ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಪ್ರತಿ ವರ್ಷ ‘ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ’ ಎಂಬ ವಿಚಾರ ಸಂಕಿರಣವನ್ನು ನಡೆಸುತ್ತ ಬರುತ್ತಿದೆ. ಇದರಲ್ಲಿ ಮಂಡಿತವಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ತರಲಾಗುತ್ತಿದೆ. ಈ ಮಾಲಿಕೆಯಲ್ಲಿ ೧. ಕವಿರಾಜ ಮಾರ್ಗ, ೨. ವಡ್ಡಾರಾಧನೆ, ೩. ಹರಿಹರನ ರಗಳೆಗಳು, ೪. ಮಂಟೇಸ್ವಾಮಿ, ೫. ರಾಜಾವಳಿ ಕಥಾಸಾರ, ೬. ಕುಮಾರವ್ಯಾಸ ಭಾರತ, ೭. ಬಸವಣ್ಣನ ವಚನಗಳು, ೮. ಶೂನ್ಯ ಸಂಪಾದನೆ, ೯. ಆದಿಪುರಾಣ, ೧೦. ಅಕ್ಕಮಹಾದೇವಿ, ೧೧. ಇಂಗ್ಲಿಶ್ ಗೀತಗಳು, ೧೨. ಮಲೆಮಾದೇಶ್ವರ, ೧೩. ಸಿರಿ, ೧೪. ಜೈಮಿನಿ ಭಾರತ – ಇವುಗಳ ಮೇಲೆ ವಿಚಾರ ಸಂಕಿರಣ ನಡೆಸಲಾಗಿದ್ದು – ಅವು ಈಗಾಗಲೆ ಪುಸ್ತಕ ರೂಪದಲ್ಲಿ (ಕೊನೆಯ ಮೂರು ಮುದ್ರಣದಲ್ಲಿವೆ) ಬಂದಿವೆ. ಕನ್ನಡದ ಅಕಡೆಮಿಕ್ ವಲಯದಲ್ಲಿ ನಮ್ಮ ವಿಭಾಗದ ಈ ಮಾಲಿಕೆಯು ತುಂಬ ವಿಶಿಷ್ಟವಾದ ಸ್ಥಾನ ವನ್ನು ಪಡೆದಿದೆ.

ಪ್ರಾಚೀನ ಕೃತಿಗಳನ್ನು ಇಂದು ಅಧ್ಯಯನ ಮಾಡಲು ಇರುವ ತಾತ್ವಿಕ ಸಮಸ್ಯೆಗಳೇನು ಮತ್ತು ಸಾಧ್ಯತೆಗಳೇನು ಎಂಬ ಎರಡು ಮುಖ್ಯವಾದ ಸೈದ್ಧಾಂತಿಕ ಪ್ರಶ್ನೆಗಳ ಚರ್ಚೆ ಈ ನಮ್ಮ ಕಾರ್ಯಕ್ರಮದ ಅಘೋಷಿತ ಆಶಯವಾಗಿದೆ. ನಮ್ಮ ವಿಚಾರ ಸಂಕಿರಣದಲ್ಲಿ ಮಾಡುವ ಚರ್ಚೆ ಸಂವಾದಗಳು ಕೇವಲ ಕೃತಿನಿಷ್ಠ ಅಥವಾ ಕೃತಿನಿರ್ದಿಷ್ಟ ಎಂಬ ಸೀಮಿತ ಚೌಕಟ್ಟಿಗೆ ಒಳಪಡುವುದಿಲ್ಲ. ಹಾಗೆಂದು ಯಾವ ಕೃತಿಗಳೂ ಗಮನದಲ್ಲಿ ಇಲ್ಲದ ಕೇವಲ ಅಮೂರ್ತ ಚರ್ಚೆಯೂ ಅಲ್ಲ. ಸಮಕಾಲೀನ ಸಾಹಿತ್ಯ ಅಧ್ಯಯನಗಳ ತಾತ್ವಿಕ ಸಮಸ್ಯೆಗಳ ಮೂಲಕ ಪ್ರಾಚೀನ ಕೃತಿ ನಿರ್ದಿಷ್ಟ ಅಧ್ಯಯನಕ್ಕೆ ಬರುವುದು; ಪ್ರಾಚೀನ ಕೃತಿನಿರ್ದಿಷ್ಟ ಅಧ್ಯಯನದ ಮೂಲಕ ಸಮಕಾಲೀನ ಸಾಹಿತ್ಯ ಅಧ್ಯಯನದ ತಾತ್ವಿಕ ಸಮಸ್ಯೆಗಳಿಗೆ ಬರುವುದು. ಈ ಸಾಮಾನ್ಯ ವಿಧಾನ ಇಲ್ಲಿಯ ಅಧ್ಯಯನದ ಆಳದಲ್ಲಿ ಕ್ರಿಯಾಶೀಲವಾಗಿದೆ. ಹಾಗಾಗಿ ‘ಪ್ರಾಚೀನ ಕೃತಿ’ ಎಂಬುದನ್ನು ‘ಆ ಕೃತಿಯು ಸೃಷ್ಟಿಯಾದ ಕಾಲಬದ್ಧ ಚೌಕಟ್ಟಿನಲ್ಲಿ ಅಧ್ಯಯನ ಮಾಡುವುದಲ್ಲ; ಅದರ ಜೊತೆಗೆ ಇಂದಿನ ಸಾಮಾಜಿಕ ಸಕಲ ಸಂಕಟಗಳು ಒತ್ತಾಯಿಸುವ ಮತ್ತು ರೂಪಿಸುವ ಆಶಯ ಮತ್ತು ದೃಷ್ಟಿಕೋನಗಳ ಮೂಲಕ ಅಧ್ಯಯನ ಮಾಡುವುದು ನಮಗಿಲ್ಲಿ ಮುಖ್ಯ. ಈ ಅಧ್ಯಯನದಿಂದ ನಾವು ಕೇವಲ ‘ಸೌಂದರ್ಯ ಶಾಸ್ತ್ರೀಯ’ ಎನ್ನಲಾಗುವ  ಆಯಾಮವನ್ನು ಬಯಸುವುದಿಲ್ಲ. ಅದನ್ನೂ ಮೀರಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮವನ್ನು ಬಯಸುತ್ತಿದ್ದೇವೆ. ಕೃತಿಯು ತನ್ನ ಒಡಲಲ್ಲಿ ಸಂಕೀರ್ಣ ವಾದ ಸಾಂಸ್ಕೃತಿಕ ಜಗತ್ತನ್ನು ಹೊಂದಿರುತ್ತದೆ. ಅದರ ಆಧ್ಯಯನದಿಂದ ಆ ಸಾಂಸ್ಕೃತಿಕ ಜಗತ್ತು ಚಲನಶೀಲಗೊಂಡು ಪುನರ್ ಸೃಷ್ಟಿಯಾಗುತ್ತದೆ. ಇದು ಕೃತಿಯನ್ನು ಗ್ರಹಿಸುವವರ, ಕೃತಿಗೆ ಪ್ರತಿಕ್ರಿಯೆ ಮಾಡುವವರ ದೃಷ್ಟಿಕೋನ ಮತ್ತು ತಾತ್ವಿಕತೆಯನ್ನು ಅವಲಂಬಿಸಿರುತ್ತದೆ. ಸಾಹಿತ್ಯ ಕೃತಿಯೊಂದರ ಚಲನಶೀಲ ಸಂಕೀರ್ಣ ಸಾಂಸ್ಕೃತಿಕ ಜಗತ್ತು ಅಧ್ಯಯನಕಾರರ ದೃಷ್ಟಿಕೋನದ ಮೇಲೂ; ಅಧ್ಯಯನಕಾರರ ದೃಷ್ಟಿಕೋನವು ಸಾಹಿತ್ಯ ಕೃತಿಯ ಸಾಂಸ್ಕೃತಿಕ ಜಗತ್ತಿನ ಮೇಲೂ ಪರಸ್ಪರ ಪ್ರಭಾವ ಬೀರುತ್ತಿರುತ್ತವೆ ಮತ್ತು ಇವೆರಡರ ಸಂಘರ್ಷದಲ್ಲಿ ಸಾಹಿತ್ಯದ ಓದು, ಸಾಹಿತ್ಯದ ಅಧ್ಯಯನ ತನ್ನ ಜಡತೆಯನ್ನು ಮೀರಿ ಹೊಸಕಾಲದ ಅಗತ್ಯಗಳಿಗೆ ತಕ್ಕಂತೆ ನವೀಕರಣಗೊಳ್ಳುತ್ತಿರುತ್ತದೆ. ಹಾಗಾಗಿ ‘ಸಾಂಸ್ಕೃತಿಕ ಮುಖಾಮುಖಿ’ ಸಂವಾದ ಕಾರ್ಯಕ್ರಮದಲ್ಲಿ ಚರ್ಚೆಗೆ ಎತ್ತಿಕೊಳ್ಳುವ ಕೃತಿ ಎಷ್ಟು ಮುಖ್ಯವೊ, ಅದಕ್ಕಿಂತಲೂ ಅದನ್ನು ಕುರಿತು ಅಧ್ಯಯನ ಮಾಡುವ ದೃಷ್ಟಿಕೋನ ಅಷ್ಟೇ ಮುಖ್ಯವಾಗುತ್ತದೆ.

ಈ ಹಿನ್ನೆಲೆಯಲ್ಲಿ ‘ಸಾಂಸ್ಕೃತಿಕ ಮುಖಾಮುಖಿ’ ಸಂವಾದಕ್ಕೆ ನಯಸೇನನ ‘ಧರ್ಮಾಮೃತ’ ವನ್ನು ಆಯ್ಕೆ ಮಾಡಲಾಗಿತ್ತು. ‘ಧರ್ಮಾಮೃತ’ವು ೧೪ ಕತೆಗಳ ಸಂಕಲನ. ಸಾಂಪ್ರದಾಯಿಕ ಸಾಹಿತ್ಯ ಚರಿತ್ರೆ ಮತ್ತು ಇತರೆ ಕೆಲವು ಅಧ್ಯಯನಗಳು ‘ಧರ್ಮಾಮೃತ’ವನ್ನು  ‘ಜೈನಧರ್ಮ ಪ್ರತಿಪಾದನೆ’ಯ ಕೃತಿ ಎಂತಲೊ, ‘ಜೈನಧರ್ಮ ಆಶಯ’ದ ಕೃತಿ ಎಂತಲೊ ಅಭಿಪ್ರಾಯ ಪಟ್ಟಿವೆ. ಆ ಬಗೆಯ ಅಧ್ಯಯನ ಮತ್ತು ತೀರ್ಮಾನಗಳಿಗೆ ಆ ಅಧ್ಯಯನಗಳ ಚಾರಿತ್ರಿಕ ಹಾಗೂ ಸೈದ್ಧಾಂತಿಕ ನೆಲೆಗಳು ತಳಹದಿಯಾಗಿವೆ. ‘ಧರ್ಮಾಮೃತ’ವು ಕೇವಲ ‘ಜೈನಧರ್ಮದ ಆಶಯವುಳ್ಳ’ ಕೃತಿಯೇನಲ್ಲ, ಅದರ ವ್ಯಾಪ್ತಿ ‘ಧಾರ್ಮಿಕ ಚೌಕಟ್ಟ’ನ್ನು ಮೀರಿದ್ದು.

ಕೃತಿಯ ಸಂಕೀರ್ಣ ಜಗತ್ತಿನಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹೀಗೆ ಹಲವು ಆಯಾಮಗಳ ಸಂಕೀರ್ಣ ವಿಷಯಗಳು ಬರುತ್ತವೆ. ರಾಜರು, ಮಂತ್ರಿಗಳು, ರಾಜಶ್ರೇಷ್ಠಿಗಳು, ರಾಣಿಯರು, ತಳವಾರರು, ಕಾವಲುಗಾರರು, ಕಳ್ಳರು, ಸೂಳೆಯರು, ಅಸಾಮಾನ್ಯ ವಿದ್ಯೆವುಳ್ಳವರು, ಬ್ರಾಹ್ಮಣರು, ಕ್ಷತ್ರಿಯರು, ವಣಿಕರು, ಹೊಲೆಯರು, ಮಾದಿಗರು – ಹೀಗೆ ಎಲ್ಲಾ ವರ್ಗದ, ಸಮೂಹದ, ಎಲ್ಲ ಸಾಮಾಜಿಕ ಸ್ತರಗಳ ಜನರು ಬರುತ್ತಾರೆ. ಕತೆಗಾರ ಪ್ರತಿಯೊಂದು ಕತೆಯನ್ನೂ ರಾಜನಿಂದ, ರಾಜನ ಆಸ್ಥಾನದಿಂದ ಶುರು ಮಾಡುತ್ತಾನೆ. ಕೊನೆಗೆ ಅವರು ಜಿನದೀಕ್ಷೆ ಪಡೆಯುವ ಸ್ಥಿತಿಯಲ್ಲಿ ಕತೆಯನ್ನು ಮುಗಿಸುತ್ತಾನೆ. ಕತೆಗಳ ಆದಿ ಮತ್ತು ಅಂತ್ಯಗಳು ಎಲ್ಲ ಕತೆಗಳಲ್ಲೂ ಒಂದೇ ನಮೂನೆ ಕಾಣುತ್ತವೆ. ವಡ್ಡಾರಾಧನೆಯ ಕತೆಗಳ ಹಾಗೆ ಇಲ್ಲಿ ಕತೆಗಳ ಒಳಗೆ ಕತೆಗಳು ಬರುವುದಿಲ್ಲ. ಜನ್ಮಾಂತರಗಳ ದೀರ್ಘ ಭವಾವಳಿಯೂ ಇಲ್ಲ. ಪ್ರತಿಯೊಂದು ಕತೆಯು ಸಂಕ್ಷಿಪ್ತವಾಗಿ ಸರಳವಾಗಿ ಬೆಳೆಯುತ್ತವೆ.

ಪಾತ್ರಗಳ ಸಾಮಾಜಿಕ ನೆಲೆಯಲ್ಲಿ ಹಲವು ಸ್ತರಗಳು ಇವೆ. ಬೇರೆ ಬೇರೆ ವಯಸ್ಸಿನ ವ್ಯಕ್ತಿಗಳೂ ಇದ್ದಾರೆ. ಅವರೆಲ್ಲ ಜೀವನವನ್ನು ಸಹಜವಾಗಿ ಸ್ವೀಕರಿಸುತ್ತಾರೆ; ಅನುಭವಿಸು ತ್ತಾರೆ. ಅವರಲ್ಲಿ ಕೆಲವರು ವೈರಾಗ್ಯ ಹೊಂದಿ ಜಿನದೀಕ್ಷೆ ಪಡೆಯುತ್ತಾರೆ. ವೈರಾಗ್ಯ ಪಡೆಯುವ ಮೊದಲು ತಮ್ಮ ಆಸ್ತಿ, ಸಂಪತ್ತು ಮತ್ತು ಅಧಿಕಾರಗಳನ್ನು ತಮ್ಮ ಮಕ್ಕಳಿಗೆ ಅದರಲ್ಲೂ ಗಂಡು ಮಕ್ಕಳಿಗೆ ವರ್ಗಾಯಿಸಿಯೇ ವೈರಾಗ್ಯ ಹೊಂದುತ್ತಾರೆ. ಅಂದರೆ ವೈರಾಗ್ಯ ಹೊಂದು ವುದಕ್ಕೂ ಮತ್ತು ಅಧಿಕಾರ ಕುಟುಂಬದ ವ್ಯಾಪ್ತಿಯೊಳಗೇ ಮುಂದುವರಿಯುವುದಕ್ಕೂ ನೇರವಾದ ಸಂಬಂಧವಿದೆ.

ಕತೆಗಾರ ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣ ಸಾಮಾಜಿಕ ಅರಿವುಳ್ಳವನು. ಅದರಿಂದಾ ಗಿಯೇ ಅವನು ಇಲ್ಲಿ ಯಾವ ವಿವರವನ್ನೂ ಸರಳಗೊಳಿಸುವುದಿಲ್ಲ. ಕಳ್ಳರು, ಸೂಳೆಯರು, ಋಷಿಗಳು, ರಾಜರು, ರಾಣಿಯರು, ತಳವಾರರು, ಕೊನೆಗೆ ‘ಕೊಲೆಗಡುಕರು’ ಈ ಯಾರನ್ನೂ ಕೇವಲ ‘ಸ್ಥಾಪಿತ ನಂಬಿಕೆ ಮತ್ತು ಮೌಲ್ಯಗಳ’ ಮುಖವಾಣಿಗಳ ರೀತಿಯಲ್ಲಿ ಚಿತ್ರಿಸುವುದಿಲ್ಲ. ಒಂದು ಕಡೆ ವೇಶ್ಯೆಯೊಬ್ಬಳು ‘ರಾಣಿಯ ಹಾರವನ್ನು ನನಗೆ ತಂದು ಕೊಡು’ ಎಂದು ಆಕೆಯೊಂದಿಗೆ ಸಂಬಂಧವಿಟ್ಟುಕೊಂಡವನಲ್ಲಿ ಕೇಳುತ್ತಾಳೆ. ಇದು ಅವಳ ವಸ್ತುಲೋಭ ಎನಿಸುತ್ತದೆ. ಆದರೆ ಮತ್ತೊಂದು ಕತೆಯಲ್ಲಿ ವೇಶ್ಯೆಯೊಬ್ಬಳು ‘ಅನ್ಯಾಯವಾಗಿ ಕೊಲೆಗೆ ಈಡಾಗುವವನನ್ನು ತಾನೊಂದು ಪತ್ರ ಬರೆದು ಇಡುವ ಮೂಲಕ’ ಉಳಿಸುತ್ತಾಳೆ. ಹಣ ಕೊಟ್ಟು ‘ಕೊಲೆ ಮಾಡಲು ಒಪ್ಪಿಸುವ’ ಒಬ್ಬ ಮಾದಿಗ ಹಾಗೂ ಒಬ್ಬ ಹೊಲೆಯ ಇಬ್ಬರು ಮಗುವೊಂದನ್ನು ಅದರ ಮುಗ್ಧ ಚಟುವಟಿಕೆಗೆ ಬೆರಗಾಗಿ ಕೊಲೆ ಮಾಡದೆ ತೆರುಳುತ್ತಾರೆ. ಇಲ್ಲಿ ಕೊಲೆ ಮಾಡದಿರುವ ಆಯಾಮವೊಂದಾದರೆ, ಹಣ ಕೊಟ್ಟು ಕೊಲೆ ಮಾಡಿಸಲು ಯಾವ ವಣಿಕ ವರ್ಗ ಹಾಗೂ ಅಧಿಕಾರ ಮುಂದಾಗಿದೆಯೊ ಅದರ ವಿಕೃತ ಹಾಗೂ ಕ್ರೂರ ಮುಖವನ್ನು ಕತೆಗಾರ ಬಹಳ ಸೂಕ್ಷ್ಮವಾಗಿ ಬಯಲು ಮಾಡುತ್ತಾನೆ.

ಕಳ್ಳರೂ ಮತ್ತು ಕಳ್ಳತನಗಳೂ ಕೂಡ ಅಷ್ಟೆ. ಇಲ್ಲಿ ಕಳ್ಳರಾಗಲಿ, ಕಳ್ಳತನವಾಗಲಿ ಎಲ್ಲಿಯೂ ಸರಳೀಕರಣಕ್ಕೆ ಒಳಗಾಗಿಲ್ಲ. ಕಳ್ಳತನ, ಸುಳ್ಳು ಹೇಳುವುದು, ಕೊಲೆ ಬೆದರಿಕೆ ಹಾಕುವುದು, ಕೊಲೆಗೆ ತಂತ್ರ ರೂಪಿಸುವುದು, ಕೊಲೆ ಮಾಡಿಸುವುದು, ಜಿದ್ದು, ಹಗೆ, ದ್ವೇಷ, ಪ್ರತೀಕಾರ, ವೇಷ ಬದಲಿಸಿಕೊಳ್ಳುವುದು, ಮನೆಯಿಂದ ಹೊರಗೆ ಹಾಕುವುದು, ಊರಿನಿಂದ, ರಾಜ್ಯದಿಂದ ಹೊರಗೆ ಹಾಕುವುದು ಇತ್ಯಾದಿ ಸಂಕೀರ್ಣ ಪ್ರಸಂಗಗಳು ಬರುತ್ತವೆ. ಜಿನದೀಕ್ಷೆ ಪಡೆಯುವ ಸನ್ನಿವೇಶಗಳನ್ನು ಈ ಕತೆಗಳಿಂದ ಪ್ರತ್ಯೇಕಿಸಿಬಿಟ್ಟರೆ ಇವು ಶುದ್ಧಾಂಗ ವಾಗಿ ನಮ್ಮ ಸುತ್ತಮುತ್ತಲು ನಡೆದಿರುವ, ನಡೆಯುತ್ತಿರುವ ಸಾಮಾನ್ಯ (ಅಂದರೆ ಉತ್ಪೇಕ್ಷೆ ಯಲ್ಲ ಎಂಬರ್ಥದಲ್ಲಿ) ಕತೆಗಳು ಅನಿಸಿಬಿಡುತ್ತವೆ. ಹಾಗಾಗಿ ಇಲ್ಲಿಯ ಕತೆಗಳಿಗೆ ಮುಖ್ಯವಾಗಿ ಎರಡು ನೆಲೆಗಳಿವೆ. ಒಂದು ಧಾರ್ಮಿಕ ಚೌಕಟ್ಟಿನ ನೆಲೆ. ಮತ್ತೊಂದು ಧಾರ್ಮಿಕ ಚೌಕಟ್ಟಿನ ಆಚೆಗಿರುವ ನೆಲೆ. ಕತೆಗಳು ನಿಜವಾಗಿಯೂ ತುಂಬ ಸಾಂದ್ರವಾಗಿ ಮತ್ತು ಸಂಕೀರ್ಣವಾಗಿ ಕ್ರಿಯಾಶೀಲವಾಗುವುದು ಅವುಗಳ ಧಾರ್ಮಿಕೇತರ (ಹಾಗೆಂದು ಕರೆಯುವುದಾದರೆ) ನೆಲೆಯಲ್ಲಿ.

ಕತೆಗಳ ಅತ್ಯಂತ ಸೂಕ್ಷ್ಮ ಸಂವೇದನಾಶೀಲತೆ ಇರುವುದು ಅವುಗಳ ಧಾರ್ಮಿಕ ಚೌಕಟ್ಟಿನ ಆಚೆಗೆ. ಅಲ್ಲಿ ಬರುವ ಆಸೆ, ದ್ವೇಷ, ಸೇಡು, ಪ್ರತೀಕಾರ, ತಂತ್ರ, ಪ್ರತಿರೋಧ, ಪ್ರತಿಕ್ರಿಯೆ, ಗಂಡ ಹೆಂಡತಿಯರ ವೈಭೋಗ, ವಸ್ತು ಮೋಹ, ಹೆಣ್ಣಿನ ಮೋಹ, ಅವನ್ನು ದಕ್ಕಿಸಿಕೊಳ್ಳಲು ವಿವಿಧ ಹುನ್ನಾರ, ಕ್ಷತ್ರಿಯರು ಮತ್ತು ಬ್ರಾಹ್ಮಣರ ಪೈಪೋಟಿ, ಯುದ್ಧ ಇವುಗಳೆಲ್ಲ ‘ಧಾರ್ಮಿಕ ಚೌಕಟ್ಟಿನ’ ಆಚೆಗೆ ನಡೆಯುತ್ತವೆ. ಕುಟುಂಬ, ಊರು, ರಾಜ್ಯ, ದೇಶ, ರಾಜ್ಯದಿಂದ ರಾಜ್ಯ, ದೇಶದಿಂದ ದೇಶ ಹೀಗೆ ಹೋಗುವ ಪ್ರಯಾಣದ ಚಲನಶೀಲತೆ ಕೂಡ ಕತೆಗಳಲ್ಲಿದೆ.

ಕೆಲವು ಕತೆಗಳು ಅವುಗಳ ವಸ್ತು ಮತ್ತು ವಿನ್ಯಾಸದಿಂದ ಸಾಂಪ್ರದಾಯಿಕವಾಗಿ ಜನಪದ ಕತೆಗಳಂತೆಯೊ, ಪುರಾಣದ ಅಂಶಗಳನ್ನು ಸೇರಿಸಿಕೊಂಡಿರುವಂತೆಯೊ ಭಾಸವಾಗುತ್ತವೆ. ಹಾಗಿದ್ದಾಗಲೂ ಕತೆಗಾರ ಕೇವಲ ಅದೊಂದೇ ಆಯಾಮಕ್ಕೆ ಇಡೀ ಕತೆಯನ್ನು ಕುಗ್ಗಿಸುವುದಿಲ್ಲ ಮತ್ತು ಸರಳೀಕರಿಸುವುದಿಲ್ಲ ಎಂಬುದು ಬಹಳ ಮುಖ್ಯ. ಪುರಾಣದ ಅಂಶವನ್ನೊ, ಜನಪದೀಯ ಸೊಗಡನ್ನೊ ಪಡೆದಿದ್ದರೂ ಅದು ಸಾಂದರ್ಭಿಕ ಮತ್ತು ಸನ್ನಿವೇಶ ಆಧಾರಿತ. ಆದರೆ ಈ ಆಯಾಮದಿಂದಲೂ ಕೂಡ ಕತೆಗಳನ್ನು ಪ್ರವೇಶ ಮಾಡಲು ಅವಕಾಶವಿದೆ.

ವ್ಯಾಪಾರವು ಇಲ್ಲಿಯ ಕತೆಗಳು ಚಿತ್ರಿಸುವ ಮುಖ್ಯ ಆರ್ಥಿಕ ಚಟುವಟಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ರಾಜಕೀಯ ಮತ್ತು ಸಾಮಾಜಿಕ ಸಂಬಂಧಗಳು ರೂಪಿತವಾಗಿವೆ. ಇಲ್ಲಿ ವಣಿಕ ವರ್ಗವೇ ರಾಜರು. ಇವರ ಪ್ರಧಾನ ಹಿತಾಸಕ್ತಿ ಭೋಗ. ಅನಂತರ ವೈರಾಗ್ಯ. ಇಲ್ಲಿ ಕಲಹಗಳು, ಕಿತ್ತಾಟಗಳು, ಸಂಘರ್ಷಗಳು, ಅಸೂಯೆ ದ್ವೇಷಗಳು, ಕೊಲೆ ಸಂಚು, ಕೊಲೆ ಇವೆಲ್ಲ ಮೂಲತಃ ಹುಟ್ಟುವುದೇ ಈ ಭೋಗದ ನೆಲೆಯಿಂದ. ಹಾಗಾಗಿ ವ್ಯಾಪಾರ – ಅಧಿಕಾರ – ಭೋಗ ಇವುಗಳ ನಡುವೆ ಒಂದು ಅಂತರ್ ಸಂಬಂಧವಿದೆ. ಸಂಪತ್ತು ಅಧಿಕಾರ ಮತ್ತು ಭೋಗ ಇವುಗಳನ್ನು ರಾಜರು ಅನುಭವಿಸುತ್ತಾರೆ; ಕೊನೆಗೆ ಅವುಗಳಿಂದ ದೂರವಾಗು ತ್ತಾರೆ. ಇಲ್ಲಿ ಕಳ್ಳತನಗಳು ಅತಿ ಸಾಮಾನ್ಯ. ಭೋಗದ ಭಾಗವಾಗಿಯೆ ಕಳ್ಳತನಗಳು ಬರುತ್ತವೆ. ಒಂದು ಕತೆಯಲ್ಲಿ ರಾಜನೊಬ್ಬ ಮಾತು ಕೇಳದ ತನ್ನ ಮಗನನ್ನು ರಾಜ್ಯದಿಂದ ಹೊರಗಟ್ಟು ತ್ತಾನೆ. ಅವನು ಅಲ್ಲಿಂದ ಬೇರೆ ರಾಜ್ಯಕ್ಕೆ ಹೋಗಿ ಕಳ್ಳರ ಗುಂಪಿಗೆ ನಾಯಕನಾಗುತ್ತಾನೆ. ಪರದೇಶದಿಂದ ಕಳ್ಳತನ ಮಾಡಿಕೊಂಡು ಭೋಗ ಜೀವನ ಮಾಡುತ್ತಾನೆ. ಹಾಗಾಗಿ ಕಳ್ಳತನಗಳನ್ನು ಭೋಗದ ಚೌಕಟ್ಟಿನ ಆಚೆಗಿಟ್ಟು ನೋಡಲು ಬರುವುದಿಲ್ಲ. ಸುಳ್ಳು ಹೇಳು ವುದು, ಕೊಲೆ ಮಾಡಿಸುವುದು ಅಥವಾ ಕೊಲೆ ಮಾಡುವುದು ಇವೂ ಕೂಡ ಪರೋಕ್ಷ ಪ್ರತಿರೋಧವೆಂಬಂತೆ ಇವು ಕ್ರಿಯಾಶೀಲವಾಗಿವೆ. ಹಾಗಾಗಿ ಸುಳ್ಳು ಹೇಳುವುದು, ಕೊಲೆ ಸಂಚು, ಕೊಲೆ, ವೇಷ ಬದಲಿಸುವುದು, ನಕಲಿ ಸನ್ಯಾಸಿಗಳು, ಇವೆಲ್ಲವೂ ‘ಧರ್ಮದ ಚೌಕಟ್ಟನ್ನು’ ವಿಮರ್ಶಿಸಲು ಸೃಷ್ಟಿಯಾಗಿರುವಂತೆ ಕಂಡರೂ ಅವುಗಳ ಆಳದಲ್ಲಿ ಉಪಭೋಗ ವಲಯದ ಬಗ್ಗೆ ಸೃಷ್ಟಿಯಾಗಿರುವ ಅಸಹನೆ, ಅಸಮಾಧಾನ ಮತ್ತು ಆಕ್ರೋಶಗಳು ಸಮಾಜದ ಬುನಾದಿಯ ಮೇಲಿದ್ದೂ ಅವುಗಳ ಆತ್ಯಂತಿಕ ಸ್ಥಿತಿ ನಮಗೆ ಕೃತಕವಾಗಿ ತೋರುತ್ತದೆ. ಆದರೆ ಇವೆಲ್ಲವೊ ಭೋಗದ ಕೇಂದ್ರದ ಉಪ ಉತ್ಪಾದನೆಗಳ ಹಾಗೆ ಕ್ರಿಯಾಶೀಲವಾಗಿವೆ. ಸಂಪತ್ತು ಮತ್ತು ಅಧಿಕಾರದ ಕೇಂದ್ರೀಕರಣ ಭೋಗವನ್ನು ಮುಚ್ಚಿಡುತ್ತದೆ. ಜಿನಮುನಿಗಳ ಮತ್ತು ಬ್ರಾಹ್ಮಣರ, ಜಿನಧರ್ಮದ ಮತ್ತು ವೈದಿಕ ಧರ್ಮದ ಪೈಪೋಟಿಯನ್ನು ಮುಂದಿಡುತ್ತದೆ. ಇದು ಕೇವಲ ಧಾರ್ಮಿಕ ಪೈಪೋಟಿಯಾಗಿರದೆ ಸಂಪತ್ತು ಮತ್ತು ಅಧಿಕಾರದ ಲೋಭವೂ ಹೌದು.

ಇಲ್ಲಿ ಬ್ರಾಹ್ಮಣರನ್ನು ವಿವಿಧ ತಂತ್ರಗಳ ಮೂಲಕ ಜಿನಧರ್ಮಕ್ಕೆ ಪರಿವರ್ತನೆ ಮಾಡುವ ಸಂಗತಿಗಳು ಬರುತ್ತವೆ. ಆದರೆ ಹಾಗೆ ಪರಿವರ್ತನೆ ಆದವರಿಗೆ ಸಂಪತ್ತು ಮತ್ತು ಅಧಿಕಾರದಲ್ಲಿ ಪಾಲು ಇರುವುದಿಲ್ಲ ಅಥವಾ ಅವನ್ನು ಕೊಡುವುದಿಲ್ಲ. ಜೈನ ಮತ್ತು ಬ್ರಾಹ್ಮಣ ಪೈಪೋಟಿ ನಡೆದು ಅಂತಿಮವಾಗಿ ‘ಜೈನವು ಗೆಲ್ಲುವ’ ‘ಬ್ರಾಹ್ಮಣವು ಅಧೀನವಾಗುವ’ ಪ್ರಕ್ರಿಯೆ ಅನೇಕ ಕತೆಗಳಲ್ಲಿ ಕಾಣಿಸುತ್ತದೆ. ಪ್ರಶ್ನೆ ಇರುವುದು ಇಂತವರು (ಜಿನಧರ್ಮಕ್ಕೆ ಪರಿವರ್ತನೆಯಾ ದವರು) ಯಾರೂ ಭೋಗದ ನೆಲೆಗೆ ಬಾರದೆ ಹಾಗೆ ಬ್ರಾಹ್ಮಣದಿಂದ ಪರಿವರ್ತನೆಯಾದವರಿಗೆ ಕೂಡ ಭೋಗದ ನಿರಾಕರಣೆಯೇ ಮುಖ್ಯವಾಗಿದೆ. ಭೋಗದ ನಿರಾಕರಣೆ ಎಂಬುದು ಸಂಪತ್ತು ಮತ್ತು ಅಧಿಕಾರದ ವಂಚನೆಯೇ ಆಗಿದೆ.

‘ಧರ್ಮಾಮೃತ’ದಲ್ಲಿರುವ ೧೪ ಕತೆಗಳು ನಮ್ಮ ಕಾಲದ ಎಷ್ಟೊ ಪ್ರಶ್ನೆಗಳನ್ನು ಚರ್ಚೆಯ ಮುಂಚೂಣಿಗೆ ತರುತ್ತವೆ. ಹಲವು ಆಯಾಮಗಳಲ್ಲಿ ಅವುಗಳನ್ನು ಓದಲು, ಅರ್ಥೈಸಲು ಮತ್ತು ವಿಮರ್ಶಿಸಲು ಸವಾಲುಗಳನ್ನು ಒಡ್ಡುತ್ತವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂವಾದವು ನಡೆದಿದೆ ಎಂದು ಭಾವಿಸುತ್ತೇನೆ.

* * *

ಮಧ್ಯಕಾಲೀನ ಸಾಹಿತ್ಯಕ ಪಠ್ಯವನ್ನು ಆ ಪಠ್ಯ ರಚನೆಯಾದ ಚಾರಿತ್ರಿಕ ಸಂದರ್ಭದಲ್ಲಿ ಮಾತ್ರ ಗ್ರಹಿಸಬೇಕೆ ಅಥವಾ ವರ್ತಮಾನದ ಒತ್ತಡಗಳ ಮೂಲಕ ಗ್ರಹಿಸಬೇಕೆ ಎಂಬ ಎರಡು ತಾತ್ವಿಕ ಪ್ರಶ್ನೆಗಳು ಈ ಸಂವಾದ ಕಾರ್ಯಕ್ರಮದಲ್ಲಿದ್ದವು. ಜೊತೆಗೆ ‘ಧರ್ಮಾಮೃತ’ ಪಠ್ಯವು ನೇರವಾಗಿ ಜೈನಧರ್ಮದ ತತ್ವಗಳನ್ನು ಮಾತ್ರ ಹೇಳುವ ಕೃತಿಯೊ ಅಥವಾ ಅವನ್ನು ಒಳಗೊಂಡು ಇಲ್ಲವೆ ಒಳಗೊಳ್ಳದೆ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಆರ್ಥಿಕ ವೈರುಧ್ಯಗಳನ್ನು ನಿರೂಪಿಸುತ್ತಿದೆಯೊ ಎಂಬ ಇನ್ನೊಂದು ಮೂಲಭೂತ ಪ್ರಶ್ನೆಯೂ ಇತ್ತು. ಪ್ರಬಂಧಕಾರರು ಈ ವಿಶಾಲವಾದ ತಾತ್ವಿಕ ಚೌಕಟ್ಟಿನ ಒಳಗೆ ಆಲೋಚಿಸಿದ್ದಾರೆ. ಕೆಲವರು ‘ಧರ್ಮಾಮೃತ’ವು ಜೈನಧರ್ಮದ ತತ್ವಗಳನ್ನು ನೇರವಾಗಿ ನಿರೂಪಿಸುವ ಕೃತಿ ಎಂದು ಅರ್ಥೈಸಿದರೆ; ಮತ್ತೆ ಕೆಲವರು ಅದನ್ನು ಜೈನಧರ್ಮದ ಚೌಕಟ್ಟಿನಿಂದ ಈಚೆಗೆ ತಂದು ವರ್ತಮಾನದ ಒತ್ತಡಗಳ ಮೂಲಕ ಅರ್ಥೈಸಬೇಕು ಎಂದು ಚರ್ಚಿಸಿದ್ದಾರೆ. ಈ ಸಂವಾದ ಕಾರ್ಯಕ್ರಮದ ಎರಡೂ ದಿನ ಪ್ರಬಂಧ ಮಂಡನೆ ನಂತರ ಬಹಳ ಗಂಭೀರವಾದ ಚರ್ಚೆ ನಡೆದವು. ಈ ಚರ್ಚೆಯಲ್ಲಿ ಪ್ರಬಂಧಕಾರರಲ್ಲದೆ ಸಂಶೋಧನ ವಿದ್ಯಾರ್ಥಿಗಳು ಮುಕ್ತವಾಗಿ ಭಾಗವಹಿಸಿದ್ದು ಒಂದು ವಿಶೇಷ. ಆ ಚರ್ಚೆಯ ಭಾಗಗಳನ್ನು ಪುಸ್ತಕದ ಅನುಬಂಧದಲ್ಲಿ ಸೇರಿಸಲಾಗಿದೆ.

‘ಧರ್ಮಾಮೃತ’ವನ್ನು ಕುರಿತು ಸಂವಾದ ಕಾರ್ಯಕ್ರಮ ನಡೆಸಬೇಕೆಂದು ವಿಭಾಗದಲ್ಲಿ ನಾನು ಪ್ರಸ್ತಾಪಿಸಿದೆ. ವಿಭಾಗದ ಎಲ್ಲ ಗೆಳೆಯರೂ ಇದಕ್ಕೆ ಸಮ್ಮತಿಸಿದರು. ಈ ಬಗ್ಗೆ ಪ್ರಬಂಧ ಮಂಡಿಸಬೇಕೆಂದು ವಿದ್ವಾಂಸರನ್ನು ಕೇಳಿಕೊಂಡಾಗ ಅವರು ಪ್ರೀತಿಯಿಂದ ಒಪ್ಪಿಕೊಂಡು ಬಂದು ಪ್ರಬಂಧ ಮಂಡಿಸಿದರು ಮತ್ತು ಲೇಖನಗಳನ್ನು ಬರೆದುಕೊಟ್ಟರು. ಕನ್ನಡ ವಿಶ್ವವಿದ್ಯಾಲಯದ ಆಗಿನ ಕುಲಪತಿಯವರಾಗಿದ್ದ ಪ್ರೊ. ಬಿ ಎ ವಿವೇಕ ರೈ ಅವರು ಮತ್ತು ಕುಲಸಚಿವರಾಗಿದ್ದ ಪ್ರೊ. ಕರೀಗೌಡ ಬೀಚನಹಳ್ಳಿ ಅವರು ಈ ಕಾರ್ಯಕ್ರಮಕ್ಕೆ ಬೇಕಾದ ಆಡಳಿತಾತ್ಮಕ ಅವಕಾಶಗಳನ್ನು ಒದಗಿಸಿದರು. ಸಂವಾದ ಕಾರ್ಯಕ್ರಮ ಯಶಸ್ವಿ ಯಾಗಲು ಇವರು ಕಾರಣಕರ್ತರಾಗಿದ್ದಾರೆ. ಜೊತೆಗೆ ವಿಭಾಗದ ಎಲ್ಲ ಗೆಳೆಯರು ನನ್ನೊಂದಿಗೆ ಸೇರಿ ಕೆಲಸ ಮಾಡಿದ್ದಾರೆ. ಆದ್ದರಿಂದ ಪ್ರೊ. ಬಿ ಎ ವಿವೇಕ ರೈ, ಪ್ರೊ. ಕರೀಗೌಡ ಬೀಚನಹಳ್ಳಿ, ಪ್ರೊ. ರಹಮತ್ ತರೀಕೆರೆ, ಡಾ. ಅಮರೇಶ ನುಗಡೋಣಿ, ಡಾ. ವೆಂಕಟೇಶ ಇಂದ್ವಾಡಿ ಇವರಿಗೆ ಕೃತಜ್ಞತೆಗಳು. ಸಂವಾದ ಕಾರ್ಯಕ್ರಮ ನಡೆಯುತ್ತಿದ್ದಾಗ ಅದನ್ನೆಲ್ಲ ಅತ್ಯಂತ ಮುತುವರ್ಜಿಯಿಂದ ಗೆಳೆಯ ಅರುಣ ಜೋಳದಕೂಡ್ಲಿಗಿ ರೆಕಾರ್ಡ್ ಮಾಡಿಕೊಟ್ಟಿದ್ದಾರೆ. ರೆಕಾರ್ಡ್ ಮಾಡಿದ್ದ ಚರ್ಚೆಯ ಭಾಗವನ್ನು ವಿಭಾಗದ ಸಂಶೋಧನ ವಿದ್ಯಾರ್ಥಿ ಗೆಳೆಯ ಸುಧಾಕರ ದೇವಾಡಿಗ ಕಷ್ಟಪಟ್ಟು ಬರಹ ರೂಪಕ್ಕೆ ತಂದುಕೊಟ್ಟಿದ್ದಾರೆ. ಇವರ ಶ್ರಮವನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗಿದೆ. ವಿಭಾಗದ ಸಂಶೋಧನ ವಿದ್ಯಾರ್ಥಿಯಾದ ಶ್ರೀ ಗಾದೆಪ್ಪ ಇವರು ‘ಧರ್ಮಾಮೃತ’ ಕೃತಿಯ ಮೇಲೆ ಬಂದಿರುವ ಪೂರಕ ಅಧ್ಯಯನ ಸಾಮಗ್ರಿಯನ್ನು ಸಂಗ್ರಹಿಸಿದ್ದಾರೆ ಮತ್ತು ಆ ಕುರಿತು ಟಿಪ್ಪಣಿಯನ್ನು ಬರೆದಿದ್ದಾರೆ. ವಿಭಾಗದ ಕ್ರಿಯಾಶೀಲ ಕಿರಿಯ ಸಹಾಯಕರಾದ ಶ್ರೀ ಶಿವಪ್ಪ ಕೋಳೂರು ಇವರು ಕಾರ್ಯಕ್ರಮದ ಉದ್ದಕ್ಕೂ ನಿರಂತರವಾಗಿ ದುಡಿದಿದ್ದಾರೆ. ಪ್ರೀತಿಯಿಂದ ಇವರ ಶ್ರಮವನ್ನು ಸ್ಮರಿಸುತ್ತೇನೆ. ವಿಭಾಗದ ಸಂಶೋಧನ ವಿದ್ಯಾರ್ಥಿಗಳಾದ ಟಿ ಎಂ ಉಷಾರಾಣಿ, ರೇಖಾ ಈ ಜಿ ಇವರನ್ನು ನೆನೆಯುತ್ತೇನೆ. ಸಾಂಸ್ಕೃತಿಕ ಮುಖಾಮುಖಿ ಮಾಲಿಕೆಯ ಕೃತಿಗಳನ್ನು ಕನ್ನಡ ವಿದ್ವಾಂಸರು, ಸಂಶೋಧಕರು ಮತ್ತು ಓದುಗರು ಗಂಭೀರವಾಗಿ ಸ್ವೀಕರಿಸುತ್ತಿದ್ದಾರೆ. ಅಧ್ಯಯನಗಳಿಗೆ ಸಂಬಂಧಿಸಿದಂತೆ ಇವರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಕುರಿತು ಇಲ್ಲಿಯ ಬರವಣಿಗೆಗಳು ಸಂವಾದ ನಡೆಸುತ್ತವೆ ಎಂದು ಭಾವಿಸಿದ್ದೇನೆ. ಕಡಿಮೆ ಅವಧಿಯಲ್ಲಿ ಈ ಪ್ರಕಟಣೆಯ ಮುದ್ರಣಪೂರ್ವ ಪ್ರಕ್ರಿಯೆ ಮುಗಿಸಿದ ಗೆಳೆಯ ಶ್ರೀ  ಬಿ. ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ, ಪ್ರಕಟಿಸಿದ ಪ್ರಸಾರಾಂಗದ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಕೃತಜ್ಞತೆಗಳು.