ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ೧೯೯೯ರಲ್ಲಿ ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ ಎಂಬ ಯೋಜನೆಯನ್ನು ಪ್ರಾರಂಭಿಸಿತು. ಅಲ್ಲಿಂದ ಇಲ್ಲಿಯತನಕ ಒಟ್ಟು ೧೬ ಪಠ್ಯಗಳನ್ನು ಇಟ್ಟುಕೊಂಡು ಕಾರ್ಯಕ್ರಮಗಳು ನಡೆದಿವೆ. ಆ ಪಠ್ಯಗಳು ಎಂದರೆ, ಕವಿರಾಜಮಾರ್ಗ, ವಡ್ಡಾರಾಧನೆ, ಶೂನ್ಯ ಸಂಪಾದನೆ, ರಾಜಾವಳಿಕತೆ, ಹರಿಹರನ ರಗಳೆಗಳು, ಕುಮಾರವ್ಯಾಸ ಭಾರತ, ಬಸವಣ್ಣನ ವಚನಗಳು, ಮಂಟೇಸ್ವಾಮಿ ಕಾವ್ಯ, ಆದಿಪುರಾಣ, ಅಕ್ಕಮಹಾದೇವಿ ವಚನಗಳು, ಮಲೆಮಾದೇಶ್ವರ ಕಾವ್ಯ, ಧರ್ಮಾಮೃತ, ಹರಿಶ್ಚಂದ್ರಕಾವ್ಯ, ಸಿರಿ ಮಹಾಕಾವ್ಯ, ಜೈಮಿನಿ ಭಾರತ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಜನಮತ ಹಾಲುಮತ ಮಹಾಕಾವ್ಯ ಸಾಂಸ್ಕೃತಿಕ ಮುಖಾಮುಖಿ ವಿಚಾರಸಂಕಿರಣ ನಡೆಯಲಿದೆ.

ಈ ಕಾರ್ಯಕ್ರಮಗಳು ಪಟ್ಟಣ ನಗರಗಳಲ್ಲಿ ಮಾತ್ರವಲ್ಲದೆ ತಿಪ್ಪೂರು ಕೂಡಲಸಂಗಮ ಮುಂತಾದ ಪುಟ್ಟ ಊರುಗಳಲ್ಲೂ ನಡೆದಿವೆ. ಇವುಗಳಲ್ಲಿ ನಾಡಿನ ಬೇರೆ ಬೇರೆ ಶಾಸ್ತ್ರಶಿಸ್ತುಗಳಿಗೆ ಸೇರಿದ ಸುಮಾರು ೧೫೦ ವಿದ್ವಾಂಸರನ್ನು ಒಳಗು ಮಾಡಲಾಗಿದೆ. ಇವರಲ್ಲಿ ಹಿರಿಯ ವಿದ್ವಾಂಸರು ಹೊಸ ತಲೆಮಾರಿನ ಪ್ರತಿಭಾವಂತರು ಸೇರಿದ್ದಾರೆ. ಈ ಕಾರ್ಯಕ್ರಮದ ಫಲವಾಗಿ ಈಗಾಗಲೇ ೧೪ ಕೃತಿಗಳು ಪ್ರಕಟವಾಗಿವೆ. ಈ ಪುಸ್ತಕಗಳಿಗೆ ಸಾಹಿತ್ಯಾಸಕ್ತರಿಂದ ವಿದ್ಯಾರ್ಥಿ ಗಳಿಂದ ಸಾಕಷ್ಟು ಬೇಡಿಕೆ ಇದೆ. ವಿಭಾಗವು ಮೊದಮೊದಲು ವರ್ಷಕ್ಕೆ ಒಂದರಂತೆ ಕಾರ್ಯಕ್ರಮ ಮಾಡುತ್ತಿತ್ತು. ಕರ್ನಾಟಕದಾದ್ಯಂತ ಈ ಕಾರ್ಯಕ್ರಮಗಳಿಗೆ ಸಿಕ್ಕ ಪ್ರೋಕಂಡ ಬಳಿಕ ವರ್ಷಕ್ಕೆ ಎರಡು ಅಥವಾ ಮೂರರಂತೆ ವಿಚಾರಸಂಕಿರಣಗಳನ್ನು ನಡೆಸುತ್ತಿದ್ದೇವೆ. ಈ ಕಾರ್ಯಕ್ರಮ ಮತ್ತು ಪುಸ್ತಕದ ಸರಣಿಯು ವಿಭಾಗಕ್ಕೆ ಅಭೂತಪೂರ್ವ ಅನುಭವವನ್ನು ತಂದುಕೊಟ್ಟಿದೆ.

ಒಂದು ಶತಮಾನದ ನಂತರ ಸಾಹಿತ್ಯ ಅಧ್ಯಯನವನ್ನು ಒಳಗೊಂಡಂತೆ ಕಲಾ ವಿಭಾಗದ ಎಲ್ಲಾ ಶಾಸ್ತ್ರಶಿಸ್ತುಗಳು ಅಪ್ರಸ್ತುತವೆನ್ನುವ ಮಟ್ಟಿಗೆ ನಾವು “ಆಧುನಿಕ”ರಾಗುತ್ತಿದ್ದೇವೆ. ಇದು ಜಾಗತೀಕರಣ, ಖಾಸಗೀಕರಣ ವಿಜ್ಞಾನ ಸಂಶೋಧನೆಗಳ ಫಲವೇ ಇರಬಹುದು. ಆದರೆ ಯಾವುದೇ ಶಾಸ್ತ್ರಶಿಸ್ತು ಇಂದು ಪ್ರತ್ಯೇಕವಾಗಿ ತನ್ನನ್ನಷ್ಟೇ ಕಾಯ್ದುಕೊಳ್ಳುವ ಸ್ಥಿತಿಯಲ್ಲಿಲ್ಲ. ಅಂದರೆ ಬೇರೆ ಬೇರೆ ಜ್ಞಾನಶಿಸ್ತ್ರುಗಳಿಂದ ತನ್ನ ಜ್ಞಾನಶಿಸ್ತುನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ. ವಿಭಾಗದ ಸಾಂಸ್ಕೃತಿಕ ಮುಖಾಮುಖಿ ಈ ಪ್ರಭುತ್ವದ ಭಾಗವಾಗಿ ಕೆಲಸ ಮಾಡುತ್ತಿದೆ.

ಜೈನಧರ್ಮ ಮತ್ತು ಜೈನ ಕವಿಗಳು ಬರೆದ ಕಾವ್ಯಗಳನ್ನು ಕುರಿತಂತೆ ಈಗಾಗಲೇ ವಡ್ಡಾರಾಧನೆ, ಆದಿಪುರಾಣ, ರಾಜಾವಳಿಕತೆ ವಿಚಾರಸಂಕಿರಣಗಳಲ್ಲಿ ಮಂಡಿತವಾದ ಪ್ರಬಂಧ ಗಳು ಪುಸ್ತಕ ರೂಪದಲ್ಲಿ ಬಂದು ವಿದ್ವಾಂಸರ ಗಮನ ಸೆಳೆದಿವೆ. ಈ ಸಾರಿ ಈ ವಿಚಾರಸಂಕಿರಣ ಮಾಲಿಕೆಗೆ ನಯಸೇನನ ಧರ್ಮಾಮೃತ ಪಠ್ಯವನ್ನು ಆಯ್ಕೆ ಮಾಡಲಾಗಿದೆ. ನಯಸೇನ ಈ ಕೃತಿಯನ್ನು ರಚಿಸುವ ಹೊತ್ತಿಗಾಗಲೇ ಶರಣ ಚಳುವಳಿಯ ಪ್ರಭಾವ ಕನ್ನಡದಲ್ಲಿ ಕಾಣಿಸಿಕೊಂಡಿತ್ತು. ಶರಣ ಧರ್ಮ ವೀರಶೈವ ಧರ್ಮವಾಗಿ ಸಾಂಸ್ಥಿಕಗೊಳ್ಳಲು ಅಣಿ ಯಾಗುತ್ತಿತ್ತು. ಅಂದರೆ ಜೈನಧರ್ಮದ ಅವನತಿ ಪ್ರಾರಂಭವಾಗಿತ್ತು. ಜೈನಧರ್ಮ ಪರಿಭಾಷೆ ಯಲ್ಲೇ ಹೇಳುವುದಾದರೆ ಇದು ಅವಸರ್ಪಿಣಿ ಕಾಲ. ನಯಸೇನನ ಧರ್ಮಾಮೃತ ಕಾವ್ಯದ ದೃಷ್ಟಿಯಿಂದ ಉತ್ತಮವಾದ ಕೃತಿಯೇನು ಅಲ್ಲ. ಆದರೆ ಜನಪದದಿಂದ ಮತ್ತು ಮೌಖಿಕತೆ ಯಿಂದ ಪ್ರೇರಣೆ ಪಡೆದ ಕೃತಿಯಾಗಿದೆ. ಇದರ ಜೊತೆಗೆ ಶಿಷ್ಟ ಸಾಹಿತ್ಯ ಕೃತಿಗಳಾದ ವಡ್ಡಾರಾಧನೆ ಮತ್ತು ದುರ್ಗಸಿಂಹನ ಪಂಚತಂತ್ರದ ಕತೆಗಳ ಪ್ರಭಾವವು ಈ ಪಠ್ಯದಲ್ಲಿ ಕಾಣಿಸಿಕೊಂಡಿದೆ. ಜೈನಧರ್ಮಗಳು ಮೂಲತಃ ನಾಸ್ತಿಕ ನೆಲೆಗಟ್ಟಿನವು. ವೈದಿಕರು ಮತ್ತು ವೀರಶೈವರ ದೈವ ಸೃಷ್ಟಿಯನ್ನು ನಂಬಿದ ಇವರು ಇಲ್ಲಿನ ಅನೇಕ ಕತೆಗಳಲ್ಲಿ ಅವುಗಳನ್ನು ಲೇವಡಿ ಮಾಡಿದ್ದಾರೆ. ಜನವಾಣಿ ಆಗದ ವೇದಗಳನ್ನು, ವಚನಗಳನ್ನು ಜೈನರು ಪ್ರಾಮಾಣ್ಯಗಳಾಗಿ ಸ್ವೀಕರಿಸದೆ ಜೈನಾಗಮಗಳನ್ನೇ ಆಕರಗಳಾಗಿ ಬಳಸಿ ಜಿನಧರ್ಮವನ್ನು ಮೆರೆದಿದ್ದಾರೆ. ನಯಸೇನನ ಧರ್ಮಾಮೃತದಲ್ಲಿ ಈ ಅಂಶಗಳು ಎದ್ದು ಕಾಣುತ್ತವೆ. ಕೊಲೆ ಸುಲಿಗೆ ಪ್ರೇಮ, ಕಾಮ ಇತ್ಯಾದಿಗಳನ್ನೆಲ್ಲಾ ನಯಸೇನನು ನಿರ್ಭೀತಿಯಿಂದ ನಿರ್ವಹಿಸಿದ್ದಾನೆ. ಇದಕ್ಕೆ ಜೈನ ಧರ್ಮದ ನಿರೀಶ್ವರವಾದವೇ ಕಾರಣ. ೧೧೧೨ರಲ್ಲಿ ರಚಿತವಾದ ಈ ಕಾವ್ಯವು ಕನ್ನಡದ ಅಂದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ತಲ್ಲಣಗಳ ಮೇಲೆ ಬೆಳಕು ಚೆಲ್ಲಿದೆ.

ಈ ವಿಚಾರ ಸಂಕಿರಣದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ ಡಾ. ಬಿ. ಎಂ. ಪುಟ್ಟಯ್ಯ ನವರ ಸಂಪಾದಕತ್ವದಲ್ಲಿ ಈ ಕೃತಿ ಇನ್ನಷ್ಟು ಉತ್ತಮವಾಗಿ ಪ್ರಕಟವಾಗುತ್ತಿದೆ. ಅವರ ಶ್ರಮಕ್ಕೆ ವಿಭಾಗದ ಮುಖ್ಯಸ್ಥನಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಕಾರ್ಯಕ್ರಮ ನಡೆಯಲು ಎಲ್ಲಾ ತರದ ಸಹಕಾರ ನೀಡಿದ ಮಾಜಿ ಕುಲಪತಿಗಳಾದ ಪ್ರೊ. ಬಿ. ಎ. ವಿವೇಕ ರೈ ಅವರಿಗೆ, ಪ್ರೊ. ರಹಮತ್ ತರೀಕೆರೆಯವರಿಗೆ, ಡಾ. ಅಮರೇಶ ನುಗಡೋಣಿಯವರಿಗೆ, ಕಛೇರಿ ಕೆಲಸಗಳನ್ನು ನಿರ್ವಹಿಸಿದ ಶ್ರೀ ಶಿವಪ್ಪ ಮತ್ತು ಶ್ರೀ ಹನುಮಂತಪ್ಪನವರಿಗೆ ಕೃತಜ್ಞತೆ ಗಳನ್ನು ಸಲ್ಲಿಸುತ್ತೇನೆ. ಪ್ರಕಟಣೆಯಲ್ಲಿ ನೆರವಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ, ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ, ಕಲಾವಿದರಾದ                  ಶ್ರೀ ಕೆ.ಕೆ. ಮಕಾಳಿಯವರಿಗೆ ಕೃತಜ್ಞತೆಗಳು.

ಡಾ. ವೆಂಕಟೇಶ ಇಂದ್ವಾಡಿ