ಹಿಂದು, ಬೌದ್ಧ, ಜೈನ, ಯಹೂದಿ, ಕ್ರೈಸ್ತ, ಇಸ್ಲಾಂ ಹೀಗೆ ಪ್ರಪಂಚದ ಎಲ್ಲ ಧರ್ಮಗಳ ದೇವರುಗಳೂ ಜನಸಮುದಾಯದ ಪಾಲಿಗೆ ಆದರ್ಶಪ್ರಾಯರಾಗಿ, ಆಳುವ ಜನರ ಪರವಾದ ತ್ಯಾಗ, ಹಿಂಸೆ, ಬಲಿದಾನ, ಮತ್ತು ನಿಸ್ವಾರ್ಥತೆಗಳ ಬದುಕನ್ನು ಸಾಗಿಸುವಂತೆ ಪ್ರೇರೇಪಿಸುತ್ತವೆ. ಅತ್ಯಂತ ಚಿಕ್ಕವಸ್ಸಿನಲ್ಲಿಯೇ, ತಂದೆ – ತಾಯಿಗಳು, ಗುರುಹಿರಿಯರು ಮತ್ತು ಪರಿಸರದಿಂದ ಮಗುವಿನ ಮೆದುಳಿನಲ್ಲಿ ಅಳಿಸಲಾಗದಷ್ಟು ಗಾಢವಾಗಿ ದಾಖಲಾಗುವ ಈ ಪ್ರೇರಣೆಗಳು ವ್ಯಕ್ತಿ ಸಾಯುವವರೆಗೂ ಜೀವಂತವಾಗಿರುತ್ತವೆ. ‘ಧರ್ಮಾಮೃತ’ದ ಮೂರನೆಯ ಆಶ್ವಾಸ ದಲ್ಲಿ ಜೈನ ಧರ್ಮದ ‘ನಿಷ್ಕಾಂಕ್ಷೆ’ ತತ್ವದ ದೃಷ್ಟಾಂತವಾಗಿ ನಯಸೇನ ಹೇಳುವ ಕತೆ ಇದಕ್ಕೆ ಒಳ್ಳೆಯ ಉದಾಹರಣೆ. ಸಮೃದ್ದಿ ಸಂಪತ್ತುಗಳಿಂದ ತುಂಬಿದ ಅಂಗ ದೇಶದ ಸಂಪದ್ಭರಿತ ನಗರ ಚಂಪಾಪುರದಲ್ಲಿ ವಾಸಿಸುವ, ‘ಜೈನಧರ್ಮವೆಂಬ ಸಮುದ್ರಕ್ಕೆ ಚಂದ್ರನಂಥವನೂ ವೈಶ್ಯಕುಲಕ್ಕೆ ಅಲಂಕಾರನೂ ಆದ ಪ್ರಿಯದತ್ತನೆಂಬ ಸೆಟ್ಟಿ’ಯ ಮಗಳಾದ ಅನಂತಮತಿ ಐದು ವರ್ಷದವಳಾಗಿದ್ದಾಗ ಹಾಸ್ಯಕ್ಕೆಂದು ವರದತ್ತ ಭಟ್ಟಾರಕರು ಆಕೆಗೆ ಬ್ರಹ್ಮಚರ್ಯ ವ್ರತವನ್ನು ಕೊಡುತ್ತಾರೆ. ಅದನ್ನು ಆಚರಿಸುವ ಅನಂತಮತಿ, ಅವಳನ್ನು ಕಂಡು ಕಾಮಾವೇಶಕ್ಕೆ ಒಳಗಾಗುವ ಖೇಚರರಾಜ, ಬೇಡರ ಅರಸ, ಪುಪ್ಪಕನೆಂಬ ವೈಶ್ಯನ ಹೆಂಡತಿಯಿಂದ ಅನಂತಮತಿಯನ್ನು ಕೊಂಡುಕೊಳ್ಳುವ ಕುಂಟಿಣಿ, ಸಿಂಹರಥನೆಂಬ ರಾಜ, ಇವರೆಲ್ಲರಿಂದಲೂ ಪಡಬಾರದ ಯಾತನೆಗಳನ್ನು ಪಡೆದು, ಜಿನನಿಷ್ಠೆಯಿಂದ ಅವೆಲ್ಲವನ್ನೂ ಸಹಿಸಿಕೊಂಡು, ಕೊನೆಗೆ ಪುರದೇವತೆಗಳ ಸಹಾಯದಿಂದ, ರಾಜಶ್ರೇಷ್ಠಿಯಾದ ಜೀನೇಂದ್ರದತ್ತನ ಮೂಲಕ ಮತ್ತೆ ತಂದೆ ತಾಯಿಗಳನ್ನು ಸೇರಿಕೊಳ್ಳುತ್ತಾಳೆ. ಆದರೂ ತಂದೆ ಮದುವೆ ಮಾಡಬೇಕೆಂದಾಗ ತಿರಸ್ಕರಿಸಿ ಜಿನದೀಕ್ಷೆಯನ್ನು ಪಡೆದು ತಪಸ್ಸನ್ನಾಚರಿಸಿ ಕಲ್ಪಾಂತರದಲ್ಲಿ ಸುಕಾಂತನೆಂಬ ಮಹತ್ತರದೇವನಾಗಿ ಹುಟ್ಟುತ್ತಾಳೆ. ಸ್ತ್ರೀ ಕಷ್ಟಕಾರ್ಪಣ್ಯಗಳು ಆಕೆ ಗಂಡಾಗಿ ಜನ್ಮಪಡೆಯು ವುದರ ಮೂಲಕ ಅಥವಾ ತೀರ್ಥಂಕರನಾಗಿ ಹುಟ್ಟುವ ಮೂಲಕ ಸಾರ್ಥಕಗೊಳ್ಳುತ್ತದೆ.

ಹರೆಯದಲ್ಲಿ ಧಾರ್ಮಿಕ ಪ್ರೇರಣೆಗಳನ್ನು ಪ್ರಶ್ನಿಸುವವರು, ಧಿಕ್ಕರಿಸುವವರು ಮತ್ತು ಲಘುವಾಗಿ ಕಾಣುವವರ ಸಂಖ್ಯೆ ಕಿರಿದೇನಲ್ಲ. ಆದರೆ ಅವರಲ್ಲಿ ಬಹಳಷ್ಟು ಮಂದಿ, ಬದುಕಿನ ಕಷ್ಟಕಾರ್ಪಣ್ಯಗಳಿಂದ ಜರ್ಜರಿತರಾದಾಗ, ಅಥವಾ ಮುಪ್ಪು ಸಮೀಪಿಸಿ ಸಾವಿನ ಭಯ ದಟ್ಟವಾಗತೊಡಗಿದಂತೆ ಮತ್ತೆ ಧಾರ್ಮಿಕರಾಗುತ್ತಾರೆ. ಆಗ ದೇವರು ಮತ್ತು ಧರ್ಮ ಗ್ರಂಥಗಳ ಪ್ರಸ್ತುತತೆ ಎಂದಿಗಿಂತ ಹೆಚ್ಚಾಗಿ ಕಾಣತೊಡಗುತ್ತದೆ. ಹರೆಯದಲ್ಲಿ ವೈಚಾರಿಕ ರಾಗಿದ್ದು, ವಯಸ್ಸಾದಂತೆ ಗಾಂಧೀಜಿಯ ಜಪಮಾಡುವವರಲ್ಲಿಯೂ ಈ ಬಗೆಯ ನಡವಳಿಕೆ ಕಾಣಸಿಗುತ್ತದೆ. ಅಂಥವರು ತಮ್ಮ ನಡವಳಿಕೆಯ ಸಮರ್ಥನೆಗಾಗಿ, ನಂಬಿಕೆಯ ಬಲವರ್ಧನೆ ಗಾಗಿ ತಾವು ನಂಬುವ ಧರ್ಮದ ಪ್ರಚಾರದಲ್ಲಿ ನಿರತರಾಗುತ್ತಾರೆ.

ವ್ಯಕ್ತಿಗೆ ಹುಟ್ಟು, ಬೆಳವಣಿಗೆ, ಮುಪ್ಪು, ಅವಸಾನಗಳಿರುವಂತೆ, ತತ್ತ್ವ, ಧರ್ಮ, ವ್ಯವಸ್ಥೆಗಳಿಗೂ ಹುಟ್ಟು, ವಿಕಾಸ, ಅವನತಿಯ ಸ್ಥಿತಿಗಳಿವೆ. ಒಂದು ನಿರ್ದಿಷ್ಟ ಧರ್ಮ ಅಥವಾ ರಾಜಕೀಯ ವ್ಯವಸ್ಥೆಯ ಚಾರಿತ್ರಿಕ ಒತ್ತಡಗಳಿಂದಾಗಿ ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಹಾಯುತ್ತಾ, ಅವನತಿಯ ಹಂತ ತಲುಪುತ್ತಿದ್ದಂತೆ ಅವುಗಳಿಂದ ಲಾಭ ಪಡೆಯುವ ಜನ ತಮ್ಮ ತತ್ತ್ವ, ಧರ್ಮ, ವ್ಯವಸ್ಥೆಗಳನ್ನು ಜೀವಂತವಾಗಿಡಲು ನಾನಾ ರೀತಿ ಯಲ್ಲಿ ಪ್ರಯತ್ನಿಸುತ್ತಾರೆ.

ಹತ್ತೊಂಬತ್ತನೆಯ ಶತಮಾನದಲ್ಲಿ ಪಶ್ಚಿಮದ ಸಮಾಜಗಳಲ್ಲಿ, ಸೈನಿಕ ಸಂಸ್ಕೃತಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಕೃಷಿ ಸಂಸ್ಕೃತಿಯನ್ನು ತುಳಿದು ಆಳುವ ಅಧಿಕಾರವನ್ನು ಕೈಗೆ ತೆಗೆದುಕೊಂಡ ವ್ಯಾಪಾರಿ ಸಂಸ್ಕೃತಿಯು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮುಂತಾದ ಮೌಲ್ಯಗಳ ಘೋಷಣೆಗಳೊಂದಿಗೆ ಉದಾರವಾದಿ ಪ್ರಜಾತಂತ್ರದ ಕಲ್ಪನೆಯನ್ನು ಜನಸಮು ದಾಯದಲ್ಲಿ ಬಿತ್ತಿ ಜನಪ್ರಿಯಗೊಳಿಸಿತು. ನಯವಂಚನೆಯ ಗುಣವನ್ನು ಒಡಲಲ್ಲೆ ಇಟ್ಟು ಕೊಂಡ ವ್ಯಾಪಾರಿ ಜನ ಮೂಲೆ ಗುಂಪಾಗಿಸಿದರು. ಪಶ್ಚಿಮದಲ್ಲಿ ಬೂರ್ಜ್ವವೆಂದು ಕರೆಯುವ ವರ್ಗ ಹುಟ್ಟಿದ್ದು ಹೀಗೆ. ಈ ವರ್ಗ ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ ಭ್ರಾತೃತ್ವ ಮತ್ತು ಜನತಾಂತ್ರಿಕತೆಗಳೆಲ್ಲಾ ತೋರಿಕೆಯವು ಅಥವಾ ಭ್ರಮಾತ್ಮಕವಾದವುಗಳು.

ನಗರ ಕೇಂದ್ರಿತ ಔದ್ಯೋಗಿಕ ಕ್ರಾಂತಿಯಿಂದಾಗಿ ಪಶ್ಚಿಮದ ಸಮಾಜಗಳಲ್ಲಿ ಹೊಸಬಗೆಯ ಶ್ರಮಿಕವರ್ಗ ಹುಟ್ಟಿಕೊಂಡಿತು. ವ್ಯಾಪಾರಿ ಸಂಸ್ಕೃತಿಯು ಸೈನಿಕ ಸಂಸ್ಕೃತಿಯ ಬಲದೊಂದಿಗೆ ತನ್ನ ಪ್ರಾಬಲ್ಯವನ್ನು ಒಂದೇ ಸಮನೆ ಹೆಚ್ಚಿಸಿಕೊಳ್ಳುತ್ತಾ, ಪ್ರಪಂಚದ ಕೃಷಿ ಸಂಸ್ಕೃತಿಯ ಸಮಾಜಗಳ ಮೇಲೆ ಹಿಡಿತ ಸಾಧಿಸಿತು. ವ್ಯಾಪಾರ ಉದ್ಯಮದೊಂದಿಗೆ ಸೇರಿ ವಸಾಹತುಗಳು, ಶ್ರಮಿಕ ವರ್ಗದ ಸಾಂದ್ರತೆ, ಮತ್ತು ಭೂಮಿಯ ಒಡೆತನಕ್ಕಾಗಿ ಯುದ್ಧಗಳು ನಡೆದವು. ಯುದ್ಧ, ಬಂಡವಾಳಶಾಹಿಯ ವಿಸ್ತರಣಾ ರಾಜಕೀಯ, ದೇಶಿಯವಾಗಿದ್ದ ಬಂಡವಾಳ ಶಾಹಿಯು ವಸಾಹತು ರಾಜಕೀಯದಿಂದಾಗಿ ಸಾಮ್ರಾಜ್ಯಶಾಹಿಯಾಗಿ ಇಡೀ ವಿಶ್ವವನ್ನು ನಿಯಂತ್ರಿಸಲು ತೊಡಗಿತು. ಇದರ ಪರಿಣಾಮವಾಗಿ ಗ್ರಾಮಕೇಂದ್ರಿತ ದೇಶೀಯ ಕೃಷಿಸಂಸ್ಕೃತಿ – ಜೀವನ ಶೈಲಿಗಳು ನಾಶಗೊಳ್ಳುತ್ತಾ ನಗರ ಕೇಂದ್ರಿತ ವ್ಯಾಪಾರೋದ್ಯಮ ಸಂಸ್ಕೃತಿ – ಜೀವನ ಶೈಲಿಗಳು ಜನಸಮುದಾಯವನ್ನು ಆವರಿಸಿದವು.

ಇಪ್ಪತ್ತನೆಯ ಶತಮಾನದ ಕೊನೆಯ ಹೊತ್ತಿಗೆ ವ್ಯಾಪಾರೋದ್ಯಮಕ್ಕೂ ಸೈನಿಕ ಅಧಿಕಾರಕ್ಕೂ ಇದ್ದ ವ್ಯತ್ಯಾಸ ಅಳಿಸಿಹೋಯಿತು. ವಾಣಿಜ್ಯೋದ್ಯಮದ ಕೈಗೊಂಬೆಯಾಗಿ ಪ್ರಭುತ್ವ, ಅಥವಾ ವಾಣಿಜ್ಯೋದ್ಯಮವೇ ಪ್ರಭುತ್ವ ಎಂಬಂಥ ಕಾರ್ಪೊರೇಟ್ ರಾಜಕೀಯ ಈ ಶತಮಾನದ ಸರ್ವ ನಿಯಂತ್ರಕ ಶಕ್ತಿಯಾಗಿದೆ. ಇದಕ್ಕೆ ಪರ್ಯಾಯವಾಗಿ ಸಮಾಜವಾದಿ ಮೌಲ್ಯಗಳ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಸಮಾಜಗಳು ವಾಣಿಜ್ಯೋದ್ಯಮದ ಸಾಮ್ರಾಜ್ಯಶಾಹಿ ರಾಜಕೀಯದ ಭಾರಕ್ಕೆ ಕುಸಿದಿವೆ.

ಈಗ ಬಹುರಾಷ್ಟ್ರೀಯ ವಾಣಿಜ್ಯೋದ್ಯಮಿಗಳು ದೇಶೀಯ ಗಡಿಗಳನ್ನು ದಾಟಿ, ಸಂವಿಧಾನ ಗಳನ್ನು ಕಡೆಗಣಿಸಿ, ರಾಷ್ಟ್ರೀಯ ಸರ್ಕಾರಗಳ ಕೈಯಲ್ಲೇ ತಮಗೆ ಬೇಕಾದ್ದನ್ನು ಮಾಡಿಸಬಲ್ಲ ಶಕ್ತಿ ಪಡೆದಿದ್ದಾರೆ. ಜಾಗತಿಕವಾಗಿ ಹಿಂದೆಂದೂ ಇಷ್ಟೊಂದು ಶಕ್ತಿಯನ್ನು ವ್ಯಾಪಾರಿ ಸಂಸ್ಕೃತಿ ಪಡೆದಿರಲಿಲ್ಲ. ಪಾರಂಪರಿಕವಾಗಿ ಭಾರತದಲ್ಲಿ ಯಾವುದನ್ನು ಮಾರಾಟ ಮಾಡಬಾರದೆಂದು ಜನ ನಂಬಿದ್ದರೋ ಅದರ ಮಾರಾಟದಿಂದ ಅತ್ಯಧಿಕ ಲಾಭವನ್ನು ಸಾಮ್ರಾಜ್ಯಶಾಹಿ ವಾಣಿಜ್ಯೋದ್ಯಮಿಗಳು ಈಗ ಗಳಿಸುತ್ತಿದ್ದಾರೆ. ಅಂದರೆ ನೀರು, ಆಹಾರ, ವಿದ್ಯೆ ಮತ್ತು ಔಷಧಗಳು ಕೋಟ್ಯನುಕೋಟಿ ಮೌಲ್ಯದ ಕೇಂದ್ರೀಕೃತ ವಹಿವಾಟಿನ ಸರಕುಗಳಾಗಿವೆ. ಮನುಷ್ಯ ರಿಗಾಗಿ ಮಾಡಿಕೊಂಡ ದೇಶೀಯ ಕಾನೂನು – ಕಟ್ಟಳೆಗಳು ಬಹುರಾಷ್ಟ್ರೀಯ ವಾಣಿಜ್ಯೋ ದ್ಯಮದ ಅಮಾನುಷ ರೂಪಕ್ಕೆ ಅನ್ವಯವಾಗುವುದಿಲ್ಲ ವಾದ್ದರಿಂದ ಅವು ಇದ್ದೂ – ಇಲ್ಲದಂತಾಗಿವೆ. ಸ್ವಾತಂತ್ರ್ಯ ಮಾನವೀಯತೆ, ಪ್ರಜಾತಂತ್ರ, ಸೇವೆ, ಶಾಂತಿ, ಮುಂತಾದ ಪದಗಳು ತದ್ವಿರುದ್ಧ ಅರ್ಥ ಕೊಡುವಂಥ ವಂಚಕ ಗುಣವನ್ನು ಭಾಷೆ ಪಡೆದುಕೊಂಡಿದೆ. ಬಂಡವಾಳಶಾಹಿಯು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಎಷ್ಟೋ ಮಾನವೀಯ ಮೌಲ್ಯ ಗಳನ್ನು ತನ್ನೊಳಕ್ಕೆ ಸೇರಿಸಿಕೊಂಡು ಸುಖೀ ರಾಜ್ಯದ ಕಲ್ಪನೆಯನ್ನು, ಜನಸಮುದಾಯಕ್ಕೆ ಕೊಟ್ಟಂತೆ, ಸಾಮ್ರಾಜ್ಯಶಾಹಿಯು ತನ್ನ ರಾಕ್ಷಸಿ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಮಾಜವಾದಿ ದರ್ಶನದ ಘೋಷಣೆಗಳ ಮುಸುಕುಹಾಕಿ, ಅದರ ಪರಿಭಾಷೆ – ಲಾಂಛನಗಳನ್ನು ವಿಕೃತಗೊಳಿಸಿ ಬಳಸುವುದರ ಮೂಲಕ ಜನರಲ್ಲಿ ಗೊಂದಲವನ್ನು ಬಿತ್ತುತ್ತಿದೆ. ಜನಸಮು ದಾಯವನ್ನು ಅಂಕೆಯಲ್ಲಿಡಲು, ಅತೃಪ್ತಿ ಭುಗಿಲೇಳದಂತೆ ಮಾಡಲು ರಾಜ – ಮಹಾರಾಜರು ದೇವರು ಧರ್ಮಗಳನ್ನು, ಬಂಡವಾಳಶಾಹಿಗಳು ಸಂತರು ಸಮಾಜ ಸೇವಕರನ್ನು ಕೃಪಾಶ್ರಯ ಕೊಟ್ಟು ಬಳಸಿಕೊಂಡಂತೆ, ಸಾಮ್ರಾಜ್ಯಶಾಹಿಗಳಾದ ಬಹುರಾಷ್ಟ್ರೀಯ ವ್ಯಾಪಾರೋದ್ಯಮಿಗಳು, ಟೀವಿ, ಸಿನೆಮಾ, ಕ್ರೀಡೆ, ಲಲಿತಕಲೆಗಳು ಮತ್ತು ಬೌದ್ದಿಕ ಅನ್ವೇಷಕರನ್ನು, ಸಮಾಜಸೇವಯನ್ನೆ ಜೀವನೋದ್ಯೋಗವನ್ನಾಗಿಸಿಕೊಂಡಿರುವ ಸ್ವಯಂ ಸೇವಾಸಂಸ್ಥೆಗಳನ್ನು, ಅಗಾಧ ಹಣದ ಕೃಪಾಶ್ರಯದ ಮೂಲಕ ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ನಿಷ್ಠೆ ಮತ್ತು ನೈತಿಕತೆಯ ಪ್ರಶ್ನೆಗಳನ್ನು ನಿರಪೇಕ್ಷಿತ ಸತ್ಯಾನ್ವೇಷಣೆಯ ಹೆಸರಿನಲ್ಲಿ ಕೆಳಕ್ಕೆ ಹಾಕುವ ವಿಜ್ಞಾನಿ ತಂತ್ರಜ್ಞಾನಿಗಳನ್ನು ಕೊಂಡುಕೊಳ್ಳುವುದು ಸಾಮ್ರಾಜ್ಯಶಾಹಿಗೆ ನೀರು ಕುಡಿದಷ್ಟು ಸುಲಭ. ಸಂಶೋಧನೆಯ ಹೆಸರಿನಲ್ಲಿ ತಮಗೆ ಬೇಡವಾದ್ದನ್ನು ಪಕ್ಕಕ್ಕಿಟ್ಟು, ಬೇಕಿದ್ದನ್ನು ಮಾತ್ರ ಉತ್ತೇಜಿಸಲು, ವಿರೋಧ ಸತ್ಯಗಳನ್ನು ಹೊರಗೆಡಹದಂತೆ ಸಂಶೋಧಕರ ಬಾಯಿ ಮುಚ್ಚಿಸಲು, ಲಾಭದಾಯಕವಾದ ಅರ್ಧಸತ್ಯ – ಸುಳ್ಳುಗಳನ್ನು ಮೋಸದ ಭಾಷೆಯಲ್ಲಿ ಪ್ರಚಾರ ಮಾಡಲು ಬಹುರಾಷ್ಟ್ರೀಯ ವಾಣಿಜ್ಯೋದ್ಯಮಿಗಳು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಆದ್ದರಿಂದಲೆ ಜಾಹಿರಾತು ಕಲೆಗೆ ಈಗ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ. ಇವರು ಕೊಡುವ ಸಾಲ – ಸಹಾಯಧನ – ಬಡ್ಡಿಗಳು ಜನಸಮುದಾಯ ತಮ್ಮ ಗಳಿಕೆ – ಸಂಪಾದನೆಗಳನ್ನು ಯಾವುದೇ ಮೂಲೆಯಲ್ಲಿ ಬಚ್ಚಿಟ್ಟಿದ್ದರೂ ಹೊರಗೆಳೆದು ನುಂಗಬಲ್ಲ ಹಣವಂತರ ಅಸ್ತ್ರಗಳಾಗಿವೆ. ದೇಶ ದೇಶಗಳೆ ಸಾಲದ ಹೊಳೆಯಲ್ಲಿ ಮುಳುಗುತ್ತಿವೆ. ಜನರ ಬದುಕಿಗೆ ಘಾತಕವಾಗುವ ನಿರ್ಧಾರಗಳನ್ನು ರಹಸ್ಯಕೂಟಗಳಲ್ಲಿ ತೆಗೆದುಕೊಂಡು, ಅವುಗಳ ಬಗೆಗಿನ ಚರ್ಚೆ – ವಿರೋಧಗಳನ್ನು ಮಾತ್ರ ಉತ್ತೇಜಿಸಿ ಪಾರದರ್ಶಕವಾಗಿ ಪ್ರದರ್ಶಿಸುವುದು ಸಾಮ್ರಾಜ್ಯಶಾಹಿಯ ವಿಶೇಷತೆ. ವ್ಯಕ್ತಿಪಾರಮ್ಯ, ಸ್ಪರ್ಧೆ, ಹಣಕೇಂದ್ರಿತ ಕಾಮ – ಕ್ರೌರ್ಯ – ಭೋಗವಸ್ತುಗಳು ಪರಮ ಮೌಲ್ಯಗಳಾಗಿ, ಜೀವನದ ಎಲ್ಲ ಅಗತ್ಯಗಳ ಕೇಂದ್ರೀಕೃತ ಉತ್ಪಾದನೆ ಮತ್ತು ಹಂಚಿಕೆ ಇಂದಿನ ಜೀವನ ಶೈಲಿಯಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿದ ಸಂಘಟಿತ ಅಪರಾಧ, ಭಯೋತ್ಪಾದನೆ, ಮತೀಯವಾದ, ಕೋಮುವಾದಗಳು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಜನಸಮುದಾಯವನ್ನು ಒಡೆಯುತ್ತಿವೆ. ಈ ವ್ಯವಸ್ಥಿತ ಬದಲಾವಣೆಗಳನ್ನೆ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಎಂದು ಕರೆಯ ಲಾಗುತ್ತಿದೆ.

ಇಂಥ ಸಂದರ್ಭದಲ್ಲಿ, ಹತ್ತಾರು ಶತಮಾನಗಳ ಹಿಂದೆ ಸುಸ್ಪಷ್ಟ ಮುಖವುಳ್ಳ ಉಳಿಗ ಮಾನ್ಯ ವ್ಯವಸ್ಥೆಯಡಿಯಲ್ಲಿ ರಚಿತವಾದ ಸಾಹಿತ್ಯ ಕೃತಿಗಳನ್ನು ಮುಖವಿಲ್ಲದ ವರ್ತಮಾನ ದೊಂದಿಗೆ ಮುಖಾಮುಖಿಯಾಗಿಸಿ ಅರ್ಥೈಸುವ ಉದ್ದೇಶಗಳ ಹಿಂದಿರುವ ಒತ್ತಡಗಳಾವುವು? ಹನ್ನೊಂದನೆಯ ಶತಮಾನದಲ್ಲಿ ಜೈನಧರ್ಮ ಪ್ರಚಾರಕ್ಕೆಂದು ರಚಿತವಾದ ಕಥಾಕೋಶದಲ್ಲಿ ಸಿಗುವ ಜೀವನ ಮೌಲ್ಯ – ತಾತ್ವಿಕತೆಗಳಿಗೂ ವರ್ತಮಾನದ ಬದುಕಿನ ತಾತ್ವಿಕತೆಗೂ ಏನಾದರೂ ಸಂಬಂಧವಿದೆಯೆ? ಇದ್ದರೆ ಯಾವ ಬಗೆಯದು? ನಮ್ಮನ್ನು ಇಂದು ಆಳುತ್ತಿರುವ ಶಕ್ತಿಗಳ ತಾತ್ವಿಕ ಉದ್ದೇಶಗಳನ್ನು, ರಾಜಕೀಯದ ಸ್ವರೂಪವನ್ನು ಹಳೆಯ ಕೃತಿಗಳ ಸಾಹಿತ್ಯಕ ಚರ್ಚೆಗಳ ಮೂಲಕ ಅರ್ಥಮಾಡಿಕೊಳ್ಳುವುದು ಸಾಧ್ಯವೆ? ಸಾಮ್ರಾಜ್ಯಶಾಹಿ ವ್ಯವಸ್ಥೆಯ ಮೌಲ್ಯಗಳನ್ನು ಜನರಲ್ಲಿ ಸ್ಥಿರೀಕರಿಸಲು, ಅದರ ಕ್ರೌರ್ಯಗಳನ್ನು ಮರೆಮಾಚಲು ಮನರಂಜನೆ, ಕ್ರೀಡೆ – ಉತ್ಸವಗಳನ್ನು, ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿರುವಂತೆ ಬೌದ್ದಿಕ ಅನ್ವೇಷಣೆ, ಸಾಹಿತ್ಯಿಕ ಚರ್ಚೆಗಳನ್ನೂ ಮರೆಮಾಚುವ ಸಾಧನಗಳನ್ನಾಗಿ  ಬಳಸಲಾಗುತ್ತಿದೆಯೆ? ಇಂಥ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವುದೂ ಧರ್ಮಾಮೃತದ ಅಧ್ಯಯನದ ಭಾಗವೆ ಆಗಿದೆ.

ಈ ಮೊದಲೇ ಸೂಚಿಸಿದಂತೆ ಜೈನಧರ್ಮ ಆತ್ಮಹಿಂಸೆಯನ್ನು ಮುಕ್ತಿಯ ಸಾಧನವನ್ನಾಗಿ ಒಪ್ಪಿಕೊಂಡ ಧರ್ಮ. ಸಾಮಾಜಿಕವಾಗಿ ಶ್ರೇಣೀಕೃತ ಅಸ್ತಿತ್ವ – ಸಂಬಂಧಗಳನ್ನು ಅದು ಸರಿಯೆಂದು ಹೇಳುತ್ತದೆ. ಕ್ರಿಮಿ ಕೀಟಗಳಿಂದ ಹಿಡಿದು ಆಧ್ಯಾತ್ಮಿಕ ಚರಮೋನ್ನತಿಗೇರಿದ ತೀರ್ಥಂಕರರವರೆಗಿನ ಭವಾವಳಿಯ ಏಣಿಯಲ್ಲಿ ಪ್ರತಿಯೊಂದು ಜೀವಿಗೂ ಒಂದು ನಿರ್ದಿಷ್ಟ ಸ್ಥಾನವಿದೆ. ಮನುಷ್ಯ ಪ್ರಪಂಚದಲ್ಲಿ ಪಶು – ಪಕ್ಷಿ, ಅನ್ಯಧರ್ಮೀಯ ಮನುಷ್ಯ, ಸೇವಕ, ಹೆಣ್ಣು – ಗುಂಡು, ಸಾಮಾನ್ಯ ಶ್ರಾವಕ – ಶ್ರೀಮಂತ – ರಾಜ – ದೇವತೆ – ಕೊಟ್ಟಕೊನೆಗೆ ಮುಕ್ತ, ಹೀಗೆ ಜೈನಧರ್ಮಾನುಸಾರವಾದ ಪುಣ್ಯದ ಬಲದಿಂದ ಜನ್ಮಾಂತರಗಳಲ್ಲಿ ಶ್ರೇಣೀಕೃತ ಪದವಿಗಳನ್ನು ಪಡೆಯುತ್ತಾ ಕೊನೆಗೆ ಪರಮಸುಖವಾದ ಮುಕ್ತಿಯನ್ನು ಪಡೆಯಬಹುದೆಂದು ಜೈನಧರ್ಮ ಹೇಳುತ್ತದೆ. ಈ ಶ್ರೇಣೀಕೃತ ವಿಭಾಗ ಕ್ರಮದಲ್ಲಿ ಮತೀಯವಾದ ವರ್ಗಭೇದವಿದೆಯೆ ಹೊರತು ಜಾತಿಭೇದವಿಲ್ಲ. ಹಿಂದೂ ಧರ್ಮದ ಉಚ್ಚಕುಲದ ಬ್ರಾಹ್ಮಣನಾದರೂ ಜೈನ ಧರ್ಮದ ಸಂಸ್ಕಾರಕ್ಕೊಳಪಡದೆ, ಕಲ್ಪಾಂತರಗಳಲ್ಲಿ ದೇವತೆಗಳ ಪದಕ್ಕೇರದೆ ಮುಕ್ತಿ ಪಡೆಯುವಂತಿಲ್ಲ. ಅಂದರೆ ದುಃಖದಿಂದ ಬಿಡುಗಡೆಯಿಲ್ಲ. ರಾಜನ ಮಗ ಕಳ್ಳನಾಗಿದ್ದರೂ, ಶೆಟ್ಟಿಯು ಎಷ್ಟೇ ಸಂಪತ್ತನ್ನು ಸಂಗ್ರಹಿಸಿದ್ದರೂ ದುರ್ಮಾರ್ಗ ಅಥವಾ ಸಂಪತ್ತು ಮುಕ್ತಿಗೆ ಅಡ್ಡಿಯಾಗುವುದಿಲ್ಲ. ಜೈನತತ್ವಗಳ ಕಠೋರ ಅನುಷ್ಠಾನದಿಂದ ಯಾರು ಬೇಕಾದರೂ ಶ್ರೇಣೀಕೃತ ಪದವಿಗಳ ಮೂಲಕ ಮುಕ್ತಿ ಪಡೆಯುವುದು ಸಾಧ್ಯ. ಸಾಮ್ರಾಜ್ಯಶಾಹಿ ಮೌಲ್ಯ ಪದ್ಧತಿಯ ಸಾಮಾಜಿಕನ್ಯಾಯ – ಸುಖ – ನೆಮ್ಮದಿಯ ಕಲ್ಪನೆಗಳೂ ಇದಕ್ಕಿಂತ ಬೇರೆಯಲ್ಲ. ಜೈನಧರ್ಮದಲ್ಲಿ ಸಂಪತ್ತಿನ ಸಂಗ್ರಹ ಮುಕ್ತಿಗೆ ಸೋಪಾನ. ಸಂಪತ್ತಿನ ಉತ್ಪಾದನೆಗೆ ಶ್ರಮ ಕಾರಣವಾದರೂ ಶ್ರಮಿಕರಿಗೆ ಸಂಪತ್ತಿನ ಲಾಭ ಸಿಗಬೇಕೆಂದೇನೂ ಇಲ್ಲ. ಐಶ್ವರ್ಯ ಪುಣ್ಯವಿದ್ದವರಿಗೆ ಮಾತ್ರ ಸಿಗುತ್ತದೆ. ಅಂದರೆ ಶ್ರೀಮಂತರು ಪುಣ್ಯವಂತರು. ಬಡವರು ಪಾಪಿಗಳು.

‘ಪುಣ್ಯವಿಲ್ಲದೆ ವ್ಯವಸಾಯದಿಂದ ಐಶ್ವರ್ಯವಾಗುವುದೆನ್ನುವೆಯಾದರೆ ತಲೆ ಬೋಳಾಗು ವಂತೆ ಸೌದೆಯನ್ನು ಹೊತ್ತು ರಾಶಿಮಾಡುವ ಬಡವನಿಗೂ, ದಾರಿಯಲ್ಲಿ ಅಡ್ಡಗಟ್ಟಿ ಬಡಿಯುವ ಬೇಡರಿಗೂ ಐಶ್ವರ್ಯ ಏಕಾಗುವುದಿಲ್ಲ? ನಡೆದರೆ ತಟ್ಟಾಡುವ, ಕುಳಿತಿರುವ, ಪರರನ್ನು ಆಶ್ರಯಿಸುವ, ಕಡುಸೋಮಾರಿಗಳಾದ ರಾಜರಿಗೆ ರಾಜ್ಯಲಕ್ಷ್ಮಿ ಕೈವಶವಾಗಿ ಹೊಮ್ಮುತ್ತಿರುವುದು.’

‘ಉಪಗೂಹನ’ ತತ್ವದ ದೃಷ್ಟಾಂತವಾಗಿ ಆರನೆಯ ಆಶ್ವಾಸದ ಕತೆಯಲ್ಲಿ ಬರುವ, ದುರ್ಮಾರ್ಗಿಯಾದ ಯುವರಾಜನಿಗಾಗಿ, ಅರ್ಧರಾಜ್ಯದ ಆಸೆಯಿಂದ ತಪಸ್ವಿಯ ವೇಷದಲ್ಲಿ ರತ್ನ ಕದಿಯಲು ಬಂದು ಸಿಕ್ಕಿಹಾಕಿಕೊಂಡ ಕಳ್ಳನಿಗೆ ಜೀನೇಂದ್ರ ಭಕ್ತಸೆಟ್ಟಿ ಹೇಳುವ ಮಾತುಗಳು ಇವು.

ಸ್ವತಹ ಜೈನ ಯತಿಯಾಗಿದ್ದಿರಬಹುದಾದ ನಯಸೇನನು, ಜೈನಧರ್ಮದ ತತ್ವಗಳನ್ನು, ರಾಜಾಶ್ರಯವಿಲ್ಲದೆ ಜನಸಾಮಾನ್ಯರಲ್ಲಿ ಪ್ರಚುರಪಡಿಸಲು ರಚಿಸಿದ ‘ಧರ್ಮಾಮೃತ’ದಲ್ಲಿ, ಜೈನಧರ್ಮಾವಲಂಬಿಯಾದ ಶ್ರೀಮಂತ ವರ್ತಕರು ಕೇಂದ್ರಸ್ಥಾನದಲ್ಲಿದ್ದಾರೆ. ರಾಜ, ಕಳ್ಳ, ವೇಶ್ಯೆಯರು ಮುನ್ನೆಲೆಯಲ್ಲಿದ್ದಾರೆ. ಕಥೆಗಳ ನಿರೂಪಣೆಯಲ್ಲಿ ಸಮೃದ್ಧ ಮಾಲೋಪಮೆಗಳ ಮೂಲಕ ಮಹತ್ವದ ಸ್ಥಾನ ಪಡೆಯುವ, ಜನಸಾಮಾನ್ಯರು ಬಡವರೂ, ದುಃಖಿಗಳೂ, ಅಜ್ಞಾನಿಗಳೂ ಆಗಿ ಹಿನ್ನೆಲೆಯಲ್ಲಿದ್ದಾರೆ. ತಾಂತ್ರಿಕವಾಗಿ, ಗೌತಮಗಣಧರರು ಮಗಧರಾಜ ನಾದ ಶ್ರೇಣಿಕನಿಗೆ ಅವನ ಪ್ರಾರ್ಥನೆಯಂತೆ ಜೈನಧರ್ಮದ ಹದಿನಾಲ್ಕು ತತ್ವಗಳನ್ನು, ಹದಿನಾಲ್ಕು ದೃಷ್ಟಾಂತ ಕಥೆಗಳಾಗಿ ಹೇಳಿದಂತೆ ರಚಿತವಾಗಿದ್ದರೂ, ಧರ್ಮಾಮೃತದ ಲಕ್ಷ್ಯ ಸಾಮಾನ್ಯ ಜನರೆ. ಸಾಮಾನ್ಯರಿಗೂ, ಪ್ರಾಕೃತಿಕರಿಗೂ, ನರಕದಲ್ಲಿ ಬಿದ್ದು ಕೋಟಲೆಗೊಳ್ಳುವ ವರಿಗೂ ತಿಳಿಯುವಂತೆ, ಸಂಸ್ಕೃತ – ಕನ್ನಡಗಳನ್ನು ಎಣ್ಣೆ – ತುಪ್ಪದಂತೆ ಬೆರೆಸದೆ, ದೇಸಿ ರಚನೆಯನ್ನು ಬಳಸಿ – ಮಾರ್ಗ ಶೈಲಿಯಲ್ಲಿ ದೃಷ್ಟಾಂತ ಸಮೇತವಾಗಿ ಜೈನಧರ್ಮದ ಹಿರಿಮೆ ಯನ್ನು ಸಾರುವ ಕಥಾಕೋಶ ಇದು. ಇಲ್ಲಿ ಬಳಸುವ ಪರಿಭಾಷೆ ಊಳಿಗಮಾನ್ಯ ಹಿನ್ನೆಲೆಯ ಶ್ರೀಮಂತಿಕೆಯದು.

ಆಧ್ಯಾತ್ಮಿಕ ಮೌಲ್ಯಗಳು ಎಷ್ಟೇ ಉನ್ನತವೆನಿಸಿದ್ದರೂ, ಧರ್ಮ ದೇವರ ಪರಿಕಲ್ಪನೆ ಎಷ್ಟೇ ಅಲೌಕಿಕವೆಂದು ಘೋಷಿಸಿದರೂ, ಕಲ್ಪನೆ, ತತ್ವ, ಅನುಭವಗಳು ಮೂಲತಹ ಸಾಮಾಜಿಕವಾದ ಭಾಷೆಯ ಮೂಲಕವೇ ರೂಪ ಪಡೆಯಬೇಕಾಗುವುದರಿಂದ ಲೌಕಿಕವೂ, ನಿರ್ದಿಷ್ಟ ವರ್ಗಹಿನ್ನೆಲೆಯುಳ್ಳದ್ದೂ ಆಗಿರುವುದು ಅನಿವಾರ್ಯ. ವರ್ತಮಾನದ ಸಾಮ್ರಾಜ್ಯ ಶಾಹಿ ವ್ಯವಸ್ಥೆಯಲ್ಲಿ ಹಣ – ಸಂಪತ್ತುಗಳೆ ಪರಮಮೌಲ್ಯಗಳು. ‘ಧರ್ಮಾಮೃತ’ದ ಅಲೌಕಿ ಕತೆಯೂ ಸಹ, ಸಂಪತ್ತು – ಶ್ರೀಮಂತಿಕೆಯನ್ನು ಮನುಷ್ಯನ ಆದರ್ಶ ಸ್ಥಿತಿಯೆಂದು ಗ್ರಹಿಸುವ ಲೌಕಿಕತೆಯೆ. ಬೆರಳೆಣಿಕೆಯ ವ್ಯಕ್ತಿಗಳು ಸಾಧಿಸುವ ಮುಕ್ತಿ – ವೈರಾಗ್ಯದ ಕೀರ್ತನೆಯಲ್ಲಿ ಮಾತ್ರ ಸರಳತೆಗೆ ಸ್ಥಾನವಿದೆ. ವ್ಯಕ್ತಿಮಟ್ಟದ ಕಠೋರ ಸರಳತೆ ಜೈನಧರ್ಮದಲ್ಲಿ ಒಂದು ಉನ್ನತಸ್ಥಿತಿ. ಆದರೆ ವಾಸ್ತವದಲ್ಲಿ ಕಳ್ಳ, ವೇಶ್ಯೆಯರು ಮಾತ್ರವಲ್ಲ ಜೈನಧರ್ಮಾವಲಂಬಿ ಗಳಾದ ರಾಜರು ಮತ್ತು ವರ್ತಕರೂ ಸಹ ಸಂಪತ್ತು – ಶ್ರೀಮಂತಿಕೆಯ ಆರಾಧಕರು. ಕಳ್ಳರನ್ನು ಆಕರ್ಷಿಸುವ ಅಮೂಲ್ಯರತ್ನಗಳ ಒಡೆಯರಾಗಿ, ಕುಬೇರನನ್ನು ಮೀರಿಸುವಷ್ಟು ಶ್ರೀಮಂತ ರಾಗಿದ್ದು ಸಣ್ಣಕ್ಕಿಯನ್ನು, ತೊವ್ವೆ, ತಿಳಿದುಪ್ಪಗಳನ್ನು ತಿಂದು, ಸುಂದರ ಸ್ತ್ರೀಯರನ್ನು ಭೋಗಿಸುವ ವರ್ತಕರು, ತಮ್ಮ ಸಂಪತ್ತಿಗೆ ಆಸೆಪಟ್ಟು ತಮ್ಮ ಕಕ್ಷೆಗೆ ಬರುವ ಕಳ್ಳರನ್ನು, ಅನ್ಯಧರ್ಮೀಯರನ್ನು ಆಕರ್ಷಿಸಿ ಜೈನಧರ್ಮಕ್ಕೆ ಮತಾಂತರಿಸಲು ಒಡ್ಡುವ ಪ್ರಲೋಭೆಗಳೂ ಇವೇ ಸಣ್ಣಕ್ಕಿ, ಸುಂದರಸ್ತ್ರೀ, ರತ್ನಗಳೆ ಆಗಿರುವುದು ಆಕಸ್ಮಿಕವಲ್ಲ. ಮುಕ್ತಿಸೌಖ್ಯವನ್ನು ಕೊಡುವ ವೀರಜಿನೇಂದ್ರಸ್ವಾಮಿಯೂ ‘ಶ್ರೀಲಕ್ಷ್ಮೀದೇವಿಯ ಸುಂದರ ಪಾದಕಮಲದಲ್ಲಿ ಸಂಜನಿಸಿ’ದವನು. ಜಿನಮಂದಿರಗಳ ಸೌಂದರ್ಯದ ವರ್ಣನೆಯೂ ಹೆಗ್ಗಳಿಕೆಯನ್ನು ಪಡೆದಿರುವುದು ಸಂಪತ್ತಿನ ಪರಿಮಾಣದಲ್ಲೇ. ‘ಶುದ್ಧ ಸ್ಫಟಿಕದ ನೆಲೆಗಟ್ಟು, ಪಚ್ಚೆಯ ಕಂಬಗಳು, ಚಂದ್ರಕಾಂತದ ಬೋದಿಗೆಗಳು, ಇಂದ್ರ ನೀಲಮಣಿಯ ನಾಗಪಟ್ಟಿಕೆ, ವಜ್ರದ ಸೋಪಾನಗಳು, ಹವಳದ ಕೀಲುಗಳು, ಚಿನ್ನದ ಗೋಡೆಗಳು, ವೈಢೂರ್ಯದ ಕದಗಳು, ಸೂರ್ಯಕಾಂತದ ಬಾಗಿಲುವಾಡಗಳು, ಪದ್ಮರಾಗ ಶಿಲೆಯ ಕಳಸಗಳು, ಪುಷ್ಯರಾಗಮಕರ ತೋರಣಗಳು, ಮುತ್ತಿನ ಸೂಸಕಗಳು, ಮಾಣಿಕ್ಯದ ಪ್ರತಿಮೆಗಳು ಇವುಗಳಿಂದ ಸುಂದರವಾದ ಜಿನಮಂದಿರಗಳು…’

ಕುಬೇರನನ್ನು ಮೀರಿಸುವ ಸಂಪತ್ತಿದ್ದರೂ ಮತ್ತಷ್ಟು ಸಂಪಾದಿಸಬೇಕೆಂದು ಮನೆಬಿಟ್ಟು ಹೊರಡುವ ಶ್ರೀಮಂತ ವರ್ತಕರು ಕಥಾಕೋಶದಲ್ಲಿ ಜೈನಧರ್ಮದ ಹೆಗ್ಗಳಿಕೆಯನ್ನೂ ಸಾರುವವರು.

‘ಪುರುಷನು ತನಗೆ ಧನವಿದೆಯೆಂದು ಸುಮ್ಮನಿರಬಾರದು. ದ್ರವ್ಯವಿದ್ದರೂ ಮತ್ತೆ ದ್ರವ್ಯವನ್ನು ಸಂಪಾದಿಸಲೇಕೆ ಎಂದರೆ ಧನ ಸಿಕ್ಕಿದರೆ ಇಹ ಪರಗಳೆರಡನ್ನೂ ಸಾಧಿಸಬಹುದು’ ಇದು ‘ಧರ್ಮಾಮೃತ’ದಲ್ಲಿ ಕಾಣುವ ಜೈನಧರ್ಮೀಯ ವರ್ತಕರ ತಾತ್ವಿಕ ನೆಲೆ. ಒಂದು ಧರ್ಮದಲ್ಲಿ ಆಳುವ ಜನರ ಸಮ್ಮತಿ ಸಹಯೋಗದೊಂದಿಗೆ ಶ್ರಮಿಕರನ್ನು ವಂಚಿಸುವುದರಿಂದ ವರ್ತಕರಿಗೆ ಸಾಧ್ಯವಾಗುವ ಸಂಪತ್ತಿನ ಕೇಂದ್ರೀಕರಣ, ವ್ಯಕ್ತಿಪಾರಮ್ಯ ಮತ್ತು ಖಾಸಗೀಕರಣ ವನ್ನು ಸಮರ್ದಿಸುವ ಪುಣ್ಯ – ಸ್ವರ್ಗ – ಕಲ್ಪ – ದೇವತೆಗಳ ಭ್ರಾಮಕ ಸುಖ – ನ್ಯಾಯಗಳನ್ನು ಪ್ರತಿಪಾದಿಸುತ್ತದೆ. ವರ್ತಮಾನದ ಸಮಾಜದಲ್ಲಿನ ಅಧಿಕಾರಸ್ಥ – ಶ್ರೀಮಂತರ ಮಕ್ಕಳ ದುರ್ಮಾರ್ಗ ದೌರ್ಜನ್ಯಗಳನ್ನು ನೆನಪಿಸುವ ಲಲಿತಾಂಗನೆಂಬ ರಾಜಕುಮಾರನ ಕೃತ್ಯಗಳು, ಅಂಜನಚೋರನಾಗಿ ತಾನು ಪ್ರೀತಿಸುವ ವೇಶ್ಯೆಯ ಮಾತಿಗೆ ಕಟ್ಟುಬಿದ್ದು ಪಟ್ಟದ ರಾಣಿಯ ಮೈಮೇಲಿದ್ದ ರತ್ನದ ಪದಕವನ್ನು ಕದಿಯಲು ಹೋಗಿ, ತಳವಾರನ ಕೈಯಿಂದ ತಪ್ಪಿಸಿಕೊಳ್ಳಲು ಗಗನಗಾಮಿನೀ ವಿದ್ಯೆಯನ್ನು ಕಲಿಯುವ ಮೂಲಕ ಜಿನದತ್ತ ಸೆಟ್ಟಿಯ ಸಂಸರ್ಗಕ್ಕೆ ಸಿಕ್ಕು ಜಿನದೀಕ್ಷೆಯನ್ನು ಪಡೆಯುವುದು ಈ ತಾತ್ವಿಕ ನೆಲೆಯಲ್ಲಿಯೆ ಸಾಧ್ಯ. ಮತ್ತೊಂದು ಧ್ರುವದಲ್ಲಿ ಸಂಪತ್ತಿನ ಅಭಾವದಿಂದ ಜನಿಸುವ ದಾರಿದ್ರ್ಯ, ದುಃಖಭರಿತ ಜೀವನದಿಂದ ಹುಟ್ಟುವ ಈರ್ಷ್ಯೆಯಿಂದಾಗಿ ಕಳ್ಳತನ, ವಂಚನೆ, ವೇಶ್ಯಾವೃತ್ತಿ ಮತ್ತು ಧೂರ್ತತನ ದುರ್ಮಾರ್ಗಗಳ ಮೂಲಕ ಬಡಜನರು ಸಾಮಾಜಿಕ ನ್ಯಾಯವನ್ನು ಪಡೆಯಬಯಸುವ ನೇತ್ಯಾತ್ಮಕ ಪ್ರತಿಮೌಲ್ಯಗಳನ್ನು ಈ ತಾತ್ವಿಕತೆಯೇ ಹುಟ್ಟುಹಾಕುತ್ತದೆ. ಆದರೆ ಜೈನಧರ್ಮಾವಲಂಬಿ ಗಳಾಗುವ ಕಳ್ಳರಿಗೆ ಸಿಗುವ ವಿನಾಯಿತಿ ಉಳಿದವರಿಗೆ ಸಿಗುವುದಿಲ್ಲ.

ಸಾಮಾಜಿಕ ವಿಷಮತೆಗಳು ಶೋಷಕ ಮತ್ತು ದಮನಕಾರೀ ವ್ಯವಸ್ಥೆಯಲ್ಲಿನ ಅಸಹಾಯಕ ಪ್ರತಿಕ್ರಿಯೆಗಳು ಮಾತ್ರವಲ್ಲ, ಪ್ರತಿಭಟನೆಯ ಪ್ರತಿಕ್ರಮಗಳೂ ಹೌದು. ಕನ್ನಡ ಜಾನಪದ ಹಾಗೂ ಶಿಷ್ಟ ಸಾಹಿತ್ಯದಲ್ಲಿ ಬರುವ ಚಾಣಾಕ್ಷರಾದ ಕಳ್ಳರು ಓದುಗನ ನೈತಿಕ ಅಸಮ್ಮತಿ ಯಿದ್ದೂ ಸಹಾನುಭೂತಿ ಸಂಪಾದಿಸುವುದು ಈ ಕಾರಣಕ್ಕಾಗಿಯೆ. ಮೃಚ್ಛಕಟಿಕದ ಕಳ್ಳ, ಕುಸುಮಬಾಲೆಯ ಯಾಡ ಇವರೆಲ್ಲಾ ಸದ್ಯದ ಅಗತ್ಯವನ್ನು ಪೂರೈಸುವ ಮಾತ್ರವಲ್ಲದೆ ತಮಗೆ ಪ್ರತಿಕೂಲವಾದ ವ್ಯವಸ್ಥೆಯ ವಿರುದ್ಧದ ತಾತ್ವಿಕ ಪ್ರತಿಭಟನೆಯಾಗಿಯೂ ವಂಚನೆ, ಕಳ್ಳತನಗಳಲ್ಲಿ ತೊಡಗುತ್ತಾರೆ. ವಡ್ಡಾರಾಧನೆ, ಬೃಹತ್ಕಥೆ, ಕಥಾಸರಿತ್ಸಾಗರ, ಧರ್ಮಾಮೃತ ದಂಥ ಕಥಾಕೋಶಗಳಲ್ಲಲ್ಲದೆ, ಜಾನಪದ ಕಥೆಗಳಲ್ಲಿಯೂ ಕಳ್ಳರ ಪ್ರಸಂಗಗಳು ರೋಚಕ ವಾಗಿರುವುದಕ್ಕೆ ಓದುಗನ ಸಹಾನುಭೂತಿ ಗಳಿಸುವ ಪ್ರತಿಭಟನೆಯ ಅಂಶವೂ ಕಾರಣ. ಆಧುನಿಕ ಕಾಲದ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಕತೆ, ಸಿನಿಮಾ, ನಾಟಕಗಳಲ್ಲಿ ಚಾಣಾಕ್ಷ ಅಪರಾಧಿಗಳನ್ನು, ಅತಿಚಾಣಾಕ್ಷ ಪತ್ತೇದಾರರು ಬೆನ್ನಟ್ಟಿ ಬಂಧಿಸುವ ಪ್ರಸಂಗಗಳಿಗೆ ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ಕಳ್ಳನು ಸಿಕ್ಕಿಹಾಕಿಕೊಳ್ಳುತ್ತಾನೋ ಇಲ್ಲವೊ ಎನ್ನುವುದು ಕೃತಿಕಾರ ಅಥವಾ ಸಹೃದಯರ ನಿರೀಕ್ಷೆಗಳು ವ್ಯವಸ್ಥೆಯ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದೆಯೋ ಇಲ್ಲವೊ ಎನ್ನುವುದನ್ನು ಅವಲಂಬಿಸಿದೆ. ದೇವನೂರರ ಸಾಹಿತ್ಯದ ಕಳ್ಳರು ಸಿಕ್ಕಿಹಾಕಿಕೊಳ್ಳು ವುದಿಲ್ಲ. ಧರ್ಮಾಮೃತದ ಕಳ್ಳರು ತಳವಾರನ ಕೈಗೆ ಸಿಗಲಿ ಸಿಗದಿರಲಿ ಅಂತೂ ಜೈನಧರ್ಮಾ ವಲಂಬಿಗಳಾಗಿ ನೈತಿಕ ಬಿಡುಗಡೆಯನ್ನು ಪಡೆಯುತ್ತಾರೆ. ಕಳ್ಳರ ಅಪೇಕ್ಷೆಗಳಲ್ಲಿನ ವ್ಯತ್ಯಾಸ ಗಮನಿಸಬೇಕಿದೆ.

ಬಂಡವಾಳಶಾಹಿ ಮತ್ತು ವರ್ತಮಾನದ ಸಾಮ್ರಾಜ್ಯಶಾಹಿ ಸಮಾಜಗಳು, ಕಳ್ಳತನ ವಂಚನೆಗಳಂಥ ಸಾಮಾಜಿಕ ವಿಷಮತೆಗಳನ್ನೂ ವ್ಯಾಪಾರೋದ್ಯಮದ ಅಡಿಪಾಯವನ್ನಾಗಿ ಪರಿವರ್ತಿಸಿಕೊಂಡಿವೆ. ಕಳ್ಳರ ಭಯದಿಂದಾಗಿಯೇ ರೂಪುಗೊಂಡಿರುವ ಸಾಮಾನ್ಯ ಬೀಗದ ತಯಾರಿಕೆಯಿಂದ ಹಿಡಿದು, ಕಳ್ಳತನವನ್ನು ಪ್ರತಿಬಂಧಿಸುವ ತಂತ್ರಜ್ಞಾನ – ಉದ್ಯಮ – ವ್ಯಾಪಾರ – ಸಂಸ್ಥೆಗಳ ದೊಡ್ಡ ಜಾಲಕ್ಕೆ ಕಳ್ಳರೇ ಆಧಾರ. ಕಳ್ಳರಿಲ್ಲದಿದ್ದರೆ ಪೋಲೀಸರಿಗೆ ಕೆಲಸವಿಲ್ಲ. ಬಡವರಿಲ್ಲದಿದ್ದರೆ ಸೇವೆ, ಸಾಮಾಜಿಕ ಸಂತರು, ದೇಣಿಗೆ, ನೊಬೆಲ್ ಪುರಸ್ಕಾರ ಯಾವುದೂ ಇಲ್ಲ. ಆದ್ದರಿಂದಲೇ ಬಡತನ ಮತ್ತು ಸಾಮಾಜಿಕ ವಿಷಮತೆಗಳಿಗೆ ಮೂಲವಾದ ಶೋಷಣೆ ಯನ್ನು ಬೆಂಬಲಿಸಿ ಪೋಷಿಸುವ ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ‘ದಕ್ಷ’ ಪೋಲೀಸರು ಮತ್ತು ‘ನಿಸ್ವಾರ್ಥ’ ಸಮಾಜ ಸೇವಕರು – ಸಾಮಾಜಿಕ ಸಂತರಿಗೆ ಎಲ್ಲಿಲ್ಲದ ಗೌರವ. ಶೋಷಣೆ ಯನ್ನೆ ನಿವಾರಿಸುವುದಕ್ಕಿಂತ ಶೋಷಿತರನ್ನು ಸಂತೈಸುವ ವ್ಯಕ್ತಿ – ಸಂಸ್ಥೆಗಳಿಗೆ ಇಲ್ಲಿ ಮಾನ್ಯತೆ ಇದೆ.

ಊಳಿಗಮಾನ್ಯ ವ್ಯವಸ್ಥೆಯ ವೈದಿಕ ಹಿನ್ನೆಲೆ ಹೊಂದಿದ ಕಥೆಗಳು ‘ಒಂದೂರಿನಲ್ಲಿ ಒಬ್ಬ ರಾಜನಿದ್ದನು’ ಎಂದೊ, ‘ಒಬ್ಬ ಬಡ ಬ್ರಾಹ್ಮಣನು ಕಾಡಿನಲ್ಲಿ ಹೋಗುತ್ತಿದ್ದಾಗ…’ ಎಂದೊ ಪ್ರಾರಂಭವಾಗುವಂತೆ, ವಾಣಿಜ್ಯ ಹಿನ್ನೆಲೆಯ ಜೈನಕಥೆಗಳು ‘ಭರತಕ್ಷೇತ್ರ, ರಾಜರಿಂದ ಪ್ರಾರಂಭಿಸಿ, ಜೈನಧರ್ಮಾವಲಂಬಿಗಳಾದ ವ್ಯಾಪಾರಿಗಳ ಸಂಪತ್ತನ್ನು ವರ್ಣಿಸುತ್ತವೆ. ವರ್ತಕರು ಕೇಂದ್ರಸ್ಥಾನದಲ್ಲಿದ್ದು, ರಾಜ ಮತ್ತಿತರ ಅಧಿಕಾರಸ್ಥ ಕೇವಲ ಕಥೆಯ ಹಿನ್ನೆಲೆಯಾಗು ತ್ತಾರೆ. ಸಾಮಾನ್ಯ ಜನರಿಗೆ ಆದರ್ಶವಾಗಬಲ್ಲ ವ್ಯಕ್ತಿಗಳು ಮಾತ್ರ ಸಣ್ಣಕ್ಕಿ ತೊವ್ವೆ, ತಿಳಿದುಪ್ಪ ಗಳನ್ನು ಸೇವಿಸುತ್ತಾ ವಿನೋದದಿಂದ ಕಾಲ ಕಳೆಯುವ, ಅಥವಾ ಅಮೂಲ್ಯರತ್ನದ ಒಡೆಯ ರಾಗಿ, ‘ಮೂವತ್ತಿಬ್ಬರು ಹೆಂಡಿರನ್ನು’ ಮನೆಯಲ್ಲಿ ಬಿಟ್ಟು ವ್ಯಾಪಾರಕ್ಕಾಗಿ ಹೊರಡುವ ಜೈನಸೆಟ್ಟಿಗಳೆ. ‘ಧರ್ಮಾಮೃತ’ದಲ್ಲಿ ಮೊದಲನೆಯ ಕಥೆ  ಪ್ರಾರಂಭವಾಗುವುದೇ ಭರತ ಕ್ಷೇತ್ರದ, ಸೌರಾಷ್ಟ್ರ ಪ್ರಾಂತ್ಯದ, ಗಿರಿನಗರ ಪಟ್ಟಣದ ದೊರೆ ವಿಶ್ವಸೇನ ಮಹಾಮಾಂಡಲಿಕನ ರಾಜಶ್ರೇಷ್ಠಿ, ದಯಾಮಿತ್ರ ಸೆಟ್ಟಿಯೆಂಬ ವ್ಯಾಪಾರಿಯ ವೃತ್ತಾಂತದಿಂದ. ಈ ವ್ಯಾಪಾರಿಯು, ವಂಶಪರಿಶುದ್ಧನೂ, ಪ್ರಸಿದ್ಧನೂ ಆಗಿದ್ದು, ‘ಐಶ್ವರ್ಯದಲ್ಲಿ ಕುಬೇರನನ್ನು ತಲ್ಲಣಗೊಳಿ ಸುವನು, ಭೋಗದಲ್ಲಿ ಭೋಗಿಲೋಕದ ಒಡೆಯ ಆದಿಶೇಷನೊಡನೆ ಸ್ಪರ್ಧಿಸುವನು, ಉದಾರಗುಣದಲ್ಲಿ ಕಲ್ಪವೃಕ್ಷದ ಮೇಲೆ ಮೇಲಾಟವಾಡುವವನು … ಅಳತೆಯಿಲ್ಲದ ಐಶ್ವರ್ಯದಿಂದ, ಹೋಲಿಕೆಯೇ ಇಲ್ಲದ ಭೋಗದಿಂದ, ಅಪರಿಮಿತವಾದ ಜಿನಭಕ್ತಿ ಯಿಂದಲೂ ಪ್ರಸಿದ್ದಿ ಹೊಂದಿ ಸುಖಸಂತೋಷಗಳಲ್ಲಿ ಕಾಲ ಕಳೆಯುವವನು.

ಧರ್ಮಾಮೃತದಲ್ಲಿ ಬಿಂಬಿತವಾಗುವ ಅಧಿಕಾರ – ಸಂಪತ್ತು ಕೇಂದ್ರಿತ ನಿರ್ದಿಷ್ಟ ಮುಖವುಳ್ಳ ಊಳಿಗಮಾನ್ಯ ಮೌಲ್ಯಗಳೊಂದಿಗೆ ವರ್ತಮಾನದ, ಮುಖವಿಲ್ಲದ ಅಥವಾ ಅನಂತಮುಖಿ ಯಾದ, ವಾಣಿಜ್ಯ – ಹಣಕೇಂದ್ರಿತ ಸಾಮ್ರಾಜ್ಯಶಾಹಿ ಮೌಲ್ಯಗಳನ್ನು ಮುಖಾಮುಖಿಯಾಗಿಸು ವಾಗ ಪ್ರಸ್ತುತ ಸಮಾಜದ ಅನೇಕ ವೈರುದ್ಧ್ಯಗಳು ಬಯಲಾಗುತ್ತವೆ. ವ್ಯಾಪಾರ, ಕಳ್ಳತನ, ವೇಶ್ಯಪದ್ಧತಿ ಊಳಿಗಮಾನ್ಯ ವ್ಯವಸ್ಥೆಯ ಅವಿಭಾಜ್ಯ ಅಂಗಗಳು. ಅದರೆ ಇವು ಪ್ರಭುತ್ವಕ್ಕೆ ಅಧೀನ. ಇವರ ಪಾಪಪ್ರಜ್ಞೆ – ನೈತಿಕತೆಗಳನ್ನು ನಿಭಾಯಿಸಲು ಪುರೋಹಿತರ ಮಧ್ಯಸ್ಥಿಕೆಯ ದೇವರು – ಧರ್ಮದ ಅಗತ್ಯವಿದೆ. ಈ ವ್ಯವಸ್ಥೆಯಲ್ಲಿ ಯಂತ್ರಗಳ ಬಳಕೆ ಸೀಮಿತವಾಗಿದ್ದು, ಮನುಷ್ಯ ಯಜಮಾನರಿಂದ ಶ್ರಮಿಕರು – ಬಡವರ ಮೇಲಾಗುವ ಕ್ರೌರ್ಯ ಎಷ್ಟೇ ಘೋರವಾಗಿ ದ್ದರೂ ಮಿತಿಯುಳ್ಳದ್ದು, ಮುಖ್ಯವಾಗಿ ಕಣ್ಣಿಗೆ ಕಾಣುವಂಥದ್ದು. ವರ್ತಮಾನದ ಜಾಗತೀ ಕರಣದ ಸಾಮ್ರಾಜ್ಯಶಾಹಿಗಳಲ್ಲಿ ಜಾಗತಿಕ ವ್ಯಾಪಾರಿಗಳೆ ದೇಶೀಯ ಪ್ರಭುತ್ವಗಳ ನಿಯಂತ್ರ ಕರು. ನಯವಂಚನೆಯು ಆಳುವವರು ಮತ್ತು ಅವರನ್ನೂ ಆಳುವವರಾದ ಜಾಗತಿಕ ವ್ಯಾಪಾರಿ ಗಳ ನೈತಿಕತೆಯ ಭಾಗವೆ ಆಗಿದೆ. ಆದ್ದರಿಂದ ಫಲಿತವಾಗುವ ಸತ್ಯ – ನ್ಯಾಯದ ಪರಿಕಲ್ಪನೆ, ಕಳ್ಳರು, ದರೋಡೆಕೋರರು ಕೊಲೆಗಡುಕರು ಮುಂತಾದ ವ್ಯವಸ್ಥೆಯ ಕಂಟಕರಿಗೂ, ಉಳಿದವರಿಗಿರುವಂತೆ ನಾಗರಿಕ – ಮಾನವೀಯ ಹಕ್ಕುಗಳಿವೆಯೆಂದು ಪ್ರತಿಪಾದಿಸುತ್ತದೆ. ಇದರಿಂದ, ಸಂಘಟಿತ ಹಿಂಸೆ, ಅಪರಾಧಗಳ ಮೂಲದ ಜನ ಶಕ್ತಿಕೇಂದ್ರಗಳಾಗಿ ಪ್ರಭುತ್ವದಲ್ಲಿ ಪಾಲು ಪಡೆದಿದ್ದಾರೆ. ಅದಾಗದಿದ್ದಾಗ ಪ್ರತಿಪಕ್ಷವಾಗಿ, ಆಳುವ ಜನರನ್ನು ನಿಯಂತ್ರಿಸು ತ್ತಿದ್ದಾರೆ. ಮೂಲತಹ ಶೋಷಣೆಯು ಹುಟ್ಟುಹಾಕುವ ಸಾಮಾಜಿಕ ವಿಷಮತೆಗಳಿಂದ ಹುಟ್ಟಿದ ವೇಶ್ಯಾವೃತ್ತಿ ಮತ್ತಿತರ ನೈತಿಕವಲ್ಲದ ಉಪವೃತ್ತಿಗಳನ್ನು ಕೈಗೊಳ್ಳುವ ಬಡವರು, ಶೋಷಣೆಯ ವಿರುದ್ಧ ಸಂಘಟಿತರಾಗುವ ಬದಲು ತಮ್ಮ ‘ವೃತ್ತಿ’ಪರ ಹಕ್ಕುಗಳನ್ನು ಪಡೆಯುವ ಯತ್ನದಲ್ಲಿ ತಮ್ಮ ಶೋಷಿತ ಸ್ಥಿತಿಯನ್ನೆ ಭದ್ರಪಡಿಸಿಕೊಳ್ಳಲು ಹೋರಾಡುವ ವಿಪರ್ಯಾಸ ಪ್ರಾಪ್ತ ವಾಗಿದೆ. ಇದನ್ನೆ ಶೋಷಿತ ಜನರು, ಮಾನವ ಹಕ್ಕುಗಳಿಗಾಗಿ ಮಾಡುವ ಹೋರಾಟವೆಂದು ಬಿಂಬಿಸಲಾಗುತ್ತಿದೆ. ಆಳುವ ಜನರ ಮಾನವೀಯತೆ, ಅನುಕಂಪದ ಹೆಸರಿನಲ್ಲಿ ಸ್ವಯಂ ಸೇವಾಸಂಸ್ಥೆಗಳ ಮೂಲಕ ಧನಸಹಾಯವನ್ನೂ ಮಾಡುತ್ತಿದ್ದಾರೆ. ಸಾಮ್ರಾಜ್ಯಶಾಹಿಯ ದಳ್ಳಾಳಿಗಳಾಗಿ, ಆಳುವ ಜನರಿಂದ ಧನಸಹಾಯ ಪಡೆದು ಜನರನ್ನು ಇಂಥ ಸಂಘಟನೆ – ಹೋರಾಟಗಳಲ್ಲಿ ತೊಡಗಿಸುತ್ತ ಶೋಷಣೆಯ ವಿರುದ್ಧದ ದನಿಯನ್ನು ಕ್ಷೀಣವಾಗಿಸಿ ದಿಕ್ಕುತಪ್ಪಿಸಲು ಸ್ವಯಂ ಸೇವಾಸಂಸ್ಥೆಗಳು ಬಳಕೆಯಾಗುತ್ತಿವೆ. ಸಮಾಜವಾದಿ ಪರಿಕಲ್ಪನೆ ಘೋಷಣೆಗಳನ್ನೆ ಬಳಸಿ, ಆಳುವ ಜನರ ಧ್ಯೇಯ – ನೀತಿಗಳನ್ನು ಬದಲಿಸುವ ಕಲೆ, ಸಾಹಿತ್ಯ, ಸಾರ್ವಜನಿಕ ಚರ್ಚೆ, ವಿಚಾರ ಸಂಕಿರಣ, ನಿಯಂತ್ರಿತ ಪ್ರತಿಭಟನೆ ಮುಂತಾದ ಕ್ಷೇಮಕರ ವಿರೋಧಪ್ರಕಟಣೆಗೆ ವ್ಯವಸ್ಥೆಯ ಕೃಪಾಶ್ರಯವನ್ನು ದೊರಕಿಸಿಕೊಂಡು ಸಮಾಜವಾದದ ದರ್ಶನವನ್ನು ನಿರರ್ಥಕಗೊಳಿಸುವ ತಂತ್ರ ಇವುಗಳ ಕಾರ್ಯವೈಖರಿಯಲ್ಲಿ ಅಡಕವಾಗಿದೆ. ಊಳಿಗಮಾನ್ಯ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳಲ್ಲಿ ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆಯ ಪರವಾಗಿದ್ದುಕೊಂಡೆ ಶೋಷಿತರನ್ನು ಸಂತೈಸುತ್ತಿದ್ದಂತೆ, ಸ್ವಯಂ ಸೇವಾಸಂಸ್ಥೆಗಳು ಸಾಮ್ರಾಜ್ಯಶಾಹಿಯ ನೆರಳಿನಲ್ಲಿದ್ದುಕೊಂಡು ಜನರನ್ನು ಹುಸಿ ಹೋರಾಟಗಳಲ್ಲಿ ತೊಡಗಿ ಸುತ್ತಿವೆ. ಈ ಕ್ರಮವನ್ನನುಸರಿಸಿ ಶೋಷಣೆಯ ವಿರುದ್ಧದ ಮಾನವ ಹಕ್ಕುಗಳ ಹೆಸರಿನಲ್ಲಿ ಜನರನ್ನು ವಿವಿಧ ಜಾತಿ, ಧರ್ಮ, ಕೋಮು ಸಂಘಟನೆಗಳನ್ನಾಗಿ ಒಡೆಯುವುದು ಸುಲಭ ವಾಗಿದೆ. ಇದು ಒಂದು ಕೋನದಿಂದ ನೋಡಿದರೆ, ಜನರಲ್ಲಿ ಧಾರ್ಮಿಕತೆ, ಜಾತೀಯತೆ, ಕೋಮುವಾದಗಳು ಬಲಗೊಂಡಂತೆ, ಮತ್ತೊಂದು ಕೋನದಿಂದ ನೋಡಿದರೆ ಜನರಲ್ಲಿ ತಮ್ಮ ಹಕ್ಕುಗಳ ಬಗೆಗಿನ ತಿಳುವಳಿಕೆ ಎಂದಿಗಿಂತ ಹೆಚ್ಚಾಗಿರುವಂತೆ ಕಾಣಿಸುತ್ತದೆ.

ಬಡವರ ಜೊತೆಗೇ ಇದ್ದು ಬಡವರ ಪರವಾಗಿ ಹೋರಾಡುವ ಸಂಸ್ಥೆಗಳು ಅಥವಾ ಶ್ರೀಮಂತರ ಜೊತೆಗಿದ್ದು ಶ್ರೀಮಂತರ ಪರವಾದ ತಾತ್ವಿಕತೆಯನ್ನು ಪ್ರತಿಪಾದಿಸುವ ಸಂಸ್ಥೆಗಳು ಧಾರ್ಮಿಕವಾಗಿರಲಿ ಅಥವಾ ಕ್ರಾಂತಿಕಾರಕವಾಗಿಲ್ಲದಿದ್ದರೂ ಗೊಂದಲ ಹುಟ್ಟಿಸುವುದಿಲ್ಲ. ಆದರೆ ಶ್ರೀಮಂತರ ಪರವಾಗಿದ್ದು ಬಡವರ ಜೊತೆಗಿರುವ, ಬಡವರ ಪರವಾಗಿದ್ದಂತೆ ತೋರಿ ಶ್ರೀಮಂತರ ಜೊತೆಗಿರುವ ಸಂಸ್ಥೆಗಳ ತಾತ್ವಿಕ – ಆಚರಣೆಗಳು ಎಷ್ಟೇ ಕ್ರಾಂತಿಕಾರವಾಗಿ ಕಂಡರೂ, ಅವುಗಳ ನಿಸ್ಪೃಹತೆ ಪ್ರಶ್ನಾರ್ಹವಲ್ಲದಿದ್ದಾಗಲೂ, ಪರಿಣಾಮದಲ್ಲಿ ಗೊಂದಲವನ್ನು ಬಿತ್ತುತ್ತವೆ. ಸಾಮ್ರಾಜ್ಯಶಾಹಿಯ ಕೈಲಿ ಈ ಗೊಂದಲ ಜಾಗತೀಕರಣದ ಸಂದರ್ಭದಲ್ಲಿ ಸಮಾಜವಾದಿ ಸಂಘಟನೆಗಳನ್ನು ನಿರ್ಬಲಗೊಳಿಸುವ ಒಂದು ಪ್ರಬಲ ಅಸ್ತ್ರವಾಗಿದೆ. ಆಧುನೀಕರಣವೆಂದರೆ ಕಂಪ್ಯೂಟರ್ ಬಳಕೆಯ ಕೇಂದ್ರೀಕೃತ ಉತ್ಪಾದನೆ ಮತ್ತು ಶ್ರಮಿಕ ಸಂಘಟನೆಗಳ ವಿಘಟನೆ; ವೈವಿಧ್ಯತೆಯೆಂದರೆ ವ್ಯಕ್ತೀಕರಣ; ದೇಸೀಯತೆಯೆಂದರೆ ಪ್ರತ್ಯೇಕತೆ; ಸ್ವಾತಂತ್ರ್ಯವೆಂದರೆ ಖಾಸಗೀತನ; ಪ್ರಜಾತಂತ್ರವೆಂದರೆ ಸಾಮಾಜಿಕ ಸಂಪತ್ತಿನ ಏಕಸ್ವಾಮ್ಯತೆ; ಅಭಿವೃದ್ದಿಯೆಂದರೆ ಸಾಲ; ಸರ್ಕಾರವೆಂದರೆ ದಳ್ಳಾಳಿ, ಶಾಂತಿಯೆಂದರೆ ಯುದ್ಧ, ಹೀಗೆ ಜನರು ಬಳಸುವ ಶಬ್ದಗಳು ಏಕಕಾಲಕ್ಕೆ ತದ್ವಿರುದ್ಧ ಅರ್ಥ ಕೊಡುವ ಭಾಷೆ ಸೃಷ್ಟಿಯಾಗಿ ಸಂವಹನ, ಸಂವಾದ, ಸಾಹಿತ್ಯ, ಹೀಗೆ ಗೊಂದಲ ವ್ಯಾಪಿಸಿದೆ. ಇಂಥ ಗೊಂದಲಮಯ ಸನ್ನಿವೇಶದಲ್ಲಿ ತನ್ನ ಕಾಲದ ಜನರ ಭಾಷೆಯನ್ನು ಬಳಸುವ ಧರ್ಮಗ್ರಂಥ ಸ್ವಕಪೋಲಕಲ್ಪಿತ ಮೌಲ್ಯಗಳನ್ನು ಪ್ರತಿಪಾದಿಸುತ್ತಿರುವಂತೆ ಯಾರಿಗಾದರೂ ಅನ್ನಿಸುತ್ತದೆ.

ಹೀಗಾಗಿ ಧರ್ಮಾಮೃತದ ಚಂಪೂಗದ್ಯ ಮತ್ತು ಮಾಲೋಪಮೆಗಳ ಮೂಲಕ ಬಿಂಬಿತ ವಾಗುವ ಜನಸಮುದಾಯದ ಜೀವನ ಕುರಿತಾದ ಸಮೃದ್ಧ ವಿವರಗಳು ನಯಸೇನ ಜನಪರ ನಿಲುವನ್ನು ಹೊಂದಿದ್ದಿರಬಹುದೆಂಬ ಭ್ರಮೆ ಹುಟ್ಟಿಸುತ್ತವೆ. ಜನರ ಭಾಷೆಯನ್ನು ಬಳಸಿದ ಮಾತ್ರಕ್ಕೆ ಕೃತಿ ಜನಪರವೆಂದು ನಂಬುವುದು ಬಾಲಿಶಃ ತರ್ಕ. ಎಲ್ಲಾ ಸಂಸ್ಕೃತಿಗಳೂ ಯಾವುದೇ ವ್ಯವಸ್ಥೆಯ ಹೂರಣವಾದ ಜನಸಮುದಾಯವನ್ನು ತಮ್ಮ ಬೆಂಬಲಕ್ಕೆ ಬಳಸಿಕೊಳ್ಳುತ್ತವೆ. ಆಳುವ ಜನರ ಜೀವನಶೈಲಿ – ನಂಬಿಕೆಗಳನ್ನು ಆದರ್ಶವೆಂದು ಸಾಹಿತ್ಯದಲ್ಲಿ ಬಿಂಬಿಸುವುದು ಎಲ್ಲ ಕಾಲದಲ್ಲೂ ನಡೆದೇ ಇದೆ. ಆಳುವ ಜನರ ಒಂದು ಬಣ ಪಂಡಿತ – ಶಿಷ್ಟಜನರ ಬೆಂಬಲ ಪಡೆದಿದ್ದರೆ ಅದರೊಂದಿಗೆ ಸ್ಪರ್ಧಿಸುವ ಇನ್ನೊಂದು ಬಣ ಜನಸಾಮಾನ್ಯರ ಬೆಂಬಲ ಪಡೆದು ಅಧಿಕಾರದಲ್ಲಿರಲು ಪ್ರಯತ್ನಿಸುತ್ತದೆ. ಆಗ ಜನಸಾಮಾನ್ಯರ ನುಡಿಗೆ ಹತ್ತಿರದ ಭಾಷೆಯನ್ನು ಆ ಬಣದ ಸಾಹಿತ್ಯದಲ್ಲಿ ಬಳಸುವ ಅಗತ್ಯ ಬೀಳುತ್ತದೆ. ಹೀಗೆ ಭಾಷೆ, ಛಂದಸ್ಸು, ವ್ಯಾಕರಣ ಗಳಲ್ಲಾಗುವ ಬದಲಾವಣೆಗಳು ಅಧಿಕಾರ ಕೇಂದ್ರದಲ್ಲಾಗುವ ಸ್ಥಿತ್ಯಂತರಗಳೊಂದಿಗೆ ತಳಕು ಹಾಕಿಕೊಂಡಿವೆ. ಕರ್ನಾಟಕದ ಚರಿತ್ರೆಯಲ್ಲಿ ಹನ್ನೊಂದು – ಹನ್ನೆರಡನೆಯ ಶತಮಾನಗಳಲ್ಲಿ ಜೈನ ಮತ್ತು ಶೈವ ಧರ್ಮಗಳ ಮೇಲಾಟದಲ್ಲಿ ಪಟ್ಟಣ ಕೇಂದ್ರಿತ ವ್ಯಾಪಾರೀ ಸಂಸ್ಕೃತಿ ಮತ್ತು ಕೃಷಿ ಹಾಗೂ ಕೃಷಿಯಾಧಾರಿತ ಉಪಕಸುಬುಗಳ ಸಂಸ್ಕೃತಿಯ ಜನರ ಹಿತಾಸಕ್ತಿಗಳ ತಿಕ್ಕಾಟವನ್ನು ಗುರುತಿಸಬಹುದು. ವೈದಿಕ, ಜೈನ ಮತ್ತು ಶೈವ ಸಂಸ್ಕೃತಿಗಳ ಪುರೋಹಿತ ವರ್ಗದ ಕೃತಿಕಾರರು ರಾಜಾಶ್ರಮ ಅಥವಾ ಪಂಡಿತರ ಸಹಾಯವಿಲ್ಲದೆ ಜನಸಮುದಾಯವನ್ನು ನೇರವಾಗಿ ಒಲಿಸಿಕೊಳ್ಳಲು ತಮ್ಮ ಧರ್ಮವೇ ಶ್ರೇಷ್ಠವೆಂದು ಪ್ರಚಾರಮಾಡಿದರು. ಧರ್ಮದ ಹೆಗ್ಗಳಿಕೆಯನ್ನು ಸಾರುವ ಗದ್ಯಪ್ರಧಾನ ಕಥಾಕೋಶಗಳು ಹುಟ್ಟಿದ್ದು ಹೀಗೆ. ವರ್ತಮಾನದ ಜಾಹಿರಾತುಗಳ ಮೂಲರೂಪಗಳು ಧರ್ಮಪ್ರಚಾರದ ಸಾಹಿತ್ಯ ಕೃತಿಗಳಲ್ಲಿವೆ. ಇದು ಕರ್ನಾಟಕ ಭಾರತದಲ್ಲಷ್ಟೇ ಅಲ್ಲದೆ ವಿಶ್ವದೆಲ್ಲೆಡೆ ಸಮಾನವಾಗಿ ಗೋಚರಿಸುವ ವಿದ್ಯಮಾನ.

ವೈದಿಕ ಧರ್ಮದ ಎರಡು ಬಣಗಳಲ್ಲಿ ಶ್ರಮದೂರ ಸೈನಿಕ ಸಂಸ್ಕೃತಿಯ ಶ್ರೀಮಂತ ಜೀವನಕ್ರಮದ ಸಂಕೇತವಾಗಿ ಸೃಷ್ಟಿಪಾಲಕನಾದ ವಿಷ್ಣುವಿದ್ದರೆ, ಶ್ರಮಭರಿತ ಕೃಷಿಸಂಸ್ಕೃತಿ ಜೀವನ ಕ್ರಮದ ಸಂಕೇತವಾಗಿ ಲಯಕಾರನಾದ ಶಿವನಿದ್ದಾನೆ. ಸೃಜನಾತ್ಮಕತೆಯ ಸಂಕೇತವಾದ ಸೌಮ್ಯಸ್ವಭಾವದ ಬಹ್ಮ ಸದಾ ವಿಷ್ಣುವಿಗೆ ಅಧೀನ. ಉಪಕಸುಬು ಮತ್ತು ಕುಶಲಕರ್ಮಿಗಳು ಮಾತ್ರ ತಮ್ಮನ್ನು ಬ್ರಹ್ಮನೊಂದಿಗೆ ಗುರ್ತಿಸಿಕೊಳ್ಳುತ್ತಾರೆ. ಹನ್ನೆರಡನೆಯ ಶತಮಾನದ ಶರಣ ಚಳುವಳಿಯಲ್ಲಿ ಕೃಷಿಕರಿಗಿಂತ ಕುಶಲಕರ್ಮಿಗಳು ಮತ್ತು ಉಪಕಸುಬುಗಳ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದು ಪ್ರತಿಭಟನಾತ್ಮಕವಾದ ಶೈವಧರ್ಮದ ಮೂಲಕ ವೀರಶೈವರಾದರು. ವೀರಶೈವಮತ ಆಳುವ ಜನರ ಧರ್ಮವಾಗಿ ರೂಪುಗೊಳ್ಳುತ್ತಿದ್ದಂತೆ ವ್ಯಾಪಾರಿ ಮತ್ತು ಪುರೋಹಿತ ಬಣಗಳ ಮಧ್ಯೆ ಸ್ಪರ್ಧೆಯೇರ್ಪಟ್ಟು ಉಳಿದವರು ಮೊದಲಿನಂತೆ ಅಂಚಿಗೆ ತಳ್ಳಲ್ಪಟ್ಟರು. ಆಳುವ ಜನರ ಜೀವನದಲ್ಲಿ ಸಂಪತ್ತು, ಶಕ್ತಿ, ಜ್ಞಾನಗಳ ಸಂಕೇತಗಳಾಗಿ ಲಕ್ಷ್ಮಿ, ಪಾರ್ವತಿ, ಸರಸ್ವತಿಯರು ಪೂಜೆಗೊಂಡರೆ, ಶ್ರಮಿಕರ ಜೀವನಕ್ರಮದಲ್ಲಿ ಪಾರ್ವತಿ, ವಿವಿಧ ರೂಪಗಳಲ್ಲಿ ಕ್ಷುದ್ರದೇವತೆಯಾಗಿ, ಜಾನಪದ ಮೂಲದ ಮಾತೃದೇವತೆಗಳೊಂದಿಗೆ ಪೂಜೆಗೊಳ್ಳುತ್ತಾಳೆ. ಜೈನಧರ್ಮದಲ್ಲಿ ಲೌಕಿಕ ಪ್ರಪಂಚದ, ವಾಣಿಜ್ಯ ಸಂಸ್ಕೃತಿಯ ಆದರ್ಶ ಶ್ರೀಮಂತ ಜೀವನದ ಸಂಕೇತವಾಗಿ ಲಕ್ಷ್ಮಿಯೂ, ನಯವಂಚನೆ – ಶೋಷಣೆಯಾಧಾರಿತ ಭೋಗಜೀವನದ ಪಾಪಪ್ರಜ್ಞೆಯನ್ನು ತೊಡೆಯಲು ಆತ್ಮಹಿಂಸೆಯ ಪರಾಕಾಷ್ಠೆಯ ತ್ಯಾಗಜೀವನದ ಸಂಕೇತವಾಗಿ ಜಿನೇಂದ್ರನೂ ಪೂಜೆಗೊಳ್ಳುತ್ತಾರೆ. ವೈದಿಕ ಧರ್ಮದಲ್ಲಿ ಬ್ರಹ್ಮ – ಸರಸ್ವತಿಯರನ್ನುಳಿದು ಇನ್ನೆಲ್ಲ ದೇವರುಗಳೂ ಹಿಡಿದಿರುವ ಆಯುಧಗಳು, ನೇರ ಹಿಂಸೆ ಯುದ್ಧಗಳಿಗಿರುವ ವೈದಿಕ ಸಂಸ್ಕೃತಿ ಸಮ್ಮತಿಯನ್ನು ಸೂಚಿಸುತ್ತವೆ. ವಾಣಿಜ್ಯದಲ್ಲಿ ಅಂತರ್ಗತವಾಗಿರುವ ಶೋಷಣಾಮೂಲದ ನಯವಂಚನೆ – ಹಿಂಸೆಗಿರುವ ಸಮ್ಮತಿ ಮತ್ತು ಜಿನಮುನಿಗಳ ಆತ್ಮಹಿಂಸೆಯ ವೈಭವೀಕರಣಗಳನ್ನು ಜೈನಧರ್ಮ ತನ್ನ ಅಹಿಂಸೆಯ ಅಬ್ಬರದ ಪ್ರಚಾರದಲ್ಲಿ ಮರೆಮಾಚುತ್ತದೆ. ‘ಧರ್ಮಾಮೃತ’ದ ಕಥೆಗಳಲ್ಲಿ ಈ ಅಂಶವನ್ನು ಹೆಜ್ಜೆ ಹೆಜ್ಜೆಗೂ ಗುರುತಿಸಬಹುದು.

ಯಾವುದೇ ವ್ಯವಸ್ಥೆಯಲ್ಲಿ ಧರ್ಮ, ದೇವರು ಮತ್ತು ಧಾರ್ಮಿಕತೆಗಳು ತಾತ್ವಿಕವಾಗಿ ಆಧ್ಯಾತ್ಮಿಕ ಗುರಿಯನ್ನು ತಲುಪುವ ಉದ್ದೇಶವನ್ನು ಹೊಂದಿದ್ದರೂ ಆಚರಣೆಯಲ್ಲಿ ಐಹಿಕ ಜೀವನದ ಬರಡುತನವನ್ನು ತೊಡೆಯಲು ಬಳಸುವ ಸಾಧನಗಳು. ಧರ್ಮ ಸಾಮಾಜಿಕವಾಗಿ ಜನರ ಮನೋರಂಜನೆಯ ಒಂದು ಭಾಗ. ಸಾಹಿತ್ಯ, ಸಂಗೀತ, ಚಿತ್ರಕಲೆ ಮತ್ತಿತರ ಕಲಾಪ್ರಕಾರ ಗಳಿಗೆ ದೇವರು ಧರ್ಮಗಳು ಅತ್ಯುತ್ತಮ ವಸ್ತುಗಳು. ಧಾರ್ಮಿಕ ಮನಸ್ಸಿನ ಒಬ್ಬ ಕಲಾಕಾರ ತನ್ನ ಜೀವನದೃಷ್ಟಿಯನ್ನು ಇತರರಿಗೆ ಮುಟ್ಟಿಸಲು ಭಾಷೆಯ ಮಾಧ್ಯಮವನ್ನು ಆರಿಸಿ ಕೊಂಡಾಗ ಆಗಬಹುದಾದರೂ ಧಾರ್ಮಿಕರಲ್ಲದ ಅಥವಾ ಇತರ ಧರ್ಮಗಳ ಜನರಿಗೆ ಅದು ಕೇವಲ ಸಾಹಿತ್ಯಿಕ ಅನ್ವೇಷಣೆಯ ಆಕರವಾಗಬಹುದು. ಮನೋರಂಜನೆಯನ್ನು ಪ್ರಧಾನವಾಗಿ ಬಯಸುವ ಓದುಗರನ್ನೂ ತಲುಪಲೆಂದು ಲೋಕಾನುಭವವನ್ನು ಧಾರ್ಮಿಕ ದೃಷ್ಟಿಕೋನದೊಂದಿಗೆ ಬೆಸೆದು ರಚಿಸುವ ಸಾಹಿತ್ಯ, ಕಥೆಗಳ ರೂಪವನ್ನು ತಾಳುತ್ತದೆ. ಈ ಪ್ರಕ್ರಿಯೆಯಲ್ಲಿ ಧಾರ್ಮಿಕ ನಿಲುವು – ಆಶಯಗಳ ಮೂಲಕ ಗ್ರಂಥಕರ್ತೃ ಪ್ರತಿಷ್ಠಾಪಿಸ ಬಯಸುವ ಆಧ್ಯಾತ್ಮಿಕ ಆವರಣದೊಳಕ್ಕೆ ಲೌಕಿಕವೆನ್ನಬಹುದಾದ ದೃಷ್ಟಿ – ಅಭಿರುಚಿ – ವರ್ಣನೆ – ವಿವರಗಳು ಪ್ರವೇಶಿಸುತ್ತವೆ. ಇಷ್ಟಕ್ಕೂ ನೆಲದ ಬದುಕು ಮತ್ತು ಇಂದ್ರಿಯಾನುಭವದ ಹಂಗಿಲ್ಲದ ಧಾರ್ಮಿಕತೆಯೆನ್ನುವುದೇ ಇಲ್ಲವಾದ್ದರಿಂದ, ಲೋಕಾನುಭವವನ್ನು ಭಾಷೆಯ ತೆಕ್ಕೆಯಲ್ಲಿ ಕೃತಿಯೊಳಕ್ಕೆ ತರುವಾಗ ಆಧ್ಯಾತ್ಮಿಕ ಮೌಲ್ಯಗಳಿಗೆ ತದ್ವಿರುದ್ಧವಾದ ಕೋನಗಳಿಂದ ಜೀವನವನ್ನು ನೋಡುವ ವಿರೋಧಾಭಾಸ ಉಂಟಾಗುತ್ತದೆ. ನಯಸೇನನು ಜೈನಧರ್ಮ ಪ್ರಚಾರಕ್ಕಾಗಿ ಪಂಡಿತರಲ್ಲದ ಓದುಗರನ್ನು ಉದ್ದೇಶಿಸಿ ಕಥಾಕೋಶವನ್ನು ರಚಿಸುವಾಗ ಇಂಥ ವಿರೋಧಾಭಾಸವನ್ನು ಮೇಲೆಳೆದುಕೊಂಡಿದ್ದಾನೆ. ವೈದಿಕ ಅಥವಾ ಶೈವಧರ್ಮಗಳ ನೈತಿಕ ಹರಹು ಜೈನಧರ್ಮದ ನೈತಿಕ ಹರಹಿನಷ್ಟು ಕಿರಿದು ಮತ್ತು ಕಠೋರವಲ್ಲವಾದ್ದರಿಂದ ಆ ಧರ್ಮಗಳ ಪ್ರಚಾರ ಸಾಹಿತ್ಯವನ್ನು ರಚಿಸುವವರಿಗೆ ಇಂಥ ಇಕ್ಕಟ್ಟು ಉಂಟಾಗುವುದಿಲ್ಲ. ಉದಾಹರಣೆಗೆ, ಅರಸುಗಳಿಗಿದುವೀರ, ದ್ವಿಜರಿಗೆಪರಮ ವೇದದ ಸಾರ, ಯೋಗಿಜನರ ತತ್ವವಿಚಾರ, ಮಂತ್ರೀಜನಕೆ ಬುದ್ದಿಗುಣ, ವಿರಹಿಗಳ ಶೃಂಗಾರ, ವಿದ್ಯಾಪರಿಣತರಲಂಕಾರ…’ ಎಂದು ಅನೇಕ ಜೇಬುಗಳ ಅಂಗಿಯನ್ನು ತೊಟ್ಟುಕೊಂಡೇ ಕಾವ್ಯರಚನೆಗೆ ತೊಡಗುವ ಕುಮಾರವ್ಯಾಸನಿಗೆ ಧಾರ್ಮಿಕತೆಯೊಳಕ್ಕೆ ಏನನ್ನು ಬೇಕಾದರೂ ತರುವ ಸ್ವಾತಂತ್ರ್ಯವಿದೆ. ಆದರೆ ಐಹಿಕ ಸುಖಗಳಿಂದ ದೂರವಿರುವ ಜಿನಮುನಿಯಾಗಿ ಕಳ್ಳರು, ವೇಶ್ಯೆಯರು, ವರ್ತಕರು ಮತ್ತು ದೊರೆಗಳ ಪ್ರಪಂಚದಲ್ಲಿ, ಜೈನಧರ್ಮದ ಕಠೋರತೆ – ಆತ್ಮಹಿಂಸೆ – ಜೀವನ ನಿರಾಕರಣೆಯ ವೈರಾಗ್ಯಗಳನ್ನು ನಯಸೇನನು ಪ್ರತಿಪಾದಿಸುತ್ತಾನೆ. ಆದರೆ, ಸಮೃದ್ಧ ಲೋಕಾನುಭವದ ನಾಣ್ಣುಡಿ – ಉಪಮೆ – ಮಾಲೋಪಮೆಗಳ ಭಾಷೆಯಲ್ಲಿ ಮೈದಾಳುವ ಪ್ರಾಪಂಚಿಕತೆ – ಜೀವನಪ್ರೀತಿಗಳು ಇವನ್ನು ಅಲ್ಲಗಳೆಯುವಷ್ಟು ಪ್ರಬಲವಾಗಿವೆ. ‘ಧರ್ಮಾಮೃತ’ದಲ್ಲಿ ಕೃತಿಕಾರನ ಉದ್ದೇಶ ಮತ್ತು ಕೃತಿ ಕಟ್ಟಿಕೊಡುವ ಆಶಯ ಪರಸ್ಪರ ಪೂರಕವಾಗುವ ಬದಲು ಮುಖಾಮುಖಿಯಾಗುತ್ತವೆ.

ವರ್ತಮಾನದ ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ಕ್ರೀಡೆ, ಕಲೆ, ಸಾಹಿತ್ಯಗಳಂತೆ ಧರ್ಮವೂ ಒಂದು ವಾಣಿಜ್ಯೋದ್ಯಮವಾಗಿದೆ. ವ್ಯಕ್ತಿಮಟ್ಟದ ಖಾಸಗಿತನದಲ್ಲಿ ಅನುಭವಿಸಬೇಕಾದ ಅಂತಮುರ್ಖತೆ, ಶಾಂತಿ – ಸಮಾಧಾನಗಳನ್ನು ಸಾರ್ವಜನಿಕವಾಗಿ ಪಡೆಯಲು ಜನರನ್ನು ಧರ್ಮೋದ್ಯಮಿಗಳು ಜಾಹಿರಾತುಗಳ ಮೂಲಕ ಆಕರ್ಷಿಸುತ್ತಿದ್ದಾರೆ. ಜಾಹಿರಾತುಗಳು ಜನಸಾಮಾನ್ಯರ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡಲೆಂದೇ ಸೃಷ್ಟಿಯಾಗುತ್ತಿರುವ ಅತ್ಯಂತ ಶಕ್ತಿಶಾಲಿ ಪ್ರಚಾರ ಕೃತಿಗಳು. ಇಲ್ಲಿಯೂ ಜಾಹಿರಾತುದಾರನ ಉದ್ದೇಶದೊಂದಿಗೆ ಜಾಹಿರಾತಿನ ಸಂದೇಶ ಮುಖಾಮುಖಿಯಾಗುವ ವೈರುಧ್ಯ ಇರುವುದನ್ನು ವಿಶೇಷವಾಗಿ ಗಮನಿಸಬೇಕು. ಜಾಹಿರಾತುದಾರರ ಅಬ್ಬರದ ಸಂದೇಶಗಳನ್ನು ಅಲ್ಲಗೆಳೆಯುವ ಧ್ವನಿ – ಕಸುವು ಜಾಹಿರಾತಿನ ಒರಟು ವಿವರಗಳಲ್ಲೇ ಇರುತ್ತದೆ. ಧಾರ್ಮಿಕ ಸದಾಶಯದ ನಯಸೇನ ‘ಧರ್ಮಾಮೃತ’ದ ಕಥೆಗಳನ್ನು ಜೈನಧರ್ಮಪರವಾದ ಜಾಹಿರಾತಿನಂತೆ ಬಳಸಿದ್ದಾನೆ. ಆದರೆ ಈ ಕಥೆಗಳ ವಿವರಗಳಲ್ಲಿ ವ್ಯಕ್ತವಾಗುವ ಪ್ರಾಪಂಚಿಕತೆ – ಜೀವನ ಪ್ರೀತಿಗಳು ಜೈನಧರ್ಮದ ಆತ್ಮಹಿಂಸೆ ಯನ್ನು ನಿರಾಕರಿಸುವಷ್ಟು ಪ್ರಬಲವಾಗಿರುವುದರಿಂದ ಇದೊಂದು ಧರ್ಮಗ್ರಂಥವಾಗಿ ಕೆಲಸ ಮಾಡದೆ ಕಥಾಕೋಶವಾಗಿ ಜನಪ್ರಿಯವಾಗಿದೆ. ಲಲಿತಾಂಗನು ಅಂಜನಚೋರನಾಗಿ ಎಸಗುವ ಕೃತ್ಯಗಳ ಅಪರಾಧಗಳಲ್ಲಿನ ಅನೈತಿಕತೆ, ಕಳ್ಳರ ಸಾಹಸಗಳಲ್ಲಿನ ರೋಚಕತೆ, ಅನಂತಮತಿಯು ಅನುಭವಿಸುವ ಕಷ್ಟಗಳು, ಅವಳು ಕಲ್ಪಿಸಿಕೊಳ್ಳುವ ನರಕಶಿಕ್ಷೆಯ ಸವಿವರಹಿಂಸೆ, ಸಾಂದರ್ಭಿಕ ವಾಗಿ ಚಿತ್ರಿತವಾಗುವ ವೇಶ್ಯೆಯರ ರೀತಿನೀತಿಗಳು, ಅವರ ಜೀವನ ಮೌಲ್ಯಗಳು, ಸ್ತ್ರೀಯರನ್ನು ವರ್ಣಿಸುವಾಗ ನಯಸೇನನು ಪ್ರದರ್ಶಿಸುವ ದೇಹ ಸೌಂದರ್ಯ ಪ್ರಜ್ಞೆ, ಇವೆಲ್ಲ ಅವನು ಪ್ರತಿಪಾದಿಸುವ ಧಾರ್ಮಿಕ ಮೌಲ್ಯಗಳನ್ನು ಮರೆಸುವಷ್ಟು ಪ್ರಬಲವಾಗಿ ಓದುಗರ ಮನಸ್ಸಿ ನಲ್ಲುಳಿಯುತ್ತವೆ.

ವಾಣಿಜ್ಯ ಪ್ರಪಂಚದಲ್ಲಿ ಜಾಹಿರಾತುದಾರರ ದುರಾಶಯ ಗೆದ್ದರೆ ಬಳಕೆದಾರರು ಸೋಲುತ್ತಾರೆ. ಆದರೆ ನಯಸೇನನ ಸದಾಶಯ ಸೋಲುವುದರಿಂದ ಕತೆಗಳನ್ನು, ಆ ಮೂಲಕ ಜನಪದರ ಲೌಕಿಕ ಜೀವನವನ್ನು ಪ್ರೀತಿಸುವ ಓದುಗರಿಗೆ ಲಾಭವಾಗಿದೆ.