ಧರ್ಮಾಮೃತದ ಸೃಜನಶೀಲ ಒತ್ತಾಯಗಳು ರೂಪಿಸಿಕೊಳ್ಳುವ ಪರ್ಯಾಯಗಳು ನೈತಿಕ ಮಾರ್ಗದವು. ನೈತಿಕ ಬಲದಿಂದಲೆ ಎಲ್ಲ ಕ್ಷುದ್ರತೆಗಳನ್ನು ಮೀರಲು ಸಾಧ್ಯ ಎಂದು ನಂಬುವ ನಯಸೇನನು ವರ್ಗ ಪ್ರಧಾನವಾದ ಸಾಮಾಜಿಕ ಘಟಕಗಳನ್ನು ಭಾವಿಸಲು ಸಾಧ್ಯವಿಲ್ಲ. ಅಂತಹ ಯಾವ ಕಲ್ಪನೆಗಳೂ ಯತಿ ಸಂವೇದನೆಯ ಲೇಖಕನಿಗೆ ಬರುವುದಿಲ್ಲ. ಅಖಂಡವಾದ ಏಕಾಕೃತಿಯೆ ಮುನಿ ಸ್ವಭಾವದ ಲೇಖಕರಿಗೆ ಇರುವ ಪರ್ಯಾಯ. ಜಗತ್ತಿನ ಎಲ್ಲ ಹುಲು ಮಾನವರು ತನ್ನ ತತ್ವವನ್ನು ನಂಬಿ ಅದರಂತೆ ಬಾಳಿದರೆ ಜಗತ್‌ದಿವ್ಯತೆ ಸಾಧ್ಯ ಎಂದು ನಂಬಲಾಗುತ್ತದೆ. ಇದು ಮೋಕ್ಷದ ಹಾದಿಯ ನ್ಯಾಯವೆ ಪರಮನ್ಯಾಯ ಎಂದು ಭಾವಿಸುವುದ ರಿಂದ ಸಮಾಜದ ಎಲ್ಲರನ್ನೂ ಅಖಂಡವಾದ ಜಿನಭಕ್ತಿಗೆ ಒತ್ತಾಯಿಸುತ್ತದೆ. ಇಲ್ಲಿ ಸ್ವತಂತ್ರ ವಾದ ಅನನ್ಯತೆಗೆ ಅವಕಾಶವಿಲ್ಲ. ಬದುಕಿನ ಕೊನೆಯ ಗುರಿ ಆ ಅನಂತವಾದ ಜಿನದಿವ್ಯತೆ ಯಲ್ಲಿ ಲೀನವಾಗುವುದೇ ಅಂತಿಮವಾಗಿಬಿಟ್ಟಾಗ ವ್ಯಕ್ತಿ ಮತ್ತು ಸಮಾಜದ ಚಹರೆಗಳು ಅಳಿಸಿಹೋಗಿ ಬಿಡುತ್ತವೆ. ಇದು ಎಲ್ಲ ಧರ್ಮಗಳಲ್ಲಿ ಕಾಣುವ ಸಮಸ್ಯೆ. ನಯಸೇನ ಕೂಡ ಇಂತಹ ಚಹರೆ ಅಳಿಸಿಕೊಳ್ಳುವ ಮುಕ್ತಿ ಪಯಣದ ಸಮಾಜವನ್ನು ಬಯಸುವುದು ಸಹಜ. ಮುಕ್ತಿಯ ಸಾಮೂಹಿಕ ವಾಂಛೆಯನ್ನು ನಯಸೇನ ತನ್ನ ಸೃಜನಶೀಲ ಕಥನಾವಳಿಯ ಮೂಲಕ ಪ್ರೇರೇಪಿಸಲು ಬಯಸುತ್ತಾನೆ. ಧಾರ್ಮಿಕ ವಾಂಛೆಯನ್ನು ಸಾಮಾಜಿಕ ಕೇಡನ್ನು ನೆನಪಿಸುವ ಪ್ರಸಂಗಗಳ ಮೂಲಕ ನಯಸೇನನು ಕತೆ ಹೆಣೆಯುತ್ತಾನೆ. ಇಂತಹ ವಾಂಛೆಯು ನಿರ್ದಿಷ್ಟ ಪಯಣದ್ದೇ ಹೊರತು ವ್ಯಕ್ತಿಯ ಸ್ವಂತಿಕೆಯ ಹುಡುಕಾಟದ ಅನಂತತೆಯನ್ನು ಪ್ರತಿಪಾದಿಸು ವುದಿಲ್ಲ. ನಿರ್ದಿಷ್ಟ ಧಾರ್ಮಿಕ ವಿಚಾರಗಳೇ ಒಬ್ಬ ಲೇಖಕನಿಗೆ ಅನಂತವೆನಿಸಿದರೆ ಅವನ ಸೃಜನಶೀಲ ಕಾಣ್ಕೆಯು ಅಲ್ಲಿಗೇ ಸೀಮಿತವಾಗುತ್ತದೆ. ಲೌಖಿಕದ ಸಂಘರ್ಷಗಳನ್ನು ಎದುರಿಸಲಾರದವರು ಧಾರ್ಮಿಕ ಮೌಲ್ಯಗಳ ಕಡೆ ವಾಲುತ್ತಾರೆಯೆ ಹೊರತು ಸಂಘರ್ಷದ ಮುಖಾಮುಖಿಗೆ ಇಳಿದು ವರ್ತಮಾನದ ಸಮಾಜವನ್ನು ಬದಲಾಯಿಸುವ ಕ್ರಾಂತಿಕಾರಿ ಮನೋಭಾವಕ್ಕೆ ಒಳಗಾಗುವುದಿಲ್ಲ. ಇಂತಹ ಮಾನವ ಸಮಾಜದ ಸ್ಥಿತಿಯ ದೌರ್ಬಲ್ಯವನ್ನು ಬಳಸಿಕೊಂಡೇ ಧರ್ಮ ಸಂಸ್ಥೆಗಳು ಸಮಾಜವನ್ನು ತಮ್ಮ ಮೂಗಿನ ನೇರಕ್ಕೆ ಎಳೆದುಕೊಳ್ಳಲು ಹವಣಿಸುತ್ತವೆ. ಹಾಗಾಗಿಯೆ ಸಮಾಜದ ಮೇಲೆ ಹಿತೋಪದೇಶದ ಸಾಹಿತ್ಯ ತತ್ವಸಿದ್ಧಾಂತ ಮತಭೋದೆ ಹಾಗೂ ಮತಾಂತರದ ಪ್ರಕ್ರಿಯೆಗಳು ಸಲೀಸಾಗಿ ಜರುಗುತ್ತವೆ. ಇಂತಹ ಇಕ್ಕಟ್ಟಿನಲ್ಲಿ ನಯಸೇನ ಸಿಲುಕಿಕೊಂಡಿದ್ದಾನೆ.

ಹೀಗಾಗಿಯೆ ‘ಧರ್ಮಾಚರಣೆಯಿಂದ ಶ್ರೇಯಸ್ಸು, ಧರ್ಮ ವಿಮುಖತೆಯಿಂದ ದುರ್ಗತಿ’ ಎಂಬ ನಯಸೇನನ ಮಾತು ಈ ಎಲ್ಲ ಕತೆಗಳ ಉದ್ದಕ್ಕೂ ಪ್ರತಿಧ್ವನಿಸುತ್ತ ಸಾಗುತ್ತದೆ. ಇದನ್ನು ಸಾಬೀತುಪಡಿಸಲು ಮೊದಲ ಹೆಜ್ಜೆಯೇ ಜಿನ ಧರ್ಮದ ತತ್ವದಲ್ಲಿ ಅಚಲವಾದ ನಂಬಿಕೆಯನ್ನು ಇರಿಸಿಕೊಳ್ಳಬೇಕಾಗುತ್ತದೆ. ಈ ನಂಬಿಕೆಯ ಪ್ರಮಾಣ ವಚನವನ್ನು ಕೈಗೊಳ್ಳುವಂತೆ ಧರ್ಮಾಮೃತದ ಮೊದಲ ಕತೆ ಸಮ್ಯಕ್‌ದರ್ಶನವು ಪ್ರತಿಪಾದಿಸುತ್ತದೆ. ಎರಡನೆ ಕತೆಯು ‘‘ಯಾವನು ಶಂಕೆಯನ್ನು ಬಿಟ್ಟು ಮಿಥ್ಯಾ ತತ್ವವೆಂಬ ಹೆಬ್ಬುಲಿಯ ಹಿಂಡನ್ನು ಸೋಕದೆ ಒಂದೇ ಮನಸ್ಸಿಂದ ಜಿನ ಪಾದ ಕಮಲಗಳನ್ನು ನಂಬುವನೊ ಅವನು ಮೋಕ್ಷ ಪಡೆಯುತ್ತಾನೆ’’. ಅನುಮಾನದ ವಿಪರೀತ ಬುದ್ದಿಯನ್ನು ಕೂಡ ಈ ಕತೆ ಬಿಂಬಿಸು ತ್ತದೆ. ನಯಸೇನ ಬಹಳ ಚತುರತೆಯಿಂದ ಶಂಕೆಯನ್ನು ಮೀರುವ ಬಗೆಯನ್ನು ಈ ಕತೆಯಲ್ಲಿ ಚಿತ್ರಿಸುತ್ತಾನೆ. ಮೂರನೆ ಕತೆ ನಿಷ್ಕಾಂಕ್ಷೆಯು ಎಲ್ಲ ಆಸೆಗಳನ್ನು ಮೀರುವ ಹಾಗೂ ಕಾಮನೆ ಯನ್ನು ಗೆಲ್ಲುವ ಕತೆಯಾಗಿದ್ದು ಪೂರ್ಣ ಪ್ರಮಾಣದ ಎಡೆಗೆ ವ್ಯಕ್ತಿಯು ಪಾಲಿಸಬೇಕಾದ ಮೂರನೆ ಕ್ರಮವೆಂದು ನಿರೂಪಿಸಲಾಗಿದೆ. ನಾಲ್ಕನೆಯ ಪ್ರಸಂಗವು ಶೀಲವತಿಯ ಕತೆಯಾಗಿದ್ದು ಯಾರು ‘ನಿರ್ವಿಚಿಕಿತ್ಸೆ’ಯಲ್ಲಿ ದೊಡ್ಡವರು ಎಂಬುದನ್ನು ಪರಿಶೀಲಿಸುತ್ತದೆ. ಸಹ್ಯ ಭಾವನೆ ಯನ್ನು ಧೀಮಂತವಾಗಿ ಸಹಿಸಬೇಕು ಎಂಬ ಕಠಿಣ ವ್ರತದ ಬಗ್ಗೆ ಈ ಕತೆ ಹೇಳುತ್ತದೆ. ಅಸಹ್ಯದಲ್ಲೂ ಸಹ್ಯವಿದೆ, ಕುರೂಪದಲ್ಲೂ ಸುಂದರವಾದುದಿದೆ. ಶುದ್ಧ ಸಹ್ಯವು ಎಷ್ಟೋ ಬಾರಿ ಒಳಗೆ ಅಸಹ್ಯವಾಗಿರುತ್ತದೆ ಎಂಬ ಧ್ವನಿಯನ್ನು ಹೊರಡಿಸುತ್ತದೆ.

ಹೀಗೆ ಇಂತಹ ಕತೆಗಳ ಸುಪ್ತ ಪ್ರಜ್ಞೆಯನ್ನು ಪ್ರವೇಶಿಸಿ ನೋಡಿದರೆ ಮಧ್ಯಕಾಲೀನ ಕರ್ನಾಟಕದ ಸುಪ್ತ ಮನಸ್ಸಿನ ಹಲವು ಸ್ತರ, ತೆರೆ ಹಂತಗಳು ಕಾಣಿಸಿಕೊಳ್ಳುತ್ತವೆ. ಆ ಬಗೆಯ ಮನಶಾಸ್ತ್ರೀಯವಾದ ವಿವೇಚನೆಗೆ ನಯಸೇನನ ಕತೆಗಳು ಹೇಳಿ ಮಾಡಿಸಿದಂತಿವೆ. ಹಿಡಿಯಾಗಿ ನಯಸೇನ ಸಮಾಜದ ಸಮಷ್ಟಿ ಮನಸ್ಸಿನ ಪ್ರಜ್ಞೆಯನ್ನು ಹಿಡಿಯಲು ಯತ್ನಿಸುತ್ತಿ ದ್ದಾನೆ. ಧರ್ಮದ ಭಾವನೆಗಳನ್ನು ಬಲಪಡಿಸಲು ಭೌತಿಕವಾದ ಯತ್ನಗಳಿಗಿಂತಲು ಮಾನಸಿಕ ಯತ್ನಗಳೇ ಪ್ರಬಲವಾಗಿರುತ್ತವೆ. ಮನಸ್ಸಿನ ಚಿಕಿತ್ಸೆಯನ್ನು ಮಾಡುವ ನಯಸೇನನ ಈ ಕತೆಗಳು ಮನಸ್ಸಿನ ಹಲವು ಸ್ತರಗಳನ್ನು ನಿವಾಳಿಸಿ ಅವನ್ನು ತನ್ನ ತೆಕ್ಕೆಗೆ ಅಳವಡಿಸಿಕೊಳ್ಳಲು ಮುಂದಾಗುತ್ತವೆ. ಹೀಗೆ ನಯಸೇನ ತನ್ನ ಸಮಾಜದ ಕೇಡಿನ ಕುರೂಪಗಳನ್ನು ಈ ಕತೆಗಳಿಂದ ಪ್ರತಿಫಲಿಸಲು ಯತ್ನಿಸಿದ್ದಾನೆ. ಕುರೂಪವನ್ನು ತೋರಿಸಿ ಅಥವಾ ನರಕದ ಭಯ ಹುಟ್ಟಿಸಿ ಧರ್ಮದ ಭಾವವು ಧರ್ಮಾಮೃತ ಕತೆಗಳ ಉದ್ದಗಲಕ್ಕೂ ಚಾಚಿಕೊಂಡು ಸನ್ಮಾರ್ಗದ ಸಮಾಜದ ಬಗ್ಗೆ ಎಚ್ಚರಿಸುತ್ತವೆ. ಇದೇ ಬಗೆಯ ಧೋರಣೆಯನ್ನು ರೇವತಿದೇವಿಯ ಮೂಲಕ ಇನ್ನಷ್ಟು ಸಮರ್ಥವಾಗಿ ನಯಸೇನ ವಿಸ್ತರಿಸುತ್ತಾನೆ. ಅಮೂಢ ದೃಷ್ಟಿತ್ವದ ಐದನೆ ತತ್ವವನ್ನು ನಿರೂಪಿಸಲು ರೇವತಿಯ ಧೃಡಚಿತ್ತದ ಸಾಮರ್ಥ್ಯದ ಪ್ರಸಂಗವನ್ನು ನಯಸೇನ ಪುನರುಚ್ಚರಿಸುತ್ತಾನೆ. ಮೂರ್ಖರು ಹೇಳುವ ಹುಸಿ ಆಚಾರ ವಿಚಾರಗಳಿಗೆ ಬಲಿಯಾಗದೆ ಸ್ವಂತ ತಿಳುವಳಿಕೆಯ ಮೇಲೆ ಮೋಕ್ಷದ ದಾರಿಯನ್ನು ಧೃಡವಾಗಿ ಕಂಡುಕೊಳ್ಳಬೇಕು ಎಂಬುದೇ ಈ ಕತೆಯ ಆಶಯ. ವಿಮೋಚನಾ ಪರವಾದ ಧರ್ಮವನ್ನು ಆಚರಿಸುವುದು ಲೇಸು. ಅವಿವೇಕಿಯಾದ ಧರ್ಮಾಚಾರಗಳಿಗೆ ಒಳಗಾಗಿ ಲೋಕವನ್ನು ಮೂಢವಾಗಿಸಬಾರದು ಎಂಬ ಧ್ವನಿಯನ್ನು ಇಲ್ಲಿ ಗಮನಿಸಬಹುದು. ಆರನೆ ಕತೆಯು ಠಕ್ಕ ಭಕ್ತಿಯ ಯತಿಯ ಅವಿವೇಕವನ್ನು ಮನ್ನಿಸಿ ಅವನು ಕಳ್ಳತನ ಮಾಡಿದರೂ ಅವನ ಅಂತಹ ನಡತೆಯನ್ನು ಮನ್ನಿಸಿ ಅವನಿಗೆ ಜ್ಞಾನೋದಯ ಉಂಟಾಗುವಂತೆ ಮಾಡುವ ಪ್ರಸಂಗವನ್ನು ಹೇಳುತ್ತದೆ. ಜಿನಭಕ್ತಸೆಟ್ಟಿಯು ಸೂರ್ಪನ ಕುರೂಪವನ್ನು ಬಯಲು ಮಾಡದೆ ಆತ ಸಜ್ಜನ ಮುನಿ ಎಂದೇ ಒಪ್ಪಿಕೊಂಡು ಬಿಡುವುದು ಪರಿವರ್ತಿಸುವ ಒಂದು ಮಾದರಿ. ಪಾಪಿಯನ್ನು ಪಾಪಿ ಎನ್ನದೆ; ಅವನ ಪಾಪಕರ್ಮಗಳನ್ನು ಕಂಡೂ ಕಾಣದಂತಿದ್ದು ಆತ ಮಾಡಿದ್ದು ಒಳ್ಳೆಯದನ್ನೆ ಹೊರತು ಕೆಟ್ಟದ್ದೇನನ್ನು ಮಾಡಿಲ್ಲ ಎಂದುಬಿಟ್ಟರೆ ಅಪರಾಧಿಯ ಮನಸ್ಸು ತಂತಾನೆ ಬದಲಾಗುತ್ತದೆ. ಏಳನೆಯ ಕತೆಯಾದ ‘ಸ್ಥಿತಿಕರಣ’ದಲ್ಲಿ ಬರುವ ವಾರಿಷೇಣ ಮತ್ತು ಪುಷ್ಪದಾಡರ ಸ್ನೇಹದ ಸಂಬಂಧಗಳು ಕೂಡ ಚಂಚಲತೆಯನ್ನು ನಿಗ್ರಹಿಸುವ ಸಂದರ್ಭಗಳನ್ನು ಬಿಂಬಿಸುತ್ತವೆ. ವಿವಾಹದ ಬಂಧನವನ್ನು ಮೀರುವ ಮನಸ್ಥಿತಿಯನ್ನು ನೇರವಾಗಿಯೆ ಈ ಕತೆ ನಿರೂಪಿಸುತ್ತದೆ. ಸಕಾಲದಲ್ಲಿ ಸರಿಯಾಗಿ ದೃಷ್ಟಾಂತ ಸಮೇತ ಉಪದೇಶ ನೀಡಿದ್ದರಿಂದ ಪುಷ್ಪದಾಡನು ಉನ್ನತಿ ಕಂಡ. ಶಿಥಿಲ ಮನಸ್ಸಿನವನಾಗಿದ್ದರೆ ಅವನಿಗೆ ವಿವಾಹದ ಬಂಧನದ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯ ವಿರಲಿಲ್ಲ. ತಿದ್ದಿ ಧೈರ್ಯ ಹೇಳಿ ವಿವೇಕ ಮೂಡಿಸುವುದೇ ಸ್ಥಿರೀಕರಣ. ಇದು ಕೂಡ ಮನಸ್ಸಿನ ಪರಿವರ್ತನೆಯನ್ನು ಹೇಳುವ ಕತೆ ಎಂಬುದನ್ನು ಗಮನಿಸಬೇಕು.

ಎಂಟನೆ ಕತೆಯು ಜಿನ ಸೇವೆ ಮಾಡುವ ಹೆಬ್ಬಯಕೆಯ ಯಜ್ಞದತ್ತೆಯ ಆಶಯವನ್ನು ಮಗನಾದ ವಜ್ರಕುಮಾರನ ಮೂಲಕ ಸಾಧಿಸಿಕೊಳ್ಳುವ ಕತೆಯಾಗಿದೆ. ಒಂಬತ್ತನೆಯ ಕತೆ ದುಷ್ಟ ಮಂತ್ರಿಯಾದ ಬಲಿಯ ತಂತ್ರವನ್ನು ಸೋಲಿಸಿ ಆತ ಕೂಡ ಜಿನಭಕ್ತನಾದ ಎಂದು ಸೂಚಿಸುವ ಪ್ರಸಂಗವಾಗಿದ್ದು ಧ್ಯಾನಶೀಲತೆಯನ್ನು ಮನಶುದ್ಧತೆಯನ್ನು ಹಾಗೂ ವಿಚಾರ ಶ್ರೇಷ್ಠತೆಯನ್ನು ಹೇಳುವಂತದಾಗಿದೆ. ಹತ್ತನೆ ಕತೆ ಅಹಿಂಸೆಗೆ ಸಂಬಂಧಿಸಿದ ಕತೆ. ಈ ಎಲ್ಲ ಕತೆಗಳು ಸಮ್ಯಕ್ ದರ್ಶನಕ್ಕೆ ಸಂಬಂಧಪಟ್ಟವಾಗಿದ್ದು ವ್ಯಕ್ತಿ ಮತ್ತು ಸಮಾಜದ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುವ ಕೆಲಸ ನಿರ್ವಹಿಸುತ್ತವೆ. ಎರಡನೆ ಹಂತದ ಕತೆಗಳೆಲ್ಲವೂ ಅಹಿಂಸೆಯ ಪ್ರತಿಪಾದನೆಯ ಕತೆಗಳು. ಅಂತೆಯೇ ಗೃಹಸ್ಥಾಶ್ರಮದ ವ್ಯಕ್ತಿಯು ಪಾಲಿಸಲೇಬೇಕಾದ ನೇಮನಿಷ್ಠೆಗಳು, ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯೆ, ಅಪರಿಗ್ರಹ ಎಂಬ ಈ ಐದು ಮೌಲ್ಯಗಳು ಸಾಮಾಜಿಕ ಸುಧಾರಣೆಗೂ ಸಂಬಂಧಪಡುವಂತವು ಎಂಬು ದನ್ನು ಈ ಕತೆಗಳಿಂದ ಗ್ರಹಿಸಬಹುದು. ವ್ಯಕ್ತಿಯು ಸಚ್ಚಾರಿತ್ರಿತನಾದರೆ ಅವನ ಸಮಾಜವೂ ಶ್ರೇಷ್ಠವಾದುದಾಗಿರುತ್ತದೆ ಎಂಬ ನಂಬಿಕೆಯನ್ನು ಇಲ್ಲಿನ ಕತೆಗಳು ಧ್ವನಿಸುತ್ತವೆ. ಇಂತಹ ಅಹಿಂಸೆಯನ್ನು ಪ್ರತಿಪಾದಿಸುವ ಧನಕೀರ್ತಿಯ ಕತೆಯು ತುಂಬ ಪ್ರಸಿದ್ಧವಾದುದು. ಅವನು ಮೂಲ ಜನ್ಮದಲ್ಲಿ ಬೆಸ್ತನಾಗಿದ್ದಾಗ ಮೀನು ಹಿಡಿಯುತ್ತಿದ್ದ ವೇಳೆ ಮೊದಲ ಮೀನನ್ನು ಕೊಲ್ಲದೆ ಬಿಟ್ಟುಬಿಡುವುದು ಒಂದು ಜನಪದ ವಾಡಿಕೆ. ಅದರಂತೆಯೆ ಬೆಸ್ತನಾಗಿದ್ದ ಆತ ಮೊದಲು ಬಲೆಗೆ ಸಿಲುಕಿದ ಮೀನನ್ನು ಬಿಟ್ಟುಬಿಡುತ್ತಾನೆ. ಮತ್ತೆ ಆ ಮೀನೇ ಬಂದು ಸಾಯುವಂತಾಗದಿರಲಿ ಎಂದು ಅದಕ್ಕೆ ಗುರುತಿನ ದಾರಕಟ್ಟಿ ಬಿಡುತ್ತಾನೆ. ಮತ್ತೆ ಮತ್ತೆ ಅದೇ ಮೀನು ಐದು ಬಾರಿ ಬಂದಾಗಲೂ ಅದಕ್ಕೆ ಜೀವದಯೆ ನೀಡಿ ಬಿಡುತ್ತಾನೆ. ಇಂತಹ ಅವನ ಅಹಿಂಸಾಪರತೆಯಿಂದ ಮುಂದಿನ ಜನ್ಮದಲ್ಲಿ ಧನಕೀರ್ತಿಯಾಗಿ ಹುಟ್ಟಿ ಬಂದಾಗ ಪ್ರಾಣಾಪಾಯದ ಎಲ್ಲ ಸಂದರ್ಭಗಳಲ್ಲೂ ಉಳಿದುಕೊಳ್ಳುತ್ತಾನೆ. ಪೂರ್ವಜನ್ಮದ ಅವನ ಅಹಿಂಸಾ ಪ್ರೀತಿಯು ಮುಂದಿನ ಜನ್ಮದಲ್ಲಿ ಅವನ ತಲೆ ಕಾಯಿತು ಎಂಬುದನ್ನು ನಯಸೇನ ಕಲಾತ್ಮಕವಾಗಿ ಧ್ವನಿಸುತ್ತಾನೆ. ಹಾಗೆಯೆ ಈ ಕತೆಯು ಅಪ್ಪಟ ಜನಪದ ಕತೆಯಂತಿದ್ದು ನಯಸೇನನು ಇಂತಹ ನಿರೂಪಣೆಗಳ ಸಂದರ್ಭದಲ್ಲಿ ನಿಜವಾಗಿಯೂ ತನ್ನ ಧಾರ್ಮಿಕ ನೆಲೆಯನ್ನು ಮರೆತು ಜನಪದ ಕತೆಗಾರನಂತಾಗಿ ಬಿಡುತ್ತಾನೆ. ಹನ್ನೊಂದನೆ ಕತೆಯು ಸತ್ಯವ್ರತ – ಧನದ ಹಾಗೂ ಸಂಘಶ್ರೀಯರ ಸಂಬಂಧಗಳ ಮೂಲಕ ಹೆಣ್ಣಿನ ಮೋಹವನ್ನು ಮೀರುವುದು ಹೇಗೆ ಎಂಬ ವಿವರವನ್ನು ಕೊಡುತ್ತದೆ. ಆದರೆ ಈ ಕತೆಯಲ್ಲಿ ಮಾತ್ರ ನಯಸೇನ ಬೌದ್ಧ ಧರ್ಮದ ಬಗ್ಗೆ ತಳೆವ ಹಗುರವಾದ ನಿಲುವು ಅವನ ಯತಿ ಸ್ವಭಾವದ ವ್ಯಕ್ತಿತ್ವಕ್ಕೆ ತಕ್ಕುದಾ ದುದಲ್ಲ. ಹನ್ನೆರಡನೆ ಕಥೆಯು ಜಿನದತ್ತನ ಮಗನಾದ ಜಿನದಾಸನ ಕಳ್ಳತನದ ಪ್ರಸಂಗವನ್ನು ಹೇಳುವ ಕತೆಯಾಗಿದ್ದು ಕಥೆಯ ಒಳಗೇ ಉಪಕತೆಗಳನ್ನು ಬೆಸೆವ ನೀತಿ ಅನೀತಿಯ ಕತೆ ಯಾಗಿದೆ. ಜಿನಪಾಲಿತ ಮುನಿಯು ಕಳ್ಳನಲ್ಲವಾದರೂ ತಿಳಿಯದೆ ಅವನನ್ನು ಗುಮಾನಿಯಿಂದ ನೋಡುವ ಜಿನದತ್ತ ಸ್ವತಃ ಜಿನಪಾಲಿತ ಮುನಿಯನ್ನೆ ಅಪಮಾನಿಸಲು ಕತೆಗಳನ್ನು ಹೇಳಲು ತೊಡಗುವನು. ಆದರೆ ಕಳ್ಳನಲ್ಲದವನನ್ನು ಕಳ್ಳ ಎಂದು ಹೇಳುವ ಪ್ರಸಂಗಗಳನ್ನು ಕೇಳಿಸಿಕೊಳ್ಳುವ ಮುನಿಯು ವಿನಾಕಾರಣ ಬೇರೊಬ್ಬರ ಮೇಲೆ ಗೂಬೆ ಕೂರಿಸಿ ಅನುಮಾನ ಪಟ್ಟು ಅವರನ್ನು ಅಪಮಾನಿಸುವುದು ತರವಲ್ಲ ಎಂಬ ಪರ್ಯಾಯ ಕತೆಗಳನ್ನು ಮುನಿಯು ಹೇಳುತ್ತಾ ಹೋಗುವನು. ಕೊನೆಗೆ ನಿಜವಾದ ಕಳ್ಳನಾದ ಜಿನದತ್ತನ ಮಗನಾದ ಜಿನದಾಸನು ತಪ್ಪೊಪ್ಪಿಕೊಂಡು ಪ್ರಾಯಶ್ಚಿತ್ತವಾಗಿ ಜಿನಸೇವೆಗೆ ಬದ್ಧನಾಗುವನು. ಹದಿಮೂರನೆಯ ಕತೆಯು ಬ್ರಹ್ಮಚರ್ಯದ ಕಥೆ. ಸಂಸಾರದ ಸುಖ ಉಂಡು ಕೊನೆಗೆ ಸಾರ್ಥಕ ಬಾಳಿನ ಕಡೆ ಪಯಣ ಮಾಡಬೇಕು ಎಂಬುದನ್ನು ಹೇಳುವ ಕಥಾ ಪ್ರಸಂಗವು ಇದರಲ್ಲಿದೆ. ಕೊನೆಯ ಹದಿನಾಲ್ಕನೆ ಕತೆಯು ಭವದ ಭಾರವನ್ನು ನೀಗುವ ನೀತಿಯನ್ನು ಹೇಳುತ್ತದೆ.

ಹೀಗೆ ಈ ಒಂದೊಂದು ಕತೆಗಳೂ ಪ್ರಧಾನವಾಗಿ ಸಮಾಜದ ಮನಸ್ಸಿನ ಮೇಲೆ ಧಾರ್ಮಿಕ ಪ್ರಭಾವವನ್ನು ಬೀರಲು ತೀವ್ರವಾಗಿ ಯತ್ನಿಸುತ್ತವೆ. ಧರ್ಮದ ಅಮಲನ್ನು ಕುಡಿಸುವ ಈ ನೀತಿಕತೆಗಳು ಪಾರಮಾರ್ಥಿಕವನ್ನೆ ಪ್ರಧಾನವಾಗಿ ಬಿಂಬಿಸುತ್ತವೆ. ಮನಶ್ಯಾಸ್ತ್ರೀಯವಾಗಿ ಈ ಕತೆಗಳ ಮೂಲಕ ಕಾಣುತ್ತಿರುವ ಸಮಾಜ ತೀವ್ರ ಅಸ್ವಸ್ಥವಾದದ್ದು ಎಂಬುದು ಮೇಲು ನೋಟಕ್ಕೇ ತಿಳಿಯುತ್ತದೆ. ಪಾಪಪ್ರಜ್ಞೆಯನ್ನು ಉದ್ದೀಪಿಸಿ ಪ್ರಾಯಶ್ಚಿತ್ತಕ್ಕೆ ಒತ್ತುಕೊಡುವ ಪ್ರಜ್ಞೆಯ ಕಡೆಗೇ ಈ ಕತೆಗಳು ಬೆಳೆಯುತ್ತವೆ. ಎಲ್ಲ ಧರ್ಮಗಳು ಪ್ರಾಯಶ್ಚಿತ್ತವನ್ನು ಬೇರೆ ಬೇರೆ ರೂಪಕಗಳಿಂದ ನಿರೂಪಿಸಿವೆ. ಜೈನಮುನಿ ನಯಸೇನನು ಜಿನದೀಕ್ಷೆಯೆ ಮೋಕ್ಷ ಎಂದು ಸಾರುತ್ತಾನೆ. ಈ ಎಲ್ಲ ಕಥೆಗಳು ಮನಸ್ಸಿನ ಪ್ರತಿಬಿಂಬವಾಗಿವೆ. ಮಧ್ಯಕಾಲೀನ ಕರ್ನಾಟಕದ ಒಟ್ಟು ಕನ್ನಡ ಸಮಾಜ ಹೇಗಿತ್ತು ಎಂಬುದನ್ನು ತಿಳಿಯಲು ಧರ್ಮಾಮೃತದ ಪಠ್ಯವು ಅಧಿಕೃತ ಸಾಕ್ಷಿಯಂತಿದೆ. ಪಾಪಪ್ರಜ್ಞೆಯು ಮನುಷ್ಯನ ಮನಸ್ಸನ್ನು ಎಷ್ಟು ತೀವ್ರವಾಗಿ ಕಾಡುತ್ತವೆ ಎಂಬುದಕ್ಕೆ ವಿಶೇಷವಾದ ಒತ್ತನ್ನು ಜೈನಧರ್ಮವು ಕೊಟ್ಟಿದೆ. ಪಾಪ ಕರ್ಮದಿಂದಾಗಿ ಎಷ್ಟೆಷ್ಟು ಜನ್ಮವೆತ್ತಿ ಬರಬೇಕು ಎಂಬ ದಂಡನೆಯ ಕತೆಗಳನ್ನು ಜೈನ ಧರ್ಮವು ಸಮರ್ಥವಾಗಿ ಚಿತ್ರಿಸುತ್ತದೆ. ಜನ್ನನ ಯಶೋಧರ ಚರಿತ್ರೆಯಲ್ಲಿ ಬರುವ ಅಮೃತ ಮತಿ ಮತ್ತು ಅಷ್ಟಾವಂಕರ ಪ್ರಕರಣವನ್ನೇ ಗಮನಿಸಿದರೂ ಪಾಪಪ್ರಜ್ಞೆ ಮತ್ತು ಪ್ರಾಯಶ್ಚಿತ್ತದ ಜೈನ ಮತಿಯು ಎಂತದೆಂಬುದು ತಿಳಿಯುತ್ತದೆ. ಜೈನ ಮನಸ್ಸು ಪ್ರಾಯಶ್ಚಿತ್ತಕ್ಕಾಗಿ ಮಾಡುವ ವ್ರತಾಚರಣೆಗಳು ತುಂಬ ಕಠಿಣವಾದವು. ಅಂತಹ ಕಠಿಣ ವ್ರತ ಮನಸ್ಸನ್ನು ನಯಸೇನ ಕೂಡ ಈ ಕತೆಗಳಲ್ಲಿ ಪರೋಕ್ಷವಾಗಿ ನಿರೂಪಿಸುತ್ತಿದ್ದಾನೆ. ಜೈನ ಸಮಾಜಕ್ಕೂ ಜೈನ ತತ್ವಕ್ಕೂ ಮಧ್ಯೆ ಧರ್ಮ ಪ್ರಾಯಶ್ಚಿತ್ತ ಹಾಗೂ ಪಾಪಪ್ರಜ್ಞೆಗಳನ್ನು ತುಂಬ ಸೌಮ್ಯವಾಗಿ ಭಾವಿಸಿದರೆ ಜೈನ ತತ್ವವು ಇವೆರಡೂ ಮಾನಸಿಕ ಸ್ಥಿತಿಗಳನ್ನು ಅತ್ಯುಗ್ರ ಆಚರಣ ಕ್ರಮಗಳಲ್ಲಿ ತೋರುತ್ತದೆ. ಅದರ ಸಲ್ಲೇಖನವ್ರತವೊಂದೇ ಸಾಕು ಅದರ ಉಗ್ರ ಪ್ರಾಯಶ್ಚಿತ್ತಕ್ಕೆ ಪುರಾವೆ ನೀಡಲು. ನಯಸೇನ ಅಂತಹ ಉಗ್ರಮನಸ್ಸನ್ನು ಈ ಕತೆಗಳಲ್ಲಿ ಬಿಂಬಿಸಿಲ್ಲವಾದರೂ ಅತ್ಯಂತ ಕಠಿಣವಾದ ಸಂಯಮ ಪರೀಕ್ಷೆಯನ್ನು ಪಾತ್ರಗಳ ಮೂಲಕ ಅಭಿವ್ಯಕ್ತಿಸುತ್ತಾನೆ. ಇಂತಹ ಸಂಯಮ ಪರೀಕ್ಷೆಯನ್ನು ಸಮಾಜವು ಹೊರಲಾರದು. ಹಾಗೆಯೆ ಅಷ್ಟೊಂದು ಕಠೋರವಾದ ನೇಮ ನಿಷ್ಠೆಯನ್ನು ಸಮಾಜದಿಂದ ನಿರೀಕ್ಷಿಸುವುದು ಕೂಡ ಸಾಧುವಲ್ಲ. ಇಂತಹ ಮನೋಬಲ ಸಾಮಾಜಿಕವಾಗಿ ಅಸಾಧ್ಯವಾದುದು. ಸಮಾಜದ ಎಲ್ಲರಿಗೂ ಅದು ಹೇರಲ್ಪಡುವಂತಾದರೆ ಪರಿಣಾಮವು ತಿರುಗು ಮುರುಗಾಗುತ್ತದೆ. ಅಂತಹ ತಾತ್ವಿಕ ಸಮಾಜಕ್ಕೆ ವಿಮುಖವಾಗುವ ಭಾವನೆಯು ಬಲವಾಗಿ ಜಿನ ಮಾನಸದಲ್ಲಿ ಬೇರುಬಿಡುತ್ತದೆ. ಇಂತಹ ಇಕ್ಕಟ್ಟಿನಲ್ಲಿ ಹುಟ್ಟಿದ ಧರ್ಮಾಮೃತದ ಕತೆಗಳು ಕಾರಣದಲ್ಲಿ ಬಲವಾಗಿದ್ದರೂ ಪರಿಣಾಮ ದಲ್ಲಿ ಸೋಲುತ್ತವೆ. ಜೈನ ಧರ್ಮದ ಹದಿನಾಲ್ಕು ತತ್ವಗಳನ್ನು ಪ್ರತಿಪಾದಿಸುವ ಕತೆಗಳು ಕತೆಗಳಾಗಿ ಗೆದ್ದುಬಿಡಬಹುದಾದರೂ ವಸ್ತುಸ್ಥಿತಿಯು ಮಾತ್ರ ಹಾಗೇ ಉಳಿದಿದ್ದು ವರ್ತ ಮಾನದ ಸಮಾಜವು ವಿಮುಖವಾಗಿರಬಲ್ಲದು. ಹೀಗಾಗಿ ನಯಸೇನನ ಧರ್ಮಾಮೃತವು ಕೃತಿಯಾಗಿ ಯಶಸ್ವಿಯಾದರೂ ಕ್ರಿಯೆಯಾಗಿ ಬೆಳೆಯುವುದಿಲ್ಲ. ಚಲನೆಯಿಲ್ಲದ ತತ್ವ ಎಷ್ಟೇ ಘನವಾಗಿದ್ದರೂ ಅದು ತನ್ನ ಕಾಲದ ಸಾಮಾಜಿಕತೆಗೆ ಉಪಯೋಗವಾಗಲಾರದು. ಅಂತಹ ಚಲನೆ ಕುಂಠಿತವಾಗಿ ಜೈನ ಧರ್ಮವು ಮುಗ್ಗರಿಸುತ್ತಿದ್ದಾಗಿನ ಸಾಮಾಜಿಕ ನೆಲೆಗಳನ್ನು ತಿಳಿಯಲು ಈ ಕತೆಗಳು ನಮ್ಮ ಕಾಲದ ಸಂವಾದಗಳಿಗೆ ಗತಕಾಲದ ದನಿಯಾಗಿ ಬಂದು ಸೇರಿಕೊಳ್ಳಬಲ್ಲವು.

ತನ್ನ ಧರ್ಮದ ಒಳಗೇ ಉಂಟಾಗುತ್ತಿದ್ದ ನೈತಿಕ ಅಧಃಪತನವನ್ನು ಕೂಡ ಧರ್ಮಾಮೃತವು ನುಡಿಸುತ್ತಿದೆ. ನೈತಿಕ ಧರ್ಮವನ್ನೆ ನಯಸೇನ ಪ್ರತಿಹಂತದಲ್ಲೂ ಒತ್ತಾಯಿಸುತ್ತ ತನ್ನ ಕಾಲದ ಕುರೂಪಗಳನ್ನು ಪಾತ್ರ ರೂಪಕಗಳಲ್ಲಿ ಪ್ರತಿಬಿಂಬಿಸಿದ್ದಾನೆ. ಈ ಎಲ್ಲ ಕತೆಗಳು ಪ್ರಭುತ್ವದ ಪರವಾದ ಕತೆಗಳಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಸ್ವತಃ ರಾಜ ರಾಣಿ ಮಂತ್ರಿ ಮಹೋದಯರ ಹಾಗೂ ದನಿಕ ವರ್ತಕರ ಪ್ರಭಾವಿ ಆಸ್ಥಾನ ವಲಯದವರನ್ನು ತಿದ್ದುವುದಕ್ಕಾಗಿಯೇ ನಯಸೇನ ಈ ಕತೆಗಳನ್ನು ಬರೆದಂತಿದೆ. ಈ ಎಲ್ಲ ಕತೆಗಳನ್ನು ಕೇಳಿಸಿಕೊಳ್ಳುತ್ತಿರುವಾತನೇ ಮಗದಾಧಿಪತಿಯಾದ ಶ್ರೇಣಿಕ ಮಹಾರಾಜನು. ರಾಜರಿಗೆ ಕತೆ ಹೇಳುವುದು ಭಾರತೀಯ ಪರಂಪರೆಯಲ್ಲಿ ನೀತಿಪಾಠದ ಒಂದು ಭಾಗ. ಜನಮೇಜಯನು ಮಹಾಭಾರತದ ಕತೆ ಕೇಳುತ್ತ ಮೋಕ್ಷದ ವಿದ್ಯೆಯನ್ನು ಆಲಿಸುತ್ತ ಪರೋಕ್ಷವಾಗಿ ರಾಜಕೀಯ ಇತಿಹಾಸವನ್ನು ವೈಶಂಪಾಯನ ಮುನಿಗಳಿಂದ ಬೋಧಿಸಿಕೊಳ್ಳವುದು ಕೂಡ ಇಂತಹ ಭಾವನೆಗಳಿಂದಲೇ. ರಾಜರನ್ನು ತಿದ್ದಿದರೆ ಅವನ ಪ್ರಜೆಗಳನ್ನು ಬದಲಾಯಿಸುವುದು ತುಂಬ ಸುಲಭ ಎಂದು ತಿಳಿದಿದ್ದ ಕಾಲ ಅದಾಗಿತ್ತು. ರಾಜ ಯಾವ ಮತಧರ್ಮಗಳನ್ನು ಅನುಸರಿಸು ವನೊ ಅದನ್ನೇ ಪ್ರಜೆಗಳು ಕೂಡ ಪಾಲಿಸಬೇಕು ಎಂಬುದು ಪರೋಕ್ಷ ರಾಜಾಜ್ಞೆಯಾಗಿದ್ದರಿಂದ ಆಯಾಯ ಧರ್ಮಗಳ  ಸಂತರು, ಧಾರ್ಮಿಕ ಪುರುಷರು, ಆ ಮತಧರ್ಮಗಳ ಕವಿಗಳು ಸಮಾಜದ ಉನ್ನತ ನೆಲೆಯಲ್ಲಿ ಪ್ರತಿಷ್ಠಾಪಿತವಾದವರಿಗೇ ತಮ್ಮ ನೀತಿ ಕತೆಗಳನ್ನು ನಿರೂಪಿಸಿ ದ್ದಾರೆ. ಆದರೆ ಅರಾಜಕವಾದ ಸಮಾಜದಲ್ಲಿ ಅನೀತಿಯೇ ಮೇಲುಗೈ ಸಾಧಿಸಿರುತ್ತದೆ. ಆದ್ದರಿಂದಲೇ ನೀತಿ ಬೋಧೆಯ ಮೂಲಕವೇ ಧರ್ಮಾಮೃತದ ಕತೆಗಳ ಸಾಮಾಜಿಕ ಪರಿಸರವು ಅರಾಜಕತೆಯನ್ನು ಬಿಂಬಿಸುತ್ತಿರುವುದು.

ಈ ಚರ್ಚೆಗಳ ಹಿನ್ನೆಲೆಯಲ್ಲಿ ಆರಂಭದಲ್ಲೆ ಕೇಳಿಕೊಂಡಿದ್ದ ಪ್ರಶ್ನೆಗಳಿಗೆ ಮರಳುವ ಲೇಖಕನಾದವನು ಧರ್ಮದ ಹಂಗನ್ನು ಕಳೆದುಕೊಳ್ಳದಿದ್ದರೆ ಅವನು ಭಾವಿಸುವ ಸಾಮಾಜಿ ಕತೆಯು ಬೇರೊಂದು ಕಾಲದ ವರ್ತಮಾನಕ್ಕೆ ಸಮಂಜಸವೇ? ಧರ್ಮದ ಹಂಗಿಗೆ ಒಳಗಾದ ಸೃಜನಶೀಲತೆಯು ಸಮಾಜದ ಸ್ವಾತಂತ್ರ್ಯವನ್ನು ಪ್ರತಿನಿಧಿಸುವುದೇ? ಮುಕ್ತಿಯ ಕಾರಣಕ್ಕೆ ಐಹಿಕದ ವಾಸ್ತವ ಸತ್ಯಗಳನ್ನು ಉಪೇಕ್ಷಿಸುವುದು ಸಾಮಾಜಿಕ ರಚನೆಯ ನಿರೀಕ್ಷೆಗಳನ್ನು ಅಲ್ಲಗಳೆದಂತಲ್ಲವೆ? ಧಾರ್ಮಿಕ ಆದರ್ಶಗಳು ಸಾಮಾಜಿಕ ವ್ಯವಸ್ಥೆಗೆ ನೀತಿ ಹೇಳುತ್ತಲೇ ನಿರ್ಬಂಧಿತ ಆವರಣಗಳನ್ನು ಸೃಷ್ಟಿಸುತ್ತವಲ್ಲವೆ? ಇಂತಹ ಸಮಸ್ಯೆಗಳಿಗೆ ನಯಸೇನನ ಧರ್ಮಾಮೃತವು ಹೇಗೆ ಸ್ಪಂದಿಸುತ್ತದೆ ಎಂಬ ಪ್ರಶ್ನೆಗಳನ್ನು ಕೃತಿಯ ವರ್ತಮಾನದ ಒಡಲಿನಿಂದ ಪರಿಶೀಲಿಸಬಹುದು. ವಿವಿಧ ಕಾಲಘಟ್ಟಗಳಲ್ಲಿಟ್ಟು ತನ್ನ ಕಾಲದ ಮೂಲಕ ಗತಕಾಲದ ಕೃತಿಯ ಜೊತೆಗೆ ಅನುಸಂಧಾನ ಮಾಡುವುದು ಅರಿವಿನ ಸ್ವಾತಂತ್ರ್ಯದ ಅಪೇಕ್ಷೆ. ಇಂತಹ ಪ್ರಾಚೀನ ಕೃತಿಗಳನ್ನು ಓದುವಾಗ ಆ ಓದುಗ ಸಮೂಹವು ತನಗೆ ಬೇಕಾದುದನ್ನು ಅದರಿಂದ ಕಂಡುಕೊಳ್ಳುತ್ತಿರುತ್ತದೆ. ಮುಖ್ಯವಾಗಿ ಗತಕಾಲದ ಕೃತಿಯ ಕಾಲವನ್ನು ವರ್ತಮಾನದ ಕಾಲದ ಅನುಭಾವದಿಂದ ಪುನರ್ ಸೃಷ್ಟಿಸಿಕೊಂಡು ಇಡಿಯಾಗಿ ಅಂತಿಮವಾಗಿ ನಾಳೆಗಾಗಿ ತನ್ನ ಕಾಲವನ್ನೆ ವಿಶ್ಲೇಷಿಸುತ್ತಿರಬೇಕಾಗುತ್ತದೆ. ಆ ಮೂಲಕ ತನ್ನ ಕಾಲದ ಸಮಾಜದಿಂದಲೆ ಗತಕಾಲದ ಸಮಾಜವನ್ನು ಅನುಸಂಧಾನ ಮಾಡಲು ಸಾಧ್ಯ. ಹೀಗಾಗಿ ಪ್ರಾಚೀನ ಕೃತಿಗಳನ್ನು ಓದುವುದೆಂದರೆ ವರ್ತಮಾನವನ್ನು ಇನ್ನಷ್ಟು ಅರ್ಥಪೂರ್ಣವಾಗಿ ವಿಸ್ತರಿಸಿ ನಾಳಿನ ಸಮಾಜ ವನ್ನು ಹೊಸ ನೈತಿಕ ವಿಕಾಸಕ್ಕೆ ಸಜ್ಜುಗೊಳಿಸುವುದು ಎಂದಾಗುತ್ತದೆ. ಪ್ರಾಚೀನವನ್ನು ತಿಳಿಯುವುದೆಂದರೆ ಅದನ್ನು ವರ್ತಮಾನದ ಜೊತೆ ಅಳೆಯುವುದೆಂದು ತಿಳಿಯಬೇಕು. ಪ್ರಾಚೀನವನ್ನು ಪ್ರಾಚೀನ ಆವರಣದಲ್ಲೆ ತಿಳಿಯಬೇಕಾಗಿಲ್ಲ. ಹಾಗೆ ಅರಿಯುವ ಬಗೆಯು ವರ್ತಮಾನವನ್ನು ನಿರಾಕರಿಸುವ ಸ್ವಭಾವದ್ದಾಗಿರುತ್ತದೆ. ವರ್ತಮಾನದ ಅನುಭವದಿಂದಲೇ ಗತವನ್ನು ಹುಡುಕುಮದು ಕೂಡ ಗತವನ್ನು ಉಪೇಕ್ಷಿಸಿದಂತಲ್ಲವೇ ಎಂಬ ಪ್ರಶ್ನೆ ಎದುರಾಗ ಬಲ್ಲದು. ವಸ್ತುಸ್ಥಿತಿ ಏನೆಂದರೆ ವರ್ತಮಾನದಿಂದ ನೋಡುವ ಮೂಲಕ ಗತವನ್ನು ಕೂಡ ಜೀವಂತಗೊಳಿಸಲು ಸಾಧ್ಯ. ಗತವನ್ನು ನಾವು ವರ್ತಮಾನಕ್ಕೆ ತಂದುಕೊಳ್ಳಲು ಸಾಧ್ಯವೇ ವಿನಃ ನಾವೇ ಗತವಾಗಿ ಭಾವಿಸಲು ಬರುವುದಿಲ್ಲ. ಇರುವ ಕಾಲದ ಮೂಲಕವೆ ಇಲ್ಲದಿದ್ದ ಕಾಲದ ಸಂಬಂಧಗಳನ್ನು ಹುಡುಕಬೇಕು. ನಯಸೇನನ ಧರ್ಮಾಮೃತದ ಸಂದರ್ಭದಲ್ಲಿ ಈ ವಿವರಣೆ ತುಸು ಹೊರಗಿನದು ಎನಿಸಬಹುದಾದರೂ ಗತ ಕೃತಿಗಳ ಆಕೃತಿಗಳನ್ನು ರೂಪಿಸಿಕೊಳ್ಳಲು ಇಂತಹ ವಿವರಣೆಗಳೆ ಆವರಣಗಳನ್ನು ಸೃಷ್ಟಿಸುವುದು ಅಗತ್ಯ.

ನಯಸೇನನ ಕಾಲಕ್ಕೆ ಹೋಗಿಯೆ ಅವನ ಕೃತಿಯ ಜೊತೆ ಮುಖಾಮುಖಿಯಾಗುವುದೆಂದರೆ ಅಸಾಧ್ಯ. ಗತವು ವರ್ತಮಾನಕ್ಕೆ ಬರಬಲ್ಲುದೇ ಹೊರತು ವರ್ತಮಾನವನ್ನೆ ಭೂತಕಾಲ ಮಾಡಲು ದಾರಿಗಳು ಸರಳವಾಗಿರುವುದಿಲ್ಲ. ಸ್ವತಃ ತಂತಾನೆ ವರ್ತಮಾನವು ಕಾಲಕಳೆದಂತೆ ಗತವಾಗುವ ರೀತಿಯು ಬೇರೆಯದು. ಈ ಬಗೆಯ ಪ್ರಶ್ನೆಗಳನ್ನು ಯಾಕೆ ಸೃಷ್ಟಿಕೊಂಡೆ ಎಂದರೆ; ನೆನ್ನೆಯ ಧರ್ಮವು ಇವತ್ತಿನ ರಾಜಕಾರಣವಾಗುವ ಹಾಗೆಯೆ ಇಂದಿನ ರಾಜಕಾರಣವು ನಾಳೆಯ ಧರ್ಮವಾಗುವ ಅಪಾಯವಿರುವುದರಿಂದ ಧರ್ಮದ ಹಂಗನ್ನು ತೊರೆದುಕೊಳ್ಳದ ಲೇಖಕ ಧರ್ಮನಿರಪೇಕ್ಷನಾಗಿರುವುದಿಲ್ಲ. ಧರ್ಮನಿರಪೇಕ್ಷ ಎಂಬುದೇ ಗೊಂದಲವಾದುದು. ಧರ್ಮದ ಒಳಗಿದ್ದೂ ಧರ್ಮದ ಹೊರಗೆ ಇದ್ದೇನೆಂದು ಹೇಳುವುದು ಪ್ರಾಮಾಣಿಕವಾದುದಲ್ಲ. ನಯಸೇನನಿಗೆ ಇಂತಹ ನಿಲುವಿಲ್ಲವಾದರೂ ಧರ್ಮದ ಹಂಗಿನ ಒಳಗೇ ಆತ ಕೃತಿ ರಚನೆ ಮಾಡಿದ್ದಾನೆ. ಇದೊಂದು ಅಪರಾಧವೆಂದು ಈ ಮಾತಿನ ಸೂಚನೆಯಲ್ಲ. ಧರ್ಮಶ್ರದ್ಧೆ ತಪ್ಪಲ್ಲವಾದರೂ ಧರ್ಮಾಂಧತೆ ಕೇಡಿನದು. ಅಷ್ಟರ ಮಟ್ಟಿಗೆ ನಯಸೇನನ ಧರ್ಮಾಮೃತವು ಅಮೃತದ ಕಡೆಗೇ ಸಮಾಜವನ್ನು ಕೊಂಡೊಯ್ಯಲು ಹರಸುತ್ತಿದೆಯೇ ವಿನಃ ಸ್ವತಃ ಧರ್ಮಾ ಮೃತವೇ ವಿಷವಾಗಿಲ್ಲ. ಹಿಂದೂ ಧರ್ಮದ ಆಚಾರಗಳನ್ನು ಹೇರುವ ವಿಷಕಾರಿ ಧರ್ಮ ಗ್ರಂಥಗಳ ಎದುರು ನಯಸೇನ ತುಂಬ ಸೌಮ್ಯವಾಗಿ ಕಾಣುವನು. ಹೀಗಾಗಿಯೆ ನಯಸೇನನು ವರ್ತಮಾನಕ್ಕೆ ಸಮಂಜಸ ಸಂವಾದಕ್ಕೆ ಸಾಧ್ಯವಾಗುವ ಲೇಖಕ. ಮನುಧರ್ಮಶಾಸ್ತ್ರದ ನಿರಂಕುಶ ಧರ್ಮಾಧಿಕಾರದ ಮುಂದೆ ಧರ್ಮಾಮೃತವು ವರ್ತಮಾನದ ಜೊತೆ ನೈತಿಕ ಸಂವಾದವನ್ನು ಉಳಿಸಿಕೊಳ್ಳುವಂತದ್ದು.

ಐಹಿಕ ಸಮಾಜದ ಅಗತ್ಯಗಳು ಕಾಲಕಾಲಕ್ಕೆ ಬದಲಾಗುವುದು ಸಹಜವಾದುದು. ಆದರೆ ಧರ್ಮದ ಸ್ವಭಾವವು ಯಾವತ್ತೂ ಸ್ಥಾವರವಾಗುವುದನ್ನೇ ಬಯಸುತ್ತ ಅದಕ್ಕೆ ಬೇಕಾದ ಹೊಸ ಅವತಾರಗಳನ್ನು ಸೃಷ್ಟಿಸಿಕೊಳ್ಳುತ್ತಲೇ ಇರುತ್ತದೆ. ಜೈನ ಧರ್ಮವೂ ಇಂತಹದ್ದೇ. ಆದರೆ ಅದು ನಯಸೇನನ ಕತೆಗಳ ಮೂಲಕ ಜನರ ನಾಡಿಮಿಡಿತದ ಪ್ರಸಂಗಗಳ ಜೊತೆ ಬೆರೆಯಲು ಬಯಸುತ್ತದೆ. ಬೋಧಿಸುವ ಉದ್ದೇಶವಿದ್ದಾಗಲೆಲ್ಲ ಕತೆ ಹೇಳುವುದು ಸುಲಭ ಹಾಗೂ ಹೆಚ್ಚು ಪರಿಣಾಮಕಾರಿ. ಆದ್ದರಿಂದಲೆ ಬೌದ್ಧ ಮತ್ತು ಜೈನ ಧರ್ಮಗಳು ಕತೆಗಳ ಮೂಲಕವೇ ತಮ್ಮ ಬಹು ಮುಖ್ಯ ತತ್ವಗಳನ್ನೆಲ್ಲ ಪ್ರಸಾರ ಮಾಡಿದುದು. ಕತೆ ಹೇಳುವ ಮೂಲಕ ಧರ್ಮ ಪ್ರಸಾರ ಮಾಡಲು ತೊಡಗಿದರೆ ಲೌಕಿಕದ ಸುಖಗಳನ್ನೆಲ್ಲ ಸಾರಾಸಗಟಾಗಿ ನಿರಾಕರಿಸಿ ಹೇಳಲು ಬರುವುದಿಲ್ಲ. ಐಹಿಕ ಭೋಗ ಬೇಡ ಎಂದು ಹೇಳುತ್ತಲೇ ಕತೆಗಳು ಐಹಿಕದ ಪರಮಸುಖದ ರುಚಿಯನ್ನೂ ನೆನೆಪು ಮಾಡುತ್ತಿರುತ್ತವೆ. ಪುರಾಣಗಳು ಲೌಕಿಕದ ಪರಿಭಾಷೆಯಲ್ಲಿ ವ್ಯವಹರಿಸಲಾರವು. ಕಥೆಯು ಐಹಿಕದ ನುಡಿಗಟ್ಟಿನಿಂದಲೇ ಅಲೌಕಿಕವನ್ನು ನಿರೂಪಿಸುತ್ತದೆ. ಧರ್ಮಾಮೃತದ ಕಥೆಗಳು ಇದೇ ದಾರಿಯಲ್ಲಿ ಸಾಗಿ ಬಂದಿವೆ. ಅಂತಿಮವಾಗಿ ಇವು ಐಹಿಕದ ಸ್ವಾತಂತ್ರ್ಯವನ್ನು ಒಪ್ಪದಿದ್ದರೂ ಅದರ ಹೊಸ ಕಾಲದ ಅಪೇಕ್ಷೆಗಳನ್ನು ಮನ್ನಿಸದಿದ್ದರೂ ಲೇಖಕ ಅವುಗಳ ಪರ ಮಾತನಾಡದಿದ್ದರೂ ಸಾಮಾಜಿಕವಾದ ವ್ಯವಸ್ಥೆಯು ಹೇಗೆ ಧರ್ಮದ ಜೊತೆ ನಿರಂತರವಾಗಿ ಮುಖಾಮುಖಿಯಾಗಿ ವಿಕಾಸವಾಗುತ್ತ ಬಂದಿದೆ ಎಂಬುದನ್ನು ಇಂತಹ ಕೃತಿಗಳು ಸೂಚನೆಗಳನ್ನು ಧಾರಾಳವಾಗಿಯೇ ಒದಗಿಸುತ್ತವೆ. ಸಮಾಜಕ್ಕೆ ಆಯಾ ಕಾಲಕ್ಕೆ ಬೇಕಾದ ಸ್ವಾತಂತ್ರ್ಯವನ್ನು ನೀಡುವುದು ಸೃಜನಶೀಲ ಶೋಧಗಳೇ ಹೊರತು ಧರ್ಮಗಳಲ್ಲ. ಮನುಷ್ಯ ವಿಕಾಸವಾದಂತೆಲ್ಲ ಅವನಿಗೆ ಅಪರಿಮಿತವಾದ ಸ್ವಾತಂತ್ರ್ಯದ ಅವಕಾಶ ಸಾಧ್ಯವಾಗಬಲ್ಲದು. ಧರ್ಮಗಳು ಇಡಿಯಾಗಿ ಅನಂತತೆಯ ಎದುರು ಶರಣಾಗತಿಯನ್ನು ಹೇಳುತ್ತವೆಯೇ ಹೊರತು ಅದರ ಜೊತೆ ಮುಖಾಮುಖಿಯನ್ನಲ್ಲ. ಹೀಗಾಗಿ ಸೃಜನಶೀಲವಾದ ಬೌದ್ದಿಕ ವಿಕಾಸ ಮತ್ತು ನಿಸರ್ಗದ ಜೊತೆ ಅನಂತವಾದ ಪ್ರೀತಿಯಿದ್ದಾಗ ಸಮಾಜಕ್ಕೆ ಬೇಕಾದ ಎಲ್ಲ ಬಗೆಯ ಸ್ವಾತಂತ್ರ್ಯವೂ ಸಾಧ್ಯವಾಗುತ್ತದೆ. ಧರ್ಮಾಮೃತವು ಮುಕ್ತಿಗೆ ಬೇಕಾದ ಸ್ವಾತಂತ್ರ್ಯವನ್ನು ತೀವ್ರವಾಗಿ ಪ್ರತಿಪಾದಿಸುತ್ತದೆ. ಆದರೆ ಇಂತಹ ಮುಕ್ತಿಯ ಸ್ವಾತಂತ್ರ್ಯವು ಲೌಕಿಕದ ಅನೇಕ ಸ್ವಾತಂತ್ರ್ಯವನ್ನು ಗೌಣಗೊಳಿಸುತ್ತಲೇ ಇರುತ್ತದೆ. ಧರ್ಮವು ರೂಪಿಸುವ ನಿಷೇಧಿತ ಆವರಣಗಳ ಬಗ್ಗೆ ನಯಸೇನ ಎಲ್ಲೂ ಚಕಾರವನ್ನೆ ಎತ್ತಲಾರ. ಶ್ರದ್ಧಾವಂತ ಶ್ರಾವಕನಂತೆ ನಯಸೇನನು ಜೈನಾದರ್ಶಕ್ಕೆ ಕಟ್ಟುಬಿದ್ದಿರುವುದರಿಂದ ಅವನಿಂದ ಚಕಾರ ನಿರೀಕ್ಷಿಸುವುದು ಉಚಿತವಲ್ಲ. ಆದರೆ ವರ್ತಮಾನದ ವೈಚಾರಿಕತೆಯು ಅವನ ಮುನಿಸ್ವಭಾವದ ನಿಷ್ಠೆಯನ್ನು ಸೌಜನ್ಯದಿಂದ ಸ್ವೀಕರಿಸಲಾರದು. ಇದು ಭಾಗಶಃ ಎಲ್ಲ ಧರ್ಮಶ್ರದ್ಧೆಯ ಲೇಖಕರಿಗೂ ಇರಬಹುದಾದ ಸಮಸ್ಯೆ. ಧರ್ಮ ಮತ್ತು ಪ್ರಭುತ್ವದ ಜೊತೆಗಿದ್ದೂ ಅವುಗಳ ಅಂಕುಶವನ್ನು ಮೀರಿದ ಪಂಪನಂಥ ಕವಿಗಳ ಮಾರ್ಗವೇ ಬೇರೆ. ಅಂತವರು ಪರಂಪರೆಯನ್ನು ನಿರಂತರವಾಗಿ ವಿಸ್ತರಿಸಲು ತೊಡಗಿರುವುದರಿಂದ ಸೃಜನಶೀಲವಾದ ನಿರಂಕುಶತ್ವದಿಂದಲೇ ಜಗತ್ತನ್ನು ಭಾವಿಸಿ ರೂಪಿಸುವರು.

ಸೃಜನಶೀಲ ನಿರಂಕುಶತೆಯು ಸೃಷ್ಟಿಯ ವಿಕಾಸಕ್ಕೆ ಬದ್ಧವಾಗಿರುತ್ತದೆ. ಅಪಾರವಾದ ಸ್ವಾತಂತ್ರ್ಯ ಹಾಗೂ ಚಲನೆಗೆ ಸೃಜನಶೀಲ ಸಂವೇದನೆಯು ಒಳಗಾಗುವುದರಿಂದ ಧರ್ಮಗಳ ಮಿತಿಯನ್ನೂ ಮೀರಲು ಅಂತಹ ನಿರಂಕುಶತೆಗೆ ಅವಕಾಶವಿರುತ್ತದೆ ಚಲನೆಯ ವಿಕಾಸವಾದವು ನಿರಂಕುಶವಾಗಿದ್ದು ಅದು ಮನುಷ್ಯನ ಯಾವುದೆ ಕೃತಕ ನಿರ್ಬಂಧಗಳಿಗೆ ಒಳಪಡುವುದಿಲ್ಲ. ಹೀಗಾಗಿಯೆ ಸಾಹಿತ್ಯ ‘ಶ್ರೇಷ್ಠ’ ನಿರೂಪಣೆಗಳೆಲ್ಲ ಯಾವತ್ತೂ ಕೂಡ ಧರ್ಮದ ನಿರ್ಬಂಧ ಗಳನ್ನು ದಾಟಲು ಯತ್ನಿಸುತ್ತಿರುತ್ತವೆ. ಪ್ರಾಚೀನ ಕನ್ನಡ ಸಾಹಿತ್ಯದ ಅನೇಕ ಕವಿಗಳು ಈ ಪಯಣದಲ್ಲಿ ಅಲ್ಲಲ್ಲಿನವರೆಗೆ ಸಾಗಿ ಅನಂತತೆಯ ದಿಕ್ಕೂ ಕಾಣದೆ ಪರಿತಪಿಸಿದ್ದಾರೆ. ನಯಸೇನ ಕೂಡ ಇಂತಹ ದಿಕ್ಕೆಟ್ಟ ಸ್ಥಿತಿಯಲ್ಲಿ ಇಂತಹ ಕತೆಗಳ ಮೂಲಕ ಇರುವ ಎಲ್ಲ ಕೇಡನ್ನು ಮೀರಲು ಸಾಧ್ಯ ಎಂದು ಧ್ವನಿಸುತ್ತಿದ್ದಾನೆ. ಸಾಂಸ್ಕೃತಿಕವಾದ ದಾರಿಗಳೆಲ್ಲವೂ ಸಮಾಜದ ಸ್ವಾತಂತ್ರ್ಯವನ್ನು ಪ್ರತಿನಿಧಿಸಿದರೆ ಧರ್ಮಗಳು ಸಂಸ್ಕೃತಿಗಳ ಮೇಲೆ ಅಧಿಕಾರ ಚಲಾಯಿಸಿ ಸಮಾಜವನ್ನು ತನ್ನ ಹಿಡಿತಕ್ಕೆ ತಂದುಕೊಳ್ಳಲು ನೋಡುತ್ತವೆ. ನಯಸೇನನ ಧರ್ಮಾಮೃತದ ಕತೆಗಳು ಕೂಡ ಇದೇ ಬಗೆಯಲ್ಲಿ ನಿರೂಪಿಸಲ್ಪಡುತ್ತಿವೆ. ನಯಸೇನ ನೀಡುವ ಎಲ್ಲ ಲೌಕಿಕದ ಕಥಾ ವಿವರಗಳು ಸಂಸ್ಕೃತಿಗಳು ಮುಕ್ತವಾಗಿ ರೂಢಿಸಿಕೊಂಡು ಬಂದ ನೆಲೆಯು ಪಾಪ ಪುಣ್ಯ, ನೀತಿ ಅನೀತಿ, ಧರ್ಮ ಕರ್ಮ ಎಂಬ ಭೇದಭಾವಕ್ಕೆ ಒಳಪಡದ ಸಹಜ ಅಭಿಲಾಷೆಗಳು ಸಂಸ್ಕೃತಿಯ ಧಾರೆಯಲ್ಲಿ ನಿರಂತರವಾಗಿದ್ದು ಅವು ತಂತಾನೆ ವಿಕಾಸದ ಪಯಣದಲ್ಲಿ ಪರಿಹಾರವನ್ನು ಕಂಡುಕೊಳ್ಳುತ್ತವೆ. ಆದರೆ ಧರ್ಮವು ಅಂತಹ ಅಭಿವ್ಯಕ್ತಿ ಹಾಗೂ ಅಭಿಲಾಷೆಗಳ ಮೇಲೆ ಯಜಮಾನಿಕೆ ಮಾಡುತ್ತದೆ. ಆಗಲೆ ಧರ್ಮ ಮತ್ತು ಸಮಾಜದ ಮಧ್ಯೆ ಹೊಂದಾಣಿಕೆಯ ನೆಲೆಯು ಕುಸಿಯುವುದು. ನಯಸೇನನ ಕತೆಗಳು ಧರ್ಮ ಹಾಗೂ ಸಮಾಜದ ಹೊಂದಾಣಿಕೆ ಕುಸಿಯುತ್ತಿದ್ದಾಗ ಅವೆರಡರ ಮಧ್ಯೆ ನಿಂತು ಒಪ್ಪಂದ ಮಾಡಿಸಲು ತೊಡಗಿದಂತಿವೆ. ಪ್ರಾಚೀನ ಕನ್ನಡದ ಬಹುಪಾಲು ಕೃತಿಗಳೆಲ್ಲ ಇಂತಹ ಮಧ್ಯಸ್ಥಿಕೆಯ ನೆಲೆಯಲ್ಲಿ ಕ್ರಿಯಾಶೀಲವಾಗಿದ್ದರಿಂದಲೇ ಆಧುನಿಕ ಕನ್ನಡ ಸಾಹಿತ್ಯವು ಸೃಜನಶೀಲವಾದ ಪಯಣವನ್ನು ಬೌದ್ದಿಕವಾದ ಎಲ್ಲ ಕಾಲದೇಶಗಳಿಗೂ ಬಾಚಿಕೊಂಡು ಅಭಿವ್ಯಕ್ತಿಯ ಬಹುಧಾರೆಗಳನ್ನು ಕಂಡುಕೊಳ್ಳಲು ಸಾಧ್ಯವಾಗಿರುವುದು. ಈ ಹಿನ್ನೆಲೆಯಲ್ಲಿ ನಯಸೇನನ ಧರ್ಮಾಮೃತದ ಕಥಾವಲೋಕವನ್ನು ಈ ಕಾಲದ ಸಮಾಜದ ಸಂವಾದಕ್ಕೂ ತಂದುಕೊಳ್ಳಬಹುದು.