ವರ್ತಮಾನದ ಸಾಮ್ರಾಜ್ಯಶಾಹಿ ನಿಯಂತ್ರಿತ ಜೀವನಕ್ರಮದಲ್ಲಿ ಆಕ್ರಮಣಶೀಲತೆ, ಕೇಂದ್ರೀಕರಣ, ದೂರನಿಯಂತ್ರಿತ ಶೋಷಣೆ, ಸಾಮಾಜಿಕ ಸಂಪತ್ತಿನ ಖಾಸಗೀಕರಣ ಸೂಕ್ಷ್ಮಾತಿಸೂಕ್ಷ್ಮ ನೆಲೆಗಳಲ್ಲಿ, ಅತ್ಯಂತ ಸಂಕೀರ್ಣ ಹಾಗೂ ಶಿಷ್ಟ ವಿಧಾನಗಳಲ್ಲಿ ಪ್ರತಿಷ್ಠಾಪನೆ ಗೊಳ್ಳುತ್ತಾ ಜನರ ಸಮ್ಮತಿಯನ್ನು ಪಡೆಯುತ್ತಿವೆ. ಇವಕ್ಕೆ ಹೊಂದುವ ತಂತ್ರಜ್ಞಾನ ಸೃಷ್ಟಿಯಾದಂತೆ, ಈ ಜೀವನಕ್ರಮವನ್ನು ಸಮರ್ಥಿಸುವ ಅಥವಾ ಅದರ ಅಮಾನವೀಯತೆ ಯನ್ನು ಮರೆಮಾಚುವ ದರ್ಶನ, ತಾತ್ವಿಕತೆ, ಚಿಂತನಾಕ್ರಮಗಳು, ಕಲಾಭಿರುಚಿ, ಮೀಮಾಂಸೆ ಗಳೂ ನಮ್ಮನ್ನು ವ್ಯವಸ್ಥಿತವಾಗಿ ಆವರಿಸುತ್ತಿವೆ. ಭೂಮಿಯನ್ನಲ್ಲದೆ ಭೂಮಿಯ ಪರಿಸರ ವನ್ನೂ ಏಕಸ್ವಾಮ್ಯಕ್ಕೆ ಒಳಪಡಿಸಿ ಭೂಮಿಗೂ ಪ್ರಾಣಿಪ್ರಪಂಚಕ್ಕೂ ಕೊಂಡಿಯಾಗಿರುವ ಬೀಜದ ನಿಯಂತ್ರಣದ ಮೂಲಕ ಆಹಾರ, ಆಹಾರದಿಂದ ಆರೋಗ್ಯ, ಆರೋಗ್ಯಕ್ಕಾಗಿ ಔಷಧ ಹೀಗೆ ಜನಸಮುದಾಯದ ಜೀವನಕ್ರಮವೇ ಸಾಮ್ರಾಜ್ಯಶಾಹಿ ಆಳುವ ಜನರ ಕೈಗೆ ಸಿಕ್ಕಿದೆ. ಜಾಗತಿಕ ವ್ಯಾಪಾರಿಗಳು ಮತ್ತು ಅವರ ದಳ್ಳಾಳಿಗಳು ಮುಚ್ಚಿದ ಬಾಗಿಲಿನ ಹಿಂದೆ ತೆಗೆದುಕೊಳ್ಳುವ ನೀತಿ – ನಿರ್ಧಾರಗಳು ಜಾಗತಿಕವಾಗಿ ಜನಸಮುದಾಯದ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತವೆ. ಈ ನೀತಿ – ನಿರ್ಧಾರಗಳು ಯಾವ ರೀತಿಯಲ್ಲೂ ಬದಲಿಸಲು ಶಕ್ತವಾಗದ ಮುಕ್ತ – ಪಾರದರ್ಶಕ ಚರ್ಚೆ – ವಾಗ್ವಾದಗಳನ್ನು ಸಂಘಟಿಸಲು ಆಳುವ ಜನರೇ ಧನಸಹಾಯ ಮಾಡುತ್ತಿದ್ದಾರೆ. ಇದರ ಉದ್ದೇಶ, ವಿರೋಧದ ಮೂಲನೆಲೆಗಳನ್ನು ಗುರುತಿಸುವುದು ಮತ್ತು ಪೂರ್ವನಿರ್ಧಾರಿತ ತೀರ್ಮಾನಗಳನ್ನು ಸಮರ್ಥಿಸುವಂಥ ಮನಸ್ಥಿತಿಗೆ ಜನಸಮುದಾಯವನ್ನು ಸಜ್ಜುಗೊಳಿಸುವುದು. ಕಲೆ, ಸಾಹಿತ್ಯ, ಉತ್ಸವ, ಪ್ರದರ್ಶನ, ಮನರಂಜನೆ ಇಂದು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಾಗಿ ಬಳಕೆಯಾಗುತ್ತಿರುವ ಇಂಥ ಸಂದರ್ಭದಲ್ಲಿ ನಮ್ಮ ಮೇಲಿನ ಸಾಮ್ಯಾಜ್ಯಶಾಹಿಯ ಆಕ್ರಮಣ ತೀವ್ರವಾದಂತೆಲ್ಲ ವರ್ತ ಮಾನವನ್ನು ಎದುರಿಸುವ ಬದಲು ದೇಶೀಯತೆ – ಪುರಾತನ ಗ್ರಂಥ – ಸಾಹಿತ್ಯಗಳ ಮೌಲ್ಯ ನಿಷ್ಕರ್ಷೆಯತ್ತ ಹೆಚ್ಚು ಹೆಚ್ಚು ಗಮನ ಹರಿಸುತ್ತಿದ್ದೇವೆಯೆ ಎಂಬ ಅನುಮಾನ ನನ್ನನ್ನು ಕಾಡುತ್ತದೆ. ಆದ್ದರಿಂದ ವರ್ತಮಾನದಲ್ಲಿ ಕೈಗೊಳ್ಳುವ ನಮ್ಮ ಓದು ಸಾಹಿತ್ಯದ ಸಾಂಪ್ರ ದಾಯಿಕ ಓದಿನ ಎಲ್ಲೆಗಳನ್ನು ದಾಟಿ, ಪ್ರಶ್ನೆ – ಅನುಮಾನಗಳೊಂದಿಗೆ ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕೆಂಬ ಗ್ರಹಿಕೆಯೊಂದಿಗೆ ‘ಧರ್ಮಾಮೃತ’ವನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದ್ದೇನೆ.

ನಯಸೇನನ ಮೂಲೋದ್ದೇಶ ಜೈನಧರ್ಮಪ್ರಚಾರ. ಜೈನಧರ್ಮದ ವ್ರತ ಪೂಜೆಗಳು, ಅವನ್ನು ಉಪದೇಶಿಸುವ ಮುನಿಗಳು, ಆಚರಿಸುವ ಶ್ರಾವಕರು ಎಲ್ಲರೂ ಶ್ರೇಷ್ಠರೆ. ಅನ್ಯಧರ್ಮಗಳು ಕುಧರ್ಮಗಳು, ಜೈನಧರ್ಮದಿಂದ ಮಾತ್ರ ಸದ್ಗತಿ – ಮುಕ್ತಿ ಪಡೆಯಲು ಸಾಧ್ಯ. ಇದು ನಯಸೇನನೇ ‘ಕಾವ್ಯರತ್ನ’ವೆಂದು ಕರೆದುಕೊಳ್ಳುವ ‘ಧರ್ಮಾಮೃತ’ದ ಆಶಯ. ನಯಸೇನ ಸ್ವತಃ ತನ್ನನ್ನು, ‘ಸುವ್ರತಾಂಬೋನಿಧಿ’ ‘ಸಕಲಜಗತ್ಪಾವನಂ’ ‘ಪರಮಶ್ರೀ ಜೈನ ಧರ್ಮಾಂಬರ ದಿನಕರನ್’ ಎಂದು ಹೊಗಳಿಕೊಂಡಿದ್ದಾನೆ. ನೂತನ ಕವಿತಾವಿಳಾಸ, ದಿಗಂಬರ ದಾಸ, ಸುಕವಿನಿಕರಪಕಮಾಕಂದಂ, ಸಹಜಕವಿ ಜನಪಯಃಪಯೋಧಿ ಹಿಮಕರ, ಸುಕವಿಲನ ಮನಃಪದ್ಮಿವೀರಾಜಹಂಸಂ ಇವು ನಯಸೇನ ಬಳಸಿಕೊಳ್ಳುವ ಬಿರುದುಗಳು. ಪರನಿಂದೆ ಅಥವಾ ಆತ್ಮಪ್ರಶಂಸೆಗಳಿಗೆ, ಲೌಕಿಕ – ಆಧ್ಯಾತ್ಮಿಕ ಎಂಬ ಭೇದವಿಲ್ಲ. ಒಬ್ಬ ವ್ಯಕ್ತಿ ತಾನು ಎಲ್ಲರಿಗಿಂತಲು ಶ್ರೇಷ್ಠ, ತಾನೊಬ್ಬ ಮಹಾನ್ ವ್ಯಕ್ತಿ ಎಂದೆಲ್ಲ ಘೋಷಿಸುತ್ತಿದ್ದರೆ ಅಂಥವ ನನ್ನು ವ್ಯಂಗ್ಯವೊ, ಹುಚ್ಚನೆನ್ನುತ್ತೇವೆ. ಹಾಗೆಯೇ ಒಂದು ದೇಶ, ಧರ್ಮ ಅಥವಾ ಸಂಸ್ಕೃತಿಗೆ ಸೇರಿದ ಜನ ತಮ್ಮ ದೇಶ, ಧರ್ಮ ಸಂಸ್ಕೃತಿಗಳೇ ಸರ್ವ ಶ್ರೇಷ್ಠವೆಂದೂ ಮಹಾನ್ ಎಂದೂ ಘೋಷಿಸುತ್ತಿದ್ದರೆ ಅದರ ಅರ್ಥ ಏನಿರಲು ಸಾಧ್ಯ? ಮೂಲತಹ ಜನ ಏತಕ್ಕಾಗಿ ಧಾರ್ಮಿಕರಾಗುತ್ತಾರೆ? ಆಳುವ ಜನ ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಲು ಕೋಟ್ಯಂತರ ರೂಪಾಯಿಗಳನ್ನು ಏಕೆ ಖರ್ಚು ಮಾಡುತ್ತಾರೆ? ಎಂಥಾ ಬಡವರೂ ಪುಣ್ಯಕ್ಷೇತ್ರಗಳನ್ನು ನೋಡಲು ಪಡಬಾರದ ಕಷ್ಟಗಳನ್ನು ಏಕೆ ಮೈಮೇಲೆ ಹಾಕಿಕೊಳ್ಳುತ್ತಾರೆ? ಧರ್ಮಗ್ರಂಥಗಳು, ಬಡತನ ಕಷ್ಟಗಳನ್ನು ಜೀವನದ ಮೌಲ್ಯಗಳೆಂದು ಯಾರಿಗಾಗಿ, ಯಾಕಾಗಿ ಬಿಂಬಿಸುತ್ತವೆ? ಧರ್ಮದ ಶ್ರೇಷ್ಠತೆಯನ್ನು ಪ್ರತಿಷ್ಠಾಪಿಸಲು ಪ್ರಾಣವನ್ನೆ ತೆರುವ ನಿಷ್ಠೆಯ ತಳಹದಿ ಯಾವುದು? ಜೈನಧರ್ಮದ ಪ್ರಚಾರಕ್ಕಾಗಿಯೇ ರಚಿತವಾಗಿದೆಯೆಂದು ಹೇಳುವ ‘ಧರ್ಮಾಮೃತ’ದ ಚರ್ಚೆ ಈ ಎಲ್ಲ ಪ್ರಶ್ನೆಗಳನ್ನು ಎತ್ತುತ್ತದೆ.

ವರ್ತಮಾನದ ಸಾಮ್ರಾಜ್ಯಶಾಹಿ ಜೀವನಕ್ರಮದಲ್ಲಿ ವಸ್ತು, ವ್ಯಕ್ತಿ, ದೇಶ, ಸಂಸ್ಕೃತಿಗಳ ಶ್ರೇಷ್ಠತೆಯ ತೀವ್ರ ಪೈಪೋಟಿಯಿದೆ. ಶ್ರೇಷ್ಠತೆಯ ವ್ಯಸನ, ಮಾನವೀಯತೆಯ ಹಂಬಲ ವಾಸ್ತವವಾಗಿ ಕೀಳರಿಮೆಯಿಂದ ಹುಟ್ಟುತ್ತದೆ. ಸ್ಪರ್ಧೆ, ಪೈಪೋಟಿ, ಮೇಲಾಟ, ಇನ್ನೊಂದು ಜೀವಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ಮಾಡುವ ಎಲ್ಲ ಪ್ರಯತ್ನಗಳ ಹಿಂದೆ ಇಂಥ ಮನಸ್ಥಿತಿ ಇದೆ. ಇದರ ಜೊತೆಗೆ, ಅಸ್ತಿತ್ವದ ಬಗೆಗಿನ ಅಭದ್ರತೆಯೂ ಸೇರಿದಾಗ, ಬದುಕಿನ ಮೂಲಭೂತ ಅಗತ್ಯಗಳ ಮೇಲಿನ ನಿಯಂತ್ರಣ, ಸಂಗ್ರಹ – ಸ್ವಾಮ್ಯ, ಆಕ್ರಮಣ ಮತ್ತು ಅತಿಕ್ರಮಣದ ಗೀಳು ಬಲವಾಗಿರುತ್ತದೆ. ವ್ಯಕ್ತಿಮಟ್ಟದಲ್ಲಿ ಇದು ಮನುಷ್ಯನ ಸಹಜ ಸ್ವಭಾವವೆಂಬಂತೆ ತೋರಿದರೆ, ಸಾಮಾಜಿಕವಾಗಿ ತಾತ್ವಿಕರೂಪವನ್ನು ತಾಳಿದಾಗ ಅದೇ ಒಂದು ಜೀವನದೃಷ್ಟಿಯಾಗಿ ಬಿಂಬಿತವಾಗುತ್ತದೆ.

ಈ ಪರನಿಯಂತ್ರಕ ಜೀವನದೃಷ್ಟಿಯನ್ನು ಉಳಿದವರ ಮೇಲೆ ಹೇರಲು ಅಥವಾ ಇತರ ರನ್ನು ಈ ಜೀವನದೃಷ್ಟಿಗೆ ಒಳಪಡಿಸಲು ಅಭದ್ರತೆ ಮತ್ತು ಕೀಳರಿಮೆಯಿಂದ ನರಳುವ ಅಥವಾ ಜನರ ಗುಂಪು ಮಾಡುವ ಪ್ರಯತ್ನಗಳ ಒಟ್ಟು ರೂಪವನ್ನು ರಾಜಕೀಯ ಎಂದು ಕರೆಯುವುದು ವಾಡಿಕೆಯಾಗಿದೆ. ದೈಹಿಕಶಕ್ತಿ, ಅಸ್ತ್ರ – ಶಸ್ತ್ರಗಳ ಬಲ, ಬೌದ್ದಿಕ ಮತ್ತು ತಾಂತ್ರಿಕ ಉಪಾಯಗಳ ಬಳಕೆ ಈ ರಾಜಕೀಯದ ಅವಿಭಾಜ್ಯ ಅಂಗ. ಇವುಗಳ ಸಂಘಟಿತ – ವ್ಯವಸ್ಥಿತ ರೂಪವೇ ಸೈನ್ಯ. ಬಲಾತ್ಕಾರ ಉಗ್ರವಾಗಿದ್ದಾಗ ಹಿಂಸೆ – ಕ್ರೌರ್ಯಗಳ ರೂಪ ತಾಳುವ ರಾಜಕೀಯ, ಸೌಮ್ಯವಾಗಿದ್ದಾಗ ಪ್ರಚಾರ – ಶಿಕ್ಷಣವೆಂದು ಕರೆಸಿಕೊಳ್ಳುತ್ತದೆ.

ವ್ಯಾಪಾರಿ ಸಂಸ್ಕೃತಿಯಲ್ಲಿ ಜಾಹಿರಾತು, ಶಿಕ್ಷಣ – ಪ್ರಚಾರದ ಅವಿಭಾಜ್ಯ ಅಂಗ. ಬಳಕೆ ದಾರನ ಪ್ರಜ್ಞೆಯ ಆಳಕ್ಕಿಳಿದು ಸರಕಿನ ಶ್ರೇಷ್ಠತೆಯನ್ನು ಸಾರುವ ಜಾಹಿರಾತುಗಳಿಗೆ ಈ ಸಂಸ್ಕೃತಿಯಲ್ಲಿ ಅತ್ಯಂತ ಹೆಚ್ಚಿನ ಸ್ಥಾನವಿದೆ. ಧಾರ್ಮಿಕ ಸಂದೇಶಗಳಿಗೂ ಜಾಹಿರಾತಿನ ಸಂದೇಶಗಳಿಗೂ ಭಾಷೆಯೇ ಮಾಧ್ಯಮ. ಕಾವ್ಯ, ಕಲೆ, ಜಾಹಿರಾತುಗಳ ಮೂಲಕ ಭಾಷೆಯೂ ಆಳುವ ಜನರ ಅಸ್ತ್ರವಾಗಿ ಶಕ್ತಿಕೇಂದ್ರದ ನಿಯಂತ್ರಣದಲ್ಲಿರುತ್ತದೆ. ಏಕಸ್ವಾಮ್ಯ, ಕೇಂದ್ರೀಕೃತ ನಿಯಂತ್ರಣ, ಬಲಪ್ರಯೋಗ, ಹಿಂಸೆ ಮತ್ತು ಕ್ರೌರ್ಯ, ಶ್ರೇಷ್ಠತೆಯ ಪ್ರಚಾರ ಸಾಮ್ರಾಜ್ಯ ಶಾಹಿ ರಾಜಕೀಯ ತಳಹದಿಯೂ ಆಗಿವೆ. ‘ಧರ್ಮಾಮೃತ’, ಜೈನಧರ್ಮಪ್ರಣೀತ ಉಳ್ಳವರ ಭೋಗ ಮತ್ತು ಆತ್ಮಹಿಂಸೆಯ ಜೀವನದೃಷ್ಟಿಯನ್ನು ಜನಸಾಮಾನ್ಯರ ಭಾಷೆಯಲ್ಲಿ ಪ್ರಚಾರ ಮಾಡುವ ಗ್ರಂಥ. ಈ ಜೀವನದೃಷ್ಟಿಗೆ ಜನರ ಸಮ್ಮತಿಯನ್ನು ದೊರಕಿಸಿಕೊಳ್ಳವುದು ಇದರ ಉದ್ದೇಶ.

ಆಳುವ ಜನ, ತಮ್ಮ ಜೀವನದೃಷ್ಟಿಗೆ ಜನರ ಸಮ್ಮತಿಯನ್ನು ದೊರಕಿಸಿಕೊಳ್ಳಲು ಜನರ ಹೆಸರಿನಲ್ಲೇ ಜಾರಿಗೆ ತರುವ ನಿಯಮಾವಳಿಗಳ ಕೈಪಿಡಿ ಸಂವಿಧಾನ. ಆಧುನಿಕ ಕಾಲ ದಲ್ಲಿ ಇದಕ್ಕೆ ಧರ್ಮಗ್ರಂಥದ ಪಾವಿತ್ರ್ಯತೆಯೊಂದಿಗೆ ಶಕ್ತಿಕೇಂದ್ರದ ಅಧಿಕೃತತೆಯಿದೆ. ಇದಕ್ಕೆ ಅಧೀನವಾಗಿ ಕಾನೂನು ಕಟ್ಟಳೆಗಳು, ನ್ಯಾಯ – ನೀತಿಸಂಹಿತೆಗಳು ಇವೆ. ಇವು ಸಹಜವಾಗೇ ಆಳುವ ಜನರ ಹಿತಾಸಕ್ತಿಗಳನ್ನು ಕಾಪಾಡುವಂಥ ನ್ಯಾಯ, ಸುಖ, ನೆಮ್ಮದಿಗಳ ಪರಿಕಲ್ಪನೆ ಯನ್ನು, ಸರಿ – ತಪ್ಪುಗಳ ಮೌಲ್ಯಪದ್ಧತಿಯನ್ನು ಆಧರಿಸಿರುತ್ತವೆ. ಇವನ್ನು ಮುನ್ನೊತ್ತುವಂಥ ಧರ್ಮಗುರುಗಳು ಮಾತ್ರ ಇಲ್ಲಿ ಮಾನ್ಯವಾಗುತ್ತಾರೆ. ಈ ರಾಜಕೀಯವನ್ನು ಒಪ್ಪುವ, ಅಥವ ಅದರ ತಂಟೆಗೇ ಹೋಗದ ಧರ್ಮಗುರುಗಳು, ಸಂತರು, ಅನುಭಾವಿಗಳು ಪರಮ ಪೂಜ್ಯರಾಗುತ್ತಾರೆ. ಸೃಜನಶೀಲ ಜನರ ಆಲೋಚನೆಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೂಡ ಈ ರಾಜಕೀಯವನ್ನು ಪ್ರಶ್ನಿಸಬಾರದೆಂಬ ಉದ್ದೇಶದಿಂದಲೇ ಆಳುವ ಜನರ ಕೃಪಾ ಶ್ರಯವನ್ನು ಸೃಜನಶೀಲ ಜನರು ನಾನಾ ರೀತಿಯಲ್ಲಿ ಪಡೆದುಕೊಳ್ಳಲು ಪದವಿ, ಬಿರುದು, ಬಹುಮಾನಗಳ ಮೂಲಕ ಉತ್ತೇಜಿಸಲಾಗುತ್ತದೆ. ನಾವು ಬಳಸುವ ‘ವ್ಯವಸ್ಥೆ’ ಎಂಬ ಪದ ಇವೆಲ್ಲವನ್ನೂ ಒಳಗೊಂಡಿದೆ. ವ್ಯವಸ್ಥೆಯನ್ನು ಪ್ರಶ್ನಿಸುವ ವ್ಯಕ್ತಿ, ಯೋಚನೆ, ತತ್ವ ಧರ್ಮ ಗಳನ್ನು, ಅವು ಆಳುವ ಜನರ ಹಿತಾಸಕ್ತಿಗೆ ಉಂಟುಮಾಡಬಹುದಾದ ಹಾನಿಯ ತೀವ್ರತೆಯನ್ನ ನುಸರಿಸಿ ಹತ್ತಿಕ್ಕಲಾಗುತ್ತದೆ ಅಥವಾ ಗಡಿಪಾರು ಮಾಡಲಾಗುತ್ತದೆ. ಅವು ತೋರಿಸುವ ಅಸಮ್ಮತಿ ಕಾಲಾನಂತರದಲ್ಲಿ ಕ್ಷೇಮಕರವೆನಿಸುವ ಹಂತ ತಲುಪಿದಾಗ ಮಾನ್ಯತೆಯ ಮೂಲಕವೂ ಅವನ್ನು ವ್ಯವಸ್ಥೆಯ ಭಾಗವನ್ನಾಗಿ ಮಾಡಿಕೊಳ್ಳಬಹುದು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಬಿಂಬಿತವಾಗಿರುವ ಬೌದ್ಧ, ಜೈನ, ಶೈವ, ವೈಷ್ಣವ ಧರ್ಮಗಳ ರಾಜಾಶ್ರಯ ಸ್ಥಿತ್ಯಂತರಗಳು ಈ ಬಗೆಯವು. ವರ್ತಮಾನದ ಸಂದರ್ಭದಲ್ಲಿ ಕ್ರೈಸ್ತ, ವೈದಿಕ ಮತ್ತು ಇಸ್ಲಾಂ ಧರ್ಮಮೂಲದ ಶ್ರೇಷ್ಠತೆಯ ಪೈಪೋಟಿ, ಮತಾಂಧತೆ, ಕೋಮುವಾದ, ಸಾಹಿತ್ಯಗಳಲ್ಲಿ ಆಳುವ ಜನರಲ್ಲೆ ಇರುವ ವಿವಿಧ ಬಣಗಳ ಹಿತಾಸಕ್ತಿಗಳ ತಿಕ್ಕಾಟವನ್ನು ಗುರುತಿಸಬಹುದು. ಭಾರತದಲ್ಲಿ ಪ್ರಚಲಿತವಾಗಿರುವ ಇಂಗ್ಲಿಷ್, ಹಿಂದಿ, ತಮಿಳು, ಕನ್ನಡ ಭಾಷೆಗಳ ಶ್ರೇಷ್ಠತೆ – ಉಪಯುಕ್ತತೆ – ಪ್ರಾಚೀನತೆಗಳ ಪೈಪೋಟಿ ಸಾಮ್ರಾಜ್ಯಶಾಹಿಯ ಹಿನ್ನೆಲೆ ಯಲ್ಲಿ ತಾಳಿರುವ ಹಿತಾಸಕ್ತಿಗಳ ತಿಕ್ಕಾಟದ ಒಂದು ರೂಪ.

ವ್ಯಕ್ತಿಮಟ್ಟದ ಕೀಳರಿಮೆ, ಅಭದ್ರತೆಗಳು ಸಾಮಾಜಿಕವಾಗಿ ವ್ಯಕ್ತಿಗಳ ಆಸ್ತಿಯ ಪರಿಕಲ್ಪನೆ, ಸಂಪತ್ತಿನ ಕೇಂದ್ರೀಕರಣ, ಸ್ಪರ್ಧೆ, ಮೇಲಾಟ, ಮಹಾನತೆಗಳ ವ್ಯಕ್ತಿನಿಷ್ಠ ಮೌಲ್ಯಗಳ ಜೀವನಶೈಲಿಯ ರಾಜಕೀಯವನ್ನು ಸೃಷ್ಟಿಸಿ ಅಸಮಾನತೆ, ಶೋಷಣೆಗಳ ಬಂಡವಾಳಶಾಹೀ ವ್ಯವಸ್ಥೆಗೆ ಕಾರಣವಾಗಿರುವಂತೆ, ವ್ಯಕ್ತಿ ಮಟ್ಟದಲ್ಲಿ, ಪ್ರೀತಿ ಭದ್ರತೆಗಳನ್ನು ಮೈಗೂಡಿಸಿಕೊಂಡ ಮನಸ್ಸುಗಳು, ಸಾಮಾಜಿಕವಾಗಿ ಸಮುದಾಯ ಪ್ರೀತಿ, ಮಾನವೀಯತೆ, ಸಾಮಾಜಿಕ ಸಂಪತ್ತಿನ ಪರಿಕಲ್ಪನೆ, ವಿಕೇಂದ್ರೀಕರಣಗಳನ್ನು ಒಪ್ಪುವ, ಸ್ಪರ್ಧೆ ಮೇಲಾಟಗಳಲ್ಲಿ ಸಂತೋಷಿಸದ, ಶ್ರೇಷ್ಠತೆ – ಮಹಾನತೆಗಳ ಗೀಳಿಲ್ಲದ, ಸಮುದಾಯನಿಷ್ಠ ಮೌಲ್ಯಗಳ, ಸಮಾನತೆ ಶೋಷಣಾ ಮುಕ್ತ ಜೀವನಶೈಲಿಯ ಸಮಾಜವಾದಿ ರಾಜಕೀಯವನ್ನು ಪ್ರತಿಪಾದಿಸಿವೆ. ಇವೇ ಸಾಹಿತ್ಯ – ಸಂಸ್ಕೃತಿಗಳಲ್ಲೂ ಪ್ರತಿಫಲಿತವಾಗುತ್ತವೆ.

ಒಬ್ಬರನೊಬ್ಬರು, ನೇರವಾಗಿ ಕೊಂದು ತಿನ್ನುತ್ತಿದ್ದ ಕಾಲದಿಂದ ಬಹುದೂರ ಸಾಗಿ ಬಂದಿರುವ ಮಾನವ ಸಂಸ್ಕೃತಿಯ ಚರಿತ್ರೆಯಲ್ಲಿ ಆಹಾರ ಮತ್ತು ಭದ್ರತೆಯ ಪಾತ್ರ ನಿರ್ಣಾಯಕವಾದದ್ದು. ಇದನ್ನು ನೇಗಿಲು – ಬಂದೂಕುಗಳ ವಿಕಾಸದಲ್ಲಿ ಸ್ಪಷ್ಟವಾಗಿ ಗುರುತಿಸ ಬಹುದು. ಚೂಪುಗಲ್ಲು – ಬಾಣ, ಚರಿತ್ರೆಪೂರ್ವ ಕಾಲದ ಆಹಾರ ಮತ್ತು ಭದ್ರತೆಯ ಸಂಯುಕ್ತ ಸಾಧನ – ಸಂಕೇತಗಳು. ಉದಾಹರಣೆಗೆ ಕಲ್ಲಿನ ಚೂಪು ಬೇಟೆಯಲ್ಲಿ, ಏಕಕಾಲಕ್ಕೆ ಆಹಾರ ಸಂಪಾದನೆಗೆ ಹಾಗೂ ಭದ್ರತೆಗೆ, ಅಂದರೆ ರಕ್ಷಣೆ ಅಥವಾ ಆಕ್ರಮಣಕ್ಕೆ ಸಹಾಯಕವಾಗುತ್ತಿತ್ತು. ಕೋಲಿನ ಚೂಪು ಬೇಟೆಯಲ್ಲಲ್ಲದೆ, ಕೃಷಿಯಲ್ಲಿ ಬೀಜಬಿತ್ತನೆಗೆ ಬಳಕೆಯಾಗುತ್ತಿತ್ತು. ಇದಕ್ಕೆ ಬೆಂಕಿಯ ಸೇರ್ಪಡೆ ಮನುಷ್ಯ ಸಂಸ್ಕೃತಿಯಲ್ಲಿ ಮತ್ತೊಂದು ನಿರ್ಣಾಯಕ ಅಂಶ. ಕುಲುಮೆಯ ಬೆಂಕಿ ಆಯುಧವನ್ನು ರೂಪಿಸಿದಂತೆ ಆಹಾರದ ಸಂಸ್ಕರಣೆಗೂ ಸಹಾಯಕ ವಾಗಿದೆ. ಆದಿಮಾನವರ ರಕ್ಷಣೆ, ಆಕ್ರಮಣಗಳಲ್ಲು ಬೆಂಕಿ ನೇರವಾಗಿ ಬಳಕೆಯಾಗಿದೆ. ಯಂತ್ರ ನಾಗರಿಕತೆಯಲ್ಲೂ ಬೆಂಕಿಯ ಪಾತ್ರ ನಿರ್ಣಾಯಕವಾದದ್ದು. ಆಧುನಿಕ ಯುಗದಲ್ಲಿ ಬಂದೂಕಿನಿಂದ ಹಿಡಿದು ಬಾಂಬಿನತನಕ ಬೆಂಕಿ ಈಗಲೂ ಬಳಕೆಯಾಗುತ್ತಲೇ ಇದೆ.

ಚರಿತ್ರೆಪೂರ್ವ ಕಾಲದಲ್ಲಿ ಆಹಾರ ಮತ್ತು ಭದ್ರತೆಗಳ ಸಾಧನಗಳು ಸಮುದಾಯದ ನಿಯಂತ್ರಣದಲ್ಲಿದ್ದು, ಕಾಲಕ್ರಮೇಣ ಆಳುವ ಜನರ ಹಿಡಿತಕ್ಕೆ ಸಿಕ್ಕಿದವು. ಸಾಧಿಸುವುದೆಂಬ ಸತ್ಯ ರಾಜಕೀಯದ ಮೂಲಮಾತೃಕೆಯಲ್ಲಿ ಸೇರಿಬಿಟ್ಟಿದೆ.

ಸಂಪತ್ತು ಮತ್ತು ಆಸ್ತಿಯ ಪರಿಕಲ್ಪನೆಗಳೂ ಸಹ ಆಹಾರ ಮತ್ತು ಭದ್ರತೆಯ ಮೂಲ ಗಳಿಂದಲೆ ಹುಟ್ಟಿ ವಿಕಾಸಗೊಂಡಿವೆ. ಬೇಟೆಯ ಸಾಧನಗಳು, ಪಶುಗಳು, ಆಹಾರ, ಭೂಮಿ, ಗುಲಾಮರು, ಹೆಂಗಸರು – ಮಕ್ಕಳು ಲೋಹಗಳು, ಯಂತ್ರಗಳು, ನೆಲ, ನೀರು, ಗಾಳಿ ಆಕಾಶ ಗಳು, ಕೊನೆಗೆ ಇವೆಲ್ಲಕ್ಕೂ ಸಂಬಂಧಿಸಿದ, ಎಲ್ಲಾ ಬಗೆಯ ಕೌಶಲ – ಮಾಹಿತಿಗಳು ಮನುಷ್ಯ ಜೀವನದಲ್ಲಿ ಹೊಂದಬಹುದಾದ, ಆಳುವವರು ನಿಯಂತ್ರಿಸಬಹುದಾದ ಆಸ್ತಿ – ಸಂಪತ್ತುಗಳಾಗಿ ಪರಿಗಣಿತವಾಗಿವೆ. ಆದರೆ ಈ ಎಲ್ಲ ಬಗೆಯ ಸಂಪತ್ತಿನ ಸೃಷ್ಟಿಗೆ ಅತ್ಯಗತ್ಯವಾಗಿದ್ದು, ಅಗೋಚರ ರೂಪದಲ್ಲಿರುವ ಮನುಷ್ಯನ ಶ್ರಮಶಕ್ತಿ ಮಾತ್ರ ಚರಿತ್ರೆಯಲ್ಲೆಲ್ಲೂ ಸಂಪತ್ತಿನ ರೂಪವೆಂದು ಪರಿಗಣಿತವಾಗಿಲ್ಲ. ಬೌದ್ದಿಕ ಶಕ್ತಿ ಮತ್ತು ಸೃಜನಾತ್ಮಕ ಶಕ್ತಿಗಳಿಂದ ಮಾಡುವ ಸಾಧನೆಗಳನ್ನು ಸಮುದಾಯದ ಸಾಧನೆಗಳೆಂದು ಪರಿಗಣಿಸದೆ, ಅವನ್ನು ಸಮುದಾಯದಿಂದ ಪ್ರತ್ಯೇಕಿಸಿ ವ್ಯಕ್ತಿಗತ ಸಾಧನೆಗಳೆಂದು ಗುರುತಿಸಿ ಗೌರವಿಸುವ ಪರಿಪಾಠ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮೊದಲಿಂದಲೂ ಇದೆ. ಇದರಿಂದಾಗಿ ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯವೇ ಮೊದಲಾದ ಎಲ್ಲ ಸೃಜನಾತ್ಮಕ ಕ್ಷೇತ್ರಗಳಲ್ಲಿ ಪ್ರತಿಭಾವಂತರಿಂದ ಆವಿಷ್ಕಾರಗೊಳ್ಳುವ ಎಲ್ಲವೂ ಸಮುದಾಯದ ಆಸ್ತಿಯಾಗದೆ ಪುರಸ್ಕಾರ – ಕೃಪಾಶ್ರಯಗಳ ಮೂಲಕ ಆಳುವ ಜನರ ನಿಯಂತ್ರಣಕ್ಕೆ ಒಳಪಡುತ್ತದೆ. ಪ್ರತಿಭಾವಂತರಿಗೆ ಕೃಪಾಧನ ಮತ್ತು ಸಹಾಯಧನವನ್ನು ಕೊಡುವ ಉದ್ದೇಶವೇ ಅವರ ಸಾಧನೆಗಳನ್ನು ಆಳುವ ಜನರ ಆಸ್ತಿಯೆಂದು ಬಿಂಬಿಸಿ ನಿಯಂತ್ರಿಸುವುದು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಪ್ರತಿಭೆ ಯಾವುದೇ ಕ್ಷೇತ್ರಕ್ಕೆ ಸೇರಿದ್ದರೂ ಅದರ ಮೌಲ್ಯನಿಷ್ಕರ್ಷೆ ಸಮುದಾಯದ ಸಾರ್ಥಕತೆಯಲ್ಲಿ ಬಿಂಬಿತವಾಗದೆ ಹಣ, ಆಸ್ತಿ, ಸಂಪತ್ತುಗಳ ಪರಿಮಾಣಗಳಲ್ಲೇ ಇರುತ್ತದೆ. ಶ್ರಮಶಕ್ತಿಯಾಗಲಿ, ಪ್ರತಿಭೆಯಾಗಲಿ ಒಂದು ಸಲ ಹಣದ ರೂಪವನ್ನು ತಾಳಿತೆಂದರೆ ಅದು ಶ್ರಮಿಕ ಅಥವಾ ಪ್ರತಿಭಾವಂತರಿಂದ ಪ್ರತ್ಯೇಕ ಗೊಂಡು ಹಣವುಳ್ಳ ಯಾರ ಆಸ್ತಿ ಬೇಕಾದರೂ ಆಗಬಹುದು. ಹೀಗೆ ಶ್ರಮಶಕ್ತಿ – ಪ್ರತಿಭೆಗಳು ಸರಕುಗಳಾಗಿ ಹಣದ ಮಾಧ್ಯಮದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಹರಿಯಬಹುದು. ಯಾರ ಕೈ ಬೇಕಾದರೂ ಸೇರಿ ಆಸ್ತಿಯಾಗಿ ಸಮುದಾಯದ ಬಳಕೆಗೆ ಸಿಗದಂತೆ ಘನೀಕರಿಸ ಬಹುದು. ಆದ್ದರಿಂದ ಶ್ರಮಶಕ್ತಿಯಿಂದ ಸಂಪತ್ತನ್ನು ಉತ್ಪಾದಿಸುವುದಕ್ಕಿಂತ ಹೇಗಾದರೂ ಸರಿ ಶ್ರಮದ ಸಂಕೇತವಾದ ಹಣವನ್ನು ಸಂಪಾದಿಸಿಬಿಟ್ಟರೆ ಆಹಾರ – ಭದ್ರತೆಗಳನ್ನು ಸಂಪಾದಿಸಿ ದಂತೆ ಆಗುತ್ತದೆ ಎಂಬ ಜೀವನದೃಷ್ಟಿ ಊಳಿಗಮಾನ್ಯ ಜೀವನಕ್ರಮದಲ್ಲಿ ಬಲಗೊಂಡು, ಬಂಡವಾಳಶಾಹಿ – ಸಾಮ್ರಾಜ್ಯಶಾಹಿ ಪದ್ಧತಿಗಳಲ್ಲಿ ಅತ್ಯಂತ ವ್ಯಾಪಕವಾದ ಮನ್ನಣೆ ಪಡೆದಿದೆ.

‘ಧರ್ಮಾಮೃತ’ದ ಮುನ್ನೆಲೆಯಲ್ಲಿರುವ ರಾಜ, ವರ್ತಕ, ಕಳ್ಳ ಈ ಮೂವರೂ ಸಂಪತ್ತಿನ ಉತ್ಪಾದಕರಲ್ಲ, ನಿಯಂತ್ರಕರು ಮತ್ತು ಫಲಾನುಭವಿಗಳು. ಸೈನಿಕ, ಪುರೋಹಿತ, ವೇಶ್ಯೆ, ಭಿಕ್ಷುಕರು ಈ ಜೀವನದೃಷ್ಟಿಯಲ್ಲಿ ಅಧಿಕೃತತೆಯನ್ನು ಪಡೆದ ಅನುತ್ಪಾದಕ ಸಹಾಯಕರು. ಯುದ್ಧ, ದೇವರು, ನೀತಿ, ದಾನ – ಧರ್ಮಗಳು ಈ ವ್ಯವಸ್ಥೆಯ ಅವಿಭಾಜ್ಯ ಅಂಗಗಳು. ಇವೆಲ್ಲವನ್ನೂ ಬೆಸೆಯುವ ಅಧಿಕೃತಗೊಳಿಸುವ ಸಾಧನ ರಾಜಾಶ್ರಯ ಪಡೆದ ಧರ್ಮ ವೈದಿಕಧರ್ಮ ಪ್ರಧಾನವಾಗಿ ಕೃಷಿಕರ ಧರ್ಮವಾಗಿ ಆಹಾರ ಸಂಬಂಧೀ ಆಚರಣೆಗಳನ್ನು ಹೊಂದಿದ್ದರೆ, ಕ್ರೈಸ್ತಧರ್ಮ ಮತ್ತು ಜೈನಧರ್ಮಗಳು ವರ್ತಕರ ಧರ್ಮಗಳಾಗಿ ಹಣ ಸಂಬಂಧಿ ಆಚರಣೆಗಳಲ್ಲಿ ನೆಲೆಗೊಂಡಿವೆ.

ಹಣ, ಅತ್ಯಂತ ಹೆಚ್ಚಿನ ಪರಿವರ್ತನಶೀಲತೆಯನ್ನು ಪಡೆದಿರುವ, ಶಕ್ತಿಶಾಲೀ ಕೇಂದ್ರೀಕರಣ ಸಾಧನವಾಗಿ ಬಳಕೆಯಾಗುತ್ತಿರುವ ಮಾಯಾವಿ ಸರಕು. ಹಿಂದೂಧರ್ಮದಲ್ಲಿ, ಹಣದ ಅಧಿದೇವತೆಯನ್ನು ಅತ್ಯಂತ ಚಂಚಲೆಯೆಂದು ಬಣ್ಣಿಸಲಾಗಿದೆ. ಹಣದ ಸಂಕೇತವಾಗಿ ಬಳಕೆ ಯಾಗುವ ಚರ್ಮದ ತುಂಡು, ಲೋಹದ ಚೂರು, ಮುದ್ರಿತ ಬಣ್ಣದ ಕಾಗದಗಳು ತಮ್ಮಷ್ಟಕ್ಕೆ ಹಣವಲ್ಲ. ಆಳುವ ಜನ, ಆಹಾರ ಮತ್ತು ಬಂದೂಕುಗಳನ್ನು, ಒಟ್ಟಿನಲ್ಲಿ ಶ್ರಮಶಕ್ತಿಯನ್ನು, ಕೇಂದ್ರೀಕೃತ ನಿಯಂತ್ರಣಕ್ಕೆ ಒಳಪಡಿಸಲು ಮೌಲ್ಯವನ್ನು ಈ ವಸ್ತುಗಳಿಗೆ ಅಧಿಕೃತವಾಗಿ ಆರೋಪಿಸಿದಾಗ ಮಾತ್ರ ಅವು ಹಣವೆಂದು ಜನರಲ್ಲಿ ಚಲಾವಣೆಯಾಗುತ್ತವೆ. ಆಹಾರ ಮತ್ತು ಭದ್ರತೆಯ ನಿಯಂತ್ರಣದ ಮೂಲಕ, ಅಂದರೆ ರಾಜಕೀಯವಾಗಿ, ಆಳುವ ಜನರ ಕೇಂದ್ರೀಕೃತ ನಿಯಂತ್ರಣಕ್ಕೆ ಒಳಪಡುವ ಜನಸಮುದಾಯ ಈ ಹಣವನ್ನು ತಿರಸ್ಕರಿಸುವಂತಿಲ್ಲ ಅಥವಾ ತಾವೇ ಹಣವನ್ನು ಸೃಷ್ಟಿಸುವಂತಿಲ್ಲ. ಒಂದು ಸಲ ಸರಕಾಗಿ ಪರಿವರ್ತಿತವಾದ ಮೇಲೆ ಶ್ರಮಶಕ್ತಿ ಅಥವಾ ಪ್ರತಿಭೆಯ ಫಲಗಳು ಅವನ್ನು ಸೃಷ್ಟಿಸಿದವರಿಗೇ ಬೇಕೆಂದರೆ ಮತ್ತೆ ಹಣಕೊಟ್ಟು ಪಡೆಯಬೇಕಾಗುತ್ತದೆ. ಇಂಥ ವ್ಯವಸ್ಥೆಯಲ್ಲಿ ಆಳುವ ಜನ ಮತ್ತು ಅವರನ್ನು ಆಶ್ರಯಿಸಿ ಬದುಕುವವರಿಗೆ, ತಮ್ಮ ಬದುಕಿನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು, ಅಂದರೆ ಆಹಾರ ಮತ್ತು ಭದ್ರತೆಗಳನ್ನು ಪಡೆಯಲು ಶ್ರಮಪಡದೆ, ಯಾವುದೇ ಬಗೆಯ ಉತ್ಪಾದನಾ ಕಾರ್ಯದಲ್ಲಿ ಶ್ರಮ – ಪ್ರತಿಭೆಗಳನ್ನು ತೊಡಗಿಸದೆಯೂ, ಶ್ರಮಿಕರ ಜೀವನಕ್ಕಿಂತ ಅನೇಕಪಟ್ಟು ಉತ್ತಮವಾದ ಜೀವನ ನಡೆಸುವುದು ಹಣದಿಂದಾಗಿ ಸಾಧ್ಯ. ‘ಧರ್ಮಾಮೃತ’ದ ಜಿನಭಕ್ತವರ್ತಕರೆಲ್ಲ ಕುಬೇರನ ಸಂಪತ್ತುನ್ನು ನಾಚಿಸುವಷ್ಟು ಶ್ರೀಮಂತರಾಗಿದ್ದು, ಸುಂದರ ಪತ್ನಿಯರೊಂದಿಗೆ ಕಳವೆಯ ಅಕ್ಕಿ, ಬೇಳೆಯ ತೊವ್ವೆ, ತಿಳಿದುಪ್ಪಗಳನ್ನು ತಿನ್ನುತ್ತಾ ವಿನೋದದಿಂದ ಕಾಲ ಕಳೆಯುವವರು.

ಬಂಡವಾಳಶಾಹಿ ವ್ಯವಸ್ಥೆ ವಿಕಾಸಗೊಂಡಿದ್ದೆ ಮೂಲತಹ ವ್ಯಾಪಾರ ಮೂಲದ ವ್ಯವಸ್ಥೆಯಾಗಿ. ಇದರಲ್ಲಿ ಉದ್ಯಮಿಗಳು ಸ್ವತಃ ತಾವೇ ಶ್ರಮಶಕ್ತಿಯನ್ನು ಬಳಸದೆ, ಇತರರ ಶ್ರಮ ಶಕ್ತಿಯನ್ನು ಉತ್ಪಾದನೆಯಲ್ಲಿ ತೊಡಗಿಸಿ ಸರಕುಗಳನ್ನು ತಯಾರಿಸುತ್ತಾರೆ. ವರ್ತಕರು ಸರಕನ್ನು ಹಣವನ್ನಾಗಿ, ಹಣವನ್ನು ಸರಕನ್ನಾಗಿ ನಿರಂತರವಾಗಿ ಪರಿವರ್ತಿಸುತ್ತಾ ಉತ್ಪಾದನೆ ಮತ್ತು ಬೇಡಿಕೆಗಳ ನಡುವಿನ ದಾಹಗಳನ್ನು ಕುಶಲತೆಯಿಂದ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಆಗಾಧ ಪ್ರಮಾಣದ ಆಸ್ತಿ – ಸಂಪತ್ತುಗಳ ಒಡೆಯರಾಗುತ್ತಾರೆ. ವ್ಯಾಪಾರವೆಂದರೆ ಇದೇ ಸರಕುಗಳ ಸಾಗಾಣಿಕೆ ಮತ್ತು ಹಂಚಿಕೆಗಳು ವ್ಯಾಪಾರದ ಒಂದು ಅಂಗವೇ ಹೊರತು ಅದೇ ವ್ಯಾಪಾರವಲ್ಲ. ಉದ್ಯಮಿ ಶ್ರಮದ ನ್ಯಾಯವಾದ ಫಲವನ್ನು ಶ್ರಮಿಕರಿಗೆ ನಿರಾಕರಿಸಿ ಕಾನೂನು ಬದ್ಧ ಹಗಲು ದರೋಡೆಯಲ್ಲಿ ಪಾಲು ಪಡೆಯುವುದಲ್ಲದೆ ಕಾಲ – ದೇಶ – ಸಂದರ್ಭಗಳ ಲಾಭ ಪಡೆದು ಉದ್ಯಮಿ – ಗ್ರಾಹಕ ಇಬ್ಬರನ್ನೂ ವಂಚಿಸುತ್ತಾನೆ. ಆದ್ದರಿಂದಲೇ ಲೋಕರೂಢಿ ಯಲ್ಲಿ ವ್ಯಾಪಾರ ನಯವಂಚನೆಗೆ ಸಂವಾದಿಯಾಗಿದೆ.

ವ್ಯಾಪಾರೋದ್ಯಮ ಶ್ರಮಫಲದ ಹಗಲು ದರೋಡೆ ನಯವಂಚನೆಗಳ ಆಧುನಿಕ ರೂಪ. ಆಳುವ ಜನ, ಉದ್ಯಮಿ, ವರ್ತಕ ಮತ್ತು ಕಳ್ಳರ ನಡುವಿನ ಸಮಾನ ಅಂಶವೂ ವಂಚನೆಯೇ ಆಗಿದೆ. ಆಳುವವರಿಂದ ಅಧಿಕೃತತೆಯನ್ನು ಪಡೆಯದ ಕಳ್ಳತನ ಮಾತ್ರ ಶಿಕ್ಷಾರ್ಹ. ‘ಧರ್ಮಾಮೃತ’ದಲ್ಲಿ ದಯಾಮಿತ್ರ ಸೆಟ್ಟಿ, ಬ್ರಾಹ್ಮಣನಾದ ವಸುಭೂತಿಯನ್ನು, ಜಿನಭಕ್ತ ಸೆಟ್ಟಿ ಸೂರ್ಪನೆಂಬ ಕಳ್ಳನನ್ನು ಜೈನಧರ್ಮಾವಲಂಬಿಯಾಗಿ ಮಾಡಲು ನಯವಂಚನೆ – ಸುಳ್ಳುಗಳನ್ನು ಬಳಸಲು ಹಿಂಜರಿಯುವುದಿಲ್ಲ. ಜೈನಧರ್ಮವನ್ನು ಎತ್ತಿಹಿಡಿಯಲು ಸುಳ್ಳು – ವಂಚನೆಗಳನ್ನು ಬಳಸುವುದು ಧರ್ಮಸಮ್ಮತವೆ ಎಂಬುದು ಇದರ ಹಿಂದಿರುವ ದೃಷ್ಟಿಕೋನ. ಈ ಬಗೆಯ ದೃಷ್ಟಾಂತಗಳು ಹಿಂದೂ ಧರ್ಮದ ಪುರಾಣ – ಪುಣ್ಯಕಥೆಗಳಲ್ಲೂ ಹೇರಳವಾಗಿ ಸಿಗುತ್ತವೆ.

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಹಣವೇ ಕೇಂದ್ರ. ಕೇಂದ್ರೀಕೃತ ನಿಯಂತ್ರಣ ಮತ್ತು ನಿರ್ವಹಣಾ ಕೌಶಲಗಳ ಮೂಲಕ ಸಮುದಾಯದ ಶ್ರಮದ ಫಲವನ್ನು ತಮ್ಮದಾಗಿಸಿ ಕೊಳ್ಳುತ್ತಾ ಇಡೀ ಸಮಾಜವನ್ನೆ ತಮ್ಮ ಹಿಡಿತದಲ್ಲಿರಿಸಿಕೊಳ್ಳುವುದು ಆಳುವವರಿಗೆ ಸಾಧ್ಯವಾಗಿರುವುದು ಹಣದಿಂದಲೆ. ಹೀಗೆ, ಜನರಿಗೆ, ಆಳುವ ಜನರ ಜೀವನಶೈಲಿ, ಆಹಾರ – ವಿಹಾರ, ಮೌಲ್ಯಪದ್ಧತಿ, ತಾತ್ವಿಕತೆ, ಸೌಂದರ್ಯ, ಸುಖ, ನ್ಯಾಯ, ನೀತಿ ಧರ್ಮಗಳ ಪರಿಕಲ್ಪನೆಗಳೇ ಅಧಿಕೃತವೂ, ಸರ್ವೋತ್ಕೃಷ್ಟವೂ ಸಾರ್ವಕಾಲಿಕವೂ, ಆದ್ದರಿಂದ ಸ್ವೀಕಾರ ಯೋಗ್ಯ ಆದರ್ಶ ಜೀವನಕ್ರಮವೆಂಬ ಭ್ರಮೆ ಉಂಟಾಗುತ್ತದೆ. ಈ ಭ್ರಮೆಯನ್ನು ಜನಸಮು ದಾಯದಲ್ಲಿ ಆಳುವ ಜನರ ಪರವಾಗಿ ಬಿತ್ತಿ ಬೆಳೆಸುವಲ್ಲಿ ತತ್ವಜ್ಞಾನಿಗಳು, ಧರ್ಮಗುರುಗಳು ಮತ್ತು ಪುರೋಹಿತರು ವಹಿಸುವ ಪಾತ್ರ ಹಿರಿದು. ಬಂಡವಾಳಶಾಹಿ ಪದ್ಧತಿ ಮತ್ತು ಹಣದ ಬಗ್ಗೆ ಬಹುಜನರಿಗಿರುವ ಪ್ರೀತಿ – ಆಕರ್ಷಣೆಗೆ ಇದು ಪ್ರಮುಖ ಕಾರಣ.

ಇಹದ ಬದುಕಿನಲ್ಲಿ ಆಹಾರ ಮತ್ತು ಭದ್ರತೆಗಳು ಎಷ್ಟು ಮುಖ್ಯವೋ ಜನರಿಗೆ ಅಷ್ಟೇ ಮುಖ್ಯವಾದವುಗಳು ಸಾವಿನ ಭಯ, ಅಮರತ್ವದ ಆಸೆ, ಅಂದರೆ ಮರಣಾ ನಂತರವೂ ಯಾವ ರೂಪದಲ್ಲಾದರೂ ಇರಬೇಕೆಂಬ ಹಂಬಲ ಮತ್ತು ಸೃಷ್ಟಿಯ ಮೂಲದ ಬಗೆಗಿನ ಕುತೂಹಲ. ವಿವಿಧ ಬಗೆಯ ಸಾಮಾಜಿಕ ಹಿನ್ನೆಲೆಗಳಿಂದ ವಿವಿಧ ರೀತಿಯ ತತ್ವಧರ್ಮ, ದೇವರುಗಳು ಹುಟ್ಟಿಬರಲು ಈ ಭಯ ಆಸೆ ಕುತೂಹಲಗಳೇ ಕಾರಣ. ಪ್ರತಿ ಧರ್ಮವೂ ತನ್ನದೇ ಆದ ಜನಸಮುದಾಯದ ದೃಷ್ಟಿಕೋನ – ನಡವಳಿಕೆಗಳನ್ನು ಧರ್ಮ ನಿರ್ದೇಶಿಸುತ್ತದೆ. ದುಡಿಯುವ ಜನರಲ್ಲಿ ಬೇರುಗಳನ್ನು ಹೊಂದಿದ್ದರೂ, ತನ್ನ ಕೇಂದ್ರವನ್ನು ಮಾತ್ರ ಆಳುವ ಜನರ ಹಿತಾಸಕ್ತಿಯ ನೆಲೆಯಲ್ಲಿ ಹುದುಗಿಸಿರುತ್ತದೆ. ಜನಸಮುದಾಯದ ಪರವಾಗಿದ್ದಂತೆ ಕಂಡೂ ಆಳುವ ಜನರ ಹಿತಾಸಕ್ತಿಗಳನ್ನು ಕಾಪಾಡುವ ವಿಧಾನಗಳಲ್ಲೇ ಅನುಷ್ಠಾನಗೊಳ್ಳುತ್ತಿ ರುತ್ತದೆ. ದಿನನಿತ್ಯ ಜೀವನದ ಕಷ್ಟ ಕಾರ್ಪಣ್ಯಗಳಲ್ಲಿ ಬೆಂದು ಬಿಡುಗಡೆ ಬಯಸುವ ಶ್ರಮಿಕರಿಗೆ, ಆಲಸಿ ಜೀವನದ ಬರಡುತನಕ್ಕೆ ಬೇಸತ್ತ ಆಳುವ ವರ್ಗಕ್ಕೆ ಬೇರೆ ಬೇರೆ ರೀತಿಯ ಸಾಂತ್ವನವನ್ನು ಕೊಡುವಂಥ ದ್ವಿಮುಖ ಲೋಕದೃಷ್ಟಿಯನ್ನು ಧರ್ಮ ಮೈಗೂಡಿಸಿ ಕೊಂಡಿರುತ್ತದೆ.

ಉದಾಹರಣೆಗೆ ಬಡವರು ದೇವರಿಗೆ ಹತ್ತಿರವೆಂದೂ, ವ್ರತ, ಉಪವಾಸಗಳ, ತ್ಯಾಗಗಳ ಮಾರ್ಗದಿಂದ ದೇವರನ್ನು ಒಲಿಸಿಕೊಂಡು ಮುಕ್ತಿ ಪಡೆಯಬಹುದೆಂದು ಎಲ್ಲ ಧರ್ಮಗಳೂ ಹೇಳುತ್ತವೆ. ಉಳ್ಳವರಿಗೆ ಹಬ್ಬವನ್ನೂ ಇಲ್ಲದವರಿಗೆ ಉಪವಾಸವನ್ನೂ ಮುಕ್ತಿಯ ಮಾರ್ಗವಾಗಿ ಧರ್ಮಗಳು ಉಪದೇಶಿಸುತ್ತವೆ. ಮುಕ್ತಿಯೆಂದರೆ ಜೀವನದ ಕಷ್ಟ ಕಾರ್ಪಣ್ಯಗಳು ತರುವ ದುಃಖ ಮತ್ತು ಸಾವಿನ ಭಯಗಳಿಂದ ಬಿಡುಗಡೆ ಪಡೆಯುವುದು. ಇದರ ಸುಲಭೋ ಪಾಯವೆಂದರೆ ಮತ್ತೆ ಹುಟ್ಟದಿರುವುದು. ಈ ಜನ್ಮದ ಕಷ್ಟಗಳಿಗೆ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಗಳು ಕಾರಣ. ಈಗ ಪುಣ್ಯಕೆಲಸಗಳನ್ನು ಮಾಡಿದರೆ ಮುಂದಿನ ಜನ್ಮಗಳಲ್ಲಿ ಶ್ರೀಮಂತರಾಗಿ ಹುಟ್ಟಬಹುದು. ಪುಣ್ಯ ಕೆಲಸಗಳೆಂದರೆ ತನ್ನಲ್ಲಿರುವ ಒಳ್ಳೆಯದನ್ನು ದಾನ ಮಾಡುವುದು. ದಾನಕ್ಕೆ ಸತ್ಪಾತ್ರರು ಪುರೋಹಿತರು. ರಾಜಭಕ್ತಿ, ದೈವಭಕ್ತಿ, ವಿಧೇಯತೆ, ಇದ್ದುದರಲ್ಲಿ ತೃಪ್ತಿ ಪಡೆಯುವುದು ಮುಂತಾದ ನಡವಳಿಕೆಯುಳ್ಳವರು ಮಾತ್ರ ಸಜ್ಜನರು. ಪ್ರಶ್ನಿಸುವವರು, ಅವಿಧೇಯತೆ ತೋರುವವರು ದುರ್ಜನರು. ಇದು ಎಲ್ಲ ಧರ್ಮಗಳು, ವ್ರತ ಉಪವಾಸಗಳ ಬದಲು ಹಬ್ಬ, ವೈಭವಯುತ ಆಚರಣೆಗಳು ಮತ್ತು ದಾನಕ್ಕೆ ಮಹತ್ವ ಕೊಡುತ್ತವೆ. ಇರುವವರು ಇಲ್ಲದವರಿಗೆ ಕೊಡಬೇಕೆಂದು ಹೇಳುತ್ತವೆಯೇ ಹೊರತು ಬಡತನಕ್ಕೆ ಮೂಲಕಾರಣವಾದ ಶೋಷಣೆ ತಪ್ಪೆಂದು ಯಾವ ಧರ್ಮವೂ ಇದುವರೆಗೆ ಒಪ್ಪಿಕೊಂಡಿಲ್ಲ. ತಾತ್ವಿಕವಾಗಿ ಸರಳತೆಯನ್ನು ಪ್ರತಿಪಾದಿಸಿದರೂ ಆಚರಣೆಯಲ್ಲಿ ಆಳುವ ಜನರ ವೈಭವ – ಅಧಿಕಾರಗಳ ಸಂಕೇತಗಳಾದ ಚಿನ್ನ, ಬೆಳ್ಳಿ, ಮುತ್ತು, ರತ್ನ, ವಜ್ರ ವೈಢೂರ್ಯಗಳಿಂದ ಕೂಡಿದ ಕಿರೀಟ, ಸಿಂಹಾಸನ, ದಂಡಗಳನ್ನು ಎಗ್ಗಿಲ್ಲದೆ ಬಳಸುತ್ತವೆ. ಅನ್ನ ಪಾನಾದಿಗಳನ್ನು ಬಡವರಿಗೆ, ಚಿನ್ನ ಬೆಳ್ಳಿ, ಪಶುಗಳನ್ನು ಪುರೋಹಿತರಿಗೆ, ದೇವರು – ಧರ್ಮದ ಹೆಸರಿನಲ್ಲಿ ದಾನ ಮಾಡುವಂತೆ ಶ್ರೀಮಂತರನ್ನು ಪ್ರೋತ್ಸಾಹಿಸುತ್ತದೆ. ದಯೆ, ಅನುಕಂಪ, ಕರುಣೆಗಳು ಮಾನವೀಯ ಮೌಲ್ಯಗಳಾಗಿ ಬಿಂಬಿತವಾಗಲು, ಶೋಷಣೆ – ಬಡತನಗಳಿದ್ದರೆ ಮಾತ್ರ ಸಾಧ್ಯ ಎಂಬ ಸತ್ಯ ಧರ್ಮಗಳಿಗೆ ಗೋಚರಿಸುವುದಿಲ್ಲ. ‘ಅನ್ಯರ ಬಡವರ ಮಾಡದೆ ಕರುಣೆಗೆಲ್ಲಿದೆ ಜಾಗ’ ಎಂಬ ಬ್ಲೇಕ್ ಕವಿಯ ಮಾತು ಪುರೋಹಿತರಿಗೆ ತಾಗುವುದೇ ಇಲ್ಲ. ಶೋಷಣೆಯಿಲ್ಲದ ರಾಜಕೀಯದಲ್ಲಿ ದೀನ – ದಲಿತರ ಸೇವೆ ಮಾಡಿ ಮಹಾತ್ಮರಾಗುವ ಅವಕಾಶ ಯಾವ ಸಂತರಿಗೂ, ಸಮಾಜಸೇವಕರಿಗೂ ದೊರೆಯುವುದಿಲ್ಲ. ಬಂಡವಾಳಶಾಹಿ ವ್ಯವಸ್ಥೆ ಯಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಸಾಧು – ಸಂತರು ಇಲ್ಲದವರೊಂದಿಗೆ ತಮ್ಮನ್ನು ಗುರ್ತಿಸಿ ಕೊಂಡು ಬದುಕಲೆತ್ನಿಸಿದರೂ ಬಹುಬೇಗ ಆಳುವವರ ಹಿಡಿತಕ್ಕೆ ಒಳಪಟ್ಟು ಶ್ರೀಮಂತರ ಆಸ್ತಿಯಾಗುತ್ತಾರೆ.

ಚರಿತ್ರೆಯಲ್ಲಿ ಎಷ್ಟೆಷ್ಟೋ ಅನುಭಾವಿಗಳು ಅವರ ಕಾಲದ ಸಾಮಾಜಿಕ ಬದುಕಿನ ವೈರುಧ್ಯ ವಿರೋಧಾಭಾಸಗಳನ್ನು ದಿಟ್ಟವಾಗಿ ಬಯಲಿಗೆಳೆದು, ವಿಶ್ವಭ್ರಾತೃತ್ವ, ವಿಶ್ವಮಾನವತೆ, ವಿಶ್ವಪ್ರೇಮ ಮುಂತಾದ ಸಮಾಜವಾದಿ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಆದರೆ ಪುರೋಹಿತರು ಅಂಥವರ ಮಾನವೀಯತೆಯನ್ನು ಪುರಸ್ಕರಿಸದೆ, ಅವರ ವಿಲಕ್ಷಣತೆ – ತಿಕ್ಕಲುತನಗಳನ್ನು ಮಾತ್ರ ಧಾರ್ಮಿಕವಾಗಿ ಕೀರ್ತಿಸುವುದರಿಂದ ಜನಸಮುದಾಯಕ್ಕೆ ಅನುಭಾವಿಗಳ ಚಿಂತನೆಗಳು ದಕ್ಕುವುದಿಲ್ಲ. ಆಳುವ ಜನರ ರಾಜಕೀಯವನ್ನು ಬೌದ್ದಿಕವಾಗಿ ಮಾತ್ರ ಎದುರಿಸುವ ಚಿಂತಕರಿಗೆ, ಅನುಭಾವಿಗಳ ಚಿಂತನೆಗಳ ಚರ್ಚೆ – ಅಧ್ಯಯನ, ಕ್ಷೇಮಕರ ವಾದ ದಂಗೆಯಲ್ಲಿ ಭಾಗವಹಿಸಿದ ಹುಸಿತೃಪ್ತಿಯನ್ನು ನೀಡುತ್ತದೆ. ಕಾರ್ಯಕ್ಕೆಳಸದ, ಸಾಮಾಜಿಕವಾಗಿ ಅನುಷ್ಠಾನಗೊಳ್ಳದ ಯಾವುದೇ ಅಡ್ಡಚಿಂತನೆಯನ್ನು, ಆದು ಎಷ್ಟೇ ಕ್ರಾಂತಿಕಾರವಾಗಿದ್ದರೂ, ಆಳುವ ಜನ ಉಪೇಕ್ಷಿಸುತ್ತಾರೆ. ಕೆಲವು ಸಲ ವ್ಯವಸ್ಥೆಯ ಕ್ರೌರ್ಯ ವನ್ನು ಮರೆಸಲು ಅಂಥ ಚಿಂತನೆಗೆ ಕೃಪಾಶ್ರಯವನ್ನೂ ಕೊಡುತ್ತಾರೆ. ಆದರೆ ತನ್ನ ಅಧಿಕಾರ ಕೇಂದ್ರವನ್ನು ಪಲ್ಲಟಗೊಳಿಸಬಲ್ಲ ಧಾರ್ಮಿಕ ಚಿಂತನೆಗಳನ್ನು, ಸಂತರನ್ನು, ಚಿಂತಕರನ್ನು ಆಳುವ ನಾನಾ ಸಾಧನಗಳನ್ನು ಬಳಸಿ ನಿರ್ಮೂಲನ ಮಾಡುತ್ತಾರೆ.

ಯೂರೋಪಿನಲ್ಲಿ ಎಲ್ಲವನ್ನು ಸೀಳಿನೋಡುವ, ಪ್ರಶ್ನಿಸುವ ಸಾಕ್ರಿಟೀಸ್; ಕಡುಬಡವರ ಬದುಕುವ ‘ಹಕ್ಕು’ ಮತ್ತು ಗುಲಾಮರ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಏಸುಕ್ರಿಸ್ತರ ಚಿಂತನೆಗಳು ಆಯಾ ಕಾಲದ ಆಳುವ ಜನರ ಅಧಿಕಾರ ಕೇಂದ್ರಗಳನ್ನು ಪಲ್ಲಟಗೊಳಿಸಲು ತೊಡಗಿದ್ದರಿಂದಲೇ ಅವರು ಜೀವ ತೆರಬೇಕಾಯಿತು. ಭಾರತದಲ್ಲಿ, ಕೇಂದ್ರರಹಿತ ಆದರೆ ಸಂಘಶೀಲ – ವಿಕೇಂದ್ರಿತ ಜೀವನಕ್ರಮದ ಅನಾತ್ಮವಾದವನ್ನು ಮುಂದಿಟ್ಟ ಬೌದ್ಧಧರ್ಮ ನೆಲೆ ಕಳೆದುಕೊಂಡಿತು; ಸೃಷ್ಟಿಕರ್ತನ ಅಗತ್ಯವೇ ಇಲ್ಲದ, ಪುರೋಹಿತರ ಮಧ್ಯವರ್ತಿಕೆಗೆ ಜಾಗಕೊಡದ, ಕಾರ್ಯ – ಕಾರಣ ಆಧಾರಿತ, ಸ್ವಭಾವಜನ್ಮಗುಣಗಳಿಂದಾಗಿ ಪರಿವರ್ತನಶೀಲ ವಾದ, ಇಂದ್ರಿಯಗ್ರಾಹ್ಯ ಅನುಭವಕ್ಕೆ ದಕ್ಕುವ ಸೃಷ್ಟಿಯನ್ನು ಪ್ರತಿಪಾದಿಸಿದ ಲೋಕಾಯತ ಹೇಳಹೆಸರಿಲ್ಲದಂತಾಯಿತು. ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣರ ಸಾಮಾಜಿಕ ಕ್ಷೋಭೆಯಲ್ಲಿ ಆದ ಬಿಜ್ಜಳನ ಕೊಲೆ, ಬಸವಣ್ಣನ ಸಂದಿಗ್ಧ ರೀತಿಯ ಸಾವಿನ ಹಿಂದೆ, ಜಾತಿಶ್ರೇಣಿಯನ್ನು ಮುರಿದು ಧಾರ್ಮಿಕ ಸಮಾನತೆಯನ್ನು ಸಾಧಿಸುವ ಪ್ರಯತ್ನದ ಮೂಲಕ ಅಧಿಕಾರ ಕೇಂದ್ರವನ್ನು ಅಲ್ಲಾಡಿಸಿದ ಬಸವಣ್ಣರ ಮುಖೇನ ವ್ಯಕ್ತಗೊಂಡ ಜನಪರ ಚಿಂತನೆಗಳ ಕಾರಣವಿದೆ. ಆಳುವ ಜನರ ಶಕ್ತಿಕೇಂದ್ರವನ್ನು ಪಲ್ಲಟಗೊಳಿಸುವ ವಿಚಾರಧಾರೆ ಸಾಮಾಜಿಕ ವಾಗಿ ಅನುಷ್ಠಾನಗೊಂಡಾಗಲೆಲ್ಲಾ ರಾಜಕೀಯ ಕ್ಷೋಭೆ ಕಾಣಿಸಿಕೊಂಡಿದೆ. ವರ್ತಮಾನದ ಕನ್ನಡದ ಬುದ್ದಿಜೀವಿಗಳನೇಕರು ಮುಖಮಾಡಿರುವ ಅಲ್ಲಮಪ್ರಭುವಿನ ಅನುಭಾವಕ್ಕೆ ಸಾಮಾಜಿಕ – ರಾಜಕೀಯದ ಆಯಾಮವಿಲ್ಲ. ಧರ್ಮವನ್ನು ರಾಜಕೀಯದಿಂದ ದೂರವಿಡ ಬೇಕೆಂಬ ಕೂಗಿನ ಹಿಂದೆ ಧರ್ಮದ ರಾಜಕೀಯ ಆಯಾಮವನ್ನು ನೋಡಲಾಗದ ಅಜ್ಞಾನ ಅಥವಾ ಅದನ್ನು ಮರೆಮಾಚುವ ಹುನ್ನಾರವಿದೆ. ವ್ಯವಸ್ಥೆಯನ್ನು ಕಲಕದ ಧಾರ್ಮಿಕತೆ – ತಾತ್ವಿಕತೆಗಳು ಪರಿಣಾಮದಲ್ಲಿ ವ್ಯವಸ್ಥೆಯನ್ನು ಬಲಪಡಿಸುವ ಸಾಧನಗಳೆ ಆಗುತ್ತವೆ. ಅರಮನೆ – ಗುರುಮನೆಗಳ ಸಖ್ಯ ಅಧಿಕಾರ ಕೇಂದ್ರವನ್ನು ಬಲಪಡಿಸಲೇ ಹೊರತು ಜನಸಮು ದಾಯದ ಹಿತ ಕಾಯಲು ಅಲ್ಲ.

ಮಾನವ ಚರಿತ್ರೆಯಲ್ಲಿ ಇಲ್ಲಿಯವರೆಗೆ ಮೂರು ಬಗೆಯ ಸಂಸ್ಕೃತಿಗಳು ಜನರ ಜೀವನವನ್ನು ನಿಯಂತ್ರಿಸಿವೆ. ಆಹಾರ ಮೂಲದ ಕೃಷಿ ಸಂಸ್ಕೃತಿ, ಹಣಮೂಲದ ವ್ಯಾಪಾರೀ ಸಂಸ್ಕೃತಿ ಮತ್ತು ಅಧಿಕಾರ ಮೂಲದ ಸೈನಿಕ ಸಂಸ್ಕೃತಿ. ಕೃಷಿ ಸಂಸ್ಕೃತಿಯೇ ಎಲ್ಲ ಸಂಸ್ಕೃತಿ ಗಳಿಗೂ ಆಧಾರ. ಆದರೆ ಸೈನಿಕ ಸಂಸ್ಕೃತಿ ಮತ್ತು ವ್ಯಾಪಾರೀ ಸಂಸ್ಕೃತಿಗಳು ಬಿಡಿ ಬಿಡಿಯಾಗಿ ಅಥವಾ ಸಂಯುಕ್ತವಾಗಿ ಕೃಷಿ ಸಂಸ್ಕೃತಿಯನ್ನು ನಿಯಂತ್ರಿಸುತ್ತಾ ಬಂದಿರುವುದನ್ನು ಚರಿತ್ರೆ ಯುದ್ದಕ್ಕೂ ಕಾಣಬಹುದು. ಕೃಷಿ ಸಂಸ್ಕೃತಿ ಮೂಲತಃ ಉತ್ಪಾದನಾಶೀಲವಾಗಿದ್ದು, ರಕ್ಷಣಾ ತ್ಮಕವಾದದ್ದು. ಸೈನಿಕ ಸಂಸ್ಕೃತಿ ಯಾವ ರೀತಿಯಲ್ಲೂ ಉತ್ಪಾದನಾಶೀಲವಲ್ಲ. ಬದಲು ದಮನಕಾರಿ ಮತ್ತು ಆಕ್ರಮಣಕಾರಿಯಾದದ್ದು. ವ್ಯಾಪಾರೀ ಸಂಸ್ಕೃತಿ ಮಧ್ಯವರ್ತಿಯಾಗಿದ್ದು, ಈ ಎರಡೂ ಸಂಸ್ಕೃತಿಗಳ ಮೇಲೆ ಅವಲಂಬಿತವಾಗಿ ಎರಡರಿಂದಲೂ ಲಾಭ ಪಡೆಯುವ ಅನುತ್ಪಾದಕ ಸಂಸ್ಕೃತಿ. ಸೃಜನಶೀಲವಾಗಿದ್ದು, ಆಹಾರ ಮತ್ತು ಸಂಪತ್ತಿನ ಉತ್ಪಾದನಾಶೀಲ ವಾಗಿದ್ದು, ರಕ್ಷಣಾತ್ಮಕವಾದದ್ದು, ಸೈನಿಕ ಸಂಸ್ಕೃತಿ ಯಾವ ರೀತಿಯಲ್ಲೂ ಉತ್ಪಾದನಾಶೀಲ ವಲ್ಲ. ಬದಲು ದಮನಕಾರಿ ಮತ್ತು ಆಕ್ರಮಣಕಾರಿಯಾದದ್ದು. ವ್ಯಾಪಾರೀ ಸಂಸ್ಕೃತಿ ಮಧ್ಯವರ್ತಿಯಾಗಿದ್ದು, ಈ ಎರಡೂ ಸಂಸ್ಕೃತಿಗಳ ಮೇಲೆ ಅವಲಂಬಿತವಾಗಿ ಎರಡರಿಂದಲೂ ಲಾಭಪಡೆಯುವ ಅನುತ್ಪಾದಕ ಸಂಸ್ಕೃತಿ. ಸೃಜನಶೀಲವಾಗಿದ್ದು, ಆಹಾರ ಮತ್ತು ಸಂಪತ್ತಿನ ಉತ್ಪಾದನೆಗೆ ಸಹಾಯಕವಾಗಿ ಬದುಕುವ ಕುಶಲಕರ್ಮಿಗಳು, ತಂತ್ರಜ್ಞರು, ವಿಜ್ಞಾನಿಗಳನ್ನು ವ್ಯಾಪಾರೀ ಸಂಸ್ಕೃತಿ ಸೈನಿಕ ಸಂಸ್ಕೃತಿಗಳು ಸಂಯುಕ್ತವಾಗಿ ನಿಯಂತ್ರಿಸುತ್ತವೆ. ಬದುಕಿನ ಅಭದ್ರತೆ ಮತ್ತು ಸಾವಿನ ಭಯಗಳನ್ನು ನಿಭಾಯಿಸಲು ಸಹಾಯಕವಾಗುವ ಧರ್ಮದ ದಳ್ಳಾಳಿಗಳಾದ ಪುರೋಹಿತರೂ, ಸೈನಿಕ ಮತ್ತು ವ್ಯಾಪಾರಿಗಳಂತೆ ಅನುತ್ಪಾದಕರೆ. ಆದರೆ ಬದುಕಿನಲ್ಲಿ ಆಂತರಿಕ ನೆಮ್ಮದಿ ಅರ್ಥಪೂರ್ಣತೆಗಳು ಆಹಾರ ಭದ್ರತೆಗಳಷ್ಟೇ ಮುಖ್ಯವಾದ್ದ ರಿಂದ ಪುರೋಹಿತರಿಗೆ ಮೂರೂ ಸಂಸ್ಕೃತಿಗಳನ್ನು ಪ್ರಭಾವಿತಗೊಳಿಸುವ ಶಕ್ತಿ ಪ್ರಾಪ್ತವಾಗಿದೆ.

ಕೃಷಿಸಂಸ್ಕೃತಿ ಮೂಲದ ವೈದಿಕ ಧರ್ಮದ ಆಚರಣೆಗಳೆಲ್ಲ ಆಹಾರ ಸಮೃದ್ದಿಯನ್ನು ಆಧರಿಸಿವೆ. ಆಯಸ್ಸು, ಆರೋಗ್ಯ, ಪಶು ಮಳೆ ಬೆಳೆಗಳ ಸಮೃದ್ದಿಗಾಗಿ ಮತ್ತು ಶತ್ರುನಾಶಕ್ಕಾಗಿ ಬಲಿ ವಿಧಾನಗಳಾದ ಪೂಜೆ, ಯಜ್ಞ – ಯಾಗಾದಿಗಳನ್ನು ಮಾಡುವ ಸಾಮೂಹಿಕ ಕ್ರಿಯಾಚರಣೆ ಗಳ ಜೀವನ ಶೈಲಿಯನ್ನು ಅವು ಬಿಂಬಿಸುತ್ತವೆ.

ಸಮಾಜದೊಳಗಿದ್ದೂ ಅದರಿಂದ ಬೇರೆಯಾದ, ಸೃಷ್ಟಿಕರ್ತ ಅಥವಾ ಆತ್ಮಕೇಂದ್ರರಹಿತ ಉಪಸಮಾಜ (ಸಂಘ)ವನ್ನು ಸೃಷ್ಟಿಸಿಕೊಂಡು ಅತಿರೇಕಗಳು ಇಲ್ಲದ ಮಧ್ಯಮ ಮಾರ್ಗದಲ್ಲಿ ಪ್ರಾಣಿ ಹಿಂಸೆಯಿಲ್ಲದೆ ಬದುಕುವ ಜೀವನ ಶೈಲಿಯನ್ನು ಬೌದ್ಧಧರ್ಮ ಜನರಿಗೆ ಕೊಟ್ಟಿದೆ. ನಿರಂತರ ಚಲನಶೀಲತೆಯ ಈ ವಿಶ್ವದಲ್ಲಿ ಹುಟ್ಟು ಸಾವುಗಳು, ಬದುಕಿನ ಹಿಂಸೆ ನೋವುಗಳು ಅಪರಿಹಾರ್ಯವಾದ್ದರಿಂದ ಅವನ್ನು ಸಾಮಾಜಿಕವಾಗಿ ಬಗೆಹರಿಸಲಾಗುವುದಿಲ್ಲ. ವ್ಯಕ್ತಿ ಯಾಗಲಿ, ವಸ್ತುವಾಗಲಿ ಪ್ರತಿಯೊಂದು ತನ್ನಷ್ಟಕ್ಕೇ ವಿಶಿಷ್ಟವಾದ್ದರಿಂದ ಹೋಲಿಕೆಗೂ ಸಿಗುವುದಿಲ್ಲ. ಆದ್ದರಿಂದ ತಾರತಮ್ಯ ಅಸಮಾನತೆಯ ಪ್ರಶ್ನೆ ಏಳುವುದೇ ಇಲ್ಲ. ವ್ಯಕ್ತಿಮಟ್ಟದಲ್ಲಿ ಆಸೆಯನ್ನು ನಿಯಂತ್ರಿಸಿಕೊಂಡು ಸಮಚಿತ್ತದಿಂದ ಬದುಕುವುದು ಮಾತ್ರ ಸಂಗತ. ಉಳಿದ ಪ್ರಶ್ನೆಗಳು ಬದುಕಿಗೆ ಸಂಗತವಲ್ಲ ಎಂದು ಬೌದ್ಧಧರ್ಮ ಹೇಳುತ್ತದೆ. ಸಾವಿನ ಭಯವನ್ನು ನಿವಾರಿಸಬಲ್ಲ ಯಾವುದೇ ಭ್ರಮಾತ್ಮಕ ಉಪಾಯ ಸೂಚಿಸದ, ಕೇಂದ್ರ ರಹಿತ ಸರಳ ಜೀವನನಿಷ್ಠಮಾರ್ಗದ ಉಪಸಮಾಜಕ್ಕೆ ಶರಣಾಗಿ, ಹಿಂಸೆಯಿಲ್ಲದೆ ಬದುಕುವುದು ಕೃಷಿಸಂಸ್ಕೃತಿ ಅಥವಾ ಸೈನಿಕ ಸಂಸ್ಕೃತಿಗಳಲ್ಲಿ ಸಾಧ್ಯವಿಲ್ಲ. ಅಲ್ಲದೆ, ಭಿಕ್ಷುಗಳ ಸಂಘಜೀವನ ಮೂಲತಃ ಪರಾವಲಂಬಿ. ಆದ್ದರಿಂದಲೇ ಬೌದ್ಧಧರ್ಮ, ಬೌದ್ದಿಕ ವಲಯಗಳಲ್ಲಿ ಮಾತ್ರ ಗಟ್ಟಿಯಾದ ತಾತ್ವಿಕತೆಯಾಗುಳಿದು, ಜನಸಮುದಾಯದ ನಿತ್ಯಜೀವನದಲ್ಲಿ ಉಳಿದ ಧರ್ಮಗಳಂತೆ ವಿಧಿ ಪೂಜಾಚರಣೆಗಳ, ವ್ಯಕ್ತಿಪೂಜೆಯ ಧಾರ್ಮಿಕತೆಯಾಗಿ ಕೃಷಿಕರು ಮತ್ತು ವ್ಯಾಪಾರಿಗಳಲ್ಲಿ ನೆಲೆಗೊಂಡಿದೆ.

ತಾತ್ವಿಕವಾಗಿ ಎಲ್ಲರ ಸಮಾನತೆಯನ್ನು ಒಪ್ಪುವ ಬ್ರಾಹ್ಮಣಧರ್ಮ ಆಚರಣೆಯಲ್ಲಿ ಸಾಮಾಜಿಕ ದ್ವಂದ್ವಗಳನ್ನು ಎದುರಿಸದೆ, ಚಿಪ್ಪಿನೊಳಗೆ ಸೇರಿಕೊಂಡ, ಅಂತರ್ಮುಖಿಯಾದ, ಅಂದರೆ ಸ್ಪಷ್ಟವಾಗಿ ಸಮಾಜಮುಖಿಯಲ್ಲದ ಜೀವನದೃಷ್ಟಿಯನ್ನು ಪ್ರತಿಪಾದಿಸುತ್ತದೆ. ದುಃಖ – ದಾರಿದ್ರ್ಯಗಳ ಒಟ್ಟು ರೂಪವಾದ ಕೆಡುಕು ಸೃಷ್ಟಿಯ ಒಂದು ಭಾಗವಾಗಿದ್ದರಿಂದ ಅಪರಿಹಾರ್ಯ ಅದನ್ನು ನಿರ್ಮೂಲನ ಮಾಡಲಾಗುವುದಿಲ್ಲ. ಆದರೆ ದೂರವಿರಿಸಲು ಸಾಧ್ಯ. ಸಮಷ್ಟಿಯನ್ನು ಕೆಡುಕಿನ ವಿರುದ್ಧ ಸಜ್ಜುಗೊಳಿಸುವುದು ಅಸಾಧ್ಯ. ವ್ಯಕ್ತಿಮಟ್ಟದಲ್ಲೇ ದೃಷ್ಟಿಕೋನ ಪಲ್ಲಟದ ರಕ್ಷಾಕವಚವನ್ನು ನಿರ್ಮಿಸಿಕೊಂಡು ಕೆಡುಕು ತಾಗಿದರೂ ತಾಗಿಲ್ಲ ವೆಂಬಂತೆ ಸಮಚಿತ್ತದಿಂದ ಜೀವಿಸಬಹುದು. ಸಮಷ್ಟಿತತ್ವ ಮತ್ತು ವ್ಯಕ್ತಿತತ್ವಗಳು ಒಂದೇ ಆಗಿದ್ದು ಅದಕ್ಕೆ ನಾಶವೆಂಬುದಿಲ್ಲ. ಹುಟ್ಟು – ಸಾವುಗಳು ಸೃಷ್ಟಿಯ ಮೂಲದ್ರವ್ಯದ ರೂಪಾಂ ತರದ ಅವಸ್ಥೆಗಳು ಮಾತ್ರ. ಆದ್ದರಿಂದ ಸಾವೆಂಬುದಿಲ್ಲ. ಈ ತಾತ್ವಿಕ ಅಮರತ್ವವನ್ನು ಅಂತಸ್ಥವಾಗಿಸಿಕೊಂಡು ಕನಿಷ್ಟ ಅಗತ್ಯಗಳ ಸರಳ ನೆಮ್ಮದಿಯ ಬದುಕನ್ನು ಬದುಕುವುದೊಂದೇ ನಮಗಿರುವ ದಾರಿ ಎಂದು ಬ್ರಾಹ್ಮಣಧರ್ಮ ಹೇಳುತ್ತದೆ. ಇಲ್ಲಿ ಬಡತನ ಶಾಪವಾಗದೆ, ಶ್ರಮ, ಕ್ರೈಸ್ತಮತದಲ್ಲಾಗಿರುವಂತೆ ಶಿಕ್ಷೆಯೆನಿಸದೆ, ಕನಿಷ್ಠ ಅಗತ್ಯಗಳಲ್ಲಿ ಸಮಚಿತ್ತದಿಂದ ಬದುಕುವ ಜೀವನ ವಿಧಾನವಾಗುತ್ತದೆ. ಆದರೆ ಸಾಮಾಜಿಕ ನೆಲೆಯ ಬದಲಾವಣೆಗಾಗಿ ಪ್ರಯತ್ನಿಸುವವರನ್ನು ನಿಷ್ಕ್ರಿಯಗೊಳಿಸುವ ಗುಣ ಬೌದ್ಧಧರ್ಮ ಮತ್ತು ಬ್ರಾಹ್ಮಣ ಧರ್ಮಕ್ಕಿದೆ. ಜೀವನಶೈಲಿಯ ಬ್ರಾಹ್ಮಣೀಕರಣದಲ್ಲಿ, ನಿಷ್ಕ್ರಿಯತೆ, ಸೋಮಾರಿತನ, ನಿರ್ಭಾವಗಳು ಉನ್ನತ ಜೀವನ ಮೌಲ್ಯಗಳಾಗಿ ಸ್ವೀಕಾರಗೊಳ್ಳುವ ಅಪಾಯವಿದೆ.

ಸೈನಿಕ ವ್ಯವಸ್ಥೆಯಲ್ಲಿ ಕೃಷಿಕರು, ವ್ಯಾಪಾರಿಗಳು, ಮುಖ್ಯವಾಗಿ ಸೈನಿಕರು ಕ್ರಿಯಾವಿಮುಖ ರಾದರೆ ಇಡೀ ವ್ಯವಸ್ಥೆಯೇ ಕುಸಿದುಬೀಳುತ್ತದೆ. ಮಹಾಭಾರತದಲ್ಲಿ ಕೃಷ್ಣನ ಪಾತ್ರದ ಮೂಲಕ ವ್ಯಾಸ ಪ್ರತಿಪಾದಿಸುವ ಸಮಚಿತ್ತದ ಕ್ರಿಯಾಶೀಲತೆ ಬೌದ್ಧ ಮತ್ತು ಬ್ರಾಹ್ಮಣ ಧರ್ಮಗಳ ಆಚರಣೆಯಲ್ಲಿನ ನೇತ್ಯಾತ್ಮಕ ಅಂಶಗಳನ್ನು ನಿವಾರಿಸುವ ಪ್ರಯತ್ನವಾಗಿದೆ. ವರ್ಣವ್ಯವಸ್ಥೆ ದೈವನಿರ್ಮಿತವೆಂದೂ ಪ್ರತಿಯೊಬ್ಬರೂ ತಮ್ಮತಮ್ಮ ವರ್ಣಾನುಸಾರ ಕರ್ತವ್ಯದಲ್ಲಿ ಸಮಚಿತ್ತದಿಂದ ತೊಡಗುವುದೇ ಸರಿಯಾದ ಜೀವನ ಕ್ರಮವೆಂದೂ ಸಾರುವುದರ ಮೂಲಕ ಯುದ್ಧವನ್ನು ಸಮರ್ಥಿಸಿ ಸೈನಿಕ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ತಾತ್ವಿಕತೆ ಭಗವದ್ಗೀತೆಯಲ್ಲಿದೆ. ಜೈನಧರ್ಮ ಅಹಿಂಸೆಯನ್ನು ತನ್ನ ಜೀವನಕ್ರಮದ ಕೇಂದ್ರವನ್ನಾಗಿಸಿ ಕೊಂಡಿದೆ, ಆದರೆ ಹಿಂಸೆಯ ಇನ್ನೊಂದು ಅತಿರೇಕವಾದ ಸ್ವಹಿಂಸೆಯನ್ನು ವೈಭವೀಕರಿಸುತ್ತದೆ. ಉಳಿದ ಧರ್ಮಗಳಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಸ್ವಹಿಂಸೆ ಬಳಕೆಯಾದರೆ, ಜೈನಧರ್ಮದಲ್ಲಿ ಸ್ವಹಿಂಸೆಯೇ ವ್ಯಕ್ತಿಯ ಬಿಡುಗಡೆಯ ದಾರಿಯಾಗುತ್ತದೆ. ಹೊರಮುಖವಾಗಿ ವ್ಯಕ್ತವಾಗುವ ಹಿಂಸಾಪ್ರವೃತ್ತಿ, ಹಿಂಸಾನಂದ, ಇತರರ ಜೀವನಹರಣಕ್ಕೆ ದಾರಿ ಮಾಡಿಕೊಡುವಂತೆ, ಒಳಮುಖವಾಗಿ ವ್ಯಕ್ತಗೊಂಡಾಗ ಅದೇ, ದೇಹದಂಡನೆ, ಆತ್ಮಹಿಂಸೆ, ಆತ್ಮಹತ್ಯೆಗಳಾಗಿ ಪರಿಣಮಿಸುತ್ತದೆ. ಜೀವನದ ಕಷ್ಟ ಕಾರ್ಪಣ್ಯಗಳಿಂದ ಪಾರಾಗಲು, ಸಾವಿನ ಭಯವನ್ನೆ ದುರಿಸಲು ಪರಹಿಂಸೆಯನ್ನು ಬಳಸುವುದು ಹಿಂಸೆಯ ಹೊರ ವಿಧಾನವಾದರೆ, ಪರಹಿಂಸೆ ಬೇಡವೆಂದು ಹಿಂಸೆಯನ್ನೇ ಅಪ್ಪಿಕೊಂಡು ನರಳಿ ಸಂತೋಷಿಸುವುದು ಸ್ವಹಿಂಸೆಯ ಪ್ರತಿವಿಧಾನ. ‘ಧರ್ಮಾಮೃತ’ದ ಕೇಂದ್ರ ಪಾತ್ರಗಳೆಲ್ಲಾ ಆತ್ಮಹಿಂಸೆಯನ್ನು ಆರಾಧಿಸುವವರೆ.

ಸಂಪತ್ತಿನ ಕ್ರೋಡೀಕೃತ ಸ್ವಾಮ್ಯ, ಇತರರನ್ನು ಆಳುವ ಶಕ್ತಿಕೇಂದ್ರವಾಗಿ ಮಾರ್ಪಡುವಂತೆ ಅದರ ತ್ಯಾಗವೂ ಇತರರನ್ನು ತನ್ನ ಆಳ್ವಿಕೆಗೆ ಒಳಪಡಿಸುವ ಶಕ್ತಿಯನ್ನು ಪಡೆದಿದೆ. ಆದ್ದ ರಿಂದಲೇ ಸ್ವಯಂಪ್ರೇರಿತರಾಗಿ ಬಡತನವನ್ನು ಸ್ವೀಕರಿಸುವ ಶ್ರೀಮಂತರಿಗಿರುವ ರಾಜಕೀಯ ಶಕ್ತಿ, ಸರಳಜೀವನವನ್ನು ನಡೆಸುವ, ಬಡವರಿಗೆ ಇರುವುದಿಲ್ಲ. ಬುದ್ಧ, ಮಹಾವೀರ, ಬಾಹುಬಲಿ, ಬಸವಣ್ಣ, ನಮ್ಮ ಕಾಲದ ಗಾಂಧೀಜಿ ಮೊದಲಾದವರು ತಮ್ಮ ಜ್ಞಾನದ ಬಲದೊಂದಿಗೆ, ಸಂಪತ್ತಿನ ತ್ಯಾಗಬಲವನ್ನೂ ಸೇರಿಸಿದ್ದರಿಂದ ಮಹಾತ್ಮರಾದರು. ಎಷ್ಟೇ ಜ್ಞಾನಿಗಳಾದರೂ ಬಡವರಾಗಿದ್ದರಿಂದ ಶಕ್ತಿಕೇಂದ್ರಗಳಾಗದ ಬಂಡಿ ರೈಕ್ವ, ಸಾಕ್ರಿಟಿಸ್ ರಂಥ ಜನ ಎಲ್ಲ ಕಾಲದಲ್ಲೂ ಇದ್ದರು.

ತಮ್ಮ ಸಮುದಾಯಪರ ದೃಷ್ಟಿಕೋನದಿಂದಾಗಿ ಆಳುವವರ ಆಗ್ರಹಕ್ಕೆ ತುತ್ತಾಗಿ ಪ್ರಾಣತೆತ್ತ ಜ್ಞಾನಿ – ವಿಜ್ಞಾನಿಗಳೂ, ಸಮುದಾಯದ ಒಳಿತಿಗಾಗಿ ಪ್ರಾಣಕೊಡುವ ಸಾಮಾನ್ಯರೂ, ತಮ್ಮ ಪ್ರಾಣತ್ಯಾಗದಿಂದಾಗಿ ಕಾಲಕ್ರಮೇಣ ಪೂಜ್ಯರಾಗುತ್ತಾರೆ. ಪ್ರಾರಂಭದ ದಿನಗಳಲ್ಲಿ ದೀನ ದಲಿತರ ಬಡದೇವರಾಗಿದ್ದು, ಕ್ರಮೇಣ ಆಳುವ ಜನರ ಶರೀರ ಶ್ರೀಮಂತದೇವರಾಗಿ ಮಾರ್ಪಟ್ಟ ಏಸುಕ್ರಿಸ್ತ ಇದಕ್ಕೆ ಒಳ್ಳೆಯ ಉದಾಹರಣೆ. ಯಜಮಾನನಿಗಾಗಿ ಹೋರಾಡಿ ಮಡಿದ ಬಂಟರು, ಗಂಡನ ಶವದೊಂದಿಗೆ ಚಿತೆಯೇರಿದ ಹೆಂಗಸರು ವೀರದೇವರುಗಳಾಗಿ,  ಮಹಾಸತಿಯರಾಗಿ ಪೂಜೆಗೊಳ್ಳುವ ಉದಾಹರಣೆಗಳು ಕನ್ನಡ ಜಾನಪದದಲ್ಲಿ ಸಾಕಷ್ಟು ಸಿಗುತ್ತವೆ. ತಮ್ಮ ಲೌಕಿಕ ಕಾಮನೆಗಳನ್ನು ಪೂರೈಸಿಕೊಳ್ಳಲು ಜನಸಮುದಾಯ ಆಶ್ರಯಿಸುವ ಕ್ಷುದ್ರ ದೇವರುಗಳು, ರಾಜಕೀಯ ಕಾರಣಗಳಿಗಾಗಿ ಆಳುವ ಜನರ ಕೈಲಿ ಶಿಷ್ಟರೂಪವನ್ನು ಪಡೆದು, ಭಕ್ತಿ – ಮುಕ್ತಿ ದಯಪಾಲಿಸಬಲ್ಲ ಮಹಾಮಹಿಮ ದೇವರುಗಳಾಗಿ, ಪುರಾಣ ಮಹಾ ಕಾವ್ಯಗಳ ಕೇಂದ್ರ ಪಾತ್ರಗಳಾಗಿದ್ದಾರೆ. ಜೀವನದ ಅಭದ್ರತೆ ಮತ್ತು ದಿನನಿತ್ಯದ ಕಷ್ಟಕಾರ್ಪಣ್ಯ ಗಳಿಂದ ನರಳುವ ಬಡಜನರಿಗೆ ಭ್ರಮಾತ್ಮಕ ಸಾಂತ್ವನ ಕೊಡುವ ಅವತಾರಿ – ಪ್ರವಾದಿಗಳಾಗಿ ದ್ದಾರೆ. ತೀರ್ಥಂಕರರು ಈ ಬಗೆಯ ದೇವರುಗಳೆ.