆಂತಕ್ಕುಮೊ ವೇೞ್ಬಿದಿಯೆಂ
ದಂತರದೊಳ್ ಮಱುಗಿ ಕುದಿದು ಬೆದೆಬೆದೆಬೆಂದಂ ||

ಜನಪದೀಯ ಭಾಷೆಯನ್ನೇ ಬಳಸುವ ಕವಿ ತನ್ನ ವರ್ಣನೆಯಲ್ಲಿ ಅಂದಿನ ಕಾಲದ ಅಧಿಕಾರ – ಉತ್ತರಾಧಿಕಾರದ ಬಗ್ಗೆ ಇರುವ ರೂಢಿಯ ಮಾತನ್ನೇ ಗಂಡುಗೂಸವೆತ್ತ ಸಜ್ಜನ ನಂತೆ ಎಂದು ಹೇಳಿದ್ದಾನೆ. ಸಜ್ಜನನಾಗುವುದಕ್ಕೆ ಗಂಡು ಹಡೆಯುವುದು ಕೂಡ ಒಂದು ಪ್ರಮಾಣಪತ್ರವಾಗುತ್ತದೆ. ರಾಜ್ಯಾಧಿಕಾರ ಹುಟ್ಟಿದ ಗಂಡು ಮಗುವಿನಲ್ಲಿ ಹೆಪ್ಪುಗಟ್ಟಿರುತ್ತದೆ. ಅಧಿಕಾರದ ಜೊತೆ ಸಂಪತ್ತೂ ವರ್ಗಾವಣೆ ಹೊಂದುತ್ತದೆ.

ಸಂಪತ್ತಿನ ಕುರಿತು ಅಧಿಕಾರದ ಕುರಿತು ಒಟ್ಟಾರೆಯಾಗಿ ಸಂಸಾರದ ಬಗ್ಗೆ ತಿರಸ್ಕಾರ ಭಾವನೆ ಇದ್ದರೂ ಸಂಸಾರದ ಲೋಲುಪತೆ ಯಾವ ಅರಸರಿಗೂ ಕಡಿಮೆ ಇರುವುದಿಲ್ಲ. ರಾಜನಲ್ಲದವನಿಗೆ ರಾಜಭೋಗವೇನೂ ದೊರಕುವುದಿಲ್ಲ. ಮೊದಲ ಅಧ್ಯಾಯದ ವಸುಮತಿ ಎಂಬ ಬ್ರಾಹ್ಮಣ ರಾಜಶ್ರೇಷ್ಠಿಯ ಉಪದೇಶದಿಂದ ಸನ್ಯಾಸವನ್ನು ಪಡೆದು ಸತ್ತನಂತರ ಐಶ್ವರ್ಯವನ್ನು ಪಡೆಯುತ್ತಾನೆ. ಹೀಗೆ ಸಂಪತ್ತಿನ ಪ್ರಲೋಭನೆ ಎಲ್ಲಿಯೂ ತಪ್ಪುವುದಿಲ್ಲ. ಕರ್ಮದ ಶ್ರೇಣಿಯಲ್ಲಿ ಮೇಲೇರಿದ ಶ್ರಾವಕರು ದೇವನಾಗಿ ಹುಟ್ಟಿದ ಮೇಲೂ ಮತ್ತೆ ರಾಜರಾಗಿ ಹುಟ್ಟುತ್ತಾರೆ.

ಏಳನೆಯ ಸ್ಥಿತಿಕರಣ ಅಧ್ಯಾಯದ ವಾರಿಷೇಣನ ಕಥೆ ಒಂದು ವಿಶಿಷ್ಟವಾದದು. ಶ್ರೇಣಿಕ ಮಹಾರಾಜನಿಗೆ ವಾರಿಷೇಣನೆಂಬ ಮಗ. ಆತನು ಬಾಲ್ಯದಲ್ಲೆಯೇ ಜಿನಮುನಿಗಳ ಸಹವಾಸದಲ್ಲೆ ವಿವೇಕಿಯಾಗಿದ್ದನು. ಒಮ್ಮೆ ಮುನಿಗಳಿಂದ ಧರ್ಮದ ಬಗ್ಗೆ ಕೇಳಿ ತಿಳಿದು ಸಂತೋಷಪಟ್ಟು ರಾತ್ರಿ ಸ್ಮಶಾನಕ್ಕೆ ಹೋಗಿ ಪ್ರತಿಮೆಯಂತೆ ನಿಂತು ತಪಸ್ಸು ಮಾಡತೊಡಗಿ ದನು. ಅದೇ ರಾತ್ರಿ ಮೃಗವೇಗನೆಂಬ ಕಳ್ಳನು ರಾಜಶ್ರೇಷ್ಠಿಯ ಹೆಂಡತಿಯ ಹಾರವನ್ನು ಕದ್ದುಹೋಗುತ್ತಿದ್ದುದನ್ನು ನೋಡಿದ ತಳವಾರನು ಆತನನ್ನು ಅಟ್ಟಿಕೊಂಡು ಬಂದನು. ಇನ್ನು ತಾನು ಸಿಕ್ಕಿ ಬಿಡುತ್ತೇನೆಂದು ತಿಳಿದು ಕಳ್ಳ ಆ ಹಾರವನ್ನು ಪ್ರತಿಮೆಯ ಹತ್ತಿರ ಒಗೆದು ಓಡಿದನು. ಅಲ್ಲಿಗೆ ಬಂದ ತಳವಾರನು ವಾರಿಷೇಣನೇ ಕಳ್ಳನೆಂದು ತಿಳಿದು ಅವನನ್ನು ಹೊಡೆಯತೊಡಗಿದನು. ವಾರಿಷೇಣ ಮಾತ್ರ ಜಿನಧ್ಯಾನ ಮಾಡುತ್ತ ಸುಮ್ಮನಿದ್ದನು. ಇದನ್ನು ತಿಳಿದ ದೇವತೆಗಳು ಅವನಿಗೆ ಬೀಳುವ ಏಟುಗಳನ್ನೆಲ್ಲ ಅಭರಣವಾಗುವಂತೆ ಮಾಡಿದರು. ಬೆಳಗಾದ ಮೇಲೆ ಆತ ತನ್ನ ವ್ರತ ತೀರಿಸಿದನು. ಇದನ್ನು ತಿಳಿದ ರಾಜನು ಕ್ಷಮೆ ಕೇಳಿದನು.

ವಾರಿಷೇಣ ತಪಸ್ಸಿನಲ್ಲಿ ಕಾಲ ಕಳೆಯುತ್ತಿರುವಾಗ ತನ್ನ ಬಾಲ್ಯ ಸೇಹಿತನಾದ ಪುಷ್ಪದಾಡ ಮದುವೆಯಾದನೆಂದು ಕೇಳಿ, ಆತನಲ್ಲಿ ಹೋಗಿ ‘‘ಶರೀರದವಾಳಾದ ಪೊಲ್ಲಮೆಯುಮಂ ಸಂಸಾರದೊಳಾದ ದುಃಖಮುಮಂ ಭೋಗಂಗಳ ಕೇಡುಮಂ ಬಾಱಯ ನಿತ್ಯತೆಯುಮಂ ವನಿತೆಯರ ಕಷ್ಟತೆಯುಮಂ’’ ಕುರಿತಾಗಿ ಉಪದೇಶ ಮಾಡಿದನು. ಆದರೆ ಅದರಿಂದ ಸಮಾಧಾನ ಹೊಂದದ ಪುಷ್ಪದಾಡ ಮೊದಲಿನಂತೇ ಇರಲು ವಾರಿಷೇಣನು ತನ್ನ ಅರಮನೆಗೆ ಹೋದನು. ಅಲ್ಲಿ ಆತನ ಐದುನೂರು ಜನ ಹೆಂಡತಿಯರನ್ನು ಕರೆಸಿ ಪುಷ್ಪದಾಡನಿಗೆ ತೋರಿಸಿ ತಾನು ಇಂಥ ಸುಂದರ ಹೆಂಡಂದಿರನ್ನು ಬಿಟ್ಟು ಹೋಗಿದ್ದೇನೆ. ನೀನು ನಿನ್ನ ಅಸುಂದರ ಹೆಂಡತಿಗೆ ಅಂಟಿಕೊಂಡಿದ್ದೀಯಾ ಎಂದುದಲ್ಲದೆ, ಹೆಂಡತಿಯೇ ಲಘುವಾದ ಮಾತನ್ನು ಆಡುವಂತೆ ಮಾಡಿದನು. ಇದರಿಂದ ಪುಷ್ಪದಾಡ ನಾಚಿಕೊಂಡು, ಜಿನದೀಕ್ಷೆ ಪಡೆವಂತಾಯಿತು. ಇಂಥ ಕಠೋರ ವ್ರತಿ ಹಾಗೂ ಜಿನ ಜ್ಞಾನಿ ವಾರಿಷೇಣನು ಮುಂದೆ ಹನ್ನೆರಡು ವರ್ಷ ತಪಸ್ಸು ಮಾಡಿ ಸರ್ವಾರ್ಥ ಸಿದ್ದಿಯಲ್ಲಿ ಹುಟ್ಟಿದನು.

ಈ ಸರ್ವಾರ್ಥ ಸಿದ್ದಿ ಅಂದರೇನು?. ಇದನ್ನು ರಾಜಾರಾಮ ಹೆಗಡೆ ಹೀಗೆ ವಿವರಿಸಿದ್ದಾರೆ.
ದೇವಲೋಕದಲ್ಲಿ ಒಂದರ ಮೇಲೊಂದರಂತೆ ನಾಲ್ಕು ಅಂತಸ್ತುಗಳು
ಇವೆ. ಧರ್ಮಗೆಯ್ದವರು (ಜಿನಧರ್ಮ) ಈ ದೇವಲೋಕದೊಳಗೆ
ಹೋಗುತ್ತಾರೆ. ಮೊದಲ ಕೆಳ ಹದಿನಾರು ಕಲ್ಪಗಳು ಬರುತ್ತವೆ.
ಅದಕ್ಕೂ ಮೇಲೆ ಒಂಬತ್ತು ಗೈವೇಯಕಗಳು, ಅದಕ್ಕೂ ಮೇಲೆ
ಐದು ಅಣುತ್ತರಗಳು ಇವೆ. ಈ ಕೊನೆಯ ಹಂತದಲ್ಲಿ ಸರ್ವಾರ್ಥ
ಸಿದ್ದಿ ಎಲ್ಲಕ್ಕೂ ಮೇಲೆ ಬರುತ್ತದೆ. ಅದಕ್ಕೂ ಮೇಲಿನ ದೇವತ್ವ
ಸಾಧ್ಯವಿಲ್ಲ. ಇಲ್ಲಿ ದೇವತ್ವವನ್ನು ಹೊಂದಿದವರೂ ಇಂದ್ರನೇ
ಮೊದಲಾದ ಅವನ ಮೇಲೆ ಬರುವ ನಾನಾ ಶ್ರೇಣಿಯ ದೇವತೆಗಳಾಗಿ
ಹುಟ್ಟುತ್ತಾರೆ. ಅದು ಅವರವರ ಧರ್ಮ ಸಾಧನೆಗೆ ಅನುಗುಣವಾಗಿ
ಇರುತ್ತದೆ. ಈ ದೇವತೆಗಳ ಶ್ರೇಣೀಕರಣದಲ್ಲೆ ಅತ್ಯಂತ ಮೇಲಿನ
ಸ್ಥಾನ ಅಹಮಿಂದ್ರತ್ವವಾಗಿದೆ. ಈ ದೇವತೆಗಳ ಸುಖ ಹೇಗಿದೆಯೆಂದರೆ
ಅಷ್ಟಗುಣೈಶ್ವರ್ಯಂಗಳೊಳ್ ಕೂಡಿ…. ರೂಪ ಲಾವಣ್ಯ
ಸೌಭಗ್ಯ ಕಾಂತಿತ್ವ…ಗಳು ಮನೋಡೆಯರಾಗಿ…
ಆಯುಷ್ಯಾಂತದವರೆಗೂ ನವಯೌವನರಾಗಿ.. ಮುಪ್ಪವಪ್ಪ
ಮುತ್ತೈ…. ಎಂದಿವು ಮೊದಲಾಗೊಡೆಯವಿಲ್ಲದೋರೆ….
ಮೊದಲಾಗೊಡೆಯ ಪದಿನಾರು ಮಾಭರಣಮಂ ತೊಟ್ಟು ದಿವ್ಯ
ವಸ್ತ್ರಂಗಳನುಟ್ಟು… ಎರಡು ಸಾಗರೋಪಮಂ ಮೊದಲಾಗಿ
ಮೂವತ್ತು ಮೂರು ಸಾಗರೋಪಮಂಬರೆಗಾಮಾಯುಷ್ಯ
ಮನೋಡೆಯರಾಗಿ ಆಟಪಾಟ ವಿನೋದಗಳಿಂದಂ ದೇವಿಯರಪ್ಸರಸಿಯರ್ಕ
ಳೊಡನೆ ಪಲಕಾಲಂ ದಿವ್ಯ ಸುಖವನನುಭವಿಸಿ ಆಯುಷ್ಯ ತೀರಿದ
ಮೇಲೆ ಅರಸು ಕುಲಗಳಲ್ಲಿ ಜನ್ಮ ತಳೆಯುತ್ತಾರೆ. ಈ ರೀತಿ ಮೋಕ್ಷ
ಎಂದರೆ ಜನನ ಮರಣಗಳು ಇಲ್ಲದ, ದುಃಖಗಳು, ಪರಿಗ್ರಹಗಳು,
ಐದು ಕೋಟಿ ಅರವತ್ತೆಂಟು ಲಕ್ಷ ತೊಂಬತ್ತೈದು ಸಾವಿರದ ಇನ್ನೂರ
ನಲವತ್ತು ರೋಗಂಗಳಿಲ್ಲದ ಅನಂತಜ್ಞಾನ, ಅನಂತದರ್ಶನ, ಅನಂತ
ವೀರ್ಯ, ಅನಂತ ಸುಖಗಳೆಂಬುವನ್ನು ಕೂಡಿ ಲೋಕಾಲೋಕಮ
ವೆಲ್ಲವನ್ನು ಮೊದಲೇ ಕಾಣುತ್ತ, ಅರಿಯುತ್ತ ಅನಂತ ಕಾಲ ಹಾಗೆ
ಇರುವುದು.
(ಲೌಕಿಕ – ಅಲೌಕಿಕ ೨೦೦೧ : ೧೨೦)

ಇದು ವಿಸ್ಮಯ ಪಡಿಸಬೇಕಾದುದೇನೂ ಅಲ್ಲ. ಮತ ಧರ್ಮಗಳು ತಮ್ಮ ಆಕರ್ಷಣೆ ಯನ್ನು ಇಟ್ಟುಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಇಂಥ ಭ್ರಾಮಕಗಳ ಬಲೆಯನ್ನು ಒಡ್ಡುವುದು ಸಾರ್ವತ್ರಿಕವಾಗಿದೆ.

ಇತರ ಸಂಗತಿಗಳು

ಆರನೆಯ ಅಧ್ಯಾಯದಲ್ಲೆ ಬರುವ ‘ಉಪಗೂಹನ’ದ ಕತೆ ಇನ್ನೊಂದು ವೈಶಿಷ್ಟ್ಯ ಉಳ್ಳದ್ದು. ವೀರಧ್ವಜನೆಂಬ ಅರಸನ ಮಗ ಊರ ಹೊರಗೆ ಕಳ್ಳರ ಮಾತನ್ನು ಕೇಳಿಸಿಕೊಳ್ಳುತ್ತಿ ದ್ದನು. ಆಗ ಸೂರ್ಪನೆಂಬ ಕಳ್ಳ ‘ದೇವಾ ನಾನು ಹೋಗದ ದೇಶವಿಲ್ಲ. ಕದಿಯದ ವಸ್ತುವಿಲ್ಲ, ಕಾಮಲಿಪ್ತಿಪುರದ ಜಿನೇಂದ್ರ ಭಕ್ತನ ವಿಹಾರದಲ್ಲಿ ಒಂದು ರತ್ನವಿದೆ. ಆ ರತ್ನಕ್ಕೆ ಮೂರು ಲೋಕವನ್ನು ಬೆಲೆಯಾಗಿ ಕೊಟ್ಟರೂ ಸಾಲದು’ ಎನ್ನುತ್ತಾನೆ. ಆಗ ರಾಜಮಿತ್ರ ತನಗೆ ತಂದು ಕೊಟ್ಟವರಿಗೆ ಅರ್ಧ ರಾಜ್ಯ ಕೊಡುವುದಾಗಿ ಹೇಳುತ್ತಾನೆ. ಅದಕ್ಕೆ ಕಳ್ಳ ಒಪ್ಪಿ ಉಪಾಯ ಮಾಡತೊಡಗಿದನು. ಅಲ್ಲಿ ಕಾವಲಿರುತ್ತಾನೆ. ತುಸುವೇ ಸಿಕ್ಕಿದರೂ ಹಿಡಿದು ಕೊಲ್ಲುತ್ತಾರೆ ಎಂದು ಯೋಚಿಸಿ ಕೆಲದಿನ ಸನ್ಯಾಸಿಗಳ ಸಂಗಡ ಇದ್ದು, ಅವರ ದಿನಚರಿಯನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ತಲೆಯಂಬೋಳಿಸಿಕೊಂಡು ಬ್ರಹ್ಮಚಾರಿ ವೇಷಮಂ ಕೈಕೊಂಡು ಅಲ್ಲಿಗೆ ನಡೆದನು. ಶುದ್ಧ ಬ್ರಹ್ಮಚಾರಿಯಾಗಿ ತರುಣಿಯರೊಳ ಮಾತಾಡಂ ಇತ್ಯಾದಿ ಇರಲು ಆ ವಿಚಾರದ ಜಿನೇಂದ್ರ ಸೆಟ್ಟಿ ಈತ ಮಹಾಪುರುಷನೆಂದೇ ಬಗೆದು ಸೇವೆ ಮಾಡುತ್ತಾನೆ.

ಹೀಗಿರಲು ಕೆಲ ದಿನಗಳ ನಂತರ ಸೆಟ್ಟಿ ವ್ಯಾಪಾರಕ್ಕೆ ಪರದೇಶಕ್ಕೆ ಹೊರಟು ಹೊರಗೆ ಬೀಡು ಬಿಟ್ಟಿರುವಾಗ ಕಳ್ಳರಾತ್ರಿ ಎಲ್ಲರೂ ಮಲಗಿರುವ ಸಮಯದಲ್ಲಿ ದೀಪವನ್ನೆಲ್ಲ ಆರಿಸಿ ಆ ರತ್ನವನ್ನು ತೆಗೆದುಕೊಂಡು ರಾಜಕುಮಾರನಿಂದ ಅರ್ಧ ರಾಜ್ಯ ಪಡೆದು ಸುಖವನ್ನನು ಭವಿಸುವ ಆಲೋಚನೆಯಲ್ಲಿ ಓಡತೊಡಗಿದನು. ಆದರೆ ಆ ರತ್ನವು ಸ್ವಯಂಪ್ರಭೆಯದಿದ್ದು, ಕಳ್ಳನು ಕಲಿತುಕೊಂಡಿರುವ ಮಾಯಾವಿದ್ಯೆಯಿಂದಾಗಿ ಆತ ಕಾಣಿಸದಿದ್ದರೂ ರತ್ನ ಓಡುವುದು ಕಾಣಿಸುತ್ತಿತ್ತು. ಇದನ್ನರಿತು ತಳವಾರರು ಕಳ್ಳನ ಬೆನ್ನು ಹತ್ತಿದರು. ಇನ್ನು ತಳವಾರನ ಕೈಗೆ ಸಿಕ್ಕರೆ ತನಗೆ ಸಾವೇ ಗತಿಯೆಂದು ಬಗೆದು ಊರ ಹೊರಗೆ ಬೀಡು ಬಿಟ್ಟದ್ದ ಜಿನೇಂದ್ರ ಸೆಟ್ಟಿಯ ಬಿಡಾರವನ್ನು ಸೇರಿಕೊಂಡನು. ಆಗ ಸೆಟ್ಟಿ ಆತನನ್ನು ಪೀಠದ ಮೇಲೆ ಕುಳ್ಳಿರಿಸಿ ಕಾಲೊತ್ತುತ್ತಿರಲು ತಳವಾರ ಬಂದು ನಡೆದ ಸಂಗತಿಯನ್ನು ತಿಳಿಸಿದನು. ಸೆಟ್ಟಿಯು ಆತ ಕಳ್ಳನಲ್ಲವೆಂದು ಹೇಳಿ ತಳವಾರ ಮೊದಲಾದವರನ್ನು ಹಿಂದಕ್ಕೆ ಹೋಗುವಂತೆ ಮಾಡಿದನು.

ಆದರೆ ಸಂಗತಿ ಜಿನೇಂದ್ರಶೆಟ್ಟಿಯ ಅರಿವಿಗೆ ಬಾರದೇ ಇರಲಿಲ್ಲ. ಆತ ಸೂರ್ಪ ಕಳ್ಳನನ್ನು ಏಕಾಂತಕ್ಕೆ ಕರೆದೊಯ್ದು ‘‘ನಿನ್ನಂ ಬಿಟ್ಟು ಘಾತುಕರುಂ ವಿಶ್ವಾಸ ಘಾತುಕರುಂ ಮಾಯಾವಿ ಗಳುಮಿಲ್ಲ; ಬೆಕ್ಕು ಪಾಲಂನಲ್ಲದೇ ಮೇಲಿನ ಬಡಿಯಂ ಕಾಣದೆಂಬಂತಿಲ್ಲಿಯ ಸುಖಮನೆ ಬಗೆದೆಯಲ್ಲದೆ ಮಱ ಭವದೊಳಾದ ಮಹಾ ದುಃಖಮಂ ಬಗೆಯಿಲ್ಲಂ…’’  ಮುಂತಾಗಿ ಉಪದೇಶ ಮಾಡಿ,

ಜಿನರಂ ಪೂಜಿಸಿದ ಮರೇಂ
ದ್ರನ ಸುಖಮಂ ಖೇಚರೇಂದ್ರ ನತ್ಯುನ್ನತಿಯಂ
ಮನುಜೇಂದ್ರನ ವಿಭವಮನಾ
ವನಾದೊಡಂ ಬಯಸಿ ಮಱಗಿದೊಡೆ

ಎಂದು ಮುಂತಾಗಿ ಬುದ್ದಿ ಹೇಳುತ್ತಾನೆ.

ಜಿನವಚನದೋಜಿಯಿಂದಂ
ಮನವಂ ಸೈತಿಟ್ಟು ಬಿಟ್ಟು ದುರ್ಮಾರ್ಗಮನಾ
ರ್ಪನಿತಂ ಸುವ್ರತದೊಳನೆ
ಟ್ಟನೆ ಮಾಱ್ಪುದು ನೆಗೞ ತಪಮುವ ದಾನಮುಮಂ

‘‘ಎಂದು ಯತಿಧರ್ಮಮುಮಂ ಶ್ರಾವಕಧರ್ಮಮುಮನಿಂದಾಗಿರೆ ಜಿನೇಂದ್ರ ಭಕ್ತ ಸೆಟ್ಟಿ ಸಂಕ್ಷೇಪದಿಂ ಪೇೞ ಸೂರ್ಪಂ ಕೇಳ್ದು ತಪದೊಳತಿಪ್ರೀತನಾಗಿ ಸಂಸಾರಕ್ಕೆ ಪೇಸಿ ಜಿನ ದೀಕ್ಷೆಯಂ ಕೈಕೊಂಡುಗ್ರೋಗ್ರ ತಪದಿಂ ನೆಗೞ್ದು ಕಡೆಯೊಳೆ ಸಮಾಧಿ ಮರಣದಿಂ ಮುಡಿಪಿ ದೇವಗತಿಪಡೆದಂ’’

ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ಸಂಗತಿಗಳೆಂದರೆ ಜಿನ ಪೂಜೆ ಮಾಡುವುದರಿಂದ ದೊರೆಯಬಹುದಾದ ಅಮರೇಂದ್ರನ ಸುಖ, ಖೇಚರೇಂದ್ರನ ಅತ್ಯುನ್ನತ, ಮನುಜೇಂದ್ರನ ಸಂಪತ್ತು ವೈಭವ ಎಂಬುದು; ಆದ್ದರಿಂದ ಜಿನವ್ರತವನ್ನು ಕೈಕೊಳ್ಳಬೇಕು.

ಇದನ್ನು ಒಪ್ಪಿ ಸೂರ್ಪ ಸನ್ಯಾಸ ದೀಕ್ಷೆಯನ್ನು ತೆಗೆದುಕೊಳ್ಳುತ್ತಾನೆ. ಇಹದ ಸುಖವನ್ನು (ಅರ್ಧರಾಜ್ಯ) ಪಡೆಯಬೇಕೆಂಬಾಸೆಯಿಂದಲೇ ಆತ ರತ್ನವನ್ನು ಕಳುವು ಮಾಡಿದ್ದು. ಅಂಥ ಆತನ ಆಶೆ ಜಿನಧರ್ಮ ಸ್ವೀಕರಿಸುವುದರಿಂದ ನೆರವೇರುತ್ತದೆಂಬ ಆಶೆ ಜೀನೇಂದ್ರ ಸೆಟ್ಟಿಯ ಉಪದೇಶದಲ್ಲೇನೂ ಇದೆ. ಆದರೆ ಏನು ಮಾಡಬಹುದಿತ್ತು? ಸೆಟ್ಟಿಯ ಕೈಯಲ್ಲಿ ಸಿಕ್ಕಿಬಿದ್ದಿ ದ್ದಾನೆ. ಆದ್ದರಿಂದ ಜಿನ ಪೂಜೆ ಒಡ್ಡುವ ಸ್ವರ್ಗ, ಕಲ್ಪಾಂತರ ಅನುಭೋಗಿಸುವ ಸರ್ವಸಿದ್ದಿ; ಅಮೇಲೆ ರಾಜಕುಮಾರನಾಗಿ ಹುಟ್ಟಿ ಅನುಭೋಗಿಸುವ ರಾಜ್ಯ ವೈಭವ ಇತ್ಯಾದಿಗಳನ್ನು ಕನಸಲ್ಲಿ ಕಂಡುಕೊಂಡು ಸನ್ಯಾಸವನ್ನು ಸ್ವೀಕರಿಸಿದನೋ? ಅದು ಏನೇ ಆಗಿರಲಿ ಸದ್ಯಕ್ಕಂತೂ ಆತನು ಹೊಟ್ಟೆಪಾಡಿಗೆ ಕಳ್ಳನೇ ಆಗಬೇಕಾಗಿತ್ತಲ್ಲ?

ಮೊದಲ ಅಧ್ಯಾಯದ ದರ್ಶನದ ಕತೆ ಕೂಡ ಇದನ್ನೇ ಹೇಳುತ್ತದೆ. ರಾಜಶ್ರೇಷ್ಠಿಯ ಹಿಂದೆ ಪ್ರವಾಸ ಹೊರಟಿದ್ದ ಬ್ರಾಹ್ಮಣ ವಸುಭೂತಿ ರಾಜಶ್ರೇಷ್ಠ ತನ್ನ ವ್ರತವನ್ನು ನಿರ್ವಹಿಸಿ ಕೊಟ್ಟರೆ ದೊಡ್ಡ ಮೊತ್ತದ ದಕ್ಷಿಣೆ ಕೊಡುವ ಅಮಿಷವನ್ನು ಒಡ್ಡುತ್ತಾನೆ. ಆಗ ಅಲ್ಲಿಯವರೆಗೆ ಜಿನಧರ್ಮದವರನ್ನು ವಿಡಂಬಿಸುತ್ತಿದ್ದ ವಸುಭೂತಿ ಆ ಆಮಿಷಕ್ಕೆ ಬಾಯೊಡ್ಡುತ್ತಾನೆ. ಅದರೆ ವ್ರತವನ್ನು ನೆರವೇರಿಸಲಾಗುವುದಿಲ್ಲ. ಜಿನಮುನಿಗಳ ಶ್ರೇಷ್ಠತೆಯನ್ನು ಒಪ್ಪಿಕೊಂಡು ಶ್ರವಣ ಸನ್ಯಾಸಿಯಾಗುತ್ತಾನೆ. ಸತ್ತು ಪುನರ್ಜನ್ಮ ಹೊಂದಿ ದೇವನಾಗಿ ಹುಟ್ಟುತ್ತಾನೆ. ಇನ್ನು ಅವನು ರಾಜನಾಗಿ ಹುಟ್ಟಿ ಸಕಲೈಶ್ವರ್ಯ ಅನುಭೋಗಿಸಬೇಕು. ಅಲ್ಲಿಯ ತನಕ ಆತ ತನ್ನ ಮುಂದಿನ ಪಾಳಿಯನ್ನು ಕಾಯುತ್ತಿರಬೇಕೇ ಹೊರತು ಪ್ರಸ್ತುತ ಸಂಪತ್ತಾಗಲಿ, ಅಧಿಕಾರವಾಗಲಿ ಸಿಕ್ಕು ವುದಿಲ್ಲ.

ಜೈನಧರ್ಮ ಅಂದಿನ ಸಮಾಜದ ಎಲ್ಲ ಅಸಮಾನತೆಯನ್ನೂ, ಶೋಷಣೆಯನ್ನೂ, ಒಪ್ಪಿಕೊಂಡಿದೆ. ಅದಕ್ಕೆ ಕರ್ಮ ಸಿದ್ಧಾಂತ ಆಧಾರವಾಗಿದೆ.

ಸ್ತ್ರೀಯರ ಕುರಿತಾಗಿ ಒಂದು ಹೆಜ್ಜೆ ಪ್ರಗತಿಪರ ಎಂದು ಜೈನ ನಮಗೆ ತೋರುತ್ತದೆ. ಅಂಥ ಉದಾಹರಣೆಯೆಂದರೆ ಸ್ತ್ರೀಯರು ವ್ರತ ಹಿಡಿದು ದೈವಕಲ್ಪವನ್ನೋ, ಮುಕ್ತಿಯನ್ನೋ ಪಡೆಯುವುದು ಸಾಧ್ಯವಾಗುತ್ತದೆ. ಆದರೆ ಅವರು ಮುಕ್ತಿ ಪಡೆಯಬೇಕಾದರೆ ರಾಜ ಪುರುಷ ನಾಗೇ ಹುಟ್ಟಿ ಬರಬೇಕು. ಅಂದರೆ ನಡೆದಂತೆ ಕಂಡರೂ ನಿಂತಲ್ಲೇ ಕಾಲು ಕುಣಿಸಿ ಓಟದ ಭ್ರಮೆಯನ್ನುಂಟುಮಾಡುವುದೇ ಆಗಿದೆ. ಪುರುಷ ಯಜಮಾನ ಅಥವಾ ಹೆಜಮನಿ (Hege – nony) ಅಲ್ಲಿಯೂ ಅಂತಿಮವಾಗೇ ಇದೆ.

ಇದನ್ನು ನಿಳ್ಳಂಕೆಯ ಕತೆಯಲ್ಲಿ ಕಂಡುಕೊಳ್ಳುವುದು ಸುಲಭ. ವಿಶ್ವಾನುಲೋಮ ಬ್ರಾಹ್ಮಣ ಯುವಕ. ಅವನ ಗೆಳೆಯ ಧನ್ವಂತರಿ ಜಿನ. ಇಬ್ಬರೂ ಮನೆಯಲ್ಲಿ ಕಳವು ಮಾಡಿ ದೇಶಭ್ರಷ್ಟರಾಗುತ್ತಾರೆ. ಅವನೊಂದು ದಿನ ಜಿನಾಲಯದಲ್ಲೆ ಮುನಿಗಳ ಉಪದೇಶವನ್ನು ಕೇಳಿ ಧನ್ವಂತರಿಗೆ ಕರ್ಮ ಶಮನವಾಗಲು ಅವರ ಬಳಿ ಹೋಗಿ ‘ತನಗೊಂದು ವ್ರತ ಕೊಡಬೇಕು’ ಎನ್ನುತ್ತಾನೆ. ಅವರು ಆತನಿಗೆ ಐದು ವ್ರತವನ್ನು ಕೊಡುತ್ತಾರೆ. ಅವುಗಳಲ್ಲಿ ಒಂದು ‘‘ನೀನು ಯಾವ ಪ್ರಾಣಿಯ ಮೇಲಾದರೂ ಕೋಪಿಸಿಕೊಂಡಾಗ ಹಿಂದಕ್ಕೆ ಏಳು ಹೆಜ್ಜೆ ಹೋಗಿ ಆಮೇಲೆ ನಿನ್ನ ಮನಸ್ಸಿಗೆ ಕಂಡಂತೆ ಮಾಡು’’ ಎಂಬುದು.

ಕದ್ದು ಜೀವನ ಮಾಡುತ್ತಿದ್ದ ಧನ್ವಂತರಿಗೆ ಮನೆಗೆ ಹೋಗಬೇಕೆಂಬ ಆಶೆಯಾಯಿತು. ಒಂದು ರಾತ್ರಿ ಊರಿಗೆ ಬಂದು ‘ಕವಾಟೋದ್ಘಾಟನ ವಿದ್ಯೆ’ಯಿಂದ ಬಾಗಿಲು ತೆಗೆದು ಒಳಗೆ ಬರುತ್ತಾನೆ. ಅಲ್ಲೆ ‘‘ಪಾಸಿನ ಮೇಲೆ ಪಟ್ಟಿರ್ದ ತಾಯುಮಂ ಹೆಂಡತಿಯಂ ಕಂಡು ಪಾದರಿಗ ನೆಂದಿೞಯ ಬಂದು’’ ಅವರನ್ನು ಕೊಲ್ಲಲು ಮನಸ್ಸು ಮಾಡುತ್ತಾನೆ. ಆದರೆ ವ್ರತವನ್ನು ನೆನೆದು ಏಳು ಹೆಜ್ಜೆ ಹಿಂದಕ್ಕೆ ಬರುತ್ತಾನೆ. ಅಷ್ಟಕ್ಕೆ ಅವನ ಸಿಟ್ಟು ಇಳಿದು ಶಾಂತನಾಗುತ್ತಾನೆ. ಮುಂದೆ ಬಂದು ಆ ಇಬ್ಬರೂ ಹೊದೆದುಕೊಂಡ ಸೀರೆಯನ್ನು ತೆಗೆಯಲಾಗಿ, ಗರ್ಭಿಣಿಯಾದ ತನ್ನ ಹೆಂಡತಿಯೂ ಮತ್ತು ತನ್ನ ತಾಯಿಯೂ ಇರುವುದನ್ನು ಕಂಡು ಆಶ್ಚರ್ಯಪಡುತ್ತಾನೆ. ಮುನಿಯು ಕೊಟ್ಟ ವ್ರತದಿಂದ ಅನಾಹುತ ತಪ್ಪಿತು ಎಂದುಕೊಳ್ಳುತ್ತಾನೆ.

ಧನ್ವಂತರಿಗೆ ಇಬ್ಬರು ಮಲಗಿದ್ದನ್ನು ನೋಡಿದೊಡನೆ ಹೆಂಡತಿ ಮಿಂಡನೊಡನೆ ಮಲಗಿರ ಬೇಕೆಂಬ ಮನಸ್ಸೇ ಧಾವಿಸಿ ಬರುತ್ತದೆಯೇ ಹೊರತು ಮನೆಯಲ್ಲೊಬ್ಬ ತಾಯಿ ಇದ್ದಾಳೆ ಎಂಬುದೇ ನೆನಪಿಗೆ ಬರುವುದಿಲ್ಲ ಅಂದರೆ ಅಷ್ಟರ ಮಟ್ಟಿಗೆ ಪುರುಷ, ಯಾಜಮಾನ್ಯ ಕೆಲಸ ಮಾಡುತ್ತದೆ. ಅವನೇ ಕಳ್ಳನಾದರೇನು, ಅವಳು ಹೆಂಡತಿ ಆಸ್ತಿಯಲ್ಲವೇ?

ಇಲ್ಲಿ ಬರುವ ಇತರ ವ್ರತಗಳು ಕೂಡ ಸಮಾಜದ ನಡಾವಳಿಕೆಯನ್ನು ಮತ್ತು ಅದಕ್ಕೆ ಜೈನ ಒಪ್ಪಿಕೊಂಡಿದನ್ನು ತೋರಿಸುತ್ತದೆ.

‘ಗುರುತಿಲ್ಲದ ಹಣ್ಣನ್ನು ತಿನ್ನಬೇಡಿ’ ಎಂಬುದು ಇನ್ನೊಂದು ವ್ರತ. ಧನ್ವಂತರಿ ಮತ್ತು ವಿಶ್ವಾನುಲೋಮ ಇಬ್ಬರು ಕಳವು ಮಾಡಿ ಬರುವಾಗ ಅಡವಿಯಲ್ಲಿ ತೀರ ಹಸಿವಾಗಿ ತಮ್ಮ ಭೃತ್ಯರುಗಳಿಗೆ ಹಣ್ಣು ಅರಸ ತನ್ನಿ ಎನ್ನುತ್ತಾರೆ. ಅವರು ತಂದ ಹಣ್ಣು ಧನ್ವಂತರಿಗೆ ಗುರುತಿಲ್ಲದ್ದು. ಜಿನಮುನಿಗಳು ಕೊಟ್ಟವ್ರತದ ಕಾರಣ ಧನ್ವಂತರಿ ತಿನ್ನುವುದಿಲ್ಲ. ಆದ್ದರಿಂದ ವಿಶ್ವಾನುಲೋಮನೂ ತಿನ್ನುವುದಿಲ್ಲ. ಆದರೆ ಭೃತ್ಯರು ‘‘ಸವಣರಂತಪ್ಪ ಧೂರ್ತರನೀ ಲೋಕದೊಳ್’’ ಎಂದು ಹೀಯಾಳಿಸಿ ಹಣ್ಣನ್ನು ತಿನ್ನುತ್ತಾರೆ. ಹಣ್ಣು ತಿಂದು ಮರಣ ಹೊಂದುತ್ತಾರೆ.

ಪಸಿದಿರಲಾರದೆ ಪಣ್ಣಂ
ಮಸಗಿ ಜಡರ್ತಿಂದು ಸಾಯೆ ಕಂಡಾಗ ಸಂ
ಕಿಸಿ ಬೞ್ದಿ ಮೆಂದು ಮಿಗೆ ಸಂ
ತಸದಿಂ ತಂತಮ್ಮ ಭೃತ್ಯನಿಕರದ ಪೊನ್ನಂ

ತಾವಿಬ್ಬರು ಹಂಚಿಕೊಳ್ಳುತ್ತಾರೆ. ಅಂದರೆ ಸತ್ತ ಭೃತ್ಯರ ಕುರಿತಾಗಿ ಇನಿತೊಂದು ದುಃಖವೂ ಅವರಿಗೆ ಆಗುವುದಿಲ್ಲ. ಅದರ ಬದಲು ಸಂತಸವೇ ಆಗಿ ಅವರ ಪಾಲಿನ ಹೊನ್ನನ್ನು ತಾವೇ ಹಂಚಿಕೊಳ್ಳುತ್ತಾರೆ.

ಕಥೆಯ ಪಾತ್ರಗಳಾಗಲಿ, ನಿರೂಪಕನಾದ ಕವಿಗಾಗಲಿ ಈ ನಿಷ್ಪಾಪಿ ಜನಸಾಮಾನ್ಯರ ಮರಣದ ಬಗ್ಗೆ ಚೂರು ದುಃಖ – ಸಂತಾಪ ಎಂಬುದು ಆಗುತ್ತಲೇ ಇಲ್ಲ. ಇಂತಹದೇ ಇನ್ನಿತರ ಹಿಟ್ಟಿನ ಬಂಡಿ ಮತ್ತು ಮಾಂಸ ತಿಂದು ಅವರ ಭೃತ್ಯರು ಸಾಯುತ್ತಾರೆ. ಆ ಕುರಿತು ಧನ್ವಂತರಿ ಗಾಗಲೀ, ವಿಶ್ವಾನುಲೋಮನಿಗಾಗಲೀ ದುಃಖವಾಗುವುದಿಲ್ಲ.

ಆಯಾ ಕಾಲದ ಅಧಿಕಾರ ಕೇಂದ್ರಗಳು ಜನಭಾಷೆಯಲ್ಲಿ ಅಲ್ಲಲ್ಲೆ ಮೂರ್ತಗೊಂಡು ಬಿಡುವುದುಂಟು. ಇದಕ್ಕೆ ಒಂಬತ್ತನೆಯ ಧರ್ಮ ಪ್ರಭಾವನೆ ಆಶ್ವಾಸನದಲ್ಲೆ ಮಹಾಪದ್ಧರಾಜ ತನ್ನ ಮಗನಿಗೆ ಪಟ್ಟ ಒಪ್ಪಿಸಿಕೊಟ್ಟು ಸನ್ಯಾಸ ಸ್ವೀಕರಿಸುವಾಗ ಹೇಳಿಕೊಂಡ ಕಳವಳದ ಮಾತಿನಲ್ಲಿ ಇಂತಹ ನೀತಿಯನ್ನು ಗುರುತಿಸಬಹುದು.

ಕವಿ ಇಲ್ಲಿ ಕೊಡುವ ಮಾಲೋಪಮೆಯಲ್ಲಿ ಕಟ್ಟೊಕ್ಕಲ ಸಾಲದಂತೆ, ಬಡವನ ದರ್ಪದಂತೆ ಮತಿಗೆಡಿಸುವ ಪೆಂಡಿರುಮಂ… ಇತ್ಯಾದಿ ಮಾತುಗಳು ಒಕ್ಕಲುಗಳ ನಿಕೃಷ್ಟ ಆರ್ಥಿಕ ಸ್ಥಿತಿಯನ್ನು, ಬಡವನಿಗೆ ಹಣವಿಲ್ಲದ್ದರಿಂದ ದರ್ಪ (ಅಧಿಕಾರ) ಸಲ್ಲದೆಂಬಂತೆ, ಹೆಂಡತಿ ಮಾಯೆ, ಗಂಡಿನ ವ್ರತ ಕೆಡಿಸುವವಳು ಮುಂತಾಗಿ ಮತ್ತು ಅದಕ್ಕೆ ಮಿಡಿಯದ ಜಿನಧರ್ಮವನ್ನೂ ಧ್ವನಿಸುತ್ತದೆ.

ಸಂಪತ್ತಿನ ವಿತರಣೆಯ ವಿಷಯದಲ್ಲಿ ಸಮಾಜ ಒಪ್ಪಿಕೊಂಡ ಸಂಗತಿಯೆಂದರೆ ಜಾತಿ (ವರ್ಣ) ಶ್ರೇಣೀಕರಣ ಒಳಗಾದುದು. ಧರ್ಮಾಮೃತದ ಹನ್ನೊಂದನೆಯ ಅಧ್ಯಾಯ ‘ಸತ್ಯ’ ದಲ್ಲಿ ಬರುವ ಧನದಮಹಾರಾಜನ ಸಂಸಾರದ ನಿರರ್ಥಕತೆಯನ್ನು ಪ್ರಸ್ತುತಪಡಿಸುವ ಮಾತಿನಲ್ಲಿ ಬರುವ ‘‘ಪೊಲಿಯರ ಧನಕ್ಕೊಡೆಯರಾಗಿಯುಂ ಮೇಲ್ಜಾತಿಯಾಗದಂತೆ’’ ಎಂಬ ಮಾತು ಬರುತ್ತದೆ. ಕೆಳಜಾತಿಗಳಲ್ಲಿ ಮುಖ್ಯವಾಗಿ ದಲಿತರಲ್ಲಿ ಯಾರೊಬ್ಬರಾದರೂ ಸಂಪತ್ತನ್ನು ಹೊಂದಿದವರಾಗಿದ್ದಾರೆ ಎಂದುಕೊಂಡರೂ ಅವರು ಮೇಲ್ಜಾತಿಗಳ ಗೌರವ – ಮನ್ನಣೆಗೆ ತಕ್ಕವರಾಗುವುದಿಲ್ಲ ಎಂಬ ಮಾತು ಚಲನರಹಿತವಾದ ಜಾತಿಯ ರೂಕ್ಷತೆಯನ್ನು ಹೇಳುತ್ತದೆ. ಬಹುಶಃ ಜಿನಧರ್ಮವೂ ಅವರನ್ನು ಎತ್ತಿಕೊಳ್ಳದೇನೊ. ಅದೇನೇ ಇದ್ದರೂ ನಯಸೇನನ ದೃಷ್ಟಿ ಆ ಕಡೆಗೆ ಹರಿಯುವುದೇ ಇಲ್ಲ. ಬಹುಶಃ ಸಂಪತ್ತು ಇದ್ದರೂ ಅಧಿಕಾರ ಇಲ್ಲದಿರುವ ಒಂದೇ ಒಂದು ಉದಾಹರಣೆ ದಲಿತರಾಗಬಹುದೆಂದು ತೋರುತ್ತದೆ. ಇದಕ್ಕೆ ಕಾರಣವನ್ನು ಕೊಡಲು ಕರ್ಮಸಿದ್ಧಾಂತ ಪುನರ್ಜನ್ಮದ ನಂಬಿಕೆಯನ್ನು ಹೊಂದಿದ ಜಿನ ಧರ್ಮಕ್ಕೆ ಕಷ್ಟವಾಗುವುದಿಲ್ಲ.

ಸಂಪತ್ತಿನ ಮತ್ತು ಅಧಿಕಾರದ ಪ್ರಶ್ನೆ ಎಂದಾಗ ಅದು ಸಂಪತ್ತಿನ ಮತ್ತು ಅಧಿಕಾರದ ಹಂಚಿಕೆಯ ಪ್ರಶ್ನೆ ಕೂಡ ಹೌದಾಗಿರುತ್ತದೆ. ಆದರೆ ನಮ್ಮ ಧಾರ್ಮಿಕ ಆಂದೋಲನಗಳು, ಹೆಗ್ಗಣವನ್ನು ಒಳಗೇ ಇಟ್ಟು ಹೊರಗೆ ಮಣ್ಣನ್ನು ಮೆತ್ತುತ್ತವೆ. ಅದರ ಗುರಿ ‘ಆಸ್ತಿ’ ಆಗುವ ಬದಲು ‘ಮೋಕ್ಷ’ ಎಂದಾಗುತ್ತದೆ. ಸಮಾನ ಹಂಚಿಕೆಯ ಬದಲು ‘ಕರ್ಮಫಲ’ವಾಗುತ್ತದೆ. ಆದ್ದರಿಂದ ಅವು ಸಂಪತ್ತು ಮತ್ತು ಅಧಿಕಾರದ ಪ್ರಶ್ನೆಯನ್ನು ಹಾಗೇ ಬಿಟ್ಟಿರುತ್ತವೆ.

ಈ ಜಗತ್ತೇ ಶೂನ್ಯ ಎಂದು ಹೇಳಿದ ಶಂಕರಾಚಾರ್ಯರು ಮಠಗಳನ್ನು ಕಟ್ಟುತ್ತಾರೆ. ಚಾತುರ್ವರ್ಣವನ್ನು ಮನ್ನಿಸುತ್ತಾರೆ. ‘ಸೌಂದರ್ಯ ಲಹರಿ’ಯನ್ನು ಬರೆಯುತ್ತಾರೆ. ಅಷ್ಟಮಠದ ಪೇಜಾವರರು ‘ರಾಮಜನ್ಮಭೂಮಿ’ಯಲ್ಲಿ ಭಾಗವಹಿಸುತ್ತಾರೆ. ಇವೆಲ್ಲ ಏಕೆ? ಜನಸಾಮಾನ್ಯರನ್ನು ಭ್ರಮೆಯಲ್ಲಿಡಲು ಅಲ್ಲವೇ? ಕತ್ತಿಯಿಂದ ಆಳಲಾರದ ಜನರ ಮನಸ್ಸನ್ನು ಧರ್ಮದ ಮುಖಾಂತರ ಆಳುವುದಕ್ಕಾಗಿ ಉಳ್ಳವರು ಮತ್ತು ಅಧಿಕಾರಸ್ಥರು ಒಡ್ಡುವ ಬಲೆಯಲ್ಲವೆ?

‘ಉಪಗೂಹನ’ ಇಲ್ಲಿಯ ಕಳ್ಳ ಸೂರ್ಪನಿಗೆ ಜಿನಭಕ್ತಶೆಟ್ಟಿಯು ಹೇಳುವ ಉಪದೇಶ ಮತ್ತು ಜಿನಧರ್ಮದ ಹಿರಿಮೆಯ ಮಾತುಗಳ ಮಾದರಿಯನ್ನು ನೋಡಿ.

ಸುರಚಿತ ರತ್ನದಿಂದ ಕೂಡಿದ ದಿವ್ಯ ಸಿಂಹಾಸನದಲ್ಲಿ ಠೀವಿಯಿಂದ ಕುಳಿತು ಎರಡೂ ಕೈಗಳನ್ನು ರಾಜಕುಮಾರರ ಮೇಲೆ ಚಾಚಿ ಸುಂದರಿಯರ ಚಲುವನ್ನು ಮನವಾರೆ ನೋಡುವ ಮನಸಿದ್ದರೆ ಜೀನೇಂದ್ರ ಧರ್ಮವನ್ನು ಸೇರು ಆನೆಗಳ ಹಿಂಡು, ಕುದುರೆಗಳ ದಂಡು ವೀ ಭಟರ ಸಮೂಹ ಇವರು ನೆಲದಲ್ಲಿ ಕಿಕ್ಕಿರಿ ದಿರಲು ನಂದನೋದ್ಯಾನದಂತೆ ಕೊಡೆಗಳು ಅರಳಿಸಲು, ಸಮುದ್ರದಂತೆ ಪಡೆಯಲು ಘೋಷಿಸುತ್ತಿರಲು, ಇಂದ್ರನ ಹಾಗೆ ಸಂತೋಷದಿಂದ ಇರಬೇಕೆಂದರೆ ಜಿನೇಂದ್ರ ಧರ್ಮವನ್ನು ಸೇರು. ಕಾಮಕೇಳಿಗಾಗಿ ಇನಿಯಳ ಮೇಲೆ ಮಲಗಿ, ಅವಳ ಮುಖ ಕಮಲವನ್ನೂ, ಕೇಶರಾಶಿಯನ್ನೂ, ಹೊಳೆವ ಕಣ್ಣುಗಳನ್ನು ತುಂಬಿದ ಮೊಲೆಗಳನ್ನೂ ನೋಡುತ್ತ ವಿನೋದಿಂದ ಇರಬೇಕೆಂಬ ಮನಸ್ಸಿದ್ದರೆ ಜಿನೇಂದ್ರ ಧರ್ಮವನ್ನು ಸೇರು’’
(ನಯಸೇನ ಧರ್ಮಾಮೃತ ಗದ್ಯ ಕಥನ : ಪಿ.ವಿ. ನಾರಾಯಣ : ೨೦೦೪ ಪುಟ ೯೬)

ಇದು ಜೈನಧರ್ಮ ಪರಿಮಾತ್ರವಲ್ಲ. ಹಿಂದೂ ಧರ್ಮ, ಕ್ರಿಶ್ಚನ್ ಧರ್ಮ, ಮುಸ್ಲಿಂ ಧರ್ಮ ಎಲ್ಲದರ ಪರಿಯಾಗಿದೆ.

ಇದು ‘‘ತತ್ವಜ್ಞಾನ ಕ್ಷೇತ್ರದಲ್ಲಿ ಆಧ್ಯಾತ್ಮಿಕವಾದಿಗಳು ಸ್ವಚ್ಚಂದವಾಗಿಯೂ ಸ್ಥೈರ್ಯವಾಗಿಯೂ ಸಂಚಾರ ಮಾಡುತ್ತಾರೆ. ಭೌತವಾದವನ್ನು ಅವಹೇಳನ ಮಾಡುತ್ತಾರೆ. ಆದರೆ ವ್ಯವಹಾರದಲ್ಲಿ ಮಾತ್ರ ಭೌತವಾದನ ಸೆರಗನ್ನೇ ಹಿಡಿದು ನಡೆಯುತ್ತಾರೆ.” ಎಂದು ಹೇಳಿದ ಲೆನಿನ್‌ರ ಮಾತಿಗೆ ಸಂವಾದಿಯಾಗೇ ಇದೆ. ‘ಧರ್ಮಾಮೃತ’ ಕೂಡ ಇದಕ್ಕಿಂತ ಮುಂದೆ ಹೋಗಲಿಲ್ಲ. ರಾಜಶ್ರೇಷ್ಠಿಗಳಾದರೂ ರಾಜ್ಯಾಧಿಕಾರ ದೊರಕಲಿಲ್ಲ. ಆದರೆ ನಿಶ್ಚಯ ವಾಗಿಯೂ ಅದರಲ್ಲಿ ಪಾಲುಗಾರರಾಗಿದ್ದಾರೆ. ವೈದಿಕ ಧರ್ಮದಲ್ಲಿ ಹೇಗೊ ಹಾಗೆ ಶ್ರೇಣೀಕರಣ ಮುಂದುವರಿದೇ ಇದೆ. ಅಂದರೆ ‘ಧರ್ಮಾಮೃತ’ ಕೂಡ ಸಂಪತ್ತು ಮತ್ತು ಅಧಿಕಾರದ ಹಂಚಿಕೆಯ ಮೂಲ ಪ್ರಶ್ನೆಯನ್ನು ಬದಿಗೆ ಸರಿಸಿಬಿಟ್ಟಿದೆ.

ಉಳ್ಳವರಿಗೆ ಅಧಿಕಾರ, ಶೋಷಿತರಿಗೆ ಸೇವೆ ಇದನ್ನೇ ‘ಧರ್ಮಾಮೃತ’ವೂ ಘೋಷಿಸಿದೆ.