ಇಸ್ಮಾಯಿಲ್ ಜಬೀರ್

ಮೊಗಳ್ಳಿ ಸರ್ ಆರಂಭದಲ್ಲಿ ಧರ್ಮದ ಕುರಿತಾಗಿ ಒಂದು ಮಾತು ಹೇಳಿದರು. ನನಗೆ ಒಂದು ಚಿಕ್ಕ ಡೌಟ್ ಬರ್ತದೆ. ಏನೆಂದರೆ ಮತೀಯ ಧರ್ಮದ ಕಲ್ಪನೆ ಮತ್ತು ಸಾಹಿತ್ಯದಲ್ಲಿಯ ಅವಸ್ಥಾಂತರ ಧರ್ಮದ ಕಲ್ಪನೆಯನ್ನು ಈ ಧರ್ಮಾಮೃತ ಕೃತಿಯ ಮೂಲಕ ಯಾವ ರೀತಿ ಗ್ರಹಿಸಬಹುದು ಅಂತ.

ಮೊಗಳ್ಳಿ

ನನ್ನ ಮಾತಿನ ಮಧ್ಯೆದಲ್ಲಿ ಹೇಳಿದೆ. ಇವೆಲ್ಲ ಒಂದು ಧರ್ಮದ ಚೌಕಟ್ಟನ್ನ ಮೀರಿ, ತನ್ನ ಕಾಲದ ಮನುಷ್ಯತ್ವದ ಸಂಬಂಧಗಳನ್ನ ಹುಡುಕಿಕೊಂಡು ಆ ಕತೆಗಳು ಬರುತ್ತವೆ ಅನ್ನೊದನ್ನ ಬಹಳ ಸಣ್ಣದಾಗಿ ಹೇಳಿದ ನಾನು ಬೇರೆ ವಿಷಯಕ್ಕೆ ಹೋದೆ. ಇವತ್ತಿನ ಮತೀಯ ವಾತಾವರಣದ ಮಧ್ಯೆ ನಿಂತು ಈ ಕತೆಗಳನ್ನ ಪ್ರವೇಶ ಮಾಡೋವಾಗ ಒಂದು ಬಗೆಯಲ್ಲಿ ಪೂರ್ವಾಗ್ರಹಗಳನ್ನ ಕಳೆದುಕೊಂಡೇ ನಾವು ಇವುಗಳನ್ನು ಓದಬೇಕಾಗ್ತದೆ. ಏಕೆಂದರೆ ನಮಗಿದು ಜೈನಪಠ್ಯ, ಜೈನಧರ್ಮದ ನೀತಿಯನ್ನು ಹೇಳಲಿಕ್ಕೇನೆ ಈ ಕತೆಗಳನ್ನ ನಾನು ಹೇಳ್ತೀನಿ ಅಂತ ಮೂಲ ನಯಸೇನನ ಭಾಷೆಯಲ್ಲೇ ಅದು ಕಾಣಿಸಿಕೊಳ್ಳೋದರಿಂದ, ನಾವು ಇದು ಧಾರ್ಮಿಕ ಪಠ್ಯ ಅನ್ನೋ ರೀತೀಲಿ ಪ್ರವೇಶ ಮಾಡಬೇಕಾದ್ದಿಲ್ಲ. ನಾನು ಆರಂಭದಲ್ಲಿ ಹೇಳಿದ ಒಂದು ಕತೆ ರೀತಿಯಲ್ಲಿ ಅನಂತವಾದ ಮುಕ್ತಿಯ ಹುಡುಕಾಟವನ್ನು ಲೌಕಿಕದ ಪಾತ್ರಗಳ ಜೊತೆಗೆ ಅದು ಮಾಡ್ತಾಯಿರ್ತದೆ. ಧರ್ಮ ಇಡೀ ಸಮಾಜದ ಜೊತೆಗೆ ಅದನ್ನ ಭೇದಿಸೋದಿಕ್ಕೆ ಹೊಗ್ತದೆ. ಆ ಅರ್ಥದಲ್ಲಿ ನಯಸೇನನ ಧರ್ಮಾಮೃತದ ಈ ಕತೆಗಳು ವರ್ತಮಾನದಲ್ಲಿರುವ ಲೌಕಿಕದ ಈ ಕೇಡನ್ನ ಮೀರೋದಕ್ಕೆ ಒಂದು ಧಾರ್ಮಿಕವಾದ ಚೌಕಟ್ಟನ್ನು ಹಾಕಿಕೊಂಡಿವೆ. ಅವು ನಾಮ ಹಾಕಿಕೊಂಡಿರಬಹುದು ಅಥವಾ ಧಾರ್ಮಿಕ ಸಂಕೇತಗಳನ್ನ ಹಾಕಿಕೊಂಡಿರಬಹುದು. ಆದರೆ ಅದರಾಚೆಗೂ ಈ ಕತೆಗಳು ತೀವ್ರವಾದ ಒಂದು ಮನುಷ್ಯ ಸಂಬಂಧವನ್ನ ಮಾತನಾಡುತ್ತಿವೆ. ಮಾಸ್ತಿಯವರ ಹಣೆಯ ಮೇಲಿನ ನಾಮ ಎದ್ದುಕಂಡರೂ ಕೂಡ ಅವರ ಮೊಸರಿನ ಮಂಗಮ್ಮನ ಮೇಲೆ ಅದು ಬೇರೆಯ ಸಂಕೇತವಿದೆ.  ಆ ಅರ್ಥದಲ್ಲಿ ಈ ಕತೆಗಳಿಗೆ ಧರ್ಮ ಸಂಕೇತಗಳಿವೆ. ಜೈನಧರ್ಮದ ಒಂದು ಕವಚ ಇದೆ. ಅದರೂ ಕೂಡ ಅದರೊಳಗಿನ ಸಂಬಂಧ ಅಪ್ಪಟ ಧಾರ್ಮಿಕವಾದುದಲ್ಲ. ಧರ್ಮದ ನೆಪದಲ್ಲೆ ಧರ್ಮಾತೀತವಾದಂತಹ ಒಂದು ಹುಡುಕಾಟವನ್ನ ಈ ಕತೆಗಳು ಮಾಡಿವೆ. ಆ ಚೌಕಟ್ಟಿನಲ್ಲೆ ಜಾತ್ಯತೀತವಾಗಿ ಇದನ್ನ ಓದಬೇಕು, ಧರ್ಮಾತೀತವಾಗಿ ಇವನ್ನ ಭಾವಿಸ ಬೇಕು. ಹಾಗಾದಾಗ ಇವುಗಳಿಂದ ನಮಗೂ ಕೂಡ ಒಂದು ಸಂವೇದನೆ ವಿಸ್ತರಿಸಲಿಕ್ಕೆ ಸಾಧ್ಯ ವಾಗುತ್ತದೆ ಅಂತ ಅನ್ನಿಸುತ್ತೆ.

ಅರುಣ್ ಜೋಳದಕೂಡ್ಲಿಗಿ

ನಯಸೇನನ ಧರ್ಮಾಮೃತದ ಈ ಎರಡು ಚರ್ಚೆಗಳನ್ನು ಕೇಳಿ ನನಗಿರುವಂತಹ ಎರಡು ಅನುಮಾನಗಳನ್ನ ಇಲ್ಲಿ ವಿಷಯ ಮಂಡಕರ ಜೊತೆ ಹಂಚಿಕೊಳ್ತೀನಿ ಮತ್ತು ಆ ಚರ್ಚೇನ ಹೀಗೂ ಬೆಳಸಲಿಕ್ಕೆ ಸಾಧ್ಯನಾ ಅನ್ನುವ ನೆಲೆಯಲ್ಲಿ ಪ್ರಶ್ನೆಯನ್ನು ಎತ್ತುವ ನೆಲೆಯಲ್ಲಿ ನಯಸೇನನನ್ನು ನಾವು ಕನ್ನಡ ಜಾನಪದದ ಮೊದಲ ಕವಿ ಅಂತ ಬ್ರಾಂಡ್ ಮಾಡುತ್ತೀವಿ. ಹಾಗಾಗಿ ಅವನು ತನ್ನ ಹಿರಿಯರನ್ನು ನೆನಸಿಕೊಳ್ಳುವ ಸಂದರ್ಭದಲ್ಲಿ ಮೊದಲೇ ಹೇಳ್ತಾನೆ. ಅಸಗನ ದೇಸಿ ಅಂತ ಅಂದರೆ ಅವನು ಪಂಪ ರನ್ನರಂತ ಕವಿಗಳಿಗಿಂತ ಮುಂಚೆ ಅಸಗನ ದೇಸಿ ನೆನೆಯುತ್ತಲೆ, ತನ್ನ ಹಿರಿಯ ಕವಿಗಳನ್ನ ನೆನೀತಾ ಹೋಗ್ತಾನೆ. ಈ ನೆಲೆಯಲ್ಲಿ ಕೂಡ ಅವನನ್ನು ಜನಪದರ  ಮೊದಲ ಕವಿ ಅನ್ನೋದರಲ್ಲಿ ಒಂದು ಅರ್ಥಪೂರ್ಣ ಅನ್ನಿಸಬಹು ದೇನೊ, ಬಹುಶಃ ಜನಪದ ಆಕರಗಳನ್ನು ಬಳಸಿಕೊಳ್ಳೋ ಮೂಲಕ ಆ ಕೃತಿ ಒಂದು ಶಿಷ್ಟವಾಗಿರುವ ಕೃತಿ ಜನಪದರಿಗೆ ಆಪ್ತವಾಗಿರುವ ನೆಲೆಯಲ್ಲಿಯೆ, ಆ ನೆಲೆಯಲ್ಲಿಯೇ ಧರ್ಮವನ್ನು ಆ ಮನಸ್ಥಿತಿಯೊಳಗೆ ಸ್ಥಾಪಿಸುವ ನೆಲೆಯೊಳಗೆ ಕಲ್ಚರಲ್ ಪಾಲಿಟಿಕ್ಸ್ ಇಲ್ಲಿ ತುಂಬ ಸೆನ್ಸಿಟಿವ್ ಆಗಿ ಕೆಲಸ ಮಾಡಿದೆಯೇನೊ ಎಂಬ ಅನುಮಾನ ಬರ್ತಾಯಿದೆ. ಅಂದರೆ ಹೀಗೆ ಫೋಕ್ Forms ಮತ್ತು ಪ್ರತಿಮೆಗಳನ್ನು ಇಟ್ಟುಕೊಂಡು ನೋಡಿದರೂ, ನಾವು ಅದನ್ನ ಈ ರೀತಿಯಲ್ಲಿ ಚರ್ಚೆ ಬೆಳೆಸಬಹುದು ಅನ್ನಿಸುತ್ತೆ. ಡಿ.ಆರ್. ಅವರು ನವ ಮೌಖಿಕತೆಯ ಬಗ್ಗೆ ಮಾತಾಡ್ತಾ ಹೇಳ್ತಾರೆ. ಪ್ರತಿಮಾಲಭ್ಯತೆ, ಪದಲಭ್ಯತೆ ಮತ್ತು ಕುಲಲಭ್ಯತೆ ಅಂತ. ಅಂದರೆ ಪ್ರತಿಮಾಲಭ್ಯತೆ ಅಂದರೆ ಜನಪದರಲ್ಲಿರುವ ಪ್ರತಿಮೆಗಳನ್ನು ಬಳಸಿಕೊಳ್ಳುವ ಮೂಲಕ, ಜಾಹೀರಾತು, ಮೀಡಿಯಾಗಳಲ್ಲಿ ಬಳಸಿಕೊಳ್ಳುವ ಮೂಲಕ ಆ ಪ್ರತಿಮೆಗಳನ್ನು ಕುಗ್ಗಿಸುತ್ತಾರೆ. ಅನಂತರ ಶಿಷ್ಟಕವಿಗಳು ಈ ತರಹದ ಬರಹಗಾರರು  ಆ ಪ್ರತಿಮೆಗಳನ್ನ ಬಳಸಿಕೊಳ್ಳಲಿಕ್ಕೆ ಆಗಲ್ಲ. ಜನಪದ ಪ್ರತಿಮೆಗಳನ್ನು ಬಳಸಿಕೊಳ್ಳೋ ಮೂಲಕ ಒಂದು ಗ್ಲೋಬಲ್ಲಾಗಿರುವ ಸರಕುಗಳನ್ನು ಜನಪದರು ಹೇಗೆ ತಮ್ಮವನ್ನಾಗಿ ಸ್ವೀಕರಿಸುತ್ತಾರೆ ಅನ್ನುವಂತ ಪಾಲಿಟಿಕ್ಸ್ ಏನು ನಡೀತಾಯಿದೆ ಬಹುಶಃ ಅಂತ ಒಂದು ಪಾಲಿಟಿಕ್ಸ್ ಸಹ ನಯಸೇನನ ಕಾಲದಿಂದಲೇ ಇತ್ತು ಅನ್ನೋದನ್ನ ಅಂದರೆ ಜನಪದ ಕಾವ್ಯದ ನುಡಿಗಟ್ಟು ಗಳನ್ನು ಶಿಷ್ಟಕಾವ್ಯದಲ್ಲಿ ಬಳಸಿಕೊಳ್ಳುವ ಮೂಲಕ ಜೈನಧರ್ಮವನ್ನು ಅವರ ಧರ್ಮವಾಗಿ ಸುವುದು. ಬಹುಶಃ ಈ ನೆಲೆಯಲ್ಲಿ ಈಗ ಚರ್ಚೆಯನ್ನು ನೋಡಬಹುದೇನೊ ಮತ್ತೆ ನುಗಡೋಣಿ ಸಾರ್ ಮಾತಾಡ್ತಾ ಹೇಳ್ತಾ ಇದ್ದರು. ಇದನ್ನ ಒಂದು ಧರ್ಮದ ನೆಲೆಯಲ್ಲಿ ಮತ್ತೆ ಅವನು ಬ್ರಾಹ್ಮಣ ಧರ್ಮವನ್ನು ವಿಡಂಬಿಸುತ್ತಾನೆ ಅಂತ ನನಗೆ ಕಾಣಿಸ್ತಾಯಿಲ್ಲ ಅಂತ ಹೇಳುತ್ತಿದ್ದರು. ಬಹುಶಃ ವಿಡಂಬನೆ ಇತ್ತು. ಆ ರೀತಿ ವಿಡಂಬಿಸುವ ಮೂಲಕವೇ ಬ್ರಾಹ್ಮಣಧರ್ಮವನ್ನು ಅಲ್ಲಗಳೆಯುವಂತಹ ಸೂಕ್ಷ್ಮತೆಗಳು ನಯಸೇನನಲ್ಲಿದ್ದವು ಅಂತ ಅನ್ನಿಸುತ್ತೆ. ಏಕೆಂದರೆ ತನಗೆ ತಾನು ಪರಿಚಯ ಮಾಡಿಕೊಳ್ತಾ ಹೇಳ್ತಾನೆ. ಜಿನವೆಂಬ ಆಕಾಶಕ್ಕೆ ತಾನು ಸೂರ್ಯ ಅಂತ. ಅಂದರೆ ಜಿನಧರ್ಮವೆಂಬ ಆಕಾಶಕ್ಕೆ  ನಾನು ಸೂರ್ಯನಿದ್ದ ಹಾಗೆ ಅಂತ ಹೇಳಿಕೊಳ್ತಾನೆ. ಮತ್ತೆ ಬ್ರಾಹ್ಮಣ ಧರ್ಮವನ್ನು ಹೀಗೆ ವಿಡಂಬಿಸುತ್ತಾನೆ. ಅಂದರೆ ಬ್ರಹ್ಮನ ನಾಭಿಯಲ್ಲಿ ಕಮಲ ಹುಟ್ಟುತ್ತದೆ ಅಂತ ಏನು ಬ್ರಾಹ್ಮಣ ಧರ್ಮ ಹೇಳುತ್ತೆ ಅವನು ಅದನ್ನು ವಿಡಂಬಿಸಿ ಹೇಳುತ್ತಾನೆ. ಬ್ರಹ್ಮನ ನಾಭಿಯಲ್ಲಿ ಕಮಲ ಹುಟ್ಟುವುದಾದರೆ, ಬ್ರಹ್ಮನ ನಾಭಿಯಲ್ಲಿ ಎಷ್ಟರ ಮಟ್ಟಿಗೆ ಗೊಜ್ಜಲು ಕೆಸರು ಎಲ್ಲ ಇತ್ತು ಅಂತ ಅವನು ಹೇಳ್ತಾನೆ. ಮತ್ತೆ ಶಿವ ಸುಡುಗಾಡಿನಲ್ಲಿ ತಪಸ್ಸು ಮಾಡ್ತಾನೆ ಅನ್ನುವ ಬ್ರಾಹ್ಮಣ ಧರ್ಮದ ತತ್ವವನ್ನು ವಿಡಂಬಿಸುತ್ತಾ, ಸಂಸಾರಿಯಾದಂತಹ ಶಿವನಿಗೆ ಸುಡುಗಾಡಿನಲ್ಲಿ ತಪಸ್ಸು ಮಾಡು ವಂತಹ ಕೇಡುಗಾಲ ಯಾಕಾದರೂ ಬಂತು ಅಂತ ಅವನು ಜಿನಧರ್ಮವನ್ನು ಎತ್ತಿಹಿಡಿಯಲಿಕ್ಕೆ ಬ್ರಾಹ್ಮಣ ಧರ್ಮವನ್ನು ವಿಡಂಬಸುವ ರೀತಿಯಲ್ಲಿ ಅದನ್ನು ಬೇರೆ ರೀತಿಯಲ್ಲಿ ಡೈವರ್ಟ್ ಮಾಡಲಿಕ್ಕೆ ಪ್ರಯತ್ನಗಳಾಗ್ತಾಯಿದಾವೇನೊ ಅನ್ನಿಸುತ್ತೆ. ಬಹುಶಃ ಈ ನೆಲೆಯಲ್ಲಿ ನಯಸೇನ ನನ್ನು ಒಟ್ಟಾಗಿ ಹೇಗೆ ಅರ್ಥೈಸಿಕೊಳ್ಳಬೇಕು ಅನ್ನೋದು ನನ್ನ ಒಂದು ಸವಾಲು.

ಮೊಗಳ್ಳಿ ಗಣೇಶ

ಅರುಣ್ ಮಾತಿನಲ್ಲಿ ಗಮನಿಸಬಹುದಾದಂತಹ ಒಂದು ಅಂಶ ಇತ್ತು. ಅದೇನೆಂದರೆ ಅವನ ಕಲ್ಚರಲ್ ಏನು ಅನ್ನೊದನ್ನು ಗಮನಿಸಿಕೊಳ್ಳಬಹುದು. ಆದರೆ ಅದು ಕಲ್ಚರಲ್ ಪಾಲಿಟಿಕ್ಸ್ ಅಲ್ಲ. ಅದೊಂದು ರಿಲಿಜಿಯಸ್ ಪಾಲಿಟಿಕ್ಸ್. ಅದು ಅವನ ಧಾರ್ಮಿಕ ರಾಜಕಾರಣ, ಆ ಧಾರ್ಮಿಕ ರಾಜಕಾರಣದಲ್ಲಿ ನಾವು ಇರುವ ಪಾಸಿಟಿವ್ಸ್ ಏನು ಅನ್ನೋದನ್ನ ನಾವು ಗಮನಿಸಬಹುದು. ಅದು ಕಲ್ಚರಲ್ ಪಾಲಿಟಿಕ್ಸ್ ಅಲ್ಲ. ಇವತ್ತಿನ ಟ್ರೆಂಡ್ ಅದು. ಆ ಮಧ್ಯಕಾಲೀನ ಇತಿಹಾಸದಲ್ಲೇ  ಮಂಟೇಸ್ವಾಮಿ, ಮಾದೇಶ್ವರ ಹುಟ್ಟಿಕೊಳ್ಳೊದು ಅದು ಕಲ್ಚರಲ್ ಪಾಲಿಟಿಕ್ಸ್ ಅದು – But ಇದು ನಯಸೇನನ ಇಕ್ಕಟ್ಟು. ಅದು ಧಾರ್ಮಿಕ ರಾಜಕಾರಣವನ್ನು ಒಂದು ಕಥನದ ನಿರೂಪಣೆಯಲ್ಲಿ ಕಟ್ಟಿಕೊಳ್ಳೋಕೆ ಅವನು ಮಾಡುತಿರೊ ಪ್ರಯತ್ನ. So ಅದನ್ನು ಖಂಡಿತ ಗಮನಿಸಿಬಹುದು. ಆದರೆ ಅದರಲ್ಲಿದ್ದ ಪಾಸಿಟಿವ್ ಏನೆಂದ್ರೆ ಅವನು ಎಲ್ಲೂ ಮತೀಯ ಆಗೋದಿಲ್ಲ. ನೀನು ಹೇಳಿದೆಯಲ್ಲ ಅದು ಮತೀಯವಾಗಿ ಕಾಣುತ್ತೆ ಅದು ಅಂತ. ಇಲ್ಲ ಮೊದಲಿಗೆ ಅಮರೇಶ್ ಅದನ್ನು ಉಲ್ಲೇಖ ಮಾಡಿದರು.

ಮತೀಯ ಅಂದ್ರೆ ಏನು ದಯವಿಟ್ಟು ಹೇಳಿ? (ಸಿ) ರಾಜಶೇಖರಪ್ಪ ಮಧ್ಯದಲ್ಲಿ ಕೇಳೂ ಪ್ರಶ್ನೆ. ವರ್ತಮಾನದಲ್ಲಿ ಮತೀಯ ಅವತಾರಗಳನ್ನು ಗಮನಿಸಿ ಅದರ ಕೇಡನ್ನು ನೀವು ಗಮನಿಸಿ. ನೀವು ಈ ಪ್ರಶ್ನೆಯನ್ನು ಕೇಳಿದ್ರೆ ಅದು ಔಚಿತ್ಯ ಅಂತ ಅನ್ನಿಸುತ್ತೆ. ಆದ್ರೆ ಮತೀಯ ವಾದದ್ದು ಅದು ಮಾರ್ಕ್ಸ್ ಹೇಳಿದ ಹಾಗೆ ಒಟ್ಟು ಧರ್ಮದ ಹಿನ್ನೆಲೆಯಲ್ಲಿ ಅತ್ಯಂತ ಕ್ರೂರ ವಾದ ಅಣುಗಳು ಮತಮೌಢ್ಯಗಳನ್ನು ಕುವೆಂಪುರವರು ಬಹಳ ಚೆನ್ನಾಗಿ ವ್ಯಾಖ್ಯಾನ ಮಾಡಿದ್ದಾರೆ. ಹಿಂದು ಮತೀಯ ಧೋರಣೆಗಳು ನಿಚ್ಚಳವಾಗಿ ರಾಜಕಾರಣದಲ್ಲಿ ಕಾಣಿಸುತ್ತಿ ರುತ್ತವೆ. ಅವುಗಳನ್ನು ಭಾವಿಸಿ ಅದಕ್ಕೆ ಒಂದೆರಡು ವಾಕ್ಯದಲ್ಲಿ ನಾನು ಹೇಳೋದಾದ್ರೆ ವರ್ತಮಾನದಲ್ಲೆ ಅದು ನಮ್ಮನ್ನು ನಿಯಂತ್ರಿಸ್ತಾಯಿದೆ. So ಹಾಗೆ ನಿಯಂತ್ರಿಸುವ ನಿಗೂಢತೆಗಳನ್ನು ಒಂದೆರಡು ವಾಕ್ಯದಲ್ಲಿ ಹೇಳೋದು ಅಪರಾಧ ಆಗುತ್ತೆ. ಆದ್ದರಿಂದ ನಾನು ವ್ಯಾಖ್ಯಾನಕಾರ ಅಲ್ಲ. ನಾನು ಪುಕ್ಕಟೆ ವ್ಯಾಖ್ಯಾನವನ್ನು ನೀಡುವುದಿಲ್ಲ. ಆದರೆ ಆ ಮತೀಯ ಸಂಘರ್ಷಗಳನ್ನು ನಯಸೇನ ಒಂದು ರೀತಿಯಲ್ಲಿ ಸಾಮರಸ್ಯದಿಂದಲೇ  ನೋಡು ತ್ತಾನೆ. ಬ್ರಾಹ್ಮಣ ಪಾತ್ರದಾರಿ ಮೊದಲನೆ ಸಮ್ಯಕ್ ದರ್ಶನದ ಕತೆಯೊಳಗೆ ಅವನು ಸಣ್ಣ ವ್ಯಂಗ್ಯ ಮಾಡಿ ಅವನ ಮನಸ್ಸಿನಲ್ಲಿರಬಹುದಾದಂತಹ ಈ ಆಯ್ಕೆಯನ್ನು ನಿರಾಕರಿಸಿ ಅಥವಾ ಅದನ್ನು ತೊಡೆದು ಈ ನೋಂಪಿಯ ಆಚರಣೆಗೆ ಒಳಪಡಿಸಿ ಅವನು ಪ್ರಾಕ್ಟಿಕಲ್ಲಾಗಿ ಅವನಿಗೆ ಜ್ಞಾನೋದಯ ಮಾಡಿಸುತ್ತಾನೆ. ಅಥವಾ ಇವನು ಬಾಯಲ್ಲಿ ಆಡಿಬಿಡಿಬಹುದಾಗಿತ್ತು. ಈ ಕೆಟ್ಟ ಸವಣರ ಮಾತನ್ನು ಕೇಳಿಕೊಂಡು ಇವನು ಹೀಗಾಗಿದ್ದಾನೆ ಅಂತ ಬ್ರಾಹ್ಮಣ ಬೈದಾಗ ಇವನು ಅದಕ್ಕೆ ಬೈಯೋದಿಲ್ಲ. ಮತೀಯ ಆಗಿದ್ದಿದ್ರೆ ಏನನ್ನೋದು ಹೆಚ್ಚು ಮಾತನಾಡಬಹು ದಾಗಿತ್ತು. ಆದರೆ ನೋಂಪಿಯ ಆಚರಣೆಗೆ ಒಳಪಡಿಸಿ ಅವನ ತಿಳುವಳಿಕೆಯನ್ನು ಅವನು ವಿಸ್ತರಿಸುತ್ತಾನೆ. ಹಾಗಾಗಿ ಇಲ್ಲಿ ಬಹಳ ಮುಖ್ಯವಾದದ್ದು ಮತೀಯವಾಗಿ, ಜಾತ್ಯತೀತವಾಗಿ ಓದಬೇಕು ಅಂತ ಕೇಳಿಕೊಳ್ಳುತ್ತೇನೆ. ಮತೀಯವಾಗಿ ಇವನ್ನು ನಾವು ಪ್ರವೇಶ ಮಾಡಿದರೆ ನಮಗೆ ಏನೂ ಸಿಕ್ಕುವುದಿಲ್ಲ.

ವಿರೇಶ್ ಉತ್ತಂಗಿ

ನುಗಡೋಣಿ ಸಾರ್ ಕತೆ ಹಾಗೆ ಉಳಿಯುತ್ತದೆ ಅದರಲ್ಲಿರುವ ಧರ್ಮದ ತತ್ವ ಉಳಿಯಲ್ಲ ಎಂದು ಹೇಳಿದರು. ನಾನು ಇದಕ್ಕೆ ಪೂರಕವಾಗಿ ಹೇಳೋದಾದರೆ ಧರ್ಮ ಅಂತದ್ದನ್ನ ಒಂದು ಮಾನ್ಯನೆಲೆಯಲ್ಲಿ ನೋಡೋದಾದ್ರೆ ಇದಕ್ಕೆ ಪೂರಕವಾಗಿ ಲಕ್ಷ್ಮೀಧರನ ಮುಪ್ಪಿನ ಶಾಸನವನ್ನು ಉಲ್ಲೇಖಿಸಿ ಹೇಳತೀನಿ. ಈ ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ಮಿಸು, ಸತ್ಯಹೇಳುವ, ಸಿಲುಕಿದ ಅನಾಥರನ್ನು ನುಡಿಸು ಎಂದು ಲಕ್ಷ್ಮೀಧರ ಅಮಾತ್ಯ ಹೇಳುತ್ತಾನೆ. ಆ ಶಾಸನವನ್ನು ಅವಲೋಕಿಸಿದಾಗ ಅದರಲ್ಲಿರು ವಂತಹ ಒಂದು ಧರ್ಮ, ತತ್ವ ಎಂದರೆ ಲೋಕೋಪಕಾರ ಅಥವಾ ಜಿನೋಪಕಾರವನ್ನು ಅದು ಪ್ರತಿಬಿಂಬಿಸುತ್ತದೆ. ಹಾಗೆಯೇ ಈ ನಯಸೇನನ ಧರ್ಮಾಮೃತದ ಹಿನ್ನೆಲೆಯಲ್ಲಿ ಈ ಧರ್ಮದ ತತ್ವಗಳು ಏನಿಲ್ಲ ಎಂಬ ಮಾತನ್ನು ಅದೇ ತರದ ಮಾತಿನಲ್ಲಿ ಉಲ್ಲೇಖಿಸುವು ದಾದರೆ ‘ಘೃತಮಂ ತೈಲಮಂ ಬೆರೆಸಿದಂತೆ’ ಇನ್ನೂ ಒಂದು ಧರ್ಮದ ತತ್ವ ಕಾಯದ ತತ್ವ ಎಂದು ಪ್ರಕಟಿಸುವುದಾದರೆ ಅಂದು ಸಂಸ್ಕೃತ ಕನ್ನಡವನ್ನು ಬೆರೆಸಿ ಕಾವ್ಯವನ್ನು ರಚಿಸುತ್ತಿದ್ದರು. ಅದಕೋಸ್ಕರವಾಗಿ ನಾನು Sirಗೆ ಈ ಪ್ರಶ್ನೆಯನ್ನು ಹಾಕಿದ್ದೇನೆ. ಇದನ್ನು ಯಾವ ಹಿನ್ನೆಲೆಯಲ್ಲಿ ಹೇಳಿದ್ರಿ ಅದಕ್ಕೆ ಸಮರ್ಥನೆ ಕೊಡಬೇಕು.

ಮೊಗಳ್ಳಿ ಗಣೇಶ್ ಅವರಿಗೆ ಒಂದು ಪ್ರಶ್ನೆ

ಧರ್ಮಾಮೃತದ ಕತೆಗಳು ಗತಕತೆಗಳಲ್ಲ ಅವು ವರ್ತಮಾನದ ಕತೆಗಳು ಅನ್ನುವ ಮಾತನ್ನು ಹೇಳಿದ್ರಿ. ಈ ವರ್ತಮಾನದ ಕತೆಗಳು ಅಲ್ಲಿ ಕಟ್ಟಿಕೊಡುವಂತಹ ಪೌರಾಣಿಕ ಹಿನ್ನೆಲೆಯನ್ನು ಅಥವಾ ಪೌರಾಣಿಕ ತತ್ವವನ್ನು ಈ ವರ್ತಮಾನದ ಸಂದರ್ಭದಲ್ಲಿ ಒಪ್ಪಿಕೊಳ್ಳಲಿಕ್ಕೆ ಸಾಧ್ಯ ವಿಲ್ಲ. ಹಾಗೆ ಒಂದು ಉದಾಹರಣೆ ಕೊಡುವುದಾದರೆ ರನ್ನನ ಸಾಹಸ ಭೀಮ ವಿಜಯದ ಒಂದು ಪ್ರಸಿದ್ಧ ಕಂದ್ಯಪದ್ಯ ಕೊಟ್ಟು ಹೇಳೊದಾದ್ರೆ ಅವನು ಒಂದು ಆರವಮಂ ನಿರ್ಜಿತ ಕಂಠೀರವಮಂ ನಿರಸ್ತ ಘನರವಮಂ… ಆಕೋಪಾರುಣ ನೇತ್ರಂ ಉರಗಪಾತಕಂ ಅನ್ನುವಂತ ಕಲ್ಪನೆಯನ್ನು ಕಟ್ಟಿಕೊಡುತ್ತಾನೆ. ಅದು ವರ್ತಮಾನದಲ್ಲಿ ಸಾಧ್ಯವಿಲ್ಲ. ಇದನ್ನು ತಾವು ಸ್ಪಷ್ಟಪಡಿಸಬೇಕು ಅಂತ ಕೋರಿಕೆ.

ಮೊಗಳ್ಳಿ

ವರ್ತಮಾನದ ಕತೆಗಳು ಹೌದು ಅನ್ನುವುದಕ್ಕೆ ನನಗೆ ಕೆಲವು ಸಮರ್ಥವಾದ ಮಾತುಗಳು ಸಿಕ್ಕುತ್ತವೆ. ನಯಸೇನನಲ್ಲಿ ನಿಶ್ಶಂಕೆ ಎಂಬ ಎರಡನೆ ಕತೆಯೊಳಗೆ ಲಲಿತಾಂಗ ಅಂತ ಒಬ್ಬ ರಾಜ ಬರುತ್ತಾನೆ. ಮಹಾಲಂಪಟ, ಮಹಾಕ್ರೂರಿ. ಅದರೂ ಮತ್ತೆ ರಾಜರ ಮಗ ಯುವರಾಜ ಇವತ್ತಿನ ಯಾವುದೇ ಯುವ ರಾಜಕಾರಣಿಗಳನ್ನು ನೆನಪು ಮಾಡಿಕೊಳ್ಳಬಹುದಾದ ಬಹಳ ಸ್ಪಷ್ಟವಾಗಿ ನಾನು ಹೇಳೋದಾದ್ರೆ ಗುಜರಾತಿನ ಮೋದಿ ತರಹದಲ್ಲಿ ಅವನು ನನಗೆ ಕಾಣಿಸ್ತಾನೆ. ಮಹಾವ್ಯಾಧ ಯಾರನ್ನ ಮನುಷ್ಯರನ್ನು ಬೇಟೆ ಮಾಡೊನು So ಇಂತ ಒಂದು ಪಾತ್ರ ನನ್ನ ಸುತ್ತಮುತ್ತಲಲ್ಲೆ ತಿರುಗಾಡುತ್ತಿರುವಾಗ ಈ ನಯಸೇನ ಎಷ್ಟು ತೀವ್ರವಾಗಿ ಇಂತ ಪಾತ್ರಗಳನ್ನು ರೂಪಕಗಳಲ್ಲಿ ವೈಭವೀಕರಿಸಿ ಅವನನ್ನು ತೋರಿಸುತ್ತಾ ಇರೋವಾಗ ವರ್ತಮಾನದಲ್ಲೆ ಈ ಪಾತ್ರ ಇಲ್ವೆ ಅಂತ ಅನ್ನಿಸಿಬಿಡುತ್ತೆ. ಹಾಗಾಗಿ ನಾವು ವರ್ತಮಾದಲ್ಲಿ ದ್ದರೆ ನಾವು ಗತಕ್ಕೂ ಹೋಗಿಬರಬಹುದು. ಹಾಗಾಗಿ ಅವು ಕೇವಲ ಗತದ ಕತೆಗಳಲ್ಲ. ನಮ್ಮ ವರ್ತಮಾನದ ಸಮಾಜದಲ್ಲೆ ಈ ಪಾತ್ರಗಳು ಜೀವಂತವಾಗಿರೋವಾಗ ಇವನ್ನು ನಾನು ವರ್ತಮಾನದ ಕತೆಗಳು ಅಂತ ಭಾವಿಸ್ತೀನಿ. ಅದಕ್ಕೆ ನೀವು ನಿಶ್ಶಂಕೆ ಅನ್ನೊ ಕತೇನಾ ಓದಿದರೆ ಇವತ್ತಿನ ಅನೇಕ ಪುಡಾರಿಗಳು ನೆನಪಾಗ್ತಾರೆ.

ಲಿಂಗಣ್ಣ

(ಮೊಗಳ್ಳಿ ಗಣೇಶ್‌ರಿಗೆ ಪ್ರಶ್ನೆ) ನೀವು ಪ್ರಬಂಧ ಮಂಡನೆ ಸಮಯದಲ್ಲಿ ಒಂದು ಅಂಶಕ್ಕೆ ಹೆಚ್ಚು ಒತ್ತು ಕೊಟ್ಟು ಹೇಳಿದ್ರಿ. ನಯಸೇನನ ಧರ್ಮಾಮೃತ ರಚನೆಯಾದ ಕಾಲ ಧಾರ್ಮಿಕ ಸಂಘರ್ಷಗಳ ಕಾಲ, ಅದು ಧಾರ್ಮಿಕ ಅರಾಜಕತೆಯ ಕಾಲವಾಗಿತ್ತು ಅನ್ನೊ ಅಂತ ಅಂಶ ಹೇಳಿದ್ರಿ. ಕೇವಲ ಆ ಕಾಲದ ಒಂದು ಕೃತಿಯನ್ನು ಆಧರಿಸಿ ಇಡೀ ಆ ಕಾಲವೇ ಧಾರ್ಮಿಕ ಸಂಘರ್ಷದಿಂದ ಕೂಡಿತ್ತು ಅನ್ನುವಂತ ಸಾಧಾರಣೀಕರಣವಾದ ನಿರ್ಧಾರವಾಗಿ ಕಂಡುಬಂತು, ಏಕೆಂದರೆ ಪ್ರಗತಿಶೀಲ ಪಂತದ ಮಹತ್ವದ ಲೇಖಕ ಅ.ನ.ಕೃ. ಅವರ ನಗ್ನಸತ್ಯ ಕಾದಂಬರಿ ಯಲ್ಲಿ ವೇಶ್ಯಾವಾಟಿಕೆಯನ್ನು ಚರ್ಚಿಸಲಾಗಿದೆ ಅನ್ನೋವಂತ ಕಾರಣದ ಮೇಲೆ ಇಡೀ ಈ ಶತಮಾನವೇ ವೇಶ್ಯಾವಾಟಿಕೆಯಿಂದ ಕೂಡಿತ್ತು ಅನ್ನೊ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಆಗಲ್ಲ, ಇದು ಬಹಳ ಸರಳವಾದದ್ದು ಅನ್ನಿಸುತ್ತೆ.

ಮೊಗಳ್ಳಿ

ನಮ್ಮಲ್ಲಿ ಚರಿತ್ರೇಲಿ ಎಷ್ಟು ಆಧಾರಗಳಿವೆ ಚರಿತ್ರೇನ ಗಟ್ಟಿಗೊಳಿಸೊದಕ್ಕೆ, ಕೆಲವು ಮುಖ್ಯವಾದ ಆಧಾರಗಳನ್ನಿಟ್ಟುಕೊಂಡು ಒಂದು ಕಾಲದ ಸಂರಚನೆಯನ್ನು ಮಾಡಿಕೊಳ್ಳು ತ್ತೀವಿ ಅಥವಾ ಊಹೆ ಮಾಡಿಕೊಳ್ಳುತ್ತೀವಿ. ಅದಕ್ಕೆ ಒಂದು ರಾಮಾಯಣ ಮಹಾಭಾರತ ಎರಡೇ ತಾನೆ ಇರೋದು. ಅವುಗಳ ಮೂಲಕ ನಾವು ಅಖಂಡ ಭಾರತವನ್ನು ಊಹೆ ಮಾಡಿಕೊಳ್ಳುತ್ತೀವಲ್ಲ. ಮಧ್ಯಕಾಲೀನ ಇತಿಹಾಸವನ್ನು ರಚಿಸಿಕೊಳ್ಳಲಿಕ್ಕೆ ನಮಗಿರುವ ಆಕರಗಳು ಯಾವುದು, ಯಾವುದೊ ಒಂದು ಶಾಸನ. ಆ ಶಾಸನದ ಮೂಲಕ ಆ ಕಾಲದ ಜೀವನ ಮೌಲ್ಯ ಹೀಗಿತ್ತು ಅಂತ ತಿಳುಕೊಳ್ಳುತ್ತೀವಲ್ಲ. ಪಂಪನ ಆದಿಪುರಾಣದ ಮೂಲಕ ಆ ಕಾಲವನ್ನು ನಾವು ಅಳತೆ ಮಾಡುತ್ತೀವಲ್ಲ ಇದನ್ನೆಲ್ಲ ನಾನೇಕೆ ಹೇಳ್ತೀನಿ ಅಂದ್ರೆ ಒಂದು ಪ್ರಮಾಣ ಒಂದು ಕಕ್ಷೆ ಒಂದು ಕಾಲವನ್ನ ಪ್ರವೇಶ ಮಾಡಲಿಕ್ಕೆ ನಮಗೊಂದು ಕೀಲಿಕೈ ಇದ್ದಂಗೆ. ಅದನ್ನು ಇಟ್ಟುಕೊಂಡೇ ನಾವು ಆ ಕಾಲಕ್ಕೆ ಪ್ರವೇಶ ಮಾಡುತ್ತೇವೆ. ಒಂದು ನೂರು ವರ್ಷ ಆದಮೇಲೆ ದೇವನೂರ ಮಹಾದೇವರ ಕುಸುಮಬಾಲೆಯನ್ನು ಇಟ್ಟುಕೊಂಡು ಆ ಕಾಲಕ್ಕೆ ಯೋಚನೆ ಮಾಡಿದರೆ ದಲಿತರು ಹೀಗಿದ್ದರು ಅನ್ನೋದಾದರೆ ಅದು ನಿಜವೋ, ಸುಳ್ಳೊ? ಬಸವಣ್ಣನ ಕಾಲಘಟ್ಟದಲ್ಲಿರೋ ಕೆಲವೇ ವಚನಗಳನ್ನಿಟ್ಟುಕೊಂಡು ಅವರ ಕಾಲವನ್ನು ನಾವು ಅಳತೆ ಮಾಡಲ್ವೆ. ಆ ಕಾಲದ ಜೀವನ ಮೌಲ್ಯಗಳು ಹೀಗಿದ್ದವು ಅಂತ ನಾವು ತಿಳಿದುಕೊಳ್ಳೋದಿಲ್ಲವೆ. ಹಾಗೇನೆ ನಯಸೇನನ ಈ ಕತೆಗಳು ಮಧ್ಯಕಾಲೀನ ಇತಿಹಾಸದ ಒಂದು ಅರಾಜಕವಾದ, ಧಾರ್ಮಿಕವಾದ ಇಕ್ಕಟ್ಟುಗಳನ್ನು ಪ್ರತಿನಿಧಿಸುತ್ತಿವೆ ಅನ್ನೋದಕ್ಕೆ ದಟ್ಟವಾದ ವಿವರಗಳನ್ನು ಕಥನದ ನಿರೂಪಣೆಯಲ್ಲಿ ಕೊಡ್ತಾಯಿದ್ದಾನೆ. ಹಾಗಾಗಿ ಒಂದೇ ಒಂದು ಕೃತಿಯನ್ನು ನೋಡಿ ನಾವು ಇಡೀ ದೇಶವನ್ನು ಆಳೆಯೋದು ಹೇಗೆ ಅನ್ನೋದು ಉಚಿತವಲ್ಲ. ಇಡೀ ಪಾತ್ರೆಯಲ್ಲಿರುವ ಅನ್ನವನ್ನು ಪರೀಕ್ಷೆಮಾಡಿ ನೋಡೊದಿಲ್ಲವಲ್ಲ. ಒಂದು ಮನೋಧರ್ಮದಲ್ಲಿ ಈ ಕತೆಯನ್ನು ಪ್ರವೇಶ ಮಾಡಬೇಕು ಅನ್ನೋದು ಆ ಕಾರಣಕ್ಕೇನೆ, ಇದರ ಒಂದರ ಮೂಲಕನೇ ಅಳತೆ ಮಾಡಬೇಕಾದ್ದಿಲ್ಲ ಎಂಬುದು ಸರಿ. ಆದರೆ ನಮಗೆ ಪ್ರಮಾಣ, ಮಾನದಂಡ ಸಾಕ್ಷ್ಯಗಳು ಅನಿವಾರ್ಯವಾಗಿ ಕೆಲವು ದಿಕ್ಕನ್ನು ಸೂಚಿಸುತ್ತವೆ. ಆ ಅರ್ಥದಲ್ಲಿ ಒಂದು ನಿರ್ದಿಷ್ಟ ಶಾಸನ ಇಡೀ ಕಾಲಕ್ಕೆ ಸಂಬಂಧಪಟ್ಟಂತೆ ಒಂದು ಸೂಚನೇನಾ ಹೇಗೆ ಕೊಡೋಕೆ ಸಾಧ್ಯ. ಯಾವುದೋ ಒಂದು ಮನುಷ್ಯ ಪಳೆಯುಳಿಕೆ ಇಡೀ ಮನುಷ್ಯನ ವಿಕಾಸದ ಚರಿತ್ರೆಯನ್ನು ಸೂಚಿಸುವನು ಆಗಾಧ ವಾದ ಗ್ರಹಿಕೆಯನ್ನು ತಂದು ಕೊಡುವುದೊ, ಹಾಗೇನೇ ಒಂದು ಕಾಲಘಟ್ಟದ ಒಂದು ಪ್ರಮುಖ ಕೃತಿ ನಾವು ಆ ಕಾಲದ ಜೊತೆಗೆ ಅನುಸಂಧಾನ ಮಾಡೋದಕ್ಕೆ ಕೆಲವು ಆ ಕಾಲದ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳಲಿಕ್ಕೆ ಸಹಾಯ ಮಾಡ್ತವೆ. ಆದ್ದರಿಂದ ಅದು ಕಿರಿದು ಅಂತ ತಿಳ್ಕೋಬಾರದು. ಅದು ದೊಡ್ಡದೇನೇ ಹಾಗಾಗಿ ಬಹಳ ಮಿಸ್ಸಾಗಿ ನೀವು ಅದನ್ನು ಭಾವಿಸಬಾರದು.

ಅಮರೇಶ್ ನುಗಡೋಣಿ

(ಅರುಣ್, ವಿರೇಶ್ ಪ್ರಶ್ನೆಗೆ ಸೇರಿಸಿ ಪತ್ರಿಕ್ರಿಯೆ) ಕತೆ ಮಾತ್ರ ಉಳೀತು ಎಂಬ ಅವರ ಪ್ರಶ್ನೆಗೆ ವಿಡಂಬನೆ ಮಾತ್ರ ಇದೆ ಎಂಬ ಇವರ ಎರಡು ಪ್ರಶ್ನೆ ಸೇರಿಸಿ ಧರ್ಮಾಮೃತದಲ್ಲಿ ನಯಸೇನ ಜೈನಮತವನ್ನು ಸ್ಥಾಪನೆ ಮಾಡಬೇಕು, ಉಳಿಸಬೇಕು ಮತ್ತು ಪ್ರಚಾರ ಮಾಡಬೇಕು ಅಂತ ಅವನು ಕೆಲವು ಕಡೆ ಹೇಳಿಕೊಂಡಿದ್ದಾನೆ. So ಪ್ರಚಾರ ಮಾಡಬೇಕು ಅಂತ ಹೇಳಿಕೊಂಡಾಗಲೂ ಕೂಡ ನಯಸೇನನ ಮಾತನ್ನ ನಾವು ನಂಬಬೇಕಾಗಿಲ್ಲ ಅಂತ. ಯಾಕೆ ಅಂತ ಕೇಳಿದರೆ, ಮೊದಲ ಕತೆಯನ್ನು ನಾವು ತೆಗೆದುಕೊಂಡರೆ ಅದರಲ್ಲಿ ವಿಡಂಬನೆ ಇದೇನೊ, ಗಾಢವಾದ ವಿಷಾಧ ಇದೇನೊ ಅಂತ. ನನ್ನ ಧರ್ಮ ಹೀಗೀದೆ. ಇದು ನಿನಗೆ ಗೊತ್ತಿಲ್ಲ ಅಂತ ತೋರಿಸುವುದಕ್ಕೆ ಅವನು ಪ್ರಯತ್ನಪಡುತ್ತಾನೆ. ಅಂದರೆ ಮೃಷ್ಟಾನ್ನ ಭೋಜನವನ್ನು ಯಾವ ಕಷ್ಟಗಳಿಲ್ಲದೆ ಉಣ್ಣುವ ಬ್ರಾಹ್ಮಣರು. ಆದರೆ ನಾವು ಧರ್ಮವನ್ನು ನಂಬಿರುವಂತ ವರು, ನಮ್ಮ ಧರ್ಮದ ನಿಯಮಗಳಿರುವ ಇದರೊಳಗೆ ಎಷ್ಟು ಕಷ್ಟಗಳಿವೆ. ಆ ಕಷ್ಟಗಳನ್ನು ಎದುರಿಸುತ್ತಾ ನಾವು ಈ ತರಹದ ಭೋಗವನ್ನು ಕೂಡ ನಾವು ಅನುಭವಿಸುತ್ತೀವಿ ಅದು ನಿಮಗೆ ಗೊತ್ತಿಲ್ಲ ಅನ್ನೋ ಕಾರಣಕ್ಕಾಗಿ ಅವನಿಗೆ ವಿಷಾದದಿಂದ ತೋರಿಸಿಕೊಡುತ್ತಾನೆ ಹೊರತು, ಈಗಾಗಲೇ ಹೇಳಿರುವ ಹಾಗೇ ಇದು ವಿಡಂಬನೆಯ ಕತೆ ಅಂತ ನನಗೆ ಅನ್ನಿಸಿಲ್ಲ. ಒಂದು ವೇಳೆ ಕತೆ ಯಾಕೆ ಉಳೀತವೇ ಅಂತ ಕೇಳಿದರೆ, ಅವನು ಪ್ರಚಾರ ಮಾಡೋದಾದರೆ ಹಾಗೆ ಅನೇಕ ಜನ ಬ್ರಾಹ್ಮಣರು ವಸುಭೂತಿಯ ಹಾಗೆ ಜೈನ ಧರ್ಮವನ್ನು ಸ್ವೀಕರಿಸಬಹು ದಾಗಿತ್ತು ಆ ಕತೆಯನ್ನು ಓದಿ. ಆದರೆ ಹಾಗಾಗಿಲ್ಲ ಅಂತ ನನಗನ್ನಿಸುತ್ತೆ. ಹಾಗಾಗಿ ಕತೆ ಮಾತ್ರ ಉಳಿತದೆ. ಕತೆಯಲ್ಲಿ ಪ್ರತಿಪಾದಿತವಾದಂತಹ ತತ್ವ ಇದೆಯಲ್ಲ ಬ್ರಾಹ್ಮಣನನ್ನ ಕೂಡ ಜೈನ ಮಾಡಬೇಕು ಅನ್ನುವ ಆ ಒಂದು ಆಶಯ ಅಲ್ಲಿ ಆಗಿದೆಯಾ? ಆಗಿಲ್ಲ. ಆ ಕಾರಣದಿಂದ ಅಲ್ಲಿ ಕತೆ ಮಾತ್ರ ಉಳಿತದೆ. ಅದರೊಳಗಡೆ ಅವನು ಹೇಳುವುದಕ್ಕೆ ಪ್ರಯತ್ನ ಪಟ್ಟ ತತ್ವ ಅದು ಮರೆಯಾಗಿ ಹೋಗುತ್ತದೆ.

ಬಿ.ಎಂ. ಪುಟ್ಟಯ್ಯ

ಮೊಗಳ್ಳಿ ಮಾತಿಗೆ ಪೂರಕವಾಗಿ, ಅದನ್ನು ಎರಡು ಮೂರು ಆಯಾಮದಲ್ಲಿ ವಿಸ್ತರಿಸೋ ದಾದರೆ, ಯಾವುದೇ ಒಬ್ಬ ಸೃಜನಶೀಲ ಬರಹಗಾರ ಸಮಾಜವೇ ಗಾಯಗೊಂಡಿದೆ ಎಂದು ತಿಳಿಯುವುದರ ಮೂಲಕ ಒಂದು ಕ್ರಿಯೇಟಿವಿಟಿ ಶುರುವಾಗುತ್ತೆ. ಇಡೀ ಜನಜೀವನವೆ, ಇಡೀ ಸಮಾಜವೆ ಗಾಯಗೊಂಡಿಲ್ಲ ಅಂತ ಆದರೆ ಅವನ ಕ್ರಿಯೇಟಿವಿಟಿ ಹುಟ್ಟೋದಿಲ್ಲ. ಅದನ್ನು ವಿಸ್ತರಿಸಿ ಧರ್ಮ ಗಾಯಗೊಂಡ ಕಾಲದಲ್ಲಿ ಬರೆದ ಅಂತ ವಿಸ್ತರಿಸೋದಾದರೆ, ಧರ್ಮ ಅನ್ನೋದಕ್ಕೆ ಎರಡು ರೀತಿ ವಿವರಣೆ ಕೊಡುತ್ತಾರೆ ಒಂದು ಇಂಗ್ಲಿಷಿನಲ್ಲಿ ….. ಕ್ರಿಸ್ತಧರ್ಮ. ಇನ್ನೊಂದು ಕೋಡಿಫಿಕೇಶನ್ ಆದ ಧರ್ಮ. So ಕೋಡಿಫಿಕೇಶನ್ ಆದ ಧರ್ಮದಲ್ಲಿ ಅಂದರೆ ಜೈನಧರ್ಮ, ವೀರಶೈವ ಧರ್ಮ, ಕಾಳಾಮುಖ, ಕಾಪಾಲಿಕರ ಪ್ರಸ್ತಾಪ ಕೂಡ ಅತ್ಯಂತ ಆಂಶಿಕವಾಗಿ ಬಂದರೂ ಅತ್ಯಂತ ಪ್ರಬಲವಾದ ಲಕ್ಷಣಗಳು ಅದರಲ್ಲಿ ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ ಜೈನ ಟೆಕ್ಸ್ಟ್‌ಗಳಲ್ಲಿ ಸ್ಮಶಾನದ ಉಲ್ಲೇಖ ಬರೋದು ನಯಸೇನನ ಧರ್ಮಾಮೃತದಲ್ಲಿ ಅಂತ ಕಾಣುತ್ತೆ. ಒಬ್ಬ ರಾಜ ಸ್ಮಶಾನಕ್ಕೆ  ಹೋಗುತ್ತಾನೆ. ಒಬ್ಬ ಮುನಿ ಸ್ಮಶಾನಕ್ಕೆ ಹೋಗುತ್ತಾನೆ. ಮೇಲೆ ತಲೆ ಓಡುಗುಳನ್ನು ಬೆಂಕಿಗೆ ಹಾಕ್ತಾನೆ. ಈ ಬಗೆಯ ವಿವರಗಳು ಹೆಚ್ಚು ಕಂಡು ಬರೋದು ಅಂದ್ರೆ ಆಗಲೇ ಕ್ರೋಡೀಕೃತಗೊಂಡಿರ ಬಹುದಾದ ಈ ಬೇರೆ ಧರ್ಮಗಳಿದ್ದವಲ್ಲ. ಅಂದರೆ ಗಾಯಗೊಂಡಿರಬಹುದಾದ ಈ ಧಾರ್ಮಿಕ ಸಂಘರ್ಷನೆಲೆ ಹೇಳಲಿಕ್ಕೆ Try ಮಾಡ್ತಾನೆ ಒಂದು. ಎರಡನೆಯದು ಹಾಗೆ ಹೇಳುವುದರ ಮೂಲಕ ಕೆಲವು ಧರ್ಮಗಳನ್ನು ಗಾಯಗೊಳಿಸ್ತಿದ್ದಾನೆ. ಅಂದರೆ ಗಾಯ ಗೊಂಡಿವೆ ಎಂದು ತಿಳಿಯಲಾರದ ಮೂಲಕ ಸೃಜನಶೀಲತೆಯನ್ನು ಹುಡುಕಿದರೆ, ಅದೇ ಕಾಲಕ್ಕೆ ಹಾಗೆ ಹುಟ್ಟಿರುವ ಸೃಜನಶೀಲತೆ ಇನ್ನು ಬೇರೆ ತಲೆಮಾರುಗಳಿಗೆ ಗಾಯಗೊಳಿಸುವ ಕೆಲಸವನ್ನು ಮಾಡುತ್ತೆ. So ಧರ್ಮಾಮೃತದ ವಿಶೇಷತೆ ಇರೋದು ಈ ಆಯಾಮದಲ್ಲಿನ ಅಂದರೆ ಕೋಡಿಫೈ ಆಗಿರಬಹುದಾದ, ಕೋಡಿಫೈ ಆಗಲಿಕ್ಕೆ ಪ್ರಯತ್ನಪಟ್ಟ ಧರ್ಮಗಳಿದ್ದವಲ್ಲ ಅದಕ್ಕೆ ಗಾಯಗೊಳಿಸುವಂತ ಕೆಲಸವನ್ನು ಕೂಡ ಇಲ್ಲಿ ಮಾಡ್ತಿದ್ದಾನೆ. ಅಂದರೆ ಸೃಜನಶೀಲತೆಯ ಮೂಲವಾದ ಬೀಜರೂಪಿಯಾದ ಪ್ರಶ್ನೆ ಆ ಕತೆಗಳಲ್ಲಿದೆ. ಅಂದರೆ ಗಾಯಗೊಂಡಿದೆ ಎಂದು ತಿಳಿಯುವುದರ ಮೂಲಕವೇ ಮುಂದಿನ ಕ್ರಿಯೆಗೆ ಹೋಗುತ್ತದೆ. ಈ ಧರ್ಮಾಮೃತ ಕತೆಗಳ ಮೂಲ ಹುಟ್ಟು ಇರೋದೇನೆ ಈ ಗಾಯಗೊಂಡಿದೆ ಎಂದು ನಂಬುವುದರ ಮೂಲಕ. ಇದು ಧರ್ಮಾಮೃತಕ್ಕೆ, ಧರ್ಮಾಮೃತ ಬರೆದ ಲೇಖಕನಿಗೆ ಹಾಗೆ ಅನ್ವಯಿಸುತ್ತೆ.

ಶಿವಗಂಗಮ್ಮ

ಭೋಗ ಮತ್ತು ವೈರಾಗ್ಯದ ತಾತ್ವಿಕ ಸಂಬಂಧ ನನಗೆ ಸ್ಪಷ್ಟವಾಗಲಿಲ್ಲ. ದಯವಿಟ್ಟು ಸ್ಪಷ್ಟಪಡಿಸಿ. ನನ್ನ ಗ್ರಹಿಕೆಗಳ ಪ್ರಕಾರ ಭೋಗ ವೈರಾಗ್ಯದ ಸಂಬಂಧ ಮನುಷ್ಯನ ಪ್ರವೃತ್ತಿಗಳಿಗೆ ಒಂದು ಮಿತಿ ಇರುತ್ತದೆ. ಪ್ರವೃತ್ತಿಗಳನ್ನು Merz ಮಾಡಿಕೊಳ್ಳುವಾಗ ಮಿತಿ ಇರುತ್ತದೆ. ಅದಕ್ಕೆ ಅಬ್ರಾಹಿಂ ಮ್ಯಾಸಲೇ ಅನ್ನೊ ಮಾರ್ಕ್ಸಿಸ್ಟ್ ಸೈಕಾಲಜಿಸ್ಟ್ ಹೇಳ್ತಾನೆ. ಥಿಯರಿ ಆಫ್ ನೀಡ್ಸ್ ಅಂತ ಹೇಳ್ತಾ ಇದ್ದಾನೆ. ಅವನು ಥಿಯರಿ ಆಫ್ ನೀಡ್ಸ್ ಹೇಳಿದ ಮೇಲೆ ಕೊನೆ ನೀಡ್ಸ್‌ನ್ನು ಹೇಳ್ತಾನೆ. ಸೆಲ್ಫ್ ಎಕ್ಸ್‌ವೈಲೇಜೇಷನ್ ನೀಡ್ಸ್ ಅಂತ ಹೇಳಿದ. ಜೈನ ಧರ್ಮದಲ್ಲಿ ಬರುವ ಒಬ್ಬ ವ್ಯಕ್ತಿ ಅವನು ಭೋಗಿಸುವ ತನ್ನ ವಯಸ್ಸಿಗೂ ಮತ್ತು ವೈರಾಗ್ಯವನ್ನು ಸ್ವೀಕರಿಸುವ ವಯಸ್ಸಿಗೂ ತುಂಬ ತಾತ್ವಿಕವಾದ ಸಂಬಂಧವಿದೆ. ಇನ್ನರ್ ಸಂಬಂಧವಿದೆ. ಹ್ಯಾಗೆ ಇರ್ತ್ತಾಯಿದೆ ಅಂದ್ರೆ ಅವನು ನಲವತ್ತು ಐವತ್ತು ವರ್ಷಕ್ಕಾಗಲೇ ಎಲ್ಲವನ್ನು ಬಿಟ್ಟು ಕೊಟ್ಟು ಮಕ್ಕಳನ್ನು ಅಂದ್ರೆ ಮಕ್ಕಳ ಮದುವೆ ಮುಗುದು ಇರ್ತಾ ಇದೆ. ಪೋರ್ತ ಇನ್ಸಂಟಿಂಗ್ ಹಸಿವು ತೃಷೆ, ನಿದ್ರೆ, ಮೈಥುನ, ಕೆಲಸ ಮುಗಿದು ಇರುತ್ತಾಯಿದೆ. ಆಗ ಅವನು ವೈರಾಗ್ಯಕ್ಕೆ ತೊಡಗುತ್ತಾನೆ. ಇದನ್ನು ನಾನು ಬಹಳ ಸರಳವಾದ ಮಾತಿನಲ್ಲಿ ವಿಸ್ತರಿಸಬೇಕು ಅಂದ್ಕೊಂಡೆ. ನನಗೆ ಒಂದು ಸಿಹಿಪದಾರ್ಥ. ಒಂದು ಹತ್ತು ಹೋಳಿಗೆ ಉಣ್ಣಬಲ್ಲೆ. ಆ ಕ್ಷಣಕ್ಕೆ ಹನ್ನೊಂದ ನೆದು ಹೋಳಿಗೆ ನನಗೆ ಹೋಗೊದಿಲ್ಲ. ಸಾಕಷ್ಟು ಸಾಕು ಅಂತ ಹೇಸಿಗೆ ಬಂದುಬಿಡುತ್ತೆ. ಇದು ಪ್ರತಿಯೊಂದು ಜೀವಿಯಲ್ಲಿ ನಡೆಯುತ್ತಿರುವಂತೆ ಟರ್ನ್‌ನ್ನ ಅಬ್ರಾಹಂ ಮ್ಯಾಸಲನ್ ಗುರುತಿಸುತ್ತಾನೆ. ಅಂದ್ರೆ ಬಹಳಷ್ಟು ಈ ಜೀವಿಗೆ ತಪ್ಪು ಪರಿಕಲ್ಪನೆಗಳೇನಿವೆ ಅಂದ್ರೆ. ಭೋಗವನ್ನು ಮಾತ್ರ ಈ ಜೀವ ಬಯಸುತ್ತದೆ. ವೈರಾಗ್ಯವ ಬಯಸುವುದಿಲ್ಲ ಅಂತ ಹೇಳಿ. ಆದರೆ ಒಂದು ನಿಜವಾದ ಸಂತೆಯಲ್ಲಿರಲಿಕ್ಕೆ ಎಷ್ಟು ಇಷ್ಟಪಡುತ್ತದೊ, ಅಷ್ಟೆ ಏಕಾಂತದಲ್ಲಿ ಕೂಡ ಇರಲಿಕ್ಕೆ ಇಷ್ಟಪಡುತ್ತದೆ ಮತ್ತು ಎಷ್ಟು ಭೋಗಕ್ಕಾಗಿ ಅದು ಎಳಸುತ್ತದೊ, ಹೊರಗೆ ಎಷ್ಟು ಹೋಗಬೇಕಂತದೊ ಅಷ್ಟು ಒಳಗೆ ಇಳಿಬೇಕಂತದೆ. ಅದರ ಅರ್ಜ್ ಏನು ಇರ್ತಾಯಿದೆ ಅಂದರೆ ನಾನು ಯಾರು? ನನ್ನ ಸಾಮರ್ಥ್ಯ ಅಲ್ಲಿಯೂ ಕೂಡ ಸಾಮರ್ಥ್ಯವನ್ನು, ಏನು ಅಸ್ತಿತ್ವವನ್ನು ಸ್ಥಾಪಿಸು ಉದ್ದೇಶವೇ ಇರ್ತದೆ. ವೈರಾಗ್ಯದ ಮುಖಾಂತರವು ಕೂಡ ತನ್ನ ಸಾಮರ್ಥ್ಯ ಏನು ಅನ್ನುವುದು ಸ್ಥಾಪಿಸುವ ಉದ್ದೇಶವೇ ಇರ್ತದೆ. ಆದರೆ ಅದು ಬೇರೆ ರೀತಿ ಯಲ್ಲಿ ಇರ್ತಾಯಿದೆ. ಅದನ್ನು ನಾವು ಅಬ್ರಾಹಂ ಮ್ಯಾಸಲೊ ಮತ್ತು ಜೈನಧರ್ಮದ ತಾತ್ವಿಕತೆ ಇದರಲ್ಲಿ ಬಹಳಷ್ಟು ವಿಸ್ತಾರವಾಗಿ ಹೇಳಲಿಕ್ಕೆ ಸಾಧ್ಯವಿದೆ. ಇವು ಸ್ವಲ್ಪ ಅಂಶಗಳಷ್ಟೆ.

ಕುಮಾರ ಚಲ್ಯ

ನಾನು ಇದನ್ನು ಪ್ರಸ್ತಾಪ ಮಾಡಿದೆ. ಭೋಗದ ಉತ್ಕಟಾವಸ್ಥೆ ಬಂದ ಅನಂತರದಲ್ಲಿ ವೈರಾಗ್ಯದ ಕಡೆ ಆಲೋಚನೆಯನ್ನು ಮಾಡ್ತಾರೆ ಅಂತ. ಆ ವಾಕ್ಯದೊಳಗಡೇನೇ ಉತ್ತರ ಯಿತ್ತು. ನೀವು ಬಹುಶಃ ಸರಿಯಾಗಿ ಗಮನಿಸಿಲ್ಲ ಅಂತ ಅನ್ನಿಸುತ್ತೆ. ಅದು ಇನ್ನೊಂದು ತಮಾಷೆ ಕತೆ ಕೂಡ. ಜೈನರಿಗೆ ವೈರಾಗ್ಯ ಎಲ್ಲ ಮುಗಿದ ನಂತರ ಏತಕ್ಕೆ ಬರಬೇಕು. ಅಂತ ಹುಡುಗರು ಪ್ರಶ್ನೆ ಕೇಳ್ತಾರೆ. ಅಲ್ಲೀವರೆಗೂ ಕೂಡಾ ಬಿಳಿಕೂದಲು ಬಂದಿರಲಿಲ್ಲವೊ, ಮೋಡಕರಗೋದು ಕಾಣಿಸಿರಲಿಲ್ಲವೊ, ಈ ಬಗೆಯ ಸರಳ ಪ್ರಶ್ನೆಗಳಿವೆ. ಆದರೆ ತಾತ್ವಿಕತೆ ಅಂತ ಅಂದರೆ ನಾನು ಅದನ್ನು ಸ್ಪಷ್ಟಮಾಡಿಕೊಳ್ಳಬೇಕು. ಒಂದು ವಿಷಯದ ಬಗ್ಗೆ ನಮಗೆ ಸಿಗುವ ಸಾಮಗ್ರಿ ಏನಿದೆಯೋ, ಆ ಸಾಮಗ್ರಿಯ ಚೌಕಟ್ಟಿನೊಳಗೆ, ಯಾವ ನಿರ್ಧಾರಕ್ಕೆ ಬರ್ತಾನೆ ಅಂತ ಅನ್ನೊದಷ್ಟೇ ತಾತ್ವಿಕತೆ. ಈಗ ನೀವು ಪಾಶ್ಚಾತ್ಯ ಲೇಖಕರ ವ್ಯಾಖ್ಯಾನಗಳನ್ನು ಇಲ್ಲಿ ಅಪ್ಲೈಮಾಡಿದ್ರಿ, ಆದರೆ ಅನ್ವಯ ಮಾಡುವ ಸಂದರ್ಭದಲ್ಲೂ ಕೂಡ ಬಹಳಷ್ಟು ಎಚ್ಚರಿಕೆಯಿಂದ ಗಮನಿಸಬೇಕು. ಪಾಶ್ಚಾತ್ಯ ಮೂಲದ ಚಿಂತೆ ಅವನು ಆಲೋಚನೆ ಮಾಡು ವಂತ ರೀತಿಗೂ ಒಬ್ಬ ಜೈನಧರ್ಮೀಯ ಇದನ್ನು ಕುರಿತು ಆಲೋಚನೆ ಮಾಡೋ ರೀತಿಗೂ ಬಹಳಷ್ಟು ಅಂತರಗಳಿರುತ್ತವೆ. (ಮಧ್ಯ ಪ್ರವೇಶಿಸಿ)

ಶಿವಗಂಗಮ್ಮ

ಯಾವುದೇ ಚಿಂತನೆ ಪಾಶ್ಚಾತ್ಯ ಇರಬಹುದು, ಪೌರ್ವಾತ್ಯ ಇರಬಹುದು. ಅದು ಮನುಷ್ಯನ ಕುರಿತು ಇರ್ತಾಯಿದೆ. ಬದುಕನ್ನು ಕುರಿತಾಗಿ ಇರ್ತಾಯಿದೆ. ಪರಿಭಾಷೆಗಳು ಮತ್ತು ಶಬ್ದಗಳು ಬೇರೆ ಆಗಿರಬಹುದು. ಆದರೆ ಮೂಲದಲ್ಲಿ ಅದು ಮನುಷ್ಯನೊಳಗಿರುವ ಒಳಗಿನ ಹುಡುಕಾಟ ಆಗಿರುತ್ತದೆ. ಆ ಅರ್ಥದಲ್ಲಿ ಅದನ್ನು ನಾನು ವಿವರಿಸುತ್ತಾ ಇದ್ದೀನಿ.

ಕುಮಾರ ಚಲ್ಯ

ವಿವರಿಸಿ ನೀವು. ನಾನು ಹೇಳ್ತಾ ಇರೋದು ಅನ್ವಯ ಮಾಡುವ ಸಂದರ್ಭಗಳಲ್ಲಿ ಅದು ಅನ್ವಯ ಆಗುತ್ತಾ ಅನ್ನೋದಿಕ್ಕೆ ಆಧಾರಗಳನ್ನು ಕೊಡಬೇಕಾಗುತ್ತದೆ. ಧರ್ಮಾಮೃತ ಕೃತಿಯೊಳಗಡೇನೆ. ನೀವು ಪಾಶ್ಚಾತ್ಯ ಚಿಂತಕ ಕೊಡುವ ವ್ಯಾಖ್ಯೆಗಳು ಇಲ್ಲಿ ಅಪ್ರೊಪ್ರಿಯೇಟ್ ಆಗಿ ಹೊಂದಿಕೆಯಾಗುತ್ತ ಅಂತ ನೀವು ಯೋಚನೆ ಮಾಡಬೇಕು. ನೀವು ಕೇಳಿದಂತ ಪ್ರಶ್ನೆ ತಪ್ಪು ಅಂತಲ್ಲ. ನೀವು ಬಹುಶಃ ಭಾವುಕವಾಗಿ ತೆಗೆದುಕೊಳ್ತೀರಿ ಅಂತ ಅನ್ಸುತ್ತೆ. ಧರ್ಮಾ ಮೃತ ಕೃತಿಯನ್ನು ಇಟ್ಟುಕೊಂಡಾಗ ಏನು ಅಂತಕ್ಕಂತದ್ದು. ಆದರೆ ಒಂದು ವೈರಾಗ್ಯದ ತಾತ್ವಿಕತೆಯಿದೆಯಲ್ಲ ಧರ್ಮಾಮೃತದಲ್ಲಿ ನಾವೀಗ ಏನು ಅಂದುಕೊಂಡೀವಿ ಒಂದು ಯಾವುದೋ ನಿರ್ದಿಷ್ಟ ವಯಸ್ಸಿನವರಿಗೆ ಮಾತ್ರ ಅವನು ಭೋಗ ನಿರತನಾಗಿರುತ್ತಾನೆ. ಅನಂತರ ಆ Stage ಬಂದ ಕೂಡಲೇ ವೈರಾಗ್ಯಕ್ಕೆ ಬರ್ತಾನೆ ಅಂತಲ್ಲ, ಹೌದಲ್ಲ. ಆ ತರಹದ ಕತೆಗಳು ಧರ್ಮಾಮೃತದ ಒಳಗಡೆಯಿಲ್ಲ. ಇದು ಬೋಗ ಮತ್ತು ವೈರಾಗ್ಯದ ಸಂಬಂಧ ತಾತ್ವಿಕತೆ ಹೇಳಬೇಕಾದರೆ, ಸಾಂಪ್ರದಾಯಿಕವಾಗಿರುವಂತೆ ಹಿನ್ನೆಲೆಗಳನ್ನು ಕೊಟ್ಟು ನಾನು ಕಥನಗಳಲ್ಲಿ, ಇಲ್ಲಿ ಭೋಗ ಮತ್ತು ವೈರಾಗ್ಯದ ನೀವು ಕೇಳುವಂತೆ ಪ್ರಶ್ನೆಗಳಿಗೆ ಧರ್ಮಾಮೃತ ದಲ್ಲಿ ಆಧಾರಗಳು ಸಿಗುವುದಿಲ್ಲ. ಭೋಗದ ನಿಮಿತ್ತವಾಗಿಯೇ ವೈರಾಗ್ಯದ ಕಡೆ ಹೊರಳು ವಂಥದ್ದಿಲ್ಲ. ವೈರಾಗ್ಯ ಕೂಡ ಯಾವುದು ಅಂತ ಅಂದರೆ ದೀಕ್ಷೆಯ ನಿಮಿತ್ತವಾಗಿ ಮತ್ತು ಉಪದೇಶದ ನಿಮಿತ್ತವಾಗಿ ಬರುತ್ತೆ ಅಂತ ನಾನು ಹೇಳಿದಂತಹದು.

ಅರುಣ್ ಕುಮಾರ

ಬೆಳಗಿನಿಂದ ಇಲ್ಲಿಯವರೆಗಿನ ಚರ್ಚೆಗಳನ್ನು ಕೇಳ್ತಾ, ಫುಕೋ ಡಿಸ್‌ಕೊರ್ಸ್ ಪರಿಕಲ್ಪನೆ ತಟ್ಟನೆ ನೆನಪಾಯಿತು. ಅಂದರೆ ಫುಕೋ ಡಿಸಿಪ್ಲೇನ್ ಅಂಡ್ ನಿಷ ….. ಇದರೊಳಗೆ ಪೂರಕವಾಗಿ ಒಂದಷ್ಟು ಉದ್ಧರಿಸುತ್ತೀನಿ. ಏನಂದ್ರೆ ಯಾವುದೇ ದೇಶದ ಇತಿಹಾಸ ತೆಗೆದು ಕೊಂಡರೂ ಅಲ್ಲಿ ಒಂದು ನಿರ್ದಿಷ್ಟ ಕಾಲಾವಧಿಗೆ ಸಲ್ಲುವ ನಿರ್ದಿಷ್ಟ ಸಂಕಥನಗಳು ಮತ್ತು ನಿರ್ದಿಷ್ಟ ನೀತಿ ನಿಯಮ ಅಥವಾ ರೂಢಿಗಳು ಇದ್ದೇ ಇರುತ್ತವೆ. ಇಂತಹ ಸಂಕಥನ ಅಥವಾ ರೂಢಿಗಳೇ ಆಯಾ ಸಮಾಜದ ನಡಾವಳಿಯನ್ನು ನಿಯಂತ್ರಿಸುತ್ತಿರುತ್ತವೆ. ಈ ರೂಢಿ ನಡಾವಳಿ ಗಳನ್ನು ಚಲಾಯಿಸಲು ಇರುವ ಏಜೆನ್ಸಿಗಳಂತೆ ಆಯಾ ಕಾಲದಲ್ಲಿ ಕೆಲವು ಜ್ಞಾನಿಶಿಸ್ತುಗಳು ಮತ್ತು ಸಂಸ್ಥೆಗಳು ವರ್ತಿಸುತ್ತಿರುತ್ತವೆ. ಈ ಶಿಸ್ತುಗಳು ಮತ್ತು ಸಂಸ್ಥೆಗಳೇ ಆಯಾ ಕಾಲದ ಸಂಕಥನ ಸ್ವರೂಪವನ್ನು ಯಾವಾಗಲೂ ನಿಯಂತ್ರಿಸುವ ಮತ್ತು ರೂಪಿಸುವ ಕೆಲಸವನ್ನು ಮಾಡುತ್ತಿರುತ್ತವೆ. ಈ ಸಂಕಥನಗಳಾದರೂ ಸದಾ ಸಮಾಜದ ಮೇಲೆ ಪ್ರಬಲ ನಿಯಂತ್ರಣ ಸಾಧಿಸಲು ಅಧಿಕಾರಕ್ಕೆ ಸಹಾಯಕ ಆಗುವಂತಹ ಶಕ್ತ ಆಲೋಚನೆಗಳನ್ನು ಹುಟ್ಟು ಹಾಕ್ತಾ ಇರುತ್ತವೆ ಅನ್ನೊದು ಇದರ ಒಂದು ಸಾರರೂಪಿಯಾದ ಅಂಶ. ಬಹುಶಃ ಈ ನೆಲೆಯಲ್ಲಿ ಪ್ರಶ್ನೆ ಹುಟ್ಟಿದ ಸಂದರ್ಭ ಅಂದರೆ, ನಯಸೇನನ ಕಾಲವನ್ನು ನಿಯಂತ್ರಿಸುತ್ತಿದ್ದ ನೀತಿನಿಯಮ ಗಳು ರೂಢಿಗಳನ್ನು ತನ್ನ ಕೃತಿಯಲ್ಲಿ ಚಲಾಯಿಸುವ ಮೂಲಕ ನಯಸೇನ ತನ್ನ ಕಾಲವನ್ನು ಹೇಗೆ ನಿಯಂತ್ರಿಸಿದ ಅನ್ನೋದು ನನ್ನ ಮೊದಲನೇ ಪ್ರಶ್ನೆ. ಎರಡನೇದು ಸಮಾಜದ ಮೇಲೆ ಪ್ರಬಲ ನಿಯಂತ್ರಣ ಸಾಧಿಸಲು ಅಧಿಕಾರಕ್ಕೆ ಸಹಕಾರಿಯಾಗುವಂತೆ ಶಕ್ತ ಆಲೋಚನೆಗಳನ್ನು ಹುಟ್ಟುಹಾಕಲು ಸೂಕ್ಷ್ಮವಾಗಿ ಎಲ್ಲೋ ಒಂದು ಕಡೆ ಪ್ರಯತ್ನಿಸುತ್ತಾ ಇದ್ದನಾ ಅಂತ ಅಥವಾ ಇಲ್ವಾ ಎಂಬ ಪ್ರಶ್ನೆ.

ಲಕ್ಷ್ಮೀನಾರಾಯಣ

ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಮರ್ಥನೆ ಬಯಸ್ತಾ ಇದ್ದೀನಿ. ಈ ಕೃತೀನ ಸಾಂಸ್ಕೃತಿಕ ಚರಿತ್ರೆಯ ಒಂದು ಭಾಗ ಅಂತ ನೀವು ಓದೋಕೆ ಶುರುಮಾಡಿದಾಗ ಈ ಕತೆ, ಕತೆಯ ವಿವರಗಳು ಮತ್ತೆ ಅದರಲ್ಲಿ ಸಿಗುವಂತ ಒಂದು ರೀತಿಯ ಸಂತೋಷ ಪಕ್ಕಕ್ಕಿಡಬೇಕಾಗುತ್ತದೆ. ಇದು ಒಂದು ತರಹ ಅನ್ವೇಷಣೆ ಮಟ್ಟದಲ್ಲಿ ನೀವು ಯೋಚನೆ ಮಾಡೋಕೆ ಶುರುಮಾಡು ತ್ತೀರ. ಅಂದ್ರೆ ಈ ಪುಸ್ತಕದ ದ್ರವ್ಯಾನಾ ನಿಮ್ಮ ಯೋಚನೆಗೆ ಬಳಸಿಕೊಳ್ಳೋಕೆ ಶುರು ಮಾಡುತ್ತೀರ. ಆ ಯೋಚನೆಗೆ ಬಳಸಿಕೊಳ್ಳೋಕೆ ಶುರುಮಾಡಿದ ತಕ್ಷಣ ಈಗ ನಾವು ಏನು ಧರ್ಮಾಮೃತಾನ ಒಂದು ಕತೆಗಳ ಒಂದು ಸಂಕಲನವಾಗಿ, ಸಾಹಿತ್ಯದ ಒಂದು ಭಾಗವಾಗಿ ನೋಡ್ತಾ ಇದ್ದೀವಿ. ಆ ದೃಷ್ಟಿ ಇರಲ್ಲ. ಇದು ಪ್ರತ್ಯೇಕವಾಗಿರುವಂತೆ ಇನ್ನೊಂದು ನೆಲೆಯಿಂದ, ಇನ್ನೊಂದು ಕೋನದಿಂದ ವಿವರವಾಗಿ ನೋಡಬೇಕಾಗುತ್ತೆ. ಇನ್ನು ಒಂದು ಕಾಲದ ಮೌಲ್ಯ ಪದ್ಧತೀನಾ ಆ ವ್ಯವಸ್ಥೇನಾ ಮನಪೂರ್ವಕವಾಗಿ ಇದು ಎಲ್ಲ ಕಡೆ ಇದೇನಾ, ಒಂಥರ ಪಿತೂರಿ ಆಗಿರಬೇಕು ಅಂತೇನಿಲ್ಲ. ನಯಸೇನನಿಗೆ ನಿಜವಾಗ್ಲೂ ಈ ಶ್ರೇಣೀಕೃತವಾಗಿರುವಂತ ಸಂಬಂಧಗಳ ನಂಬಿಕೆ ಇದ್ದಿರೋಕೆ ಸಾಧ್ಯವಿದೆ. ಅದನ್ನ ಯಾವಾಗಬೇಕಾದರೂ ಪ್ರಶ್ನೆ ಮಾಡಬಹುದು. ಆದರೆ ಆತನ  ಪ್ರಾಮಾಣಿಕತೇನ ನಾವು ಎಲ್ಲಿ ಸಂದೇಹ ಮಾಡಬೇಕಾ ದುದಿಲ್ಲ. ಆ ತರಹದ್ದು ತುಂಬ ಜನ ಇದ್ದಾರೆ. ಈ ಶ್ರೇಣೀಕೃತ ಸಮಾಜ ಅನ್ನೋದು ಸಹಜವಾದದ್ದು. ಇದರಲ್ಲಿ ಸಮಾನತೆ ಅನ್ನೋದೆಲ್ಲಾ ಬರೀ ಸುಳ್ಳು ಅಥವಾ ಮೇಲ್ಪದರದಲ್ಲಿ ಮಾತ್ರ ಇರೋವಂತದ್ದು ಅಂತ ನಂಬುವಂತ ಜನ ಬೇಕಾದಷ್ಟಿದ್ದಾರೆ. ನಾವು ಸಾಹಿತ್ಯ ಕೃತಿ ಚರ್ಚೆಗೆ ವಿಮರ್ಶೆಗೆ ತೆಗೆದುಕೊಂಡಾಗ ನಯಸೇನನ ಆಶಯ ಏನಿತ್ತು ಅನ್ನೋದನ್ನ ಪ್ರಾಸಂಗಿಕವಾಗಿ ನೋಡಿದರೆ ತಪ್ಪೇನಿಲ್ಲ. ಆದರೆ ಕೃತಿ ನಮಗೆ ಏನನ್ನ ಕಟ್ಟಿಕೊಡುತ್ತೆ, ಕೃತಿಯಲ್ಲಿ ನಮಗೆ ಸಿಗುವಂತ ರಾಜಕೀಯ ಮತ್ತು ಸಾಂಸ್ಕೃತಿಕ ವಿವರಗಳೇನೇನು ನೋಡ ಬಹುದು. ಹೀಗೆ ನೋಡಿದಾಗ, ಆ ಉದ್ದೇಶ ಆರೋಪಿಸೊದು ನನಗೆ ಅಷ್ಟಾಗಿ ಸರಿ ಕಾಣಿಸಲ್ಲ. ಒಂದು ಈ ರೀತಿಯ ಸಮಾಜಾನಾ ನಾನು ನಿರ್ಮಿಸುತ್ತೀನಿ ಅಂತ ಹೊರಟ ಅಂತ ಅನ್ನೊದು. ಹಾಗೆ ಹೇಳಲಿಕ್ಕೆ ಕೃತಿಯಲ್ಲಿ ಸಾಕಷ್ಟು ಆಧಾರಗಳು ಸಿಗಬೇಕು. ಸಿಕ್ಕಿಲ್ಲ ಅನ್ನಿಸುತ್ತೆ. ಆದರ ಬದಲು ಏನ್ಮಾಡಬಹುದು ಅಂದ್ರೆ ನಾನು ನೋಡೊ ರೀತಿ ಅಂದ್ರೆ ಇಲ್ಲಿರುವಂತ ಕತೆಗಳನ್ನಿಟ್ಟುಕೊಂಡು, ಈ ಪಾತ್ರಗಳು ಮತ್ತು ಇವರ ಒಳ ಸಂಬಂಧವನ್ನಿಟ್ಟಿ ಕೊಂಡು ಮತ್ತೆ ಇಲ್ಲಿ ಹೇಳದೇ ಇರೋವಂತ, ಆದರೆ ಬಹಳ ಗಟ್ಟಿಯಾಗಿ ಗಾದೆಗಳು ಮತ್ತು ಅನುಭವದ ತುಣುಕುಗಳ ಮೂಲಕ ಸಜೆಸ್ಟ್ ಮಾಡುವಂತ ಒಂದು ಪ್ರಪಂಚ ಇದೆಯಲ್ಲ ಅದನ್ನು ಖಂಡಿತವಾಗಿ ಸ್ಪಷ್ಟವಾಗಿ ಅರ್ಥಮಾಡಿಕೊಂಡು ಆ ಸಮಾಜದ ಮೂಲಭೂತ ಸ್ವರೂಪ ಅರ್ಥಮಾಡಿಕೊಳ್ಳೋಕೆ ಸಾಧ್ಯವಿದೆ. ಆದರೆ ನಾವು ಇವತ್ತಿನ ಮಟ್ಟದಲ್ಲಿ ಇದು ಬರೀ ಇವತ್ತಿನ ಯೋಚನೆ ಮಾಡೋವಾಗ ಅದು ಬರೀ ಚರ್ಚೆಯಾಗಿ ಉಳಕೊಳ್ಳಲ್ಲ. ನಾವು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ನಯಸೇನನ ಧರ್ಮಾಮೃತ ನೆಲೇಲಿ ನಾವು ಯಾವ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಆಗಲ್ಲ. ಅರ್ಥಮಾಡಿ ಕೊಳ್ಳಬಹುದು. ಆದರೆ ಈಗ ನಾವು ಮಾಡ್ತಿರೊದು ಉದಾಹರಣೆಗೆ ಇದನ್ನು ನಾವು Text ಆಗಿ ತಗಂಡಿದ್ದೀವಲ್ಲ. ಇಲ್ಲಿ ನಮ್ಮ ನಿರ್ಧಾರ ಇದು. ನಾವ್ಯಾಕೆ ಇದನ್ನು Textಆಗಿ ತೆಗೆದು ಕೊಂಡಿದ್ದೀವಿ. ನಾವು ತೆಗೆದುಕೊಳ್ಳದಿದ್ದರೆ ಯಾರು ಕೊಟ್ಟಿದ್ದಾರೆ. ಅವರ ಆಲೋಚನೆ ಏನು? ಅವರ ಇಂಟರೆಸ್ಟ್ ಏನು? ಇದನ್ನು ವಿಚಾರಿಸಲಿಕ್ಕೆ ಸಾಧ್ಯವಿದೆ. ಬಹುಶಃ ಅದು ಹೆಚ್ಚು ಮೀನಿಂಗ್‌ಫುಲ್ ಆಗಿರುತ್ತೆ ಅಂತ ನನ್ಗೆ ಅನ್ನಿಸುತ್ತೆ. ನಯಸೇನನಿಗೆ ಒಂದು ಉದ್ದೇಶ ಆರೋಪಿಸಿ ಇದು ಅವನಲ್ಲಿ ಇತ್ತೇ ಇಲ್ವೆ ಅಂತ ಕೇಳೋದಕ್ಕಿಂತ ಈಗ ಇದನ್ನು ನಾವು ಒಂದು ಪಠ್ಯವಾಗಿ ಬಳಸ್ತಾ ಇದ್ದೀವಲ್ಲ, ಇದರ ಹಿಂದೆ ಇರೋವಂತ ಆಶಯಗಳೇನು? ಹಿತಾಸಕ್ತಿ ಏನು? ಅಂತ ವಿಚಾರಿಸೋದಿಕ್ಕೆ ಸಾಧ್ಯವಿದೆ.