ಮೂಲತಃ ಧರ್ಮ ಒಂದು ಜ್ಞಾನವ್ಯವಸ್ಥೆ. ಯಾವುದು ಅನ್ಯಾಯ ಅಜ್ಞಾನ ಅನೀತಿಯೊ ಅದು ಅಧರ್ಮ. ಮಾನವಶಾಸ್ತ್ರದಲ್ಲಿ ಧರ್ಮಕ್ಕೆ ಬೇರೆಯೆ ಅರ್ಥಗಳಿವೆ. ಸಂಸ್ಕೃತಿಗಳು ನಿಸರ್ಗದ ಮುಖಾಮುಖಿಯಲ್ಲಿ ಮಂತ್ರ ವಿದ್ಯೆ ಮೂಲಕ ನಡೆಸಿದ ಹೋರಾಟದ ಫಲವೇ ಧರ್ಮಗಳ ಉದಯಕ್ಕೆ ನೆಲೆಯಾಗಿದೆ. ಮಂತ್ರವಿದ್ಯೆಯು ಪರಿಪೂರ್ಣವಾಗಿ ಮನುಷ್ಯನ ಪಾರಮ್ಯವನ್ನು ಪ್ರತಿಪಾದಿಸಲು ಇದ್ದ ಒಂದು ಸಾಧ್ಯತೆಯಾಗಿತ್ತು, ಆ ಮೂಲಕ ನಿಸರ್ಗದ ಮೇಲೆ ನಿಯಂತ್ರಣ ಸಾಧ್ಯ ಎಂದು ನಂಬಲಾಗಿತ್ತು. ಇದು ಆದಿಮ ಮನಸ್ಸಿನ ಜೀವನ ದರ್ಶನವಾಗಿತ್ತು. ಇಂತಹ ನಂಬಿಕೆಯು ಮನುಷ್ಯನ ಉಗಮ ವಿಕಾಸದಲ್ಲಿ ಬಹಳ ಬೇಗನೆ ವಿಶ್ವಾಸ ಕಳೆದುಕೊಂಡಿತು. ನಿಸರ್ಗದ ಪಾರಮ್ಯದ ಎದುರು ಮನುಷ್ಯ ಎಷ್ಟರವನು ಎಂಬುದನ್ನು ತಿಳಿಯಲು ಕಷ್ಟಪಡಬೇಕಾಗಿರಲಿಲ್ಲ. ತಾನು ಬದುಕಿರುವ ತನ್ನ ಲೌಖಿಕದ ಮೇಲೆ ಬೇರೊಂದು ಶಕ್ತಿಯ ಆತ್ಯಂತಿಕ ನಿಯಂತ್ರಣವಿದೆ ಎಂದು ಅನಿಸಿದಂತೆಲ್ಲ ತಾನು ನಂಬಿರುವ ಮಂತ್ರಗಳು ಆ ಕಾಣದ ಅತೀತತೆಯ ಮುಂದೆ ಸಾಕಾಗುವುದಿಲ್ಲ ಎಂಬ ನಂಬಿಕೆಯೆ ದೊಡ್ಡದಾಯಿತು. ಈ ನಂಬಿಕೆ ಭದ್ರವಾದಂತೆಲ್ಲ ಸಾಮಾಜಿಕ ರಚನೆಯಲ್ಲಿ ಧರ್ಮವು ನಿರ್ಣಾಯಕ ಶಕ್ತಿಯಾಗಿ ವ್ಯಾಪಿಸಿಕೊಂಡಿತು. ಮನೋವಿಶ್ಲೇಷಣೆಯ ಕಡೆ ನೋಡಿದರೆ ಅದು ಹೇಳುವ ಅರ್ಥವೇ ಬೇರೆ. ಮನಸ್ಸಿನ ನೈತಿಕ ಅನೈತಿಕ ಪ್ರಜ್ಞೆಗಳ ಸಂಘರ್ಷದಿಂದ ಧರ್ಮ ಅಸ್ತಿತ್ವ ಪಡೆದುಕೊಳ್ಳುತ್ತದೆ. ತತ್ವಶಾಸ್ತ್ರೀಯ ನೆಲೆಯಿಂದ ಗಮನಿಸಿದರೆ ಜ್ಞಾನದಾಹದ ಅನಂತ ಹುಡುಕಾಟದ ಪಯಣವೆ ಧರ್ಮದ ಅಂತಿಮ ಅರ್ಥವಾಗಿರುತ್ತದೆ. ಇನ್ನು ಸಮಾಜಶಾಸ್ತ್ರದ ಅರಿವನ್ನು ಮಂಡಿಸುವವರು ಧರ್ಮ ಎನ್ನುವುದನ್ನು ಸಾಮಾಜಿಕ ವ್ಯವಸ್ಥೆಯ ಸಮಷ್ಟಿ ಸಂವಿಧಾನವೆಂದು ಕರೆಯುತ್ತಾರೆ. ಈ ಸಂವಿಧಾನವು ಮನುಷ್ಯನ ಮುಕ್ತಿಯ ನೀತಿ ಮಾರ್ಗ ವನ್ನು ಬೋಧಿಸುವ ಸಂಹಿತೆಯಾಗಿರುತ್ತದೆ.

ಸಮಾಜ ವಿಜ್ಞಾನಗಳ ಅಂಗಳದಲ್ಲಿ ಸುಮ್ಮನೆ ಪುಟ ತಿರುವಿದರೂ ನೂರಾರು ಬಗೆಯ ‘ಧರ್ಮಾರ್ಥ’ಗಳು ಕಾಣಸಿಗುತ್ತವೆ. ಮಾರ್ಕ್ಸ್‌ವಾದ ಮತ್ತು ತತ್ವಶಾಸ್ತ್ರಗಳೆರಡೂ ಎರಡು ಬೇರೆ ಬೇರೆ ಅರ್ಥಗಳನ್ನು ನೀಡುತ್ತವೆ. ಸಾಹಿತ್ಯ ಮೀಮಾಂಸೆಯಲ್ಲೂ ಧರ್ಮಕ್ಕೆ ಹತ್ತಾರು ಅರ್ಥಗಳಿವೆ. ಭಾರತೀಯ ಕಾವ್ಯ ಮೀಮಾಂಸೆಯು ಧರ್ಮದ ಹಂಗಿನಿಂದಲೇ ದರ್ಶನದ ಅನುಭಾವವನ್ನು ಮುಕ್ತಿಯ ಚಿಂತನೆಯನ್ನು ಮಂಡಿಸುತ್ತದೆ. ಭಾರತೀಯ ತತ್ವಶಾಸ್ತ್ರದ ದಟ್ಟಪ್ರಭೆ ಕೂಡ ಧರ್ಮದ ಬೇರಿನಿಂದ ಸಾಹಿತ್ಯ ಸಂವೇದನೆಗೂ ಅಂಟಿಕೊಂಡಿದೆ. ಕನ್ನಡದ ಪ್ರಾಚೀನ ರಚನೆಗಳೆಲ್ಲವೂ ಧರ್ಮದ ಜೊತೆಯೇ ಪಯಣ ಮಾಡಿರುವುದು. ಧರ್ಮದ ಅವಸ್ಥೆಗಳು ಕಾಡಿರುವಷ್ಟು ಬೇರೆ ಯಾವ ಸಂಗತಿಗಳೂ ಪ್ರಾಚೀನ ಕನ್ನಡ ಕಾವ್ಯಗಳನ್ನು ಕಾಡಿಲ್ಲ. ಇಡೀ ಭಾರತೀಯ ಸಾಹಿತ್ಯದ ಬೇರುಗಳು ಧರ್ಮದ ಮೂಲಕವೇ ತಮ್ಮ ಕಾಲದ ನೀತಿಯನ್ನು ಪ್ರತಿಬಿಂಬಿಸಿವೆ. ಇದೇ ಮಾತನ್ನು ಬೇರೊಂದು ರೀತಿಯಲ್ಲಿ ಹೇಳುವುದಾದರೆ; ಧರ್ಮಸಾರವನ್ನು ಪ್ರತಿಪಾದಿಸುವ, ವಿಸ್ತರಿಸುವ, ಪ್ರಚಾರ ಮಾಡುವ ಹಾಗೂ ಕೆಲವೊಂದು ಹಂತಗಳಲ್ಲಿ ಧರ್ಮದ ಏಕ ಮುಖವನ್ನು ಬಹುರೂಪಗೊಳಿಸುವ ಕಾಯಕವನ್ನೆ ಪ್ರಾಚೀನ ಸಾಹಿತ್ಯವು ಮಾಡಿದೆ.

ಹೀಗಾಗಿಯೆ ಅನೇಕ ವೇಳೆ ಪ್ರಾಚೀನ ಕನ್ನಡ ಸಾಹಿತ್ಯವು ಧರ್ಮಶಾಸ್ತ್ರಗಳ ಹೊಂದಾಣಿಕೆ ಯಲ್ಲೇ ವಿಕಾಸವಾಗಿರುವುದು. ಅಖಂಡವಾಗಿ ಭಾವಿಸಿದರೆ ಶ್ರೇಷ್ಠವಾದ ಸೃಜನಶೀಲ ಅಭಿವ್ಯಕ್ತಿಯು ಕೂಡ ಧರ್ಮಕ್ಕಿಂತಲೂ ಮಿಗಿಲಾದ ಮಾನವತ್ವವನ್ನು ಪ್ರತಿಪಾದಿಸಿ ಸೃಷ್ಟಿಸುತ್ತಿರುತ್ತದೆ. ಆದ್ದರಿಂದಲೆ ರಾಮಾಯಣ ಮಹಾಭಾರತಗಳು ಧಾರ್ಮಿಕ ಗ್ರಂಥಗಳಲ್ಲ. ಅದರೆ ಧರ್ಮಸೆರೆಯನ್ನು ಬಿಡಿಸಿಕೊಳ್ಳುವ ಮೂಲಕವೇ ಸಮಾಜದ ಬಹುರೂಪಗಳನ್ನು ಪ್ರತಿನಿಧಿಸುವ ಸಾಹಿತ್ಯ ಕೃತಿಗಳು. ಸಾಹಿತ್ಯ ಕೃತಿಗಳಲ್ಲಿ ಧರ್ಮದ ಅವತಾರ ಪುರುಷರು ಬರುವುದು ಸಾಮಾನ್ಯ. ಎಲ್ಲ ಕಾಲದ ಸಮಾಜಗಳಲ್ಲು ಇದು ಪುನರಾವರ್ತನೆಗೊಳ್ಳಬಹುದಾದ ಸಂಗತಿ. ಸಾಹಿತ್ಯ ಕೃತಿಯೆ ಧರ್ಮಶಾಸ್ತ್ರದ ನಕಲಾಗಿಬಿಟ್ಟರೆ ಅದು ಸಾಹಿತ್ಯ ಮತ್ತು ಧರ್ಮ ಎರಡೂ ಆಲೋಚನೆಗಳಿಗೆ ನಷ್ಟ. ಆದ್ದರಿಂದಲೆ ಮನುಧರ್ಮಶಾಸ್ತ್ರದಿಂದ ಧರ್ಮಕ್ಕೂ ಸಾಹಿತ್ಯಕ್ಕೂ ಎರಡಕ್ಕೂ ಅಪಕೀರ್ತಿ. ಧರ್ಮಕ್ಕೆ ಬದ್ಧನಾಗಿ ಬರೆದಾಗಲೂ ಲೇಖಕ ಬಹಳ ಎಚ್ಚರಿಕೆಯನ್ನು ಪಾಲಿಸದಿದ್ದರೆ ಅವನ ಸಾಹಿತ್ಯವು ಧರ್ಮಪ್ರಚಾರದ ಕರಪತ್ರ ಮಾತ್ರವಾಗಬಲ್ಲದು. ಅದೃಷ್ಟವಶಾತ್ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಧರ್ಮದ ನಕಲಾಗಲು ನಿರಾಕರಿಸಿದ ಲೇಖಕರ ಪಟ್ಟಿಯು ಶರೀಫನ ತನಕ ಧರ್ಮವನ್ನು ಮೀರುವ ಸೃಷ್ಟಿಶೀಲ ಮಾನವತ್ವದ ದಿವ್ಯಗುಣವು ನಿರಂತರವಾಗಿ ಬೆಳೆದು ಬಂದಿದೆ.

ಈ ಬಗೆಯ ಸಂವೇದನೆಯನ್ನು ಸರಿಯಾಗಿ ಗುರುತಿಸಿಕೊಳ್ಳಬೇಕು. ಧರ್ಮದ ಒಳಗಿದ್ದೂ ಧರ್ಮದ ಆಚೆಗೆ ಅಧ್ಯಾತ್ಮದ ದಿವ್ಯತೆಯಲ್ಲಿ ಹುಡುಕುವ ಸ್ವಭಾವ ಎಂತದ್ದು? ಅದರಿಂದ ಉಂಟಾಗುವ ಸಾಮಾಜಿಕತೆಯು ಯಾವುದು? ಇಂತಲ್ಲಿ ಸೃಜನಶೀಲತೆಯು ಕಂಡುಕೊಳ್ಳುವ ಪರ್ಯಾಯಗಳು ಎಂತವು? ಸಮಾಜದ ಕೇಡಿಗೆ ಸೃಜನಶೀಲ ನ್ಯಾಯದ ಘನತೆಯೇನು? ಲೇಖಕನಾದವನು ಧರ್ಮದ ಹಂಗನ್ನು ಹೇಗೆ ಕಳೆದುಕೊಳ್ಳುವನು? ವಿವಿಧ ಕಾಲ ಘಟ್ಟಗಳಲ್ಲಿ ಇಂತಹ ಸಾಹಿತ್ಯ ಕೃತಿಗಳು ಎಂತಹ ಓದನ್ನು ಹೇಗೆ ಬಯಸುತ್ತವೆ? ವರ್ತಮಾನಕ್ಕೆ ಅವುಗಳ ಸಂಬಂಧ ಹೇಗಾಗಬೇಕು? ಇಂತಹ ಹಲವಾರು ಪ್ರಶ್ನೆಗಳನ್ನು ಪರಿಶೀಲಿಸಿದರೆ ಧರ್ಮಾಮೃತದ ಸಂವೇದನೆಯು ತಿಳಿಯುತ್ತದೆ. ಮೇಲೆ ಪ್ರಸ್ತಾಪಿಸಿದ ಮಾನವಶಾಸ್ತ್ರೀಯ ಆಲೋಚನೆಗಳಿಂದ ಹಿಡಿದು ಈ ಹೊತ್ತಿನ ದಲಿತಾನುಸಂಧಾನದ ಮೂಲಕ ನಯಸೇನನ ಈ ಕೃತಿಯನ್ನು ಗ್ರಹಿಸಲು ಅವಕಾಶಗಳಿವೆ. ಅಂತಹ ಪುಟ್ಟ ಯತ್ನವನ್ನೀಗ ಇಲ್ಲಿ ಮಾಡೋಣ.

ನಯಸೇನನ ಧರ್ಮಾಮೃತ ಕೃತಿಯು ಪರಿಶುದ್ಧವಾದ ಸಾಹಿತ್ಯ ಕೃತಿಯಲ್ಲ. ಅದು ಧರ್ಮಸಾರವನ್ನು ಪ್ರಸಂಗ ಮಾದರಿಯಲ್ಲಿ ಪರಿಚಯಿಸುವ ಕೃತಿ. ಧರ್ಮದ ಆಚರಣೆಗಳನ್ನು ಶ್ರದ್ಧೆಯ ಕ್ರಿಯಾವಿಧಿಗಳನ್ನು ಬೋಧಿಸುವ ನೀತಿರಚನೆಯೂ ಹೌದು. ಧರ್ಮಾಮೃತದ ಮೂಲ ಉದ್ದೇಶವೇ ಇದಾಗಿದ್ದು ನಯಸೇನನು ತನ್ನ ಕಾಲದ ಧಾರ್ಮಿಕ ಮತ್ತು ಸಾಮಾಜಿಕ ಎರಡೂ ಸಂಗತಿಗಳನ್ನು ನಿರೂಪಿಸುತ್ತಿದ್ದಾನೆ. ಸಾಮಾಜಿಕವಾದ ವರ್ತಮಾನದ ದೃಷ್ಟಾಂತಗಳ ಮೂಲಕ ಧಾರ್ಮಿಕ ಉನ್ನತಿಯ ನಡತೆಯನ್ನು ಪ್ರತಿಪಾದಿಸುವುದು ಬಹುಪಾಲು ಎಲ್ಲ ಧರ್ಮಗಳ ಕ್ರಮ. ನಯಸೇನ ಇದೇ ಹಾದಿಯಲ್ಲಿ ತನ್ನ ಕಾಲದ ಅನೈತಿಕ ಸಮಾಜದ ನಿರೂಪಣೆಯ ಮೂಲಕ ನೈತಿಕ ಸಮಾಜದ ಮುಕ್ತಿಯ ಬಗೆಯನ್ನು ಕತೆಗಳ ಮೂಲಕ ಪ್ರತಿಬಿಂಬಿಸುತ್ತಿದ್ದಾನೆ. ಧರ್ಮದ ನಂಬಿಕೆಯ ಮೂಲಕವೇ ಸಮಾಜದ ನೀತಿಯನ್ನು ಸಾರುವುದು ಬೇರೆ. ಅದಕ್ಕೆಂದೇ ಧರ್ಮಗ್ರಂಥಗಳಿವೆ. ಧರ್ಮದ ಸಂವಿಧಾನದಂತಿರುವ ಧಾರ್ಮಿಕ ಗ್ರಂಥಗಳು ಸಮಾಜ ಕೇಂದ್ರಿತ ಆಲೋಚನೆಗಳಲ್ಲ. ಧರ್ಮಕ್ಕೆ ಬದ್ಧವಾಗಬೇಕಾ ದದ್ದು ಸಮಾಜಗಳ ಕರ್ತವ್ಯ. ಆದರೆ ಧರ್ಮ ಸಾರವನ್ನು ಅನುಸರಿಸುವ ಕೃತಿಗಳು ಮುಖ್ಯವಾಗಿ ಸಮಾಜ ಕೇಂದ್ರಿತವಾಗಿದ್ದು ಅವು ಸಮಾಜದ ಮೂಲಕವೇ ಧರ್ಮದ ಜೊತೆ ಸಂವಾದ ಮಾಡುತ್ತವೆ. ಆದ್ದರಿಂದಲೆ ನಯಸೇನನಿಗೆ ಅವನಿರುವ ಕಾಲದ ಸಮಾಜದ ಅನೈತಿಕ ಸಂಬಂಧ ಗಳೇ ನೈತಿಕ ಸಮಾಜಕ್ಕೆ ದಾರಿ ತೋರುತ್ತಿರುವುದು. ಈ ಬಗೆಯ ನಿರೂಪಣೆಯ ಕ್ರಮದಲ್ಲಿ ನೀತಿ ಅನೀತಿಗಳೆರಡರ ವೈರುಧ್ಯದ ಮೂಲಕ ಇವೆರಡೂ ಸಂಗತಿಗಳನ್ನು ಮೀರಿದ ಮುಕ್ತಿಯ ಧ್ವನಿಯಿದೆ.

ಇಂತಹ ಮುಕ್ತಿಯ ಧ್ವನಿಯು ಸೃಜನಶೀಲ ಸ್ವಭಾವದಲ್ಲಿ ಅಭಿವ್ಯಕ್ತವಾಗುವುದು ನಿರ್ದಿಷ್ಟ ದೂರದ ಪಯಣದಲ್ಲೇ ಹೊರತು ಅನಂತಯಾನದಲ್ಲಿ ಅದು ಬೆಳೆಯುವುದಿಲ್ಲ. ಧರ್ಮದ ಒಳಗಿದ್ದೂ ಧರ್ಮದ ಆಚೆಗೆ ಪಯಣ ಮಾಡಲು ನಯಸೇನನಿಗೆ ಸಾಧ್ಯವಾಗಿದೆಯೆ ಎಂದರೆ ಉತ್ತರ ಕಷ್ಟ. ಯಾವತ್ತೂ ಕೂಡ ಸೃಜನಶೀಲ ಲೇಖಕನು ಮನಸ್ಸು ಹರಿದಂತೆ ಮಾತ್ರ ತನ್ನ ಕಾಲದ ಅನುಭವ ಹಾಗೂ ಆಶಯಗಳನ್ನು ಬಿಂಬಿಸುತ್ತಾನೆ. ನಯಸೇನ ಧರ್ಮದ ಆಚೆಗೆ ಬಂದವನಲ್ಲವಾದರೂ ಅವನ ನಿರೂಪಣೆಗಳು ಧರ್ಮದ ಆಚೆಯೇ ಓಡಾಡುತ್ತ ಜೈನ ತತ್ವಗಳ ಪ್ರತಿಪಾದನೆಗೆ ಕಥಾ ಸಂದರ್ಭಗಳನ್ನು ಸೃಷ್ಟ್ಠಿಸಿಕೊಳ್ಳುತ್ತಿದ್ದಾನೆ. ಅಂದರೆ ಇದು ತತ್ವ ಪ್ರಣಾಳಿಕೆಯ ಹೊಂದಾಣಿಕೆಯಾಗಿದ್ದರೂ ಪ್ರತಿಯೊಂದು ಕಥಾ ಸಂದರ್ಭವೂ ಆಯಾ ಕಾಲದ ಸಾಮಾಜಿಕ ವ್ಯವಸ್ಥೆಯ ಕನ್ನಡಿಯಾಗಿಯೇ ಪ್ರತಿಫಲವಾಗುತ್ತ ಧರ್ಮದ ದುರವಸ್ಥೆಯನ್ನೂ ಮೌನವಾಗಿ ಹೇಳುತ್ತಿದೆ ಎಂಬುದನ್ನು ಗಮನಿಸಬೇಕು.

ನ್ಯಾಯನೀತಿ ತತ್ವಸಿದ್ಧಾಂತಗಳನ್ನು ಅದ್ದೂರಿಯಾಗಿ ಪ್ರತಿಪಾದಿಸಲು ಜಗತ್ತಿನಲ್ಲಿ ಅಯ್ಯೋ ಪಾಪ! ಪಾಪಿಗಳು ಇರಲೇ ಬೇಕು. ದುಷ್ಟರನ್ನು ಸದೆಬಡಿಯಲೇಬೇಕು. ದುರ್ಮಾರ್ಗಿಗಳನ್ನು ಶಿಕ್ಷಿಸಲೇಬೇಕು. ಅಂತೂ ಪಾಪಿಗಳಿಲ್ಲದೆ ಧರ್ಮಗಳಿಲ್ಲ. ದುರ್ಮಾರ್ಗಿ ಗಳಿಲ್ಲದೆ ಧರ್ಮಗಳಿಲ್ಲ. ಧರ್ಮಗಳು ವಿಪರೀತ ತಲೆಕೆಡಿಸಿಕೊಂಡಿರುವುದು ಪಾಪಿಗಳಿಂ ದಾಗಿಯೆ. ಪಾಪದ ಬಗ್ಗೆ ಧರ್ಮಗಳು ನೆನಪಿಸುವುದು ಅಪಾರವಾಗಿದ್ದು ಒಳ್ಳೆಯದರ ಬಗ್ಗೆ ಅವು ಕಡಿಮೆ ಸಮಯವನ್ನು ಮೀಸಲಿಟ್ಟಿರುತ್ತವೆ. ನಯಸೇನನ ಧರ್ಮಾಮೃತದ ಕತೆಗಳ ತುಂಬ ಪಾಪಿಗಳು, ಕಳ್ಳರು, ದುರ್ಮಾರ್ಗಿಗಳು, ದರೋಡೆ ಮಾಡುವ ಹಂತಕರು, ನಿರ್ಲಜ್ಞ ಕಾಮಾಂಧರು, ವೇಶ್ಯೆಯರು, ಸಂಚುಕೋರರು, ಲಂಪಟರು ತುಂಬಿಹೋಗಿದ್ದಾರೆ. ಅಲ್ಲದೆ ಪ್ರಜೆಗಳನ್ನು ಆಳುವ ರಾಜನ ಅಂತಃಪುರವೂ ಕೂಡ ಅಂತವರ ಸೋಂಕಿನಿಂದ ರೋಗಗ್ರಸ್ಥ ವಾಗಿದೆ. ಒಟ್ಟಿನಲ್ಲಿ ಧರ್ಮ ಮೃತವಾಗಿದೆ. ಅಮೃತದ ಹಂಬಲದಲ್ಲಿ ನಯಸೇನ ಈ ಇಂತಹ ಎಲ್ಲ ಅನ್ಯಮಾರ್ಗಗಳ ಸಮಾಜದ ಮಧ್ಯೆ ಕುಳಿತು ಜೈನಧರ್ಮವನ್ನು ಜೋಡಿಸಿಕೊಂಡಿದ್ದಾನೆ.

ಇಂತಹ ಸ್ಥಿತಿಯನ್ನು ಚಿತ್ರಿಸುವ ನಯಸೇನ ಧರ್ಮದ ತತ್ವ ಪ್ರತಿಪಾದನೆಯಲ್ಲಿ ಸಪ್ಪಗೆ ಕಂಡರೂ ಆ ಸಮಾಜದ ಕೇಡನ್ನು ಪ್ರದರ್ಶಿಸುವಲ್ಲಿ ಅದ್ದೂರಿಯಾಗಿದ್ದಾನೆ. ನಿರ್ಭೀತಿಯಿಂದ  ಲಂಪಟರ ದರ್ಬಾರನ್ನು ವರ್ಣಿಸುತ್ತಾನೆ. ದುರ್ಮಾರ್ಗಿಗಳ ದೌಲತ್ತನ್ನು ಎಗ್ಗಿಲ್ಲದೆ ಪ್ರಭುತ್ವದ ಅಂಜಿಕೆಯಿಲ್ಲದೆ ನಿರೂಪಿಸಿದ್ದಾನೆ. ಧರ್ಮದ ಅಂಕುಶವನ್ನು ಸೃಜನಶೀಲ ಅಭಿವ್ಯಕ್ತಿಯು ಪಳಗಿಸಿಕೊಂಡು ತನ್ನ ಸ್ವಂತ ತಿಳುವಳಿಕೆಯನ್ನೂ, ಸೋಲಿನಿಂದ ಹುಟ್ಟುವ ವಿಷಾದವನ್ನು ಹಾಗೂ ಆ ವಿಷಾದದ ದಿಕ್ಸೂಚಿ ಹಿಡಿದು ನಡೆದ ಆಧ್ಯಾತ್ಮದ ಯಾನವನ್ನು ಮಾತ್ರವೆ ಘನವಾಗಿ ಬಿಂಬಿಸುತ್ತದೆ. ನಯಸೇನ ಧರ್ಮಲಂಪಟನಲ್ಲ. ಇಷ್ಟೊಂದು ಪ್ರಯಾಣದ ಸಾಮಾಜಿಕ ಕೇಡನ್ನು ಕಂಡಿದ್ದ ಅವನಿಗೆ ಧರ್ಮಾದೇಶವನ್ನು ಹೊರಡಿಸುವಂತಹ ಬರಹಗಳನ್ನು ಬರೆಯುವುದು ಕಷ್ಟವೇನಾಗಿರಲಿಲ್ಲ. ಆತ ತನ್ನ ಕಥೆಗಳ ಸಂಕಲನಕ್ಕೆ ಇಟ್ಟು ಕೊಂಡಿರುವ ಹೆಸರು ಕೂಡ ಆತನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಧರ್ಮಾದೇಶ ಎಂತಲೇ ಆತ ಸಂಕಲನಕ್ಕೆ ಹೆಸರಿಟ್ಟುಕೊಳ್ಳಬಹುದಿತ್ತು. ಆತ ಅಮೃತಪರನಾದವನೇ ಹೊರತು ಆದೇಶ ಗಳ ಪರವಾದವನಲ್ಲ. ಹೀಗಾಗಿಯೆ ಧರ್ಮದ ಒಳಗಿದ್ದೂ ಧರ್ಮದ ಆಚೆಗೆ ತುಡಿವ ಅವನ ಮನಸ್ಸು ಸೃಜನಶೀಲವಾದ ನ್ಯಾಯದ ಕಡೆಗೇ ಇದೆ.

ಇಂತಹ ನ್ಯಾಯದ ಸಾಮಾಜಿಕತೆಯು ಸಾರ್ವತ್ರಿಕವಾದ ಪರಿಭಾಷೆಯಲ್ಲಿರುತ್ತದೆ. ವ್ಯಕ್ತಿ, ಕುಟುಂಬ, ಸಮಾಜ ಮೂರನ್ನೂ ಬೆಸೆಯುವಂತೆ ನಯಸೇನನ ಕಥಾ ಲೋಕವಿದೆ. ಅಲ್ಲಿನ ಒಂದೊಂದು ಕತೆಗಳನ್ನು ತೆಗೆದುಕೊಂಡು ಇಲ್ಲಿನ ಮಾತುಗಳಿಗೆ ಅನ್ವಯಿಸಬಹುದು. ಶೀಲವಂತ ನ್ಯಾಯವೇ ನಿಜವಾದ ನ್ಯಾಯ ಎಂಬುದನ್ನು ನಯಸೇನನ ಕತೆಗಳು ಪ್ರತಿಧ್ವನಿ ಸುತ್ತವೆ. ಶೀಲದ ಪ್ರಶ್ನೆ ನಯಸೇನನಿಗೆ ತುಂಬ ಕಾಡಿದೆ. ಶೀಲವೇ ಇಲ್ಲದಿದ್ದರೆ ಯಾವ ಗೆಲುವೂ ಸಾಧ್ಯವಿಲ್ಲ ಎಂಬುದನ್ನು ರೇವತಿ ದೇವಿ, ಶೀಲವತಿ, ಯಜ್ಞದತ್ತೆ, ಸೌಂದರಿ, ಕಮಳಶ್ರೀ ಮುಂತಾದ ಸ್ತ್ರೀ ಪಾತ್ರಗಳ ಮೂಲಕ ನೆನಪಿಸುತ್ತಾನೆ. ಸಂಸಾರದ ಶೀಲ, ವ್ಯಕ್ತಿತ್ವದ ಶೀಲ ಸಾಮಾಜಿಕ ಶೀಲ ಹಾಗೂ ಧಾರ್ಮಿಕ ಶೀಲ ಇವನ್ನೆಲ್ಲ ನಯಸೇನ ತಪ್ಪದೆ ಪಾಲಿಸ ಬೇಕೆಂದು ನಿವೇದಿಸುತ್ತಾನೆ. ನೀತಿ ಅನೀತಿ ಶೀಲ ಅಶ್ಲೀಲ ಮೌಲ್ಯಗಳು ಸಾಕ್ಷಾತ್ಕಾರದ ಪಯಣದಲ್ಲಿ ಅವಳಿಜವಳಿ ಮೌಲ್ಯಗಳಂತೆ ಜೊತೆಯಲ್ಲೇ ಬರುತ್ತವೆ. ಜೈನಧರ್ಮದ ಶೀಲ ತತ್ವಕ್ಕೆ ನಯಸೇನ ಅಶ್ಲೀಲ ಜಗತ್ತಿನ ಸಂಬಂಧಗಳಂತೆ ಶೀಲವಂತ ಲೋಕವನ್ನು ಭಾವಿಸುತ್ತಿ ದ್ದಾನೆ. ಎಂಬುದು ಇಲ್ಲಿ ಮುಖ್ಯ. ಅಶ್ಲೀಲದ ಸಾಮಾಜಿಕ ವ್ಯವಸ್ಥೆಯನ್ನು ನಿರೂಪಿಸುತ್ತಿರುವ ಹೊತ್ತಿನಲ್ಲೇ ಆ ಕಾಲದ ವಾಸ್ತವ ಚಿತ್ರಣವನ್ನೂ ನಯಸೇನ ಬಿಂಬಿಸುತ್ತ ಅನೀತಿಯುತವಾದ ಪರಿಸರ ಹೇಗಿತ್ತು ಎಂಬುದರ ಕಡೆಗೇ ನಮ್ಮ ಮನಸ್ಸು ಹೆಚ್ಚು ಯೋಚಿಸುವಂತೆ ಮಾಡುತ್ತಿ ದ್ದಾನೆ. ನೀತಿ ಧರ್ಮದ ವಿವರಗಳು ಕೇವಲ ಪ್ರಾಸಂಗಿಕವಾಗಿ ಮಾತ್ರ ನಯಸೇನನಲ್ಲಿ ಬರುತ್ತ ವೆಯೆ ಹೊರತು ಅವೇ ಪ್ರಧಾನ ಸಂಗತಿಗಳು ಅಲ್ಲ. ಅಶ್ಲೀಲ ಸಾಮಾಜಿಕ ಪರಿಸರವೇ ಮುಂತಾಗಿ ಮಧ್ಯಕಾಲೀನ ಕರ್ನಾಟಕದ ಸಾಮಾಜಿಕ ವಾಸ್ತವವನ್ನು ತಿಳಿಯಲು ಅನೇಕ ಬಗೆಯ ಹೊಳಹುಗಳನ್ನು ಧರ್ಮಾಮೃತವು ಸೂಚಿಸುತ್ತದೆ.

ಸಾಮಾಜಿಕ ನ್ಯಾಯ ಮತ್ತು ಆಧ್ಯಾತ್ಮಿಕ ಎರಡನ್ನೂ ನಯಸೇನ ಬೇರೆ ಎಂದು ನಿರೂಪಿಸು ವುದಿಲ್ಲ. ಇವೆರಡೂ ಧರ್ಮಾಮೃತದ ಪ್ರಸಂಗಗಳಲ್ಲಿ ಅವಿನಾಭಾವ ಸಂಬಂಧದಲ್ಲಿ ಜರುಗುತ್ತವೆ. ಪ್ರಾಚೀನ ಸಾಹಿತ್ಯ ಕೃತಿಗಳ ನ್ಯಾಯದ ಮಾನದಂಡಗಳೇ ಇಂತಹವಾಗಿದ್ದವು. ಅಧ್ಯಾತ್ಮದ ದರ್ಶನವಿಲ್ಲದೆ ಸಾಮಾಜಿಕ ನುಡಿಗಟ್ಟನ್ನು ಅವತ್ತಿನ ಕೃತಿಗಳು ಮಾತನಾಡು ವುದಿಲ್ಲ. ಧರ್ಮದ ನೀತಿಯ ಮೂಲಕವೇ ಒಬ್ಬ ಸಂವೇದನಾಶೀಲ ಲೇಖಕ ತನ್ನ ಸಾಮಾಜಿಕತೆ ಯನ್ನು ಪ್ರತಿಬಿಂಬಿಸಬೇಕಾದರೆ ಎಷ್ಟೊಂದು ಕಷ್ಟವಿತ್ತು ಎಂಬುದನ್ನು ಪರಿಶೀಲಿಸಬೇಕು. ಭಕ್ತಿ ಪಂಥದ ಕವಿಗಳಿಗೆ ಅದು ಸುಲಭವಿದ್ದಿರಬಹುದು. ಕಾವ್ಯದ ಅಧ್ಯಾತ್ಮವು ರೂಪಕಗಳ ಮೂಲಕ ಧರ್ಮದ ಎಲ್ಲೆಯನ್ನು ಸುಲಭವಾಗಿ ಮೀರಲು ಸಾಧ್ಯ. ರಮ್ಯವಾದ ದಿವ್ಯಮೋಹದ ಬೆನ್ನೇರಿ ಅಂತಹ ಸಂತಕವಿಗಳು ದೇವರನ್ನೆ ಆತ್ಮಸಂಗಾತಿಯನ್ನಾಗಿ ಮಾಡಿಕೊಂಡು ಬಿಡಬಲ್ಲದು. ಆಗ ಅಂತವರ ಸಾಮಾಜಿಕತೆಯು ಉತ್ಕಟ ವ್ಯಕ್ತಿ ಕಾಣ್ಕೆಯ ಮುಕ್ತಿಯಲ್ಲಿ ಅತೀತತೆಯನ್ನು ಕಂಡುಕೊಳ್ಳುತ್ತದೆ. ಆದರೆ ಕಾವ್ಯ ಮಾದರಿಯಿಂದ ಹೊರ ಬಂದ ಗದ್ಯಕಾರ ನಿಗೆ ಅದರಲ್ಲೂ ಲೌಖಿಕದ ವರ್ತಮಾನವನ್ನು ಮನುಷ್ಯ ವ್ಯಾಪಕವಾದ ಸಂದರ್ಭಗಳ ಮೂಲಕ ಅಧ್ಯಾತ್ಮ, ಮುಕ್ತಿ ಹಾಗೂ ಸಂಸ್ಕಾರಗಳ ಮಾತನಾಡುವುದೆಂದರೆ ಅದು ಸದಾ ಆ ಲೇಖಕನ ಪ್ರಜ್ಞೆಯನ್ನೇ ತುಂಡುಮಾಡಿ ಕತೆಯ ಒಂದೊಂದು ಘಟಕಗಳಿಗೆ ತನ್ನ ಕಾಣ್ಕೆಯನ್ನು ಧಾರೆ ಎರೆಯಬೇಕಾದ ಇಕ್ಕಟ್ಟನ್ನು ಒಡ್ಡುತ್ತದೆ. ನಯಸೇನನಿಗೂ ಇಂತಹದೇ ಸವಾಲು ಎದುರಾಗಿದೆ. ಹಾಗಾಗಿಯೆ ಅವನು ಲೌಖಿಕದ ಹಗುರ ವಿವರಗಳ ಮೂಲಕವೇ ಘನವಾದ ಅಲೌಖಿಕತೆಗೆ ದಾರಿಗಳನ್ನು ಹುಡುಕುತ್ತಾನೆ. ಮೊದಲೇ ನಯಸೇನನಿಗೆ ಜೈನ ದರ್ಶನಗಳ ಮೆಟ್ಟಿಲುಗಳು ಗೊತ್ತಿರುವುದರಿಂದ ಅವುಗಳಿಗಾಗಿಯೆ ಆತ ಕಥಾ ಸರಣಿಯನ್ನು ಹೆಣೆಯ ಬೇಕಾದ ಪೂರ್ವಸಿದ್ದತೆಯಿದೆ. ಈ ಸಿದ್ಧತೆಯ ಮೂಲಕ ನಯಸೇನ ಧರ್ಮದ ನೀತಿ ನಿಯಮಗಳನ್ನು ಕೂಡ ಸಿದ್ಧ ಮಾದರಿಯಲ್ಲೇ ಕಂಡಿರುವಂತಿದೆ. ಸಿದ್ಧ ಸಿದ್ಧಾಂತಗಳು ಸಿದ್ಧ ಘಟನೆಗಳು ಸಿದ್ಧವಾದ ಗುರಿಗಳಿಂದ ಹೊರಟ ಲೇಖಕನ ಪಾಡು ತುಂಬ ಕಷ್ಟದ್ದು. ಯಾವ ಗುರಿಗಳೂ ಇಲ್ಲದೆ ಹೊರಟ ಲೇಖಕ ಕವಿಯಾಗುವುದು ಸುಲಭ. ಕವಿಯ ರೂಪಕಗಳು ಹುಡುಕಾಟವನ್ನು ನಿರಂಕುಶವಾಗಿ ಮಾಡುತ್ತ ಆ ಕವಿಗೆ ಅಪರಿಮಿತ ಸ್ವಾತಂತ್ರ್ಯವನ್ನು ಕೊಟ್ಟು ಬಿಟ್ಟಿರುತ್ತವೆ. ಆ ರೂಪಕಗಳೇ ಅಂತಿಮ. ಗದ್ಯಕಾರನಾದ ನಯಸೇನನಿಗೆ ಇಂತಹ ಅದೃಷ್ಟ ವಿಲ್ಲ. ಅವನೇ ಹೇಳಿಕೊಳ್ಳುವಂತೆ ಈ ಕತೆಗಳೆಲ್ಲವೂ ಜೈನ ತತ್ವದ ಹಿರಿಮೆ ಸಾರಿ ಅವುಗಳ ಪಾಲನೆಗೆ ಬೇಕಾದ ಪೂರ್ವಭಾವಗಳನ್ನು ಬಲಪಡಿಸುವುದಾಗಿದೆ. ಪುರಾಣಗಳನ್ನು ರೂಪಿಸುವುದಾಗಿದ್ದರೆ ನಯಸೇನನ ಕೆಲಸ ಸುಲಭವಿರುತ್ತಿತ್ತು. ಧರ್ಮದ ಅವತಾರ ಪುರುಷರ ಮಹಿಮೆ ಯನ್ನು ಭಜಿಸಿ ಪಾರಮ್ಯವನ್ನು ಕೊಂಡಾಡುವುದು ಕಷ್ಟವೇನಲ್ಲ. ಲೌಕಿಕದ ನರಕದ ಮೂಲಕವೇ ಧರ್ಮ ಸಾಕ್ಷಾತ್ಕಾರವನ್ನು ಬರೆಯುವುದು ಲಘುವಾದುದಲ್ಲ. ಪುರಾಣಗಳನ್ನು ನಂಬುವುದು ಪಾಲಿಸುವುದು ಕೇಳ ಹೇಳುವುದು ಉಳಿಸಿಬೆಳೆಸಿ ಧರ್ಮಕ್ಕೆ ಬೇಕಾದಂತೆ ಉಪ ಪುರಾಣಗಳನ್ನು ವಿಸ್ತರಿಸಿಕೊಳ್ಳುವುದು ಪರಂಪರಾಗತ ರೂಢಿ. ಆದರೆ ಗದ್ಯ ಕಥನವು ಯಾವತ್ತು ಲೌಖಿಕ ಪರವಾದುದು. ಕತೆ ಯಾವತ್ತೂ ಪ್ರಶ್ನಾರ್ಹವಾದುದು. ನಯಸೇನ ಇಂತಹ ಕತೆಗಳ ಮೂಲಕವೇ ತನ್ನ ಕಾಲವನ್ನೂ ಪ್ರಶ್ನಿಸುತ್ತಿದ್ದಾನೆ. ಹೀಗಾಗಿ ಧರ್ಮಾಮೃತದ ಕಥಾಲೋಕವು ಪುರಾಣದ ಪುಣ್ಯಸ್ಮರಣೆ ಮಾಡುವ ಬದಲು ಸಮಾಜದ ಲಂಪಟತನವನ್ನು ಪ್ರಧಾನವಾಗಿಟ್ಟು ಕೊಂಡು ನಿಯಂತ್ರಣವಿಲ್ಲದ ಸಮಾಜದ ಸ್ಥಿತಿಯನ್ನು ಚಿತ್ರಿಸುತ್ತಿದ್ದಾನೆ.

ಹೀಗಾಗಿಯೆ ಧರ್ಮಾಮೃತದ ಧರ್ಮಕ್ಕೂ ಅದೇ ಕೃತಿಯ ಮೂಲಕ ನಯಸೇನ ತೋರುತ್ತಿರುವ ಸಾಮಾಜಿಕ ಧರ್ಮಕ್ಕೂ ನಿರಂತರವಾದ ದ್ವಂದ್ವ ಸಂಘರ್ಷ ನಡೆಯುತ್ತಿರು ವುದನ್ನು ಗಮನಿಸಬಹುದು. ಧರ್ಮಾಮೃತದ ಧರ್ಮದ ತತ್ವಗಳು ಜೈನ ಮತ ಪ್ರಚಾರದವು. ಈ ಮತ ಪ್ರಚಾರದ ಸಂದರ್ಭವಾದರೂ ಯಾವುದು ಎಂದರೆ ಮಧ್ಯಕಾಲೀನ ಸಮಾಜದ್ದು. ಕರ್ನಾಟಕದ ಹಲವಾರು ಸಮುದಾಯಗಳು ಚಹರೆಗಾಗಿ ಹುಡುಕಾಡುತ್ತಿದ್ದ ಕಾಲ ಅದಾಗಿತ್ತು. ಸಾಮ್ರಾಜ್ಯಗಳು ಏಳುಬೀಳಿನಲ್ಲಿ ಅರಾಜಕವಾಗಿದ್ದವು. ಸಾಮಾಜಿಕ ವ್ಯವಸ್ಥೆ ಕೂಡ ಸ್ಥಗಿತ ವಾಗಿತ್ತು. ಅಂತಹ ಸ್ಥಗಿತತೆಗೆ ಹಲವಾರು ಚಾರಿತ್ರಿಕ ಕಾರಣಗಳಿದ್ದವು. ಮತಧರ್ಮಗಳೇ ಬೇರುಕಳೆದುಕೊಳ್ಳುವ ಇಕ್ಕಟ್ಟಿನಲ್ಲಿದ್ದವು. ಹಿಂದೂ ಧರ್ಮ ಪುನರುಜ್ಜೀವನಗೊಳ್ಳಲು ದಾರಿ ಹುಡುಕುತ್ತಿದ್ದರೆ ಬೌದ್ಧಧರ್ಮವು ಕಣ್ಮರೆಯಾಗುತ್ತಿತ್ತು. ಅಂತೆಯೆ ಜೈನ ಧರ್ಮಕೂಡ ಬದುಕುಳಿಯುವ ಹಂಬಲದಲ್ಲಿ ಜೀವ ಹಿಡಿದುಕೊಂಡು ಸಂಕಷ್ಟದಲ್ಲಿತ್ತು. ಅದೇ ಕಾಲಕ್ಕೆ ಚಹರೆಗೆಟ್ಟಿದ್ದ ಸಣ್ಣಸಣ್ಣ ಗುಂಪಿನ ಸಮುದಾಯಗಳು ಗ್ರಾಮೀಣ ಕರ್ನಾಟಕದಲ್ಲಿ ಅಲ್ಪಸಂಖ್ಯಾತವಾಗಿದ್ದುಕೊಂಡು ಎಲ್ಲದಕ್ಕೊಳಗಾಗಿದ್ದೂ ಯಾವುದರಲ್ಲೂ ಉಳಿಯಲಾರದ ಧೃತಿಗೆಟ್ಟ ಸ್ಥಿತಿಯಲ್ಲಿದ್ದವು. ಅಂತಹ ಅನೇಕ ಸಮುದಾಯಗಳು ಯಾವ ಮತ ಧರ್ಮದ ಅಂಕುಶಕ್ಕೂ ಸುಲಭವಾಗಿ ಒಳಪಡಬಹುದಾಗಿತ್ತು. ಆಗ ತಾನೆ ವಚನ ಚಳುವಳಿಯು ಸಾಮಾಜಿಕ ಆಯಾಮವನ್ನು ಪಡೆದುಕೊಳ್ಳುತ್ತಿತ್ತು. ಶೈವ ಪರಂಪರೆಯನ್ನು ಜನಸಾಮಾನ್ಯರು ತೀವ್ರವಾಗಿ ಭಾವಿಸುತ್ತ ಅದರ ಕಡೆಗೆ ಆಕರ್ಷಿತರಾಗುತ್ತಿದ್ದರು. ಅಲ್ಲದೆ ಜೈನ ಧರ್ಮದ ಕಠಿಣ ವ್ರತ ನಿಷ್ಠೆಗಳು ಖಿಲವಾಗುತ್ತ ಐಹಿಕ ಸುಖವೇ ಮುಖ್ಯವಾಗಿ ಲೌಕಿಕದ ಕಾಮನೆಯೂ ಹೆಚ್ಚುತ್ತಿತ್ತು. ಇಡೀ ಕರ್ನಾಟಕದ ಬಹುರೂಪಿ ಸಮಾಜಗಳು ಹನ್ನೊಂದರಿಂದ ಹನ್ನೆರಡನೆ ಶತಮಾನದ ವೇಳೆಗೆ ಪೂರ್ಣವಾಗಿ ಜೈನ ಮತ್ತು ಬೌದ್ಧಧರ್ಮಗಳನ್ನು ನಿರ್ಣಾಯಕವಾಗಿ ಉಪೇಕ್ಷಿಸುವ ಮಟ್ಟಕ್ಕೆ ಬಂದಿದ್ದವು. ನಯಸೇನ ಇಂತಹ ಸಂದರ್ಭದಲ್ಲಿ ನೀತಿಯ ಕತೆಗಳನ್ನು ಹೇಳದೆ ಬೇರೇನನ್ನು ಹೇಳಲು ಸಾಧ್ಯವಿರಲಿಲ್ಲ. ಬಸವಣ್ಣನ ಹಾಗೆ ಆತ ಸಾಮಾಜಿಕ ಕ್ರಾಂತಿ ಯನ್ನು ಮಾಡುವುದಕ್ಕೆ ಕಾಲ ಪಕ್ವವಾಗಿರಲಿಲ್ಲ. ಬಸವಣ್ಣ ವಚನ ಚಳುವಳಿಗೆ ಛಿದ್ರಗೊಂಡಿದ್ದ ಎಲ್ಲ ಅವೈದಿಕ ಸಮುದಾಯಗಳು ಸಿದ್ಧವಾಗಿದ್ದವು. ನಯಸೇನನ ಕಥಾಲೋಕದ ಒಳ ಪ್ರವೇಶಿಸಿಯೇ ನೋಡುವುದಾದರೆ ಅವನ ಕಾಲವು ಕರ್ನಾಟಕದ ಚರಿತ್ರೆಯ ಅನೇಕ ಒಳ ಸಂಗತಿಗಳನ್ನು ತಿಳಿಸುವುದರ ಜೊತೆಯಲ್ಲೆ ಲೇಖಕನಾಗಿ ಅವನ ಇಕ್ಕಟ್ಟುಗಳನ್ನು ಪ್ರತಿಬಿಂಬಿ ಸುತ್ತಿದೆ.

ನಯಸೇನನ ಕತೆಗಳು ಒಂದು ರೀತಿಯಲ್ಲಿ ವರ್ತಕ ಸಮಾಜವು ಪ್ರಭುತ್ವದ ಬಲದ ಜೊತೆಗೆ ಹೇಗೆ ಅಧಃಪತನಗೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತಿವೆ. ನಯಸೇನನ ಕಾಲವು ವರ್ತಕ ಸಮಾಜವು ಸಂಪತ್ತಿನಿಂದ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ತೊಡಗುತ್ತಲೇ ಸ್ವೇಚ್ಛೆಯಾಗಿದ್ದ ಹಂತದ್ದು. ಸಹಜವಾಗಿಯೆ ಸಂಪತ್ತು ವೃದ್ದಿಯಾದಂತೆಲ್ಲ ಅನೀತಿ ಕಳ್ಳತನ ಲಂಪಟತೆ ಹಾಗೂ ಅನೈತಿಕ ವ್ಯವಹಾರಗಳೆಲ್ಲ ವಿಪರಿತವಾಗುತ್ತ ಧರ್ಮ ಶ್ರದ್ಧೆಯು ಕುಂದುತ್ತದೆ. ಈ ಬಗೆಯ ಪರಿಸರವನ್ನು ಬಳಸಿಕೊಂಡೇ ವಚನ ಚಳುವಳಿಯು ಬಲಗೊಳ್ಳು ತ್ತಿತ್ತು. ಕಳಬೇಡ ಕೊಲಬೇಡ ಹುಸಿಯ ನುಡಿಯ ಬೇಡ ಎಂದು ಬಸವಣ್ಣ ತನ್ನ ಸಾಮಾಜಿಕ ವಾಸ್ತವವನ್ನು ಪ್ರತಿಬಿಂಬಿಸುವುದಕ್ಕೆ ಕಾಲ ಸಿದ್ಧವಾಗುತ್ತಿತ್ತು. ನಯಸೇನನೇನಾದರೂ ಜೈನಧರ್ಮದ ಪ್ರಚಾರದ ಉದ್ದೇಶವನ್ನು ಇಟ್ಟುಕೊಳ್ಳದಿದ್ದರೆ ಆತ ಒಬ್ಬ ಕ್ರಾಂತಿಕಾರಿ ಗದ್ಯಕಾರನೇ ಆಗುತ್ತಿದ್ದ. ವಡ್ಡಾರಾಧನೆಯ ಕಥೆಗಳ ಕಲಾತ್ಮಕತೆಯನ್ನು ಮೈಗೂಡಿಸಿಕೊಂಡು ಪಂಚತಂತ್ರದ ಕತೆಗಳಿಗಿಂತಲೂ ಮಿಗಿಲಾದ ವಾಸ್ತವ ಲೋಕವನ್ನು ಸೃಷ್ಟಿಸಲು ಸಾಧ್ಯವಾಗುತ್ತಿತ್ತು.

ಇಷ್ಟಾದರೂ ನಯಸೇನ ಸಾಮಾಜಿಕ ವಾಸ್ತವವನ್ನು ಪೂರ್ಣವಾಗಿ ಬಿಟ್ಟುಕೊಡಲಾರ. ಮಧ್ಯಕಾಲೀನ ಸಮಾಜಗಳು ನೀತಿ ಅನೀತಿಗಳ ಮುಖಾಮುಖಿಯಲ್ಲಿ ಯಾವ ಬಗೆಯ ಧಾರ್ಮಿಕತೆಯನ್ನು ಹುಡುಕುತ್ತಿದ್ದವು ಎಂದು ತಿಳಿಯಲು ನಯಸೇನನ ಧರ್ಮಾಮೃತದ ಕತೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ವರ್ತಕ ಹಾಗೂ ಕರಕುಶಲ ಸಮುದಾಯಗಳು ಇದ್ದಕ್ಕಿ ದ್ದಂತೆ ಪ್ರವರ್ಧಮಾನಕ್ಕೆ ಬಂದು ಅವು ಅನಿಶ್ಚಿತವಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪಲ್ಲಟಗಳಿಗೆ ಒಳಗಾಗಿ ಅತಂತ್ರವಾಗಿದ್ದಾಗ ಹುಟ್ಟುವ ಧರ್ಮಾಮೃತದ ಕತೆಗಳು ವ್ಯವಸ್ಥೆಯ ವೈಫಲ್ಯವನ್ನು ಕೂಡ ಪ್ರತಿಧ್ವನಿಸುತ್ತಿವೆ. ಜನಸಾಮಾನ್ಯರನ್ನು ಮುಟ್ಟಬೇಕು ಎಂಬಂತೆ ಬರೆವ ನಯಸೇನನು ದಟ್ಟವಾದ ಜನಪದ ಸಮಾಜದ ವಿವರಗಳನ್ನು ಕೊಡುವುದು ಕೂಡ ಆ ಕಾಲದ ಜನಪದ ಬದುಕಿನ ಚಿತ್ರವನ್ನು ತಿಳಿಯುವುದಕ್ಕೂ ಉಪಕಾರಿಯಾಗಿದೆ. ಇಂತಹ ಸಾಮಾಜಿಕ ವಿವರಗಳ ಮೈದುಂಬಿ ಬರೆವ ನಯಸೇನ ರಾಜಾಶ್ರಯದ ಹಂಗಿನಲ್ಲಿದ್ದವನಲ್ಲ. ಪ್ರಭುತ್ವದ ಭಂಡತನವನ್ನು ನಿಶ್ಯಂಕೆ ಕತೆಯ ಲಲಿತಾಂಗನ ಮೂಲಕ ನಯಸೇನ ವಿಡಂಬಿಸು ತ್ತಾನೆ. ಇಲ್ಲಿನ ಬಹುಪಾಲು ಕತೆಗಳು ರಾಜನ ಅಂಗಳದ ಜನರ ಮೂಲಕವೇ ತೆರೆದು ಕೊಳ್ಳುತ್ತವೆ. ಈ ಕತೆಗಳನ್ನಾದರೂ ರಾಜನಿಗೆ ಬೋಧಿಸಲಾಗುತ್ತಿದೆ. ಮಗಧಾದಿಪತಿಯಾದ ಶ್ರೇಣಿಕ ಮಹಾರಾಜನು ತನ್ನ ಪತ್ನಿ ಚೇಳಿನಿ ದೇವಿಯ ಜೊತೆ ಗೌತಮ ಗಣಧರರ ಬಳಿ ಬಂದು ಹುಟ್ಟುಸಾವುಗಳ ಚಕ್ರದಿಂದ ಮುಕ್ತಿ ಪಡೆಯಲು ದಾರಿ ಯಾವುದೆಂದು ವಿನಂತಿಸಿ ಕೊಂಡಾಗ ಅವರು ಜೈನ ಧರ್ಮದ ಹದಿನಾಲ್ಕು ತತ್ವಗಳನ್ನು ಬೋಧಿಸುತ್ತಾರೆ. ನಯಸೇನ ಆ ಹದಿನಾಲ್ಕು ತತ್ವ ಬೋಧನೆಗಳನ್ನು ಅನುಸರಿಸಿ ಒಂದೊಂದು ತತ್ವಕ್ಕೂ ಕಥಾ ಪ್ರಸಂಗವನ್ನು ನಿರ್ಮಿಸಿ ಜೈನ ಧರ್ಮದ ಪ್ರಚಾರವನ್ನು ಮಾಡುತ್ತಾನೆ.

ಜೈನ ಧರ್ಮದ ಆ ಹದಿನಾಲ್ಕು ತತ್ವಗಳೂ ಮುಖ್ಯವಾಗಿ ಸಾಮಾಜಿಕ ಸಂಹಿತೆಯಾಗಿ ನಿರೂಪಿಸಲ್ಪಡುತ್ತಿವೆ ಎಂಬುದು ಇಲ್ಲಿ ಗಮನಿಸತಕ್ಕ ಸಂಗತಿಯಾಗಿದೆ. ಧರ್ಮ ಸಾರವನ್ನು ಸರಳಗೊಳಿಸಿ ಪ್ರಸಂಗಗಳ ಮೂಲಕ ನಯಸೇನ ಒಂದು ಬಗೆಯಲ್ಲಿ ತತ್ವಕೇಂದ್ರಿತ ಪ್ರದರ್ಶನಗಳನ್ನು ರೂಪಿಸಿದ್ದಾನೆ. ಜೈನ ತತ್ವದ ಈ ಪ್ರದರ್ಶನವು ನಾಟಕೀಯವಾಗಿ ನಯಸೇನನ ನಿರೂಪಣೆಯಲ್ಲಿ ಅನಾವರಣಗೊಳ್ಳುತ್ತಿವೆ. ಹಾಗಾಗಿಯೆ ಧರ್ಮಾಮೃತದ ಒಂದೊಂದು ಕಥಾ ಪ್ರಸಂಗಗಳೂ ನಾಟಕದ ಒಂದೊಂದು ಅಂಕಗಳಂತೆ ಬೆಳೆಯುತ್ತವೆ. ಜೈನ ದರ್ಶನದ ಬೃಹತ್ ರೂಪಕವಾಗಿಯೂ ಧರ್ಮಾಮೃತ ಕಾಣುತ್ತದೆ. ಕತೆ, ಕಾವ್ಯ, ನಾಟಕ, ತತ್ವವಿಚಾರ ಗಳು ಒಮ್ಮೆಗೇ ಮೇಳೈಸಿ ನಯಸೇನನ ಈ ನಿರೂಪಣೆಗಳಿಗೆ ಅಧ್ಯಾತ್ಮದ ರಂಗ ವೈಭವ ಪ್ರಾಪ್ತವಾಗಿದೆ. ಅಧ್ಯಾತ್ಮದ ಜೊತೆಯಲ್ಲೇ ದಿವ್ಯವಾದ ಮುಕ್ತಿಗೆ ಬೇಕಾದ ಅರ್ಹತೆಗಳ ಪರೀಕ್ಷೆಗಳನ್ನು ಕತೆಗಳ ಮೂಲಕ ಅಭಿನಯಿಸುವಂತೆ ಮಾಡಲಾಗುತ್ತಿದೆ. ಜೈನಾಗಮಕ್ಕೆ ಕಡ್ಡಾಯವಾಗಿ ಅರ್ಹನಾಗಬೇಕಾದವನು ಸಾವು, ಚಿಂತೆ, ಭಯ, ಮದ, ಕೋಪ, ಮೋಹ, ಖೇದ, ರೋಗ, ಬೆವರು, ಬಾಯಾರಿಕೆ, ದುಃಖ, ಊಟ, ಜನನ, ಲೋಭ, ಐಶ್ವರ್ಯ, ಕಾಮಬಾಧೆ, ನಿದ್ದೆ ಇವೆಲ್ಲವನ್ನೂ ಗೆದ್ದವನು ಜಿನೇಶ್ವರನ ಅಂತರಂಗದಲ್ಲಿ ಲೀನವಾಗುತ್ತಾನೆ. ಈ ಬಗೆಯ ಗೆಲುವನ್ನು ಪಡೆಯುವುದು ದುಸ್ಸಾಧ್ಯ. ಇಷ್ಟೊಂದು ಕಠಿಣನಿಷ್ಠೆಯ ಧ್ಯಾನಶೀಲ ವನ್ನು ವ್ಯಕ್ತಿಯಿಂದ ಸಮಾಜದಿಂದ ನಿರೀಕ್ಷಿಸಬೇಕಾದರೆ ಆ ಕಾಲದ ಸಮಾಜ ಎಷ್ಟೊಂದು ಕೆಟ್ಟದ್ದಿರಬಹುದಿತ್ತು ಎಂಬ ಪ್ರಶ್ನೆ ಸಹಜ. ನಯಸೇನ ಇಂತಹ ಕಠಿಣ ಸವಾಲುಗಳನ್ನು ಸಮ್ಯಕ್‌ದರ್ಶನದ ಮೊದಲ ಪ್ರಸಂಗದಿಂದಲೇ ದಯಾಮಿತ್ರ ಹಾಗೂ ವಸುಭೂತಿಯ ನಿಷ್ಠೆಯ ಪರೀಕ್ಷೆ ಮೂಲಕ ಪರಿಚಯಿಸುತ್ತಾನೆ. ಈ ಕತೆಯು ಪ್ರತಿಪಾದಿಸುವ ನೈತಿಕತೆಯು ಸಾಮಾನ್ಯರಿಗೆ ಸಾಧ್ಯವಾಗದ ಸಂಗತಿಯಂತೆ ಕಾಣುವುದು ದಿಟ. ಇಂತಹ ಉಗ್ರ ನೋಂಪಿಯ ಆಚರಣೆಗಳಿಂದಲೇ ಭಾಗಶಃ ಜೈನಧರ್ಮವು ಜನಸಾಮಾನ್ಯರಿಂದ ದೂರವಾಗಿ ವಚನ ಚಳುವಳಿಯ ಕಾಯಕದ ಸರಳ ಜೀವನ ದರ್ಶನದ ಕಡೆಗೆ ಚಲಿಸುವಂತಾದುದು. ಕಠಿಣ ವ್ರತಾಚರಣೆಗಳು ಕೇವಲ ವೈಯಕ್ತಿಕ ಸಾಧನೆಯಲ್ಲಿ ಗೆಲ್ಲಬಲ್ಲವೇ ಹೊರತು ಸಾಮಾಜಿಕವಾಗಿ ಅವು ಸಮಷ್ಟಿಯ ಗೆಲುವಾಗಲಾರವು. ಆದರೆ ಇಂತಹ ಸಮ್ಯಕ್‌ದರ್ಶನವು ವ್ಯಕ್ತಿತ್ವದ ಸಾಕ್ಷಾತ್ಕಾರವನ್ನು ಬಲವಾಗಿ ಒತ್ತಾಯಿಸುತ್ತದೆ. ಭಂಡರು, ಆಸೆಬುರುಕರು, ನೀಚರು ಐಹಿಕದ ಬಲೆಯಲ್ಲಿ ಸಿಲುಕಿ ಅಲ್ಲೇ ಕಳೆದು ಹೋಗುತ್ತಾರೆ. ಅಂತವರು ಮುಕ್ತರಾಗಬೇಕಾದರೆ ನೋಂಪಿಯಂತಹ ಶ್ರದ್ಧಾಚರಣೆಗಳನ್ನು ಪಾಲಿಸುವುದು ಅನಿವಾರ್ಯ ಎಂಬುದನ್ನು ನಯಸೇನ ಹೇಳುತ್ತಿದ್ದಾನೆ.

ಇಲ್ಲಿ ಧಾರ್ಮಿಕ ಆವರಣ ಕೇವಲ ನೆಪದಂತೆ ಬರುತ್ತದೆ. ತತ್ವವನ್ನು ಮೀರಿ ಸಾಮಾಜಿಕ ವಾಸ್ತವಗಳೆ ಮೇಲುಗೈ ಸಾಧಿಸುತ್ತವೆ. ದಯಾಮಿತ್ರ ಶೆಟ್ಟಿ ಹಾಗೂ ವಸುಭೂತಿ ಇಬ್ಬರೂ ಸಾಮಾಜಿಕ ವ್ಯವಸ್ಥೆಯ ನೈತಿಕ ನೆಲೆಯ ಎರಡು ವಿಭಿನ್ನ ನೆಲೆಗಳು. ಇಬ್ಬರೂ ಸಮಾನ ಧರ್ಮಿಗಳಲ್ಲ. ತಮ್ಮ ತಮ್ಮ ಮತ ಮೌಲ್ಯಗಳನ್ನು ಗಾಢವಾಗಿ ನಂಬಿದವರು. ನಯಸೇನ ಸಹಜವಾಗಿ ತನ್ನ ಜೈನಧರ್ಮದ ಪರವಾದ ನಿಲುವು ತಾಳಿ ತನ್ನ ನಂಬಿಕೆಯ ಘನತೆಯನ್ನು ಎತ್ತಿ ಹಿಡಿಯುತ್ತಾನೆ. ಆದರೆ ಈ ಕತೆಯಿಂದ ಸೂಕ್ಷ್ಮವಾದ ಸಾಮಾಜಿಕ ವರ್ತನೆಯು ಧ್ವನಿತವಾಗುತ್ತದೆ. ಮತೀಯ ಅಂತಃಕಲಹಗಳು ಆ ಕಾಲಕ್ಕೆ ವಿವಿಧ ಮತಾಚಾರಗಳ ನಡುವೆ ಇದ್ದಿರಲೇಬೇಕು. ಮತಾಂತರದ ಪ್ರಕ್ರಿಯೆಯನ್ನು ಹೇಳುವ ಸತ್ಯವ್ರತ ಧನದ ಸಂಘಶ್ರೀ ಹಾಗೂ ಕಮಲಶ್ರೀಯರ ಸಂಬಂಧಗಳು ಕೂಡ ಬೌದ್ಧ ಹಾಗೂ ಜೈನಧರ್ಮದ ನಡುವಿನ ಸಂಘರ್ಷಗಳನ್ನು ಬಿಂಬಿಸುತ್ತವೆ. ಮತೀಯ ಗಲಭೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಕತೆಯನ್ನು ಓದಿದರೆ ನಯಸೇನನು ಉಗ್ರ ಮತಾಂಧತೆಯನ್ನು ಸೌಮ್ಯವಾಗಿ ನಿರೂಪಿಸು ತ್ತಿದ್ದಾನೆ ಎಂಬುದು ತಿಳಿಯುತ್ತದೆ. ಹಿಂದೂ ಧರ್ಮದ ಮೇಲಿನ ಟೀಕೆಗಿಂತಲೂ ಬೌದ್ಧ ಧರ್ಮದ ವಿಚಾರಗಳ ಬಗ್ಗೆ ನಯಸೇನನಿಗೆ ಹೆಚ್ಚು ಅಸಹನೆ ಇರುವುದು ಕಾಣುತ್ತದೆ. ಸಂಘಶ್ರೀಯು ಜೈನ ಧರ್ಮಕ್ಕೆ ಮತಾಂತರಗೊಂಡು ಮತ್ತೆ ಬೇರೊಬ್ಬರ ಪ್ರಭಾವದಿಂದ ಮರಳಿ ಬೌದ್ಧಧರ್ಮಕ್ಕೆ ಹೊರಳಿ ಕೊನೆಗೆ ಶುದ್ಧವಾದ ನಂಬಿಕೆಯನ್ನು ಪಾಲಿಸದೆ ಪಾಪಿಯಾಗಿ ಏಳು ತಲೆಮಾರುಗಳ ತನಕ ಆ ಪಾಪ ಮುಂದುವರಿದು ಅವನ ಸಂತತಿಯವರು ಹುಟ್ಟುಕುರುಡ ರಾದರು ಎಂದು ನಯಸೇನ ಹೇಳುವುದು ವಿಚಿತ್ರವಾಗಿದೆ. ಹಿಂದೂ ಧರ್ಮದ ಬ್ರಾಹ್ಮಣರ ಬಗ್ಗೆ ಸೌಮ್ಯ ಟೀಕೆ ಮಾಡಿ ಅವರನ್ನು ಜಿನಭಕ್ತರನ್ನಾಗಿ ಪರಿವರ್ತಿಸಿಕೊಳ್ಳುವ ನಯಸೇನ ಹಿಂದೂ ಧರ್ಮದ ಜೊತೆ ಸ್ನೇಹದಲ್ಲೇ ವರ್ತಿಸುತ್ತಾನೆ. ಭಾಗಶಃ ಹಿಂದೂ ಧರ್ಮ ನಯಸೇನ ನಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರಲಿಲ್ಲ. ಬೌದ್ಧಧರ್ಮದ ಆಚಾರಗಳನ್ನು ಕಟುಶಿಕ್ಷೆಯ ನುಡಿಯಿಂದ ಟೀಕಿಸುವ ಗುಣದಿಂದಾಗಿ ಇವೆರಡೂ ಧರ್ಮಗಳ ಒಳ ಸಂಘರ್ಷಗಳನ್ನು ಗ್ರಹಿಸಬಹುದಾಗಿದೆ.

ನಯಸೇನ ಮೂಲತಃ ಮುನಿಯಾಗಿದ್ದವನು. ‘ವಾತ್ಸಲ್ಯರತ್ನಾಕರ’ನಾದ ಕವಿ. ಹಾಗೆಯೆ ಅಪ್ಪಟ ಕನ್ನಡ ಭಾವನೆಯನ್ನು ಬಿತ್ತುವ ದೇಸಿ ಸ್ವಭಾವದವನು. ಅವನು ಹೇಳುವ ಕಥನ ಕಲೆಯು ಮೌಖಿಕ ಪರಂಪರೆಯ ಗುಣದಿಂದ ಬಂದುದು. ಆತನ ಮನಸ್ಸು ದೇಸಿ ನೆಲದಲ್ಲಿ ಬೇರು ಬಿಟ್ಟುಕೊಂಡಿರುವಂತದ್ದು. ಇಂತಹ ಸೌಮ್ಯಕವಿ ಉಪಮಾನಗಳ ಶೂರ. ಒಂದು ಘಟನೆಯ ಒಳಿತು ಕೆಡುಕನ್ನು ಹೇಳುವಾಗ ನಯಸೇನ ಎಷ್ಟೊಂದು ಮೈಮರೆತು ಉಪಮೆ ಸಾಮತಿಗಳಿಗೆ ಮಾರುಹೋಗಬಲ್ಲನೆಂದರೆ ಆತ ತಾನು ಹೇಳುತ್ತಿರುವ ಕತೆಯನ್ನೆ ಮರೆತು ಬೇರಾವುದೊ ಕಾವ್ಯ ಲಕ್ಷಣವನ್ನು ಸರಳ ನುಡಿಗಳಿಂದ ದೈನಂದಿನ ಬದುಕಿನ ಹೋಲಿಕೆಗಳಿಂದ ಹೇಳುತ್ತಿದ್ದಾನೆ ಎನಿಸಿಬಿಡುತ್ತದೆ. ಅವನ ಇಂತಹ ಗುಣ ಯಾಕೆ ಈ ಕತೆಗಳಲ್ಲಿ ದಟ್ಟವಾಗಿ ವ್ಯಾಪಿಸಿಕೊಳ್ಳುತ್ತವೆ ಎಂದರೆ ಧರ್ಮವನ್ನು ಸಮಾಜೀಕರಣಗೊಳಿಸುವ ಕಾರಣದಿಂದಾಗಿ. ನೀತಿಯನ್ನು ಹೇಳಬೇಕಾದಾಗಲೆಲ್ಲ ಒಳಿತುಕೆಡುಕಿನ ಉಪಮಾಲಂಕಾರಗಳನ್ನು ಕವಿಯಾದವನು ತುಸು ಅತಿಯೆ ಎನ್ನುವಂತೆ ನೀಡಬೇಕಾಗಿ ಬಂದುದ್ದು ಪ್ರಾಚೀನ ಸಂವೇದನೆಯ ಒಂದು ಸ್ಥಿತಿ. ಕೇಡನ್ನು ಅದ್ದೂರಿಯಾಗಿ ವರ್ಣಿಸಿ ಅದಕ್ಕೆ ಉಪಮಾನಗಳನ್ನು ಪುಂಕಾನುಪುಂಕವಾಗಿ ನಯಸೇನ ಹೇಳುವುದು ಸಮಾಜದ ಕಿವುಡುತನದ ಕಾರಣದಿಂದಾಗಿ. ಕಿವುಡು ಕಿವಿಗಾದರೆ ಪರಿಹಾರವಿದೆ. ಆದರೆ ಮನಸ್ಸೇ ಕಿವುಡಾಗಿ ಬಿಟ್ಟರೆ ಅಂತಹ ಮನಸ್ಸಿಗೆ ತತ್ವವನ್ನು ಎಷ್ಟು ಬಾರಿ ಹೇಳಿದರೂ ಸಾಲದು ಎಂಬ ಭಾವನೆ ನಯಸೇನನಿಗೆ ಬಂದಿದ್ದರೆ ಆಶ್ಚರ್ಯವಿಲ್ಲ. ಹೀಗಾಗಿಯೆ ಪ್ರತಿಯೊಂದು ಕತೆಯ ಒಳಗೂ ಈ ಕತೆಗಳಲ್ಲಿ ನಿರಂತರವಾದ ಉಪಮೆ ಸಂಕೇತ ಪ್ರತಿಮೆಗಳು ಲೌಕಿಕದ ಪರಮ ನುಡಿಗಳಂತೆ ಚಾಚಿಕೊಂಡು ಅವೇ ಮೇಲುಗೈ ಸಾಧಿಸಿ ಧಾರ್ಮಿಕ ಪರಿಭಾಷೆಯು ತಗ್ಗಿ ಲೌಕಿಕದ ದನಿಯೇ ಸಾಮಾಜಿಕ ಬಿಂಬಗಳನ್ನು ನುಡಿಸುತ್ತವೆ. ಸಾಮಾಜಿಕವಾದ ಅಧ್ಯಾತ್ಮವು ಇಂತಲ್ಲಿ ತಂತಾನೆ ನೆನಪಾಗಿ ನಯಸೇನನು ತನ್ನ ಧರ್ಮದ ಕವಚದ ಒಳಗೆ ಸಾಮಾಜಿಕ ಧರ್ಮವನ್ನೆ ಅಪ್ಪಿಕೊಳ್ಳುತ್ತಾನೆ.

ಇದು ಸೃಜನಶೀಲ ಪ್ರವೃತ್ತಿಯ ಪರಿಣಾಮ. ಆತ್ಯಂತಿಕವಾದ ಸೃಜನ ಪ್ರತಿಭೆಯು ಲೌಕಿಕದ ಗರ್ಭದಿಂದಲೇ ಲೋಕಾಂತಗಳನ್ನು ಎಟುಕಿಸಿಕೊಳ್ಳುತ್ತದೆ. ನಯಸೇನನ ಪ್ರತಿಭೆಯು ಇಂತದೇ. ಸೃಜನಶೀಲವಾದ ಕ್ಷಣಗಳು ಕಾಲಾತೀತವಾದ ಸತ್ಯದರ್ಶನಕ್ಕಾಗಿ ಹಾತೊರೆಯುತ್ತಿರುತ್ತವೆ. ಅಂತಲ್ಲಿ ವ್ಯಕ್ತಿ ಮತ್ತು ಸಮಾಜದ ಕೃತಕ ಆವರಣಗಳು ಭಗ್ನಗೊಳ್ಳು ತ್ತಿರುತ್ತವೆ. ನಯಸೇನ ಎಷ್ಟೆಲ್ಲ ರೀತಿಯಲ್ಲಿ ತನ್ನ ಜೈನ ತತ್ವಕ್ಕೆ ವರ್ತಮಾನದಲ್ಲಿ ಬದ್ಧ ನಾದರೂ ಅವನ ಸೃಜನಶೀಲ ಕ್ಷಣವು ಕಾಲಾತೀತ ದರ್ಶನದ ಕಡೆಗೆ ಚಲಿಸುತ್ತಿರುತ್ತದೆ. ಬದ್ಧತೆಯನ್ನು ಮೀರುವ ಎಲ್ಲ ಲೇಖಕರು ಅಖಂಡವಾದ ಸುಖೀ ಸಮಾಜದ ಕಡೆಗೆಯೇ ಮುಖ ಮಾಡಿರುತ್ತಾರೆ. ಜೈನಬದ್ಧತೆಯನ್ನು ಪೂರ್ಣವಾಗಿ ಬಿಡಿಸಿಕೊಳ್ಳಲು ನಯಸೇನನಿಗೆ ಸಾಧ್ಯವಿಲ್ಲದಿದ್ದರೂ ಅವನ ಕತೆಗಳಿಗೆ  ಆ ಸಾಧ್ಯತೆಯಿದೆ. ನಯಸೇನ ಯಾವ ಧರ್ಮದವನು ಎಂಬುದನ್ನು ಮರೆತು ಈ ಕತೆಗಳನ್ನು ಅನುಸಂಧಾನ ಮಾಡಿದರೆ ಇವೆಲ್ಲವೂ ನೈತಿಕ ಸಮಾಜದ ಸುಧಾರಣೆಗಾಗಿಯೇ ಹುಟ್ಟಿಕೊಂಡಂತೆ ಕಾಣುತ್ತವೆ. ಧಾರ್ಮಿಕ ಅರಿವೆಗಳನ್ನು ಕಳಚಿ ಈ ಕತೆಗಳ ಒಳಮೈ ನೋಡಿದರೆ ಇವು ಜನಪದ ಕತೆಗಳಂತೆ ಕಾಣುತ್ತ ಅಂತಿಮವಾಗಿ ಮಧ್ಯಕಾಲೀನ ಸಮಾಜದ ಅನೀತಿಯ ದೇಹವನ್ನು ಬೆತ್ತಲೆ ಮಾಡುತ್ತಿವೆ ಎನಿಸುತ್ತದೆ. ಎಷ್ಟೋ ಬಾರಿ ಸಾಹಿತ್ಯಕೃತಿಯ ಉದ್ದೇಶವು  ಕೃತಿಕಾರನ ಅಗತ್ಯಕ್ಕೆ ತಕ್ಕಂತೆ ನಿರೂಪಿತವಾಗಿದ್ದರೂ ಅದನ್ನು ಬೇರೊಂದು ಕಾಲದಲ್ಲಿ ಓದುಗ ತನ್ನ ಆಶಯಗಳಿಂದ ಅನುಸಂಧಾನ ಮಾಡುವಾಗ ಆ ಕೃತಿಯ ಮೂಲಲೇಖಕನ ಗುರಿಗೆ ಹೊರತಾಗಿ ಅದರ ಜೊತೆ ಸಾಮಾಜಿಕವಾದ ಸಂಬಂಧ ಗಳನ್ನು ಮಾಡಿಕೊಳ್ಳಬಲ್ಲ. ಧರ್ಮಾಮೃತಕ್ಕೆ ಧಾರ್ಮಿಕ ಕಾರಣಗಳಿದ್ದರೂ ಅವು ಬೇರೊಂದು ಕಾಲಘಟ್ಟದಲ್ಲಿ ಬೇರೊಂದು ಅರ್ಥಗಳನ್ನು ನಿರೂಪಿಸಬಲ್ಲವು. ಇದು ಸಂವೇದನೆ ವಿಕಾಸ ವಾಗುವ ರೀತಿ. ಹಾಗೆಯೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ಭಾಷೆಗಳ ಅಂತರಾರ್ಥಗಳ ವಿಸ್ತರಿಸಿ ಕೊಳ್ಳುವ ಬಗೆ. ಈ ನೆಲೆಗಳಿಂದ ನೋಡಿದರೆ ಧರ್ಮಾಮೃತದ ಕತೆಗಳು ಸಾಮಾಜಿಕ ಚರಿತ್ರೆಯ ಸೃಜನಶೀಲ ಅಂತಃಸಾಕ್ಷಿಯಾಗಿ ಮಾರ್ಪಡುತ್ತವೆ.